ಹೆಸರು: ಸುಮತಿ
ಊರು: ಮೈಸೂರು.

ಪ್ರಶ್ನೆ: ನನಗೆ ೨೩ ವರ್ಷ. ನನ್ನ ರಕ್ತ Rh ನೆಗೆಟಿವ್. ನನಗೆ ಮದುವೆ ಆಗಿಲ್ಲ. Rh ನೆಗೆಟಿವ್ ರಕ್ತ ಎಂದರೇನು? ರಕ್ತದಲ್ಲಿ ಎಷ್ಟು ಥರ ಇವೆ. ಇದನ್ನು ಹೇಗೆ ಕಂಡು ಹಿಡಿಯಬಹುದು. ಚಿಕಿತ್ಸೆ ಮತ್ತು ಮುಂಜಾಗರೂಕತಾ ಕ್ರಮಗಳನ್ನು ತಿಳಿಸಿ.

ಉತ್ತರ: ಮಾನವನ ದೇಹ ದೇಗುಲವಿದ್ದಂತೆ, ಪ್ರಾಣ ದೇವರ ಮೂರ್ತಿಯಂತೆ, ಹೃದಯ ಜ್ಯೋತಿಯಂತೆ, ರಕ್ತ ಅದಕ್ಕೆ ಎಣ್ಣೆಯಿದ್ದಂತೆ ಎಂದು ತಿಳಿದವರು ಹೇಳುತ್ತಾರೆ. ಈ ಇಷ್ಟು ವಸ್ತುಗಳಲ್ಲಿ ಯಾವ ಒಂದು ವಸ್ತು ಸರಿಯಾಗಿ ಕೆಲಸ ಮಾಡದಿದ್ದರೂ ಇಡೀ ದೇಗುಲವೇ ನಶಿಸಿದಂತಾಗುತ್ತದೆ.

ರಕ್ತ ದೇಹದ ಜೀವನದಿ. ಇದು ಹರಿದಷ್ಟೂ ದಿನವೂ ನಾವು ಬದುಕಿರುತ್ತೇವೆ. ಯಾವಾಗ ರಕ್ತ ಹರಿಯುವುದು ನಿಲ್ಲುವುದೋ ಆಗ ನಮಗೆ ಸಾವು ಸಂಭವಿಸುತ್ತದೆ.

ರಕ್ತ: ದೇಹದ ಚಲನ ಶೀಲತೆಗೆ ರಕ್ತವೇ ಪ್ರಮುಖ ಕಾರಣ. ರಕ್ತವು ಶೇ.೮೦ ರಷ್ಟು ಣಿರಿನಿಂದ, ಶೇ. ೨೦ ರಷ್ಟು ರಕ್ತಕಣಗಳು ಮತ್ತು ಪ್ಲಾಸ್ಮಾದಿಂದ ಕೂಡಿರುತ್ತದೆ. ರಕ್ತವು ಶರೀರದ ಎಲ್ಲಾ ಅಂಗಗಳಿಗೂ ಬೇಕಾದ ಆಮ್ಲಜನಕ, ಪೌಷ್ಠಿಕಾಂಶಗಳು, ಖನಿಜಾಂಶಗಳು ಮತ್ತು (ಗ್ಲೂಕೋಸ್) ಅನ್ನು ಒದಗಿಸುತ್ತದೆ. ಅಲ್ಲದೆ ಎಲ್ಲಾ ಅಂಗಗಳಿಂದಲೂ ಉಂಟಾಗುವ ಕಲ್ಮಶಗಳನ್ನು ಹಿಂದಕ್ಕೆ ತೆಗೆದುಕೊಂಡು ಬರುತ್ತದೆ.

ರಕ್ತದ ಗುಂಪು: ಪ್ರತಿಯೊಬ್ಬರ ದೇಹದಲ್ಲೂ ಒಂದೇ ರೀತಿಯ ರಕ್ತ ಹರಿಯುವುದಿಲ್ಲ. ಒಬ್ಬೊಬ್ಬರ ರಕ್ತ ಒಂದೊಂದು ಗುಂಪಿನದಾಗಿರುತ್ತದೆ.

ರಕ್ತದಲ್ಲಿ ಈ ಕೆಳಕಂಡ ನಾಲ್ಕು ವಿಧಗಳನ್ನು ಕಾಣಬಹುದು.

೧. ಎ – ಗುಂಪು    A – Group

೨. ಬಿ – ಗುಂಪು    B – Group

೩. ಎಬಿ – ಗುಂಪು  AB – Group

೪. ಒ – ಗುಂಪು    O – Group

 

ಎ – ಗುಂಪಿನವರು “ಎ” ಗುಂಪಿನವರಿಗೆ ಮಾತ್ರ, ಹಾಗೆ ಬಿ ಗುಂಪಿನವರು “ಬಿ” ಗುಂಪಿನವರಿಗೆ ಮಾತ್ರ ರಕ್ತವನ್ನು ಕೊಡಬಹುದು ಮತ್ತು ತೆಗೆದುಕೊಳ್ಳಬಹುದಾಗಿದೆ. ಎಬಿ ಗುಂಪಿನವರು ಎಲ್ಲಾ ಗುಂಪಿನಿಂದಲೂ ರಕ್ತವನ್ನು ತೆಗೆದುಕೊಳ್ಳಬಹುದು ಆದರೆ ಅವರು ಅವರವರ ಗುಂಪಿಗೆ ಮಾತ್ರ ರಕ್ತವನ್ನು ನೀಡಬೇಕು. ಆದ್ದರಿಂದಲೇ ಇವರನ್ನು “ಸಾರ್ವತ್ರಿಕ ಪರಿಗ್ರಾಹಿ” (Universal Recipient) ಎಂದು ಕರೆಯುತ್ತಾರೆ. ವಿಶೇಷವೆಂದರೆ “ಒ” ಗುಂಪಿನವರು ಉಳಿದ ಎಲ್ಲಾ ಗುಂಪಿನವರಿಗೂ ರಕ್ತ ನೀಡಬಹುದು. ಆದರೆ ಅವರ ಗುಂಪಿನಿಂದ ಮಾತ್ರ ರಕ್ತವನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಇವರನ್ನು “ಸಾರ್ವತ್ರಿಕ ದಾನಿ” (Universal Donar) ಎಂದು ಕರೆಯುತ್ತಾರೆ. ಹೀಗೆ ರಕ್ತದಲ್ಲಿ ಗುರುತಿಸಬಹುದಾದ ಇನ್ನೂ ಅನೇಕ ಅಂಶಗಳಿವೆ. ಅವುಗಳಲ್ಲಿ ಪ್ರಮುಖವೆಂದರೆ ಆರ್.ಹೆಚ್. (Rh) ಎಂಬ ಅಂಶ. ಇದು ಒಂದು ಪ್ರೋಟಿನ್ ಕಣ. ಬಹಳ ಜನರ ಕೆಂಪು ರಕ್ತಕಣಗಳು Rh ಎಂಬ ಅಂಶವನ್ನು ಹೊಂದಿರುತ್ತವೆ. Rh ಅಂಶವನ್ನು ಮೊದಲ ಬಾರಿಗೆ “ರೀಸಸ್”(Rheses) ಎಂಬ ಜಾತಿಗೆ ಸೇರಿದ ಕೋತಿಯಲ್ಲಿ ಕಂಡುಹಿಡಿಯಲಾಯಿತು. ಈ Rh ಅಂಶವಿರುವ ರಕ್ತಕಣಗಳವರನ್ನು Rh ಪಾಸಿಟಿವ್ (Rh ‘+’ ve) ಎಂದು, ಈ ಅಂಶವಿಲ್ಲದವರನ್ನು  Rh ನೆಗೆಟಿವ್ (Rh ‘-‘ ve) ಎಂದು ಕರೆಯುತ್ತಾರೆ.

Rh ಪಾಸಿಟಿವ್ ರಕ್ತದ ಗುಂಪಿನವರು ಅದೇ ಗುಂಪಿನವರಿಗೆ ಮಾತ್ರ ರಕ್ತವನ್ನು ಕೊಡಬಹುದು.

ಅದರೆ ಪಾಸಿಟಿವ್ ಮತ್ತು ನೆಗೆಟಿವ್ ಇಬ್ಬರಿಂದಲೂ ತೆಗೆದುಕೊಳ್ಳಬಹುದು.

Rh ನೆಗೆಟಿವ್ ರಕ್ತದ ಗುಂಪಿನವರು Rh ನೆಗೆಟಿವ್‌ನವರಿಂದ ಮಾತ್ರ ತೆಗೆದುಕೊಳ್ಳಬಹುದು. ಆದರೆ Rh ಪಾಸಿಟಿವ್ ಅವರಿಂದ ರಕ್ತ ತೆಗೆದುಕೊಳ್ಳುವಂತಿಲ್ಲ.

ಅಂದರೆ ಪ್ರತಿಯೊಂದು ರಕ್ತದ ಗುಂಪಿನಲ್ಲಿ ಮತ್ತೆ ಎರಡು ವಿಧಗಳು ಇವೆ. ಒಟ್ಟು ಎಂಟು ರೀತಿಯ ರಕ್ತದ ಗುಂಪುಗಳಿವೆ.

೧. A Rh ಪಾಸಿಟಿವ್

೨. A Rh ನೆಗೆಟಿವ್

೩. B Rh ಪಾಸಿಟಿವ್

೪. B Rh ನೆಗೆಟಿವ್

೫. AB Rh ಪಾಸಿಟಿವ್

೬. AB Rh ನೆಗೆಟಿವ್

೭. O Rh ಪಾಸಿಟಿವ್

೮. O Rh ನೆಗೆಟಿವ್

 

ಅಂಕಿ ಅಂಶಗಳು: ರಕ್ತದ ಗುಂಪುಗಳು ಮತ್ತು Rh ಅಂಶಗಳು ವಂಶವಾಹಿನಿಗಳಿಂದ ಅಂದರೆ ತಂದೆ ತಾಯಿಗಳಿಂದ ಮಕ್ಕಳಿಗೆ ಬರುತ್ತದೆ. ಇಡೀ ವಿಶ್ವದಲ್ಲಿ ಇಂದು ಶೇ.೮೫ ರಷ್ಟು ಜನರು Rh ಪಾಸಿಟಿವ್ ಅಂಶವನ್ನು ಮತ್ತು ಶೇ. ೧೫ ರಷ್ಟು ಜನರು Rh ನೆಗೆಟಿವ್ ಅಂಶವನ್ನು ಹೊಂದಿರುತ್ತಾರೆ. ನಮ್ಮ ದೇಶದಲ್ಲಿ ಶೇ.೯೫ ರಷ್ಟು Rh ಪಾಸಿಟಿವ್ ಗುಂಪಿನವರು ಮತ್ತು ಶೇ. ೫ ರಷ್ಟು ಮಾತ್ರ Rh ನೆಗೆಟಿವ್ ಅಂಶವನ್ನು ಹೊಂದಿರುತ್ತಾರೆ. ಅಂದರೆ Rh ನೆಗೆಟಿವ್ ಅಂಶವನ್ನು ಹೊಂದಿರುವವರು ಸಂಖ್ಯೆ ನಮ್ಮ ದೇಶದಲ್ಲಿ ಕಡಿಮೆ. ಆದ್ದರಿಂದಲೇ Rh ನೆಗೆಟಿವ್ ಅಂಶವಿರುವ ರಕ್ತ ಸಿಗುವುದು ಬಹಳ ಕಷ್ಟ.

Rh ಅಂಶದಿಂದಾಗುವ ತೊಂದರೆ ಅಥವಾ ಖಾಯಿಲೆ: Rh ನೆಗೆಟಿವ್ ಅಂಶದ ತೊಂದರೆಯು Rh ನೆಗೆಟಿವ್ ಅಂಶವಿರುವ ಗರ್ಭಿಣಿ ಸ್ತ್ರೀಯರಲ್ಲಿ ಕಾಣಿಸಿಕೊಳ್ಳುತ್ತವೆ. ಅಂದರೆ Rh ನೆಗೆಟಿವ್ ಅಂಶ ಹೊಂದಿರುವ ಮಹಿಳೆಯು Rh ಪಾಸಿಟಿವ್ ಅಂಶವಿರುವ ಮಗುವಿಗೆ ಜನ್ಮ ಕೊಟ್ಟಾಗ Rh ತೊಂದರೆಯಿಂದ ಬಳಲುತ್ತಾರೆ. ಆದರೆ Rh ನೆಗೆಟಿವ್ ಅಂಶವಿರುವ ಗರ್ಭಿಣಿ ಸ್ತ್ರೀಯು Rh ನೆಗೆಟಿವ್ ಅಂಶವಿರುವ ಮಗುವಿಗೆ ಜನ್ಮ ನೀಡಿದಾಗ ಈ ತೊಂದರೆ ಕಂಡುಬರುವುದಿಲ್ಲ. 

Rh ನೆಗೆಟಿವ್ ತೊಂದರೆಗೆ ಕಾರಣಗಳು: . Rh- ನೆಗೆಟಿವ್ ಮಹಿಳೆಯ ಗರ್ಭದಲ್ಲಿ Rh ಪಾಸಿಟಿವ್ ಅಂಶವಿರುವ ಮಗು ಇದ್ದರೆ ಆ ಮಗುವಿನ Rh ಪಾಸಿಟಿವ್ ಕೆಂಪು ರಕ್ತ ಕಣಗಳು ಪ್ರಸವದ ಸಮಯದಲ್ಲಿ ಅಂದರೆ ಮಗು ಮಾಸುವಿನಿಂದ (Plancenta) ಹೊರಬರುವ ವೇಳೆಯಲ್ಲಿ ತಾಯಿಯ ರಕ್ತದೊಂದಿಗೆ ಸೇರಿಕೊಳ್ಳುತ್ತದೆ. ಆಗ ತಾಯಿಯಲ್ಲಿರುವ “ಆಂಟಿಜೆನ್” ಅಂದರೆ ಪ್ರತಿಕಾರಕ ರಕ್ತ ಕಣಗಳು  ಮಗುವಿನ Rh ಪಾಸಿಟಿವ್ ರಕ್ತ ಕಣಗಳನ್ನು ಆಂಟಿಬಾಡಿಗಳೆಂದು ಅಂದರೆ ಹೊರಗಿನ ವಸ್ತುಗಳೆಂದು ತಿಳಿದು ತಾಯಿಯಲ್ಲಿರುವ ಆಂಟಿಜೆನ್ ಮಗುವಿನ ರಕ್ತ ಕಣಗಳ ವಿರುದ್ಧವಾಗಿ ಆಂಟಿಬಾಡಿಯನ್ನು ಉತ್ಪಾದನೆ ಮಾಡುತ್ತವೆ. ಇದೇ Rh ತೊಂದರೆಗೆ ಪ್ರಮುಖ ಕಾರಣವಾಗುತ್ತದೆ. ಸಾಮಾನ್ಯವಾಗಿ ಮೊದಲು ಮಗು Rh ತೊಂದರೆಯಿಂದ ತಪ್ಪಿಸಿಕೊಳ್ಳುತ್ತದೆ.

. ಗರ್ಭಪಾತವಾದಾಗ ಮತ್ತು ಗರ್ಭಪಾತ ಮಾಡಿಸಿಕೊಂಡಾಗ (MTP) ಹಾಗೂ ಆಯತಪ್ಪಿದ ಗರ್ಭ ಉಂಟಾದಾಗ ಮುಂದೆ ಹುಟ್ಟುವ ಮಕ್ಕಳು ಈ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ.

. ಒಂದು ವೇಳೆ ಅಚಾತುರ್ಯವಾಗಿ Rh ನೆಗೆಟಿವ್ ವ್ಯಕ್ತಿಗೆ Rh ಪಾಸಿಟಿವ್‌ನವರ ರಕ್ತ ಪಡೆದರೆ ಇದೇ ರೀತಿಯ ತೊಂದರೆ ಉಂಟಾಗುತ್ತದೆ.

ಚಿಹ್ನೆಗಳು: Rh ನೆಗೆಟಿವ್ ರಕ್ತದ ತಾಯಿಗೆ Rh ಪಾಸಿಟಿವ್ ಮಗು ಗರ್ಭದಲ್ಲಿ ಬೆಳೆಯುತ್ತಿರುವುದು ತಿಳಿದಿರುವುದಿಲ್ಲ. ಆಕೆಗೆ ಯಾವುದೆ ಸೂಚನೆ ಚಿಹ್ನೆಗಳು ಮತ್ತು ತೊಂದರೆಗಳು ಕಂಡುಬರುವುದಿಲ್ಲ. ತೊಂದರೆ ಉಂಟಾಗುವುದೆಲ್ಲಾ ಭ್ರೂಣಕ್ಕೆ ಅಥವಾ ಮಗುವಿಗೆ.

Rh ನೆಗೆಟಿವ್ ಅಂಶದಿಂದಾಗುವ ದುಷ್ಪರಿಣಾಮಗಳು: Rh ನೆಗೆಟಿವ್ ತೊಂದರೆಯಿಂದ ತಾಯಿಗೆ ಮತ್ತು ಮುಂದೆ ಜನಿಸಲಿರುವ ಮಗುವಿಗೆ ತೊಂದರೆಯುಂಟಾಗುತ್ತದೆ Rh ನೆಗೆಟಿವ್ ತಾಯಿಯಲ್ಲಿ ಉತ್ಪಾದನೆಗೊಂಡ ಆಂಟಿಬಾಡಿಗಳು Rh ಪಾಸಿಟಿವ್ ಮಗುವಿನ ರಕ್ತ ಕಣಗಳೊಂದಿಗೆ ಒಡೆಯತೊಡಗಿ ಮಗುವಿಗೆ ಕಾಮಾಲೆ ರೋಗ ಬರಬಹುದು. ತಾಯಿಗೆ ಕೆಲವು ಸಾರಿ ಗರ್ಭಪಾತಗಳಾಗಬಹುದು. ಪದೇ ಪದೇ ಗರ್ಭಪಾತಗಳಾಗುವುದರಿಂದ ಮುಂದೆ ಬಂಜೆತನಕ್ಕೆ ತುತ್ತಾಗಬಹುದು.

ತಪಾಸಣಾ ವಿಧಾನಗಳು: Rh ನೆಗೆಟಿವ್ ಅಂಶದಿಂದ ಗರ್ಭಿಣಿ ಸ್ತ್ರೀಗೆ ಆಗುವ ತೊಂದರೆಯನ್ನು ಈ ಕೆಳಗಿನ ತಪಾಸಣಾ ವಿಧಾನಗಳಿಂದ ತಿಳಿದುಕೊಳ್ಳಬಹುದು.

. ರಕ್ತ ಪರೀಕ್ಷೆ: Rh ನೆಗೆಟಿವ್ ಅಂಶವಿರುವ ಗರ್ಭಿಣಿ ಸ್ತ್ರೀಯ ರಕ್ತದಲ್ಲಿ Rh ಪಾಸಿಟಿವ್ ಅಂಶದ ವಿರುದ್ಧ ಕಣಗಳು (Antibodies) ಇವೆಯೇ ಎಂಬುದನ್ನು ತಿಳಿಯಬಹುದು.

. ಗರ್ಭದ ಸ್ಕ್ಯಾನಿಂಗ್ ಪರೀಕ್ಷೆ: ಸ್ಕ್ಯಾನಿಂಗ್ ಪರೀಕ್ಷೆಯಿಂದ ಗರ್ಭದೊಳಗಿರುವ ಮಗುವಿಗೆ ತೊಂದರೆ ಉಂಟಾಗಿದೆಯೇ ಅಥವಾ ಇಲ್ಲವೆ ಎಂಬುದನ್ನು ತಿಳಿಯಬಹುದು.

. ಅಮ್ನೀಯೋ ಸೆಂಟೆಸಿಸ್ (Amniocentesis) ಪರೀಕ್ಷೆ: ಈ ಪರೀಕ್ಷೆಯಿಂದ ಗರ್ಭದೊಳಗಿರುವ ಮಗುವಿನ ಸುತ್ತ ಇರುವ ನೀರನ್ನು ತೆಗೆದು ಮಗುವಿಗೆ ತೊಂದರೆ ಉಂಟಾಗಿದೆಯೇ ಎಂದು ತಿಳಿಯಬಹುದು.

. ಭ್ರೂಣ ರಕ್ತ ಪರೀಕ್ಷೆ: ಗರ್ಭದೊಳಗಿರುವ ಮಗುವಿನ ರಕ್ತವನ್ನು ತೆಗೆದು ಆ ಮಗುವಿನ ರಕ್ತದ ಗುಂಪನ್ನು ಮೊದಲೆ ತಿಳಿದುಕೊಳ್ಳಬಹುದು. ಇದರಿಂದ ಮಗುವಿಗೆ ಈಗಾಗಲೇ ತೊಂದರೆ ಆಗಿದೆಯೇ, ಇಲ್ಲವೇ ಎಂದು ತಿಳಿಯಬಹುದು.

. ಆಂಟಿಬಾಡೀಸ್ ಸ್ಕ್ರೀನ್ (Anti-body Screen) ಪರೀಕ್ಷೆ: ಗರ್ಭಿಣಿ ಸ್ತ್ರೀಯ ರಕ್ತವು Rh ನೆಗೆಟಿವ್ ಎಂದು ಕಂಡು ಬಂದರೆ ಆಕೆಯ ರಕ್ತದಲ್ಲಿ ಈಗಾಗಲೇ Rh ಪಾಸಿಟಿವ್ ಅಂಶದ ವಿರುದ್ಧ ಕಣಗಳು (Antibodies) ಚಲಿಸುತ್ತಿವೆಯೇ ಎಂಬುದನ್ನು ಈ ಪರೀಕ್ಷೆಯ ಮುಖಾಂತರ ತಿಳಿದುಕೊಳ್ಳಬಹುದು.

ಚಿಕಿತ್ಸೆಗಳು: Rh ನೆಗೆಟಿವ್ ಹೊಂದಿರುವ ಮಹಿಳೆಗೆ Rh ಇಮ್ಯನೋಗ್ಲೊಬಿನ್ (Immunoglobulin) ಎಂಬ ಚುಚ್ಚುಮದ್ದನ್ನು ಗರ್ಭಿಣಿಯಾದಾಗ ಮತ್ತು ಮಗುವಿನ ಜನನವಾದ ನಂತರ ಕೊಡಬೇಕು.

೧. ಗರ್ಭಕೋಶದೊಳಗೆ ಇರುವ ಮಗುವಿನ ಕೆಂಪು ರಕ್ತದಕಣಗಳನ್ನು ನೀಡುವುದು.

೨. ಒಂದು ವೇಳೆ ಮಗು Rh ನೆಗೆಟಿವ್ ತೊಂದರೆಯಿಂದ ಬಳಲುತ್ತಿದ್ದರೆ ಅವಧಿಗೆ ಮುನ್ನವೇ ಪ್ರಸವ ಮಾಡುವುದು ಒಳ್ಳೆಯದು.

ಮುಂಜಾಗರೂಕತಾ ಕ್ರಮಗಳು: ಪ್ರತಿಯೊಬ್ಬ ಮಹಿಳೆಯು ಮೊದಲು ಗರ್ಭಿಣಿಯಾಗುವುದಕ್ಕಿಂತ ಮುಂಚೆ ತನ್ನ ರಕ್ತದ ಗುಂಪನ್ನು ತಿಳಿದುಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ ತನ್ನ ಗಂಡನ ರಕ್ತದ ಗುಂಪನ್ನೂ ಸಹ ಪರೀಕ್ಷಿಸಿ ತಿಳಿದುಕೊಳ್ಳುವುದು ಒಳ್ಳೆಯದು. Rh ಇಮ್ಯನೋಗ್ಲೊಬಿನ್ (Immunoglobulin) ಎಂಬ ಚುಚ್ಚುಮದ್ದನ್ನು ನೀಡುವುದರಿಂದ Rh ನೆಗೆಟಿವ್ ತೊಂದರೆಯನ್ನು ತಡೆಗಟ್ಟಬಹುದು. ಈ ಕೆಲವೊಂದು ಮುಂಜಾಕರೂಕತಾ ಕ್ರಮಗಳನ್ನು ಅನುಸರಿಸುವುದರಿಂದ ತೊಂದರೆಯಿಂದ ಮುಕ್ತಿ ಪಡೆಯಬಹುದು.

ಪ್ರತಿಯೊಬ್ಬರು ತಮ್ಮ ದೇಹದ ಪ್ರತಿಯೊಂದು ಅಂಗಾಂಗಗಳ ಬಗ್ಗೆ ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ. ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ. ರಕ್ತದ ಗುಂಪು, ರಕ್ತದ ಹಿಮೋಗ್ಲೋಬಿನ್ ಪ್ರಮಾಣ ಮುಂತಾದವುಗಳನ್ನು ತಿಳಿದುಕೊಳ್ಳುವುದರಿಂದ ದೇಹದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬಹುದು. ಹಾಗೆಯೇ ಯಾವುದಾದರೂ ಅನಿವಾರ್ಯ ಪರಿಸ್ಥಿತಿಗಳಲ್ಲಿ ಅನುಕೂಲವಾಗುತ್ತದೆ.