ಕರ್ನಾಟಕ ಹಿಂದೂಸ್ಥಾನಿ ಸಂಗೀತದ ಹಿರಿಯ ಸಂಗೀತಗಾರರಲ್ಲೊಬ್ಬರಾಗಿರುವ ಬೆಳಗಾವಿಯ ಶ್ರೀ ಆರ್.ಎನ್‌. ಜೋಶಿಬುವಾ ಅವರು ಮೂಲತಃ ಬೆಳಗಾವಿ ಸಮೀಪದ ಪಾಚ್ಛಾಪೂರದವರು. ಹಾಗಾಗಿ ಅವರನ್ನು “ಜೋಶಿ ಬುವಾ ಪಾಚ್ಛಾಪೂರಕರ” ಎಂದೇ ಕರೆಯಲಾಗುತ್ತದೆ. ಅವರು ಹುಟ್ಟಿದ್ದು ಪಾಚ್ಛಾಪೂರದಲ್ಲಿ ೧೫-೭-೧೯೧೭ ರಂದು.

ಅವರದು ವೈದಿಕ ಜ್ಯೋತಿಷ್ಯ ಹಾಗೂ ಸ್ವಾತಂತ್ಯ್ರ ಹೋರಾಟಗಾರರ ಮನೆತನ. ಅವರ ತಂದೆ ವಿನಾಯಕ ಗೋವಿಂದ ಜೋಶಿಯವರು ವೇದ ಹಾಗೂ ಜ್ಯೋತಿಷ್ಯ ಪಂಡಿತರು. ಬಾಲ್ಯದಲ್ಲಿ ತಂದೆಯಿಂದ ವೇದಾಧ್ಯಯನ ಶಿಕ್ಷಣ ಪಡೆದುಕೊಂಡ ಅವರು ಸ್ಥಳೀಯ ‘ರಾಷ್ಟ್ರೀಯ ಶಾಲೆ’ಯಲ್ಲಿ ವಿದ್ಯಾಭ್ಯಾಸ ಪಡೆದು ಪಾಚ್ಛಾಪೂರದಿಂದ ಬೆಳಗಾವಿಗೆ ಬಂದು ನೆಲೆಸಿದರು. ಶಾಲಾ ದಿನಗಳಲ್ಲಿ ರಾಷ್ಟ್ರಭಕ್ತಿಗೀತೆ, ವೇದಶ್ಲೋಕ ಗೀತಗಾಯನದಲ್ಲಿ ವಿಶೇಷ ಆಸಕ್ತಿ ತಳೆದವರು. ಮಹಾತ್ಮಾಗಾಂಧಿಜೀಯವರು ರಾಷ್ಟ್ರೀಯ ಕಾಂಗ್ರೆಸ್‌ ಅಧಿವೇಶನಕ್ಕಾಗಿ ಬೆಳಗಾವಿಗೆ ಬಂದಾಗ ಅವರ ಮುಂದೆ ದೇಶಭಕ್ತಿಗೀತೆ ಹಾಡಿ ‘ಭೇಶ್‌’ ಎನಿಸಿಕೊಂಡರು. ಗಾಂಧೀಜಿಯವರಿಂದ ಸ್ಪೂರ್ತಿ ಪಡೆದು ಸ್ವಾತಂತ್ಯ್ರ ಚಳುವಳಿಯಲ್ಲಿ ಧುಮುಕಿ ಸೆರೆಮನೆ ವಾಸ ಅನುಭವಿಸಿದರು.

ಬೆಳಗಾವಿಗೆ ಬಂದು ನೆಲೆಸಿದ ಅವರು ಕಿರಾಣಾ ಘರಾಣಾಯ ಅದ್ವಿತೀಯ ಗಾಯಕ ಪಂ. ರಾಮಕೃಷ್ಣ ಬುವಾ ಶಿರೋಡಕರ ಅವರಲ್ಲಿ ಸಂಗೀತ ಶಿಕ್ಷಣ ಪಡೆದರು. ಕಾಗಲಕರ ಬುವಾ ಅವರಲ್ಲೂ ಕೆಲದಿನ ತರಬೇತಿ ಪಡೆದರು. ಸಂಗೀತ ಶಿಕ್ಷಣದ ಜೊತೆಗೆ ಆಯುರ್ವೇದಿಕ ಪದವಿ ಪಡೆದರು. ವೈದ್ಯ ಕೆಲಸಕ್ಕಾಗಿ ಮುಂಬೈಗೆ ಹೋಗಿದ್ದ ಅವರು ಮುಂಬೈ ಆಕಾಶವಾಣಿ ದ್ವಿಪರೀಕ್ಷೆಯಲ್ಲಿ ಪಾಸಾಗಿ ಮುಂಬೈ ಆಕಾಶವಾಣಿಯಿಂದ ಸಂಗೀತ ಕಾರ್ಯಕ್ರಮ ನೀಡಿದರು. ಅಖಿಲ ಭಾರತ ಗಾಂಧರ್ವ  ಮಹಾವಿದ್ಯಾಲಯ ಮಂಡಳದ ‘ಸಂಗೀತ ಅಲಂಕಾರ’ ಪದವಿ ಪಡೆದರು ಕರ್ನಾಟಕ ಸರ್ಕಾರದ ವಿಶೇಷ ಸಂಗೀತ ಪರೀಕ್ಷೆ ಹಾಗೂ ಅ.ಭಾ. ಗಾಂ. ಮ.ವಿ. ಮಂಡಲದ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಅವರ ಕನ್ನಡ ಗೀತರಾಮಾಯಣ ತುಂಬ ಹೆಸರುಗಳಿಸಿದ ಕಾರ್ಯಕ್ರಮ.

ಪ್ರಾಥಮಿಕ ಶಾಲೆ, ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಸಂಗೀತದ ಬೆಳವಣಿಗೆಗೆ ಬೆಳಗಾವಿಯಲ್ಲಿ ‘ಬೆಳಗಾವಿ ಆರ್ಟ್ ಸರ್ಕಲ್‌’ ಬೆಳಗಾವಿ ಕಲಾಕಾರ ಸಂಘ’ ಸ್ಥಾಪಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಪಾಚ್ಛಾಪೂರದಲ್ಲಿ ಅವರ ತಂದೆಯವರ ಹೆಸರಿನಲ್ಲಿ ‘ವಿನಾಯಕ ಗೋವಿಂದ ಜೋಶಿ ಶಿಕ್ಷಣ ನೆರವು ಮಂಡಲಿ’ ಎಂಬ ಸಂಸ್ಥೆ ಸ್ಥಾಪಿಸಿದ್ದಾರೆ. ಶ್ರೀ ಆರ್.ಎನ್‌. ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ ಪ್ರಶಸ್ತಿ’ ದೊರೆತಿದೆ. ಕೇಂದ್ರ ಸರ್ಕಾರ ತಾಮ್ರ ಪತ್ರ ನೀಡಿ ಗೌರವ ಶಾಸನ ನೀಡಿದೆ. ೮೦ನೇ ವಯಸ್ಸಿನಲ್ಲಿ ನಿಧನರಾದ ಅವರಿಗೆ ಅಪಾರ ಶಿಷ್ಯ ಬಳಗವಿದೆ. ಅವರ ಶಿಷ್ಯರಲ್ಲಿ ಈಶ್ವರಪ್ಪ ಜಿ.ಮಿಣಚಿ, ಅನಂತ ತೇರದಾಳ, ಪ್ರಭಾಕರ ಶಹಾಪೂರಕರ, ಹಯವದನ ಜೋಶಿ, ಎನ್‌.ಡಿ. ಜೋಶಿ, ಸಾಯಿನಾಥ್‌ ಮೋಹಿತೆ, ಗುರುರಾಜು ಮಿರಜಕರ, ಮೋಹನ ಬಾಗೇವಾಡಿ, ಶಂಭುಭಟ್‌ ಕಡಟೋಕಾ, ಡಾ. ಅಶೋಕ ಸಾಠೆ ಮುಂತಾದವರು ಉಲ್ಲೇಖನೀಯರಾಗಿದ್ದಾರೆ.