ಡಾ. ಪ್ರಭಾ ರಾವ್ ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣತಿ ಪಡೆದ ನಮ್ಮ ಹಿರಿಯ ನೃತ್ಯ ಕಲಾವಿದೆಯಲ್ಲಿ ಒಬ್ಬರು. ದಾವಣಗೆರೆಯ ನಾಟ್ಯ ಭಾರತಿ ನೃತ್ಯ ಶಾಲೆಯಲ್ಲಿ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ಅವರಲ್ಲಿ ಸುಮಾರು ಹದಿನಾಲ್ಕು ವರ್ಷಗಳ ಕಾಲ ಭರತನಾಟ್ಯ ಅಭ್ಯಾಸ ಮಾಡಿದ್ದ ಡಾ. ಪ್ರಭಾ ನಂತರ ಆಗ ದೆಹಲಿಯಲ್ಲಿದ್ದ ಕನ್ನಡತಿ ಶ್ರೀಮತಿ ಮಾಯಾರಾವ್ ಅವರ ’ಕಥಕ್ ಅಂಡ್ ಕೊರಿಯಾಗ್ರಫಿ’ ಸಂಸ್ಥೆಯಲ್ಲಿ ಕಥಕ್ ನೃತ್ಯ ಸಂಪ್ರದಾಯ ಮತ್ತು ನಾಟ್ಯ ಸಂಯೋಜನೆಯಲ್ಲಿ ಡಿಪ್ಲೋಮಾ ಪದವಿ ಪಡೆದರು. ದೆಹಲಿಯ ಭಾರತೀಯ ಕಲಾಕೇಂದ್ರದ ಶ್ರೀ ಮಾಯಾಧರ್ ರಾವತ್ ಅವರಿಂದ ಒಡಿಸ್ಸಿ ನೃತ್ಯ ಕಲಿಯುವುದರ ಜೊತೆಗೆ ಡಾ. ಪ್ರಭಾ ಭಾರತೀಯ ಜಾನಪದ ನೃತ್ಯಗಳು ಮತ್ತು ಇಂಡೋನೇಷಿಯಾದ ಸಾಂಪ್ರದಾಯಿಕ ನೃತ್ಯ ಪದ್ಧತಿಗಳಾದ ಬಾಲಿ ಮತ್ತು ಜಾವ ನೃತ್ಯ ಶೈಲಿಗಳನ್ನು ಅಭ್ಯಾಸ ಮಾಡಿದ್ದಾರೆ. ಅಲ್ಲದೆ ಕರ್ನಾಟಕ ಮತ್ತು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಳಲ್ಲೂ ಪ್ರಭಾರವರಿಗೆ ತಿಳುವಳಿಕೆಯಿದೆ. ಕಥಕ್ ಮತ್ತು ಅದರ ಪರಂಪರೆ ಕುರಿತಾದ ಪ್ರಭಾ ಅವರ ಪ್ರೌಢ ಪ್ರಬಂಧಕ್ಕೆ ಅರಿಜೋನಾ ವಿಶ್ವವಿದ್ಯಾಲಯ ಡಿ.ಲಿಟ್ ಪದವಿ ನೀಡಿದೆ. ದಾವಣಗೆರೆಯ ನಾಟ್ಯ ಭಾರತೀಯಲ್ಲಿ ಭರತನಾಟ್ಯ ಶಿಕ್ಷಕಿಯಾಗಿ, ದೆಹಲಿಯ ನಾಟ್ಯ ಇನ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯಾಗ್ರಫಿ ಸಂಸ್ಥೆಯಲ್ಲಿ ಕಥಕ್ ಶಿಕ್ಷಕಿಯಾಗಿ, ಜಕಾತಾದ ಗಾಂಧಿ ಮೆಮೋರಿಯಲ್ ಸ್ಕೂಲ್, ಸಿಂಗಪೂರಿನ ಸಿಂಗಪೂರ್ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ, ಜರ್ಕಾರ್ತಾದ ಜವಹರಲಾಲ್ ನೆಹರು ಇಂಡಿಯನ್ ಕಲ್ಚರಲ್ ಸೆಂಟರ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಕಿಯಾಗಿ ಪ್ರಭಾ ಅಪಾರ ಅನುಭವಗಳನ್ನು ಗಳಿಸಿಕೊಂಡಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ಅನೇಕ ನೃತ್ಯೋತ್ಸವಗಳಲ್ಲಿ ನರ್ತಿಸಿರುವ ಪ್ರಭಾ ಅವರು, ಸೀತಾ ಕಲ್ಯಾಣ, ಶಬರಿ ಮೋಕ್ಷ, ಭಕ್ತ ಪ್ರಹ್ಲಾದ, ಊರುಭಂಗ, ಪುರಂದರದಾಸ, ಶಕ್ತಿ ಭಕ್ತಿ ಮುಕ್ತಿ ಮುಂತಾದ ಹಲವು ಪ್ರಬುದ್ಧ ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಗಿರಿನಗರದಲ್ಲಿ ತಮ್ಮದೇ ’ಪದ್ಮಾವತಿ ಸ್ಕೂಲ್ ಆಫ್ಪರ್ಫಾರ್ಮಿಂಗ್ ಆರ್ಟ್ಸ್’ ಮುಖಾಂತರ ತಮ್ಮ ನೃತ್ಯ ಸೇವೆಯನ್ನು ಮುಂದುವರಿಸುತ್ತಿರುವ ಡಾ. ಪ್ರಭಾರಾವ್ ಅವರಿಗೆ ’ಅಂತರಾಷ್ಟ್ರೀಯ ನೃತ್ಯ ನಿರ್ದೇಶಕಿ ಪ್ರಶಸ್ತಿ’, ’ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ’ ’ಕರ್ನಾಟಕ ಚೇತನ ಪ್ರಶಸ್ತಿ’, ’ಕರ್ನಾಟಕ ಶಿರೋಮಣಿ ಪ್ರಶಸ್ತಿ’, ’ಕರ್ನಾಟಕ ರತ್ನಶ್ರೀ ಪ್ರಶಸ್ತಿ’ ಮುಂತಾಗಿ ಹಲವು ಪುರಸ್ಕಾರಗಳು ಸಂದಿವೆ. ಡಾ. ಪ್ರಭಾರಾವ್ ಅವರನ್ನು ೨೦೦೪-೦೫ನೇ ಸಾಲಿನ ತನ್ನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.