ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದೂಸ್ಥಾನಿ ಸಂಗೀತ ವ್ಯಾಪಕವಾಗಿ ಪ್ರಚಾರಮಾಡಿ ಅನೇಕ ಶಿಷ್ಯರನ್ನು ತಯಾರಿಸಿ, ಹೆಸರಾಂತ ಸಂಗೀತಗಾರರೆನಿಸಿಕೊಂಡಿರುವ ಶ್ರೀ ಆರ್.ಟಿ. ಹೆಗಡೆ (ಶೀಗೆಹಳ್ಳಿ) ಯವರು ಕರ್ನಾಟಕದ ಗ್ವಾಲಿಯರ್ ಘರಾಣೆಯ ಹಿರಿಯರ ಗಾಯಕರಲ್ಲೊಬ್ಬರು.

ಶ್ರೀ ರಂಗನಾಥ ತಿಮ್ಮಯ್ಯ ಹೆಗಡೆ ಅವರು ಜನಿಸಿದ್ದು ೧೯೩೩ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರ್ಶಿ ತಾಲೂಕಿನ ಶೀಗೇಹಳ್ಳಿಯಲ್ಲಿ. ಅವರದು ಆಧ್ಯಾತ್ಮ ಹಿನ್ನೆಲೆಯುಳ್ಳ ಕೃಷಿ ಕುಟುಂಬ. ಬಾಲ್ಯದಿಂದಲೇ ಸಂಗೀತದಲ್ಲಿ ಒಲವು ಬೆಳೆಸಿಕೊಂಡ ಅವರು ಎಸ್‌.ಎಸ್‌.ಸಿ. ವರೆಗೆ ಶಿಕ್ಷಣ ಪಡೆದರು. ಹಿಂದೂಸ್ಥಾನಿ ಸಂಗೀತದ ದಿಗ್ಗಜರಾದ ಮೃತ್ಯುಂಜಯ ಬುವಾ ಪುರಾಣಿಕ ಮಠ, ಚಂದ್ರಶೇಖರ ಪುರಾಣಿಕ ಮಠ, ಆರ್.ಎನ್‌. ಜೋಶಿ ಬುವಾ ಹಾಗೂ ಜಿ.ಡಿ. ಕೋಶಿ ಅವರುಗಳಲ್ಲಿ ಸುದೀರ್ಘ ಕಾಲ ಸಂಗೀತದ ತಾಲೀಮು ಪಡೆದು ಗ್ವಾಲಿಯರ ಹಾಗೂ ಕಿರಾಣಾ ಘರಾಣೆಯ ಪ್ರಬುದ್ಧ ಗಾಯಕರೆನಿಸಿದರು. ಕರ್ನಾಟಕ ಸಂಗೀತ ‘ಸಂಗೀತ ವಿದ್ವತ್‌’ (೧೯೬೮-೬೯), ಗಾಂಧರ್ವ ಮಹಾ ವಿದ್ಯಾಲಯ ಮಹಾ ಮಂಡಳದ ‘ಸಂಗೀತ ವಿಶರದ’ (೧೯೬೩) ಹಾಗೂ ವಿಜಾಪುರದ ಕರ್ನಾಟಕ ಸಂಗೀತ ಪ್ರಚಾರ ಸಮಿತಿಯ ‘ಸಂಗೀತ ವಿಶಾರದ’ ಪದವಿ ಪಡೆದರು.

ಅವರು ೧೯೫೫-೫೬ ರಿಂದ ೭-೮ ವರ್ಷ ಶಿರ್ಶಿ ತಾಲೂಕು ಸಂಗೀತ ಉತ್ಸವ ನಡೆಸಿದ್ದಾರೆ. ತಮ್ಮ ಮನೆಯಲ್ಲಿ ಅನೇಕ ಅಮೂಲ್ಯ ಸಂಗೀತ ಗ್ರಂಥಗಳ ಭಂಡಾರ ನಿರ್ಮಿಸಿದ್ದಾರೆ. ಸಂಗೀತ ಕುರಿತು ವಿದ್ವತ್‌ ಪೂರ್ಣ ಉಪನ್ಯಾಸ, ಲೇಖನ ರಚಿಸಿದ್ದಾರೆ. ಧಾರವಾಡ ಆಕಾಶವಾಣಿಯ ಶಾಸ್ತ್ರೀಯ ಸಂಗೀತ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಚಿತ್ರ ರಚನೆ, ಅಗರಬತ್ತಿ ತಯಾರಿಕೆ, ಯಕ್ಷಗಾನ ಪಾತ್ರ ನಿರ್ವಹಣೆ, ಯಕ್ಷಗಾನದ ಪರಿಕರಗಳ ನಿರ್ಮಾಣ – ಮುಂತಾದವುಗಳು ಅವರ ಹವ್ಯಾಸಗಳಾಗಿವೆ. ಇವೆಲ್ಲವುಗಳ ಜೊತೆಗೆ ಕೃಷಿ ಕಾಯಕವನ್ನು ನಿಷ್ಠೆಯಿಂದ ಮಾಡುತ್ತ ಬಂದಿದ್ದಾರೆ.

ಅವರ ಶಿಷ್ಯ ಸಂಪತ್ತು ಅಪಾರ. ಅಂಥವರಲ್ಲಿ ಶ್ರೀ ಎಂ.ಪಿ. ಹೆಗಡೆ (ಆಕಾಶವಾಣಿ ಕಲಾವಿದ) , ಎಂ.ಜಿ. ಉದ್ದೇಮನೆ, ಜಿ.ಜಿ. ದೀಕ್ಷಿತ (ಖ್ಯಾತ ಸಮಾಜ ಕಾರ್ಯಕರ್ತರು), ಚಂದ್ರಶೇಖರ ಹೆಗಡೆ (ಸಂಪಿಗೆ ಮನೆ), ಜಿ.ವಿ. ಕುಂಬ್ರಿ, ವಿಶ್ವನಾಥ ಕಾನಳ್ಳಿ – ಮುಂತಾದವರು ಉಲ್ಲೇಖನೀಯರಾಗಿದ್ದಾರೆ. ಶ್ರೀ ಎಂ.ಪಿ. ಹೆಗಡೆಯವರು ಧಾರವಾಡ ಆಕಾಶವಾಣಿ ಕಲಾವಿದರಾಗಿದ್ದು ಶಿರ್ಶಿಯಲ್ಲಿ ‘ಶ್ರೀ ಸಾಯಿ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಆಸಕ್ತರಿಗೆ ಸಂಗೀತ ಶಿಕ್ಷಣ ನೀಡುತ್ತ ಗುರು ಪರಂಪರೆಯನ್ನು ಮುಂದುವರೆಸುತ್ತ ಬರುತ್ತಿದ್ದಾರೆ.

ಶ್ರೀ ಆರ್.ಟಿ. ಹೆಗಡೆಯವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ (೨೦೦-೨೦೦೧) ಪ್ರಶಸ್ತಿ ನೀಡಿ ಪುರಸ್ಕರಿಸಿದೆ.