ದಾವಣಗೆರೆಯಲ್ಲಿ ಜನಿಸಿ, ಗದುಗಿನಲ್ಲಿ ಸಂಗೀತ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ನೆಲೆಸಿ ಎಂಟು ದಶಕಗಳ ಕಾಲ ಸಂಗೀತದ ಶ್ರದ್ಧಾಳುವಾಗಿ, ಸಂಗೀತ ಶಿಕ್ಷಕರಾಗಿ, ಶ್ರೇಷ್ಠ ಹಾರ್ಮೋನಿಯಂ ವಾದಕರಾಗಿ, ಸಂಗೀತ ವಿದ್ಯಾಲಯ ಸ್ಥಾಪಿಸಿ, ಸಂಗೀತ ಪತ್ರಿಕೆ ಹುಟ್ಟು ಹಾಕಿ, ಸಂಗೀತ ಪ್ರಸಾರಕ್ಕಾಗಿ ಜೀವನಪೂರ್ತಿ ಮೀಸಲಿಟ್ಟು ಎಂಭತ್ತು ವರ್ಷ ತುಂಬು ಜೀವನ ಬಾಳಿ, ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಸಂಗೀತ ಪ್ರತಿಷ್ಠಾನ ಸ್ಥಾಪಿಸಿ, ಪ್ರಶಸ್ತಿ ನೀಡಿ, ಬೆಂಗಳೂರಿನಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಗಟ್ಟಿಯಾಗಿ ನಿಲ್ಲಲು ಶ್ರಮವಹಿಸಿದ ಪಂ.ಆರ್. ವಿ. ಶೇಷಾದ್ರಿ ಗವಾಯಿ ಸಂಗೀತದ ಋಷಿಸದೃಶ ಸಂತರು.

೧೮೮೪ರ ಮಾರ್ಚ್ ೨೧ ರಂದು ದಾವಣಗೆರೆಯಲ್ಲಿ ಜನಿಸಿದ ಶೇಷಾದ್ರಿ ಗವಾಯಿಗಳು ಬಾಲಕರಾಗಿದ್ದಾಗ ರಂಗಭೂಮಿ ಪ್ರವೇಶಿಸಿ ನಟರಾಗಿ ಕಲಾಲೋಕ ಪ್ರವೇಶಿಸಿದರು. ತಂದೆ ರಾಜಾಪುರ ವೆಂಕಟಸುಬ್ಬಯ್ಯ; ತಾಯಿ ತಮ್ಮಮ್ಮರ ಪ್ರೋತ್ಸಾಹದಿಂದ ಸಂಗೀತ ಲೋಕ ಪ್ರವೇಶಿಸಿದ ಅವರು ಆರಂಭದಲ್ಲಿ ಕಲ್ಕೋಟಿ ಚನ್ನಬಸಯ್ಯನವರಲ್ಲಿ ಸಂಗೀತದ ಶ್ರೀಕಾರ ಪಡೆದುಕೊಂಡು ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳಲ್ಲಿ ನಂತರ ಪಂ. ಪುಟ್ಟರಾಜ ಗವಾಯಿಗಳ ಶಿಷ್ಯತ್ವ ವಹಿಸಿ ಹಿಂದೂಸ್ಥಾನಿ ಹಾಡುಗಾರಿಕೆ, ತಬಲಾ ಹಾಗು ವಿಶೇಷವಾಗಿ ಹಾರ್ಮೋನಿಯಂ ವಾದನದಲ್ಲಿ ತರಬೇತಿ ಪಡೆದು ೧೯೪೪ರಲ್ಲಿ ಬೆಂಗಳೂರಿಗೆ ಬಂದು ಕರ್ನಾಟಕದ ಭದ್ರಕೋಟೆಯೆನಿಸಿದ ಬೆಂಗಳೂರಿನಲ್ಲಿ ಹಿಂದೂಸ್ಥಾನಿ ಸಂಗೀತ ಗಟ್ಟಿಯಾಗಿ ನೆಲೆಯೂರಲು ಕಾರಣರಾದರು.

೧೯೪೪ರಲ್ಲಿ ಬೆಂಗಳೂರಿನಲ್ಲಿ ‘ಅರವಿಂದ ಸಂಗೀತ ವಿದ್ಯಾಲಯ’ ಸ್ಥಾಪಿಸಿ ನೂರಾರು ಆಸಕ್ತರಿಗೆ ಹಿಂದೂಸ್ಥಾನಿ ಸಂಗೀತದಲ್ಲಿ ತಾಲೀಮು ನೀಡಿದರು. ಸಂಗೀತ ಕಲೆಯ ಪ್ರಸಾರಕ್ಕಾಗಿ ೧೯೫೮ರಲ್ಲಿ ‘ಗಾಯನ ಗಂಗಾ’ ಎಂಬ ಕನ್ನಡ ಮಾಸಿಕ ಪತ್ರಿಕೆ ಆರಂಭಿಸಿದರು. ಕಷ್ಟ-ನಷ್ಟದಲ್ಲೂ ೪೫ ವರ್ಷಗಳ ಕಾಲ ಆ ಪತ್ರಿಕೆ ನಡೆಸಿದರು. ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ ಪ್ರತಿಷ್ಠಾನ ಸ್ಥಾಪಿಸಿ (೧೯೯೬) ದೇಶದ ಪ್ರತಿಷ್ಠಿತ ಸಂಗೀತಗಾರರಿಗೆ ‘ಪಂಚಾಕ್ಷರಿ ಪ್ರಶಸ್ತಿ’ ನೀಡಿದ್ದು ಅವರ ಹೆಗ್ಗಳಿಕೆ. ‘ಉರಗಾಚಲ’ ಎಂಬ ಕಾವ್ಯ ನಾಮದಿಂದ ಅನೇಕ ರಚನೆಗಳನ್ನು ಮಾಡಿದ ಗವಾಯಿಗಳು ‘ಸಂಗೀತ ಕಲಾರವಿಂದ’ ಮತ್ತು ‘ತತ್ವಗಾನ ರತ್ನಾಕರ’ ಎಂಬ ಎರಡು ಸಂಗೀತ ಗ್ರಂಥ ರಚನೆ ಪ್ರಕಟಿಸಿದ್ದಾರೆ. ಲಂಡನ್ನಿನ ‘ಭಾರತೀಯ ವಿದ್ಯಾ ಭವನದಲ್ಲಿ’ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ದೇಶದ ಪ್ರತಿಷ್ಠಿತ ಹಾಡುಗಾರರಿಗೆ ಸಾಮರ್ಥವಾಗಿ ಹಾರ್ಮೋನಿಯಂ ಸಾಥ್ ನೀಡಿದ್ದಾರೆ. ಸೋಲೋ ನುಡಿಸಿದ್ದಾರೆ.

ಕರ್ನಾಟಕ ಸರ್ಕಾರದ ಸಂಗೀತ ಪರೀಕ್ಷೆ, ಅ.ಭಾ.ಗಾಂ.ಮ.ವಿ. ಮಂಡಲದ ಸಂಗೀತ ಪರೀಕ್ಷೆಗಳ ಸಂಚಾಲಕರಾಗಿ, ಸಂಗೀತ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಅಧ್ಯಕ್ಷರಾಗಿ, ವಿವಿಧ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಶೇಷಾದ್ರಿ ಗವಾಯಿಗಳಿಗೆ ೩೫ ಪ್ರಶಸ್ತಿ ಹಾಗೂ ೬೫ಕ್ಕೂ ಮಿಕ್ಕ ಸನ್ಮಾನ ದೊರೆತಿವೆ. ಅವರಿಗೆ ದೊರೆತ ಪ್ರಶಸ್ತಿಗಳಲ್ಲಿ ಶ್ರೀಶೈಲ ಜಗದ್ಗುರುಗಳ ‘ವಚನ ಗಾನವಿಭೂಷಣ’ (೧೯೫೦), ಬಿ. ದೇವೇಂದ್ರಪ್ಪನವರ ‘ಗಾಯನ ವಾದನ ಚತುರ’ (೧೯೫೦), ರಂಭಾಪುರಿ ಜಗದ್ಗುರುಗಳ ‘ಸಂಗೀತ ಸಾಗರ’ (೧೯೬೦), ಗದುಗಿನ ಸಂಗೀತ ಸಮ್ಮೇಳನದ ‘ಹಾರ್ಮೋನಿಯಂ ಕಲಾಪ್ರಪೂರ್ಣ’ (೧೯೬೧), ಬೆಂಗಳೂರು ನಾಗರಿಕರ ‘ಸಂಗೀತ ಕಲಾರತ್ನ’ (೧೯೬೭), ಸಿರಾ ನಾಗರಿಕರ ‘ಗಾನ ವಿದ್ಯಾಧರ’ (೧೯೬೮), ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷ ಗೌರವ (೧೯೭೪), ಹಿಂದೂಸ್ಥಾನಿ ಕಲಾಕಾರ ಮಂಡಳಿಯ ‘ನಾದಶ್ರೀ’ (೧೯೮೫), ‘ಕರ್ನಾಟಕ ರಾಜ್ಯೋತ್ಸವ’ (೧೯೯೨) ಸೊರಬ ಸಂಗೀತ ಸೇವಾ ಸಮಿತಿಯ ‘ಚಂದ್ರಹಾಸ’ (೧೯೯೫), ಗಾಂಧರ್ವ ಮಹಾಮಂಡಲದ ‘ಸಂಗೀತ ಮಹಾ ಮಹೋಪಾಧ್ಯಾಯ’ ಬೆಂಗಳೂರು ಮಹಾನಗರ ಪಾಲಿಕೆಯ ‘ಕೆಂಪೇಗೌಡ’ ಪ್ರಶಸ್ತಿ – ಮುಂತಾದವುಗಳು ಉಲ್ಲೇಖನೀಯ ಪ್ರಶಸ್ತಿಗಳಾಗಿವೆ.