ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅತಿ ಉನ್ನತ ಸ್ಥಾನ ಪಡೆದಿರುವ ಗಾಯಕ ಆರ್. ಕೆ. ಶ್ರೀಕಂಠನ್‌ ಜನಿಸಿದ್ದು. ೧೯೨೦ರಲ್ಲಿ ಸಂಗೀತಕ್ಕೆ, ಸಾಹಿತ್ಯಕ್ಕೆ ನೆಲೆಯಾದ ರುದ್ರ ಪಟ್ಟಣದ ಶ್ರೀ ಕೃಷ್ಣಶಾಸ್ತ್ರಿಗಳ ಪುತ್ರರಾಗಿ. ಎಳೆತನದಿಂದಲೂ ಮನೆಯಲ್ಲಿಯ ಸಂಗೀತಮಯ ವಾತಾವರಣ ಮನೆಗೆ ಆಗಮಿಸುತ್ತಿದ್ದ ವಿದ್ವನ್ಮಣಿಗಳು ಆಲಿಸಿದ ಅಸಂಖ್ಯಾ ಸಂಗೀತ ಕಛೇರಿಗಳು ಶ್ರೀಕಂಠನ್‌ ಅವರ ಮೇಲೆ ಬೀರಿದ ಪ್ರಭಾವ ಅಸೀಮ. ತಂದೆ ಹಾಗೂ ಸೋದರರ ಮಾರ್ಗದರ್ಶನದಿಂದ ಆರಂಭವಾಗಿ ಸತತವಾಗಿ ಸಾಧನೆ, ಆಳವಾದ ಚಿಂತನೆ, ಬತ್ತದ ಜ್ಞಾನಾರ್ಜನೆಯ ದಾಹ ಇವರನ್ನು ಉತ್ತಮೋತ್ತಮ ಗಾಯಕರಾಗಿ ರೂಪತಾಳಲು ಸಾಧನವಾದ ಅಂಶಗಳು.

ಸಂಗೀತ ಶಿಕ್ಷಕರಾಗಿ ಮೈಸೂರು ಆಕಾಶವಾಣಿ ಸೇರಿದ ಶ್ರೀಯುತರು ತಮ್ಮ ಕಾರ್ಯಕ್ಷೇತ್ರವನ್ನು ಆಕಾಶವಾಣಿಯೊಡನೆಯೇ ಬೆಂಗಳೂರಿಗೆ ಸ್ಥಳಾಂತರಿಸಿದರು. ಇವರ ‘ಸಂಗೀತ ಶಿಕ್ಷಣ’ದ ಮೂಲಕ ಕೃತ ಕೃತ್ಯರಾದವರೆಷ್ಟೊ! ದೇಶ ವಿದೇಶಗಳಲ್ಲಿ ಕಛೇರಿಗಳ ಸರಮಾಲಿಕೆಗಳನ್ನೇ ನೀಡಿರುವ ಶ್ರೀಯುತರು ಸ್ಪಷ್ಟೋಚ್ಚಾರಣೆಗೆ, ಸ್ವರ ಶುದ್ಧತೆಗೆ. ಲಯಬದ್ಧತೆಗೆ, ಶ್ರುತಿ ಸೌಖ್ಯಕ್ಕೆ ಸಾಹಿತ್ಯ ಶುದ್ಧಿಗೆ – ಒಟ್ಟಾರೆ ಸಂಗೀತದ ಔನ್ನತ್ಯಕ್ಕೇ ಮಾದರಿಯಾಗಿರುವವರು. ಗುರುವಾಗಿ ಅವರು ಕ್ಷೇತ್ರಕ್ಕೆ ನೀಡಿರುವ ವಿದ್ವಾಂಸ ವಿದುಷಿಯರು ಅಸಂಖ್ಯಾತರು.

ಹಾಗೆಯೇ ಅವರನ್ನು ಅರಸಿ ಬಂದ ಗೌರವ ಪ್ರಶಸ್ತಿಗಳೂ ಲೆಕ್ಕವಿಲ್ಲದಷ್ಟು ಗಾನಭಾಸ್ಕರ, ಕರ್ನಾಟಕ ಸಂಗೀತ ರತ್ನ ಸಂಗೀತ ಕಲಾರತ್ನ, ಗಾಯಕ ಚೂಡಾಮಣಿ, ಟಿ.ಟಿ.ಕೆ. ಸ್ಮಾರಕ ಪ್ರಶಸ್ತಿ, ಶ್ರೀ ಜಯಚಾಮರಾಜ ಒಡೆಯರ್ ಸ್ಮಾರಕ ಪ್ರಶಸ್ತಿ ‘ಪಾಲ್ಘಾಟ್‌ ಸುಬ್ರಹ್ಮಣ್ಯ ಪಿಳ್ಳೆ ಪ್ರಶಸ್ತಿ’, ‘ಲಯ ಕಲಾ ನಿಪುಣ’ ಗಾಂಧರ್ವ ವಿದ್ಯಾನಿಧಿ, ಮದ್ರಾಸ್‌ ಮ್ಯೂಸಿಕ್‌ಅಕಾಡೆಮಿಯ ಸಂಗೀತ ಕಲಾನಿಧಿ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ವಿದ್ವಾನ್‌ ಸನ್ಮಾನ, ರಾಜ್ಯ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಗಳ ಪ್ರಶಸ್ತಿ, ಕನಕ-ಪುರಂದರ ಪ್ರಶಸ್ತಿ, ನಾದನಿಧಿ ಸಂಗೀತ ಕಲಾಸಾಗರ ಗಾಯಕರತ್ನ ಇತ್ಯಾದಿ ಬಿರುದುಗಳು ಮತ್ತು ಇವೆಲ್ಲಕ್ಕೂ ಕಲಶವಿಟ್ಟಂತೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪದವಿ – ಶ್ರೀಕಂಠನ್‌ ಅವರ ಪ್ರೌಢಿಮೆಗೆ ವಿದ್ವತ್ತಿಗೆ ಸಂದಿರುವ ಹಲವು ಗೌರವಗಳು. (೧೯೭೯-೮೦)