ಮಧ್ಯರಾತ್ರಿ! ಜಗವೆಲ್ಲ ಮಲಗಿತ್ತು !

“ಢಣ್ ! ಢಣ್‌ !!” ಒಮ್ಮೆಲೆ ಹಂಪೆಯ ವಿರೂಪಾಕ್ಷ ದೇವಾಲಯದ ದೊಡ್ಡ ಗಂಟೆಗಳು ಬಾರಿಸಿದವು. ವೇದಮಂತ್ರಗಳ ಪಠಣ ಕೇಳಿಸಿತು. ಕರ್ನಾಟಕ ಮಾತೆಯ ಜಯಘೋಷ ಸುತ್ತಲಿನ ವಾತಾವರಣದಲ್ಲಿ ತುಂಬಿ ಹರಿಯಿತು. ಅಂದು ಅದೆಂತಹ ಆನಂದ! ಕಪ್ಪು ಮೋಡಗಳಿಂದ ಕೂಡಿಕೊಂಡ ಆಕಾಶವೂ ಸಂತೋಷದಿಂದ ಮಳೆಗರೆಯಿತು. ತನ್ನಲ್ಲಿ ಅಡಗಿದ್ದ ನಕ್ಷತ್ರಗಳ ಬೆಳಕನ್ನು ಬೆಳಗಿಸಿತು.

ಕೂಡಲೇ ಹಂಪೆಯ ವಿರೂಪಾಕ್ಷ, ಭುವನೇಶ್ವರಿ, ವಿದ್ಯಾರಣ್ಯ – ಈ ದಿವ್ಯ ಮೂರ್ತಿಗಳಿಗೆ ಮಂಗಳಾರತಿ ಬೆಳಗಿದರು. ಆ ಬೆಳಕು ಅಪೂರ್ವವಾಗಿತ್ತು. ಏಕೆಂದರೆ ಅಂದೇ ಕನ್ನಡಿಗರು ತಮ್ಮ ಹೊಸ ಕರ್ನಾಟಕ ರಾಜ್ಯವನ್ನು ಕಂಡಿದ್ದರು. ಹರಿದು ಹಂಚಿಹೋದ ಕನ್ನಡನಾಡು ಒಂದಾಗಿತ್ತು.

ಮಹಾಋಷಿಗೆ ಸರಿಸಮಾನರು, ವಯೋವೃದ್ಧರು ಅಂದು ಪುರೋಹಿತರಾಗಿ ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡಿಗರ ಜೊತೆಗೆ ಆಚರಿಸಿದರು. ಆ ನಸು ಬೆಳಕಿನಲ್ಲಿ ಅವರು ತಮ್ಮ ಜೀವನದಲ್ಲಿ ಎಂದೆಂದೂ ಕಾಣದ ತೃಪ್ತಿಯನ್ನು ಅನುಭವಿಸಿದರು. ಆ ಹಿರಿಯರೇ ಆಲೂರು ವೆಂಕಟರಾಯರು. ಅನೇಕ ವರ್ಷಗಳ ಆಸೆ ಫಲಗೂಡಿ ಅವರಿಗೆ ಹರ್ಷ ತಂದಿತ್ತು.

ಇದು ನಡೆದುದು ೧೯೫೬ರ ನವೆಂಬರ್ ತಿಂಗಳ ಮೊದಲ ದಿನದ ಬೆಳಗಿನಲ್ಲಿ.

ಐವತ್ತು ವರ್ಷಗಳ ಹಿಂದಿನ ದಿವ್ಯದರ್ಶನ

ಸುಮಾರು ಐವತ್ತು ವರ್ಷಗಳ ಹಿಂದಿನ ಒಂದು ಘಟನೆಯನ್ನು ಅವರು ಆ ದಿನ ನೆನಪು ಮಾಡಿಕೊಂಡರು. ತಮ್ಮ ಎಲ್.ಎಲ್.ಬಿ ಪರೀಕ್ಷೆಯನ್ನು ಮುಗಿಸಿಕೊಂಡು ಬಿಡುವಿನ ದಿನಗಳನ್ನು ಕಳೆಯಲು ತಮ್ಮೂರಾದ ಆಲೂರಿಗೆ ಅವರು ಬಂದಿದ್ದರು. ಆನೆಗುಂದಿಗೆ ಹೊರಟ ಇಬ್ಬರು ಆಚಾರ್ಯರು ಅವರನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು.

ತುಂಗಭದ್ರಾ ನದಿಯ ನಡುಗಡ್ಡೆಯೊಂದರಲ್ಲಿ ನವವೃಂದಾವನ ನೋಡಿದ್ದಾಯಿತು. ಅದರ ಸಮೀಪದಲ್ಲಿದ್ದ ಹಂಪೆಯ ಭೇಟಿಯೂ ಆಯಿತು. ಹಂಪೆಯಲ್ಲಿ ಹಾಳುಬಿದ್ದ ಕಟ್ಟಡಗಳು, ಗೋಪುರಗಳಿಲ್ಲದ ಗುಡಿಗಳು, ಚೂರುಚೂರಾದ ದೇವರ ಮೂರ್ತಿಗಳು, ಮಣ್ಣಲ್ಲಿ ನೆಲಸಮವಾದ ಅನೇಕ ರಾಜವೈಭವದ ಮಹಲುಗಳು ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದರು. ಒಂದಾನೊಂದು ಕಾಲದಲ್ಲಿ ಎಷ್ಟೋ ದಶಕಗಳು ವಿಜೃಂಭಣೆಯಿಂದ ಮೆರೆದ ಕರ್ನಾಟಕ ಸಾಮ್ರಾಜ್ಯ ಮಸಣದಂತಾಗಿತ್ತು! ಹನ್ನೆರಡು ವರ್ಷ ತಪಸ್ಸು ಮಾಡಿ ವಿದ್ಯಾರಣ್ಯರು ಕರ್ನಾಟಕ ಸಾಮ್ರಾಜ್ಯವನ್ನು ಹೀಗಾಗುವುದಕ್ಕಾಗಿಯೇ ಸ್ಥಾಪಿಸಿದರೆ?

ಆಗಲೂ ಕರ್ನಾಟಕ ಹೀನ ಸ್ಥಿತಿಯಲ್ಲಿಯೇ ಇದ್ದಿತು. ಹರಿದು ಹಂಚಿಹೋದ ನಾಡಾಗಿತ್ತು. ಮುಂಬಯಿ. ಮದರಾಸ್ ಪ್ರಾಂತಗಳಲ್ಲಿ, ಹೈದರಾಬಾದ್, ಮೈಸೂರು, ಸಾಂಗಲಿ, ಮೀರಜ್ ಮುಂತಾದ ಸಂಸ್ಥಾನಗಳಲ್ಲಿ ಕನ್ನಡಿಗರು ಬಿಡಿಬಿಡಿಯಾಗಿ ವಾಸವಾಗಿದ್ದರು. ತಮ್ಮ ಭಾಷೆಯ ಮತ್ತು ನಾಡಿನ ಅಭಿಮಾನವನ್ನು ಮರೆತು ಬಿಟ್ಟಿದ್ದರು. ಇಂಥ ಕನ್ನಡಿಗರೆಲ್ಲರೂ ಒಂದಾಗಿ ಮತ್ತೊಮ್ಮೆ ಕರ್ನಾಟಕ ಸಾಮ್ರಾಜ್ಯ ಕಟ್ಟಲು ಸಾಧ್ಯವಿಲ್ಲವೇ ?

ಎದುರು ಪಂಪಾಪತಿ! ಒಂದು ಬದಿಗೆ ಭುವನೇಶ್ವರಿ, ಇನ್ನೊಂದು ಬದಿಗೆ ವಿದ್ಯಾರಣ್ಯ! ಅಸಂಖ್ಯ ವಿಚಾರಗಳನ್ನು ತುಂಬಿಕೊಂಡು ಅವರು ಭಕ್ತಿಯಿಂದ ತಲೆಬಾಗಿದರು. ಮೂರ್ತಿಗಳು ದಿವ್ಯಕಳೆಯಿಂದ ತುಂಬಿಕೊಂಡು ಆಶೀರ್ವದಿಸಿದವು. ಕಗ್ಗತ್ತಲೆಯಲ್ಲಿ ಮಿಂಚಿನ ಬೆಳಕು ಝಳಪಿಸಿದಂತಾಯಿತು. ಕರ್ನಾಟಕ ದೇವಿಯು ಭುವನೇಶ್ವರಿಯ ರೂಪದಲ್ಲಿ ಹೃದಯಸ್ಥಳಾದಳು. ಅವಳೇ ಮಾರ್ಗ ತೋರಿದಳು.

 

ತರುಣ ವೆಂಕಟರಾಯರು ಪಂಪಾಪತಿ ದೇವಾಲಯದಲ್ಲಿ.

ಇಂತಹ ದಿವ್ಯದರ್ಶನವನ್ನು ಅವರು ಪಡೆದದ್ದು ೧೯೦೫, ಮೇ ೪ರಂದು! ಜಯ ಕರ್ನಾಟಕವೇ ನನ್ನ ಮಂತ್ರ” ಎಂದು ಅಂದಿನಿಂದಲೂ ಪಠನ ಮಾಡಿದರು ಆಲೂರ ವೆಂಕಟರಾಯರು. “ಕರ್ನಾಟಕದ ಸರ್ವಾಂಗೀಣ ಉನ್ನತಿ” ಎಂಬು ಮೂರು ಶಬ್ದಗಳಲ್ಲಿ ಅವರು ಎಲ್ಲ ಜಗತ್ತನ್ನು ಕಂಡರು. ೧೯೦೫ರಲ್ಲಿ ಅವರು ಕಂಡ ಕರ್ನಾಟಕದ ಕನಸು ೧೯೫೬ರಲ್ಲಿ ನನಸಾಯಿತು. ಆದರೆ ಇದೊಂದೇ ಸಾಧನೆಗೆ ಅವರು ಪಟ್ಟ ಶ್ರಮವೆಷ್ಟು ?

ಧಾರವಾಡದಲ್ಲಿ ಸಾಧನಕೇರಿ ಎಂಬ ಪ್ರಶಾಂತವಾದ ನಿಸರ್ಗ ಪ್ರದೇಶವಿದೆ. ಅಲ್ಲಿರುವ “ಗೀತಾ ಭವನ” ಆಲೂರ ವೆಂಕಟರಾಯರ ಮನೆ. ವೆಂಕಟರಾಯರು ವಕೀಲ ವೃತ್ತಿಗಾಗಿ ಧಾರವಾಡಕ್ಕೆ ಬಂದರೆಂಬುದು ನಿಜ. ಆದರೆ ದೈವ ಅವರನ್ನು ಕರ್ನಾಟಕದ ಸೇವೆಗೆ ಅನಿ ಮಾಡಿತು. ಗೀತಾ ಭವನದಲ್ಲಿದ್ದುಕೊಂಡು ಅವರು ಏಕೀಕೃತ ಕರ್ನಾಟಕ ನಿರ್ಮಾಣವಾಗುವಂತೆ ವಿವಿಧ ಯೋಜನೆಗಳನ್ನು ಕೈಗೊಂಡರು. ತಮ್ಮ ಉದ್ದೇಶ ಈಡೇರುವಂತೆ ತ್ಯಾಗಬುದ್ಧಿಯಿಂದ ಸಾಧನೆ ಮಾಡಿದರು.

ಮಹಾ ಸಾಧನೆ

ತಮ್ಮ ೮೪ ವರ್ಷಗಳ  ಸುದೀರ್ಘ ಜೀವನದಲ್ಲಿ ಅವರು ಒಬ್ಬ ಸಾಧಕರಾಗಿದ್ದರು, ಶ್ರೇಷ್ಠ ತಪಸ್ವಿಗಳಗಾಗಿದ್ದರು, ಆದರ್ಶ ವಿದ್ಯಾರ್ಥಿಯಾಗಿದ್ದರು. ಅವರ ದಿನಚರಿ ಅನುಕರಣೀಯವಾಗಿದ್ದಿತು. ಬೆಳಗ್ಗೆ ಐದು ಗಂಟೆಗೆ ಏಳುತ್ತಿದ್ದರು. ಪ್ರಾತರ್ವಿಧಿಯ ಅನಂತರ ಚಳಿಯಿರಲಿ. ಮಳೆಯಿರಲಿ, ಬಿಸಿಲು ಬಂದಿರಲಿ ಒಂದು ಗಂಟೆ ವಾಯುವಿಹಾರ ಮಾಡುತ್ತಿದ್ದರು. ತಿರುಗಿ ಬಂದ ಮೇಲೆ ಮನೆಯಲ್ಲಿ ತಮ್ಮ ಕೋಣೆಗೆ ಪ್ರವೇಶಿಸಿ ಮಧ್ಯಾಹ್ನ ಊಟವಾದ ಮೇಲೆ ೧೨ಗಂಟೆ ವರೆಗೂ ಅಭ್ಯಾಸ ಮಾಡುತ್ತಿದ್ದರು. ಊಟವಾದ ಮೇಲೆ ಅರ್ಧ ಗಂಟೆ ಮಾತ್ರ ವಿಶ್ರಾಂತಿ ಪಡೆದು ಮತ್ತೆ ತಮ್ಮ ಕೆಲಸದಲ್ಲಿ ತೊಡಗಿರುತ್ತಿದ್ದರು. ಸಾಯಂಕಾಲ ಒಂದು ಗಂಟೆ ವಾಯು ವಿಹಾರ ಮಾಡುತ್ತಿದ್ದರು. ಇಂತಹ ದಿನಚರಿಯಿಂದ ಅವರು ಆರೋಗ್ಯವಂತರಾಗಿದ್ದರೂ, ಸತತ ಅಭ್ಯಾಸಿಗಳಾಗಿದ್ದರು.

“ಈ ಜೀವನವು ಕಡುತರ ತಪಸ್ಸಿಗಾಗಿ ಇದೆ”

“ಎಲ್ಲವೂ ಹರಿಸೇವೆ ಎನ್ನಿ” –

ಎಂಬ ವಾಕ್ಯವನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಿಸಿ ಅವರು ತಮ್ಮ ಅಭ್ಯಾಸ ಕೋಣೆಯಲ್ಲಿ ತೋಗು ಹಾಕಿದ್ದರು.

ಆಲೂರು ವೆಂಕಟರಾಯ ಜೀವನ ಒಂದು ಮಹಾ ಸಾಧನೆ.

ಬಾಲ್ಯ

ಆಲೂರ ಧಾರವಾಡ ಜಿಲ್ಲೆಯ ರೋಣ ತಾಲೂಕಿನಲ್ಲಿಯ ಒಂದು ಊರು. ವೆಂಕಟರಾಯರ ಪೂರ್ವಜರಿಗೆ ಆಲೂರಿನಲ್ಲಿಯ ಭೂಮಿಗಳು ಜಹಗೀರಾಗಿ ದೊರೆತವು. ಅಂದಿನಿಂದ ಅವರು ಅಲ್ಲಿ ವಾಸವಾಗಿದ್ದರು. ಅಷಾಢ ಶುದ್ಧ ಪಂಚಮಿ ೧೮೮೦ಜುಲೈ ೧೨ರಂದು ಬಿಜಾಪುರದಲ್ಲಿ ವೆಂಕಟರಾಯರು ಜನಿಸಿದರು. ಭೀಮರಾಯರು ಇವರ ತಂದೆ, ಭಾಗೀರಥಿಬಾಯಿ ಇವರ ತಾಯಿ. ಭೀಮರಾಯರು ಸರ್ಕಾರಿ ನೌಕರಿಯಲ್ಲಿದ್ದರು; ಶಿರಸ್ತೇದಾರರಾಗಿದ್ದರು. ಅವರು ಒಂದೇ ಊರಲ್ಲಿ ಇರುತ್ತಿರಲಿಲ್ಲ. ವೆಂಕಟರಾಯರ ಪ್ರಾಥಮಿಕ ಶಿಕ್ಷಣ ನವಿಲುಗುಂದ, ಗದಗ ಮತ್ತು ಹಾನಗಲ್ಲುಗಳಲ್ಲಿ ಸಾಗಿತು. ಇಂಗ್ಲೀಷ್ ಅಭ್ಯಾಸಕ್ಕಾಗಿ ಭೀಮರಾಯರು ಧಾರವಾಡದಲ್ಲಿ ಪ್ರತ್ಯೇಕ ಮನೆ ಮಾಡಬೇಕಾಯಿತು.

ನವಿಲುಗುಂದದಲ್ಲಿ ಐದಾರು ವರ್ಷದ ವೆಂಕಟರಾಯರಿಗೆ ತಮ್ಮಣ್ಣ ಶಾಸ್ತ್ರ ಎಂಬುವರು ಅಮರಕೋಶ ಮುಂತಾದವುಗಳನ್ನು ಹೇಳಿಕೊಡುತ್ತಿದ್ದರು. ಚಿಕ್ಕವರಾದರೂ ವೆಂಕಟರಾಯರು ಸಂಸ್ಕೃತ  ಶ್ಲೋಕಗಳನ್ನು ಕಂಠಪಾಠ ಮಾಡುತ್ತಿದ್ದರು. ತಮ್ಮ ಜೀವನದಲ್ಲಿ ಮುಂದೆ ಗೀತಾ, ಮಹಾಭಾರತ, ಸುಧಾ ಮೊದಲಾದ ಸಂಸ್ಕೃತ ಗ್ರಂಥಗಳನ್ನು ತಾವೇ ಅಭ್ಯಾಸ ಮಾಡಲು ಅವರಿಗೆ ಒಳ್ಳೆ ತಳಹದಿಯಾಯಿತು. ೧೮೯೭ರಲ್ಲಿ ಮ್ಯಾಟ್ರಿಕ್‌ನಲ್ಲಿ ಉತ್ತೀರ್ಣರಾದ ಮೇಲೆ ವೇದಾಂತ ಗ್ರಂಥಗಳನ್ನು ಓದಿ ತಿಳಿದುಕೊಳ್ಳಲು ವೆಂಕಟರಾಯರು ಪ್ರಯತ್ನಿಸಿದರು.

ಕನ್ನಡದ ಅಭಿಮಾನ

ಧಾರವಾಡದಲ್ಲಿ ಅಭ್ಯಾಸಕ್ಕಾಗಿ ವೆಂಕಟರಾಯರು ಇರುವಾಗ ಅವರಿಗೆ ಅಭ್ಯಾಸದ ಕಡೆಗೆ ಅಷ್ಟು ಲಕ್ಷ್ಯವಿರಲಿಲ್ಲ. ಧಾರವಾಡದ ಸಾರ್ವಜನಿಕ ಜೀವನವು ಅವರ ಕುತೂಹಲವನ್ನು ಕೆರಳಿಸಿತು. ಧಾರವಾಡದಲ್ಲಿ ಆಗ ಮರಾಠಿಯ ಪ್ರಾಬಲ್ಯವಿತ್ತು. ಮರಾಠಿ ಭಾಷೆಯ “ಕೇಸರಿ” ಪತ್ರಿಕೆಯನ್ನು ಸುಶಿಕ್ಷಿತರೆಲ್ಲ ಓದುತ್ತಿದ್ದರು. ಪುಣೆಯಲ್ಲಿ ನಡೆದಂತೆ ಗಜಾನನ ಉತ್ಸವಗಳು ಸಾರ್ವಜನಿಕವಾಗಿ ಸಾಗುತ್ತಿದ್ದವು.

ಮಕ್ಕಳು ಮೇಳಗಳ ಕಾರ್ಯಕ್ರಮಗಳಲ್ಲಿ ಸೇರುತ್ತಿದ್ದರು. ಆದರೆ ಮರಾಠಿ ಬಲ್ಲ ಮಕ್ಕಳಿಗೆ ಮಾತ್ರ ಅಲ್ಲಿ ಅವಕಾಶವಿದ್ದೀತು. ಮೇಳಗಳಲ್ಲಿ ಹಾಡಲು ಕನ್ನಡ ಹಾಡುಗಳು ಇರಲಿಲ್ಲ. ಇದರಿಂದ ವೆಂಕಟರಾಯರಿಗೆ ವ್ಯಸನವಾಯಿತು. ವೆಂಕಟರಾಯರು ಮನಸ್ಸನ್ನು ತಿಳಿದುಕೊಂಡ ಲಕ್ಷ್ಮಣ ಷಟಿಕಾರ ಎಂಬ ಗೆಳೆಯನು ಕನ್ನಡ ಗೀತೆಗಳನ್ನು ಬರೆದುಕೊಟ್ಟ. ಅವೆಲ್ಲವುಗಳನ್ನು ಸಂಗ್ರಹಿಸಿ ” ಗಜಾನನ ಸ್ತವನ” ಎಂಬ ಗೀತ ಸಂಗ್ರಹವನ್ನು ವೆಂಕಟರಾಯರೇ “ರಾಜಹಂಸ ಮುದ್ರಣಾಲಯ”ದಲ್ಲಿ ಮುದ್ರಿಸಿ ಪ್ರಕಟಿಸಿದರು. ಇನ್ನೂ ವಿದ್ಯಾರ್ಥಿಯಾಗಿರುವಾಗಲೇ ಪ್ರಕಾಶಕರಾದರು.

ತಿಲಕರ ದರ್ಶನ

ವೆಂಕಟರಾಯರು ಹೆಚ್ಚಿನ ವ್ಯಾಸಂಗ ಮಾಡಿದ್ದು ಪುಣೆಯ ಫರ್ಗ್ಯುಸನ್‌ ಕಾಲೇಜಿನಲ್ಲಿ, ದೇಶಾಭಿಮಾನ, ಭಾಷಾಭಿಮಾನ, ಸಮಾಜ ಸುಧಾರಣೆ ಮುಂತಾದ ಹೊಸ ಕ್ರಾಂತಿಕಾರಕ ವಿಚಾರಗಳಿಗೆ ಪುಣೆ ತವರೂರು ಆಗಿತ್ತು. ಕಾಲೇಜಿನಲ್ಲಿ ವೆಂಕಟರಾಯರಿಗೆ ಸೇವಾ ಮನೋಭಾವವನ್ನೂ ಕೆಚ್ಚನ್ನೂ ಬೆಳೆಸುವಂತಹ ಪ್ರಾಧ್ಯಾಪಕರು ಮತ್ತು ಮಿತ್ರರು ದೊರೆತರು. ವೀರ ಸಾವರಕರ್, ಸೇನಾಪತಿ ಬಾಪಟ್ ಇಂತಹವರು ಅವರ ಸಹಪಾಠಿಗಳಾಗಿದ್ದರು.

ಲೋಕಮಾನ್ಯ ಬಾಲಗಂಗಾಧರ ತಿಲಕರು ಆ ಕಾಲದಲ್ಲಿ ಸಿಡಿಲಿನ ಮೂರ್ತಿಯಂತಹ ನಾಯಕರು. ಅವರ ಲೇಖನಗಳನ್ನು ಓದು ವೆಂಕಟರಾಯರು ಸ್ಫೂರ್ತಿ ಪಡೆದಿದ್ದರು. ಅವರನ್ನು ಕಾಣಬೇಕೆಂಬ ಹಂಬಲ ಅವರಿಗೆ. ಬಿ.ಎ ತರಗತಿಯಲ್ಲಿ ಅವರು ಅಭ್ಯಾಸ ಮಾಡುತ್ತಿರುವಾಗ ಕಾಲೇಜಿನ ಹಲವು ಸ್ನೇಹಿತರು ಕೂಡಿಕೊಂಡು ಪುಣೆಯ ಸಮೀಪದಲ್ಲಿರುವ ಸಿಂಹಗಡಕ್ಕೆ ಪ್ರವಾಸಕ್ಕೆಂದು ಹೋದರು. ಅಲ್ಲಿ ತಮ್ಮ ಸ್ನೇಹಿತರ ಕೂಡ ತಿಲಕರನ್ನು ಕಂಡರು.

ಸುಪ್ರಸಿದ್ಧ ಮುಖಂಡರ ಕೂಡ ವಿದ್ಯಾರ್ಥಿ ಏನು ಮಾತನಾಡಬೇಕು? ಆದರೂ ವೆಂಕಟರಾಯರು “ಕೇಸರಿ”ಯಲ್ಲಿ ಪ್ರಕಟವಾದ ಒಂದು ಜಾಹೀರಾತಿನ ಬಗ್ಗೆ ಧೈರ್ಯದಿಂದ ಪ್ರಶ್ನಿಸಿದರು. (ತಿಲಕರು “ಕೇಸರಿ” ಪತ್ರಿಕೆಯನ್ನು ನಡೆಸುತ್ತಿದ್ದರು.) ಭೂಮಿಯನ್ನು ಅಡವು ಹಿಡಿದು ರೈತರಿಗೆ ಸಾಲ ಕೊಡುವ ವಿದೇಶಿ ಸಂಸ್ಥೆಯೊಂದು ಹುಬ್ಬಳ್ಳಿಯಲ್ಲಿ ತಲೆಯೆತ್ತಿತ್ತು. ಈ ಸಂಸ್ಥೆಯ ಜಾಹೀರಾತು “ಕೇಸರಿ”ಯಲ್ಲಿ ಪ್ರಕಟವಾದ್ದರಿಂದ, “ಕೇಸರಿ”ಯು ವಿದೇಶಿಯರನ್ನು ಬೆಂಬಲಿಸುತ್ತದೆ ಎಂದು ಅರ್ಥವಾಗುತ್ತದೆ ಎಂದು ವೆಂಕಟರಾಯರು ವಿವರಿಸಿದರು.

ತಿಲಕರು ವೆಂಕಟರಾಯರ ಕುತೂಹಲ ಬುದ್ಧಿಯನ್ನು ಮೆಚ್ಚಿಕೊಂಡರು. ಅಂತಹ ವಿಷಯಗಳ ಬಗ್ಗೆ ತಾವು ವಿಚಾರ ಮಾಡುವುದಾಗಿ ವೆಂಕಟರಾಯರಿಗೆ ತಿಳಿಸಿದರು.

ಲೋಕಮಾನ್ಯ ತಿಲಕರೊಡನೆ ಈ ಮೊದಲ ಭೇಟಿ ವೆಂಕಟರಾಯರನ್ನು ರಾಷ್ಟ್ರೀಯ ಜೀವನದತ್ತ ಕರೆದೊಯ್ದಿತು. ತಮ್ಮ ಜೀವನದಲ್ಲಿ ವೆಂಕಟರಾಯರು ತಿಲಕರ ಕೂಡ ನಿಕಟ ಸಂಬಂಧವನ್ನು ಬೆಳೆಯಿಸಿಕೊಂಡು ಬಂದರು.

ಈ ಮೊದಲೇ ವೆಂಕಟರಾಯರಲ್ಲಿ ಅಂಕುರಿಸಿದ ಕನ್ನಡದ ಅಭಿಮಾನ ಪುಣೆಯಲ್ಲಿ ಚಿಗುರೊಡೆಯಿತು. ಕಾಲೇಜಿನ ಕನ್ನಡಿಗರ ಸ್ನೇಹಕೂಟದಂತಿದ್ದ ಒಂದು ಕ್ಲಬ್ಬಿಗೆ ಅವರು ಮೇಲ್ವಿಚಾರಕರಾದರು. “ಕಾಲೇಜಿನ ಗ್ರಂಥ ಭಂಡಾರದಲ್ಲಿ ಕನ್ನಡ ಪುಸ್ತಕಗಳು ಬೇಕು” ಎಂದು ಕಾಲೇಜಿನ ಪ್ರಿನ್ಸಿಪಾಲರಿಗೆ ಮನವಿ ಮಾಡಿಕೊಂಡರು. ವೆಂಕಟರಾಯರ ಬೇಡಿಕೆಯನ್ನು ಒಪ್ಪಿಕೊಂಡು ಪ್ರಿನ್ಸಿಪಾಲರು ಕನ್ನಡ ಪುಸ್ತಕಗಳನ್ನು ತರಿಸಲು ಐವತ್ತು ರೂಪಾಯಿ ಕೊಟ್ಟರು. ವೆಂಕಟರಾಯರಿಗೆ ಅಂದು ವಿಜಯೋತ್ಸಾಹ!

ಕೀಲಿ ಕೈ ನನ್ನ ಕಡೆಗೆ ಕೊಡಿ”

ವಕೀಲಿ ಅಭ್ಯಾಸವನ್ನು ಮುಗಿಸಿಕೊಂಡು ೧೯೦೫ರಲ್ಲಿ ವೆಂಕಟರಾಯರು ಧಾರವಾಡದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. ಆದರೆ ಅವರ ಲಕ್ಷ್ಯ ಸಾರ್ವಜನಿಕ ಜೀವನದ ಕಡೆ ಇದ್ದಿತು. ಈಗಾಗಲೇ ಆನೆಗುಂದಿಯ ದರ್ಶನ ಏಕೀಕೃತ ಕರ್ನಾಟಕದ ಚಿತ್ರವನ್ನು ರೂಪಿಸಿದ್ದಿತು. ೧೯೦೫ರಲ್ಲಿ ಬ್ರಿಟಿಷ್ ಸರ್ಕಾರ ಬಂಗಾಳ ಪ್ರಾಂತವನ್ನು ಎರಡು ಭಾಗ ಮಾಡಲು ನಿರ್ಧರಿಸಿತು. ಬಂಗಾಳ ಮಾತ್ರವಲ್ಲ, ಇಡೀ ಭಾರತ ಇದಕ್ಕೆ ವಿರುದ್ಧವಾಗಿ ಎದ್ದು ನಿಂತು ಸಾಮ್ರಾಜ್ಯದ ಸರ್ಕಾರವನ್ನು ವಿರೋಧಿಸಿತು. ಈ ವಂಗಭಂಗ ಚಳವಳಿ ವೆಂಕಟರಾಯರಲ್ಲಿ ಕನ್ನಡ ಭಾಷಾಭಿಮಾನವನ್ನು ಹೆಚ್ಚಿಸಿತು.

ಒಂದು ದಿನ ಸಾಯಂಕಾಲ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಕಡೆಗೆ ಹೋದರು. ಸಂಘವು ಸ್ಥಾಪಿತವಾಗಿ ಹದಿನೈದು ವರ್ಷವಾಗಿದ್ದರೂ ಅದು ನಿಸ್ತೇಜವಾಗಿತ್ತು. ಸಮರ್ಥ ಕಾರ್ಯಕರ್ತರ ಅಭಾವದಿಂದ ಸಂಘದ ಬಾಗಿಲು ಮುಚ್ಚಬೇಕಾಗಿದೆ ಎಂದು ಅಲ್ಲಿಯ ಕಾರ್ಯದರ್ಶಿಗಳು ತಿಳಿಸಿದರು. “ಸಂಘದ ಕೀಲಿಕೈ ನನ್ನ ಕಡೆಗೆ ಕೊಡಿ.” ಕೂಡಲೇ ಅಭಿಮಾನದಿಂದ ವೆಂಕಟರಾಯರು ನುಡಿದರು. “ಪ್ರತಿದಿನ ಸಂಜೆ ಆರು ಗಂಟೆಯಿಂದ ನಾನು ಇಲ್ಲಿ ಕುಳಿತುಕೊಳ್ಳುತ್ತೇನೆ.”
ಅಂದಿನಿಂದ ಸರಿಯಾಗಿ ಆರು ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಬರತೊಡಗಿದರು. ಕಸ ಗುಡಿಸುವುದು, ಪುಸ್ತಕ ಹೊಂದಿಸುವುದು ಎಲ್ಲವನ್ನೂ ಮಾಡತೊಡಗಿದರು. ರಾತ್ರಿ ೮-೩೦ರವರೆಗೆ ಪುಸ್ತಕ ಓದುತ್ತಾ ಅಲ್ಲಿಯೇ ಕುಳಿತುಕೊಳ್ಳುತ್ತಿದ್ದರು.

ಮರು ವರ್ಷ ಅಂದರೆ ೧೯೦೬ರಲ್ಲಿ ಸಂಘದ ಮುಖಪತ್ರವಾದ “ವಾಗ್ಭೂಷಣ”ದ ಹೊಣೆ ವೆಂಕಟರಾಯರ ಮೇಲೆ ಬಿದ್ದಿತು. ಅವರು ಅದರ ಸಂಪಾದಕರಾಗಿದ್ದರು. ಕನ್ನಡಿಗರ ಸ್ವಾಭಿಮಾನ ಹೆಚ್ಚುವಂತೆ ಲೇಖನಗಳನ್ನು ಬರೆದರು.

ಕನ್ನಡಿಗರಲ್ಲಿ ಐಕ್ಯಭಾವವನ್ನು ಹುಟ್ಟಿಸಲು ಮೊದಲನೆಯ ಹೆಜ್ಜೆಯೆಂದು “ಕರ್ನಾಟಕ ಗ್ರಂಥಕರ್ತರ ಪ್ರಥಮ ಸಮ್ಮೇಳನ”ವನ್ನು ವೆಂಕಟರಾಯರು ಯೋಜಿಸಿದರು. ೧೯೦೭ರಲ್ಲಿ ಜೂನ್‌ ತಿಂಗಳಲ್ಲಿ ಧಾರವಾಡದಲ್ಲಿ ಇಂತಹ ಸಮ್ಮೇಳನವು ಸೇರಿತು.

ವರ್ಷವರ್ಷವೂ ಇಂತಹುದೇ ಸಮ್ಮೇಳನವು ಧಾರವಾಡದಲ್ಲಿ ನೆರವೇರಿತು. ಯೋಗ್ಯ ಗ್ರಂಥಗಳಿಗೆ ಬಹುಮಾನ ಕೊಡುವ ಯೋಜನೆ ಈ ಸಮ್ಮೇಳನದಲ್ಲಿ ರೂಪಿತವಾಯಿತು. ಅವರ ಸತತ ಪ್ರಯತ್ನದಿಂದ ೧೯೧೪ರಲ್ಲಿ ಅಖಿಲ ಕರ್ನಾಟಕ ಸಮ್ಮೇಳನ ಬೆಂಗಳೂರಿನಲ್ಲಿ ಸೇರಿತು. ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯು ಆಯಿತು.

ವಕೀಲ ವೃತ್ತಿಯೇ, ದೇಶಸೇವೆಯೇ ?

೧೯೦೬ರಲ್ಲಿ ಭಾರತ ದೇಶದಲ್ಲಿ ಅದೆಂತಹ ಕೋಲಾಹಲ ! ಸ್ವರಾಜ್ಯದ ಬೇಡಿಕೆ, ಸ್ವದೇಶಿ ಚಳವಳಿ, ಬಹಿಷ್ಕಾರ ಎಲ್ಲವೂ ನಡೆದವು. ದೇಶದ ನಾನಾ ಭಾಗಗಳಲ್ಲಿ ವಕೀಲರು, ಪ್ರಾಧ್ಯಾಪಕರು ತಮ್ಮ ಉದ್ಯೋಗಗಳನ್ನು ಬಿಟ್ಟು ವೆಂಕಟರಾಯರೂ ತಮ್ಮ ಜೀವಮಾನವನ್ನು ರಾಷ್ಟ್ರಸೇವೆಗೆ ವಿನಿಯೋಗಿಸಬೇಕು ಎಂದು ಬಯಸಿದರು. ವಕೀಲ ವೃತ್ತಿಯನ್ನು ಬಿಡಲು ಮನಸ್ಸು ಮಾಡಿದರು.

ಭೀಮರಾಯರು ತಮ್ಮ ಮಗ ಒಳ್ಳೆಯ ವಕೀಲನಾಗಬೇಕು, ಮುನ್ಸೀಫನಾಗಬೇಕು ಎಂದು ಕನಸು ಕಟ್ಟಿದರು. ವಕೀಲ ವೃತ್ತಿವನ್ನು ಬಿಡಬೇಕು ಎಂಬುದು ಮಗನ ಮನೋಗತ ಎಂದು ತಿಳಿದು ಅವರಿಗೆ ಬಹಳ ನಿರಾಶೆಯಾಯಿತು. ” ನಾನು ನಿನಗೆ ಹೊಟ್ಟೆಗೆ ಹಾಕುವೆನೆಂದು ತಿಳಿಯಬೇಡ, ಸ್ವಂತ ಕಾಲ ಮೇಲೆ ನಿಲ್ಲುವ ಧೈರ್ಯವಿದ್ದರೆ ವಕೀಲ ವೃತ್ತಿ ಬಿಡು…” ಎಂದು ಕಾಶೀಯಾತ್ರೆಯಲ್ಲಿದ್ದ ಭೀಮರಾಯರು ಪತ್ರ ಬರೆದರು.

ಮುದುವೆಯಾದ ವೆಂಕಟರಾಯರಿಗೆ ಸಂಸಾರದ ಭಾರವೂ ಬಿದ್ದಿತು.

“ದೇಶಕ್ಕೆ ನಿನ್ನಂಥ ಪದವೀಧರರ ಅವಶ್ಯಕತೆ ಇದೆ” ಸ್ವಾರ್ಥ ತ್ಯಾಗಕ್ಕೆ ಮೊದಲು ಮುಂದಾಗಬೇಕು!” ಪುಣೆಯಿಂದ ಧಾರವಾಡಕ್ಕೆಬಂದ ಪ್ರಾಧ್ಯಾಪಕರೊಬ್ಬರು ವೆಂಕಟರಾಯರಿಗೆ ಉಪದೇಶ ಮಾಡಿದ್ದರು.

ಒಂದು ಕಡೆ ದೇಶ ಸೇವೆ – ಇನ್ನೊಂದು ಕಡೆ ಸಂಸಾರದ ಭಾರ! “ದೇಶಸೇವೆಗೆ ಮುಂದಾಗು” ಎಂದು ಅಧ್ಯಾಪಕರ ಕರೆ, ಸ್ವಂತ ಕಾಲ ಮೇಲೆ ನಿಲ್ಲುವ ಧೈರ್ಯವಿದೆಯೇ? ತಂದೆಯ ಎಚ್ಚರ. ತಕ್ಕಡಿಯ ತಟ್ಟೆಗಳ ಹಾಗೆ ವೆಂಕಟರಾಯರ ಮನಸ್ಸು ಹೊಯ್ಡಾಡಿತು. ಕೊನೆಗೆ ವಕೀಲ ವೃತ್ತಿ ಬಿಟ್ಟು ದೇಶಸೇವೆಗೇ ಟೊಂಕಕಟ್ಟಿ ನಿಂತರು.

ಭೀಮರಾಯರು ಮೊದಲೇನೋ ಮನಸ್ಸು ಕಹಿ ಮಾಡಿಕೊಂಡರು. ಆಮೇಲೆ ಮಗನ ಮೇಲಿನ ವಾತ್ಸಲ್ಯದಿಂದ ಮತ್ತೆ ವೆಂಕಟರಾಯರಿಗೆ ಅನುಕೂಲವಾದರು. ಹಲವು ದಿನ ಬೇರೆ ಮನೆ ಮಾಡಿ ಬಡತನವನ್ನು ಅಪ್ಪಿಕೊಂಡ ವೆಂಕಟರಾಯರು ಮತ್ತೆ ತಮ್ಮ ತಂದೆಯ ಕೂಡ ಸಹಬಾಳ್ವೆ ಮಾಡಿದರು.

ರಾಷ್ಟ್ರೀಯ ಚಳವಳಿಯಲ್ಲಿ

ವೆಂಕಟರಾಯರು ಮೊಟ್ಟಮೊದಲು ರಾಜಕೀಯ ಜೀವನದಲ್ಲಿ ಹೆಚ್ಚು ಭಾಗವಹಿಸುತ್ತಿದ್ದರು.

ಒಮ್ಮೆ ಗದಗಿನಲ್ಲಿ ವೆಂಕಟರಾಯರು ತಿಲಕರ ಭಾಷಣಗಳನ್ನು ಏರ್ಪಡಿಸಿದರು. ಪೊಲೀಸ್ ಅಧಿಕಾರಿಗಳು ಸಭೆ ನಡೆಸಲು ಅವಕಾಶ ಕೊಡಬಾರದು ಎಂದು ನಿಂತುಕೊಂಡಿದ್ದರು. ಆದರೆ ಆ ಸಂಬಂಧವಾಗಿ ಕಲೆಕ್ಟರ್ ಕಳುಹಿಸಿದ ಅಪ್ಪಣೆ ನಿಯಮಗಳಿಗೆ ಅನುಗುಣವಾಗಿರಲಿಲ್ಲ. ವೆಂಕಟರಾಯರು ಭಾಷಣ ಮಾಡಲು ತಿಲಕರನ್ನು ಕೇಳಿಕೊಂಡರು. ಶಾಂತಿಯಿಂದ ಅಂದು ಸಭೆ ನಡೆಯಿತು. ಗದಗಿನಲ್ಲಿ ಇಂದಿಗೂ ಸಭೆ ನಡೆದ ಆ ಸ್ಥಳಕ್ಕೆ “ತಿಲಕ ಚೌಕ” ಎಂದು ಕರೆಯುವರು.

ವೆಂಕಟರಾಯರು ವಕೀಲ ವೃತ್ತಿಯನ್ನು ಬಿಟ್ಟ ಕೂಡಲೇ ವಿದೇಶಿ ಬಟ್ಟೆಗಳನ್ನು ಬಿಟ್ಟು ಖಾದಿ ಉಡುಪುಗಳನ್ನು ಧರಿಸಿದರು. ಸ್ವದೇಶಿ ಚಳವಳಿಗಾಗಿ ಹಳ್ಳಿ ಹಳ್ಳಿಗಳಲ್ಲಿ ಸಭೆ ಕೂಡಿಸಿದರು. ಪೈಸಾ ಫಂಡ್. ತಿಕಲ್‌ ಫಂಡ್ ಮುಂತಾದ ನಿಧಿಗಳನ್ನು ಕೂಡಿಸಿದರು.

“ಕನ್ನಡ ಕೇಸರಿ”, “ಕರ್ನಾಟಕ ವೃತ್ತ” ಮುಂತಾದ ಪತ್ರಿಕೆಗಳ ಕೂಡ ವೆಂಕಟರಾಯರ ವಿಶೇಷ ಸಂಬಂಧವಿದ್ದಿತು. “ಚಳವಳಿಗಳ ಆತ್ಮ” ಎಂಬ ಲೇಖನಮಾಲೆ “ಕರ್ನಾಟಕ ವೃತ್ತ”ದಲ್ಲಿ ಪ್ರಕಟವಾಯಿತು. ಈ ಬರಹಗಳನ್ನು ಯಾರೂ ಓದಕೊಡದೆಂದು ಸರ್ಕಾರ ನಿಷೇಧಿಸಿತು.

ರಾಷ್ಟ್ರೀಯ ಶಾಲೆ

ಸರ್ಕಾರದವರು ನಡೆಸುತ್ತಿದ್ದ ಇಂಗ್ಲಿಷ್‌ ಶಾಲೆಗಳಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಇಂಗ್ಲಿಷರಂತೆಯೇ ಆಗುತ್ತಿದ್ದರು.ಅವರಲ್ಲಿ ಭಾರತೀಯತ್ವ ಇರಲಿಲ್ಲ. ಸ್ವದೇಶಾಭಿಮಾನವನ್ನು ತರುಣದಲ್ಲಿ ಹುಟ್ಟಿಸಲು ರಾಷ್ಟ್ರೀಯ ಶಾಲೆಗಳು ಸ್ಥಾಪಿತವಾದವು. ಕರ್ನಾಟಕದಲ್ಲಿಯೂ ಇಂತಹದೊಂದು ಶಾಲೆ ಪ್ರಾರಂಭವಾಗಬೇಕು ಎಂದು ವೆಂಕಟರಾರು ಇಚ್ಛಿಸಿದರು. ಎರಡು ವರ್ಷಗಳ ಪ್ರಯತ್ನದ ಅನಂತರ ೧೯೯೦ರಲ್ಲಿ ರಾಷ್ಟ್ರೀಯ ಶಾಲೆ ಧಾರವಾಡದಲ್ಲಿ ಪ್ರಾರಂಭವಾಯಿತು. ವೆಂಕಟರಾಯರೇ ಅದರ ಮುಖ್ಯಾಧ್ಯಾಪಕರಾದರು. ಚಿತ್ರಕಲೆ, ಬಡಗಿತನ, ಮುದ್ರಣ ಮುಂತಾದ ಉದ್ಯೋಗಗಳನ್ನು ಪ್ರತಿದಿನ ಪಾಠಗಳ ಕೂಡ ಕಲಿಸಲಾಗುತ್ತಿತ್ತು.

ರಾಷ್ಟ್ರೀಯ ಶಾಲೆಗಳ ಉದ್ದೇಶ ಉದಾತ್ತವಾಗಿತ್ತು. ಆದರೆ ಆಧ್ಯಾಪಕರಿಗೆ ಸಂಬಳ ಕೊಡುವುದು ಹೇಗೆ? ವೆಂಕಟರಾಯರು ವಕೀಲ ವೃತ್ತಿಯಿಂದ ಕೂಡಿಟ್ಟ ಹಣವನ್ನು ಶಾಲೆಗಾಗಿ ಖರ್ಚು ಮಾಡಿದರು. ಆದರೂ ಕೊನೆಗೆ ಆರ್ಥಿಕ ಭಾರ ಹೆಚ್ಚಾಯಿತು. ಸರ್ಕಾರವೂ ದಬ್ಬಾಳಿಕೆಯಿಂದ ರಾಷ್ಟ್ರೀಯ ಶಾಲೆಗಳನ್ನು ಮುಚ್ಚಿಸಹತ್ತಿತು. ಒಂದೇ ವರ್ಷದಲ್ಲಿ ವೆಂಕಟರಾಯರು ರಾಷ್ಟ್ರೀಯ ಶಾಲೆಯನ್ನು ಬಂದು ಮಾಡಲೇಬೇಕಾಯಿತು. “ದುಡ್ಡು ಹಾಕಿ ತಾವೂ ಕೈ ಸುಟ್ಟು ಕೊಂಡರು; ಇತರರಿಗೂ ಬಿಸಿ ತಗಲಿಸಿದರು” – ಹಿಗೆಂದು ಜನರು ವೆಂಕಟರಾಯರ ಬಗ್ಗೆ ಆಡಿಕೊಂಡರು. ವೆಂಕಟರಾಯರಿಗೆ ಮಾತ್ರ ದೇಶಸೇವೆ ಮಾಡಿದ ತೃಪ್ತಿಯಿದ್ದಿತು.

ದೇಶಸೇವೆಯ ಹಲವು ಮುಖಗಳು

ವೆಂಕಟರಾಯರು ಪ್ರತಿ ವರ್ಷ ಸಾಮಾನ್ಯವಾಗಿ ರಾಜಕೀಯ ಸಮ್ಮೇಳನಗಳಲ್ಲ ಭಾಗವಹಿಸುತ್ತಿದ್ದರು. ೧೯೧೬ರಲ್ಲಿ  ಲೋಕಮಾನ್ಯ ತಿಲಕರ ಅಧ್ಯಕ್ಷತೆಯಲ್ಲಿ ರಾಜಕೀಯ ಸಮ್ಮೇಳನ ಸೇರಿತ್ತು. ಪರಿಷತ್ತಿನಲ್ಲಿ ಭಾಗವಹಿಸಿದ ವೆಂಕಟರಾಯರು ಕರ್ನಾಟಕಕ್ಕೆ ಒಂದು ಪ್ರತ್ಯೇಕ “ಸ್ವರಾಜ್ಯ ಸಂಘ”ಬೇಕೆಂದು ವಾದಿಸಿದರು. ತಿಲಕರು ವೆಂಕಟರಾಯರ ವಿಚಾರವನ್ನು ಒಪ್ಪಿಕೊಂಡು “ಸ್ವರಾಜ್ಯ ಸಂಘ”ದ ಕರ್ನಾಟಕ ಶಾಖೆಯನ್ನು ರಚಿಸಿದರು. ದೇಶಪಾಂಡೆ ಗಂಗಾಧರ ರಾಯರು ಅಧ್ಯಕ್ಷರಾದರು. ವೆಂಕಟರಾಯರು ಮೂರು ವರ್ಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

ಅಸಹಕಾರ ಚಳವಳಿ ಬಿರುಗಾಳಿಯಂತೆ ಭಾರತದ ತುಂಬಾ ಪಸರಿಸಿತು. ವೆಂಕಟರಾಯರು ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಹಲವು ದಿನಗಳಿದ್ದರು. ಸಹಕಾರ ಚಳವಳಿಯಲ್ಲಿ ವೆಂಕಟರಾಯರು ಭಾಗವಹಿಸಿದರು.

೧೯೨೧ರ ಜೂನ್ ೩೦ರಂದು ಧಾರವಾಡದಲ್ಲಿ ಪೊಲೀಸರು ಗುಂಡು ಹಾರಿಸಿದಾಗ ಮೂವರು ಸತ್ತರು. ನಗರದ ಜೀವನ ಅಸ್ತವ್ಯಸ್ತವಾಯಿತು. ಅನೇಕರು ಬಂಧಿತರಾದರು. ಅವರಲ್ಲಿ ಪತ್ರಿಕಾ ಸಂಪಾದಕರೂ ಇದ್ದರು. “ರಾಜಹಂಸ”, ವಿಜಯ” ಕರ್ನಾಟಕ ವೃತ್ತ” ಮೊದಲಾದ ಪತ್ರಿಕೆಗಳ ಸಂಪಾದಕರು ಬಂಧನದಲ್ಲಿ ಇದ್ದುದರಿಂದ ವೆಂಕಟರಾಯರೇ ಅವುಗಳನ್ನು ನೋಡಿಕೊಂಡರು.

ಲೋಕಮಾನ್ಯ ತಿಲಕರು ಬದುಕಿರುವವರೆಗೂ ವೆಂಕಟರಾಯರು ರಾಷ್ಟ್ರೀಯ ಜೀವನದಲ್ಲಿ ಹೆಚ್ಚು ಆಸ್ಥೆ ವಹಿಸಿದ್ದರೆಂದು ಸಾಮಾನ್ಯವಾಗಿ ಹೇಳಬಹುದು. ೧೯೨೦ರ ಆಗಸ್ಟ್ ೧ರಂದು ತಿಲಕರು ತೀರಿಕೊಂಡ ಮೇಲೆ ವೆಂಕಟರಾಯರು ತಮ್ಮ ರಾಜಕೀಯ ಜೀವನಕ್ಕೆ ತೆರೆಯೆಳೆದು ದೂರ ಸರಿಯ ಹತ್ತಿದರು.

ಕನ್ನಡ ನಾಡಿನ ಹಿರಿಮೆಯ ಅಧ್ಯಯನ

ಕರ್ನಾಟಕತ್ವದ ಅಭಿಮಾನಿ ವೆಂಕಟರಾಯರಿಗೆ ಮೊದಲಿನಿಂದಲೂ ಇದ್ದಿತು. ರಾಷ್ಟ್ರೀಯ ಚಳವಳಿಯಲ್ಲಿ ಮುಳುಗಿದಾಗಲೂ ಕರ್ನಾಟಕದ ಏಕೀಕರಣದ ಬಗ್ಗೆ ಅವರು ಸತತವಾಗಿ ಪ್ರಯತ್ನಿಸುತ್ತಿದ್ದರು. ಕಾರ್ಯವನ್ನು ಪ್ರಾರಂಭಿಸುವ ಮೊದಲು ಅದರ ವಿಷಯ ಜ್ಞಾನ ಸರಿಯಾಗಿ ಇರಬೇಕು ಎಂಬುದು ವೆಂಕಟರಾಯರ ಅಭಿಪ್ರಾಯ.

ಕರ್ನಾಟಕದ ಹಿರಿಮೆಯನ್ನು ತಿಳಿದುಕೊಳ್ಳಲು ಅವರು ಕರ್ನಾಟಕ ಚರಿತ್ರೆಯನ್ನು ಮನವರಿಕೆ ಮಾಡಿಕೊಳ್ಳಬೇಕಾಯಿತು. ವಿದ್ವಾಂಸರು ಬರೆದ ಕರ್ನಾಟಕದ ಇತಿಹಾಸ ಓದಿದರು. ಇದರಿಂದ ತೃಪ್ತಿ ಪಡೆಯದೆ ಕರ್ನಾಟಕದ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಕೈಗೊಂಡರು. ಗದಗ, ಅಣ್ಣಿಗೇರಿ, ಲಕ್ಕುಂಡಿ, ಹಳೇಬೀಡು, ಬೇಲೂರು, ಬಾದಾಮಿ, ಐಹೊಳೆ- ಹೀಗೆ ಅವರು ಅನೇಕ ಚಾರಿತ್ರಿಕ ಸ್ಥಳಗಳನ್ನು ನೋಡಿದರು. ಕರ್ನಾಟಕದ ಗತವೈಭವವನ್ನು ಹುಡುಕುತ್ತ ಅನೇಕ ಕಡೆ ತಿರುಗಾಡಿದರು. ಈ ಸ್ಥಳಗಳು ಅವರಿಗೆ ವಿಶೇಷ ಚೈತನ್ಯವನ್ನು ಕೊಟ್ಟವು; ಕನ್ನಡದ ಅಭಿಮಾನವನ್ನು ಜಾಗೃತಗೊಳಿಸಿದವು.

“ಒಂದೊಂದು ಹಾಳುಗುಂಡಿಯಲ್ಲಿ ಕೆಲವೇ ತಾಸುಗಳನ್ನು ಕಳೆದರೂ ನನ್ನ ಅನುಭವವು ಶ್ರೀಮಂತವಾಗುತ್ತಿತ್ತು!” ಎಂದು ಈ ಐತಿಹಾಸಿಕ ಪ್ರವಾಸಗಳ ಬಗ್ಗೆ ವೆಂಕಟರಾಯರು ಹೇಳಿರುವರು.

ಬಹಳ ಸಲ ಪ್ರವಾಸ ಕೈಕೊಂಡಿದ್ದರಿಂದ ಪ್ರವಾಸದ ವೆಚ್ಚ ಸಾವಿರಾರು ರೂಪಾಯಿಗಳಿಗೂ ಮಿಕ್ಕಿತು. ಆದರೂ ವೆಂಕಟರಾಯರು ಚಿಂತಿಸಲಿಲ್ಲ. “ಅದರ ಹತ್ತು ಪಟ್ಟು ಬೆಲೆಯ ಆತ್ಮ ವಿಶ್ವಾಸವನ್ನು ನಾನು ಪಡೆದುಕೊಂಡೆ” ಎಂಬ ಸಮಾಧಾನ ವೆಂಕಟರಾಯರಿಗೆ. ೧೯೦೭ರಿಂದ ಸುಮಾರು ಹತ್ತು ವರ್ಷಗಳವರೆಗೆ ಅವರು ಮೇಲಿಂದ ಮೇಲೆ ಐತಿಹಾಸಿಕ ಪ್ರವಾಸಗಳನ್ನು ಮಾಡಿ ಪೂರ್ತಿಗೊಳಿಸಿದರು.

ತಿಳಿದುಕೊಳ್ಳಿ, ನಿಮ್ಮ ನಾಡು ಇಂಥದು”

ವೆಂಕಟರಾಯರ ಮನಸ್ಸು ಕರ್ನಾಟಕದ ಹಿರಿಮೆಯನ್ನು ಅರಿತು ಜಾಗೃತವಾಯಿತು. ಆಗ ಕನ್ನಡಿಗರು ಕುಂಭಕರ್ಣನ ನಿದ್ರೆಯಲ್ಲಿದ್ದರು. ಅವರನ್ನು ನಿದ್ರೆಯಿಂದ ಎಚ್ಚರಿಸುವುದು ಹೇಗೆ ?

ಇದಕ್ಕಾಗಿ ಅವರು ಹಲವು ಗ್ರಂಥಗಳನ್ನು ರಚಿಸಿದರು. ೧೯೦೭ರಲ್ಲಿ ಶ್ರೀ ವಿದ್ಯಾರಣ್ಯ ಚರಿತ್ರೆ” ಎಂಬ ಚಿಕ್ಕ ಪುಸ್ತಕ ಪ್ರಕಟವಾಯಿತು. ೧೯೧೦ರಲ್ಲಿ “ಕನ್ನಡಿಗರ ಭ್ರಮನಿರಸನ” ಎಂಬ ನಾಟಕವನ್ನು ನರಗುಂದ ರಾಮರಾಯರ ಜೊತೆಗೂಡಿ ಬರೆದರು.

೧೯೧೮ರ ಆಗಸ್ಟ್ ೩ರಂದು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಭಾಷಣ ಮಾಡುವ ಸಂದರ್ಭ ಒದಗಿತು. ಆ ದಿನ ವೆಂಕಟರಾಯರು ಕರ್ನಾಟಕ ಗತವೈಭವವನ್ನು ಕುರಿತು ಇಂಗ್ಲಿಷಿನಲ್ಲಿ ಭಾಷಣ ಮಾಡಿದರು. ಮಹಾರಾಷ್ಟ್ರೀಯರೂ ಆ ಭಾಷಣವನ್ನು ಕೇಳಲು ಬಂದಿದ್ದರು. ತಮ್ಮ ಪ್ರವಾಸದ ಅನುಭವಗಳನ್ನು ಆವೇಶಪೂರಿತವಾಗಿ ವೆಂಕಟರಾಯರು ವಿವರಿಸಿದರು. ಕರ್ನಾಟಕವು ಒಂದು ಜೀವಂತ ನಾಡೆಂದು, ಪ್ರಪಂಚದ ಯಾವ ದೇಶದ ಜನರಿಗೂ ಕನ್ನಡಗಿರು ಎರಡನೆಯವರಲ್ಲವೆಂದು ಹೆಮ್ಮೆಯಿಂದ ನುಡಿದರು.

“ಮಿತ್ರರೇ, ನಾನು ಕನ್ನಡಿಗ, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಅತ್ಯಾನಂದದಿಂದ ಪುಲಕಿತವಾಗುವುದಿಲ್ಲವೋ ಕನ್ನಡ ತಾಯಿಗೆ ಈಗ ಬಂದೊದಗಿದ ವಿಷಯ ಸ್ಥತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ತಳಮಳಿಸುವುದಿಲ್ಲವೋ ರೋಮರಂಧ್ರಗಳಲ್ಲಿ ಕೂಡ “ಕರ್ನಾಟಕ”ವೆಂದು ಸೊಲ್ಲು ಹೊರಡುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ…….” ವೆಂಕಟರಾರಯರ ಇಂತಹ ಭಾಷಣ ಮಲಗಿದ್ದ ಕನ್ನಡಿಗರನ್ನು ಬಡಿದೆಬ್ಬಿಸಿತು.

ಎಲ್ಲವೂ ಕನ್ನಡದ ಸೇವೆ

ಭಾಷಣದಿಂದ ಮಾತ್ರ ತೃಪ್ತರಾಗದೆ ವೆಂಕಟರಾಯರು ತಮ್ಮ ವಿಚಾರಗಳನ್ನೆಲ್ಲ ಕನ್ನಡದಲ್ಲಿ ಬರೆದರು. ೧೯೧೭ರಲ್ಲಿ ಪ್ರಕಟವಾದ “ಕರ್ನಾಟಕ ಗತವೈಭವ” ಪುಣೆಯಲ್ಲಿಯ ಭಾಷಣವೇ ಆಗಿದೆ. ಈ ಗ್ರಂಥದಲ್ಲಿ ಉಜ್ವಲ ದೇಶಾಭಿಮಾನವು ತುಂಬಿತುಳುಕುತ್ತದೆ. ಇದನ್ನು ಓದಿದವರು ವೆಂಕಟರಾರನ್ನು ಗೌರವದಿಂದ ಸ್ಮರಿಸಿದರು; ಕನ್ನಡಕ್ಕಾಗಿ ದುಡಿಯಲು ಟೊಂಕಕಟ್ಟಿ ನಿಂತರು.

ತಮ್ಮ ಪ್ರವಾಸದಲ್ಲಿ ವೆಂಕಟರಾಯರು ಅಸಂಖ್ಯ ಶಿಲಾಲಿಪಿಗಳನ್ನು, ತಾಮ್ರಪಟಗಳನ್ನು ಶೋಧಿಸಿದ್ದರು; ಮತ್ತು ಪ್ರಯತ್ನ ಮಾಡಿ ಅವುಗಳನ್ನು ಓದಿ ತಿಳಿದುಕೊಂಡಿದ್ದರು. ವೀರ ಕನ್ನಡಿಗರ ಭಾಷೆಯನ್ನು ಮೆಚ್ಚಿಕೊಂಡಿದ್ದರು. ಕರ್ನಾಟಕದ ವೀರರನ್ನು ಶಿಲಾಲಿಪಿಯ ವೀರಭಾಷೆಯಲ್ಲಿ ಪರಿಚಯ ಮಾಡಿಕೊಡಬೇಕೆಂದು ಅವರು ೧೯೩೦ರಲ್ಲಿ “ಕರ್ನಾಟಕ ವೀರ ರತ್ನಗಳು” ಎಂಬ ಗ್ರಂಥವನ್ನು ಬರೆದು ಪ್ರಕಟಿಸಿದರು.

ಹಲವರಾದರೂ ಕರ್ನಾಟಕದ ಸರ್ವತೋಮುಖ ಏಳಿಗೆಗೆ ನಿಲ್ಲಲಾರದೆ ತಮ್ಮ ಉದ್ದೇಶ ಸಾಧಿಸದು ಎಂದು ವೆಂಕಟರಾಯರು ತಿಳಿದುಕೊಂಡರು. ಈ ವಿಚಾರವಾಗಿ ದಿನಚರಿಯಲ್ಲಿ ಹೀಗೆ ಬರೆದಿರುವರು – “ಕರ್ನಾಟಕದಲ್ಲಿ ಸಾರ್ವಜನಿಕ ಕೆಲಸದಲ್ಲಿ ಆಯುಷ್ಯ ವೆಚ್ಚ ಮಾಡುವ ಜನರು ನಮ್ಮಲ್ಲಿ ಹುಟ್ಟಬೇಕೆಂಬುದು ನನ್ನ ಮೂಲ ಉದ್ದೇಶ…. ಯಾವುದೊಂದು ವಿಷಯವನ್ನು ತೆಗೆದುಕೊಂಡು ಅದನ್ನು ಪೂರ್ಣವಾಗಿ ಅಭ್ಯಾಸಮಾಡಿ ಅದರಲ್ಲಿ ತಮ್ಮ ಆಯುಷ್ಯವನ್ನು ಹಾಕಲಿಕ್ಕೆ ಜನರು ಸಿದ್ಧರಾಗಬೇಕು… ಪದವಿ, ಕೀರ್ತಿ ಮುಂತಾದವುಗಳ ಆಸೆ ತೊರೆಯುವ ಜನರು ಬೇಕು……”

ಸತತ ಪ್ರಯತ್ನದಿಂದ ಈ ಯೋಜನೆ ಕೈಗೂಡಿತು. ಕಡಪಾ ರಾಘವೇಂದ್ರರಾವ್, ಮುದವೀಡು ವೆಂಕಟರಾವ್, ಮುದವೀಡು ಕೃಷ್ಣರಾವ್, ಗದಿಗೆಯ್ಯ ಹೊನ್ನಾ ಸೂರಮಠ ಮುಂತಾದ ಅಭಿಮಾನಿಗಳು ವೆಂಕಟರಾಯರಿಗೆ ಬೆಂಬಲಿಗರಾಗಿ ನಿಂತರು. ಇದರಿಂದ ೧೯೧೬ರಲ್ಲಿ “ಕರ್ನಾಟಕ ಸಭೆ” ಸ್ಥಾಪಿತವಾಯಿತು. ಅಖಂಡ ಕರ್ನಾಟಕ ನಿರ್ಮಾಣಕ್ಕಾಗಿ ಎಲ್ಲ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂಬುದು ಈ ಸಭೆಯ ಉದ್ದೇಶವಾಗಿತ್ತು. ಕರ್ನಾಟಕ ಸಭೆ ಏಕೀಕರಣ ಚಳವಳಿಗೆ ಚಾಲನೆ ಕೊಟ್ಟಿತು. ಗ್ರಂಥಾಲಯ ಚಳವಳಿಯನ್ನೂ ಪ್ರಾರಂಭಿಸಿತು.

ಪತ್ರಿಕೆಗಳ ಮುಖಾಂತರವಾಗಿಯೂ ಕರ್ನಾಟಕತ್ವದ ಕಲ್ಪನೆಯನ್ನು ವೆಂಕಟರಾಯರು ಕನ್ನಡಿಗರಿಗೆ ಮಾಡಿಸಿಕೊಟ್ಟರು. ರಾಜಕೀಯ ಜೀವನದಲ್ಲಿದ್ದಾಗ ಅವರು “ಕರ್ಮವೀರ”, “ಕರ್ನಾಟಕ ವೃತ್ತ”, “ರಾಜಹಂಸ” ಮುಂತಾದ ಪತ್ರಿಕೆಗಳಲ್ಲಿ ಲೇಖನ ಪ್ರಕಟಿಸುತ್ತಿದ್ದರು. ಅವುಗಳ ಹೊಣೆಗಾರಿಕೆಯ ಸ್ಥಾನಗಳಲ್ಲಿಯೂ ಸೇವೆ ಸಲ್ಲಿಸಿದರು. “ಭೂರಕ್ಕಸಾಯ ಸ್ವಾಹಾ”, ಧೃತರಾಷ್ಟ್ರರೆಲ್ಲರೂ ಕುರುಡರೇ ಎಂಬ ಲೇಖನಗಳು ಸರ್ಕಾರದ ದಬ್ಬಾಳಿಕೆಯನ್ನು ಕ್ರಾಂತಿಯುತವಾಗಿ ಖಂಡಿಸಿದವು.

ಜಯ ಕರ್ನಾಟಕ” ಪತ್ರಿಕೆ

೧೯೨೨ರಲ್ಲಿ ವೆಂಕಟರಾಯರ ಸಂಪಾದಕತ್ವದಲ್ಲಿ ಪ್ರಾರಂಭವಾದ “ಜಯ ಕರ್ನಾಟಕ” ವೈಶಿಷ್ಟ್ಯಪೂರ್ಣವಾಗಿತ್ತು. ಅದು ಕೇವಲ ಮಾಸಪತ್ರಿಕೆಯಾಗಿರಲಿಲ್ಲ. ಒಂದು ರೀತಿಯಿಂದ ಅದೇ ಒಂದು ಸಂಸ್ಥೆ. ಆಧುನಿಕ ಕನ್ನಡದ ಹಿರಿಯ ಸಾಹಿತಿಗಳು ಹಲವು ಜನರಿಗೆ ಪರಿಚಿತರಾಗಲು “ಜಯ ಕರ್ನಾಟಕ” ಎಂಬ ತುಂಬ ನೆರವಾಯಿತು. ಧರ್ಮ, ರಾಜಕಾರಣ, ಸಾಹಿತ್ಯ, ಚಿತ್ರಕಲೆ ಎಲ್ಲ ವಿಷಯಗಳ ಬಗ್ಗೆಯೂ ಮಾದರಿ ಲೇಖನಗಳು “ಜಯ ಕರ್ನಾಟಕ”ದಲ್ಲಿ ಪ್ರಕಟವಾದವು. ಕರ್ನಾಟಕತ್ವದ ಪ್ರಚಾರಕ್ಕೆ ಇದೊಂದು ಬಲವಾದ ಸಾಧನೆಯಾಯಿತು. ೧೯೩೦ರವರೆಗೂ “ಜಯ ಕರ್ನಾಟಕ” ವನ್ನು ಶ್ರೇಷ್ಠ ರೀತಿಯ ಪತ್ರಿಕೆಯೆಂದು ನಡೆಯಿಸಿಕೊಂಡು ಬಂದರು. ಆನಂತರ “ಗೆಳೆಯರ ಗುಂಪಿಗೆ” ಅದನ್ನು ಒಪ್ಪಿದರು.

ಸಂಶೋಧನ ಮಂಡಲಿ

ಕರ್ನಾಟಕ ಇತಿಹಾಸದ ಅಭ್ಯಾಸಕ್ಕೆ ಪ್ರತ್ಯೇಕವಾದ ಸಂಸ್ಥೆ ಇರಬೇಕೆಂದು ವೆಂಕಟರಾಯರಿಗೆ ಅನಿಸಿತು. ತಮ್ಮ ಪ್ರವಾಸದಲ್ಲಿ ಹಳೇ ನಾಣ್ಯ, ತಾಮ್ರಪಟ, ಹಲವು ಅವಶೇಷ ಮುಂತಾದವುಗಳನ್ನು ಸಂಗ್ರಹಿಸಿದರು. ಇವೆಲ್ಲವುಗಳನ್ನು ಒಂದು ಕಡೆಗೆ ಇಡಬೇಕು ಎಂದೆನಿಸಿತು. ಅವರು ಇಂತಹ ಚಿಂತೆಯಲ್ಲಿರುವಾಗ ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಮಾತನಾಡುವ ಪ್ರಸಂಗ ಬಂದಿತು. ಅಲ್ಲಿಯ ಕನ್ನಡಗರು ಕೊಟ್ಟ ನೂರು ರೂಪಾಯಿಗಳಿಂದ ವೆಂಕಟರಾಯರು “ಕರ್ನಾಟಕ ಇತಿಹಾಸ ಸಂಶೋಧನ ಮಂಡಲ”ವನ್ನು ಧಾರವಾಡದಲ್ಲಿ ೧೯೧೪ರಲ್ಲಿ ಸ್ಥಾಪಿಸಿದರು; ಮತ್ತು ಅದರ ಅಧ್ಯಕ್ಷರಾದರು.

“ಪ್ರಾಚೀನ ಕರ್ನಾಟಕ”ವೆಂಬ ಇಂಗ್ಲೀಷ್ ಕನ್ನಡ ಅರ್ಧ ವಾರ್ಷಿಕ ಪತ್ರಿಕೆಯನ್ನು ವೆಂಕಟರಾಯರು ಸಂಪಾದಿಸುತ್ತ ಹೋದರು. ಈ ಪತ್ರಿಕೆಯ ಮುಖಾಂತರ ಹಲವು ಸಂಶೋಧಕರು ಪ್ರಸಿದ್ಧರಾದರು. ೧೯೩೦ರವರೆಗೂ ವೆಂಕಟರಾಯರೂ ಈ ಸಂಸ್ಥೆಯ ಅಧ್ಯಕ್ಷರಾಗಿದ್ದರು.

ಮೈ ನವಿರೇಳಿಸುವ ವಿಜಯನಗರದ ನೆನಪು

ವಿಜಯನಗರ ಸಾಮ್ರಾಜ್ಯ ಕನ್ನಡಿಗರ ಚರಿತ್ರೆಯಲ್ಲಿ ಒಂದು ವೈಭವದ ಅಧ್ಯಾಯ. ಕನ್ನಡಿಗರ ಸಾಮರ್ಥ್ಯ, ಶೌರ್ಯ, ಕಲಾಶಕ್ತಿಗಳ ತವು. ಈ ರಾಜ್ಯ ೧೩೩೬ರಲ್ಲಿ ಸ್ಥಾಪನೆಯಾಯಿತು; ವೀರ ಹರಿಹರನ ಪಟ್ಟಾಭಿಷೇಕವಾದದ್ದು ಆ ವರ್ಷ. ವಿಜಯನಗರದ ಸ್ಥಾಪನೆಯ ಆರುನೂರನೆಯ ವರ್ಷದ ಸಮಾರಂಭವನ್ನು ತುಂಬ ವೈಭವದಿಂದ ನಡೆಸಬೇಕು ಎಂದು ವೆಂಕಟರಾಯರೂ ಅವರ ಮಿತ್ರರೂ ಆಲೋಚಿಸಿದರು. “ಕರ್ನಾಟಕ ಇತಿಹಾಸ ಸಂಶೋಧನ ಮಂಡಲ”ದ ಆಶ್ರಯದಲ್ಲಿ “ವಿಜಯನಗರ ಷಟ್ ಶತಮಾನೋತ್ಸವ” ೧೯೩೬ರಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು. ವೆಂಕಟರಾಯರು ಊರೂರು ದುಡಿದರು. ಉತ್ಸವಕ್ಕಾಗಿ ಹಾಳು ಹಂಪೆಯಲ್ಲಿ ಐವತ್ತು ಸಾವಿರ ಮಂದಿ ಸೇರಿದರು. ಅಂದು ನಡೆದ ವಿಜಯನಗರ ಉತ್ಸವವು ಮತ್ತೆ ಕರ್ನಾಟಕ ರಾಜ್ಯವನ್ನು ಸ್ಥಾಪಿಸಿದಂತಾಗಿತ್ತು. ಅದನ್ನು ಕಂಡ ವೆಂಕಟರಾಯರ ಕಣ್ಣುಗಳು ಆನಂದದ ಕಂಬನಿ ಸುರಿಸಿದವು.

ವೆಂಕಟರಾಯರು ಸ್ಥಾಪಿಸಿದ “ಕರ್ನಾಟಕ ಇತಿಹಾಸ ಸಂಶೋಧನ ಮಂಡಲ” ಇಂದು ಭವ್ಯ ಕಟ್ಟಡವನ್ನು ಪಡೆದು ಧಾರವಾಡದಲ್ಲಿ ಶೋಭಿಸುತ್ತಿದೆ.

ಹೀಗೆ ಕನ್ನಡಿಗರಲ್ಲಿ ಕರ್ನಾಟಕತ್ವವನ್ನು ಬೀರಲು ವೆಂಕಟರಾಯರು ನೂರೆಂಟು ಯೋಜನೆಗಳನ್ನು ಕೈಗೊಂಡರು. “ಆಡು ಮುಟ್ಟದ ಗಿಡವಿಲ್ಲ, ವೆಂಕಟರಾಯರು ತೆಗೆದುಕೊಳ್ಳದ ಕಾರ್ಯವಿಲ್ಲ” ಎಂಬ ಮಾತು ನಿಜ.

ಒಳ್ಳೆಯ ಲೇಖಕರು

ವೆಂಕಟರಾಯರು ಒಳ್ಳೆಯ ಲೇಖರು. ವಿಚಾರಾತ್ಮಕ ಗ್ರಂಥಗಳನ್ನೇ ಅವರು ಬರೆದರು. ಮೊದಮೊದಲು ಅವರು ಇಂಗ್ಲಿಷ್ ಗ್ರಂಥಗಳನ್ನು ಭಾಷಾಂತರಿಸಿದರು. ಸ್ವತಂತ್ರವಾಗಿ ಬರೆದ ಗ್ರಂಥಗಳಲ್ಲಿ “ಕರ್ನಾಟಕ ಗತ ವೈಭವ”, “ಕರ್ನಾಟಕ ವೀರ ರತ್ನಗಳು” ಸುಪ್ರಸಿದ್ಧ.

ವೈದಿಕ ಗ್ರಂಥಗಳ ಅಭ್ಯಾಸದ ಹಿನ್ನೆಲೆ ವೆಂಕಟರಾಯರಿಗೆ ಬಾಲ್ಯದಿಂದಲೂ ಇದ್ದಿತು. ಅವರು ಗೀತಾ ಗ್ರಂಥವನ್ನು ಬಹಳ ಮೆಚ್ಚಿಕೊಂಡಿದ್ದರು. ತಮ್ಮ ಮನೆಯನ್ನು “ಗೀತಾ ಭವನ”ವೆಂದೇ ಕರೆದಿರುವರು. ಲೋಕಮಾನ್ಯ ತಿಲಕರ “ಗೀತಾ ರಹಸ್ಯ”ವೆಂಬ ಮಹಾಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದರು. “ಗೀತಾ ಪ್ರಕಾಶನ”ವನ್ನು ಪ್ರಾರಂಭಿಸಿ, “ಗೀತಾ ಪರಿಮಳ”, “ಗೀತಾ ಸಂದೇಶ”, “ಗೀತಾ ಭಾವಪ್ರದೀಪ” ಮುಂತಾದ ಗ್ರಂಥಗಳನ್ನು ಪ್ರಕಟಿಸಿದರು. ಗೀತೆಯನ್ನು ಕುರಿತು ಬರೆಯಬೇಕಾಗಿದ್ದ ಅವರ ಟಿಪ್ಪಣಿಗಳು ಇನ್ನೂ ಹಾಗೆಯೇ ಉಳಿದಿವೆ.

ವೆಂಕಟರಾಯರ ಜೀವನವನ್ನು ವಿವರವಾಗಿ ತಿಳಿದುಕೊಳ್ಳಬೇಕಾದರೆ ಅವರೇ ಬರೆದ “ನನ್ನ ಜೀವನ ಸ್ಮೃತಿಗಳು” ಗ್ರಂಥವನ್ನು ಓದಬೇಕು. ಅವರಿಗೆ ಅರವತ್ತು ವರ್ಷವಾದಾಗ ಆ ಗ್ರಂಥವನ್ನು ರಚಿಸಿದರು. ಕರ್ನಾಟಕವನ್ನು ಕುರಿತು ಅವರ “ಕರ್ನಾಟಕತ್ವದ ವಿಕಾಸ” ಮತ್ತು “ಕರ್ನಾಟಕತ್ವದ ಸೂತ್ರಗಳು” ಇವನ್ನು ಓದಬೇಕು.

ಧರ್ಮಪತ್ನಿ

ವೆಂಕಟರಾಯರಿಗೆ ಸಂಪಾದನೆ ಇರಲಿಲ್ಲ. ಕೆಲವೇ ವರ್ಷ ವಕೀಲ ವೃತ್ತಿಯಿಂದ ಬಂದ ಹಣ ಎಂದೋ ಖರ್ಚಾಗಿತ್ತು. ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗಿತ್ತು. ಆದರೂ ತಮ್ಮ ಸಂಸಾರವನ್ನು ಅವರು ಹೇಗೋ ಧೈರ್ಯದಿಂದ ಸಾಗಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಅವರ ಧರ್ಮಪತ್ನಿಯವರ ತ್ಯಾಗವನ್ನು ಸ್ಮರಿಸಲೇಬೇಕು. ಲಕ್ಷ್ಮೀಬಾಯಿ ಹೆಸರಿಗೆ ತಕ್ಕಂತೆ ಬಾಳಿದರು. ವೆಂಕಟರಾಯರಿಗೆ ಅವರು ಅಮೂಲ್ಯ ಸಂಪತ್ತು! ಅವರು ವೆಂಕಟರಾಯರನ್ನು ದೇಶಕಾರ್ಯಕ್ಕೆ ಮೀಸಲಾಗಿ ಬಿಟ್ಟು ತಾವೇ ಬಡತನದಿಂದ ಸಂಸಾರ ಸಾಗಿಸುವ ಭಾರ ಹೊತ್ತರು.

ವೆಂಕಟರಾಯರದು ಅವಿಭಕ್ತ ಕುಟುಂಬ. ಅವರ ಇಬ್ಬರು ತಮ್ಮಂದಿರು ತೀರಿಕೊಂಡ ಮೇಲೆ ೨೦ ಸಾವಿರ ರೂಪಾಯಿಗಳ ಸಾಲ ವೆಂಕಟರಾಯರು ಹೊರಬೇಕಾಯಿತು. ಒಮ್ಮೆಯಂತೂ ಸರ್ಕಾರವು ಸಾಧನಕೇರಿಯ ಅವರ ಮನೆಯ ಮೇಲೆ ಜಪ್ತಿ ಆಜ್ಞೆ ತಂದಿತು. ಅಂದೇ ವೆಂಕಟರಾಯರ ಮನೆಯಲ್ಲಿ ಅವರ ಹುಟ್ಟುಹಬ್ಬದ ಆಚರಣೆ! ಅದೆಂಥ ಪ್ರಸಂಗ! ಲಕ್ಷ್ಮೀಬಾಯಿಯವರು ತಮ್ಮ ಬಂಗಾರದ ಆಭರಣಗಳನ್ನೆಲ್ಲ ತೆಗೆದುಕೊಟ್ಟರು; ಸಾಲವನ್ನು ತೀರಿಸಲು ಹೇಳಿದರು.

೧೯೩೦ರ ಅಸಹಕಾರ ಚಳವಳಿಯಲ್ಲಿ ಸರ್ಕಾರವು ವೆಂಕಟರಾಯರನ್ನು ಬಂಧಿಸಿ ಕಲಘಟಗಿಯಲ್ಲಿ ದಿಗ್ಭಂದನದಲ್ಲಿ ಒಂದು ವರ್ಷವಿಟ್ಟಿತು. ಆಗ ವೆಂಕಟರಾಯರ ಐದು ಮಕ್ಕಳೆಲ್ಲ ಚಿಕ್ಕವರು. ಅವರನ್ನು ನೋಡುವವರು ಯಾರೂ ಇರಲಿಲ್ಲ; ಮನೆಯಲ್ಲಿ ಹಣದ ನೆರವೂ ಇರಲಿಲ್ಲ. “ನಾನು ಮಾಡಿದ್ದು ತಪ್ಪು, ಕ್ಷಮಿಸಿ, ಮತ್ತೆ ಮಾಡುವುದಿಲ್ಲ” ಎಂದು ಸರ್ಕಾರವನ್ನು ಬೇಡಿಕೊಂಡಿದ್ದರೆ ವೆಂಕಟರಾಯರ ಬಿಡುಗಡೆಯಾಗುತ್ತಿತ್ತು. ಹಾಗೆ ಹಲವರು ಅವರಿಗೆ ಉಪದೇಶ ಮಾಡಿದರು. ಆದರೆ ಮನೆಯಲ್ಲಿ ಎಷ್ಟೇ ಕಷ್ಟ, ಬಡತನಗಳಿದ್ದರೂ ವೆಂಕಟರಾಯರಾಗಲಿ ಲಕ್ಷ್ಮೀಬಾಯಿಯವರಾಗಲಿ ಆ ಯೋಚನೆಯನ್ನು ಮಾಡಲಿಲ್ಲ. ಸಂಸಾರದ ನಿರ್ವಹಣೆಯ ಹೊಣೆ ಹೊತ್ತಿದ್ದ ಲಕ್ಷ್ಮೀಬಾಯಿ ಅರ್ಧೈಯ ಪಡಲಿಲ್ಲ. ಮನೆತನದ ಕಷ್ಟಗಳಿಗಾಗಿ ಚಿಂತಿಸಿ ಯಾವ ರೀತಿಯಿಂದಲೂ ಕ್ಷಮೆ ಬೇಡಬಾರದೆಂದು ಸ್ಪಷ್ಟವಾಗಿ ಹೇಳಿ ಕಳಿಸಿದರು.

ವೆಂಕಟರಾಯರ ಪುಣ್ಯದಲ್ಲಿ ಅವರ ಧರ್ಮಪತ್ನಿಯವರಿಗೂ ಅರ್ಧ ಪಾಲು ಇದೆಯೆಂದೇ ಹೇಳಬೇಕು.

 

ಸರ್ಕಾರ ಅವರ ಮನೆಯ ಮೇಲೆ ಜಪ್ತಿ ಆಜ್ಞೆ ತಂದಿತು.

ಸಂಕಲ್ಪದಂತೆಯೇ ಜೀವನ

ಸಂಕಲ್ಪದಂತೆಯೇ ಜೀವನ ಸಾಗಿಸುವುದು ವೆಂಕಟರಾಯರ ಜೀವನದ ಧ್ಯೇಯವಾಗಿದ್ದಿತು. ತಮಗೆ ೬೦ ವರ್ಷಗಳಾಗುವವರೆಗೆ ಸಾರ್ವಜನಿಕ ಚಟುವಟಕೆಗಳನ್ನು ಸಾಗಿಸಬೇಕೆಂದು ಅವರು ಸಂಕಲ್ಪ ಮಾಡಿದ್ದರು. ಇದೇ ಕಾರಣದಿಂದ ಅವರು ೧೯೪೦ರಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತರಾದರು. ಅದರ ತರುವಾಯ ಯಾವ ಸಾರ್ವಜನಿಕ ಸಂಸ್ಥೆಗಳಲ್ಲಿಯೂ ಹೊಣೆಗಾರಿಕೆಯ ಸ್ಥಾನವನ್ನು ಅವರು ಸ್ವೀಕರಿಸಲಿಲ್ಲ. ತಮ್ಮ ಕೋಣೆಯಲ್ಲಿ ತಪಸ್ವಿಯಂತೆ ಕುಳಿತು ಧಾರ್ಮಿಕ ಗ್ರಂಥಗಳನ್ನು – ಹೆಚ್ಚಾಗಿ ಮಧ್ವಾಚಾರ್ಯರ ಗ್ರಂಥಗಳನ್ನು – ಅವರು ಅಭ್ಯಾಸ ಮಾಡಿದರು. ಮಹರ್ಷಿ ಅರವಿಂದರ ಎಲ್ಲ ಗ್ರಂಥಗಳನ್ನು ತರಿಸಿಕೊಂಡು ಓದಿ ಮನನ ಮಾಡಿಕೊಂಡರು.

ಬಹಿರಂಗ ಜೀವನದಿಂದ ದೂರವಾಗಿ ಅಂತರಂಗ ಜೀವನದಲ್ಲಿ ವೆಂಕಟರಾಯರು ತನ್ಮಯರಾದರು, ಸಾರ್ಥಕರಾಗಿ ಬಾಳಿದರು.

ಎಂದೂ ಕನ್ನಡಕ್ಕಾಗಿ

ಕರ್ನಾಟಕದ ಬಗ್ಗೆ ಮಾತ್ರ ಅವರ ಆಸಕ್ತಿ ಎಂದೆಂದೂ ಕಡಿಮೆಯಾಗಲಿಲ್ಲ. ಅವರದು ನಿರ್ಭಯ ಸ್ವಭಾವ. ಯಾರು ಏನೆಂದುಕೊಳ್ಳುವರೋ ಎಂಬ ಸಂಕೋಚದಿಂದ ತಮಗೆ ಸರಿ ಎಂದು ತೋರಿದುದನ್ನು ಹೇಳಲು ಹಿಂಜರಿಯುವವರಲ್ಲ. “ಜನಗಣಮನ” ರಾಷ್ಟ್ರಗೀತೆಯಾಯಿತು. ಆದರೆ ಆ ಗೀತೆಯಲ್ಲಿ ಕರ್ನಾಟಕದ ಹೆಸರೂ ಇರಬೇಕು ಎಂದು ಅವರಿಗೆ ತೋರಿತು. ಹಲವು ಮುಂದಾಳುಗಳ ಮುಂದೆ ತಮ್ಮ ವಿಚಾರ ಹೇಳಿದರು; ಉಪಯೋಗವಾಗಲಿಲ್ಲ. ಕೊನೆಗೆ ಒಂದು ದಿನ ರಾಜ್ಯ ಸರ್ಕಾರದ ಮಂತ್ರಿಗಳಿಗೆ, ಭಾರತ ಸರ್ಕಾರದ ಪ್ರಧಾನಿ ನೆಹರೂ ಅವರಿಗೆ ತಮ್ಮ ವ್ಯಸನವನ್ನು ಸೂಚಿಸಿ ರಿಜಿಸ್ಟರ್ಡ್‌ ಪತ್ರ ಬರೆದರು. ಪತ್ರಗಳು ಅಂಚೆಗೆ ಹೋದಾಗಲೇ ಅವರಿಗೆ ಸಮಾಧಾನ!

ಏಕೀಕೃತ ಕರ್ನಾಟಕವಾಯಿತು. ಕನ್ನಡಿಗರ ನವರಾಜ್ಯ ಉದಯವಾಯಿತು. ಆದರೆ ಅದರ ಹೆಸರು ಮಾತ್ರ “ಮೈಸೂರು”! ವೆಂಕಟರಾಯರಿಗೆ ಬಹಳ ಅಸಮಾಧಾನ. ರಾಜ್ಯೋತ್ಸವಕ್ಕಾಗಿ ಆಕಾಶವಾಣಿಯಲ್ಲಿ ಸಂದೇಶ ನೀಡುವಾಗ ಅವರು “ಕರ್ನಾಟಕ” ಎಂಬ ಸಂದೇಶ ನೀಡುವಾಗ ಅವರು “ಕರ್ನಾಟಕ” ಎಂಬ ಶಬ್ದವನ್ನೇ ಪ್ರಯೋಗಿಸಿದರು. ಅಧಿಕಾರಿಗಳ ವಿಶೇಷ ಅಪ್ಪಣೆ ಪಡೆದು ಅಂದು “ಕರ್ನಾಟಕ ರಾಜ್ಯ” ಎಂಬುದನ್ನು ಆಕಾಶವಾಣಿ ಪ್ರಸಾರ ಮಾಡಬೇಕಾಯಿತು.

“ಕರ್ನಾಟಕ ……. ಕನ್ನಡ” ಎಂದರೆ ಸಾಕು. ವೆಂಕಟರಾಯರ ಹೃದಯ ತುಂಬಿ ಬರುತ್ತಿತ್ತು.

ವೆಂಕಟರಾಯರು ಉತ್ತಮ ಭಾಷಣಕಾರರಲ್ಲ. ಆದರೆ ಅತ್ಯುತ್ತಮ ಯೋಜಕರು ಮತ್ತು ಕಾರ್ಯಕರ್ತರು. ವಿವಿಧ ಸಂಘ ಸಂಸ್ಥೆಗಳನ್ನು ಸ್ಥಾಪಿಸುತ್ತಿದ್ದರು. ಆದರೆ ಅವರಿಗೆ ಎಲ್ಲಿಯೂ ಸ್ಥಾನಗಳು ಅಥವಾ ಪ್ರಾಧಾನ್ಯ ಬೇಕಿರಲಿಲ್ಲ. ಸಂಸ್ಥೆಯಲ್ಲಿ ಯೋಗ್ಯ ಕಾರ್ಯಕರ್ತರನ್ನು ಕಂಡಕೂಡಲೇ ಅಲ್ಲಿಂದ ದೂರ ಸರಿಯುತ್ತಿದ್ದರು.

ಕಿರಿಯರಿಗೆ ಒಳ್ಳೆಯ ಕಾರ್ಯಕ್ಕೆ ಪ್ರೋತ್ಸಾಹ ಕೊಡುವುದು ಅವರು ಹುಟ್ಟು ಗುಣವಾಗಿತ್ತು. ಒಮ್ಮೆ ಕುಮುಟಾದಲ್ಲಿ ವೆಂಕಟರಾಯರು ತಮ್ಮ ಮಗನ ಮನೆಯಲ್ಲಿರುವಾಗ, ಒಬ್ಬ ಬಾಲಕ “ಕಪಿಧ್ವಜ” ಎಂಬ ಯಕ್ಷಗಾನ ಬರೆದುಕೊಂಡು ಬಂದು ಓದಿದ. ಅದನ್ನು ಮೆಚ್ಚಿಕೊಂಡ ವೆಂಕಟರಾಯರು ಕೂಡಲೇ ತಮ್ಮ ಖರ್ಚಿನಿಂದ ಅದನ್ನು ಅಚ್ಚು ಹಾಕಿಸಿ ಪ್ರಕಟಿಸಿದರು.

ವೆಂಕಟರಾಯರು ತಮ್ಮ ಪುಸ್ತಕ ತಾವೇ ಅಚ್ಚು ಹಾಕುತ್ತಿದ್ದರು. ಅವುಗಳನ್ನು ತಾವೇ ಮಾರಾಟ ಮಾಡುತ್ತಿದ್ದರು. ಅವರ ಹತ್ತಿರ ಪುಸ್ತಕ ಕೊಳ್ಳುವವರ ನೂರೆಂಟು ವಿಳಾಸಗಳು. ಪ್ರತಿದಿನ ತಾವೇ ಪುಸ್ತಕಗಳನ್ನು ಅಂಚೆ ಮೂಲಕ ಕಳುಹಿಸುತ್ತಿದ್ದರು.

ಇಳಿವಯಸ್ಸಿನಲ್ಲಿ ವೆಂಕಟರಾಯರು ಕರ್ನಾಟಕದ ಮಹಾ ತಪ್ಪಸ್ವಿಯ ಹಾಗೆ ಕಂಗೋಳಿಸುತ್ತಿದ್ದರು. ಉದ್ದನೆಯ ಬಿಳಿ ಗಡ್ಡ, ಜ್ಞಾನದ ತೇಜಸ್ಸಿನಿಂದ ಹೊಳೆಯುವ ಸೂಕ್ಷ್ಮ ಕಣ್ಣುಗಳು, ಪ್ರಶಾಂತ ಭಾವನೆಯನ್ನು ವ್ಯಕ್ತ ಮಾಡುವ ಪ್ರಸನ್ನ ಮುಖ, ಖಾದಿ ಬಟ್ಟೆಯ ಮೇಲೆ ತೊಟ್ಟ ಶಾಲು ಎಲ್ಲವೂ ವ್ಯಕ್ತಿಗೆ ಗೌರವವನ್ನು ತಂದುಕೊಡುತ್ತಿದ್ದವು.

ಕನ್ನಡ ಜನತೆ ಗೌರವಿಸಿತು

ಕನ್ನಡದ ಜನತೆ ವೆಂಕಟರಾಯರ ಹಿರಿಮೆಯನ್ನು ಮನನ ಮಾಡಿಕೊಂಡಿತು. ಅವರನ್ನು ಅನೇಕ ರೀತಿಯಿಂದ ಭಕ್ತಿಪೂರ್ವಕವಾಗಿ ಗೌರವಿಸಿತು.

೧೯೩೦ರಲ್ಲಿ ಮೈಸೂರಿನಲ್ಲಿ ನೆರವೇರಿದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ವೆಂಕಟರಾಯರನ್ನು ಆಯ್ಕೆ ಮಾಡಿ ಕನ್ನಡಿಗರು ಅವರನ್ನು ಸನ್ಮಾನಿಸಿದರು. ೧೯೪೧ರಲ್ಲಿ ಹೈದರಾಬಾದ್ ಕನ್ನಡಿಗರು ವೆಂಕಟರಾಯರನ್ನು ಸತ್ಕರಿಸಿ ಅವರಿಗೆ “ಕರ್ನಾಟಕ ಕುಲ ಪುರೋಹಿತ” ಎಂಬ ಬಿರುದನ್ನು ನೀಡಿದರು. ೧೯೬೧ರಲ್ಲಿ ಬೆಂಗಳೂರು ನಗರ ಸಭೆ ವೆಂಕಟರಾಯರಿಗೆ ಮಾನಪತ್ರ ಸಮರ್ಪಿಸಿ ಗೌರವಿಸಿತು.

ಇವೆಲ್ಲಕ್ಕಿಂತಲೂ ಹೆಚ್ಚಾಗಿ ವೆಂಕಟರಾಯರಿಗೆ ಬೇರೆ ರೀತಿಯಲ್ಲಿಯೂ ಸನ್ಮಾನವಾಯಿತು. ಭಾರತದ ರಾಷ್ಟ್ರೀಯ ಜಾಗೃತಿ ಮತ್ತು ಕರ್ನಾಟಕದ ಜಾಗೃತಿ ಇವುಗಳನ್ನು ಕಾಣುವ ಕನಸನ್ನು ಅವರು ಕಂಡಿದ್ದರು. ಅವರು ಬದುಕಿರುವಾಗಲೇ ಆ ಕನಸುಗಳು ನನಸಾದವು. ಅಂತೆಯೇ ಅವರಿಗಾದ ಆನಂದ ಅನಂತವಾದುದು.

ಇದೀಗ ಸಾರ್ವಜನಿಕ ಸಂಸ್ಥೆಗಳಿಂದ ಜನರು ಹಣ ವೆಚ್ಚ ಮಾಡುವುದುಂಟು. ಆದರೆ ವೆಂಕಟರಾಯರು ತಮ್ಮ ಹಣವನ್ನೇ ಖರ್ಚು ಮಾಡಿ ಸಾರ್ವಜನಿಕ ಸಂಸ್ಥೆಗಳನ್ನು ಕಟ್ಟಿದರು. ಕರ್ನಾಟಕದ ಸೇವೆಗಾಗಿ ಅವರು ತಮ್ಮ ಆಸ್ತಿಯನ್ನೆಲ್ಲ ಕಳೆದುಕೊಂಡರು. ಆದರೂ ಅಂತಹ ತ್ಯಾಗದಲ್ಲಿ ಅವರು ತೃಪ್ತಿಯನ್ನು ಕಂಡರು.

ಕರ್ನಾಟಕದ ಸೇವೆ – ಭಾರತದ ಸೇವೆ

ಕರ್ನಾಟಕದ ಸೇವೆಯೆಂದರೆ ಭಾರತದ ಸೇವೆಯೆಂದರು ವೆಂಕಟರಾಯರು. ಕರ್ನಾಟಕದ ಸೇವೆಯ ಮೂಲಕ ಭಾರತದ ಸೇವೆ ಎಂದು ನುಡಿದರು. ೧೯೦೬ರಲ್ಲಿ ಬರೋಡದಲ್ಲಿಯ ರಾಷ್ಟ್ರೀಯ ಶಾಲೆಗೆ ಪ್ರಿನ್ಸಿಪಾಲ್ ಆಗಲು ಕರೆಬಂದಿತು. ಆಗ ಅವರು ಅದನ್ನು ನಿರಾಕರಿಸಿ ಹೀಗೆ ಪತ್ರ ಬರೆದರು – “ಕರ್ನಾಟಕವು ನನ್ನನ್ನು ಹೊರದೂಡುವವರೆಗೆ ನಾನು ಕರ್ನಾಟಕದಿಂದ ಹೊರಗೆ ಹೋಗಲಾರೆ”. ವೆಂಕಟರಾಯರ ಕರ್ನಾಟಕದ ಅಭಿಮಾನ ಅವರ ಜೀವದಾಳದಲ್ಲಿ ಬೇರೂರಿದ್ದಿತು.

ಸಾಧನಕೇರಿಯ ಪ್ರಶಾಂತ ನಿಸರ್ಗದಲ್ಲಿ ತಮ್ಮ ಜೀವನವನ್ನು ಕಳೆದು, ೧೯೬೪ರಲ್ಲಿ ಅವರು ಚಿರಶಾಂತಿಯನ್ನು ಪಡೆದರು. “ಮೂಸೂರು ರಾಜ್ಯ” ಎಂಬ ಹೆಸರು “ಕರ್ನಾಟಕ ರಾಜ್ಯ” ಎಂದಾಗಬೇಕು ಎಂಬುದು ಅವರ ಕೊನೆಯ ಇಚ್ಛೆಯಾಗಿದ್ದಿತು. ಅವರು ಸತ್ತು ಹತ್ತು ವರ್ಷಗಳ ಅನಂತರವಾದರೂ ಆಯಿತಲ್ಲ ಅಷ್ಟೇ ಸಮಾಧಾನ.

ತಮ್ಮ ಇಡೀ ಜೀವನವನ್ನು ದೇಶಸೇವೆಗಾಗಿ ಮುಡಿಪು ಮಾಡಿದರು. ದೇಶಕ್ಕಾಗಿ ಬಡತನವನ್ನೂ ಸೆರೆಮನೆ ವಾಸವನ್ನೂ ಅನುಭವಿಸಿದರು. ಆದರೆ ಸ್ವತಂತ್ರ ಭಾರತದಲ್ಲಿ ಯಾವ ಪದವಿಗೂ ಪ್ರಶಸ್ತಿಗೂ ಅವರು ಹಾತೊರೆಯಲಿಲ್ಲ. ಎಲ್ಲ ಕನ್ನಡಿಗರ ಹೃದಯದಲ್ಲಿ ಅವರು ವಾಸವಾಗಿದ್ದಾರೆ. ಅದೇ ಘನವಾದ ಗೌರವ ಅವರಿಗೆ.