ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಜನಿಸಿದ ಶ್ರೀ ರಾಮಸಾಹೇಬ ಎಚ್.ಮೋರೆಯವರು ನಾಡಿನ ಓರ್ವ ಪ್ರಬುದ್ಧ ತಬಲಾ ವಾದಕರಾಗಿ ಬೆಳೆದದ್ದು ತಮ್ಮ ಅಗಾಧ ಪ್ರತಿಭೆ ಮತ್ತು ಮಾಧ್ಯಮದ ಬಗೆಗಿನ ತಮ್ಮ ಆರಾಧನಾ ಬಾವದಿಂದ. ಆರಂಭದಲ್ಲಿ ಶ್ರೀ ಮೋರೆಯವರು ಅಮೀನಗಡದ ತೋಟಪ್ಪಯ್ಯನವರಲ್ಲಿ ಹಾರ್ಮೋನಿಯಂ ಶಿಕ್ಷಣ ಪಡೆದರು. ಹಾಗೆಯೇ ಬಾಗಲಕೋಟೆಯ ಶ್ರೀ ರಂಗಾಚಾರ್ಯ ಜೋಶಿಯವರಲ್ಲಿ ಗಾಯನದಲ್ಲಿ ಮಾರ್ಗದರ್ಶನ ಪಡೆದರು. ಆದರೆ ತಮ್ಮ ಮನಸ್ಸು ಯಾವಾಗಲೂ ತಬಲಾ ಕಡೆಗೇ ವಾಲುತ್ತಿದ್ದುದರಿಂದ ಮೋರೆಯವರು ತಬಲಾದಲ್ಲಿ ತಮ್ಮ ಶಿಕ್ಷಣವನ್ನು ಶ್ರೀ ಗೋವಿಂದದಾಸ ಕಟ್ಟೆಯವರಲ್ಲಿ ಆರಂಭಿಸಿದರು. ಪಂಡಿತ್ ಮಲ್ಲಿಕಾರ್ಜುನ ಮನ್ಸೂರರ ಆದೇಶದಂತೆ ಮೋರೆಯವರು ಬನಾರಸ್ ಘರಾಣೆಯ ತಬಲಾ ವಾದಕರಾದ ಕರಿಯಪ್ಪ ಮಲ್ಲಾಪುರರವರಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರು. ಗುರು ಕರಿಯಪ್ಪನವರು ಬಾಗಲಕೋಟೆಯಲ್ಲಿ ಆರಂಭಿಸಿದ ನಟರಾಜ ಸಂಗೀತ ವಿದ್ಯಾಲಯವನ್ನು ಈಗ ಮೋರೆಯವರು ಮುಂದುವರಿಸಿಕೊಂಡು ಬರುತ್ತಿದ್ದು, ತಮ್ಮ ಶಾಲೆಯಲ್ಲಿ ಶ್ರೀ ದತ್ತುಬುವಾ ಇನಾಂದಾರ ಅವರು ಸಹಾಯದಿಂದ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿ ಆ ಮೂಲಕ ಆ ಭಾಗದ ವಿದ್ಯಾರ್ಥಿಗಳು ಗಂಧರ್ವ ಮಹಾವಿದ್ಯಾಲಯದ ಪದವಿ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ.

ಪಂ. ಅರ್ಜುನ ಸಾನಾ ಕೋಡ, ಪಂ. ಸಿದ್ದರಾಮ ಜಂಬಲದಿನ್ನಿ, ಪಂ. ಬಸವರಾಜ ರಾಜಗುರು, ಶ್ರೀ ಗಂಗಾಧರ ಸ್ವಾಮಿ ಮಹಾಪುರುಷ (ಸಿತಾರ್), ಶ್ರೀಮತಿ ರಂಜನಿ ಚಕ್ರವರ್ತಿ (ಗಾಯನ), ಪಂ. ಚಂದ್ರಶೇಖರ ಪುರಾಣಿಕ ಮಠ, ಪಂ. ಸೋಮನಾಥ ಮರಡೂರ, ಶ್ರೀ ವೀರೇಶ್ವರ ಮದರಿ, ಶ್ರೀ ಈಶ್ವರ ಮೊರಗೇರಿ (ಪಿಟೀಲು), ಶ್ರೀ ಕಾಮನಹಳ್ಳಿ ಹನುಮಂತಪ್ಪ, ಶ್ರೀ ಬಿ.ಎಸ್.ಮಠ, ಪಂ. ಮಾಧವ ಗುಡಿ, ಶ್ರೀಮತಿ ಸುಗುಣಾಬಾಯಿ ಚಂದಾವರ್ಕರ, ಶ್ರೀ ಚನ್ನವೀರ ಬನ್ನೂರ ಗವಾಯಿ ಮುಂತಾದ ಹಿರಿಯ ಸಾಲಿನ ಕಲಾವಿದರಿಗೆ ತಬಲಾ ಸಾಥ್ ನೀಡುತ್ತಾ ಕಲ್ಕತ್ತಾ, ಅಲಹಾಬಾದ್, ಭೂಪಾಲ್, ಬನಾರಸ್, ಇಂದೋರ, ಮಥುರಾ, ತಿರುಪತಿ, ಬೆಂಗಳೂರು ಮುಂತಾದ ಸ್ಥಳಗಳ ಪ್ರವಾಸ ಮಾಡಿದ್ದಾರೆ.

ಒಂದು ಅವಧಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿದ್ದ ಮೋರೆಯವರು ಆ ಸಮಯದಲ್ಲಿ ಅನೇಕ ಅತ್ಯುತ್ತಮ ಕೆಲಸಗಳನ್ನು ಮಾಡಿದ್ದರು.

ತಮ್ಮ ಸಂಗೀತ ಸಾಧನೆಗಾಗಿ ಶ್ರೀ ಮೋರೆಯವರು ಈಗಾಗಲೇ ಮುಂಬಯಿಯ ಸೂರಸಿಂಗ್ ಸಂಸ್ಥೆಯ ’ಬೆಸ್ಟ್‌ತಬಲಾ ಪ್ಲೇಯರ್ ಪ್ರಶಸ್ತಿ’ ಬೆಂಗಳೂರಿನ ’ಆರ್ಯಭಟ ಪ್ರಶಸ್ತಿ’ ಮತ್ತು ಬಾಗಲಕೋಟೆ ಜಿಲ್ಲೆಯ ’ಪ್ರಜಾ ರಾಜೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಶ್ರೀ ಆರ್. ಎಚ್. ಮೋರೆಯವರ ಸಂಗೀತ ಸಾಧನೆಯನ್ನು ಗುರುತಿಸಿ ಅವರಿಗೆ ೨೦೦೬-೦೭ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.