ಗಗನ ಕ್ಕೇರುತ್ತಿರುವ ತರಕಾರಿ ಬೆಲೆಗಳು ನಮ್ಮನ್ನು ವಿವಶರನ್ನಾಗಿ ಮಾಡುತ್ತಿದೆ. ಹಿತ್ತಿಲ ಕಡೆ ಸುಳಿಯದವರೂ ಸಹ ಈಗ ಏನಾದರೂ ಸೊಪ್ಪು-ಗಿಪ್ಪು ಸಿಗಬಹುದೆಂದು ಹುಡುಕುವಂತಾಗಿದೆ. ಕೆಲವೊಂದು ತರಕಾರಿಗಳು ಇದ್ದರೂ ಕಿತ್ತನಂತರ ಬಹಳ ದಿನ ಉಳಿಯಲಾರವು. ದಿಡೀರನೆ ಬರುವ ಅತಿಥಿ ಗಳಿದ್ದರಂತೂ ದೇವರೇ ಗತಿ. ಇಂತಹ ಸಮಯದಲ್ಲಿ ಸಹಾಯಕ್ಕೆ ಬರುವುದು ಗೆಡ್ಡೆ ತರಕಾರಿಗಳು. ಸುವರ್ಣ ಗೆಡ್ಡೆ, ಡಯಸ್ಕೋರಿಯ, ಯಾಮ್ ಬೀನ್, ಸೇಮೆ ಗೆಡ್ಡೆ ಗಳು ಕಿತ್ತ ನಂತರವೂ ಬಹು ದಿನ ಇರುತ್ತವೆ. ಬೇಕೆಂದಾಗ ಉಪಯೋಗಿಸ ಬಹುದು. ಇವೆಲ್ಲಾ ಹೆಚ್ಚು ಖರ್ಚಿಲ್ಲದೆ ಸುಲಭವಾಗಿ ಹಿತ್ತಿಲಲ್ಲಿ ಬೆಳೆಯುವಂತಹವು. ಬಹಳ  ದಿನ ಉಳಿಯುವಂತಹವು.

ಅರಬಿಎಂದೇಪ್ರಸಿದ್ಧವಾಗಿರುವಸೇಮೆಗೆಡ್ಡೆ ಸಹ ಸುಲಭವಾಗಿ ಬೆಳೆಯ ಬಹುದು.   ಮೇ-ಜೂನ್, ಅಕ್ಟೋಬರ್- ನವೆಂಬರ್, ತಿಂಗಳು ಬೆಳೆ ಪ್ರಾರಂಭಿಸಲು ಸೂಕ್ತ ಸಮಯ. ನೀರಾವರಿ ಆಶ್ರಯವಿರುವ ಜಾಗಗಳಲ್ಲಿ ಬೇಕೆಂದಾಗ ಬೆಳೆಯ ಬಹುದು. ಬೆಚ್ಚಗಿನ ವಾತಾವರಣ, ನೀರು ನಿಲ್ಲದೆ ಬಸಿದು ಹೋಗುವ ಮಣ್ಣು ಈ ಬೆಳೆಗೆ ಸೂಕ್ತ. ಕುಂಡಗಳಲ್ಲಿ, ದೊಡ್ಡ ಚೀಲಗಳಲ್ಲಿ ಸಹ ಬೆಳೆಯ ಬಹುದು. ಭಾಗಶ; ನೆರಳಿದ್ದರೂ ಇಳುವರಿ ಚೆನ್ನಾಗಿರುತ್ತೆ  ಆದರೆ ಛಳಿಗಾಲಕ್ಕೆ ಹೇಳಿ ಮಾಡಿಸಿದ ಬೆಳೆ ಅಲ್ಲ. ತೇವಾಂಶ ಕಮ್ಮಿಯಾದರೆ ಎಲೆಗಳು ಒಣಗಲಾರಂಭಿಸುತ್ತೆ. ಹೆಚ್ಚು ದಿನ ಬರ ತಡೆಯುವ ಶಕ್ತಿ ಈ ಗಿಡಕ್ಕಿಲ್ಲ.

ಚೀಲದಲ್ಲಿ ಬೆಳೆದಿರುವ ‘ಅರಬಿ’.

ತಾಯಿ ಗೆಡ್ಡೆಯಿಂದ ಬೇರ್ಪಡಿಸಿದ ಸಣ್ಣ ಸಣ್ಣ ಗೆಡ್ಡೆ ಗಳಿಂದ ಹೊಸ ಗಿಡ ಬೆಳೆಯ ಬಹುದು. ಮೊಳಕೆ ಬಂದವುಗಳಾದರೆ ಸೂಕ್ತ. ಮಣ್ಣಿಗೆ ಸಮಾನಾಂತರವಾಗಿ ಗೆಡ್ಡೆಯ ತುದಿ ಬರುವಂತೆ ನಾಟಿ ಮಾಡ ಬೇಕು.   ೩೦ಸೆಂ.ಮೀ. ಎತ್ತರದ ಏರು ಮಡಿಗಳಲ್ಲಿ, ೬೦ ಸೆಂ ಮೀ. ಅಂತರದ ಸಾಲುಗಳಲ್ಲಿ ಗೆಡ್ಡೆಯಿಂದ ಗೆಡ್ಡೆಗೆ ೪೫ಸೆಂ.ಮೀ. ಕೊಟ್ಟು ನಾಟಿ ಮಾಡಿದರೆ ಬೇರು ಬಿಡಲು, ಹೆಚ್ಚು ಗೆಡ್ಡೆಗಳಾಗಲು ಅವಕಾಶ ವಾಗುತ್ತದೆ. ನಾಟಿ ಮಾಡಿದ ಒಂದು ತಿಂಗಳ ನಂತರ ಕಳೆ ತೆಗೆದು, ಸ್ವಲ್ಪ ಕಾಂಪೋಸ್ಟ್ ಜೊತೆಗೆ ಬೂದಿ ಬೆರಸಿ ಹಾಕಿದರೆ, ಇಳುವರಿ ಹೆಚ್ಚುತ್ತದೆ. ಎರೆಡು ಕೆ.ಜಿ. ಗೆಡ್ಡೆ ನೆಟ್ಟು, ೮೦ ಕೆ.ಜಿ. ಇಳುವರಿ ತೆಗೆದವರಿದ್ದಾರೆ.

ನೆಟ್ಟ ೫-೬ ತಿಂಗಳಲ್ಲಿ ಗೆಡ್ಡೆಗಳು ಬಲಿತು ಕೊಯಿಲಿಗೆ ಸಿದ್ಧವಾಗುತ್ತವೆ. ಈ ಗಿಡದ ಎಲೆಗಳು ದಟ್ಟ ಹಸಿರು ಬಣ್ಣದ್ದಿದ್ದು ಅವುಗಳನ್ನೂ ಅಡಿಗೆಗೆ  ಉಪಯೋಗಿಸುತ್ತಾರೆ. ಎಲೆಗಳನ್ನು ಉಪಯೋಗಿಸುವಾಗ ಸ್ವಲ್ಪ ಹುಣಿಸೆ ಹಣ್ಣು ಬಳಸುವುದು ಅವಶ್ಯ. ಗೆಡ್ಡೆಗಳಿಗೂ ಅಷ್ಟೆ. ಹುಣಿಸೆ ನೀರಿನಲ್ಲಿ ಬೇಯಿಸಿ ನಂತರ ಸಿಪ್ಪೆ ತೆಗೆದರೆ ಪೌಷ್ಟಿಕಾಂಶ ಹೆಚ್ಚುವುದಲ್ಲದೆ, ಕೆಲವೊಮ್ಮೆ ಆಗುವ ಗಂಟಲ ಕೆರೆತ ಸಹ ಕಮ್ಮಿಯಾಗುತ್ತದೆ.

ಸ್ವಲ್ಪ ಅಗಲವಾಗಿರುವ ಚೀಲಗಳಲ್ಲಿ ಸಹ ಈ ಗೆಡ್ಡೆ ಬೆಳೆಯ ಬಹುದು.  ನೋಡಲು ಸುಂದರವಾಗಿರುವ ಎಲೆಗಳಿರುವುದರಿಂದ ಹಿತ್ತಿಲಿನ ಶೋಭೆ ಹೆಚ್ಚಿಸಲು ಅಲಂಕಾರಿಕ  ಸಸ್ಯವಾಗಿ ಸಹ ಕಾಣಿಸುತ್ತದೆ. ಗಿಡ ಒಣಗಲಾರಂಭಿಸಿದಾಗ, ಕೆಳಗಿರುವ ನಿಧಿ ನಮಗಾಗಿ. ಬೇಕೆಂದಾಗ ಕಿತ್ತು ಬಳಸ ಬಹುದು. ಕಿತ್ತ ಗೆಡ್ಡೆಗಳನ್ನು ಒಂದೆರೆಡು ದಿನ ನೆರಳಲ್ಲಿ ಒಣಗಿಸಿ ಇಟ್ಟರೆ, ಹತ್ತಾರು ತಿಂಗಳ ವರೆಗೆ ಚೆನ್ನಾಗಿ ಇರುತ್ತದೆ. ಮೊಳಕೆ ಬಂದ ನಂತರ ಅವುಗಳನ್ನು ನಾಟಿಗೆ ಬಳಸ ಬಹುದು.

ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ , ಬಿ೬, ಕೆ, ಅಲ್ಲದೆ ಮಿನರಲ್ಸ್ ಗಳೂ ಇರುವ ಗೆಡ್ಡೆಗಳು ಬಹಳ ದಿನದ ವರೆಗೆ ಪೌಷ್ಟಿಕಾಂಶ ಉಳಿಸಿಕೊಂಡಿರುವುದು ವಿಶೇಷ.

ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಕರ್ನಾಟಕದಲ್ಲಿ ಈ ಗಿಡದ ಎಲೆ ಮತ್ತು ಗೆಡ್ಡೆ ಬಳಕೆ ಜಾಸ್ತಿ. ತಮಿಳು ನಾಡಿನಲ್ಲಿ ‘ಅರಬಿ ಫ್ರೈ’ ಬಹಳ ಬೇಡಿಕೆ ಇರುವ ತಿಂಡಿ. ಕೇರಳದಲ್ಲಿ ವಿಶೇಷ ಪಲ್ಯ ಮಾಡುವಾಗ ಇದನ್ನು ಬಳಸುತ್ತಾರೆ. ಈ ಎಲ್ಲ ಬಗೆಯ ತಿನಿಸುಗಳು ಎಲ್ಲರ ಬಾಯಲ್ಲೂ ನೀರು ತರಿಸುವುದಂತು ನಿಜ.

ಮಾಡಿನೋಡಿ. ಸವಿಯಿರಿ.

ಪತ್ರೊಡೆ: ದಕ್ಷಿಣ ಕನ್ನಡದ ಅಚ್ಚು ಮೆಚ್ಚಿನ ತಿಂಡಿ.  ನೆನೆಸಿದ ಅಕ್ಕಿ, ಕಡಲೆಬೇಳೆ, ತೆಂಗಿನಕಾಯಿ, ಮಸಾಲೆ ಎಲ್ಲ ಸೇರಿಸಿ ರುಬ್ಬಿ ಎಲೆಗೆ ದಪ್ಪವಾಗಿ ಸವರಿ ಸುರುಳಿ ಸುತ್ತ ಬೇಕು. ಇಡ್ಲಿಯಂತೆ, ಆವಿಯಲ್ಲಿ  ಬೇಯಿಸಿ ಆರಿದ ಮೇಲೆ ಸಣ್ಣ ತುಂಡುಗಳಾಗಿ ಕತ್ತರಿಸ ಬೇಕು. ಒಗ್ಗರಣೆ ಮಾಡಿ ಎರೆಡು ನಿಮಿಶ ಬಾಡಿಸಿದರೆ ಘಮ ಘಮ ಪತ್ರೊಡೆ ಸವಿಯಲು ಸಿದ್ಧ.

ಅರಬಿ ಫ್ರೈ: ಸ್ವಲ್ಪ ಹುಣಿಸೆ ಹುಳಿ ಹಾಕಿ ಗೆಡ್ಡೆಗಳನ್ನು ಬೇಯಿಸಿ ಕೊಳ್ಳಿ. ಮೇಲಿನ ಸಿಪ್ಪೆ ತೆಗೆಯಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉಪ್ಪು, ಖಾರ ಹಾಕಿ ಮಂದಾಗ್ನಿಯಲ್ಲಿ ಹುರಿಯಿರಿ. ಮೇಲ್ಭಾಗ ಗರಿ ಗರಿಯಾಗಿ ಹೊಂಬಣ್ಣಕ್ಕೆ ತಿರುಗಿದಾಗ , ಬಿಸಿ ಬಿಸಿ ಅರಬಿ ಫ್ರೈ ತಿನ್ನಲು ಸಿದ್ಧ.

(ಚಿತ್ರಗಳು: ಎ.ಆರ್.ಎಸ್ ಶರ್ಮ)