೫-೬-೧೯೧೬ರಲ್ಲಿ ವಿದ್ವಾನ್‌ ಕೃಷ್ಣಶಾಸ್ತ್ರಿಗಳ ಸುಪುತ್ರರಾಗಿ ರಾಮನಾಥಪುರದಲ್ಲಿ ಜನಿಸಿದವರು ನಾರಾಯಣಸ್ವಾಮಿ. ತಾತ ವೀಣೆ ನಾರಾಯಣಪ್ಪ ಅಣ್ಣ ತಮ್ಮಂದಿರೆಲ್ಲ ಸಂಗೀತ ವಿದ್ವಾಂಸರೇ. ಇಡೀ ಮನೆತನವೇ ಸಂಗೀತ ಮಯವಾಗಿದ್ದ ಪರಿಸರದಲ್ಲಿ ನಾರಾಯಣಸ್ವಾಮಿಯವರು ಸಹಜವಾಗಿಯೇ ಸಂಗೀತದಲ್ಲಿ ಆಸಕ್ತಿ, ಅಭಿರುಚಿ ತಳೆದರು. ಪ್ರಾರಂಭಿಕ ಶಿಕ್ಷಣ ತಂದೆಯವರಿಂದ ಆಯಿತು. ಮುಂದೆ ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಹಾಗೂ ಹಿರಿಯ ಸೋದರ ವೆಂಕಟರಾಮಾ ಶಾಸ್ತ್ರಿಗಳಲ್ಲಿ ಪ್ರೌಢ ಶಿಕ್ಷಣ ನಡೆಯಿತು.

ಆಕಾಶವಾಣಿಯ ಮೂಲಕ ಇವರ ಗಾಯನ ಪ್ರಸಾರವಾಗುತ್ತಿತ್ತು. ಕರ್ನಾಟಕ ಹಾಗೂ ತಮಿಳುನಾಡಿನ ಹಲವಡೆಗಳಲ್ಲಿ ಕಛೇರಿ ಮಾಡಿದ್ದರು. ಶಾಸ್ತ್ರೀಯತೆ ಪಾಂಡಿತ್ಯ ಇವರ ಗಾಯನದಲ್ಲಿದ್ದ ಮುಖ್ಯಾಂಶಗಳು. ನಿರಾಡಂಬರತೆ, ಸರಳತೆ, ಸೌಜನ್ಯ, ಸಜ್ಜನಿಕೆಗಳು ಮೂರ್ತಿ ಭವಿಸಿದಂತಿದ್ದ ಇವರು ನಿತ್ಯ ತೃಪ್ತರಾಗಿದ್ದರು.

ಹಲವಾರು ಸಭೆಗಳಿಂದಲೂ ಸಂಸ್ಥೆಗಳಿಂದಲೂ, ಗೌರವ ಪಡೆದ ಇವರಿಗೆ ‘ಕಲಾ ಭೂಷಣ’, ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗಳು ಪ್ರಾಪ್ತವಾಗಿತ್ತು.

ನಿತ್ಯಪೂಜೆ – ಪುರಸ್ಕಾರ, ಪಾಠ-ಪ್ರವಚನ, ಸಂಗೀತಾಭ್ಯಾಸ, ಯೋಗದಲ್ಲಿ ಜೀವನ ಸಂಧ್ಯೆಯನ್ನು ಸಾಗಿಸಿ ೨೦೦೫ರಲ್ಲಿ ಶ್ರೀಯುತರು ನಾದದೇವಿಯನ್ನು ಸೇರಿದರು.