ಜನನ : ೧೫-೨-೧೯೩೧

ಮನೆತನ : ಸಂಪ್ರದಾಯಸ್ಥ ಮನೆತನ. ತಂದೆ ರಾಜಮಾನಹಳ್ಳಿ ವೆಂಕಟರಾಮಯ್ಯ, ತಾಯಿ ರುಕ್ಮಿಣಿಯಮ್ಮ.

ಗುರುಪರಂಪರೆ : ಗಮಕವನ್ನು ಗಮಕಿ ಎಂ. ರಾಘವೇಂದ್ರರಾವ್ ಹಾಗೂ ಜಿ. ಎ. ಅನಂತಪದ್ಮನಾಭಯ್ಯ ಅವರಲ್ಲಿ ಅಭ್ಯಾಸ ಮಾಡಿ ಮುಂದೆ ಹು. ಮ. ರಾಮಾರಾಧ್ಯ ಅವರಿಂದ ಉನ್ನತ ಮಾರ್ಗದರ್ಶನ ಪಡೆದರು. ದಿಬ್ಬೂರು ಶ್ರೀನಿವಾಸರಾಯರಿಂದ ಗಮಕ ಕಲೆಗೆ ಅವಶ್ಯವೆನಿಸಿದ ಸಾಹಿತ್ಯ ಭಾಗವನ್ನು ಅಭ್ಯಾಸ ಮಾಡಿದ್ದಾರೆ. ವಿ||ಹಾವೇರಿ ಪ್ರಹ್ಲಾದಾಚಾರ್ಯರ ಬಳಿ ಸಂಗೀತವನ್ನು ವಿ|| ಗೋಪಾಲಕೃಷ್ಣರಾಯರ ಬಳಿ ಪಿಟೀಲು ವಾದನವನ್ನು ಕಲಿತಿದ್ದಾರೆ. ಎಂ. ಎ. ಪದವೀಧರರು. ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ಸಂಪರ್ಕಾಧಿಕಾರಿಯಾಗಿ ನಿವೃತ್ತಿ. ಅಲ್ಲಿನ ’ದೂರವಾಣಿ’ ಪತ್ರಿಕೆಯ ಸಂಪಾದಕರೂ ಆಗಿ ಸೇವೆ ಸಲ್ಲಿಸಿದ್ದಾರೆ.

ಕ್ಷೇತ್ರ ಸಾಧನೆ : ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ಪ್ರೌಢ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಜ್ಯದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕರ್ನಾಟಕ ಗಮಕ ಕಲಾ ಪರಿಷತ್ತಿನ ಸ್ಥಾಪಕ ಸದಸ್ಯರು. ಪರಿಷತ್ತಿನ ಆಶ್ರಯದಲ್ಲಿ ಗುಲ್ಬರ್ಗಾ, ಬೀದರ್, ಧಾರವಾಡ, ಹುಬ್ಬಳ್ಳಿ ಮುಂತಾದ ಕಡೆ ಪ್ರವಾಸ ಮಾಡಿ ಕಾವ್ಯ ಪ್ರಚಾರ ಮಾಡಿರುತ್ತಾರೆ. ತಮ್ಮ ಮಾತಾಪಿತೃಗಳ ಇಚ್ಛೆಯಂತೆ ೧೯೬೪ ರಲ್ಲಿ ಶೇಷಾದ್ರಿಪುರದ ಅಣ್ಣಯ್ಯಪ್ಪ ಬ್ಲಾಕ್‌ನಲ್ಲಿ ಅಣ್ಣ ಆರ್. ವಿ. ನಾಗರಾಜ್ ಅವರೊಡಗೂಡಿ ’ಕಾವ್ಯ ಪ್ರಚಾರ ಮಂಡಲಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ತನ್ಮೂಲಕ ಸಮಗ್ರ ಜೈಮಿನೀ ಭಾರತ ವಾಚನ, ನಳಚರಿತ್ರೆ ವಾಚನವನ್ನು ತಾವೇ ನಡೆಸಿ ಟಿ. ಕೇಶವಭಟ್ಟರ ವ್ಯಾಖ್ಯಾನದೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಈ ಮಂಡಲಿಯ ಮೂಲಕ ನಡೆಸಲ್ಪಟ್ಟ ವಾಚನ – ವ್ಯಾಖ್ಯಾನ ಕಾರ್ಯಕ್ರಮಗಳು ಸಪ್ತಾಹಗಳ, ಶಿಕ್ಷಣ ಶಿಬಿರಗಳು ಮಹತ್ವಪೂರ್ಣವಾದುವು. ಎಪ್ಪತ್ತರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಮಕ ಶಿಕ್ಷಕರಿಗಾಗಿ ನಡೆಸಿದ ಗಮಕ ಶಿಕ್ಷಣ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅರ್ಹತಾ ಪತ್ರ ಗಳಿಸಿರುತ್ತಾರೆ. ಕಾಲಕ್ರಮದಲ್ಲಿ ಕಾವ್ಯ ಪ್ರಚಾರ ಮಂಡಲಿ ಕಾರ್ಯ ಚಟುವಟಿಕೆ ಕುಂಠಿತವಾದಾಗ ಅದನ್ನು ೧೯೮೧ ರಲ್ಲಿ ಗಮಕ ಕಲಾ ಪರಿಷತ್ತಿನಲ್ಲಿ ವಿಲೀನಗೊಳಿಸಿದರು. ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡಿದ್ದ ಶಂಕರನಾರಾಯಣ್ ಅನೇಕ ಷಟ್ಪದೀ ಕಾವ್ಯಗಳನ್ನು ರಚನೆ ಮಾಡಿದ್ದಾರೆ. ಸತ್ಯನಾರಾಯಣ ವ್ರತ ಕತೆ, ಅನಂತಪದ್ಮನಾಭ ವ್ರತ ಕಥೆ, ಆದಿತ್ಯ ಹೃದಯ, ಭೀಮಸೇನ ವಿಜಯ ಮುಂತಾದ ಕಾವ್ಯಗಳನ್ನು ಬರೆದು ಪ್ರಕಟಿಸಿದ್ದಾರೆ. ಸಾಹಿತ್ಯ ಚತುಮುರ್ಖರು ಇವರ ಮತ್ತೊಂದು ಗ್ರಂಥ ಹಾಸ್ಯಪ್ರಿಯರು. ಚಿತ್ರ ಪಲ್ಲವ, ತುಳಸೀ ಬಿಲ್ವ, ಕವನ ಸಂಕಲನವನ್ನು ರಚಿಸಿದ್ದಾರೆ. ಪರಿಷತ್ತು ಪ್ರಕಟಿಸಿ ’ಗಮಕ ಚೇತನರು’, ’ಗಮಕ ಕಲೋಪಾಸಕರು’ ಗ್ರಂಥದ ಸಂಪಾದಕರು.

ಪ್ರಶಸ್ತಿ – ಪುರಸ್ಕಾರಗಳು : ಇವರ ಗಮಕ, ಸಾಹಿತ್ಯಾಭಿರುಚಿಯನ್ನು ಗುರುತಿಸಿ ಕರ್ನಾಟಕ ಗಮಕ ಕಲಾ ಪರಿಷತ್ತು ತನ್ನ ಎರಡನೇ ಅಖಿಲ ಕರ್ನಾಟಕ ಗಮಕ ಸಮ್ಮೇಣದ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೦-೦೧ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀಯುತರು ದಿನಾಂಕ ೨೬-೧೨-೨೦೦೭ರಂದು ನಿಧನರಾದರು.