ಸಂಗೀತ, ಸಾಹಿತ್ಯ, ಸಂಸ್ಕೃತಗಳ ನೆಲೆವೀಡಾದ ರುದ್ರಪಟ್ಟಣ ಹಾಸನ ಜಿಲ್ಲೆಯ  ಅರಕಲಗೂಡು ತಾಲ್ಲೂಕಿನ ಒಂದು ಗ್ರಾಮ. ಸಂಸ್ಕೃತ ವಿದ್ವಾಂಸರೂ, ಕಥಾ ಕೀರ್ತನಕಾರರೂ, ಸಂಗೀತಜ್ಞರೂ ಆಗಿದ್ದ ಕೃಷ್ಣ ಶಾಸ್ತ್ರಿಗಳ ದ್ವಿತೀಯ ಪುತ್ರ ಆರ್.ಕೆ. ನಾರಾಯಣ ಸ್ವಾಮಿಯವರ ಸುಪುತ್ರರಾಗಿ ೧೫-೭-೧೯೪೩ ರಂದು ತ್ಯಾಗರಾಜನ್‌ ಹಾಗೂ ೬-೧೧-೧೯೪೬ ರಂದು ತಾರಾನಾಥನ್‌ ಹಾಸನದಲ್ಲಿ ಜನಿಸಿದರು. ಈ ದೊಡ್ಡ ಕುಟುಂಬದ ಎಲ್ಲಾ ಸದಸ್ಯರೂ ಸಂಗೀತ ವಿದ್ವಾಂಸರೇ ಆಗಿದ್ದು ಈ ಸಹೋದರರಿಗೆ ತಂದೆಯವರಿಂದಲೇ ಶಿಕ್ಷಣ ಪ್ರಾಪ್ತವಾಯಿತು. ತ್ಯಾಗರಾಜನ್‌ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾಗಿ ಮೊದಲು ಮೈಸೂರು ಆಕಾಶವಾಣಿ ನಿಲಯದಲ್ಲೂ ಮುಂದೆ ಚೆನ್ನೈ ಸೇರಿದಂತೆ ಹಲವು ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದು ಈಗ ನಿವೃತ್ತರಾಗಿದ್ದಾರೆ. ತಾರಾನಾಥನ್‌ ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್‌ ಪದವಿ ಪಡೆದು ಮೈಸೂರು ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ಹಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದಾರೆ.

ಸಾರ್ಕ್ ಸಮ್ಮೇಳನ, ದರ್ಬಾರ್ ಸಭಾಂಗಣ, ಮದ್ರಾಸ್ ಮ್ಯೂಸಿಕ್‌ ಅಕಾಡೆಮಿ ಸೇರಿದಂತೆ ಪ್ರತಿಷ್ಠಿತ ಸಭೆಗಳಲ್ಲೂ, ಸಂಸ್ಥೆಗಳಲ್ಲೂ ಇವರ ಯುಗಳ ಗಾಯನ ನಡೆದಿದೆ. ಲಂಡನ್‌, ಅಮೆರಿಕಾ, ಕೌಲಾಲಂಪೂರ್, ಸಿಂಗಪುರ ಮುಂತಾದ ಹೊರ ದೇಶಗಳಲ್ಲೂ ಸಂಚರಿಸಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಆಕಾಶವಾಣಿ ಗಾಯನ ಸ್ಪರ್ಧೆಯಲ್ಲಿ ಮೂರು ಬಾರಿ ಪ್ರಥಮ ಬಹುಮಾನ; ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ಉತ್ತರ ಕಛೇರಿ ಬಹುಮಾನ; ನೆರವಲ್‌ ಹಾಡಿಕೆಗಾಗಿ ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಸ್ಮಾರಕ ಪ್ರಶಸ್ತಿ; ರಾಜ್ಯೋತ್ಸವ ಪ್ರಶಸ್ತಿ ‘ಗಾನ ಸುಧಾಕರ’, ‘ಗಾನ ಕಲಾತಿಲಕ’, ‘ಕರ್ನಾಟಕ ಕಲಾರ್ಶರೀ’, ಜೆ.ಎಸ್‌.ಎಸ್‌. ಸಭೆಯ ಸಂಗೀತ ಸಮ್ಮೇಳನಾಧ್ಯಕ್ಷರಾಗಿ ಸನ್ಮಾನ – ಇತ್ಯಾದಿ ಈ ಸಹೋದರರು ಗಳಿಸಿರುವ ಗೌರವಗಳು ಅನೇಕ.

ಗಾಯಕರಾಗಿ ಮಾತ್ರವಲ್ಲದೆ ಸಂಶೋಧನಾತ್ಮ ಕೆಲಸಗಳನ್ನು ಮಾಡಿ ಅನೇಕ ಪ್ರಾತ್ಯಕ್ಷಿಕೆಗಳನ್ನು ಬೋಧಪ್ರದವಾದ ಲೇಖನಗಳನ್ನೂ ನೀಡಿರುತ್ತಾರೆ. ಊತ್ತುಕಾಡು ವೆಂಕಟಸುಬ್ಬಯ್ಯರ್ ಹಾಗೂ ಶ್ರೀ ಜಯಚಾಮರಾಜೇಂದ್ರರ ಕೃತಿಗಳ ವಿಶೇಷ ಅಧ್ಯಯನ ಮಾಡಿದ್ದಾರೆ. ‘ಎ’ ದರ್ಜೆಯ ಗಾಯಕರಾದ ಇವರ ಗಾಯನ ಆಕಾಶವಾಣಿ-ದೂರದರ್ಶನ ಕೇಂದ್ರಗಳಿಂದ ಪ್ರಸಾರವಾಗುತ್ತಿದೆ. ತ್ಯಾಗರಾಜನ್‌ ಕರ್ನಾಟಕ ಗಾನಕಲಾ ಪರಿಷತ್ತಿನ ತಜ್ಞರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. (೨೦೦೩)