ವಿಶ್ವವಿಖ್ಯಾತ ಮೈಸೂರು ವೀಣಾ ಸಂಪ್ರದಾಯದಲ್ಲಿ ಅಪೂರ್ವ ಸಿದ್ಧಿಪಡೆದ ಕಲಾವಿದರಲ್ಲಿ ಆರ್.ಎಸ್‌ಕೇಶವಮೂರ್ತಿಯವರು ಸುಪ್ರಸಿದ್ಧರು. ಪರಂಪರಾನುಗತವಾಗಿ ಇವರ ವಂಶಿಕರಲ್ಲಿ ತಂದೆ, ತಾತ ಮತ್ತಿತರ ಬಂಧುಗಳಲ್ಲೂ ಈ ದೈವಿಕ ವಾದ್ಯವಾದನದಲ್ಲಿ ಪ್ರವೀಣರು.

ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಸಂಗೀತ ಶಿಕ್ಷಣವನ್ನು ಚಿಕ್ಕಪ್ಪ ವೆಂಕಟರಮಣಯ್ಯನವರಲ್ಲಿ ಆರಂಭಿಸಿ ಮೂರ್ನಾಲ್ಕು ವರ್ಷಗಳ ನಂತರ ಮೈಸೂರಿಗೆ ಬಂದು ಭಕ್ತಿ ಸುಬ್ಬಣ್ಣನವರಲ್ಲಿ ಶಿಷ್ಯ ವೃತ್ತಿ ನಡೆಸಿದರು. ಸುಬ್ಬಣ್ಣನವರು ಸುಮಾರು ಆರು ವರ್ಷಗಳು ತರಬೇತಿ ನೀಡಿದ ನಂತರ ಆಪ್ತೇಷ್ಟರನ್ನೆಲ್ಲಾ ಆಹ್ವಾನಿಸಿ ಅವರ ಸಮ್ಮುಖದಲ್ಲಿ ಶಿಷ್ಯನ ವಿನಿಕೆಯನ್ನು ನಡೆಸಿ ಹರಸಿದರು. ಮರುವರ್ಷವೇ ಕೇಶವಮೂರ್ತಿ ಉತ್ತರ ಭಾರತ ಪ್ರವಾಸ ಕೈಗೊಂಡು ಅಲ್ಲಿನ ಕಲಾವಿದರ ಮೇಲೆ ಮೈಸೂರಿನ ಸಂಸ್ಕೃತಿಯ ಸುಗಂಧ ಪೂರ್ಣ ಪ್ರಭಾವವನ್ನು ಹರಡಿದರು. ಮಹಾತ್ಮಾಗಾಂಧಿ, ರವೀಂದ್ರನಾಥ ಠಾಕೂರ್ ಮುಂತಾದ ಹಿರಿಯರು ಇವರ ವೀಣಾ ವಾದನವನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈಸೂರು ಅರಸರು ೧೯೩೧ ರಲ್ಲಿ ಶ್ರೀಯುತರನ್ನು ಆಸ್ಥಾನ ವಿದ್ವಾಂಸರಾಗಿ ನೇಮಕ ಮಾಡಿದರು. ಇವರ ಸಾಧನೆಯ ಫಲವಾಗಿ ಅಪೂರ್ವವಾದ ನಾದಸೌಖ್ಯ, ನಾಲ್ಕಾರು ವಾದ್ಯಗಳು ಒಟ್ಟಿಗೇ ಮಿಡಿದಾಗಿನಂತಹ ತುಂಬುತನವನ್ನು ಇವರ ವಾದನದಲ್ಲಿ ಕೇಳಬಹುದಾಗಿತ್ತು. ‘ವೈಣಿಕ ಪ್ರವೀಣ’ ‘ಗಾನಕಲಾ ಭೂಷಣ’, ‘ಸಂಗೀತ ಕಲಾ ಸಾಗರ’-ಇತ್ಯಾದಿ ಬಿರುದುಗಳಿಂದ ಸಮಲಂಕೃತರಾಗಿದ್ದ ಶ್ರೀಯುತರಿಗೆ ರಾಜ್ಯ ಸಂಗೀತ-ನಾಟಕ ಅಕಾಡೆಮಿಯ ಗೌರವವೂ ಸಂದಿತು. ಗುರುಗಳು ಆಶೀರ್ವದಿಸಿ ನೀಡಿದ ಕನಕ-ರಜತ ಸರಸ್ವತೀ ವೀಣೆ ಇವರ ಮನೆತನದಲ್ಲಿ ಇಂದಿಗೂ ಉಳಿದಿದೆ.

ಉತ್ತಮ ಶಿಕ್ಷಕರೂ ಆಗಿದ್ದ ಇವರ ವಿನಿಕೆಯ ಪ್ರಭಾವವನ್ನೂ, ವಿದ್ವತ್ತಿನ ಘನತೆಯನ್ನೂ ಪುತ್ರರಾದ ಆರ್. ಕೆ. ಶ್ರೀನಿವಾಸಮೂರ್ತಿ, ಆರ್.ಕೆ. ಸೂರ್ಯನಾರಾಯಣ ಮತ್ತಿತ್ತರ ಸೋದರರ ವಾದನದಲ್ಲೂ ಕಾಣಬಹುದಾಗಿದೆ. ಹಲವಾರು ಉತ್ತಮ ಶಿಷ್ಯರನ್ನು ಸಂಗೀತ ಕ್ಷೇತ್ರಕ್ಕೆ ನೀಡಿ ಕೇಶವಮೂರ್ತಿಯವರು ೧೭-೧೨-೧೯೮೨ರಂದು ಶಾರದಾಂಬೆಯ ಚರಣಗಳನ್ನು ಸೇರಿದರು.