ಕರ್ನಾಟಕ ಸಂಗೀತದ ಭದ್ರಕೋಟೆಯೆನಿಸಿದ ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಹಿಂದುಸ್ತಾನಿ ಸಂಗೀತ ವ್ಯಾಪಕವಾಗಿ ಪ್ರಚಾರ ಪಡೆಯಲು ಅವಿಶ್ರಾಂತವಾಗಿ ದುಡಿದು ಇತ್ತೀಚಿಗಷ್ಟೇ ದೈವಾಧೀನರಾದ ಮಹಾನುಭಾವ ಸಂಗೀತಗಾರರಲ್ಲಿ ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು ಅಗ್ರಗಣ್ಯರು. ಅವರೊಬ್ಬ ಸಂಗೀತ ಶಿಕ್ಷಕಿ, ಪ್ರಸಾರಕ, ಗಾಯಕ, ಹಾರ್ಮೋನಿಯಂ ವಾದಕ, ವಾಗ್ಗೇಯಕಾರ, ಸಂಗೀತ ಶಾಲೆಯ ಸಂಸ್ಥಾಪಕ, ಸಂಗೀತ ಪತ್ರಿಕೆಯ ಸ್ಥಾಪಕ-ಸಂಪಾದಕ, ಹಲವು ಸಂಘ ಸಂಸ್ಥೆಗಳ ಸ್ಥಾಪಕ-ಸಂಚಾಲಕ, ಸಂಗೀತ ಚಿಂತಕ, ಸರಳ-ಸಜ್ಜನಿಕೆಯ ಸಾಕಾರ ಮೂರ್ತಿ, ಹೀಗೆ ಬಹುಮುಖ ಪ್ರತಿಭೆಯ ವ್ಯಕ್ತಿ.

ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು ವ್ಯಕ್ತಿತ್ವ ತೀರ ಸರಳ; ಧೋತಿ, ಬಿಳಿ ಷರ್ಟು, ಹೆಗಲ ಮೇಲೊಂದು ವಸ್ತ್ರ, ಬಿಳಿ ಗಡ್ಡ, ತಲೆಯ ಮೇಲೆ ಬಿಳಿ ಗಡ್ಡ, ತಲೆಯ ಮೇಲೆ ಬಿಳಿಕೇಶ, ಕಣ್ಣಿಗೆ ಕನ್ನಡಕ, ಹಣೆಯ ಮೇಲೆ ತ್ರಿಪಂಡ ಭಸ್ಮ, ಹುಬ್ಬಿನ ಮಧ್ಯೆ ಗಂಧ -ಕುಂಕುಮ, ಕೊರಳಲ್ಲಿ ರುದ್ರಾಕ್ಷಿ, ಮೇಲ್ನೊಟಕ್ಕೆ ಕೊಬ್ಬ ಶ್ರೀ ಸಾಮಾನ್ಯ ವ್ಯಕ್ತಿ. ಆದರೆ ಅಂತರಂಗದಲ್ಲಿ ಅವರೊಬ್ಬ ಕ್ರಿಯಾಶೀಲ ಸಂಗೀತ ಸಾಧಕ; ಸಂಗೀತ ಚಿಂತಕ. ಬಾಹ್ಯದಲ್ಲಿ ಅವರೊಬ್ಬ ಮಠದ ಸ್ವಾಮಿಗಳಂತೆ ಕಂಡರೆ ಆಶ್ಚರ್ಯವಿಲ್ಲ. ಹೌದು-ಅವರು ಸಂಗೀತವೆಂಬ ಮಹಾಮಠದ ನಾದೋಪಾಸಕ. ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು ಹುಟ್ಟಿದ್ದು ೧೯೨೪ರಲ್ಲಿ ದಾವಣಗೆರೆಯಲ್ಲಿ. ತಂದೆ ರಾಜಪುರ ವೆಂಕಟಸುಬ್ಬರಾವ್‌, ತಾಯಿ ತಿಮ್ಮಮ್ಮ. ಒಂಬತ್ತು ವರ್ಷದ ಬಾಲಕಾವಸ್ಥೆಯಲ್ಲಿಯೇ ರಂಗಭೂಮಿ ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳನ್ನು ಅಪ್ಪಿಕೊಂಡಿತು. ಬಾಲ್ಯದಲ್ಲೇ ರಂಗಭೂಮಿಗೆ ಧುಮಿಕಿದ ಕಿವರು ಬಾಲನಟನಾಗಿ, ಮಧುರ ಕಂಠದ ಗಾಯಕ ನಟನಾಗಿ ತಮ್ಮನ್ನು ತೊಡಗಿಸಿಕೊಂಡರು. ಪಳಗಿದ ನಟನೆಯೊಂದಿಗೆ, ಸಂಗೀತದ ಸವಿಯನ್ನೂ ಒಳಗೊಂಡ ರಂಗಭೂಮಿಕ್ಷೇತ್ರ ಈ ಬಾಲಕನಿಗೆ ಪ್ರಿಯವೆನಿಸಿತು. ಬೆಂಗಳೂರಿನಲ್ಲಿ ಕಲಾಸೇವಾ ಮಂಡಳಿಯ ನಾಟಕಗಳಲ್ಲಿ ಇವರು ಬಾಲಕೃಷ್ಣ ಮತ್ತು ಪ್ರಹ್ಲಾದ, ನಾರದಾದಿ ಬಾಲಪಾತ್ರಗಳನ್ನು ಮಾಡಿ ಜನಾನುರಾಗಿಯಾದರು. ಬಾಲ್ಯದಲ್ಲೇ ವಾಮನರಾವ್‌ ಮಾಸ್ತರ್ ರವರ ಬ್ರಾಂಚ್‌ (ಸಂಜೀವಿಬಾಯಿ ಕಂಪನಿ) ಸೇರಿ, ತಳಕಲ್‌ ವೆಂಕಟರೆಡ್ಡಿ ಕಂಪನಿ ದಾಟಿ, ಹಂದಿಗನೂರು ಸಿದ್ಧರಾಮಪ್ಪನವರ ಕಂಪನಿಯಲ್ಲಿ ನಿಂತು ಕಡೆಗೆ ಕಲ್ಕೋಟಿ ಚನ್ನಬಸಯ್ಯನವರ ಅರವಿಂದ ನಾಟಕ ಕಂಪನಿ ಮಡಲಿಗೆ ಬಿದ್ದ ಬಾಲನಟ ಆರ್.ವಿ. ಶೇಷಾದ್ರಿ ಗವಾಯಿಗಳು ಆ ವೇಳೆಗಾಗಲೇ ರಂಗಭೂಮಿಯಲ್ಲಿ ಹೆಸರು ಪಡೆದುಕೊಂಡಿದ್ದರು.

ಕಲ್ಕೋಟಿ ಚನ್ನಬಸಯ್ಯನವರಿಗೆ ಶೇಷಾದ್ರಿಯ ಮೇಲೆ ತುಂಬ ಪ್ರೀತಿ. ಬಾಲಕನ ನಟನೆ ಹಾಗೂ ಸಂಗೀತದ ಒಲವನ್ನು ಗಮನಿಸಿದ ಅವರು ತಾವೇ ಸ್ವತಃ ೧೯೩೩-೩೪ರಲ್ಲಿ ಶೇಷಾದ್ರಿಯವರಿಗೆ ಹಾರ್ಮೋನಿಯಂ ಪಾಠ ಹೇಳಿಕೊಟ್ಟು ಸಂಗೀತ ಕಲಿಕೆಗೆ ಶ್ರೀಕಾರ ಹಾಕಿದರು. ಸಂಗೀತದಲ್ಲಿ ಅಪಾರ ಆಸಕ್ತಿ ತಳೆದ ಈ ಬಾಲಕ ಶ್ರೇಷ್ಠ ಸಂಗೀತಗಾರನಾಗಲೆಂಬ ಉದ್ದೇಶದಿಂದ ಅವರು ನಾಟಕ ಕಂಪನಿಯಿಂದ ಬಿಡಿಸಿ ಗಾನಯೋಗಿ ಪಂಚಾಕ್ಷರ ಗವಾಯಿಗಳ ಸನ್ನಿಧಿಗೆ ೧೯೩೪ರಲ್ಲಿ ತಂದು ಪಂಚಾಕ್ಷರ ಗವಾಯಿಗಳವರ ಶಿಷ್ಯನನ್ನಾಗಿಸಿ ಸಂಗೀತ ವಿದ್ಯೆ ಕಲಿಕೆಗೆ ಅವಕಾಶ ಕಲ್ಪಿಸಿದರು. ಪಂ.ಪಂಚಾಕ್ಷರ ಗವಾಯಿಗಳು ಸಂಗೀತ ಕಲೆಯ ಸರ್ವತೋಮುಖ ಅಭಿವೃದ್ಧಿಗಾಗಿಯೇ ಜನ್ಮವೆತ್ತಿ ಬಂದ ಪುಣ್ಯಪುರುಷರು. ಅವರು ಹಾನಗಲ್ಲ ಶ್ರೀ ಕುಮಾರಸ್ವಾಮಿಗಳ ಶಿಷ್ಯರು. ಕುಲ-ಜಾತಿ ಬೇಧವೆಣಿಸದೆ ಸಮಾಜದ ಸರ್ವ ಜನರಿಗೆ ಸಂಗೀತ ವಿದ್ಯೆ ದಾನಮಾಡಬೇಕೆಂಬ ಅವರ ಸತ್ಯ ಸಂಕಲ್ಪವನ್ನು ಚಾಚೂ ತಪ್ಪದಂತೆ ಪಾಲಿಸಿದವರು. ಇವರು ನೂರಾರು ಜನ ಅಂಧ-ಅನಾಥ, ಅಂಗವಿಕಲ ಮಕ್ಕಳನ್ನು ಸಾಕಿ ಸಲಹಿ, ಉಚಿತ ಊಟ-ವಸತಿಗಳನ್ನಿತ್ತು ಸಂಗೀತ ವಿದ್ಯೆ ನೀಡಿದವರು. ಅಂತಹ ಪುಣ್ಯ ಪುರುಷರಾದ ಪಂ.ಪಂಚಾಕ್ಷರ ಗವಾಯಿಗಳು ಹಾಗೂ ಅವರ ಪ್ರಿಯಶಿಷ್ಯ ಹಾಗೂ ಗಾನಯೋಗಿ-ಶಿವಯೋಗಿ ಪುಟ್ಟರಾಜ ಗವಾಯಿಗಳವರಲ್ಲಿ ಶೇಷಾದ್ರಿಯವರು ಸುಮಾರು ಹತ್ತುವರ್ಷ ಗ್ವಾಲಿಯರ್ ಘರಾಣೆಯ ಸಂಗೀತ ಶಿಕ್ಷಣವನ್ನು ಪಡೆದು, ಹಿಂದುಸ್ತಾನಿ ಸಂಗೀತ ಕ್ಷೇತ್ರದ ಬೆಳವಣಿಗೆ, ಪ್ರಸಾರ ಕಾರ್ಯ ನಿಮಿತ್ತ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ೧೯೪೪ರಲ್ಲಿ ಬಂದರು.

ಹಿಂದುಸ್ತಾನಿ ಹಾಡುಗಾರಿಕೆಯಲ್ಲಿ ಸುಪ್ರಸಿದ್ಧರೆನಿಸಿದ ಸವಾಯಿ ಗಂಧರ್ವ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಭೀಮಸೇನ ಜೋಷಿ, ಕುಮಾರ ಗಂಧರ್ವ, ಗಂಗೂಬಾಯಿ ಹಾನಗಲ್ಲ ಮುಂತಾದ ಘಟಾನುಘಟಿಗಳು ತಮ್ಮ ಸಂಗೀತದ ಚೈತ್ರಯಾತ್ರೆಯನ್ನು ಉತ್ತರ ಭಾರತದತ್ತ ಬೆಳೆಸಿದರೆ ಶೇಷಾದ್ರಿ ಗವಾಯಿಗಳು ದಕ್ಷಿಣದ ಬೆಂಗಳೂರಿನತ್ತ ಬೆಳೆಸಿದುದು ಹಿಂದುಸ್ತಾನಿ ಸಂಗೀತದ ಪುಣ್ಯವೆಂದೇ ಹೇಳಬೇಕು. ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಜನಪ್ರಿಯವಾಗಿದ್ದುದು ಕರ್ನಾಟಕ ಸಂಗೀತ ಮಾತ್ರ. ಅದರಲ್ಲೂ ಬೆಂಗಳೂರು ಮತ್ತು ಮೈಸೂರು ಅದರ ಕೇಂದ್ರ ಸ್ಥಾನಗಳು. ಕರ್ನಾಟಕ ಸಂಗೀತದ ಅಭೇದ್ಯ ಕೋಟಿಯೆನಿಸಿದ್ದ ಈ ಭಾಗದಲ್ಲಿ ಹಿಂದುಸ್ತಾನಿ ಸಂಗೀತ ಪ್ರಚಾರ ಮಾಡಬೇಕೆಂದು ಶೇಷಾದ್ರಿ ಗವಾಯಿಗಳು ಬೆಂಗಳೂರಿಗೆ ಬಂದದ್ದು ಹಿಂದುಸ್ತಾನಿ ಸಂಗೀತಕ್ಕೆ ಶುಕ್ರದೆಸೆ ಒದಗಿತು. ಆಗ ಮೈಸೂರು ಪ್ರಾಂತ್ಯದಲ್ಲಿ ಕರ್ನಾಟಕ ಸಂಗೀತವೇ ಹೆಚ್ಚು ಪ್ರಾಧಾನ್ಯದಲ್ಲಿತ್ತು. ಹಿಂದುಸ್ತಾನಿ ಸಂಗೀತದ ಬಗ್ಗೆ ಬಹುತೇಕರಿಗೆ ಅರಿವಿಲ್ಲದಷ್ಟು ಕಡಿಮೆ ಪ್ರಮಾಣದಲ್ಲಿತ್ತು. ಕೆಲವರು ಇಲ್ಲಿ ಹಿಂದೂಸ್ತಾನಿ ಸಂಗೀತ ಕಲಿಸುವವರಿದ್ದರೂ, ಮಹಾರಾಷ್ಟ್ರದವರು, ದಕ್ಷಿಣ ಕನ್ನಡ ಜಿಲ್ಲೆಯವರು, ಇನ್ನು ಕೆಲವರು ಉತ್ತರದವರು ಮಾತ್ರ ಕಲಿಯುತ್ತಿದ್ದರೇ ವಿನಃ ಮೈಸೂರು ದೇಶದ ಕನ್ನಡಿಗರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಕಲಿಯುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಪಂಡಿತ ಆರ್.ವಿ.ಶೇಷಾದ್ರಿ ಗವಾಯಿಗಳು ಹೃದಯದಲ್ಲಿ ಸಂಗೀತ ಕಲೆಯ ಯೋಚನೆಯನ್ನು ಹೊತ್ತು ಬೆಂಗಳೂರಿಗೆ ಬಂದಾಗ ಆಗ ಕೇವಲ ಇಪ್ಪತ್ತು ವರ್ಷ ವಯಸ್ಸು. ತರುಣ ಕಲಾವಿದ ಶೇಷಾದ್ರಿಯವರು ಒಂದು ಹಳೆಯ ಬೈಸಿಕಲ್ಲನ್ನೇರಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಂಚರಿಸಿ ಹಿಂದೂಸ್ತಾನಿ ಸಂಗೀತ ಪ್ರಸಾರ ಮಾಡಿದರು. ಕರ್ನಾಟಕ ಸಂಗೀತವೇ ಮೈಮನ ತುಂಬಿದ್ದ ಬೆಂಗಳೂರಿನ ಆಸಕ್ತರಿಗೆ ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು ಪ್ರಪ್ರಥಮವಾಗಿ ಶಿವಶರಣರ ವಚನಗಳನ್ನು ಹಿಂದುಸ್ತಾನಿ ಶೈಲಿಯಲ್ಲಿ ಸ್ವರ ಸಂಯೋಜಿಸಿ ಹಾರ್ಮೋನಿಯಂ ನುಡಿಸುತ್ತ ಅವುಗಳನ್ನು ಹಾಡಿ, ಜನಪ್ರಿಯಗೊಳಿಸಿ, ಆ ಮೂಲಕ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಸವಿಯನ್ನು ಉಣಬಡಿಸಿದರು. ಮಠ, ಮಂದಿರ, ಛತ್ರ, ಸಂಘ-ಸಂಸ್ಥೆ ಎಲ್ಲೆಂದರಲ್ಲಿ ಹಾಡಿ, ಕಲಿಸಿ, ಹಿಂದುಸ್ಥಾನಿ ಸಂಗೀತ ಪ್ರಚಾರಕ್ಕೆ ತರುವಲ್ಲಿ ಸಫಲರಾದರು.

ಶ್ರೀ ಅರವಿಂದ ಸಂಗೀತ ವಿದ್ಯಾಲಯ: ಹಿಂದೂಸ್ಥಾನಿ ಸಂಗೀತಕ್ಕೆ ಜನಪ್ರಿಯತೆ ದೊರೆತು ಅನೇಕರು ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳ ಶಿಷ್ಯತ್ವ ವಹಿಸಿದ ಮೇಲೆ ಅವರು ೩೦ನೇ ಜುಲೈ ೧೯೪೪ರಲ್ಲಿ ಶ್ರೀ ಅರವಿಂದ ಸಂಗೀಥ ವಿದ್ಯಾಲಯವೆಂಬ ಸಂಗೀತ ಶಾಲೆಯನ್ನು ಸ್ಥಾಪಿಸಿ ಸಂಗೀತ ಪಾಠ ಹೇಳಿಕೊಡಲಾರಂಭಿಸಿದರು. ಪಂಡಿತ ಆರ್.ವಿ. ಶೇಷಾದ್ರಿಗವಾಯಿಗಳ ಜೊತೆಯಲ್ಲಿ ಅವರ ಸೋದರ ಸಂಬಂಧಿ ಶ್ರೀ ಎ.ವಿ. ವೆಂಕಟಕೃಷ್ಣ ಸೇರಿ ವಿದ್ಯಾಲಯದ ಸರ್ವೋತೋಮುಖ ಬೆಳವಣಿಗೆಗೆ ಕಾರಣರಾದರು. ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳ ಅವಿಶ್ರಾಂತ ದುಡಿಮೆಯ ಫಲವಾಗಿ ಬೆಂಗಳೂರಿನಲ್ಲಿ ಅವರ ಶಿಷ್ಯರ ಹಿಂಡೇ ತಯಾರಾಯಿತು. ಇಂದು ಅವರಲ್ಲಿ ಸಂಗೀತ ಕಲಿತ ಶಿಷ್ಯರ ಸಂಖ್ಯೆ ಸಾವಿರಾರು.

ಉಭಯಗಾಯನಾಚಾರ್ಯ ಶೀವಯೋಗಿ ಗುರುವರ್ಯ ಪಂಚಾಕ್ಷರಿ ಗವಾಯಿಗಳು ಹಾಗೂ ಉಭಯಗಾಯನಾಚಾರ್ಯ ಕವಿವರ್ಯ ಡಾ. ಪುಟ್ಟರಾಜ ಗವಾಯಿಗಳು ಎಂದೆಂದೂ ಹಣದ ದೃಷ್ಟಿಯಿಂಧ ಸಂಗೀತ ಪ್ರಚಾರ ಮಾಡಿದವರಲ್ಲ. ಇದನ್ನೇ ಮುಂದುವರೆಸಿದ ಪಂ. ಶೇಷಾದ್ರಿ ಗವಾಯಿಗಳು ನನಗೆ ತಿಳಿದಂತೆ ನೂರಾರು ವಚನ ಗಾಯನ, ಭಕ್ತಿಗಾಯನ, ಹಾರ್ಮೋನಿಯಂ ಸೋಲೋ ವಾದನವನ್ನು ಕಚೇರಿಗಳಲ್ಲಿ ಲಯಾವ ಪ್ರತಿಪಲಾಪೇಕ್ಷೆಗಳನ್ನೂ ನಿರೀಕ್ಷಿಸದೆ ಕೇವಲ ವಿಶ್ವಾಸಕ್ಕೆ ಮಣಿದು ನಡೆಸಿಕೊಟ್ಟಿದ್ದಾರೆ. ನಾನು ಸಹಾ ಅಂತಹ ಹಲವಾರು ಕಚೇರಿಗಳಲ್ಲಿ ಸಹಗಾಯಕನಾಗಿ ಭಾಗವಹಿಸಿದ್ದೇನೆ. ಸಾಮಾನ್ಯವಾಗಿ ಕಲಾವಿದರು ವೇದಿಕೆಗೆ ತಡವಾಗಿ ಬಂದರೇನೆ ಒಂದು ರೀತಿಯ ಗೌರವವೆಂದು ಭಾವಿಸುವವರಿರುವಾಗ ಶ್ರೀ ಗವಾಯಿಗಳು ಕಚೇರಿಗೆ ಮುಕ್ಕಾಲು ಘಂಟೆಯ ಮುಂಚೆಯೇ ಮೊದಲಿದ್ದು ಕಾರ್ಯಕರ್ತರಿಗೂ, ಶ್ರೋತೃಗಳಿಗೂ ಸಂತೋಷವನ್ನುಂಟು ಮಾಡುತ್ತಿದ್ದುದು ಅವರ ದೊಡ್ಡತನ. ಈಗ್ಗೆ ೨೮ ವರ್ಷಗಳ ಹಿಂದಿನ ಮಾತು, ರಾಷ್ಟ್ರದ ಹೆಸರಾಂತ ಹಾರ್ಮೋನಿಯ ವಾದಕರಾಗಿದ್ದ ಪಂ. ಶ್ರೀ ವಿಠ್ಠಲರಾವ ಗೋರೇಗಾಂವ್‌ಕರ್ ವರು ಶ್ರೀ ಅರವಿಂದ ಸಂಗೀತ ವಿದ್ಯಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶ್ರೀ ಗವಾಯಿಗಳ ಹಾರ್ಮೋನಿಯಂ ವಾದನವನ್ನು ಕೇಳಿ ಸಂತೋಷಭರಿತರಾಗಿ ನೀವು ದೇಶದ ಉತ್ತಮ ಹಾರ್ಮೋನಿಯಂ ವಾದಕರಲ್ಲೊಬ್ಬರು ಎಂದು ಪ್ರಶಂಸಿಸಿದ್ದರೆಂಬುದು ಗಮನಾರ್ಹವಾದುದು.

ಪಂಡಿತ ಆರ್.ವಿ.ಶೇಷಾದ್ರಿ ಗವಾಯಿಗಳ ಛಲಬಿಡದ ಸಾಧನೆಯ ಪರಿಣಾಮವಾಗಿ ಬೆಂಗಳೂರಿನಲ್ಲಿ ಕರ್ನಾಟಕ ಸಂಗೀತದಂತೆ ಹಿಂದೂಸ್ತಾನಿ ಸಂಗೀತವೂ ಸಾರ್ವಜನಿಕವಾಗಿ ಬೆಳೆಯಲು ಸಾಧ್ಯವಾಯಿತು. ಇಂದು ಬೆಂಗಳೂರಿನಲ್ಲಿ ಹಿಂದುಸ್ತಾನಿ ಸಂಗೀತ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಬೇಕಾದಲ್ಲಿ ಅದರ ಹಿಂದಿನ ಪರಿಶ್ರಮದ ಫಲದ ಕೀರ್ತಿ ಬಹುಪಾಲು ಸೇರಬೇಕಾದದ್ದು ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳಿಗೆ. ಅವರ ಸಾಧನೆಯ ಮತ್ತೊಂದು ಮಜಲು-ಹಲವು ಹಿಂದೂಸ್ತಾನಿ ಸಂಗೀತ ಸಭೆಗಳ ಹುಟ್ಟು ಬೆಳವಣಿಗೆ ಹಾಗೂ ಹಿಂದೂಸ್ತಾನಿ ಸಂಗೀತಜ್ಞರಿಗೆ ಮನ್ನಣೆ ದೊರೆಯುವಂತಾದುದು. ಇವರು ಇತರೆ ವಿದ್ವಾಂಸರೊಂದಿಗೆ ಹುಟ್ಟು ಹಾಕಿದ ಕೆಲವು ಸಂಸ್ಥೆಗಳು-ಹಿಂದೂಸ್ತಾನಿ ಕಲಾಕಾರ ಮಂಡಳಿ, ಬೆಂಗಳೂರು ಸಂಗೀತ ಸಭಾ, ಸ್ವಯಂ ಇವರಿಂದಲೇ ಸ್ಥಾಪಿಸಲ್ಪಟ್ಟ ಸಂಗೀತ ಕೃಪಾಕುಟೀರ ಇತ್ಯಾದಿ. ಇವರು ಹಲವು ಸಮಗೀತ ಸಂಸ್ಥೆಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹೀಗೆ ಹಿಂದೂಸ್ತಾನಿ ಸಂಗೀತವು ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಬೆಳೆಯಲು ಬಹುಮಟ್ಟಿಗೆ ಇವರು ಕಾರಣರಾಗಿದ್ದಾರೆ. ಇಡೀ ಭಾರತದಲ್ಲೇ ಮೊಟ್ಟ ಮೊದಲನೆಯದಾದ ಎಲ್ಲ ಸಂಗೀತ ವಿದ್ವಾಂಸರೇ ಹುಟ್ಟುಹಾಕಿ ನಡೆಸುತ್ತಿರುವ ಕರ್ನಾಟಕ ಗಾನಕಲಾ ಪರಿಷತ್‌ನ ಹಿಂದುಸ್ತಾನಿ ಸಂಗೀತ ವಿಭಾಗದ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದುದು ಇವರ ಜನಪ್ರಿಯತೆಯನ್ನು ತೋರಿಸುವುದಾಗಿದೆ. ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು “ತಾನ್‌ಸೇನ್‌ರುಗಳಷ್ಟೇ ಸಾಲದು-ಕಾನ್‌ಸೇನ್‌ಗಳೂ ಬೇಕು” ಎಂಬ ನಾಣ್ಣುಡಿಯಂತೆ ಕೇಳುಗರ ಹಿಂಡನ್ನೇ ಸೃಷ್ಟಿಸಿದ್ದಾರೆ.

ಗಾಯನ ಗಂಗಾ: ಸಂಗೀತ ಕಲೆ ಸಾಹಿತ್ಯ ಮೂಲಕವಾಗಿಯೂ ಹೆಚ್ಚು ಬೆಳೆಯಬೇಕು ಮತ್ತು ಅದು ಇನ್ನೂ ಹೆಚ್ಚು ಜನಪ್ರಿಯತೆ ಪಡೆಯಬೇಕೆಂಬ ಉದ್ಧೇಶದಿಂದ, ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು, ಶ್ರಈ ಅ.ನ. ಕೃಷ್ಣರಾಯರ ಮಾರ್ಗದರ್ಶನ ಮತ್ತು ಡಾ. ಪುಟ್ಟರಾಜ ಗವಾಯಿಗಳ ಆಶೀರ್ವಾದದಿಂದ ೧೯೫೮ರಲ್ಲಿ ಬೆಂಗಳೂರಿನಲ್ಲಿ ಗಾಯನ ಗಂಗಾ ಎಂಬ ಸಂಗೀತ ಮಾಸಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿದರು. ಅದಕ್ಕಾಗಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಪತ್ರಿಕೆ ನಡೆಸುವುದು ಸುಲಭದ ಕಾರ್ಯವಲ್ಲವೆಂಬುದನ್ನು ಅರಿತಿದ್ದರೂ ಸಹ ಅವರು ಅದು ದೈವ ಸಂಕಲ್ಪವೆಂದು ಬಗೆದು ಅದನ್ನು ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಬಂದಿರುವುದು ಅವರ ವ್ಯವಹಾರ ಚತುರತೆ ಹಾಗೂ ಎದೆಗುಂದದ ಧೈರ್ಯವನ್ನು ಎತ್ತಿತೋರಿಸುತ್ತದೆ. ಈಗ ಗಾಯನ ಗಂಗಾ ಪತ್ರಿಕೆಕಯು ೪೫ನೇ ವರ್ಷದಲ್ಲಿ ಕಾಲಿಟ್ಟಿದ್ದು ಅವರ ಮುದ್ರಣಾಲಯ ಆಫ್ ಸೆಟ್‌ ತಂತ್ರಜ್ಞಾನ ಹೊಂದಿರುವುದು ಅವರ ಸಾಹಸಕ್ಕೆ ದಿವ್ಯ ನಿದರ್ಶನ. ಕರ್ನಾಟಕದ ಬಹುಶಃ ಮೊದಲ ಕನ್ನಡ ಭಾಷೆಯ ಸಂಗೀತ ಮಾಸಿಕ ಪತ್ರಿಕೆ ಗಾಯನ ಗಂಗಾ ಇಂದು ನಿಯಮಿತವಾಗಿ ಪ್ರಕಾಶನಗೊಳ್ಳುತ್ತಿರುವ ಭಾರತದ ಕೆಲವೇ ಸಂಗಈತ ಮಾಸಪತ್ರಿಕೆಗಳಲ್ಲಿ ಒಂದೆನಿಸಿದೆ. ಸಂಗೀತಶಾಸ್ತ್ರ, ಪ್ರಾಯೋಗಿಕತೆ, ಚರ್ಚೆ, ವಿಮರ್ಶೆ, ವ್ಯಕ್ತಿಚಿತ್ರ, ಸಂಗೀತದ ಸುದ್ದಿ ಸಮಾಚಾರ ಮುಂತಾದ ವೈವಿಧ್ಯ ವಿಷಯಗಳನ್ನೊಳಗೊಂಡ ಈ ಪತ್ರಿಕೆಗೆ ಪತ್ರಿಕಾಕ ಅಕಾಡೆಮಿಯ ಪ್ರಶಸ್ತಿ ದೊರೆತಿದೆ.

ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು ವಾಗ್ಗೇಯಕಾರರೂ ಹೌದು. ಅವರು ಉರಗಾಚಲ ಎಂಬ ಕಾವ್ಯನಾಮದಿಂದ ಅನೇಕ ರಚನೆಗಳನ್ನು ಮಾಡಿ ಅವುಗಳಿಗೆ ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಸ್ವರ ಸಂಯೋಜಿಸಿ ಅವುಗಳನ್ನು ಗಾಯನ ಗಂಗಾ ಮಾಸಿಕದಲ್ಲಿ ಪ್ರಕಟಿಸುತ್ತಾ ಬಂದಿದ್ದಾರೆ. ಅವುಗಳ ಸಂಗ್ರಹವನ್ನು ಗ್ರಂಥರೂಪದಲ್ಲಿ ಪ್ರಕಟಿಸುವ ಸಾಹಸವನ್ನು ಅವರ ಮಗ ಆರ್.ಎಸ್‌. ಅರವಿಂದ್‌ ಕೈಗೆತ್ತಿಕೊಂಡಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಅವರ ಸಾಹಿತ್ಯ ರಚನೆ ಕಾರ್ಯವು ಗಾಯನ-ಗಂಗಾದ ಮೂಲಕ ನಿರಂತರವಾಗಿ ನಡೆದಿದೆ. ಪಂ.ಗವಾಯಿಗಳು ಉರಗಾಚಲ ಎಂಬ ಕಾವ್ಯನಾಮದಿಂದ ೫೦೦ಕ್ಕೂ ಮಿಗಿಲಾದ  ಭಕ್ತಿಗೀತೆಗಳನ್ನು ಸ್ವರಸಂಯೋಜನೆ ಮಾಡಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಇವರು ನೂರಾರು ತತ್ವಗೀತೆಗಳನ್ನು, ಲಕ್ಷಣಗೀತೆಗಳನ್ನು, ಸರಿಗಮ ಗೀತೆಗಳನ್ನು ಖ್ಯಾಲ್‌ಗಳನ್ನು ತರಾನಾಗಳನ್ನು ವಿವಿಧ ರಾಗ-ತಾಳಗಳಲ್ಲಿ ರಚಿಸಿ ಗಾಯನಗಂಗಾ ಮುಖಾಂತರ ಪ್ರಚಾರಗೊಳಿಸಿದ್ದಾರೆ. ಇವರು ರಚಿಸಿದ ೧೦ ಥಾಟುಗಳ ದಾದರಾ ತಾಳದ ರಚನೆ ಮನ ಮೋಹಕವಾಗಿದೆ. ಕೇವಲ ೬ ಮಾತ್ರೆಯಲ್ಲಿ ರಾಗದ ಸ್ವರೂಪವನ್ನು ಬದಲಾಯಿಸಲಾಗಿದೆ. ಇವರು ಬರೆದ ಸಂಗೀತ ಕಲಾರವಿಂದ ಭಾಗ-೧ ಹಾಗೂ ಸಂಗೀತ ಕಲಾರವಿಂದ ಭಾಗ-೨ ಕರ್ನಾಟಕ ಸರ್ಕಾರದಿಂದ ಬಹುಮಾನಿತವಾಗಿದೆ. ಇವರ ತತ್ವಗಾನ ರತ್ನಾಕರ ಎಂಬ ಪುಸ್ತಕ ಬಹು ಜನಪ್ರಿಯವಾಗಿದೆ.

ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು ಬೆಂಗಳೂರಿಗೆ ಬಂದಮೇಲೆ ಹಲವಾರು ವರ್ಷಗಳು ಗಾಯಕರಾಗಿ ವಚನಗಾಯನ ವಿಭೂಷಣರೆಂದೇ ಪ್ರಸಿದ್ಧರಾಗಿದ್ದರು. ಇವರು ಸುಪ್ರಸಿದ್ಧ ಹಾರ್ಮೋನಿಯಂ ವಾದಕರೂ ಹೌದು. ಹೆಸರಾಂತ ಸಂಗೀತಗಾರರಾದ ಮಲ್ಲಿಕಾರ್ಜುನ ಮನಸೂರ, ಬಸವರಜ ರಾಜಗುರು, ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ಲ, ಪರ್ವೀನ್‌ ಸುಲ್ತಾನ, ಸಿಂಗ್‌ ಬಂಧುಗಳು, ಪ್ರಭುದೇವ ಸರ್ದಾರ್ ಮುಂತಾದ ದಿಗ್ಗಜಗಳಿಗೆ ಹಾರ್ಮೋನಿಯಂ ಸಾಥಿ ನೀಡಿದ್ದಾರೆ. ಯಾವುದೇ ರಗವನ್ನು ಅವರು ಸುಲಲಿತವಾಗಿ, ಆಕರ್ಷಕವಗಿ ನುಡಿಸಬಲ್ಲರು. ಆಗಿನ ದಿನಗಳಲ್ಲಿ ಭಾರತ ಸರ್ಕಾರ, ಆಕಾಶವಾಣಿ ಸೇರಿದಂತೆ ಇತರ ಯಾವುದೇ ಸಂಗೀತ ಕಚೇರಿಗಳಲ್ಲಿ ಹಾರ್ಮೋನಿಯಂ ವಾದನಕ್ಕೆ ನಿಷೇದ ಹೇರಿತ್ತು. ಇಂಥ ಸಂದರ್ಭದಲ್ಲಿ ಸಹ ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು ಹಾಲರ್ಮೋನಿಯಂ ವಾದನವನ್ನು ಕೈಗೆತ್ತಿಕೊಂಡು ಅದರಲ್ಲಿ ಅನೇಕಾನೇಕ ಕಚೇರಿಗಳನ್ನು ನಡೆಸಿಕೊಟ್ಟರು. ಅದರಲ್ಲಿ ಕೆಲವು-ದೆಹಲಿ, ಕಲ್ಕತ್ತಾ ಮುಂಬಯಿ, ನಾಗಪುರ,ಹೈದರಾಬಾದ್‌, ಚೆನ್ನೈ, ಇತ್ಯಾದಿ ಸ್ಥಳಗಳಲ್ಲಿ ಮಾಡಿದ್ದಾರೆ.

ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು ತುಂಬ ಸರಳ ಜೀವಿ. ವಿನಯ ಸಂಪನ್ನತೆ ಅವರಲ್ಲಿ ಮನೆಮಾಡಿಕೊಂಡಿತ್ತು . ಸರ್ವೋತ್ಕೃಷ್ಟ ಸಂಗೀತಗಾರರಿರಲಿ, ಬಾಲಕಲಾವಿದನಿರಲಿ ಅವರೊಂದಿಗೆ ಒಂದೇ ಭಾವನೆಯೊಂದಿಗೆ ಬೆರೆಯುವವರು. ಅಂತೆಯೇ ಅವರು ಎಲ್ಲ ಕಡೆ ಜನಾನುರಾಗಿಗಳಾಗಿ ಸಂಗೀತ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ.

ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳ ಕಾರ್ಯದಕ್ಷತೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಅವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರನ್ನಾಗಿ, ನಂತರ ೧೯೯೧ರಲ್ಲಿ ಅಕಾಡೆಮಿಯ ಅಧ್ಯಕ್ಷ ಸ್ಥಾನ ನೀಡಿ ಗೌರವಿಸಿತು. ಅವರ ಅಧ್ಯಕ್ಷತೆಯ ಕಾಲಾವಧಿಯಲ್ಲಿ ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು ಅನೇಕ ವಿಧಾಯಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡು ಅವುಗಳನ್ನು ಯಶಸ್ವಿಯಾಗಿ ನರ್ವಿಹಿಸಿದ್ದಾರೆ. ಅನೇಕ ಬಡ ಹಾಗೂ ಪ್ರತಿಭಾವಂತ ಕಲಾವಿದರಿಗೆ ಗೌರವ ಮಾಶಾಸನ,ಹಿರಿಯ ಕಲಾವಿದರ ವಿಡಿಯೋ-ಆಡಿಯೋ ಚಿತ್ರೀಕರಣ ಸಂಗ್ರಹ, ಹಿರಿಯ ಸಂಗೀತ ಕಲಾವಿದರ ಮನೆ ಬಾಗಿಲಿಗೆ ಹೋಗಿ ಸರ್ಕಾರದ ಗೌರವ ಸಮರ್ಪಣೆ, ಸುಮಾರು ನಲವತ್ತು ಸಂಗೀತ ಪುಸ್ತಕಗಳ ಪ್ರಕಟಣೆ ಮುಂತಾದವುಗಳು ಉಲ್ಲೇಖನೀಯ ಕಾರ್ಯಗಳು.

ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳಿಗೆ ದೊರೆತ ಪ್ರಶಸ್ತಿ-ಪುರಸ್ಕಾರಗಳು ಅನೇಕ. ಅವುಗಳಲ್ಲಿ ಕೆಲವು ಸಂಗೀತ ಸಾಗರ, ಸಂಗೀತ ಕಲಾರತ್ನ, ಸಂಗೀತ ವಿಶಾರದ, ಸಂಗೀತ ಸುಧಾರ್ಣವ, ನಾದಶ್ರೀ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾತಿಲಕ, ಗಾನಗಂಧರ್ವಾಚಾರ್ಯ, ಚಂದ್ರಹಾಸ ಪ್ರಶಸ್ತಿ, ಕಲಾಜ್ಯೋತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗಾಯನವಾದನ ಚತುರ, ವಚನವಿಭೂಷಣ, ಬೆಂಗಳೂರು ಮಹಾನಗರಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಮುಂತಾದವುಗಳು ಉಲ್ಲೇಖನೀಯವಾಗಿವೆ. ಇವೆಲ್ಲಕ್ಕೂ ಕಲಶವಿಟ್ಟಂತೆ ಅತ್ಯುನ್ನತ ಹಾಗೂ ಪರಮೋಚ್ಚವೆನಿಸಿದ ಮುಂಬಯಿಯ ಅಖಿಲ ಭಾರತೀಯ ಗಾಂಧರ್ವ ಮಹಾವಿದ್ಯಾಲಯ ಮಂಡಳಿಯು ಸಂಗೀತ ಮಹಾಮಹೋಪಾಧ್ಯ;ಆಯ ಬಿರುದನ್ನಿತ್ತು  ಗೌರವಿಸಿದೆ.

ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳ ಕೀರ್ತಿ ಕಡಲಾಚೆಗೂ ಹಬ್ಬಿರುವುದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿ. ಅವರನ್ನು ಲಂಡನ್ನಿನ ಭಾರತೀಯ ವಿದ್ಯಾಭವನವು ಬೇಸಿಗೆಯ ವಿಶೇಷ ಸಂಗೀತ ಉಪನ್ಯಾಸ ಹಾಗೂ ಸಂಗೀತ ಪಾಠ ಕಲಿಸುವಿಕೆಗಾಗಿ ಸತತವಾಗಿ ನಾಲ್ಕು ವರ್ಷಗಳು ಆಹ್ವಾನಿಸಿ ಗೌರವಿಸಿರುವುದು ಕನ್ನಡಿಗರಿಗೆ ದೊರೆತ ಗೌರವವೆಂದೇ ಹೇಳಬೇಕು. ಪಂಡಿತ ಆರ್.ವಿ. ಶೇಷಾದ್ರಿ ಗವಾಯಿಗಳು ಲಂಡನ್ನಿನಲ್ಲಿ ಪಾಠ ಹೇಳಿಕೊಡುವುದು ಮಾತ್ರವಲ್ಲದೇ ಹಾರ್ಮೋನಿಯಂ ಸೋಲೋ ವಾದನ ಕಾರ್ಯಕ್ರಮಗಳನ್ನು ನಡೆಸಿ ಮೆಚ್ಚುಗೆ ಗಳಿಸಿರುವುದನ್ನು ಭಾರತೀಯ ವಿದ್ಯಾ ಭವನ, ಲಂಡನ್‌, ಮನಸಾರೆ ಹೊಗಳಿ ಅಭಿನಂದಿಸಿದೆ. ಇವರ ಶಿಷ್ಯರಲ್ಲಿ ಅನೇಕರು ಶಾಲೆಗಳಲ್ಲಿ ಪಾಠ ಮಾಡುತ್ತಿದ್ದಾರೆ, ಕೆಲವರು ಅನೇಕ ಶಾಲೆಗಳನ್ನು ನಡೆಸುತ್ತಾ ಇದ್ದಾರೆ ಇಂತಹವರಲ್ಲಿ ಮುಖ್ಯರಾದವರು ಪಂ.ವಿ.ಎಮ್‌. ನಾಗರಾಜ್‌-ನಾದವಾಹಿನಿ ಶ್ರೀ ದತ್ತ ಸಂಗೀತ ವಿದ್ಯಾನಿಕೇತನ, ಪಂ.ಎಂ. ನಾಗೇಸ್‌, ವಿಜಯ ಸಂಗೀತ ವಿದ್ಯಾಲಯ, ಶ್ರೀ ಸತೀಶ್‌ ಹಂಪಿ-ಹೊಳಿ-ರ್ಶರ್‌ಈ ಸದ್ಗುರು ಸಂಗೀತ ವಿದ್ಯಾಲಯ, ಶ್ರೀ ಬಿ.ವಿ. ರಾಧಾಕೃಷ್ಣ-ಶ್ರೀ ಉರಗಾಚಲ ಸಂಗೀತ ವಿದ್ಯಾಲಯ, ಶ್ರೀ ಎನ್‌.ಎಸ್‌. ಗುಂಡಾಶಾಸ್ತ್ರಿ-ಸಂಗೀತ ಕೃಪಾಕುಟೀರ, ಶ್ರೀಮತಿ ಲಕ್ಷ್ಮೀ ಕುಲಕರ್ಣಿ-ಸಂಗೀತ ಸುಧಾ ನಿಕೇತನ ಇತ್ಯಾದಿ. ಕೆಲವರು ಪಾಶ್ಚಿಮಾತ್ಯ ದೇಶಗಳಲ್ಲಿದ್ದಾರೆ. ಕೆಲವರು ಆಕಾಶವಾಣಿ ಹಾಗೂ ದೂರದರ್ಶನದಲ್ಲಿದ್ದಾರೆ. ಕೆಲವರು ಚಲನಚಿತ್ರರಂಗದಲ್ಲೂ  ಇದ್ದಾರೆ. ಇವರ ಶ್ರೀ ಅರವಿಂದ ಸಂಗೀತ ವಿದ್ಯಾಲಯದಲ್ಲಿ ಕರ್ನಾಟಕ ಸರ್ಕಾರದ ಎಲ್ಲ ಪರೀಕ್ಷೆಗಳಿಗೆ ಹಾಗೂ ಅಖಿಲ ಭಾರತೀಯ ಗಾಂಧರ್ವ ಮಹಾವಿದ್ಯಾಲಯ ಮಂಡಳಿಯ ಎಲ್ಲ ಪರೀಕ್ಷೆಗಳಿಗೆ ಶಿಕ್ಷಣ ನೀಡಲಾಗುತ್ತಿದೆ.

ಇಷ್ಟೇ ಅಲ್ಲದೆ ಹಿಂದೆ ಮೈಸೂರು ಪ್ರಾಂತ್ಯದಲ್ಲಿ ಕರ್ನಾಟಕ ಸಂಗೀತ ಪರೀಕ್ಷೆಗಳು ಮಾತ್ರ ನಡೆಸಲಾಗುತ್ತಿತ್ತು. ಕರ್ನಾಟಕ ಏಕೀಕರಣವಾದ ಮೇಲೆ ಹಿಂದೂಸ್ತಾನಿ ಸಂಗೀತಕ್ಕೂ ಪರೀಕ್ಷೆಗಳನ್ನು ನಡೆಸಬೇಕೆಂಬ ಸದುದ್ದೇಶವನ್ನು ಹೊಂದಿದ ಗವಾಯಿಗಳು ಸಿಲಬಸ್‌ ಕಮಿಟಿ, ಸರ್ಕಾರದ ಸಂಗೀತ ಸಲಹಾ ಸಮಿತಿ, ಇತ್ಯಾದಿಗಳಲ್ಲಿ ಸದಸ್ಯರಾಗಿ ಸಂಗೀತ ಪರೀಕ್ಷೆಗಳ ಯಶಸ್ಸಿಗಾಗಿ ಅತ್ಯಂತ ಶ್ರಮ ವಹಿಸಿದ್ದಾರೆ. ೧೯೬೭ರಿಂದ ಪ್ರಾರಂಭವಾದ ಹಿಂದುಸ್ತಾನಿ ಸಂಗೀತ ವಿದ್ವಾತ್‌ ಪರೀಕ್ಷೆಯ ಮಂಡಳಿಯ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ರೀತಿ ಒಂದು ಸಂಸ್ಥೆಯಂತೆ ಸರ್ವತೋಮುಖ ಸೇವೆ ಮಾಡಿ ಗಾನಯೋಗಿ ಶ್ರೀ ಪಂಚಾಕ್ಷರಿ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ೧೯೯೬ರಲ್ಲಿ ಸ್ಥಾಪಿಸಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಇದುವರೆಗೆ-೧೯೯೭ರಲ್ಲಿ ಡಾ. ಗಂಗೂಬಾಯಿ ಹಾನಗಲ್ಲ, ೧೯೯೮ರಲ್ಲಿ ಡಾ. ಪುಟ್ಟರಾಜ ಗವಾಯಿಗಳು, ೧೯೯೯ರಲ್ಲಿ ಡಾ.ಎಂ. ಬಾಲಮುರುಳಿಕೃಷ್ಣ ೨೦೦೦ರಲ್ಲಿ ಶ್ರೀ ಮೃತ್ಯಂಜಯ ಪುರಾಣಿಕ ಮಠ ಬುವಾರವರು, ೨೦೦೧ರಲ್ಲಿ ಶ್ರೀ ಆರ್.ಆರ್. ಕೇಶವಮೂರ್ತಿರವರು, ೨೦೦೨ರಲ್ಲಿ ಶ್ರೀ ಸದಾಶಿವ ದತ್ತಾತ್ರೇಯಗರೂಡ್‌ರವರಿಗೆ ನೀಡಿ ಸತ್ಕಾರ್ಯವನ್ನೆಸಗಿದ್ದಾರೆ.

ಪಂಡಿತ ಶೇಷಾದ್ರಿ ಗವಾಯಿಗಳು ತಮ್ಮ ೭೯ ವಸಂತಗಳ ಸಾರ್ಥಕ ತುಂಬು ಜೀವನವನ್ನು ಕಾಮನಹುಣ್ಣಿಮೆಯಂದು ಪಾಠ ಹೇಳಿಕೊಡುವಾಗಲೇ ಇಹಲೋಕದ ಕಾಯಕವನ್ನು ಮುಗಿಸಿದರು. ಗುರುವರ್ಯರ ಸ್ಥಾನವನ್ನು ತುಂಬಲು ಅಸಾಧ್ಯವಾದರೂ ಅವರ ಹಿರಿಯ ಪುತ್ರ ಆರ್.ಎಸ್‌. ಅರವಿಂದ್‌ರವರು ಸಂಗೀತ ಶಾಲೆ, ಗಾಯನ ಗಂಗಾ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಮುಂದುವರೆಸಿ, ನಡೆಸಿಕೊಂಡು  ಹೋಗಲು ಸಾಕಷ್ಟು ಶ್ರಮವಹಿಸುತ್ತಿದ್ದಾರೆ.