ಹಿಂದೂಸ್ಥಾನಿ ಗಾಯಕಿಯರಾಗಿ, ಸಂಗೀತ ಶಿಕ್ಷಕಿಯಾಗಿ ಬೆಂಗಳೂರಿನಲ್ಲಿ ಹಿಂದುಸ್ಥಾನಿ ಸಂಗೀತ ಪ್ರಸಾರ ಮಾಡುತ್ತಿರುವ ಶ್ರೀಮತಿ ಆರ್. ಲೀಲಾಬಾಯಿ ಕಾಯ್ಕಿಣಿ ಅವರು ಕರ್ನಾಟಕದ ಹಿಂದೂಸ್ಥಾನಿ ಮಹಿಳಾ ಕಲಾವಿದೆಯರಲ್ಲೊಬ್ಬರು.  ೧೯೨೯ರಲ್ಲಿ ಜನಿಸಿದ ಶ್ರೀಮತಿ ಆರ್. ಲೀಲಾಬಾಯಿ ಕಾಯ್ಕಿಣಿ ಅವರು ಶ್ರೀ ಎಂ.ಎಸ್‌. ರಾಮಚಂದ್ರ ಜೋಷಿ ಗವಾಯಿ, ಶ್ರೀ ಎಸ್‌. ರಾಮಚಂದ್ರನ್‌, ಶ್ರೀಮೋಹನ್‌ ಚಿಕ್ಕರಮನೆ ಮುಂತಾದವರ ಗರಡಿಯಲ್ಲಿ ಪಳಗಿದವರು. ಅಖಿಲ ಭಾರತೀಯ ಗಂಧರ್ವ ಮಹಾ ಮಂಡಲದ ಸಂಗೀತ ಮಾಧ್ಯಮ ಹಾಗೂ ಸಂಗೀತ ವಿಶಾರದ ಪದವಿ ಪಡೆದಿದ್ದಾರೆ.

ಬೆಂಗಳೂರಿನ ಆದರ್ಶ ಭವನ ಹಾಗೂ ಶ್ರೀ ಮಹಾ ಮಾಯ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ಹಿಂದೂಸ್ಥಾನಿ ಸಂಗೀತ ಶಿಕ್ಷಕಿಯಾಗಿ ದುಡಿಯುತ್ತಿರುವ ಶ್ರೀಮತಿ ಲೀಲಾಬಾಯಿ ಅವರು ಅನೇಕ ಭಕ್ತಿಗೀತೆಗಳನ್ನು ರಚಿಸಿ, ಸಂಗೀತ ಸಂಯೋಜಿಸಿದ್ದಾರೆ. ಜೊತೆಗೆ ಹಿಂದೂಸ್ಥಾನಿ ಸಂಗೀತಕ್ಕೆ ಸಂಬಂಧಪಟ್ಟಂತೆ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಾ ಸಂಗ್ರಹ, ಸ್ವರ ಸಂಪದ ಎಂಬ ಪಾರಿಭಾಷಿಕ ಶಬ್ದಕೋಶ, ಹಲವು ಸಂಗೀತ ಕಲಾವಿದರ ಜೀವನ ಚರಿತ್ರೆ, ಹೀಗೆ ಹತ್ತು ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ಆಕಾಶವಾಣಿ ‘ಬಿ-ಹೈ’ ಶ್ರೇಣಿ ಕಲಾವಿದೆಯಾದ ಲೀಲಾಬಾಯಿ ಅವರಿಗೆ ‘ನಾದಶ್ರೀ’ ಪ್ರಶಸ್ತಿ, ‘ಆರ್ಯಭಟ’ ಪ್ರಶಸ್ತಿ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ. ಶ್ರೀಮತಿ ಆರ್. ಲೀಲಾಬಾಯಿ ಕಾಯ್ಕಿಣಿ ಅವರ ಸಂಗೀತ ಸೇವೆಯನ್ನು ಮನಗಂಡು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೦-೦೧ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.