ವೀಣೆಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರೂ, ಸರಸ್ವತೀ, ಲಕ್ಷ್ಮೀ, ಪಾರ್ವತಿಯರೂ, ಸೂರ್ಯ, ಚಂದ್ರ, ವಾಸುಕಿಯರೂ ಒಂದೊಂದು ಅಂಗದಲ್ಲಿ ಒಬ್ಬೊಬ್ಬರು ಆವಾಹಿತರಾಗಿದ್ದಾರೆನ್ನುತ್ತಾರೆ. ‘ಸರ್ವದೇವ ಮಯೀ’ ಆದ ವೀಣೆಯು ‘ಸರ್ವಮಂಗಳೆ’.

ಮೈಸೂರಿನಲ್ಲಿ: ಇಲ್ಲಿ ಹೆಸರಾಂತ ವೈಣಿಕರು ಜನ್ಮ ತಾಳಿ ಕರ್ನಾಟಕದ ಕೀರ್ತಿ ಬೆಳಗಿದ್ದಾರೆ. ಸಂಗೀತ ಪ್ರಪಂಚದಲ್ಲಿ ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ ಮೊದಲಾದವರು ದೊಡ್ಡ ಸಾಧಕರು. ರುದ್ರಪಟ್ಟಣ ಸುಬ್ಬರಾಯ ಕೇಶವ ಮೂರ್ತಿಗಳು ಗಂಧರ್ವಾಂಶ ಸಂಭೂತರೆನ್ನಿಸಿದ್ದ, ವೀಣೆ ಸುಬ್ಬಣ್ಣನವರ ಪಟ್ಟ ಶಿಷ್ಯರು. ಗುರುಗಳನ್ನು ಶ್ವೇತಚ್ಛತ್ರವೆಂದೇ ಭಾವಿಸಿದ್ದ ಕೇಶವಮೂರ್ತಿಗಳು “ಸಾಧನೆಯಿಂದ ಸಿದ್ಧಿ; ಸಿದ್ಧಿಯಿಂದ ಪ್ರಸಿದ್ಧಿ; ಅಸಾಧ್ಯ ಎನ್ನುವುದು ಸಲ್ಲ; ಪ್ರತಿಯೊಬ್ಬರೂ ಅಸಾಧ್ಯ ಸಾಧಕರಾದರೆ ‘ಅಸಾಧ್ಯಂ ತವ ಕಿಂವದ?” ಎಂದು ಪದೇ ಪದೇ ಹೇಳುತ್ತಿದ್ದರು.

ಸಾವಿರದೊಂಭೈನೂರ ಮೂರನೇ ಇಸವಿ ಮಾರ್ಚ್‌ ತಿಂಗಳ ನಾಲ್ಕನೇ ತಾರೀಖು, ಬೇಲೂರಿನಲ್ಲಿ ರುದ್ರಪಟ್ಣ ಸುಬ್ಬರಾಯರು ಮತ್ತು ಪುಟ್ಟಕ್ಕಯ್ಯನವರಿಗೆ ಜನಿಸಿದ ಮೂರನೆಯ ಪುತ್ರನಿಗೆ ಬೇಲೂರು ಚನ್ನಕೇಶವನ ಹೆಸರನ್ನೇ ಇಟ್ಟು ಕೇಶವಮೂರ್ತಿ ಎಂದು ಕರೆದರು. ಇಪ್ಪತ್ನಾಲ್ಕು ತಲೆಮಾರುಗಳಿಂದ ವೈಣಿಕ ವಂಶಜರಾದ ಸುಬ್ಬರಾಯರು ಶಾಲೆಯಲ್ಲಿ ಸಂಗೀತ ಬೋಧಕರಾಗಿದ್ದರು. ಕೇಶವಮೂರ್ತಿ ಮೂರು ತಿಂಗಳ ಕೂಸಾಗಿದ್ದಾಗ ಅವರಿಗೆ ಚಿಕ್ಕಮಗಳೂರಿಗೆ ವರ್ಗವಾಯಿತು.

ಒಟ್ಟು ನಾಲ್ಕು ಜನ ಸಹೋದರರು; ಅಣ್ಣ ಆರ್.ವಿ. ರಂಗಪ್ಪ ೧೦೫ ವರ್ಷ ಬಾಳಿದ ಜಲತರಂಗ್‌ ವಾದಕರು. ಇನ್ನಿಬ್ಬರು ಗೋಪಾಲಯ್ಯ, ಕೃಷ್ಣಮೂರ್ತಿ. ಸೋದರಿ ಕಮಲಮ್ಮ ಬಾಲವಿಧವೆ.

ಧ್ವನಿವರ್ಧಕ ಸಾಧನಗಳಿಲ್ಲದ ಕಾಲದಲ್ಲಿ ವೀಣೆಯ ನಾದವನ್ನು ಹೆಚ್ಚಿಸುವುದರ ಬಗ್ಗೆ ಸಂಶೋಧನೆ ನಡೆಸಿ, ಇಪ್ಪತ್ನಾಲ್ಕು ತಂತಿಗಳ ವೀಣೆಯನ್ನು ಪ್ರಥಮವಾಗಿ ರಚಿಸಿದ ಸಾಧಕರು ಕೇಶವಮೂರ್ತಿಗಳು. ಪಿಟೀಲು ಕೊಳಲು, ಜಲತರಂಗ್‌, ಪಿಯಾನೋ, ಬಾಲಕೋಕಿಲ ವಾದ್ಯಗಳನ್ನು ಸಹ ನುಡಿಸುತ್ತಿದ್ದರು.

ಬಾಲ್ಯ: ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ ಕೇಶವಯ್ಯನಿಗೆ ಯಾವಾಗಲೂ ಸಂಗೀತದ ಕಡೆಗೇ ಒಲವು ಹೆಚ್ಚು. ತಂದೆಯವರ ಬಳಿಯೇ ಬಾಲ ಪಾಠದಿಂದ ವೀಣೆ ಕಲಿಯುತ್ತಿದ್ದು, ಸ್ವರಜತಿ ನುಡಿಸುವವರೆಗೆ ಬಂದಿದ್ದರು. ಆಗ ಅವರ ಜೀವನದಲ್ಲಿ ನಡೆದ ಒಂದು ಘಟನೆ, ಒಂದು ಆಯಾಮವನ್ನೇ ಸೃಷ್ಟಿಸಿ, ವೀಣೆಯಲ್ಲಿ ಉತ್ತಮ ಸಾಧಕರಾಗುವ ಅವಕಾಶ ಒದಗಿಸಿತು.

ಬಂಧುಗಳಲ್ಲೊಬ್ಬರ ವಿವಾಹ ಸಂದರ್ಭ. ಅಲ್ಲಿಗೆ ದೊಡ್ಡಪ್ಪ ರುದ್ರಪಟ್ಣ ವೆಂಕಟರಾಮಯ್ಯ ಸಹ ಬಂದಿದ್ದರು. (ಇವರ ಕೇದಾರ ಗೌಳದ ಝಂಪೆತಾಳದ ‘ವಿರಿಬೋಣಿ’ ವರ್ಣ ಒಂದು ಸುಂದರ ರಚನೆ). ಅವರು ತಮಗೆ ಪುತ್ರರಿಲ್ಲದ್ದರಿಂದ ತುಂಬಿದ ಸಭೆಯಲ್ಲಿ “ಯಾರಾದರೂ ಮಗನನ್ನು ದತ್ತು ಕೊಟ್ಟರೆ ನನ್ನ ಸಕಲ ವಿದ್ಯೆಯನ್ನೂ ಧಾರೆ ಎರೆಯುತ್ತೇನೆ” ಎಂದು ಘೋಷಿಸಿದರು. ಬಾಲಕ ಕೇಶವಯ್ಯ ಮುಂದೆ ಬಂದಾಗ ಆತನನ್ನು ಬಾಚಿತಬ್ಬಿ, ತೊಡೆಯಮೇಲೇರಿಸಿಕೊಂಡು “ಮೈಸೂರಿಗೆ ಬಾ” ಎಂದರು. ಬಾಲಕನಿಗೆ ತಕ್ಷಣ ಹೊರಟು ಬಿಡುವಷ್ಟು ಆಸೆ. ಇವರ ಮಾತನ್ನು ನಂಬಿ, ತಂದೆಯವರ ವಿರೋಧವನ್ನೂ ಲೆಕ್ಕಿಸದೆ, ಸೋದರಿ ಕಮಲಮ್ಮನಿಗೆ ಮಾತ್ರ ವಿಷಯ ತಿಳಿಸಿ, ನಡೆದೇ ಹೊರಟರು. ನೂರಿಪ್ಪತ್ತೈದು ಮೈಲಿ ನಡೆದು ಪ್ರಯಾಸದಿಂದ ಮೈಸೂರು ತಲುಪಿ, ದೊಡ್ಡಪ್ಪನ ಮನೆ ಸೇರಿದಾಗ, ಸಿಕ್ಕಿದ ಸ್ವಾಗತವೇ ಬೇರೆ ರೀತಿಯದು. “ಹೇಗೂ ಬಂದಿದ್ದೀ, ಮೈಸೂರೆಲ್ಲ ನೋಡಿಕೊಂಡು ನಾಲ್ಕು ದಿನ ಇದ್ದು ಹೋಗು” ಎಂದರು ದೊಡ್ಡಪ್ಪ. ವೀಣೆ ಪಾಠದ ಮಾತೇ ಇಲ್ಲ. ಆದರೂ ಧೈರ್ಯಗೆಡದೆ “ಅರಮನೆ ಶಾಲೆಯಲ್ಲಾದರೂ ಕಲಿಯುವ ಅವಕಾಶ ಕೊಡಿ” ಎಂದು ಬಾಲಕ ವಿನಯದಿಂದ ಬೇಡಿಕೊಂಡನು. ಅದಕ್ಕೂ “ಅರಮನೆ ಮೆಟ್ಟಿಲಕಲ್ಲು ಹತ್ತುವುದೇನು ಅಷ್ಟು ಸುಲಭವೆಂದು ಕೊಂಡೆಯಾ?” ಎಂದು ಹೀಯಾಳಿಸಿದಾಗ, ಕೇಶವಯ್ಯನ ತಾಳ್ಮೆ ಮೀರಿ, ರೋಷ ಬಂದು, “ದೊಡ್ಡಪ್ಪ! ನಿಮ್ಮ ಆಶೀರ್ವಾದ ನನ್ನ ಮೇಲಿರಲಿ. ನಾನು ಎಲ್ಲಾದರೂ, ಹೇಗಾದರೂ ಈ ವಿದ್ಯೆಯನ್ನು ಕಲಿತು, ಆಸ್ಥಾನ ವಿದ್ವಾಂಸನಾಗಿ ಇದೇ ಮೈಸೂರು ಅರಮನೆಗೇ ಬರುತ್ತೇನೆ”, ಎಂದು ಅವರಿಗೆ ದೊಡ್ಡ ನಮಸ್ಕಾರ ಮಾಡಿ, ಅವರ ಮನೆಯಲ್ಲಿ ಒಪ್ಪತ್ತು ಊಟ ಸಹ ಮಾಡದೆ ಹೊರಟು ಬಂದರು. ಆಗ ಕೇಶವಯ್ಯನಿಗೆ ಹದಿನಾಲ್ಕು ವರ್ಷದ ಪ್ರಾಯ.

ನೊಂದ ಮನಸ್ಸಿಗೆ ತಾನೇ ಸಮಾಧಾನ ಹೇಳಿಕೊಂಡು ಬರುತ್ತಿದ್ದಾಗ ಬಂಧುಗಳಾದ ರಾಯಪ್ಪನವರು ಸಿಕ್ಕಿ ಮನೆಗೆ ಕರೆದುಕೊಂಡು ಹೋದರು. ಇವರು ಪಟ್ಟ ಪಾಡನ್ನು ಕೇಳಿ ವೆಂಕಟಗಿರಿಯಪ್ಪನವರ ಸೋದರಮಾವ ಸುಬ್ಬರಾಯರೆಂಬ ವಿದ್ವಾಂಸರಲ್ಲಿಗೆ ಕರೆದೊಯ್ದರು. ಅವರು ಅಂದೇ ಹಂಸಧ್ವನಿರಾಗದ ‘ರಘುನಾಯಕ’ ಕೃತಿ ಪಾಠ ಹೇಳಿದರು. ಆದರೂ ಬಾಲಕನಿಗೆ ತೃಪ್ತಿಯಾಗಲಿಲ್ಲ. ಅವರ ಬಳಿ ಮತ್ತೆ ಹೋಗಲಿಲ್ಲ.

ಶಿಕ್ಷಣ: ಹೀಗಿರುವಾಗ, ಬಂಧು ರಾಯಪ್ಪನವರ ಎದುರು ಮನೆಯಲ್ಲಿದ್ದ ಅಕ್ಕಮ್ಮಣ್ಣಿ ಎಂಬಾಕೆಗೆ ವೀಣೆ ಕಲಿಸಲು ವೀಣೆ ಸುಬ್ಬಣ್ಣನವರು ಬರುತ್ತಿದ್ದರು. ಮಹಾ ರಸಿಕರಾದ ಸುಬ್ಬಣ್ಣನವರು ಅಲ್ಲಿ ಬರುತ್ತಿದ್ದರೆ ಇಲ್ಲಿಗೆ ಹೊಡೆಯುವಂಥ ಅತ್ತರಿನ ಸುವಾಸನೆ. ಅವರ ಪ್ರೌಢಿಮೆ ಬಗ್ಗೆ ಕೇಳಿದ್ದ ಕೇಶವಯ್ಯ ಒಂದು ದಿನ ಅವರಿಗೆ ಅಡ್ಡಬಿದ್ದು ತಮ್ಮ ಮಹತ್ತಾದ ಅಭಿಲಾಷೆಯನ್ನು ನಿವೇದಿಸಿಕೊಂಡರು. ಭಕ್ಷಿ ಸುಬ್ಬಣ್ಣನವರು ಸಮಾಧಾನಚಿತ್ತದಿಂದ ಆಲೈಸಿ, ಮಾತೇ ಇಲ್ಲದೆ, ಮಂದಹಾಸದಿಂದ ಆರ್ಶೀವದಿಸಿದರು.

ಬಾಲಕ ಕೇಶವಯ್ಯ ಭಾಗ್ಯದ ಬಾಗಿಲು ತೆರೆಯಿತು. ವೀಣಾ ಜಗತ್ತಿನಲ್ಲಿ ತಮ್ಮದೇ ಛಾಪನ್ನು ಮೂಡಿಸಿ, ಉನ್ನತ ಸ್ಥಾನಕ್ಕೇರುವ ಅವಕಾಶ ತಾನಾಗಿ ಎದುರಾಯಿತು.

ಸದ್ಗುರುವಿನ ಬಳಿ ವೀಣೆ ಕಲಿಯುವ ತಮ್ಮ ಆದಮ್ಯ ಬಯಕೆಯನ್ನು ಅವರ ಮುಂದೆ ಹೇಳಿಕೊಂಡಾಗ ಉದಾರ ಮನಸ್ಸಿನಿಂದ “ನಮ್ಮ ಮನೆಯಲ್ಲೇ ಬಂದು ಅಭ್ಯಾಸ ಮಾಡು” ಎಂದು ಹೇಳಿದರು. ಅಂತೆಯೇ ಕೇಶವಯ್ಯ ಪ್ರತಿನಿತ್ಯ ಸುಬ್ಬಣ್ಣನವರ ಮನೆಗೆ ಹೋಗಿ, ಅವರ ಪತ್ನಿಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಟ್ಟು, ಅಲ್ಲಿದ್ದ ಗ್ರಂಥಭಂಡಾರದಿಂದ ರಚನೆಗಳನ್ನು ಆಯ್ದು ನುಡಿಸಿಕೊಳ್ಳುತ್ತಿದ್ದರು. ಹೀಗೆ ಹಲವಾರು ವರ್ಷಗಳು ಗುರುಸೇವೆ, ಸತತ ಸಾಧನೆ ಮಾಡಿ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡರು. ಗುರುಗಳ ಅನುಗ್ರಹ ಬಹಳ ಚೆನ್ನಾಗಿತ್ತು.

ಕೇಶವಯ್ಯನ ಯಮಸಾಧನೆ ಹಾಗೂ ಆತನ ಚಿತ್ರವಿಚಿತ್ರ ರೂಪದ ನಾದಾಲಂಕಾರ, ಸೊಗಸಾದ ದಿವ್ಯತಾನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದುವು. ೧೯೨೯ರಲ್ಲಿ ಬಿಡಾರಂ ಕೃಷ್ಣಪ್ಪನವರು ದೇಶಾಟನ ಮಾಡಿ ಬಂದ ಸಂಪಾದನೆಯಿಂದ ಮೈಸೂರಿನಲ್ಲಿ ರಾಮಮಂದಿರ ನಿರ್ಮಾಣ ಮಾಡಿದರು. ಅಲ್ಲಿ ನಡೆದ ಪ್ರಪ್ರಥಮ ಕಚೇರಿ ಕೇಶವಯ್ಯನದು. ಆ ಕಚೇರಿಗೆ ಅತ್ಯಂತ ಹಿರಿಯ ಕಲಾವಿದರಲ್ಲದೆ ಸಮಾಜ ಪೋಷಕರೂ ಆಗಮಿಸಿದ್ದರು. ಎಲ್ಲರ ಮನಸ್ಸಿನಲ್ಲೂ ಅಚ್ಚಳಿಯದೆ ಉಳಿಯುವಂತೆ ಕೇಶವಯ್ಯನವರು ರಸಿಕರನ್ನು ಮಂತ್ರ ಮುಗ್ಧರನ್ನಾಗಿ ಮಾಡಿದರು. “ಇಂತಹ ದಿವ್ಯವಾದನವನ್ನು ಕೇಳಲು ಶೇಷಣ್ಣ ಬದುಕಿಲ್ಲವಲ್ಲ” ಎಂದು ಸುಬ್ಬಣ್ಣನವರು ಉದ್ಗರಿಸಿದರಂತೆ.

ಸಾಧನೆ: ಹೀಗೆ ಪ್ರಾರಂಭವಾದ ಕೇಶವಮೂರ್ತಿಗಳ ಸರಸ್ವತಿಯ ಆರಾಧನೆ, ಆರೋಹಣ ಕ್ರಮದಲ್ಲಿಯೇ ಮುಂದುವರೆಯಿತು. ಗುರುಗಳ ಸಂಪೂರ್ಣಾನುಗ್ರಹದ ದೆಸೆಯಿಂದ ಭಾರತಾದ್ಯಂತ ಹಲವಾರು ಪ್ರಮುಖ ರಾಜ, ಮಹಾರಾಜರ ಸಮ್ಮುಖದಲ್ಲಿ ಕಚೇರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ಗೌರವಿಸಲ್ಪಟ್ಟರು.

೧೯೨೭ರಲ್ಲಿ ವೆಂಕಟಲಕ್ಷಮ್ಮನವರ ಜೊತೆಗೆ ವಿವಾಹವಾಯಿತು. ಐವತ್ತು ವರ್ಷಗಳ ಸುದೀರ್ಘ ಸಹಬಾಳ್ವೆಯಲ್ಲಿ ಸುಖದುಃಖಗಳನ್ನು ಸಮನಾಗಿ ಹಂಚಿಕೊಂಡ ಇವರಿಗೆ ತಮ್ಮ ಹನ್ನೊಂದು ಪುತ್ರರತ್ನಗಳೇ ಒಂದು ರಾಮನಾಥಪುರದ ಮಹಾರಾಜರಿಗೆ ಕಾಣಿಕೆಯಾಗಿ ಕೊಡಲು ಮುತ್ತಯ್ಯಭಾಗವತರು ಒಂದು ದಂತದ ವೀಣೆಯನ್ನು ಮಾಡಿಸಿದ್ದರಂತೆ. ಅವರಿಂದ ಅದನ್ನು ಏಳುನೂರ ಐವತ್ತು ರೂಪಾಯಿಗಳಿಗೆ (ಆ ಕಾಲಕ್ಕೆ ಅದು ದೊಡ್ಡ ಮೊತ್ತ) ಕೊಂಡರು, ೧೯೩೦ ರಲ್ಲಿ ಕೇಶವಯ್ಯ!

ಭಾರತದಾದ್ಯಂತ ಪ್ರವಾಸಮಾಡಿ ವೀಣಾನಾದ ದುಂದುಭಿ ಮೊಳಗಿಸಿದರು. ವಿಶ್ವಕವಿ ರಬೀಂದ್ರನಾಥ ಠಾಕೂರರು ಕೇಶವಮೂರ್ತಿಗಳ ವೀಣಾವಾದನದ ಮೋಡಿಗೆ ಮಾರುಹೋಗಿ, ತಮ್ಮೊಡನೆ ವಿಶ್ವ ಪರ್ಯಟನ ಮಾಡಲು ಕರೆದರಂತೆ. ಈ ಮಹಾನ್‌ವ್ಯಕ್ತಿಗಳು ಒಬ್ಬರನ್ನೊಬ್ಬರು ಭೇಟಿಯಾದ ಪ್ರಸಂಗ ಅತ್ಯಂತ ವಿಸ್ಮಯಕಾರಿ.

ಕೇಶವಮೂರ್ತಿಗಳು ನಾದದಲ್ಲಿ ಸಂಶೋಧನೆ ಮಾಡಿ ವೀಣೆಯ ನಾದವನ್ನು ಹೆಚ್ಚಿಸಲು (ಧ್ವನಿವರ್ಧಕದ ಸೌಕರ್ಯವಿಲ್ಲದ ಕಾಲದಲ್ಲಿ) ವೀಣೆಗೆ ಸಾಧಾರಣವಾಗಿ ಇರುವ ಏಳು ತಂತಿಗಳ ಜೊತೆಗೆ ಇನ್ನು ಹದಿನೇಳು ಅನುರಣನ, ಸ್ನೇಹಸ್ಪಂದನ ತಂತಿಗಳನ್ನು ಜೋಡಿಸಿ, ತುಂಬುನಾದ ಬರುವಂತೆ ಮಾಡಿದರು. ಹೀಗೆ ಆವಿಷ್ಕರಿಸಲ್ಪಟ್ಟ ವೀಣೆ ಇದೇ ಪ್ರಥಮವಾಗಿತ್ತು ಇದು ನಡೆದದ್ದು ೧೯೨೪ರಲ್ಲಿ.

೧೯೩೦ರ ಡಿಸೆಂಬರಿನಲ್ಲಿ ಹೈದರಾಬಾದಿನ ಶ್ರೀಮಂತರಾದ ಧನರಾಜ ಗಿರಜಿ, ಪ್ರತಾಪ ಗಿರಜಿ ಎನ್ನುವವರು ಕವಿ ರವೀಂಧ್ರರು, ಸರೋಜಿನಿನಾಯ್ದು, ಸರ್‌ ಕಿಶನ್‌ಪ್ರಸಾದ್‌ ಮೊದಲಾದ ಗಣ್ಯರಿಗೆ ತಮ್ಮ ತೋಟದಲ್ಲಿ ಸಂತೋಷ ಕೂಟವನ್ನೇರ್ಪಡಿಸಿದ್ದರು. ಅಲ್ಲಿ ಕೇಶವಮೂರ್ತಿಯವರ ವೀಣಾ ವಾದನ. ಅದರಿಂದ, ಠಾಕೂರರು ಎಷ್ಟು ಪ್ರಭಾವಿತರಾದರೆಂದರೆ ಅವರಿಗೆ ಇನ್ನೇನೂ ಬೇಕಾಗಲಿಲ್ಲ. ತಮ್ಮ ವಾಸ್ತವ್ಯವನ್ನು ಹೈದರಾಬಾದಿನಲ್ಲಿ ಮುಂದುವರೆಸಲು ನಿರ್ಧರಿಸಿದರು. ಅದುವರೆಗೆ ಶಾಂತಿನಿಕೇತನದಲ್ಲಿ ಪೀಠಾಪುರ ಸಂಗಮೇಶ್ವರಶಾಸ್ತ್ರಿ ಎಂಬುವರು ವೀಣೆಯನಾದವನ್ನು ಹೆಚ್ಚಿಸಲು, ತಂತಿಗಳನ್ನು ಪಿಟೀಲಿನ ಕಮಾನಿನಿಂದ ಉಜ್ಜಿ, ವೀಣೆ ನುಡಿಸುತ್ತಿದ್ದರಂತೆ! ಕೇಶವಮೂರ್ತಿಗಳ ವೀಣಾವಾದನ ವೈಖರಿ, ನಾದ ಮಾಧುರ್ಯ, ವಿಶ್ವಕವಿಯನ್ನು ಪರವಶವಾಗಿಸಿತು. ಮೂರು ತಿಂಗಳು ಹೈದರಾಬಾದಿನಲ್ಲಿ ಉಳಿದು ಹಗಲು ರಾತ್ರಿ ಎನ್ನದೇ ದಿನವಿಡೀ ವೀಣೆ ಕೇಳಿ ತನ್ಮಯರಾಗುತ್ತಿದ್ದರಂತೆ. ಇಷ್ಟಾದರೂ, ಇಂತಹ ಸ್ನೇಹಮಯ ವಾತಾವರಣವಿದ್ದರೂ, ಕೇಶವಮೂರ್ತಿಗಳು ಅವರೊಡನೆ ಹೋಗಲು ನಿರಾಕರಿಸಿದ್ದು ದುರ್ದೈವ. ಇಂತಹ ಸುಯೋಗ ತಾನಾಗಿ ಒದಗಿ ಬಂದರೂ, ನೇಮ, ನಿಷ್ಠೆ, ಹಿರಿಯರ ದಿನ ವಿಶೇಷಗಳು ಇವುಗಳನ್ನು ಆಚರಿಸಲು ಅನುಕೂಲವಾಗುವುದಿಲ್ಲ ಎಂಬ ಕಾರಣದಿಂದ, ವಿದೇಶ ಪ್ರವಾಸ ಮಾಡಲು ಬಂದ ಆಹ್ವಾನಗಳನ್ನು ತಿರಸ್ಕರಿಸಿದರು.

ಕೇಶವಮೂರ್ತಿಯವರದು ವಿಪರೀತ ಕೋಪದ ಪ್ರಕೃತಿ; (ತಮ್ಮ ಹನ್ನೊಂದು ಪುತ್ರರಿಗೆ ಪಾಠ ಹೇಳುವಾಗ ಶಿಕ್ಷಿಸಲು ಇಪ್ಪತ್ತೆರಡು ಬೆತ್ತದ ಕೋಲುಗಳನ್ನಿಟ್ಟಿದ್ದರು) ಏಕಾಂತದಲ್ಲಿರಲು ಬಯಸುತ್ತಿದ್ದರು. ಹಠವಾದಿ, ತಾನವೈಖರಿಯಲ್ಲಿ ಅಪ್ರತಿಮ. ವೀಣೆಯಲ್ಲಿ ಆರೂವರೆ ಅಷ್ಟಕ (octave) ಗಳನ್ನು ನುಡಿಸುತ್ತಿದ್ದರು. ಹಿಂದುಸ್ತಾನಿ ಸಂಗೀತದಲ್ಲೂ ಆಸಕ್ತಿ ಹೊಂದಿದ್ದ ಪ್ರತಿಭಾವಂತ ಕಲಾವಿದರು. ಅಬ್ದುಲ್‌ ಕರೀಂಖಾನರ ಬಳಿ ಕೆಲಕಾಲ ಮಾರ್ಗದಶ್ನ ಪಡೆದರು. ನಮ್ಮನ್ನಾಳಿದ ನಾಲ್ವಡಿ ಕೃಷ್ಣರಾಜ ಒಡೆಯರು ಇವರ ವೀಣಾ ವಾದನವನ್ನು ಕೇಳಿ ಆನಂಧಿಸಿ, ಇವರ ವಿದ್ವತ್‌ ಹಿರಿಮೆಯನ್ನು ಪ್ರಶಂಸಿಸಿ ೧೯೩೫ರ ಜನವರಿಯಲ್ಲಿ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿದರು. ಆಗ ಛಲವಾದಿ ಕೇಶವಯ್ಯನ ಕನಸು ನನಸಾಯಿತು. ದೊಡ್ಡಪ್ಪನೆದುರು ಎಸೆದಿದ್ದ ಸವಾಲು ನಿಜವಾಯಿತು. ಅರಮನೆಯ ಮೆಟ್ಟಲನ್ನಷ್ಟೇ ಏಕೆ, ಕೀರ್ತಿ ಶಿಖರವನ್ನೇ ಏರಿದರು. ರಾಜರು ಪ್ರತಿ ತಿಂಗಳು ಅರಮನೆಯಲ್ಲಿ ಕಚೇರಿ, ಹಬ್ಬ, ಮುಖ್ಯ ಸಮಾರಂಭಗಳಲ್ಲಿ ನುಡಿಸಲು ಮೂರ್ತಿಗಳನ್ನೇ ಬರಮಾಡಿಕೊಳ್ಳುತ್ತಿದ್ದರು.

೧೯೪೦ರಲ್ಲಿ ಪಾಶ್ಚಾತ್ಯ ಸಂಗೀತ ಕಲಿಯುವ ಪ್ರಸ್ತಾಪ ಬಂದಾಗ, ಮೂರ್ತಿಗಳು ಸ್ವದೇಶದಲ್ಲಿದ್ದುಕೊಂಡೇ ಕಲಿತು, ಲಂಡನ್ನಿನ ಟ್ರಿನಿಟಿ ಕಾಲೇಜ್‌ ಅಫ್‌ ಮ್ಯೂಸಿಕ್‌ನಲ್ಲಿ ಅಧ್ಯಯನ ಮಾಡಿ ಉನ್ನತ ದರ್ಜೆಯಲ್ಲಿ (distinction) ತೇರ್ಗಡೆ ಹೊಂದಿದರು.

ಒಂದುಬಾರಿ ಭಾರತ ಕೋಗಿಲೆ ಸರೋಜಿನಿ ನಾಯ್ಡು ಅವರು ಮೂರ್ತಿಗಳನ್ನು ಮಹಾತ್ಮ ಗಾಂಧಿಯವರ ಮುಂದೆ ವೀಣೆ ನುಡಿಸಲು ಕೇಳಿದಾಗ, ಸಂತೋಷದಿಂದೊಪ್ಪಿಕೊಂಡರು. ಗಾಂಧೀಜಿ ಮಾರನೇ ದಿನ ರೌಂಡ್‌ ಟೇಬಲ್‌ ಕಾನ್‌ಫೆರನ್ಸ್‌ಗೆ ಲಂಡನ್ನಿಗೆ ತೆರಳ ಬೇಕಿತ್ತು. ಮುಂಬೈನ ಬಿರ್ಲಾ ಭವನದಲ್ಲಿ ಆಹ್ವಾನಿತ ಶ್ರೋತೃಗಳ ಮುಂದೆ ತುರ್ತಾಗಿ ಕಚೇರಿ ಏರ್ಪಾಡಾಯಿತು. ವೀಣಾನಾದ ತರಂಗಗಳು ಸಭಾಂಗಣವೆಲ್ಲ ಆವರಿಸಿದಾಗ, ಗಾಂಧೀಜಿಯವರ ಸಲಹೆಯಂತೆ ಮೀರಾಬೆನ್‌ ಅಲ್ಲಿಯ ದೀಪಗಳನ್ನೆಲ್ಲಾ ಆರಿಸಿದರು. ತನ್ಮಯರಾಗಿ ಬೇರೆ ಯಾವ ಚಿತ್ತ ಚಂಚಲತೆಯಿಲ್ಲದೇ ಸುನಾದಮಯ ಜಗತ್ತಿನಲ್ಲೇ ವಿಹರಿಸಲು, ಈ ಉಪಾಯ. ಇಂತಹ ಪ್ರೋತ್ಸಾಹದಿಂದ, ಸ್ಪೂರ್ತಿ ಬಂದು ಮುರ್ತಿಯವರು ಎಂದಿಗಿಂತ ಮಿಗಿಲಾಗಿ ನುಡಿಸಿದರಾಗ, ಗಾಂಧೀಜಿ ಹೇಳಿದರು “ನಾನು ಬಡವ, ಬೆಳ್ಳಿ ಬಂಗಾರ ಕೊಡಲಾರೆ. ನನ್ನ ಸ್ವಂತ ಕೈಗಳಿಂದ ನೈಯ್ದಿರುವ ಈ ಖಾದಿ ಜಮಖಾನೆ(carpet) ಯನ್ನು, ನನ್ನ ಮೆಚ್ಚಿಕೆಯ ಕುರುಹಾಗಿ ಕೊಟ್ಟರೆ ತೆಗೆದುಕೊಳ್ಳುವಿರಾ?” ಎಂದಾಗ ಮೂರ್ತಿಗಳು ಸಂತೋಷದಿಂದ ಸ್ವೀಕರಿಸಿದರು.

ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ ಕೃಪಾ ಪೋಷಿತರಾಗಿದ್ದ ಅವರ ವಂಶಜರಾದ ವೀಣೆ ರಂಗಪ್ಪನವರ ಕುರಿತ ಒಂದು ಸ್ವಾರಸ್ಯಕರ ಪ್ರಕರಣ.

ರಂಗಪ್ಪನವರಿಗೆ ಭಾರಿ ಶಿಷ್ಯವೃಂದವಿದ್ದರೂ, ಈ ಗುಂಪಿನಲ್ಲಿ ವಿದ್ಯಾರ್ಥಿನಿಯರು ವರ್ಜ್ಯವಾಗಿದ್ದರು. ಕಾಲವಿದ್ದುದೇ ಆಗ ಹಾಗೆ. ಮಹಾರಾಜರು ತಮ್ಮ ರಾಣಿಯವರಿಗೆ ವೀಣೆ ಪಾಠ ಹೇಳುವಂತೆ ಸೂಚಿಸಿದರು. ರಾಜಾಜ್ಞೆ ಮೀರುವಂತಿಲ್ಲ. ಹೆಂಗಸರಿಗೆ ಪಾಠ ಹೇಳಲು ಇಷ್ಟವಿಲ್ಲ. ಏನು ಮಾಡುವುದು? ಬಿಕ್ಕಟ್ಟಿನಲ್ಲಿ ಸಿಲುಕಿ ರಂಗಪ್ಪನವರು ಗಟ್ಟಿಮನಸ್ಸು ಮಾಡಿದರು. ದೊರೆಗಳ ಮಾತಿನಂತೆ ಪ್ರತಿನಿತ್ಯ ಹೊತ್ತಿಗೆ ಸರಿಯಾಗಿ ಬಂದು, ರಾಣೀವಾಸಕ್ಕೆ ಪಾಠ ಹೇಳಿ ತೆರಳುತ್ತಿದ್ದರು. ಇದು ಎಷ್ಟೋ ತಿಂಗಳು ನಡೆಯಿತು. ಒಂದು ಬಾರಿ ರಾಜರಿಗೆ ಕುತೂಹಲವುಂಟಾಯಿತು. ಈ ಸ್ತ್ರೀ ದ್ವೇಷಿ ಹೇಗೆ ಪಾಠ ಮಾಡುತ್ತಾರೆ ಎಂದು. ತೆರೆಮನೆಯಲ್ಲಿ ಅಡಗಿ, ಕಾಯ್ದುಕೊಂಡಿದ್ದರು, ಪ್ರಭುಗಳು. ಎಂದಿನಂತೆ ಬಂದರು ರಂಗಪ್ಪನವರು. ವೀಣೆ ತೆಗೆದುಕೊಂಡರು. ಗೋಡೆ ಕಡೆ ಮುಖ ಮಾಡಿ ಕೂತು, ವೀಣೆ ಶ್ರುತಿ ಮಾಡಿ ಪಾಠ ಆರಂಭಿಸಿದರು . ಗಂಟೆಯ ಮೇಲೆ ಗಂಟೆಯಾಯಿತು. ಪಾಠ ಮುಂದುವರೆಯಿತು. ರಂಗಪ್ಪ ಕೂತ ಜಾಗ ಬಿಟ್ಟೇಳಲಿಲ್ಲ, ಶಿಷ್ಯೆಯ ಮುಖದರ್ಶನವನ್ನೂ ಮಾಡಲಿಲ್ಲ. ಕೇವಲ ಕರ್ಣೇಂದ್ರಿಯದ ಮೂಲಕ ಆಲಿಸಿ, ನುಡಿಸಿ, ಆಕೆಗೆ ತಿಳಿಯ ಪಡಿಸಿ, ತಿದ್ದುತ್ತಿದ್ದರು. ರಂಗಪ್ಪನವರ ಸ್ವಾಮಿ ನಿಷ್ಟೆ, ರಾಣೀವಾಸದಲ್ಲಿ ಮರ್ಯಾದಾಭಾವವನ್ನು ಮೆಚ್ಚಿದರಾದರೂ, ದೊರೆಗಳಿಗೆ ಅವರ ಪಾಡನ್ನು ನೋಡಿ ಅಯ್ಯೋಪಾಪ ಎನಿಸಿತು. ಸಂದರ್ಭ ಬಂದಾಗ, ನಿಮಗೇನು ಬೇಕು ಕೇಳಿ ಎಂದಾಗ ರಂಗಪ್ಪನವರು ನಿಸ್ಸಂಕೋಚನಾಗಿ ‘ರಾಣಿವಾಸ ಪಾಠದಿಂದ ಪಾರು ಮಾಡಿ’ ಎಂದು ನಿವೇದಿಸಿದರು. ಆಗಲೇ ಪ್ರಭುಗಳು ವೀಣೆ ರಂಗಪ್ಪನವರಿಗೆ ರುದ್ರಪಟ್ಣವನ್ನು ಜಹಗೀರಿಯಾಗಿ ಬಳುವಳಿ ಕೊಟ್ಟರು. ರುದ್ರಪಟ್ಣ ಒಳ್ಳೆಯ ಸಂಗೀತಕ್ಕೆ ಅನ್ವರ್ಥನಾಮವಾಗಿದೆ.

೧೯೪೦ ರಲ್ಲಿ ಹೈದರಾಬಾದಿನ ನವಾಬರಾಗಿದ್ದ ಅಜಂಜಾ ಬಹಾದೂರರು ಅದಿಯಾ ಬೇಗಮರೊಂದಿಗೆ ಸಿಂಹಾಸನಾರೂಢರಾಗಿ ಮೂರ್ತಿಗಳ ವೀಣಾವಾದನ ಕೇಳಿ ತಲೆತೂಗುತ್ತಿದ್ದ ಸಂದರ್ಭ. ಮಾಯಾಮಾಳವಗೌಳರಾಗದ ಭವ್ಯ ನಿರೂಪಣೆಯಾಗುತ್ತಿತ್ತು. ನವಾಬರು ಎದ್ದು ನಿಂತು “ನಾನು ನಿಮ್ಮೊಡನೆ ಕೂಡಬಹುದೇ?” ಎಂದು ಪೀಠದಿಂದಿಳಿದು, ಮೂರ್ತಿಗಳ ಬಳಿ ಬಂದು ಕುಳಿತು, ಆಲೈಸತೊಡಗಿದರು. ಇವರ ಸಂಗೀತದಿಂದ ಅವರು ಹಾಗೆ ಭಾವುಕರಾದರೆ, ಮೂರ್ತಿಗಳಿಗೆ ಇಂತಹ ಮೆಚ್ಚಿಗೆಯ ಗುರುತಿನಿಂದ ಎಷ್ಟು ರೋಮಾಂಚನವಾಗಿರಬೇಕು! ಕಚೇರಿಯ ನಂತರ ನವಾಬರು ತಮಗೆ ಇಂಗ್ಲೆಂಡಿನ ಐದನೇ ದೊರೆ ಜಾರ್ಜ್‌ ಅವರು ಕೊಟ್ಟಿದ್ದ ಸ್ಟಾರ್‌ ಮೆಡಲ್‌ (star medal) ಅನ್ನು ಮೂರ್ತಿಗಳಿಗೆ ಕೊಟ್ಟು ಗೌರವಿಸಿದರು. ಹನ್ನೊಂದು ತೊಲ ಬಂಗಾರದಿಂದ ಮಾಡಿದ ಈ ಅಮೂಲ್ಯ ವಸ್ತು ಇವರ ವಂಶದಲ್ಲಿ ಇನ್ನೂ ಇದೆ. ೧೯೭೬ರ ಸೆಪ್ಟೆಂಬರ್ ನಲ್ಲಿ ಪತ್ನಿ ವೆಂಕಟಲಕ್ಷಮ್ಮನವರು ದೈವಾಧೀನರಾದರು. ವಿಧುರರಾದರೂ ಮೂರ್ತಿಗಳು ನೇಮನಿಷ್ಠೆಗಳನ್ನು ತಡೆಯಿಲ್ಲದೆ ನಡೆಸಿಕೊಂಡು ಬಂದರು.

ಪ್ರಶಸ್ತಿ ಪುರಸ್ಕಾರಗಳು: ೧೯೫೭ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್‌ ಹನುಮಂತಯ್ಯನವರು ಮೂರ್ತಿಗಳನ್ನು ಯುನೆಸ್ಕೊ (UNESCO) ಗೆ ಕಳಿಸಲು ಮುಂದೆ ಬಂದಾಗಲೂ ಇವರ ಮಡಿವಂತಿಕೆ ಅಡ್ಡ ಬಂತು.

ಜಯಚಾಮರಾಜೇಂದ್ರ ಒಡೆಯರು ಮೂರ್ತಿಗಳ ಬಹುಮುಖ ಪ್ರತಿಭೆಗೆ ಕುರ ಉಹಾಗಿ ವೈಣಿಕ ಪ್ರವೀಣ ಬಿರುದನ್ನು ೧೯೬೭ರ ದಸರಾ ಮಹೋತ್ಸವದ ವಿಜಯ ದಶಮಿಯಂದು ಕೊಟ್ಟು, ಗಂಡಭೇರುಂಡ ಪದಕದಿಂದ ಅಲಂಕರಿಸಿದರು.

೧೯೭೧ರಲ್ಲಿ ಗಾನಕಲಾ ಪರಿಷತ್ತಿನ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರಾಗಿದ್ದ ಮೂರ್ತಿಗಳಿಗೆ ಗಾನಕಲಾಭೂಷಣ ಪ್ರಶಸ್ತಿ, ಸ್ವರ್ಣ ಪದಕ ಸಂದವು.

೧೯೭೮ರಲ್ಲಿ ವಿಶಾಖ ಸಂಗೀತ ಅಕಾಡೆಮಿಯಿಂದ ಸಂಗೀತ ಕಲಾಸಾಗರ ಬಿರುದಾಂಕಿತರಾದರು.

ಗುರುಶಿಷ್ಯ ಬಾಂಧವ್ಯ: ಕೇಶವಮೂರ್ತಿ-ಸುಬ್ಬಣ್ಣನವರದು ಕೇವಲ ಗುರು-ಶಿಷ್ಯ ಬಾಂಧವ್ಯ ಮಾತ್ರವಾಗಿರದೇ, ತಂದೆ-ಮಗನಿಗಿಂತಲೂ ಅತಿಶಯವಾದ ಪ್ರೇಮ ವಿಶ್ವಾಸವಿತ್ತು. ಅನೇಕ ಶಿಷ್ಯರಿದ್ದರೂ ಕೇಶವಯ್ಯ ಪಟ್ಟ ಶಿಷ್ಯ. ತಮ್ಮ ಕೊನೆ ಉಸಿರು ಇರುವತನಕ ಆಷಾಢ ಬಹುಳ ಏಕಾದಶಿಯಂದು ಗುರುವಿನ ಪುಣ್ಯತಿಥಿಯ ಕಾರ್ಯಕ್ರಮವನ್ನು ನಿಯಮಬದ್ಧವಾಗಿ ನಡೆಸಿಕೊಂಡು ಬರುತ್ತಿದ್ದರು.

ಕೇಶವಮೂರ್ತಿಗಳಿಗೆ ತಮ್ಮ ಗುರುಗಳಂತೆಯೇ ಶಿಷ್ಯರಲ್ಲಿ ಎಲ್ಲಿಲ್ಲದ ಪ್ರೇಮ. ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ಶಿಷ್ಯರನ್ನು ಪ್ರೀತಿಸುತ್ತಿದ್ದರು. ಸಂಗೀತ ಶಾಸ್ತ್ರಜ್ಞಾನ ಪ್ರಚೋದಿನೀ ಗ್ರಂಥಕರ್ತರಾದ, ವೈಣಿಕ ವಿದ್ವಾನ್‌ ಎಚ್‌.ಎಸ್‌. ಕೃಷ್ಣಮೂರ್ತಿ ಇವರ ನೆಚ್ಚಿನ ಶಿಷ್ಯರು. ಅವರ ಮಾತುಗಳಲ್ಲಿ, “ಗುರು ಕೇಶವಮೂರ್ತಿಗಳ ನಾದೋಪಾಸನ ಕ್ರಮವನ್ನು ಕಂಡು ಬೆರಗಾಗಿದ್ದೇನೆ.ವೀಣೆ ನುಡಿಸುವ ಕ್ರಮ, ಸಾಧನಾಕ್ರಮ ಬಂದಂಶವಾದರೆ, ವೀಣೆ ಯಾವ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು, ಹೇಗೆ ಕಾಪಾಡಿಕೊಳ್ಳಬೇಕು, ಅದರಲ್ಲಿ ನ್‌ಆದ ಹೇಗಿರಬೇಕು, ನಾಲ್ಕು ತಂತಿಯಲ್ಲೂ ಎಲ್ಲಿ ಕೈ ಲಿಟ್ಟರಲ್ಲಿ ಶುದ್ಧವಾದ ಸುಸ್ವರವು ಹೇಗೆ ಉಂಟಾಗುತ್ತದೆ ಮತ್ತು ವೀಣೆಯ ಮೇಳ ಹೇಗಿರಬೇಕು ಎಂಬಿತ್ಯಾದಿ ಮಹತ್ತರ ಜ್ಞಾನ ಸಂಪಾದನೆ ಇನ್ನೊಂದಂಶ. ಇವು ಕೇಶವಮೂರ್ತಿಗಳಿಗೆ ಆಜನ್ಮಸಿದ್ಧವಾಗಿ ಬಂದು ಕರತಲಾಮಲಕವಾಗಿತ್ತು.” ‘ಮೇಳಮತ್ತು ‘ರೇಕ’ಗಳನ್ನು ಶುದ್ಧಪಡಿಸುವುದರಲ್ಲಿ ಅವರಿಗೆ ತೃಪ್ತಿಯೇ ಇಲ್ಲ. ಅವರ ಕೈಯಲ್ಲಿ ಇಪ್ಪತ್ತೆರಡು ಶ್ರುತಿಗಳ ಸ್ವರೂಪವನ್ನು ಶುದ್ದವಾಗಿ ಕಾಣಬಹುದಿತ್ತು.

ಕನಕ ರಜತ ಸರಸ್ವತೀ ವೀಣೆ: ಕೊಡುಗೈ ಸುಬ್ಬಣ್ಣ ಎಂದೇ ಖ್ಯಾತರಾಗಿದ್ದ ಗುರುಗಳು ತಾವು ಕಾಲವಾಗುವ ದಿನ ಸಹ ಮೊದಲೇ ತಿಳಿದಿದ್ದು, ಅಂದು ಅನ್ನ ಸಂತರ್ಪಣೆ ಮಾಡಿಸಿ, ಕನಕ ರಜತ ಸರಸ್ವತೀ ವೀಣೆಯನ್ನು ಪಟ್ಟಶಿಷ್ಯ ಕೇಶವಮೂರ್ತಿಗೆ, ಆರ್ಶೀವಾದ ಮಾಡಿ ದಾನ ಮಾಡಿದರು. ಮನೆಯಲ್ಲಿ ಅವರಿಂದ ಕಚೇರಿ ಮಾಡಿಸಿ, ತುಂಬಿದ ಸಭೆಯಲ್ಲಿ ಅವರಿಗೆ ವೀಣೆ ಕೊಟ್ಟು ಹೇಳಿದ ಮಾತುಗಳು ಮನನೀಯ: “ಈ ವೀಣೆಯಲ್ಲಿ ಲಕ್ಷ್ಮೀ ಸರಸ್ವತಿಯವರು ಆವಾಹನೆಯಾಗಿದ್ದಾರೆ. ಇದರೊಂದಿಗೆ ನಾನೂ ಅವಾಹನೆಯಾಗಿ ಬರುತ್ತಿರುವೆನು. ನಿಮ ವಂಶ ಪಾರಂಪರ್ಯವಾಗಿ, ನಿಮ್ಮ ಕೀರ್ತಿ ನೂರ್ಮಡಿ ವೃದ್ಧಿಸಲಿ”. ಹೀಗೆ ಗುರುಗಳ ಅನುಗ್ರಹದಿಂದ ಬಂದ ಈ ಕನಕ ರಜತ ಸರಸ್ವತೀ ವೀಣೆ ಇವರ ವಂಶದಲ್ಲಿದೆ.

೧೯೪೦ರಲ್ಲಿ ಬೆಂಗಳೂರಿನ ಶಂಕರಪುರದ ಶೃಂಗೇರಿ ಶಾರದಾಂಬ ಪ್ರತಿಷ್ಠಾಪನ ಮಹೋತ್ಸವದಂದು, ಮೂರ್ತಿಯವರ ವೀಣಾವಾದನ; ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳ ಸಮ್ಮುಖದಲ್ಲಿ ಕಚೇರಿ ಆಲಿಸಿದ ಶ್ರೀಗಳವರು “ಶ್ರೀ ಶಾರದಾಂಬೆಗೆ ಇಂತಹ ದಿವ್ಯ ವೀಣಾವಾದನದ ನಾದ ಪೂಜೆಯಾದ ಮೇಲೆ ಮತ್ತಿನ್ನಾವ ಪೂಜೆಯ ಅವಶ್ಯಕತೆ ಇದೆ?” ಎಂದು ಆನಂದ ಲಹರಿಯಿಂದ ಉದ್ಗರಿಸಿ, “ಇಂದು ಪ್ರಾರಂಭವಾದ ಈ ಸಂಗೀತ ಸೇವೆ, ಇನ್ನು ಮುಂದೆಯೂ ನಿರಂತರವಾಗಿ ಇವರ ವಂಶದವರಿಂದ ನಡೆಯಲಿ” ಎಂದು ಘೋಷಿಸಿದ ಬಳಿಕ, ಪ್ರತಿವರ್ಷವೂ ಶ್ರೀರಾಮನವಮಿಯ ಮರುದಿನ ದಶಮಿಯಂದು, ಕೇಶವ ಮೂರ್ತಿಗಳ ಮನೆಯವರಲ್ಲಿ ಯಾರಾದರೊಬ್ಬರು ವೈಣಿಕರು, ಸಂಗೀತ ಸೇವೆ ಮಾಡುವ ಪದ್ಧತಿ ನಡೆದು ಬಂದಿದೆ.

ಮೂರ್ತಿಗಳು ಅನೇಕ ಶಿಷ್ಯರಿಗೆ ವಿದ್ಯಾದಾನ ಮಾಡಿದ್ದಾರೆ. ಅವರ ಹನ್ನೊಂದು ಗಂಡು ಮಕ್ಕಳಲ್ಲಿ ಎಲ್ಲರಿಗೂ ಸಂಗೀತದಲ್ಲಿ ಅಭಿರುಚಿ. ಈಗ ಒಂಬತ್ತು ಪುತ್ರರು ಜೀವಂತವಾಗಿದ್ದು, ಸಂಗೀತದಲ್ಲಿಯೇ, ಜೀವನ ಸಾಗಿಸುತ್ತಿರುವವರು ನಾಲ್ಕು ಮಂದಿ. ಆರ್.ಕೆ.ಶ್ರೀನಿವಾಸಮೂರ್ತಿಯವರು ದೇಶದ ಪ್ರಮುಖ ವೀಣಾ ವಾದಕರಲ್ಲೊಬ್ಬರು. ಎರಡನೆಯ ಪುತ್ರ ಆರ್.ಕೆ. ಸೂರ್ಯನಾರಾಯಣರು ತಮ್ಮ ಅಪ್ರತಿಮಸಾಧನೆ, ಲಕ್ಷ್ಯ ಲಕ್ಷಣಗಳೆರಡರಲ್ಲೂ ಪ್ರೌಢಿಮೆಯಿಂದ ವಾಗ್ಗೇಯಕಾರರೂ ಆಗಿ, ದೇಶ ವಿದೇಶಗಳಲ್ಲಿ ಗುರುಗಳ ಖ್ಯಾತಿ ಬೆಳಗಿಸಿ, ವೀಣಾನಾದ ಮೊಳಗಿಸಿ, ಸರಸ್ವತೀ ಸೇವೆ ಸಲ್ಲಿಸುತ್ತಿದ್ದಾರೆ.

ಮೂರ್ತಿಗಳು ಎಂದೂ ಆಲಸ್ಯ, ಅನಾರೋಗ್ಯದಿಂದ ಮಲಗಿದವರೇ ಅಲ್ಲ. ಸಭ್ಯತೆಯ ಸಾಕಾರ ರೂಪ. ಕಿರಿಯರನ್ನೂ ಕೂಡ ಅತಿ ಮರ್ಯಾದೆಯಿಂದ ಮಾತನಾಡಿಸಿ “ಆರೋಗ್ಯವೇ?” ಎಂದು ವಿಚಾರಿಸುತ್ತಿದ್ದರೆಂಬುದಕ್ಕೆ ಈ ಲೇಖಕಿಯೇ ನಿದರ್ಶನ.

ಇಂತಹ ವೈಣಿಕ ದಿಗ್ಗಜ ೧೯೮೨ರ೪ ಡಿಸೆಂಬರ್ ಹದಿನೇಳರಂದು ಬೆಂಗಳೂರಿನಲ್ಲಿ ಅಪಘಾತದಲ್ಲಿ ಅಸುನೀಗಿದ್ದು ಸಂಗೀತ ಲೋಕದ, ವೀಣಾ ಪರಂಪರೆಯ ಪ್ರಮುಖ ಕೊಂಡಿಯೊ ಂದು ಕಳಚಿ ಬಿದ್ದಂತಾಯಿತು. ಇವರ “ಬಾನಿ”ಯನ್ನು ಶಿಷ್ಯರು ಹಾಗೂ ಪ್ರಶಿಷ್ಯರು ಮತ್ತು ಸುಪುತ್ರರು ಜೀವಂತವಾಗಿರಿಸಿ ಜನಪ್ರಿಯಗೊಳಿಸುತ್ತಿದ್ದಾರೆ. ವಿಶೇಷವಾಗಿ ಪ್ರತಿವರ್ಷ ಡಿಸೆಂಬರ್ ಹದಿನೇಳನೆಯ ತಾರೀಖು, ಕೇಶವ ಮೂರ್ತಿಗಳ ಪುಣ್ಯತಿಥಿಯ ಅಂಗವಾಗಿ, ಹಿರಿಯ ವೈಣಿಕ, ಗಾಯಕ, ವೀಣಾ ತಯಾರಕರಿಗೆ, ಸಮಾಜ ಸೇವಾ ಧುರೀಣರಿಗೆ ಸನ್ಮಾನ, ಮತ್ತು ಪರೀಕ್ಷೆಗಳಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸ್ಪರ್ಧಾವಿಜೇತರಿಗೆ ಬಹುಮಾನ-ಇತ್ಯಾದಿ ಕಾರ್ಯಕ್ರಮವನ್ನು ಗುರು-ಕೇಶವ-ಸುಬ್ಬಣ್ಣ ಟ್ರಸ್ಟ್‌ ಪದಾಧಿಕಾರಿಗಳು, ಶ್ರದ್ಧೆಯ ಇಂದ ಆಚರಿಸುತ್ತಾರೆ. ಶಿಷ್ಯರಿಂದ ಪಂಚಾದಶ, ಅಷ್ಟಾದಶ, ದ್ವಾವಿಂಶತಿ ವೀಣಾಗೋಷ್ಠಿ ಸಹ ಶ್ರದ್ಧಾಂಜಲಿಯ ಒಂದು ಮುಖ್ಯ ಅಂಗವಾಗಿರುತ್ತದೆ.