ಪ್ರಸ್ತಾವನೆ

ನಾವಿಂದು ಇಪ್ಪತ್ತನೆಯ ಶತಮಾನವನ್ನು ದಾಟಿ ಇಪ್ಪತ್ತೊಂದನೆಯ ಶತಮಾನವನ್ನು ಪ್ರವೇಶಿಸುತ್ತಿರುವ ಈ ಪರ್ವಕಾಲದಲ್ಲಿ ‘ಪರಿಸರ ಮತ್ತು ಜನಪದ ಸಂಸ್ಕೃತಿ’ಯನ್ನು ಸಮ್ಮೇಳನದ ವಿಷಯವನ್ನಾಗಿ ಆಯ್ಕೆ ಮಾಡಿದುದು ಅತ್ಯಂತ ಅರ್ಥಪೂರ್ಣ ಹಾಗೂ ಸಕಾಲಿಕ. ಇಂದು, ಭಾರತೀಯರು, ಕೃಷಿ ಸಂಸ್ಕೃತಿಯಿಂದ ಕೈಗಾರಿಕ ಸಂಸ್ಕೃತಿಯತ್ತ, ಕಣ್ಣು ಮುಚ್ಚಿ, ದಾಪುಗಾಲು ಇಡುತ್ತಿದ್ದಾರೆ. ಈ ಸಂದಿಗ್ಧ ಕಾಲದಲ್ಲಿ, ಇತರರಂತೆ, ಕನ್ನಡಿಗರೂ ತಮ್ಮ ಸಂಸ್ಕೃತಿಯ ಮತ್ತು ಸಾಹಿತ್ಯದ ಮೂಲ ಸೆಳೆಯನ್ನು ಮರೆಯುತ್ತಿರುವುದರಿಂದ ಜನಸಾಮಾನ್ಯರ ಹಾಗೂ ಪಂಡಿತ ಜನರ ಪ್ರಜ್ಞೆಯಲ್ಲಿ ಅನೇಕ ದ್ವಂದ್ವಗಳು ಹುಟ್ಟಿಕೊಂಡಿವೆ. ಈ ಅನಾಹುತಕ್ಕೆ ಮೂಲ ಕಾರಣ, ವಿದ್ಯಾವಂತರೆನಿಸಿಕೊಂಡವರ ಅವಿದ್ಯೆ, ಅಜ್ಞಾನ ಮತ್ತು ಅದರಿಂದ ಸಹಜವಾಗಿ ಉದ್ಭವಿಸುವ ಅಹಮಿಕೆ.

ವಿದ್ಯಾವಂತರು ಹಾಗೂ ಶಿಷ್ಟರು ಎನಿಸಿಕೊಂಡವರ ದೃಷ್ಟಿಯಲ್ಲಿ, ಜನಪದರೆಂದರೆ ಕೇವಲ ಗ್ರಾಮೀಣರು, ಅನಾಗರೀಕರು ಹಾಗೂ ಅನಕ್ಷರಸ್ಥರು. ಈ ಕಾರಣಕ್ಕಾಗಿಯೇ ವಿದ್ಯಾವಂತರಿಗೆ ಹಾಗೂ ಶಿಷ್ಟರಿಗೆ ‘ಜಾನಪದ’ವೆಂದರೆ ಅಸ್ಪೃಶ್ಯತಾ ಭಾವ. ಜನಪದರ ಮತ್ತು ಜಾನಪದದ ಸೋಂಕು ತಗಲಿದರೆ ತಮ್ಮ ಸೋಗುತನ ಬಹಿರಂಗವಾದೀತೆಂಬ ಭೀತಿಯೂ ಇವರಲ್ಲಿ ಇದೆ. ಇಂತಹ ಶಿಷ್ಟ ಸಾಹಿತಿಗಳಲ್ಲಿ ಕೆಲವು ಜನರಾದರೂ ಅಪವಾದಗಳಾಗಿದ್ದರೆ ಎಂಬುದು ನಿಜ. ಉದಾಹರಣಾರ್ಥವಾಗಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಯು.ಆರ್.ಅನಂತಮೂರ್ತಿ ಇವರ ಮಾತುಗಳನ್ನು ಗಮನಿಸಿ.

ನಾವು ಅನಕ್ಷರಸ್ಥರು ಎಂದು ಕರೆಯುವ ಜನರ ಮೂಲಕವೇ ಭಾರತೀಯ ಸಂಸ್ಕೃತಿ, ಪರಂಪರೆ, ಭಾಷೆಗಳು ಉಳಿದು, ಬೆಳೆದು ಬಂದಿವೆ. ವಿದ್ಯಾವಂತರು ಎನ್ನಿಸಿಕೊಂಡ ಜನ, ಉನ್ನತ ಶಿಕ್ಷಣವನ್ನು ಪಡೆಯುತ್ತಾ ಹೋದಂತೆಲ್ಲಾ ಸಂಸ್ಕೃತಿ, ಪರಂಪರೆ ಭಾಷೆಗಳಿಂದ ದೂರಾಗುತ್ತಾರೆ. ಆಧುನಿಕರು ಎನ್ನಿಸಿಕೊಂಡು ಬಹುಜನ ಸಮಾಜ ವ್ಯವಸ್ಥೆಯಿಂದ ಪ್ರತ್ಯೇಕಗೊಂಡುಬಿಡುತ್ತಾರೆ(ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ ೧೭-೦೨-೧೯೯೨)

ನಾಗರೀಕರ, ಅಕ್ಷರಸ್ಥರ, ವಿದ್ಯಾವಂತರ ಈ ಪ್ರತ್ಯೇಕತಾ ಮನೋಭಾವ (Divisive Mentality) ದಿಂದಾಗಿ ನಾವು ಜನಪದರನ್ನು ಮತ್ತು ಜಾನಪದವನ್ನು (ಪರಂಪರೆ, ಆಚರಣೆ, ನಂಬಿಕೆಗಳನ್ನು) ದೂರ ಸೈರಿಸ್, ಅವರನ್ನು ಅನುಮಾನ ಕಣ್ಣುಗಳಿಂದ ನೋಡತೊಡಗುತ್ತೇವೆ. ಈ ನಿಲುವುಗಳಿಗೆ ಅಂಟಿಕೊಂಡು ನಮಮ್ದೇ ಆದ ಪರಂಪರೆಯಿಂದ ದೂರವಾಗಿ ಬಿಡುತ್ತೇವೆ ಎಂದು ಅನಂತಮೂರ್ತಿಯವರು ನಮ್ಮನ್ನು ಈ ಮಾತುಗಳ ಮೂಲಕ ಎಚ್ಚರಿಸುತ್ತಾರೆ.

ಶಿಷ್ಟ ಸಾಹಿತ್ಯಕ್ಕೆ, ಜನಪದ ಸಾಹಿತ್ಯ, ಮೂಲಸೆಲೆಯೇ ಹೊರತು ತದ್ವಿರುದ್ಧವಲ್ಲ. ಅಷ್ಟೇ ಅಲ್ಲ “ಕೇವಲ ಸಾಹಿತ್ಯದಿಂದ ಸಂಸ್ಕೃತಿ ನಿರ್ಮಾಣವಾಗುವುದಿಲ್ಲ. ಅದಕ್ಕೆ ಇತರ ಶಿಸ್ತುಗಳ ಅಗತ್ಯವಿದೆ” ಎಂಬ ಸಚಿವ ಎಂ.ಪಿ.ಪ್ರಕಾಶ ಅವರ ಇತ್ತೀಚಿಗಿನ ಅಭಿಪ್ರಾಯವೂ (ಅದೇ, ೧೮-೦೨-೯೮) ಅನಂತಮೂರ್ತಿಯವರ ಜಿಜ್ಞಾಸೆಗೆ ಪೂರಕವಾಗಿಯೇ ಇದೆ. ಈ ಶಿಸ್ತುಗಳಲ್ಲಿ ಜಾನಪದಕ್ಕೆ ಅಗ್ರಗಣ್ಯ ಸ್ಥಾನ ಸಲ್ಲುತ್ತದೆ ಎಂಬುದು ಭಾಷಾ ವಿಜ್ಞಾನಿಯಾದ ನನಗಿಂತ ಹೆಚ್ಚು ನಿಮಗೆ, ಕನ್ನಡ ಸಾಹಿತ್ಯಗಳಿಗೆ ಗೊತ್ತು.

೧೯ನೆಯ ಶತಮಾನದ ಪೂರ್ವದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಾಗೂ ಭಾರತದಲ್ಲಿ, ಜನಪದ ಸಂಸ್ಕೃತಿ ಮತ್ತು ಜನಪದ ಸಾಹಿತ್ಯಗಳನ್ನು (Folk-literature) ಶಿಷ್ಟ ಸಾಹಿತಿಗಳು ಹಾಗೂ ಸಂಶೋಧಕರು ಉಪೇಕ್ಷಿಸಿದರು. ಆ ಕೆಟ್ಟ ಕಾಲದಲ್ಲಿ, ಕ್ರೈಸ್ತ ಮಿಷನರಿ ವರ್ಗಕ್ಕೆ ಸೇರಿದ ಹಾಗೂ ಇತರ, ಪಾಶ್ಚಾತ್ಯ ಪಂಡಿತರು ಹಾಗೂ ಭಾಷಾವಿಜ್ಞಾನಿಗಳು ಸಾಮಾನ್ಯರೊಟ್ಟಿಗೆ ಬೆರೆತು ಕಲೆತು ತಮ್ಮ ಅಧ್ಯಯನಗಳನ್ನು, ಕ್ಷೇತ್ರಕಾರ್ಯದ ಮೂಲಕ ಮಾಡುತ್ತಿದ್ದುದರಿಂದ, ಅವರ ಆಸಕ್ತಿ, ಜನಪದ ಸಂಸ್ಕೃತಿಯತ್ತವೂ ಹರಿಯಿತು. ತತ್ಪರಿಣಾಮವಾಗಿ, ಭಾಷಾವಿಜ್ಞಾನದ ಪ್ರಭಾವದಿಂದ, ಜಾನಪದ ಅಧ್ಯಯನ, ಜಾನಪದ ವಿಜ್ಞಾನ (Folkloistics) ವಾಗಿ ಬೆಳೆಯಿತು. ಭಾಷಾ ವಿಜ್ಞಾನದ ತೌಲನಿಕ, ರಾಚನಿಕ ಮತ್ತು ರೂಪಾಂತರ ಪದ್ಧತಿಗಳೇ ಜಾನಪದವಿಜ್ಞಾನದಲ್ಲಿಯೇ ಮಾದರಿಗಳಾಗಿ ಬಂದುವು. ಇದಕ್ಕಿಂತಲೂ ಹೆಚ್ಚಾಗಿ ಭಾಷಾವೈಜ್ಞಾನಿಕ ಪದ್ದತಿಗಳಿಂದಾಗಿ ಜಾನಪದಕ್ಕೆ ಇತರ ಶಿಸ್ತುಗಳಂತೆ, ಸಮಾನ ಅವಕಾಶ ವಿಶ್ವವಿದ್ಯಾಲಯಗಳ ಮಟ್ಟದಲ್ಲೂ ದೊರಕಿತು. ಹೀಗೆ ಭಾಷಾವಿಜ್ಞಾನದ ಸಂಸರ್ಗದಿಂದ ಜಾನಪದ ವೈಜ್ಞಾನಿಕವಾಗಿ ಬೆಳೆಯಲು ಸಾಧ್ಯವಾಯಿತೇ ಹೊರತು, ಅದು ಹಾಳಾಗಿ ಹೋಳಾಗಿ ಹೋಗಲಿಲ್ಲ. ಅಷ್ಟೇ ಅಲ್ಲದೆ, ಶಿಷ್ಟ ಸಾಹಿತ್ಯಕ್ಕೆ ಕಳೆದುಹೋದ ತನ್ನ ಜಾನಪದೀಯ ಮೂಲ ಸೆಲೆ, ಮರುದೊರಕಿ, ಸಾಹಿತ್ಯ ಅರ್ಥಪೂರ್ಣವಾಗಿ, ಸತ್ವಯುತವಾಗಿ ತನ್ನ ಮೂಲ ಸಂಸ್ಕೃತಿಯ ನೆಲೆಯಲ್ಲಿ ಬೇರೂರಿ ನಿಂತು, ಅನ್ಯ ಸಂಸ್ಕೃತಿ ಹಾಗೂ ಸಾಹಿತ್ಯಗಳ ಪ್ರಭಾವಗಳನ್ನು ಅರಗಿಸಿಕೊಂಡು, ಇನ್ನೂ ಪುಷ್ಟಿ ತುಷ್ಟಿಗಳನ್ನು ಪಡೆದು, ಬಲಿಷ್ಟವಾಗಿ ಬೆಳೆಯಲು ಸಾಧ್ಯವಾಯಿತು. ಈ ಅನ್ಯೋನ್ಯ ಸಂಬಂಧ ಕಡಿದುಹೋದಲ್ಲಿ  ಶಿಷ್ಟ ಸಾಹಿತ್ಯ ತನ್ನ ಮೂಲ ಸಾಂಸ್ಕೃತಿಕ ಸೆಲೆಯಿಂದ ದೂರ ಹೋಗಿ ಬಡವಾಗುತ್ತದೆ. ಒಟ್ಟಿನಲ್ಲಿ, ಶಿಷ್ಟ ಸಾಹಿತ್ಯಕ್ಕೆ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಮೌಲ್ಯಾಧಾರಿತ ಸಾಂಸ್ಕೃತಿಕ ಬದುಕಿಗೆ, ಜನಪದ ಸಂಸ್ಕೃತಿಯ ಸಂಸ್ಕಾರ ಅತ್ಯಗತ್ಯ.

. ಜನಪದ ಸಂಸ್ಕೃತಿ

ಪ್ರಸ್ತುತ  ಸಮ್ಮೇಳನದ ಶೀರ್ಷಿಕೆಯಲ್ಲಿ ‘ಜನಪದ ಸಂಸ್ಕ್ಟೃತಿ’ ಮತ್ತು ‘ಪರಿಸರ’ ಇವು ಎರಡು ಪ್ರಮುಖ ಪದಗಳು. ಅವುಗಳ ಅನ್ಯೋನ್ಯ ಸಂಬಂಧವೇ ಈ ಸಮ್ಮೇಳನದ ಪ್ರಧಾನ ಆಶಯ. ಇಂದು ‘ಸಂಸ್ಕೃತಿ’ ಎಂಬ ಪದ ಹಲವಾರು ಅಧ್ಯಯನ ಶಿಸ್ತುಗಳಲ್ಲಿ ಬಳಕೆಯಾಗುತ್ತದೆ. ಇದರಿಂದಾಗಿ ಅದು ಅರ್ಥವೈಶಾಲ್ಯವನ್ನು ಪಡೆದಿದೆ. ಮಾನವ ವಿಜ್ಞಾನ ಹಾಗೂ ಸಮಾಜ ವಿಜ್ಞಾನಗಳಲ್ಲಿ ಅದಕ್ಕೆ ಹಲವಾರು ವ್ಯಾಖ್ಯೆಗಳಿದ್ದರೂ ಜಾನಪದ ವಿಜ್ಞಾನದಲ್ಲಿ ಆಲನ್ ಡಂಡಿಸ್ (Alan Dundes) ಮೊದಲಾದವರ ಅಭಿಪ್ರಾಯದಂತೆ ‘ಜನಪದ ಜೀವನದ ಮೊತ್ತ’ವೇ ಜೀವನದ ಮೊತ್ತ’ ವೇ ಜನಪದ ಸಂಸ್ಕೃತಿ (Folk culture) ಎಂದು ಕ್ಯಾಪ್ಸೂಲ್ ರೂಪದ ವ್ಯಾಖ್ಯೆಯನ್ನು ನಾವು ಇಂದಿನ ಸಂದರ್ಭದಲ್ಲಿ ಕೊಡಬಹುದು.

ಯಾವುದಾದರೊಂದು ಸಮಾನ ಧರ್ಮವುಳ್ಳ ಜನಸಮುದಾಯವೇ ಜನಪದ (Folk-area) ಜನಪದದ ಸದಸ್ಯರೇ ಜನಪದರು (Folk) ಹೊರತು ಅವರು ಕೇವಲ ಗ್ರಾಮೀಣರು, ಅನಾಗರೀಕರು, ನಿರಕ್ಷರಸ್ಥರು ಎಂಬ ಕಲ್ಪನೆ ಜಾನಪದ ವೈಜ್ಞಾನಿಕ ದೃಷ್ಟಿಯಿಂದ ತೀರಾ ತಪ್ಪು. ಜನಪದರ ಸಾಮೂಹಿಕ ಬದುಕೇ ಜನಪದ ಜೀವನ (folk-life), ಜನಪದ ಜೀವನದ ಮೊತ್ತವೇ ಜನಪದ ಸಂಸ್ಕೃತಿ (Folk-Culture), ಜನಪದ ಜೀವನದ ಸಂಸ್ಕೃತಿಯ ಸಮಷ್ಟಿ ಅಭಿವ್ಯಕ್ತಿಯೇ ಜನಪದ ಕಲೆ (Folk-art), ಜಾನಪದದ ವೈಜ್ಞಾನಿಕ ಅಧ್ಯಯನವೇ ಜಾನಪದ ವಿಜ್ಞಾನ.

ಜನಪದ ಸಂಸ್ಕೃತಿಯಲ್ಲಿ ಜನಪದ ಸಮಷ್ಟಿ ಪ್ರಜ್ಞೆ ಮತ್ತು ಅದರ ಸಾಮೂಹಿಕ ಅಭಿವ್ಯಕ್ತಿ ಕೇಂದ್ರ ಬಿಂದುವಾದರೆ, ಅಭಿಜಾತ ಶಿಷ್ಠ ಸಂಸ್ಕೃತಿಯಲ್ಲಿ ವ್ಯಷ್ಟಿ ಪ್ರಜೆ ಮತ್ತು ವೈಯಕ್ತಿಕ ಅಭಿವ್ಯಕ್ತಿಗೆ ಪ್ರಾಧಾನ್ಯತೆ. ಒಟ್ಟಿನಲ್ಲಿ ಸಮಷ್ಟಿ ಭಾವವೇ ಜಾನಪದದ ನಿರ್ಣಾಯಕ ಗುಣ (Critirial feature).

ಜನಪದ ಸಂಸ್ಕೃತಿ, ಆಯಾಯ ಜನಪದಕ್ಕೆ ಸೀಮಿತವಾಗಿ ಹುಟ್ಟುತ್ತದೆ, ಬೆಳೆಯುತ್ತದೆ, ಮತ್ತು ರೂಪಾಂತರ ಹೊಂದುತ್ತದೆ. ಈ ಕಾರಣದಿಂದಲೇ ಜನಪದ ಸಂಸ್ಕೃತಿಯನ್ನು ಹಾಗೂ ಅದರ ಅಭಿವ್ಯಕ್ತಿಯಾಗಿರುವ ಜಾನಪದವನ್ನು ಖಾಸಗಿ ಕ್ರಿಯೆ (Esoteric function) ಎನ್ನುವುದು. ಈ ಖಾಸಗಿತನ, ಜಾನಪದದ ವೈಶಿಷ್ಟ್ಯ ಹಾಗೂ ಹಕ್ಕು. ಈ ಹಕ್ಕನ್ನು ಉಲ್ಲಂಘಿಸಿರುವುದು ಜಾನಪದದೊಡನೆ ಮಾಡುವ ಬಲಾತ್ಕಾರದ ಸಂಭೋಗ (Raping) ಎಂದು ನನ್ನ ವೈಯಕ್ತಿಕ, ಆದರೆ ಖಚಿತ ಅಭಿಪ್ರಾಯ.

ಜನಪದ ಸಂಸ್ಕೃತಿ ಹುಟ್ಟಬೇಕಾದರೆ, ಬೆಳೆಯಬೇಕಾದರೆ ಜನಪದ ಸಮಾಜವೊಂದಿರಬೇಕು. ಈ ಜನಪದ ಸಮಾಜಕ್ಕೆ, ಸಮುದಾಯಕ್ಕೆ ಅದರದ್ದೇ ಆದ ಸನ್ನಿವೇಶ, ಸಂದರ್ಭ ಅಥವಾ ನೆರೆಹೊರೆ (neighbourhood) ಇರಬೇಕು. ಇದನ್ನೇ ನಾವು ಪಾರಿಭಾಷಿಕವಾಗಿ ಪರಿಸರ (Environment) ಎನ್ನುತ್ತೇವೆ.

. ಪರಿಸರ

ಪರಿಸರವನ್ನು ಕುರಿತು ಜಾಗೃತಿ (Conscientization) ಈ ಶತಮಾನದ ಉತ್ತರಾರ್ಧದಲ್ಲಿ ಜಗತ್ತಿನಾದ್ಯಂತ ಉಂಟಾಗಿದೆ. ಕೈಗಾರಿಕಾ ಸಂಸ್ಕೃತಿಯ ನೆಪದಲ್ಲಿ, ಕಾಡುಗಳನ್ನು ಕಡಿದು ಹಾಕಿ, ಪಶ್ಚಿಮ ಘಟ್ಟದ ಹಸಿರು ಸೆರಗನ್ನು ಎಳದು ಹಾಕಿ, ಭಾರತಮಾತೆಯನ್ನು ನಗ್ನಗೊಳಿಸುವುದನ್ನು ವಯೋವೃದ್ಧರಾದರೂ ತಾಳಲಾರದೆ ಕಡಲತೀರದ ಭಾರ್ಗವ ಡಾ. ಶಿವರಾಮ ಕಾರಂತರ ನೇತೃತ್ವದಲ್ಲಿ ಪರಿಸರ ಪರವಾಗಿ ಸಮರವೇ ನಡೆದದ್ದು ತರುಣರಾದ ನಿಮಗೆಲ್ಲ ತಿಳಿದ ವಿಷಯವೇ. ದಿಲ್ಲಿ ದೂದದರ್ಶನದಲ್ಲಿ ಜಸಪಾಲನು ಪಿಸ್ತೂಲನ್ನು ಬಳಸಿ, ಪರಿಸರವನ್ನು ರಕ್ಷಿಸಿ ಎಂದು ಸಾರುತ್ತಿರುವುದನ್ನು ನಾವು ನೋಡುತ್ತಾ ಕೇಳುತ್ತೇವೆ. ಅರಣ್ಯ ನಾಶದಿಂದಾಗಿ ಮತ್ತು ನಾಗರೀಕರಣದಿಂದಾಗಿ ಬುಡಕಟ್ಟು ಜನಾಂಗಗಳ ಜೀವನಶೈಲಿಯೇ ಕದಲಿ ಹೋಗಿ, ಶಿವಪ್ಪದರ ಬಗೆಗೆ ಅವರು ರೋಸಿಹೋಗಿರುವುದನ್ನು ಕೇವಲ ತ್ರಿಪುರದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ನಡೆದಿರುವ ಅವರ ಹಿಂಸಾಚಾರಗಳಿಂದ ನಾವು ಬೇಗ ಎಚ್ಚರವಾದಷ್ಟು ನಮಗೆಯೇ ಒಳಿತು.

ಹೀಗೆ ಜನಪದ ಸಂಸ್ಕೃತಿಯ ಬಗೆಗೆ ಬೀಜರೂಪವಾದ ಕೆಲವು ಮಾತುಗಳನ್ನು ನಿಮ್ಮ ಗಮನಕ್ಕೆ ತಂದ ಬಳಿಕ ಅದಕ್ಕೆ ಪೂರಕವಾದ ಪರಿಸರವನ್ನು ತಿಳಿದುಕೊಳ್ಳಲು ಸಹಾಯವಾಗುವಂತೆ ಅದರ ವರ್ಗೀಕರಣವೊಂದನ್ನು ಪ್ರಾಜ್ಞರಾದ ನಿಮ್ಮ ಮುಂದಿಡಲು ಇಚ್ಚಿಸುತ್ತೇನೆ. ಪರಿಸರ, ಜನಪದರ ಭೌತಿಕ ಸಂಸ್ಕೃತಿ (Material Culture) ಮತ್ತು ಅಭೌತಿಕ ಸಂಸ್ಕೃತಿ (Non-material Culture) ಇವುಗಳೆರಡರಲ್ಲಿಯೂ ತನ್ನ ಪ್ರಭಾವ ಬೀರಿ ಅವರ ಮೌಖಿಕ ಕಲೆ (Verbal Art) ಪ್ರದರ್ಶನಾತ್ಮಕ ಕಲೆ (Performing Art) ಧರ್ಮ ಮತ್ತು ಜೀವನದರ್ಶನಗಳನ್ನು ರೂಪಿಸುವುದರಿಂದ ಅಥವಾ ರೂಪಾಂತರಿಸುವುದರಿಂದ ಸಂಸ್ಕೃತಿಗನುಗುಣವಾಗಿ ಪರಿಸರದ ವರ್ಗೀಕರಣ ಜಾನಪದ ವೈಜ್ಞಾನಿಕ ಅಧ್ಯಯನದಲ್ಲಿ ಅತ್ಯಗತ್ಯವೆಂದು ನಾನು ಭಾವಿಸಿದ್ದೇನೆ.

. ಪರಿಸರದ ವರ್ಗೀಕರಣ

ಪರಿಸರವನ್ನು ಮೂಲತಃ ಭೌತಿಕ ಮತ್ತು ಅಭೌತಿಕ ಪರಿಸರಗಳೆಂದು ವಿಭಾಜಿಸುತ್ತೇವೆ. ಭೌತಿಕ ಪರಿಸರ ಅಜೀವ ವರ್ಗಕ್ಕೆ ಸೇರಿದ್ದಾದರೂ ಅದು ಸಸ್ಯ ಹಾಗೂ ಪ್ರಾಣಿ ಸಂಕುಲಗಳಿಗೆ ಆಧಾರಭೂತವಾಗಿದ್ದುಕೊಂಡು, ಭೂಮಿ, ನೀರು, ಗಾಳಿ, ಅಗ್ನಿ, ಆಕಾಶಗಳೆಂಬ ಪಂಚಭೂತಗಳು ಮಾತ್ರವಲ್ಲದೆ ಎಲ್ಲ ಖನಿಜಸಂಪತ್ತು ಈ ವರ್ಗಕ್ಕೆ ಸೇರುತ್ತದೆ. ಸಮಗ್ರ ಪರಿಸರದ ಮಾಲಿನ್ಯದಿಂದ ಹಾಗೂ ಪರಿಸರದೊಡನೆ ದಿನನಿತ್ಯ ನಡೆಯುವ ಜೀವನಕ್ಕೆ ಆಘಾತ ಉಂಟಾಗುತ್ತದೆ. ಉದಾಹರಣಾರ್ಥವಾಗಿ, ಗಣಿಗಾರಿಕೆಯಲ್ಲಿ ಬಂಡೆಕಲ್ಲುಗಳನ್ನು ಒಡೆಯಲು ಉಪಯೋಗಿಸಲಾಗುತ್ತಿರುವ ಹೈಡ್ರಾಲಿಕ್ ಜಾಕ್ ಹ್ಯಾಮರ್ ಮತ್ತು ಡೈನಮೈಟ್ ಗಳ ಆಘಾತದಿಂದ ಉಂಟಾಗುವ ಕಂಪನದಿಂದಾಗಿ ಮತ್ತು ಧೂಳಿನಿಂದಾಗಿ, ಆ ಪರಿಸರದಲ್ಲಿ ತಲತಲಾಂತರಗಳಿಂದ ವಾಸಿಸುತ್ತಿದ್ದ ಮೂಲನಿವಾಸಿಗಳ (Tribals) ಆರೋಗ್ಯಕ್ಕೆ ಧಕ್ಕೆಯುಂಟಾಗುತ್ತದೆ. ಹಾಗೂ ಅವರ ಜೀವನ ಕ್ರಮದಲ್ಲಿ ಮೂಲಭೂತ ಬದಲಾವಣೆಗಳಾಗುತ್ತವೆ. ಇದರಿಂದಾಗಿ ಜನಸ್ತೋಮಗಳು ತೊಂದರೆಗಳಿಗೀಡಾಗುತ್ತವೆ. ಇದಕ್ಕೆ ದ.ಕ.ಜಿಲ್ಲೆಯ ಪಾಜಕ ಕ್ಷೇತ್ರದಂತೆ ಹಲವಾರು ಉದಾಹರಣೆಗಳು ಕರ್ನಾಟಕದಲ್ಲಿಯೇ ದೊರಕುತ್ತವೆ.

ಕಲ್ಲುಬಂಡೆಗಳಿಂದ ಕೂಡಿದ ಗುಡ್ಡಗಳನ್ನು ಬಿಟ್ಟು, ಹೊಲಗದ್ದೆಗಳಿಂದ ಕಂಗೊಳಿಸುವ ಬಯಲು ಪ್ರದೇಶಕ್ಕೆ ಬಂದರೆ ಅಲ್ಲಿಯ ವ್ಯಥೆಯೇ ಬೇರೆ. ರಾಸಾಯನಿಕ ಗೊಬ್ಬರಗಳಿಂದ ಕೃಷಿಭೂಮಿಯ ಫಲವತ್ತತೆ (fertility) ಹಾಳಾದರೆ, ಘಟ್ಟ ಪ್ರದೇಶಗಳಲ್ಲಿಯ ಕಾಫಿಯಂತಹ ಬೆಳೆಗಳಿಂದ ಹಾಡುವ ಹಕ್ಕಿಯಂತಹ ಕೆಲವು ಪಕ್ಷಿ ಸಂಕುಲಗಳು ಕಣ್ಮರೆಯಾಗುತ್ತಿವೆಯೆಂದು ಪರಿಸರ ವಿಜ್ಞಾನಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಮಾನವ ಪರಿಸರದತ್ತ ಗಮನ ಹರಿಸಿದರೆ ಸ್ಥಾನ ಹಾಗೂ ಅಧಿಕಾರದ ದುರ್ಬಳಕೆಯಿಂದಾಗಿ ವಾಸಮನೆ ಮತ್ತು ಗುರುಮನೆಗಳಲ್ಲಿ ಸ್ತ್ರೀ ಶೋಷಣೆ, ವಿದ್ಯಾಮಂದಿರಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೇಲೆ ದಬ್ಬಾಳಿಕೆ ಹಾಗೂ ಶೋಷಣೆ, ಸೆರೆಮನೆಗಳಲ್ಲಿ ಅಪರಾಧಿಗಳ ಚಿತ್ರಹಿಂಸೆ, ಸಂಸ್ಥೆಗಳಲ್ಲಿ ಮಾನವ ಹಕ್ಕು ಉಲ್ಲಂಘನೆ, ಉದ್ದಿಮೆಗಳಲ್ಲಿ ಬಾಲಕಾರ್ಮಿಕರ ಗೋಳು ಹೀಗೆ ಹಲವಾರು ರೀತಿಯ ಮಾನವ ಪರಿಸರ ಮಾಲಿನ್ಯಗಳನ್ನು ಪ್ರಗತಿಪರ ಹಾಗೂ ಜೀವಪರ (Pro-life) ಸಂಘಟನೆಗಳು ಸ್ತ್ರೀಯರ, ಕಾರ್ಮಿಕರ, ಕೃಷಿಕರ ಹಾಗೂ ಮೂಲನಿವಾಸಿ ಮತ್ತು ಅಲೆಮಾರಿ ಜನರ ಸ್ಥಾನಾಂತರ ಬಗೆಗೆ ಹಾಗೂ ಅದರಿಂದುಂಟಾಗುವ ಮಾನಸಿಕ ವೇದನೆಗಳು ಹಾಗೂ ಸಾಮಾಜಿಕ ಬವಣೆಗಳನ್ನು ಕಣ್ಣು ಕುಕ್ಕುವಂತೆ ಚಿತ್ರಿಸುತ್ತವೆ.

ಜನಪದರ ಬದುಕು ಸಂಸ್ಕೃತಿಗಳ ಗಂಧಗಾಳಿಯಿಲ್ಲದ, ಯಾವುದೇ ಸಾಮಾಜಿಕ ಅಧ್ಯಯನವಿಲ್ಲದ, ಅಭಿವೃದ್ಧಿಪರ ಯೋಜನೆಗಳಿಂದಾಗಿ ಲಕ್ಷಾಂತರ ಜನರ ವಸತಿಗಳು, ಕೃಷಿ ಭೂಮಿ ತುಂಡುಗಳು, ನಂಬಿಕೆ ಸಂಪ್ರದಾಯಗಳು, ಜೀವನವಿಧಾನಗಳು, ವೃತ್ತಿಕಸುಬುಗಳು, ಮೌಖಿಕ ಮತ್ತು ಪ್ರದರ್ಶನಾತ್ಮಕ ಕಲೆಗಳು ನಾಶವಾಗುತ್ತಿವೆ. ಯಾರ ಅಭಿವೃದ್ಧಿಗೋಸ್ಕರ ಈ ಹಗಲು ದರೋಡೆ ಹಾಗೂ ದಿನನಿತ್ಯ ಸಂಹರಣ ? ಕೆಲವೇ ಕೆಲವು ಉಳ್ಳವರ ತೇಗಿಗಾಗಿ, ಇಷ್ಟೊಂದು ನಿಸ್ಸಹಾಯಕ ಜನರ ಹೊಟ್ಟೆಯ ಹಿಟ್ಟನ್ನೇ ಕಸಿಯಬೇಕು ? ಇದು ಮಾನವೀಯ ಪ್ರಶ್ನೆ. ಅಂತೆಯೇ ಜಾನಪದೀಯ ಪ್ರಶ್ನೆ. ಈ ಕಡೆ ಗಮನಕೊಡದೆ ದಂತಗೋಪುರದಲ್ಲಿ ವಾಸಿಸುತ್ತಿರುವ ಸಂಶೋಧಕರನ್ನು ಮತ್ತು ಶಿಷ್ಟಸಾಹಿತಿಗಳನ್ನಾದರೂ ಬಡೆದೆಬ್ಬಿಸುವ ಕಾಯಕವನ್ನು ಜಾನಪದ ವಿದ್ವಾಂಸರು ತುರ್ತಾಗಿ ಮಾಡಬೇಕು. ಇಲ್ಲವಾದರೆ ಈ ಬಂದಳಿಕೆ ಸಾಹಿತಿಗಳಿಂದ ದೇಶಕ್ಕೆ ಹಾನಿಯೇ ಹೆಚ್ಚು.

ಅಭಿವೃದ್ಧಿ ಯೋಜನೆಗಳ ನೆಪದಲ್ಲಿ, ನಿರ್ಮಲ ಪರಿಸರ ಕಲುಷಿತಗೊಂಡಿದೆ. ಸ್ವಚ್ಛ ಜಲ, ಶುಭ್ರವಾಯ್ತು, ನಿರ್ಮಲ ಜನಮನಗಳು ಮಲಿನಗೊಂಡಿವೆ. ಬೃಹತ್ ಅಣೆಕಟ್ಟುಗಳು ವಿದ್ಯುಚ್ಛಕ್ತಿ ಯೋಜನೆಗಳು, ಕಲ್ಲಿದ್ದಲು ಇತ್ಯಾದಿ ಖನಿಜ ಹಾಗೂ ಖನಿಜೇತರ ಗಣಿಗಳು ಅಣುಶಕ್ತಿ ಸ್ಥಾವರಗಳು, ಕೈಗಾರಿಕಾ ಕೇಂದ್ರಗಳು ಇತ್ಯಾದಿ ಯೋಜನೆಗಳಿಂದಾಗಿ ಪ್ರಕೃತಿಯ ಮಡಿಲಲ್ಲಿಯೇ ಹುಟ್ಟಿ ಬೆಳೆದು, ತಮ್ಮ ಸಂಸ್ಕೃತಿಯನ್ನು ರೂಪಿಸಿಕೊಂಡ ಮೂಲನಿವಾಸಿಗಳು ಪದೇ ಪದೇ ನಡೆಯುತ್ತಿರುವ ತಮ್ಮ ಸ್ಥಳಾಂತರಗಳಿಂದಾಗಿ, ತಮ್ಮ ಬದುಕಿನೊಂದಿಗೆ ತಮ್ಮನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಲವೆಡೆ ವಂಚಿತರಾಗಿದ್ದಾರೆ. ಕೆಲವು ಕಡೆ ರೊಚ್ಚಿಗೆದ್ದಿದ್ದಾರೆ.

ಈ ದಾರುಣ ಪರಿಸ್ಥಿತಿ, ಮಾನವೀಯ ಅಧ್ಯಯನ ಈ ಜಾನಪದ ಸಮ್ಮೇಳನದಲ್ಲಿಯ ವಿಚಾರಗೋಷ್ಠಿಗಳ ಆಶಯವಾಗಿರುತ್ತದೆ. ವಿಭಿನ್ನ ಆಯಾಮಗಳನ್ನೊಳಗೊಂಡ ಸೂಕ್ಷ್ಮ ಅಧ್ಯಯನ (Micro study) ವಿವಿಧ ಜಾನಪದ ಸಂಶೋಧಕರಿಂದ ನಡೆಯಬೇಕೆಂಬುದೇ ಇಲ್ಲಿಯ ಧೋರಣೆ.

ಶೋಷಣೆ ಮಾಡುವ ಜನ ಮತ್ತು ಅವರಿಗೆ ಪೂರಕವಾಗಿರುವ ಅಧಿಕಾರಿವರ್ಗ, ಶೋಷಿತರ ಬವಣೆಯನ್ನು ಮುಚ್ಚಿಡುವಾಗ ಅದನ್ನು ಅನಾವರಣಗೊಳಿಸುವ ಕಾಯಕ ಪ್ರಾಜ್ಞರಿದ್ದು, ಅದರ ಜೊತೆಗೆ ಭೌತಿಕ ಪರಿಸರವನ್ನು ರಕ್ಷಿಸಿ ಮಾನವ ಹಾಗೂ ಮಾನವೇತರ ಜೀವನಕ್ಕೆ, ಬದುಕುವ ದಾರಿಯನ್ನು ತೋರುವ ಸೇವೆ, ಪಂಡಿತ ಜನರಿಂದ ಆದಾಗ ಮಾತ್ರ ಅವರ ಪಾಂಡಿತ್ಯಕ್ಕೆ ಬೆಲೆ ಬರುತ್ತದೆ. ಸರ್ವೇ ಜನಾಃ ಸುಖಿನೋ ಭವಂತು ಎಂಬ ಆಸ್ತಿಕ್ಯ ಮಂತ್ರಕ್ಕೂ ಅರ್ಥ ಪ್ರಾಪ್ತವಾಗುತ್ತದೆ.

ಇನ್ನು ಅಭೌತಿಕ ಪರಿಸರದ ಬಗೆಗೆ

ಅಭೌತಿಕ ಪರಿಸರವನ್ನು ‘ಜೈವಿಕ ಮತ್ತು ಮಾನವ ಪರಿಸರ’ಗಳೆಂದು ವಿಂಗಡಿಸುತ್ತೇವೆ. ಜೈವಿಕ ಪರಿಸರದಲ್ಲಿ ಜೀವದ್ರವ್ಯ (Elan vitale) ಇದೆ. ಭೌತಿಕ ಪರಿಸರ, ಅಜೀವ ಸ್ವರೂಪವದ್ದು. ಪರಿಸರ ವ್ಯವಸ್ಥೆ (Eco system) ಯಲ್ಲಿ ಇವು ಪರಸ್ವರ ಸಂಬಂಧವುಳ್ಳವುಗಳಾಗಿವೆ. ಜೈವಿಕ ಪರಿಸರ, ಅಜೀವ ಪರಿಸರವನ್ನು ಬಳಸಿಕೊಳ್ಳುತ್ತದೆ, ಉಪಯೋಗಿಸಿಕೊಳ್ಳುತ್ತದೆ. ಆದರೆ ಅದನ್ನು ದುರುಪಯೋಗಪಡಿಸಿದಾಗ ಅರ್ಥಾತ್ ಪ್ರಕೃತಿಯೊಡನೆ ವ್ಯಭಿಚರಿಸಿದಾಗ, ಪ್ರಾಕೃತಿಕ ವಿಕೋಪಕ್ಕೆ ಎಡೆಯಾಗುತ್ತದೆ.

ಜೈವಿಕದಲ್ಲಿ ಸಸ್ಯ ಮತ್ತು ಪ್ರಾಣಿ ಪರಿಸರಗಳೆಂದು ಎರಡು ವಿಧ. ಸಸ್ಯ ಪರಿಸರದಲ್ಲಿ ಕೇವಲ ಜೀವಾಂಶವೇ ಪ್ರಧಾನವಾಗಿ ಕಂಡುಬಂದರೆ ಪ್ರಾಣಿ ಪರಿಸರದಲ್ಲಿ ಪ್ರಾಣಾಂಶವನ್ನೂ ನಾವು ಗಮನಿಸುತ್ತೇವೆ. ಮಾನವ ಪರಿಸರ, ಜೈವಿಕ ಹಾಗು ಪ್ರಾಣಾಂಶಗಳನ್ನೊಳ್ಗೊಂಡು ಉಳ್ದಿಅ ಪರಿಸರಗಳಲ್ಲಿಲ್ಲದ ಜೀವಾತ್ಮವನ್ನು ಒಳಗೊಂಡೀರುತ್ತದೆ. ಈ ಜೀವಾತ್ಮನಿಂದಾಗಿ ಮಾನವ, ವ್ಯಕ್ತಿ (Person) ಎನಿಸಿಕೊಂಡೂ ಹಲವಾರು ವ್ಯಕ್ತಿಗತ ಹಾಗೂ ಸಾಮಾಜಿಕ ಹಕ್ಕುಗಳಿಗೆ ಬಾಧ್ಯಸ್ಥನಾಗುತ್ತಾನೆ. ಇಚ್ಛಾಶಕ್ತಿಯಿಂದ ತನ್ನ ಜೀವನವನ್ನು ಸೂಕ್ತ ಆಯ್ಕೆ (Choice) ಗಳ ಮೂಲಕ ರೂಪಿಸಿಕೊಳ್ಳುತ್ತಾನೆ ಹಾಗೂ ಜೀವನ ಮೌಲ್ಯಗಳ ಮೂಲಕ ಸಮಗ್ರ ಪರಿಸರಕ್ಕೆ ಜವಾಬ್ದಾರನಾಗುತ್ತಾನೆ. ಇದರಿಂದಾಗಿ ಮಾನವ ಪ್ರಾಣಿ ಮಾತ್ರ, ನೈತಿಕ ಜೀವಿ (Ethical being) ಆಗಿ ಸೃಷ್ಟಿಯಲ್ಲಿ ಶಿಖರ ಪ್ರಾಯನಾಗಿ ಬಾಳುತ್ತಾನೆ, ಕಂಗೊಳಿಸುತ್ತಾನೆ.

ಸ್ಪಷ್ಟತೆಗಾಗಿ ಜನಪದ ಈ ಸಮಗ್ರ ಪರಿಸರವನ್ನು ಈ ಕೆಳಗಿನಂತೆ ವೃಕ್ಷಚಿತ್ರದಲ್ಲಿ ನಮೂದಿಸಬಹುದು.

ಪರಿಸರ ವೈವಿಧ್ಯದ ಲಕ್ಷಣಗಳನ್ನು ಈ ಕೆಳಗಿನಂಟೆ ಕೋಷ್ಟಕದಲ್ಲಿ ನಮೂದಿಸಬಹುದು.

೪.೦ ಪರಿಸರದ ಲಕ್ಷಣಗಳು (Features)

ಪರಿಸರ ಪ್ರಕಾರಗಳು

ಸತ್

ರೂಪ

ಜೀವ

ಪ್ರಾಣಾಂಶ

ಜೀವಾತ್ಮ

ಮೂಲದ್ರವ

+

+

ಸಸ್ಯ

+

+

+

ಪ್ರಾಣಿ

+

+

+

+

ಮಾನವ

+

+

+

+

+

ಯಾವುದೇ ಪರಿಸರದ ಯಾವುದೇ ಲಕ್ಷಣಕ್ಕೆ ತೊಡಕುಂಟಾದಾಗ ಅದರ ಪರಿಣಾಮ ಜನಪದ ಜೀವನದಲ್ಲಿ, ಜನಪದ ಸಂಸ್ಕೃತಿಯಲ್ಲಿ ಉಂಟಾಗುತ್ತದೆ ಎಂಬುದನ್ನು ಗಮನಿಸಬೇಕಾದ ವಿಷಯ. ಇದರ ಸೂಕ್ಷ್ಮ ಚರ್ಚೆಯೇ ಈ ಜಾನಪದ ಸಮ್ಮೇಳನದಲ್ಲಿ ಮಂಡಿಸಲಾಗುವ ಪ್ರಬಂಧಗಳ ವಿಷಯವೆಂದು ಆಶಿಸಿದ್ದೇನೆ.

. ಪರಿಸರ ಮತ್ತು ಜನಪದ ಸಂಸ್ಕೃತಿ ಸಂಬಂಧ :

ಪರಿಸರ ಮತ್ತು ಜನಪದ ಸಂಸ್ಕೃತಿ ಇವುಗಳ ನಡುವಿನ ಅನ್ಯೋನ್ಯ ಸಂಬಂಧ ಬುಡಕಟ್ಟು ಕರಕುಶಲಗಳ (Tribal artifacts) ಅಧ್ಯಯನವನ್ನು ಮಾಡಿದಾಗ ಮನದಟ್ಟಾಗುತ್ತದೆ.

ಜನಪದರು ತಮ್ಮ ಸುತ್ತಮುತ್ತಲಿನ ಪರಿಸರನವನ್ನು ಗಮನಿಸಿ ತಮ್ಮ ದೈನಂದಿನ ಜೀವನಕ್ಕೆ ಬೇಕಾದ ವಿವಿಧ ಆಕಾರದ ವಸ್ತುಗಳನ್ನು ರೂಪಿಸಿಕೊಂಡಿದ್ದಾರೆ. ಉದಾಹರಣಾರ್ಥವಾಗಿ ಸಸ್ಯ ಪರಿಸರದಲ್ಲಿಯ ಬಿದಿರು, ಮರ, ಕೊಂಬೆ ಇತ್ಯಾದಿಗಳನ್ನು ಗಮನಿಸಿ ಮಾನವ ಹಾಗೂ ದೈವ ವಸತಿಗಳಲ್ಲಿ, ಅಧಾರವಾಗಿ, ವರ್ತುಲ ಸ್ತಂಭಗಳನ್ನು, ಕಾಂಡಗಳನ್ನು, ನಾಳಿಗಳನ್ನು ರಚಿಸಿದ್ದಾರೆ. ಪೀಪಾಯಿಯಾಕಾರದ ವಸ್ತುಗಳು ರೂಪಿಸಿಕೊಂಡಿದ್ದಾರೆ. ವರ್ತುಲಾಕಾರದ ಕಲ್ಲುಗಳನ್ನು ಮುದ್ರೆಯಾಗಿ ಉಪಯೋಗಿಸಿದ್ದಾರೆ ಮತ್ತು ಅನೇಕ ಯಂತ್ರಗಳಲ್ಲಿ ವರ್ತುಲಾಕಾರದ ಭಾಗಗಳನ್ನು ನಿರ್ಮಿಸಿದ್ದಾರೆ. ಊದುವ, ಬಡಿಯುವ ವಾದ್ಯಗಳನ್ನು ಸಿದ್ಧಗೊಳಿಸಿದ್ದಾರೆ. ನೀರಿನ ಕೊಳವೆಗಳನ್ನು ರೂಪಿಸಿದ್ದಾರೆ. ಹೀಗೆ ವಿವಿಧ ರೀತಿಯ ವರ್ತುಲಾಕೃತಿಗಳನ್ನು ದಿನನಿತ್ಯ ನಾವು ಗಮನಿಸುತ್ತೇವೆ.

ಪ್ರಕೃತಿಯ ವರ್ತುಲಾಕಾರದ ಘನವಸ್ತುಗಳಲ್ಲಿ, ಬಹಳಷ್ಟು ಶಕ್ತಿ ಹಾಗೂ ಗಡಸುತನ ಇರುತ್ತದೆ. ಈ ಗುಣಾಂಶಗಳನ್ನು ಜನಪದರು ಅಳವಡಿಸಿಕೊಂಡು ಮಣ್ಣು ಕಲ್ಲುಗಳನ್ನು ಅಗೆಯುವಂಟಹ ಗುದ್ದಲಿ ಅಥವಾ ಭತ್ತ ಕುಟ್ಟ ಅಕ್ಕಿ ಮಾಡುವ ಗಡುಚಾದ ಒನಕೆಗಳನ್ನು ತಯಾರಿಸಿದ್ದಾರೆ. ಒನಕೆಯ ಓಬವ್ವ ಈ ಸಾಧನೆಯನ್ನು ಕುಟ್ಟುವುದಕ್ಕಲ್ಲದೆ ಇತರರನ್ನು ಬಡೀದು ಓಡಿಸಊ ಬಳಸಿಕೊಂಡಿದ್ದಾಳೆಂಬುದು ಸೋಜಿಗದ ಸಂಗತಿ. ಒನೆಕೆಯ ಕುಟ್ಟುವ ಭಾಗ ಸಮಭಾಜಕ (Hemisphere) ರೂಪದ್ದಾದರೆ, ಗುದ್ದಲಿಯಲ್ಲಿ ಅದು ಮೊನಚಾಗಿರುತ್ತದೆ. ಒನಕೆಯ ದಾರ್ಷ್ಟ್ಯವನ್ನು ಹೆಚ್ಚಿಸಲು ಅದಕ್ಕೊಂದು ಲೋಹದ ಬಳೆಯನ್ನು ಕೊಡಿಸುವುದೂ ಉಂಟು. ಒನಕೆಯ ಹಿಡಿಯ ಬಿಗಿತಕ್ಕೋಸ್ಕರ ಸೂಕ್ತ ಸ್ಥಳದಲ್ಲಿ ಅದಕ್ಕೆ ಕಚ್ಚು ಹಾಕುವುದೂ ಉಂಟು.

ಸೋರೆಯಂತಹ ಕಾಯಿಗಳ ಬುರುಡೆಗಳನ್ನು ನೀರಿನ ಪಾತ್ರೆಗಳಾಗಿ ಅನಾದಿಕಾಲದಿಂದಲೂ ಮೂಲನಿವಾಸಿಗಳು ಬಳಸಿದುದನ್ನು ನಾವು ಗಮನಿಸುತ್ತೇವೆ. ಖಾಲಿ ಬುರುಡೆಯೊಲಗೆ ಬೀಜ ಅಥವಾ ಕಲ್ಲುಗಳನ್ನು ಹಾಕಿ ಅಲ್ಲಾಡಿಸಿ ಸಪ್ಪಳ ಮಾಡುವಂತಹ ಸಾಧನಗಳನ್ನಾಗಿಯೂ ಅವುಗಳನ್ನು ಉಪಯೋಗಿಸಿದ್ದಾರೆ. ಈ ಬುರುಡೆಗಳ ಅಂಡಗೋಳಾಕೃತಿ (Spheroid) ಯ ಉಪಾದಿಯಲ್ಲಿ ಮಣಿನ ಹಾಗೂ ಲೋಹದ ಮಡಕೆಗಳನ್ನೂ ಕಾಲಕ್ರಮೇಣ ಜನಪದರು ನಿರ್ಮಿಸಿದ್ದಾರೆ.

ಕಾಡುಗಳಲ್ಲಿ ಬಳ್ಳಿಗಳನ್ನು, ತಂತುಗಳನ್ನು ನೋಡಿ ಅವುಗಳ ಹರವು, ಬಿಗಿ ಎಗುರು ಹಾಗೂ ಬಾಗುವ ಗುನಗಳನ್ನು ಗಮನಿಸಿ ಜನಪದರು ತಲತಲಾಂತರಗಳಿಂದ ಹಲವಾರು ರೀತಿಯ ಹಗ್ಗಗಳನ್ನು ತಯಾರಿಸಿದ್ದಾರೆ. ಸಸ್ಯ ಭಾಗಗಳ ಎಗುರು ಹಾಗೂ ಬಾಗುವ ಗುನಗಳನ್ನು ಗಮನಿಸಿ ಬಿಲ್ಲುಗಳನ್ನು ಸಿದ್ಧಗೊಳಿಸಿ ಆದಿಮಾನವರು ಮೂಲ ಆಯುಧಗಳನ್ನು ರೂಪಿಸಿಕೊಂಡಿದ್ದಾರೆ. ಇವೆಲ್ಲವೂ ಪರಿಸರ ಮತ್ತು ಸಂಸ್ಕೃತಿಗಳ ಸಂಬಂಧಗಳನ್ನು ತೋರಿಸುತ್ತವೆ.

. ಸಮಾರೋಪ

ಒಟ್ಟಿನಲ್ಲಿ ಸೃಷ್ಟಿಯ ಪರಿಸರದಲ್ಲಿಯೇ ಹುಟ್ಟಿ ಬೆಳೆದು ಬಂದಿರುವ ಜನಪದ ಸಂಸ್ಕೃತಿಗೂ ಪರಿಸರಕ್ಕೂ ಅನ್ಯೋನ್ಯ ಸಂಬಂಧ ಉಂಟು. ಪರಿಸರದ ನಾಶದಿಂದ ಜನಪದ ಸಂಸ್ಕೃತಿ ಹಾಳಾಗುತ್ತದೆ. ಅದರ ರಕ್ಷಣೆಯಿಂದ ಅದು ಉಳಿಯುತ್ತದೆ ಹಾಗೂ ಬೆಳೆಯುತ್ತದೆ. ಜನಪದ ಸಂಸ್ಕೃತಿಯ ವಿನಾಶದ ಹಾಗೂ ರಕ್ಷಣೆಯ ಕಲಾತಂತ್ರ (Technology) ವನ್ನು ಮುಂದಿನ ವಿವಿಧ ಗೋಷ್ಠಿಗಳಲ್ಲಿ ನಾವು ನಿರೀಕ್ಷಿಸಿದರೆ, ಅವುಗಳಿಗೆ ಆಧಾರವಾಗಿ ಪರಿಸರದ ವರ್ಗೀಕರಣವನ್ನೂ ಹಾಗೂ ಜನಪದ ಸಂಸ್ಕೃತಿಯ ಸ್ಥೂಲ ಪರಿಚಯವನ್ನೂ ಪ್ರಸ್ತುತದಲ್ಲಿ, ದಿಕ್ಸೂಚಿಯಾಗಿ, ಸಹೃದಯಿಗಳ ಗಮನಕ್ಕೆ ತರಲು ಪ್ರಯತ್ನಿಸಲಾಗಿದೆ.

ಪರಾಮರ್ಶನ ಸಾಹಿತ್ಯ

೧. ಮಾಡ್ತ ವಿಲ್ಯಂ, ೧೯೮೫-‘ಸಂಸ್ಕೃತಿ ಮತ್ತು ಭಾಷೆ’, ಕರ್ನಾಟಕ ಭಾರತಿ, ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯ.

೨. ಮಾಡ್ತ ವಿಲ್ಯಂ, ೧೯೮೭- ಜನಪದ ಭಾಷಾ ವಿಜ್ಞಾನ, ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯ.

೩. ಮಾಡ್ತ ವಿಲ್ಯಂ, ೧೯೯೧ -‘ಸಂಕೇತ ವಿಜ್ಞಾನ ಮತ್ತು ಜಾನಪದ’ ಸಂಶೋಧನ, ಬೆಂಗಳೂರು, ಡಾ. ಎಂ.ಚಿದಾನಂದಮೂರ್ತಿ ಅಭಿನಂದನ ಸಮಿತಿ

೪. ಮಾಡ್ತ ವಿಲ್ಯಂ, ೧೯೯೨ ‘ಸಂಸ್ಕೃತಿ ಮತ್ತು ಕರ್ನಾಟಕ ಕ್ರೈಸ್ಥರು’, ಅನ್ಯೋನ್ಯ, ಬೆಂಗಳೂರು : ಆಶೀರ್ವಾದ

೫. ಸಂಯುಕ್ತ ಕರ್ನಾಟಕ (ಹುಬ್ಬಳ್ಳಿ), ೧೯೯೭ (ಫೆಬ್ರುವರಿ ೧೭ ಮತ್ತು ೧೮)

6. Menon.T.M. 1997 (Feb), “Form, Function and Design in Tribal Artifacts” DLA News (21.2)

7. Prinches, Charles & J.B. McDaniel (eds.) 1993 Good News for Animals, Christian approaches to animal Well-bring. Maryknoll, New York, Orbis Books

8. The Week 1997 (Feb.23)