ಆರ್. ನಾಗೇಂದ್ರರಾವ್ಕನ್ನಡ ನಾಡಿನ ಪ್ರಖ್ಯಾತ ನಟರು. ನಾಟಕ, ಚಲನಚಿತ್ರಗಳೆರಡರಲ್ಲೂ ಶ್ರೇಷ್ಠ ನಟರೆನ್ನಿಸಿಕೊಂಡರು. ಬಾಲ್ಯ ಯೌವನಗಳಲ್ಲಿ ಬಡತನವನ್ನೂ, ಕಷ್ಟವನ್ನೂ ಅನುಭವಿಸಿದರು. ತಮ್ಮ ಶ್ರಮ, ಪ್ರತಿಭೆ, ಸಾಹಸಗಳಿಂದ ಕನ್ನಡ ನಾಡಿನಲ್ಲೂ ಇಡೀ ಭಾರತದಲ್ಲೂ ಕೀರ್ತಿ ಪಡೆದರು. ಅವರು ಎಷ್ಟು ದೊಡ್ಡ ನಟರೋ ಅಷ್ಟೇ ದೊಡ್ಡ ವ್ಯಕ್ತಿ. ಅನೇಕ ಮಂದಿ, ಕಿರಿಯರಿಗೆ ವಾತ್ಸಲ್ಯದಿಂದ ಮಾರ್ಗದರ್ಶನ ಮಾಡಿದರು.

ಆರ್. ನಾಗೇಂದ್ರರಾವ್

 

ತಟ್ಟೇಕೆರೆ ಎಂಬ ಒಂದು ಸಣ್ಣ ಹಳ್ಳಿ. ಅಲ್ಲಿ ಒಂದು ಪುಟ್ಟ ಸಂಸಾರ. ಒಂದು ದಿನ ಮನೆಯಲ್ಲಿ ತಾಯಿ ಮತ್ತು ಎಂಟು ವರ್ಷದ ಮಗ ಮಾತ್ರ ಇದ್ದರು.ತಂದೆ ಮತ್ತು ಇನ್ನೊಬ್ಬ ದೊಡ್ಡಮಗ ಹೊಲದ ಕೆಲಸಕ್ಕೆ ಹೋಗಿದ್ದರು. ಇದ್ದಕ್ಕಿದ್ದಂತೆ ತಾಯಿಗೆ ಬಹಳ ಜ್ವರ ಬಂತು. ಮೈ ಕೆಂಡದಂತೆ ಬಿಸಿಯಾಯಿತು. ತಾಯಿ ಸಂಕಟದಿಂದ ನರಳುವುದಕ್ಕೆ ಪ್ರಾರಂಭಿಸಿದರು. ಅವರ ಜೊತೆಗೆ ಇದ್ದ ಪುಟ್ಟ ಹುಡುಗನಿಗೆ ಬಹಳ ಹೆದರಿಕೆ ಆಯಿತು. ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ. ಆ ಸಣ್ಣ ಹಳ್ಳಿಯಲ್ಲಿ ವೈದ್ಯರೂ ಇರಲಿಲ್ಲ. ಹತ್ತಿರದಲ್ಲಿದ್ದ ಪಟ್ಟಣವೆಂದರೆ ಹೊಳೆನರಸೀಪುರ. ಅದೂ ಮೂರು ಮೈಲಿ ದೂರವಿತ್ತು. ಅಲ್ಲಿಂದಲೇ ಡಾಕ್ಟರನ್ನು ಕರೆದುಕೊಂಡು ಬರಬೇಕು. ಹುಡುಗನ ಮನಸ್ಸಿನಲ್ಲಿ ಇದು ಹೊಳೆದದ್ದೆ ತಡ ಹೊಳೆನರಸೀಪುರಕ್ಕೆ ಹೊರಟುಬಿಟ್ಟ. ನಡೆದುಕೊಂಡು ಹೋದರೆ ತಡವಾದೀತು ಎಂದು ಓಡುತ್ತಲೇ ಹೋದ. ಡಾಕ್ಟರರ ಮನೆ ಆತನಿಗೆ ಗೊತ್ತಿತ್ತು. ಅಲ್ಲಿಗೆ ಏದುಸಿರಿಡುತ್ತಾ ಓಡಿಹೋಗಿ ತನ್ನ ತಾಯಿಯ ಅನಾರೋಗ್ಯದ ವಿಷಯ ವಿವರಿಸಿದ. ಡಾಕ್ಟರರು ಅವನಿಗೆ ಹೆದರಿಕೊಳ್ಳಬೇಡ ಎಂದು ತಿಳಿಸಿ, ರೋಗದ ಲಕ್ಷಣಗಳನ್ನೆಲ್ಲಾ ವಿಚಾರಿಸಿದರು. ಅನಂತರ ತಾವು ಬರುವ ಅಗತ್ಯವಿಲ್ಲವೆಂದು ತಿಳಿಸಿ ಒಂದು ಔಷಧವನ್ನು ಕೊಟ್ಟರು. ಹುಡುಗ ಮತ್ತೆ ಮೂರು ಮೈಲಿ ದೂರವನ್ನು ಓಡುತ್ತಲೇ ಸವೆಸಿ ಮನೆಗೆ ಬಂದ. ತಂದೆ ಮತ್ತು ಅಣ್ಣ ಕೂಡ ಹೊಲದಿಂದ ಬಂದರು. ತಾಯಿಯ ಮೇಲಿನ ಪ್ರೀತಿಯಿಂದ ಆ ಪುಟ್ಟ ಹುಡುಗ ಆರು ಮೈಲಿ ದೂರ ಓಡಿ ಔಷಧ ತಂದದ್ದು ಎಲ್ಲರಿಗೂ ಆಶ್ಚರ್ಯವಾಯಿತು. ತಾಯಿಯ ಕಣ್ಣುಗಳಂತೂ ಆನಂದದಿಂದ ತುಂಬಿ ಬಂದವು. ಔಷಧವನ್ನು ಸಂತೋಷದಿಂದ ಕುಡಿದು ಗುಣಮುಖರಾದರು.

ಈ ಸಾಹಸಿ ಹುಡುಗನೇ ಮುಂದೆ ಆರ್. ನಾಗೇಂದ್ರರಾವ್ ಎಂದು ಪ್ರತಿಭಾಶಾಲಿ ನಟನಾಗಿ, ನಿರ್ದೇಶಕನಾಗಿ ಪ್ರಸಿದ್ಧನಾದ. ಬಾಲ್ಯದಲ್ಲಿ ಕಂಡುಬಂದ ಈ ಅನುಕಂಪ, ಪ್ರೀತಿ ಹಾಗೂ ಸಾಹಸ ಪ್ರವೃತ್ತಿಗಳೇ ನಾಗೇಂದ್ರ ರಾಯರನ್ನು ಒಬ್ಬ ಗಣ್ಯ ಪುರುಷರನ್ನಾಗಿ ರೂಪಿಸಿದವು. ಅವರು ನಾಟಕರಂಗದಲ್ಲಿ, ಚಲನಚಿತ್ರರಂಗದಲ್ಲಿ ಅಭಿನಯಿಸಿ ಅತ್ಯುತ್ತಮ ನಟರೆಂದು ಹೆಸರಾದರು. ಕನ್ನಡ ಚಲನಚಿತ್ರಗಳಲ್ಲೇ ಅಲ್ಲದೆ ತಮಿಳು, ತೆಲಗು, ಹಿಂದಿ ಚಲನಚಿತ್ರಗಳಲ್ಲೂ ಅಭಿನಯಿಸಿ ಖ್ಯಾತಿ ಪಡೆದರು. ಅನೇಕ ಚಲನಚಿತ್ರಗಳನ್ನು ತಯಾರಿಸಿ ನಿರ್ದೇಶಿಸಿದರು. ಹಲವಾರು ದಾಖಲೆಗಳನ್ನು ನಿರ್ವೀಸಿದರು.

ಜನನ

ರಟ್ಟೆಹಳ್ಳಿ ಕೃಷ್ಣರಾವ್ ಮತ್ತು ರುಕ್ಮಿಣಿದೇವಿ ದಂಪತಿಗಳಿಗೆ ಆರ್. ನಾಗೇಂದ್ರರಾವ್ ಎರಡನೆಯ ಮಗನಾಗಿ ೧೮೯೬ನೆಯ ಇಸವಿ ಜೂನ್ ೨೩ ರಂದು ಜನಿಸಿದರು. ಅವರ ಜನ್ಮಸ್ಥಳ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ. ತಂದೆ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಬಹಳ ಶಿಸ್ತಿನ ಮನುಷ್ಯ. ತಾಯಿ ರುಕ್ಣಿಣೀದೇವಿ ಒಳ್ಳೆಯ ಮನೆತನದಿಂದ ಬಂದ ಹೆಣ್ಣುಮಗಳು. ತಂದೆಯ ಶಿಸ್ತಿನ ಜೀವನ ಹಾಗೂ ತಾಯಿಯ ಅನುಕಂಪ ಸ್ವಭಾವ ಸಹಜವಾಗಿಯೇ ಬಾಲಕ ನಾಗೇಂದ್ರನ ಮೇಲೆ ಪ್ರಭಾವ ಬೀರಿದವು.

೧೯೦೦ ರ ಸುಮಾರಿನಲ್ಲಿ ಕೃಷ್ಣರಾಯರು ಕಾರಾಣಾಂತರದಿಂದ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮೈಸೂರಿಗೆ ಹೋದರು. ಅಲ್ಲಿ ಒಂದು ಕೆಲಸ ಸಿಕ್ಕಿತು. ನಾಗೇಂದ್ರರಾಯರ ಅಣ್ಣ ನರಸಿಂಹಮೂರ್ತಿಯವರನ್ನೂ ನಾಗೇಂದ್ರರಾಯರನ್ನೂ ಮರಿಮಲ್ಲಪ್ಪ ಸ್ಕೂಲಿಗೆ ಸೇರಿಸಿದರು. ಆಗ ನಾಗೇಂದ್ರರಾಯರಿಗೆ ಸುಮಾರು ಐದು ವರ್ಷ.

ರಂಗ ಪ್ರವೇಶ

ಆಗ ನಾಗೇಂದ್ರರಾಯರು ಎಂಟು ವರ್ಷದ ಹುಡುಗ. ಆ ವಯಸ್ಸಿಗೇ ಅವರು ದೃಢಕಾಯರಾಗಿ ಬೆಳೆದಿದ್ದರು. ಕೇಳುವವರು ತಲೆದೂಗುವಂತೆ ದೇವರ ನಾಮ, ಭಜನೆಗಳನ್ನು ಹಾಡುತ್ತಿದ್ದರು. ಅವರ ಕಂಠ ಹಿತವಾಗಿತ್ತು. ಕೃಷ್ಣರಾಯರಿಗೆ ತಮ್ಮ ಮಗ ನಾಟಕರಂಗದಲ್ಲಿ ಮುಂದೆ ಬರಬೇಕೆಂಬ ಆಸೆ ಇತ್ತು. ಜಿ. ನಾಗೇಶರಾಯರು ಆ ಕಾಲದ ಸುಪ್ರಸಿದ್ಧ ನಟರು. ಅವರು ‘ಚಂದಿರಾನಂದ ನಾಟ ಸಭಾ’ ಎಂಬ ಹವ್ಯಾಸಿ ನಾಟಕ ಸಂಸ್ಥೆಯನ್ನು ಸ್ಥಾಪಿಸಿ ನಾಟಕಗಳನ್ನು ಆಡಿಸುತ್ತಿದ್ದರು.ಕೃಷ್ಣರಾಯರಿಗೆ ನಾಗೇಶರಾಯರ ಪರಿಚಯವೂಇತ್ತು. ತಮ್ಮ ಮಗನನ್ನು ಅವರ ಬಳಿಗೆಕರೆದುಕೊಂಡು ಹೋಗಿ ನಾಟಕದಲ್ಲಿ ಅವನಿಗೆ ಒಂದು ಪಾತ್ರ ಕೊಡಬೇಕೆಂದು ಕೇಳಿಕೊಂಡರು.ನಾಗೇಶರಾಯರು ಹುಡುಗನನ್ನು ನೋಡಿದಿರು. ಹುಡುಗ ನೋಡಲು ಲಕ್ಷಣವಾಗಿದ್ದ. ಒಂದೆರಡು ಹಾಡುಗಳನ್ನು ಹಾಡಿಸಿದರು.ಕಂಠ ಮಧುರವಾಗಿತ್ತು. ಅವನಿಗೆ ‘ಇಂದಿರಾನಂದ’ ಎಂಬ ನಾಯಕದಲ್ಲಿ ಒಂದು ಸಣ್ಣ ಸ್ತ್ರೀ ಪಾತ್ರ ಕೊಡಲು ಒಪ್ಪಿದರು. ಅಂದಿನಿಂದಲೇ ನಾಗೇಂದ್ರರಾಯರಿಗೆ ಪಾತ್ರದ ಮಾತುಗಳು ಹಾಗೂ ಹಾಡಿನ ಅಭ್ಯಾಸ ಮಾಡಿಸತೊಡಗಿದರು. ಹೇಳಿದ್ದನ್ನು ಕೂಡಲೇ ಗ್ರಹಿಸಿ ಅದರಂತೆ ಮಾಡಿತೋರಿಸುವ ಶಕ್ತಿ ನಾಗೇಂದ್ರರಾಯರಲ್ಲಿತ್ತು. ಹೀಗೆ ನಾಗೇಶರಾಯರು ಹೇಳಿಕೊಟ್ಟಿದ್ದನ್ನು ಬಹಳ ಬೇಗ ಕಲಿತರು. ನಾಟಕದ ಪ್ರದರ್ಶನದ ದಿನ ತಮ್ಮ ಪಾತ್ರವನ್ನು ಧೈರ್ಯವಾಗಿ ಅಭಿನಯಿಸಿದರು. ಈ ಹೊಸ ಬಾಲನಟನ ಸ್ಫುಟವಾದ ಮಾತುಗಳು, ಮಧುರವಾದ ಹಾಡುಗಳನ್ನು ಕೇಳಿ ಪ್ರೇಕ್ಷಕರ ಮೆಚ್ಚಿಗೆ ಸೂಚಿಸಿದರು. ಹೀಗೆ ಎಂಟನೆಯ ವಯಸ್ಸಿನಲ್ಲಿಯೇ ನಾಗೇಂದ್ರರಾಯರು ನಾಟಕ ರಂಗವನ್ನು ಪ್ರವೇಶಿಸಿದರು.

ನಾಗೇಶರಾಯರು ಮೈಸೂರಿನಲ್ಲಿ ‘ಇಂದಿರಾನಂದ’ ನಾಟಕವೊಂದನ್ನೇ ಆಡಿದ್ದು. ಆಮೇಲೆ ಅವರು ಬೇರೆ ಊರಿಗೆ ಹೋದರು. ನಾಗೇಂದ್ರರಾಯರಿಗೆ ಮತ್ತೆ ರಂಗಭೂಮಿಯ ಮೇಲೆ ಬರಲು ಅವಕಾಶ ಸಿಗಲಿಲ್ಲ. ಆಗಿನ ಆಸ್ಥಾನ ವಿದ್ವಾಂಸರಾಗಿದ್ದ ಕರಿಗಿರಿರಾಯರ ಬಳಿ ಕೆಲವು ದಿನಗಳು ಸಂಗೀತಪಾಠ ನಡೆಯಿತು.

ಮೈಸೂರಿನಲ್ಲಿ ಕೃಷ್ಣರಾಯರಿಗೆ ಬರುತ್ತಿದ್ದ ಸಂಬಳದಲ್ಲಿ ಬೆಳೆಯುತ್ತಿದ್ದ ಸಂಸಾರವನ್ನು ತೂಗಿಸುವುದು ಕಷ್ಟವಾಯಿತು. ಆದುದರಿಂದ ಅವರು ಕೆಲಸಕ್ಕೆ ರಾಜೀನಾಮೆ ನೀಡಿ ಹೊಳೆನರಸೀಪುರಕ್ಕೆ ಮೂರು ಮೈಲಿ ದೂರದಲ್ಲಿದ್ದ ತಟ್ಟೇಕೆರೆ ಎಂಬ ಹಳ್ಳಿಗೆಬಂದರು. ಅಲ್ಲಿ ಅವರಿಗೆ ಸ್ವಲ್ಪ ಜಮೀನು ಇತ್ತು. ಅದನ್ನು ತಾವೇ ಸಾಗುವಳಿ ಮಾಡಲು ನಿರ್ಧರಿಸಿದರು.

ನಾಗೇಂದ್ರರಾಯರೂ ಅವರ ಅಣ್ಣನೂ ಹೊಳೆನರಸೀ ಪುರದ ಮಾಧ್ಯಮಿಕ ಶಾಲೆಗೆ ಸೇರಿದರು.ತಟ್ಟೇಕೆರೆಯಿಂದ ದಿನಾ ಬೆಳಿಗ್ಗೆ ಶಾಲೆಗೆ ನಡೆದುಕೊಂಡು ಹೋದರೆ ಹಿಂತಿರುಗಲು ಸಂಜೆಯಾಗುತ್ತಿತ್ತು. ಮಧ್ಯಾಹ್ನದ ಊಟಕ್ಕೆಬುತ್ತಿ ತೆಗೆದುಕೊಂಡು ಹೋಗುತ್ತಿದ್ದರು.

ನಾಗೇಂದ್ರರಾಯರು ತಟ್ಟೇಕೆರೆಯಲ್ಲಿದ್ದಾಗ ಹಳ್ಳಿಯವರು ಆಡಲು ಅಭ್ಯಾಸ ಮಾಡುತ್ತಿದ್ದ ‘ದುಶ್ಯಾಸನ ಕಾಳಗ’ ಬಯಲುನಾಟಕವನ್ನು ನೋಡುವ ಅವಕಾಶ ಸಿಕ್ಕಿತು. ಅದನ್ನು ನೋಡಲು ನಾಗೇಂದ್ರರಾಯರು ತಪ್ಪದೆ ಹೋಗುತ್ತಿದ್ದರು. ನಟರ ಅಭಿನಯ, ಮಾತು ಕಥೆಯ ಠೀವಿ, ಹಾಡುಗಳ ವೈಖರಿ, ಯುದ್ಧದ ಶೈಲಿ ಮೊದಲಾದುವನ್ನು ಮನಸ್ಸಿಟ್ಟು ಗಮನಿಸುತ್ತಿದ್ದರು. ಮನೆಗೆ ಬಂದಮೇಲೆ ಏಕಾಪಾತ್ರಾ ಭಿನಯದಲ್ಲಿ ಆ ದೃಶ್ಯಗಳನ್ನೆಲ್ಲಾ ಮತ್ತೆ ಅಭಿನಯಿಸುತ್ತಿದದರು. ನಾಟಕದ ಮಾತುಗಳೆಲ್ಲಾ ಅವರಿಗೆ ಬಾಯಿಗೆ ಬಂದವು.

ಸ್ವಂತ ವ್ಯವಸಾಯದ ಅನನುಭವದಿಂದ ವರ್ಷದ ಬೆಳೆ ಸರಿಯಾಗಿ ಬರಲಿಲ್ಲ. ಬಂದ ಸ್ವಲ್ಪ ಬೆಳೆಯೂ ಸಾಲ ಕೊಟ್ಟವರಿಗೆ ಕೊಡಲು ಕೂಡಾ ಸಾಲದಾಯಿತು. ಸಾಲ ಕೊಟ್ಟವರ ಕಾಟ ಹೆಚ್ಚಾಯಿತು. ಕೃಷ್ಣರಾಯರ ಸಂಸಾರ ಕಷ್ಟಕ್ಕೆ ಸಿಕ್ಕಿತು.

ಈ ಸಮಯದಲ್ಲೇ ಕೃಷ್ಣರಾಯರ ಆರೋಗ್ಯವೂ ಕೆಟ್ಟಿತು. ಕೆಲವು ದಿನಗಳಲ್ಲಿ ಕೃಷ್ಣರಾಯರು ಮೃತರಾದರು. ಅವರ ಸಂಸಾರ ದಿಕ್ಕಿಲ್ಲದಾಯಿತು. ಮುಂದಿನ ಜೀವನಕ್ಕೆ ದಾರಿ ಏನು ಎಂದು ತಿಳಿಯದಾಯಿತು. ಬೆಂಗಳೂರಿನಲ್ಲಿದ್ದ ನಾಗೇಂದ್ರ ರಾಯರ ಸೋದರಮಾವ ಇವರನ್ನೆಲ್ಲಾ ಬೆಂಗಳೂರಿಗೆ ಕರೆದುಕೊಂಡು ಹೋದರು.

ವೃತ್ತಿ ರಂಗಭೂಮಿಗೆ

ಮಾವ ಸುಬ್ಬರಾವ್, ನಾಗೇಂದ್ರರಾಯರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರನ್ನು ದೊಡ್ಡಣ್ಣ ಪ್ರೌಢಶಾಲೆಗೆ ಸೇರಿಸಿದರು. ಶಾಲೆಯಲ್ಲಿ ನಾಗೇಂದ್ರರಾವ್ ತುಂಬ ಚುರುಕಿನ ವಿದ್ಯಾರ್ಥಿಯೆಂದು ಹೆಸರಾದರು. ಇದರಿಂದ ಅವರ ಮಾವನಿಗೆ ಎಲ್ಲಿಲ್ಲದ ಅಭಿಮಾನ ಸೋದರಳಿಯನ ಪ್ರಗತಿಯನ್ನು ಗಮನವಿಟ್ಟು ನೋಡುತ್ತಿದ್ದರು. ಪ್ರತಿನಿತ್ಯ ಸಂಜೆ ಶಾಲೆಯ ಪಾಠಗಳನ್ನು ಹೇಳಿಕೊಡುತ್ತಿದ್ದರು. ಮಕ್ಕಳಿಲ್ಲದ ಅವರಿಗೆ ನಾಗೇಂದ್ರರಾಯರೇ ಮಗನಾಗಿದ್ದರು. ಆದರೆ ಅವರ ಹೆಂಡತಿಯ ತಂಗಿಯರಿಬ್ಬರು ನಾಗೇಂದ್ರರಾಯರಿಗೆ ಕಿರುಕುಳು ಕೊಡುತ್ತಿದ್ದರು. ರಾಯರು ಅದನ್ನು ಮರುಮಾತಿಲ್ಲದೆ ಸಹಿಸಿಕೊಳ್ಳುತ್ತಿದ್ದರು.

ನಾಗೇಂದ್ರರಾಯರು ಮನೆಯ ಹುಡುಗರನ್ನೆಲ್ಲಾ ಸೇರಿಸಿ ಅವರಿಗೆ ‘ದುಶ್ಯಾಸನ ಕಾಳಗ’ದ ಭಾಗಗಳನ್ನು ಅಭಿನಯಿಸಿ ತೋರಿಸುತ್ತಿದ್ದರು. ಇದು ಅವರ ಸೋದರ ಮಾವನಿಗೆ ಗೊತ್ತಾಗಿ, ಬಿಡುವಾದಾಗಲೆಲ್ಲಾ ನಾಗೇಂದ್ರರಾಯರಿಂದ ಭೀಮನ ಪಾತ್ರದ ಅಭಿನಯವನ್ನು ಮಾಡಿಸಿ ನೋಡಿ ಸಂತೋಷ ಪಡುತ್ತಿದ್ದರು.

ಈ ಸಂದರ್ಭದಲ್ಲಿ ನಾಗೇಂದ್ರರಾಯರು ತಮ್ಮ ಸೋದರಿ ಮತ್ತು ತಾಯಿಯೊಡನೆ ಪ್ರತ್ಯೇಕವಾಗಿ ಮನೆ ಮಾಡುವ ಸಂದರ್ಭ ಬಂತು. ರುಕ್ಮಣೀದೇವಿಗೆ ತಮ್ಮ ಎಳೆಯ ಮಕ್ಕಳನ್ನು ಸಾಕುವ ಜವಾಬ್ದಾರಿ ಬಿತ್ತು. ಅವರು ಯಾರದೊ ಮನೆಯಲ್ಲಿ ಅಡಿಗೆ ಮಾಡುತ್ತಾ, ಇನ್ಯಾರದೋ ಮನೆಯಲ್ಲಿ ಅವಲಕ್ಕಿ, ಮೆಣಸಿನಪುಡಿ, ಸಂಡಿಗೆ ಮುಂತಾದವನ್ನು ಮಾಡಿಕೊಡುತ್ತಾ ಮಕ್ಕಳ ಹಾಗೂ ತಮ್ಮ ಹೊಟ್ಟೆ ಹೊರೆಯಲಾರಂಭಿಸಿದರು.

ಈ ಸಮಯದಲ್ಲಿಯೇ ನಾಗೇಂದ್ರರಾಯರು ಓದುತ್ತಿದ್ದ ಶಾಲೆಯ ವಾರ್ಷಿಕೋತ್ಸವವು ಬಂತು. ಅಲ್ಲಿನ ವಿದ್ಯಾರ್ಥಿಗಳು ಉತ್ಸವದ ಅಂಗವಾಗಿ ‘ಚಂದ್ರಹಾಸ’ ನಾಟಕವನ್ನು ಆಡಲು ನಿರ್ಧರಿಸಿದರು. ಇದರಲ್ಲಿ ನಾಯಕಿ ‘ವಿಷಯೆ’ ಯ ಪಾತ್ರ ನಾಗೇಂದ್ರರಾಯರ ಪಾಲಿಗೆ ಬಂತು. ಆ ಸಮಯದಲ್ಲಿ ಬೆಂಗಳೂರಿನಲ್ಲಿ ಶಿರಹಟ್ಟಿ ವೆಂಕೋಬರಾಯರ ನಾಟಕದ ಕಂಪನಿ ಬಿಡಾರ ಮಾಡಿತ್ತು. ‘ಚಂದ್ರಹಾಸ’ ನಾಟಕ ನೋಡಲು ಆ ಕಂಪನಿಯಕೆಲವು ನಟರು ಬಂದಿದ್ದರು. ಅವರಿಗೆ ನಾಗೇಂದ್ರರಾಯರ ಅಭಿನಯ ತುಂಬ ಪ್ರಿಯವಾಯಿತು. ತಮ್ಮ ಕಂಪನಿಯ ಮಾಲೀಕರಿಗೆ ಈ ವಿಷಯ ತಿಳಿಸಿದರು. ಮರು ದಿನವೇ ನಾಗೇಂದ್ರರಾಯರಿಗೆ ಶಿರಹಟ್ಟಿ ವೆಂಕೋಬರಾಯರಿಂದ ಕರೆ ಬಂತು. ವೆಂಕೋಬರಾಯರು ತಮ್ಮ ಕಂಪನಿಗೆ ಸೇರುವಂತೆ ನಾಗೇಂದ್ರರಾಯರನ್ನು ಆಹ್ವಾನಿಸಿದರು. ತಿಂಗಳಿಗೆ ಹದಿನೈದು ರೂಪಾಯಿ ಸಂಬಳವನ್ನು ಕೊಡುವುದಾಗಿ ಭರವಸೆ ಇತ್ತರು. ೧೯೦೮ನೆಯ ಇಸವಿಯಲ್ಲಿ ಹದಿನೈದು ರೂಪಾಯಿ ಸಾಕಷ್ಟು ದೊಡ್ಡ ಸಂಬಳವೇ! ತಮ್ಮ ಗಳಿಕೆಯಿಂದ ಮನೆಯ ಪರಿಸ್ಥಿತಿ ಸ್ವಲ್ಪ ಉತ್ತಮಗೊಳ್ಳಬಹುದೆಂದು ನಾಗೇಂದ್ರರಾಯರಿಗೆ ತೋರಿತು. ಅದಕ್ಕಿಂತ ಹೆಚ್ಚಾಗಿ ತಮ್ಮ ಮೆಚ್ಚಿನ ಕ್ಷೇತ್ರವಾದ ನಾಟಕರಂಗದಲ್ಲಿ ನಿತ್ಯ ಪಾಲುಗೊಳ್ಳಬಹುದು. ಆದರೆ ತಾಯಿ ರುಕ್ಮಿಣೀದೇವಿ ತಮ್ಮ ಮಗ ನಾಟಕದ ಕಂಪನಿಗೆ ಸೇರುವುದಕ್ಕೆ ಒಪ್ಪಲಿಲ್ಲ. ಮಗ ಕಣ್ಣೆದುರಿಗೆ ಇರಬೇಕು ಎಂದು ತಾಯಿಯ ಆಸೆ. ಕಂಪನಿಗೆ ಸೇರಿದರೆ ಊರೂರು ಸುತ್ತಬೇಕು. ಆದರೆ ರಾಯರು ಒತ್ತಾಯದಿಂದ ತಾಯಿಯನ್ನು ಒಪ್ಪಿಸಿದರು.

ಸಂಬಳವಿಲ್ಲದ ದುಡಿತ

ನಾಟಕ ಕಂಪೆನಿಗೆ ಸೇರಿದುದರಿಂದ ಶಾಲೆಯ ವ್ಯಾಸಂಗವನ್ನು ಪೂರ್ತಿಯಾಗಿ ಬಿಡಬೇಕಾಯಿತು. ಆದರೆ ವೆಂಕೋಬರಾಯರು ಶಿಕ್ಷಣಕ್ಕೆ ನಾಟಕ ಮನೆಯಲ್ಲೇ ವ್ಯವಸ್ಥೆ ಮಾಡಿದ್ದರು. ಜೊತೆಗೆ ನೃತ್ಯ ಹಾಗೂ ಸಂಗೀತ ಶಿಕ್ಷಣವನ್ನೂ ನೀಡಿದರು. ಬಾಲ್ಯದಲ್ಲೇ ಬಿದ್ದ ಈ ಅಸ್ತಿಭಾರದಿಂದ ಮುಂದೆ ನಾಗೇಂದ್ರರಾಯರಿಗೆ ತುಂಬ ಅನುಕೂಲವಾಯಿತು.

ಬೆಂಗಳೂರಿನ ಬಿಡಾರ ತೆಗೆದಮೇಲೆ ಶಿರಹಟ್ಟಿ ಕಂಪನಿ ಬಳ್ಳಾರಿ, ಆದವಾನಿ, ರಾಯಚೂರುಗಳಿಗೆ ಭೇಟಿಕೊಟ್ಟಿತು. ಆ ವೇಳೆಗಾಗಲೇ ಆರು ತಿಂಗಳುಗಳು ಉರುಳಿದ್ದವು. ತಂದೆಯ ವರ್ಷಾಂತಿಕಕ್ಕೆ ಬರುವಂತೆ ತಾಯಿಯಿಂದ ಪತ್ರ ಬಂತು. ನಾಗೇಂದ್ರರಾಯರು ಬಾಕಿ ಉಳಿದಿದ್ದ ತಮ್ಮ ಆರುತಿಂಗಳ ಸಂಬಳವನ್ನೂ, ಹೋಗಿ ಬರುವ ಖರ್ಚನ್ನೂ ಕೊಡುವಂತೆ ವೆಂಕೋಬರಾಯರಲ್ಲಿ ಕೇಳಿದರು. ಆದರೆ ಅವರು ಹಣ ಕೊಡಲಿಲ್ಲ. ಊರಿನಿಂದ ಬಂದಮೇಲೆ ಕೊಡುವುದಾಗಿ ಹೇಳಿ ಬಸ್ ಛಾರ್ಜಿನ ಅರ್ಧಹಣವನ್ನು ಮಾತ್ರ ಕೊಟ್ಟರು. ಬೆಂಗಳೂರಿಗೆ ಬಂದಮೇಲೆ ಈ ಎಲ್ಲ ವಿಚಾರ ತಿಳಿದು ತಾಯಿ, ಮತ್ತೆ ಆ ಕಂಪನಿಗೆ ಹೋಗುವುದರಿಂದ ಉಪಯೋಗವಿಲ್ಲವೆಂದು ಹೇಳಿ ಮಗನನ್ನು ಅಲ್ಲೆ ಉಳಿಸಿಕೊಂಡರು. ಮಗನ ವಿದ್ಯಾಭ್ಯಾಸ ಮುಂದುವರಿಸಲು ಹಿಂದೂ ಆಂಗ್ಲೊವರ್ನಾಕ್ಯುಲರ್ ಸ್ಕೂಲಿಗೆ ಸೇರಿಸಿದರು. ಶಾಲೆಗೆ ಸೇರಿದರೂ ರಾಯರಿಗೆ ನಾಟಕದ ಆಕರ್ಷಣೆ ಕಡಿಮೆಯಾಗಲಿಲ್ಲ.

‘ಲಕ್ಷ್ಮೀವಿಲಾಸ  ಥಿಯೇಟ್ರಿಕಲ್ ಕಂಪನಿ’ ಯ ವಿ.ಕೆ. ಸಿಂಹ ಅವರಿಗೆ ನಾಗೇಂದ್ರರಾಯರು ಶಿರಹಟ್ಟಿ ಕಂಪನಿಯಲ್ಲಿ ಸ್ತ್ರೀ ಪಾತ್ರಗಳನ್ನು ಅಭಿನಯಿಸುತ್ತಿದ್ದ ವಿಚಾರ ತಿಳಿಯಿತು. ಅವರು ರಾಯರನ್ನು ತಮ್ಮ ಕಂಪನಿಗೆ ಆಹ್ವಾನಿಸಿದರು. ರಾಯರು ಒಪ್ಪಿಕೊಂಡರು. ಆದರೆ ಶಾಲೆಗೆ ಹೋಗುವುದನ್ನು ಬಿಡಲಿಲ್ಲ. ಹಗಲು ಶಾಲೆಗೆ ಹೋಗಿ, ರಾತ್ರಿ ನಾಟಕಗಳಲ್ಲಿ ಅಭಿನಯಿಸುತ್ತಿದದರು.

ಆ ಸಮಯದಲ್ಲಿ ಎ.ವಿ. ವರದಾಚಾರ್ ಅವರು ರಾಯರ  ಕಂಪನಿ ಉಪಯೋಗಿಸುತ್ತಿದ್ದ ನಾಟಕ ಮಂದಿರವನ್ನು ಒಂದು ತಿಂಗಳು ಬಾಡಿಗೆಗೆ ಪಡೆದು ತಮ್ಮ ನಾಟಕಗಳನ್ನು ಅಭಿನಯಿಸತೊಡಗಿದರು. ಇದರಿಂದ ನಾಗೇಂದ್ರ ರಾಯರಿಗಿದ್ದ ಕಂಪನಿಗೆ ಕೆಲಸವಿಲ್ಲದಂತಾಯಿತು. ವರದಾಚಾರ್ಯರ ಅಭಿನಯದ ಬಗೆಗೆ ಬಹಳ ಕೇಳಿದ್ದ ನಾಗೇಂದ್ರರಾಯರಿಗೆ ಈಗ ಅದನ್ನು ಕಣ್ಣಾರೆ ನೋಡುವ ಅವಕಾಶ ಸಿಕ್ಕಿತು. ಆಗ ವರದಾಚಾರ್ಯರು ‘ಶಾಕುಂತಲಾ’ ನಾಟಕವನ್ನು ಪ್ರದರ್ಶಿಸುತ್ತಿದ್ದರು. ಅದರಲ್ಲಿ ದುಷ್ಯಂತನಾಗಿ ವರದಾಚಾರ್ ಮತ್ತು ಶಕುಂತಲೆಯಾಗಿ ಬೋಧರಾವ್ ಅದ್ಭುತವಾಗಿ ಅಭಿನಯಿಸುತ್ತಿದ್ದರು. ಅದು ನಾಗೇಂದ್ರರಾಯರ ಮೇಲೆ ತುಂಬ ಪ್ರಭಾವ ಬೀರಿತು. ಅಭಿನಯಿಸಿದರೆ ಇಂಥವರ ಜೊತೆ ಅಭಿನಯಿಸಬೇಕು ಎಂದು ಮನದಲ್ಲೇ ಅಂದುಕೊಂಡರು. ಅದು ಈಡೇರುವ ಸಂದರ್ಭ ಆಶ್ಚರ್ಯಕರವಾಗಿ ಒದಗಿ ಬಂತು.

ವರದಾಚಾರ್ಯರ ನಾಟಕ ಪ್ರದರ್ಶನ ಇಲ್ಲದ ಒಂದು ದಿನ ವಿ.ಕೆ. ಸಿಂಹ ಕಂಪನಿಯವರು ‘ಶೂರಸೇನ ಚರಿತ್ರೆ’ ಯನ್ನು ಅಲ್ಲಿ ಅಭಿನಯಿಸಿದರು. ಅದನ್ನು ನೋಡಲು ವರದಾಚಾರ್ ಕಂಪನಿಯ ಕೆಲವರು ನಟರು ಬಂದಿದ್ದರು. ಆ ನಾಟಕದಲ್ಲಿ ನಾಗೇಂದ್ರರಾಯರ ನಾಯಕಿ ಪಾತ್ರದ ಅಭಿನಯ ಅವರಿಗೆ ಬಹಳ ಇಷ್ಟವಾಯಿತು. ಅದನ್ನು ವರದಾಚಾರ್ಯರಿಗೆ ತಿಳಿಸಿದರು. ಅವರು ನಾಗೇಂದ್ರ ರಾಯರನ್ನು ನೋಡಲು ಅಪೇಕ್ಷಿಸಿದರು.

ವರದಾಚಾರ್ಯರು ನಾಗೇಂದ್ರರಾಯರ ಕ್ಷೇಮ ಸಮಾಚಾರಗಳನ್ನು ವಿಚಾರಿಸಿಕೊಂಡು ಅನಂತರ ತಮ್ಮ ಕಂಪನಿಗೆ ಸೇರುವಂತೆ ಆಹ್ವಾನಿಸಿದರು. ರಾಯರಿಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯಿತು. ಸಂತೋಷದಿಂದ ಒಪ್ಪಿಕೊಂಡರು. ಆದರೆ ಅವರು ಬೇರೆ ನಾಟಕ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವುದರಿಂದ ಈಗಲೇ ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳಲು ಆಗುವುದಿಲ್ಲವೆಂದೂ, ಮುಂದಿನ ಮೈಸೂರು ಕ್ಯಾಂಪಿನಲ್ಲಿ ಸೇರಿಸಿಕೊಳ್ಳುವುದಾಗಿಯೂ ಆಚಾರ್ಯರು ಆಶ್ವಾಸನೆ ನೀಡಿದರು.

ನಾಗೇಂದ್ರರಾಯರು ಇದ್ದ ಕಂಪನಿಯವರಿಗೆ ಈ ಸಮಾಚಾರ ತಿಳಿಯಿತು. ಅವರು ರಾಯರನ್ನು ಮೈಮೂಳೆ ಮುರಿಯುವುದಾಗಿ ಬೆದರಿಸಿದರು. ರಾಯರು ಹೆದರದೆ ಕೆಲವು ದಿನಗಳ ನಂತರ ಮೈಸೂರಿಗೆ ಹೋಗಿ, ಆ ವೇಳೆಗೆ ಅಲ್ಲಿ ಬೀಡುಬಿಟ್ಟಿದ್ದ ವರದಾಚಾರ್ಯರ ಕಂಪನಿಯನ್ನು ಸೇರಿದರು.

ವರದಾಚಾರ್ಯರ ಸಹವಾಸ

ರಾಯರು ವರದಾಚಾರ್ಯರ ಕಂಪನಿಯನ್ನು ಸೇರಿದ ಹೊಸದರಲ್ಲಿಯೇ ಮೈಸೂರಿನ ನಾಗರಿಕರು ವರದಾ ಚಾರ್ಯರನ್ನು ಸನ್ಮಾನಿಸಲು ನಿರ್ಧರಿಸಿದರು. ಆ ಸಮಾರಂಭದ ಅಂಗವಾಗಿ ಒಂದು ವಿವಿಧ ವಿನೋದಾವಳಿ ಕಾರ್ಯಕ್ರಮವನ್ನು ನಿಯೋಜಿಸಿದ್ದರು. ಅದರಲ್ಲಿ ನಾಗೇಂದ್ರರಾಯರ ನೃತ್ಯಪ್ರದರ್ಶನವೂ ಸೇರಿತ್ತು. ಆ ದಿನದ ರಾಯರ ನೃತ್ಯ ಜನರಿಗೆ ಬಹಳ ಪ್ರಿಯವಾಯಿತು. ಉತ್ಸಾಹದಿಂದ ಚಪ್ಪಾಳೆ ತಟ್ಟಿ ‘ಒನ್ಸ್ ಮೋರ್’ ಎಂದು ಕೂಗಿದರು. ವರದಾಚಾರ್ಯರು ನೇಪಥ್ಯದಿಂದ ಮತ್ತೊಮ್ಮೆ ನೃತ್ಯಮಾಡಲು ಸೂಚನೆ ಕೊಟ್ಟರು. ಆ ದಿನ ಪ್ರೇಕ್ಷಕರಿಂದ ದೊರೆತ ಪ್ರೋತ್ಸಾಹವನ್ನು ರಾಯರು ಎಂದೂ ಮರೆಯಲಿಲ್ಲ.

ವರದಾಚಾರ್ಯರು ಆಗ ‘ಪ್ರಹ್ಲಾದಚರಿತ್ರೆ’ ನಾಟಕವನ್ನು ಅಭ್ಯಾಸ ಮಾಡುತ್ತಿದ್ದರು. ಅದರಲ್ಲಿ ‘ಭೂದೇವಿ’ಯ ಪಾತ್ರ ರಾಯರಿಗೆ ದೊರೆಯಿತು. ಸ್ವತಃ ವರದಾಚಾರ್ಯರೇ ನಿಂತು ಅಭ್ಯಾಸದ ಮೇಲ್ವಿಚಾರಣೆ ನಡೆಸುತ್ತಿದ್ದರು. ಅಭಿನಯ ವಿಶೇಷಗಳನ್ನೂ, ಉಚ್ಚಾರಣೆಯ ವೈವಿಧ್ಯವನ್ನೂ, ಸಂಗೀತದ ಕ್ರಮವನ್ನೂ ಹೇಳಿಕೊಡುತ್ತಿದ್ದರು.

‘ಪ್ರಹ್ಲಾದಚರಿತ್ರೆ’ ಯ ಪ್ರದರ್ಶನವಾಯಿತು. ರಾಯರು ಭೂದೇವಿಯ ಪಾತ್ರದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದರು. ಅವರ ಅಭಿನಯದ ವೈಖರಿಯನ್ನು ನೋಡಿ ಮರುಳಾದ ಜನ, ಆ ಪಾತ್ರವನ್ನು ಒಬ್ಬಳು ನಟಿಯೇ ವಹಿಸಿರಬೇಕೆಂದು ಭಾವಿಸಿದರು. ರಸಿಕ ಪ್ರೇಕ್ಷಕರಲ್ಲಿ ‘ಭೂದೇವಿ’ ಪಾತ್ರಧಾರಿ ಹೆಣ್ಣೋ-ಗಂಡೋ ಎಂಬ ವಿಷಯದಲ್ಲಿ ಜಿಜ್ಞಾಸೆ ಹುಟ್ಟಿ ಕೊನೆಗೆ ಪಂಥವನ್ನೂ ಕಟ್ಟಿದರು. ಸತ್ಯ ಗೊತ್ತಾದಾಗ ಅವರಿಗೆಲ್ಲಾ ಆಶ್ಚರ್ಯವೋ ಆಶ್ಚರ್ಯ.

ಜನರು ಅವರನ್ನು ‘ಭೂದೇವಿ ನಾಗೇಂದ್ರರಾವ್’  ಎಂದೇ ಕರೆಯತೊಡಗಿದರು. ವರದಾಚಾರ್ಯರಿಗಂತೂ ನಾಗೇಂದ್ರರಾಯರ ಅಭಿನಯ ನೋಡಿ ಬಹಳ ಸಂತೋಷವಾಯಿತು. ಅವರನ್ನು ಮಗನಿಗಿಂತ ಹೆಚ್ಚಾಗಿ ನೋಡಿಕೊಳ್ಳತೊಡಗಿದರು. ಅವರ ವಿದ್ಯಾಭ್ಯಾಸ ನಿಲ್ಲಬಾರದೆಂದು ಶಾಲೆಯ ಪಾಠಗಳನ್ನು ಕಂಪನಿಯಲ್ಲೇ ಹೇಳಿಕೊಡಲು ಒಬ್ಬರು ಶಿಕ್ಷಕರನ್ನು ನೇಮಿಸಿದರು.

ಮೈಸೂರಿನಿಂದ ಬೆಂಗಳೂರಿಗೆ ಬಂದ ಆಚಾರ್ಯರ ಕಂಪನಿ ‘ಪ್ರಹ್ಲಾದಚರಿತ್ರೆ’ಯ ಪ್ರದರ್ಶನದಿಂದ ಜಯಭೇರಿ ಹೊಡೆಯಿತು. ನಾಗೇಂದ್ರರಾಯರ ಕೀರ್ತಿ ಎಲ್ಲೆಡೆ ಹರಡಿತು. ಮುಂದೆ ಮಂಗಳೂರಿಗೆ ಪ್ರಯಾಣ ಮಾಡಿದ ಕಂಪನಿ ಅಲ್ಲಿ ತಾತ್ಕಾಲಿಕವಾಗಿ ಒಂದು ರಂಗಮಂದಿರವನ್ನು ರಚಿಸಿಕೊಂಡಿತು. ಆಗ ಇನ್ನೂ ಅಲ್ಲಿಗೆ ವಿದ್ಯುದ್ದೀಪಗಳು ಬಂದಿರಲಿಲ್ಲ. ಗ್ಯಾಸ್ ದೀಪಗಳನ್ನು ರಂಗಸ್ಥಳದ ಎರಡೂ ಕಡೆಗೆ ನೇತುಹಾಕಿ, ಅದರ ಬೆಳಕಿನಲ್ಲಿ ನಾಟಕಗಳನ್ನು ಆಡುತ್ತಿದ್ದರು. ನಾಟಕ ಪ್ರಾರಂಭವಾಗುವುದಕ್ಕಿಂತ ಮುಂಚೆ ನಟರೇ ಗಲ್ಲಾ ಪೆಟ್ಟಿಗೆಯ ಮುಂದೆ ಕುಳಿತು ಟಿಕೆಟ್ ಮಾರುತ್ತಿದ್ದರು. ವಿವಿಧ ವೇಷ ಭೂಷಣಗಳಿಂದ ರಂಗಸ್ಥಳದಲ್ಲಿ ರಂಜಿಸುವ ನಟರು ವಾಸ್ತವದಲ್ಲಿ ಹೇಗಿದ್ದಾರೆ ಎಂದು ನೋಡಲು ಪ್ರೇಕ್ಷಕರು ಕಿಕ್ಕಿರಿಯುತ್ತಿದ್ದರು.ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಟಿಕೇಟ್‌ಗಳೂ ಖರ್ಚಾಗುತ್ತಿದ್ದವು.

‘ಭೂದೇವಿ’ಯ ಪಾತ್ರದಲ್ಲಿ ನಾಗೇಂದ್ರರಾಯರು ಪ್ರಸಿದ್ಧರಾದ ಮೇಲೆ, ವರದಾಚಾರ್ಯರಕಂಪನಿಯ ಮುಂದಿನ ಎಲ್ಲ ಹೊಸ ನಾಟಕಗಳಲ್ಲೂ ಸ್ತ್ರೀ ಪಾತ್ರಗಳು ಅವರಿಗೇ ಮೀಸಲಾದವು.

ದಕ್ಷಿಣ ಭಾರತದಲ್ಲಿ

ವರದಾಚಾರ್ಯರ ಕಂಪನಿ ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡಲು ನಿರ್ಧರಿಸಿತು. ಮೊದಲು ಮದರಾಸಿಗೆ ಬಂದು ಬಿಡಾರ ಮಾಡಿದರು. ಅಲ್ಲಿ ನಾಟಕ ಮಂದಿರ ಇರಲಿಲ್ಲ. ಆದುದರಿಂದ ಚಲನಚಿತ್ರ ಮಂದಿರದಲ್ಲೇ ನಾಟಕ ಪ್ರದರ್ಶಿಸಲು ವ್ಯವಸ್ಥೆ ಮಾಡಿಕೊಂಡು ಚಲನಚಿತ್ರದಮೊದಲ ಆಟ ಮುಗಿದ ನಂತರ ನಾಟಕದ ಟಿಕೇಟ್‌ಗಳನ್ನು ಮಾರಬೇಕಾಗಿತ್ತು. ಇಷ್ಟೆಲ್ಲ ಅನನುಕೂಲಗಳ ಜೊತೆಗೆ ಮದ ರಾಸಿನಲ್ಲಿ ನಾಟಕಕ್ಕೆ ಒಳ್ಳೆಯ ಪ್ರೇಕ್ಷಕರು ಇರಲಿಲ್ಲ. ಏಕೆಂದರೆ ಆಗ ತಮಿಳು ರಂಗಭೂಮಿ ಅಂತಹ ಉತ್ತಮ ಮಟ್ಟದಲ್ಲಿ ಇರಲಿಲ್ಲ. ಒಳ್ಳೆಯ ಅಭಿರುಚಿಯ ಜನರು ಯಾರೂ ನಾಟಕಗಳಿಗೆ ಹೋಗುತ್ತಿರಲಿಲ್ಲ. ಆದರೆ ವರದಾಚಾರ್ಯರ ನಾಟಕದ ಒಂದು ಪ್ರದರ್ಶನ ಆಗುತ್ತಿದ್ದಂತೆಯೇ ಅದರ ಒಳ್ಳೆಯ ಗುಣಮಟ್ಟದ ಬಗೆಗೆ ಎಲ್ಲೆಲ್ಲೂ ಪ್ರಚಾರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ನೋಡಲು ಜನರು ಬರತೊಡಗಿದರು. ಮದರಾಸ್ ಕ್ಯಾಂಪಿನಲ್ಲಿ ಪ್ರದರ್ಶಿಸಿದ ಎಲ್ಲ ನಾಟಕಗಳೂ ಜನಪ್ರಿಯವಾದವು.

ಮದರಾಸಿನಿಂದ ಹೊರಟು ಕೊಯಮತ್ತೂರು, ತಿರುಪೂರು, ಈರೋಡ್‌ಗಳಲ್ಲಿ ನಾಟಕಗಳನ್ನು ಆಡಿ ತಿರುಚಿನಾಪಳ್ಳಿಗೆ ಬಂದರು. ಇವರಕನ್ನಡ ನಾಟಕಗಳನ್ನು ನೋಡಿ ಮೆಚ್ಚಿದ ಅಲ್ಲಿನ ಸಾರ್ವಜನಿಕರು ವರಾದಚಾರ್ಯರಿಗೆ, ‘ನಾಟಕ ಶಿರೋಮಣಿ’ ಎಂಬ ಬಿರುದನ್ನು ನೀಡಿದರು. ನಾಗೇಂದ್ರರಾಯರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಿದರು.

ಅಭಿನಯ ವೈಶಿಷ್ಟ್ಯ

ದಕ್ಷಿಣ ಭಾರತ ಪ್ರವಾಸ ಮಂಗಳೂರಿಗೆ ಹಿಂತಿರುಗಿದಮೇಲೆ ವರದಾಚಾರ್ಯರು ಒಂದು ಹೊಸ ಯೋಜನೆ ಹಾಕಿದರು. ವರದಾಚಾರ್ಯರೂ ಸೇರಿದಂತೆ ಕಂಪನಿಯ ಅನೇಕ ಮುಖ್ಯನಟರಿಗೆ ವಯಸ್ಸಾಗುತ್ತಿತ್ತು. ಆದುದರಿಂದ ತಮ್ಮ ನಂತರವೂ ಕಂಪನಿ ಮುಂದುವರಿಯಬೇಕು ಎಂಬ ಆಶಯದಿಂದಕಿರಿಯ ಕಲಾವಿದರಿಗೆ ಮುಖ್ಯ ಪಾತ್ರಗಳನ್ನು ವಹಿಸುವ ತರಬೇತಿ ಕೊಡುವುದೇ ಈ ಯೋಜನೆ. ಇದರ ಪ್ರಕಾರ ‘ರತ್ನಾವಳಿ’ ನಾಟಕದಲ್ಲಿ ವರದಾಚಾಯ೪ರು ಅಭಿನಯಿಸುತ್ತಿದ್ದ ವತ್ಸರಾಜನ ಪಾತ್ರ ನಾಗೇಂದ್ರರಾಯರ ಪಾಲಿಗೆ ಬಂತು. ಹಾಗೆಯೇ ಉಳಿದ ಮುಖ್ಯಪಾತ್ರಗಲನ್ನು ಇತರ ಕಿರಿಯ ಕಲಾವಿದರಿಗೆ ಹಂಚಿದರು. ವರದಾಚಾರ್ಯರು ಮಾತ್ರ ಒಂದು ಸಲ ಪ್ರವೇಶವಿರುವ ಒಂದು ಸಣ್ಣ ಪಾತ್ರವನ್ನು ವಹಿಸಿದರು. ನಾಗೇಂದ್ರ ರಾಯರಿಗೆ ಮತ್ತು ಇತರರಿಗೆ ಒಳ್ಳೆಯ ತರಬೇತಿ ಕೊಟ್ಟರು. ಈ ಹೊಸ ‘ರತ್ನಾವಳಿ’ಯ ಪ್ರದರ್ಶನ ಮಂಗಳೂರಿನಲ್ಲಿ ನಡೆದು ಜನ ಮೆಚ್ಚುಗೆಯನ್ನು ಗಳಿಸಿತು. ಆಚಾರ್ಯರೂ ತುಂಬು ಹೃದಯದಿಂದ ತಮ್ಮ ಮೆಚ್ಚುಗೆ ಯನ್ನು ಸೂಚಿಸಿದರು. ವರದಾಚಾರ್ಯರ ಸ್ಥಾನವನ್ನು ತುಂಬಲು ನಾಗೇಂದ್ರರಾಯರು ಅರ್ಹರು ಎಂದು ಇಬ್ಬರ ಅಭಿನಯವನ್ನೂ ನೋಡಿದವರು ಅಭಿಪ್ರಾಯಪಟ್ಟರು.

ವರದಾಚಾರ್ಯರು ಕೆಲವು ಹೊಸ ನಾಟಕಗಳನ್ನು ಆಡಲು ಯೋಚಿಸಿದರು. ಅದರಂತೆ ರಾಮಾಯಣದ ಪ್ರಸಂಗಗಳಾದ ‘ಸುಗ್ರೀವ ಸಖ್ಯ’ ಮತ್ತು ‘ಲಂಕಾದಹನ’  ಹಾಗೂ ‘ಸಂಪೂರ್ಣ ರಾಮಾಯಣ’ ವನ್ನು ಆಯ್ಕೆ ಮಾಡಿದರು.ಇವೆಲ್ಲ ನಾಟಕಗಳಲ್ಲಿ ರಾಯರದು ಸೀತೆಯ ಪಾತ್ರ. ವರದಾಚಾರ್ಯರು ರಾಮನ ಪಾತ್ರವಹಿಸಿದರು. ಇದರ ಜೊತೆಗೆ ವಿಷ್ಣುವಿನ ಮೂರು ಅವತಾರಗಳನ್ನು ನಿರೂಪಿಸುವ ‘ವಿಷ್ಣುಲೀಲಾ’ ನಾಟಕವನ್ನು ಸಿದ್ಧ ಮಾಡಿಕೊಂಡರು. ಅನಂತರ ಮದರಾಸಿಗೆ ಹೋದರು. ಅಲ್ಲಿ ಈ ನಾಟಕಗಳು ಯಶಸ್ವಿಯಾದವು. ಇಷ್ಟಾದರೂ ವರದಾಚಾರ್ಯರಕಂಪನಿ ಆರ್ಥಿಕವಾಗಿ ಸುಧಾರಿಸಲಿಲ್ಲ. ಯಾರದೋ ಸೂಚನೆಯಂತೆ ಅದನ್ನು ಲಿಮಿಟೆಡ್ ಕಂಪನಿ ಮಾಡಲು ಹೊರಟರು. ಇದರಿಂದ ವರದಾಚಾರ್ಯರಿಗೆ ಹಾನಿಯಾಗುತ್ತದೆಂದು ನಾಗೇಂದ್ರರಾಯರೂ, ಇರರೂ ಹೇಳಿದರೂ ಕೇಳಲಿಲ್ಲ.ಇದರಿಂದ ಬೇಸರಗೊಂಡ ರಾಯರು ‘ಚಾಮುಂಡೇಶ್ವರಿ ನಾಟಕ ಸಭಾ’ ಹೋಗಿ ಸೇರಿಕೊಂಡರು. ಅಲ್ಲೂ ಆಡಳಿತ ವ್ಯವಸ್ಥೆ ಸರಿಹೋಗಲಿಲ್ಲ. ವರದಾಚಾರ್ಯರ ಕಂಪನಿಯಲ್ಲಿ ಏನೇ ಕೊರತೆಗಳು ಇದ್ದರೂ ಅಲ್ಲಿಯೇ ಇದ್ದುಕೊಂಡು ಅವನ್ನೆಲ್ಲ ಸರಿಪಡಿಸಬೇಕು ಎಂಬ ನಿರ್ಧಾರದಿಂದ ರಾಯರು ಮತ್ತೆ ವರದಾಚಾರ್ಯರ ಬಳಿಗೆ ಬಂದರು. ರಾಯರು ಕಂಪನಿ ಬಿಟ್ಟು ಹೋದಾಗ ವರದಾಚಾರ್ಯರಿಗೆ ತುಂಬ ದುಃಖವಾಗಿತ್ತು. ಆಗ ಮರಳಿ ಬಂದಾಗ ಸಂತೋಷದಿಂದ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ‘ಹರಿಶ್ಚಂದ್ರ’ ನಾಟಕವನ್ನು ಪ್ರದರ್ಶಿಸುವುದಾಗಿ ಪ್ರಕಟಣೆ ಹೊರಡಿಸಿದ್ದರು. ಆದರೆ ಅದರಲ್ಲಿ ಹರಿಶ್ಚಂದ್ರನ ಹೆಂಡತಿ ಚಂದ್ರಮತಿಯ ಪಾತ್ರವನ್ನು ವಹಿಸುತ್ತಿದ್ದ ಬೋಧರಾವ್ ತಮಗೆ ಸಂಬಳ ಹೆಚ್ಚಿಸಲಿಲ್ಲವೆಂಬ ಕಾರಣಕ್ಕಾಗಿ ಕಂಪನಿ ಬಿಟ್ಟುಹೋದರು. ನಾಯಕಿಯಿಲ್ಲದೆ ಕಂಪನಿ ಕಂಗಾಲಾಗಿತ್ತು. ಇಂತ ಸಮಯದಲ್ಲಿ ನಾಗೇಂದ್ರರಾಯರನ್ನೇ ಚಂದ್ರಮತಿಯ ಪಾತ್ರ ವಹಿಸುವಂತೆ ವರದಾಚಾರ್ಯರು ಕೇಳಿದರು. ರಾಯರು ಆ ಪಾತ್ರವನ್ನು ಮೊದಲು ಮಾಡಿರಲಿಲ್ಲ. ಆದರೂ ಧೈರ್ಯವಾಗಿ ಒಪ್ಪಿಕೊಂಡರು. ಬೋಧರಾವ್ ಅವರ ಪಾತ್ರಾಭಿನಯ ವೈಖರಿಯನ್ನು ಅನುಕರಣ ಮಾಡಿದರೆ ತಮ್ಮ ವೈಶಿಷ್ಟ್ಯ ಏನೆಂದು ಜನರಿಗೆ ಗೊತ್ತಾಗುವುದಿಲ್ಲ. ಆದುದರಿಂದ ಚಂದ್ರಮತಿಯ ಪಾತ್ರವನ್ನು ವಿಶೇಷ ರೀತಿಯಲ್ಲಿ ಅಭಿನಯಿಸಬೇಕೆಂದು ನಿರ್ಧರಿಸಿದರು. ಅದಕ್ಕಾಗಿ ಅಗತ್ಯವಾದ ಹೊಸ ಸಂಭಾಷಣೆಗಳನ್ನೂ ಹೊಸದಾಗಿ ಬರೆಸಿದರು.

ಚಂದ್ರಮತಿಯ ಮಗ ಲೋಹಿತಾಶ್ವನಿಗೆ ಕಾಡಿನಲ್ಲಿ ಹಾವು ಕಚ್ಚಿ ಸಾಯುತ್ತಾನೆ. ಚಂದ್ರಮತಿ ಮಗನಿಗಾಗಿ ಅಳುತ್ತಾಳೆ. ನಾಗೇಂದ್ರರಾಯರು ಚಂದ್ರಮತಿಯ ಪಾತ್ರವನ್ನು ಅಭಿನಯಿಸಿದರು. ಅಂದು ನಾಟಕಗೃಹದಲ್ಲಿ ಚಂದ್ರಮತಿಯ ದುಃಖವನ್ನು ನೋಡಿ ಕಣ್ಣೀರಿಡದ ಪ್ರೇಕ್ಷಕನಿಲ್ಲ. ವರದಾಚಾರ್ಯರ ಈ ದೃಶ್ಯ ಮುಗಿಯುತ್ತಿದ್ದಂತೆಯೇ ನೇಪಥ್ಯದಲ್ಲಿ ರಾಯರನ್ನು ಆಲಂಗಿಸಿ ತಮ್ಮ ಸಂತೋಷವನ್ನು ತಿಳಿಸಿದರು.

ಆ ವೇಳೆಗೆ ಮುಂದೆ ನಾಟಕಕಾರರಾಗಿ ಪ್ರಸಿದ್ಧರಾದ ಟಿ.ಪಿ.ಕೈಲಾಸಂ ಅವರು ವರದಾಚಾರ್ಯರ ಕಂಪನಿಗೆ ಸೇರಿದ್ದರು. ಮಂಗಳೂರಿನಿಂದ ಬೆಂಗಳೂರಿಗೆ ಕಂಪನಿ ಹಿಂತಿರುಗುವ ವೇಳೆಗೆ ವರದಾಚಾರ್ಯರ ಆರೋಗ್ಯ ಹದಗೆಟ್ಟಿತ್ತು. ರೋಗ ಉಲ್ಬಣಿಸಿ ಅವರು ನಾಟಕಗಳಲ್ಲಿ ಪಾತ್ರವಹಿಸುವುದೇ ಕಷ್ಟವಾಗತೊಡಗಿತು. ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯಿತು. ಕೈಲಾಸಂ ಅವರ ಸಲಹೆಯಂತೆ ಉಳಿದ ನಟರು ಕಂಪನಿ ಯನ್ನು ತುಮಕೂರಿಗೆ ತೆಗೆದುಕೊಂಡು ಹೋಗಿ, ಅಲ್ಲಿ ನಾಟಕಗಳನ್ನು ಆಡತೊಡಗಿದರು. ಇತ್ತ ವರದಾಚಾರ್ಯರ ಆರೋಗ್ಯ ಉತ್ತಮವಾಗಲಿಲ್ಲ. ಅವರು ೧೯೨೬ರ ಏಪ್ರಿಲ್ ೪ ರಂದು ಬೆಂಗಳೂರಿನಲ್ಲಿ ದಿವಂಗತರಾದರು. ಸುದ್ದಿ ಕೇಳುತ್ತಿದ್ದಂತೆಯೇ ನಾಗೇಂದ್ರರಾಯರು ಮತ್ತು ಇತರ ಕಲಾವಿದರು ದಿಗ್ಭ್ರಮೆಗೊಂಡು ತುಮಕೂರಿನಿಂದ ಬೆಂಗಳೂರಿಗೆ ಧಾವಿಸಿ ಬಂದರು. ತಮ್ಮ ಗುರುವಿನಂತಿದ್ದ ವರದಾಚಾರ್ಯರ ನಿಧನದಿಂದ ಅವರಿಗೆಲ್ಲ ದಿಕ್ಕುತೋಚದಂತಾಯಿತು.

ವರದಾಚಾರ್ಯರಿಲ್ಲದೆ ಕಂಪನಿಯನ್ನು ನಡೆಸುವುದು ಹೇಗೆಂದು ಎಲ್ಲರ ಸಮಸ್ಯೆಯಾಯಿತು. ಕೈಲಾಸಂ ಅವರು ಹೊಸ ನಾಟಕಗಳನ್ನು ಆಡಬೇಕೆಂದು ಸೂಚಿಸಿ ತಾವೇ ‘ಅಮ್ಮಾವ್ರ ಗಂಡ’  ಎಂಬ ನಾಟಕವನ್ನು ಹೇಳಿ ಬರೆಯಿಸಿ ದರು. ನಾಗೇಂದ್ರರಾಯರೇ ರಾತ್ರಿಯೆಲ್ಲಾ ಕುಳಿತು ಬರೆದುಕೊಂಡರು. ಮಾರನೆಯ ದಿನವೇ ತುಮಕೂರಿನಲ್ಲಿ ಅದರ ಪ್ರದರ್ಶನ, ನಟರು ಯಾರೂ ನಾಟಕದ ಅಭ್ಯಾಸವನ್ನೇ ಮಾಡಿರಲಿಲ್ಲ. ಸಾಮಾಜಿಕ ವಸ್ತುವನ್ನು ಕುರಿತ ನಾಟಕ; ಯಶಸ್ವಿಯಾಗುವುದೋ ಇಲ್ಲವೋ ಎಂಬ ಭೀತಿ ಎಲ್ಲರಿಗೂ ಇತ್ತು. ಆದರೆ ಎಲ್ಲರ ನಿರೀಕ್ಷೆಗೆ ಮೀರಿ ನಾಟಕ ಪ್ರಚಂಡ ಯಶಸ್ಸುಗಳಿಸಿತು. ಮುಂದೆ ಈ ನಾಟಕವನ್ನು ಮೈಸೂರಿನಲ್ಲಿ ಆಗಿನ ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಮುಂದೂ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು.

ಚಿತ್ರರಂಗಕ್ಕೆ

ನಾಟಕ ಕಂಪನಿಯಲ್ಲಿ ಭಿನ್ನಾಭಿಪ್ರಾಯ ಬಂದುದರಿಂದ ನಾಗೇಂದ್ರರಾಯರು ಅದನ್ನು ಬಿಟ್ಟು ಬಂದರು. ಆಗ ‘ಚಾಮುಂಡೇಶ್ವರಿ ನಾಟಕ ಸಭಾ’ ದಿಂದ ಮತ್ತೆ ಕರೆ ಬಂತು. ಅವರು ಆಗ ಆಡುತ್ತಿದ್ದ ‘ರಾಜಸೂಯ ಯಾಗ’ ನಾಟಕದ ಅರ್ಜುನನ ಪಾತ್ರ ನಾಗೇಂದ್ರರಾಯರಿಗೂ ಸಿಕ್ಕಿತು. ಆ ಪಾತ್ರವನ್ನು ರಾಯರು ಯಶಸ್ವಿಯಾಗಿ ನಿರ್ವಹಿಸಿ ಹೆಸರು ಗಳಿಸಿದರು. ಕಂಪನಿಯ ಆಡಳಿತ ಸಮಿತಿಯಲ್ಲಿ ಕಾರ್ಯದರ್ಶಿಯ ಸ್ಥಾನವನ್ನು ಅವರಿಗೆ ವಹಿಸಿಕೊಡಲಾಯಿತು. ಅಭಿನಯ-ಆಡಳಿತ ಎರಡರಲ್ಲೂ ತಾವು ಸಮರ್ಥರೆಂದು ರಾಯರು ತೋರಿಸಿಕೊಟ್ಟರು. ಕಂಪನಿ ಕರ್ನಾಟಕದಲ್ಲಿ ಸುತ್ತಿ ಉತ್ತಮ ನಾಟಕಗಳನ್ನು ಪ್ರದರ್ಶಿಸಿತು. ಈ ಅವಧಿಯಲ್ಲಿ ಮೂರು ಹೊಸ ನಾಟಕಗಳನ್ನು ಸಿದ್ಧಪಡಿಸಿಕೊಂಡರು. ‘ದಾನಶೂರ ಕರ್ಣ’  ಎಂಬ ನಾಟಕವನ್ನು ರಾಯರು ಬೇರೊಬ್ಬರ ಸಹಾಯದಿಂದ ಬರೆದರು. ‘ವೀರ ಅಭಿಮನ್ಯು’ ಮತ್ತು ‘ತುಕಾರಾಂ’ ಎಂಬ ನಾಟಕಗಳನ್ನು ನಾಗೇಂದ್ರರಾಯರೇ ಬರೆದರು. ನಾಟಕ ರಚನೆಯಲ್ಲಿ ಕೂಡ ಅವರು ಹೀಗೆ ಪ್ರಸಿದ್ಧರಾದರು. ಈ ನಾಟಕಗಳನ್ನು ಕರ್ನಾಟಕದಲ್ಲಿ ಆಡಿ ಯಶಸ್ಸುಗಳಿಸಿದ ಮೇಲೆ, ಕಂಪನಿ ದಕ್ಷಿಣಭಾರತ ಪ್ರವಾಸ ಹೊರಟಿತು. ಹಿಂದೆ ವರದಾಚಾರ್ಯರೊಡನೆ ಪ್ರವಾಸ ಹೋಗಿದ್ದ ಸ್ಥಳಗಳಿಗೆಲ್ಲಾ ಹೋಗಿ ನಾಟಕಗಳನ್ನು ಪ್ರದರ್ಶಿಸಿ ಹೆಸರನ್ನೂ-ಹಣವನ್ನೂ ಸಂಪಾದಿಸಿಕೊಂಡು ಬಂದರು. ಬೆಂಗಳೂರಿಗೆ ಬಂದಮೇಲೆ ಶೂದ್ರಕನ ಸಂಸ್ಕೃತ ‘ಮೃಚ್ಛಕಟಕ’ ನಾಟಕದ ಕನ್ನಡ ರೂಪ ‘ವಸಂತಸೇನಾ’ ನಾಟಕವನ್ನು ತೆಗೆದುಕೊಂಡು ಯಶಸ್ವಿಯಾಗಿ ಅಭಿನಯಿಸಿದರು. ನಾಗೇಂದ್ರರಾಯರೇ ವಸಂತಸೇನೆ ಈ ನಾಟಕ ಜನರನ್ನು  ಬಹಳ ಆಕರ್ಷಿಸಿತು.

ಈ ವೇಳೆಗೆ ಕಂಪನಿಯಲ್ಲಿ ಕಾರಣಾಂತರದಿಂದ ಬೋಧರಾಯರನ್ನು ವಜಾ ಮಾಡಿದುದರಿಂದ ಬೇಸರಗೊಂಡು ನಾಗೇಂದ್ರರಾಯರು ರಾಜೀನಾಮೆ ನೀಡಿದರು.

ಮುಂದಿನ ದಾರಿ ಅನಿಶ್ಚಿತವಾಗಿತ್ತು. ನಾಟಕ ರಂಗದಲ್ಲಿ ಉಳಿಯುವುದೋ ಅಥವಾ ಸಿನಿಮಾರಂಗಕ್ಕೆ ಹೋಗುವುದೋ ಎನ್ನುವುದು ದೊಡ್ಡ ಪ್ರಶ್ನೆಯಾಯಿತು. ಭಾರತದಲ್ಲಿ ೧೯೩೧ರ ಸುಮಾರಿಗೆ ಚಲನಚಿತ್ರಗಳ ಯುಗ ಆರಂಭವಾಯಿತು. ಮೊದಲು ಮೂಕಚಿತ್ರಗಳು ಅನಂತರ ಕ್ರಮೇಣ ಟಾಕಿ(ಮಾತಿರುವ) ಚಿತ್ರಗಳು ಬರತೊಡಗಿದ್ದವು. ನಾಗೇಂದ್ರರಾಯರಿಗೆ ಚಲನಚಿತ್ರರಂಗ ಕೈಬೀಸಿ ಕರೆಯುತ್ತಿತ್ತು. ಆಗ ಮುಂಬಯಿ ಚಲನಚಿತ್ರ ಕೇಂದ್ರವಾಗಿತ್ತು. ರಾಯರು ಅಲ್ಲಿಗೆ ಹೋಗಿ ತಮ್ಮ ಮುಂದಿನ ಅದೃಷ್ಟ ಪರೀಕ್ಷಿಸಲು ನಿರ್ಧರಿಸಿದರು. ಅವರದು ಸಾಹಸದ ಸ್ವಭಾವ. ಅಪರಿಚಿತವಾದ ಊರು ಭಾಷೆ ಕ್ಷೇತ್ರ ಎಂದು ಅವರು ಹಿಂಜರಿಯಲಿಲ್ಲ. ಕೆಲವರು ಹಿರಿಯರಿಂದ ಪರಿಚಯ ಪತ್ರ ತೆಗೆದುಕೊಂಡು, ಖರ್ಚಿಗೆ ಸ್ವಲ್ಪ ಹಣ ಸಂಗ್ರಹಿಸಿಕೊಂಡು ಮುಂಬಯಿಗೆ ಹೊರಟೇಬಿಟ್ಟರು. ಈ ನಿರ್ಧಾರದಿಂದ ನಾಗೇಂದ್ರರಾಯರ ಹೊಸ ಭವಿಷ್ಯದ ಬಾಗಿಲು ತೆರೆಯಿತು.

ಮುಂಬಯಿಯಲ್ಲಿ ಟಿ.ಕೆ ರಾಜಾ ಸ್ಯಾಂಡೋ ಅವರ ನೆರವಿನಿಂದ ‘ಇಂಪೀರಿಯಲ್ ಕಂಪನಿ’ ಅರ್ದೇಷಿರ್ ಇರಾನಿ ಅವರ ಪರಿಚಯವಾಯಿತು. ೧೯೩೧ರಲ್ಲಿ ಮೊದಲ ಹಿಂದಿ ವಾಕ್ಚಿತ್ರ ‘ಆಲಂ ಅರಾ’  ತಯಾರಿಸಿದವರು ಇರಾನಿ. ಅವರು ‘ಪಾರಿಜಾತ ಪುಷ್ಪಾಪಹರಣಂ’ ಎಂಬ ತಮಿಳು ಚಿತ್ರವನ್ನು ತಯಾರಿಸಲು ನಿರ್ಧರಿಸಿದರು. ನಾಗೇಂದ್ರರಾಯರಿಗೆ ಮುಖ್ಯವಾದ ನಾರದನ ಪಾತ್ರ ಕೊಟ್ಟರು.

ಚಿತ್ರ ಮದರಾಸು ಮತ್ತು ಇತರ ಕೇಂದ್ರಗಳಲ್ಲಿ ಬಿಡುಗಡೆ ಯಾಗಿ ತುಂಬ ಯಶಸ್ವಿಯಾಯಿತು. ನಾರದನ ಪಾತ್ರಾಭಿನಯವನ್ನು ಜನ ಮೆಚ್ಚಿಕೊಂಡರು. ಹೀಗೆ ಈ ಕನ್ನಡ ಕಲಾವಿದನ ಚಲನಚಿತ್ರರಂಗ ಪ್ರವೇಶ ತಮಿಳು ಚಿತ್ರದ ಮೂಲಕ ಆಯಿತು.

ಇರಾನಿಯವರು ಮುಂದಿನ ಚಿತ್ರವನ್ನು ತೆಲುಗಿನಲ್ಲಿ ತೆಗೆಯಲು ನಿರ್ಧರಿಸಿ ‘ಭಕ್ತ ರಾಮದಾಸ’ ನ ಕತೆಯನ್ನು ಆರಿಸಿದರು. ರಾಯರಿಗೆ ರಾಮದಾಸನ ಪಾತ್ರ. ಈ ಚಿತ್ರವು ಯಶಸ್ವಿಯಾಯಿತು.

ಮತ್ತೆ ರಂಗಭೂಮಿಗೆ

ಮುಂದಿನ ಚಿತ್ರದ ಚಿತ್ರೀಕರಣ ಆರಂಭವಾಗಲೂ ಒಂದೆರಡು ತಿಂಗಲು ಸಮಯವಿದ್ದುದರಿಂದ ರಾಯರು ಮೈಸೂರಿಗೆ ಹಿಂದಿರುಗಿದರು. ಆ ವೇಳೆಗಾಗಲೇ ಅವರಿಗೆ ಮದುವೆಯಾಗಿತ್ತು. ಹೆಂಡತಿ ರತ್ನಾಬಾಯಿ ಮತ್ತು ಇಬ್ಬರುಮಕ್ಕಳ ತಮ್ಮ ಪುಟ್ಟ ಸಂಸಾರದಲ್ಲಿ ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯಲು ಅವರಿಗೆ ಅವಕಾಶವೆ ಸಿಗುತ್ತಿರಲಿಲ್ಲ. ಈಗ ಬಿಡುವಿನಲ್ಲಿ ಮಡದಿ ಮಕ್ಕಳೊಡನೆ ಸಂತೋಷವಾಗಿರಲು ಮೈಸೂರಿಗೆ ಬಂದರು. ಅವರು ಮೈಸೂರಿನಲ್ಲಿದ್ದಾಗ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’ ಯ ಸಂಸ್ಥಾಪಕ ಮತ್ತು ಪ್ರಸಿದ್ಧ ನಟರಾದ ಎಂ.ಬಿ.ಸುಬ್ಬಯ್ಯನಾಯುಡು ಅವರ ಬಂದು ನಾಗೇಂದ್ರರಾಯರನ್ನು ಭೇಟಿಮಾಡಿದರು. ತಮ್ಮೊಡನೆ ಪಾಲುದಾರರಾಗಿ ತಮ್ಮ ನಾಟಕ ಸಂಸ್ಥೆಗೆ ಸೇರುವಂತೆ ಒತ್ತಾಯಿಸಿದರು. ನಾಗೇಂದ್ರರಾಯರು ಮತ್ತೆ ತಾವು ಮುಂಬಯಿಗೆ ಹೋಗಬೇಕಾಗಿದೆಯೆಂದು ಎಷ್ಟು ಹೇಳಿದರೂ ನಾಯುಡು ಅವರು ಒಪ್ಪಲಿಲ್ಲ. ಅವರ ವಿಶ್ವಾಸಕ್ಕೆ ಮಣಿದು ಮುಂಬಯಿಯ ತಮ್ಮ ಮುಂದಿನ ಚಿತ್ರದ ಕರಾರನ್ನು ರದ್ದುಪಡಿಸಿ, ರಾಯರು ನಾಯುಡು ಅವರೊಡನೆ ಪಾಲುದಾರರಾಗಿ ಸೇರಿದರು. ಇಬ್ಬರೂ ಆಪ್ತ ಮಿತ್ರರಾದರು.

ಈ ಸಮಯದಲ್ಲಿ ಬೆಂಗಳೂರಿನ ‘ಸೌತ್ ಇಂಡಿಯನ್ ಫಿಲ್ಮ್ ಕಂಪನಿ’ ಕನ್ನಡದಲ್ಲಿ ‘ಸತಿ ಸುಲೋಚನಾ’ ಚಿತ್ರ ತಯಾರಿಸಲು ಮುಂದೆ ಬಂದು, ನಾಗೇಂದ್ರರಾಯರನ್ನು ಅಭಿನಯಿಸಲು ಕೇಳಿತು. ಮಿತ್ರನಾಯುಡು ಒಪ್ಪುವುದಾಗಿ ರಾಯರು ಹೇಳಿದರು. ಇದಕ್ಕೆ ಸಮ್ಮತಿ ದೊರೆಯಿತು. ಇದರಲ್ಲಿ ರಾಯರದು ರಾವಣದ ಪಾತ್ರ, ಜೊತೆಗೆ ಸಂಗೀತ ನಿರ್ದೇಶನದ ಹೊಣೆ. ನಾಯುಡು ಅವರದು ಇಂದ್ರಜಿತನ ಪಾತ್ರ.

ಚಿತ್ರ ಮುಗಿದ ನಂತರ ರಾಯರು ಮೈಸೂರಿಗೆ ಹಿಂದಿರುಗಿ, ನಾಯುಡು ಅವರೊಂದಿಗೆ ತಮ್ಮ ಹೊಸ ನಾಟಕ ಸಂಸ್ಥೆಯನ್ನು ಉತ್ತಮಪಡಿಸಲು ಪ್ರಯತ್ನಿಸಿದರು. ಈ ಸಂಸ್ಥೆಯನ್ನು ಸೇರುವಾಗ ತಮಗೆ ಹೊಸ ಪ್ರಯೋಗಗಳನನು ಮಾಡಲು ಅವಕಾಶ ಇರಬೇಕು ಎನ್ನುವುದು ರಾಯರು ಹಾಕಿದ್ದ ಒಂದು ಕರಾರು. ಅದರಂತೆ ಈಗ ಬೆಳಕಿನ ವ್ಯವಸ್ಥೆಯ ಬಗೆಗೆ ಹೊಸ ಪ್ರಯೋಗಗಳನ್ನು ಮಾಡಲು ಆರಂಭಿಸಿದರು. ಅವರು ಆರಿಸಿಕೊಂಡಿದ್ದ ನಾಟಕ ‘ಭೂಕೈಲಾಸ’ , ಅದರ ಮೂಲಪ್ರತಿ ನಾಟಕಕ್ಕೆ ಆಗುವಷ್ಟು ವ್ಯಾಪಕವಾಗಿರಲಿಲ್ಲವಾದ್ದರಂದ ರಾಯರೆ ಹೊಸ ಅಂಶಗಳನ್ನು ಸೇರಿಸಿ ‘ಭೂಕೈಲಾಸ’ ನಾಟಕ ಬರೆದರು. ರಂಗದಲ್ಲಿ ದೀಪದ ವ್ಯವಸ್ಥೆ ಹೇಗಿರಬೇಕೆಂಬುದಕ್ಕೆ ಅನೇಕ ಪುಸ್ತಕಗಳನ್ನು ಓದಿ ಅಗತ್ಯವಾದ ಏರ್ಪಾಡುಗಳನ್ನು ಮಾಡಿಕೊಂಡರು. ಅಲೆಅಲೆಯಾದ ಬೆಳಕು, ವಿವಿಧ ವರ್ಣಗಳ ಬೆಳಕುಗಳ ಮಿಶ್ರಣ, ಅಗತ್ಯ ಪಾತ್ರದ ಮೇಲಷ್ಟೇ ಬೆಳಕನ್ನು ಕೇಂದ್ರೀಕರಿಸುವುದು ಮುಂತಾದ ವ್ಯವಸ್ಥೆಗಳನ್ನು ಮಾಡಿಕೊಂಡರು. ಅಗತ್ಯವಾದ ವಿದ್ಯುತ್ ಬಲ್ಬುಗಳನ್ನು ಕೊಂಡರು. ಮಾರುಕಟ್ಟೆಯಲ್ಲಿ ದೊರಕದ ಕೆಲವು ಉಪಕರಣಗಳನ್ನು ತಾವೇ ರೂಪಿಸಿದರು. ನಾಗೇಂದ್ರರಾಯರ ಪ್ರತಿಭೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡಬಲ್ಲುದಾಗಿತ್ತು.

೧೯೩೭ ರಲ್ಲಿ ಮೈಸೂರಿನಲ್ಲಿ ಮೊದಲ ಬಾರಿಗೆ ‘ಭೂ ಕೈಲಾಸ’ ನಾಟಕ ಪ್ರದರ್ಶನವಾದಾಗ ಅದರ ರಂಗ ವೈಭವ, ಬೆಳಕಿನ ಮಾಯಲೋಕ, ಅಭಿನಯ ವೈಶಿಷ್ಟ್ಯಗಳನ್ನು ನೋಡಿ ಜನ ಬೆರಗಾಗಿ ಹೋದರು. ನಾಟಕ ಪ್ರಚಂಡ ಯಶಸ್ಸುಗಳಿಸಿ ಆರುತಿಂಗಳ ಕಾಲ, ತುಂಬಿದ ನಾಟಕ ಗೃಹದಲ್ಲಿ ಪ್ರದರ್ಶಿತವಾಯಿತು. ಮುಂದೆ ತುಮಕೂರು,ಬೆಂಗಳೂರು ಮತ್ತು ಮದರಾಸಿನಲ್ಲಿಯೇ ಆರುತಿಂಗಳ ಕಾಲ ನಡೆಯಿತು. ಮುಂದೆ ತುಮಕೂರು, ಬೆಂಗಳೂರು ಮತ್ತು ಮದರಾಸುಗಳಲ್ಲಿಯೂ ನಾಟಕ ಯಶಸ್ವಿಯಾಗಿ ನಡೆಯಿತು. ಮದ್ರಾಸಿನಲ್ಲಿಯೇ ಆರುತಿಂಗಳ ಕಾಲ ನಡೆಯಿತು. ಮುಂದೆ ‘ಭೂಕೈಲಾಸ’ ವನ್ನು ತಮಿಳುನಲ್ಲಿಯೂ ನಾಟಕವಾಗಿ ಅಭಿನಯಿಸಿ ಮದರಾಸಿನಲ್ಲಿ ಹೆಸರು ಗಳಿಸಿದರು. ಎಚ್ಚಮನಾಯಕನ ಕಥೆಯನ್ನು ಆಧರಿಸಿದ ‘ರಾಷ್ಟ್ರವೀರ’ ನಾಟಕ ಅವರ ಕಂಪನಿಯ ಪ್ರಸಿದ್ಧ ನಾಟಕಗಳಲ್ಲಿ ಒಂದು. ಅದನ್ನೂ ತಮಿಳಿಗೆ ಅನುವಾದಿಸಿ ಆಡಿದರು. ಇದರಲ್ಲಿ ರಾಯರು ಚಾಂದಾಖಾನನ ಪಾತ್ರ ಮಾಡುತ್ತಿದ್ದರು.

ವಸಂತಸೇನಾ, ಹರಿಶ್ಚಂದ್ರ

ಪ್ರಗತಿ ಪಿಕ್ಜರ್ಸ್ ಅವರು ‘ಭೂಕೈಲಾಸ’ವನ್ನು ತೆಲುಗಿನಲ್ಲಿ ಚಲನಚಿತ್ರವಾಗಿ ತಯಾರಿಸಿದರು. ಅದು ಆ ವರ್ಷದ ಅತ್ಯುತ್ತಮ ತೆಲುಗು ಚಿತ್ರವೆಂದು ಹೆಸರುಗಳಿಸಿತು. ಇದರ ನಂತರ ೧೯೪೯ರಲ್ಲಿ ನಾಗೇಂದ್ರರಾಯರು ಪಾಲುದಾರರೊಡನೆ ತಯಾರಿಸಿದ ‘ವಸಂತಾಸೇನಾ’ ಚಲನಚಿತ್ರ ಅಪಾರ ಜನಮನ್ನಣೆಗಳಿಸಿ ಪ್ರಸಿದ್ಧಿಯಾಯಿತು ಈ ಚಿತ್ರದಲ್ಲಿ ನಾಗೇಂದ್ರರಾಯರು ಶಕಾರನ ಪಾತ್ರದ ಮೂಲಕ ನೀಡಿದ ಅಭಿನಯ ಇಂದಿಗೂ ಒಂದು ಅತ್ಯುಚ್ಚ ಮಾದರಿಯಾಗಿ ಉಳಿದಿದೆ. ಅಭಿನಯದ ಜೊತೆಗೆ ಚಿತ್ರಕಥೆ, ಸಂಭಾಷಣೆ, ಗೀತೆಗಲನ್ನು ರಾಯರೇ ಬರೆದರು. ಹೆಸರಿಗೆ ಮಾತ್ರ ಒಬ್ಬ ಕನ್ನಡ ಬಾರದ ನಿರ್ದೇಶಕರು ಇದ್ದರು. ಎಲ್ಲ ಕೆಲಸವನ್ನು ನಾಗೇಂದ್ರರಾಯರೇ ನಿರ್ವಹಿಸಿದ್ದರು. ಈ ಪಾತ್ರದಲ್ಲಿಯೇ ಮೊದಲ ಬಾರಿಗೆ ಒಮ್ಮೆ ಚಿತ್ರಿಕರಣವಾದ ದೃಶ್ಯಕ್ಕೆ ಅನಂತರ ಹಾಡನ್ನು ಅಳವಡಿಸುವ ‘ಪೋಸ್ಟ್ ಸಿಂಕ್ರೊನೈಸೇಷನ್’ ಎಂಬ ವಿಧಾನ ರೂಢಿಗೆ ಬಂತು.

ಅನಂತರ ‘ಹರಿಶ್ಚಂದ್ರ’ ವನ್ನು ಬೇರೆಯ ನಿರ್ಮಾಪಕ ರಿಗಾಗಿ ನಾಗೇಂದ್ರರಾಯರು ಕನ್ನಡದಲ್ಲಿ ನಿರ್ದೇಶಿಸಿದರು. ಅದರಲ್ಲಿ ಅವರು ವಹಿಸಿದ ವಿಶ್ವಾಮಿತ್ರನ ಪಾತ್ರಸೃಷ್ಟಿಯೂ ಚಿತ್ರದೊಡನೆ ಹಾಸು ಹೊಕ್ಕಾಗಿ ಬರುವ ಹಾಸ್ಯವೂ ಅಪೂರ್ವವಾದವು. ಈ ಚಿತ್ರ ಅನೇಕ ಕೇಂದ್ರಗಳಲ್ಲಿ ನೂರು ದಿನಕ್ಕೂ ಹೆಚ್ಚು ಕಾಲ ಯಶಸ್ವಿಯಾಗಿ ನಡೆಯಿತು. ಈ ಚಿತ್ರವನ್ನು ತಮಿಳಿಗೆ ಡಬ್ ಮಾಡಲಾಯಿತು.(ಅಭಿನಯವನ್ನು ಉಳಿಸಿಕೊಂಡು ಬೇರೆ ಭಾಷೆಯ ಸಂಭಾಷಣೆಯನ್ನು ಅಳವಡಿಸುವುದು ‘ಡಬ್’.) ಭಾರತದಲ್ಲಿ ಇದೇ ಮೊದಲನೆಯ ಪ್ರಯತ್ನ. ಇದು ಹೊಸ ದಾಖಲೆಯಾಯಿತು. ಅದರ ಕೀರ್ತಿ ನಾಗೇಂದ್ರರಾಯರದು. ಇದರ ನಂತರ ರಾಯರು ‘ಭಕ್ತ ಕಬೀರ್’ ನಿರ್ದೇಶಿಸಿದರು, ವಿವಾದ ಉಂಟು ಮಾಡಬಹುದಾದ ಇದರ ವಸ್ತುವನ್ನು ರಾಯರು ಜಾಣತನದಿಂದ ನಿರೂಪಿಸಿದರು. ಚಿತ್ರ ಬಿಡುಗಡೆಯಾದ ಮೇಲೆ ಬಹಳ ಜನಪ್ರಿಯವಾಯಿತು. ಈ ಚಿತ್ರದ ನಂತರ ಸುಬ್ಬಯ್ಯನಾಯುಡು ಅವರಿಗೂ ನಾಗೇಂದ್ರರಾಯರಿಗೂ ಒಂದು ಸಣ್ಣ ಕಾರಣಕ್ಕಾಗಿ ಭಿನ್ನಾಭಿಪ್ರಾಯ ಬಂತು. ರಾಯರು ಪಾಲುದಾರಿಕೆಯಿಂದ ಹೊರಬಂದರು. ಹದಿನಾಲ್ಕು ವರ್ಷಗಳ ಸ್ನೇಹ ೧೯೪೭ರಲ್ಲಿ ಭಂಗವಾಯಿತು.

ಅಖಿಲ ಭಾರತ ಖ್ಯಾತಿ

ನಾಗೇಂದ್ರರಾಯರದು ನಿರಂತರವಾದ ಸಾಹಸ ಪ್ರವೃತ್ತಿ. ‘ಚಂದ್ರಲೇಖಾ’ ಚಿತ್ರದ ಮೂಲಕ ಅಪಾರ ಖ್ಯಾತಿಯನ್ನು ಹಣವನ್ನೂ ಸಂಪಾದಿಸಿದ್ದ ಮದರಾಸಿನ ಜೆಮಿನಿ ಸ್ಟುಡಿಯೋದ ವಾಸನ್ ಅವರನ್ನು ಭೇಟಿಮಾಡಿ ತಮ್ಮನ್ನು ಪಾಲುದಾರರನ್ನಾಗಿ ಮಾಡಿಕೊಂಡು ಒಂದು ಚಿತ್ರ ತಯಾರಿಸಬೇಕೆಂದು ಕೇಳುವ ಸಾಹಸ ಮಾಡಿದರು. ರಾಯರು ಸಿದ್ಧಪಡಿಸಿದ್ದ ‘ಮೂವರು ತನಯರು’ ಚಿತ್ರ ಕಥೆಯನ್ನು ಕೇಳಿ ವಾಸನ್ ಈ ಯೋಜನೆಗೆ ಒಪ್ಪಿಕೊಂಡರು. ಆದರೆ ಬೇರೆ ಒಂದು ಚಿತ್ರದ ತಯಾರಿಕೆಯನ್ನು ತೆಗೆದುಕೊಂಡುದರಿಂದ ‘ಮೂವರು ತನಯರು’ ಕೂಡಲೇ ಸೆಟ್ ಏರಲಿಲ್ಲ. ತಮಿಳಿನಲ್ಲಿ ‘ಅಪೂರ್ವ ಸಹೋದರ್‌ಗಳ್’, ಹಿಂದಿಯಲ್ಲಿ ‘ನಿಶಾನ್’ ಎಂಬ ಹೆಸರಿನಲ್ಲಿ ತಯಾರಾದ ಒಂದು ಚಿತ್ರದಲ್ಲಿ ಖಳನಾಯಕ ಮಾರ್ತಾಂಡನ ಪಾತ್ರದಲ್ಲಿ ರಾಯರು ನೀಡಿದ ಅಭಿನಯ ಶ್ರೇಷ್ಠ ಮಟ್ಟದ್ದಾಗಿತ್ತು. ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ರಾಯರ ಅಭಿನಯವನ್ನು ಹೊಗಳಿ ‘ವರ್ಷದ ಶ್ರೇಷ್ಠ ಖಳನಾಯಕ’ ನೆಂದು ಬರೆಯಿತು. ಹೀಗೆ ನಾಗೇಂದ್ರ ರಾಯರ ಅಭಿನಯ ಅಖಿಲ ಭಾರತ ಮಟ್ಟದಲ್ಲಿ ಕೀರ್ತಿಯನ್ನು ಸಂಪಾದಿಸಿತು. ದೊಡ್ಡ ಪ್ರಮಾಣದಲ್ಲಿ ಹಣವೂ ಒದಗಿತು.

ಆರೆನ್ನಾರ್ ಪಿಕ್ಚರ್ಸ್

ಆ ಹಣದಿಂದಲೇ ೧೯೫೨ ರಲ್ಲಿ ರಾಯರು ತಮ್ಮದೇ ಆದ ಆರ್ ಎನ್ ಆರ್ ಲಾಂಛನದಲ್ಲಿ ಸ್ವಂತ ಚಿತ್ರಗಳನ್ನು ತಯಾರಿಸಲು ಆರಂಭಿಸಿದರು. ಹೀಗೆ ತಯಾರಿಸಿದ ಮೊದಲ ಚಿತ್ರ ‘ಜಾತಕ ಫಲ’ ಮೂರು ಭಾಷೆಗಳಲ್ಲಿ ತೆರೆಕಂಡಿತು. ೧೯೫೭ ರಲ್ಲಿ ಕನ್ನಡದಲ್ಲಿ ತೆಗೆದ ‘ಪ್ರೇಮದ ಪುತ್ರಿ’  ಆ ವರ್ಷದ ಪ್ರಾಂತೀಯ ಭಾಷೆಯ ಅತ್ಯುತ್ತಮ ಚಿತ್ರವೆಂದು ರಾಷ್ಟ್ರಪತಿಗಳ ರಜತ ಪದಕ ಪಡೆಯಿತು. ಇಂಥ ಪ್ರಶಸ್ತಿ ಪಡೆದ ಕನ್ನಡ ಚಿತ್ರಗಳಲ್ಲಿ ‘ಪ್ರೇಮದ ಪುತ್ರಿ’ ಯೇ ಮೊದಲನೆಯದು. ಈ ಚಿತ್ರದಲ್ಲಿ ನಾಗೇಂದ್ರರಾಯರ ಮಕ್ಕಳಾದ ಕೃಷ್ಣಪ್ರಸಾದ್ ಛಾಯಾಗ್ರಾಹಕರಾಗಿಯೂ, ಜಯಗೋಪಾಲ್ ಸಂಭಾಷಣೆ ಮತ್ತು ಗೀತ ರಚನೆಕಾರರಾಗಿಯೂ ಕೆಲಸ ಮಾಡಿದರು. ಈಗ ಆ ಕ್ಷೇತ್ರದಲ್ಲಿ  ಅವರು ಪ್ರಸಿದ್ಧರಾಗಿದ್ದಾರೆ.

‘ಪ್ರೇಮದಪುತ್ರಿ’ ಬಿಡುಗಡೆಯಾದ ಸ್ವಲ್ಪ ದಿನಗಳಲ್ಲಿಯೇ ರಾಯರ ಪತ್ನಿ ರತ್ನಾಬಾಯಿಯವರು ದಿವಂಗತರಾದರು. ಇದರಿಂದ ಉಳಿದ ಸಂಸಾರವನ್ನು ಬೆಂಗಳೂರಿನಿಂದ ಮದರಾಸಿಗೆ ವರ್ಗಾಯಿಸಬೇಕಾಯಿತು.

ಅನಂತರ ತಯಾರಿಸಿದ ದುಬಾರಿ ವೆಚ್ಚದ ‘ವಿಜಯ ನಗರದ ವೀರಪುತ್ರ’ ಗುಣಮಟ್ಟದಿಂದ ಉತ್ತಮವಾಗಿದ್ದರೂ ಆರ್ಥಿಕವಾಗಿ ಯಶಸ್ವಿಯಾಗಲಿಲ್ಲ. ಇದರನಂತರ ಹಲವು ಚಿತ್ರಗಳಲ್ಲಿ ರಾಯರು ನಟಿಸಿದರು. ಹಿಂದಿ, ತಮಿಳು, ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿದರು. ‘ಕನ್ನಡ ಚಿತ್ರ ಹಣ್ಣೆಲೆ ಚಿಗುರಿದಾಗ’ ದಲ್ಲಿನ ರಾಯರ ಅಭಿನಯಕ್ಕೆ ಕನ್ನಡದಲ್ಲಿ ೧೯೬೮-೬೯ ವರ್ಷದ ಶ್ರೇಷ್ಠ ನಟ ಪ್ರಶಸ್ತಿ ದೊರೆಯಿತು. ಸರ್ಕಾರ ಅವರಿಗೆ ನಾಲ್ಕು ಸಾವಿರ ರೂಪಾಯಿಗಳನ್ನೂ, ಚಿನ್ನದ ಪದಕವನ್ನೂ ಕೊಟ್ಟು ಗೌರವಿಸಿತು. ಈ ಪಾತ್ರ ವಹಿಸಿದಾಗ ರಾಯರಿಗೆ ೭೨ ವರ್ಷ! ರಾಯರು ನಿರ್ದೇಶಿಸಿದ ‘ನಮ್ಮ ಮಕ್ಕಳು’  ನೂರು ದಿನ ನಡೆಯಿತಲ್ಲದೆ ಆ ವರ್ಷದ ದ್ವಿತೀಯ ಶ್ರೇಷ್ಠ ಚಿತ್ರವಾಗಿ ಪ್ರಶಸ್ತಿಗಳಿಸಿತು.

ನಾಗೇಂದ್ರರಾಯರು ಕಲಾಜೀವನದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಸಂಗೀತ ನಾಟಕ  ಅಕಾಡೆಮಿಯಲ್ಲಿ ೧೯೬೭ ರಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಬೆಂಗಳೂರು ನಗರದ ನಾಗರಿಕರು ಕರ್ನಾಟಕದ ಜನತೆಯ ಪರವಾಗಿ, ನಗರದ ಪುರಭವನದಲ್ಲಿ ೧೯೭೪ ರಲ್ಲಿ ಸನ್ಮಾನ ಮಾಡಿ ಗೌರವಿಸಿದಿರು. ಅಂದು ನಾಗೇಂದ್ರರಾಯರ ಆತ್ಮಚರಿತ್ರೆ ‘ಇದು ನನ್ನ ಕಥೆ’ ಬಿಡುಗಡೆಯಾಯಿತು. ಇವರ ಕಲಾಸೇವೆಯನ್ನು ಗೌರವಿಸಿ ಭಾರತ ಸರ್ಕಾರ ೧೯೭೬ ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ರಾಷ್ಟ್ರಮಟ್ಟದಲ್ಲಿ ಸನ್ಮಾನಿಸಿತು.

ರಾಯರು ಚಿತ್ರರಂಗದಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲಸಿದ ಮೇಲೂ ಆ ರಂಗದ ವಿಷಯದಲ್ಲಿ ಕಾಳಜಿ ಇಟ್ಟುಕೊಂಡಿದ್ದರು. ಹೊಸದಾಗಿ ತರಬೇತಿ ನೀಡುವ ಉದ್ದೇಶದಿಂದ ಬೆಂಗಳೂರು ನಗರದಲ್ಲಿ ‘ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದರು. ಚಿತ್ರರಂಗದ ವಿವಿಧ ಕಲಾಪ್ರಕಾರಗಳ ಬಗೆಗೆ ತರಬೇತಿ ಕೊಡಲು ಉದ್ದೇಶಿಸಿರುವ ಈ ಸಂಸ್ಥೆಯಲ್ಲಿ ಸದ್ಯಕ್ಕೆ ಅಭಿನಯ ಮತ್ತು ಹಿನ್ನೆಲೆ ಸಂಗೀತದ ತರಗತಿಗಳನ್ನು ನಡೆಸಲಾಗುತ್ತಿದೆ.

ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ರಾಯರು ಗಡ್ಡಮೀಸೆಗಳನ್ನು ಬಿಟ್ಟಿದ್ದರು. ಅವರ ಮುಖಕ್ಕೆ ಬಿಳಿಯ ಗಡ್ಡ ಸೊಗಸಾಗಿ ಒಪ್ಪುತ್ತಿತ್ತು. ಈ ಕಲಾ ತಪಸ್ವಿಯನ್ನು ನೋಡುತ್ತಿದ್ದಂತೆಯೇ ಯಾರಿಗಾದರೂ ಗೌರವ ಭಾವನೆ ಹುಟ್ಟುತ್ತಿತ್ತು. ರಾಯರು ಸರಸಿಗಳು. ಬಾಲ್ಯದಲ್ಲಿ ಕಷ್ಟವನ್ನೂ ಬಡತನವನ್ನೂ ಅನುಭವಿಸಿದರು. ತಮ್ಮ ಸಾಹಸಪ್ರಿಯತೆ, ಪ್ರತಿಭೆ, ಕಷ್ಟಪಟ್ಟು ಕೆಲಸ ಮಾಡುವ ಶ್ರದ್ಧೆ ಇವುಗಳಿಂದ ಪ್ರಖ್ಯಾತರಾದರು. ಜೀವನದಲ್ಲಿ ಅನೇಕ ಬಗೆಯ ನೋವುಗಳನ್ನು ಅನುಭವಿಸಿದರೂ ನಗುನಗುತ್ತಾ ಬಾಳಿದರು. ಅವರದು ತುಂಬು ವ್ಯಕ್ತಿತ್ವದ ದಿಟ್ಟ ಜೀವನ, ಉದಾರ ಬುದ್ಧಿ, ಸಹಾಯ ಪರರು. ಇಂದು ಕನ್ನಡ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿರುವ ಅನೇಕರಿಗೆ ರಾಯರು ಆರಂಭದ ಅವಕಾಶ ನೀಡಿ, ತರಬೇತಿ ಕೊಟ್ಟು ಮುಂದೆ ತಂದರು. ಇಂದಿಗೂ ಅವರೆಲ್ಲಾ ರಾಯರ ಹೆಸರನ್ನು ಕೇಳಿದರೆ ಗುರುಸ್ವರೂಪರೆಂದು ಕೈ ಮುಗಿಯುತ್ತಾರೆ. ಪ್ರಾಮಾಣಿಕವಾದ ಜೀವನ ನಡೆಸಿ, ತಮ್ಮ ಪ್ರತಿಭೆಯ ಪ್ರಕಾಶಕ್ಕೆ ಎಲ್ಲ ಬಗೆಯ ಸಾಹಸ ಮಾಡಿ, ಭಾರತಾದ್ಯಂತ ಹೆಸರಾಗಿ, ಆ ಮೂಲಕ ಕನ್ನಡದ ಕೀರ್ತಿಯನ್ನು ಎತ್ತರಿಸಿದವರು ನಾಗೇಂದ್ರರಾಯರು. ಇಷ್ಟೆಲ್ಲ ಸಾಧನೆಗಳ ನಂತರವೂ ‘ನಾನಿನ್ನೂ ಕಲಿಯಬೇಕಾದುದು ಬಹಳ ಇದೆ’ ಎನ್ನುವ ವಿನಯ ಅವರದು.

ಇಂಥ ಕನ್ನಡ ಚಲನಚಿತ್ರರಂಗದ ಭೀಷ್ಮರು ತಮ್ಮ ೮೧ ವರ್ಷಗಳ ಸಾರ್ಥಕವಾದ ತುಂಬು ಜೀವನವನ್ನು ಮುಗಿಸಿ ೧೯೭೭ರ ಫೆಬ್ರವರಿ ಒಂಬತ್ತರಂದು ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಿವಂಗತರಾದರು. ಕನ್ನಡಿಗರೆಲ್ಲರೂ ಹೆಮ್ಮೆಪಡುವಂಥ ಸೇವಾಪೂರ್ಣವಾದ ಆದರ್ಶ ಬಾಳು ಅವರದು.