ಮಲೆನಾಡಿನಲ್ಲಿ ಸಂಭ್ರಮಕ್ಕೆ ಪರ್ಯಾಯ ಪದಆಲೆಮನೆ. ಅದೊಂದು ಸಂಸ್ಕೃತಿ. ವರುಷದಲ್ಲಿ ಮೂರು ತಿಂಗಳು ತಿರುಗುವ ಗಾಣದ ಕಥೆಯೀಗ ವ್ಯಥೆಅದರ ವೇಗ ಕಡಿಮೆಯಾಗಿದೆ

ಒಂದು ಕಾಲಘಟ್ಟವನ್ನು ಸಾಯಿಮನೆಯ ಲಲಿತಕ್ಕ ಜ್ಞಾಪಿಸುತ್ತಾರೆ-

ಮನೆಪಕ್ಕ ಚಪ್ಪರ. ಕಬ್ಬಿನ ರಾಶಿ. ಬೆಳಿಗ್ಗೆ ನಾಲ್ಕಕ್ಕೇ ಚುರುಕಾಗುವ ಆಲೆಮನೆ. ಗಾಣ ಸುತ್ತುವ ಕೋಣಗಳು. ಕೊಪ್ಪರಿಗೆಯಲ್ಲಿ ಕೊತಕೊತನೆ ಕುದಿವ ಕಬ್ಬಿನ ರಸ, ಅದನ್ನು ಚಪ್ಪರಿಸಲು ಕಾಯುವ ಮಕ್ಕಳು, ಕಬ್ಬಿನಹಾಲು ಕುಡಿಯುವ ತವಕದ ಒಂದಷ್ಟು ಮಂದಿ. ಕಬ್ಬಿನರಸವನ್ನು ಮನೆಗೆ ಒಯ್ಯಲು ಪಾತ್ರೆಯೊಂದಿಗೆ ಬರುವ ನೀರೆಯರು. ‘ಆಲೆಮನೆ’ ಸವಿಯಲು ಬರುವ ನೆಂಟರಿಷ್ಟರು. ಮದುವೆಯ ಸಂಭ್ರಮ! ಒಟ್ಟಿನಲ್ಲಿ ಖುಷಿ.

ಆಲೆಮನೆ – ಕಬ್ಬಿನ ರಸದಿಂದ ಬೆಲ್ಲ ತೆಗೆವ ಮನೆ. ಅದೊಂದು ಸಂಸ್ಕೃತಿ. ಬದುಕಿನ ಭಾಗ. ಅದಕ್ಕೊಂದು ಅಲಿಖಿತ ಕಟ್ಟುಪಾಡು. ಅದರಿಂದ ಪಡೆವ ಸಂತೋಷ ಅನನ್ಯ. ಕಾಲ ಮುಂದೋಗಿದೆ. ನೆನಪುಗಳು ಇತಿಹಾಸವಾಗಿದೆ. ಬದುಕುಳಿದ ಆಲೆಮನೆಗಳು ಕಳೆದ ಕಾಲದ ಕಥನವನ್ನು ಹೇಳುತ್ತವೆ.

ಮಲೆನಾಡಿನ ಕೃಷಿಯಲ್ಲಿ ಕಬ್ಬು ಬೆಳೆಸುವುದು ಒಂದು ಸಂಪ್ರದಾಯ. ಪ್ರತೀ ಮನೆಯಲ್ಲಿ ಕೋಣ, ಗಾಣ. ವಾಣಿಜ್ಯ ಬೆಳೆಗಳ ಆಗಮನ, ನೀರಿನ ಅಲಭ್ಯ, ಕಾಡುಪ್ರಾಣಿಗಳ ಹಾವಳಿ ಮತ್ತು ‘ಪುರುಸೊತ್ತಿಲ್ಲದ’ ಬದುಕಿನಿಂದಾಗಿ ಕಬ್ಬು ಕೃಷಿಗೆ ಹಿಂಬಡ್ತಿ! ಪರಿಣಾಮ, ಆಲೆಮನೆಗಳು ಸೊರಗುತ್ತಿವೆ.

‘ಈಗಲೂ ನಮ್ಮಲ್ಲಿ ವರುಷಕ್ಕೆ ಬೇಕಾದಷ್ಟು ಬೆಲ್ಲ ತೆಗೆಯಲು ಕಬ್ಬು ಬೆಳೆಯುತ್ತೇವೆ. ಮನೆವಾರ್ತೆಗೆ ಮಿಕ್ಕಿದ ಬೆಲ್ಲ ಮಾರಾಟ’ ಎಂಬ ಸಂತೋಷ ದೇವಿಮನೆಯ ಗಣಪತಿ ಹೆಗಡೆಯವರದು. ಇಂತಹ ಸಂತೋಷದ ಕುಟುಂಬಗಳು ಬೇಕಾದಷ್ಟಿದ್ದುವು.

ಆಲೆಮನೆ ವೈಭವ

ಆಲೆಮನೆಯಲ್ಲಿ ನಾಲ್ಕಕ್ಕೆ ಬೆಳಗಾಗುತ್ತದೆ. ಚಳಿಗಾಲವಾದ್ದರಿಂದ ಕಂಬಳಿ ಹೊದ್ದು ಕೆಲಸ ಕಾರ್ಯ. ಒಂದೆಡೆ ಹಿಂದಿನ ರಾತ್ರಿ ಕಟಾವು ಮಾಡಿ ರಾಶಿ ಹಾಕಿದ ಕಬ್ಬು ಗಾಣದೊಳಕ್ಕೆ ಹೊಕ್ಕು ನೀರಾಗಿ ಹೊರಬರುತ್ತದೆ. ಇದು ಕೊಪ್ಪರಿಗೆಯಲ್ಲಿ ಕುದಿದು ಬೆಲ್ಲವಾಗುತ್ತದೆ! ಆದರಿದು ಹೇಳಿದಷ್ಟು ಸುಲಭವಲ್ಲ.

ಒಂದು ಹೊತ್ತಿಗೆ ಎರಡು ‘ಅಡಿಗೆ’. ಅಂದರೆ ಎರಡು ಸಲ ಕಬ್ಬಿನ ಹಾಲು ಕುದಿಸಿ ಬೆಲ್ಲವಾಗಿಸುವುದು ಎಂದರ್ಥ. ‘ಎಸರು’ ಎಂದೂ ಕರೆಯುವುದಿದೆ. ಒಮ್ಮೆಗೆ (ಒಂದು ಅಡಿಗೆ) ಹದಿನಾರು ಡಬ್ಬ ಹಾಲು ಕುದಿದರೆ, ಎರಡೂವರೆ ಡಬ್ಬಿ ಬೆಲ್ಲವಾಗುತ್ತದೆ. ಒಳ್ಳೆಯ ಕಬ್ಬಾದರೆ ಮೂರು ಡಬ್ಬಿ ಆಗುವುದೂ ಇದೆ. ಇಷ್ಟಾಗಲು ಬರೋಬ್ಬರಿ ನಾಲ್ಕು ಘಂಟೆ. ಒಬ್ಬ ಒಲೆಗೆ ಸೌದೆ ಹಾಕುತ್ತಿದ್ದರೆ, ಮತ್ತೊಬ್ಬ ಸೌಟಿನಿಂದ ಹಾಲನ್ನು ತಿರುವುತ್ತಿರಬೇಕು. ಇನ್ನಿಬ್ಬರು ಕುದಿಯುತ್ತಿದ್ದಂತೆ ಬಟ್ಟೆಯಿಂದ ಹಾಲನ್ನು ಗಾಳಿಸಿ ಕಸವನ್ನು ತೆಗೆಯುತ್ತಿರಬೇಕು. ಒಬ್ಬನಿಗೆ ಗಾಣಕ್ಕೆ ಕಬ್ಬು ಉಣಿಸುವುದೇ ಕೆಲಸ. ಹೀಗೆ ಐದಾರು ಮಂದಿಯ ಶ್ರಮಬೇಡುವ ಕಾಯಕ.

ಬೆಲ್ಲ ಅಂದಾಗ ಫಕ್ಕನೆ ನೆನಪಾಗುವುದು, ಮಾರುಕಟ್ಟೆಯಲ್ಲಿ ಸಿಗುವ ಅಚ್ಚುಬೆಲ್ಲ. ಆಲೆಮನೆಯಲ್ಲಿ ತಯಾರಾಗುವುದು ಈ ರೀತಿಯ ಬೆಲ್ಲವಲ್ಲ. ಇಲ್ಲಿ ಸ್ವಲ್ಪ ಗಟ್ಟಿಯಾದ, ಆದರೆ ಧಾರೆಬಿಡದ ‘ಜೋನಿ ಬೆಲ್ಲ’. ಮಲೆನಾಡಿನ ಅಡುಗೆಮನೆಯಲ್ಲಿ ಜೋನಿಬೆಲ್ಲ ಇಲ್ಲದೆ ಅಡುಗೆಯೂ ಆಗುವುದಿಲ್ಲ, ಊಟವೂ ನಡೆಯುವುದಿಲ್ಲ!

ಮನೆಯ ಆವಶ್ಯಕತೆ ಮತ್ತು ಕಬ್ಬಿನ ಬೆಳೆಯನ್ನು ಅವಲಂಬಿಸಿ ‘ಅಡಿಗೆ’. ‘ಮೊದಲು ನಮ್ಮಲ್ಲಿ ಐವತ್ತು ಅಡಿಗೆಯಾಗುತ್ತಿತ್ತು. ಈಗ ಒಂದು ಅಡಿಗೆಯೂ ಕಷ್ಟ’ ಎನ್ನುತ್ತಾರೆ ಗಣಪತಿ ಹೆಗಡೆ.

ಜೋನಿ ಬೆಲ್ಲಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಮೊದಲೇ ಕಾದಿರಿಸುತ್ತಾರೆ. ಒಂದು ಡಬ್ಬಕ್ಕೆ ಮಾರುಕಟ್ಟೆ ದರ ೪೫೦-೫೫೦ ರೂಪಾಯಿ. ಒಂದು ಡಬ್ಬ ಬೆಲ್ಲ ಅಂದರೆ ೨೫ ಕಿಲೋ. ‘ನಲವತ್ತು ವರುಷದ ಹಿಂದೆ ಒಂದು ಡಬ್ಬ ಬೆಲ್ಲಕ್ಕೆ ೧೦-೨೦ ರೂಪಾಯಿ ಇತ್ತು’ ನೆನಪಿಸುತ್ತಾರೆ ಲಲಿತಕ್ಕ.

ಗಾಣ ತಿರುಗಿಸಲು ಕೋಣಗಳ ಅವಲಂಬನೆ ಪಾರಂಪರಿಕವಾದುದು. ಕುಂದಾಪುರದಿಂದ ಕೋಣಗಳನ್ನು ಆಲೆಮನೆಗೆ ಒದಗಿಸುವ ವ್ಯವಸ್ಥೆ ಈಗಲೂ ಇದೆ. ದಶಂಬರದಿಂದ ಎಪ್ರಿಲ್ ತನಕ ನಡೆಯುವ ಆಲೆಮನೆಗೆ ಕೋಣ ಒದಗಿಸುವ ಮೂಲಕ-ಕೋಣದ ಮಾಲಿಕನ ಜೀವನವೂ ಸಾಗುತ್ತದೆ, ಕೋಣನ ಹೊಟ್ಟೆಗೂ ಒಂದಷ್ಟು ಬೀಳುತ್ತದೆ.

‘ಯಾಂತ್ರೀಕೃತ ಯುಗ. ಹೊಸಬರು ಯಾರೂ ತಯಾರಾಗುತ್ತಿಲ್ಲ. ಹತ್ತಿಪ್ಪತ್ತು ವರುಷದಿಂದ ಬರುವವರೇ ಕೋಣನ ಹಿಂದೆ ಈಗಲೂ ಬರುತ್ತಿದ್ದಾರೆ. ಇವರ ತಲೆಮಾರು ಮುಗಿದಾಗ ಕೋಣನ ಮೂಲಕ ಎಳೆವ ಗಾಣವೂ ಇತಿಹಾಸ ಸೇರೀತು!’ ಸುಬ್ರಾಯ ಹೆಗಡೆ ಸಾಯಿಮನೆಯವರ ಆತಂಕ.

ಮೊದಲು ಪ್ರತೀ ಮನೆಯಲ್ಲಿ ಗಾಣವಿರುತ್ತಿತ್ತು. ಆಗ ‘ಇಂತಹವರ ಗಾಣಕ್ಕೆ ಇಂತಹುದೇ ಕೋಣ’ ಎಂಬ ಲೆಕ್ಕಾಚಾರವಿತ್ತಂತೆ.

ಒಂದು ಹೊತ್ತಿಗೆ ಎರಡು ‘ಅಡಿಗೆ’ಯಂತೆ ದಿವಸಕ್ಕೆ ನಾಲ್ಕು ಅಡಿಗೆ. ಅಷ್ಟಕ್ಕೆ ಕೋಣಗಳ ವಾರೀಸುದಾರರಿಗೆ ೨೪೦ ರೂಪಾಯಿ ವೇತನ. ಸಿಗುವ ಕಬ್ಬಿನ ತೆಂಡೆ ಕೋಣಕ್ಕೆ ಆಹಾರ. ಜೊತೆಗೆ ಒಂದು ಕಿಲೋ ಅಕ್ಕಿ. ಒಂದೇ ಕಡೆಯಲ್ಲಿ ೨೦ ಅಡಿಗೆ ಆದರೆ ಇವರಿಗೆ ಲಾಭ. ಕೋಣ ಉಸ್ತುವಾರಿಕೆ ಮಾಡುವವರೇ ಕೊಪ್ಪರಿಗೆ ಮತ್ತು ಗಾಣವನ್ನು ಗೊತ್ತುಮಾಡಬೇಕು. ಹಲವಾರು ವರುಷಗಳ ಸಂಪರ್ಕವಿದ್ದುರಿಂದ ‘ಎಲ್ಲೆಲ್ಲಿ ಇದೆ’ ಎಂಬುದು ಅವರಿಗೆ ಗೊತ್ತಿದೆ. ಇವುಗಳ ಸಾಗಾಟದ ಹೊಣೆ ಆಲೆಮನೆಯ ಯಜಮಾನನದ್ದು. ಇವಿಷ್ಟು ಆಲೆಮನೆಗೆ ಬಂದಾಗ ಒಲೆ ಸಿದ್ಧವಾಗಿರಬೇಕು.

ಒಂದು ಹೊತ್ತಿನ ಅಡಿಗೆ ಆದ ನಂತರ ಸ್ವಲ್ಪ ವಿಶ್ರಾಂತಿ. ನಂತರ ಆ ದಿನ ಸಂಜೆ ಮತ್ತು ಮರುದಿನದ ಬೆಳಗ್ಗಿನ ಅಡಿಗೆಗೆ ಬೇಕಾದ ಕಬ್ಬು ಕಟಾವ್. ಆಗ ಸಂಜೆಯ ಅಡಿಗೆಗೆ ಆಲೆಮನೆ ಸಿದ್ಧವಾಗಿರುತ್ತದೆ.

ಕೋಣಗಳ ಬದಲಿಗೆ ಈಗ ಯಂತ್ರಗಳು ಬಂದಿವೆ. ‘ಕೆಲಸ ವೇಗವಾಗುತ್ತದೆ. ಯಂತ್ರದಿಂದ ಹಿಂಡಿದ ರಸ ಜಲ್ಲೆಯೊಂದಿಗೆ ಹುಡಿಯಾಗಿ ಅದರ ಹಿಟ್ಟೂ ಹಾಲಿನೊಂದಿಗೆ ಸೇರುವುದರಿಂದ ಇದರ ಬೆಲ್ಲದ ರುಚಿ ಅಷ್ಟಕ್ಕಷ್ಟೇ. ಆದರೆ ಕೋಣ ಎಳೆದ ಗಾಣದ ಕಬ್ಬಿನ ಹಾಲು ಹಾಗಲ್ಲ. ಅದು ಮಧುರ. ಅದರ ಬೆಲ್ಲದ ರುಚಿಯೇ ಬೇರೆ’ ಬಾಯಿ ಚಪ್ಪರಿಸುತ್ತಾರೆ ಕುಪ್ಪ ದೇವಿಮನೆ.

ಆಲೆಮನೆಯೊಳಗೆ ಚಪ್ಪಲಿ ಹಾಕಿ ಪ್ರವೇಶ ಕೂಡದು. ಗಾಣದಿಂದ ಹಾಲು ತೆಗೆದ ಕೂಡಲೇ ಅದನ್ನು ದೇವರಿಗೆ ಸಮರ್ಪಿಸುವ ದ್ಯೋತಕವಾಗಿ ಒಂದು ಲೋಟ ಹಾಲನ್ನು ನೀರಿಗೆ ಸಮರ್ಪಿಸುತ್ತಾರೆ. ಅದೂ ಎರಡು ಹೊತ್ತು. ನಂತರವಷ್ಟೇ ಇತರರ ಹೊಟ್ಟೆಗೆ. ‘ಆಲೆಮನೆಯಲ್ಲಿ ಹಾಲು ದಾನಮಾಡಬೇಕು’ ಎಂಬ ನಂಬುಗೆ. ‘ಮೊದಲು ಗಾಣದ ಯಜಮಾನನಿಗೆ ಎರಡೂ ಹೊತ್ತು ಒಂದು ಕೊಡ ಹಾಲನ್ನು ಕೊಡುವ ಪದ್ದತಿ’ ಇತ್ತು. ಆಲೆಮನೆಯಲ್ಲೇ ಕಬ್ಬಿನ ಹಾಲಿನಿಂದ ಮಾಡಿದ ‘ತೊಡದೇವು’ ತಿನ್ನಬೇಕು – ನೆನಪಿಸುತ್ತಾರೆ ಕುಪ್ಪ.

ಆಲೆಮನೆ ಕ್ಷೀಣಿಸುತ್ತಿವೆ!

ಹೌದು. ಇದು ಹೆಚ್ಚು ಶ್ರಮ ಬೇಡುವ ಕೆಲಸ. ಮೊದಲು ಕೂಡುಕುಟುಂಬಗಳಿರುತ್ತಿತ್ತು. ಮನೆಯಲ್ಲಿ ಅಣ್ಣ, ತಮ್ಮ, ದೊಡ್ಡಪ್ಪ, ಚಿಕ್ಕಪ್ಪ….ಹೀಗೆ ಹಲವು ಸದಸ್ಯರು. ಈಗ ಮನೆಗಳು ಬಿಡಿಬಿಡಿಗಳಾಗಿವೆ. ಒಂದೊಂದು ಮನೆಯಲ್ಲಿ ಒಬ್ಬಿಬ್ಬರು ಮಾತ್ರ. ಇದ್ದ ಕೃಷಿಯನ್ನೇ ನೋಡಿಕೊಳ್ಳಲು ಪುರುಸೊತ್ತಿಲ್ಲ. ಮತ್ತೆ ಆಲೆಮನೆಯ ಉಸಾಬರಿ ಯಾರಿಗೆ ಬೇಕು?

ಗದ್ದೆಗಳು ಮಾಯವಾಗುತ್ತಿವೆ. ಕಬ್ಬಿನ ಕೃಷಿ ವಿರಳವಾಗುತ್ತಿದೆ. ಕೂಲಿಕಾರ್ಮಿಕರ ಅಭಾವ ಒಂದೆಡೆಯಾದರೆ, ವಿಪರೀತ ಕೂಲಿದರ ಮತ್ತೊಂದೆಡೆ. ಹೀಗಾಗಿ ಬೆಲ್ಲ ತಯಾರಿಯ ‘ಉತ್ಪಾದನಾ ವೆಚ್ಚ’ವೇ ವಿಪರೀತವಾಗುತ್ತದೆ. ಇದರಿಂದಾಗಿ ಚಿಕ್ಕ ಕೃಷಿಕರ ಆಲೆಮನೆ ಮುಚ್ಚಿದೆ! ಸ್ವತಃ ದುಡಿವ ಕೃಷಿಕರು ಆಲೆಮನೆಯನ್ನು ಉಳಿಸಿಕೊಂಡಿದ್ದಾರೆ. ಹಿಂದೆಲ್ಲಾ ಖರ್ಚು ವೆಚ್ಚಗಳ ಬಗ್ಗೆ ನಿಗಾವಿರಲಿಲ್ಲ. ಆಲೆಮನೆಯೆಂದರೆ ‘ಮಜಾ’! ಈಗ ಬದುಕೇ ಲೆಕ್ಕ!

ಪ್ರೀತಿ, ವಿಶ್ವಾಸ, ನಂಬುಗೆಗಳು ‘ಪದಕೋಶ’ಗಳಲ್ಲಿ ಹುಡುಕುವ ಸ್ಥಿತಿ! ಅಂತಹುದರಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ದುಡಿವ ಮಂದಿ ಎಷ್ಟು?

“ಘಟ್ಟದ ಕೆಳಗಿನಿಂದ ಕೋಣಗಳು ಬರುತ್ತಿದ್ದುವು. ಈಗ ಅವುಗಳ ಸಂಖ್ಯೆ ಕಡಿಮೆಯಾಗಿವೆ. ಗಾಣ ತಿರುಗಿಸಲು ‘ಡೀಸಿಲ್ ಚಾಲಿತ ಕ್ರಷರ್’ ಯಂತ್ರಗಳು ಬಂದಿವೆ. ಇದರಿಂದ ಬರುವ ಹಾಲಿನ ಪ್ರಮಾಣ ಜಾಸ್ತಿ. ಪೂರ್ತಿ ರಸ ಹಿಂಡಿ ಬರುವ ತ್ಯಾಜ್ಯ ಬೆಲ್ಲ ಮಾಡಲು ಉರುವಲಾಗಿ ಬಳಕೆಯಾಗುತ್ತದೆ. ಇದನ್ನೇ ವೃತ್ತಿಯನ್ನಾಗಿ ಮಾಡುವ ಕೆಲವರು ಸಾಗರ ಸುತ್ತಮುತ್ತ ಇದ್ದಾರೆ. ಚಿಕ್ಕ ಕೃಷಿಕರು ಕಬ್ಬನ್ನು ಸಾಗಿಸಿ, ಇಂತಿಷ್ಟು ಮೊತ್ತ ಪಾವತಿಸಿದರೆ ಆಯಿತು. ಬೆಲ್ಲ ರೆಡಿ. ತಲೆನೋವಿಲ್ಲ.” ಕೃಷಿಕ ನಾಗೇಂದ್ರ ಸಾಗರ್ ಹೇಳುತ್ತಾ, “ಬಹುತೇಕ ಮನೆಗಳಲ್ಲಿ ಗಾಣವಿದೆ. ಅದು ಹಳೆಯ ಮೋಡೆಲ್. ರಿಪೇರಿ ಕೂಡಾ ಕಷ್ಟ. ಇಂತಹ ಗಾಣಗಳು ಮೂಲೆ ಸೇರಿವೆ.”

ಕೆಲವಡೆ ಬೆಲ್ಲದಿಂದ ‘ಭಟ್ಟಿ’ ಮಾಡುವುದೂ ಇತ್ತು. ಸರಕಾರದ ಕಾನೂನು ಕ್ರಮಗಳಿಂದಾಗಿ ಅವುಗಳಿಗೆ ತಡೆಯಾಗಿವೆ. ಇದರಿಂದಾಗಿ ‘ಭಟ್ಟಿ’ಪ್ರಿಯರೂ ಆಲೆಮನೆಯಿಂದ ದೂರ!

ಈ ಮಧ್ಯೆ-

ಶಿರಸಿಯ ದೊಡ್ನಳ್ಳಿಯಲ್ಲಿ ಈ ವರುಷ ಆಲೆಮನೆಯ ಸಂಖ್ಯೆ ಜಾಸ್ತಿ – ಪತ್ರಕರ್ತ ಶಿವಾನಂದ ಕಳವೆಯವರು ಹೊಸ ಸುದ್ದಿ ಹೊತ್ತು ತಂದರು. ಅಲ್ಲಿನ ಕಬ್ಬಿನ ತಳಿಯೇ ಬೇರೆಯಂತೆ. ಆ ಕಬ್ಬಿನಿಂದ ಮಾಡಿದ ಬೆಲ್ಲ ‘ದೊಡ್ನಳ್ಳಿ ಬೆಲ್ಲ’ವೆಂದೇ ಪ್ರಸಿದ್ಧ. ಕಬ್ಬು ಅರೆಯುವ ರೀತಿ, ಒಲೆಯ ವಿನ್ಯಾಸ- ಬದಲಾದ ವ್ಯವಸ್ಥೆಗಳು.

ಕಾಲ ಬದಲಾಗುತ್ತಿದೆ. ಜನರ ಮನೋಸ್ಥಿತಿಯೂ ಬದಲಾಗುತ್ತಿದೆ. ಕೋಣಗಳ ಸ್ಥಾನಕ್ಕೆ ಯಂತ್ರಗಳು ಬಂದಿವೆ. ಅದು ಕಾಲದ ಅನಿವಾರ್ಯ. ಕೊಳ್ಳುವವರೂ ಇದ್ದಾರೆ, ತಿನ್ನುವವರೂ ಇದ್ದಾರೆ. ಆದರೆ ಕಬ್ಬಿನ ಬೆಳೆಯಿಲ್ಲ! ಬೆಳವ ಗದ್ದೆಗಳೇ ಇಲ್ಲ! ಈ ‘ಇಲ್ಲ’ಗಳ ನಡುವೆಯೂ ಈಗಲೂ ಆಲೆಮನೆ ಉಸಿರಾಡುತ್ತಿದೆ. ಅದೇ ವೈಭವ. ಅದೇ ಸಹಕಾರ ಮನೋಭಾವ.