ಜನನ ೧೮೮೦ ಹುಟ್ಟಿದ್ದು ಬಿಜಾಪುರದಲ್ಲಿ, ಬೀಮರಾಯ-ಭಾಗೀರಥೀ ಬಾಯಿ ಇವರ ಮಗನಾಗಿ ಜನಿಸಿದರು. ಧಾರವಾಡದಲ್ಲಿ ವಿದ್ಯಾರ್ಥಿಜೀವನ, ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದಾಗಲೇ ಸಂಸ್ಕೃತ ವೇಣೀಸಂಹಾರ, ನಾಟಕವನ್ನು ರಂಗದ ಮೇಲೆ ತಂದರು. ಗಣಪತಿ ಉತ್ಸವ, ಕನ್ನಡ ಮೇಳಗಳನ್ನು ಕೂಡಿಸಿದರು. ಗಜನಾನಸ್ತವನ ಎಂಬ ಮೇಳಪದಸಂಗ್ರಹವನ್ನು ಆಲೂರರು ಪ್ರಕಟಿಸಿದರು. ಇಡೀ ಭಾರತದಾದ್ಯಂತ ಅಂದು ನಡೆಯುತ್ತಿದ್ದ ಘಟನೆಗಳು ಇವರನ್ನು ದೇಶದ ಹಿತಚಿಂತನೆಯ ಕಡೆ ಮನ ಮಾಡುವಂತೆ ಪ್ರೇರೇಪಣೆ ನೀಡಿದವು.ಮಹಾಭಾರತ ಮತ್ತು ಕೆಲವು ಮರಾಠಿ ಧಾರ್ಮಿಕ ಗ್ರಂಥಗಳ ಅಧ್ಯಯನ ಆಲೂರರ ಮನಸ್ಸನ್ನು ಜಾಗೃತಗೊಳಿಸಿದವು. ೧೯೨೮ ರಲ್ಲಿ ಅವರು ರಾಷ್ಟ್ರೀಯತ್ವದ ಮೀಮಾಂಸೆ, ಎಂಬ ಕಿರುಹೊತ್ತಿಗೆಯನ್ನು ಬರೆದು ಪ್ರಕಟಿಸಿದರು. ರಾಷ್ಟ್ರೀಯತ್ವವನ್ನು ಸುಂದರವಾಗಿ ವರ್ಣಿಸುವ, ಆಲೂರರ ಈ ವಾಕ್ಯ ವೃಂದವನ್ನು ನೋಡಿದಾಗ ಅವರ ಕಲ್ಪನೆಯ ನಿಚ್ಚಳತೆ ಕಂಡುಬರುತ್ತದೆ. ರಾಷ್ಟ್ರೀಯತ್ವಕ್ಕೆ ಒಂದೇ ಜಾತಿ ಅಥವಾ ಜನಾಂಗ ವಿರಲೇಬೇಕೆಂಬ ಅವಶ್ಯಕತೆಯಿಲ್ಲ ಎಂದಿದ್ದಾರೆ. ವೀರಸಾವರ್ಕರ್, ಬಾಲಗಂಗಾಧರ ತಿಲಕ್-ಇಂತಹ ಮಹಾರಾಷ್ಟ್ರೀಯ ನಾಯಕರೊಡನೆ ತೀರ ನಿಕಟ ಸಂಪರ್ಕ ಹೊಂದಿದ್ದರೂ ಕರ್ನಾಟಕವಷ್ಟೇ ತಮ್ಮ ಕಾರ್ಯಕ್ಷೇತ್ರ ಎಂಬುದನ್ನು ಕಂಡುಕೊಂಡರು.

ಆಲೂರರದು ಮೂಲತಹ ಧಾರ್ಮಿಕ ವ್ಯಕ್ತಿತ್ವ, ಬಾಲಗಂಗಾಧರ ತಿಲಕರ ಗೀತರಹಸ್ಯದ ಅನುವಾದ ಕಾರ್ಯ, ಅವರ ರಾಜಕಾರಣ ಮತ್ತು ಧರ್ಮ ದೃಷ್ಟಿಗಳ ಸಮನ್ವಯಕ್ಕೆ ಒಂದು ದಾರಿ ಮಾಡಿಕೊಟ್ಟಿತು. ಬ್ರಿಟಿಷ್ ಸರಕಾರ ಇವರನ್ನು ಸೆರೆಹಿಡಿದು ಕಲಘಟಿಯಲ್ಲಿ ದಿಗ್ಭಂದನದಲ್ಲಿ ಇರಿಸಿತು. ಅವರ ಆಧ್ಯಾತ್ಮ ಚಿಂತನೆಗೆ, ಅಧ್ಯಯನಕ್ಕೆ ಈ ಬಿಡುವು ಅನುವು ಮಾಡಿಕೊಟ್ಟಿತು. ಮದ್ವಮತವನ್ನು ದ್ವೈತಮತ ಎಂಬ ಧೋರಣೆಯನ್ನು ತಳ್ಳಿಹಾಕಿ, ಅದನ್ನು ಪೂರ್ಣಬ್ರಹ್ಮವಾದವೆಂದು ಕರೆದರು.

ವರಕವಿ ದ.ರಾ.ಬೇಂದ್ರೆಯವರು, ಇವರನ್ನು ಕರ್ನಾಟಕದ ಪ್ರಾಣೋಪಾಸಕರು ಎಂದು ಕರೆದಿದ್ದಾರೆ. ಹೈದರಾಬಾದ್ ಕನ್ನಡಿಗರು ೧೯೪೧ ರಲ್ಲಿ ಕರ್ನಾಟಕ ಕುಲಪುರೋಹಿತ, ಎಂಬ ಬಿರುದನ್ನು ನೀಡಿ ಸನ್ಮಾನಿಸಿದರು. ೧೯೬೪ ರ ಫೆಬ್ರವರಿ ೨೫ ರಂದು ಆಲೂರು ವೆಂಕಟ ರಾಯರೆಂಬ ಸೂರ್ಯ ಅಸ್ತಂಗತವಾಯಿತು.

 

ಲಕ್ಷ್ಮಿದೇವಿ ಎ.ಆರ್