ಸಂಗೀತಗಾರರ ಮನೆತನದಲ್ಲಿ ಜನಿಸಿ, ಖ್ಯಾತ ಹಾರ್ಮೋನಿಯಂ ವಾದಕರೆನಿಸಿ, ವಿಖ್ಯಾತ ಹಿಂದೂಸ್ಥಾನಿ ಗಾಯಕರಿಗೆ ಸಮರ್ಥವಾಗಿ ಹಾರ್ಮೋನಿಯಂ ಸಾಥ ನೀಡಿ, ಸಂಗೀತ ವಿದ್ಯಾಲಯ ಸ್ಥಾಪಿಸಿ, ಸಾವಿರಾರು ಆಸಕ್ತರಿಗೆ ಸಂಗೀತ ಶಿಕ್ಷಣ ನೀಡಿ, ಕರ್ನಾಟಕದಲ್ಲಿ ಹಾರ್ಮೋನಿಯಂ ವಾದನಕಾರರ ಪಡೆಯನ್ನೇ ನಿರ್ಮಿಸಿರುವ ಬೆಳಗಾವಿಯ ವಿಖ್ಯಾತ ಪಂ.ಆರ್.ಕೆ. ಬಿಜಾಪುರೆಯವರು ರಾಷ್ಟ್ರೀಯ ಖ್ಯಾತಿಯ ಹಾರ್ಮೋನಿಯಂ ವಾದಕ ಕನ್ನಡಿಗರು.

ಪಂ. ರಾಮಭಾವು ಅವರು ಜನಿಸಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾಗವಾಡದಲ್ಲಿ: ೧೯೧೭ರ ಜನವರಿ ೭ ರಂದು. ಅವರದು ಸಂಗೀತ ಪರಂಪರೆಯ ಮನೆತನ. ಅವರ ತಂದೆ ಕಲ್ಲೋಪಂತರು ಶಾಲಾ ಶಿಕ್ಷಕರು ಹಾಗೂ ಸಂಗೀತಗಾರರಾಗಿದ್ದರು. ಹಾರ್ಮೋನಿಯಂ ಮತ್ತು ತಬಲಾ ವಾದನವನ್ನು ಉತ್ತಮವಾಗಿ ನುಡಿಸುತ್ತಿದ್ದರು. ಮರಾಠಿ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ತಾಯಿ ರುಕ್ಮಿಣಿಬಾಯಿ ಸಂಗೀತದ ಪರಮಭಕ್ತೆ. ಚಿಕ್ಕಪ್ಪ (ಕಾಕಾ) ಕೃಷ್ಣ ಪಂತರು ತಬಲಾ ವಾದಕರಾಗಿದ್ದರು. ಮನೆಯಲ್ಲಿ ಸದಾಕಾಲ ಸಂಗೀತದ ರಿಯಾಜ್‌. ಇಂತಹ ವಾತಾವರಣದಲ್ಲಿ ಜನಿಸಿದ ರಾಮಭಾವು ಅವರಿಗೆ ಆರನೇ ವಯಸ್ಸಿನಲ್ಲಿಯೇ ಹಾರ್ಮೋನಿಯಂ ನುಡಿಸಲಾರಂಭಿಸಿದರು. ಅವರ ಸಂಗೀತ ಶಿಕ್ಷಣಕ್ಕೆ ಶ್ರೀಕಾರ ಹಾಕಿದವರು ಆ ಕಾಲದ ಹೆಸರಾಂತ ನಾಟಕದ ಸಂಗೀತ ಮಾಸ್ಟರಾಗಿದ್ದ ಶ್ರೀ ಅಣ್ಣಿಗೇರಿ ಮಲ್ಲಯ್ಯನವರು. ಮುಂದೆ ಕಾಗವಾಡದಿಂದ ಬೆಳಗಾವಿಗೆ ಬಂದ ರಾಮಭಾವು ಅವರಿಗೆ ಖ್ಯಾತ ಸಂಗೀತಗಾರರ ಸಾಮಿಪ್ಯ ದೊರೆಯಿತು. ಬೆಳಗಾವಿಯಲ್ಲಿ ಅವರು ಪಂ. ಕಾಗಲಕರ ಬುವಾ ಅವರಿಂದ ಹಾಡುಗಾರಿಕೆಯನ್ನು ಮತ್ತು ಪಂ. ರಾಜವಾಡೆ ಹಾಗೂ ಪಂ. ಗೋವಿಂದಾರಾವ ಗಾಯಕವಾಡ ಅವರಿಂದ ಹಾರ್ಮೋನಿಯಂ ವಾದನ ಕಲಿತರು. ಹಾಡುಗಾರಿಕೆಯಲ್ಲಿ ‘ಸಂಗೀತ ವಿಶಾರದ’ ಹಾಗೂ ಹಾರ್ಮೋನಿಯಂ ವಾದನದಲ್ಲಿ ಸಂಗೀತ ಅಲಂಕಾರ ಪದವಿ ಪಡೆದರು. ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅವರು ‘ಪ್ರಾಥಮಿಕ ಸಂಗೀತ ಶಿಕ್ಷಣ’ ಎಂಬ ಸಂಗೀತ ಪುಸ್ತಕ ಬರೆದು ಪ್ರಕಟಿಸಿದ್ದಾರೆ.

ಹತ್ತು ಬೆರಳುಗಳಿಂದ ಹಾರ್ಮೋನಿಯಂ ನುಡಿಸುತ್ತ ಅದರಲ್ಲಿ ಅಪಾರ ಖ್ಯಾತಿ ಗಳಿಸಿದ ರಾಮಭಾವು ಅವರು ಕಿರಾಣಾ ಘರಾಣೆಯ ಸಂಸ್ಥಾಪಕ ಉಸ್ತಾದ್‌ ಅಬ್ದುಲ್‌ ಕರೀಮಖಾನ್‌, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ, ಮಲ್ಲಿಕಾರ್ಜುನ ಮನ್ಸೂರ್, ಕಿಶೋರಿ ಅಮೋನಕರ್, ಬಡೇಗುಲಾಂ ಅಲಿಖಾನ್‌, ಕೇಸರಿಬಾಯಿ, ಅಮೀರ್ ಖಾನ್‌ ಮೊದಲ ಹಿಂದೂಸ್ಥಾನಿ ದಿಗ್ಗಜರಿಗೆ ಸಮರ್ಥ ಹಾರ್ಮೋನಿಯಂ ಸಾಥ್ ನೀಡಿದ ಹೆಗ್ಗಳಿಕೆ ಅವರದು. ಶಿರಹಟ್ಟಿ ವೆಂಕೋಬ ರಾವ್‌ ಮಾಸ್ತರ ನಾಟಕ ಕಂಪನಿಯಲ್ಲಿ ಹಾರ್ಮೋನಿಯಂ ವಾದಕರಾಗಿ, HMV ಕಂಪನಿಯ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿ ೧೯೩೮ರಲ್ಲಿ ಬೆಳಗಾವಿಯಲ್ಲಿ ‘ಶ್ರೀರಾಮ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಇದುವರೆಗೆ ಸುಮಾರು ಸಾವಿರ ಜನ ಆಸಕ್ತರಿಗೆ ಗಾಯನ, ಹಾರ್ಮೋನಿಯಂ ವಾದನ ವಿದ್ಯೆ ನೀಡಿದ್ದಾರೆ. ೮೯ರ ಇಳಿಯ ವಯಸ್ಸಿನಲ್ಲಿಯೂ ನಾದ ದಾಸೋಹ ನಿರಂತರ ನಡೆಸುತ್ತಿದ್ದಾರೆ. ಅವರ ಬಳಿ ಅನೇಕ ಗವಾಯಿಗಳ ನೂರಾರು ಬಂದೀಶಗಳ ಸಂಗ್ರಹವಿದೆ. ಡಾ.. ಸುಧಾಂಶು ಕುಲಕರ್ಣಿ, ರವೀಂದ್ರ ಮಾನ, ರವೀಂದ್ರ ಕಾತೋಟೆ, ವಾಮನ ವಾಗೂಕರ, ನಿರ್ಮಲಾ ಕಾಕೋಡ ಮುಂತಾದ ಖ್ಯಾತ ಹಾರ್ಮೋನಿಯಂ ವಾದಕರು ಅವರ ಶಿಷ್ಯರು. ರಾಮಭಾವು ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ (೧೯೮೫-೮೬), ಬೆಂಗಳೂರು ಹಿಂದೂಸ್ಥಾನಿ ಕಲಾಕಾರ ಮಂಡಳಿಯ ನಾದಶ್ರೀ (೧೯೯೨), ರಾಜ್ಯ ಸಂಗೀತ ವಿದ್ವಾನ್‌ ಪುರಸ್ಕಾರ (೨೦೦೧), ಪುನಾದ ‘ಸಂಗೀತಕಾರ ಪುರಸ್ಕಾರ (೧೯೯೯), ವಿಠಲರಾವ ಕೋರೆಗಾವಕರ ಪುರಸ್ಕಾರ, ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ (೨೦೦೩), ಗಾಂಧರ್ವರು ಮಹಾವಿದ್ಯಾಲಯದ ‘ಸಂಗೀತ ಮಹಾಮಹೋಪಾಧ್ಯಾಯ ಪ್ರಶಸ್ತಿ ದೊರೆತಿವೆ.