ಪ್ರಾಯಶಃ ಎಲ್ಲಾ ಸಂಗೀತ ವಿದ್ವಾಂಸರೂ ಪಲ್ಲವಿ ನಿರೂಪಣೆಯಲ್ಲಿ ಅನುಭವಿಗಳಾಗಿದ್ದರೂ ಕೆಲವರಿಗೆ ಮಾತ್ರ ಪಲ್ಲವಿಯ ಪಟ್ಟು ಸಿಕ್ಕಿ ಅವರ ಹೆಸರು ಪಲ್ಲವಿಯೊಂದಿಗೇ ಸೇರಿಕೊಂಡು ಬಿಡುತ್ತದೆ. ಅವರಲ್ಲಿ ಪಚ್ಚಿಮಿರಿಯಂ ಆದಪ್ಪಯ್ಯನವರ ಶಿಷ್ಯ ಪಲ್ಲವಿ ಗೋಪಾಲಯ್ಯ,ಪಲ್ಲವಿ ದೊರೆಸ್ವಾಮಿ ಅಯ್ಯರ್, ಪಲ್ಲವಿ ಶೇಷಯ್ಯ, ತಿರುವೈಯ್ಯೂರ್ ಮುಟ್ಟನೂರಿ ಸೂರ್ಯ ನಾರಾಯಣಶಾಸ್ತ್ರಿ ಮತ್ತು ಕರ್ನಾಟಕದ ಪಲ್ಲವಿ ಎಸ್‌. ಚಂದ್ರಪ್ಪ ಇವರುಗಳ ಹೆಸರು ಉಲ್ಲೇಖನೀಯ. ಇದಕ್ಕೆ ಪೂರಕವಾಗಿ ತಾಳಗಳಲ್ಲಿ ಆಳವಾದ ಜ್ಞಾನ, ಸಾಧನೆಯ ತಪಸ್ಸು ಜೊತೆಗೆ ಪೂರ್ವಜನ್ಮದ ಸಂಸ್ಕಾರದ ಬಲವೂ ಬೇಕು. ಈ ಮೇಲೆ ತಿಳಿಸಿದ ಮಹನೀಯರೆಲ್ಲರ ಸಾಲಿನಲ್ಲಿ ಸೇರುವ ಅರ್ಹತೆಯನ್ನು ಗಳಿಸಿದ್ದ ಅಪರೂಪದ ಕಲಾವಿದ ವಿದ್ವಾನ್‌ ಚಂದ್ರಸಿಂಗ್‌ ಎಂದರೆ ಅತಿಶಯೋಕ್ತಿಯೇನಲ್ಲ.

ಜನನ ಮತ್ತು ಕೌಟುಂಬಿಕ ಹಿನ್ನೆಲೆ: ಆರ್. ಚಂದ್ರಸಿಂಗ್‌ರವರು ೧೯೧೮ನೇ ಅಕ್ಟೋಬರ್ ತಿಂಗಳ ೮ನೇ ತಾರೀಖಿನಂದು ಮೈಸೂರು ಜಿಲ್ಲೆಯ ನಾಗನಹಳ್ಳಿಯ ರಜಪುತ್‌ ಜನಾಂಗದ ರತನ್‌ಸಿಂಗ್‌ ಮತ್ತು ಕಮಲಾಬಾಯಿ ದಂಪತಿಗಳ ಒಬ್ಬರೇ ಸುಪುತ್ರನಾಗಿ ಜನಿಸಿದರು. ಐದು ತಿಂಗಳ ಶಿಶುವಾಗಿದ್ದಾಗಲೇ ಪಿತೃವಿಯೋಗ, ಐದು ವರ್ಷದ ಬಾಲಕನಾಗಿರುವಾಗ ತಾಯಿಯನ್ನೂ ಕಳೆದುಕೊಂಡರು. ಪಿತ್ರಾರ್ಜಿತ ಆಸ್ತಿಯಾದ ವಾಸದ ಮನೆ, ತೆಂಗಿನ ತೋಟ ಮುಂತಾದವನ್ನು ದಾಯಾದಿಗಳ ಮೋಸದ ಬಲೆಗೆ ಸಿಕ್ಕಿ ಎಲ್ಲವನ್ನು ಕಳೆದುಕೊಂಡರು. ಬಾಲಕ ಚಂದ್ರಸಿಂಗ್‌ನ್ನು ಹತ್ತಿರದ ಸಂಬಂಧಿಕರು ಮಧುರೈಗೆ (ತಮಿಳುನಾಡು) ಕರೆದುಕೊಂಡು  ಹೋಗಿ ಪಾಲನೆ ಪೋಷಣೆ ಮಾಡತೊಡಗಿದರು. ಇವರ ಪಾಲನೆ ಪೋಷಣೆ ಅಲ್ಪ ಅವಧಿಯಲೇ ಮುಕ್ತಾಯವಾಗಿ, ಬಂಧುಗಳೇ ಬಾಲಕ ಚಂದ್ರಸಿಂಗ್‌ನ್ನು ಶಾಲೆಗೆ ಸೇರಿಸುವ ಬದಲು, ಆಗಿನ ಕಾಲದಲ್ಲಿ ಖ್ಯಾತಿಗಳಿಸಿದ್ದ ಮಧುರಾ ಬಾಯ್ಸ್‌ ನಾಟಕ ಮಂಡಳಿಗೆ ತರಬೇತಿ ಪಡೆದು ಪ್ರಖ್ಯಾತರಾದವರಲ್ಲಿ ಆಗಿನ ಕಾಲದ ಸಿನಿಮಾ ನಟರುಗಳಾದ ಪಿ.ಯು. ಚಿನ್ನಪ್ಪ, ಮುಂದೆ ಖ್ಯಾತ ನಟ ಎಂ.ಜಿ. ರಾಮಚಂದ್ರನ್‌ (ಎಂ.ಜಿ.ಆರ್) ಸಹ ಚಂದ್ರಸಿಂಗ್‌ರೊಡನೆ ನಾಟಕ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದರು.

ಬಾಲ್ಯ ಮತ್ತು ಸಂಗೀತ ವಾತಾವರಣ: ನಾಟಕ ಕಂಪೆನಿ ಸೇರಿದ ಬಾಲಕ ಚಂದ್ರಸಿಂಗ್‌ಗೆ ಊಟ ಬಟ್ಟೆ ಮಲಗಲು ಎಲ್ಲ ವ್ಯವಸ್ಥೆ ನಾಟಕ ಕಂಪನಿಯಲ್ಲಿಯೇ ನಡೆಯುತ್ತಿತ್ತು. ಆಗಿನ ಕಾಲದಲ್ಲಿ ನಾಟಕಕ ಕಂಪೆನಿಗಳಲ್ಲಿ ನಟಿಸಲು ಸ್ಫರದ್ರುಪಿಯಾಗಿ, ಒಳ್ಳೆಯ ಮೈಕಟ್ಟು, ನಟನಾ ಸಾಮರ್ಥ್ಯದ ಜೊತೆಗೆ ಮಧುರ ಕಂಠ ಹೊಂದಿದ್ದು ಒಳ್ಳೆಯ ಸಂಗೀತಜ್ಞಾನವೂ ಸಹ ಮುಖ್ಯವಾಗಿ ಬೇಕಾಗಿತ್ತು. ಕಾರಣನಾಟಕಗಳೆಲ್ಲವೂ ಸಂಗೀತದ ತಳಹದಿಯ ಮೇಲೆ ಕೂಡಿದ್ದುದರಿಂದ ಬಾಲನಟರನ್ನೊಳಗೊಂಡಂತೆ ಎಲ್ಲ ನಟ ನಟಿಯರೂ ಸೇರಿ ನುರಿತ ಸಂಗೀತ ವಿದ್ವಾಂಸರಿಂದ ಸೂಕ್ತ ಸಂಗೀತ ಶಿಕ್ಷಣ ಪಡೆದು ನಾಟಕಗಳಲ್ಲಿ ನಟಿಸಬೇಕಾದುದು ಅನಿವಾರ್ಯವಾಗಿದ್ದುದರಿಂದ ಚಂದ್ರಸಿಂಗ್‌ ಎಳೆಯ ವಯಸ್ಸಿನಲ್ಲೇ ಸಂಗೀತ ಪ್ರಪಂಚಕ್ಕೆ ಪಾದಾರ್ಪಣೆ ಮಾಡಬೇಕಾಗಿ ಬಂತು. ಇದು ಅವರ ಜೀವನದ ಮಹತ್ವದ ತಿರುವಾಯಿತು.

ಸಂಗೀತ ಶಿಕ್ಷಣ: ಚಂದ್ರಸಿಂಗ್‌ರವರು ಪ್ರಾರಂಭದಲ್ಲಿ ನಾಯನಾಪಿಳ್ಳೆ ಪರಂಪರೆಯ ಕಾಂಚೀಪುರಂ ಜಯರಾಮ ಶರ್ಮ, ಸೋಮಸುಂದರಂ ಪಿಳ್ಳೆ ಹಾಗೂ ಮೈಲಂ ಪಿ. ವಜ್ರವೇಲು ಮೊದಲಿಯಾರ್ ಇವರುಗಳಲ್ಲಿ ಸಂಗೀತ ಶಿಕ್ಷಣ ಪಡೆದರು. ನಂತರ ನಾಮಕ್ಕಲ್‌ ನರಸಿಂಹ ಅಯ್ಯಂಗಾರ್ ಹಾಗೂ ಪ್ರಖ್ಯಾತ ಕೊಳಲು ವಾದಕರಾಗಿದ್ದ ‘ಸಂಗೀತ ಕಲಾನಿಧಿ’ ಟಿ.ಎನ್‌. ಸ್ವಾಮಿನಾಥ ಪಿಳ್ಳೆಯವರ ಶಿಷ್ಯರಾಗಿದ್ದ ಶ್ರೀನಿವಾಸಾಚಾರ್ ರವರ ಬಳಿ ಸಂಪ್ರದಾಯ ಬದ್ಧ ಸಂಗೀತ ಶಿಕ್ಷಣ ಪಡೆದರು. ಸಂಗೀತ ಜ್ಞಾನದ ದಾಹತೀರದೆ ಮುಂದೆ ತಮ್ಮ ಸಂಗೀತ ಶಿಕ್ಷಣವನ್ನು ನಾಯನಾ ಪಿಳ್ಳೆಯವರ ಪುತ್ರ ರತ್ನಸ್ವಾಮಿಯವರಲ್ಲಿ ಮುಂದುರವರೆಸಿದರು. ಅನಂತರ ಕೆಲವು ನಾಗಸ್ವರ ವಿದ್ವಾಂಸರುಗಳಿಂದ ತರಬೇತಿ ಪಡೆದು ಪಲ್ಲವಿ ವಿಷಯದಲ್ಲಿ ಪಾಂಡಿತ್ಯ ಗಳಿಸಿ ನಾಟಕ ಕ್ಷೇತ್ರ ಹಿಡಿಸದೆ ಸಂಗೀತ ಕ್ಷೇತ್ರದಲ್ಲಿ ಒಬ್ಬ ಉತ್ತಮ ಗಾಯಕನಾಗುವ ಭದ್ರ ಬುನಾದಿ ಹಾಕಿಕೊಂಡರು. ಅನಂತರ ಮದರಾಸಿಗೆ ಹೋಗಿ ನೆಲೆಸಿದರು.

ಗುರುಕುಲವಾಸ: ಗಳಿಸಿದ್ದ ಜ್ಞಾನಕ್ಕೆ ತೃಪ್ತರಾಗದ ಚಂದ್ರಸಿಂಗ್‌ರವರು ಪ್ರಖ್ಯಾತ ವಿದ್ವಾಂಸರಾಗಿದ್ದ ದಕ್ಷಿಣಾಮೂರ್ತಿ ಪಿಳ್ಳೆಯವರ ಪುತ್ರ ಪುದುಕೋಟೈ ಸ್ವಾಮಿನಾಥ ಪಿಳ್ಳೆಯವರಲ್ಲಿ ಗುರುಕುಲವಾಸ ಪದ್ಧತಿಯಲ್ಲಿ ಅವ್ಯಾಹತವಾಗಿ ಸಂಗೀತ ಶಿಕ್ಷಣ ಪಡೆದು ವಿವಿಧ ತಾಳಗಳ ವೈವಿಧ್ಯತೆ, ಪಲ್ಲವಿ ನಿರೂಪಣೆಯ ವಿಧಾನ, ಲಯದ ವಿಷಯದಲ್ಲಿ ಅದ್ವಿತೀಯ ಜ್ಞಾನವನ್ನು ಪಡೆದು ಒಬ್ಬ ಅತ್ಯುತ್ತಮ ಗಾಯಕನೆಂದು ನಿರೂಪಿಸಿದರು. ಹಿರಿಯ ವಿದ್ವಾಂಸರಾಗಿದ್ದ ಪಳನಿ ಮುತ್ತಯ್ಯ ಪಿಳ್ಳೆ, ಸ್ವಾಮಿನಾಥ ಪಿಳ್ಳೆ ಹಾಗೂ ಪಳನಿ ಸುಬ್ರಹ್ಮಣ್ಯ ಪಿಳ್ಳೆ ಮುಂತಾದ ಪ್ರಖ್ಯಾತ ಕಲಾವಿದರು ಚಂದ್ರಸಿಂಗ್‌ರವರ ಸಂಗೀತ ಕಚೇರಿಗಳಿಗೆ ಪಕ್ಕವಾದ್ಯಗಳನ್ನು ನುಡಿಸಿರುತ್ತಾರೆ.

ಚಂದ್ರಸಿಂಗ್‌ರವರು ಎರಡನೇ ಮಹಾಯುದ್ಧದ ಸಮಯದಲ್ಲಿ ತಮಿಳುನಾಡಿನ ಒಳಪ್ರಾಂತ್ಯ ಪುದುಕೋಟೈಗೆ ಬಂದು ನೆಲೆಸಿದರು. ಆ ಸಮಯದಲ್ಲಿ ಆ ರಾಜ್ಯದ ಪ್ರಖ್ಯಾತ ಗಾಯಕರಾಗಿದ್ದ ಎಂ.ಎಂ.ದಂಡಪಾಣಿ ದೇಶಿಕರ್ ರವರ ಪರಿಚಯವಾಯಿತು. ದೇಶಿಕರ್ ರವರು ಚಂದ್ರಸಿಂಗ್‌ರವರ ಸಂಗೀತದಲ್ಲಿನ ಆಳವಾದ ಪಾಂಡಿತ್ಯಕ್ಕೆ ಮಾರುಹೋಗಿ ಅವರನ್ನು ಮದರಾಸಿಗೆ ಬರಮಾಡಿಕೊಂಡು ಕೆಲವು ಪಲ್ಲವಿಗಳನ್ನು ಕಲಿತರು. ಚಂದ್ರಸಿಂಗ್‌ರವರು ತಮ್ಮ ಮೊದಲ ಸಂಗೀತ ಕಚೇರಿಯನ್ನು ೧೯೩೪ರಲ್ಲಿ ಆಂಧ್ರಪ್ರದೇಶದ ಕಾಕಿನಾಡ ವಸ್ತು ಪ್ರದರ್ಶನದಲ್ಲಿ ನೀಡಿದರು. ೧೯೩೫ರಿಂದ ಹಲವು ವರ್ಷಗಳ ಕಾಲಲ ಚಂದ್ರಸಿಂಗ್‌ರವರು ಮದರಾಸು ಬಾನುಲಿ ಕೇಂದ್ರದಿಂದ ಸಂಗೀತ ಕಾರ್ಯಕ್ರಮಗಳನ್ನು ನೀಡಿದರು. ದಕ್ಷಿಣ ಭಾರತದಲ್ಲೆಲ್ಲ ಹಲವಾರು ಸಂಘ ಸಂಸ್ಥೆಗಳಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಗೀತ ಗಾಯನ ಹಾಗೂ ಅಪರೂಪ ಹಾಗೂ ಕ್ಲಿಷ್ಟ ಪಲ್ಲವಿಗಳ ಪ್ರಾತ್ಯಕ್ಷಿಕೆಗಳನ್ನು ನೀಡಿ ಖ್ಯಾತಿ ಗಳಿಸಿ ತಿರುಪತ್ತೂರಿನ ಸಂಗೀತ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ಹುಟ್ಟೂರಿಗೆ ಪಯಾಣ: ೧೯೪೯ರ ಸೆಪ್ಟೆಂಬರ್ ತಿಂಗಳಲ್ಲಿ ಮೈಸೂರಿನಲ್ಲಿದ್ದ ಚಂದ್ರಸಿಂಗ್‌ರ ಸಂಬಂಧಿಕರ ಒತ್ತಾಯದ ಮೇರೆಗೆ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿ ಸ್ಥಳೀಯ ಸಂಗೀತ ಕಲಾವಿದರ ನೆರವಿನಿಂದ ಖಾಸಗಿಯಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ಪ್ರಾರಂಭಿಸಿ ಅದನ್ನೇ ವೃತ್ತಿಯನ್ನಾಗಿ ಆರಿಸಿಕೊಂಡರು.

ಚಂದ್ರಸಿಂಗ್‌ರವರು ಬೆಂಗಳೂರಿನಲ್ಲಿದ್ದು ಪ್ರಖ್ಯಾತ ವಿದ್ವಾಂಸ ‘ಗಾನಕಲಾಭೂಷಣ’, ‘ಲಯಯೋಗಿ’ಪಲ್ಲವಿ ಎಸ್‌.ಚಂದ್ರಪ್ಪನವರೊಂದಿಗೆ ಜಂಟಿಯಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಖ್ಯಾತಿಗಳಿಸಿ ನಂತರ ಒಂಟಿಯಾಗಿ ಗಾಯನ ಕಾರ್ಯಕ್ರಮ ನೀಡಲು ಪ್ರಾರಂಭಿಸಿದರು. ಗಾಯನ ಕಾರ್ಯಕ್ರಮದಲ್ಲಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿಕೊಂಡು ಸ್ವರ ಕೊರಪು ಮುಕ್ತಾಯಿ ಸ್ವರಗಳು ಹಾಗೂ ಪಲ್ಲವಿ ಗಾಯನದಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ಪಲ್ಲವಿ ಕ್ಷೇತ್ರದಲ್ಲೂ ಖ್ಯಾತಿಯನ್ನು ಗಳಿಸಿದರು.

ಬೆಂಗಳೂರಿನಲ್ಲಿ ನೆಲೆಸಿ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಂಬರ ಹಳ್ಳಿಯ ಜೋಡಿದಾರರಾಗಿದ್ದ ಶ್ಯಾಂ ಸಿಂಗ್‌ರವರ ಪುತ್ರಿ ಶಾಂತಾಬಾಯಿಯವರನ್ನು ತನ್ನ ಬಾಳ ಸಂಗಾತಿಯನ್ನಾಗಿ ಕೈ ಹಿಡಿದರು.

ಆದರ್ಶ ಸಂಗೀತ ಶಿಕ್ಷಕರಾಗಿ: ಬೆಂಗಳೂರಿಗೆ ಬಂದು ನೆಲೆಸಿ ಬಹು ಬೇಗನೆ ಕನ್ನಡವನ್ನು ಓದಲು ಬರೆಯಲು ಕಲಿತರು. ಶಿಷ್ಯರಿಗೆ ಕನ್ನಡದಲ್ಲಿ ಸಂಗೀತ ಪಾಠವನ್ನು ಬರೆದುಕೊಡುತ್ತಿದ್ದರು. ಸಂಗೀತ ಶಿಕ್ಷಣವನ್ನೇ ಜೀವನ ವೃತ್ತಿಯನ್ನಾಗಿಟ್ಟುಕೊಂಡ ಚಂದ್ರಸಿಂಗ್‌ವರಲ್ಲಿ ವ್ಯಾಪಾರಿ ಮನೋಭಾವವಿರಲಿಲ್ಲ. ಆರ್ಥಿಕ ತೊಂದರೆಯಿದ್ದರೂ ಎಂದೂ ಯಾರಲ್ಲೂ ತಮ್ಮ ಕಷ್ಟವ ಹೇಳಿ ಕೊಳ್ಳುತ್ತಿರಲಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ಬಹಳ ಶ್ರದ್ಧೆಯಿಂದ ನಿಷ್ಠೆಯಿಂದ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ವಿದ್ಯಾರ್ಥಿಗಳು ಕೊಟ್ಟಷ್ಟು ಸಂಭಾವನೆಯನ್ನು ಪಡೆದು ಪ್ರಾಮಾಣಿಕರಾಗಿ ಪಾಠ ಹೇಳುತ್ತಿದ್ದ ಮಾದರಿ ಶಿಕ್ಷಕರಿವರು.

ಎಷ್ಟೇ ಕಷ್ಟವಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ಸದಾ ಹಸನ್ಮುಖಿಯಾಗಿ ಸೌಜನ್ಯ ಹಾಗೂ ವಿನಯಶೀಲ ಸ್ವಭಾವದವರಾಗಿದ್ದರು ಇವರನ್ನು ನೋಡಿದೊಡನೆ ಒಬ್ಬ ಸಂಗೀತ ವಿದ್ವಾಂಸರೆಂದು  ಗುರುತಿಸಬಹುದಾಗಿದ್ದರೂ ಇವರಲ್ಲಿದ್ದ ಪಲ್ಲವಿ ಹಾಗೂ ಸ್ವರಗಳ ಅಪಾರ ಪಾಂಡಿತ್ಯ ಹಾಗೂ ಲಯದಲ್ಲಿದ್ದ ಪ್ರೌಢಿಮೆ ಗೋಚರವಾಗುತ್ತಿರಲಿಲ್ಲ. ಅವರ ಸಂಗೀತವನ್ನು ಕೇಳಿದಾಗ ಅವರಲ್ಲಿದ್ದ ಪಾಂಡಿತ್ಯ ಗೋಚರವಾಗುತ್ತಿತ್ತು. ಸಂಗೀತ ಕಾರ್ಯಕ್ರಮದ ಅವಕಾಶಕ್ಕಾಗಲೀ ಪ್ರಶಸ್ತಿ ಪುರಸ್ಕಾರಕ್ಕಾಗಲೀ ಅಥವಾ ಇನ್ನಾವುದೇ ಸೌಕರ್ಯಕ್ಕಾಗಿ ಎಂದೂ ಯಾರನ್ನೂ ಆಶ್ರಯಿಸದೆ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದರು.

ಕಚೇರಿ ಸಾಧನೆ: ಚಂದ್ರಸಿಂಗ್‌ರವರು ಬೆಂಗಳೂರು ಗಾಯನ ಸಮಾಜಕ್ಕೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದು ೧೯೫೯ರಿಂದ ೧೯೭೧ರವರೆಗೆ ಸತತವಾಗಿ ಗಾಯನ ಸಮಾಜದ ವಾರ್ಷಿಕ ಸಂಗೀತ ಸಮ್ಮೇಳನಗಳಲ್ಲಿನ ವಿದ್ವತ್‌ ಸದಸ್‌ನಲ್ಲಿ ಅಷ್ಟೋತ್ತರ ಶತ ೧೦೮ ಅತ್ಯಂತ ವಿಶಾಲವಾದ ೩೭ನೇ ತಾಳ ೧೮ ಅಂಗಗಳುಳ್ಳ ೧೨೮ ಅಕ್ಷರ ಅಥವಾ ಎಣಿಕೆಯ ಸಿಂಹನಂದನ ತಾಳ, ೨೪ ಅಂಗಗಳುಳ್ಳ ೭೯ ಅಕ್ಷರಗಳ ಶರಭನಂದನ ತಾಳದ ಪಲ್ಲವಿ, ಚಂದ್ರಸಿಂಗ್‌ರವರೇ ರಚಿಸಿರುವ ೨೩ ಅಂಗಗಳ ೧೨೪ ಅಕ್ಷರಗಳ ಪಕ್ಷಾಂತರ ಬ್ರಹ್ಮ ತಾಳ ಮುಂತಾದ ಪ್ರಾಚೀನ ಪದ್ಧತಿಯ ಅಪರೂಪ ಹಾಗೂ ಕ್ಲಿಷ್ಟ ತಾಳಗಳ ಪಲ್ಲವಿಗಳ ಪ್ರಾತ್ಯಕ್ಷಿಕೆಗಳನ್ನು ನೀಡಿ ವಿದ್ವಾಂಸರುಗಳ ಮೆಚ್ಚುಗೆಯನ್ನು ಗಳಿಸಿದವರು. ಈ ಅಪರೂಪದ ಕಲಾವಿದ ಚಂದ್ರಸಿಂಗ್‌ರವರು ಕರ್ನಾಟಕ ಗಾನಕಲಾ ಪರಿಷತ್ತು, ಕರ್ನಾಟಕ ಕಸಂಗೀತ ನೃತ್ಯ ಅಕಾಡೆಮಿ ಹಾಗೂ ಇನ್ನೂ ಅನೇಕ ಸಂಗೀತ ಸಭೆಗಳಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ನೀಡಿರುವುದರ ಜೊತೆಗೆ ಸ್ವಾಮಿ ಅರುಣಗಿರಿನಾಥರ್ ರ ಲಯ ಖಚಿತ ತಿರುಪ್ಪುಗಳನ್ನು ಬಹಳ ರಂಜನೀಯವಾಗಿ ಹಾಡುತ್ತಿದ್ದರು.

ಮೈಸೂರು ವಾಸುದೇವಾಚಾರ್ ರವರಿಂದ ಸತ್ಕಾರ: ಚಂದ್ರಸಿಂಗ್‌ರವರ ಹೆಸರು ಮಹಾ ವಿದ್ವಾಂಸ ಹಾಗೂ ವಾಗ್ಗೇಯಕಾರರೂ ಆಗಿದ್ದ ಹಿರಿಯ ಸಂಗೀತ ಪಟು ಮೈಸೂರು ವಾಸುದೇವಾಚಾರ್ ರವರಿಗೂ ಮುಟ್ಟಿತು. ಸಿಂಗ್‌ರವರ ಪಲ್ಲವಿಯಲ್ಲಿದ್ದ ಪಾಂಡಿತ್ಯ ಮತ್ತು ಅವರು ಸಂಶೋಧನೆ ಮಾಡಿ ತಯಾರಿಸಿದ್ದ ಸ್ವರಗಳಲ್ಲಿನ ಕೊರಪುಗಳ ಭಂಡಾರವನ್ನು ಪರಿಶೀಲಿಸಿ ಅವರ ಅದ್ವಿತೀಯ ಪಾಂಡಿತ್ಯಕ್ಕೆಕ ಬಾಯಿ ತುಂಬ ಹೊಗಳಿ ಸಿಂಗ್‌ರವರನ್ನು ಸತ್ಕರಿಸಿ ಗೌರವಾದರಗಳಿಂದ ಕಳಿಸಿಕೊಟ್ಟರು.

ಸ್ವರಬ್ರಹ್ಮರಾಗಿ: ಅಪೂರ್ವ ಸಿದ್ಧಿಯ ಸ್ವರಬ್ರಹ್ಮ ಚಂದ್ರಸಿಂಗ್‌ರವರು ತಮ್ಮ ಇಡೀ ಜೀವಮಾನದಲ್ಲಿ ಅವರು ಹಲವಾರು ಗುರುಗಳಿಂದ ಪಡೆದ ಶಿಕ್ಷಣದಿಂದ, ಸ್ವಂತ ಅನುಭವದಿಂದ ಪಡೆದುಕೊಂಡಿದ್ದ ಪಾಂಡಿತ್ಯ, ಲಯ ಹಾಗೂ ಅಪರೂಪ ಪಲ್ಲವಿಗಳನ್ನು ಹಾಡುವ ಅಪೂರ್ವ ಸಿದ್ಧಿ ಇವೆಲ್ಲವುಗಳ ಸಮ್ಮಿಲನದಿಂದ ಹೊರಹೊಮ್ಮಿದ ಜ್ಞಾನದ ಜೊತೆಗೆ ಅವರು ಸಂಶೋಧಿಸಿಕ ತಯಾರಿಸಿದ ಸ್ವರ ಕುಂಜಗಳ ತೀರ್ಮಾನಗಳು, ಕೊರಪುಗಳು (ಆವರ್ತ ಕೊರಪು) ಮುಕ್ತಾಯ ಸ್ವರಗಳನ್ನು ಐದು ಗತಿಗಳಲ್ಲಿ ರಚಿಸಿದ್ದು ಸೂಳಾದಿ ತಾಳಗಳ ಹಲವಾರು ತಾಳಗಳಿಗೆ ಹೊಂದುವಂತಿದ್ದು ದೇವರ ನಾಮಗಳಿಗೆ ಚಿಟ್ಟೆಸ್ವರ ಹಾಕಲು, ಕೀರ್ತನೆಗಳನ್ನು ಹಾಡಿ ನೆರವಲ್‌ ಮಾಡಿ ಸ್ವರ ಪ್ರಸ್ತಾರ ಮಾಡುವ ಸಂದರ್ಭದಲ್ಲಿ ಅದರಲ್ಲೂ ಯಾವುದೇ ಪಲ್ಲವಿಗೆ ಪೂರ್ವ ಭಾವಿಯಾಗಿ ಹೇಳಿ ಮಾಡಿಸಿದಂತಹ ಸ್ವರ ಪುಷ್ಪ ಮಾಲೆಯ ಗಣಕವಿದ್ದಂತೆ.

ಈ ಕೊರಪುಗಳ ಮುಕ್ತಾಯ ಸ್ವರಗಳ ಮೇಲೆ ಚಂದ್ರಸಿಂಗ್‌ರವರು ಮದರಾಸು ಮ್ಯೂಸಿಕ್‌ ಅಕಾಡೆಮಿಯ ವಾರ್ಷಿಕಕ ಸಂಗೀತ ಸಮ್ಮೇಳನದಲ್ಲಿ  ಪ್ರಾತ್ಯಕ್ಷಿಕೆ ನೀಡಿದ್ದು, ಅಕಾಡೆಮಿಯ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದ ಪ್ರಖ್ಯಾತ ಹಿರಿಯ ಸಂಗೀತ ಪಟು ಆಲತ್ತೂರು ಶಿವಸುಬ್ರಹ್ಮಣ್ಯ ಅಯ್ಯರ್, ಮುಡಿಕೊಂಡನ್‌ ವೆಂಕಟರಾಮ ಅಯ್ಯರ್ ಹಾಗೂ ಇತರೆ ಹಿರಿಯ ವಿದ್ವಾಂಸರುಗಳು ಸಿಂಗ್‌ರವರ ಸಾಧನೆಯನ್ನು ಮನಸಾರೆ ಮೆಚ್ಚಿ ಕೊಂಡಾಡಿರುತ್ತಾರೆ.

ವಿಶೇಷ ಪರಿಣತಿ: ಚಂದ್ರಸಿಂಗ್‌ರವರು  ಸುಳಾದಿ ೩೫ ತಾಳಗಳಲ್ಲಿ ಯಾವುದೇ ತಾಳಕ್ಕಾಗಲೀ ಎಷ್ಟೇ ಅಕ್ಷರವಿರಲಿ ಆರಿಸಿದ ತಾಳಕ್ಕೇ ಆ ಸ್ಥಳದಲ್ಲೇ ಆ ಕ್ಷಣದಲ್ಲೇ ಆವರ್ತ ಕೊರಪಿನೊಂದಿಗೆ ಮುಕ್ತಾಯ ಸ್ವರಗಳನ್ನು ಲಯಖಚಿತವಾಗಿ ತೀರ್ಮಾನಗಳನ್ನು ಕೊಡುತ್ತಿದ್ದರು. ಗಣಕಯಂತ್ರದಂತೆ ಅವರ ಮೆದುಳು ಕೆಲಸ ಮಾಡುತ್ತಿತ್ತು. ಈ ವಿಷಯದಲ್ಲಿ ಅವರೊಬ್ಬ ಅಪರೂಪದ ಸಿದ್ಧ ಪುರುಷರಾಗಿದ್ದರು.

ಈ ಸ್ವರಗಳ ಕೊರಪು ಮುಕ್ತಾಯ ಸ್ವರಗಳ ಕುಂಜಗಳ ಮೇಲೆ ಒಂದು ಪುಸ್ತಕವನ್ನು ಪ್ರಕಟಿಸಬೇಕೆಂದು ಚಂದ್ರಸಿಂಗ್‌ರ ಜೀವಿತ ಕಾಲದಲ್ಲಿ ಅಂದುಕೊಂಡಿದ್ದರು. ಆರ್ಥಿಕ ಮುಗ್ಗಟ್ಟಿನಿಂದ ಪುಸ್ತಕ ಪ್ರಕಟಿಸುವ ಕನಸು ನನಸಾಗಲೇ ಇಲ್ಲ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಕ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಥವಾ ಇನ್ಯಾವುದೇ ಸಂಸ್ಥೆಯು ಮುಂದೆ ಬಂದು ಚಂದ್ರಸಿಂಗ್‌ರವರು ರಚಿಸಿರುವ ಸ್ವರ ಪ್ರಸ್ತಾರ ಮುಕ್ತಾಯಿ ಸ್ವರಗಳ ಹಸ್ತಪ್ರತಿಯನ್ನು ಅವರ ಕುಟುಂಬದ ಸದಸ್ಯರಿಂದ ಪಡೆದು ಪ್ರಕಟಿಸಿದರೆ ಇದರಿಂದ ಸಂಗೀತ ಪ್ರಪಂಚಕ್ಕೆಕ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ.

ಪ್ರಕಟನೆ: ಚಂದ್ರಸಿಂಗ್‌ರವರ ಮತ್ತೊಂದು ಗಣನೀಯ ಸೇವೆಯೆಂದರೆ ಶ್ರೀಕನಕದಾಸರ ೪೦ ದೇವರನಾಮಗಳಿಗೆ ರಾಗ ಸಂಯೋಜಿಸಿದ್ದು ಸ್ವರ ಸಾಹಿತ್ಯದೊಂದಿಗೆ ರಚಿಸಿರುವುದು. ಅವುಗಳು ‘ಗಾಯನ ಗಂಗಾ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವಿಶೇಷ ಸಂಗೀತ ಪರೀಕ್ಷೆಗಳಿಗೆ ಮಂಡಳಿಯ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಚಂದ್ರ ಸಿಂಗ್‌ರವರು ಹಾಡಿರುವ ಅಪರೂಪ ಹಾಗೂ ಕ್ಲಿಷ್ಟ ಪಲ್ಲವಿಗಳ ಪ್ರಾತ್ಯಕ್ಷಿಕೆಗಳನ್ನು ವಿಡಿಯೋ ಮೂಲಕ ಚಿತ್ರೀಕರಿಸಿಕೊಂಡು ಅಕಾಡೆಮಿಯ ಭಂಡಾರದಲ್ಲಿರಿಸಿಕೊಂಡಿದೆ.

ಪ್ರಶಸ್ತಿ-ಸನ್ಮಾನ: ೧೯೭೬ರಲ್ಲಿ ಬೆಂಗಳೂರು ಗಾಯನ ಸಮಾಜದ ವಾರ್ಷಿಕ ಸಮ್ಮೇಳನದಲ್ಲಿ ಸನ್ಮಾನಿತರಾಗಿರುತ್ತಾರೆ. ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದ ಡಾ.ಬಿ. ದೇವೆಂದ್ರಪ್ಪನವರು ಸ್ಥಾಪಿಸಿದ್ದ ಶ್ರೀ ಮಾರುತಿ ಸೇವಾ ಸಂಗೀತ ಸಮಾಜದವರು ಗಾನಕಲಾ ಶೇಖರ ಎಂಬ ಬಿರುದು ನೀಡಿ ಸನ್ಮಾನಿಸಿದ್ದಾರೆ. ೧೯೮೨ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಪ್ರಶಸ್ತಿ ಗಳಿಸಿದ್ದಾರೆ. ಮೀನಾಕ್ಷಿ ಸುಂದರಂ ಕಲ್ಚರ್ ಆಫ್‌ ಪರ್ ಫಾರ್ಮಿಂಗ್‌ಕ ಆರ್ಟ್ಸ್ ವತಿಯಿಂದ ಸನ್ಮಾನ ಪತ್ರ.

ಚಂದ್ರಸಿಂಗ್‌ರವರ ಶಿಷ್ಯವರ್ಗ: ವಿದ್ವಾನ್‌ ಚಂದ್ರಸಿಂಗ್‌ರವರ ಗರಡಿಯಲ್ಲಿ ಅನೇಕ ಶಿಷ್ಯರು ಸಂಗೀತ ಶಿಕ್ಷಣ ಪಡೆದು ಕೀರ್ತಿ ಗಳಿಸಿದ್ದಾರೆ ಅವರಲ್ಲಿ ಮೊದಲಿಗೆ ಒಂದೂವರೆ ದಶಕಗಳ ಕಾಲ ಸಂಗೀತ ಶಿಕ್ಷಣ ಪಡೆದ ಸಂಗೀತ ವಿದುಷಿ ಡಿ. ಶಶಿಕಲಾ. ಇವರು ಗುರುಗಳ ಸಂಗೀತ ಹಾಗೂ ವಿಶೇಷವಾಗಿ ಅಪರೂಪ ಹಾಗೂ ಕ್ಲಿಷ್ಟ ಪಲ್ಲವಿ ಪಾಂಡಿತ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು ಗುರುವಿಗೆ ತಕ್ಕ ಶಿಷ್ಯರೆಂಬುದನ್ನು ನಿರೂಪಿಸಿದ್ದಾರೆ. ಖ್ಯಾತ ನಟಿ ಶ್ರೀಮತಿ ಭಾರತಿ ವಿಷ್ಣುವರ್ಧನ್‌, ಶಿವಣ್ಣ, ಕೋಲಾರದ ವಿದ್ವಾನ್‌ ಬಾಲಾಜಿ ಸಿಂಗ್‌, ಖ್ಯಾತ ನೃತ್ಯ ಪಟು ಪದ್ಮಿನಿರಾವ್‌, ಮುಂತಾದವರು ಚಂದ್ರಸಿಂಗ್‌ರವರಿಂದ ಮಾರ್ಗದರ್ಶನ ಪಡೆದಿದ್ದಾರೆಂದು ತಿಳಿದು ಬಂದಿದೆ.

ಚಂದ್ರಸಿಂಗ್‌ರವರ ಅಭಿಪ್ರಾಯ: ಅನುಭವೀ ವಿದ್ವಾಂಸರು ಲಯದಲ್ಲಿ ಪಾಂಡಿತ್ಯವಿದ್ದು ಹಲವಾರು ತಾಳಗಳಲ್ಲಿನ ಕೃತಿಗಳೊಂದಿಗೆ ಲಯಖಚಿತವಾಗಿ ಹಾಗೂ ಪರಿಣಾಮಕಾರಿಯಾಗಿ ಹಲವಾರು ಕಡೆಗಳಲ್ಲಿ ಸ್ವರಕಲ್ಪನೆ ಮಾಡಿ ಸಭಿಕರನ್ನು ಬೆರಗುಗೊಳಿಸುವುದರಿಂದ ಅಂತಹ ವಿದ್ವಾಂಸರು ಪ್ರತ್ಯೇಕವಾಗಿ ಪಲ್ಲವಿಯ ವಿಷಯದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳಬೇಕದ ಅಗತ್ಯವಿರುವುದಿಲ್ಲ ಎಂಬುದು ಚಂದ್ರಸಿಂಗ್‌ ಅವರ ಅಭಿಪ್ರಾಯ.

ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಮುಖ್ಯ ಕಲಾವಿದರ ಮನೋಧರ್ಮಕ್ಕೆ ಸರಿಯಾಗಿ ಸ್ಪಂದಿಸಿ ರಂಜನೀಯವಾಗಿ ನುಡಿಸುವ ಸಹ ಕಲಾವಿದರಿದ್ದಾರೆ. (ಪಿಟೀಲು ಮತ್ತು ಮೃದಂಗ) ಈ ಒಂದು ಅನುಸರಣಾ ಪದ್ಧತಿ ಕೇಳುಗರಿಗೆ ಸ್ಪರ್ಧಾ ಮನೋಭಾವದಂತೆ ಕಂಡರೂ ಮುಖ್ಯ ಕಲಾವಿದರಿಗೆ ಮನೋಧರ್ಮ ಹೆಚ್ಚಿಸಲು, ಕೇಳುಗರಿಗೆ ಕುತೂಹಲ ಮೂಡಿಸುವಲ್ಲಿ ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಇದರಿಂದ ಹಾಡುವವರಿಗೆ ನುಡಿಸುವವರಿಗೆ ಮತ್ತು ಸಭಿಕರಿಗಾಗುವ ಮನೋಲ್ಲಾಸ ಎಲ್ಲವನ್ನೂ ಮರೆಯುವಂತೆ ಮಾಡುತ್ತದೆ. ಈ ಪದ್ಧತಿ ಪ್ರಪಂಚದ ಯಾವುದೇ ಸಂಗೀತದಲ್ಲಿಲ್ಲ ಎಂದು ತಮ್ಮ ಹರ್ಷ ವ್ಯಕ್ತಪಡಿಸುತ್ತಿದ್ದರು.

ಹಿಂದಿನ ಕಾಲದಲ್ಲಿನ ಸಂಗೀತ ಕಚೇರಿಗಳಲ್ಲಿದ್ದ ನಾದ ಸುಖ, ಆ ಕಚೇರಿಯಲ್ಲಿ ಬಂದು ವಿಶೇಷತೆ ಬುದ್ಧಿಗೆ ಕೆಲಸ ಹೀಗೆ ನಾನಾ ರೀತಿಯ ವಿಶೇಷವಿರುತ್ತಿತ್ತು. ಕಚೇರಿಗೆ ಹೋದರೆ ಅಲ್ಲಿ ನಾವು ಏನಾದರೊಂದು ವಿಷಯವನ್ನು ತಿಳಿದುಕೊಂಡು ಹಿಂತಿರುಗುತ್ತಿದ್ದೆವು. ಇಂದಿನ ಕಾಲದ ಸಂಗೀತ ವೈಖರಿ ಪರಿಪಕ್ವವಿಲ್ಲದೆ, ತುರಾತುರಿಯಲ್ಲಿ ಕೀರ್ತನೆಗಳ ಸಾಲು ಸಾಲು, ಸ್ವಂತಿಕೆಯಿಲ್ಲದ ಕಚೇರಿ ವೈಖರಿ, ಆಳವಾದ ಹಾಗೂ ಲಯದಲ್ಲಿ ಹಿಡಿತವಿಲ್ಲದಿರುವುದು ಇವೆಲ್ಲ ಕಚೇರಿಯ ಲಕ್ಷಣಗಳಲ್ಲ. ನಶಿಸಿ ಹೋಗುತ್ತಿರುವ ಬಳಕೆಯಲ್ಲಿಲ್ಲದ ಅನೇಕ ರಾಗಗಳನ್ನು ಬಳಕೆಗೆ ತರಬೇಕು.

ಪಲ್ಲವಿ ಹಾಡುಗಾರಿಕೆಯಲ್ಲಿ ಸಂಪ್ರದಾಯ ಬದ್ಧವಾಗಿ ಒಳ್ಳೆಯ ಗುರುಮುಖೇನ ಪಲ್ಲವಿ ಕಲಿತು ‘ಲಯ’ಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಹಾಡಬೇಕಾದುದು ಒಬ್ಬ ಸಂಗೀತ ವಿದ್ವಾಂಸನ ಲಕ್ಷಣ ಹಾಗೂ ಆದ್ಯ ಕರ್ತವ್ಯ. “ಪಲ್ಲವಿಯ ಜೀವಾಳವೇ ಲಯವಾಗಿರುವುದರಿಂದ ಲಯದ ವಿಷಯದಲ್ಲಿ ಹೆಚ್ಚು ಪರಿಶ್ರಮವಿರಬೇಕಾದುದು ಬಹಳ ಅವಶ್ಯ. ಲಯದಲ್ಲಿ ಪರಿಶ್ರಮವಿಲ್ಲದೇ ಪಲ್ಲವಿ ಹಾಡುವ ಸಾಹಸಕ್ಕೆ ಕೈ ಹಾಕಬಾರದು” ಎಂದು ಚಂದ್ರಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಅಂತ್ಯದ ದಿನಗಳು: ವಿದ್ವಾನ್‌ ಚಂದ್ರಸಿಂಗ್‌ರವರು ತಮ್ಮ ಪಾಂಡಿತ್ಯಕ್ಕೆಕ ಸಾಕಷ್ಟು ಪ್ರೋತ್ಸಾಹ ಹಾಗೂ ಪುರಸ್ಕಾರಗಳು ಸಿಗಲಿಲ್ಲವೆಂದು ಎಂದೂ ಬೇಸರಮಾಡಿಕೊಂಡವರಲ್ಲ.

ಜೀವಿತ ಕಾಲದುದ್ದಕ್ಕೂ ಶ್ರೀಮತಿ ಶಾಂತಾಬಾಯಿಯವರು ಪತಿ ಚಂದ್ರಸಿಂಗ್‌ರವರ ಶ್ರೇಯೋಭಿವೃದ್ಧಿಗೆ ಕಂಕಣಬದ್ಧರಾಗಿಕ ಐದು ಮಕ್ಕಳನ್ನು ಹೆತ್ತು ಮಹಾ ತಾಯಿಯಾಗಿ ಪತಿಯ ಕಷ್ಟ ಸುಖದಲ್ಲಿ ಭಾಗಿಯಾಗಿದ್ದರು. ಮಕ್ಕಳಲ್ಲಿ ಕಿರಿಯ ಮಗಳು ಶ್ರೀಮತಿ ರಜನಿರವರು ತಂದೆಯವರಿಂದ ಸಂಗೀತಾಭ್ಯಾಸ ಮಾಡಿದ್ದು ದೇವರನಾಮ ಹಾಗೂ ಭಕ್ತಿಗೀತೆಗಳನ್ನು ಇಂಪಾಗಿ ಹಾಡುತ್ತಾರೆ. ಇವರ ಧ್ವನಿಸುರಳಿ ಸಹ ಬಿಡುಗಡೆಯಾಗಿದೆ.

ಒಬ್ಬ ವ್ಯಕ್ತಿಯ ಕೀರ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವನ ಜೀವನದಲ್ಲಿ ಕಷ್ಟ-ಸುಖ, ಸಿಹಿ-ಕಹಿ, ಸಂತೋಷ-ದುಃಖಗಳ ವಿವಿಧ ಮುಖಗಳು ತಪ್ಪಿದಲ್ಲ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ವಿಶಾದನೀಯ ಸಂಗತಿಯೆಂದರೆ ಚಂದ್ರಸಿಂಗ್‌ರವರ ಜೀವನದುದ್ದಕ್ಕೂ, ಬಹಳಷ್ಟು ಕಹಿಯನ್ನುಂಡು  ಕಷ್ಟವನ್ನೆದುರಿಸುತ್ತಾ ಬಂದ ವ್ಯಕ್ತಿಯಾಗಿದ್ದರು. ಇವರಿಗೆ ಜೀವನದಲ್ಲಿ ತಿರುವುಸಿಕ್ಕಿ ಶಾಂತಿ ನೆಮ್ಮದಿ ಸಿಕ್ಕಿದ್ದು ಸಂಗೀತ ಸರಸ್ವತಿ ಮಾತೆಯ ಮಡಲಲ್ಲಿ ಮಾತ್ರ. ಸರಸ್ವತಿ ಕಟಾಕ್ಷ ಬೀರಿದರೂ ಲಕ್ಷ್ಮೀಕಟಾಕ್ಷ, ಬೀರಲಿಲ್ಲ. ಜೀವನದ ರಣರಂಗದಲ್ಲಿ ಅವಿರತವಾಗಿ ಹೋರಾಡಿ ಜಯವನ್ನು ಸಾಧಿಸಿದ ಧೀರರಾದರು.

ಎಪ್ಪತ್ತು ವರ್ಷಗಳ ತುಂಬು ಜೀವನವನ್ನು ಸಾಗಿಸಿದ ವಿದ್ವಾನ್‌ ಚಂದ್ರಸಿಂಗ್‌ರವರು ದಿನಾಂಕ ೧೩.೯.೧೯೮೮ರಂದು ಸಂಗೀತ ಸ್ವರ ಲೋಕದಲ್ಲಿ ಲೀನವಾಗಿ ಹೋದರು.