೨-೩-೧೯೫೦ ರಂದು ಸಂಸ್ಕೃತ ವಿದ್ವಾಂಸರೂ, ಸಂಗೀತ ಪ್ರಿಯರೂ ಆಗಿದ್ದ ಕೃಷ್ಣಮಾಚಾರ್ಯ ಸಂಗೀತ ವಿದುಷಿ ರಾಜಲಕ್ಷ್ಮಿ ದಂಪತಿಗಳ ಪುತ್ರಿಯಾಗಿ ರಮಾ ಜನಿಸಿದರು. ಶ್ರೀ ಎಸ್. ರಾಮಚಂದ್ರ ರಾವ್‌ ಮತ್ತು ಆನೂರು ಎಸ್‌. ರಾಮಕೃಷ್ಣ ಅವರಲ್ಲಿ ಸಂಗೀತಾಭ್ಯಾಸ ಮಾಡಿದರು. ಕೇಂದ್ರ ಸರ್ಕಾರದ ಶಿಷ್ಯ ವೇತನ ಪಡೆದಾಗ ಬಳ್ಳಾರಿ ಶೇಷಗಿರಿ ಆಚಾರ್. ಅವರಲ್ಲಿ ಶಿಕ್ಷಣ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಆಕಾಶವಾಣಿಯ ‘ಎ’ ದರ್ಜೆಯ ಕಲಾವಿದೆಯಾದ ಇವರ ಗಾಯನ ಆಕಾಶವಾಣಿ – ದೂರದರ್ಶನ ಕೇಂದ್ರಗಳಿಂದ ಪ್ರಸಾರವಾಗುತ್ತಿರುತ್ತದೆ. ನಾಡಿನಲ್ಲೂ ನೆರೆ ನಾಡುಗಳಲ್ಲೂ ಹಲವಾರು ಪ್ರಮುಖ ಸಭೆಗಳಲ್ಲಿ ಕಛೇರಿ ಮಾಡಿರುತ್ತಾರೆ. ಗಾನಕಲಾ ಪರಿಷತ್ತಿನ ೧೯೭೪ರ ಸಮ್ಮೇಳನದಲ್ಲಿ ಅವಧಾನ ಪಲ್ಲವಿ ನಿರೂಪಿಸಿದ ಈ ಪ್ರಥಮ ಮಹಿಳೆಯ ಪತಿ ಮೃದಂಗ ವಿದ್ವಾಂಸರಾದ ಟಿ.ಎ.ಎಸ್‌.ಮಣಿ, ಪತಿಯೊಡಗೂಡಿ ‘ತಾಳ ತರಂಗಿಣಿ’ ತಂಡದ ಮುಖ್ಯ ಗಾಯಕಿಯಾಗಿ ಅಮೆರಿಕಾ, ಕೆನಡಾ, ಜಪಾನ್‌, ಹಾಂಗ್‌ಕಾಂಗ್‌, ಸ್ವಿರ್ಜರ್ ಲ್ಯಾಂಢ್‌ ಮುಂತಾದ ದೇಶಗಳ ಪ್ರವಾಸ ಮಾಡಿದ್ದಾರೆ. ಭಾರತೀಯ ರಾಗಗಳನ್ನು ಪಾಶ್ಚಾತ್ಯ ರಾಗಗಳೊಂದಿಗೆ ಚೈನಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಐಲ್ಯಾಂಡ್‌, ಯೂರೋಪ್‌ ದೇಶಗಳ ಸಂಗೀತೋತ್ಸವಗಳಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದಾರೆ. ಅಪರೂಪವಾದ ಕೃತಿಗಳನ್ನೂ, ರಚನಾ ಪ್ರಕಾರಗಳನ್ನೂ, ವಿದ್ವತ್‌ ಗೋಷ್ಠಿಗಳಲ್ಲಿ ಪ್ರಸ್ತುತ ಪಡಿಸಿರುತ್ತಾರೆ. ‘ಜಾಸ್‌ಯಾತ್ರ’ ಎಂಬ ಸಂಗೀತ ಮೇಳವನ್ನು ಖ್ಯಾತಿವೆತ್ತ ಕಲಾವಿದರೊಡನೆ ಪ್ರಸ್ತುತ ಪಡಿಸಿದ್ದಾರೆ.

ಹೀಗೆ ಹಲವಾರು ಮನೋಧರ್ಮ ಮೂಲವಾದ ಪ್ರಯೋಗಾತ್ಮಕ ಕಾರ್ಯಗಳಲ್ಲಿ ಪ್ರವೃತ್ತರಾಗಿರುವ ರಮಾಮಣಿಯವರಿಗೆ ಅನೇಕ ಗೌರವ ಸನ್ಮಾನಗಳು ಲಭಿಸಿವೆ. ‘ಗಾನ ಕಲಾರ್ಶರೀ’, ‘ಗಾಯನ ಲಯ ಸಾಮ್ರಾಟ್‌’, ‘ಮಧುರ ಗಾನ ವಿಶಾರದ’, ‘ಸಂಗೀತ ಕಲಾ ತಪಸ್ವಿ’ ಮುಂತಾದ ಬಿರುದುಗಳೊಡನೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ೨೦೦೫-೦೬ರ ಸಾಲಿನ ಪ್ರಶಸ್ತಿಯೂ ದೊರಕಿದೆ.