. ಪ್ರಸ್ತಾವನೆ:

’ಆಹಾರ’ ಎಂಬುದು ದಿನನಿತ್ಯ ಬಳಕೆಯಲ್ಲಿರುವ ಸಾಮಾನ್ಯ ಪದ. ಕಾರಣ, ಅದನ್ನು ವ್ಯಾಖ್ಯಾನಿಸುವುದು ಸುಲಭವಲ್ಲ. ಬದುಕಲು ಹಾಗೂ ಬೆಲೆಯಲು ಜೀವಿಗಳು ತಿನ್ನುವ, ಉಣ್ಣುವ ಅಥವಾ ಕುಡಿಯುವ ಪದಾರ್ಥವೇ ಆಹಾರ. ಹಸಿವನ್ನು ನೀಗಿಸುವುದು, ದೇಹವನ್ನು ಪೋಷಿಸುವುದು, ದೇಹಕ್ಕೆ ಪುಷ್ಟಿ ಸಂತುಷ್ಟಿಗಳನ್ನು ಒದಗಿಸುವುದು ಆಹಾರದ ಪ್ರಮುಖ ಲಕ್ಷಣ. ಆಹಾರವನ್ನು ಸಾಮಾನ್ಯವಾಗಿ (1) ಮಾಂಸಾಹಾರ ಮತ್ತು ಸಸ್ಯಾಹಾರ, (2) ಘನ ಆಹಾರ ಮತ್ತು ದ್ರವ ಆಹಾರ ಹಾಗೂ (3) ಕಚ್ಚಾ ಆಹಾರ (Raw Food) ಮತ್ತು ಪಕ್ವ ಆಹಾರ (Cooked Food) ಎಂದು ವರ್ಗೀಕರಿಸುತ್ತಾರೆ.

ಪ್ರಾಣಿಗಳು ಸ್ವಭಾವತಹ ಕಚ್ಚಾ ಆಹಾರಿಗಳಾಗಿದ್ದು, ಸಸ್ಯಹಾರಿ (Herbivorous), ಮಾಂಸಾಹಾರಿ (Carnivorous) ಮತ್ತು ಸರ್ವಾಹಾರಿ (Omnivorous)ಗಳೆಂಬ ಬೂರು ವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಮಾನವ ಪ್ರಾಣಿ, ತನ್ನ ಸ್ವಂತ ಆಯ್ಕೆಯಿಂದ, ಮೇಲಿನ ಯಾವುದೇ ಒಂದು ವರ್ಗದ ಸದಸ್ಯನಾಗಿರುತ್ತಾನೆ. ಈ ನಿರ್ಣಯ ತೆಗೆದುಕೊಳ್ಳುವಲ್ಲಿ ಹೆಚ್ಚಾಗಿ ತನ್ನ ಪರಿಸರದ ಸಮಾಜೋ-ಧಾರ್ಮಿಕ ವಿಧಿನಿಷೇಧಗಳು (Taboos) ಕಾರಣವಾದರೆ, ಕೆಲವೊಮ್ಮೆ ತನ್ನ ಜೀವ-ಕೇಂದ್ರೀಯ (Bio-centric) ಅಥವಾ ಮಾನವ – ಕೇಂದ್ರಿಯ (Anthropo-centric) ಲೋಕ ದೃಷ್ಟಿ (Weltanchauung / World-view) ಕಾರಣವಾಗಿರುತ್ತದೆ.

ಯಾವುದೆ ಆಹಾರವರ್ಗಕ್ಕೆ ವ್ಯಕ್ತಿ ಸೇರಿದರೂ ಆತನ ಆಹಾರಕ್ಕೆ ರುಚಿ, ವಾಸನೆ, ಸ್ಪರ್ಶ, ದೃಷ್ಟಿ ಹಾಗೂ ಶಬ್ದಗಳೆಂಬ ಪಂಚೇಂದ್ರಿಯಾನುಭವಗಳೊಡನೆ ಸಂಬಂಧವಿರುತ್ತದೆ. ಆಹಾರದ ಅನ್ವೇಷಣೆಯಲ್ಲಿ ಮತ್ತು ಸಿದ್ಧತೆಯಲ್ಲಿ, ಅದನ್ನು ನೀಡುವಲ್ಲಿ ಹಾಗ್ ಭುಂಜಿಸುವಲ್ಲಿ ಈ ಪಂಚೇಂದ್ರಿಯಾನುಭವಗಳ ಪಾತ್ರ ಬಹಳ ಹಿರಿದಾಗಿದೆ. ಅವುಗಳ ಸಕಾರಾತ್ಮಕ ಪ್ರಭಾವದಿಂದಾಗಿ ಆತ ಅದನ್ನು ನಿರಾಕರಿಸುತ್ತಾನೆ. ಜನಪದರ ಸಮಷ್ಟ್ಯಾನುಭವದ ಮೂಸೆಯಲ್ಲಿ ಈ ಸಾಂಸ್ಕೃತಿಕ ಅನುಭವಗಳು ಸಂಸ್ಕಾರ ಪಡೆದುದರ ಪರಿಣಾಮವಾಗಿ, ಅವರ ಆಹಾರ, ವಿಶಿಷ್ಟತೆಯನ್ನು ಪಡೆಯುತ್ತದೆ.

೧.೦ ಊಟ:

‘ಅಡುಗೆ’ ಎಂಬ ಪ್ರಕ್ರಿಯೆ (process) ಮಾನವ ಸಂಸ್ಕೃತಿಯ ದ್ಯೋತಕವಾಗಿರುವುದರಿಂದ, ಮಾನವ ಇತರ ಪ್ರಾಣಿಗಳಿಂದ ಭಿನ್ನನಾಗಿರುತ್ತಾನೆ. ಆತನಿಗೆ ಉಣ್ಣಲು ಸಿದ್ಧಗೊಂಡ ಆಹಾರವನ್ನು ‘ಊಟ’ (Meals) ಎಂದು ಕರೆಯುತ್ತೇವೆ.

ಪ್ರಸ್ತುತದಲ್ಲಿ ಜನಪದ ಊಟವನ್ನು ಅಧ್ಯಯನ ವಸ್ತು (Subject-matter)ವನ್ನಾಗಿ ಆರಿಸಲಾಗಿದೆ. ಯಾವುದೇ ಅಧ್ಯಯನವನ್ನು ಮಾಡುವಲ್ಲಿ ಮುಖ್ಯವಾಗಿ ಎರಡು ಪದ್ಧತಿಗಳಿವೆ.

(೧) ಸಾಂಪ್ರಾದಾಯಿಕ/ ವಿಧಿಯಾತ್ಮಕ ಪದ್ಧತಿ

(೨) ವೈಜ್ಞಾನಿಕ/ಅನುಗಮದ ಪದ್ಧತಿ

ಮೊದಲನೆಯದನ್ನು ಶಾಸ್ತ್ರೀಯ (Traditional / Philosophical) ಪದ್ಧತಿ ಎಂದು ಕರೆದರೆ, ಎರಡನೆಯದನ್ನು ವೈಜ್ಞಾನಿಕ (Modern / Scientific) ಪದ್ಧತಿ ಎಂದು ಗುರತಿಸುತ್ತಾರೆ. ಹೀಗೆ ಒಂದು ಅಧ್ಯಯನ, ಶಾಸ್ತ್ರ ಅಥವಾ ವಿಜ್ಞಾನವೆನಿಸಿಕೊಳ್ಳುವುದು ಪದ್ಧತಿ – ಪ್ರಭೇದದಿಂದಲೇ ವಿನಹ ಅಧ್ಯಯನ ವಸ್ತುವಿನಿಂದಲ್ಲ. ವಿಜ್ಞಾನ, ಸದಾ ಪರಿವೀಕ್ಷಣೆ (Observation) ಪ್ರಮೇಯ ನಿರೂಪಣೆ (Hypothesis) ಪ್ರಯೋಗ ಪರೀಕ್ಷೆಯ (Experimentation) ನಿರ್ಣಯಗಳ ಮೂಲಕ ಗೋಚರ ವಸ್ತುಗಳ (Phinomena) ಅಧ್ಯಯನ ಮಾಡುತ್ತದೆ; ತತ್ಪೂರ್ವದಲ್ಲಿ ವಿಶ್ಲೇಷಣೆಗೆ ಸಹಾಯಕಾರಿಯಾಗಿ ಆ ವಸ್ತುಗಳ ವರ್ಗೀಕರಣ (Classification) ಮಾಡಲಾಗುತ್ತದೆ.

. ಊಟದ ವರ್ಗೀಕರಣ:

ಜನಪದರ ಸಾಮಾಜಿಕ ಸಂದರ್ಭಗಳ ಆಧಾರದ ಮೇಲೆ ಊಟವನ್ನು ಪ್ರಮುಖವಾಗಿ (೧) ನಿತ್ಯದ ಊಟ; (೨) ಹಬ್ಬದ ಊಟ ಮತ್ತು ಉಪವಾಸದ ಊಟ ಎಂದು ವರ್ಗೀಕರಿಸಬಹುದು. ನಿತ್ಯದ ಊಟದಲ್ಲಿ (೧) ಉಪಾಹಾರ ಮತ್ತು (೨) ಊಟವೆಂದು ಎರಡು ಉಪವರ್ಗಗಳು. ಊಟಗಳ ನಡುವೆ ತಿನ್ನುವ ಆಹಾರವೇ ಉಪಹಾರ. ದೈಹಿಕ ಪೋಷಣೆಗೆ ಉಣ್ಣುವ ಆಹಾರವೇ ಊಟ. ಹಬ್ಬದ ಊಟ ಕೇವಲ ದೈಹಿಕ ಪೋಷಣೆಗೆ ಸೀಮಿತವಾಗಿರದೆ ‌ವ್ಯಕ್ತಿಯ ಸಂತಷ್ಟಿಯೂ ಅದರ ಪ್ರಧಾನ ಆಶಯವಾಗಿರುತ್ತದೆ. ದೀಪಾವಳಿ, ಕ್ರಿಸ್ತ ಜಯಂತಿ, ಸಂಕ್ರಾಂತಿ ಮೊದಲಾದ ಹಬ್ಬಹರಿದಿನಗಳ ಸಂದರ್ಭದ ಹಬ್ಬದ ಊಟ ಮತ್ತು ಮುಂಜಿ ಮದುವೆಗಳ ಕಾಲದ ಊಟಗಳನ್ನು ಶ್ರಾದ್ಧಾದಿ ಸಾವಿಗೆ ಸಂಬಂಧಿಸಿದ ದಿನಾಚರಣೆಗಳ ಊಟಗಳಿಂದ ಬೇರ್ಪಡಿಸುವುದು ಸಾಧ್ಯವಾಗುತ್ತದೆ. ನಿತ್ಯದ ಹಾಗೂ ಹಬ್ಬದ ಊಟಗಳಿಗಿಂತ ತೀರಾ ಭಿನ್ನವಾದುದು ಉಪವಾಸದ ಊಟ. ಈ ಬಗೆಯ ಊಟದ ಸಂಯೋಜನೆಯಲ್ಲಿ ಕೆಲವೇ ಕೆಲವು ಆಹಾರ ಪದಾರ್ಥಗಳು ತೀರಾ ಅಲ್ಪ ಪ್ರಮಾಣದಲ್ಲಿರುತ್ತವೆ. ಅದರಲ್ಲಿ ಏಕಾದಶಿ, ಶುಭಶುಕ್ರವಾರ (Good Friday), ಕ್ರಿಸ್ತ-ಜಯಂತಿ ಜಾಗರಣೆ (Christmas-vigil), ರಂಜಾನ್ ಉಪವಾಸ ಮೊದಲಾದ ಧಾರ್ಮಿಕ ವ್ರತಾಚರಣೆಗಳ ಉಪವಾಸದ ಊಟಕ್ಕೂ, ರೋಗನಿವಾರಣೆಯ ಪಥ್ಯದ ಊಟಕ್ಕೂ ವ್ಯತ್ಯಾಸ ಇದ್ದೇ ಇದೆ.

ಊಟದ ಪ್ರಸ್ತುತ ಸ್ಥೂಲ ವರ್ಗೀಕರಣವನ್ನು ಈ ಕೆಳಗಿನಂತೆ ವೃಕ್ಷ ಚಿತ್ರದ ಮೂಲಕ ತೋರಿಸಲಾಗಿದೆ:

. ಊಟದ ವಿಶ್ಲೇಷಣೆ:

ಪ್ರಸ್ತುತದಲ್ಲಿ ಊಟದ ವಿಶ್ಲೇಷಣೆ ಮೂರು ಹಂತಗಳಲ್ಲಿ ಈ ಕೆಳಗಿನಂತೆ ಮಾಡಲಾಗಿದೆ:

೧. ರಚನಾತ್ಮಕ ಹಂತ (Syntatic space)

೨. ಅರ್ಥಾತ್ಮಕ ಹಂತ (Semantic space)

೩. ಫಲಿನಿರೂಪಣಾತ್ಮಕ ಹಂತ (Pragmatic)

. ಆಹಾರೀಯ ರಚನಾತ್ಮಕ ವಿಶ್ಲೇಷಣೆ (Gastro-syntatic Analysis) :

ಎಲೆ, ತಾಟು, ಪ್ಲೇಟು ಇತ್ಯಾದಿಗಳ ಮೇಲೆ ಆಹಾರವನ್ನು ಸಂಯೋಜಿಸುವ ರೀತಿಯನ್ನು, ಆಹಾರ ಸಾಮಗ್ರಿಗಳನ್ನು ಹಾಗೂ ಉಪಕರಣಗಳನ್ನು ಇಡುವ, ನೀಡುವ ಐಚ್ಛಿಕ ಹಾಗೂ ಕಡ್ಡಾಯ ರಾಚನಿಕಾಂಶಗಳನ್ನು ಗಮನಿಸಿ ಅವುಗಳ ವಾಸ್ತವಿಕ ವಿವರಣೆ (Factual discriptionನೀಡುವುದೇ ಆಹಾರೀಯ ರಾಚನಿಕ ವಿಶ್ಲೇಷಣೆ ಗುರಿ. ಊಟದ ರಚನೆ / ಸಂಯೋಜನೆ (Taxis) ಅದರ ಸ್ವರೂಪ ವೈವಿಧ್ಯತೆಯನ್ನು ಅವಲಂಬಿಸಿ ಭಿನ್ನವಾಗುತ್ತದೆ.

ಉದಾಹರಣಾರ್ಥವಾಗಿ, ಬಾಳೆಎಲೆಯ ಮೇಲೆ ಏರ್ಪಡಿಸಿದ ಊಟದ ಸಂಯೋಜನೆಯ ಒಂದು ಮಾದರಿ(Paradigm) ಯನ್ನು ಗಮನಿಸಿ :

ಊಟ ಮಾಡುವಾತನ ಎಡಕ್ಕೆ ಎಲೆಯ ತುದಿಭಾಗವಿದ್ದು, ಅದರ ಅಗಲ ಭಾಗ ಬಲಪಕ್ಕದಲ್ಲಿ ಚಾಚಿಕೊಂಡಿರುತ್ತದೆ. ಎಲೆಯನ್ನು ಬಿಟ್ಟು ಎಡಪಕ್ಕದಲ್ಲಿ ನೀರು ತುಂಬಿದ ಲೋಟ ಅಥವಾ / ಮತ್ತು ತಂಬಿಗೆ ಇರುತ್ತದೆ ಎಲೆಯ ಎಡಭಾಗದ್ಲಿ ಉಪ್ಪಿನಿಂದ ಆರಂಭಗೊಂಡು ಉಪ್ಪಿನಕಾಯಿ, ಲಿಂಬೆಯ ಹೋಳು, ಚಟ್ನಿ, ಕೋಸಂಬರಿ, ಹಪ್ಪಳ-ಸಂಡಿಗೆ, ಭಜಿ ಇವುಗಳಲ್ಲಿ ಕೆಲವೊಂದು ನೀಡಲಾಗುತ್ತದೆ. ಬಲಪಕ್ಕದಲ್ಲಿ ವಿವಿಧ ಪಲ್ಯಗಳನ್ನು ಇಕ್ಕುತ್ತಾರೆ. ನಡುಭಾಗದಲ್ಲಿ ಸಿಹಿ/ಪಾಯಸ ನೀಡುತ್ತಾರೆ. ಅದು ಮುಗಿದ ಮೇಲೆ ಅನ್ನ-ಹುಳಿ/ಸಾಂಬಾರು, ಅನ್ನ-ಸಾರು. ಕೊನೆಗೆ ಅನ್ನ-ಮೊಸರು/ಮಜ್ಜಿಗೆ.

ಊಟವಾದ ಬಳಿಕ ಐಚ್ಛಿಕವಾಗಿ ಹಣ್ಣು ಮತ್ತು/ಅಥವಾ ತಾಂಬೂಲ.

ಮಾಂಸಾಹಾರಿ ಊಟದಲ್ಲಿ ಪಲ್ಯಗಳನ್ನು ಬಡಿಸಿದ ಬಳಿಕ ಇಡ್ಲಿ / ರೊಟ್ಟಿ / ಬ್ರೆಡ್ಡು, ನಂತರ ಒಂದೆರಡು ಬಗೆಯ ಮಾಂಸದ ಅಡುಗೆಗಳನ್ನು ಬಡಿಸುತ್ತಾರೆ. ಅಪರೂಪವಾಗಿ ಕರಿದ ವೀನನ್ನೂ ಬಡಿಸುವುದು ಉಂಟು. ಸಿಹಿಯ ಬದಲು ಊಟದ ಕೊನೆಯಲ್ಲಿ ಐಸ್ ಕ್ರೀಂ ಅಥವಾ ಫ್ರೂಟ್ ಸಾಲಾಡ್ ಅಥವಾ ಹಣ್ಣುಗಳನ್ನು ಕೊಡುವುದು ಇತ್ತೀಚಿಗಿನ ಶೈಲಿಯಾಗಿದೆ. ಅಡಿಕೆ ಚೀಟಿ/ವೀಳ್ಯದೆಲೆಯನ್ನು ಬಾಯಿ ಸ್ವಚ್ಛಗೊಳಿಸಲು (as mouth-refreshers) ಒಂದು ಟ್ರೇಯಲ್ಲಿ ಇಡುವುದೂ ಉಂಟು.

ಊಟಕ್ಕಿಂತ ಮೊದಲು ಹಾಗೂ ಆಮೇಲೆ ಕೈ, ಕಾಲು, ಮುಖ ಮೊದಲಾದ ದೈಹಿಕ ಭಾಗಗಳನ್ನು ಶುದ್ಧೀಕರಿಸುವ ರೀತಿಯಲ್ಲಿಯೇ ವೈವಿಧ್ಯತೆಗಳಿವೆ. ಲೌಕಿಕ ಆಹಾರವನ್ನು ಪ್ರಸಾದವನ್ನಾಗಿ ರೂಪಾಂತರಿಸಿ ಸ್ವೀಕರಿಸುವ ಕ್ರಮಗಳಲ್ಲಿಯೂ ಭಿನ್ನತೆಯುಂಟು. ಕ್ಷೇತ್ರಕಾರ್ಯದ ಮೂಲಕ ಈ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ವರ್ಗೀಕರಿಸಿ ಅವುಗಳ ರಾಚನಿಕ ವಿವರಣೆಯನ್ನು ಆಹಾರೀಯ ರಚನಾತ್ಮಕ ಹಂತ (Gastro-sytactic)ದಲ್ಲಿ ನೀಡುತ್ತಾರೆ. ತದನಂತರವೇ ಅದರ ಅರ್ಥ ವಿವರಣೆ ಅಥವಾ ಭಾಷ್ಯ.

. ಆಹಾರೀಯ ಅರ್ಥಾತ್ಮಕ ವಿಶ್ಲೇಷಣೆ (Gastro-semantic Analysis) :

ಮಾನವನಿಗೆ ಬಾಯಿ ಇರುವುದು ಆಹಾರವನ್ನು ಜಗಿದು ಮೆತ್ತಗೆ ಮಾಡಿ ಹಟ್ಟೆಗೆ ಕಳುಹಿಸಲು; ಆದರೂ ಮಾನವ ಅದನ್ನು ಮಾತೆಂಬ ಸಂವಹನ ಮಾಧ್ಯಮ ಹುಟ್ಟಿಸಲು ಬಳಸಿಕೊಂಡಿದ್ದಾನೆ; ತುಟಿಗಳನ್ನು ಪ್ರೇಮ-ಚುಂಬನಕ್ಕಾಗಿಯೂ ಉಪಯೋಗಿಸುತ್ತಾನೆ. ಇದೇ ಮಾದರಿಯಲ್ಲಿ ಆಹಾರವಿರುವುದು ಪ್ರಪ್ರಥಮವಾಗಿ ದೈಹಿಕ ಪೋಷಣೆಗೆಯಾದರೂ ಅದು ಜನಪದ ಜೀವನ (Folk-life)ದಲ್ಲಿ ಸಂವಹನ ಮಾಧ್ಯಮ  (Medium of Communication)ವೂ ಆಗಬಲ್ಲುದು. ಈ ಸಂದರ್ಭದಲ್ಲಿ ಆಹಾರ ಒಂದು ಸಂಕೇತಕ (Code) ಆಗುತ್ತದೆ. ಒಂದು ಜನಪದದ (Food taxonomy) – ಆಹಾರ ಸಂಯೋಜನೆ ಆಹಾರವನ್ನು ಪಾಕಗೊಳಿಸುವುದರಿಂದ ಹಿಡಿದು ಅದನ್ನು ಬಡಿಸುವ ರೀತಿ, ಉಣ್ಣುವ ಶೈಲಿ (Etiquette) ಆಚರಣೆಯ ಮೂಲಕ ಆಹಾರವನ್ನು ಪ್ರಸಾದವನ್ನಾಗಿ ರೂಪಾಂತರಿಸುವ ಕ್ರಮವೇ ಮೊದಲಾದವುಗಳತನಕ ಹರಡಿ, ಜನಪದಗಳ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಜನಪದ ಸಂಸ್ಕೃತಿ ಸಂವಹನಗೊಂಡಾಗ ಅದರ ಮೌಖಿಕ ಅಭಿವ್ಯಕ್ತಿಯಲ್ಲಿ ಕಂಡುಬರುವ ಅರ್ಥಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜನಪದರು ಬಳಸುವ ಆಹಾರ ಸಾಮಗ್ರಿ, ಅಡುಗೆಯ ಸಾಧನವಿಧಾನಗಳು, ನೀಡುವ ಉಣ್ಣುವ ವಿಧಿ ವಿಧಾನಗಳು ಇತ್ಯಾದಿಗಳ ಅರ್ಥವಿಶ್ಲೇಷಣೆಯಿಂದ ವಿವಿಧ ಜನಸಮುದಾಯಗಳ ಸ್ವರೂಪ ಲಕ್ಷಣಗಳು ದೊರಕಿ ಅವುಗಳ ವರ್ಗೀಕರಣ ಸುಲಭ ಸಾಧ್ಯವಾಗುತ್ತದೆ (ನೋಡಿ:Mckim) ಆಹಾರದ ಅರ್ಥ ವಿಶ್ಲೇಷಣೆಯಿಂದ ಜನಪದ ಗಾದೆಗಳ, ನುಡಿಗಟ್ಟುಗಳ, ನಂಬಿಕೆಗಳ ಮೇಲೂ ಹೊಸ ಬೆಳಕು ಚೆಲ್ಲಬಹುದು. ಈ ಕಾರಣಗಳಿಂದಾಗಿ ಜನಪದ ಆಹಾರೀಯ ಅರ್ಥ ವಿಶ್ಲೇಷಣೆಯ ಹಂತ (Gastro-Semantic space) ಜಾನಪದದ ಅಧ್ಯಯನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

. ಆಹಾರೀಯ ಫಲನಿರೂಪಣಾತ್ಮಕ ವಿಶ್ಲೇಷಣೆ (Gastro-pragmatic Analysis)

ವಿಜ್ಞಾನಕ್ಕಾಗಿ ಮಾನವನಲ್ಲ; ಮಾನವನ ಬದುಕಿ ಉತ್ತಮಿಕೆಗಾಗಿ ವಿಜ್ಞಾನವಿದೆ. ಮಾನವ ತನ್ನ ಬದುಕಿನ ಸಂತುಷ್ಟಿಗಾಗಿ ವಿಜ್ಞಾನವನ್ನು ಬಳಸುತ್ತಾನೆ. ಕಾರಣ, ಜನಪದ ವಿಜ್ಞಾನ ಕೂಡಾ ಮಾನವನ ಬದುಕಿಗೆ ಉಪಯುಕ್ತವಾಗಬೇಕು. ಇದು ಸಾಧ್ಯವಾಗಬೇಕಾದರೆ ಪ್ರಯೋಜನ ದೃಷ್ಟಿಕೋನದಿಂದಲೂ ಆಹಾರದ ಅಧ್ಯಯನ ಮಾಡಬೇಕಾಗುತ್ತದೆ.

ಜನಪದ ಆಹಾರ ವೈಶಿಷ್ಟ್ಯಗಳು ಸಮಷ್ಟಿ ಜೀವನದ ಅಂಗವಾಗಿ, ತುಂಬು ಬದುಕಿನ ಸೊಗಸಿಗಾಗಿ, ಸುಖಕ್ಕಾಗಿ ರೂಪಿತಗೊಂಡಿರುತ್ತವೆ. “ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಗಾದೆಮಾತು ಜನಪದರ ಆಹಾರೀಯ ಮೌಲ್ಯ (Nutritional values)ಕ್ಕೆ ದ್ಯೋತಕವಾಗಿದೆ. ಈ ಹಿ‌ನ್ನಲೆಯಲ್ಲಿ ಆಹಾರವನ್ನು ವಿಶ್ಲೇಷಿಸಿದಾಗ ಯಾವಾವ ಆಹಾರಪದಾರ್ಥಗಳು ರೋಗನಿರೋಧಕಗಳಾಗಿವೆ? ರೋಗನಿವಾರಕಗಳಾಗಿವೆ? ಯಾವುವು ಯಾವಾವ ಋತುಮಾನಗಳಲಲಿ ಸೇವನೆಗೆ ಯೋಗ್ಯ ಅಥವಾ ಅಯೋಗ್ಯವಾಗಿವೆ? ಮಕ್ಕಳ, ಬಾಣಂತಿಯರ ಹಾಗೂ ತಾಯಿಯಂದಿರ ಊಟ ಹೇಗಿರಬೇಕು ? ಶಾರೀರಕ ದುಡಿಮೆಕಾರರ ಹಾಗೂ ಮಾನಸಿಕ ಶ್ರಮಜೀವಿಗಳ ಆಹಾರವೇನು? – ಇತ್ಯಾದಿ ಉಪಯುಕ್ತ ಮಾಹಿತಿಗಳು ಜನಪದ ಆಹಾರೀಯ ಫಲನಿರೂಪಣಾತ್ಮಕ ವಿಶ್ಲೇಷಣೆಯಿಂದ ದೊರಕುತ್ತವೆ.

ಆಹಾರ ವಿನಿಮಯ (Food transaction)ವನ್ನು ಗಮನಿಸಿ ಒಂದು ಜನಪದ ಸಮುದಾಯದಲ್ಲಿಯ ವಿಭಿನ್ನ ಅಲ್ಪ ಘಟಕ (Micro-units)ಗಳನ್ನು ಅಧ್ಯಯನಕ್ಕಾಗಿ ಗುರುತಿಸಿ ಅವುಗಳ ಶ್ರೇಣಿಯನ್ನು ಪರಿಮಾಣಿಸಲು (Quantifying of caste / class hierarchy) ಸಾಧ್ಯವಾಗುತ್ತದೆ. (ನೋಡಿ:MARRIOT,1968) ಕಚ್ಚಾ ಆಹಾರ ಉಚ್ಚಕುಲಗಳಲ್ಲಿ ಪರಸ್ಪರ ವಿನಿಮಯಗೊಂಡರೆ ಪಕ್ವ ಆಹಾರ ವಿನಿಮಯತೆಗೆ ತೊಡಕಿದೆ.

ಅದೇ ರೀತಿಯಲ್ಲಿ ಸಮರಂಭಗಳಲ್ಲಿ ಊಟ ನೀಡುವಲ್ಲಿಯ ಸಾಮಾಜಿಕ ಆದ್ಯತೆಯನ್ನು ಗಮನಿಸಿ (ಬ್ರಾಹ್ಮಣರಿಂದ ಆರಂಭಗೊಳಿಸಿ ಶೂದ್ರರಲ್ಲಿ ಕೊನೆಗೊಳಿಸುವ ರೀತಿ) ಜನಸಮುದಾಯಗಳ ಸಾಮಾಜಿಕ ಅಂತಸ್ತುಗಳನ್ನು ನಿಗದಿಪಡಿಸುವುದು ಸಾಧ್ಯವಾಗುತ್ತದೆ.

ಊಟವನ್ನು ಮಾಡುವ ಸ್ಥಳದಲ್ಲಿಯೂ ವ್ಯತ್ಯಾಸಗಳನ್ನು ಕಾಣುವ ಸಾಧ್ಯತೆಯುಂಟು. ಅಡಿಗೆಮನೆ, ಊಟದ ಮನೆ, ಚಾವಡಿ, ಅಂಗಳ ಮತ್ತು ಅಂಗಳದ ಹೊರಗೆ ಊಟ ಬಡಿಸುವುದನ್ನು ಗಮನಿಸಿ ಜನಪದರ ಸಾಮಾಜಿಕ ಶ್ರೇಣಿಗಳ್ನು ಗುರುತಿಸುವ ಸಾಧ್ಯತೆಗಳಿವೆ.

. ಸಮಾರೋಪ

ಸಂಕ್ಷೀಪ್ತವಾಗಿ ಹೇಳುವುದಾದರೆ, ಜನಪದ ಆಹಾರವನ್ನು ರಚನಾತ್ಮಕ, ಅರ್ಥಾತ್ಮಕ ಹಾಗೂ ಫಲನಿರೂಪಣಾತ್ಮಕ ಹಂತಗಳಲ್ಲಿ ವಿಶ್ಲೇಷಿಸುವುದರಿಂದ ಜನಪದ ಜೀವದ ಸಮಗ್ರ – holistic – ಅಧ್ಯಯನದ ಸಾಧ್ಯಗೊಳ್ಳುತ್ತದೆ. ಆಹಾರ ಎಂಬ ಸಂಕೇತಕ (Signifier)ದಲ್ಲಿ ಸಂಕೇತಿತಗೊಂಡ ಅರ್ಥ (Codified meaing) ಅನಾವರಣ (Decodified)ಗೊಂಡಾಗ ಮಾತ್ರ ಜನಪದ ಸಂಸ್ಕೃತಿ (Folk-culture) ಸಂವಹನಗೊಳ್ಳುತ್ತದೆ. ಕಾರಣ, ಜಾನಪದೀಯ ಅಧ್ಯಯನಗಳು ರಚನಾತ್ಮಕ, ಅರ್ಥಾತ್ಮಕ ಹಾಗೂ ಫಲನಿರೂಪಣಾತ್ಮಕ ಹಂತಗಳಲ್ಲಿ ಜರುಗುವುದು ಅತ್ಯಗತ್ಯ.

. ಸಾಹಿತ್ಯ ಸೂಚಿ

೧. ಪರಮಶಿವಯ್ಯ, ಜೀ. ಶಂ. ಮತ್ತು ವಿಲ್ಯಂ ಮಾಡ್ತ (ಸಂ.) ಕರ್ನಾಟಕ ಜಾನಪದ, ಬೆಂಗಳೂರು: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ೧೯೮೯.

೨. ವಿಲ್ಯಂ ಮಾಡ್ತ ಜನಪದ ಭಾಷಾವಿಜ್ಞಾನ, : ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೧೯೮೭.

೩. ECO, U., A Theory of Semiotics. Bloomington: Indiana University, 1975.

೪. KHARE, R.S. Culture and Reality : Essays on the Hidu System of Meaning Fods, Simla : Indiana Institute of Advanced Study, 1976.

೫. KELKAR, ASHOK R. “The Austhetics of Food: A Case Study” A paper presented in The Colloquium on Food Systems in the Sixth Iternational Institute for Semiotic And Structural Studies Mysore: Central Institute of India Languages, 1985 (Mimeo).

೬. MADTHA, WILLIAM “Gastro-Semiotics of the Eucharist”, in Vidyajyoti Journal of Theological Reflection, 54, 4 (April,1990), New Delhi

೭. MARRIOT, McKiM “Caste Ranking and Food Transaction : A Matrix Analysis”, in Milton Singer and B.S.Cohn (eds.),Structure and Change in Indian Society, New YorkL: Wenner-Gron Foundation for Anthropological Research, Inc., 1968