ಇಳಿದು ಬಾ ಓ ಬೆಳಕೆ
ನನ್ನ ಎದೆಗೆ
ಎದೆಯ ಕತ್ತಲನೆಲ್ಲ
ತೊಳೆಯಬಲ್ಲುದೆ ಹೇಳು
ಮರ್ತ್ಯ ದೀವಳಿಗೆ ?-

ಎಲ್ಲ ಬೆಳಕಿನ ಮೂಲ-
ವಾಗಿ ಬೆಳಗುವ ಬೆಳಕೆ
ತ್ರೈಲೋಕ್ಯ ಯಾತ್ರೆಯಲಿ
ನಿನ್ನಡಿಯ ಗುರುತುಗಳೆ
ನಕ್ಷತ್ರವಾಗಿರಲು ಮುನ್ನಡೆದ ಬೆಳಕೇ,
ಜಡತೆಯಲಿ ಚೈತನ್ಯವನು
ಚೋದಿಸಿದ ಚೆಂಬೆಳಕೆ,
ವಿಶ್ವಸ್ಫೂರ್ತಿಯ ರಸದ ಚಿಲುಮೆಯಾಗಿಹ ಬೆಳಕೆ,
ಅರಳಿಬಾ ಓ ಬೆಳಕೆ
ನನ್ನ ಒಳಗೆ !

ದಿನ ದಿನವು ತಾಯೆದೆಯ ಮೃದು ಮಧುರ ಪ್ರೇಮದಿಂ-
ದುದ್ಭವಿಸಿ ನಸು ನಗುವ
ಹಸುಗೂಸುಗಣ್ಗಳಲಿ
ಮಿನುಗುತಿಹ ಮುದ್ದು ಬೆಳಕೇ,
ಒಲಿದೆದೆಯ ಸವಿಯೊಲ್ಮೆ-
ಗಳಲಿ ನಗೆಯಾಗಿ ಮೇಣ್
ಕಂಬನಿಯಾಗಿ ಬಿಂಬಿಸುವ
ಅನಿರ್ವಚನೀಯ ಬೆಳಕೇ,
ವಿಶ್ವಕಲೆಯದ್ಭುತದ
ಕುಂಚಿಕೆಯ ವರ್ಣಕ್ಕೆ
ಪರಮ ನಿಧಿಯಾಗಿರುವ ಸ್ವರ್ಣಬೆಳಕೇ,
ಜೀವ ಜೀವಾಳದಲಿ
ಬಾಳಿನೊಳ್ಪನೆ ಬಗೆದು
ಉದ್ಧಾರ ಯೋಗದಲಿ ತೊಡಗಿರುವ ಬೆಳಕೇ,
ಮೂಡಿ ಬಾ ಓ ಬೆಳಕೆ
ನನ್ನ ಒಳಗೆ,
ಎದೆಯ ಕತ್ತಲನೆಲ್ಲ
ತೊಳೆಯ ಬಲ್ಲುದೆ ಹೇಳು
ಮರ್ತ್ಯ ದೀವಳಿಗೆ ?