ನಮ್ಮ ಕರ್ನಾಟಕದ ಎಲ್ಲಾ ಕಲಾ ಮಾಧ್ಯಮಗಳ ಜೊತೆ ಬೆಸೆದುಕೊಂಡಿರುವ ಶ್ರೀಮತಿ ವಿಮಲಾ ರಂಗಾಚಾರ್ ಮತ್ತು ಡಾ|| ಆರ್. ರಂಗಾಚಾರ್ ಅವರ ಪುತ್ರಿ ರೇವತಿ ಸತ್ಯು ಮತ್ತು ವಿಮಲಾದ ಸೋದರ ಸಂಬಂಧಿ ಆಶಾಗೋಪಾಲ್ ಬೆಂಗಳೂರಿನವರೇ ಆಗಿದ್ದು ತಮ್ಮ ಏಳನೇ ವಯಸ್ಸಿನಿಂದಲೇ ನೃತ್ಯಾಭ್ಯಾಸವನ್ನು ಪ್ರಾರಂಭಿಸಿ ಭರತನಾಟ್ಯ ದಿಗ್ಗಜಗಳಾದ ಶ್ರೀ ಯು.ಎಸ್.ಕೃಷ್ಣರಾವ್ ಹಾಗೂ ದಿ. ಚಂದ್ರಭಾಗಾದೇವಿ ಅವರ ಬಳಿ ನೃತ್ಯ ಶಿಕ್ಷಣ ಪಡೆದ ಇವರಿಬ್ಬರೂ, ತಂಜಾವೂರು ಕಿಟ್ಟಪ್ಪ ಪಿಳ್ಳೈ ಹಾಗೂ ಎಂ. ಮುತ್ತಯ್ಯ ಪಿಳ್ಳೈ ಅವರಲ್ಲಿ ಹೆಚ್ಚಿನ ಅಧ್ಯಯನವನ್ನೂ ಮತ್ತು ಪದ್ಮಭೂಷಣ ವೆಂಕಟಲಕ್ಷ್ಮಮ್ಮ ಅವರ ಬಳಿ ಅಭಿನಯವನ್ನೂ ಕಲಿತು ಪ್ರಬುದ್ಧ ನರ್ತಕಿಯರಾದರು.

ಭಾರತದ ಮಾಜಿ ಪ್ರಧಾನಿ ದಿ. ಶ್ರೀಮತಿ ಇಂದಿರಾಗಾಂಧಿ ಅವರೂ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಭರತನಾಟ್ಯ ಪ್ರದರ್ಶನದ ನೀಡಿದ ಇವರಿಬ್ಬರು ’ಡ್ಯಾನ್ಸಿಂಗ್ ದೀಪಲಕ್ಷ್ಮೀಸ್ ಆಫ್ ಮೈಸೂರು’ ಎಂದೆ ಖ್ಯಾತಿ ಪಡೆದವರು. ಅತ್ಯುತ್ತಮ ನೃತ್ಯ ನಿರ್ದೇಶಕಿಯರೂ ಆಗಿರುವ ಶ್ರೀಮತಿ ಆಶಾ ಹಾಗೂ ಶ್ರೀಮತಿ ರೇವತಿ ಅವರು ಪು.ತಿ.ನ. ಅವರ ’ಸೀತಾ ಪರಿಣಯ’, ’ಆನ್‌ಮೋಲ್ ಭಕ್ತಿ’, ’ಮೀರಾ’, ’ಆರಾಧನಾ’ ಮುಂತಾದ ರೂಪಕಗಳನ್ನು ನಿರ್ದೇಶಿಸಿದ್ದಾರೆ.

೧೯೮೦ರಿಂದ ಅಮೆರಿಕಾದಲ್ಲಿಯೇ ನೆಲೆಸಿರುವ ಇವರಿಬ್ಬರೂ, ’ಆರತಿ ನೃತ್ಯ ಶಾಲೆ’ ಎಂಬ ಸಂಸ್ಥೆ ಮೂಲಕ, ನಮ್ಮ ನಾಡಿನ ಹಾಗೂ ರಾಷ್ಟ್ರದ ಸಂಸ್ಕೃತಿ ಪರಿಚಯವನ್ನು ನೃತ್ಯ ಕಲೆಯ ಮೂಲಕ ಅಲ್ಲಿನ ಹಲವಾರು ಶಿಷ್ಯರಿಗೆ ಮಾಡಿಕೊಡುತ್ತಿರುವುದಲ್ಲದೆ, ದೇವಾಲಯ ನಿಮಾರ್ಣ, ಧರ್ಮ ಪ್ರಸಾರ ಕಾರ್ಯಕ್ರಮಗಳು ಮುಂತಾದ ನಮ್ಮ ಸಂಸ್ಕೃತಿಯ ಪ್ರಚಾರಕ್ಕೆ ದೂರ ದೇಶದಲ್ಲಿ ತಮ್ಮ ನೃತ್ಯ ಕಾರ್ಯಕ್ರಮಗಳ ಮೂಲಕ ಆರ್ಥಿಕ ಸಹಕಾರ ನೀಡುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿನ ಹಲವಾರು ಗೌರವ ಪುರಸ್ಕಾರಗಳು ಈ ಇಬ್ಬರೂ ಮಹಿಳಾ ನೃತ್ಯಪಟುಗಳಿಗೆ ಸಂದಿವೆ.

ಸಂಗೀತ-ನೃತ್ಯ ಅಕಾಡೆಮಿಯು ಈ ಈರ್ವರಿಗೆ ೧೯೯೮-೯೯ನೇ ಸಾಲಿನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.