ಕೀರ್ತನ ಕಲಾಕ್ಷೇತ್ರದಲ್ಲಿ ದಿ.ಆರ್. ಗುರುರಾಜುಲು ನಾಯ್ಡುರವರ ಹೆಸರು ಚಿರಸ್ಥಾಯಿಯಾಗಿ ನಿಲ್ಲುವಂಥಾದ್ದು. ಕೀರ್ತನ ಕಲೆ ಅಧೋಗತಿಯತ್ತ ಸಾಗುತ್ತಿದ್ದಾಗ ಅದಕ್ಕೊಂದು ಸ್ವರೂಪ ನೀಡಿ, ಅದನ್ನು ಜನರಂಜನಾ ಮಾಧ್ಯಮವನ್ನಾಗಿ ಪರಿವರ್ತಿಸಿಕ ಒಂದು ವಿನೂತನ ವೇದಿಕೆ ಕಲ್ಪಿಸಿದ ಶಿಲ್ಪಿ ನಾಯ್ಡುರವರು. ಇದಕ್ಕೆ ಕಾರಣವಿಲ್ಲದಿಲ್ಲ. ಒಂದು ಕಾಲದಲ್ಲಿ ರಂಗಭೂಮಿ ಅಥವಾ ನಾಟಕ ಕಲಾಕ್ಷೇತ್ರ ತನ್ನದೇ ಆದ ಛಾಪು ಹಾಕುತ್ತಾ ಸಂಗೀತ-ಅಭಿನಯ-ಇತಿಹಾಸಗಳ ಸಂಗಮವಾಗಿ ಮೆರೆದಿತ್ತು. ಕ್ರಮೇಣ ಚಲನಚಿತ್ರರಂಗ ಹೆಚ್ಚು ಜನಪ್ರಿಯವಾಗತೊಡಗಿದಾಗ ನಾಟಕದ ಕಡೆ ಜನರ ಆಸಕ್ತಿ ಕುಂಠಿತವಾಗತೊಡಗಿತು. ನಾಟಕದ ನಾಯಕ ಪಾತ್ರಧಾರಿಗಳು ಅಂದರೆ ರಾಜಾಪಾರ್ಟು ಮಾಡುತ್ತಿದ್ದ ಕಲಾವಿದರಿಗೂ ಸಿನಿಮಾ ಗೀಳು ಹತ್ತಿ ಕೆಲವರು ನಟವರ್ಗದಲ್ಲಿದ್ದರೆ ಕೆಲವರು ತಾವೇ ಚಿತ್ರ ನಿರ್ಮಿಸುವ ಸಾಹಸಕ್ಕೂ ಕೈಹಾಕಿದರು-ಕೈಸುಟ್ಟುಕೊಂಡರು. ಉಳಿದ ನಟವರ್ಗದವರು ನಾಟಕದಲ್ಲೂ ಸ್ಥಳವಿಲ್ಲದೆ, ಸಿನಿಮಾಗಳಲ್ಲೂ ಅವಕಾಶ ವಂಚಿತರಾಗಿ ಉದರತಂಭರಣಕ್ಕಾಗಿ ತಮ್ಮಲ್ಲಿದ್ದ ಸಂಗೀತ-ಅಭಿನಯದ ಕೌಶಲ್ಯತೆಯನ್ನೂ ಉಪಯೋಗಿಸಿಕೊಂಡು ಹರಿಕಥಾ ಕ್ಷೇತ್ರಕ್ಕೆ ಪದಾರ್ಪಣ ಮಾಡಿದರು. ಇದಕ್ಕೂ ಮುಂಚೆ ಹರಿಕಥಾ ಕಲೆ ಕೇವಲ ಜನರಂಜನೆಯಾಗಿರದೆ ಸಮಾಜ ಸುಧಾರಣಾ ಪ್ರೇರಕ ಶಕ್ತಿಯಾಗಿತ್ತು. ಭಕ್ತಿಮಾರ್ಗಕ್ಕೆ ಸೋಪಾನವಾಗಿತ್ತು. ಆದರೆ ಈ ನಾಟಕೀಯದ ಪ್ರವೇಶದಿಂದಾಗಿ ಹರಿಕಥಾ ಕಲೆ ಅಭಿವೃದ್ಧಿ ಕಾಣದೆ ಪ್ರೋತ್ಸಾಹ ಇಳಿಮುಖವಾಯಿತು. ಇಂಥಾ ಸನ್ನಿವೇಶದಲ್ಲಿ ಕೀರ್ತನದ ಕಲೆ ಕೇವಲ ಜನರಂಜನೀಯವಲ್ಲ. ಸಮಾಜದ ಓರೆಕೋರೆಗಳನ್ನು ತಿದ್ದಿ ಸುಧಾರಣಾ ಮಾರ್ಗಕ್ಕೆ ಇದು ಮುಖ್ಯಸೋಪಾನ-ಭಕ್ತಿ ಪಂಥದ ಮೂಲಸ್ವರೂಪ ಎಂದು ತೋರಿಸಿಕೊಟ್ಟವರು ಗುರುರಾಜುಲು ನಾಯ್ಡುರವರು. ಇವರಿಗೂ ನಾಟಕ-ಸಿನಿಮಾರಂಗದ ಗೀಳು ಇದ್ದರೂ ಹರಿಕಥೆಗೆ ಹೆಚ್ಚಾಗಿ ಅಂಟಿಕೊಂಡವರು.  ಇದಕ್ಕೆ ಇವರಿಗೆ ಸ್ಪೂರ್ತಿ ಅವರ ತಂದೆಯವರಾದ ರಾಮಸ್ವಾಮಿ ನಾಯ್ಡುರವರು.

ಜನನ-ಬಾಲ್ಯ: ಗುರುರಾಜುಲು ನಾಯ್ಡುರವರು ಹುಟ್ಟಿದ್ದು ೧೯೩೪ರಲ್ಲಿ ಮೈಸೂರಿನಲ್ಲಿ. ತಂದೆ ರಾಮಸ್ವಾಮಿನಾಯ್ಡುರವರು ಆಗ್ಗೆ ಮೈಸೂರಿನ ಪ್ರಾಥಮಿಕ ಶಾಲೆಯೊಂದರ ಅಧ್ಯಾಪಕರಾಗಿದ್ದರು. ಜೊತೆಗೆ ಅನುವಂಶೀಯವಾಗಿ ಬಂದ ಹರಿಕಥಾ ಕಲೆಯನ್ನು ರೂಢಿಸಿಕೊಂಡು ಮೈಸೂರಿನ ಕೆಲವೇ ಪ್ರಮುಖ ಹರಿಕಥಾ ವಿದ್ವಾಂಸರಲ್ಲೊಬ್ಬರಾಗಿದ್ದವರು. ಗಾನವಿಶಾರದ ಡಾ. ಬಿ. ದೇವೇಂದ್ರಪ್ಪನವರ ಸಮಕಾಲೀನರು, ಆತ್ಮೀಯ ಗೆಳೆಯರು. ಹೀಗಾಗಿ ಮಗ ಗುರುರಾಜನನ್ನು ಅವರ ಶಿಷ್ಯ  ಎಂ.ಎನ್‌. ಗೋವಿಂದಸ್ವಾಮಿ ಅವರ ಬಳಿ ಸಂಗೀತ ಕಲಿಯಲು ಏರ್ಪಾಡು ಮಾಡಿದರು. ಅತ್ಯಂತ ಎಳೆಯ ವಯಸ್ಸಿನಲ್ಲೇ ಅತಿ ಹಿರಿಯ ವಿದ್ವಾಂಸರಿಂದ ಸಂಗೀತ ಕಲಿಯುವ ಸುಯೋಗ ಬಾಲಕ ಗುರುರಾಜನಿಗೆ. ಜೊತೆಗೆ ತಂದೆಯಿಂದ ಹರಿಕಥಾ ಶಿಕ್ಷಣ. ಈ ಇಬ್ಬರ ಕಠಿಣ ಶಿಕ್ಷಣದ ಪರಿಣಾಮವಾಗಿ ಗುರುರಾಜ ತನ್ನ ಐದನೆಯ ವಯಸ್ಸಿಗೇ ಹರಿಕಥೆ ಮಾಡುವ ಸಾಮರ್ಥ್ಯಪಡೆದು ‘ಬಾಲಹರಿದಾಸ’ ನೆನೆಸಿದ. ತಂದೆ ರಾಮಸ್ವಾಮಿ ನಾಯ್ಡುರವರ ಕಥಾ-ಕೀರ್ತನ ಕಾರ್ಯಕ್ರಮದಲ್ಲೆಲ್ಲ ಅವರ ಜೊತೆ ಪಾಲ್ಗೊಳ್ಳುತ್ತಿದ್ದು ಅವರ ಅನಾರೋಗ್ಯದ ಸಂದರ್ಭದಲ್ಲಿ ತಾನೇ ಸ್ವತಂತ್ರವಾಗಿ ಕಥೆ ನೀಡುತ್ತಿದ್ದ. ಹೀಗಾಗಿ ಲೌಕಿಕ ವಿದ್ಯಾಭ್ಯಾಸ ಕುಂಠಿತವಾಗಿ ಮಾಧ್ಯಮಿಕ (ಎಲ್‌.ಎಸ್‌.) ಶಾಲಾ ಶಿಕ್ಷಣಕ್ಕೇ ಸೀಮಿತವಾಯಿತು.

ಬೆಂಗಳೂರಿಗೆ ಆಗಮನ: ತಂದೆಯವರ ನಿಧನಾನಂತರ ಮೈಸೂರಿನಿಂದ ಬೆಂಗಳೂರಿಗೆ ಬಂದ ಗುರುರಾಜನಿಗೆ ಭಾರತೀಯ ವಿಮಾನ ಕಾರ್ಖಾನೆಯಲ್ಲಿ ನೌಕರಿ ದೊರೆತು, ಅಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಅವಕಾಶ ದೊರೆತಾಗಲೆಲ್ಲ ಹರಿಕಥಾಕ ಕಾರ್ಯಕ್ರಮವನ್ನೂ ನೀಡುತ್ತಿದ್ದ. ಒಳ್ಳೆಯ ಕಂಠಶ್ರೀ, ಮಧುರವಾದ ಲಯಬದ್ಧಗಾಯನ, ಅಭಿನಯದ ಪ್ರಾವೀಣ್ಯತೆಯನ್ನು ಕಂಡುಕೊಂಡ ವಿಮಾನಕಾರ್ಖಾನೆಯ ಲಲಿತ ಕಲಾಸಂಘದವರು ತಮ್ಮ ನಾಟಕವೊಂದರಲ್ಲಿ ಗುರುರಾಜುಲು ನಾಯ್ಡುವಿಗೆ ಸ್ವಾಮಿ ವಿವೇಕಾನಂದರ ಪಾತ್ರ ನೀಡಿದಾಗ ಅದನ್ನು ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿದರಂತೆ. ಆ ನಾಟಕಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದವರು ನಾಟಕ-ಚಲನಚಿತ್ರರಂಗದ ಹಿರಿಯ ನಟರಾಗಿದ್ದ ಸುಬ್ಬಯ್ಯನಾಯ್ಡುರವರು. ಈ ಹೊತ್ತಿಗಾಗಲೇ ನಾಟಕ-ಚಿತ್ರರಂಗದ ಅಶ್ವಿನೀ ದೇವತೆಗಳಂತಿದ್ದರು. ಸುಬ್ಬಯ್ಯನಾಯ್ಡು ಹಾಗೂ ಆರ್.ನಾಗೇಂದ್ರರಾಯರು. ಚಿತ್ರರಂಗದಲ್ಲೂ ಇವರ ಜೋಡಿ ಅತ್ಯಂತ ಜನಪ್ರಿಯವಾಗಿತ್ತು. ವಸಂತಸೇನಾದ ಚಾರುದತ್ತ-ಶಕಾರ; ಹರಿಶ್ಚಂದ್ರ-ವಿಶ್ವಾಮಿತ್ರ, ಮನೆಮಾತಾಗಿದ್ದಂಥ ಕಾಲ.

ಆಗ ಸುಬ್ಬಯ್ಯನಾಯ್ಡುರವರು ತಮ್ಮದೇ ಆದ ಸ್ವಂತ ನಾಟಕ ಕಂಪೆನಿ ನಡೆಸುತ್ತಿದ್ದರು. ನಾಗೇಂದ್ರರಾಯರು ‘ಆರೆನ್ನಾರ್’ ಲಾಂಛನದಲ್ಲಿ ಚಲನಚಿತ್ರ ತಯಾರಿಕೆಯ ಉದ್ಯಮಕ್ಕೆ ತೊಡಗಿದ್ದರು.  ಅಂದು ನಾಟಕಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಸುಬ್ಬಯ್ಯನಾಯ್ಡುರವರಿಗೆ ಗುರುರಾಜುಲು ನಾಯ್ಡುರವರ ವಿವೇಕಾನಂದರ ಪಾತ್ರ ನಿರ್ವಹಣೆ ಬಹು ಮೆಚ್ಚುಗೆಯಾಗಿ ಆತನನ್ನು ತಮ್ಮ ಕಂಪೆನಿಗೆ ಸೇರುವಂತೆ ಆಹ್ವಾನ ನೀಡಿದರೆಂತೆ. ಸರಿ ಅಭಿನಯ-ಸಂಗೀತ-ಹರಿಕಥೆಗಳನ್ನೇ ಮೈಗೂಡಿಸಿಕೊಂಡಿದ್ದ ಗುರುರಾಜುಲುನಾಯ್ಡು ಈ ತಾಬೇದಾರಿ ಕೆಲಸಕ್ಕೆ  ವಿದಾಯ ಹೇಳಿ ನಾಯ್ಡುರವರ ಕಂಪೆನಿ ಸೇರಿದರು. ಅಭಿನಯ-ನಟನಾ ಕಲೆಯಲ್ಲಿ ನಿಷ್ಣಾತರಾದರು. ತಮ್ಮ ಕಂಠಶ್ರೀಗೆ ತಕ್ಕಂತೆ ಹೆಚ್ಚಆಗಿ ವೀರರಸ ಪಾತ್ರಗಳನ್ನೇ ಆಯ್ಕೆಮಾಡಿಕೊಳ್ಳುತ್ತಿದ್ದರು. ಸುಬ್ಬಯ್ಯ ನಾಯ್ಡುರವರೂ ಈತನಿಗೆ ವಿಶೇಷ ಶಿಕ್ಷಣ ನೀಡಿ ಈತ ಮುಂದೆ ತಮ್ಮ ಉತ್ತರಾಧಿಕಾರಿಯಾಗಿ ತಮ್ಮ ಹೆಸರನ್ನುಳಿಸುತ್ತಾನೆ ಎಂಬ ಕನಸು ಕಂಡರು. ಆಗ ಇವರು ಅಭಿನಯಿಸುತ್ತಿದ್ದ ಎಚ್ಚಮನಾಯಕ ನಾಟಕದ ಚಾಂದ್ಖಾನ್ ಪಾತ್ರ ಭೂಕೈಲಾಸದ ರಾವಣನ ಪಾತ್ರ ಆ ಕಾಲಕ್ಕೆ ಮನೆಮಾತಾಗಿತ್ತು. ಇಷ್ಟಾದರೂ ಪಾರಂಪರ್ಯವಾಗಿ ಬಂದ ಹರಿಕಥಾಕಲೆಯನ್ನು  ಉಪೇಕ್ಷೆ ಮಾಡಲಿಲ್ಲ. ಅವಕಾಶ ದೊರೆತಾಗಲೆಲ್ಲ ಅದನ್ನು ನಡೆಸುತ್ತಾ ಬಂದರು . ಮುಂದೆ ಸುಬ್ಬಯ್ಯನಾಯ್ಡುರವರ ನಿಧನಾನಂತರ ನಾಟಕ ಕಂಪೆನಿ ಮುಚ್ಚಿ ಇವರಿಗೆ ಹರಿಕಥಾಕಲೆಯೇ ಮುಖ್ಯ  ಉದ್ಯಮವಾಯಿತು.

ಚಿತ್ರರಂಗಕ್ಕೆ: ನಾಟಕರತ್ನ ಆರ್.ನಾಗೇಂದ್ರರಾಯರು ತಮ್ಮ ‘ಆರೆನ್ನಾರ್’ ಲಾಂಛನದಲ್ಲಿ ಅನೇಕ ಚಿತ್ರ ತಯಾರಿಸಿದ್ದರು. ಜಾತಕಫಲ, ಪ್ರೇಮದ ಪುತ್ರಿ, ವಿಜಯನಗರದ ವೀರಪುತ್ರ ಮೊದಲಾದ ಚಿತ್ರಗಳು ಜನಪ್ರಿಯವಾಗಿದ್ದುವು. ನಟರಿಗಾಗಿ ಹೊಸಶೋಧವನ್ನೂ ಆರಂಭಿಸಿದ್ದರು. ರಾಯರು ಸುಬ್ಬಯ್ಯನಾಯ್ಡುರವರ ನಿಕಟವರ್ತಿಗಳು. ಹುಡುಗನ ಅಭಿನಯಕ್ಕೆ ಸೋತರು. ಅದರಲ್ಲೂ ಭೂಕೈಲಾಸದ ರಾವಣ ಪಾತ್ರ ಅವರಿಗೆ ತುಂಬಾ ಹಿಡಿಸಿತು. ಆತನ ಅಭಿನಯ-ಮಾತುಗಾರಿಕೆ, ಹಾಡುಗಳ ಮೋಡಿಗೆ ಸಿಲುಕಿ ಆನಂದಬಾಷ್ಪ ಸುರಿಸಿದರು. ಸುಬ್ಬಯ್ಯನಾಯ್ಡುರವರ ಬೆನ್ನುತಟ್ಟಿದರು. ಈ ನಟನನ್ನು ತಮಗೆ ಕೊಡುವಂತೆ ಬೇಡಿದರು. ರಾಯರು ಮುಂದೆ ತೆಗೆಯಬೇಕಾದ ಆನಂದಬಾಷ್ಪ ಚಲನಚಿತ್ರದ ಮೂವರ ನಾಯಕರುಗಳ ಪೈಕಿ ಒಬ್ಬ ನಾಯಕನ ಪಾತ್ರಕ್ಕೆ ಗುರುರಾಜುಲುನಾಯ್ಡು ಆಯ್ಕೆಯಾದರು. ರಾಯರೇ ಇವರಿಗೆ ಅರುಣ್ಕುಮಾರ್ ಎಂದು ನಾಮಕರಣ ಮಾಡಿದರು. ಆದರೆ ಆ ಚಿತ್ರ ಸಂಪಾದನೆಯ ದೃಷ್ಟಿಯಿಂದ ವಿಫಲವಾದರೂ ತನ್ನ ಅಭಿನಯದಿಂದ ಅರುಣ್‌ಕುಮಾರ್ ಚಿತ್ರರಂಗದಲ್ಲಿ ಹೆಸರುಮಾಡಲು ಅವಕಾಶ ಕಲ್ಪಿಸಿತು. ನಾಗೇಂದ್ರರಾಯರ ಸಂಸ್ಥೆಯೇ ಅಲ್ಲದೆ ಬೇರೆ ಬೇರೆ ಚಿತ್ರ ತಯಾರಕರಿಂದಲೂ ಇವರಿಗೆ ಕರೆ ಬರಲು ಆರಂಭವಾಯಿತು. ನಕ್ಕರೆ ಅದೇ ಸ್ವರ್ಗ, ಮಿಸ್ ಲೀಲಾವತಿ, ಹಣ್ಣೆಲೆ ಚಿಗುರಿದಾಗ, ಮುಂತಾದ ಚಿತ್ರಗಳಲ್ಲಿನಿವರ ಅಭಿನಯ ಮನೆಮಾತಾಗಿ ‘ಅರುಣ್‌ ಕುಮಾರ್’ ಹೆಸರು ನಿಂತು ‘ಗುರುರಾಜುಲು ನಾಯ್ಡು’ ಹೆಸರು ಮರೆಯುವಂತಾಯ್ತು. ಆದರೆ ಧೃತಿಗೆಡದ ನಾಯ್ಡುರವರು ಮತ್ತೆ ಗುರುರಾಜುಲುನಾಯ್ಡುವಾಗಿ ಕೀರ್ತನ ರಂಗಕ್ಕೆ ಮರುಪ್ರವೇಶ ಮಾಡಿದರು. ಅದನ್ನೇ ತಮ್ಮ ಉಸಿರಾಗಿಸಿಕೊಂಡರು. ನಾಟಕ -ಸಿನಿಮಾ ಎರಡೂ ಮಾಧ್ಯಮದ ಮಸಾಲೆಗಳನ್ನು ಹರಿಕಥೆಯಲ್ಲಿ ಸೇರಿಸಿ ತಮ್ಮ ಉಚ್ಛಕಂಠಶ್ರೀ-ವಾಕ್ಚಾತುರ್ಯಗಳ ಮೂಲಕ-ವಿಡಂಬನಾತ್ಮಕ ಉಪಕಥೆಗಳ ಮೂಲಕ ಈ ಕಲೆ ಜನರಂಜನೀಯವಾಗಿ ಪರಿವರ್ತಿಸುವಲ್ಲಿ ಸಫಲರಾದರು. ಚಿತ್ರರಂಗದ ಬೇಡಿಕೆ ಕುಂಠಿತವಾಯಿತು, ಹರಿಕಥಾ ಕ್ಷೇತ್ರದ ಬೇಡಿಕೆಕ ಹೆಚ್ಚಾಯಿತು.

ರಾಮೋತ್ಸವ, ಗಣೇಶೋತ್ಸವ, ಅಣ್ಣಮ್ಮದೇವೀ ಉತ್ಸವಗಳಲ್ಲಿ ಇವರ ಹರಿಕಥೆಯಿಲ್ಲದೆ ಕಾರ್ಯಕ್ರಮವೇಕ ನಡೆಯುತ್ತಿರಲಿಲ್ಲ. ನಾಯ್ಡುರವರದ್ದು ಒಳ್ಳೆಯ ದಷ್ಟಪುಷ್ಟ ವ್ಯಕ್ತಿತ್ವ. ಅದೇ ಅವರ ವಿವೇಕಾನಂದರ ಪಾತ್ರದ ಆಯ್ಕೆಗೆ ಕಾರಣ. ಅಂದಿನಿಂದ ಹರಿಕಥೆಗೂ ಅದೇ ರೀತಿಯ ಪೋಷಾಕು. ಶುಭ್ರವಾದ ಬಿಳಿ ಕಚ್ಚೆಪಂಚೆ, ಜುಬ್ಬ. ಸೊಂಟಕ್ಕೊಂದು ಕಾವಿ ಉತ್ತರೀಯ ಬಿಗಿದು ಶಿರಸ್ಸ್ ಲ್ಲಿ ಭೂಷಣವಾಗಿ ಕಾವಿ ಬಣ್ಣದ ಕೋರೆ ಪೇಟವನ್ನು ಧರಿಸಿ ನಿಂತ ಇವರನ್ನು ದೂರದಿಂದ ನೋಡಿದರೆ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವೇ! ಅದೇ ರೀತಿಯ ಸಿಂಹವಾಣಿ ಇವರ ಕಂಠಶ್ರೀಯಿಂದ ಹೊರಹೊಮ್ಮಿ ಜನರಲ್ಲಿ ಪ್ರತಿಧ್ವನಿಸುತ್ತಿತ್ತು. ಇವರೇನಾ ಗುರುರಾಜುಲುನಾಯ್ಡು ಎಂದು ಜನ ಕೇಳಬೇಕು? ಕಥಾಸಂದರ್ಭದಲ್ಲಿ ಅವರ ಹಾವ-ಭಾವ, ಘರ್ಜನೆ, ಅಳು-ವಿಡಂಬನೆ ಆ ವಾಗ್ಝರಿಯನ್ನೇ ನೋಡಲು ಬರುವ ಜನ ಸಮೂಹಕ್ಕೆ ಮಿತಿಯಿರಲಿಲ್ಲ.

ಸಿನಿಮಾಗಳ ದಿನವಹಿ ಹಲವಾರು ಪ್ರದರ್ಶನಗಳಂತೆ ಇವರ ಕಥೆಯೂ ಸಹ ನಡೆಯುತ್ತಿತ್ತು. ಬೆಳಗಿನ ಆಟ, ಮ್ಯಾಟನೀ, ಮೊದಲ ಪ್ರದರ್ಶನ, ಸೆಕೆಂಡ್‌ ಶೋಗಳಂತೆ ಒಂದೇ ದಿನಕ್ಕೆ ಅನೇಕ ಕಥೆಗಳನ್ನೂ ಮಾಡಿದ್ದುಂಟು. ಕೆಲವೊಂದು ಉತ್ಸವಗಳ ಸಂದರ್ಭದಲ್ಲಿ ಈ ಮಿತಿಯೂ ಮೀರಿದ್ದುಂಟು. ಹೀಗಾಗಿ ತಮ್ಮ ದೇಹಾರೋಗ್ಯದ ಕಡೆ ಗಮನವೇ ಇಲ್ಲದಷ್ಟು ಕಾರ್ಯಕ್ರಮ ನೀಡಿ ಇವರ ದೇಹ ಜರ್ಝರಿತವಾಯಿತು.

ವ್ಯಕ್ತಿಶಃ ಗುರುರಾಜುಲು ನಾಯ್ಡು ಅತ್ಯಂತ ಸ್ನೇಹಜೀವಿ. ಸದಾ ಹಸನ್ಮುಖಿ. ಅಜಾತ ಶತ್ರು. ಎಷ್ಟೇ ಕಷ್ಟಬಂದರೂ ಸಹನೆಯಿಂದ ಸುಧಾರಿಸಿಕೊಂಡು ಹೋಗುವ ಸ್ವಭಾವ. ಇವರ ಶಿಷ್ಯಪರಂಪರೆಯೂ ಅತಿ ದೊಡ್ಡದು. ಬಿ.ಪಿ. ರಾಜಮ್ಮ, ಕನಕದಾಸರು, ಮೈಸೂರು ಸೂರ್ಯನಾರಾಯಣದಾಸರು, ಹಿನ್ನೆಲೆಗಾಯಕಿ ಸಿ.ಕೆ. ರಮಾ, ಅಶ್ವತ್ಥನಾರಾಯಣದಾಸ್‌, ಡಾ. ಕಿರಣ್‌ಕುಮಾರ್, ನಂಜುಂಡಸ್ವಾಮಿ, ವಿಮಲಾನಂದ ದಾಸ್‌, ತುಮಕೂರು ಲಕ್ಷ್ಮಣ್‌ ಅಲ್ಲದೆ ಅವರ ಹೆಣ್ಣು ಮಕ್ಕಳು ಶೋಭಾನಾಯ್ಡು, ಶೀಲಾನಾಯ್ಡು ಎಲ್ಲರೂ ಗುರುಗಳನ್ನು ಮೀರಿಸುವವರೇ. ಅವರ ಹೆಸರನ್ನು ಚಿರಂತನವಾಗಿ ನಿಲ್ಲುವಂತೆ ಶ್ರಮಿಸಿದ್ದಾರೆ.

ತಮ್ಮ ಅತೀವ ಕಾರ್ಯಕ್ರಮಗಳಿಂದ ಬಿಡುವೇ ಇಲ್ಲದಂತೆ ಕಥೆನಡೆಸಿ ದೇಹಶ್ರಮ ಮಾಡಿಕೊಂಡರು. ಅದೇ ಅವರಿಗೆ ಮುಳುವಾಯಿತು. ೧೯೮೫ ಮಂಡ್ಯದ ಉತ್ಸವವೊಂದರಲ್ಲಿ ಕಥೆ ಮಾಡುತ್ತಿದ್ದಂತೆಯೇ ತೀವ್ರ ಮಿದುಳು ರಕ್ತಸ್ರಾವದಿಂದ ಕುಸಿದರು. ಮತ್ತೆ ಚೇತರಿಸಿಕೊಳ್ಳಲಿಲ್ಲ. ಆಗ ಅವರಿಗೆ ೫೧ ವರುಷ, ಸಾಯುವಂಥ ವಯಸ್ಸಲ್ಲ. ಇನ್ನು ಬಾಳಿ ಬದುಕಬೇಕಾದಂಥ ಪ್ರಾಯ. ಇನ್ನೂ ಒಂದು ಮೂವತ್ತು ವರುಷ ಕನ್ನಡ ತಾಯಿಗೆ ಅವರ ಸೇವೆ ಆಗಬೇಕಿತ್ತು.

ಇವರಿಗೆ ಸಂದ ಪ್ರಶಸ್ತಿಗೌರವಗಳಲು ಅಗಣಿತ. ಕೀರ್ತನ ಕೇಸರಿ, ಕೀರ್ತನ ಸಾಮ್ರಾಟ್, ಕೀರ್ಥನ ಕಲಾವಿಚಕ್ಷಣ, ಕೀರ್ತನ ಕಲಾವಸಂತ, ಹರಿಕಥಾಕಲಾಭೂಷಣ ಒಂದೇ ಎರಡೇ ಲೆಕ್ಕವಿಲ್ಲದಷ್ಟು ಅಖಿಲ ಕರ್ನಾಟಕಕ ಕೀರ್ತನ ಕಲಾಪರಿಷತ್ತಿನ ಕಾರ್ಯದರ್ಶಿಯಾಗಿ, ದಾಸವರೇಣ್ಯ ಪುರಂದರದಾಸರ ಆರಾಧನಾ ಸಮಿತಿಯ ಸಕ್ರಿಯ ಸದಸ್ಯರಾಗಿದ್ದು ಅವರು ಬದುಕಿರುವ ತನಕ ಹಂಪಿಯ ಪುರಂದರೋತ್ಸವದಲ್ಲಿ ತಮ್ಮ ಸೇವೆಯನ್ನು ತಪ್ಪಿಸಿದವರಲ್ಲ.

ಹೀಗೆ ಕೀರ್ತನ ರಂಗ, ರಂಗಭೂಮಿ, ಚಿತ್ರರಂಗ ಮೊದಲಾದ ಕ್ಷೇತ್ರಗಳಲ್ಲಿ ಸಾರ್ವಭೌಮರಾಗಿ ಕರ್ನಾಟಕವೇ ಅಲ್ಲದೆ ಹೊರನಾಡಿನಲ್ಲೂ ಕರ್ನಾಟಕ ಕೀರ್ತನಕಲಾ ವೈಭವವನ್ನು ಮೆರೆದ ಗುರುರಾಜುಲುನಾಯ್ಡು ಕೀರ್ತನಕ್ಷೇತ್ರದಲ್ಲಿ ಅಮರರಾಗಿದ್ದಾರೆ.