ಕರ್ನಾಟಕ ಹಾಸನ ಜಿಲ್ಲೆಗೆ ಸೇರಿದ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣವು ಸಂಗೀತಕ್ಕೆ ಹೆಸರಾದ ಊರು. ಈ ಫಲವತ್ತಾದ ಪ್ರದೇಶದ ಪ್ರತಿಯೊಂದು ಮನೆಯಲ್ಲಿಯೂ ಸಂಗೀತ ವಿದ್ವಾಂಸರೂ ವೇದಶಾಸ್ತ್ರ ಸಂಪನ್ನರು ಇದ್ದರು. ಅಂಥ ಸಂಸಾರಗಳಲ್ಲಿ ಕಲ್ಲಿಕೋಟೆ ಆರ್.ಕೆ. ಕೃಷ್ಣಶಾಸ್ತ್ರಿಗಳ ಮನೆತನವೂ ಒಂದು.

ಕೃಷ್ಣಶಾಸ್ತ್ರಿಗಳ ಪೂರ್ವಿಕರು ಕಲ್ಲಿಕೋಟೆ (ಕ್ಯಾಲಿಕಟ್‌) ಯಿಂದ ವಲಸೆ ಬಂದು ರುದ್ರಪಟ್ಟಣದಲ್ಲಿ ವೇದಾಭ್ಯಾಸ, ಸಂಗೀತ ಮತ್ತು ವ್ಯವಸಾಯದಲ್ಲಿ ತೊಡಗಿದ್ದರು. ಕೃಷ್ಣಶಾಸ್ತ್ರಿಗಳು ಒಳ್ಳೆ ಹುಡುಗಾರರಾಗಿದ್ದರಲ್ಲದೆ ಪಿಟೀಲು ನುಡಿಸುವುದರಲ್ಲಿ ಮತ್ತು ಕಥಾಕಾಲಕ್ಷೇಪದಲ್ಲಿಯೂ ಒಳ್ಳೆಯ ಪರಿಶ್ರಮವಿತ್ತು. ಇವರು ಕನ್ನಡ ಮತ್ತು ಸಂಸ್ಕೃತಿ ಭಾಷೆಗಳಲ್ಲಿ ಉದ್ದಾಮ ಪಂಡಿತರಾಗಿದ್ದರು . ಅಲ್ಲದೆ ಚಿತ್ರ ಬಿಡಿಸುವುದರಲ್ಲೂ ಎತ್ತಿದ ಕೈ. ಇವರ ಪತ್ನಿ ಸಣ್ಣಮ್ಮನವರೂ ಕೂಡ ಪ್ರತಿಷ್ಠಿತ ಸಂಗೀತ ಮನೆತನಕ್ಕೆ ಸೇರಿದವರು. ಪ್ರಖ್ಯಾತ ವೈಣಿಕರಾಗಿದ್ದ ಬೆಟ್ಟದಪುರದ ನಾರಣಪ್ಪನವರ ಮಗಳು.

ಬೆಟ್ಟದಪುರದ ಸಂಕೇತಿ ಪಂಗಡಕ್ಕೆ ಸೇರಿದ ಈ ದಂಪತಿಗಳಿಗೆ ನಾಲ್ಕು ಗಂಡು ಮಕ್ಕಳು ಒಂದು ಹೆಣ್ಣು ಮಗು. ಆರ್.ಕೆ. ನಾರಾಯಣಸ್ವಾಮಿಗಳು ಕೃಷ್ಣಶಾಸ್ತ್ರಿಗಳ ದ್ವಿತೀಯ ಪುತ್ರರಾಗಿ ೬.೬.೧೯೧೪ ರಂದು ಜನಿಸಿದರು. ಕೃಷ್ಣಶಾಸ್ತ್ರಿಗಳು ತಮ್ಮ ನಾಲ್ವರು ಮಕ್ಕಳನ್ನೂ ಎಳೆಯ ವಯಸ್ಸಿನಲ್ಲೇ ಸಂಗೀತ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿಸಿದರು. ಇವರ ಹಿರಿಯ ಪುತ್ರ ಆರ್.ಕೆ. ವೆಂಕಟರಾಮಾಶಾಸ್ತ್ರಿಗಳು ಪ್ರಸಿದ್ಧ ಪಿಟೀಲು ವಿದ್ವಾಂಸರು. ತೃತೀಯ ಮತ್ತು ಚತುರ್ಥ ಪುತ್ರರಾದ ಆರ್.ಕೆ. ರಾಮನಾಥನ್‌ ಮತ್ತು ಆರ್.ಕೆ. ಶ್ರೀಕಂಠನ್‌ರವರು ಹಾಗೂ ಆರ್.ಕೆ. ನಾರಾಯಣಸ್ವಾಮಿಯವರು ಎಲ್ಲರೂ ಸುಪ್ರಸಿದ್ಧ ಗಾಯಕರು.

ಮೂರು ತಲೆಮಾರಿನ ಸಂಗೀತ ವಿದ್ವಾಂಸರ ಮನೆತನಕ್ಕೆ ಸೇರಿದ ನಾರಾಯಣಸ್ವಾಮಿಗಳ ಐದನೇ ವಯಸ್ಸಿಗೆ ತಂದೆಯವರಿಂದ ಸಂಗೀತಾಭ್ಯಾಸವನ್ನು ಪ್ರಾರಂಭ ಮಾಡಿದರು. ಬಹಳ ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ೧೯೨೪ರಲ್ಲಿ ಸಂಸಾರ ಸಮೇತರಾಗಿ ರುದ್ರಪಟ್ಟಣದಿಂದ ಮೈಸೂರಿಗೆ ಬಂದು ನೆಲೆಸಿದರು. ೧೯೩೬ರಲ್ಲಿ ಹಾಸನದ ಸಾವಿತ್ರಮ್ಮನವರನ್ನು ಲಗ್ನವಾದರು. ಅಂದಿನ ಇಂಟರ್ ಮೀಡಿಯಟ್‌ವರೆಗೂ ಓದಿದ ನಾರಾಯಣ ಸ್ವಾಮಿಯವರು ಸಂಗೀತದಲ್ಲಿ ಇನ್ನೂ ಹೆಚ್ಚಿನ ತರಬೇತಿಯನ್ನು ಪಡೆಯಬೇಕೆಂದು ೧೯೩೮ರಲ್ಲಿ ಮದರಾಸಿಗೆ ತೆರಳಿದರು. ಅಲ್ಲಿ ತಮ್ಮ ಅಣ್ಣ ವೆಂಕಟರಾಮಶಾಸ್ತ್ರಿಗಳ ಸಹಾಯದಿಂದ ಸುಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದ ಮುಸಿರಿ ಸುಬ್ರಹ್ಮಣ್ಯ ಐಯ್ಯರ್ ರವರಲ್ಲಿ ಸಂಗೀತಾಭ್ಯಾಸವನ್ನು ಮುಂದುವರೆಸಿದರು. ಮುಸಿರಿ ಸುಬ್ರಮಣ್ಯ ಐಯ್ಯರ್ ರವರು ತ್ಯಾಗರಾಜ ಶಿಷ್ಯ ಪರಂಪರೆಗೆ ಸೇರಿದವರು. ಸಭೇಶ್‌ ಐಯ್ಯರ್ ರವರ ಶಿಷ್ಯರಾಗಿದ್ದುದಲ್ಲದೇ ಅವರ ಅಳಿಯಂದಿರೂ ಆಗಿದ್ದರು. ಇವರು ತಮ್ಮದೇ ಆದ ಶೈಲಿಯನ್ನು ಬೆಳೆಸಿಕೊಂಡಿದ್ದರು. ಕೃತಿಗಳನ್ನು ಭಾವಪೂರಿತವಾಗಿಯೂ ಅರ್ಥಪೂರ್ಣವಾಗಿಯೂ ಹಾಡುವುದರಲ್ಲಿ ಪರಿಣತರು. ಮುಸಿರಿಯವರ ನೆರವಲ್‌ ಅಂತೂ ಅತ್ಯುತ್ತಮವಾಗಿರುತ್ತಿತ್ತು. ಸಂಪ್ರದಾಯ ಬದ್ಧವಾದ ಸಂಗೀತ ಸುಬ್ರಮಣ್ಯ ಐಯ್ಯರ್ ರವರದಾಗಿತ್ತು. ಗುರುಗಳ ಪಾಠಕ್ರಮವನ್ನು ಬಹಳ ಚೆನ್ನಾಗಿ ಗ್ರಹಿಸಿ ಅದೇ ಶೈಲಿಯನ್ನು ರೂಢಿಸಿಕೊಂಡು ಗುರುಗಳಿಂದ ಶಹಭಾಸ್‌ಗಿರಿ ಪಡೆದರು. ೧೯೪೫ರಲ್ಲಿ ಮೈಸೂರಿಗೆ ಹಿಂತಿರುಗಿ ಪ್ರಾಕ್ತನಶಾಸ್ತ್ರ ಇಲಾಖೆ (Department of Archaeology) ಯಲ್ಲಿ ಮೇಲ್ವಿಚಾರಕರಾಗಿ ಕೆಲಸಕ್ಕೆ ಸೇರಿದರು.

ನಾರಾಯಣಸ್ವಾಮಿಯವರು ಪ್ರತಿದಿನ ೫-೬ ಗಂಟೆಗಳ ಕಾಲ ಸಂಗೀತಭ್ಯಾಸವನ್ನು ಮಾಡುತ್ತಿದ್ದರು. ಈ ರೀತಿಯ ಕಠಿಣಾಭ್ಯಾಸದಿಂದ ಅವರ ಶಾರೀರ ಬಹಳ ಘನವಾಗಿತ್ತು. ರಾಗ ಭಾವದಿಂದ ತುಂಬಿ ತುಳುಕುವಂಥ ಆಲಾಪನೆ ಮತ್ತು ಉತ್ತಮ ನೆರವಲ್‌ ಹಾಡಿಕೆ ಇವರ ವೈಶಿಷ್ಟ್ಯವಾಗಿತ್ತು. ಇವರ ಹಾಡುಗಾರಿಕೆಯು ಅವರ ಗುರುಗಳಾಗಿದ್ದ ಮುಸಿರಿ ಸುಬ್ರಹ್ಮಣ್ಯ ಐಯ್ಯರ್ ರವರ ಗಾಯನವನ್ನು ಹೋಲುವುದೆಂದು ಅನೇಕ ಹಿರಿಯ ಸಂಗೀತ ವಿದ್ವಾಂಸರು ಇವರನ್ನು ಹೊಗಳುತ್ತಿದ್ದರು. ಅವಧಾನ ತಾಳಗಳನ್ನು ಅಂದರೆ, ಬಲಗೈಲಿ ಒಂದು ತಾಳ, ಎಡಗೈಯಲ್ಲಿ ಮತ್ತೊಂದು ತಾಳವನ್ನು ಹಾಕಿ ಹಾಡುವುದನ್ನು ಇವರು ಅಭ್ಯಾಸ ಮಾಡಿದ್ದರು. ಬಹಳ ಚಿಕ್ಕ ವಯಸ್ಸಿನಿಂದಲೇ ಸಂಗೀತ ಕಚೇರಿಗಳನ್ನು ಕೊಡುತ್ತಿದ್ದರು. ಒಮ್ಮೆ ಮೈಸೂರಿನ ಬಿಡಾರಂ ಕೃಷ್ಣಪ್ಪ ರಾಮ ಮಂದಿರದಲ್ಲಿ ಸರ್.ಸಿ.ವಿ. ರಾಮನ್‌ ಉದ್ಘಾಟನೆ ಮಾಡಿದ ಪ್ರಥಮ ಸಂಗೀತ ಸಮ್ಮೇಳನದಲ್ಲಿ ನಾರಾಯಣಸ್ವಾಮಿಯವರು ಹಾಡಿದ್ದರು. ಆಗ ಪಿಟೀಲು ಟಿ. ಚೌಡಯ್ಯನವರು ಇವರನ್ನು ಹೊಗಳಿ ಇಂತಹ ಒಳ್ಳೆಯ ಕಲಾವಿದರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕೆಂದು ಜನರಲ್ಲಿ ವಿನಂತಿಸಿದ್ದರು.

ಆರ್.ಕೆ.ಎನ್‌. ೧೯೫೭ರಲ್ಲಿ ಮದರಾಸು ಮ್ಯೂಸಿಕ್‌ ಅಕಾಡೆಮಿಯ ಸಮ್ಮೇಳನದಲ್ಲಿ ಕಚೇರಿ ನಡೆಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಕೆಲವೊಮ್ಮೆ ಸಹೋದರ ಆರ್.ಕೆ. ರಾಮನಾಥನ್‌ರವರೊಂದಿಗೆ ಕಲ್ಲಿಕೋಟೆ ಸಹೋದರರೆಂಬ ಹೆಸರಿನಲ್ಲಿ ದ್ವಂದ್ವ ಗಾಯನ ಕಚೇರಿಗಳನ್ನೂ ಮಾಡಿದ್ದಾರೆ. ಮೈಸೂರು, ರುದ್ರಪಟ್ಟಣ, ಬೆಂಗಳೂರು, ಮದರಾಸು, ತಿರುಚಿರಾಪಳ್ಳಿ, ಮುಂತಾದ ಅನೇಕ ಕಡೆ ಕಚೇರಿಗಳನ್ನು ನೀಡಿರುವ ಇವರು ಈ ಪ್ರದೇಶಗಳಲ್ಲಿರುವ ಆಕಾಶವಾಣಿಯಿಂದ ಕೂಡ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಶ್ಯಾಮಶಾಸ್ತ್ರಿಗಳ ಬಗ್ಗೆ ಒಂದು ಸಂಗೀತ ರೂಪಕವನ್ನು ನಿರ್ದೇಶಿಸಿ ಮೈಸೂರು ಆಕಾಶವಾಣಿಯಿಂದ ೧೯೭೭ರಲ್ಲಿ ಪ್ರಸ್ತುತ ಪಡಿಸಿದ್ದಾರೆ. ಆಕಾಶವಾಣಿಯ ಲೋಕಲ್‌ ಆಡಿಶನ್‌ ಬೋರ್ಡ್‌‌ನ ತೀರ್ಪುಗಾರರಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದ್ದಾರೆ.

ನಾಡಿನಾದ್ಯಂತ ನಾರಾಯಣಸ್ವಾಮಿಯವರಿಗೆ ಸಂದಿರುವ ಗೌರವಗಳು ಅಪಾರ. ಇವರಿಗಿತ್ತ ಬಿರುದುಗಳಲ್ಲಿ ಕರ್ನಾಟಕ ಸಂಗೀಥ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ (೧೯೯೫), ಬೆಂಗಳೂರಿನ ತ್ಯಾಗರಾಜ ಗಾನ ಸಭಾದಿಂದ ಕಲಾಭೂಷಣ ಪ್ರಮುಖವಾದುವು. ಕರ್ನಾಟಕ ಗಾನಕಲಾ ಪರಿಷತ್‌, ಮೈಸೂರಿನ ಗಾನಭಾರತಿ, ಜೆ.ಎಸ್‌.ಎಸ್‌ ಸಂಗೀತ ಸಭಾ, ಶ್ರೀ ಪುರಂದರ ತ್ಯಾಗಬ್ರಹ್ಮ ಸಮಿತಿ, ಶ್ರೀ ತ್ಯಾಗರಾಜ ಸಂಗೀತ ಸಭಾ, ಬೆಂಗಳೂರಿನ ಕರ್ನಾಟಕ ಕಾಲೇಜ್‌ ಆಫ್‌ ಪರ್ಕಷನ್‌, ನಾದಾಂಜಲಿ, ಶ್ರೀಕಾಂತಂ ಸಂಗೀತ ಸಭಾ ಮುಂತಾದ ಅನೇಕ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ.

ಆರ್.ಕೆ. ನಾರಾಯಣಸ್ವಾಮಿಗಳ ಮಕ್ಕಳು ಮತ್ತು ಶಿಷ್ಯರಾಗಿರುವ ಆರ್.ಎನ್‌. ತ್ಯಾಗರಾಜನ್‌ ಮತ್ತು ಡಾ. ಆರ್.ಎನ್‌. ತಾರಾನಾಥನ್‌ ಇವರು ರುದ್ರಪಟ್ಟಣ ಸಹೋದರರೆಂದೇ ಖ್ಯಾತಿ ಪಡೆದಿದ್ದಾರೆ. ಡಾ.ಆರ್.ಎನ್‌. ಶ್ರೀಲತಾ ಇವರ ಸಂಗೀತ ಪರಂಪರೆಯನ್ನು ಚೆನ್ನಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಇವರೆಲ್ಲರೂ ತಂದೆಯ ಸಂಗೀತ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಇವರ ಇತರ ಶಿಷ್ಯರನೇಕರಲ್ಲಿ ಶ್ರೀಮತಿಯರಾದ ರಾಜಮ್ಮ ಕೇಶವಮೂರ್ತಿ, ಮಧುರ, ಜಯಂತಿ, ನಾಗಮಣಿ ಪ್ರಮುಖರು.

ಆರ್.ಕೆ. ನಾರಾಯಣಸ್ವಾಮಿಯವರು ೮೬ ವರ್ಷಗಳ ಸರಳ ಸುಂದರ ತುಂಬು ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಕಲಾಸೇವೆಯೇ ತನ್ನ ಜೀವನದ ಮುಖ್ಯ ಉದ್ದೇಶವೆಂದು ತಿಳಿದು ಈ ವಯಸ್ಸಿನಲ್ಲಿಯೂ ಸಂಗೀತಗಾರರಿಗೆ ಮಾರ್ಗದರ್ಶನವನ್ನು ನೀಡುತ್ತಾ ಬಂದಿದ್ದಾರೆ.