ವರ್ಜಿಲ್‌ನಂತರದ ಕಾವ್ಯಪರಂಪರೆಗೆ ಮಿಲ್ಟನ್‌ ನೀಡಿದ ಪ್ರತಿ – ತಿರುವು ಕುರಿತು ವ್ಯಾಪಕ ಚರ್ಚೆ ನಡೆದಿದೆ, ನಡೆಯುತ್ತಿದೆ. ಪ್ರತಿಯೊಂದು ತಲೆಮಾರಿನ ಜನರೂ ತಮಗೆ ವಾದ ಆ ಕುರಿತ ಚರ್ಚೆಯಲ್ಲಿ ಪ್ರಮುಖವಾಗಿ ಎರಡು ಗುಂಪಿಗೆ ಸೇರಿದ ಜನರು ಎದ್ದು ಕಾಣುತ್ತಾರೆ : ಕವಿಗಳು ಮತ್ತು ವಿಮರ್ಶಕರು.

ಸೃಷ್ಟಿಕ್ರಿಯೆಯ ಬೇನೆ ಕಾಲದಲ್ಲಿ ತಾವು ತಳೆದ ನಿಲುವು ಒಲವುಗಳನ್ನು ತಿಳಿಸಿ ಹೇಳುವ ಇಲ್ಲವೇ ಸಮರ್ಥಿಸಿಕೊಳ್ಳುವ ತರಾತುರಿಯಲ್ಲಿ ಗದ್ಯದಲ್ಲೂ ಬರವಣಿಗೆ ಮಾಡಬೇಕಾದ ತುರ್ತಿಗೆ ಒಳಗಾಗುವ ಕವಿಗಳು ಒಂದು ಕಡೆಯಾದರೆ; ಕತೆ, ಕವನ, ಕಾದಂಬರಿ, ನಾಟಕ ಇಲ್ಲವೆ ಅನುವಾದ ಇತ್ಯಾದಿ ಹಲವಾರು ಪ್ರಕಾರಗಳಲ್ಲಿ ಬರವಣಿಗೆ ಮಾಡಿದ ಅನುಭವ, ಚಿಂತನಶೀಲ ವಿಮರ್ಶಕರಿಗೆ ಇರುತ್ತದಾದರೂ, ಪ್ರಮುಖವಾಗಿ ಅವರು ಗಣನೆಗೆ ಬರುವುದು ವಿಮರ್ಶಕರಾಗಿ. ಅನೇಕ ಭಾಷೆ ಮತ್ತು ಸಾಹಿತ್ಯ ಪರಂಪರೆಗಳ ನಿಕಟ ಪರಿಚಯವಿರುವ ಪ್ರಕಾಂಡ ಪಂಡಿತರು ಆದ ಅವರಲ್ಲಿ ಕೆಲವರು ನಿರ್ಮಾಲ್ಯ ಮನಸ್ಸು, ತಾಳ್ಮೆ ಮತ್ತು ಜವಾಬ್ದಾರಿಯುತ ಸಂವೇದನಾಶೀಲ ಓದುಗರಾಗಿ ತಳೆಯುವ ನಿಲುವು ಅನೇಕ ವೇಳೆ ಸಮತೋಲನ ಉಳಿಸಿಕೊಂಡು ಮಹತ್ವದ್ದಾಗಿರಲು ಸಾಧ್ಯ. ಆದರೂ ಕವಿ – ವಿಮರ್ಶಕರ ಅಭಿಪ್ರಾಯಗಳು ಪರಿಗಣನೆಗಾಗಿ ಉಳಿಯುವ ಸಂದರ್ಭಗಳೇ ಹೆಚ್ಚು.

ಹಿಂದಿನ ಪರಂಪರೆಯನ್ನು ತಮ್ಮ ಸೃಷ್ಟಿಕ್ರಿಯೆಯ ಸಂದರ್ಭದಲ್ಲಿ ಅರ್ಥೈಸುತ ಪ್ರಯತ್ನ ನಡೆಸುವ ಕವಿ – ವಿಮರ್ಶಕರು ತಳೆದ ನಿಲುವು ಆಯಾ ಕಾಲಮಾನ ಅಥವಾ ಯುಗದ ಗ್ರಹಿಕೆಯಾಗಿ ಉಳಿದುಬಿಡುವ ಸಾಧ್ಯತೆ ಒಂದಾದರೆ, ಅವರ ನಿಲುವು ಅಥವಾ ಒಲವಿಗೆ ಪ್ರತಿಕ್ರಿಯೆಯಾಗಿ ವಿಮರ್ಶಕರ ವಿಮರ್ಶೆ ಪ್ರಕಟವಾಗುವುದು ಮತ್ತೊಂದು ಕಾರಣವಿದ್ದಿರಬಹುದು. ಪರಂಪರೆಯ ನಿರ್ಮಾತೃಗಳಾದ ಕವಿಗಳು, ತಮ್ಮ ಬದುಕು ಮತ್ತು ಬರವಣಿಗೆಗೆ ಪೂರಕವಾಗಿ ಹಿಂದಿನವರ ಕೊಡುಗೆಯನ್ನು ನೋಡಬೇಕಾದ ಸಂದರ್ಭಗಳೇ ಹೆಚ್ಚಾಗಿ ಒದಗಿ ಬರಬಹುದು. ಎಲ್ಲರೂ ಮಾಡುವುದು ಮತ್ತು ಮಾಡಬಯಸುವುದು ಅದನ್ನೇ ತಾನೆ!

ತಮ್ಮ ಆ ಚೌಕಟ್ಟಿಗೆ ಹೊಂದುವವರ ಕಡೆಗೆ ಕವಿ – ವಿಮರ್ಶಕರಾದವರು ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇರುವಂತೆಯೇ, ಉಳಿದವರ ಕಡೆಗೆ ಒಂದು ತರಹದ ದಾಳಿಕೋರ ಮನೋಭಾವದಿಂದ ಹರಿಹಾಯುವ ಪ್ರವೃತ್ತಿ ಇಲ್ಲದಿರುವುದಿಲ್ಲ. ಅಂಥವುಗಳ ಹಿನ್ನೆಲೆ ಆಧರಿಸಿ ಯಥಾರ್ಥತೆ ಗ್ರಹಿಸಲು ವಿಮರ್ಶಕರನ್ನು ಆಗಾಗ್ಗೆ ಪರಾಮರ್ಶಿಸುತ್ತಿರಬೇಕಾಗುತ್ತದೆ. ವಿಮರ್ಶೆಗೂ ಸೃಜನಶೀಲತೆಯ ಸ್ಪರ್ಶ ತಂದುಕೊಂಡುವ ಎತ್ತರ ತಲುಪಿದ ಸಂವೇದನಾಶೀಲ ಚಿಂತಕರು ಕೆಲವೊಮ್ಮೆ, ಕವಿ – ವಿಮರ್ಶಕರು ಬೆಚ್ಚಿ ನೋಡಬಹುದಾದಂತಹ ಹೊಳಹುಗಳನ್ನು ನೀಡಲು ಸಾಧ್ಯ.

ಆ ತರಹದ ಅನೇಕ ಕಾರಣಗಳಿಂದಾಗಿ ಕವಿ – ವಿಮರ್ಶಕರು ತಳೆದ ನಿಲುವಿನ ಆಘಾತಕ್ಕೆ ತುತ್ತಾದ ಕವಿಗಳು ಮುಂದೆ ಬರಲಿರುವ ಅಷ್ಟೇ ಮಹತ್ವದ ಕವಿ – ವಿಮರ್ಶಕರ ಆಗಮನಕ್ಕಾಗಿ ಕಾಯಬೇಕಾಗುತ್ತದೆ. ಇಂಗ್ಲಿಷ್‌ ಭಾಷೆಗೊಂದು ಲಿಖಿತ ಎಪಿಕ್‌ ಮಾದರಿ ಕಾವ್ಯ ನೀಡುವ ಮಹತ್ವಾಕಾಂಕ್ಷೆಯಿಂದ ಕೃತಿರಚನೆ ಮಾಡಿದ ಮಿಲ್ಟನ್ ಸ್ಥಿತಿ ಅದಾಗಿದೆ. ಎಲಿಯಟ್‌ ಮಾತ್ರವಲ್ಲ, ಅವನಿಗೂ ಹಿಂದಿನ ಜಾನ್ಸನ್‌, ಬ್ಲೇಕ್‌, ಕೀಟ್ಸ್‌ ಮೊದಲಾದ ಅನೇಕರು ನಿರಂತರವಾಗಿ ಒಬ್ಬರಾದ ಮೇಲೊಬ್ಬರಂತೆ ನಡೆಸಿದ ಸತತ ದಾಳಿಗೆ ತುತ್ತಾದ ಮಿಲ್ಟನ್ ರಕ್ಷಣೆಗೆ ಮುಂದಾದ ಫ್ರಾಂಕ್‌ ಕರ್ಮೋಡ್‌, ಎಫ್‌. ಆರ್‌. ಲವೀಸ್‌ ಮೊದಲಾದ ಅನೇಕಾನೇಕ ವಿಮರ್ಶಕರ ಕೈಯಲ್ಲೂ ಪರಿಸ್ಥಿತಿಯನ್ನು ತಿಳಿಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಆತನ ಪರಿಸ್ಥಿತಿ ಎಲಿಯಟ್‌ನಂತಹ ಮತ್ತೊಬ್ಬ ಮಹತ್ವದ ಕವಿ – ವಿಮರ್ಶಕನ ಆಗಮನಕ್ಕಾಗಿ ಕಾದುನಿಂತಿರುವ ಸ್ಥಿತಿಯಲ್ಲಿಯೇ ಇಂದಿಗೂ ಉಳಿದಿದೆ.

ಮಿಲ್ಟನ್‌ ಸ್ಥಾನಮಾನ ಮತ್ತು ಎಪಿಕ್‌ ಕಾವ್ಯ ಪರಂಪರೆಗೆ ಸಂಬಂಧಿಸಿದ ಪ್ರಶ್ನೆಗಳು ಒಂದಕ್ಕೊಂದು ಹೊಂದಿಕೊಂಡಿದ್ದು, ಆ ಪರಂಪರೆಯ ಕೆಲ ಪ್ರಮುಖ ಲಕ್ಷಣ ಮತ್ತು ತದ್ವಿರುದ್ಧ ಗುಣಗಳನ್ನು ಅವನಷ್ಟೆ ಸಮರ್ಥವಾಗಿ ಪ್ರತಿನಿಧಿಸುವ ಲಿಖಿತ ಎಪಿಕ್‌ ಕಾವ್ಯ ಮಾದರಿಯ ಮತ್ತೊಬ್ಬ ಕವಿ ಯುರೋಪಿನ ನೆಲದಲ್ಲಿ ಹುಟ್ಟಬೇಕಿದೆ. ಆ ಅರ್ಥದಲ್ಲಿ ವರ್ಜೀಲಿಯ ಕವಿಯೂ ಆಗಿರುವ ಮಿಲ್ಟನ್‌, ಪ್ರತಿ ವರ್ಜಿಲೀಯ (anti – virgilian) ಕವಿಯೂ ಹೌದು; ಎಪಿಕ್‌ ಬರೆಯಲು ಹೋಗಿ ಪ್ರತಿ – ಎಪಿಕ್‌

[1] (anti – epic) ಬರೆದ ಮಹಾನುಭಾವ. ಕವಿಗಳ ಮತ್ತು ವಿಮರ್ಶಕರ ಇಷ್ಟಾನಿಷ್ಟಗಳ ಪ್ರಶ್ನೆಯೂ ಅದರಲ್ಲಿ ಸೇರಿ ಹೋಗಿರುವುದು, ಮಿಲ್ಟನ್‌ ಸ್ಥಾನಮಾನ ಕುರಿತ ವಿವಾದ ಮತ್ತಷ್ಟು ಬಿಗಡಾಯಿಸಲು ಪೂರಕವಾಗಿರುವಂತೆ ತೋರುತ್ತದೆ. ಇಂಗ್ಲಿಷ್‌ ಭಾಷೆ ಮತ್ತು ಸಂಸ್ಕೃತಿ ಮೇಲಿನ ಅಭಿಮಾನದಿಂದ ಮಿಲ್ಟನ್‌ನನ್ನು ಹೊಗಳುವ ಸಾಧ್ಯತೆ ಇರುವಂತೆಯೇ, ಉಳಿದವರು ಆತನನ್ನು ಕಂಡು ಕರುಗುವ ಅಪಾಯ ಇಲ್ಲದಿಲ್ಲ. ಎಪಿಕ್ ಮಾದರಿ ಕಾವ್ಯ ಬರೆಯುವ ಆಸೆ ಯಾವ ಕವಿಗಿರುವುದಿಲ್ಲ? ಮಿಲ್ಟನ್‌ ಬಗ್ಗೆ ಕಟುವಾಗಿ ಬರೆದವರೆಲ್ಲ ಆ ಭಾವನೆಗಳಿಂದ ಪ್ರೇರಿತರಾಗಿದ್ದರು ಎಂಬುದು ಆ ಮಾತಿನ ಅರ್ಥವಲ್ಲ. ಆತ ಕವಿಯಾಗಿ ಎದುರಿಸಿದ ಪ್ರಶ್ನೆಗಳ ಮಹತ್ವದ ಗಂಭೀರತೆಯೂ ಕಾರಣವಾಗಿದ್ದಿರಬಹುದು. ಆ ಕಾರಣ ಆತನ ಸ್ಥಾನಮಾನ ಕುರಿತ ಪ್ರಶ್ನೆಗಳ ಇತ್ಯರ್ಥಕ್ಕೆ ಹೋಗದೆ, ಕವಿಯಾಗಿ ಮಿಲ್ಟನ್‌ ಎದುರಿಸಿದ ಪರಿಸ್ಥಿತಿ ಮತ್ತು ತಂದುಕೊಂಡ ಮಾರ್ಪಾಡುಗಳನ್ನು ಕಾಲಗತಿಗೆ ಅನುಗುಣ ಅರ್ಥೈಸುವ ಪ್ರಯತ್ನವನ್ನಷ್ಟೇ ಇಲ್ಲಿ ಮಾಡಲು ಸಾಧ್ಯ – ಎಪಿಕ್ ಪರಂಪರೆ ಕಾಲಾಂತರದಲ್ಲಿ ಪಡೆದುಕೊಂಡ ತಿರುವು, ಪ್ರತಿ – ತಿರುವುಗಳನ್ನು ಅರಿಯುವ ಉದ್ದೇಶದಿಂದ.

ಈ ಮೊದಲೇ ಪ್ರಸ್ತಾಪಿಸಲಾದಂತೆ ದಾಂತೆ ಎಪಿಕ್ ಕವಿಯಲ್ಲ. ನಿಜವಾದ ಅರ್ಥದಲ್ಲಿ ಹೇಳುವುದಾದಲ್ಲಿ, ಹೋಮರನೇ ಆ ಪರಂಪರೆಯ ಮೊದಲ ಮತ್ತು ಕೊನೆಯ ಕವಿ. ಆದರೆ ಎಪಿಕ್‌ ಪರಂಪರೆ ಪ್ರವಹಿಸಿಬಂದ ಓಜೆಯನ್ನು ಗುರುತಿಸಲು ದಾಂತೆ ಬಹಳ ಸಹಕಾರಿ. ಗುರುತು ಸಿಗದ ರೀತಿಯಲ್ಲಿ ಅದರ ಪ್ರಮುಖ ಲಕ್ಷಣಗಳನ್ನು ಬದಲಿಸಿ ತನ್ನದೇ ಕಾವ್ಯ ಮಾದರಿಯೊಂದನ್ನು ಕಂಡುಕೊಂಡ ಆತ, ಆ ಕಾರಣವೇ ಆ ಪರಂಪರೆಯ ಕೊನೆಯ ತುದಿಯಾಗಿ ಕಾಣಬರುತ್ತಾನೆ. ಅವನ ಕೃತಿಯನ್ನು ಯಾವುದೇ ಪರಂಪರಾಗತ ಚೌಕಟ್ಟಿನಲ್ಲಿ ಆ ಕಾರಣವೇ ವಿವರಿಸಲು ಇಂದಿಗೂ ಸಾಧ್ಯವಾಗಿಲ್ಲ. ಅದರ ಅಗತ್ಯವೂ ಇಲ್ಲ. ಹೋಮರ್‌ ವರ್ಜಿಲ್‌ ಪರಂಪರೆ ಮುಂದುವರಿಸುವಲ್ಲಿನ ಕಷ್ಟಸಾಧ್ಯತೆಗಳನ್ನು ರಕ್ತಮಾಂಸದಲ್ಲಿ ತುಂಬಿಕೊಂಡು, ಅತ್ಯಂತ ವಿಭಿನ್ನ ರೀತಿಯ ಕಾವ್ಯರಚನೆ ಮಾಡಿದ ಕವಿ ಅವನು. ಯುರೋಪಿನ ಏಕೈಕ ಕ್ಲಾಸಿಕ್‌ ಕೃತಿ ಬರೆದ ಎಂಬ ಕಾರಣಕ್ಕೆ ವರ್ಜಿಲನ್ನು ಹೋಮರನಿಗಿಂತ ದೊಡ್ಡ ಕವಿ ಎಂದು ಪರಿಗಣಿಸಲು ಸಾಧ್ಯವಿಲ್ಲವಾದಂತೆ, ದಾಂತೆ ಬರೆದುದು ಎಪಿಕ್‌ ಅಥವಾ ಕ್ಲಾಸಿಕ್‌ ಆಗಲಿಲ್ಲ ಎಂಬ ಏಕೈಕ ಕಾರಣಕ್ಕೆ ಆತನನ್ನು ಪ್ರಮುಖರ ಸಾಲಿನಲ್ಲಿ ಸೇರಿಸದಿರಲು ಬರುವುದಿಲ್ಲ. ತಮ್ಮದೇ ಆದ ಕಾವ್ಯಮಾದರಿಗಳನ್ನು ಕಂಡುಕೊಂಡ ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಮ್ರಾಟರಾಗಿ ಉಳಿದಿದ್ದಾರೆ ಎಂಬುದು ಬಹಳ ಮುಖ್ಯ.

ಎಪಿಕ್‌ ಪರಂಪರೆ ಸಾಗಿ ಬಂದ ಹಾದಿಯನ್ನು ಅರಿಯಲು, ಆ ಪರಂಪರೆಯ ರೂಪುರೇಷೆಗಳನ್ನೇ ಬದಲಿಸುವುದರ ಮೂಲಕ ಅದಕ್ಕೊಂದು ತುದಿ ಮುಟ್ಟಿಸಿದ ದಾಂತೆಯ ಅಧ್ಯಯನ ಬಹಳ ಅಗತ್ಯವಾದಂತೆ, ಮರುಜೀವ ನೀಡಲು ಹೋಗಿ ಹೊಸ ಕಾವ್ಯಮಾದರಿಯೊಂದನ್ನೇ ಸೃಷ್ಟಿಸಿದ ಮಿಲ್ಟನ್‌ ಪರಿಚಯ ಅಗತ್ಯಬೇಕು. ಹಿಂದಿನ ಪರಂಪರೆಯನ್ನು ಅರಿತುಕೊಂಡು ದಾಂತೆ ತನ್ನ ಹಾದಿಯಲ್ಲಿ ತಾನು ಸಾಗಿದರೆ, ತಿರುಗಿ ಹಿಂದಕ್ಕೆ ನೋಡುತ್ತಾ ಮುಂದುವರಿಯುವ ಪ್ರಯತ್ನವನ್ನು ಮಿಲ್ಟನ್‌ ಬಹಳ ಸಾಹಸದಿಂದ ಮಾಡುತ್ತಾನೆ. ಮಿಲ್ಟನ್‌ ಸ್ಥಾನಮಾನ ಮತ್ತು ಸಾಧನೆ ಕುರಿತಂತೆ ಹೆಚ್ಚಿನ ವಿವಾದ ಉಂಟಾಗಲು ಆ ಅಂಶವೂ ಕಾರಣವಾಗಿದ್ದಿರಬಹುದು. ಮರುಹುಟ್ಟು ನೀಡುವ ಯಾವುದೇ ಪ್ರಯತ್ನಗಳು ವಿವಾದಾಸ್ಪದವಾಗಿ ಉಳಿಯುವಂತೆ ನೋಡಿಕೊಳ್ಳುವುದು ಪ್ರಕೃತಿ – ನಿಯಮ ಎಂದೇ ಕಾಣುತ್ತದೆ. ದಾಂತೆ ಮತ್ತು ಮಿಲ್ಟನ್‌ ನಡುವೆ ಯುರೋಪಿನ ವಿವಿಧ ಭಾಷೆಗಳಲ್ಲಿ ಬಂದ ಅನೇಕ ಕವಿಗಳು ಲಿಖಿತ ಎಪಿಕ್‌ ಕಾವ್ಯ ಪರಂಪರೆ ಮುಂದುವರಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಅವರಾರೂ ಮಿಲ್ಟನ್‌ನಷ್ಟು ಗಮನ ಸೆಳೆಯಲಿಲ್ಲ ಮತ್ತು ಅವನಷ್ಟು ವಿವಾದಕ್ಕೂ ತುತ್ತಾಗಲಿಲ್ಲ.

ಪೋರ್ಚುಗೀಸ್‌ ಇತ್ಯಾದಿ ಭಾಷೆಗಳಲ್ಲಿ ಬರೆದ ಕವಿಗಳಿಗಿಂತ, ಇಂಗ್ಲಿಷಿನಲ್ಲಿ ಬರೆದ ಕವಿಯೊಬ್ಬ ಹೆಚ್ಚು ಪ್ರಮಾಣದಲ್ಲಿ ಜಗತ್ತಿನ ಗಮನ ಸೆಳೆಯುವ ಸಾಧ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡರೂ ಕೂಡ, ಗಮನ ಸೆಳೆಯುವ ಮತ್ತು ವಿವಾದ ಹುಟ್ಟು ಹಾಕುವ ಗುಣ ಮಿಲ್ಟನ್‌ನಲ್ಲಿ ಸಹಜವಾಗಿಯೇ ಇತ್ತು ಎಂಬುದನ್ನು ಮರೆಯಬಾರದು. ಎಪಿಕ್‌ ಮಾದರಿಯ ಕಾವ್ಯ ಬರೆಯುವುದು ಸಾಧ್ಯವಿಲ್ಲ. ಎಂಬ ನಂಬಿಕೆ ಬಹಳವಾಗಿ ಚಾಲತಿಯಲ್ಲಿದ್ದ ಕಾಲದಲ್ಲಿ ಬಂದವನು ಮಿಲ್ಟನ್‌ ಎಂಬುದು ಒಂದಾದರೆ, ಅದನ್ನು ಸುಳ್ಳು ಮಾಡುವ ಗುರಿ ಮತ್ತು ಛಲದಿಂದ ಅವನು ಬರವಣಿಗೆ ಮಾಡುವುದು ಮತ್ತೊಂದು. ಆ ಕಾರಣವೇ ಮಿಲ್ಟನ್‌, ದಾಂತೆಯಿಂದ ಹಿಡಿದು ಮೂಲದ ಹೋಮರ್‌ವರೆಗೆ ಹೋಗುವುದು ಅನಿವಾರ್ಯವಾಗುತ್ತದೆ. ಮರಳಿ ಹೋಗಿ ತನ್ನದೇ ಮಾರ್ಗವನ್ನು ಕಂಡುಕೊಳ್ಳಬೇಕಾದ ಐತಿಹಾಸಿಕ ಒತ್ತಡಕ್ಕೆ ಒಳಗಾದವನು.

೧೫೨೪ – ೧೫೮೦ರ ನಡುವೆ ಬಾಳಿ ಬದುಕಿದ ಲೂಯಿ ದೆ ಕಮೊ ಪೋರ್ಚುಗೀಸ್‌ ಭಾಷೆಯಲ್ಲಿ ಬರೆದ ‘ಓ ಲೂಸಿಯಡಾ’ (ಲುಸುಸ್‌ನ ಕುಡಿಗಳು) ಎಂಬ ಎಪಿಕ್‌ ಮಾದರಿಯ ಕಾವ್ಯ ಪ್ರಕಟವಾದ ಮೂರೇ ವರ್ಷಗಳಲ್ಲಿ ೧೫೭೫ರಲ್ಲಿ ಇಟಾಲಿಯನ್‌ ಭಾಷೆಯಲ್ಲಿ ತೊರ್‌ಕ್ವತೊ ತಾಸೊ ಬರೆದ ‘ಜೆರುಸಲೆಮ್ಮೆ ಲಿಬರಾತೊ’ (ಜೆರುಸಲೇಂ ವಿಮೋಚನೆ) ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ. ಅದರ ಹೆಸರೇ ಹೇಳುವಂತೆ ಕ್ರುಸೇಡ್‌ಗಳ ಹಿನ್ನೆಲೆಯಲ್ಲಿ ಬರೆದ ಕಾವ್ಯ ಅದಾಗಿದೆ. ಲುಸುಸ್‌ ಎಂಬ ಪುರಾಣ ದೇವರ ಮಕ್ಕಳಾದ ಪೋರ್ಚುಗಲ್‌ ದೇಶದ ಜನರು ಮುಂದೆ ಘನವಾದ ಸಾಮ್ರಾಜ್ಯ ನಿರ್ಮಿಸಿ ಘನವಾದ ಬದುಕು ಬದುಕುವ ಕನಸು ಮತ್ತು ಆಶಯದಿಂದ ಬರೆದ ಕಮೋನ ಕಾವ್ಯ ಪೋರ್ಚುಗೀಸ್‌ ಸಾಮ್ರಾಜ್ಯ ಪ್ರಜ್ಞೆಯಿಂದ ಕೂಡಿದೆ. ವರ್ಜಿಲ್‌, ರೋಮನ್‌ ಸಾಮ್ರಾಜ್ಯದ ಕನಸು ಕಂಡಂತೆ, ಕಮೋ ಪೋರ್ಚುಗೀಸ್‌ ಸಾಮ್ರಾಜ್ಯದ ಕನಸು ಇಟ್ಟುಕೊಂಡು ಎಪಿಕ್‌ – ಮಾದರಿ – ಕಾವ್ಯ ಬರೆಯಲು ಮುಂದಾದ.

ಮಿಲ್ಟನ್‌ ಮಹತ್ವವನ್ನು ಆ ಹಿನ್ನೆಲೆಯಲ್ಲಿ ಗ್ರಹಿಸಬೇಕಿದೆ. ದಾಂತೆ ಅಥವಾ ವರ್ಜಿಲನನ್ನು ಅನುಸರಿಸಹೋಗದೆ, ಅವರ ತರಹವೇ ತನ್ನ ಕಾಲಮಾನಕ್ಕೆ ಅನುಗುಣ ತನ್ನದೇ ಆದ ಕಾವ್ಯ ಮಾದರಿಯೊಂದನ್ನು ಕಂಡುಕೊಳ್ಳುವುದರ ಜತೆಗೆ, ಅವರ ತರಹವೇ ವರ್ತಮಾನ ಕಾಲದ ಬದುಕನ್ನು ಭವಿಷ್ಯ ಮತ್ತು ಭೂತಕಾಲದ ಸಂದರ್ಭದಲ್ಲಿ ಗ್ರಹಿಸಲು ಪ್ರಯತ್ನಿಸಿದ. ಅದರಲ್ಲಿ ಆತ ಯಶಸ್ಸು ಗಳಿಸಿದನೇ? ಗಳಿಸಿದಲ್ಲಿ ಅದು ಯಾವ ಪ್ರಮಾಣದ್ದು? ಎಂಬ ಪ್ರಶ್ನೆಗಳು ಮುಂದಿನ ತಲೆಮಾರಿನ ಕವಿ, ವಿಮರ್ಶಕರಿಗೆ ಮುಖ್ಯವಾಗಬೇಕಿತ್ತು. ಅದೇ ತರಹದ ಸಮಸ್ಯೆಗಳನ್ನು ಬೇರೊಂದು ರೂಪದಲ್ಲಿ ಎದುರಿಸಿದ ಎಲಿಯಟ್‌ನಂತಹ ಕವಿಗೂ ಅವುಗಳು ಮುಖ್ಯವಾಗಿ ಕಾಣಲಿಲ್ಲ, ಅದು ಬೇರೆ ವಿಚಾರ.

ಕಥನಕ್ರಮ ಮತ್ತು ನಿರ್ವಹಣಾ ವಿಧಾನದಲ್ಲಿ ಹೋಮರ್‌ – ವರ್ಜಿಲ್‌ ಪರಂಪರೆಯಲ್ಲಿ ಸಾಗಬಯಸುವ ಮಿಲ್ಟನ್‌, ವಸ್ತುವಿನ ಆಯ್ಕೆ ಮತ್ತು ರಿಲಿಜನ್‌ ವಿಚಾರದಲ್ಲಿ ದಾಂತೆಯನ್ನು ಅನುಸರಿಸುತ್ತಾನೆ: ಎರಡು ಭಿನ್ನ ಪರಂಪರೆಗಳಿಗೆ ಸೇರಿದ ಎರಡು ದೋಣಿಗಳಲ್ಲಿ ಏಕಕಾಲದಲ್ಲಿ ಪ್ರಯಾಣ ಮುಂದುವರಿಸುವ ಸಾಹಸ. ಹೋಮರ್‌ – ವರ್ಜಿಲ್‌ ಪರಂಪರೆಯ ಮೂಲಗುಣ ಮತ್ತು ಲಕ್ಷಣವಾದ ಸೆಕ್ಯುಲರ್‌ ಪಥದಿಂದ ದೂರಸರಿಯುವುದರ ಮೂಲಕ ಎಪಿಕ್‌ ಕಾವ್ಯ ಪರಂಪರೆಯ ಅಂತಃಸತ್ವವನ್ನೇ ಬದಲಿಸಿದ ದಾಂತೆಯು, ಸೆಕ್ಯುಲರ್‌ ಗುರು ವರ್ಜಿಲನ ಮಾರ್ಗದರ್ಶನದಲ್ಲಿ ರೋಮನ್‌ ಕ್ಯಾಥೊಲಿಕ್‌ ಕ್ರಿಶ್ಚಿಯನ್‌ ಸತ್ಯ ಅನ್ವೇಷಿಸಲು ಹೊರಟರೆ, ಬೈಬಲ್‌ನ ಹಳೆಯ ಒಡಂಬಡಿಕೆಯ ಆಡಂ ಮತ್ತು ಈವ್‌ ಕತೆ ಮೂಲಕ ಮಿಲ್ಟನ್‌, ಪ್ರಾಟೆಸ್ಟಂಟ್‌ ಸತ್ಯ ಅರಸುತ್ತಾನೆ. ಹೋಮರ್‌ – ವರ್ಜಿಲ್‌ ಪರಂಪರೆಗೆ ಎಸಗಿದ ಮಹಾದ್ರೋಹ ಎಂಬುದಾಗಿ ಆ ಬೆಳವಣಿಗೆಯನ್ನು ಅತ್ಯಂತ ಕಟು ಮತ್ತು ತೀಕ್ಷ್ಣ ಮಾತಿನಲ್ಲಿ ಟೀಕಿಸಲು ಅವಕಾಶವಿದೆಯಾದರೂ, ಅಂತಹ ಆತುರದ ತೀರ್ಮಾಣ ತಲುಪುವುದರಿಂದ ಕಾಲನ ನಡಿಗೆಗೆ ಅನುಗುಣ ನಡೆದು ಬಂದಿರುವ ಕಾವ್ಯ ಪರಂಪರೆಯ ಬೆಳವಣಿಗೆಯನ್ನು ಅದರ ಐತಿಹಾಸಿಕ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಅವಕಾಶದಿಂದ ವಂಚಿತರಾಗುವ ಅಪಾಯವಿದೆ.

ಪೇಗನ್ನರಾದ ಹೋಮರ್‌ – ವರ್ಜಿಲ್‌ ಸೆಕ್ಯುಲರ್‌ ಕವಿಗಳು ಎಂದಾದರೆ, ಕ್ರಿಶ್ಚಿಯನ್ನರಾದ ದಾಂತೆ – ಮಿಲ್ಟನ್‌ ನಾನ್‌ – ಸೆಕ್ಯುಲರ್‌ ಎಂದು ಅರ್ಥವೇ?[2] ಪೇಗನ್ನರಾದವರು ಹುಟ್ಟಾ ಸೆಕ್ಯುಲರ್‌ ಮತ್ತು ಕ್ರಿಶ್ಚಿಯನ್‌ ಕವಿಗಳು ನಾನ್‌ – ಸೆಕ್ಯುಲರ್‌ ಎಂದಾಯಿತು. ಕೊನೆಕೊನೆಗೆ ದಾಂತೆಯ ಹಾದಿಯಲ್ಲಿ ಸಾಗುವ ಎಲಿಯಟ್‌ ಕೂಡ ನಾನ್‌ – ಸೆಕ್ಯುಲರ್‌ ಆಗಬೇಕಾಗುತ್ತದೆ. ಅಲ್ಲವೇ? ಹಾಗಾದರೆ ಪೇಗನ್‌ ಮತ್ತು ಸೆಕ್ಯುಲರ್‌ ಸಮಾನಾರ್ಥಕ ಪದಗಳೇ? ಅಥವಾ, ಸಮಾನ ಹಿನ್ನೆಲೆಯಿಂದ ಬಂದುವಾಗಿರಬಹುದೇ? ಸೆಕ್ಯುಲರ್‌ ಪ್ರಜಾತಂತ್ರ ವ್ಯವಸ್ಥೆ ಒಪ್ಪಿಕೊಳ್ಳುವ ಆಧುನಿಕ ನಾಗರಿಕತೆ ಮತ್ತು ಸಮಾಜಗಳು ಮರಳಿ ಪೇಗನ್‌ ಆಗುತ್ತಿಲ್ಲವೇ? ಅಥವಾ ಆ ಸಂಸ್ಕೃತಿಗೆ ಹತ್ತಿರವಾಗುತ್ತಿವೆಯೇ? ಆ ಸೆಕ್ಯುಲರ್‌ ಪ್ರಜಾತಂತ್ರ ವ್ಯವಸ್ಥೆ ಒಪ್ಪಿಕೊಳ್ಳುವ ಆಧುನಿಕ ನಾಗರಿಕತೆ ಮತ್ತು ಸಮಾಜಗಳು ಮರಳಿ ಪೇಗನ್‌ ಆಗುತ್ತಿಲ್ಲವೇ? ಅಥವಾ ಆ ಸಂಸ್ಕೃತಿಗೆ ಹತ್ತಿರವಾಗುತ್ತಿವೆಯೇ? ಆ ಸೆಕ್ಯುಲರ್‌ ಪ್ರಜಾತಂತ್ರ ವ್ಯವಸ್ಥೆಗೆ ಬೇಕಾದ ಪ್ರಾಥಮಿಕ ತಾತ್ವಿಕ ಹಿನ್ನೆಲೆ ಮತ್ತು ರೂಪುರೇಷೆ ನೀಡಿದವರು ಅದೆ ಗ್ರೀಕ್‌ ಮತ್ತು ಲ್ಯಾಟಿನ್‌ ಮೂಲದ ಪೇಗನ್ನರು ಎಂಬುದು ಕೇವಲ ಆಕಸ್ಮಿಕವೇ? ಪ್ರಜಾತಂತ್ರ ವ್ಯವಸ್ಥೆ ಯಶಸ್ವಿಯಾಗಬೇಕಾದರೆ ಎಲ್ಲೋ ಒಂದು ಹಂತದಲ್ಲಿಯಾದರೂ ಜನ ಪೇಗನ್‌ – ಅಂದರೆ ಸೆಕ್ಯುಲರ್‌ ಆಗಿರಬೇಕಾಗುತ್ತದೆ ಎಂಬುದು ಅದರಿಂದ ಸ್ಫುರಿತವಾಗುವ ಅರ್ಥವೇ?

ರೋಮನ್‌ ಕ್ಯಾಥೊಲಿಕ್‌ ಕಾವ್ಯವನ್ನು ನಿಜವಾಗಿಯೂ ವಿಶ್ವಸಾಮಾನ್ಯವಾಗಿಸುವ ಮೂಲಕ ನಾನ್‌ – ಸೆಕ್ಯುಲರ್‌ ಮಿತಿಯಿಂದ ಹೊರಬರಲು ದಾಂತೆಗೆ ಸಾಧ್ಯವಾಗಿದೆ ಎಂದ ಮೇಲೆ, ಪ್ರಾಟೆಸ್ಟಂಟ್‌ ಚೌಕಟ್ಟನ್ನು ನಿಜವಾದ ಬಂಡುಕೋರ ಆಗಿ ರೂಪಿಸುವುದರ ಮೂಲಕ ಅದೇ ತರಹದ ಹಿಡಿತದಿಂದ ಬಿಡಿಸಿಕೊಳ್ಳಲು ಮಿಲ್ಟನ್‌ಗೆ ಏಕೆ ಸಾಧ್ಯವಾಗಿರಬಾರದು?ದಾಂತೆ ಮಿಲ್ಟನ್‌ ಕಾವ್ಯಗಳಲ್ಲಿ ದೊರಕುವ ಅವರ ಕಾಲದ ನಾನ್‌ – ಸೆಕ್ಯುಲರ್‌ ವಾತಾವರಣ ಅವರ ಸೃಷ್ಟಿಯಾಗಿರಲಿಲ್ಲ, ಎಂಬುದನ್ನು ಸಹ ವಿಮರ್ಶಕರು ಮರೆತಂತೆ ಕಾಣುತ್ತದೆ.

‘ಧರ್ಮನಿರಪೇಕ್ಷ’ ಎಂಬ ಪದ ಸೃಷ್ಟಿಸುವುದರ ಮೂಲಕ ಸೆಕ್ಯುಲರ್‌ ಪರಿಕಲ್ಪನೆಯ ಅರ್ಥ ವ್ಯಾಪ್ತಿಯನ್ನು ತಮ್ಮದಾಗಿಸಿಕೊಳ್ಳಲು ಕೆಲವರು ಪ್ರಯತ್ನಪಟ್ಟರೆ, ಮತ್ತೆ ಕೆಲವು ಜಾತ್ಯತೀತ ಎಂಬ ಪದವನ್ನು ಬಳಕೆಗೆ ತಂದಿದ್ದಾರೆ. ಆದರೆ ಸೆಕ್ಯುಲರ್‌ ಎಂದರೆ ಅದಷ್ಟೇ ಅಲ್ಲ. ಪೇಗನ್‌ ಎಂಬ ಪದವನ್ನು ಅನುವಾದಿಸಲು ಬರುವುದಿಲ್ಲವಾದಂತೆ, ಅದೇ ಪರಿಕಲ್ಪನೆಯ ಮುಂದುವರಿದ ರೂಪವಾದ ಸೆಕ್ಯುಲರ್‌ ಪದವನ್ನು ಸಹ ಅನುವಾದಿಸಲು ಬರುವುದಿಲ್ಲ. ಅದೊಂದು ಪರಿಕಲ್ಪನೆ ಮಾತ್ರವಲ್ಲ ಮನೋಧರ್ಮ ಮತ್ತು ಮನೋಭಾವ; ಆ ದೃಷ್ಟಿಯಿಂದ ನೋಡುವುದಾದಲ್ಲಿ, ಅನುವಾದಿಸಲು ಅಸಾಧ್ಯವಾದ ಧರ್ಮ ಎಂಬ ಪದಕ್ಕೆ ಹತ್ತಿರಹತ್ತಿರ ಬರುತ್ತದೆ. ಪ್ರಜಾಸತ್ತೆ ಮಾತ್ರೆ ಸೆಕ್ಯುಲರ್‌ ಆಗಿರಲು ಸಾಧ್ಯ ಎಂಬ ಇಂಗಿತವೂ ಅದರೆಲ್ಲೇ ಅಡಗಿದೆ.

ಪೇಗನ್ನರು ಎಂದರೆ, ಕ್ರಿಶ್ಚಿಯನ್‌ ಇಸ್ಲಾಂ ಇತ್ಯಾದಿ ಯಾವುದೇ ಪಂಗಡಗಳಿಗೂ ಸೇರದ ಪೂರ್ವದ ಗ್ರೀಕ್‌, ರೋಮನ್‌ ಜನ ಎಂದರ್ಥ; ಪಾಲಿತಿಯಿಸಟಿಕ್‌ ಎಂದರೆ ಕ್ರಿಶ್ಚಿಯನ್‌, ಇಸ್ಲಾಂ ಇತ್ಯಾದಿ ವ್ಯಕ್ತಿ ಕೇಂದ್ರಿತ ರಿಲಿಜನ್‌ಗಳು ಬರುವುದಕ್ಕೆ ಮೊದಲ್ಲಿದ್ದ ಧಾರ್ಮಿಕ ಪರಂಪರೆಗಳು: ಹಲವಾರು ದೇವರಲ್ಲಿ ನಂಬಿಕೆ ಉಳಿಸಿಕೊಂಡ ಸಮಾಜ ಪಾಲಿತಿಯಿಸ್ಟಿಕ್‌ ಆದರೆ, ಭೋಗದಲ್ಲಿ ನಂಬಿಕೆ ಇರುವವರು ಹಿಡಾನಿಸ್ಟಿಕ್‌ ಆಗುತ್ತಾರೆ. ಬಹುದೇವತಾ ಆರಾಧನೆಯಲ್ಲಿ ನಂಬಿಕೆ ಇಲ್ಲದ ಮತ್ತು ಅತ್ಯಂತ ಕೇಂದ್ರೀಕೃತ ರಿಲಿಜನ್‌ ಆದ ಇಸ್ಲಾಂನಲ್ಲಿ ನಂಬಿಕೆ ಉಳಿಸಿಕೊಂಡಿರುವ ಸಮಾಜಗಳೂ ಸಹ, ಆ ಎರಡು ಗುಣಗಳಿಂದ ಮುಕ್ತವಾದಂತೆ ಕಾಣುವುದಿಲ್ಲ. ಸುಖ ಮತ್ತು ಭೋಗ ಜೀವನಕ್ಕಾಗಿ ಹಾತೊರೆಯದ ಎಷ್ಟು ಮಂದಿಯನ್ನು ಈ ಜಗತ್ತಿನಲ್ಲಿ ಕಾಣಲು ಸಾಧ್ಯ? ಇಡೀ ಜಗತ್ತು ಆ ದಿಕ್ಕಿನಲ್ಲಿ ಕ್ಷಿಪಣಿ ವೇಗದಲ್ಲಿ ಸಾಗುತ್ತಿವೆ. ಹಿಡಾನಿಸ್ಟಿಕ್‌ ಬದಲಾಗಿ ಮೆಟೀರಿಯುಲಿಸ್ಟಿಕ್‌ ಪದ ಚಾಲತಿಗೆ ಬಂದಿದೆ. ವ್ಯತ್ಯಾಸ ಇರುವುದು ಡಿಗ್ರಿಯಲ್ಲಿ. ಆ ದೃಷ್ಟಿಯಿಂದ ನೋಡುವುದಾದಲ್ಲಿ, ಹೆಚ್ಚಿನ ಜನ ತಮಗೆ ಗೊತ್ತಿದ್ದೋ ಇಲ್ಲದೆಯೋ ಪೇಗನ್‌ ಆಗುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಯುರೋಪ್‌ ಮೂಲದ ಕ್ರಿಶ್ಚಿಯನ್‌ ಸಂಸ್ಕೃತಿಯ ಪ್ರಭಾವ ವ್ಯಾಪಕವಾಗುತ್ತಾ ಸಾಗಿದಂತೆ; ಅದರ ಮೂಲ ಚೇತನ ಶಕ್ತಿಗಳ ಪೈಕಿ ಒಂದಾದ ಪೇಗನ್‌ ಮನೋಧರ್ಮ ಮತ್ತು ಮನೋಭಾವಕ್ಕೆ ಪಕ್ಕಾಗುವುದು ಅನಿವಾರ್ಯ ಎಂದೇ ತೋರುತ್ತದೆ. ಅವೆರಡೂ ಅಷ್ಟರಮಟ್ಟಿಗೆ ಪರಸ್ಪರ ಪೂರಕವಾದವು.

ಬಹುದೇವತಾ ಆರಾಧನೆಯಲ್ಲಿ ನಂಬಿಕೆ ಉಳಿಸಿಕೊಂಡ ಯಾವುದೇ ಸಮಾಜ ಬಹುಮುಖಿ ಆಗಿರುವುದು ಅತ್ಯಗತ್ಯ. ಏಕೆಂದರೆ ಎಲ್ಲ ನಾಗರಿಕತೆ ಮತ್ತು ಸಂಸ್ಕೃತಿ, ಅಷ್ಟೇ ಏಕೆ, ಇಡೀ ಮಾನವ ಜನಾಂಗದ ತಳಹದಿ ಬಹುಮುಖಿ ದೃಷ್ಟಿಕೋನದ ಮೇಲೆ ನಿಂತಿರುವಂತಾದ್ದು. ಏಕಮುಖಿಯಾದ ಇಸ್ಲಾಂ ಕೂಡ ಸೀಮಿತ ಪ್ರಮಾಣದಲ್ಲಿಯಾದರೂ ‘ಬಹುಮುಖಿ ಸಂಸ್ಕೃತಿಯ ಶಾಪ’ದಿಂದ ಹೊರತಾದಂತೆ ಕಾಣುವುದಿಲ್ಲ. ಅಂತಹ ಬಹುಮುಖಿ ಮನೋಭಾವ ಮತ್ತು ಮನೋಧರ್ಮವನ್ನು ಕಾಪಾಡಿಕೊಳ್ಳಲು ಸಾಧ್ಯವಾದಾಗ ಮಾತ್ರ ಸೃಜನಶೀಲತೆ ಬರಲು ಸಾಧ್ಯ ಎಂಬ ಸರಳಸೂತ್ರವನ್ನು ಬದುಕಿನ ಎಲ್ಲ ರಂಗಗಳಲ್ಲೂ ಕಣ್ಣು ಕೋರೈಸುವಂತಹ ಅದ್ಭುತ ಸಾಧನೆ ಮಾಡಿದ ಗ್ರೀಕರು ಬಹಳ ಹಿಂದೆಯೇ ಕಂಡುಕೊಂಡಂತೆ ಕಾಣುತ್ತದೆ. ಆ ಬಹುದೇವತಾರಾಧನೆಯ ಬಹುಮುಖಿ ಪೇಗನ್‌ ಸಂಸ್ಕೃತಿ, ಯಾವ ಒಬ್ಬ ವ್ಯಕ್ತಿ ಅಥವಾ ಪ್ರವಾದಿಯಿಂದ ಸ್ಥಾಪಿತವಾದುದಲ್ಲ. ಜನರೆ ಸಾಮೂಹಿಕವಾಗಿ ತಮ್ಮ ಬದುಕು ಮತ್ತು ಬಾಳುವೆ ಸಂದರ್ಭದಲ್ಲಿ ಕಂಡುಕೊಂಡಂತಹ ಸತ್ಯ. ಭಾರತದಲ್ಲಿ ಇರುವುದಾದರೂ ಏನು? ಬಹುದೇವತಾ ಆರಾಧನೆ ಮತ್ತು ಇರ್ರಿಲಿಜಸ್‌ (Irreligious) ಆದ ಅಂದರೆ – ರಿಲಿಜಸ್‌ ಅಲ್ಲದ ಧರ್ಮ ತಾನೇ! ತಮ್ಮ ಇಷ್ಟಾರ್ಥ ನೆರವೇರಿಸುವಂತೆ ದೇವರಿಗೆ ಬಲಿಕೊಡುವ ಪದ್ಧತಿ ಇಂದಿಗೂ ಭಾರತದಲ್ಲಿ ಚಾಲತಿಯಲ್ಲಿಲ್ಲವೇ? ಪೇಗನ್‌ ಎಂಬುದು ಮನೋಧರ್ಮ ಮತ್ತು ಮನೋಭಾವ ಆದಂತೆ, ಹಿಂದೂ ಕೂಡ ಒಂದು ಮನೋಧರ್ಮ ಮತ್ತು ಜೀವನವಿಧಾನ ತಾನೇ?

Hinduism is more a way of life than a form of thought.[3] ಎಂಬ ಮಾತಿನ ಉಲ್ಲೇಖ ಅಗತ್ಯ. ಹಿಂದೂ ಎಂದರೂ ಒಂದೆ ಭಾರತೀಯ ಎಂದರೂ ಒಂದೆ ಮತ್ತು ಇಂಡಿಯನ್‌ ಎಂದರೂ ಒಂದೆ ಆಗಿರುವಂತೆ, ಪೇಗನ್ ಎಂದರೂ ಒಂದೇ, ಗ್ರೀಕ್‌ – ಲ್ಯಾಟಿನ್‌ ಕಾಲದ ಗ್ರೀಕ್‌ – ರೋಮನ್ನರು ಎಂದರೂ ಒಂದೇ. ಮಾನವಜನಾಂಗದ ಪ್ರಧಾನ ಗುಣಲಕ್ಷಣವಾದ ಬಹುಮುಖಿ ಸಂಸ್ಕೃತಿ ಮತ್ತು ವೈವಿಧ್ಯಮಯ ದೃಷ್ಟಿಕೋನವನ್ನು ಗೌರವಿಸಿ ಬೆಳೆಸುವ ಮನೋಧರ್ಮ ಮತ್ತು ಮನೋಭಾವ ಇದ್‌ಆಗ ಮಾತ್ರ ಧರ್ಮ ಸಾಪೇಕ್ಷವಾದುದು ಎಂಬ ಸತ್ದ ಗ್ರಹಿಕ ದೊರಕಲು ಸಾಧ್ಯ. ಅದು ನಿರಪೇಕ್ಷ ಆಗಿರಲಾರದು. ಆ ಅರ್ಥದಲ್ಲಿ ಸೆಕ್ಯುಲರ್‌ ಎಂಬುದು ಕೂಡ ಧರ್ಮವಿದ್ದಂತೆ.

‘ಇಲಿಯಡ್‌’, ‘ಒಡಿಸ್ಸಿ’ ಮತ್ತು ‘ಈನೀಡ್‌’ ಅಂತಹ ವಾತಾವರಣದ ಕೊಡುಗೆ: ಬೌರ ಮೊದಲಾದವರು ಭಾವಿಸುವಂತೆ ಸೆಕ್ಯುಲರ್‌ ಎಂದು ಕರೆದರೂ ಒಂದೆ ಅಥವಾ ಪೇಗನ್‌ ಎಂದು ಕರೆದರೂ ಅದೇ ಅರ್ಥ. ಗ್ರೀಕರು ಮತ್ತು ಅವರನ್ನು ಯುದ್ಧಭೂಮಿಯಲ್ಲಿ ಎದುರಿಸಬೇಕಾಗಿ ಬಂದ ಟ್ರೋಜನ್ನರ ನಡುವಿನ ಸಾಂಸ್ಕೃತಿಕ ಅಥವಾ ಧಾರ್ಮಿಕ ಭೂಮಿಕೆಯಲ್ಲಿನ ಅಂತರಕ್ಕಿಂತಲೂ ಹೆಚ್ಚಾಗಿ ‘ಇಲಿಯಡ್‌’ನಲ್ಲಿ ಮುಖ್ಯವಾಗುವುದು, ಮನುಷ್ಯರ ನಡವಳಿಕೆ, ಬದುಕಿನ ರೀತಿ ನೀತಿ, ಅವರ ಅಹಂ, ಈರ್ಷ್ಯ, ಪ್ರತಿಷ್ಠೆ ಇತ್ಯಾದಿಗಳು. ‘ಇಲಿಯಡ್‌’ ಆರಂಭವಾಗುವುದೇಅಗಮೆಮ್ನೊನ್‌ ಮತ್ತು ಅಖಿಲ್ಯೂಸ್‌ ನಡುವೆ ಹೆಣ್ಣಿನ ವಿಚಾರವಾಗಿ ಉಂಟಾದ ಆಂತರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ. ಟ್ರೋಜನ್‌ ರಾಜಕುಮಾರ ಪ್ಯಾರಿಸ್‌ (ಅಲೆಗ್ಸಾಂದ್ರೋಸ್‌) ಜತೆ ಪಲಾಯನ ಮಾಡಿದ ಹೆಲೆನ್ನಳನ್ನು ಮರಳಿ ಕರೆದುಕೊಂಡು ಹೋಗುವ ಉದ್ದೇಶದಿಂದ ಟ್ರೋಜನ್ನರ ಮೇಲೆ ಯುದ್ಧ ಹೂಡಿದ ಗ್ರೀಕ್‌ ನಾಯಕರ ನಡುವೆ ಹೆಣ್ಣಿನ ಹಂಚಿಕೆ ವಿಚಾರವಾಗಿ ದೊಡ್ಡ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಅಷ್ಟರಲ್ಲಾಗಲೇ ಅವರು ಯುದ್ಧಭೂಮಿಗೆ ಬಂದು ಹಲವಾರು ವರ್ಷಗಳು ಕಳೆದಿರುತ್ತವೆ. ಅಖಿಲ್ಯೂಸ್‌ ವಶದಲ್ಲಿರುವ ಹೆಣ್ಣನ್ನು ತನಗೆ ನೀಡಿದಲ್ಲಿ ಮಾತ್ರ ತನ್ನ ವಶದಲ್ಲಿರುವ ಪುರೋಹಿತನ ಮಗಳನ್ನು ಬಿಟ್ಟುಕೊಡುವುದಾಗಿ ಅಗಮೆಮ್ನೂನ್‌ ಪಟ್ಟು ಹಿಡಿದದ್ದು ಅವರಿಬ್ಬರ ನಡುವೆ ದೊಡ್ಡ ವಿವಾದಕ್ಕೆ ಕಾರಣವಾಗಿ ಅಖಿಲ್ಯೂಸ್‌ ಯುದ್ಧ ಭೂಮಿಯಿಂದ ಹಿಂದಕ್ಕೆ ಸರಿಯುವಂತೆ ಮಾಡುತ್ತದೆ. ಮತ್ತೊಬ್ಬನ ಜತೆ ಓಡಿಹೋದ ತಮ್ಮ ಸರೀಕನೊಬ್ಬನ ಪತ್ನಿಯನ್ನು ಮರಳಿಗಳಿಸುವ ಉದ್ದೇಶದಿಂದ ಯುದ್ಧಭೂಮಿಗೆ ಬಂದ ಗ್ರೀಕ್‌ ನಾಯಕರ ನಡುವೆ ಉಪಪತ್ನಿಯೊಬ್ಬಳನ್ನು ಪಡೆಯುವ ವಿಚಾರವಾಗಿ ಉಂಟಾದ ವಿವಾದದೊಂದಿಗೆ ‘ಇಲಿಯಡ್‌’ ಆರಂಭವಾಗುತ್ತದೆ. ತಮ್ಮಲ್ಲಿ ಯಾರನ್ನೂ ಮೋಹಿಸದೆ ಬೇರೊಬ್ಬನ ಜತೆ ಹೆಲೆನ್‌ ಓಡಿಹೋದುದು ಅವರ ಅಸೂಯೆಗೆ ಕಾರಣವಾಗಿರಬಹುದು ಎಂಬ ದೂರ ಸೂಚನೆಯು ದೊರಕುವುದು ಅಲ್ಲಿಯೇ.

ಮಾನವ ಜನಾಂಗದ ಮೂಲಭೂತ ಸಮಸ್ಯೆಗೆ ಸಂಬಂಧಿಸಿದ ‘ಈನೀಡ್‌’ನಲ್ಲಿ ಬರುವುದು ಅದೇ ಪೇಗನ್‌ ವಾತಾವರಣ. ಭೌಗೋಳಿಕ ಹಿನ್ನೆಲೆಗೆ ಸಂಬಂಧಿಸಿದ ಕೆಲ ವ್ಯತ್ಯಾಸ ಹೊರತು, ಅಖೈಯನ್ನರು ಅಥವಾ ಗ್ರೀಕರು ಮತ್ತು ಟ್ರೋಜನ್ನರ ನಡುವೆ ಹೆಚ್ಚಿನ ಅಂತರವಿಲ್ಲವಾದಂತೆ, ‘ಈನೀಡ್‌’ನ ಟ್ರೋಜನ್ನರು ಮತ್ತು ಲ್ಯಾಟಿನ್‌ ಜನರ ನಡುವೆ ಇರುವ ಅಂತರ ಅಂತಹ ಗಮನಾರ್ಹವಾದುದೇನಾಗಿರುವುದಿಲ್ಲ. ಹೋಮರನ ಟ್ರೋಜನ್ನರು ಮತ್ತು ಅಖೈಯೆನ್ನರು ಪೇಗನ್ನರಾದಂತೆ, ವರ್ಜಿಲನ ಟ್ರೋಜನ್ನರು ಮತ್ತು ಲ್ಯಾಟಿನ್‌ ಜನ ಕೂಡ ಪೇಗನ್ನರೇ ಮರೆಯದೇ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಹೋಮರ್‌ ಅಥವಾ ವರ್ಜಿಲ್‌ ಕಾಲದ ಸಮಾಜದಲ್ಲಿ ಯಾವುದೇ ತರಹದ ವಿವಿಕತತೆ ಅಥವಾ ವಿಘಟಿತತೆ ಕಾಣದಿರುವುದು. ಅಲ್ಲಿ ಸಂಘರ್ಷ, ತಿಕ್ಕಾಟ ಅಥವಾ ಹೋರಾಟ ನಡೆಯುವುದು ಬೇರೆ ಕಾರಣಗಳಿಗಾಗಿ. ಅವುಗಳ ಮೂಲ, ಸ್ಥಾಪಿತ ರಿಲಿಜನ್‌ ಆಗಿರಲಿಲ್ಲ ಎಂಬುದು ಬಹಳ ಮುಖ್ಯ.

ಟ್ರೋಜನ್ನರನ್ನು ಸಂಪೂರ್ಣ ನಿರ್ನಾಮ ಮಾಡುವ ಏಕೈಕ ಮಹತ್ವಾಕಾಂಕ್ಷೆ ಮತ್ತು ಘನ ಉದ್ದೇಶದಿಂದ ಗ್ರೀಕರು ಯುದ್ಧ ಹೂಡಿದರೆ, ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಲು ಟ್ರೋಜನ್ನರು ಅದರಲ್ಲಿ ಪಾಲುಗೊಳ್ಳಬೇಕಾಗುತ್ತದೆ; ಹೆಲೆನ್ ಅದಕ್ಕೆ ನೆಪವಾಗಿ ಒದಗಿ ಬರುತ್ತಾಳೆ. ಇಟಲಿ ಭಾಗದಲ್ಲಿ ನೆಲೆ ಕಂಡುಕೊಳ್ಳಲು ವಲಸೆ ಬಂದ ಅದೇ ಟರೋಜನ್ನರ ಒಂದು ಗುಂಪು ನೆಲೆಗಾಗಿ ಯುದ್ಧದಲ್ಲಿ ಭಾಗವಹಿಸಬೇಕಾಗಿ ಬಂದರೆ; ಅವರಿಗೆ ನೆಲೆ ನೀಡುವ ವಿಚಾರದಲ್ಲಿ ಭಿನ್ನ ಧೋರಣೆ ತಳೆದ ಲ್ಯಾಟಿಯಂ ಭಾಗದ ಕೆಲ ಜನರಿಂದಾಗಿ ಯುದ್ಧಕ್ಕೆ ಚಾಲನೆ ದೊರಕುತ್ತದೆ. ಯುದ್ಧದಂಥ ಯುದ್ಧ ನಡೆಯುವುದು ಕೂಡ ಕೆಲ ಅರ್ಥಪೂರ್ಣ ಕಾರಣಗಳಿಗಾಗಿಯಾಗಿದ್ದ ಕಾಲದಲ್ಲಿ ಬಂದವರು ಹೋಮರ್‌ ಮತ್ತು ವರ್ಜಿಲ್‌. ಆದರೆ ದಾಂತೆಯ ಕಾಲಕ್ಕಾಗಲೇ ಅವೆಲ್ಲ ಅರ್ಥ ಕಳೆದುಕೊಂಡಿದ್ದವು. ಕ್ರಿಶ್ಚಿಯನ್‌ನಂತಹ ಸ್ಥಾಪಿತ ರಿಲಿಜನ್‌ ಒಂದು ಕಡೆಯಾದರೆ, ಇಸ್ಲಾಂ ಮತ್ತೊಂದು ಕಡೆ; ಪರಾಕಾಷ್ಠೆಯ ಕೋಡುಗಲ್ಲು ತಲುಪಿದ್ದ ಸಂಘರ್ಷ ದಾಂತೆಯ ಕಾಲದ ಹೊಸ ಬೆಳವಣಿಗೆಯಾಗಿತ್ತು. ಆ ಪರಿಸ್ಥಿತಿಯನ್ನು ಅವನಿಗೂ ಹಿಂದೆ ಬಂದ ಯಾವ ಕವಿಗಳೂ ಎದುರಿಸಿ ಕಾವ್ಯ ರಚಿಸಿದ ಉದಾಹರಣೆ ಇಲ್ಲ. ಹೊರಗಿನ ಶತ್ರುಗಳಾದ ಇಸ್ಲಾಂ ಪ್ರತಿಪಾದಕರನ್ನು ಎದುರಿಸುವ ಜತೆಜತೆಗೆ, ಆಂತರಿಕವಾಗಿ ಹಲವಾರು ಪ್ರಾಂತ್ಯ ಮತ್ತು ಪಂಗಡಗಳಾಗಿ ಹಂಚಿಹೋಗಿದ್ದ ಇಟಲಿಯ ಜನ ಒಬ್ಬರನೊಬ್ಬರು ಪರಸ್ಪರ ನಿರ್ನಾಮ ಮಾಡಿಕೊಳ್ಳುವ ಮನಃಸ್ಥಿತಿ ತಲುಪಿದ್ದರು; ಛಿದ್ರವಿಛಿತ್ರವಾಗಿ ಹೋಗಿದ್ದ ವಿಘಟಿತ ಸಮಾಜದ ವಿವಿಕ್ತ ಜನರ ಬದುಕು ಮತ್ತು ಮನುಷ್ಯರ ನಡುವೆ ಹಿರಿದಾಗುತ್ತಾ ಸಾಗಿದ್ದ ಎಲ್ಲ ತರಹದ ಕಂದಕ ಮತ್ತು ವೈಚಿತ್ರ್ಯಗಳ ಸೃಷ್ಟಿ ದಾಂತೆ.

ಮಿಲ್ಟನ್‌ ಕಾಲಕ್ಕೆ ಅವನಿಗೆ ಜನ್ಮ ನೀಡಿದ ಬ್ರಿಟನ್ನಿನ ಪರಿಸ್ಥಿತಿ ಕೇವಲ ಆಂತರಿಕ ಬಿಕ್ಕಟ್ಟಿನ ರೂಪ ಪಡೆದುಕೊಂಡು ಮತ್ತಷ್ಟು ಹದಗೆಟ್ಟಿತ್ತು. ದಾಂತೆಯ ಕಾಲದ ಕ್ರಿಶ್ಚಿಯನ್‌ ರಿಲಿಜನ್‌ ಮಿಲ್ಟನ್‌ ಕಾಲಕ್ಕೆ ಪ್ರಾಟೆಸ್ಟಂಟ್‌ ಮತ್ತು ಕ್ಯಾಥೊಲಿಕ್‌ ಇತಯಾದಿ ಹಲವಾರು ಒಳಪಂಗಡಗಳಲ್ಲಿ ವಿಘಟಿತವಾಗಿ, ತಮ್ಮನ್ನು ತಾವೇ ಕೊಂದುಕೊಳ್ಳುವ ಸಿವಿಲ್‌ ವಾರ್‌ನಲ್ಲಿ ಜನ ಮೈಮರೆತಿದ್ದರು. ಮಿಲ್ಟನ್ನನನ್ನು ಬಹು ಕಟುವಾಗಿ ಟೀಕಿಸುವ ಎಲಿಯಟ್‌[4]ಗಿಂತ ಬಹಳ ಚೆನ್ನಾಗಿ ಆತನ ಕಾಲದ ಸಂಸ್ಕೃತಿಯನ್ನು ಗ್ರಹಿಸಿ ವಿವರಿಸ ಬರುವುದಿಲ್ಲ.

ಅಂತಹ ಕಾಲದ ಕವಿ, ಹೋಮರ್‌ – ವರ್ಜಿಲ್‌ ತರಹ ಸಾಂಪ್ರದಾಯಿಕ ಸೆಕ್ಯುಲರ್‌ ಅಥವಾ ಪೇಗನ್‌ ಆಗಿ ಉಳಿದಿರಲು ಸಾಧ್ಯವೇ? ಅವರ ತರಹ ಸೆಕ್ಯುಲರ್‌ ಕವಿಯಾಗುವುದೇ ಅವನ ಬದುಕಿನ ಗುರಿಯಾಗಿದ್ದಲ್ಲಿ, ತನ್ನ ಕಾಲದ ಬದುಕನ್ನು ಮರೆತು ಅವರ ಯುಗಕ್ಕೆ ತನ್ನನ್ನು ತಾನು ಮಿಲ್ಟನ್‌ ವರ್ಗಾಯಿಸಿಕೊಳ್ಳಬೇಕಿತ್ತು. ದಾಂತೆಯಾಗಲಿ ಮಿಲ್ಟನ್‌ ಆಗಲಿ ಆ ಸುಲಭದ ದಾರಿಯನ್ನು ಆರಿಸಿಕೊಳ್ಳಲಿಲ್ಲ. ತಾವು ಬಂದ ಕಾಲದ ಬದುಕು, ಬವಣೆ ಮತ್ತು ಬಿಕ್ಕಟ್ಟುಗಳನ್ನು ಎದುರಿಸಿ ಕಾವ್ಯ ನಿರ್ವಹಿಸಲು ಸಾಧ್ಯವಾದ ಕಾರಣ ದಾಂತೆ ದಾಂತೆಯಾಗಲು ಮತ್ತು ಮಿಲ್ಟನ್‌ ಮಿಲ್ಟನ್‌ ಆಗಲು ಸಾಧ್ಯವಾಯಿತು.

ಹೋಮರ್‌ ಮತ್ತು ವರ್ಜಿಲ್‌ ತಾವು ಬಂದ ಕಾಲಮಾನದ ಕೊಡುಗೆಯಾದಂತೆ, ದಾಂತೆ ಮಿಲ್ಟನ್‌ ಕೂಡ ನಿರ್ದಿಷ್ಟ ಕಾಲದ ಬದುಕಿಗೆ ಸ್ಪಂದಿಸಿದವರು. ಆಯಾ ಕಾಲಮಾನದ ಜಾಯಮಾನಕ್ಕನುಗುಣ ಪೇಗನ್‌ ವಾತಾವರಣದ ಕವಿಗಳು ಸೆಕ್ಯುಲರ್‌ ಅಂದರೆ ಪೇಗನ್‌ ಆಗಿ ಕಾಣಿಸಿಕೊಂಡಂತೆ, ಕ್ರಿಶ್ಚಿಯನ್‌ ಕಾಲದ ಕವಿಗಳು ಕ್ರಿಶ್ಚಿಯನ್‌ ಅಲ್ಲದೆ ಮತ್ತೇನಾಗಲು ಸಾಧ್ಯ ಎಂಬ ತರ್ಕ ಉದ್ಭವಿಸದಿರುವುದಿಲ್ಲ. ಆ ಕಾರಣವೇ ಹೋಮರ್‌ ವರ್ಜಿಲರನ್ನು ನಾನ್‌ – ಕ್ರಿಶ್ಚಿಯನ್‌ ಕವಿಗಳು ಎಂದು ಗುರುತಿಸುವುದು ಸಾಧುವಾಗಿ ತೋರುವುದಿಲ್ಲವಾದಂತೆ, ದಾಂತೆ – ಮಿಲ್ಟನ್‌ ಅವರನ್ನು ನಾನ್‌ – ಪೇಗನ್‌ ಕವಿಗಳು ಎಂದು ಹೀಯಾಳಿಸುವುದು ತರವಲ್ಲ. ಆದರೂ ಅವರನ್ನು ಸೆಕ್ಯುಲರ್‌ ಮತ್ತು ನಾಕ್‌ – ಸೆಕ್ಯುಲರ್‌ ಕವಿಗಳು ಎಂದು ಗುರುತಿಸುವುದರ ಮೂಲಕ, ಕಾಲಧರ್ಮದ ಮಹಿಮೆಗನುಗುಣ ಎಪಿಕ್‌ ನಿರ್ಮಾಣ ಕಾಲದಲ್ಲಿ ಆದ ಬದಲಾವಣೆಗಳು ಮತ್ತು ಅವುಗಳಿಗೆ ಆಯಾ ಕಾಲದ ಕವಿಗಳು ಸ್ಪಂದಿಸಿ ಬರವಣಿಗೆ ಮಾಡಿದ ಪರಿತಾಪ ಗುರುತಿಸುವ ಅವಕಾಶ ದೊರಕುತ್ತದೆ. ಜತೆಗೆ ನಾನ್‌ – ಸೆಕ್ಯುಲರ್‌ ವಾತಾವರಣದ ಕವಿಗಳು ತಮ್ಮ ಸುತ್ತಮುತ್ತಲಿನ ರಿಲಿಜನ್‌ ಪ್ರಭಾವಕ್ಕೆ ಸ್ಪಂಧಿಸಿಯೂ ಆ ಮಿತಿಯನ್ನು ಮೀರಲು ನಡೆಸಿದ ಅತ್ಯಂತ ಪ್ರಯಾಸಕರ ಸಾಹಸದ ಸೂಕ್ಷ್ಮವನ್ನು ಗುರುತಿಸಬಹುದಾಗಿದೆ.

ಕ್ರಿಶ್ಚಿಯನ್‌ ವಾತಾವರಣದ ಕವಿಗಳಾದ ದಾಂತೆ ಮತ್ತು ಮಿಲ್ಟನ್‌ ಕ್ರಿಶ್ಚಿಯನ್‌ ಕವಿಗಳಾಗಿ ಮಾತ್ರ ಉಳಿದಿದ್ದಲ್ಲಿ ಅವರ ಬಗ್ಗೆ ಯೋಚಿಸಬೇಕಾದ ಅಗತ್ಯ ಖಂಡಿತ ಬರುತ್ತಿರಲಿಲ್ಲ!

ಈಗಾಗಲೇ ಗುರುತಿಸಲಾದಂತೆ, ಹೋಮರನಿಂದ ವರ್ಜಿಲ್‌ವರೆಗೆ ಅನೇಕ ಬದಲಾವಣೆಗಳನ್ನು ಕಂಡ ಎಪಿಕ್‌ ಪರಂಪರೆಯ ಪ್ರಮುಖ ಲಕ್ಷಣಗಳನ್ನು ಕೈಬಿಟ್ಟು, ಕಾವ್ಯ ರಚನೆ ಮಾಡಿದ ಮೊದಲ ಕವಿ ದಾಂತೆಯ ಕೈಯಲ್ಲೂ ಕೂಡ, ಅದರ ಕೆಲವಾದರೂ ಗುಣಲಕ್ಷಣಗಳಿಂದ ಸಂಪೂರ್ಣ ದೂರ ಸರಿಯಲು ಸಾಧ್ಯವಾಗಲಿಲ್ಲ. ಹೋಮರನ ಎಪಿಕ್‌ ಪರಂಪರೆಗೆ ಹಲವಾರು ತರಹದ ಬದಲಾವಣೆ ತಂದ ವರ್ಜಿಲ್‌ ಅದರ ಪ್ರಮುಖ ಗುಣಲಕ್ಷಣಗಳಾದ ಕತೆಯ ಹಂದರ, ನಿರ್ವಹಣಾ ವಿಧಾನ, ನಾಯಕರಿಗೆ ನೀಡಲಾಗುವ ಪ್ರಾಧಾನ್ಯ, ಯುದ್ಧ ಮತ್ತು ಬದುಕಿಗೆ ಸ್ಪಂದಿಸುವ ರೀತಿಯನ್ನು ಉಳಿಸಿಕೊಂಡು ತನ್ನದೇ ಆದ ಕಾವ್ಯ ಮಾದರಿಯೊಂದನ್ನು ರೂಪಿಸಿಕೊಂಡವನು. ಆದರೆ ದಾಂತೆಯ ಕಾವ್ಯಕ್ಕೆ ಒಂದು ಕಥೆಯು ಇಲ್ಲ, ಕಥಾನಾಯಕರು ಮೊದಲೇ ಇಲ್ಲ; ಹಲವಾರು ನಾಯಕರು, ಪ್ರತಿನಾಯಕರು, ಖಳನಾಯಕರು, ಅವರ ಆಖ್ಯಾನಗಳು ಮತ್ತು ಉಪಾಖ್ಯಾನಗಳಿಂದ ತುಂಬಿರುವ ಅವನ ಕಾವ್ಯ ಬದುಕಿಗೆ ಸ್ಪಂದಿಸುವ ರೀತಿ ಮತ್ತು ನಿರ್ವಹಣಾ ವಿಧಾನದಲ್ಲಿ ಹೋಮರ್‌ – ವರ್ಜಿಲ್‌ ಪರಂಪರೆಗೆ ಹತ್ತಿರ ಬರುತ್ತದೆ. ಆ ಕಾರಣವೇ ಹೋಮರ್‌ ಪರಂಪರೆಯ ಕೊನೆಯ ತುದಿಯಾಗಿದಾಂತೆ ಕಂಡುಬರುತ್ತಾನೆ. ಆ ಹೋಮರ್‌ – ವರ್ಜಿಲ್‌ ಪರಂಪರೆಗೆ ಮತ್ತೆ ಮರುಜೀವ ನೀಡಲು ಪ್ರಯತ್ನಿಸಿದ ಮಿಲ್ಟನ್‌ ಕೂಡ ತನ್ನದೇ ಭಿನ್ನ ಜಾಡಿನಲ್ಲಿ ಸಾಗಿದರೂ ಕಥನಕ್ರಮ, ನಿರ್ವಹಣಾ ವಿಧಾನ ಮತ್ತು ಬದುಕಿಗೆ ಸ್ಪಂದಿಸುವ ರೀತಿಯಲ್ಲಿ ಮಾತ್ರ ಆ ಪರಂಪರೆಗೆ ಹತ್ತಿರ ಹತ್ತಿರ ಬರುತ್ತಾನೆ. ಉಳಿದಂತೆ ಹೋಮರ್‌ ವರ್ಜಿಲ್‌ ಜತೆಗೆ ಹೆಚ್ಚಿನ ಸಂಬಂಧ ಇರುವಂತೆ ತೋರುವುದಿಲ್ಲ. ಅಂದರೆ ಬದುಕಿಗೆ ಸ್ಪಂದಿಸುವ ರೀತಿ ಮತ್ತು ಅದಕ್ಕಾಗಿ ನಡೆಸಬೇಕಾದ ಪ್ರಯೋಗಶೀಲತೆ ಅವರಿಗೆ ಬಹಳ ಮುಖ್ಯವಾಗುತ್ತದೆ.

ಹೋಮರ್‌ ಮತ್ತು ವರ್ಜಿಲ್‌ ತಮ್ಮದೇ ಆದ ಕಾವ್ಯದರ್ಶಿ ಮತ್ತು ಮಾದರಿಯೊಂದನ್ನು ಕಂಡುಕೊಂಡಂತೆ, ಅದೆ ಮಾರ್ಗದಲ್ಲಿ ಪ್ರಯೋಗಶೀಲತೆ ಮುಂದುವರಿಸುವುದರ ಮೂಲಕ ತಮ್ಮ ಕಾಲಮಾನಕ್ಕನುಗುಣ ಭಿನ್ನ ಕಾವ್ಯ ಮಾದರಿಯೊಂದನ್ನು ಕಂಡುಕೊಂವರು ದಾಂತೆ ಮತ್ತು ಮಿಲ್ಟನ್‌. ಅದರಲ್ಲಿ ಅವರು ಹೋಮರ್‌ – ವರ್ಜಿಲ್‌ ತರಹವೆ ಯಶಸ್ವಿಯಾಗುತ್ತಾರೆ. ಹೋಮರನ ಕಾವ್ಯಮಾದರಿ ಹೋಮರನಾದಂತೆ, ವರ್ಜಿಲನ ಕಾವ್ಯ ಮಾದರಿ ವರ್ಜಿಲನದಲ್ಲದೆ ಬೇರೆಯವರದಾಗಲು ಸಾಧ್ಯವಿಲ್ಲ; ಅದೇ ತರಹದಾಂತೆ ರೂಪಿಸಿಕೊಂಡ ಮಾದರಿ ದಾಂತೆಯಾಯಿತು. ಅದೇ ಹಾದಿಯಲ್ಲಿ ಕವಿ ಮಿಲ್ಟನ್‌ ಕೂಡ ಸಾಗಿದ. ಹಾಗಾಗಿ ಅವನ ಕಾವ್ಯವನ್ನು ‘ಎಪಿಕ್‌’ ಅಥವಾ ‘ವಿರೋಧಿ – ಎಪಿಕ್‌’ ಎಂದು ಕರೆದರೂ ಅದೇ ಅರ್ಥ. ಆ ಕಾರಣವೇ ತಮ್ಮ ಕಾಲದ ಕ್ರಿಶ್ಚಿಯನ್‌ ಪರಿಸರ ಮತ್ತು ಸಂಸ್ಕೃತಿಯನ್ನು ಒಳಗೊಂಡು ಕಾವ್ಯ ಬರೆಯುವ ಸವಾಲನ್ನು ಸ್ವೀಕರಿಸಿ ಆ ಮಿತಿಯನ್ನು ಮೀರುವುದು ಅವರಿಬ್ಬರಿಗೂ ಅನಿವಾರ್ಯವಾಯಿತು. ಏಕೆಂದರೆ ಅವರು ಬಂದ ವಾತಾವರಣವೇ ಅಂತಹದ್ದಾಗಿತ್ತು.

ಬೇರೆ ಯಾರಾದರೂ ಆಗಿದ್ದಲ್ಲಿ ಅದೆಲ್ಲ ಮರೆತು ಹೋಮರ್‌ ಅಥವಾ ವರ್ಜಿಲ್‌ ಕಾಲದ ಕತೆ ಅಥವಾ ಪುರಾಣವನ್ನು ತಮ್ಮ ಕಾವ್ಯದ ವಸ್ತುವನ್ನಾಗಿ ಆರಿಸಿಕೊಳ್ಳುವ ಸುಲಭ ಮಾರ್ಗದಲ್ಲಿ ಸಾಗುತ್ತಿದ್ದರೋ ಏನೋ! ಆ ಮಾರ್ಗ ಹಿಡಿಯಲಿಲ್ಲ ಅವರು. ಹೋಮರ್‌ – ವರ್ಜಿಲ್‌ ಮೊದಲಾದವರು ಪ್ರತಿನಿಧಿಸುವ ಬದುಕು ಕೇವಲ ಪೂರ್ವಕಾಲದ ಸರಕಾಗಿ ಕಾಣದ ಅವರಿಗೆ, ಅವೆಲ್ಲ ಅವರ ಉರಿಯುವ ಸಮಕಾಲೀನ ಸಮಾಜದಲ್ಲಿ ಪ್ರಖರವಾಗುತ್ತವೆ. ಆ ರೀತಿ ಹಿರಿಯ ಪರಂಪರೆಯನ್ನು ತಮ್ಮ ಸಮಕಾಲೀನ ಬದುಕಿನ ರಕ್ತ ಮತ್ತು ನರನಾಡಿಗಳಲ್ಲಿ ಉರಿಯುವ ಬೆಂಕಿಯಾಗಿ ಕಾಣುವ ಕವಿ ಮಾತ್ರ ಮುಂದಿನ ಬದುಕಿನ ಬಗ್ಗೆ ಮಾತನಾಡುವ ಅವಕಾಶ ಗಿಟ್ಟಿಸುತ್ತಾನೆ. ಅಂದರೆ ತಾವು ಬದುಕಿ ಬರೆದ ಕಾಲಕ್ಕೆ ಬದ್ಧರಾಗಿ ಬರೆದ ಕವಿಗಳಿಗೆ ಮಾತ್ರ ಅದನ್ನು ಮೀರುವ ಕಲೆ ಗೊತ್ತಿರುತ್ತದೆ. ವ್ಯಕ್ತಿತ್ವವಿದ್ದವರಿಗೆ ವ್ಯಕ್ತಿತ್ವ – ನಿರಸನ ಎಂದರೆ ಏನು ಎಂಬುದು ಗೊತ್ತಿರುತ್ತದೆ ಎಂಬ ಅತ್ಯಂತ ಕಿಲಾಡಿ ಆದರೆ ಅದೇ ಅರ್ಥ ನೀಡುವ ಮರ್ಮದ ಮಾತುಗಳನ್ನಾಡುವ ಕಲೆಗಾರಿಕೆಯನ್ನು ಎಲಿಯಟ್‌[5] ಕಲಿತದ್ದೇ ವರ್ಜಿಲ್‌, ದಾಂತೆ ಮೊದಲಾದವರಿಂದ.

ಕೆಲವರಿಗೆ ಕಾಲ ಪೂರಕವಾಗಿ ಪರಿಗಣಿಸಿದರೆ ಮತ್ತೆ ಕೆಲವರು ಆ ವಿರುದ್ಧ ಸೆಣಸಬೇಕಾಗುತ್ತದೆ. ಆ ಕಾರಣವೊ ಏನೋ ದಾಂತೆ ಮತ್ತು ಮಿಲ್ಟನ್‌ ಮೇಲೆ ಇದ್ದಂತಹ ಅನೇಕ ರೀತಿಯ ಒತ್ತಡಗಳು, ಹೋಮರನ ಮೇಲೆ ಇದ್ದಂತೆ ತೋರುವುದಿಲ್ಲ. ವರ್ಜಿಲ್‌ ಕೂಡ ಕಾಲನ ಒತ್ತಡ ಎದುರಿಸಿ ಕಾವ್ಯ ಬರೆದವನಾದರೂ, ಆತನಿಗೆ ಆ ಕಾಲದ ವಿರುದ್ಧ ಸೆಣಸಬೇಕಾದ ಅಗತ್ಯ ಬರಲಿಲ್ಲ ಎಂಬ ಸೂಕ್ಷ್ಮ ವ್ಯತ್ಯಾಸವನ್ನು ಗುರುತಿಸುವುದು ಬಹಳ ಮುಖ್ಯ. ಹೋಮರನ ಕಾಲಕ್ಕೆ ಹೋಮರನೇ ಎಲ್ಲದರಲ್ಲಿಯೂ ಮೊದಲಿಗ; ಅವನೆ ಮೊದಲ ಎಪಿಕ್‌ ಕವಿ, ಮೊದಲ ತತ್ವಜ್ಞಾನಿ, ಮೊದಲ ಕಲಾವಿದ, ಮೊದಲ ವಿಜ್ಞಾನಿ, ಮೊದಲ ಮೀಮಾಂಸಕ, ಅಷ್ಟೇ ಏಕೆ ಅವನೆ ಮೊದಲ ಜಿಜ್ಞಾಸು, ದಾರ್ಶನಿಕ ಅಥವಾ ದ್ರಷ್ಟಾರ ಮತ್ತು ಅನ್ವೇಷಕ; ಅಕ್ಷರ ಸಂಸ್ಕೃತಿ ಸ್ಥಾಪಿತ ಪರಂಪರೆಯಾಗಿ ರೂಢಿಗತವಾಗುವುದಕ್ಕೆ ಮೊದಲು ಹಾಡುಗಬ್ಬ ಸಂಸ್ಕೃತಿಯಿಂದ ಸ್ವಲ್ಪ ಪ್ರಮಾಣದಲ್ಲಿ ಬಿಡಿಸಿಕೊಂಡು ಎಪಿಕ್‌ ರಚಿಸುವುದರ ಮೂಲಕ ನೂತನ ಪರಂಪರೆಯೊಂದಕ್ಕೆ ನಾಂದಿ ಹಾಡಿದ ‘ಅದೃಷ್ಟಶಾಲಿ’ ತನಗಿಂತಲೂ ಮೊದಲಿನವರಿಗೆ ಹೋಮರ್‌ ಎಷ್ಟು ಋಣಿ ಎಂಬ ಪ್ರಶ್ನೆಗೂ ಅವನನ್ನೇ ನೋಡಿ ಉತ್ತರ ಕಂಡುಕೊಳ್ಳಬೇಕಾದ ಸ್ಥಿತಿ ಇದೆ. ‘ಅದೃಷ್ಟ’ ಎಂಬ ಮಾತಿಗೆ ಅದಕ್ಕಿಂತ ಉತ್ತಮ ಉದಾಹರಣೆ ಬೇಕೆ? ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾದ ಮೊದಲಿಗರು ಎದುರಿಸುವ ಅನೇಕ ತರಹದ ತೊಂದರೆ ತಾಪತ್ರಯ ಹಾಗೂ ಅಡಚಣೆಗಳನ್ನು ಎದುರಿಸಿಯೆ ಹೋಮರ್‌ ಕಾವ್ಯರಚನೆ ಮಾಡಿದ್ದನಾದರೂ, ಉದಾರವಾಗಿ ವರ್ತಿಸಿದ ಮತ್ತೊಬ್ಬ ಕವಿಯನ್ನು ಕಾಣುವುದು ಕಷ್ಟ; ಇದ್ದಲ್ಲಿ ವರ್ಜಿಲ್‌ ಮಾತ್ರ.

ವರ್ಜಿಲ್‌ ಕಾಲಕ್ಕಾಗಲೇ ಹೋಮರನ ಕಾಲದ ಪೇಗನ್‌ ಆಚರಣೆಗಳಿಗೆ ಧಾರ್ಮಿಕ ಮಹತ್ವ ಮತ್ತು ಪ್ರಾಮುಖ್ಯ ಬಂದಿತ್ತಾದರೂ, ಅದೊಂದು ಸ್ಥಾಪಿತ ರಿಲಿಜನ್‌ ಆಗಿ ಪರಿವರ್ತನೆಗೊಂಡಿರಲಿಲ್ಲ. ತತ್ವಜ್ಞಾನ, ವಿಜ್ಞಾನ, ಕಲೆ, ವೈದ್ಯಕೀಯ, ಕಾನೂನು, ವಾಸ್ತುಶಿಲ್ಪ, ರಾಜಕೀಯ ಇತ್ಯಾದಿ ಹಲವಾರು ಕ್ಷೇತ್ರಗಳಾಗಿ ಜ್ಞಾನಶಾಖೆ ವಿಭಜಿಸಿ ಹೋಗಿದ್ದು, ಆ ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡಿ ತೋರಿಸಿದ ಅನೇಕರಲ್ಲಿ ಒಬ್ಬನಾಗಿ ವರ್ಜಿಲ್‌ ತನ್ನನ್ನು ತಾನು ಕಂಡುಕೊಳ್ಳಬೇಕಿತ್ತು. ಆ ಕಾರಣವೇ ಹೋಮರ್ ಕಾಲದ ಪುರಾಣದ ತುಣುಕೊಂದನ್ನು ತನ್ನ ಮತ್ತು ತನ್ನ ಕಾಲದ್ದಾಗಿಸಿಕೊಳ್ಳುವ ಅಗತ್ಯ ಎದುರಾದಂತೆ, ಕೆಲ ತತ್ವಜ್ಞಾನಿಗಳು ಅಥವಾ ಚಿಂತಕರು ರೂಪಿಸಿದ ಜೀವನ ದರ್ಶನ ಅಥವಾ ಸಿದ್ಧಾಂತವನ್ನು ತನ್ನ ಕೃತಿಯ ಸಂದರ್ಭದಲ್ಲಿ ತನ್ನದಾಗಿಸಿಕೊಳ್ಳುವ ಸಿದ್ಧತೆ ಮಾಡಿಕೊಳ್ಳಬೇಕಾಯಿತು. ‘ಈನೀಡ್‌’ ಕೃತಿಯಲ್ಲಿ ಅವನು ಒಟ್ಟಾರೆ ಪ್ರತಿಪಾದಿಸುವ ಜೀವನಧರ್ಮ, ದೃಷ್ಟಿಕೋನ ಅಥವಾ ದರ್ಶನ ಅಂತಿಮವಾಗಿ ಅವನದೇ ಆದರೂ, ಅದೇ ಧಾಟಿಯಲ್ಲಿ ಯೋಚಿಸಿದ ಅನೇಕ ತತ್ವಜ್ಞಾನಿಗಳನ್ನು ಆ ಕಾಲದ ಸಮಾಜ ಕಂಡಿತ್ತು. ಆ ಮಟ್ಟಿಗೆ ಕಾಲ ವರ್ಜಿಲ್‌ ಮೇಲೆ ಹೇರಿದ ಒತ್ತಡ ಕಡಿಮೆ ಏನಲ್ಲ. ಆ ಕಾಲದ ಒತ್ತಡದ ಕಾರಣವೇ ನಿಯತಿಯ ಚೌಕಟ್ಟಿನಲ್ಲಿ ಟ್ರಾಯ್‌ ಮೂಲದವರು ಸೇರಿದ ರೋಮನ್‌ ಜನರಿಗಿರುವ ಭವ್ಯ ಭವಿತವ್ಯ ಗಮನದಲ್ಲಿಟ್ಟುಕೊಂಡು ಎಪಿಕ್ ಬರೆಯುವ ಘನ ಉದ್ದೇಶದಿಂದ ಪ್ರೇರೇಪಿತನಾಗಬೇಕಾಗುತ್ತದೆ. ಅದು ಕೂಡ ಕಾಲನ ಮಹಿಮೆಯೇ. ಆ ಕಾಲನ ಒತ್ತಡಕ್ಕೆ ಪೂರಕವಾಗಿ ಕೆಲಸ ಮಾಡಿದ ವರ್ಜಿಲನಿಗೆ ಅದಕ್ಕೆ ವಿರುದ್ಧವಾಗಿ ಸೆಣಸಬೇಕಾದ ಅಗತ್ಯ ಎದುರಾಗಲಿಲ್ಲವಷ್ಟೆ.

ಕ್ರಿಶ್ಚಿಯನ್‌ ಅದರಲ್ಲೂ, ಇಸ್ಲಾಂ ರಿಲಿಜನ್ನಿನ ಉದಯದೊಂದಿಗೆ ಜಗತ್ತಿನ ಧಾರ್ಮಿಕ ವಾತಾವರಣವೇ ಕಲಕಿಹೋಗಿ ಅವು ನಿರ್ಬಂಧಿಸುವ ವಿಧಿವಿಧಾನ ಮತ್ತು ಆಚರಣೆಗಳ ಜತೆಗೆ ಅವು ವಿಧಿಸುವ ದೃಷ್ಟಿಕೋನ. ಮನೋಧರ್ಮ, ಮನೋಭಾವ ಮತ್ತು ಜೀವನ ವಿಧಾನವನ್ನು ಪರಿಪಾಲಿಸಬೇಕಾದ ಪರಿಸ್ಥಿತಿ ದಾಂತೆಯ ಕಾಲದ್ದಾಗಿತ್ತು. ಅ ಯಾವುದೇ ಒತ್ತಡ ಹೋಮರ್‌ ಮೇಲಿರಲಿಲ್ಲ. ವರ್ಜಿಲ್‌ ಮೇಲೆ ಇತ್ತಾದರೂ, ಅದನ್ನು ತನಗೆ ಸರಿಕಂಡ ರೀತಿಯಲ್ಲಿ ಮಾರ್ಪಡಿಸಿಕೊಳ್ಳುವ ಸ್ವಾತಂತ್ರ್ಯವೂ ಇತ್ತು. ಯಾವುದೇ ಘನವಾದ ಉದ್ದೇಶ ಇಟ್ಟುಕೊಂಡು ಎಪಿಕ್‌ ಬರೆಯದ ಹೋಮರ್‌, ತೋರಾಣಿಕೆಯ ನಿರುದ್ದಿಶ್ಯದ ಮೂಲಕವೇ ತನ್ನ ಉದ್ದೇಶ ಸಾಧಿಸುವ ಅವಕಾಶ ಪಡೆಯುತ್ತಾನೆ: ಅವನ ಎಪಿಕ್‌ನಲ್ಲಿನ ಸಹಜ ಸರಳತೆ ಆದಿವಾಸಿಗಳ ಸಹಜ – ಸರಳತೆಯಷ್ಟೇ ಮುಗ್ಧವಾದುದು. ಆ ಸರಳತೆ ವರ್ಜಿಲ್‌ ಕಾಲಕ್ಕೆ ಆವಿಯಾಗತೊಡಗಿತ್ತು. ಆ ಕಾರಣವೆ ಅವನು ಹೊರಡುವಾಗಲೆ ಘನವಾದ ಉದ್ದೇಶ ಇಟ್ಟುಕೊಂಡು ಹೊರಡಬೇಕಾಗುತ್ತದೆ.

ದಾಂತೆ ಇನ್ನೂ ಘನವಾದ ಉದ್ದೇಶದಿಂದ ಕಾವ್ಯ ಬರೆಯಬೇಕಾಗುತ್ತದೆ: ತನ್ನ ಕಾವ್ಯದ ಚೌಕಟ್ಟಿನಲ್ಲಿ ರೋಮನ್‌ ಕ್ಯಾಥೊಲಿಕ್‌ ರಿಲಿಜನ್ನಿನ ಸತ್ಯ ಅನ್ವೇಷಿಸುವುದು; ಆ ಚೌಕಟ್ಟನ್ನು ಒಪ್ಪಿಕೊಳ್ಳುವಾಗಲೇ ತಾನು ವಹಿಸಬಹುದಾದ ಸ್ವಾತಂತ್ರ್ಯ ಮತ್ತು ಮಿತಿಯನ್ನು ದಾಂತೆ ಸ್ವೀಕರಿಸಬೇಕಾಗುತ್ತದೆ. ಕಾಲಮಾನದ ಕೊಡುಗೆಯಾದ ಆ ಬದಲಾವಣೆ ಅವನ ಕಾಲದ ಅಂಗವಾಗಿ ಹೋಗಿತ್ತು. ಜತೆಗೆ ಕ್ರಿಶ್ಚಿಯನ್ನು ರಿಲಿಜನ್ನಿಗೆ ದೇವತಾಶಾಸ್ತ್ರೀಯ ಚೌಕಟ್ಟು ನೀಡುವ ವಿಚಾರದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ ಥಾಮಸ್‌ ಅಕ್ವಿನಾಸ್‌ನ ಹಿನ್ನೆಲೆ ಸ್ವೀಕರಿಸಿ ದಾಂತೆ ಕಾವ್ಯರಚನೆ ಮಾಡಬೇಕಾಗುತ್ತದೆ. ತನ್ನ ಕಾಲದ ವಾಸ್ತವ ಸತ್ಯಗಳಾದ ಆ ಎಲ್ಲವುಗಳನ್ನೂ ಸವಾಲಾಗಿ ಸ್ವೀಕರಿಸಿ ಕಾವ್ಯರಚನೆ ಮಾಡುವುದು ಹೊರತು, ಅವುಗಳಿಂದ ತಪ್ಪಿಸಿಕೊಳ್ಳುವುದು ಅವನಿಗೆ ಸಾಧ್ಯವೂ ಇರಲಿಲ್ಲ, ಅದು ಸಾಧುವೂ ಆಗಿರಲಿಲ್ಲ. ಆ ಮಿತಿಯನ್ನು ಮೀರಿ ಬೆಳೆಯಲು ವರ್ಜಿಲನನ್ನು ಕಾವ್ಯ ಕಾವ್ಯಸತ್ಯದ ಅನ್ವೇಷಣೆಯ ಹಾದಿಯಲ್ಲಿ ಗುರುವಾಗಿ ಸ್ವೀಕರಿಸುವ ದಾಂತೆ, ತನ್ನ ಪರಿಸ್ಥಿತಿಗನುಗುಣ ತನ್ನದೇ ಕಾವ್ಯ ಮಾದರಿಯೊಂದನ್ನು ಕಂಡುಕೊಳ್ಳುತ್ತಾನೆ. ವರ್ಜಿಲ್‌ ಮುಖೇನ ತನ್ನ ಹಿಂದಿನ ಪರಂಪರೆಯೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುವ ದಾಂತೆ, ತನ್ನ ಬಾಲ್ಯಗೆಳತಿ ತೋರಿಸುವ ಸ್ವರ್ಗದ ಮೂಲಕ ಕ್ರಿಶ್ಚಿಯನ್‌ ರಿಲಿಜನ್ನಿನ ಸ್ವರ್ಗದ ಕಲ್ಪನೆಗೆ ಹೊಸ ಅರ್ಥ ಬರುವಂತೆ ನೋಡಿಕೊಳ್ಳುತ್ತಾನೆ. ಹಾಗಾಗಿ ಅವನ ಕಾವ್ಯದ ಚೌಕಟ್ಟು ರೋಮನ್‌ ಕ್ಯಾಥೊಲಿಕ್‌ ಆದರೂ, ಅದು ತನ್ನದೂ ಆಗುವಂತೆ ಕಂಡುಕೊಳ್ಳುವುದರ ಮೂಲಕ ಬದುಕಿನ ಸಂದರ್ಭದಲ್ಲಿ ಕ್ರಿಶ್ಚಿಯನ್‌ ಸತ್ಯಕ್ಕೆ ಹೊಸ ರೂಪ ಮತ್ತು ಅರ್ಥ ನೀಡಿದವನು ದಾಂತೆ.

ದಾಂತೆ ರೂಪಿಸಿದ ಕಾವ್ಯಮಾದರಿಯನ್ನು ಯಾರೂ ಪ್ರಶ್ನಿಸಲಿಲ್ಲ, ಅದನ್ನು ಪ್ರಶ್ನಿಸಿ ವಿವಾದ ಸೃಷ್ಟಿಸುವ ಅಗತ್ಯ ಮುಂದೆಯೂ ಉದ್ಭವಿಸಲಿಲ್ಲ; ದಾಂತೆ ಬದುಕು ಮತ್ತು ಬರವಣಿಗೆ ಕುರಿಂತೆ ಹಲವಾರು ತರಹದ ವಿವಾದಗಳಿವೆಯಾದರೂ, ಆತ ರೂಪಿಸಿದ ಕಾವ್ಯ ಮಾದರಿಗೆ ಸಂಬಂಧಿಸಿದಂತೆ ವಿವಾದಗಳಿಲ್ಲ. ಆದರೆ ಎಪಿಕ್‌ ಮಾದರಿಯ ಕಾವ್ಯ ಬರೆಯುವ ಮಿಲ್ಟನ್‌ ಹಂಬಲವೆ ಅನೇಕರಿಗೆ ಸರಿಕಾಣಲಿಲ್ಲ. ಅದನ್ನು ಕುಹಕವಾಗಿ ನೋಡಿದ್ದೂಂಟು. ಎಪಿಕ್‌ ಕಾವ್ಯ ಪರಂಪರೆ ಮುಂದುವರಿಸುವ ಸಾಧ್ಯತೆ ಬಗ್ಗೆ ಅಪನಂಬುಗೆಗಳು ದಟ್ಟವಾಗಿದ್ದ ಕಾಲದಲ್ಲಿ ಅದನ್ನು ಹುಸಿಮಾಡುವ ಉದ್ದೇಶಪೂರ್ವಕ ಉದ್ದೇಶದಿಂದ ಮಿಲ್ಟನ್‌ ಕಾವ್ಯ ರಚನೆಗೆ ಮುಂದಾಗುವುದು, ಯಾವ ದೃಷ್ಟಿಯಿಂದ ನೋಡಿದರೂ ಅಷ್ಟೊಂದು ಸಮಂಜಸವಲ್ಲದ ಬೆಳವಣಿಗೆ. ತರ್ಕಬದ್ಧವಾಗಿ ನೋಡುವುದಾದಲ್ಲಿ, ಮಿಲ್ಟನ್‌ನ ಆ ಹಂಬಲವನ್ನೆ ‘ಎಪಿಕ್‌ ಪರಂಪರೆಯ ಮುಂದುವರಿಕೆ ಅಸಾಧ್ಯ’ ಎಂಬ ವಾದದ ಸಮರ್ಥನೆಗಾಗಿ ಬಳಸಿಕೊಂಡುಬಿಡಲೂಬಹುದು. ಎಪಿಕ್‌ ಪರಂಪರೆ ಮುಂದುವರಿಸುವ ಮತ್ತು ಎಪಿಕ್‌ ಇಲ್ಲದ ಇಂಗ್ಲಿಷ್‌ ಭಾಷೆಗೂ ಒಂದು ಎಪಿಕ್‌ ಮಾದರಿ ಕಾವ್ಯ ನೀಡುವ ಆಶಯದಿಂದ ಹೊರಟ ಮಿಲ್ಟನ್‌ಗೆ, ಪರೋಕ್ಷವಾಗಿಯಾದರೂ ಆ ವಿರೋಧಾಭ್ಯಾಸಗಳ ಅರಿವಿದ್ದಂತೆ ಕಾಣುತ್ತದೆ. ಮಿಲ್ಟನ್‌ ರೂಪಿಸಿಕೊಂಡ ಮಾದರಿ ವಿವಾದಕ್ಕೊಳಗಾದಂತೆಯೆ, ಆತ ಆರಿಸಿಕೊಂಡ ವಸ್ತು, ಅದನ್ನು ನಿರ್ವಹಿಸುವ ರೀತಿ, ಜತೆಗೆ ವಸ್ತುವನ್ನು ನೋಡುವ ಮತ್ತು ಅದರಿಂದ ಹೊರಡುವ ಕಾಣ್ಕೆ ಕೂಡ ವಿವಾದಕ್ಕೆ ತುತ್ತಾಗಲು ಆ ಹಿನ್ನೆಲೆಯೆ ಕಾರಣ. ಹಾಗಾಗಿ ಕಾಲನ ವಿರುದ್ಧ ಸೆಣಸಬೇಕಾದ ಅಗತ್ಯ ಮಿಲ್ಟನ್‌ ಕಾಲಕ್ಕೆ ತೀವ್ರರೂಪ ಪಡೆದುಕೊಂಡಿತ್ತು.

ಮಾನವೀಯ ಮೂಲದ ವಿಶಾಲ ತಳಹದಿಯ ಮೇಲೆ ನಿಂತ ಹೋಮರನ ಎಪಿಕ್‌ ಪರಂಪರೆ ವರ್ಜಿಲ್‌ ಕಾಲಕ್ಕೆ ರೋಮನ್‌ ಆದರೆ, ದಾಂತೆ ಕಾಲಕ್ಕೆ ರೋಮನ್‌ ಕ್ಯಾಥೊಲಿಕ್‌ ಆಗುತ್ತದೆ. ಅದೇ ಪರಂಪರೆ ಮಿಲ್ಟನ್‌ ಕಾಲಕ್ಕೆ, ಪ್ರಾಟೆಸ್ಟಂಟ್‌ ಆಗಬೇಕಾಗುತ್ತದೆ. ಯುರೋಪ್‌ ಮತ್ತು ಏಷ್ಯಾದ ಪ್ರತಿನಿಧಿಗಳಂತೆ ಕಾಣಬರುವ ಗ್ರೀಕ್‌ ಮತ್ತು ಟ್ರೋಜನ್ನರ ಭೌಗೋಳಿಕ ಹಿನ್ನೆಲೆ ಇದ್ದೂ ಇಲ್ಲದಂತೆ ಮತ್ತು ಬಂದೂ ಬಂದಿಲ್ಲದಂತಿರುವ ಕಾರಣ, ಹೋಮರನ ಎಪಿಕ್‌ಗಳಿಗೆ ಇಡೀ ವಿಶ್ವವೇ ಹಿನ್ನೆಲೆ; ಮಾನವ ರಂಗಭೂಮಿಯ ಮೇಲೆ ಮಾನವ ಜನಾಂಗದ ಪ್ರತಿನಿಧಿಗಳ ನಡುವಿನ ಸಂಘರ್ಷ ನಿರೂಪಿಸುವ ಆತನ ಎಪಿಕ್‌ಗಳ ಭಾಷೆ ಗ್ರೀಕ್‌ ಎಂಬ ಸಣ್ಣ ತೊಡಕು ಬಿಟ್ಟರೆ, ಆತನ ಕೃತಿಗಳಿಗೆ ವಿಶ್ವವೇ ರಂಗಮಂಟಪ.

ಆ ಪರಂಪರೆ ವರ್ಜಿಲನ ಕಾಲಕ್ಕೆ ರೋಮನ್ ರಾಷ್ಟ್ರೀಯ ಆಗುತ್ತದೆ. ಏಷ್ಯಾ ಮತ್ತು ಯುರೋಪ್‌ ಹಾಗೂ ಪೂರ್ವ ಮತ್ತು ಪಶ್ಚಿಮ ಎಂಬ ಸ್ಪಷ್ಟ ಭೌಗೋಳಿಕ ಮತ್ತು ಸಾಂಸ್ಕೃತಿಕ ವಿಭಜನೆಯನ್ನು ಒಪ್ಪಿಕೊಂಡು, ಅವುಗಳ ನಡುವಿನ ಸಂಘರ್ಷವನ್ನು ಮಾನವ ಜನಾಂಗದ ಮೂರ್ತ ಗುಣಗಳ ಪ್ರಾತಿನಿಧಿಕ ರೂಪದಲ್ಲಿ ಮಾರ್ಪಡಿಸಲು ಸಾಧ್ಯವಾದ ಕಾರಣ, ‘ಈನೀಡ್‌’ ಮಾದರಿ ಲಿಖಿತ ಎಪಿಕ್‌ ಆಗುವುದರ ಜತೆಗೆ ಕ್ಲಾಸಿಕ್‌ ಎಂದು ಪರಿಗಣಿತವಾಗುವ ಅರ್ಹತೆ ಪಡೆಯಿತು. ಒಂದು ನಿರ್ದಿಷ್ಟ ಭೌಗೋಳಿಕ ಹಿನ್ನೆಲೆಯ ಸಾಮ್ರಾಜ್ಯ ಕಲ್ಪನೆ ಮತ್ತು ಅದರ ಪ್ರತಿನಿಧಿಯಾದ ಈನಿಯಾಸ್‌ನನ್ನು, ಅವುಗಳಿಗೂ ಮೀರಿದ ಮಾನವ ಜನಾಂಗದ ಆಶೋತ್ತರ ಮತ್ತು ಕನಸುಗಳ ಜೀವ ತುಂಬಿದ ರಕ್ತಮಾಂಸದ ಸಾಕಾರ ರೂಪವಾಗಿ ಪರಿವರ್ತಿಸಿದ್ದು ಕಾವ್ಯಲೋಕದ ಮಹಾಸಾಧನೆ.

ಮುಂದೆ ಬಂದ ದಾಂತೆ, ಹಲವಾರು ಪ್ರಾಂತ್ಯಗಳಾಗಿ ಒಡೆದುಹೋಗಿದ್ದ ತನ್ನ ಕಾಲದ ಇಟಲಿಯನ್ನೇ ನರಕ, ಮಾರ್ಜಕಲೋಕ ಮತ್ತು ಸ್ವರ್ಗವಾಗಿ ಕಾಣುವುದರ ಮೂಲಕ ಅದನ್ನು ಇಡೀ ಮಾನವ ಜನಾಂಗದ ಬೆಡಗಿನ ರೂಪಕವನ್ನಾಗಿ ಮಾರ್ಪಡಿಸಿ ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳನ್ನು ಸಮೀಕರಿಸಿಕೊಳ್ಳುವ ರೀತಿ ದಂಗುಬಡಿಸುವಂಥದ್ದಾಗಿದೆ. ಹೇಳಲು ಒಂದು ಪ್ರಮುಖ ಕತೆ ಎಂಬುದಿಲ್ಲ. ಆ ಕತೆಯಿಂದ ಬರುವ ಚೌಕಟ್ಟು ಮತ್ತು ಹಂದರವಿಲ್ಲದ ಎಪಿಕ್‌ ವ್ಯಾಪ್ತಿಯ ಕಾವ್ಯ ನಿರ್ವಹಣೆ ಕಷ್ಟಸಾಧ್ಯ. ವರ್ಜಿಲನನ್ನು ಕೃತಿಯ ಕೇಂದ್ರ ಧಾರಣ ಶಕ್ತಿಯಾಗಿ ತರುವುದುರ ಮೂಲಕ ಹಲವಾರು ಕತೆಗಳು, ಉಪಕತೆಗಳು ಮತ್ತು ಅಖ್ಯಾನಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸಿ, ಬಿಯಾತ್ರಿಸ್‌ ರೂಪದಲ್ಲಿ ಸ್ವರ್ಗದ ತುದಿ ತಲುಪುವ ದಾಂತೆಗೆ ಆ ರೀತಿ ಏರುವ ಮನಃಸ್ಥಿತಿ ಊರ್ಜಿತವಾಗಲು ಬೇಕಾದ ಸ್ವರ್ಗ – ನರಕಗಳ ಕಲ್ಪನೆಯ ಪ್ರಬಲ ಆಸರೆಯಾದರೂ ಇತ್ತು.

ಆದರೆ ಮಿಲ್ಟನ್ ಕಾಲಕ್ಕಾಗಲೇ ಸ್ವಗ – ನರಕ ಇತ್ಯಾದಿ ಕಲ್ಪನೆಗಳ ಬಗ್ಗೆ ಗುಮಾನಿ ಬೆಳೆಸಿಕೊಂಡಿದ್ದ ಜನರು, ಆತ ಆರಿಸಿಕೊಂಡ ಎಪಿಕ್‌ ಕಾವ್ಯ ಮಾದರಿಯನ್ನು ಸಂಶಯದಿಂದ ನೋಡತೊಡಗಿದರು; ಅದು ಆತ ಆರಿಸಿಕೊಂಡ ವಸ್ತುವಿನವರೆಗೂ ವಿಸ್ತರಣೆಯಾಗುವ ಪ್ರವೃತ್ತಿಯನ್ನು ಕವಿಯಾಗಿ ಮಿಲ್ಟನ್‌ ಎದುರಿಸಬೇಕಾಗಿ ಬಂತು. ಆಡಂ ಮತ್ತು ಈವ್‌ರ ಎಡೆನ್‌ ತೋಟದ ಮುಗ್ಧಲೋಕ, ಸೈತಾನನ ಕೇಡಿನಲೋಕ ಮತ್ತು ದೇವರ ದೇವಲೋಕ ಇತ್ಯಾದಿ ಸಾಗುವ ಮಿಲ್ಟನ್‌ನ ‘ಪ್ಯಾರಡೈಸ್‌ ಲಾಸ್ಟ್‌’ನ ಮೊದಲರ್ಧ ಭಾಗದ ತುಂಬ ಸೈತಾನ ವಿಜೃಂಭಿಸುತ್ತಾನೆ. ಹಾಗಾಗಿ ಮಿಲ್ಟನ್ನ ಎಲ್ಲಾ ಪ್ರತಿಭೆ ಮತ್ತು ಸಾಮರ್ಥ್ಯ ಪ್ರತಿನಾಯಕ ಅಂದರೆ ಸೈತಾನನ ಸೃಷ್ಟಿಗಾಗಿ ಬಳಕೆಯಾಗಿದೆ ಎಂಬಿತ್ಯಾದಿ ಆರೋಪಗಳನ್ನು ಆತ ಎದುರಿಸಬೇಕಾಗಿ ಬಂದ ವಿಷಮ ಪರಿಸ್ಥಿತಿಯ ಈ ಹಿನ್ನೆಲೆಯಲ್ಲಿ ಅರ್ಥೈಸಬೇಕಾಗುತ್ತದೆ.

ಸೈತಾನನಿಗೆ ಮಿಲ್ಟನ್‌ನ ‘ವಿರೋಧಿ – ಎಪಿಕ್‌’ನಲ್ಲಿ ಅಷ್ಟೊಂದು ಪ್ರಾಮುಖ್ಯತೆ ದೊರಕಲು ಕಾರಣಗಳೇನಿರಬಹುದು?

ಹೋಮರ್‌ನಲ್ಲಿ ನಾಯಕರು ಮತ್ತು ಪ್ರತಿನಾಯಕರು ಎಂಬ ‌ವ್ಯತ್ಯಾಸಗಳು ಅಷ್ಟಾಗಿಲ್ಲ, ಇದ್ದರೂ ಅಷ್ಟೊಂದು ಪ್ರಮುಖವಲ್ಲ ; ಮತ್ತು ಅವರಲ್ಲಿ ಯಾರೂ ಕೇಡು ಮತ್ತು ಒಳಿತಿನ ಪ್ರತಿನಿಧಿಗಳಾಗಿ ತೋರಿಸಬರುವುದಿಲ್ಲ. ಟ್ರೋಜನ್ನರನ್ನು ನಿರ್ನಾಮ ಮಾಡಲು ಒದಿಸ್ಯೂಸ್‌ ಮಾಡುವ ಮರದ ಕುದುರೆಯ ತಂತ್ರ ಕೂಡ, ಅವನ ಕುತಂತ್ರಕ್ಕಿಂತ ಹೆಚ್ಚಾಗಿ ಅದನ್ನು ನಂಬಿದ ಟ್ರೊಜನ್ನರ ಸರಳ ಮುಗ್ಧತೆಯನ್ನು ಪ್ರತಿಬಿಂಬಿಸುತ್ತದೆ. – ಅದೇ ತರಹ ಗ್ರೀಕರ ಸರಳ ಮುಗ್ಧತೆಯನ್ನು ಸಹ. ಮರದ ಕುದುರೆಯನ್ನು ತಯಾರಿಸಿ ಅದರೊಳಗೆ ಗ್ರೀಕರನ್ನು ರವಾನಿಸುವುದರ ಮೂಲಕ ಟ್ರೋಜನ್ನರನ್ನು ನಿರ್ನಾಮ ಮಾಡಬಹುದು ಎಂಬ ತಂತ್ರವನ್ನು ಹಳ್ಳಿಗಾಡಿನ ಸರಳ ಮುಗ್ಧತೆ ಇದ್ದ ಜನ ಮಾತ್ರ ರೂಪಿಸಲು ಸಾಧ್ಯ. ಗ್ರೀಕರು ಮತ್ತು ಟ್ರೋಜನ್ನರ ನಡುವಿನ ಮಾನಸಿಕ ಸಿದ್ಧತೆ ಮತ್ತು ಮಟ್ಟದಲ್ಲಿ ಹೇಳಿಕೊಳ್ಳುವಂತಹ ಅಂತರ ಇರದಿದ್ದ ಕಾರಣವೇ ಆ ಸರಳ ತಂತ್ರ ಯಶಸ್ವಿಯಾಗಲು ಸಾಧ್ಯವಾಯಿತು.

ಹೋಮರನ ನಾಯಕರು ಪ್ರದರ್ಶಿಸುವ ಶೌರ್ಯ, ಪೌರುಷ, ವೀರ್ಯವಂತಿಕೆ ಮತ್ತು ಬೌದ್ಧಿಕ ಮಟ್ಟದಲ್ಲಿ ಅಂತರ ಇರಬಹುದು. ಆದರೆ ಅವರಾರೂ ಕೇಡು ಅಥವಾ ಒಳ್ಳೆಯತನದ ಪ್ರತೀಕವಾಗಿ ತೋರಿಬರುವಂತೆ ಚಿತ್ರಣಗೊಂಡಿಲ್ಲ. ಅಲ್ಲಿ ಬರುವ ಬಹುತೇಕ ಎಲ್ಲರೂ ನಾಯಕರೇ. ಅವರಲ್ಲಿ ಯಾರೊಬ್ಬರೂ ಪ್ರತಿನಾಯಕರಲ್ಲ. ಅಖಿಲ್ಯೂಸ್‌ ಕೈಯಲ್ಲಿ ಬಹಳ ಅಮಾನುಷ ರೀತಿಯಲ್ಲಿ ದುರ್ಮರಣ ಹೊಂದುವ ಹೆಕ್ತರ್‌ ಯಾವ ದೃಷ್ಟಿಯಲ್ಲಿ ಕಡಿಮೆ? ಅಷ್ಟೆಲ್ಲ ಇದ್ದೂ ಕೂಡ ಅವನು ನಿರ್ನಾಮವಾಗುವ ಗುಂಪಿನಲ್ಲಿ ಒಬ್ಬನಾಗಬೇಕಾಗುತ್ತದೆ ಎಂಬುದೇ ಅಲ್ಲಿ ಎದುರಾಗುವ ವಿಚಿತ್ರ, ಅಥವಾ ವ್ಯಂಗ್ಯ. ಈ ದೃಷ್ಟಿಯಿಂದ ನೋಡುವುದಾದಲ್ಲಿ, ಹೆಕ್ತರ್‌ ಅಲ್ಲಿನ ನಿಜವಾದ ನಾಯಕ; ನಾಯಕನಾಗುವ ಎಲ್ಲ ಲಕ್ಷಣ ಮತ್ತು ಅರ್ಹತೆಗಳಿಂದ ಕೂಡಿದ ವ್ಯಕ್ತಿ; ಆದರೆ ಆ ರೀತಿ ಹೇಳಬರುವುದಿಲ್ಲ. ಅದು ಹೊರತು, ಓದಿಸ್ಯೂಸ್‌ ಆಗಲಿ ಅಥವಾ ಓಡಿಬಂದ ಹಿಲೆನ್ನಳನ್ನು ಓಡಿಸಿಕೊಂಡು ಓಡಿ ಬಂದ ಪ್ಯಾರಿಸ್‌ ಆಗಲಿ ಪ್ರತಿನಾಯಕರಲ್ಲ. ಅಂತಹ ಹೆಕ್ತರ್‌ನನ್ನು ವಧಿಸುವ ಅಖಿಲ್ಯೂಸ್‌ ಎಲ್ಲೂ ನಾಯಕ ಅಥವಾ ಪ್ರತಿನಾಯಕನಂತೆ ಚಿತ್ರಣಗೊಂಡಿಲ್ಲ. ಅವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ನಾಯಕರು. ಅವರಲ್ಲಿ ಯಾರೊಬ್ಬರಂತೆ ಮತ್ತೊಬ್ಬರಿಲ್ಲ ಎಂಬುದು ಬಹಳ ಮುಖ್ಯ.

ವರ್ಜಿಲ್‌ ಕಾಲಕ್ಕೆ ಪರಿಸ್ಥಿತಿ ಬದಲಾಗುತ್ತದೆ. ಈನಿಯಾಸ್‌ ನಾಯಕನಾದರೆ, ಪ್ರತಿನಾಯಕನಾದ ಟರ್ನಸ್‌ನಲ್ಲಿ ಖಳನಾಯಕನಿಗೆ ಸಲ್ಲುವ ಲಕ್ಷಣಗಳ ದಟ್ಟ ಸೂಚನೆಯನ್ನು ಕಾಣಬಹುದಾಗಿದೆ. ಆದರೆ ದಾಂತೆ ಕಾಲಕ್ಕೆ ನಾಯಕರು ಇಲ್ಲ, ಪ್ರತಿನಾಯಕರೂ ಇಲ್ಲ. ಆದರೆ ಮಿಲ್ಟನ್‌ ಕಾಲಕ್ಕೆ ಪ್ರತಿನಾಯಕರದೇ ದರ್ಬಾರು;[6] ಅಂಥವರ ವೈಭವ ಮತ್ತು ಆಟಾಟೋಪವನ್ನು ಸೈತಾನನ ರೂಪದಲ್ಲಿ ಮಿಲ್ಟನ್‌ ಚಿತ್ರಿಸಲು ಪ್ರಯತ್ನಪಟ್ಟಿರಬಹುದು. ನಾಯಕರಾದವರು ಪ್ರತಿನಾಯಕರ ಅಥವಾ ಪ್ರತಿನಾಯಕರು ನಾಯಕರ ಚಹರೆಗಳನ್ನು ಮೈಗೂಡಿಸಿಕೊಳ್ಳಬೇಕಾಗಿ ಬಂದಿರುವ ಇಂದಿನ ಜಗತ್ತಿನಲ್ಲಿ ಮಿಲ್ಟನ್‌ ಕಂಡಿರಿಸಿರುವ ಆ ಸೈತಾನನಲ್ಲಿ ಆಶ್ಚರ್ಯ ತರುವಂತಾದ್ದು ಏನೂ ಇರಲಾರದು. ಪ್ರತಿನಾಯಕರೆ ನಾಯಕರಾಗಿ ಮೆರೆಯುತ್ತಿರುವ ಸಂದರ್ಭಗಳಿಗೇನೂ ಕೊರತೆ ಇಲ್ಲ. ಅಂಥವರು ಕೂಡ ಸೈತಾನನ ತರಹ ದೈವತ್ವದ ಎದುರು ಸೋಲು ಕಾಣಬೇಕಾಗುತ್ತದೆ ಎಂದು ತೋರಿಸುವುದರ ಮುಖೇನ ‘ಒಳಿತಿನ ದೇವರ’ನ್ನು ಗ್ರಹಿಸಲು ಅವನು ಪ್ರಯತ್ನಿಸಿದಂತೆ ತೋರುತ್ತದೆ. ಆದರೂ ಎಲ್ಲೆಲ್ಲೂ ತಾನೇ ತಾನಾದ ಸೈತಾನನ ಪ್ರಭಾವದಿಂದ ಕಾವ್ಯವನ್ನು ನಿಯಂತ್ರಿಸಲು ಸಾಧ್ಯವಾಗದೆ ಹೋದುದು, ಕಾಲನ ಮಹಿಮೆಯ ಕಾರಣವಾಗಿರಬಹುದೆ?

ಮನುಷ್ಯರಲ್ಲೇ ಇರುವ ಮುಗ್ಧತ್ವ, ಕೇಡು ಮತ್ತು ದೇವತ್ವವನ್ನು ತನ್ನ ಕಾವ್ಯದ ವಸ್ತುವಾಗಿ ಆರಿಸಿಕೊಂಡ ಮಿಲ್ಟನ್‌, ಅವುಗಳ ನಡುವಿನ ಘರ್ಷಣೆಯನ್ನು ಎಪಿಕ್‌ ಮಾದರಿಯ ಕಾವ್ಯದಲ್ಲಿ ಅನ್ವೇಷಿಸುವ ಪ್ರಯತ್ನ ನಡೆಸಿದ್ದಾನೆ. ಆ ತರಹದ ಚಿರಂತನ ಹುಡುಕಾಟದಲ್ಲಿ – ಅದು ಘರ್ಷಣೆಯೂ ಹೌದು – ತೊಡಗಿದ ಮನುಷ್ಯ ಜನಾಂಗದ ನಶೀಬಿನ ಪ್ರಶ್ನೆ ಅವನ ಕಾವ್ಯದ ವಸ್ತು.

ಯುದ್ಧ ಎಂಬುದು ಮಿಲ್ಟನ್‌ನಲ್ಲಿ ಆ ಕಾರಣ ಹೊಸ ಅರ್ಥ ಮತ್ತು ಆಯಾಮ ಪಡೆದುಕೊಳ್ಳುತ್ತದೆ. ಹೋಮರನ ಕಾಲದಲ್ಲಿ ನಿಜವಾದ ಪೌರುಷ ಮತ್ತು ಶೌರ್ಯ ಪ್ರದರ್ಶನಕ್ಕಾಗಿ ನಿಜವಾದ ಯುದ್ಧ ನಡೆದರೆ, ತಾತ್ವಿಕ ಕಾರಣಗಳಿಗಾಗಿ ಉಂಟಾದ ವಿವಾದ ಬಗೆಹರಿಸಿಕೊಳ್ಳಲು ನಡೆವ ದ್ವಂದ್ವ ಯುದ್ಧ ಕಾಲದ ಸಮಾಜದ ಚಿತ್ರಣ ವರ್ಜಿಲನಲ್ಲಿ ದೊರಕುತ್ತದೆ. ಅರಾಜಕತೆಯಿಂದ ತುಂಬಿದ ಎಲ್ಲ ತರಹದ ಗೊಂದಲ ಮತ್ತು ಸಣ್ಣತನದಿಂದ ಬಿಡಿಸಿಕೊಂಡು ಸಾಮರಸ್ಯ ಮತ್ತು ಸಾರ್ಥಕತೆಗಾಗಿ ಅನ್ವೇಷಣೆ ನಡೆಸಬೇಕಾದ ದಾಂತೆಯ ಕಾಲಕ್ಕೆ ಇಡೀ ಬದುಕು ರಣರಂಗವಾಗಿ ಮಾರ್ಪಟ್ಟ ದಟ್ಟ ಸೂಚನೆಯನ್ನು ಕಾಣಬಹುದು. ಆ ಕಾರಣವೇ ಅವನು ಅರಸುವ ಸ್ವರ್ಗಕ್ಕೆ ಎಲ್ಲಿಲ್ಲದ ಮಹತ್ವ ಸಿಕ್ಕಿದ್ದು, ಮಿಲ್ಟನ್ ಕಾಲಕ್ಕೆ ಆ ಯುದ್ಧ ಮನುಷ್ಯರ ವ್ಯಕ್ತಿತ್ವದ ಒಳಗಿನ ಒಳಿತು ಮತ್ತು ಕೆಡುಕಿನ ಸುತ್ತ ಕೇಂದ್ರೀಕೃತಗೊಳ್ಳುತ್ತದೆ. ಯುದ್ಧ ಅಂದರೆ ಬೇರೇನೂ ಅಲ್ಲ: ಕೇಡು ಮತ್ತು ಒಳಿತಿನ ನಡುವಿನ ಸಂಘರ್ಷ. ಆದರೆ ಒಳಿತಿನ ಪ್ರತೀಕವಾದ ದೇವರ ಗ್ರಹಿಕೆ ಕಷ್ಟಸಾಧ್ಯವಾದರೆ, ಮುಗ್ಧತೆಯ ಸಂಕೇತವಾದ ಆಡಂ ಮತ್ತು ಈವ್‌ ಪ್ರಲೋಭನೆಗಳಿಂದ ಮುಕ್ತವಾಗಿಲ್ಲದಿರುವುದು ಕೇಡಿಗೆ ಎಲ್ಲೆ ಮೀರಿದ ಅವಕಾಶ ಒದಗಿಸುತ್ತದೆ. ಹೋಮರನ ಕಾಲದಲ್ಲಿ ಯುದ್ಧ, ನಿಜವಾದ ಯುದ್ಧ ಭೂಮಿಯಲ್ಲಿ ನಿರ್ಧರಿತಗೊಂಡರೆ, ವರ್ಜಿಲನ ಕಾಲದ ಯುದ್ಧಭೂಮಿಯ ಫಲಿತಾಂಶ ನಿರ್ಣಯದಲ್ಲಿ ವ್ಯಕ್ತಿಗಳ ವ್ಯಕ್ತಿತ್ವ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅದೇ ದಾಂತೆ ಕಾಲಕ್ಕೆ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಂತೆ ಇಡೀ ಬದುಕು ರಣರಂಗವಾಗಿ ಮಾರ್ಪಡುತ್ತದೆ.

ಮನುಷ್ಯರ ಮನಸ್ಸು ರಣರಂಗವಾಗಿ ಮಾರ್ಪಟ್ಟ ಕವಿ ಮಿಲ್ಟನ್‌. ತಾನು ಹಾಕಿಕೊಂಡಂತೆ ತನ್ನ ಭಾಷೆಗೊಂದು ಲಿಖಿತ – ಎಪಿಕ್‌ ನೀಡುವುದರಲ್ಲಿ ಮಿಲ್ಟನ್‌ ಯಶಸ್ವಿಯಾದನೆ ಇಲ್ಲವೆ ಎಂಬುದನ್ನು ನಿರ್ಧರಿಸುವ ಅವಕಾಶ ಬರುವ ತಲೆಮಾರಿನ ಜನರ ಕಾವ್ಯಪ್ರೇಮ ಮತ್ತು ಅಭಿರುಚಿಯನ್ನು ಅವಲಂಬಿಸಿದೆ; ಆದರೆ ರಾವಣರು ರಾಮವೇಷಧಾರಿಗಳಾಗಿ ಮಾರ್ಪಡುತ್ತಿರುವಂತೆಯೇ, ಸೈತಾನರ ವಂಶಸ್ಥರು ನಾಯಕರಾಗಿಯೂ ವಿಜೃಂಭಿಸುವ ಸಾಧ್ಯತೆಗಳನ್ನು ಮುಂಗಂಡು ಆ ಪಲ್ಲಟಗಳನ್ನು ಕಾವ್ಯವಾಗಿಸುವ ಕಲೆಯಲ್ಲಿ ಅದ್ಭುತ ಯಶಸ್ಸು ಗಳಿಸಿದ ಕವಿ; ಆ ತರಹದ ರೂಪಾಂತರದ ಪರಿಣಾಮ ನಿಜವಾದ ನಾಯಕರ ಮೇಲೂ ಆಗುವ ರೀತಿ ಕುರಿತು ಕೂಡ ‘ಪ್ಯಾರಡೈಸ್‌ ಲಾಸ್ಟ್‌’ ಬರೆಯುವ ಕಾಲದಲ್ಲಿ ಆತನ ಪ್ರತಿಭೆ ಧ್ಯಾನಸ್ಥವಾಗಿರುವಂತೆ ತೋರುತ್ತದೆ.

ಆದರೆ ತನ್ನ ಹಿಂದಿನವರಂತೆಯೇ ಕಾಲಕ್ಕೆ ಬದ್ಧವಾಗಿ ಬರೆಯುತ್ತಲೇ ಎಲ್ಲ ಕಾಲಕ್ಕೂ ಸಲ್ಲುವ ಎಪಿಕ್‌ ಮಾದರಿ ಕಾವ್ಯ ಸೃಷ್ಟಿ ಮಾಡುವ ಮಹಾತ್ವಾಕಾಂಕ್ಷೆಯಿಂದ ಹೊರಟು ಆ ಕಾಲವನ್ನು ಎದುರು ಹಾಕಿಕೊಳ್ಳಬೇಕಾಗಿ ಬಂದುದು ಮಾತ್ರ ದೊಡ್ಡ ವ್ಯಂಗ್ಯವೇ ಸರಿ. ಕಾಲವೂ ತಿರಸ್ಕರಿಸಲಾಗದ ಮುನ್ನೋಟ ಕಾಣುವ ಮಹತ್ವಾಕಾಂಕ್ಷೆಯಿಂದ ಎಪಿಕ್‌ ಪರಂಪರೆಗೆ ಆತ ನೀಡಿದ ಪ್ರತಿ – ತಿರುವನ್ನು ಕಾಲ, ತನ್ನ ವಿರುದ್ಧ ಹೂಡಿದ ಬಂಡಾಯ ಎಂದೇ ಪರಿಗಣಿಸಿತೇ?

ಸರಸ್ವತಿಯಾದ ಎಪಿಕ್‌ ಪರಂಪರೆಯ ಮಡಿಲಲ್ಲಿ ಮಿನುಗುವ ಬಂಡುಕೋರ ಕವಿ ಮಿಲ್ಟನ್‌ನನ್ನು ತನ್ನ ತುರುಬಿನಲ್ಲಿ ಮುಡಿದುಕೊಳ್ಳುವ ಆಸೆ ಆಕೆಗೆ ಬರಲಿಲ್ಲವೆ!

 —-   
ಒಂದು ಮಾತು : ಯುರೋಪಿನ ಪ್ರಮುಖ ಕವಿಗಳು ಮತ್ತು ಲೇಖಕರು ಪದೇ ಪದೇ ತಮ್ಮದೇ ಆದ ರೀತಿಯಲ್ಲಿ ಅನ್ವೇಷಿಸುವ ಮನುಷ್ಯರ ನಶೀಬಿನ ಪ್ರಶ್ನೆಯನ್ನು ಮಿಲ್ಟನ್‌ ಕೂಡ ಪ್ರಧಾನವಾಗಿ ಅನ್ವೇಷಿಸುತ್ತಾನಾದರೂ ಒಂದು ವಿಚಾರದಲ್ಲಿ ಆತ ‘ದುರದೃಷ್ಟಶಾಲಿ’ – ಮುಂದಿನ ಸೂಕ್ತ ಕವಿಯನ್ನು ಪಡೆಯುವುದರಲ್ಲಿ. ಹೋಮರ್‌ಗೆ ವರ್ಜಿಲ್‌, ಆ ವರ್ಜಿಲ್‌ಗೆ ದಾಂತೆ: ಆದರೆ ಮಿಲ್ಟನ್‌ನ ಮುಂದಿನ ಉತ್ತರಾಧಿಕಾರಿಯಾಗುವ ಅವಕಾಶ ಪಡೆದಿದ್ದ ಕೀಟ್ಸ್‌, ಎಲಿಯಟ್‌ ಮೊದಲಾದವರು ಆತನನ್ನು ಟೀಕಿಸಿದಷ್ಟು ಮತ್ತೆ ಯಾರನ್ನೂ ನಿಂದಿಸಿದ ಉದಾಹರಣೆ ಇಲ್ಲ.

 

[1]Of all our writers, he pays the most sincere respect to classical literature (how could he ever have written without Homer and Virgil?), and at the same time he makes it tauntingly new; the epic becomes the anti – epic – Christopher Ricks `Paradise lost’ಗೆ ಬರೆದ ಮುನ್ನುಡಿಯಲ್ಲಿ, Signett Classic, ೧೯೬೮, ಪುಟ XVIII.

[2]Before him the best literary epic had been predomintly secular; he made it theological, and the change of appoarch meant a great change of temper and of atmosphere. There old themes are introduced in all their traditional dignity. But in Milton’s hands they take on a different significance and contribute to a different end. – From Virgil to Milton. ಪು ೧೯೬.

[3]S. Radhakrishan, The Hindu View of Life, Macmillan, New York, ೧೯೬೨, ಪುಟ ೫೮.

[4]The fact is simply that the Civil War of the seventeenth century, in which Milton is a symbolic figure, has never been concluded. The Civil War is not ended: I question whether any serious civil war ever does end. Throughout that period English Society was so convulsed and divided that the effects are still felt. Reading Johnson’s essay one is always aware that Johnson was obstinately and passionately of another party. No other English poet, not wordsworth, or Shelly, lived through or took sides in such momentous events as did Milton; of no other poet is it so difficult to consider the poetry simply as poetry, without our theological and political disposions, conscious and unconscious, inherited or acquired, making an unlawful entry. And the danger is all the greater because these emotions now take different vestures. It is now considered grotesque. On political grounds, to be of the party of King Charles; it is now. I believe. Considered equally grotesque, on moral grounds, to be of the party of the Puritans; and to most persons to – day the religious views of both parties may seem equally grotesque, on moral grounds, to be of the party of the Puritans; and to most persons to –day the religious views of both paries may seem equally remote. Nevertheless, the passions are unquenched, and if we are not very wide awake their smoke will obscure the glass through which we examine Milton’s poetry. Something has been done, certainly, to persude us that Milton was never really of any party, but disagreed with everyone – On Poetry and Poets. Milton II, ಪುಟ ೧೪೮ – ೧೪೯

[5]Poetry is not a turning loose of emotion, but an escape from emotion; it is not the expression of personality, but an escape from personality. But of course, only those who have personality and emotions know what it means to want to escape from these things. Tradition and the individual talent ಲೇಖನದಿಂದ.

[6]High on a Throne Royal State, which far
Outshone the wealth of Ormus and of Ind,
Or where the gorgeous East with richest hand
Show’rs on her Kings Barbaric Pearl and Gold,
Satan exalted sat , ಸರ್ಗ ೨, ೧ – ೫ನೇ ಸಾಲು

……………………………on th’ other side
Incens’t with indignation Satan stood
Unteirifi’d, and like a Comet burn’d.
That fires the lenth of Ophiuchus huge
In th’ Arctic Sky, and from his horried hair
Shakes Pestilence and War. ೨೦೬ – ೨೦೧೧ನೇಸಾಲು

Signet Classic, New York, ೧೯೯೮ ರ ಆವೃತ್ತಿಯಿಂದ ‘ಪ್ಯಾರಡೈಸ್ ಲಾಸ್ಟ್‌’ ಭಾಗಗಳನ್ನು ಉಲ್ಲೇಖಿಸಲಾಗಿದೆ.