ಸಾಗಿಯೇ ಸಾಗುತಿವೆ, ಸಾಗಿಯೇ ಸಾಗುತಿವೆ
ಲಗ್ಗೆ ನುಗ್ಗುವ ಸೇನೆಯೊಲು ಮೋಡಗಳ ಸಾಲು !
ಸುತ್ತ ನರಳಿನ ನೆರಳು,
ಜೀವಗಳೊ ಛಾಯೆಗಳೊ
ತಿಳಿಯಲಾರದ ಒಗಟು !

ರವಿಯಿಲ್ಲ, ಶಶಿಯಿಲ್ಲ,
ಬೆಳಕೂ ಅಲ್ಲ ಕತ್ತಲೂ ಅಲ್ಲ
ಮೋಡಗಳ ಕೆಸರಿನಲಿ ಹೂತುಹೋಗಿದೆ
ಉದಯಾಸ್ತಗಳ ಪೆಂಪು !

ನೂರು ಕೊರಗಿನ ಜಿನುಗಿನೊಲು
ತಟಪಟನೆ ತಟಪಟನೆ
ಒಂದೇ ಸಮನೆ ಕೊರೆವ ಸೋನೆಯ ಮೇಳ-
ದಲಿ ಜಗ ಮೂಕ,
ಬೆಸರದ ಗೋರಿಯಾಗಿದೆ ಲೋಕ !

ಗಾಳಿಗಳ ಗೋಳಿನಲಿ ಮೋಡಗಳ ತುಮುಲದಲಿ
ಸೋನೆಗಳ ಮೇಳದಲಿ
ಸಿಕ್ಕು ನರಳುವ ಜಗಕೆ ಎಂದು ಬಿಡುಗಡೆಯಹುದೊ
ಶ್ರಾವಣದ ಶ್ರೀಗೌರಿಯವತಾರವೆಂದಹುದೊ
ಎಂದು ಕಾದಿದೆ ಜೀವ ಗೂಡಿನೊಳಗೆ !
ಗರಿ ಮುದುರಿ ಕಣ್ಮುಚ್ಚಿ ಮೌನದೊಳಗೆ !