ಆರ್.ವೆಂಕಟರಾಮನ್

ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೨೫.೦೭.೧೯೮೭ ರಿಂದ ೨೪.೦೭.೧೯೯೨

 

ರಾಮಸ್ವಾಮಿ ವೆಂಕಟರಾಮನ್ ಅವರು ತಾವು ರಾಷ್ಟ್ರಪತಿಗಳಾಗಿದ್ದ ಐದು ವರ್ಷಗಳ ಅನುಭವದ ಸಾರವನ್ನು “My Presidential Years” ಎಂಬ ಪುಸ್ತಕದಲ್ಲಿ ಬರೆಯುತ್ತಾ “ಹುಟ್ಟಿದ ಊರು ರಾಜಮಡಮ್ ಹಳ್ಳಿಯಿಂದ ರಾಷ್ಟ್ರಪತಿ ಭವನದವರೆಗಿನ ಪಯಣ ಸುದೀರ್ಘವಾದದ್ದು. ಏಣಿಯ ಪ್ರತಿಯೊಂದು ಮೆಟ್ಟಿಲನ್ನೂ ಹಂತ ಹಂತವಾಗಿ ಏರಿ, ಈ ಉನ್ನತ ಸ್ಥಾನವನ್ನು ತಲುಪಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. ಕಾರ್ಮಿಕ ಸಂಘಟನೆಯ ವಕೀಲ, ಅದರ ಅಧ್ಯಕ್ಷ, ಕಾಂಗ್ರೆಸ್ ಸಂಸ್ಥೆಯ ಸಾಮಾನ್ಯ ಕೆಲಸಗಾರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ, ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ, ಅದೇ ಸಂಸ್ಥೆಯ ಆಡಳಿತ ನ್ಯಾಯಮಂಡಳಿಯ (Administarative Tribunal) ಅಧ್ಯಕ್ಷ, ಸಂಸತ್ ಸದಸ್ಯ, ತಮಿಳು ನಾಡು ಹಾಗು ಕೇಂದ್ರ ಸಂಪುಟಗಳಲ್ಲಿ ಮಂತ್ರಿ, ಉಪರಾಷ್ಟ್ರಪತಿ, ರಾಷ್ಟ್ರಪತಿ-ಹೀಗೆ ವೈವಿಧ್ಯಪೂರ್ಣ ಸಾರ್ವಜನಿಕ ಸೇವೆಯ ಅನುಭವ ಅವರದು. ಸಮರ್ಥನ್ಯಾಯವಾದಿ, ಅರ್ಥಿಕರಂಗದ ಅಪಾರ ಜ್ಞಾನವುಳ್ಳವರು, ರಾಜಕೀಯ ಕ್ಷೇತ್ರದ “ಸೂಕ್ಷ್ಮಗಳನ್ನು ಅರಿತವರು. ಆಡಳಿತದಲ್ಲಿ ಸಿದ್ಧಹಸ್ತರು , ನಡೆನುಡಿಯಲ್ಲಿ ವಿನಯ, ಶುದ್ಧಚಾರಿತ್ರ್ಯ, ನ್ಯಾಯಪರತೆ ಇವುಗಳಿಂದ ಎಲ್ಲರ ಪ್ರೀತಿ, ವಿಶ್ವಾಸ, ಗೌರವ ಗಳಿಸಿಕೊಂಡವರು ವೆಂಕಟರಾಮನ್.

೧೯೧೦ರ ಡಿಸೆಂಬರ್ ೪ ರಂದು ತಮಿಳು ನಾಡಿನ ತಂಜಾವೂರ್ ಜಿಲ್ಲೆಯ ರಾಜಮಡಮ್ ಹಳ್ಳಿಯಲ್ಲಿ ವೆಂಕಟರಾಮನ್ ಅವರ ಜನನ. ತಂದೆ ರಾಮಸ್ವಾಮಿ ಅಯ್ಯರ್ ವಕೀಲರು. ಸುಸಂಸ್ಕೃತ ವ್ಯಕ್ತಿ ದೇಶ ಸೇವೆಯ ಮೊದಲ ಪಾಠಗಳು ಕುಟುಂಬದ ಹಿರಿಯರಿಂದಲೇ ವೆಂಕಟರಾಮನ್ ಅವರಿಗೆ ಲಭಿಸಿತ್ತು. ವಿಶ್ವವಿದ್ಯಾಲಯದವರೆಗಿನ ಶಿಕ್ಷಣವನ್ನು ತಮ್ಮ ಜಿಲ್ಲೆಯಲ್ಲಿ ಮುಗಿಸಿ, ಮದರಾಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ.ಹಾಗೂ ಕಾನೂನಿನಲ್ಲಿ ಬಿ.ಎಲ್.ಪದವಿಗಳನ್ನು ಪಡೆದರು. ಬ್ರಿಟಿಷ್ ಸರ್ಕಾರದ ಗುಲಾಮನಾಗಲು ಇಷ್ಟವಿಲ್ಲದೆ, ೧೯೩೫ರಲ್ಲಿ ಮದರಾಸ್, ಉಚ್ಚನ್ಯಾಯಲಯದಲ್ಲಿ ವಕೀಲರಾದರು. ೧೯೩೮ರಲ್ಲಿ ಜಾನಕಿದೇವಿ ಅವರೊಂದಿಗೆ ವಿವಾಹವಾಯಿತು. ಮುಂದೆ, ೧೯೫೧ರಲ್ಲಿ ಭಾರತದ ಶ್ರೇಷ್ಠ ನ್ಯಾಯಲಯದಲ್ಲಿ ನ್ಯಾಯವಾದಿಯಾದರ. ವಕೀಲ ವೃತ್ತಿಯನ್ನು ಆರಂಭಿಸಿದ ದಿನಗಳಿಂದಲೂ ಅವರು ತೋರಿದ ಅಸಾಧಾರಣ ಪ್ರತಿಭೆ ಮತ್ತು ಜಾಣ್ಮೆಗಳು ರಾಜಾಜಿಯವರಿಂದಲೂ ಪ್ರಶಂಸೆ ಗಳಿಸಿದ್ದವು.

೧೯೪೨ರ “ಭಾರತ ಬಿಟ್ಟು ತೊಲಗಿ” ಆಂದೋಳನದಲ್ಲಿ ಭಾಗವಹಿಸಿ ಎರಡು ವರ್ಷ ಸೆರೆಮನೆವಾಸ ಅನುಭವಿಸಿದರು. ವಕೀಲ ವೃತ್ತಿ ಆರಂಭಿಸಿದಾಗಿನಿಂದಲೂ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಅವರಿಗೆ ವಿಶೇಷ ಆಸಕ್ತಿ. ಸೆರೆಮನೆಯಿಂದ ಬಿಡುಗಡೆಯಾದ ಕೂಡಲೆ ಅವರು ಮಾಡಿದ ಮೊದಲ ಕೆಲಸ, ತಮಿಳು ನಾಡು ಕಾಂಗ್ರೆಸ್ಸಿನ ಕಾರ್ಮಿಕ ವಿಭಾಗದ ಸಂಘಟನೆ. ಕಾರ್ಮಿಕರ ಉಪಯೋಗಕ್ಕಾಗಿ Labour Law Journal ಎಂಬ ನಿಯತಕಾಲಿಕೆಯನ್ನು ಆರಂಭಿಸಿದರು. ಪ್ಲಾಂಟೇಷನ್, ಎಸ್ಟೇಟ್, ಬಂದರು, ರೈಲ್ವೆ, ಪತ್ರಿಕೋದ್ಯಮ- ಈ ಎಲ್ಲ ಕ್ಷೇತ್ರಗಳ ಕಾರ್ಮಿಕರನ್ನು ಸಂಘಟಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೫೦ರಲ್ಲಿ ತಾತ್ಕಾಲಿಕ ಸಂಸತ್ತಿಗೆ ಆಯ್ಕೆಯಾದ ವೆಂಕಟರಾಮನ್ ಮುಂದೆ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾದರು. ಆದರೆ ೧೯೫೭ರಲ್ಲಿ ಮಾತ್ರ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ತಮಿಳುನಾಡಿ ಸರ್ಕಾರದಲ್ಲಿ ಕೈಗಾರಿಕೆ,ಕಾರ್ಮಿಕ ಶಾಖೆ ಮತ್ತಿತರ ಪ್ರಮುಖ ಖಾತೆಗಳ ಮಂತ್ರಿಯಾಗಿ ದುಡಿದು, ತಮ್ಮ ರಾಜ್ಯವನ್ನು ಒಂದು ಪ್ರಮುಖ ಕೈಗಾರಿಕಾ ಕೇಂದ್ರವಾಗಿ ರೂಪಸಿದರು.

ಕೇಂದ್ರ ಯೋಜನಾ ಆಯೋಗದ ಸದಸ್ಯತ್ವ, ಸಾರ್ವಜನಿಕ ಲೆಕ್ಕಪತ್ರಗಳ ಪರಿಶೀಲನಾ ಸಮಿತಿಯ ಅಧ್ಯಕ್ಷತೆ(Public Accounts Committee), ಕೇಂದ್ರ ಸಂಪುಟದ ರಾಜಕೀಯ ಹಾಗೂ ಆರ್ಥಿಕ ವ್ಯವಹಾರಗಳ ಸಮಿತಿಗಳ ಸದಸ್ಯತ್ವ, International Monetary Fund (IMF),The International Bank of Rconstruction and Development (IBRD) ಮತ್ತು Asian Developmetn Bank (ADB)- ಇವುಗಳ ಗವರ್ನರ್ ಪದವಿ ಇತ್ಯಾದಿ ವೆಂಕಟರಾಮನ್ ನಿವಹಿಸಿದ ಕೆಲವು ಉನ್ನತ ಹುದ್ದೆಗಳು. ೧೯೮೦ರಲ್ಲಿ ಕೆಂದ್ರ ವಿತ್ತಮಂತ್ರಿಯಾಗಿ, ನಂತರ ರಕ್ಷಣಾ ಮಂತ್ರಿಯಾಗಿ ೧೯೮೪ರವರೆಗೆ ಸೇವೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ವೆಂಕಟರಾಮನ್ ಅವರಿಗಿದ್ದ ಅಪಾರ ಜ್ಞಾನದಿಂದ ಲಾಭವನ್ನು ಪಡೆಯಲು, ಅಂದಿನ ಪ್ರಧಾನಿ ನೆಹರೂ ಅವರು, ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಲು ವೆಂಕಟರಾಮನ್ ಅವರನ್ನು ಆರಿಸಿದ್ದರು.೧೯೫೩ ರಿಂದ ೧೯೬೧ ರ ಅವಧಿಯಲ್ಲಿ ಅವರು ಹಾಗೆ ಏಳು ಬಾರಿ ಪ್ರತಿನಿಧಿಸಿದ್ದಾರೆ.ಅಂತಾರ್ರಾಷ್ಟ್ರೀಯ ಕಾರ್ಮಿಕ ಹಾಗೂ ಸಂಸದೀ