ನಾದ ವೈವಿಧ್ಯಯಮಯವಾದ ಗಂಧರ್ವಲೋಕದಿಂದ ಕರುಣೆಯಿಂದ ಭೂಮಿಯಲ್ಲಿ ಜನ್ಮ ತಾಳಿ ಈ ಪ್ರಪಂಚದ ನಿತ್ಯ ಜೀವನದಲ್ಲಿ ಉಂಟಾಗುವ ಆಸೆ, ಆಕಾಂಕ್ಷೆ, ಅಸೂಯೆ, ಅಪನಂಬಿಕೆ, ಇಲ್ಲಸಲ್ಲದ ಅಪಖ್ಯಾತಿ, ಅವದೂರು, ಅದರಿಂದಾಗುವ ಅತೃಪ್ತಿ, ಆತಂಕಗಳನ್ನು ಕಳೆದು ಚೇತನ ಯುಕ್ತವಾದ ಸಂತೃಪ್ತಿಯನ್ನು ತರುವ ಮಾರ್ಗದರ್ಶನವೆಂದರೆ ಸಂಗಹಿತವನ್ನು ಕೊಡುವ ದೈವೀದತ್ತವಾದ ಸಂಗೀತ ಒಂದೇ ಎಂಬ ಸನ್ಮಾರ್ಗವನ್ನು ತೋರಿ ಕಾರ್ಯ ಮುಗಿಯಿತೆಂದು ದೇವ ಋಷಿಯ  ಕರಧೃತ ಮಹತಿಯಲ್ಲಿ ೧೭.೮.೨೦೦೨ ರಂದು ಐಕ್ಯರಾಗಿರುವವರು ವಿದ್ವಾನ್‌ ಆರ್.ಎನ್‌. ದೊರೆಸ್ವಾಮಿಯವರು.(ಲೇಖಕರ ಗುರುಗಳು)

ಸಂಗೀತಕಲಾರತ್ನ ವಿದ್ವಾನ್‌ ಆರ್.ಎನ್‌. ದೊರೆಸ್ವಾಮಿಯವರ ಜನನ, ೧೯೧೬ರ ಡಿಸೆಂಬರ್ ೧೨ ರಂದು, ರುದ್ರಪಟ್ಣದಲ್ಲಾಯಿತು. ತಂದೆ ನಾಲಾ ವೆಂಕಟರಾಮಯ್ಯ, ತಾಯಿ ಸಾವಿತ್ರಮ್ಮ. ತಂದೆಯವರು ಬಸವಾಪಟ್ಟಣದಲ್ಲಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರಿಂದ ಗುರುಗಳು ೧೯೨೮ರಲ್ಲಿ ಆಗಿನ ಲೋಯರ್ ಸೆಕೆಂಡರಿ ಪರೀಕ್ಷೆಯನ್ನು ಮುಗಿಸಿ ಪ್ರೌಢ ಶಿಕ್ಷಣಕ್ಕೆ ಹೊಳೆ ನರಸೀಪುರಕ್ಕೆ ಹೋದರು.

ಇವರಲ್ಲಿ ಸುಪ್ತವಾಗಿದ್ದ ಸಂಗೀತಾಭಿಲಾಷೆಯು ಅವರ ಮಾತೃಶ್ರೀಯವರ ಇಂಪಾದ ಗಾಯನವನ್ನು  ಕೇಳುವುದರಿಂದ ವೃದ್ಧಿಯಾಗುತ್ತಿತ್ತು. ಇವರು ಹೈಸ್ಕೂಲಿನ್ಲಲಿ ಓದನ್ನು ಮುಂದುವರಿಸುತ್ತಿದ್ದಾಗ, ಚಿದಂಬರಂನಲ್ಲಿ ಸಂಗೀತ ಶಿಕ್ಷಣ ಆರಂಭಿಸಲು ಉದ್ದೇಶಿಸಿರುವುದಾಗಿ ಇವರ ತಂದೆಯವರು ತೀರ್ಮಾನವಾಗಿ ತಿಳಿಸಿದರು. ಶಾಲಾ ವ್ಯಾಸಂಗದ ಆಕರ್ಷಣೆ ಒಂದು ಕಡೆ ಇದ್ದರೂ ತಂದೆಯವರ ಆಜ್ಞೆಯನ್ನು ಶಿರಸಾ ವಹಿಸಿ ಅವರೊಡನೆ ೧೯೩೦ ರಲ್ಲಿ ಚಿದಂಬರಂಗ ಪ್ರಯಾಣ ಬೆಳೆಸಿದರು. ಚಿದಂಬರಂನ ಕಾಲೇಜು ಬಹಳ ಶ್ರೇಷ್ಠಮಟ್ಟದ ಸಂಗೀತ ಕಾಲೇಜೆಂದು ಪ್ರಸಿದ್ಧವಾಗಿತ್ತು. ಕಾಲೇಜಿನ ಶಿಕ್ಷಕ ವರ್ಗದಲ್ಲಿ ಸುಪ್ರಸಿದ್ಧರಾದ ಸಭೇಶ ಅಯ್ಯರ್, ಪೊನ್ನಯ್ಯ ಪಿಳ್ಳೆ, ದೇಶಮಂಗಲಂ ಸುಬ್ರಹ್ಮಣ್ಯಂ ಮುಂತಾದವರಿದ್ದರು. ದೊರೆಸ್ವಾಮಿಯವರು ಇನ್ನೂ ತುಂಬಾ ಚಿಕ್ಕ ವಯಸ್ಸಿನವರಾಗಿದ್ದುದರಿಂದಲೂ ಇವರ ಶಾರೀರದ ಶ್ರುತಿ ಮಿಕ್ಕ ಹುಡುಗರಿಗೆ ಸರಿ ಹೊಂದದೆ ಇದ್ದುದರಿಂದಲೂ ಕಾಲೇಜಿಗೆ ಪ್ರವೇಶ ದೊರೆಯದೇ ಹೋಯಿತು. ನಂತರ ಹಿತೈಷಿಯೊಬ್ಬರ ಸಲಹೆಯಂತೆ ಸೇಲಂ ದೊರೆಸ್ವಾಮಿ ಐಯ್ಯಂಗಾರ್ಯರಲ್ಲಿ ಶಿಷ್ಯವೃತ್ತಿ ಮಾಡುವ ನಿರ್ಧಾರವಾಯಿತು. ಚಿದಂಬರಂನಿಂದ ಬಂದು ಸ್ವಲ್ಪಕಾಲ ತಂದೆ ತಾಯಿಯರೊಡನೆಯೂ ಸೋದರ ಸೋದರಿಯರೊಂದಿಗೂ ಇದ್ದು ಸೇಲಂಗೆ ಬಂದು ಸೇರಿದಾಗ ಅವರಿನ್ನೂ ಹದಿನೈದು ವರ್ಷದ ಬಾಲಕ. ಅಲ್ಲಿನ ಪ್ರಸಿದ್ಧ ವೈದ್ಯರೂ, ಇವರ ಕ್ಷೇಮಪಾಲಕರೂ ಆಗಿದ್ದ ಸೇಲಂ ಶ್ರೀನಿವಾಸಯ್ಯನವರ ಮೂಲಕವೇ ಸೇಲಂ ದೊರೆಸ್ವಾಮಿ ಐಯಂಗಾರ್ಯರಲ್ಲಿ ಶಿಷ್ಯವೃತ್ತಿ ದೊರೆತದ್ದು . ಪಾಠ ಶುರುವಗುವ ಮೊದಲು ಅನೇಕ ಕಠಿಣ ಪರೀಕ್ಷೆಗೆ ಒಳಗಾದರು. ಆದರೆ ತಾಳ್ಮೆ, ಶ್ರದ್ಧೆ, ಗುರುಭಕ್ತಿಗಳಿಂದ, ಗುರುಗಳಾದ ದೊರೆಸ್ವಾಮಿ ಐಯಂಗಾರ್ಯರ ಪ್ರೀತಿಗೆ ಪಾತ್ರರಾದರು. ಶಿಷ್ಯನಿಗೆ ಸಂಗೀತದ ಎಲ್ಲ ರಹಸ್ಯಗಳನ್ನೂ ನೂರಾರು ಕೃತಿಗಳನ್ನೂ ಪಾಠಮಾಡಿಸಿ, ಸಂಗೀತದ ಮೂಲಭೂತ ಅಂಶಗಳಾದ ನಾದ, ಶ್ರುತಿ, ಸ್ವರ, ರಾಗ, ತಾಳಗಳ ಬಗ್ಗೆ ಉತ್ಕಷ್ಟ ಜ್ಞಾನವನ್ನು ಬೆಳೆಸಿದರು. ಹೀಗೆ ಎರಡು ವರ್ಷ ಕಳೆದನಂತರ ವಯೋಧರ್ಮದಿಂದ ಶಾರೀರವು ಒಡೆದು ಹಾಡುವುದಕ್ಕೆ ಸಾಧ್ಯವೇ ಆಗದೆ ಅನಾರೋಗ್ಯದ ಕಾರಣ ಮತ್ತೆ ಊರಿಗೆ ಹಿಂತಿರುಗಿದರು. ನಾಲ್ಕೈದು ವರ್ಷಗಳು ಹಾಗೇ ಕಳೆದವು. ತಂದೆಯವರು ಇವರನ್ನು ವೀಣೆ ವಿದ್ವಾಂಸರನ್ನಾಗಿ ಮಾಡಬೇಕೆಂದು ಆಸೆ ಪಡುತ್ತಿದ್ದರು. ಈ ಮಧ್ಯೆ ವ್ಯವಸಾಯದಲ್ಲಿ ಮುತುವರ್ಜಿಯಿ೮ಂದ ಭಾಗವಹಿಸುತ್ತಿದ್ದರು. ೧೯೩೯ರಲ್ಲಿ ತಮ್ಮನಾದ ಸತ್ಯಮೂರ್ತಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಅವನನ್ನೂ ಇಂಜನಿಯರ್ ಪದವೀಧರನ್ನಾಗಿ ಮಾಡುವ ಆಸೆ ತಾಯಿಗೆ ಇದ್ದುದರಿಂದ (ಇವರು ಮಾಡಲಾಗದಿದ್ದ ಇಂಜನಿಯರ್ ಪದವಿಯನ್ನು ಅವನಾದರೂ ಮಾಡಬೇಕೆಂಬುದಾಗಿ) ಮೈಸೂರಿಗೆ ಪ್ರಯಾಣ ಬೆಳೆಸುವುದು ಅನಿವಾರ್ಯವಾಯಿತು.

ಇವರ ಸಂಸಾರ ಮೈಸೂರಿಗೆ ಬಂದು ನೆಲಸಿದ ವರ್ಷವೇ ಅಂದರೆ ೧೯೩೯ ಜೂನ್‌ನಲ್ಲಿ, ೨೩ನೇ ವರ್ಷದಲ್ಲಿ ಗೃಹಸ್ಥರಾದರು. ಅಂದಿನಿಂದ ಇಂದಿನವರೆಗೂ ಗುರುಪತ್ನಿಯವರು ಸದ್ಗೃಹಿಣಿಯಾಗಿ ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಜೀವನದಲ್ಲಿ ಉಂಟಾದ ಸುಖ ದುಃಖಗಳಲ್ಲಿ ಭಾಗಿಯಾಗಿ ಜತೆ ಜತೆಗೆ ಎಡೆಬಿಡದೆ ನಿಂತು ಬೆಂಬಲಕೊಟ್ಟು ಸಾಧನೆಗೆ ಮುಖ್ಯ ಪ್ರೇರೇಪಣೆಯಾಗಿದ್ದಾರೆ ಎಂದು ಗುರುಗಳೇ ಹೇಳಿಕೊಂಡಿದ್ದಾರೆ.

ಆರ್.ಎನ್‌. ದೊರೆಸ್ವಾಮಿಯವರು ಹಿರಿಯರಾದ ವಿದ್ವಾನ್‌ ವೀಣಾ ವೆಂಕಟಗಿರಿಯಪ್ಪನವರಲ್ಲಿ ಶಿಷ್ಯವೃತ್ತಿ ಮಾಡಲು ಅತ್ಯಂತ ಆಸಕ್ತಿ ವಹಿಸಿ ಅವರಲ್ಲಿ ಬಿನ್ನವಿಸಿಕೊಂಡರು. ಅವರು, ತಮ್ಮ ಕಾರ್ಯ ಗೌರವಗಳಿಂದಾಗಿಯೂ ಇನ್ನೂ ಹಲವಾರು ಕಾರಣಗಳಿಂದಾಗಿಯೂ ಆರೋಗ್ಯದ ನಿಮಿತ್ತವಾಗಿಯೂ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನಗಳು ವಿಫಲವಾಗಿ, ಇವರ ಸತತ ಪ್ರಯತ್ನದಿಂದ ಶ್ರದ್ಧೆ, ವಿಧೇಯತೆಗಳಿಂದ ಸಂತೋಷಚಿತ್ತರಾಗಿಕ ಇವರನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಇಂತಹ ಗುರುಗಳನ್ನು ಪಡೆಯಲು ಪೂರ್ವಜನ್ಮದಲ್ಲಿ ತುಂಬಾ ಪುಣ್ಯ ಮಾಡಿರಬೇಕು. ಶಿಷ್ಯರನ್ನು ಸ್ವಂತ ಮಕ್ಕಳಂತೆಯೇ ಕಾಣುತ್ತಿದ್ದರು. ಪ್ರತಿಫಲಾಪೇಕ್ಷೆಯಿಲ್ಲದೆ ಮುಕ್ತ ಮನಸ್ಸಿನಿಂದ ವಿದ್ಯೆಯನ್ನು ಧಾರೆಯೆರೆಯುತ್ತಿದ್ದರು. ಚೆನ್ನಾಗಿ ಕಲಿಯುವ ಶಿಷ್ಯರನ್ನು ಕಂಡರಂತೂ ಅವರಿಗೆ ಪ್ರಾಣ. ದೊರೆಸ್ವಾಮಿಯವರು ಚುರುಕಾಗಿದ್ದುದರಿಂದ ಹಿರಿಯ ಗುರುಗಳಿಗೆ ಇನ್ನೂ ಉತ್ಸಾಹ. ಮೀಟು ಎಷ್ಟು ಮೃದುವಾಗಿರಬೇಕು, ಬೆರಳುಗಳನ್ನು ಹೇಗೆ ಬಿಡಿಸಬೇಕು, ತಂತಿಗಳ ನಾದ ಎಷ್ಟು ಹದವಾಗಿರಬೇಕು, ವರಸೆ ಕ್ರಮಗಳನ್ನು ಹೇಗೆ ಸಾಧನೆ ಮಾಡಬೇಕು ಮುಂತಾದ ವೀಣಾ ವಾದನ ತಂತ್ರಗಳನ್ನು ಬೋಧಿಸುತ್ತಿದ್ದರು. ಗುರುಕುಲವಾಸದ ಎರಡು ಮೂರು ವರ್ಷಗಳಲ್ಲೇ ವೀಣಾವಾದನದಲ್ಲಿ ಸಾಕಷ್ಟು ಪ್ರಗತಿ ಹೊಂದಿ ವೇದಿಕೆಯ ಮೇಲೆ ಬರುವಂತಾಗ ಬೇಕಾದರೆ ಇವರ ಸಾಧನೆ ಎಷ್ಟರ ಮಟ್ಟಿಗಿದ್ದಿತೆಂದು ಊಹಿಸಿಕೊಳ್ಳಬಹುದು.

೧೯೪೩ರಲ್ಲಿ ಮದ್ರಾಸ್‌ ಆಲ್‌ ಇಂಡಿಯಾ ರೇಡಿಯೋದಲ್ಲಿ ನುಡಿಸಲಾರಂಭಿಸಿದರು. ದಕ್ಷಿಣಭಾರತದ ಎಲ್ಲಾ ಬಾನುಲಿ ಕೇಂದ್ರಗಳಲ್ಲಿ ಬಿತ್ತರವಾಗುತ್ತಿದ್ದ ಕಾರ್ಯಕ್ರಮದಲ್ಲಿ ಗುರುಗಳ ಜೊತೆಗೆ ಭಾಗವಹಿಸುತ್ತಿದ್ದರು.

೧೯೪೫ರ ವೇಳೆಗಾಗಲೇ ಒಳ್ಳೆಯ ಪಾಠಗಳಿಂದ ನೂರಾರು ರೂಪಾಯಿ ಸಂಪಾದಿಸುತ್ತಾ ಸಂಸಾರದ ಜವಾಬ್ದಾರಿಯನ್ನು ಹೊರಲು ಸಮರ್ಥರಾಗಿದ್ದರು. ಮಾತಾಪಿತೃಗಳಿಗೆ ಎಣೆ ಎಲ್ಲದ ಸಂತೋಷ. ತಮ್ಮನ ಇಂಜಿಯರಿಂಗ್‌ ವಿದ್ಯಾಭ್ಯಾಸದ ಖರ್ಚನ್ನೂ ಇವರೇ ವಹಿಸಿಕೊಂಡಿದ್ದುದರ ಕಾರಣ ತಮ್ಮನೂ ಇವರನ್ನು ತಂದೆಯೋಪಾದಿಯಲ್ಲಿ ಪ್ರೀತಿ ಗೌರವಗಳಿಂದ ಕಾಣುತ್ತಿದ್ದರು.

೧೯೪೭ರಲ್ಲಿ ತಮ್ಮ ಗುರುಗಳ ಆಶೀರ್ವಾದದಿಂದ ಅರಮನೆಯಲ್ಲಿ ಆಸ್ಥಾನ ವಿದ್ವಾಂಸರಾದರು. ಶೀಘ್ರದಲ್ಲಿಯೇ ವಿದ್ವಾಂಸರ ಸಂಗೀತಗೋಷ್ಠಿಗೂ ಇವರ ಹೆಸರು ಸೇರ್ಪಡೆಯಾಯಿತು. ಮಹಾರಾಜರು ಮಾಡುವ ಪೂಜಾಕಾಲದಲ್ಲಿ ಆಸ್ಥಾನ ವಿದ್ವಾಂಶರು ಸೇವೆ ಸಲ್ಲಿಸುವುದು ಕಡ್ಡಾಯವಾಗಿತ್ತು. ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ ಗೌರವಗಳು ಲಭಿಸುತ್ತಿದ್ದವು.

ತಮ್ಮ ಗುರುಗಳಾದ ವೀಣಾವೆಂಕಟಗಿರಿಯಪ್ಪನವರು ಸಂಗೀತ ಸಮ್ಮೇಳನಗಳಲ್ಲಿ ಭಾಗವಹಿಸಲು ಉತ್ತರ ಭಾರತದ ಪ್ರವಾಸ ಮಾಡುವಾಗಲೆಲ್ಲಾ ದೊರೆಸ್ವಾಮಿಯವರು ತಮ್ಮ ಗುರುಗಳ ಅಂಗ ರಕ್ಷಕರಾಗಿ ಹೋಗಿ ಭಾಗವಹಿಸುತ್ತಿದ್ದರು. ಆ ವೇಳೆಗೆ ಹಿಂದಿಯಲ್ಲಿ ರಾಷ್ಟ್ರಭಾಷಾ-ವಿಶಾರದ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದು ಚೆನ್ನಾಗಿ ಹಿಂದಿ ಮಾತಾಡಲು ಬರುತ್ತಿದ್ದುದರಿಂದಲೂ ಪ್ರವಾಸದ ಕಾರ್ಯಕ್ರಮಗಳನ್ನು ಏರ್ಪಡಿಸಿ ನಿರ್ವಹಿಸುವುದರಲ್ಲಿ ಉತ್ಸಾಹ, ಚಾಕಚಕ್ಯತೆ ಹೊಂದಿದ್ದುದರಿಂದಲೂ ಇವರಿಗೆ ಗುರುಗಳ ಜೊತೆಗೆ ಹೋಗಿ ಬರುವ ಸುಯೋಗ ಒದಗುತ್ತಿತ್ತು. ಪ್ರವಾಸ ಯಶಸ್ವಿಯಾಗಿದ್ದು ಅವರ ಜೊತೆಗೆ ಸಕಲ ರಾಜಭೋಗಗಳನ್ನು ಅನುಭವಿಸುತ್ತಿದ್ದರು.

ಆರ್.ಎನ್‌.ದೊರೆಸ್ವಾಮಿಯವರು ಒಂದೇ ವರ್ಷದ ಅವಧಿಯಲ್ಲಿ ತಮ್ಮ ಸಂಸಾರದಲ್ಲಿ ತಂದೆ, ತಾಯಿ, ಭಾವ ಮತ್ತು ಪುತ್ರ ಸಂತಾನವನ್ನು ಕಳೆದುಕೊಂಡು ದುಃಖತಪ್ತರಾದರು. ಮುಂದೆ ಎಲ್ಲವನ್ನೂ ನಿರ್ವಹಿಸುವ ಧೈರ್ಯವನ್ನೂ, ಸ್ಥೈರ್ಯವನ್ನೂ ಭಗವಂತನು ಇವರಿಗೆ ದಯಪಾಲಿಸಿದನು. ಮತ್ತೆ ಸಂತಾನ ಭಾಗ್ಯವನ್ನೂ ಕರುಣಿಸಿ ಸಂತೋಷ ಸಂಭ್ರಮಗಳನ್ನು ಅನುಗ್ರಹಿಸಿದನು.

ಅವರು ಮುಂದೆ ಸಂತಸದ ದಿನಗಳನ್ನು ಕಾಣುವಂತಾಯಿತು. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪಾರ್ಟ್‌ ಟೈಂ ವೀಣೆ ಅಧ್ಯಾಪಕರಾಗಿ ನಿಯಮಿಸಲ್ಪಟ್ಟರು. ಖಾಸಗಿಯಾಗಿಯೂ ಇವರಲ್ಲಿಯೇ ಶಿಕ್ಷಣ ಪಡೆಯುತ್ತಿದ್ದ ಹಲವಾರು ವಿದ್ಯಾರ್ಥಿನಿಯರು ಅಲ್ಲಿಯೂ ಇವರ ಶಿಷ್ಯರಾಗಿ ತಯಾರಾದರು.

ಸಂಗೀತ ವೃತ್ತಿ ಜೀವನದಲ್ಲಿ ಬೇಡಿಕೆಯ ವಿದ್ವಾಂಸರಾಗಿಯೂ ಒಳ್ಳೆಯ ವೀಣಾ ಹಾಗೂ ಗಾಯನ ಶಿಕ್ಷಕರೆಂದೂ ಹೆಸರು ಪಡೆದಿದ್ದರು.

೧೯೪೫ ರಿಂದಲೇ ಮದರಾಸ್‌ ಆಲ್‌ ಇಂಡಿಯಾ ರೇಡಿಯೋ ಕಲಾವಿದರಾಗಿದ್ದು ವೀಣಾ ಕಾರ್ಯಕ್ರಮಗಳನ್ನೂ ನೀಡಲು ಪ್ರಾರಂಭಿಸಿದರು. ಧೀಮಂತ ಕಲಾವಿದರಾದ ವಿದ್ವಾನ್‌ ಟಿ. ಚೌಡಯ್ಯನವರ ನಿಕಟವರ್ತಿಯಾಗಿದ್ದು ಅವರೊಡನೆ ಅನೇಕ ಬಾರಿ ಸಹವೀಣಾ ವಾದನ ಮಾಡುವ ಸದವಕಾಶ ಪಡೆಯುತ್ತಿದ್ದರು. ಮದರಾಸಿನ ಮ್ಯೂಸಿಕ್‌ ಅಕ್ಯಾಡೆಮಿ ಸಮ್ಮೇಳನದಲ್ಲಿ ವಿದ್ವಾನ್‌ ಟಿ. ಚೌಡಯ್ಯನವರು ಅಧ್ಯಕ್ಯತೆ ವಹಿಸಿದ್ದ ವರ್ಷವಾದ ೧೯೫೭ರಲ್ಲಿ ತಾವೂ ಭಾಗವಹಿಸಿದ್ದು ಸಮ್ಮೇಳನಗಳಲ್ಲೂ, ಹಲವಾರು ರಾಮೋತ್ಸವ, ಗಣೇಶ ಚತುರ್ಥಿ ಮುಂತಾದ ಸಮಾರಂಭಗಳಲ್ಲೂ ಹಾಗೂ ಸಂಗೀತ ಸಭೆಗಳಲ್ಲೂ ವೀಣಾವಾದನ ಮಾಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

೧೯೪೪ ರಿಂದ ೧೯೪೮ ರವರೆಗೆ ಇವರಿಗೆ ತಮ್ಮ ಗುರುಗಳ ಜೊತೆ ನಾಲ್ಕು ಬಾರಿ ಉತ್ತರ ಭಾರತ ಪ್ರವಾಸಮಾಡುವ ಅವಕಾಶ ಲಭಿಸಿತು. ರಾಯರ ಅನುಗ್ರಹದಿಂದ ಗುರುಗಳ ಜೊತೆಗೆ ಮಂತ್ರಾಲಯದಲ್ಲಿ ವೀಣಾವಾದನ ಮಾಡಿ ಫಲ, ಮಂತ್ರಾಕ್ಷತೆ ಖಿಲ್ಲತ್ತು ಹಾಗೂ ಸಂಭಾವನೆ ಪಡೆಯುವ ಭಾಗ್ಯ ದೊರೆಯಿತು.

ಮಧುಬೋಸ್‌ ಎಂಬ ಚಿತ್ರನಿರ್ಮಾಪಕರು ತಮ್ಮ ಭಾರತೀಯ ಸಂಗೀತ ವಾದ್ಯಗಳು ಎಂಬ ಸಾಕ್ಷ್ಯಚಿತ್ರಕ್ಕಾಗಿ ಗುರುಗಳ ವೀಣಾ ವಾದನವನ್ನು ಶಿಷ್ಯನ ಸಹವಾದನದೊಂದಿಗೆ ಚಿತ್ರೀಕರಿಸಿಕೊಂಡರು.

ರಾಜ ಸಂಸ್ಥಾನಗಳಾದಕ ಪಾಲಿಟನ್‌, ಭರತ್‌ಪುರ್ ಮುಂತಾಗಿ ಎಲ್ಲಾ ಸಂಸ್ಥಾನಗಳಲ್ಲೂ ವೀಣಾವಾದನ ನಡೆಸಿಕೊಟ್ಟು ಮಹಾರಾಜರುಗಳ ಕೃಪೆಗೆ ಪಾತ್ರರಾಗಿ, ರಾಜರುಗಳ ಸಮಾವೇಶದಲ್ಲೆಲ್ಲಾ ಗುರುಗಳೊಂದಿಗೆ ವೀಣಾವಾದನ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸನ್ಮಾನ ಪಡೆದರು. ಗುರುಗಳೊಂದಿಗೆ ಸರಿಸಮಾನವಾಗಿ ಕುಳಿತು ವೀಣಾವಾದನ ಮಾಡುವುದು ಸುಲಭಸಾಧ್ಯವೇನಲ್ಲ. ಅದು ಕತ್ತಿಯ ಅಲುಗಿನಲ್ಲಿ ನಡೆಯುವಂತೆಯೇ ಸರಿ.

ಬೊಂಬಾಯಿ, ಜಯಪುರ, ಜೋಧ್‌ಪುರ ಎಲ್ಲಾ ಕಡೆಯಲ್ಲಿಯೂ ವೀಣಾ ನಿನಾದ ಮೊಳಗಿದ್ದೇ ಮೊಳಗಿದ್ದು. ಸಂಭ್ರಮವೋ ಸಂಭ್ರಮ. ಆದರಾತಿಥ್ಯಗಳಿಗೆ ಎಣೆಯೇ ಇಲ್ಲ. ಸನ್ಮಾನ ಸಂಭಾವನೆಗಳಿಗೆ ಕೊರತೆ ಇಲ್ಲ, ಹಾಗಿತ್ತು ಅಂದಿನ ಸುದಿನಗಳು.

ಸರಕಾರ ನಡೆಸುವ ಪರೀಕ್ಷಾ ಮಂಡಲಿಯ ಮುಖ್ಯ ಪರೀಕ್ಷಕರಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜೀಯವರ ಆಶ್ರಮದಲ್ಲಿ ಸ್ವಾಮೀಜೀಯವರ ಅನುಗ್ರಹಕ್ಕೆ ಪಾತ್ರರಾಗಿ ಎರಡು ಬಾರಿ ಬಿರುದು ಖಿಲ್ಲತ್ತು ಮುಂತಾದುವನ್ನು ಪಡೆದಿದ್ದಾರೆ. ಇವರು ‘ಎ’ ದರ್ಜೆಯ ಕಲಾವಿದರಾಗಿ ಮೈಸೂರು, ಬೆಂಗಳೂರು ಆಕಾಶವಾಣಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ ಹಾಗೂ ಅನೇಕ ವಿಶೇಷ ರೂಪಕಗಳು, ಭಾಷಣಗಳು, ಪಂಚವೀಣಾ ವಾದ್ಯಗೋಷ್ಠಿಗಳಲ್ಲೂ ಭಾಗವಹಿಸಿದ್ದಾರೆ.

ಸ್ಥಳೀಯವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಮೈಸೂರು ನಗರದ ಎಲ್ಲಾ ವಿದ್ವಾಂಸರೂ ಸೇರಿ ೧೯೫೨ರಲ್ಲಿ ಪ್ರಾರಂಭಿಸಿದ ಸಂಗೀತ ಕಲಾಭಿವರ್ಧಿನಿ ಸಭಾದಲ್ಲಿ ಕಾರ್ಯದರ್ಶಿಯಾಗಿ ಸಭೆಯ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಸಭೆಯ ಮುನ್ನಡೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.

ಇವರ ಪ್ರತಿಭೆಗೆ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಮೈಸೂರು ನಗರದ ಶ್ರೀ ಸರಸ್ವತಿ ಗಾನ ಕಲಾಮಂದಿರದವರು ನಡೆಸುವ ಶ್ರೀ ತ್ಯಾಗರಾಜ ಆರಾಧನಾ ಮಹೋತ್ಸವ ಸಂದರ್ಭದಲ್ಲಿ ವೈಣಿಕ ವಿದ್ಯಾವಾರಿಧಿ ಎಂಬ ಪ್ರಶಸ್ತಿಯನ್ನಿತ್ತು ಗೌರವಿಸಿದ್ದಾರೆ.

೧೯೭೭ರಲ್ಲಿ , ಪ್ರಸಿದ್ಧ ಸಂಸ್ಥೆ, ಶ್ರೀಮಾರುತಿ ಸೇವಾ ಸಂಗೀತ ಸಮಾಜದ ಅಧ್ಯಕ್ಷರಾಗಿ ಡಾ.ಬಿ. ದೇವೇಂದ್ರಪ್ಪನವರು ನಡೆಸುತ್ತಿದ್ದ ಹನುಮಜಯಂತಿ ಮಹೋತ್ಸವದಲ್ಲಿ ವೈಣಿಕ ಪ್ರವೀಣ ಎಂಬ ಬಿರುದು ಖಿಲ್ಲತ್ತು ನೀಡಿ ಗೌರವಿಸಲ್ಪಟ್ಟಿದ್ದಾರೆ.

ದೆಹಲಿ ಮ್ಯೂಸಿಕ್‌ ಕ್ಲಬ್‌ನಿಂದ ಸನ್ಮಾನ ನಿಧಿ ಸಮರ್ಪಣೆಯಾಯಿತು. ಸಂಗೀತ ಕಲಾಭಿವರ್ಧಿನಿ ಸಭೆಯ ತೃತೀಯ ಸಂಗೀತ ಸಮ್ಮೇಳನದ ಅಧ್ಯಕ್ಷತೆಯಲ್ಲಿ ೧೯೮೩ರಲ್ಲಿ ವಹಿಸಿದರು. ಅದೇ ವರ್ಷ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ಗಳಿಸಿದರು.

೧೯೮೫ರಲ್ಲಿ ಮೈಸೂರಿನ ಸಂಗೀತ ಕಲಾಭಿವರ್ಧಿನಿ ಸಭಾದಿಂದ ಗಾನ ರತ್ನಾಕರ ಬಿರುದು ಪಡೆದರು.

೧೯೮೭ರಲ್ಲಿ ಬೆಂಗಳೂರಿನ ಗಾಯನ ಸಮಾಜದ ೧೯ನೆಯ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಸಂಗೀತ ಕಲಾರತ್ನ ಬಿರುದು ಹೊಂದಿದರು.

೧೯೮೯ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ೧೯೯೪ರಲ್ಲಿ ಅಕ್ಯಾಡೆಮಿ ಆಫ್‌ ಮ್ಯೂಸಿಕ್‌ನಿಂದ ಚೌಡಯ್ಯ ಸ್ಮಾರಕ ರಾಜ್ಯ ಪ್ರಶಸ್ತಿ ಲಭ್ಯವಾಯಿತು. ೧೯೯೬ ಸಹಸ್ರಚಂದ್ರ ದರ್ಶನದ ಅಂಗವಾಗಿ ಮೈಸುರಿನ ಗಾನಭಾರತಿ ಸಭಾ ಆಶ್ರಯದಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆಯಿತು.

೧೯೬೫ರಲ್ಲಿ ಪ್ರಾರಂಭವಾದ ವಿಶ್ವವಿದ್ಯಾನಿಲಯದ ಸಂಗೀತ ಮತ್ತು ನೃತ್ಯ ಕಾಲೇಜಿನಲ್ಲಿ ವೀಣಾವಿಭಾಗೆದ ಮುಖ್ಯಸ್ಥರಾಗಿ ಪ್ರೊಫೆಸರ್ ಹುದ್ದೆಗೆ ಆಯ್ಕೆಯಾಗಿ ಅಧ್ಯಾಪಕ ವರ್ಗದವರೆಲ್ಲರೊಡನೆಯೂ ಸಹೃದಯರಾಗಿಯೂ ಪರಸ್ಪರ ಪ್ರೀತಿ ವಿಶ್ವಾಸಗಳನ್ನೂ ಶಿಷ್ಯವರ್ಗದಲ್ಲಿ ಮಧುರ ಬಾಂಧವ್ಯವನ್ನೂ ಪಡೆದಿದ್ದರು.

ಈ ಸಮಯದಲ್ಲಿ, ಅಧ್ಯಾಪನ, ಅಧ್ಯಯನ, ಕೃತಿರಚನೆ, ಇವುಗಳಿಗೆ ಸಾಕಷ್ಟು ಸಮಯಾವಕಾಶ ಸಿಕ್ಕಿದ್ದು ಅವರ ಅಂತಃಸತ್ವ ಪ್ರಖರಗೊಂಡು ಪ್ರಜ್ವಲಿಸಲು ಪ್ರೇರಣೇ ಪ್ರೋತ್ಸಾಹಗಳು ದೊರೆತವು. ಸಂಗೀತ ತ್ರಿಮೂರ್ತಿಗಳ ಧಾಟಿಯಲ್ಲಿ, ಪುರಂದರದಾಸರು, ಕನಕದಾಸರು ಇವರುಗಳ ಮೇಲ್ಪಂಕ್ತಿ ಅನುಸರಿಸಿ ಕನ್ನಡ, ಸಂಸ್ಕೃತ, ತೆಲುಗು ಹಾಗೂ ಹಿಂದಿ ಭಾಷೆಗಳನ್ನು ಕೃತಿ ರಚನೆ ಪ್ರಾರಂಭಿಸಿಯೇ ಬಿಟ್ಟರು. ಇವನ್ನೂ ಕೇಳಿದ ವಿದ್ವಾಂಸರೆಲ್ಲಾ ಮೆಚ್ಚಿ ಕೊಂಡಾಡಿದರು. ಇದರಿಂದ ವಿಶೇಷವಾದ ಪ್ರೋತ್ಸಾಹವೂ, ಆತ್ಮವಿಶ್ವಾಸವೂ ದೊರೆಯಿತು. ಧಾತು, ಮಾತು, ಲಯ ಧಾಟಿಗಳು ನಿರರ್ಗಳವಾಗಿ ಹರಿಯಲಾರಂಭಿಸಿದುವು. ರಾಮ, ಕೃಷ್ಣ, ಶಿವ, ಅಂಬಿಕೆ, ಗಣಪತಿ, ಆಂಜನೇಯ ರಾಘವೇಂದ್ರಸ್ವಾಮಿಗಳ ಮೇಲೆ ರಚನೆಗಳು ಮೂಡಿಬಂದವು. ಅಷ್ಟೇ ಅಲ್ಲದೆ ಸ್ವರಜತಿ, ಜತಿಸ್ವರ, ರಾಗಮಾಲಿಕೆ, ಭಜನಾ, ತಿಲ್ಲಾನ, ನಗಮಾ ಮೊದಲಾದ ವಿವಿಧ ರೀತಿಯ ಗೇಯ ರಚನೆಗಳನ್ನು ತಮ್ಮ ಕಲುಲದೈವ ವೆಂಕಟರಮಣ ಸ್ವಾಮಿಯ ಪರ್ಯಾಯನಾಮ ‘ಲಕ್ಷೀರಮಣ’ ಎಂಬ ಅಂಕಿತವನ್ನಿಟ್ಟು ರಚಿಸಿದ್ದಾರೆ.

ಇವರ ವ್ಯಕ್ತಿತ್ವ ಯಾರಾದರೂ ಗೌರವಿಸಬೇಕೆನ್ನಿಸುವಂಥಾ ನಿಲುವು. ಅವರಿಗೆ ವಿನಿಕೆಯಲ್ಲಿರುವಷ್ಟೇ ಪ್ರೀತಿ ವ್ಯಾಯಾಮದಲ್ಲೂ ಇತ್ತು. ತಮ್ಮ ಗುರುಗಳಂತೆಯೇ ವಸ್ತ್ರಾಭರಣಗಳಲ್ಲಿ ವಿಶೇಷ ಮಮತೆ. ಆಸ್ಥಾನ ವಿದ್ವಾಂಸರ ಗತ್ತು ಅಂತಸ್ತುಗಳಿಗೆ ಒಪ್ಪುವ ಉಡುಪು, ಅಲಂಕಾರ, ಕಿವಿಗಳಲ್ಲಿ ವಜ್ರದ ಹತ್ತು ಕಡುಕುಗಳು. ಕೈ ಬೆರಳುಗಳಲ್ಲಿ ಎದ್ದು ಕಾಣುವ ಹಸಿರು ಕೆಂಪು ಹರಳುಗಳ ಉಂಗುರಗಳು. ವಲ್ಲಿ, ಧೋತ್ರ, ಅಂಗಿ ಎಲ್ಲಾ ಗರಿಗರಿ. ಅವರ ದೃಷ್ಟಿಯಲ್ಲಿಲ ತಿಂಡಿ ತಿನಿಸುಗಳ ಪರಿಪಾಕ ಎಷ್ಟು ಮುಖ್ಯವೋ, ಪ್ರಮಾಣವೂ ಅಷ್ಟೇ ಮುಖ್ಯ. ಶುಚಿ, ರುಚಿ, ಪುಷ್ಕಳ.

ಕಷ್ಟ, ಸುಖಗಳ ದ್ವಂದ್ವ ಸರಣಿಯಲ್ಲಿ ಜೀವನ ಸಾಗುತ್ತಿದ್ದುದರಿಂದ ಒಂದು ರೀತಿಯ ನಿರ್ಲಿಪ್ತತೆಯನ್ನು ಮೈಗೂಡಿಸಿಕೊಂಡಿದ್ದುದರಿಂದ ಸಮಸ್ಯೆಗಳನ್ನೆಲ್ಲಾ ಧೈರ್ಯದಿಂದ ಎದುರಿಸಿ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವ ಶಕ್ತಿಯನ್ನು ಇವರು ಹೊಂದಿದ್ದರು, ಆಶಾವಾದಿ. ವೃತ್ತಿ ಜೀವನದಲ್ಲಿನ ಸಮಸ್ಯೆಗಳನ್ನೂ ಜಾಣ್ಮೆಯಿಂದ ಪರಿಹರಿಸಿಕೊಳ್ಳುತ್ತಿದ್ದರು. ದರ್ಪ ಮನೋಭಾವವಿಲ್ಲ. ಕಾಲೇಜಿನಲ್ಲಿಯೂ ಸಹ ವಿಭಾಗದ ಮುಖ್ಯಸ್ಥರಾಗಿ ಎದುರಿಸಬೇಕಾಗಿ ಬಂದ ಸಮಸ್ಯೆಗಳನ್ನೂ, ಸಹೋದ್ಯೋಗಿಗಳಲ್ಲಿ ಬಹಳ ಸಂಯಮ, ಸೌಹಾರ್ದಗಳಿಂದಲೇ ಪರಿಹರಿಸಿ, ಸಹೋದ್ಯೋಗಿಗಳ ವಿಶೇಷ ಗೌರವಾದರಗಳಿಗೆ ಪಾತ್ರರಾಗಿದ್ದರು.

೨೦೦೦ರಲ್ಲಿ ಅಭಿನಂದನ ಸಮಿತಿ, ಗಾನಭಾರತಿ, ಸಂಗೀತ ಸಭಾಗಳ ಸಂಯುಕ್ತ ಆಶ್ರಯದಲ್ಲಿ ಅಭಿನಂದನಾ ಸಮಾರಂಭ ನಡೆದು ‘ಮಹತಿ’ ಅಭಿನಂದನ ಗ್ರಂಥದ ಸಮರ್ಪಣೆಯಾಯಿತು.

೨೦೦೧ ಗುರುಗಳ ಕಲಾಸೇವೆಯನ್ನು ಗುರುತಿಸಿದ ಕೇಂದ್ರ ಸಂಗೀತ ನಾಟಕ ಅಕ್ಯಾಡೆಮಿಯು ಅವರನ್ನು ಪುರಸ್ಕರಿಸಿ ಸನ್ಮಾನಿಸಿತು.

ಅವರ ಅನಿಸಿಕೆಗಳು: ತಮ್ಮ ಲಜೀವನ ಒಂದು ತೆರೆದ ಪುಸ್ತಕ. ಜೀವನವನ್ನು ಎಂದೂ ಹಗುರವಾಗಿ ಕಂಡಿಲ್ಲ. ಇಳಿ ವಯಸ್ಸಿನಲ್ಲಿಯೂ ಆಶಾವಾದಿ. ಮಾನಸಿಕವಾಗಿ ದೃಡವಾಗಿಯೇ ಇದ್ದು ಬದುಕನ್ನು ಪ್ರೀತಿಸುವುದಾಗಿಯೂ ಎಲ್ಲರ ಪ್ರೀತಿ, ಸ್ನೇಹ ವಿಶ್ವಾಸಗಳು ಬೇಕೆಂದು ಹೇಳಿಕೊಂಡಿದ್ದಾರೆ. ಸುಖ ಸಂತೋಷಗಳನ್ನು ಎಲ್ಲರೊಡನೆ ಹಂಚಿಕೊಳ್ಳಬೇಕು. ಈರ್ಷ್ಯೆ ದ್ವೇಷ ಇಂತಹ ಪದಗಳೇ ಅವರ ನಿಘಂಟಿನಲ್ಲಿಲ್ಲ. ಸತ್ಯಂ, ಶಿವಂ, ಸುಂದರಂ ಎನ್ನುವಂತೆ ಜೀವನದಲ್ಲಿ ಸತ್ಯವಾದುದನ್ನು ಮಂಗಳಕರವಾದುದನ್ನು, ಸುಂದರವಾದುದನ್ನು ಯಾವಾಗಲೂ ಪ್ರೀತಿಸುವುದು. ತಾನೊಬ್ಬ ಚಿಂತನ ಶೀಲ ಹಾಗೂ ವಿಚಾರವಾದಿ, ಶಾಂತಿ ಸಮಾಧಾನಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುವ ಕಲಾವಿದ. ಕಲಾವಿದನಿಗಿರಬೇಕಾದ ಮಾನಸಿಕ ಸಮತೋಲನವನ್ನು ಜೋಪಾನವಾಗಿ ಕಾಪಾಡಿಕೊಂಡು ಬರಬೇಕಾದುದು ಎಲ್ಲ ಕಲಾವಿದರ ಕರ್ತವ್ಯ. ಸಂಗೀತಕ್ಕೆ ಮೂಲಭೂತವಾದ ನಾದವನ್ನು ಕರೆದಿರುವುದು ನಾದಬ್ರಹ್ಮನೆಂದೇ. ಹಾಗಾಗಿ ಕಲಾವಿದನಿಗೆ ನಾದಮಾಧ್ಯಮವೇ ದೇವರು. ಅವರ ನಾದೋಪಾಸನೆಯೇ ತಪಸ್ಸು. ಭಗವದ್ಭಕ್ತಿಯಲ್ಲಿ, ನಾದಸೌಖ್ಯದಲ್ಲಿ ಲೀನವಾಗುವುದೇ ಪಾವನ ಗಂಗಾಸ್ನಾನ. ನವವಿಧಭಕ್ತಿಯ ಮೂಲಕ ದೇವರನ್ನು ಆರಾಧಿಸಿಕ ಆತ್ಮೋದ್ಧಾರವನ್ನು ಕಂಡುಕೊಳ್ಳುವುದೇ ಕಲಾವಿದನ ಅಂತಿಮ ಗುರಿ. ಈ ಮನೋಭೂಮಿಕೆ ಇಲ್ಲದ ಸಂಗೀತ ಜ್ಞಾನ ನಿರರ್ಥಕ. ತಾನು ಮಾಡಿದ ಸಾಧನೆ ಮಹತ್ವವುಳ್ಳದ್ದೋ ಇಲ್ಲವೋ ಆದರೆ ತನಗಿದ್ದ ಇತಿ-ಮಿತಿಗಳಲ್ಲಿ ಇಷ್ಟರಕ ಮಟ್ಟಿಗೆ ಮುನ್ನಡೆದುದು ಅಂತಹ ಸಣ್ಣ ಸಾದನೆಯೇನಲ್ಲವೆಂದು ಭಾವಿಸಿ ತೃಪ್ತಿಪಟ್ಟುದಾಗಿ ಹೇಳಿದ್ದಾರೆ.

ಕಲಾಪ್ರಪಂಚದ ಒಂದೊಂದು ದಿಕ್ಕಿನಲ್ಲಿಯೂ ಅವರ ಸಾಧನೆ, ಗಳಿಕೆ ಮಹತ್ತರವಾದುದಾಗಿದೆ, ಅನುಕರಣೀಯವಾಗಿದೆ.