ತಿನ್ನಲು ಆಹಾರದ ಕೊರತೆಯುಂಟಾದಾಗ, ಮಾನವರನ್ನು ರಕ್ಷಿಸಿದ್ದು  ಗೆಡ್ಡೆಗಳೇ. ಇವುಗಳ ರಕ್ಷಣೆಗಾಗಿಯೇ  ಒಂದು ಸಂಶೋಧನಾ ಕೇಂದ್ರ ಇರುವುದು ತಿಳಿದರೆ, ಈ ಗೆಡ್ಡೆಗಳ ಮಹತ್ವ ಎಷ್ಟೆಂಬುದು ಅರಿವಾದೀತು. ಗೆಡ್ಡೆಗಳ ಬೇಸಾಯ , ಕೊಯಿಲು, ಸಂಸ್ಕರಣೆ ಮತ್ತು ಸಂರಕ್ಷಣೆ ಬಗ್ಗೆ ಇಲ್ಲಿ ವಿಸ್ತ್ರುತವಾದ ಸಂಶೋಧನೆಗಳು ನಡೆಯುತ್ತವೆ. ಅವುಗಳ ಅಭಿವೃದ್ಧಿ, ಪ್ರಚಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಗೆಡ್ಡ್ಡೆಗಳು ನಮ್ಮ  ಭವಿಷ್ಯದ ನಿದಿ.

ಭೂಮಿಯ ಕೆಳಗಡೆ ಬೆಳೆದರೂ, ಮೇಲಿರುವವರಿಗೆ ಆಹಾರ ಈ ಗೆಡ್ಡೆಗಳು. ಸಿಹಿ ರುಚಿಯ ಗೆಣಸು, ಹಲವು ಅಡಿಗೆಗಳಿಗೆ ರುಚಿ ಹೆಚ್ಚಿಸುವ ಸುವರ್ಣಗೆಡ್ಡೆ, ಹತ್ತು ಗೆಡ್ಡೆ ತಿಂದರೆ ಹೊಟ್ಟೆ ತುಂಬುವ ಸೇಮೆ ಗೆಡ್ಡೆ, ಕೆಸುವಿನ ಗೆಡ್ಡೆ, ಹೀಗೇ ಹತ್ತು ಹಲವು ಗೆಡ್ಡೆಗಳು ಹಿತ್ತಿಲಲ್ಲಿ ಸುಲಭವಾಗಿ ಬೆಳೆಯುವ ಆಹಾರ ಸುರಕ್ಷತೆಯ ದ್ಯೋತಕಗಳು. 

ಹಲವಾರು ತಿನಿಸುಗಳ ರುಚಿ ಹೆಚ್ಚಿಸುವ, ಮಕ್ಕಳಿಂದ ಮುದುಕರವರೆಗೆ, ಪ್ರಿಯವಾದ ಆಲೂಗೆಡ್ಡೆಯ ಬಗ್ಗೆಯೇ ಈ ಬರಹ ಎಂಬುದು ಈಗಾಗಲೇ ನಿಮಗೆ ತಿಳಿದಿದೆಯಲ್ಲವೇ? ಹೌದು. ರುಚಿ ರುಚಿಯಾದ ಆಲೂ ಪರೋಟ, ಆಲೂ ಟಿಕ್ಕಿ, ಬಟಾಟ ವಡ, ಮಾಡುವುದೂ ಈ ಆಲೂಗೆಡ್ಡೆಯಿಂದಲೇ. ಕನ್ನಡದಲ್ಲಿ ಆಲೂಗೆಡ್ಡೆ, ತೆಲುಗಿನಲ್ಲಿ ಆಲೂಗಡ್ಡಲು, ತಮಿಳಿನಲ್ಲಿ ಉರಳೆ ಕಳಂಗು, ಹಿಂದಿಯಲ್ಲಿ ಬಟಾಟೆ, ಇಂಗ್ಲೀಷಿನಲ್ಲಿ ಪೊಟೇಟೊ, ಸಸ್ಯಶಾಸ್ತ್ರೀಯ ಹೆಸರು ‘ಸೋಲನಮ್ ಟ್ಯೂಬರೂಸಮ್’. ಹೆಸರು ಏನಾದರೂ, ರುಚಿ, ಬೇಡಿಕೆ ಎರೆಡೂ ಜಾಸ್ತಿ ಈ ಗೆಡ್ಡೆಗೆ.

ಚೀಲದಲ್ಲಿ ಬೆಳೆದ ಆಲೂಗೆಡ್ಡೆ ಗಿಡ.

ಆಲೂಗೆಡ್ಡೆ ಬೆಳೆಯುವುದು ಬಹಳ ಸುಲಭ. ಪೂರ್ಣ ಬಿಸಿಲಿರುವ ಜಾಗದಲ್ಲಿ ಚೆನ್ನಾಗಿ ಬೆಳೆಯುವ ಗಿಡ. ಬಹಳ ಅಗಲವಾಗಿ ಬೇರು ಬಿಡುತ್ತದೆ. ಹೆಚ್ಚು ಸಾವಯವ ಗೊಬ್ಬರ ಸೇರಿಸಿದ, ಮರಳು ಬೆರೆಸಿದ ಹಗುರವಾದ ಮಿಶ್ರಣ ಇದ್ದರೆ ಹೆಚ್ಚು ಗೆಡ್ಡೆಗಳು ಬರಲು ಸಾಧ್ಯ. ಏರು ಮಡಿಗಳಲ್ಲಿ ಸಹ ಗೆಡ್ಡೆಗಳು ಬೆಳೆಯ ಬಲ್ಲವು. ಆದರೆ ಒಮ್ಮೆ ಬೆಳೆದ ಜಾಗದಲ್ಲೇ ಪುನ: ಅದನ್ನೇ ಬೆಳೆಯುವುದು ಸೂಕ್ತವಲ್ಲ.

ಜೂನ್, ಜುಲೈ ತಿಂಗಳು, ಹಾಗೂ ಸೆಪ್ಟೆಂಬರ್-ಅಕ್ಟೋಬರ್ ಈ ಬೆಳೆ ಶುರು ಮಾಡಲು ಸೂಕ್ತವಾದ ತಿಂಗಳುಗಳು. ಸ್ವಲ್ಪ ಛಳಿ ಇದ್ದರೆ ಗೆಡ್ಡೆಗಳು ಚೆನ್ನಾಗಿ ಬೆಳೆಯುತ್ತವೆ. ಆದರೆ ಹೆಚ್ಚು ಮಂಜು ತಡೆದುಕೊಳ್ಳುವುದಿಲ್ಲ. ಸಾಕಷ್ಟು ಕಣ್ಣುಗಳಿರುವ, ಬಲಿತ ಗೆಡ್ಡೆಗಳನ್ನು ಬೀಜದ ಗೆಡ್ಡೆಗಳೆಂದು ಕರೆಯುತ್ತಾರೆ.  ಗೆಡ್ಡೆ ನೆಡುವ ೮-೧೦ದಿನ ಮೊದಲು ಗೆಡ್ಡೆಗಳನ್ನು ಶಾಖವಾಗಿರುವ ಜಾಗದಲ್ಲಿ ಇಟ್ಟರೆ ಗೆಡ್ಡೆಗಳ ಕಣ್ಣುಗಳಿಂದ ಚಿಗುರು ಬರುತ್ತದೆ. ೨೫-೩೦ ಗ್ರಾಂ ತೂಕದ ಅಥವ ಎರೆಡು ಮೂರು ಕಣ್ಣುಗಳಿರುವಂತೆ ಕತ್ತರಿಸಿದ ತುಂಡು ನಾಟಿಗೆ ಸೂಕ್ತ. . ಗೆಡ್ಡೆ ಸಣ್ಣದಿದ್ದರೆ ಇಡಿಯಾಗಿಯೇ ನೆಡ ಬಹುದು.

ನೆಡುವಾಗ ಗೊಬ್ಬರ ಹಾಕಿದ್ದರೂ ಸಹ, ೪೦-೪೫ ದಿನಗಳಾದ ನಂತರ ಸುತ್ತಲಿನ ಕಳೆ ತೆಗೆದು, ಸ್ವಲ್ಪ ಕಾಂಪೋಸ್ಟ್ ಬೆರೆಸಿ. ಇದಕ್ಕೆ ಸ್ವಲ್ಪ ಬೂದಿ ಬೆರೆಸಿ ಕೊಳ್ಳ ಬಹುದು. ಇದರಿಂದ ಗೆಡ್ಡೆಗಳು ದಪ್ಪವಾಗುವುದಲ್ಲದೆ, ಅವುಗಳ ತಾಳಿಕೆಯೂ ಜಾಸ್ತಿಯಾಗುತ್ತದೆ. ಸಾಲುಗಳಲ್ಲಿ ನೆಟ್ಟರೆ, ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಮಣ್ಣು ಏರಿಹಾಕುವುದು ಸುಲಭವಾಗುತ್ತದೆ.

ಅರಳಿರುವ ಆಲೂಗೆಡ್ಡೆ ಹೂವುಗಳು.

ಆಲೂಗೆಡ್ಡೆ ವ್ಯವಸಾಯದಲ್ಲಿ, ಮಣ್ಣು ಏರಿಹಾಕುವ ಕೆಲಸ ಬಹು ಮುಖ್ಯ. ಯಾವದೇ ಕಾರಣಕ್ಕೂ, ಗೆಡ್ಡೆಗೆ ಬಿಸಿಲು ಬೀಳ ಬಾರದು. ಹಾಗೆ ಬಿದ್ದಲ್ಲಿ ಗೆಡ್ಡೆಗಳು ಹಸಿರಾಗಿ ಮಾರುಕಟ್ಟೆಯಲ್ಲಿ ಬೆಲೆ ಕಮ್ಮಿಯಾಗುತ್ತದೆ.   ಹಗುರವಾದ ಮಣ್ಣಿನಲ್ಲಿ ಬೇರುಗಳು ಹರಡಲು, ಗೆಡ್ಡೆ ಕಟ್ಟಲು ಸಹಾಯಕವಾಗುತ್ತದೆ. ಬಿಸಿಲು ಹೆಚ್ಚಿದ್ದಾಗ ನೀರು ಕೊಡುವುದನ್ನು ಮರೆಯಬಾರದು. ಗಿಡದಲ್ಲಿ ಹೂವು ಬಿಟ್ಟರೂ, ಬೀಜವಾಗುವುದು ಕಡಿಮೆ. ಹೂ ಬಿಡಲಾರಂಭಿಸಿದಾಗ, ನೀರು ಅತ್ಯವಶ್ಯ. ೯೦ದಿನಗಳ ನಂತರ ಗಿಡ ಒಣಗಲಾರಂಭಿಸಿದಾಗ, ನೀರು ಕಮ್ಮಿ ಮಾಡಿದರೆ, ಗೆಡ್ಡೆ ಕೀಳುವುದು ಸುಲಭವಾಗುತ್ತದೆ. ಬೇಕೆಂದಾಗ ದಪ್ಪವಾಗಿರುವ ಗೆಡ್ಡೆಗಳನ್ನು ಕಿತ್ತು ಉಪಯೋಗಿಸಬಹುದು. ಹಸಿರಾಗಿರುವ ಗೆಡ್ಡೆಗಳು ಬಲಿತಿರುವುದಿಲ್ಲ. ದಾಸ್ತಾನಿಡಬೇಕಾದಲ್ಲಿ ಗೆಡ್ಡೆಗಳನ್ನು ಗಿಡ ಒಣಗಿದ ೨-೩ ವಾರಗಳ ನಂತರ ಕೀಳ ಬಹುದು. ಎರೆಡು ಮೂರು ದಿನ ಹಾಗೇ ಗಾಳಿ ಆಡಲು ಬಿಟ್ಟು ನಂತರ ಶೇಖರಿಸ ಬಹುದು.

ಹೆಚ್ಚು ವಿಟಮಿನ್ ‘ಸಿ’ ಇರುವ ಆಲೂಗೆಡ್ಡೆಯಲ್ಲಿ, ಬಿ೬, ಕಬ್ಬಿಣದ ಅಂಶ, ಮೆಗ್ನಿಶಿಯಂ, ಪೊಟಾಶಿಯಂ, ಹಾಗೂ ನಾರಿನ ಅಂಶ ಸಹ ಇದೆ. ಗೆಡ್ಡೆಗೂ, ಸಿಪ್ಪೆಗೂ ಇರುವ  ಮಧ್ಯದ ಪದರದಲ್ಲಿ ಹೆಚ್ಚು ಜೀವ ಸತ್ವಗಳಿರುವುದರಿಂದ ಬೇಯಿಸಿದ ಮೇಲೆ ಸಿಪ್ಪೆ ತೆಗೆಯುವುದು ಸೂಕ್ತ. ಈ ಸಮಯದಲ್ಲಿ ಸಿಪ್ಪೆಗೆ ಅಂಟಿರುವ ಪೌಷ್ಟಿಕಾಂಶ ಗೆಡ್ಡೆಯ ಒಳಕ್ಕೆ ಇಳಿಯುತ್ತವೆ.  ಯಾವದೇ ಕಾರಣಕ್ಕೂ, ಸಿಪ್ಪೆ ತೆಗೆದಾದ ಮೇಲೆ ತೊಳೆಯಬಾರದು. ಎಣ್ಣೆಯಲ್ಲಿ ಕರಿದಾಗ , ಕ್ಯಾಲೊರಿ ಜಾಸ್ತಿಯಾಗಿ ಕೆಲವು ಜೀವಸತ್ವಗಳು ನಾಶವಾಗುತ್ತವೆ. ಇವುಗಳ ದಿನನಿತ್ಯದ ಬಳಕೆಯಿಂದ ದೇಹದಲ್ಲಿನ ಕೊಬ್ಬಿನಂಶ ಜಾಸ್ತಿಯಾಗುವ ಅವಕಾಶಗಳು ಜಾಸ್ತಿ.

ಎಲ್ಲದರೊಡನೆ ಹೊಂದಿಕೊಳ್ಳುವ ಗುಣ ವಿರುವುದರಿಂದ ಪಲ್ಯ, ಹುಳಿ ಇನ್ನಿತರ ಅಡಿಗೆಗಳಲ್ಲೂ ಬಳಸ ಬಹುದು. ದೇಹಕ್ಕೆ ಶಕ್ತಿಕೊಡುವುದಲ್ಲದೆ, ಪೋಶಕಾಂಶಗಳನ್ನು ಒದಗಿಸುವ ಈ ಗೆಡ್ಡೆಯನ್ನು ಹಿತ್ತಿಲಲ್ಲಿ ಬೆಳೆದುಕೊಳ್ಳುವುದು ಒಳ್ಳೆಯದು. ದೇಹದ ತೂಕ ಹೆಚ್ಚಾಗಿರುವವರು, ಡಯಾಬಿಟೀಸ್ ಇರುವವರು, ಹೆಚ್ಚು ತಿನ್ನದಿರುವುದು ಒಳ್ಳೆಯದು. ಬಹಳ ಬೇಡಿಕೆಯಲ್ಲಿರುವ ‘ಚಿಪ್ಸ’ ಗೆ ಸೇರಿಸುವ ರಕ್ಷಕ ದ್ರವ್ಯಗಳಿಂದಾಗಿ ಅಪರೂಪಕ್ಕೆ ತಿನ್ನುವುದು ಕ್ಷೇಮ. ದಿನ ನಿತ್ಯ ತಿನ್ನುವ ‘ಗೀಳು’ ಬೇಡ.

ಕೊನೆಹನಿ: ಎಲ್ಲ ಗಿಡಗಳಿಗೆ ಬರುವಂತೆಯೇ ಈ ಗೆಡ್ಡೆಗೂ ರೋಗ ರುಜಿನಗಳು ಬರುತ್ತವೆ. ಜೈವಿಕವಾಗಿ ಎಲ್ಲವನ್ನೂ ನಿಯಂತ್ರಿಸ ಬಹುದು. ಕೀಟನಾಶಕದ ಉಪಯೋಗ ಬೇಡ. ಗೆಡ್ಡೆಗಳನ್ನು ಬೆಳೆಯುವುದು, ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಆಹಾರ ಕೊರತೆಯ ಈ ದಿನಗಳಲ್ಲಿ ಆಹಾರ ಸುರಕ್ಷತೆಗೆ, ಹಸಿದ ಹೊಟ್ಟೆಗಳಿಗೆ ಆಹಾರವಾಗಿ ಗೆಡ್ಡೆಗಳು ಮಹತ್ವದ ಪಾತ್ರ ವಹಿಸ ಬಲ್ಲವು. ಅವುಗಳನ್ನು ಉಳಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ. ಗೆಡ್ಡೆಗಳನ್ನೇ ಸಾಕಷ್ಟು ದಿನ  ಇಟ್ಟು ಬಳಸ ಬಹುದು. ಅದರೊಂದಿಗೆ ಮೌಲ್ಯವರ್ಧನೆ ಮಾಡಿದರೆ, ಬೆಳೆದ ಗೆಡ್ಡೆಯನ್ನು ಇಡೀ ವರ್ಷ ಒಂದಲ್ಲ ಒಂದು ರೀತಿ ಯಲ್ಲಿ ಬಳಸ ಬಹುದು. ಕೆಲವು ವಿಧಗಳನ್ನು ಪ್ರಯತ್ನಿಸ ಬಹುದು.

ಬಳಕೆಗೆ ಸಿದ್ಧ ಆಲೂಗೆಡ್ಡೆಗಳು.

‘ಆಲೂ ಟಿಕ್ಕಿ’ ಮಾಡುವ ವಿಧಾನ:  ಬೇಯಿಸಿದ ಆಲೂಗೆಡ್ಡೆಯ ಸಿಪ್ಪೆ ತೆಗೆದು, ಉಪ್ಪು, ಜೀರಿಗೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಾಕಿ ಕಲಸಿ ಸಣ್ಣ ಉಂಡೆ ಮಾಡಿಕೊಳ್ಳಿ. ಸ್ವಲ್ಪ ಅದುಮಿ ಗುಂಡಗೆ ಮಾಡಿಕೊಂಡು ಸಣ್ಣ ಉರಿಯಲ್ಲಿ ತವದ ಮೇಲೆ ಎರೆಡೂ ಬದಿ ಕೆಂಪಗೆ ಗರಿಯಾಗುವಂತೆ ಬೇಯಿಸಿ. ಹುಣಿಸೆ ಹಣ್ಣಿನ  ನೀರಿಗೆ ಉಪ್ಪು, ಬೆಲ್ಲ, ಜೀರಿಗೆ ಪುಡಿ, ಮತ್ತು  ಮೆಣಸಿನ ಪುಡಿ ಹಾಕಿಟ್ಟು ಕೊಳ್ಳಿ. ಬಿಸಿ ಟಿಕ್ಕಿಯನ್ನು ಈ ಮಸಾಲ ನೀರಿನಲ್ಲಿ ಅದ್ದಿ ತಿನ್ನಿ.  ಶಾಲೆಯಿಂದ ಬಂದ ಮಕ್ಕಳಿಗೆ ಬಲು ಇಷ್ಟ ಈ ಆಲೂ ಟಿಕ್ಕಿ.

ಬೇಯಿಸಿದ ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು  ತುರಿದು ಬಿಸಿಲಲ್ಲಿ ಒಣಗಿಸಿ ಇಟ್ಟುಕೊಳ್ಳಿ. ಬೇಕೆಂದಾಗ ಕರಿದು, ಕೊಬ್ಬರಿ,  ಕರಿದ ಕಡಲೆಕಾಯಿ ಬೀಜ, ಹುರಿಗಡಲೆ ಬೆರೆಸಿದರೆ ಛಳಿ ದಿನಕ್ಕೆ ಚಹ ಜೊತೆಗೆ ಗರಿ ಗರಿ ತಿಂಡಿ ಸಿದ್ಧ.

ಬೇಯಿಸಿದ ಆಲೂಗೆಡ್ಡೆಗೆ ನೆನೆಸಿದ ಸೀಮೆಅಕ್ಕಿ, ಉಪು, ಜೀರಿಗೆ, ಸ್ವಲ್ಪ ಖಾರದ ಪುಡಿಹಾಕಿ ಕಲಸಿ ಉಂಡೆ ಮಾಡಿ. ಒರಳಿನಲ್ಲಿ ಹಾಕಿ ಚಕ್ಕುಲಿ ಆಕಾರದಲ್ಲಿ ಒತ್ತಿ ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ. ಗಾಳಿಯಾಡದಂತೆ ಡಬ್ಬಗಳಲ್ಲಿ ತುಂಬಿಸಿಟ್ಟು, ಬೇಕೆಂದಾಗ ಕರಿದರೆ ಗರಿ ಗರಿಯಾದ ಚಕ್ಕುಲಿ ಸಿದ್ಧ.

ಹೊರಗಿನಿಂದ ಕೊಂಡು ತರುವ ತಿಂಡಿಗಳು ಹೆಚ್ಚು ದುಭಾರಿ ಅಲ್ಲದೆ ಆರೋಗ್ಯಕ್ಕೆ ಹಾನಿಕರ. ಸ್ವಲ್ಪ ಕಷ್ಟ ಪಟ್ಟರೆ ಮನೆಯಲ್ಲೇ ಆರೋಗ್ಯಕರ ತಿಂಡಿ ಹೊಂದಿಸಿಕೊಳ್ಳಬಹುದು.

(ಚಿತ್ರಗಳು: ಎ.ಆರ್.ಎಸ್ ಶರ್ಮ)