೨೫-೬-೧೯೪೨ರಂದು ರಾಘವನ್‌ ಅವರು ಪಾರಂಪರಿಕ ಗುರು ಪರಂಪರೆಯನ್ನು ಹೊಂದಿದ ವೀಣಾ ವಿದ್ವಾಂಸರ ಮನೆತನದಲ್ಲಿ ಆಸ್ಥಾನ ವಿದ್ವಾನ್‌ ಆರ್.ಎಸ್‌. ಕೇಶವಮೂರ್ತಿಯವರ ಸುಪುತ್ರರಾಗಿ ಜನಿಸಿದರು. ತಂದೆಯವರ ಕಠಿಣ ಪರಿಶ್ರಮದ ಶಿಕ್ಷಣದಲ್ಲಿ ಸತತ ಅಭ್ಯಾಸ ಸಾಧನೆಯ ಮಾರ್ಗದಿಂದ ರಾಘವನ್‌ ಉತ್ತಮ ವೈಣಿಕರಾಗಿ ಬೆಳೆದರು.

ಬಾಲ್ಯದಿಂದಲೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಕೊಡುತ್ತಲಿದ್ದ ಶ್ರೀಯುತರಿಗೆ ದೇಶ-ವಿದೇಶಗಳಲ್ಲಿ ಅವರ ವಾದನವನ್ನು ಶ್ರೋತೃಗಳಿಗೆ ತಲುಪಿಸುವ ಅವಕಾಶಗಳು ದೊರಕಿದುವು. ಪಂಡಿತ ಪಾಮರರೂ, ವಿಮರ್ಶಕರೂ ಮೆಚ್ಚಿರುವ ಇವರ ಪ್ರತಿಭೆಗೆ ಹಲವು ಸಂಸ್ಥೆಗಳು ಪುರಸ್ಕಾರಗಳನ್ನೂ ನೀಡಿವೆ. ‘ಕಲಾ ತಪಸ್ವಿ’, ‘ವೀಣಾ ವಾದನ ಪ್ರವೀಣ’, ‘ವೈಣಿಕ ರತ್ನ’, ‘ವೈಣಿಕ ಚತುರ’, ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಮಠದಿಂದ ‘ದತ್ತಪೀಠ ಆಸ್ಥಾನ ವಿದ್ವಾನ್‌’ ಮುಂತಾದುವು ಶ್ರೀಯುತರಿಗೆ ದೊರೆತಿರುವ ಪ್ರಶಸ್ತಿಗಳು. ಇವುಗಳೊಡನೆ ೨೦೦೪-೦೫ರ ಸಾಲಿನ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸನ್ಮಾನವೂ ಸೇರಿದೆ.