ಏರಬಹುದಾದ ಎತ್ತರಕ್ಕೆ ಸಾಮೂಹಿಕ ಪ್ರತಿಸೃಷ್ಟಿಯಾಗಿ ನಿಲ್ಲುವ ಆದರ್ಶ ನಾಯಕನ ಬೆಳವಣಿಗೆ, ಆಯಾ ಜನ ಕಟ್ಟಿಕೊಂಡು ಬಂದ ಪರಂಪರೆಗೆ ಅನುಗುಣವಾಗಿರುತ್ತದೆ. ವಾಸ್ತವದ ನೆಲಗಟ್ಟಿನ ಬೆಂಬಲವಿಲ್ಲದೆ ಆದರ್ಶ ನಾಯಕನ ಕಲ್ಪನೆ ಸಾಧ್ಯವಿಲ್ಲವಾದಂತೆ, ಅಂತಹ ಹಂಬಲ ಮತ್ತು ತುಡಿತವಿಲ್ಲದ ಸಂಸ್ಕೃತಿ ಮತ್ತು ನಾಗರಿಕತೆಯ ನಿರ್ಮಾಣ ಕಷ್ಟಸಾದ್ಯ; ಒಟ್ಟಾರೆ ಅವರು ಎಂಥವರು ಎಂಬುದನ್ನು ಸೂಚಿಸುವಂತೆಯೆ, ಏನಾಗಬಯಸುತ್ತಾರೆ ಎಂಬುದರ ಪ್ರತೀಕವೂ ಹೌದು. ಯಾವುದೇ ಸಂಸ್ಕೃತಿ ಮತ್ತು ನಾಗರಿಕತೆಯ ವೈಶಿಷ್ಟ್ಯ, ತಾವೇ ಕಂಡುಕೊಂಡ ಆದರ್ಶ ನಾಯಕತ್ವದ ಪರಂಪರೆಯನ್ನು ಪೋಷಿಸಿ ಮುಂದುವರಿಸಿಕೊಂಡು ಹೋಗಲು ಅನುಸರಿಸುವ ವ್ಯಕ್ತಿ ಮೂಲದ ಸಂಘಟಿತ ಯತ್ನದಿಂದ ಮೊದಲಾಗುತ್ತದೆ. ಅಂತಹ ಮಾದರಿ ಆದರ್ಶ ನಾಯಕನನ್ನು ಕಂಡುಕೊಳ್ಳಲು ಪ್ರತಿಯೊಂದು ಜನಾಂಗವು ತಮ್ಮ ತಮ್ಮ ಸಾಮಾಜಿಕ – ರಾಜಕೀಯ – ಆರ್ಥಿಕ ಹಿನ್ನೆಲೆ, ಬೌದ್ಧಿಕ ಪರಂಪರೆ, ಸಾಂಸ್ಕೃತಿಕ ಮತ್ತು ನೈತಿಕ ಶ್ರೀಮಂತಿಕೆಗೆ ಸಾನುಕೂಲ ಪ್ರಯತ್ನ ನಡೆಸಿವೆ: ವಾಲ್ಮೀಕಿಯ ಶ್ರೀರಾಮ ಉತ್ತಮ ಉದಾಹರಣೆ.

ಆದರ್ಶ ನಾಯಕತ್ವ ಎಂಬುದು ಕೆಲ ಗುಣ – ಅವಗುಣಗಳ ಪಟ್ಟಿ ಮಾತ್ರವಲ್ಲ, ಬದುಕನ್ನು ಉತ್ತಮಗೊಳಿಸಿಕೊಳ್ಳುವ ಹಾದಿಯಲ್ಲಿ ಕಾರ್ಯಸಾಧುವಾಗಲು ಪಾಲಿಸಬೇಕಾದ ಕನಿಷ್ಠ ಶಿಸ್ತು, ಮಾರ್ಗ; ಅದೊಂದು ಮನೋಧರ್ಮ; ಆಧ್ಯಾತ್ಮ ಲೇಪಿತವಾದುದೂ ಹೌದು. ಏಕೆಂದರೆ, ಆಧ್ಯಾತ್ಮ ಎಂಬುದು ಬೇರೆಯಲ್ಲ, ಬದುಕಿನ ಮತ್ತು ನಡವಳಿಕೆಯ ಹೆಜ್ಜೆಹೆಜ್ಜೆಯಲ್ಲಿಯೂ ವ್ಯಕ್ತವಾಗುವಂತಾದ್ದು ಎಂಬುದನ್ನು ಬಹಳ ಹಿಂದೆಯೆ ಕಂಡುಕೊಂಡವರು ಯುರೋಪಿನ ಜನ – ವರ್ಜಿಲನ ಈನಿಯಾಸ್‌ ರೂಪದಲ್ಲಿ. ಕ್ರಿಯಾಶೀಲತೆ, ಚಿಂತನೆ, ವಿವೇಕ ಮತ್ತು ಹೃದಯವಂತಿಕೆ ಕೂಡಿದ ಸಮಾಹಿತ ವ್ಯಕ್ತಿತ್ವದ ಚಿತ್ರಣ ನೀಡಿದ ವರ್ಜಿಲ್‌; ಸೆಕ್ಯುಲರ್‌ ಪರಿಕಲ್ಪನೆಯ ಅರ್ಥಪೂರ್ಣ ಅರಿವು, ಸಾಮಾನ್ಯ ತಿಳುವಳಿಕೆಯಾಗಿ ಮಾರ್ಪಡುವುದಕ್ಕೆ ಎಷ್ಟೋ ಶತಮಾನಗಳಿಗೂ ಮೊದಲೇ ಅಂತಹ ನಾಯಕನನ್ನು ರೂಪಿಸಿದ್ದು, ಆತನ ‘ಈನೀಡ್‌’ಗೆ ವಿಶೇಷ ಗೌರವ ತಂದುಕೊಡಲು ಕಾರಣವಾದಂತೆ ತೋರುತ್ತದೆ.

ತನ್ನ ಸಮಕಾಲೀನ ಸಮಾಜದಲ್ಲಿ ಎಲ್ಲರಂತೆ ಒಬ್ಬರಾಗಿ ಬದುಕಿ, ‘ಅಸಾಧಾರಣ’ವಾದುದನ್ನು ಸಾಧಿಸಿದ ‘ಸಾಧಾರಣ’ ವ್ಯಕ್ತಿಯೊಬ್ಬನಿಂದ ಪಡೆಯಬಹುದಾದ ಪ್ರೇರಣೆ ಪಡೆದು ಆ ಜತೆಗೆ ವ್ಯಕ್ತಿತ್ವದ ಕೆಲ ಅಂಶಗಳನ್ನು ಸೇರಿಸಿ, ಈನಿಯಾಸ್‌ನಂಥ ನಾಯಕನನ್ನು ರೂಪಿಸಲು ಸಾಧ್ಯವಾಗಿರುವುದು, ಆತನ ಚಿತ್ರಣದ ಮೌಲ್ಯ ಮತ್ತು ಅರ್ಥಪೂರ್ಣತೆಯನ್ನು ಹೆಚ್ಚಿಸಿದೆ. ಹಾಗಾಗಿ ಆ ಚಿತ್ರಣ ಕೇವಲ ಕವಿಯೊಬ್ಬನ ಕಲ್ಪನೆಯಾಗಿ ಉಳಿಯಲಿಲ್ಲ. ಯುರೋಪಿನವನಾದ ಏಷ್ಯನ್‌ ಮೂಲದ ಈನಿಯಾಸ್‌ ಕೇವಲ ಯುರೋಪಿನವನಾಗಿ ನಿಲ್ಲದಿರುವುದು ಆತನ ವ್ಯಕ್ತಿತ್ವದ ವಿಶ್ವಸಾಮಾನ್ಯತೆ ಹೆಚ್ಚಿಸಿದರೆ, ಅಸ್ತಿತ್ವಕ್ಕಾಗಿ ನೆಲೆ ಕಂಡುಕೊಳ್ಳಲು ಹೊರಡುವ ಎಲ್ಲರಿಗೂ ಮತ್ತು ಎಲ್ಲಾ ತರಹದ ಮಹತ್ವಾಕಾಂಕ್ಷಿಗಳು ಅವನಲ್ಲಿ ತಮ್ಮನ್ನು ಮತ್ತು ತಮ್ಮಲ್ಲಿ ಅವನ ಚಹರೆಯನ್ನು ಕಾಣಲು ಸಾಧ್ಯವಾದುದು ಕಾಲ ಮತ್ತು ದೇಶಭಾಷೆಗಳ ಗಡಿ ದಾಟಿ ಅವನ ವ್ಯಕ್ತಿತ್ವದ ಮಾದರಿ ಬೆಳಗಲು ಸಹಾಯ ಮಾಡಿರಬಹುದು.

ಅಂಥ ವ್ಯಕ್ತಿತ್ವದ ನಾಯಕನ ಚಿತ್ರಣ ಕಾಣಲು ಯುರೋಪ್‌ ಹಲವಾರು ಶತಮಾನ ಕಾಯಬೇಕಾಯಿತು. ಆ ಕ್ರಮಾಗತ ಬೆಳವಣಿಗೆಯ ಫಲವೇ ಈನಿಯಾಸ್‌ ಮತ್ತು ಆತನನ್ನು ಸೃಷ್ಟಿಸಿದ ವರ್ಜಿಲ್‌. ಈನಿಯಾಸ್‌ನನ್ನು ನೀಡಿದ ವರ್ಜಿಲ್‌ ಮತ್ತು ವರ್ಜಿಲ್‌ನನ್ನು ರೂಪಿಸಿದ ಈನಿಯಾಸ್‌ನ ಮೂಲ ನೆಲೆಗಳೇ ಇಂದಿಗೂ ಯುರೋಪ್‌ ಮತ್ತು ಆ ಮೂಲದ ಜನರನ್ನು ನಡೆಸಿಕೊಂಡು ಬರುತ್ತಿವೆ ಎಂಬುದು ಕೆಲವರಿಗೆ ಅತಿಶಯೋಕ್ತಿಯ ಮಾತಾಗಿ ತೋರಬಹುದಾದರೂ, ವಾಸ್ತವಕ್ಕೆ ಹತ್ತಿರದ ಸತ್ಯ ಅದಾಗಿದೆ. ಆ ತರಹದ ಸಾತತ್ಯತೆಗಳು ವರ್ಜಿಲ್‌ ಇಂದಿಗೂ ಯುರೋಪಿನ ಪ್ರಜ್ಞಾಕೇಂದ್ರವಾಗಿ ಉಳಿಯುವಂತೆ ನೋಡಿಕೊಂಡಿದ್ದರೆ, ಈನಿಯಾಸ್‌ನನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸಿದ ಶಿಸ್ತು ಹಾಗೂ ಸದಾಶಯಗಳೇ ಆ ಜನರ ಬದುಕು ಮತ್ತು ಭವಿತವ್ಯವನ್ನು ರೂಪಿಸುತ್ತಿವೆ. ಥಾಮಸ್‌ ಜಫರ್‌ಸನ್‌, ವಿಲ್ಲಿ ಬ್ರ್ಯಾಂಟ್‌, ಹೆಲ್ಮುಟ್‌ ಕ್ಹೋಲ್, ಆಲ್ಬರ್ಟ್‌ ಐನ್‌ಸ್ಟೈನ್‌, ಸ್ಟೀಫನ್‌ ಹಾಕಿನ್‌, ಪಿಕಾಸೋ, ಲಿಯೋ ಟಾಲ್‌ಸ್ಟಾಯ್‌, ನಾಡಿಯಾ ಮೊದಲಾದ ಯಾರೇ ಆದರೂ ಈನಿಯಾಸ್‌ನ ವ್ಯಕ್ತಿತ್ವವನ್ನು ಮಾದರಿಯಾಗಿ ಸ್ವೀಕರಿಸಿದವರೇ. ಅವರೆಲ್ಲ ಈನಿಯಾಸ್‌ನ ಪಡಿನೆರಳು ಎಂದು ಆ ಮಾತಿನ ಅರ್ಥವಲ್ಲ. ಮಾನವಜನಾಂಗದ ಮೂಲ ಆಶಯ ಮತ್ತು ತುಡಿತಗಳ ಸಾಕಾರವಾಗಿ ಒಡಮೂಡಿರುವ ಕಾರಣ, ಎಲ್ಲರಲ್ಲಿ ಅವನನ್ನು ಮತ್ತು ಅವನಲ್ಲಿ ಎಲ್ಲರ ಅಂಶವನ್ನು ಕಾಣಲು ಬರುವ ಪುರಾಣಾಕೃತಿ ಈನಿಯಾಸ್‌ ಎಂದಷ್ಟೇ ಅರ್ಥ.

ಈನಿಯಾಸ್‌ನನ್ನು ನೀಡಿದ ವರ್ಜಿಲನ್ನು ಅವರು ಓದಿರಬಹುದು, ಇಲ್ಲದಿರಬಹುದು ಅಥವಾ ಕೇಳದೆಯೂ ಹೋಗಿರಬಹುದು. ಯಾವುದೆ ಕ್ಷೇತ್ರದಲ್ಲಿ ಅಂದುಕೊಂಡಂತೆ ಉನ್ನತವಾದುದನ್ನು ಸಾಧಿಸಬೇಕಾದರೆ, ಮೊದಲು ಗಟ್ಟಿನೆಲೆ ಸಿಗಬೇಕು ಮತ್ತು ಈನಿಯಾಸ್‌ ತರಹ ನೆಲೆಗಾಗಿ ಅರಸಬೇಕು ಎಂಬುದು ಅವರ ಒಟ್ಟು ಬದುಕಿನ ಒಂದು ಭಾಗವಾಗಿ ಹೋಗಿರುವುದರಿಂದ, ಗೊತ್ತಿಲ್ಲದೆಯೂ ಅದರಿಂದ ಪ್ರಭಾವಿತವಾಗುವಷ್ಟರ ಮಟ್ಟಿಗೆ ಯುರೋಪ್‌ ಮೂಲದ ಜನರ ಸಂಸ್ಕೃತಿ ಮತ್ತು ನಾಗರಿಕತೆ ಅಣಿಗೊಂಡಿದೆ. ನೆಲೆ ಕಂಡುಕೊಳ್ಳುವ ಕ್ರಿಯೆ ಮತ್ತು ಅದಕ್ಕಾಗಿ ನಡೆಯುವ ತಡಕಾಟ ನಿರಂತರವಾದುದು. ಏಕೆಂದರೆ ಸೂಕ್ತ ನೆಲೆ ದೊರಕದೆ ಯಾವುದೇ ಸಾಧನೆ ಮತ್ತು ಮುನ್ನಡೆ ಅಸಾಧ್ಯ ಎಂದು ತೋರಿಸಿಕೊಟ್ಟವನೇ ವರ್ಜಿಲ್‌. ಒಂದು ಕೃತಿ ರಚಿಸಲು, ಚಿತ್ರ ಬರೆಯಲು, ಸಂಗೀತದಲ್ಲಿ ಸಾಧನೆ ಮಾಡಲು ಅಥವಾ ರಾಜಕೀಯ ಮಾಡಲು, ಸಂಶೋಧನೆ ನಡೆಸಲು ಯಾವುದೇ ಕ್ರಿಯಾತ್ಮಕ ಚಟುವಟಿಕೆಗಳಿಗೂ ಆಯಕಟ್ಟಿನ ನೆಲೆ ಬೇಕು; ನೆಲೆಯ ಮಹತ್ವವನ್ನು ಅದರ ಎಲ್ಲಾ ಅರ್ಥದಲ್ಲೂ ಗ್ರಹಿಸಿ ಅನ್ವೇಷಿಸಿದವನು ವರ್ಜಿಲ್‌.

ಅಧಿಕಾರಸೂತ್ರ ಹಿಡಿಯುವವರು ತತ್ವಜ್ಞಾನಿಗಳಾಗಿದ್ದರೆ ಉತ್ತಮ ಎಂಬ ಗ್ರೀಕರ ಹಾರೈಕೆ, ಭಾರತದ ರಾಜರ್ಷಿ ಕಲ್ಪನೆಯ ಹತ್ತಿರಹತ್ತರ ನಿಲ್ಲುತ್ತದೆ; ಸುಂದರವಾದ ಆದರೆ ಪಾಲಿಸಲು ಕಷ್ಟಸಾಧ್ಯವಾದ ಮತ್ತು ಪಾಲಿಸಲು ಹೋದಲ್ಲಿ ಯಾವುದಾದರೊಂದು ಪಂಥಕ್ಕೆ ಸಿಕ್ಕಿಬೀಳುವ ಅಪಾಯ ಅಲ್ಲಿ ಇಲ್ಲದಿಲ್ಲ. ಆ ತೊಡಕನ್ನು ಮೀರಿ ನಿಲ್ಲುವ ಕೆಲ ಕನಿಷ್ಠ ಅರ್ಹತೆ, ನಡವಳಿಕೆ ಮತ್ತು ಸಿದ್ಧತೆಯುಳ್ಳ ವ್ಯಕ್ತಿತ್ವದ ಬದುಕಿನ ಚಿತ್ರಣ ನೀಡುವುದರ ಮೂಲ, ಗ್ರೀಕರ ‘ಫಿಲಾಸಫರ್‌ ಕಿಂಗ್‌’ ಅಥವಾ ಭಾರತದ ‘ರಾಜರ್ಷಿ’ ಕಲ್ಪನೆಗಳ ಸದಾಶಯಗಳನ್ನು ಒಳಗೊಂಡಂತೆ ಆ ಮಿತಿ ಮೀರುವ ಸೆಕ್ಯುಲರ್‌ ನಾಯಕನ ಚಿತ್ರಣ ನೀಡಿದವನು ವರ್ಜಿಲ್. ಲೋಕಜ್ಞಾನ ಅಥವಾ ಲೋಕತಿಳುವಳಿಕೆಯ ಸಾಕಾರಮೂರ್ತಿ ಎಂದು ವರ್ಜಿಲನನ್ನು ಪರಿಭಾವಿಸಲು, ಆ ತರಹದ ಜಾಗೃತ ಮನೋಧರ್ಮವೂ ಕಾರಣ.

ಬದುಕನ್ನು ಸುಸೂತ್ರಗೊಳಿಸುವ ಹಾದಿಯಲ್ಲಿ ಏನನ್ನಾದರೂ ಸಾಧಿಸಲು ಅನುಸರಿಸಬೇಕಾದ ಕನಿಷ್ಠ ಮಾನಸಿಕ ಶಿಸ್ತು, ನಡವಳಿಕೆ ಮತ್ತು ಮನೋಧರ್ಮ ಎಂದು ಪ್ರತಿಪಾದಿಸುವುದರ ಮೂಲಕ ಆಧ್ಯಾತ್ಮದ ಮಹತ್ವವನ್ನು ಸೀಮಿತಗೊಳಿಸುತ್ತಾನೆ ಎಂದು ಅನ್ನಿಸಬಹುದಾದರೂ, ಆ ಆಧ್ಯಾತ್ಮವನ್ನು ಲೋಕ ಬದುಕಿನ ಮಿತಿಯಲ್ಲಿಯೇ ಸಾಕಾರಗೊಳಿಸಿಕೊಳ್ಳಬೇಕಾಗುತ್ತದೆ. ಅದು ಹೊರತು ಅನ್ಯಮಾರ್ಗವಿಲ್ಲ. ಆ ಕಾರಣವೇ ಆಧ್ಯಾತ್ಮ ಎಂಬುದು ಯಾವುದೋ ಒಂದು ಹಂತ ಅಥವಾ ಗಳಿಗೆಯಲ್ಲಿ ಮಾತ್ರ ವ್ಯಕ್ತವಾಗುವಂತಹದ್ದಲ್ಲ. ಬದುಕಿನ ನಡಿಗೆ ಮತ್ತು ಹೆಜ್ಜೆಹೆಲ್ಲೆಯಲ್ಲಿಯೂ ಸ್ಫುಟಿತವಾಗುವಂತಾದ್ದು. ದಿನನಿತ್ಯದ ಲೋಕ ವ್ಯವಹಾರದ ನಡವಳಿಕೆಯಲ್ಲಿ ವ್ಯಕ್ತವಾಗುವ ಶಿಸ್ತು ಆಧ್ಯಾತ್ಮಿಕತೆಯಿಂದ ಅನುಲೇಪಿತವಾಗದೆಹೋದಲ್ಲಿ ಯಾವುದೇ ಮಹತ್ವದ ಸಾಧನೆಗೆ ಅರ್ಥಬರುವುದಿಲ್ಲವಾದಂತೆ, ಸಾಧನೆ ಮಾಡುವಾಗ ವ್ಯಕ್ತವಾಗುವ ಪ್ರವೃತ್ತಿಯು ಮೂಲದಲ್ಲಿ ಆದ್ಯಾತ್ಮಿಕವಾದುದೆ ಆಗಿರಬೇಕಾಗುತ್ತದೆ ಎಂಬ ವಾಸ್ತವ ಸತ್ಯದ ಕಡೆಗೆ ಗಮನಸೆಳೆದವನು ವರ್ಜಿಲ್‌.

ಅಂದರೆ ಈನಿಯಾಸ್‌ ಹಿಡಿದ ಮಾರ್ಗ ಮತ್ತು ನಡೆದುಕೊಳ್ಳುವ ರೀತಿ ಪರಿಪೂರ್ಣ ಅಥವಾ ಸಮಗ್ರವಾದುದು ಎಂದು ಭಾವಿಸಬೇಕಾದ ಅಗತ್ಯವಿಲ್ಲ; ಆ ಸ್ಥಿತಿ ತಲುಪಲು ಬಿಡದ ಕಷ್ಟಗಳ ಅರಿವಿರುವ ಮತ್ತು ಅವುಗಳು ಸಾಧನೆಯ ಹಾದಿಯಲ್ಲಿ ಅಡ್ಡಿಯಾಗದಂತೆ ನೋಡಿಕೊಳ್ಳುವ ವ್ಯಕ್ತಿತ್ವ ಈನಿಯಾಸ್‌ನದು. ಆ ಕಾರಣ ‘ಸಮಾಹಿತ’ ಎಂಬ ನುಡಿಯನ್ನು ಬಹಳ ಎಚ್ಚರಿಕೆ ಮತ್ತು ಜಾಗರೂಕತೆಯಿಂದ ಬಳಸಲಾಗಿದೆ. ಅಹಿತವಾದುದು ನಡೆದು ಹೋಗಿ ಬಿಡಬಹುದುದ; ಅದನ್ನು ಸಮರ್ಥಿಸಿಕೊಳ್ಳಲು ಹೋಗದೆ, ಜಾಗೃತಪ್ರಜ್ಞೆಯನ್ನು ಎಚ್ಚರ ಮತ್ತು ಜತನದಿಂದ ಕಾಪಾಡಿಕೊಂಡು ಮುಂದುವರಿಯುವ ವಿವೇಕ ಅಲ್ಲಿ ಸದಾ ಕ್ರಿಯಾಶೀಲವಾಗಿರುತ್ತದೆ. ಹಾಗಾಗಿ ಈನಿಯಾಸ್‌ನ ಸಮಾಹಿತ ವ್ಯಕ್ತಿತ್ವದ ಕಲ್ಪನೆ ವಿಸ್ತರಿಸುತ್ತಲೆ ಹೋಗಿದ್ದು, ಏರಬಹುದಾದ ಎತ್ತರ ಮತ್ತು ತಲುಪಬಹುದಾದ ಉನ್ನತಿಗೆ ಮಾದರಿ ನಿಂತಿದೆ.

ಘನವಾದ ಉದ್ದಿಶ್ಯ ಇಟ್ಟುಕೊಂಡು ಕಾವ್ಯ ಬರೆಯಲು ಮುಂದಾದ ವರ್ಜಿಲ್‌, ಅದಕ್ಕೆ ತಕ್ಕಂತೆ ಘನವಾದ ಉದ್ದೇಶದಿಂದ ತುಂಬಿದ ನಾಯಕನ ಚಿತ್ರಣ ನೀಡುವುದು ಹೊಂದಿಕೆಯಾಯಿತು: ಮತ್ತು ಅವೆರಡೂ ಪರಸ್ಪರವಾದವು; ಯುರೋಪಿನ ಜನ ಮಾದರಿಯಾಗಿ ಸ್ವೀಕರಿಸಿದ ಲಿಖಿತ ಎಪಿಕ್‌ ನೀಡಿದ ವರ್ಜಿಲನೆ ಮಾದರಿ ನಾಯಕತ್ವದ ಪಾತ್ರ ಸೃಷ್ಟಿಸಿದ. ಹಾಗಾಗಿ ವರ್ಜಿಲ್‌ ಬಂದನಂತರ ಯುರೋಪಿನಲ್ಲಿ ಕಾವ್ಯರಚನಾ ವಿಧಾನ ಮತ್ತು ಕವಿಗಳ ಕರ್ಮ ಬಹಳವಾಗಿ ಬದಲಾದಂತೆ, ಅವರ ವ್ಯಕ್ತಿತ್ವದ ಕಲ್ಪನೆಯೂ ಬದಲಾಗಿ ಹೋಗುವುದು ಅವಶ್ಯವಾಯಿತು. ಟ್ರಾಯ್‌ ಯುದ್ಧದಲ್ಲಿ ಸೋತು ಸಂಪೂರ್ಣ ನಿರ್ನಾಮವಾದ ನಂತರ ಬೇರೊಂದು ಕಡೆ ನೆಲೆ ಕಂಡುಕೊಳ್ಳುವ ಉದ್ದೇಶದಿಂದ ಆ ಜನರ ನಾಯಕತ್ವ ವಹಿಸುವ ಈನಿಯಾಸ್‌, ಇಟಲಿಯಲ್ಲಿ ಹೊಸ ನೆಲೆ ಕಂಡುಕೊಳ್ಳುವ ಘನವಾದ ಉದ್ದೇಶದಿಂದ ಹೊರಡುವಂತೆ, ಈ ವಿಶಾಲ ನಿಯತಿಯ ಚೌಕಟ್ಟಿನಲ್ಲಿ ಅವರೆಲ್ಲರು ಸೇರಿದ ರೋಮನ್‌ ಜನರ ಭವ್ಯಭವಿತವ್ಯ ಶೋಧಿಸುವ ಮಹಾ ಉದ್ದೇಶದಿಂದ ವರ್ಜಿಲ್‌ ಎಪಿಕ್‌ ಬರೆಯಲು ತೊಡಗುತ್ತಾನೆ. ಹಾಗಾಗಿ ಕವಿ ಮತ್ತು ಆತ ಆರಿಸಿಕೊಂಡ ನಾಯಕನ ಉದ್ದಿಶ್ಯಗಳು ಒಂದಾಗುತ್ತವೆ. ತಾನು ಬಂದ ಯುಗದ ಜೊತೆಗೆ ಯಾವುದೇ ರೀತಿಯ ತೋರಾಣಿಕೆಯ ಸಂಘರ್ಷಕ್ಕಿಳಿಯುವ ಪ್ರಯತ್ನಗಳಿಗಾಗಿ ಸಮಯ ಹಾಳುಮಾಡದೆ, ಆ ಯುಗದ ಕೊಡುಗೆಯಾಗುವ ರೀತಿಯ ಎಪಿಕ್‌ ಬರೆಯುವುದರಲ್ಲಿ ವರ್ಜಿಲ್‌ ತನ್ನ ಇಡೀ ಜೀವಮಾನ ಸವೆಸಿದರೆ, ತಾನು ಹಾಕಿಕೊಂಡ ಗುರಿ, ಅದನ್ನು ತಲುಪಲು ಅನುಸರಿಸಬೇಕಾದ ಮಾರ್ಗ ಹಾಗೂ ಉದ್ದೇಶ ಹೊರತು, ಉಳಿದ ವಿಷಯಗಳ ಕಡೆಗೆ ಗಮನ ಹರಿಸಲು ಈನಿಯಾಸ್‌ ನಿರಾಕರಿಸುತ್ತಾನೆ; ವರ್ಜಿಲನ ಗುರಿ ಮತ್ತು ಆತ ಸೃಷ್ಟಿಸಿದ ನಾಯಕನ ಉದ್ದೇಶ ಬೇರೆಯಲ್ಲ.

ಸಮುದ್ರದ ಮೇಲಿನ ಪ್ರಯಾಣದ ಅಲೆತದಿಂದ ಬೇಸತ್ತು, ಹಾಕಿಕೊಂಡ ಗುರಿ ಸಾಧಿಸುವ ಬಗ್ಗೆ ಅನುಮಾನ ಬೆಳೆಸಿಕೊಂಡ ಕೆಲ ಮಹಿಳೆಯರು ಪ್ರಯಾಣ ಮುಂದುವರೆಸುವುದನ್ನು ತಡೆಯುವ ಹುನ್ನಾರಿನಿಂದ ಹಡುಗಳಿಗೆ ಬೆಂಕಿ ಕೊಡುತ್ತಾರೆ:

The Ladies were in two minds at first, eyeing the ships
With malicious glances, torn between their piteous craving
For the land they were in and the call of the land promised b destiny.
But now, spreading her wings, the goddess took off from earth,
Describing a rainbow arc under the clouds as she flew.
Then indeed, amazed at the miracle, driven by a frenzy,
All crying out, they ransack the near by houses for flame:
Some strip the altars, to hurl greenery, twigs, torches
Onto the ships. The Fire – god gallops in full career
Over the thwarts, the oars, the poops of painted pinewood.
Now to Anchises ‘tomb and the crowded stands of the sports ground
Eumelus brought the news that the fleet was on fire:

[1]

ಮರುಮಾತಾಡದೆ ಅವರಿಗೆ ಅಲ್ಲಿಯೇ ಇರಲು ನೆಲೆ ಕಲ್ಪಿಸಿ ತನ್ನ ಜೊತೆ ಬರಲು ಸಿದ್ಧರಿರುವವರನ್ನು ಮಾತ್ರ ಕಟ್ಟಿಕೊಂಡು ಈನಿಯಾಸ್ ಪಯಣ ಮುಂದುವರಿಸುತ್ತಾನೆ. ತನ್ನ ಜೊತೆ ಬರುವಂತೆ ಹುಕುಂ ಚಲಾಯಿಸಲು ಹೋಗುವುದಿಲ್ಲ. ಆ ಘಟನೆ ಅವನ ಮನಸ್ಸನ್ನು ಒಂದು ಗಳಿಗೆಯಾದರೂ ಅಸ್ಥಿರಗೊಳಿಸುತ್ತದೆ :

But lord Aeneas, hard hit by this most cruel disaster,
Was full of anxiety, and his mind kept oscillating
Between two thoughts shoald he settle down in Sicily here
And forget his destiny, or struggle on towards Italy?
ಪುಟ ೧೪೬

ವೀನಸ್‌ ದೇವತೆಯ ಮಗನಾದ ಆತ ರೋಮ್‌ನಲ್ಲಿ ನೆಲೆ ಸ್ಥಾಪಿಸಲು ದೇವತೆಗಳು ಮತ್ತು ಹಿರಿಯರಿಂದ ಆಜ್ಞಾಪಿತನಾಗಿರುತ್ತಾನೆ. ಮಹಾ ಸಾಹಸಿ ಮತ್ತು ಶೂರನಾದ ಅವನ ಪ್ರಸಿದ್ಧಿ ಎಲ್ಲ ಕಡೆ ಹರಡಿರುತ್ತದೆ.[2]

ರಾಜ ಎಂಬಂತೆ ಪ್ರತಿಬಿಂಬಿತನಾಗಿದ್ದರೂ, ನಿರಾಶ್ರಿತರ ನಾಯಕನಂತೆ ಮಾತ್ರ ನಡೆದುಕೊಳ್ಳುವ ಆತ ಉದ್ದಕ್ಕೂ ವಿನಯ ಮತ್ತು ಸೌಜನ್ಯದ ಗಡಿ ದಾಟುವುದಿಲ್ಲ. ಗಣತಂತ್ರದ ವ್ಯವಸ್ಥೆ ಇದ್ದ ರೋಮ್‌ ನೆಲದಲ್ಲಿ ಸೀಸರ್‌ ವ್ಯವಸ್ಥೆ ಬರಲು ಕಾರಣನಾದ ವ್ಯಕ್ತಿಯೊಬ್ಬನಿಂದ ಪಡೆಯಬಹುದಾದ ಪ್ರೇರಣೆ ಪಡೆದು ರಚಿಸಲಾದ ಎಪಿಕ್‌ ಮಾದರಿಯ ಕಾವ್ಯದ ನಾಯಕ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುವ ರೀತಿ.

ಒಬ್ಬ ವ್ಯಕ್ತಿಯ ಕೈಯಲ್ಲಿ ಪರಮಾಧಿಕಾರ ಕೇಂದ್ರೀಕೃತವಾಗುವ ರಾಜಕೀಯ ವ್ಯವಸ್ಥೆಯನ್ನು ನಿರ್ದೇಶಿಸುವ ಪದವೊಂದು ಈ ಜಗತ್ತಿನ ಯಾವುದೇ ಭಾಷೆಯಲ್ಲಿ ವ್ಯಕ್ತಿ ಮೂಲದಿಂದ ಬಂದಿರುವುದಾದಲ್ಲಿ, ಆ ಕೀರ್ತಿ ಜೂಲಿಯಸ್‌ ಸೀಸರ್‌ಗೆ ಸಲ್ಲಬೇಕು; ರಷ್ಯನ್‌ ಭಾಷೆಯ್ಲಲಿ ಜಾರ್‌ ಎಂದಾದ ಸೀಸರ್‌, ಜರ್ಮನಿಯಲ್ಲಿ ಕೈಸರ್‌ ಎಂಬ ರೂಪ ಪಡೆದುಕೊಂಡಿತು. ಆ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಲು ಏಷ್ಯಾಕ್ಕೂ ಆಗಲಿಲ್ಲ. ಭಾರತ ಸ್ವತಂತ್ರವಾಗುವುದಕ್ಕೆ ಮೊದಲು ಬ್ರಿಟಿಷ್ ದೊರೆಯನ್ನು ಕೈಸರ್‌ – ಇ – ಹಿಂದ್‌ ಬಿರುದಿನಿಂದ ಸಂಬೋಧಿಸಲಾಗುತ್ತಿತ್ತು. ಆ ರೀತಿಯ ಹೊಸ ವ್ಯವಸ್ಥೆ ಬರಲು ಪ್ರೇರಣೆ ನೀಡಿದ ಜೂಲಿಯಸ್‌ ಸೀಸರ್‌ ಸಮರ್ಥ ಸೇನಾನಿ, ದಕ್ಷ ಆಡಳಿತಗಾರ; ಆದರೆ ಗಣತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡ ವ್ಯಕ್ತಿ ಏನಾಗಿರಲಿಲ್ಲ ಮತ್ತು ಗಣತಂತ್ರ ವ್ಯವಸ್ಥೆಯನ್ನು ಬಲಪಡಿಸಬೇಕೆಂಬ ಅಚಲ ನಿಷ್ಠೆ ಮತ್ತು ಶ್ರದ್ಧೆಯಿಂದ ಪ್ರೇರಿತನಾದ ವ್ಯಕ್ತಿಯೂ ಆಗಿರಲಿಲ್ಲ. ರಾಜತ್ವದ ಆಕಾಂಕ್ಷೆಯ ಕೀಟ ಈಜಿಪ್ತ್‌ ಭೇಟಿಯ ನಂತರ ಜೂಲಿಯಸ್‌ನ ತಲೆ ಹೊಕ್ಕಿತು ಎಂಬ ಮಾತಿದೆ. ಆತನ ಪೂರ್ವಿಕರು ಏಷ್ಯಾ ಮೂಲದಿಂದ ಬಂದವರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಆ ರೀತಿಯ ಮಹತ್ವಾಕಾಂಕ್ಷೆಯನ್ನು ಅರ್ಥೈಸುವುದಾದಲ್ಲಿ ತಪ್ಪಾಗಲಾರದು. ಚಕ್ರವರ್ತಿಯಾಗುವ ಮಹಾತ್ವಾಕಾಂಕ್ಷೆಯನ್ನು ಅರ್ಥೈಸುವುದಾದಲ್ಲಿ ತಪ್ಪಾಗಲಾರದು. ಚಕ್ರವರ್ತಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದಾನೆ ಎಂಬ ಸಂಶಯದ ಕಾರಣ ಹತ್ಯೆಗೀಡಾದ ಜೂಲಿಯಸ್‌ನ ಮರಣಾನಂತರ ಅವನ ಪರವಾದ ಸಹಾನುಭೂತಿ ಆತನ ದತ್ತುಪುತ್ರ ಅಗಸ್ಟಸ್‌ಗೆ ವರವಾಗಿ ಪರಿಣಮಿಸುತ್ತದೆ. ಜೂಲಿಯಸ್ ಸೋಲು ಕಂಡ ಕಡೆ ಅಗಸ್ಟಸ್‌ ಆ ಮಟ್ಟಿಗೆ ಯಶಸ್ಸು ಗಳಿಸುತ್ತಾನೆ; ಜೂಲಿಯಸ್‌ಗೆ ವಿರುದ್ಧವಿದ್ಧ ಪರಿಸ್ಥಿತಿ ಅಗಸ್ಟಸ್‌ಗೆ ಅನುಕೂಲಕರವಾಗಿ ಪರಿಣಮಿಸುತ್ತದೆ.

ಪ್ರಾಯಶಃ ಏಷ್ಯಾ ಅಥವಾ ಆಫ್ರಿಕಾ ಮೂಲದ್ದಾಗಿರಬಹುದಾದ ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ನಂಬಿಕೆ ಮತ್ತು ಆ ಆಧಾರಿತ ರಾಜಕೀಯ ವ್ಯವಸ್ಥೆ ಯುರೋಪಿನ ನೆಲಕ್ಕೆ ವ್ಯವಸ್ಥಿತವಾಗಿ ಕಾಲಿಡಲು ಸಾಧ್ಯವಾದುದು ಆನಂತರದ ಬೆಳವಣಿಗೆಯಿಂದಲೆ ಎಂಬ ಕಹಿಸತ್ಯವನ್ನು, ಸಂಸ್ಕೃತಿ ಮತ್ತು ಇತಿಹಾಸದ ವಿದ್ಯಾರ್ಥಿಗಳು ಮರೆಯಲು ಸಾಧ್ಯವಿಲ್ಲ. ಗ್ರೀಸ್‌ ಮತ್ತು ರೋಮ್‌ನಲ್ಲಿ ಆವರೆಗೆ ಚಾಲತಿಯಲ್ಲಿದ್ದ ಗಣತಂತ್ರ ವ್ಯವಸ್ಥೆ ಅದರ ಉತ್ತಮ ಅರ್ಥದಲ್ಲಿ ಸಂಪೂರ್ಣವಾಗಿ ಪ್ರಜಾಸತ್ತಾತ್ಮಕ[3]ವಾದುದಾಗಿರಲಿಲ್ಲವಾದರೂ ಪ್ರಜಾತಂತ್ರ ವ್ಯವಸ್ಥೆಯ ಬೆಳವಣಿಗೆಗೆ ಪೂರಕವಾದುದಾಗಿತ್ತು. ಆ ಕಾರಣ ಬಹಳ ಸೀಮಿತ ಅರ್ಥದಲ್ಲಿಯಾದರೂ ಗಣತಂತ್ರ ಪ್ರೇಮಿಗಳಾಗಿದ್ದ ಗ್ರೀಸ್‌ ಮತ್ತು ರೋಮಿನ ಜನರು, ರಾಜಸತ್ತೆಯ ಪ್ರವೇಶಕ್ಕೆ ಅಲ್ಲಿಯವರೆಗೂ ಅವಕಾಶ ಕಲ್ಪಿಸಿರಲಿಲ್ಲ. ರಾಜ – ದೈವತ್ವದ ದೌರ್ಬಲ್ಯಗಳಿಗೆ ಮಾರುಹೋಗುವ ಸೂಚನೆ ತೋರಿದ ಅಲೆಗ್ಸಾಂಡರ್‌ ವಿರುದ್ಧ ಗ್ರೀಕ್ ಸೈನಿಕರು ಏಷ್ಯಾದ ನೆಲದಲ್ಲಿ ಪ್ರಕಟಿಸಿದ ಅಸಮಾಧಾನ ಮತ್ತು ಬಂಡಾಯ ಮನೋಧರ್ಮ ಅವರ ನಡವಳಿಕೆಗೆ ಉತ್ತಮ ಉದಾಹರಣೆ.

ವಿಚಿತ್ರವೆಂದರೆ, ಸೀಸರ್‌ ರೂಪದ ಚಕ್ರಾಧಿಪತ್ಯ ವ್ಯವಸ್ಥೆ ರೋಮ್‌ ಪ್ರವೇಶಿಸಲು ಕಾರಣನಾದ ಅಗಸ್ಟಸ್‌ ನಡವಳಿಕೆಯಲ್ಲಿ ತೋರುವ ಎಚ್ಚರ, ರಾಜನಾದರೂ ರಾಜನಂತೆ ನಡೆದುಕೊಳ್ಳದ ಆತ ಚಕ್ರವರ್ತಿಯಾದರೂ ಕಿರೀಟ ತೊಡಲಿಲ್ಲ ಮತ್ತು ತನ್ನನ್ನು ತಾನು ಚಕ್ರವರ್ತಿ ಎಂದು ಕರೆದುಕೊಳ್ಳುವ ಮೋಹಕ್ಕೊಳಗಾಗದೆ ಹೋದುದು ಈನಿಯಾಸ್‌ ತರಹವೇ. ರಾಜತ್ವದ ಕಲ್ಪನೆಯನ್ನು ತಾತ್ವಿಕವಾಗಿಯಾದರೂ ಒಪ್ಪಿಕೊಂಡಂತಿದ್ದ ಅಗಸ್ಟಸ್‌, ಅದರ ಇತರೆ ಸಹಗುಣಗಳಾದ ಲೋಲುಪತೆ, ವೈಭವ ಮತ್ತು ದುಂದುಗಾರಿಕೆಯನ್ನು ಸ್ವೀಕರಿಸಲು ಸಿದ್ಧನಿರಲಿಲ್ಲ ಎಂದು ಕಾಣುತ್ತದೆ. ವ್ಯವಸ್ಥೆ ಪ್ರಜಾಸತ್ತೆಯಿಂದ ರಾಜಸತ್ತೆಗೆ ಹೊರಳುತ್ತಿದ್ದ ಸಂಕ್ರಮಣ ಕಾಲದಲ್ಲಿ ಬಂದವನಾದ ಅಗಸ್ಟ್‌ ಆ ತರಹ ಎಚ್ಚರದಿಂದ ನಡೆದುಕೊಳ್ಳುವುದು ಅಗತ್ಯವಾಗಿದ್ದಿರಬಹುದು. ಅಥವಾ ಅದು ಅವನ ಸ್ವಾಭಾವಿಕ ನಡವಳಿಕೆಯೂ ಆಗಿದ್ದಿರಬಹುದು. ಆ ನಡವಳಿಕೆ ಕಾರಣವೆ ಜನರಲ್ಲಿ ಹೆಚ್ಚು ಸಂಶಯ ಕೆರಳಿಸದ ರೀತಿಯಲ್ಲಿ ಅವರನ್ನು ಗಣತಂತ್ರದಿಂದ ರಾಜಸತ್ತೆಗೆ ವರ್ಗಾಯಿಸಲು ಸಾಧ್ಯವಾಯಿತು ಎಂದುಭಾವಿಸುವುದಾದಲ್ಲಿ, ಅದು ಸತ್ಯದಿಂದ ಅತಿದೂರ ಹೋಗುವುದಿಲ್ಲ.

‘ಸತ್ಯಕಮಸತ್ಯಕಂ ನಡುಗೋಡೆ ಕೂದಲೆಳೆ’ ಎಂದು ಉಮರ್‌ ಖಯ್ಯಾಂ ಹೇಳಿದ್ದು ಬಹಳ ತಡವಾಗಿ. ಅದಕ್ಕೂ ಎಷ್ಟೋ ಶತಮಾನ ಮೊದಲೇ ಪ್ರಜಾಸತ್ತೆ – ರಾಜಸತ್ತೆ ನಡುವಿನ ಅಂತರ ಕಿರಿದುಗೊಳಿಸುವುದರ ಮೂಲಕ, ರಾಜಕೀಯ ಎಂಬುದಕ್ಕೆ ಹೊಸ ಭಾಷ್ಯ ಬರೆದ ವ್ಯಕ್ತಿ ಅಗಸ್ಟಸ್‌. ಆ ದೃಷ್ಟಿಯಿಂದ ನೋಡುವುದಾದಲ್ಲಿ, ಪೆರಿಕ್ಲಿಸ್‌ ಮತ್ತು ಅಲೆಗ್ಸಾಂಡರುಗಳ ಮುಂದಿನ ಸಂಯೋಜಿತ ಬೆಳವಣಿಗೆಯಾದ ಯುರೋಪಿನ ಆಧುನಿಕ ರಾಜಕೀಯ ಅಗಸ್ಟಸ್‌ನಿಂದ ಆರಂಭವಾಗುತ್ತದೆ. ರಾಜಕೀಯ ಒಂದು ದೊಡ್ಡ ಕಲೆ, ಅದನ್ನು ನಿಭಾಯಿಸಲು ಗತಿಶೀಲವಾದ ವಿವೇಕ ಬೇಕಾಗುತ್ತದೆ ಎಂದು ತೋರಿಸಿಕೊಟ್ಟವನೆ ಅವನು.

ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಜನರ ಪ್ರತಿಕ್ರಿಯೆ ಮತ್ತು ಅಪೇಕ್ಷೆಯಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳು. ಜೂಲಿಯಸ್‌ ಎಲ್ಲಿ ತನ್ನನ್ನು ತಾನು ಚಕ್ರವರ್ತಿ ಎಂದು ಘೋಷಿಸಿಕೊಂಡುಬಿಡುತ್ತಾನೋ ಎಂದು ಅಂಜಿದ್ದ ಅದೇ ಜನ, ಅಗಸ್ಟಸ್‌ ಕಾಲಕ್ಕೆ ರಾಜತ್ವ ಸ್ವಾಗತಿಸಲು ಸಿದ್ಧರಿರುತ್ತಾರೆ; ನೆಮ್ಮದಿ ಮತ್ತು ಭದ್ರತೆಯ ಒಲವು ಅದಕ್ಕೆ ಕಾರಣವಿದ್ದಿರಬಹುದು. ಆದರೂ ಜನ ಒಂದು ವ್ಯವಸ್ಥೆಯಿಂದ ಮತ್ತೊಂದಕ್ಕೆ ಬದಲಾಗಲು ಮತ್ತು ಆ ರೀತಿಯ ಬದಲಾವಣೆಗೆ ಹೊಂದಿಕೊಳ್ಳಲು ತಾತ್ಕಾಲಿಕವಾಗಿಯಾದರೂ ಸಿದ್ಧರಿರುತ್ತಾರೆ ಎಂಬುದು ಬಹಳ ಮುಖ್ಯ. ರಾಜಸತ್ತೆಯ ಮೂಲಕ ಬಂದವರು ವಂಶಪಾರಂಪರ್ಯವಾಗಿ ಆ ಹಕ್ಕನನು ಪಡೆದರೆ, ಪ್ರಜಾಸತ್ತೆ ಮೂಲಕ ಬಂದವರು ಜನರ ಆಯ್ಕೆಯನ್ನು ಆಧರಿಸಿ ಪ್ರಭುತ್ವ ಚಲಾಯಿಸುವ ಹಕ್ಕನ್ನು ಗಳಿಸುತ್ತಾರೆ. ಅವೆಲ್ಲಕ್ಕೂ ಮೀರಿದ್ದು ವ್ಯಕ್ತಿಗತವೂ ಮತ್ತು ಸಾಮೂಹಿಕವೂ ಆದ ವ್ಯಕ್ತಿತ್ವದ ಪ್ರಶ್ನೆ.

ಆ ಎಲ್ಲ ತರಹದ ಸಾಧ್ಯತೆಗಳ ಒಳಸೂಕ್ಷ್ಮಗಳು ಬೀಜರೂಪದಲ್ಲಿ ಜೂಲಿಯಸ್‌ – ಅಗಸ್ಟಸ್‌ ಕಾಲಕ್ಕಾಗಲೇ ತೆರೆದುಕೊಂಡಿದ್ದವು. ಅಂಥ ಸಂದಿಕಾಲದ ಕವಿಯಾದ ವರ್ಜಿಲ್‌, ಆ ಬಿಕ್ಕಟ್ಟನ್ನು ತನ್ನ ಕೃತಿಯ ವಸ್ತುವನ್ನಾಗಿ ಆರಿಸಿಕೊಂಡು ಬರೆದಿರುವ ಎಪಿಕ್‌ನಲ್ಲಿ ಆ ಎಲ್ಲವುಗಳ ಪ್ರತಿಫಲನವನ್ನು ಕಾಣಬಹುದಾಗಿದೆ. ಅಷ್ಟೇ ಆಗಿದ್ದಲ್ಲಿ ವರ್ಜಿಲ್‌ಗೆ ಈಗ ದೊರಕಿರುವ ಮಹತ್ವ ಖಂಡಿತ ದೊರಕುತ್ತಿರಲಿಲ್ಲ.

ವ್ಯಕ್ತಿಯೊಬ್ಬನ ಮಗುಂ ಆದ ಮಹಾತ್ವಾಕಾಂಕ್ಷೆ, ಅದನ್ನು ಅಷ್ಟಾಗಿ ಪ್ರೋತ್ಸಾಹಿಸಿದ ವ್ಯವಸ್ಥೆಯ ಮಿತಿ ಮೀರಲು ನಡೆಯುವ ಯತ್ನಗಳು, ಆ ಫಲವಾಗಿ ಮೂಡುವ ಮಾತ್ಸರ್ಯ ಮತ್ತು ಗಣತಂತ್ರ ಪರವಾದ ಆಶಯ ಇತ್ಯಾದಿಗಳ ನಡುವಣ ಚಿರಂತನ ಘರ್ಷನೆ; ಅದರಲ್ಲಿ ಕಾಲ ವಹಿಸುವ ಪಾತ್ರದ ಬಿಕ್ಕಟ್ಟನ್ನು ‘ಜೂಲಿಯಸ್‌ ಸೀಸರ್‌’ನಲ್ಲಿ ಷೇಕ್ಸಪಿಯರ್‌ ನಿರ್ವಹಿಸುತ್ತಾನೆ. ಈ ಎಲ್ಲವನ್ನು ತನ್ನ ಎಪಿಕ್‌ನ ವಸ್ತುವನ್ನಾಗಿ ಆರಿಸಿಕೊಂಡಿರುವ ವರ್ಜಿಲನಿಗೆ ಆ ಯಾವ ರಸವತ್ತಾದ ಭಾಗಗಳೂ ಅಷ್ಟು ಮುಖ್ಯವಾಗುವುದಿಲ್ಲ. ಅದರಾಚೆಗಿನ ನೆಲೆಯ ಹುಡುಕಾಟ, ರೋಮನ್ ಜನರ ಆಶಯ ಮತ್ತು ಕನಸು ಅವನಿಗೆ ಮುಖ್ಯವಾಗುತ್ತದೆ. ಎಪಿಕ್‌ ಮಾದರಿಯ ಕವಿಗೂ ಉಳಿದವರಿಗೂ ವ್ಯತ್ಯಾಸವಿರುವುದೇ ಅಲ್ಲಿ. ಅಗಸ್ಟಸ್‌ ಪರವಾಗಿದ್ದ ಕಾಲ ಜೂಲಿಯಸ್‌ನ ಪರವಾಗಿರಲಿಲ್ಲ, ಏಕೆ? ಎಂಬ ಪ್ರಶ್ನೆಗೆ ಈನಿಯಾಸ್‌ನಂತಹ ನಾಯಕನ ಚಿತ್ರಣ ನೀಡುವುದರ ಮೂಲಕ, ಷೇಕ್ಸಪಿಯರ್‌ನಿಗಿಂತ ಎಷ್ಟೋ ಶತಮಾನಗಳಿಗೂ ಮೊದಲೇ ಉತ್ತರ ಕಂಡುಕೊಳ್ಳಲು ವರ್ಜಿಲ್ ಪ್ರಯತ್ನಿಸಿದ್ದಾನೆ.

ಕ್ಲಿಯೋಪಾತ್ರ ಅಥವಾ ಈಜಿಪ್ತಿನ ರಾಜರ ತರಹವೆ ಚಕ್ರವರ್ತಿಯಾಗಿ ಮೆರೆಯುವ ಒಳ ಆಸೆ ಏಷ್ಯಾ ಮೂಲದ ಜೂಲಿಯಸ್‌ನಲ್ಲಿ ಇಲ್ಲದಿರಲಿಲ್ಲ. ಆದರೆ ಚಕ್ರವರ್ತಿಯಾದ ನಂತರ ಮುಂದೇನು ಮಾಡುವುದು ಎಂಬ ಬಗ್ಗೆ ಅವನಲ್ಲಿ ಸ್ಪಷ್ಟತೆ ಇದ್ದಂತೆ ಕಾಣುವುದಿಲ್ಲ. ಅಂಥ ಖಾಲಿತನ ಜೂಲಿಯಸ್‌ನ ಹತ್ಯೆಗೆ ದಾರಿಮಾಡಿಕೊಟ್ಟಿತು. ಆ ಸ್ಥಿತಿಗೆ ಬ್ರೂಟಸ್‌ ಎಷ್ಟು ಕಾರಣವೋ ಜೂಲಿಯಸ್‌ ಕೂಡ ಅಷ್ಟೇ ಕಾರಣ. ರೋಮನ್‌ ಸಾಮ್ರಾಜ್ಯ, ನೆಮ್ಮದಿ ಮತ್ತು ಆತಂಕರಹಿತ ಬದುಕು ಹಾಗೂ ಆ ವ್ಯಾಪ್ತಿಗೆ ಇಡೀ ಜಗತ್ತನ್ನು ತರುವ ಕನಸು ನೀಡುವುದರ ಮೂಲಕ ಅಗಸ್ಟಸ್‌ ಆ ಖಾಲಿತನವನ್ನು ಸಮರ್ಪಕವಾಗಿ ಎದುರಿಸುತ್ತಾನೆ. ಮನುಷ್ಯರು ಸೇರಿ ನಿರ್ಮಿಸಿಕೊಂಡ ಯಾವುದೇ ವ್ಯವಸ್ಥೆ ಇರುವುದು ಅಂತಿಮವಾಗಿ ಮನುಷ್ಯರಿಗೆ; ಅದಕ್ಕಿರುವ ಒಳಿತು ಕೆಡುಕಿನ ಸಾಮರ್ಥ್ಯ ಅದನ್ನು ನೆಸುವ ಮನುಷ್ಯರನ್ನೂ ಅವಲಂಬಿಸಿರುತ್ತದೆ. ಅದೆ ಅಗಸ್ಟಸ್‌ನ ಯಶಸ್ಸಿನ ಗುಟ್ಟು.

ಆ ಎಲ್ಲಾ ಹಿಕ್ಮತ್ತಿನ ಬದಲಾವಣೆಗಳು ಮತ್ತು ಸಾಧ್ಯತೆಗಳ ಅವಕಾಶಗಳನ್ನು ಬಹಳ ಹತ್ತಿರದಿಂದ ಕಂಡ ವರ್ಜಿಲ್‌ಗೆ, ಸಹಜವಾಗಿಯೇ ಆ ಎಲ್ಲಕ್ಕೂ ಮೀರಿದ ಮನುಷ್ಯ ಸಮಾಜದ ಮೂಲಭೂತ ಸಮಸ್ಯೆಗಳು ಮುಖ್ಯವಾಗುತ್ತವೆ. ರಾಜಸತ್ತೆ ಪ್ರಜಾಸತ್ತೆ ನಡುವಿನ ಗುಣಾತ್ಮಕ ವ್ಯತ್ಯಾಸವನ್ನು ವರ್ಜಿಲ್‌ ಗಮನಕ್ಕೆ ತಂದುಕೊಳ್ಳುವುದಿಲ್ಲ ಅಥವಾ ನಿರ್ಲಕ್ಷಿಸುತ್ತಾನೆ ಎಂದು ಆ ಮಾತಿನ ಅರ್ಥವಲ್ಲ; ಅದಕ್ಕೂ ಮೀರಿದ ನಡವಳಿಕೆ ಮತ್ತು ವ್ಯಕ್ತಿತ್ವ ರಚನೆಗೆ ಸಂಬಂಧಿಸಿದ ಸಮಸ್ಯೆಗಳು ಅವನಿಗೆ ಮುಖ್ಯವಾಗುತ್ತವೆ. ರೋಮನ್‌ ಸಾಮ್ರಾಜ್ಯದ ಕನಸು ಇತ್ಯಾದಿ ಮಹತ್ವಾಕಾಂಕ್ಷೆಗಳ ಮೂಲಕ ಅಗಸ್ಟಸ್‌, ಜೂಲಿಯಸ್‌ ಕಾಲದ ಬಿಕ್ಕಟ್ಟಿನ ಸ್ಥಿತಿ ಎದುರಿಸಿದಂತೆ, ಈನಿಯಾಸ್‌ನಂತಹ ಪಾತ್ರ ನೀಡುವುದರ ಮೂಲಕ ವರ್ಜಿಲ್‌ ಕವಿಯಾಗಿ ತಾನು ಎದುರಿಸಬೇಕಾಗಿ ಬಂದ ಬಿಕ್ಕಟ್ಟು ಮತ್ತು ಸಂದಿಗ್ಧ ಪರಿಸ್ಥಿತಿಯನ್ನು ನಿರ್ವಹಿಸುವ ರೀತಿ.

ಹೊಸ ಬದುಕಿನಲ್ಲಿ ಹೊಸ ನೆಲೆ ಅಥವಾ ಹೊಸ ನೆಲೆಯಲ್ಲಿ ಹೊಸ ಬದುಕಿನ ಸಾಧ್ಯತೆಗಳಿಗಾಗಿ ಹೊರಟ ಈನಿಯಾಸ್, ಪ್ರತಿಯೊಬ್ಬರ ಮತ್ತು ಪ್ರತಿಯೊಂದು ಜನಾಂಗದ ಬದುಕಿನಲ್ಲಿ ನೆಲೆಯಾಗಿ ನಿರಂತರ ನಡೆಯುವ ಅನ್ವೇಷಣೆಯ ಪ್ರತಿನಿಧಿ; ಆ ನೆಲೆಗಾಗಿ ಮನುಷ್ಯರು ಸಾಮೂಹಿಕ ಮತ್ತು ವೈಯಕ್ತಿಕ ನೆಲೆಯಲ್ಲಿ ನಿರಂತರ ಶೋಧ ನಡೆಸುತ್ತಲೇ ಬಂದಿದ್ದಾರೆ. ಆ ಕಾರಣವೇ ಈನಿಯಾಸ್‌ನ ಸಂದರ್ಭದಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ವಿಜ್ಞಾನ, ತತ್ವಜ್ಞಾನ, ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಇತ್ಯಾದಿ ವಿಭಜನೆಗಳು ಅರ್ಥಕಳೆದುಕೊಳ್ಳುತ್ತವೆ ಏಕೆಂದರೆ, ಆ ಯಾವುದೇ ಕ್ಷೇತ್ರದಲ್ಲಿ ಅರ್ಥ ಕಂಡುಕೊಳ್ಳಲು ಸಿಗಬೇಕಾದ ನೆಲೆಯ ಪ್ರತಿರೂಪ ಅವನಾಗಿಬಿಡುವುದರಿಂದ. ಸಮಾಹಿತ ವ್ಯಕ್ತಿತ್ವದ ಅಂಥ ನಾಯಕನ ಕೂಡ ಪಯಣದ ಹಾದಿಯಲ್ಲಿ ನಡೆದುಹೋಗುವ ಅಚಾತುರ್ಯಗಳ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದಿರುವುದು. ಹಾಗಾಗಿ ‘ಈನೀಡ್‌’ ಕಾವ್ಯದ ತುಂಬ ಮಡುಗಟ್ಟಿ ನಿಂತಿರುವುದು ವಿಷಾದ; ಭಾರತೀಯ ಪರಿಭಾಷೆಯಲ್ಲಿ ಹೇಳುವುದಾದರೆ, ವಿಷಾದ ಅವನ ಕಾವ್ಯದ ಸ್ಥಾಯಿಭಾವ.

ಅಚಾತುರ್ಯ ಅಥವಾ ಅನಾಹುತಗಳಿಗೆ ಅವಕಾಶ ನೀಡದೆ ಬದುಕಿನಲ್ಲಿ ಮಹತ್ವವಾದುದನ್ನು ಸಾಧಿಸಲು ಸಾಧ್ಯವೇ ಇಲ್ಲವೇ? ಪ್ರತಿಯೊಬ್ಬರ ಬದುಕಿನ ಪುಟಗಳು ಕಪ್ಪು ಚುಕ್ಕೆ ಅಥವಾ ಅಧ್ಯಾಯದಿಂದ ತುಂಬುವ ಅಪಾರ ಸಾಧ್ಯತೆಗಳು ಹೆಚ್ಚುತ್ತಿರುವ ಈ ಜಗತ್ತಿನಲ್ಲಿ, ವರ್ಜಿಲ್‌ ಕೇಳದೆ ಕೇಳುವ ಪ್ರಶ್ನೆ ಬೃಹದಾಕಾರವಾಗಿ ಬೆಳೆಯುತ್ತಲೇ ಸಾಗಿದೆ. ಏಕೆಂದರೆ, ಆ ಕಪ್ಪುಚುಕ್ಕೆಯ ಪ್ರಮಾಣ ವಿಸ್ತಾರಗೊಳ್ಳುತ್ತಾ ಸಾಗಿರುವುದು. ಕೆಲವರ ಬದುಕಿನ ಹಾಳೆಗಳಂತೂ ಕಪ್ಪುಮಯವಾಗಿದ್ದು, ಕಪ್ಪು ಮತ್ತು ಬಿಳಿ ಹಾಳೆಗಳ ನಡುವಿನ ಅಂತರ ಮಸಿಯಾಗುತ್ತಿದೆ. ಅದು ಬೇರೆ ವಿಚಾರ.

ಈನಿಯಾಸ್‌ ನಾಯಕನಾದರೂ ಲಿಖಿತ ಎಪಿಕ್‌ನ ಕೇಂದ್ರದಿದೊ. ಆಕೆಯ ಪಾತ್ರ ನಿರ್ವಹಣೆಯಲ್ಲಿ ಅಸಾಧಾರಣ ಕೌಶಲ್ಯ ಮತ್ತು ಕಾವ್ಯಪ್ರತಿಭೆ ಪ್ರದರ್ಶಿಸುವ ವರ್ಜಿಲ್‌, ಆ ಮೂಲಕ ಯುರೋಪ್‌ ಮತ್ತು ಏಷ್ಯಾ ನಡುವಿನ ಭಿನ್ನತೆ ಮತ್ತು ವ್ಯತ್ಯಾಸಗಳನ್ನು ಬಹಳ ಸೂಕ್ಷ್ಮವಾಗಿ ಆದರೆ ಅಷ್ಟೇ ಎಚ್ಚರದಿಂದ ತೆರೆದಿಡಲು ಪ್ರಯತ್ನಪಟ್ಟಂತೆ ಕಾಣುತ್ತದೆ. ಆಕೆಯ ಸಾವು, ಅದಕ್ಕೆ ಹಿನ್ನೆಲೆಯಾಗಿ ಭೂಮಿಗೆ ಸಿದ್ಧಪಡಿಸುವ ರೀತಿ ಅದನ್ನು ನಿರ್ವಹಿಸುವಾಗ ಕಾವ್ಯ ಪರಾಕಾಷ್ಟೇ ತಲುಪುತ್ತದೆ. ಅದರಲ್ಲೂ ಆಕೆಯ ಆತ್ಮವನ್ನು ಈನಿಯಾಸ್‌ ಪಿತೃಲೋಕದಲ್ಲಿ ಎದುರಿಸಬೇಕಾಗಿ ಬರುವುದು ಸಾಂಸ್ಕೃತಿಕವಾಗಿ ಯುರೋಪಿನ ಜನ ತಲುಪಿದ ಎತ್ತರಕ್ಕೆ ಸಾಕ್ಷಿ. ಕವಿಯೊಬ್ಬನ ಪ್ರತಿಭೆ ತಲುಪಿದ ಎತ್ತರಕ್ಕೆ ಆ ಭಾಗ ನಿದರ್ಶನವಾಗಿ ಉಳಿದಿರುವಂತೆಯೇ, ಆ ಜನ ಏರಿದ ನೈತಿಕ ಎತ್ತರಕ್ಕೂ ಮಾದರಿಯಾಗಿ ನಿಂತಿದೆ.

ಕಾವ್ಯ ಆರಂಭವಾಗುವುದೇ ದಿದೊಳ ಆತಿಥ್ಯಪೂರ್ವಕ ಕೋರಿಕೆ ಮೇರೆ ಕಥಾನಾಯಕನಾದ ಈನಿಯಾಸ್ ಆವರೆಗಿನ ತನ್ನ ಕತೆಯನ್ನು ತಾನೇ ನಿರೂಪಿಸುವುದರ ಮೂಲಕ. ಹಾಗಾಗಿ ಟ್ರೋಜನ್ನರು ಮತ್ತು ಗ್ರೀಕರ ನಡುವೆ ನಡೆದ ದೀರ್ಘಕಾಲದ ಯುದ್ಧದ ಕತೆಯನ್ನು, ಹೋಮರನಿಗಿಂತ ಭಿನ್ನ ಜಾಡಿಯಲ್ಲಿ ನಿರೂಪಿಸಲು ಅವಕಾಶವಾಗಿದೆ. ಹೋಮರ್‌ ನೇರವಾಗಿ ಓದುಗರನ್ನು ಯುದ್ಧಭೂಮಿಗೆ ಕರೆದುಕೊಂಡು ಹೋದರೆ, ವರ್ಜಿಲ್‌ ಆ ಯುದ್ಧವನ್ನು ಸೋತವರ ಮತ್ತು ಬಳಲಿದವರ ಕಣ್ಣಿನಿಂದ ನೋಡುತ್ತಾನೆ.

ಯುದ್ಧದ ದುಷ್ಪರಿಣಾಮ, ಸಾವು ನೋವು, ನೆಲೆ ಮತ್ತು ಬಂಧು ಬಳಗ ಕಳೆದುಕೊಂಡ ಜನರ ದುಃಖದುಮ್ಮಾನ ಅಲ್ಲಿ ಮುಖ್ಯವಾಗುತ್ತದೆ. ಆ ಘೋರ ಯುದ್ಧದಿಂದಾಗಿ ಸರ್ವಸ್ವವನ್ನು ಕಳೆದುಕೊಂಡು ರೋಮ್‌ನಲ್ಲಿ ನೆಲೆ ಹುಡುಕಿ ಹೊರಟ ಜನರ ನಾಯಕನೊಬ್ಬ, ಅದೆ ರೋಮ್ ಜೊತೆ ಸದಾ ಯುದ್ಧ ನಿರತವಾಗಿದ್ದ ಕಾರ್ಥೇಜ್‌ನ ರಾಣಿಯಾದ ದಿದೊಗೆ ತನ್ನ ಕತೆ ಹೇಳುವುದು! ಈನಿಯಾಸ್‌ನಂತಹ ಸಮರ್ಥ ನಾಯಕನನ್ನು ಮದುವೆ ಮಾಡಿಕೊಂಡರೆ ತನ್ನ ಸಾಮ್ರಾಜ್ಯಕ್ಕೊಬ್ಬ ದಕ್ಷರಾಜ ದೊರಕಿದಂತಾಗುತ್ತದೆ ಎಂಬ ಭಾವನೆ, ಅಸಾಧಾರಣ ಸೌಂದರ್ಯವತಿಯಾದ ವಿಧವೆ ಯುವರಾಣಿಯಲ್ಲಿ ಬಿತ್ತನೆಯಾಗುತ್ತದೆ. ಆದರೆ ಈನಿಯಾಸ್‌ನ ಯೋಚನೆ ಮತ್ತು ಗುರಿ ಬೇರೆಯೆ ಆಗಿರುತ್ತದೆ. ಹಲವಾರು ವರ್ಷಗಳ ಸಮುದ್ರದ ಮೇಲಿನ ಅಲೆತದಿಂದ ಹಣ್ಣುಗಾಯಿ ನೀರುಗಾಯಿಯಾಗಿದ್ದ ಆತನಿಗೆ ಆಕೆ ನೀಡಿದ ಆತಿಥ್ಯ ಮುಂದಿನ ಪಯಣಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಮತ್ತು ಸುಧಾರಿಸಿಕೊಳ್ಳಲು ಒದಗಿಬಂದ ಅವಕಾಶವಾಗಿ ಬಳಕೆಯಾಗುವುದು.

ಹಿಂದಿನ ಕತೆ ಹೇಳುತ್ತಾ ಕೇಳುತ್ತಾ ಹೋದಂತೆ ಅವರ ನಡುವೆ ಪ್ರೇಮಾಂಕುರದ ಹೊಸ ಕತೆಯೊಂದು ಆರಂಭವಾಗುತ್ತದೆ. ಬೇಟೆಯಾಡಲು ಕಾಡಿಗೆ ಹೋದ ಅವರಿಬ್ಬರೂ ಮಳೆಯಿಂದ ತಪ್ಪಿಸಿಕೊಳ್ಳಲು ಗುಹೆಯ ರಕ್ಷಣೆ ಪಡೆಯುತ್ತಾರೆ. ಯಾವ ಕಾಡು, ಯಾವ ಗುಹೆ ಎಂಬ ಕುತೂಹಲ ಅನಗತ್ಯ. ಈನಿಯಾಸ್‌ – ದಿದೊ ಪ್ರಣಯ ಪ್ರಸಂಗ, ಕಾಲೇಜು ಹುಡುಗ – ಹುಡುಗಿಯರ ಪ್ರಣಯವನ್ನು ನಾಚಿಸುವಷ್ಟರ ಮಟ್ಟಿಗೆ ಆಧುನಿಕವಾಗಿರುವಂತೆಯೇ ಅಷ್ಟೇ ಪುರಾತನವೂ ಆದುದು:

In the sky: soon followed a deluge of rain and hail together.
The Trojan sportsmen, their Carthaginian friends and the grandson
Of Venus, in some alarm, scattered over the terrain
Looking for shelter. Torrents roared down from the mountain – tops.
Now Dido and the prince Aeneas found themselves
In the same cave. Primordial Earth and presiding Juno
Gave the signal. The firmament flickered with fire, a witness
Of wedding. Some where above; the Nymphs cried out in pleasure.
ಪುಟ ೯೬

ಆತ ರೋಮ್‌ಗೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಜುನೋ ದೇವತೆ ಪ್ರಣಯ ಉದ್ದೀಪನಕ್ಕೆ ಬೇಕಾದ ಎಲ್ಲ ಹಿನ್ನೆಲೆ ಸಿದ್ಧಪಡಿಸುತ್ತಾಳೆ. ಪರಿಣಯ ಅನೇಕ ತರಹದ ಕತೆಗಳಿಗೆ ಅವಕಾಶ ಕಲ್ಪಿಸಿರಬೇಕಾದರೆ, ಕರ್ತವ್ಯಪ್ರಜ್ಞೆಯಿಂದ ಎಚ್ಚೆತ್ತ ಈನಿಯಾಸ್‌ ದಿದೊಳ ಯೌವನ, ರಾಣಿತನ, ಪ್ರೇಮ, ಸಾರ್ವಭೌಮತ್ವ ಮತ್ತು ಸರ್ವಸಂಪತ್ತನ್ನು ತಿರಸ್ಕರಿಸಿ ತನ್ನ ಗುರಿಯಾದ ರೋಂ ಕಡೆಗೆ ಪಯಣ ಮುಂದುವರಿಸುತ್ತಾನೆ. ಹತಾಶ ಪ್ರೇಮದ ಆಕೆಗೆ ಸಾವು ಅನಿವಾಯವಾಗುತ್ತದೆ:

That day was doom’s first birthday and that first day was the cause of
Evils: Dido recked nothing for appearance or reputation:
The love she brooded on now was a secret love no longer’,
Marriage, she called it, drawing the word to viel her sin.
ಪುಟ ೯೬

 

[1]C. Day Lewis (tr), The Aenied, Oxford University Press, ೧೯೮೯, ಸರ್ಗ ೪, ಪುಟ ೧೪೪ – ೧೪೫.

[2]Aenas fame has spread through the whole word, and Dido knows all about him before she sees him, while in Italy Pallas is amazed that so renowned a man should appear before him on the Tiber. He has the heroic qualities of divine blood, prowess in war, personal beauty and power to command men. But he has something more than this. His essential quality, as his distinguishing epithet of plus shows, is pietas, his devotion to the gods and to all their demands. When Ilioneus speaks of him to Dido, he show the combination of qualities in Aeneas:

A king we had, Aeneas: none more just,
More righteous, more renowned in war and arms. (1,544 – 5)From Virgil to Milton, ಪುಟ೫೭

[3]ಸಂಪೂರ್ಣ ಪ್ರಜಾಸತ್ತೆ ಎಂಬ ಕಲ್ಪನೆ ಕೂಡ ಒಂದು ಮಹಾ ಆದರ್ಶ.