ಕರ್ನಾಟಕದ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಹಾಸನ ಜಿಲ್ಲೆಯ ರುದ್ರಪಟ್ಟಣದ ಮತ್ತೊಂದು ಅದ್ಭುತ ಕೊಡುಗೆ ಡಾ. ಆರ್. ಎನ್‌. ಶ್ರೀಲತಾ, ಸಂಗೀತಾ ಕಲಾನಿಧಿ ಮುಸಿರಿ ಸುಬ್ರಮಣ್ಯ ಅಯ್ಯರ್ ಅವರ ನೇರ ಶಿಷ್ಯರಾದ ತಂದೆ ವಿದ್ವಾನ್‌ ಆರ್.ಕೆ. ನಾರಾಯಣಸ್ವಾಮಿಯವರಿಂದ ಶ್ರೀಲತಾ ಸಂಗೀತದ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಸಹೋದರ ವಿದ್ವಾನ್‌ ಆರ್.ಎನ್‌. ತ್ಯಾಗರಾಜನ್‌ ಅವರಿಂದಲೂ ಮಾರ್ಗದರ್ಶನ ದೊರೆಯಿತು. ಸೊಗಸಾದ ಕಂಠದ ಜೊತೆ ಅದ್ಭುತ ಪಾಂಡಿತ್ಯವೂ ಇದ್ದದ್ದರಿಂದ ಶ್ರೀಲತಾರ ಸಂಗೀತ ಯಾತ್ರೆ ಯಶಸ್ವಿಯಾಗೇ ಆರಂಭವಾಯಿತು. ಮದರಾಸಿನ ಪ್ರತಿಷ್ಠಿತ ಇಂಡಿಯನ್‌ ಫೈನ್‌ ಆರ್ಟ್ಸ್ ಸೊಸೈಟಿಯಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಐದು ಪ್ರಥಮ ಬಹುಮಾನಗಳ ಜೊತೆಗೆ ಸಂಗೀತ ದಿಗ್ಗಜ ಡಾ ಎಂ.ಡಿ. ರಾಮನಾಥನ್‌ ಅವರಿಂದ ತಂಬೂರಿಯನ್ನು ಬಹುಮಾನವಾಗಿ ಪಡೆದಿದ್ದು ಅವರ ಸಂಗೀತದ ಜೀವನದಲ್ಲೊಂದು ಮಹತ್ತರ ಮೈಲಿಗಲ್ಲು.

ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶ್ರೀಲತಾ ‘ಕನಾಟಕ ಸಂಗೀತದಲ್ಲಿ ಮನೋಧರ್ಮ ಸಂಗೀತದ ಪ್ರಕಾರಗಳಲು’ ವಿಷಯದ ತಮ್ಮ ಅಧ್ಯಯನಕ್ಕೆ ಡಾಕ್ಟರೇಟ್‌ ಪಡೆಯುವ ಮೂಲಕ, ಕರ್ನಾಟಕ ಸಂಗೀತದಲ್ಲಿ ಡಾಕ್ಟರೇಟ್‌ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಕಾಶವಾಣಿಯ ‘ಎ’ ಶ್ರೇಣಿ ಕಲಾವಿದರಾದ ಶ್ರೀಲತಾರ ಸಂಗೀತ ಕಾರ್ಯಕ್ರಮಗಳು ಬೆಂಗಳೂರು, ದೆಹಲಿ, ಚೆನ್ನೈ ಕೇಂದ್ರಗಳಿಂದ ಪ್ರಸಾರವಾಗುತ್ತಿರುತ್ತದೆ. ದಾಸರ ಪದಗಳು ಅಥವಾ ಶರಣರ ವಚನಗಳನ್ನೇ ೩ ಗಂಟೆಗಳ ಕಛೇರಿ ನೀಡಬಲ್ಲ ಪ್ರತಿಭಾವಂತರಾದ ಶ್ರೀಲತಾ ಭಜನ್‌, ಅಭಂಗಗಳ ಗಾಯನದಲ್ಲೂ ಸಿದ್ಧಹಸ್ತರು.

ದೇಶ ವಿದೇಶಗಳಲ್ಲಿ ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಶ್ರೀಲತಾ, ಮಲೇಶಿಯಾ, ಸಿಂಗಪುರ ಮತ್ತು ಅಮೆರಿಕಗಳಲ್ಲಿ ಯಶಸ್ವೀ ಸಂಗೀತ ಪ್ರವಾಸ ಮಾಡಿದ್ದಾರೆ. ಗಾನರತ್ನಾವಳಿ, ದಾಸಮಂಜರಿ, ಹರಿಯ ನೆನೆಸಿದ ದಿನವೆ, ಚಾಮುಂಡೇಶ್ವರಿ ಸುಪ್ರಭಾತ ಮತ್ತು ಗೀತ ಭೈರವಿ ಮುಂತಾದ ಧ್ವನಿಸುರುಳಿಗಳಿಗೆ ಸಂಗೀತ ಸಂಯೋಜಿಸಿ ಹಾಡಿದ್ದಾರೆ.

ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ವಿಭಾಗದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುತ್ತಿರುವ ಶ್ರೀಲತಾರ ಮಾರ್ಗದರ್ಶನದಲ್ಲಿ ಈಗಾಗಲೇ ಇಬ್ಬರು ಸಂಗೀತಗಾರರು ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.

ತಮ್ಮ ಪ್ರಬುದ್ಧ ಸಂಗೀತ ಸೇವೆಗಾಗಿ ಈಗಾಗಲೇ ‘ಸಂಗೀತರತ್ನ’, ‘ಲಲಿತಕಲಾ ರತ್ನ’, ‘ನಾದ ಜ್ಯೋತಿ’, ‘ಸಂಗೀತ ಕಲಾ ತಪಸ್ವಿ’, ‘ಸಂಗೀತ ಸರಸ್ವತಿ’ ಮುಂತಾದ ಪ್ರಶಸ್ತಿಗಳನ್ನು ಪಡೆದಿರುವ ಡಾ. ಆರ್.ಎನ್‌. ಶ್ರೀಲತಾ ಅವರಿಗೆ ೨೦೦೬-೦೭ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನಿತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.