ಸುಪ್ರಭಾತದಲ್ಲಿ ಅರಳಿದ ಹೂಗಳ ಮೇಲೆ ಕುಳಿತ ಇಬ್ಬನಿಯ ಬಿಂದುಗಳಂತೆ ಉಚ್ಚರಿಸಲ್ಪಡುವ ಪದಪುಂಜಗಳು; ಪ್ರಣವನಾದವನ್ನೇ ಸದಾ ಮೀಟುವ ತುಂಬುಕಂಠದ ಶ್ರೀಮಂತಿಕೆ; ಹೊಳೆವ ನಕ್ಷತ್ರ ರಾಶಿಯಂತೆ ಸ್ಪರ್ಧೆಯಲ್ಲಿ ಮಿಂಚುವ ಅನರ್ಘ್ಯ ಕೃತಿರತ್ನಗಳ ಬತ್ತದ ಭಂಡಾರ; ಕಾಲಪ್ರಮಾಣದಲ್ಲಿ, ದೇವಾಲಯದಲ್ಲಿ ಮೊಳಗುವ ಘಂಟಾರವದ ನಿಯತತೆ, ಖಾಚಿತ್ಯ; ನಿರೂಪಣೆಯಲ್ಲಿ ನ್ಯೂನಾತಿರೇಕಗಳಿಂದ ದೂರವಾದ ಪ್ರಮಾಣ ಬದ್ಧತೆ, ಔಚಿತ್ಯ; ಯುವಕರನ್ನೂ ನಾಚಿಸುವ ಹುರುಪು, ಸಡಗರ……

ಹೀಗೆ ಹೇಳುತ್ತಲೇ ಹೋಗಬಹುದು. ಇದು ಎಂಬತ್ನಾಲ್ಕರ ಹರೆಯದ ರುದ್ರಪಟ್ನಂ ಕೃಷ್ಣಶಾಸ್ತ್ರಿ ಶ್ರೀಕಂಠನ್‌ರ ಗಾಯನ ವೈಖರಿ. ಶ್ರುತಿ ಶುದ್ಧ, ಲಯಶುದ್ಧ, ರಾಗಶುದ್ದ, ಸಾಹಿತ್ಯ ಶುದ್ಧ, ಭಾವಶುದ್ಧ-ಹೀಗೆ ಅವರ ಸಂಗೀತ, ‘ಪಂಚಶುದ್ಧಿ’ಗೆ ಪ್ರಸಿದ್ಧ.

ಹಿನ್ನೆಲೆ: ೧೯೨೦ ರ ಜನವರಿಯಲ್ಲಿ ೧೪ನೇ ತಾರೀಖಿನಂದು ಜನನ. ಜೀವ ಮಾನದುದ್ದಕ್ಕೂ (ಅಂದು ಸಂಕ್ರಾಂತಿ ಹಬ್ಬದ ದಿನ) ‘ಗೀತ ಸಂಕ್ರಾಂತಿ’. ಮಾತಾಮಹರಾದ ಬೆಟ್ಟದಪುರ ನಾರಾಯಣಸ್ವಾಮಿಯವರು ವೈಣಿಕರು ಹಾಗೂ ಗಾಯಕರು. ಸದಾಶಿವರಾಇಯರ ಸಮಕಾಲೀನರಾದ ಮೂಗೂರು ಸುಬ್ಬಣ್ಣನವರು ಇವರ ಗುರುಗಳು ಮತ್ತು ವೀಣಾ ಪದ್ಮನಾಭಯ್ಯನವರಿಗೂ ನಾರಾಯಣಸ್ವಾಮಿಯವರಿಗೂ ಪರಮ ಸ್ನೇಹ. ತಾಯಿ ಸಣ್ಣಕ್ಕನವರೂ ಸೊಗಸಾಗಿ ಹಾಡುತ್ತಿದ್ದರು. ತಂದೆ, ರುದ್ರಪಟ್ನಂ ಕೃಷ್ಣಶಾಸ್ತ್ರಿಗಳಂತೂ ಪ್ರಬುದ್ಧ ಕಲಾವಿದರಷ್ಟೇ ಅಲ್ಲದೆ ಹರಿಕಥಾ ವಿದ್ವಾಂಸರೂ ಆಗಿದ್ದು, ಸಂಸ್ಕೃತ, ಕನ್ನಡ ಭಾಷೆಗಳಲ್ಲಿಕ ಅಸಾಧಾರಣ ಪಾಂಡಿತ್ಯ ಉಳ್ಳವರಾಗಿದ್ದರು. ಪಂಡಿತರಾಜ ಎಂಬ ಬಿರುದಾಂಕಿತರಾಗಿದ್ದರು. ಉತ್ತಮ ಪ್ರವಚನಕಾರರು. ಸಂಗೀತದಲ್ಲಿ ಎ.ಕೆ. ಸುಬ್ಬರಾವ್‌ ಮುಂತಾದವರು ಶಿಷ್ಯರು. ಶ್ರೀಕಂಠನ್‌ ಸೋದರರಾದ ವೆಂಕಟರಾಮಶಾಸ್ತ್ರಿ, ನಾರಾಯಣಸ್ವಾಮಿ ಮತ್ತು ರಾಮನಾಥನ್‌ ಎಲ್ಲರೂ ಸಂಗೀತ ಸಾಧಕರೇ. ಬಾಲ್ಯದಲ್ಲೆ,-ಐದಾರು ವರ್ಷ- ಮೈಸೂರಿಗೆ ಸ್ಥಳಾಂತರಗೊಂಡ ಕುಟುಂಬದಲ್ಲಿ ಪ್ರತಿ ಶುಕ್ರವಾರ, ಶನಿವಾರಗಳಲ್ಲಿ ಭಜನೆ, ಸೋದರರ ಸಂಗೀತ ಸೇವೆ. ಏಳೆಂಟನೆ ವಯಸ್ಸಿನಲ್ಲಿ ಆರಂಭದ ಶಿಕ್ಷಣವನ್ನು ತಂದೆಯವರಿಂದಲೂ ಹಿರಿಯಣ್ಣ ಹಾಗೂ ಖ್ಯಾತನಾಮರಾದ ಪಿಟೀಲು ವಿದ್ವಾನ್‌ ಆರ್.ಕೆ. ವೆಂಕಟರಾಮಾಶಾಸ್ತ್ರಿಗಳಿಂದಲೂ ಪಡೆದುಕೊಂಡ ಮೇಲೆ ಮುಂದೆಲ್ಲ ನಿರಂತರ ಸಾಧನೆ, ಪ್ರಖ್ಯಾತ ವಿದ್ವಾಂಸರ ಸಂಪರ್ಕ-ಸಹಯೋಗ, ಅಮೂಲ್ಯ ಕೃತಿಗಳ ಪಾಠಾಂತರದ ಸಂಗ್ರಹ, ಸತತ ಚಿಂತನೆ, ಅವಿರತ ಆತ್ಮ ವಿಮರ್ಶೆ, ಪದೇ ಪದೇ ಪರಿಷ್ಕರಣ, ಸ್ವತಂತ್ರ ಶೈಲಿಯ ನಿರ್ಮಾಣ. ಈ ರೀತಿ ಸಾಗಿದ ಪಯಣ. ಜೊತೆ ಜೊತೆಗೆ ಮುಂದುವರೆದ ಸಾಮಾನ್ಯ ವಿದ್ಯಾಭ್ಯಾಸ. ಸ್ವಿದ್ಯಾ ಪಾಠಶಾಲೆ, ಬನುಮಯ್ಯ ಪ್ರೌಢಶಾಲೆಗಳ ನಂತರ ಇಂಟರ್ ಮೀಡಿಯೇಟ್‌ ಕಾಲೇಜ್‌ ಮತ್ತು ತುದಿಯಲ್ಲಿ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ ಗಳಿಕೆ.

ಹದಿಮೂರು, ಹದಿನಾಲ್ಕರ ಸುಮಾರಿನಲ್ಲಿ ಕಚೇರಿ ನೀಡಲು ಆರಂಭ. ಉಪಾಕರ್ಮದ ಸಮಾರಂಭವೊಂದರಲ್ಲಿ ಹಾಡಿದಾಗ ಮದ್ರಾಸ್‌ ಕಡೆಯಿಂದ ಬಂದ ಕಲಾರಸಿಕರಿಂದ “ಮಧುರೈ ಪುಷ್ಪವನಂ ಸಂಗೀತ ಕೇಳಿದ ಅನುಭವವಾಯಿತು” ಎಂಬ ಉದ್ಗಾರ.

ಬಿಡಾರಂ ಕೃಷ್ಣಪ್ಪ ರಾಮ ಮಂದಿರದ ರಾಮೋತ್ಸವ ಕಚೇರಿಗಳ ರಸದೌತಣ, ಆದರೆ ಎಲ್ಲಕ್ಕೂ ಟಿಕೆಟ್‌. ಬಾಲಕನಿಗೆ ಹಣ ಎಲ್ಲಿಂದ? ಕೇಳಲೇ ಬೇಕೆಂಬ ಅದಮ್ಯ ಆಕಾಂಕ್ಷೆಯಿಂದ ದೇವಸ್ಥಾನದ ಅರ್ಚಕರ ಕೃಪೆ ಸಂಪಾದಿಸಿ ಸಂಜೆ ೬ ಗಂಟೆಗೆ ಆರಂಭವಾಗುವ ಕಚೇರಿಗೆ ಮಧ್ಯಾಹ್ನ ೩ ಗಂಟೆಯಿಂದಲೇ ಗರ್ಭಗುಡಿಯಲ್ಲಿ ಅಜ್ಞಾತವಾಸ. ನಂತರ ಮೆಲ್ಲನೆ ಮುಂದಿನ ಸಾಲಿನ ಶ್ರೋತೃಗಳೊಡನೆ ಸೇರಿಕೊಳ್ಳುತ್ತಿದ್ದುದು ಆರ್.ಕೆ.ಎಸ್‌. ಮನಸ್ಸಿನಲ್ಲಿ ಅಚ್ಚೊತ್ತಿರುವ ನೆನಪು. ಅಲ್ಲಿ ಕೇಳಿದ ಪಲ್ಲಡಂ ಸಂಜೀವರಾವ್‌, ಪಾಲ್ಘಾಟ್‌ ರಾಮ ಭಾಗವತರ್, ಚಂಬೈ, ಅರಿಯಾಕುಡಿ, ವಿಶ್ವನಾಥಯ್ಯರ್, ಮುಸಿರಿ, ಚಿಕ್ಕರಾಮರಾಯರು, ಬಿಡಾರಂ (ಗಾಯನ), ಕಾರೈಕುಡಿ ಸಹೋದರರು (ವೀಣೆ), ಪರೂರು ಸುಂದರಂ ಅಯ್ಯರ್, ಪಾಪಾ ವೆಂಕಟರಾಮಯ್ಯ, ಕುಂಭಕೋಣಂ ರಾಜಮಾಣಿಕ್ಯ ಪಿಳ್ಳೈ, (ವೈಲಿನ್‌), ತಿರುಪ್ಪಾಂಬರಂ ಸ್ವಾಮಿನಾಥ ಪಿಳ್ಳೈ, ಸಿ.ಎಸ್‌. ಮುರುಗ ಭೂಪತಿ, ಪಾಲ್ಘಾಟ್‌ ಮಣಿ ಅಯ್ಯರ್ (ಮೃದಂಗ),. ಕೋದಂಡರಾಮ ಅಯ್ಯರ್ (ಘಟಂ), ಅಂಗಪ್ಪ ಪಿಳ್ಳೈ, ವೀರಾಸಾಮಿ ಪಿಳ್ಳೈ, ಸುಬ್ರಹ್ಮಣ್ಯ ಪಿಳ್ಳೈ ಸಹೋದರರು, ರಾಜರತ್ನಂ ಪಿಳ್ಳೈ (ನಾಗಸ್ವರ), ಮೀನಾಕ್ಷಿ ಸುಂದರಂ ಪಿಳ್ಳೈ (ಡೋಲು), ಸರಸ್ವತಿ ಬಾಯಿ, ಕನಕಾಂಬುಜಂ, ಯದುಗಿರಿ ಕುಮರಿ (ಹರಿಕಥೆ), ಬಾಲ ಸರಸ್ವತಿ (ನೃತ್ಯ), ಅವರ ತಾಯಿ ಜಯಮ್ಮನವರು (ಹಾಡುಗಾರಿಕೆ). ಈ ಎಲ್ಲ ಕಲಾವಿದರ ಕಲಾವಂತಿಕೆಯ ಗಾಢ ಪರಿಣಾಮ ಎಳೆಯ ಶ್ರೀಕಂಠನ್‌ರ ಮೇಲೆ. ಇದರ ಜೊತೆಯಲ್ಲಿ ಮನೆಗೆ ಬರುತ್ತಿದ್ದ ವಸುದೇವಾಚಾರ್ಯರು, ರಾಳ್ಲಪಲ್ಲಿ ಅನಂತ ಕೃಷ್ಣಶರ್ಮಾ, ಟೈಗರ್ ವರದಾಚಾರ್ಯರು, ಗಮಕಿ ರಾಮಕೃಷ್ಣಶಾಸ್ತ್ರಿಗಳಂಥ ವಿದ್ವಾಂಸರ ಸಂಪರ್ಕದಿಂದ ಕುದುರಿದ ಶಾಸ್ತ್ರ ಜಿಜ್ಞಾಸೆ. ಆರ್.ಕೆ.ಎಸ್‌. ಶ್ರೀಕಂಠನಾಗಲು ಇದಕ್ಕಿಂತ ಬೇಕೇನು?.

ವೆಂಕಟರಾಮ ಶಾಸ್ತ್ರಿಗಳು ಚೌಡಯ್ಯನವರ ಸಹಾಯದಿಂದ ಮದ್ರಾಸಿಗೆ ಹೋಗಿ ಅಲ್ಲೇ ನೆಲೆಸಿದ ಬಳಿಕ ಸಹೋದರನಿಗೆ ಮದ್ರಾಸ್‌ ಕಾರ್ಪೊರೇಷನ್‌ ರೇಡಿಯೋದಲ್ಲಿ ಮಾಸ್ಟರ್ ಶ್ರೀ ಕಂಠನ್‌ ಎಂದು ಮೊದಲ ಕಾಂಟ್ರಾಕ್ಟ್ ಲಭ್ಯ.

ಮೈಸೂರು ಸಂಸ್ಥಾನ ರೇಡಿಯೋ ಕೇಂದ್ರದಲ್ಲಿ ಸಂಗೀತ ಮೇಷ್ಟರೆಂದು ಗುರುವಾಗಿಯೇ ಪ್ರವೇಶ. ಉದ್ಯೋಗಸ್ಥರಾಗಿ ಮುಂದೆ ಅದು All India Radioಗೆ ಸೇರಿದ ಬಳಿಕ ಬೆಂಗಳೂರು ಆಕಾಶವಾಣಿ ನಿಲಯಕ್ಕೆ ಸ್ಥಳಾಂತರಗೊಂಡು ಶ್ರೀಕಂಠನ್‌ ೧೯೫೪ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದು ಈ ಪಟ್ಟಣಿಗರ ಭಾಗ್ಯ . ಅವರ ಜ್ಞಾನ ವೃದ್ಧಿಗೆ, ಯಶಸ್ಸಿಗೆ, ಅನುಭವಕ್ಕೆಕ ಆಕಾಶವಾಣಿ ಬಹುಮಟ್ಟಿಗೆ ಕಾರಣ.

ಮುನ್ನಲೆ: ಬಾನುಲಿಯಲ್ಲಿ ಆಗ ಪ್ರಸಾರಗೊಂಡ-ಅವರು ಹಾಡಿದ, ನಿರ್ದೇಶಿಸಿದ, ನಿರ್ಮಿಸಿದ-ಕಾರ್ಯಕ್ರಮಗಳು ಅಗಣಿತ. ಅನೇಕ ಪರಿಚಿತ-ಅಪರಿಚಿತ ಕೃತಿ, ರಾಗ, ತಾಳಗಳನ್ನು ಕುರಿತು ರೂಪಕಗಳಷ್ಟೇ ಅಲ್ಲದೆ ಸ್ವತಃ ರಾಗ ಸಂಯೋಜನೆ ಮಾಡಿದ ಹಾಡುಗಳೆಷ್ಟೋ? ಶಿವಶರಣರ ವಚನಗಳಿಗೂ ಹರಿದಾಸರ ಪದಗಳಿಗೂ ನಾರಾಯಣತೀರ್ಥರ ‘ಕೃಷ್ಣಲೀಲಾತರಂಗಣಿ’ಯ ರುಕ್ಮಣೀಕಲ್ಯಾಣಕ್ಕೆ ಸಂಬಂಧಿಸಿದ ತರಂಗಗಳಿಗೂ ಮಾತ್ರವಲ್ಲದೆ ಕುವೆಂಪು, ಬೇಂದ್ರೆ, ಡಿ.ವಿ. ಗುಂಡಪ್ಪ, ಮಾಸ್ತಿ, ಪು.ತಿ.ನ., ಎಸ್‌.ವಿ.ಪರಮೇಶ್ವರ ಭಟ್ಟರಂತಹ ಸಮಕಾಲೀನ ಕವಿದಿಗ್ಗಜಗಳ ಕವಿತೆಗಳಿಗೂ ಶ್ರೀಕಂಠನ್‌ ರಾಗ ತಾಳಗಳ ಜರತಾರಿ ಶಾಲು ಹೊದಿಸಿ ಮೆರೆಸಿದ್ದಾರೆ. ಅವರ ಜ್ಞಾನದಾಹವನ್ನು ತಣಿಸುವ, ಸಾಮರ್ಥ್ಯಕ್ಕೆ ಸವಾಲೆನಿಸುವ ಇಂತಹ ಸಂದರ್ಭಗಳಿಂದ ವಿಸ್ತೃತಗೊಂಡ ಅಧ್ಯಯನಶೀಲತೆ ಹಾಗೂ ಅನುಭವದ ಫಲವೆಂಬಂತೆ ಅವರ ಉಪನ್ಯಾಸಗಳೂ, ಪ್ರಾತ್ಯಕ್ಷಿಕೆಗಳೂ, ಶಿಕ್ಷಣಶಿಬಿರಗಳೂ ಎಂದು ಯಾರನ್ನೂ ನಿರಾಸೆಗೊಳಿಸಿಲ್ಲ. ಜೊತೆಗೆ, ಆ ಕಾಲದ ಪದವೀಧರರಾದ್ದರಿಂದ ಅವರದು ನಿರ್ದುಷ್ಟ ಕನ್ನಡ ಹಾಗೂ ಇಂಗ್ಲಿಷ್‌. ಒಳಗಿನ ವಿದ್ಯೆಗೆ ಸೂಕ್ತ ಅಭಿವ್ಯಕ್ತಿ ನೀಡಲು ಇದಕ್ಕಿಂತ ಬೇಕೇನು? ಭಾರತೀಯ ಸಂಗೀತ, ಕಲೆ, ಸಂಸ್ಕೃತಿಯ ಎಲ್ಲ ಆಯಾಮಗಳೂ ಅವರಿಗೆ ಆಡುಂಬೊಲ. ಅಸ್ಖಲಿತವಾಗಿ, ಅಧಿಕಾರಯುತವಗಿ ನುಡಿಯಬಲ್ಲ ವಾಗ್ಮಿತೆ ಒಂದು ವಿಶೇಷ ಶಕ್ತಿ.

ಆಸೇತು ಹಿಮಾಚಲಪರ್ಯಂತ ಇರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಿಯರಿಗೆಲ್ಲ ಪ್ರಿಯವಾದ ಹೆಸರು ಆರ್.ಕೆ.ಎಸ್‌. ಆರು ದಶಕಗಳನ್ನೂ ಮೀರಿ ಮುಂದುವರಿದಕ ಕಲಾಜೀವನದ ಅರ್ಥಪೂರ್ಣ ಅವಧಿ. ಮಿದಾಸ ಸ್ಪರ್ಶ, ಮುಟ್ಟಿದ್ದೆಲ್ಲ ಚಿನ್ನ. ರಾಜ್ಯ, ಹೊರರಾಜ್ಯಗಳ ಎಲ್ಲ ಎಲ್ಲೆಗಳನ್ನೂ ದಾಟಿ ಕಡಲಾಚೆಯ ಕಲಾರಸಿಕರನ್ನೂ ತನ್ನ ಸದೃಢ, ಆದರೂ ಮಧುರ ಮೋಹಕ ಕಂಠದಿಂದ ಸೆಳೆದು ಕೊಂಡಿರುವಕ ಶ್ರೀಕಂಠನ್‌ರ ವರ್ಣರಂಜಿತ ಯಶೋಗಾಥೆ ಎಂಥವರನ್ನೂ ಬೆರಗುಗೊಳಿಸುವಂಥದ್ದು. ಅಮೆರಿಕೆಯ ಪಿಟ್ಸ್ ಬರ್ಗ್‌‌ನ ವೆಂಕಟೇಶ್ವರ ದೇವಸ್ಥಾನದ ಆಹ್ವಾನದ ಮೇರೆಗೆ ೧೯೧೫ ಮತ್ತು ೮೬೭ರಲ್ಲಿ ವಿದೇಶ ಪ್ರವಾಸ ಮಾಡಿದ ಈ ಗಾಯಕ-ಬೋಧಕ ಶಿಖಾಮಣಿ ಆ ನಾಡಿನ ಉದ್ದಗಲಕ್ಕೂ ಕಚೇರಿಗಳನ್ನು ನೀಡಿದುದೇ ಅಲ್ಲದೆ ಕೆನಡದ ಟೊರೆಂಟೋದಲ್ಲಿನ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಆರು ತಿಂಗಳು ಸಂದರ್ಶಕ ಶಿಕ್ಷಕರಾಗಿದ್ದು ನಮ್ಮ ಸಂಗೀತದ ಹಿರಿಮೆಯನ್ನು ಸ್ಥಾಪಿಸಿ ಬಂದಿದ್ದಾರೆ. ಅಲ್ಲಿಂದೀಚೆಗೆ ಹಲವಾರು ಬಾರಿ ವಿದೇಶಗಳಲ್ಲಿ ಸಂಗೀತ ಪ್ರವಾಸ ಕೈಗೊಂಡಿದ್ದು ಕಳೆದ ೨೦೦೩ರ ಜೂನ್‌ನಲ್ಲಿ ೧೭ ಕಚೇರಿಗಳ ಮಹಾ ಸರಣಿಯಿಂದ ಅಮೆರಿಕೆಯ ಸಂಗೀತ ಸಹೃದಯಿಗಳ ಮನಸೂರೆಗೊಂಡಿದ್ದಾರೆ.

ಇಂಥ ಯಶಸ್ಸಿನ ಹಿನ್ನೆಲೆಯಲ್ಲಿ ಸಹನೆ-ಸಹಕಾರಗಳ ಪ್ರತಿಮೂರ್ತಿಯಾಗಿ, ನಿಷ್ಠುರ ವಿಮರ್ಶಕಿಯಾಗಿ, ನೈತಿಕ ಬೆಂಬಲವಾಗಿ ನಿಂತಿರುವ ನಿರಾಡಂಬರ ವ್ಯಕ್ತಿಯೇ ಅವರ ಧರ್ಮಪತ್ನಿ ಶ್ರೀಮತಿ ಮೈತ್ರೇಯಿ.

ಗುರುಗಳ ಗುರು: ಆಚಾರ್ಯರಾಗಿ ಶ್ರೀಕಂಠನ್‌ರ ಸ್ಥಾನ ಅತ್ಯುನ್ನತವಾದುದು. ಗುರುವಾಗಿ ಅವರನ್ನು ಕಂಡಾಗಲೆಲ್ಲ ನೆನಪಾಗುವ ಕಾಳಿದಾಸನ ಶ್ಲೋಕ-

ಶ್ಲಿಷ್ಟಾ ಕ್ರಿಯಾ ಕಸ್ಯಚಿದಾತ್ಮಸಂಸ್ಥಾ

ಸಂಕ್ರಾಂತಿರನ್ಯಸ್ಯ ವಿಶೇಷಯುಕ್ತಾ|

ಯಸ್ಯೋಭಯಂ ಸಾಧು ಸ ಶಿಕ್ಷಕಾಣಾಂ
ಧುರಿ ಪ್ರತಿಷ್ಠಾಪಯಿತವ್ಯ ಏವ ||

ಕೆಲವರು ಉತ್ಕೃಷ್ಟವಾದ ಕಲಾರೂಪವನ್ನು ಪ್ರದರ್ಶಿಸಬಲ್ಲರು ಮಾತ್ರ. ಮತ್ತೆ ಕೆಲವರು ಇತರರಿಗೆ ಹೇಳಿಕೊಡಲು ಮಾತ್ರ ಸಮರ್ಥರು. ಯಾರಲ್ಲಿ ಈ ಎರಡು ಗುಣಗಳೂ ಸಂಗಮಿಸಿವೆಯೋ ಅವರೇ ಶಿಕ್ಷಕರ ಮುಂಚೂಣಿಯಲ್ಲಿರತಕ್ಕವರು. “ತಿಳಿದು ಪೇ ಳಲಿ ಬೇಕು” ಎಂಬ ಮಾತು ಆರ್.ಕೆ.ಎಸ್‌. ಅಂಥವರಿಂದಲೇ ಹುಟ್ಟಿರಬೇಕು.

ಶಿಕ್ಷಕರಾಗಿ ಅವರ ಶಿಸ್ತು, ಸಮಯಪಾಲನೆ ಸ್ಥಾಣುವಿನಂತೆ ಅಚಲ. ಶಿಷ್ಯಪ್ರೇಮ ಅನ್ಯಾದೃಶ. ಎಲ್ಲದರಲ್ಲೂ ಅತಿರೇಕವೆನಿಸದ ಅಂಶಗಳನ್ನು ಹದಪ್ರಮಾಣದಲ್ಲಿ ಹೊಸೆಯಬಲ್ಲ ಸಮನ್ವಯಾಚಾರ್ಯ.

ರಾಗ-ಕೃತಿಗಳ ಪಾಠಾಂತರ ಶುದ್ಧವಾಗಿರಬೇಕು. ಅದನ್ನು ಕಾಯ್ದುಕೊಳ್ಳಬೇಕು; ನಿರೂಪಣೆಯಲ್ಲಿ ಎಲ್ಲೂ ದುರ್ಬಲತೆ ಇಣುಕಬಾರದು, ಆತ್ಮವಿಶ್ವಾಸ ತುಂಬಿರಬೇಕು; ಉಚ್ಚಾರಣೆ ಸ್ಪಷ್ಟಾತಿ ಸ್ಪಷ್ಟವಾಗಿರಬೇಕು, ಅಕ್ಷರಗಳನ್ನು ಅಗಿಯಬಾರದು; ಕಾಲಪ್ರಮಾಣದಲ್ಲಿ ಏರುಪೇರಾಗುವಂತಿಲ್ಲ, ಸಮತೆ ಸಾಧಿಸಬೇಕು; ಭಾವ ಶೈಥಿಲ್ಯ ಎಲ್ಲೂಕೂಡದು, ತನ್ನನ್ನೇ ಅರ್ಪಿಸಿಕೊಂಡಿರಬೇಕು; ಇದು ಅವರ ಪಾಠದಲ್ಲಿನ ಪಂಚಾಕ್ಷರಿ ಮಂತ್ರ.

ಹಿಂದೆ ರೇಡಿಯೊದಲ್ಲಿ ಸುದೀರ್ಘ ಕಾಲದವರೆಗೂ ಪ್ರಸಾರವಗುತ್ತಿದ್ದ ಅವರ ‘ಗಾನವಿಹಾರ’-ಸಂಗೀತ ಪಾಠ ಕಾರ್ಯಕ್ರಮ ಎಷ್ಟು ಜನಪ್ರಿಯವಾಯಿತೆಂದರೆ ನಾಡಿನ ಎಲ್ಲ ಸಂಗೀತ ವಿದ್ಯಾರ್ಥಿಗಳೂ ಅವರ ಶಿಷ್ಯರೆ. ಆದರೆ ಅವರ ಅಪರೋಕ್ಷ ಶಿಷ್ಯರಾಗುವ ಭಾಗ್ಯಗಳಿಸಿದವರಲ್ಲಿ ಅನೇಕರು ಇಂದಿನ ಪ್ರಸಿದ್ಧ ವಿದ್ವಾಂಸ ವಿದುಷಿಯರಾಗಿದ್ದಾರೆ. ಶ್ರೀ/ಶ್ರೀಮತಿ.ಆರ್.ಎಸ್‌. ರಮಾಕಾಂತ್‌ (ಪುತ್ರ), ರತ್ನಮಾಲಾ ಪ್ರಕಾಶ್‌ (ಪುತ್ರಿ, ಖ್ಯಾತ ಸುಗಮ ಸಂಗೀತ ಗಾಯಕಿ), ಎಂ.ಎಸ್‌.ಶೀಲಾ, ಶಾಂತಾ ನರಸಿಂಹನ್‌, ರಾಜಮ್ಮ ಕೇಶವ ಮೂರ್ತಿ, ಡಾ. ಟಿ.ಎಸ್‌. ಸತ್ಯವತಿ, ವಿದ್ಯಾಭೂಷಣ, ಸುಮಾ ಸುಧೀಂದ್ರ, ಎಸ್‌.ಕೆ.ವಸುಮತಿ, ಹೆಚ್‌.ಕೆ. ನಾರಾಯಣ, ಡಾ. ಸರ್ವಮಂಗಳಾ ಶಂಕರ್ ಮುಂತಾದವರು ಅವರಲ್ಲಿ ಕೆಲವರು.

ರಾಷ್ಟ್ರದ ಹೆಮ್ಮೆಯ ವಿದ್ವಾಂಸನನ್ನು ಪರೋಕ್ಷಾಪರೋಕ್ಷವಾಗಿ ಸಂಮಾನಿಸದ ಸಂಸ್ಥೆಯೂ ಉಂಟೆ? ೧೯೪೭ ರಷ್ಟು ಮೊದಲೇ ಆರಂಭಗೊಂಡ ಪುರಸ್ಕಾರಗಳ ಸರಮಾಲೆ ದೀರ್ಘವಾಗುತ್ತಲೇ ಇದೆ. ‘ಗಾನಭಾಸ್ಕರ’ದಿಂದ ‘ನಾದನಿಧಿ’ಯವರೆಗೆ ಹರಿದು ಬಂದಿರುವ ಪ್ರಶಸ್ತಿವಾಹಿನಿಯನ್ನು ಇತ್ತೀಚೆಗೆ ಜೊತೆಗೂಡಿದ ಉಪನದಿ-೨೬ ಜೂನ್‌ ೨೦೦೦ ರಂದು ಬಾಗಲಕೋಟೆಯಲ್ಲಿ, ಕನ್ನಡ ಸಾಹಿತ್ಯ ಪರಿಷತ್‌ ತನ್ನ ವಾರ್ಷಿಕ ಸಮ್ಮೇಳನದಲ್ಲಿ ಸಲ್ಲಿಸಿದ ಗೌರವ.

 

ಆರ್.ಕೆ.ಎಸ್‌. ಅವರ ಸಾಧನೆಗೆ ಸಂದ ಪ್ರಶಸ್ತಿ-ಸಂಮಾನಗಳು

೧೯೪೭: ಅನ್ನವಸತಿ ಸಂಘದಿಂದ ಗಾನಭಾಸ್ಕರ; ೧೯೭೬: ಗುರುಸೇವಾ ಮಂಡಳಿಯಿಂದ ಗಾನಕಲಾಪ್ರವೀಣ, ೧೯೭೮: ಶ್ರೀ ಪಾರ್ಥಸಾರಥಿ ಸಭಾ ಹಾಗೂ ಸರಸ್ವತಿ ಗಾನ ಸಭಾದಿಂದ ಕರ್ನಾಟಕ ಸಂಗೀತ ರತ್ನ, ೧೯೮೧: ಬೆಂಗಳೂರು ಗಾಯನ ಸಮಾಜದ ೧೩ನೇ ಸಂಗೀತ ಸಮ್ಮೇಳನದಲ್ಲಿ ಅಧ್ಯಕ್ಷತೆ ಸಂಗೀತ ಕಲಾರತ್ನ ಪ್ರಶಸ್ತಿ, ೧೯೮೩: ತಿರುವನಂತಪುರದ ತುಳಸೀವನ ಸಂಗೀತ ಪರಿಷತ್‌ ವತಿಯಿಂದ ಗಾಯಕ ಚೂಡಾಮಣಿ ಹಾಗೂ ಟಿ.ಟಿ.ಕೆ. ಸ್ಮಾರಕ ಪ್ರಶಸ್ತಿ, ೧೯೮೫: ಮೈಸೂರಿನಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಸ್ಮಾರಕ ಪ್ರಶಸ್ತಿ, ೧೯೯೨: ಬೆಂಗಳೂರು ತಾಳವಾದ್ಯ ಕಲಾಕೇಂದ್ರದಿಂಧ ಪಾಲ್ಗಾಟ್‌ ಸುಬ್ರಹ್ಮಣ್ಯ ಪಿಳ್ಳೆ ಪ್ರಶಸ್ತಿ ಹಾಗೂ ಲಯ ಕಲಾ ನಿಪುಣ ಬಿರುದು, ೧೯೯೪: ಅಕಾಡೆಮಿ ಆಫ್‌ ಮ್ಯೂಸಿಕ್‌ ಬೆಂಗಳೂರು, ಇವರಿಂದ ಚೌಡಯ್ಯ ಸ್ಮಾರಕ ರಾಷ್ಟ್ರ ಮಟ್ಟದ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದಿಂಧ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ, ೧೯೯೬: ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯಿಂದ ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿ, ೧೯೯೨: ರಾಜ್ಯಸರಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅತ್ಯುನ್ನತ ಪ್ರಶಸ್ತಿಯಾದ ಕನಕ ಪುರಂದರ ಪ್ರಶಸ್ತಿ, ೧೯೯೯: ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮಿಗಳಿಂದ ನಾದನಿಧಿ ಬಿರುದು ಗೌರವ.

ಇವಲ್ಲದೆ ಸಂಗೀತ ಸುಧಾನಿಧಿ, ಸಂಗೀತ ಕಲಾಸಾಗರ, ಗಾಯಕರತ್ನ, ಲಲಿತ ಕಲಾರತ್ನ ಹಾಗೂ ಶೃಂಗೇರಿ ಶಾರದಾಪೀಠ ಸಂಸ್ಥಾನದ ಆಸ್ಥಾನ ವಿದ್ವಾನ್‌ ಗೌರವ.

ಇವರ ಎಪ್ಪತ್ತೈದನೇ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಕಲಾರಸಿಕರು, ಶಿಷ್ಯವೃಂದ ಹಾಗೂ ಅಭಿಮಾನಿಗಳಿಂದ ಅದ್ದೂರಿ ಸನ್ಮಾನ ಹಾಗೂ ಒಂದು ಲಕ್ಷ ರೂಗಳ ಹಮ್ಮಿಗೆ ಸಮರ್ಪಣೆ, ಪದ್ಮಭೂಷಣ ಡಾ. ಶೆಮ್ಮಂಗುಡಿ ಶ್ರೀನಿವಾಸ್‌ ಅಯ್ಯರ್ ಅವರ ಘನ ಅಧ್ಯಕ್ಷತೆಯಲ್ಲಿ. ಜೊತೆಗೆ ಸಿರಿಕಂಠವೆಂಬ ಅಭಿನಂದನಾ ಗ್ರಂಥದ ಬಿಡುಗಡೆ.

ಶ್ರೀಕಂಠನ್‌ ವಿಚಾರಧಾರೆ: ಸಂಗೀತವು ನಾದೋಪಾಸನೆ, ಸಂಸ್ಕಾರವಿಲ್ಲದೆ ಎಲ್ಲರಿಗೂ ಲಭ್ಯವಾಗುವಂಥದಲ್ಲ.

ಗಳಶುದ್ಧಿ, ವಾಕ್‌ಶುದ್ಧಿಗಳ ಜೊತೆಗೆ ಚಾರಿತ್ಯ್ರ ಶುದ್ಧಿಯೂ ಇರಬೇಕು.

ದೈವದತ್ತವಾದ ಸುಮುಧುರ ಶಾರೀರ ಇಲ್ಲದವರೂ ಉತ್ತಮ ತರಬೇತಿ ಹಾಗೂ ಅಭ್ಯಾಸದಿಂದ ಗಾಯನಕ್ಕೆ ಒದಗುವಂತೆ ರೂಢಿಸಿಕೊಳ್ಳಬಹುದು. ಯೋಗ, ಪ್ರಾಣಾಯಾಮಗಳ ಪಾತ್ರವು ಈ ದಿಕ್ಕಿನಲ್ಲಿ ಹಿರಿದು.

ಸಂಪ್ರದಾಯದ ಚೌಕಟ್ಟನ್ನು ತೊರೆಯದೆ ಸೃಷ್ಟ್ಯಾತ್ಮಕವಾಗಿರುವುದೇ ನಿಜವಾದ ಸಂಗೀತ.

ಅನುಕರಣೆ ಎಂದರೆ ಅಂಧಾನುಕರಣೆಯಲ್ಲ, ಹಾಗೆಯೇ ಸ್ವಂತಿಕೆಯೆಂದರೆ ಸ್ವಚ್ಛಂದತೆಯೂ ಅಲ್ಲ.

ಸಂಗೀತ ಶಿಕ್ಷಕನಾದವನು ಲಕ್ಷ್ಯ-ಲಕ್ಷಣಗಳೆರಡರಲ್ಲೂ ಪರಿಣತನಾಗಿರಬೇಕು.

ಕಚೇರಿಗೆ ಮುನ್ನ ಪೂರ್ಣ ಪ್ರಮಾಣದ ಪೂರ್ವಸಿದ್ಧತೆ ಇರಬೇಕು. ಆದರೆ ಅಗತ್ಯ ಬಿದ್ದಲ್ಲಿ ತತ್ಕಾಲಕ್ಕೆ ಉಚಿತವಾದ ಬದಲಾವಣೆಗಳನ್ನು ಮಾಡಿಕೊಳ್ಳುವ ಸಾಮರ್ಥ್ಯವೂ ಬೇಕು.

ಪ್ರಚಾರ-ಪ್ರಸಿದ್ಧಿಗಳ ಬೆಂಬತ್ತಿ ಅಪರಿಪಕ್ವ ವಿದ್ಯೆಯ ವಿದ್ಯಾರ್ಥಿಗಳನ್ನು ವೇದಿಕೆಯೇರಿಸಬಾರದು. ಪೋಷಕರು, ಗುರುಗಳು ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

ಸಂಗೀತದ ಎಲ್ಲ ಮಗ್ಗಲುಗಳ ಪೂರ್ಣಪರಿಚಯವಿದ್ದು, ಯಾವ ಪೂರ್ವಾಗ್ರಹಗಳಿಲ್ಲದೆ ಸೂಕ್ಷ್ಮವಾಗಿ ವ್ಯಾಖ್ಯಾನಿಸಬಲ್ಲವನೇ ನಿಜವಾದ ವಿಮರ್ಶಕ.

ಕಳೆದ ಜನವರಿ ಹದಿನಾಲ್ಕರಂದು ಎಂಬತ್ತನಾಲ್ಕು ವಸಂತಗಳನ್ನು ದಾಟಿ ಎಂಬತ್ತೈದಕ್ಕೆ ಪದಾರ್ಪಣ ಮಾಡಿರುವ ಈ ಮಹಾನ್‌ ಕಲಾತಪಸ್ವಿಯ ಇಂಥ ಅಪರಿಮಿತ ಸಾಧನೆಯನ್ನೂ ಅವಗಣಿಸಿರುವ ಕೇಂದ್ರಸರ್ಕಾರದ (ಪದ್ಮ ಪ್ರಶಸ್ತಿಗಳಲ್ಲೇ ಅತ್ಯುನ್ನತ ಪ್ರಶಸ್ತಿಗೆ ಅರ್ಹವಾಗಿದ್ದರೂ ನೀಡಿಲ್ಲದಿರುವುದನ್ನು ಸ್ಮರಿಸಬೇಕು) ಕಣ್ತೆರೆಯುವ ಕಾಲವೆಂದೋ?