ಉತ್ತರ ಕರ್ನಾಟಕ ಭಾಗದಲ್ಲಿ ಸಿತಾರ ವಾದನ ಪ್ರಸಾರ ಮಾಡಿ, ನಾಲ್ಕು ದಶಕಗಳ ಕಾಲ ಧಾರವಾಡ ಆಕಾಶವಾಣಿ ನಿಲಯದ ಸಿತಾರ ಕಲಾವಿದರಾಗಿ ಕಲಾ ಸೇವೆ ಮಾಡಿರುವ ಪಂ.ಆರ್. ವಿ. ಗುಡಿಹಾಳ ಅವರು ಕರ್ನಾಟಕ ಕಂಡ ಅಪೂರ್ವ ಕಲಾವಿದರು.

ಶ್ರೀ ರಾಮಚಂದ್ರ ಬಿ. ಗುಡಿಹಾಳರು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ೮-೭-೧೯೦೮ ರಂದು ಹರಿದಾಸ ಪರಂಪರೆಯಲ್ಲಿ ಜನಿಸಿದರು. ಪಂಡಿತ ಹುಲಗೂರು ಕೃಷ್ಣಾಚಾರ್ಯರಲ್ಲಿ ಹದಿನಾಲ್ಕು ವರ್ಷಗಳ ಕಾಲ ಹಿಂದೂಸ್ಥಾನಿ ಸಂಗೀತವನ್ನು ಕಲಿತು ಸಿತಾರ್ ವಾದಕರಾದರು. ನಂತರ ಶಂಕರ ದೀಕ್ಷಿತ ಜಂತಲಿ ಅವರಲ್ಲೂ ಶಿಕ್ಷಣ ಪಡೆದರು. ೧೯೩೨ ರಿಂದ ಅನೇಕ ಕಡೆ ಸಿತಾರ್ ವಾದನ ಕಛೇರಿ ನೀಡಿದ್ದಾರೆ. ೧೯೩೦ ರಿಂದ ೧೯೭೨ ರವರೆಗೆ ಧಾರವಾಡ ಆಕಾಶವಾಣಿ ಕೇಂದ್ರದ ನಿಲಯ ಕಲಾವಿದರಾಗಿದ್ದು ನಿವೃತ್ತರಾದರು. ದಿ|| ಕುಲಕರ್ಣಿ ಶ್ರೀನಿವಾಸರಾಯರ ನಾಟ್ಯ ವೃಂದದಲ್ಲಿ ಹಾಗೂ ಎಚ್‌.ಎಂ.ವಿ. ಗ್ರಾಮಪೋನ್‌ ಕಂಪೆನಿಯಲ್ಲೂ ಕೆಲಕಾಲ ಸಿತಾರ್ ವಾದಕರಾಗಿ ಕೆಲಸ ಮಾಡಿದ್ದಾರೆ. ಹಲವು ವಾಕ್ಚಿತ್ರಗಳಿಗೆ ಹಿನ್ನೆಲೆ ಸಿತಾರ್ ವಾದನವನ್ನು ಒದಗಿಸಿದ್ದಾರೆ. ೧೯೩೦ ರಿಂದ ೧೯೮೦ ರವರೆಗೆ ಕರ್ನಾಟಕದ ಅನೇಕ ಪ್ರಮುಖ ನಗರಗಳಲ್ಲಿ ಹಲವಾರು ಕಛೇರಿಗಳನ್ನು ನೀಡಿರುವುದಲ್ಲದೆ  ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನೂ ನೀಡಿದ್ದಾರೆ.

ಸಿತಾರ ವಾದನದಲ್ಲಿ ಗಮನಾರ್ಹ ಸೇವೆ ಮಾಡಿದ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ “ಕರ್ನಾಟಕ ಕಲಾತಿಲಕ” ಎಂಬ ಪ್ರಶಸ್ತಿ ನೀಡಿ (೧೯೮೨-೮೮) ಗೌರವಿಸಿದೆ.