ಸಂಗೀತಕ್ಕೆ ಹೆಸರು ವಾಸಿಯಾಗಿದ್ದ ಮನೆತನದಲ್ಲಿ ಸುಪ್ರಸಿದ್ಧ ವೈಣಿಕ ಆಸ್ಥಾನ ವಿದ್ವಾನ್‌ ಆರ್.ಎಸ್‌. ಕೇಶವವಮೂರ್ತಿಯವರ ಸುಪುತ್ರರಾಗಿ ೧೯೩೭ರಲ್ಲಿ ಜನಿಸಿದ ಸೂರ್ಯನಾರಾಯಣರವರು ತಂದೆಯವರ ಶಿಕ್ಷಣದಲ್ಲಿ ಉತ್ತಮ ವೈಣಿಕರಾಗಿ ೧೯೪೪ರಲ್ಲಿ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಸನ್ನಿಧಾನದಲ್ಲಿ ಮೊಟ್ಟಮೊದಲ ಕಛೇರಿ ನುಡಿಸಿದರು. ಏಳು ವರ್ಷ ವಯಸ್ಸಿನಲ್ಲಿಯೇ ಮೂಡಿದ ಈ ಬಾಲಕನ ಅಸಾಧಾರಣ ಪ್ರತಿಭೆ ಮುಂದೆ ಸರಿದಂತೆ ಅರಳುತ್ತ ವೃದ್ಧಿಯಾಗುತ್ತ ನಡೆಯಿತು.

ನೂತನ ಪ್ರಯೋಗಾತ್ಮಕ ದೃಷ್ಟಿ ಹೊಂದಿದ್ದ ಸೂರ್ಯನಾರಾಯಣರವರು ೨೪ ತಂತಿಗಳುಳ್ಳ ವೀಣೆಯನ್ನು ಆವಿಷ್ಕರಿಸಿ, ದೇಶ-ವಿದೇಶಗಳಲ್ಲಿ ಅದರ ನಾದದ ತುಂಬು ತನವನ್ನು ಪ್ರಸರಿಸಿದ್ದರು. ರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲಿ ಆಕಾಶವಾಣಿ-ದೂರದರ್ಶನ ಕಾರ್ಯಕ್ರಮಗಳನ್ನು ದೇಶದ ಎಲ್ಲಾ ಪ್ರತಿಷ್ಠಿತ ಸಂಘ-ಸಭೆ-ಸಂಸ್ಥೆಗಳಲ್ಲಿ ಇವರ ವೀಣಾವಾದನ ಝೇಂಕರಿಸಿದೆ. ವಿದೇಶಗಳಿಗೆ ಹಲವಾರು ಬಾರಿ ಪ್ರವಾಸ ಮಾಡಿದ್ದ ಶ್ರೀಯುತರು ರಾಜ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಕಿರಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷವೂ ರಾಜ್ಯ ಸಂಗೀತ-ನೃತ್ಯ-ತಾಳವಾದ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ  ವಿಜೇತರಿಗೆ ಪ್ರಶಸ್ತಿ ಪತ್ರವಿತ್ತು ಸನ್ಮಾನಿಸುತ್ತಿದ್ದರು.

೧೯೮೮-೮೯ನೇ ಸಾಲಿನ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿಗೂ’ ರಾಜ್ಯೋತ್ಸವ ಪ್ರಶಸ್ತಿಗೂ’ ಭಾಜನರಾದ ಶ್ರೀಯುತರು ಅಪಾರ ಶಿಷ್ಯ ವೃಂದವನ್ನು ಕ್ಷೇತ್ರಕ್ಕಿತ್ತು ೨೦೦೩ ಡಿಸೆಂಬರ್ ನಲ್ಲಿ ನಾದದೇವಿಯ ದೇಗುಲದ ದೀಪವಾಗಲು ತೆರಳಿದರು.

ಮೇಳ ರಾಗಮಾಲಿಕೆಯೂ ಸೇರಿದಂತೆ ಹಲವಾರು ಕೃತಿ ವರ್ಣ ಮುಂತಾದ ರಚನೆಗಳನ್ನು ಸೂರ್ಯನಾರಾಯಣರವರು ಕ್ಷೇತ್ರಕ್ಕೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು.