ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಪರಿಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡ ಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ, ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉರಿಸಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಶ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಡಾ. ಸುಚೇತನ ಸ್ವರೂಪ ಅವರು ರಚಿಸಿರುವ “ಆ ಪೂರ್ವ ಈ ಪಶ್ಚಿಮ” ಎಂಬ ಕೃತಿ ಎಲ್ಲರ ಹುಬ್ಬು ಮೇಲೇರುವಂತೆ ಮಾಡುವ ಒಂದು ವಿಶಿಷ್ಟ ಬಗೆಯ ಕೃತಿ. ಪ್ರಾಚೀನ ಕಾಲದಲ್ಲಿ ತನ್ನ ಸಾಹಿತ್ಯ, ಸಂಸ್ಕೃತಿ, ನಾಗರಿಕತೆ, ತತ್ವಜ್ಞಾನ ಮುಂತಾದವುಗಳ ಮೂಲಕ ಜಗತ್ತಿನ ಅತ್ಯಂತ ಎತ್ತರದ ಪ್ರಬುದ್ಧ ಜ್ಞಾನವನ್ನು ಸೃಷ್ಟಿಸಿದ ಭಾರತೀಯ ಪ್ರಜ್ಞೆ ಜಗತ್ತಿನ ಎಲ್ಲ ರಾಷ್ಟ್ರಗಳ, ಎಲ್ಲ ಬಗೆಯ ಚಿಂತನೆ, ಸಂಸ್ಕೃತಿಸೃಷ್ಟಿ ಹಾಗೂ ಪ್ರಯೋಗಗಳಿಗೆ ಚಾಲನೆ ನೀಡಿ ಸಂಸ್ಕೃತಿ ನಾಗರಿಕತೆಗಳು ತೀವ್ರ ವೇಗದಲ್ಲಿ ಬೆಳೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು ಎಂಬ ವಾಸ್ತವ ಸತ್ಯ ನಮ್ಮ ಅವಜ್ಞೆಯಿಂದ, ಸೋಮಾರಿತನದಿಂದ ಸಾಹಸ ಶೀಲತೆಯ ಕೊರತೆಯಿಂದ, ತೌಲನಿಕ ಸಂಶೋಧನೆಯ ಕೊರತೆಯಿಂದ ಮಸುಕಾಗುತ್ತ ನಂತರದ ಹಂತಗಳಲ್ಲಿ ಭಾರತ ತನ್ನತನವನ್ನೇ ಮರೆತುಕೊಂಡಿತೆಂಬುದು ಅಪ್ರಿಯವಾದರೂ ಸತ್ಯವಾದ ಸಂಗತಿ. ಪಶ್ಚಿಮದ ರಾಜಕೀಯ ಗಾಳಿ, ಸಾಮಾಜಿಕ ಚಿಂತನೆ, ವೈಜ್ಞಾನಿಕ ಸಂಶೋಧನೆಗಳು ಮಾತ್ರವೇ ಅತ್ಯುತ್ಕೃಷ್ಟವಾದವುಗಳೆಂಬ ಮತ್ತು ಅವುಗಳ ಆಶ್ರಯದಲ್ಲಿ, ಅನುಕರಣೆಯಲ್ಲಿ, ನೆರಳಿನಲ್ಲಿ ನಾವು ಎರಡನೆಯ ದರ್ಜೆಯ ಮನುಷ್ಯರಾಗಿ ಬೆಳೆಯುತ್ತ ಬಂದೆವೆಂಬ ಸ್ವಾಭಿಮಾನರಹಿತ ತಿಳುವಳಿಕೆ ತಲೆತಲಾಂತರಗಳ ಮೂಲಕ ನಮ್ಮಲ್ಲಿ ಬೆಳೆಯುತ್ತ ಬಂದ ಕಾರಣದಿಂದ ನಮ್ಮ ಎಲ್ಲ ಅತ್ಯುತ್ಕೃಷ್ಟತೆಗೂ ಪಶ್ಚಿಮ ಪ್ರಪಂಚವೇ ಪ್ರಮಾಣ ಮತ್ತು ಬೀಜಮಂತ್ರ ಎಂಬ ಅನಿಸಿಕೆ ನಮ್ಮಲ್ಲಿ ಬಲವಾಗಿ ಬೇರೂರಿಬಿಟ್ಟಿದೆ. ಹೀಗಾಗಿ ನಮ್ಮ ಮೂಲಗಳನ್ನು ಕೆದಕುವ, ವಿಸ್ತಾರವಾದ ಓದು ಮತ್ತು ಚಿಂತನೆಗಳಿಂದ ಆ ಮೂಲಗಳ ವೈಶಿಷ್ಟ್ಯ ವೈವಿಧ್ಯಗಳನ್ನು ಸ್ವತಂತ್ರಮುಖಿಯ ನೆಲೆಯಲ್ಲಿ ಕಂಡುಕೊಳ್ಳುವ ಹಾಗೂ ಅವುಗಳ ಗುಣಾವಗುಣಗಳನ್ನು ಅನನ್ಯತೆಯನ್ನು ಪಶ್ಚಿಮ ಜಗತ್ತಿನ ಸರ್ವಮುಖ ಸಾಧನೆಗಳ ಸೂಕ್ಷ್ಮ ಹಾಗೂ ನಿಸ್ಪಕ್ಷಪಾತ ತೌಲನಿಕ ವಿಶ್ಲೇಷಣೆಯಿಂದ ಕಂಡುಕೊಳ್ಳುವ ಪ್ರವೃತ್ತಿಯನ್ನೇ ಭಾರತೀಯ ಪರಂಪರೆ ಕಳೆದುಕೊಳ್ಳುತ್ತ ಸದಾ ಕೀಳರಿಮೆಯಿಂದ ನರಳುವ ಪರಿಸ್ಥಿತಿಗೆ ಪಕ್ಕಾಯಿತು. ಸ್ವದೇಶೀಯವಾದ ಜ್ಞಾನ, ಚಿಂತನೆ, ಶೋಧನೆಗಳನ್ನು ಪ್ರಪಂಚದಲ್ಲಿ ಎತ್ತಿ ಹಿಡಿಯಲು ಅಗತ್ಯವಾದ ಸ್ವಾಭಿಮಾನ, ಸ್ವಪ್ರಜ್ಞೆ ಮತ್ತು ಸಾಮರ್ಥ್ಯಗಳು ನಮ್ಮಲ್ಲಿ ಕಡಿಮೆಯಾಗುತ್ತ ನಮ್ಮ ಯಾವುದನ್ನೂ ಶ್ರೇಷ್ಟವೆಂದು ಹೇಳಿಕೊಳ್ಳಲು ಮತ್ತು ಪ್ರಮಾಣೀಕರಿಸಲು ಸಾಧ್ಯವಲ್ಲದ ಮಾನಸಿಕ ಕ್ಲೈಬ್ಯದಿಂದ ನಮ್ಮ ಒಳಸತ್ವ ಕುಟ್ಟೆಹಿಡಿಯತೊಡಗಿದ್ದು ಆಶ್ಚರ್ಯವೇನೂ ಅಲ್ಲ. ಪಶ್ಚಿಮದಿಂದ ಬಂದುದೆಲ್ಲವೂ ಶ್ರೇಷ್ಠ, ಪ್ರಾಚೀನವಾದ ಪೂರ್ವದ ಜ್ಞಾನವೆಲ್ಲ ಎರಡನೆಯ ಸ್ತರದ್ದು ಎಂಬ ಕೀಳರಿಮೆಯ ಚಿಂತನೆ ಮತ್ತು ಪಶ್ಚಿಮದ್ದೆಲ್ಲವೂ ಸರ್ವಶ್ರೇಷ್ಠ ಎಂದು ಉದ್ಘೋಷಿಸುವ ಬಗ್ಗೆ ನಡೆಸಿದ ಸ್ಪರ್ಧೆ, ಆ ಮೂಲಕ ಅಂತರ ರಾಷ್ಟ್ರೀಯ ವ್ಯಕ್ತಿತ್ವವನ್ನು ಪಡೆದುಕೊಳ್ಳುವ ಭ್ರಮೆ ನಮ್ಮವರಲ್ಲಿ ದಟ್ಟವಾಗಿ ಆವರಿಸುತ್ತಾ ಬಂದಿದೆ. ಈ ಮೇಲರಿಮೆ ಮತ್ತು ಕೀಳುರಿಮೆಗಳನ್ನು ಬುಡಮಟ್ಟ ಕಿತ್ತುಹಾಕಿ ಚಾರಿತ್ರಿಕವಾದ ಮತ್ತು ವೈಜ್ಞಾನಿಕವಾದ ಗಾಢ ಅಧ್ಯಯನ, ಜಿಜ್ಞಾಸೆ, ವಿಶ್ಲೇಷಣೆ, ತಾರತಮ್ಯ ವಿವೇಕಜ್ಞಾನ ಹಾಗೂ ಸತ್ಯಬದ್ಧವೂ, ಪರಿಶ್ರಮ ಮೂಲವೂ ಆದ ಸಂಶೋಧನಾ ನಿಷ್ಠೆಗಳನ್ನು ನಾವು ರೂಢಿಸಿಕೊಂಡಾಗ, ತೆರೆದ ಮನಸ್ಸಿನಿಂದ ಯಾವ ಭಾವುಕತೆಗೂ ಅವಕಾಶಕೊಡದ ನಿರ್ಲಿಪ್ತ ಚಾರಿತ್ರಿಕ ಪ್ರಜ್ಞೆಯಿಂದ ಪೂರ್ವ ಪಶ್ಚಿಮಗಳ ಸಾಧನೆ, ಬೋಧನೆಗಳನ್ನು ನಾವು ಗಾಢ ಅಧ್ಯಯನದ ಮೂಲಕ ಪಡೆದುಕೊಳ್ಳುತ್ತ ಹೋದೆಂತೆಲ್ಲ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ನಮ್ಮದೆಂಬ ಪೊಳ್ಳು ಭ್ರಮೆ, ಭಾವೋನ್ಮಾದ, ಸತ್ಯವನ್ನು ಎದುರಿಸಲಾರದ ವೈಚಾರಿಕ ಹೇಡಿತನ ಇವುಗಳು ಒಂದು ಕಡೆ, ತಮ್ಮನ್ನು ತಾವು ಅರಿತುಕೊಳ್ಳಲು ಪರಾಮಾಣಿಕ, ನಿರ್ಭಾವುಕ, ಪರಿಶ್ರಮಪೂರ್ವಕ ಬೌದ್ಧಿಕ ಸಾಹಸವನ್ನು ಮೆರೆಯಲಾರದ ದೌರ್ಬಲ್ಯ ಮತ್ತೊಂದು ಕಡೆ ನಮ್ಮನ್ನು ಜಗ್ಗುತ್ತ ಇತಿಹಾಸವನ್ನು ಮನಬಂದಂತೆ ತಿರುಚುವ ಪ್ರಯತ್ನಗಳೇ ಇತಿಹಾಸ ರಚನೆ ಹಾಗೂ ವ್ಯಾಖ್ಯಾನದಲ್ಲಿ ಅಧಿಕವಾಗಿ ಕಂಡುಬರುತ್ತಿವೆ. ಸ್ವಮೌಢ್ಯದ, ದುರಭಿಮಾನದ ಪೂರ್ವಗ್ರಹಪೀಡಿತ ಅಭಿಪ್ರಾಯಗಳ ಉಕ್ಕಿನ ಬಲೆಯಿಂದ ಬಿಡಿಸಿಕೊಂಡು ಐತಿಹಾಸಿಕ ಸತ್ಯವನ್ನು ಅದು ಇದ್ದಂತೆ ಕಾಣುವ, ಕಾಣಿಸುವ ನೈತಿಕ ಪ್ರಜ್ಞೆ, ವಿಪುಲ ವ್ಯಾಸಂಗ, ದತ್ತ ಸಾಮಗ್ರಿಗಳ ಗರ್ಭ ಪ್ರವೇಶ ಮಾಡಿ ಮಸುಕಾಗಿರುವ, ಹುದುಗಿಹೋಗಿರುವ ಸತ್ಯ ಸಂಗತಿಗಳನ್ನು ಬೆಳಗಿ, ಬೆಳಕಿಗೆ ತರುವ ವೈನತೇಯ ಸಾಹಸ, ಆಂಜನೇಯ ಸಾಮರ್ಥ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ನಮ್ಮ ಕಣ್ಣು ಸತ್ಯವನ್ನು ಕಾಣಬಲ್ಲರು. ಈ ದೃಷ್ಟಿಯಿಂದ ನಮ್ಮ ಸಹಸ್ರ ಸಹಸ್ರ ವರ್ಷಗಳ ಸಾಧನೆಯನ್ನು ಪೊರೆರಹಿತ ಕಣ್ಣುಗಳಿಂದ ಮತ್ತು ಅಂತರ್‌ ದೃಷ್ಟಿಯಿಂದ ಕಾಣಲು ಸಾಧ್ಯವಾಗುತ್ತದೆ.

ಮೇಲಿನ ಹಿನ್ನೆಲೆಯಲ್ಲಿ ಸುಚೇತನ ಸ್ವರೂಪ ಅವರ ಈ ಕೃತಿ ನಮ್ಮ ಸಾಹಿತ್ಯ, ಸಂಸ್ಕೃತಿ ಮತ್ತು ಚಿಂತನಲೋಕಕ್ಕೆ ಸಂಬಂಧಿಸಿದ ವಿಸ್ಮಯಕರವಾದ ಕೆಲವು ಮುಖ್ಯ ಪ್ರಶ್ನೆಗಳನ್ನು ಎತ್ತುತ್ತದೆ; ಆ ಪ್ರಶ್ನೆಗಳಿಗೆ ಕನ್ನಡ, ಸಂಸ್ಕೃತ, ಇಂಗ್ಲಿಷ್‌ ಮುಂತಾದ ಭಾಷೆಗಳ ಸಾವಿರಾರು ವರ್ಷದ ಸಮೃದ್ಧ ಮಾಹಿತಿಗಳನ್ನು ಹೆಕ್ಕಿ ತೆಗೆಯುವ ಮೂಲಕ ಗೃಹೀತ ಸತ್ಯ, ಅಸತ್ಯಗಳನ್ನು ಆಶ್ಚರ್ಯಕರವಾಗಿ ಮುಖಾಮುಖಿಯಾಗಿಸುತ್ತದೆ. ನಮ್ಮ ಸೃಜನಶೀಲತೆಯ ಬಗ್ಗೆ, ದರ್ಶನದ ಬಗ್ಗೆ, ಜೀವನಪ್ರಜ್ಞೆಯ ಬಗ್ಗೆ, ಲೋಕ ಶೋಧನೆಯ ಬಗ್ಗೆ ಸ್ಥಾಪಿತವಾಗಿರುವ ಇತಿಹಾಸದ ಬುನಾದಿಗಳನ್ನು ಕೀಳುತ್ತ ಹೊಸ ಸತ್ಯಗಳನ್ನು ಕೆದಕುತ್ತ, ಮಂಡಿಸುತ್ತ ಸತತ ಕುತೂಹಲದ ಮೊನೆಯಲ್ಲಿ ಓದುಗರನ್ನು ಚಿಟುಕುಮುಳ್ಳಾಡಿಸುತ್ತ ಹೋಗುವ ಈ ಕೃತಿ ಅಪಾರವಾದ, ವೈವಿಧ್ಯಮಯವಾದ, ಬಹುಭಾಷಿಕವಾದ ಓದು ಮತ್ತು ವಿಶ್ಲೇಷಣೆಗಳನ್ನು ತನ್ನೊಳಗೆ ಧಾರಣ ಮಾಡಿಕೊಂಡಿದೆ. ಕವಿ, ದಾರ್ಶನಿಕ, ವಿಜ್ಞಾನಿ, ಚರಿತ್ರೆಕಾರ, ಸಂಸ್ಕೃತಿಶೋಧಕ ಇವರೆಲ್ಲರನ್ನು ಅಲ್ಲಲ್ಲಿ ಮಾತಾಡಿಸುತ್ತ ಅವರ ವಿಶಿಷ್ಟ ಚಿಂತನೆಗಳ ಸತ್ಯಗಳ ಫಲಿತವನ್ನು ಅನಾವರಣ ಮಾಡುತ್ತ ಈ ಕೃತಿ ಮುನ್ನಡೆಯುತ್ತದೆ. ಲೇಖಕರು ಇಲ್ಲಿ ಕಲೆ ಹಾಕಿರುವ ವಿಫುಲ ಸಾಮಗ್ರಿ, ಸರಳವೆಂದು ತೋರಿದರೂ ಸಂಕೀರ್ಣವಾಗುತ್ತ ಮುನ್ನಡೆಯುವ ವಿಶ್ಲೇಷಣಾ ದಾಟಿಗಳು ನಮ್ಮ ವಿಚಾರ ಶಕ್ತಿಯನ್ನು ಬಡಿದು ಎಬ್ಬಿಸುತ್ತವೆ. ಆಗಾಧವಾದ ವಸ್ತುಸಾಮಗ್ರಿಯ ಮಧ್ಯದಲ್ಲಿ ನಾವು ಕಣ್ಣು ಬಾಯಿಗಳನ್ನು ಬಿಟ್ಟುಕೊಂಡು ಬೆಬ್ಬಳಿಸುತ್ತ ನಿಲ್ಲುವಂತೆ ಕೆಲವೊಮ್ಮೆ ಮಾಡುತ್ತದೆ. ವಸ್ತುವಿನಿಂದ ವಸ್ತುವಿಗೆ, ಚಿಂತನೆಯಿಂದ ಚಿಂತನೆಗೆ ನೆಗೆಯುತ್ತಾ ಹೋಗುವ ಈ ಬರವಣಿಗೆಯ ಧಾಟಿಯೇ ಹೊಸದಾಗಿದೆ. ಕೆಲವೊಮ್ಮೆ ಈ ಚಿಂತನ ಕ್ರಮದಲ್ಲಿ, ವಿಶ್ಲೇಷಣಾ ಕ್ರಮದಲ್ಲಿ ಹೊಂದಾಣಿಕೆ, ಸಾಂಗತ್ಯ, ಒಳಕೊಂಡಿಗಳು ಇದ್ದಕ್ಕಿದ್ದಂತೆ ಅದೃಶ್ಯವಾಗುವುದನ್ನು, ಮತ್ತು ಮುಂದೆಲ್ಲೊ ಅವು ಮುಖಾಮುಖಿಯಾಗುವುದನ್ನು ನಾವಿಲ್ಲಿ ಕಾಣತೊಡಗುತ್ತೇವೆ. ನಮ್ಮ ಮತ್ತು ಪಶ್ಚಿಮ ಲೋಕದ ಸಾರಸ್ವತ ವ್ಯಕ್ತಿಗಳ ವಿಚಾರಗಳು ಮತ್ತು ವಿಶೇಷಗಳು ಸಂಬಂಧಿಸುವಂತೆ ಮಾಡುವ ಸಂದರ್ಭದಲ್ಲಿ ತಮ್ಮ ಚಿಂತನೆಯ ದಾರಿಗೆ ಎಲ್ಲೆಲ್ಲಿಂದಲೋ ಸಾಕ್ಷ್ಯಗಳನ್ನು ಕೂಡಿಸಿ ತಂದೊಡ್ಡುವ ಬೌದ್ಧಿಕತೆ ಆಶ್ಚರ್ಯಚಕಿತಗೊಳಿಸುತ್ತದೆ. ಆದರೆ, ಎಷ್ಟೋ ಸಂದರ್ಭದಲ್ಲಿ ಈ ಸಂಗತಿಗಳ ಕೆಲವು ಮುಖಗಳು ಒಂದನ್ನೊಂದು ಸಂಧಿಸುತ್ತ ಮಿಕ್ಕ ಹಲವು ಮುಖಗಳು ಮಾತಾಡಿಸದೆ ಮುದುಡಿಕೊಳ್ಳುತ್ತವೆ. ನಮ್ಮ ಪೂರ್ವಲೋಕದ ಬಗೆ ಬಗೆಯ ಶೋಧನೆ, ಸಾಧನೆ ಸೃಷ್ಟಿಗಳ ಮಹತಿಯನ್ನು ಎತ್ತಿಹಿಡಿಯುವ ಲೇಖಕರ ವಾದ ಸರಣಿ ಕೆಲವೊಮ್ಮೆ ಅಪೂರ್ಣವಾಗಿಬಿಡುತ್ತದೆ, ಹಲವು ದಾರಿಗಳ ಸಂಧಿಯಲ್ಲಿ ನಮ್ಮನ್ನು ನಿಲ್ಲಿಸಿಬಿಡುತ್ತದೆ. ಹತ್ತಾರು ಕಡೆಗಳಿಂದ ಸಾಮಗ್ರಿಗಳನ್ನು ತಂದು ಅವರು ಪೋಷಿಸಿಕೊಂಡು ಹೋಗುವ ವಾದ ಸರಣಿ ಕೆಲವೊಮ್ಮೆ ನಮಗೆ ಸಂಪೂರ್ಣ ಸಮ್ಮತವಾಗದಿರುವ ಸಾಧ್ಯತೆಯೂ ಇದೆ ಮತ್ತು ಅವರು ಕೊಡುವ ಸಾಕ್ಷಾಧಾರಗಳು ಅವರ ವಾದ ಸರಣಿಯನ್ನು ಸಂಪೂರ್ಣವಾಗಿ ಸಮರ್ಥಿಸದೆ ಹೋಗಿವೆ ಎಂಬ ಅಭಿಪ್ರಾಯವೂ ನಮ್ಮಲ್ಲಿ ಮೂಡುವುದುಂಟು. ಅವರು ಮಂಡಿಸುವ ಪ್ರಮೇಯಗಳನ್ನೆಲ್ಲ ಪ್ರಮಾಣಿಕರಿಸಲೆತ್ನಿಸುವ ವಿಷಯಗಳನ್ನೆಲ್ಲ ಎಲ್ಲರೂ ಒಪ್ಪಲೇಬೇಕೆಂದೇನಿಲ್ಲ. ಆದರೆ, ಅವರು ಮಂಡಿಸುತ್ತಿರುವ ವಾದವನ್ನು ಮತ್ತಷ್ಟು, ದಿಕ್ಕುಗಳಿಂದ, ದಾರಿಗಳಿಂದ, ಪ್ರಮಾಣಗಳಿಂದ ಸಂಪೂರ್ಣವಾಗಿ ಪುಷ್ಟೀಕರಿಸಬೇಕಾದರೆ ಇದಕ್ಕಿಂತ ಬೃಹತ್‌ ಗಾತ್ರದ ಗ್ರಂಥವೇ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಡಾ. ಸ್ವರೂಪ ಅವರು ತಮ್ಮ ವೈವಿಧ್ಯಮಯವಾದ ಹಾಗೂ ಸಮೃದ್ಧವಾದ ಓದಿನಿಂದ, ಅವುಗಳೊಡನೆ ಮುಖಾಮುಖಿಯಾಗಿ ನಡೆಸುವ ಅರ್ಥಪೂರ್ಣ ಸಂವಾದಗಳಿಂದ, ಮಂಡಿಸುವ ಹೊಸದೆನಿಸುವ ತರ್ಕಸರಣಿಯಿಂದ, ಹರಿತವಾದ ವಿಶ್ಲೇಷಣಾ ಶಕ್ತಿಯಿಂದ ಈ ಕೃತಿಯನ್ನು ಮತ್ತೆ ಮತ್ತೆ ಓದಬೇಕಾದ, ಚಿಂತಿಸಬೇಕಾದ ಗಂಭೀರ ಕೃತಿಯನ್ನಾಗಿ ರೂಪಿಸಿದ್ದಾರೆ. ಅವರ ಹಲವು ಅಭಿಪ್ರಾಯಗಳನ್ನು ನಾವು ಒಪ್ಪದಿರಬಹುದು. ಆದರೆ, ಸಾಗರಸಗಟಾಗಿ ನಿರಾಕರಿಸಲು ಸಾಧ್ಯವಾಗುವುದಿಲ್ಲ ಎನ್ನುವಷ್ಟು ಚಿಂತನೆಗೆ ಅರ್ಹವಾಗುವ ವಸ್ತುವಿನ್ಯಾಸ, ಬೌದ್ಧಿಕ ಜಿಗಿತಗಳು ಮತ್ತು ನೂರಾರು ಚಿಂತಕರ ವೈಚಾರಿಕ ಗಂಭೀರ ದೃಷ್ಟಿಕೋನಗಳು ಇಲ್ಲಿ ಸಂಗಮಗೊಂಡಿರುವುದನ್ನು ಯಾರಾದರೂ ಮೆಚ್ಚಲೇಬೇಕು. ಇಲ್ಲಿ ವಿವರಿಸಲಾಗಿರುವ ಹತ್ತಾರು ವಿಷಯಗಳು ಮತ್ತು ಮಂಡನ ಕ್ರಮಗಳು ಕೆಲವೊಮ್ಮೆ ಎಳೆತಪ್ಪಿವೆ, ದಾಟಿಕೊಂಡು ಹೋಗಿವೆ, ಅತ್ತ ಇತ್ತ ಸರಿದಾಡಿ ನಿರ್ದಿಷ್ಟ ಮತ್ತು ನಿರ್ದುಷ್ಟ ದಾರಿಯನ್ನು ಸ್ಪಷ್ಟವಾಗಿ ರೂಪಿಸುವಲ್ಲಿ ಪರಿಣಾಮಕಾರಿ ಆಗದೇ ಹೋಗಿವೆ ಎನ್ನುವ ಅನಿಸಿಕೆಗಳು ಮೂಡುವುದು ಸಾಧ್ಯವಿದೆ. ಏನೇ ಆದರೂ ಕನ್ನಡ ಓದುಗರು. ಸಂಶೋಧಕರು ಹೊಸ ನೆಲೆಯಲ್ಲಿ ನಮ್ಮ ಸಾಹಿತ್ಯ, ಸಂಸ್ಕೃತಿಗಳನ್ನು ಗಮನಿಸುವಂತೆ ಮಾಡುವಲ್ಲಿ ಈ ಕೃತಿ ಅನನ್ಯ ಪಾತ್ರವನ್ನು ವಹಿಸಬಲ್ಲದು.

ಇಂತದೊಂದು ಸುಲಭ ಸಾಧ್ಯವಲ್ಲದ ಕೃತಿಯನ್ನು ನೀಡಿದ ಡಾ. ಸುಚೇತನ ಸ್ವರೂಪ ಅವರನ್ನು ವಿಶ್ವವಿದ್ಯಾಲಯದ ಪರವಾಗಿ ಅಭಿನಂದಿಸುತ್ತೇನೆ.

ಡಾ. ಎಚ್‌. ಜೆ. ಲಕ್ಕಪ್ಪಗೌಡ
ಕುಲಪತಿಯವರು