ಆಳಂದ

ತಾ. ಆಳಂದ
ದೂರ: ೩೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ ೪೩ ಕಿ.ಮೀ ದೂರದಲ್ಲಿದೆ

ಸಾವಿರಾರು ವರ್ಷಗಳ ಭಾರತೀಯ ಚರಿತ್ರೆಯೆಂದರೆ ಕೇವಲ ಆಳುವ ವರ್ಗದ ಇತಿಹಾಸವೇ ಎಂದು ಪರಿಗಣಿಸಲಾಗುತ್ತಿದೆ. ಹೀಗಾಗಿ ನಮಗೆ ದೊರಕುವುದು ಈ ದೇಶದ ರಾಜಕೀಯ ಚರಿತ್ರೆ ವಿನಃ ತತ್ಪೋದೇಶಗಳಿಂದ ಸಾಮಾಜಿಕ, ಧಾರ್ಮಿಕ ಸ್ವಾಸ್ಥ್ಯಕ್ಕಾಗಿ ಶ್ರಮಿಸಿ ಜನಪದದ ನಡುವೆ ದೇವರಾಗಿ ಹೋದ ದಾರ್ಶನಿಕರ, ಸತ್ಪುರುಷರ ಚರಿತ್ರೆ ದೊರಕುವುದು ತೀರ ವಿರಳ.

ಗುಲಬರ್ಗಾ ನಗರದಿಂದ ೪೨ ಕಿ.ಮೀ ದೂರದ ಪಶ್ಚಿಮ ದಿಕ್ಕಿನಲ್ಲಿ ತಾಲೂಕಾ ಆಳಂದ ಇದ್ದು ಹಜರತ್ ಲಾಡ್ಲೆ ಮಶಾಕ್ ರವರ ಎತ್ತರವಾದ ಬಿಳಿ ಗುಮ್ಮಟ ಹಾಗೂ ಆಕಾಶಕ್ಕೆ ಎದ್ದು ಕಾಣುತ್ತಿರುವ ಮೀನಾರಗಳು ಇನ್ನಿತರ ಸಣ್ಣ, ದೊಡ್ಡ ಕಟ್ಟಡಗಳು ಇದಗಾ ಮಸಜೀದ ಕೂಡಿ ಧರ್ಮದ ನೋಟ ನೀಡುತ್ತದೆ.

ಲಾಡ್ಲಾ ಮಶಾಕ್ ನಾಮದಿಂದ ಖ್ಯಾತರಾದ ಹಜರತ ಮಹ್ಮದ ಅಲ್ಲಾವುದ್ದೀನ್ ಅನ್ಸಾರಿ ಅವರು ಕಿಲೋಬಡಿ ಎಂಬಲ್ಲಿ ಹಿತ ೨.೨೦ ರಬ್ಬನ ಸಾನಿ ತಿಂಗಳಲ್ಲಿ ಜನಿಸಿದರು. ತಂದೆ ಹಜರತ್ ಸುಲ್ತಾನ ಷೇರ್ ಮುಬಾರಕ್ ಫಕರುದ್ದೀನ್ ಅನ್ಸಾರಿ ತಾಯಿ ಹಜರತ್ ಬೇಬಿ ರಾನಿ ಖುಸ್ರೋ.

ಇಲ್ಲಿ ಪ್ರತಿ ವರ್ಷ ಮಾರ್ಚ್ – ಏಪ್ರಿಲ್ ನಲ್ಲಿ ಉರ್ಸ್ ವಿಜ್ರಂಭಣೆಯಿಂದ ನಡೆಯುತ್ತದೆ. ಈ ಒಂದು ಜಾತ್ರೆಗೆ ದೇಶದ ಮೂಲೆ – ಮೂಲೆಗಳಿಂದ ಜನಸಾಗರ ಹರಿದು ಬರುತ್ತದೆ.

 

ನರೋಣಾ

ತಾ. ಆಳಂದ
ದೂರ: ೪೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ ೩೦ ಕಿ.ಮೀ ದೂರದಲ್ಲಿದೆ.

ಆಳಂದದಿಂದ ಸುಮಾರು ೪೦ ಕಿ.ಮೀ. ದೂರದಲ್ಲಿರುವ ಒಂದು ದೊಡ್ಡ ಗ್ರಾಮ. ಶ್ರೀ ರಾಮಚಂದ್ರನು ಮನಸ್ಸಿಗೆ ಅಶಾಂತಿ ಉಂಟಾಗಿ ತೀರ್ಥಕ್ಷೇತ್ರಗಳ ಯಾತ್ರೆ ಮಾಡುತ್ತಾ ಶ್ರೀ ಕ್ಷೇತ್ರಪಾಲಕ್ಕೆ ಬಂದು ಇಲ್ಲಿ ಸುಖನಿದ್ರೆ ಮಾಡಿದನು.

ನರೋಣಾದಿಂದ ಸುಮಾರು ೩ ಕಿ.ಮೀ. ದೂರದಲ್ಲಿ ವಿಶಾಲ ಪ್ರದೇಶದಲ್ಲಿ ಈ ಕ್ಷೇತ್ರ ಸ್ಥಾಪಿತವಾಗಿದೆ. ಭಾರತ ಭೂಮಿಯಲ್ಲಿರುವ ಕ್ಷೇತ್ರದರ್ಶನದಿಂದ ದೊರಕುವ ಫಲ ಈ ಕ್ಷೇತ್ರ ದರ್ಶನದಿಂದ ದೊರಕುವದೆಂದು ಈ ಕಾರಣದಿಂದ ಕ್ಷೇತ್ರಫಲ ಎಂಬ ಹೆಸರು ಅನ್ವರ್ಥಕವಾಗಿದೆ. ಇಲ್ಲಿ ಕ್ಷೇಮ ಲಿಂಗೇಶ್ವರ ಗುಡಿ ಪ್ರಮುಖವಾಗಿದೆ.

ಇಲ್ಲಿ ಗುಪ್ತ ತೀರ್ಥ, ನರಸಿಂಹ ತೀರ್ಥ, ಲಕ್ಷ್ಮೀತೀರ್ಥ ಸರ್ವತೀರ್ಥ ಹಾಗೂ ರಾಮತೀರ್ಥ ಎಂಬ ಎಂಟು ತೀರ್ಥಗಳಿವೆ. ಕ್ಷೇಮಲಿಂಗೇಶ್ವರ ದೇವಸ್ಥಾನ ದೊಡ್ಡದಿದ್ದು ಪುರಾತನವಾಗಿದೆ. ಶ್ರಾವಣ ಮಾಸ ಪೂರ್ತಿ ಅಮಾವಸ್ಯೆ ಹುಣ್ಣಿಮೆ ದಿನಗಳಲ್ಲಿ ಭಜನೆ, ಕೀರ್ತನೆ ವಿಶೇಷ ಪೂಜೆ ಜರುಗುತ್ತವೆ.

ಕ್ಷೇತ್ರಫಲ ಒಂದು ರಮಣೀಯ ಹಾಗೂ ಪುಣ್ಯ ಸ್ಥಳವಾಗಿದ್ದು, ಪೌರಾಣಿಕ ಹಿನ್ನೆಲೆ ಇದೆ. ಇಂದ್ರಾದಿ ದೇವತೆಗಳು ಈ ಸ್ಥಳದಲ್ಲಿ ತಪಗೈದರೆಂಬ ವಿಶೇಷತೆ ಈ ಸ್ಥಳಕ್ಕಿದೆ.

 

ಜಿಡಗಾ

ತಾ. ಆಳಂದ
ದೂರ: ೧೧ ಕಿ.ಮೀ
ಜಿಲ್ಲಾ ಕೇಂದ್ರದಿಂದ ೫೫ ಕಿ.ಮೀ ದೂರದಲ್ಲಿದೆ.

ಆಳಂದದಿಂದ ಸುಮಾರು ೧೧ ಕಿ.ಮೀ. ದೂರದಲ್ಲಿರುವ ಆಳಂದದಿಂದ ಸೋಲಾಪುರಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ. ಶಖಾಪುರದ ಬಳಿ ಎಡಗಡೆ ಬರುತ್ತದೆ.

ಈ ಗ್ರಾಮ ಜಿಡಗಾ ಮುತ್ಯಾರವರ ಮಠದಿಂದಾಗಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಿಂದ ಪ್ರಸಿದ್ಧಿ ಪಡೆದಿದೆ. ಈ ಗ್ರಾಮಕ್ಕೆ ಅಂಟಿಕೊಂಡಿರುವ ಗುಡ್ಡದ ಮೇಲೆ ಜಿಡಗಾ ಮುತ್ಯಾರವರೆಂದು ಪ್ರಖ್ಯಾತಿ ಪಡೆದ ಶ್ರೀ ಸಿದ್ಧರಾಮ ಶಿವಯೋಗಿಗಳು ತಮ್ಮ ಮಠವನ್ನು ಸ್ಥಾಪಿಸಿದ್ದಾರೆ.

ಇದರ ಜೊತೆಯಲ್ಲಿ ಕೋಟನೂರಿನಲ್ಲಿ ಈ ಮಠದ ಶಾಖೆಯನ್ನು ತೆರೆಯುವ ಮೂಲಕ ಭವ್ಯವಾದ ಕಟ್ಟಡ, ಕಲ್ಯಾಣ ಮಂಟಪ, ಸಭಾ ಭವನಗಳನ್ನು ನಿರ್ಮಿಸಿ ಸದಾ ಅನ್ನ ದಾಸೋಹ ನಡೆಯುವಂತೆ ಮಾಡಿದ್ದಾರೆ. ಸದ್ಯದ ಪೀಠಾಧಿಪತಿಗಳಾದ ಪೂಜ್ಯಶ್ರೀ ಮುರಘರಾಜೇಂದ್ರ  ಮಹಾಸ್ವಾಮಿಗಳು, ಮುಗಳಖೋಡ, ಜಿಡಗಾ ಮತ್ತು ಕೋಟನೂರು ಈ ಮಠಗಳನ್ನು ಮುನ್ನಡೆಸುವುದರ ಜೊತೆಗೆ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

 

ಮದಗುಣಕಿ

ತಾ.ಆಳಂದ
ದೂರ: ೨೪ ಕಿ.ಮೀ.
ಜಿಲ್ಲಾ ಕೇಂದ್ರದಿಂದ ೪೫ ಕಿ.ಮೀ ದೂರದಲ್ಲಿದೆ.

ಆಳಂದದಿಂದ ಸುಮಾರು ೨೪ ಕಿ.ಮೀ. ದೂರದಲ್ಲಿರುವ ಆಳಂದ ಮಾದನ ಹಿಪ್ಪರಗಾ ಮಾರ್ಗವಾಗಿ ಹೋಗಲು ಬಸ್ಸಿನ ಸೌಲಭ್ಯ ಇರುವ ಗ್ರಾಮ.

ಗ್ರಾಮವು ಕಾಮಾಲೆ ರೋಗದ ಔಷಧಕ್ಕೆ ಪ್ರಖ್ಯಾತಿ ಪಡೆದಿದೆ. ಶ್ರೀ ಶರಣು ಭಜಂತ್ರಿ ಎಂಬುವವರು ಈ ರೋಗಕ್ಕೆ ಹಾಲಿನಲ್ಲಿ ಔಷಧ ಬೆರೆಸಿ ಕೇವಲ ಬುಧವಾರ ಮತ್ತು ರವಿವಾರಗಳಂದು ಮಾತ್ರ ಕೊಡುತ್ತಾರೆ.

ಈ ಗ್ರಾಮ ಸ್ವಾತಂತ್ರ್ಯ ಹೋರಾಟಗಾರರಿಂದ ಮತ್ತು ದುದನಿ ಕ್ಯಾಂಪಿನ ಮುಖ್ಯಸ್ಥರಾದ ಶ್ರೀ ಗುರುಭೀಮರಾವ ಬಸವಂತರಾವ ಪಾಟೀಲರ ಜನ್ಮಸ್ಥಳವಾಗಿದೆ. ಅವರ ಜೊತೆಗೆ ನಿಜಾಮ ಸರಕಾರದ ವಿರುದ್ಧ ಹೋರಾಡಿದ ಶ್ರೀ ಮಲ್ಲೇಶಪ್ಪಾ ಸಣಮನಿಯು ಕೂಡಾ ಇದೇ ಗ್ರಾಮದವರು.

ಈ ಗ್ರಾಮದಲ್ಲಿ ಹುತ್ತಿನಲ್ಲಿ ಬೆಳೆದ ಹನುಮಾನ ದೇವಾಲಯವಿದೆ. ಮಕ್ಕಳಾಗದ ಹೆಣ್ಣು ಮಕ್ಕಳು ಈ ಹುತ್ತಿನ ಮಣ್ಣನ್ನು ತಿನ್ನುತ್ತಿದ್ದರೆಂದು ತಿಳಿದು ಬರುತ್ತದೆ.

 

ಧುತ್ತರಗಾಂವ

ತಾ. ಆಳಂದ
ದೂರ: ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ ೪೦ ಕಿ.ಮೀ. ದೂರದಲ್ಲಿದೆ.

ಆಳಂದದಿಂದ ದಕ್ಷಿಣಕ್ಕೆ ಸುಮಾರು ೨೦ ಕಿ.ಮೀ. ಅಂತರದಲ್ಲಿರುವ ಆಳಂದದಿಂದ ಗುಲಬರ್ಗಾಕ್ಕೆ ಹೋಗುವ ರಾಜ್ಯ ಮುಖ್ಯ ರಸ್ತೆಯಿಂದ ಬಲಕ್ಕೆ ೫ ಕಿ.ಮೀ. ಅಂತರದಲ್ಲಿರುವ ಒಂದು ದೊಡ್ಡ ಗ್ರಾಮ.

ಸುಮಾರು ೧೫ ನೇ ಶತಮಾನದಲ್ಲಿ ಇಲ್ಲಿ ಒಬ್ಬ ಶರಣರು ಆಗಿ ಹೋಗಿದ್ದಾರೆ. ಅವರ ಹೆಸರು ವಿರೇಶನೆಂದು ಕರೆಯುತ್ತಿದ್ದರು. ಶ್ರೀ ಶಂಭುಲಿಂಗ ಮತ್ತು ಗಿರಿಜಾ ದೇವಿಯವರು ಉದರದಲ್ಲಿ ಹುಟ್ಟಿದ ವಿರೇಶ ಶರಣರು ಸಂಸಾರಸ್ಥರು. ಅವರ ಹೆಂಡತಿ ವೀರಮ್ಮಾ ಶರಣರು ಕಂಬಾರ ಮನೆತನದಲ್ಲಿ ಹುಟ್ಟಿ ಕಂಬಾರಿಕೆ ಕಾಯಕವನ್ನು ಮಾಡುತ್ತ ಶರಣರಾಗಿ ಬೆಳೆದರು. ಈ ಶರಣರ ಪವಾಡದಿಂದಲೇ ಧುತ್ತರವಾರಿಕೆ ದೋತರಗಾಂವ ಎಂದು ಹೆಸರು ಬರಲು ಕಾರಣವಾಯಿತು.

ಮೊದಲು ಧುತ್ತರಗಾಂವಕ್ಕೆ ಲಿಂಗಾಪೂರ ಪಟ್ಟಣವೆಂದು ಹೆಸರಿತ್ತು. ಒಮ್ಮೆ ಈ ಶರಣರನ್ನು ಪರೀಕ್ಷಿಸಲು ಒಬ್ಬ ರೈತನು ಒಡೆದ ಕೊಡ ಬೆಸೆದುಕೊಂಡು ಹೋಗಲು ಇವರ ಬಳಿಗೆ ಬಂದನು. ಏಕೆಂದರೆ ಶರಣರು ಕಂಬಾರಿಕೆ ವೃತ್ತಿಯನ್ನು ಆಶ್ರಯಿಸಿದ್ದರು. ಆಗ ಶರಣರು ಸ್ನಾಅ ಮಾಡುತ್ತಿದ್ದರು. ಆಗ ಒಕ್ಕಲಿಗ ಬೇಗ ಕೊಡವನ್ನು ಬೆಸೆದುಕೊಡು ಎಂದು ಹೇಳಲು ಶರಣರು ತಮ್ಮ ತಾಯಿಗೆ ಒದ್ದೆಯಾದ ಧೋತರದ ನೀರನ್ನು ಕೊಡದ ಮೇಲೆ ಹಿಂಡಲು ಹೀಳಿದಾಗ ಕೊಡ ಬೆಸದುಕೊಂಡಿತು.