ಕಥಾಕೀರ್ತನಕಾರರೂ, ಸಂಗೀತ ವಿದ್ವಾಂಸರೂ ಆಗಿದ್ದ ಶ್ರೀಕೃಷ್ಣಶಾಸ್ತ್ರಿಗಳ ಸುಪುತ್ರರಾಗಿ ೧೯೧೭ರಲ್ಲಿ ರುದ್ರಪಟ್ಟಣದಲ್ಲಿ ಜನಿಸಿದ ರಾಮನಾಥನ್‌ ಅವರು ಸಂಗೀತ ವಿದ್ವಾಂಸರಾಗಿದ್ದುದೇ ಅಲ್ಲದೆ ಸುಶಿಕ್ಷಿತ ಸ್ನಾತಕೋತ್ತರ ಪದವೀಧರರೂ ಆಗಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಂಗ್ಲಭಾಷೆಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು.

ಚಿಕ್ಕಂದಿನಿಂದಲೂ ಸಂಗೀತದಲ್ಲಿ ಆಸಕ್ತರಾಗಿದ್ದ ಇವರಿಗೆ ತಂದೆ ಕೃಷ್ಣಶಾಸ್ತ್ರಿ ಹಾಗೂ ಅಣ್ಣವೆಂಕಟರಾಮಾ ಶಾಸ್ತ್ರಿಗಳು ಮಾರ್ಗದರ್ಶಕರಾಗಿ ತರಬೇತಿ ನೀಡಿದರು. ತತ್ಫಲವಾಗಿ ಕಳೆದ ಶತಮಾನವು ಕಂಡ ವಿದ್ವದ್ವರೇಣ್ಯರಲ್ಲಿ ರಾಮನಾಥನ್‌ ಸಹ ಒಬ್ಬರಾದರು. ನುರಿತ ಗಾಯಕರಾಗಿ ಉತ್ತಮ ಶಿಕ್ಷಕರಾಗಿ ಕೀರ್ತಿ ಪಡೆದರು.

ಅಣ್ಣ ಆರ್.ಕೆ. ನಾರಾಯಣಸ್ವಾಮಿಯವರೊಡನೆ ಕೂಡಿ ಮೈಸೂರಿನಲ್ಲಿ ನಡೆಸಿದುದೇ ಅವರ ಮೊದಲ ಕಛೇರಿ. ನಂತರ ನಾಡಿನಲ್ಲೂ ನೆರೆ ನಾಡುಗಳಲ್ಲೂ ಸಭೆ-ಸಮ್ಮೇಳನಗಳಲ್ಲಿಯೂ ತಮ್ಮ ಅಚ್ಚುಕಟ್ಟಾದ ಶೈಲಿಯ ಗಾಯನದಿಂದ ಅತ್ಯುತ್ತಮ ಸಂಗೀತ ವಿದ್ವಾಂಸರೆಂಬ ಕೀರ್ತಿಗೆ ಭಾಜನರಾದರು. ಆಕಾಶವಾಣಿಯಿಂದಲೂ ಇವರ ಗಾಯನ ಪ್ರಸಾರವಾಗುತ್ತಿತ್ತು.

ಆಂಗ್ಲಭಾಷಾ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಗೌರವ ಅಧ್ಯಾಪಕರಾಗಿ ಹಲವು ಕಾಲ ಸೇವೆ ಸಲ್ಲಿಸಿದರು. ಅಲ್ಲಿನ ಅಧ್ಯಯನ ಮಂಡಲಿಯ ಸದಸ್ಯರಾಗಿ, ಚೌಡಯ್ಯ ಸ್ಮಾರಕ ಭವನದ ಸ್ಥಾಪಕ ಕಾರ್ಯದರ್ಶಿಯಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ. ಅವರ ಲೇಖನಿಯಿಂದ ಹಲವಾರು ಉತ್ತಮ ಲೇಖನಗಳೂ ಮೂಡಿಬಂದಿವೆ. ೧೯೭೮-೭೯ರ ಸಾಲಿನ ರಾಜ್ಯ ಸಂಗೀತ ನಾಟಕ ಅಕಾಡೆಮಿಯಿಂದ ಪುರಸ್ಕೃತರಾದ ಶ್ರೀಯುತರು ೧೯೮೭ರಲ್ಲಿ ಭಗವಂತನ ಪಾದಗಳನ್ನು ಸೇರಿದರು.