ಅನ್ವೇಷಣೆಯ ಹಾದಿಯಲ್ಲಿ ಇನ್ನೂ ದೂರ ಕ್ರಮಿಸುವ ಮೊದಲು, ಸಂಸ್ಕೃತಿ ಮತ್ತು ನಾಗರಿಕತೆ ಪ್ರವಹಿಸುವ ರೀತಿಯ ಕಡೆಗೆ ಹರಿಸಬೇಕಾದ ಗಮನಹರಿಸುವುದು ಒಳ್ಳೆಯದು: ಪುರಾತನ ಇರಾಕ್‌ – ಇರಾನ್‌, ಈಜಿಪ್ಟ್‌, ಗ್ರೀಕ್‌, ತುರ್ಕಿ ಅಷ್ಟೇ ಏಕೆ ರೋಮನ್‌ ಸಂಸ್ಕೃತಿ ಮತ್ತು ನಾಗರಿಕತೆಗಳು ಕಣ್ಮರೆಯಾಗಿ ಹೋಗಿರಬೇಕಾದರೆ, ‘ಅಂದಿನಿಂದ ಇಂದಿನವರೆಗೂ ಸಾತತ್ಯತೆ ಉಳಿಸಿಕೊಂಡು ಬರಲು ಭಾರತಕ್ಕೆ ಮಾತ್ರ ಸಾಧ್ಯವಾಗಿದೆ’ ಎಂಬ ಮಾತಿಗೆ ಮರುಳಾಗಿ ತಲೆದೂಗದಿರಲು ಶ್ರಮಪಡಬೇಕಾಗುತ್ತದೆ. ಅಂತಹ ಮಾತುಗಳು ಅದರಲ್ಲೂ ಪಾಶ್ಚಿಮಾತ್ಯ ಪಂಡಿತರ ಬಾಯಲ್ಲಿ ಪುನರುಕ್ತಿಗೊಂಡರಂತೂ – ಮುಗಿಯಿತು; ಮರುಪರೀಕ್ಷೆಗೊಳಪಡಿಸುವ ಅಗತ್ಯವೆ ಎದುರಾಗದೆ ಹೋಗಬಹುದು.

ಆದರೆ ನಿಜವಾದ ವಸ್ತುಸ್ಥಿತಿ ಬೇರೆಯೇ ಆಗಿದೆ.

ಯುರೋಪಿನ ಸಂಸ್ಕೃತಿ ಮತ್ತು ನಾಗರಿಕತೆಯ ಎದ್ದು ಕಾಣುವ ಅಂಶವೆಂದರೆ ಅಲ್ಲಿನ ಕ್ರಮಾಗತ ಬೆಳವಣಿಗೆ; ಸಾತತ್ಯೆತೆ ಇಲ್ಲದ ಕ್ರಮಾಗತ ಬೆಳವಣಿಗೆ ಸಾಧ್ಯವೇ? ಲ್ಯಾಟಿನ್‌ ಇಲ್ಲದ ಇಂದಿನ ಯುರೋಪಿನ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲವಾದಂತೆ, ಗ್ರೀಕ್‌ ಹಿನ್ನೆಲೆಯಿಲ್ಲದ ಲ್ಯಾಟಿನ್‌ ಸಂಸ್ಕೃತಿ ಮತ್ತು ನಾಗರಿಕತೆ ಸಾಧ್ಯವಿಲ್ಲ. ಹೋಮರ್‌ ಇಲ್ಲದ ವರ್ಜಿಲ್‌, ವರ್ಜಿಲ್‌ ಇಲ್ಲದೆ ದಾಂತೆ ಬರುವುದು ಸಾಧ್ಯವಿಲ್ಲದಾದಂತೆ, ಆ ದಾಂತೆ ಇಲ್ಲದ ಇಂದಿನ ಯುರೋಪಿನ ಸಾಹಿತ್ಯ ಪರಂಪರೆಯ ಕಲ್ಪನೆಯೆ ಅಸಾಧ್ಯ. ಅದೇ ರೀತಿ ಪೆರಿಕ್ಲಿಸ್‌ ಇಲ್ಲದ ಅಗಸ್ಟಸ್‌ ಸೀಸರ್‌, ಥಾಮಸ್‌ ಜಫರಸ್‌ಸನ್‌ ಅಥವಾ ಹೆಲ್ಮುಟ್‌ ಕ್ಹೋಲ್‌ ಆಗಲಿ ಬರುವುದು ಕಷ್ಟಸಾಧ್ಯ; ಅಲೆಕ್ಸಾಂಡರ್‌, ನೆಪೋಲಿಯನ್‌ ಮತ್ತು ಲೆನಿನ್‌ ಆ ಕ್ರಮಾಗತ ಬೆಳವಣಿಗೆಯ ಒಂದು ಭಾಗ. ಪೈಥಾಗೋರಸ್‌, ಆರ್ಕಿಮಿಡೀಸ್‌, ಗೆಲಿಲಿಯೊ, ನ್ಯೂಟನ್‌, ಐನ್‌ಸ್ಟೈನ್‌ ಮತ್ತು ಸ್ಟೀಫನ್‌ ಹಾಕಿನ್‌ ಆ ಬೆಳವಣಿಗೆಯ ಹಾದಿಯಲ್ಲಿ ಕಾಣಿಸಿಕೊಂಡ ವಿವಿಧ ಘಟ್ಟ ಅಥವಾ ಅಧ್ಯಾಯಗಳು: ವಿಕಾಸವಾದ ಮಂಡಿಸಲು ಚಾರ್ಲ್ಸ್‌ ಡಾರ್ವಿನ್‌ಗೆ ಮಾತ್ರ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರ – ಆತ ಬಂದ ಹಿನ್ನೆಲೆ ಮತ್ತು ಪರಂಪರೆಯ ಮಡಿಕೆಗಳಲ್ಲಿದೆ. ಅನಂತರದ ದಿನಗಳಲ್ಲೂ ಕೂಡ, ವಿಕಾಸವಾದಿ – ಮನೋವಿಜ್ಞಾನ ಎಂಬ ಪರಿಕಲ್ಪನೆ ಮತ್ತು ಚಿಂತನ ಕ್ರಮ ನೀಡಿದವರು ಸಹ ಅವರೇ ಆಗಿರುವುದು, ಆ ಹಿನ್ನೆಲೆಗೆ ಅನುಗುಣವಾದುದು.

ಹಾಗಿದ್ದ ಮೇಲೆ, ಗ್ರೀಕ್‌ ಲ್ಯಾಟಿನ್‌ ಸಂಸ್ಕೃತಿಯನ್ನು ಮೃತ ಎಂದು ಪರಿಗಣಿಸಲು ಬರುತ್ತದೆಯೇ? ಸಾತತ್ಯತೆ ಮತ್ತು ಜೀವಂತಿಕೆ ಬೇರೆ ಬೇರೆ? ಸಾತತ್ಯತೆ ಕಂಡುಕೊಳ್ಳಲು ಸಾಧ್ಯವಿಲ್ಲದ ಸಂಸ್ಕೃತಿ ಮತ್ತು ನಾಗರಿಕತೆ ಜೀವಮತವಾಗುಳಿಯಲು ಸಾಧ್ಯವೆ? ಸಾತತ್ಯತೆ ಉಳಿಸಿಕೊಂಡುದು ಎಲ್ಲೋ ಒಂದು ಕಡೆ ಜೀವಂತಿಕೆ ಉಳಿಸಿಕೊಂಡಿರಬೇಕಾಗುತ್ತದೆ ಅಲ್ಲವೆ?

ತನ್ನದೇ ಆದ ವಿಶಿಷ್ಟ ರೂಪದಲ್ಲಿ ಇಂದಿಗೂ ಸಾತತ್ಯತೆ ಉಳಿಸಿಕೊಂಡು ಬಂದಿರಲು ಯಾವುದಾದರೊಂದು ಭಾಷೆ, ಸಂಸ್ಕೃತಿ ಮತ್ತು ನಾಗರಿಕತೆಗೆ ಸಾಧ್ಯವಾಗಿರುವುದಾದಲ್ಲಿ, ಗ್ರೀಕ್‌ ಲ್ಯಾಟಿನ್‌ ಮನಸ್ಸಿಗೆ ಪ್ರಥಮ ಸ್ಥಾನ ಸಲ್ಲಬೇಕು: ಇಂದಿನ ಯುರೋಪ್ ಮೂಲದ ವೈವಿದ್ಯಮಯ ನಾಗರಿಕತೆ,ಸಾಂಸ್ಕೃತಿಕ ಅಭಿವ್ಯಕ್ತಿ ಹಾಗೂ ಅನ್ವೇಷಣಾ ಪ್ರವೃತ್ತಿಯ ಹಿಂದಿನ ದೊಡ್ಡ ಚಲನಶೀಲ ಶಕ್ತಿಯೆ ಆ ಮನಸ್ಸು; ಯಾವ ಆಸಕ್ತಿ, ಕುತೂಹಲ ಪ್ರವೃತ್ತಿ ಮತ್ತು ಪ್ರೇರಣೆಗಳು ಗ್ರಿಕ್‌ – ಲ್ಯಾಟಿನ್‌ ಮನಸ್ಸುಗಳನ್ನು ಕ್ರಿಯಾಶೀಲಗೊಳಿಸಿದವೋ, ಅದೇ ಶಕ್ತಿ ಮತ್ತು ಆಸಕ್ತಿಗಳು ಇನ್ನೂ ಹೆಚ್ಚಿನ ವೈವಿಧ್ಯಮಯ ರೂಪದಲ್ಲಿ ಯುರೋಪ್‌ ಮೂಲದ ಪಶ್ಚಿಮ ಜಗತ್ತಿನ ಮನಸ್ಸನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಅಧಿಕಾರಸೂತ್ರ ಹಿಡಿದವರನ್ನು ಓಲೈಸಿ ಅವರನ್ನು ಪ್ರತ್ಯಕ್ಷ ದೇವರಂತೆ ಕಾಣಲು ಹಿಂಜರಿಯದ ಮತ್ತು ಭೋಗಲೋಲುಪತೆಯಲ್ಲಿ ಅದ್ದಿ ಮುಳುಗುವ ಪ್ರವೃತ್ತಿ ಇತ್ಯಾದಿಗಳು ಅತ್ಯಂತ ವ್ಯವಸ್ಥಿತ ರೂಪದಲ್ಲಿ ಪ್ರಾಯಶಃ ಮೊದಲು ಸ್ಫೋಟಗೊಂಡುದು ಪುರಾತನ ಈಜಿಪ್ಟ್‌ನಲ್ಲಿ.[1] ಆ ಗುಣದಿಂದ ಮುಕ್ತವಾದ ಸಂಸ್ಕೃತಿ, ನಾಗರಿಕತೆ ಮತ್ತು ಸಮಾಜವನ್ನು ಇಂದಿನ ಏಷ್ಯ ಮತ್ತು ಆಫ್ರಿಕಾ ಭಾಗದಲ್ಲಿ ಕಾಣಲು ಸಾಧ್ಯವಿದೆಯೇ? ಆ ಕೆಲವಾರು ದೌರ್ಬಲ್ಯಗಳಿಗೆ ಕ್ರಮವಾಗಿಯಾದರೂ ವಶವಾದ ಕಾರಣ ಗ್ರೀಕ್‌ ರೋಮನ್‌ ಇತ್ಯಾದಿ ನಾಗರಿಕತೆಗಳು ಅವನತಿಯ ಹಾದಿಯಲ್ಲಿ ಸಾಗಬೇಕಾಯಿತು ಎಂಬುದಾಗಿ ಇತಿಹಾಸಕಾರರು ನಮೂದಿಸುತ್ತಾರೆ. ಅದು ಬೇರೆ ವಿಚಾರ.

ಈಜಿಪ್ಟನ ಪಿರಮಿಡ್‌ಗಳ ನಿರ್ಮಾಣಕ್ಕೆ ಪೂರಕವಾದ ಅಂದಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ ಇಂದು ಬದಲಾಗಿ ಹೋಗಿರಬಹುದಾದಂತೆ ಆ ಜನರಾಡುತ್ತಿದ್ದ ಭಾಷೆ, ಇಂದು ಸಂಸ್ಕೃತ ಮತ್ತು ಗ್ರೀಕ್‌ ತರಹ ಗ್ರಂಥಸ್ಥ ರೂಪದಲ್ಲಿಯಾದರೂ ಉಳಿಯಲು ಸಾಧ್ಯವಾಗಿಲ್ಲದಿರಬಹುದು. ಆದರೆ ಆ ಸಂಸ್ಕೃತಿ ಮತ್ತು ನಾಗರಿಕತೆಯ ಅವನತಿ ಹಾಗೂ ಉಗಮದ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನೈಲ್‌ ನದಿ ಹರಿಯುವುದನ್ನು ಇಂದಿಗೂ ನಿಲ್ಲಿಸಿಲ್ಲ ಎಂಬ ಸರಳ ಸಂಗತಿಯನ್ನು ಯಾವುದೇ ಕಾರಣ ಮರೆಯಬಾರದು; ಆ ನದಿಯ ಪಾತ್ರ ಮತ್ತು ಹರಿವ ನೀರಿನ ಪ್ರಮಾಣ, ಕಾಲಾಂತರದಲ್ಲಿ ಹಲವಾರು ಏರಿಳಿತ ಮತ್ತು ಬದಲಾವಣೆಗಳನ್ನು ಕಂಡಿರಬಹುದು.

ಈಜಿಪ್ತ್ ಸಂಸ್ಕೃತಿ ಮತ್ತು ನಾಗರಿಕತೆಯ ನಿರ್ಮಾಣದ ಹಿಂದೆ ಕೆಲಸ ಮಾಡಿದ ಮನಸ್ಸು ಸತ್ತಿಲ್ಲ ಎಂಬುದಾದಲ್ಲಿ, ಹೋಮರ್‌, ಪೈಥಾಗೋರಸ್‌ ಮೊದಲಾದವರನ್ನು ನೀಡಿದ ಗ್ರೀಕ್‌ ಭಾಷೆ ಮತ್ತು ಸಂಸ್ಕೃತಿ ಮೃತ ಎಂದು ಭಾವಿಸಲು ಬರುತ್ತದೆಯೇ? ಹೋಮರನ ಕಾಲದ ಪೌರುಷ ಪ್ರಧಾನ ವ್ಯವಸ್ಥೆ ಬದಲಾಗಿ ಹೋಗಿರಬಹುದು; ಆದರೆ ಈ ಹಿಂದೆ ಕಾರ್ಯಪ್ರವೃತ್ತವಾಗಿರುತ್ತಿದ್ದ ಮೂಲಪ್ರವೃತ್ತಿಗಳು ಇಂದಿಗೂ ಬೇರೆ ರೂಪದಲ್ಲಿ ಕೆಲಸ ಮಾಡುತ್ತಿವೆ. ಮಾರ್ಪಾಡಾದ ಯುಗದ ಪ್ರತಿನಿಧಿಯಾದ ಟರ್ನಸ್‌ಗೆ ಕಾಲ ವಿರುದ್ಧವಾಗಿದೆ ಎಂದು ನಿರ್ಧರಿಸಿ ವರ್ಜಿಲನ ನಾಯಕ, ಆತನ ಬದುಕುವ ಹಕ್ಕನ್ನು ನಿರ್ನಾಂ ಮಾಡಿರಬಹುದು; ಆದರೆ ಟರ್ನಸ್‌ ಪ್ರತಿನಿಧಿಸುವ ಮೂಲಪ್ರವೃತ್ತಿಗಳು ಮಾತ್ರ ಸತ್ತಿಲ್ಲ, ಸಾಯುವುದು ಸಾಧ್ಯವೂ ಇಲಲ; ಅವು ಬೇರೆ ಬೇರೆ ರೂಪ ಧರಿಸಿ ಕಾರ್ಯಪ್ರವೃತ್ತವಾಗಿರುವುದನ್ನು ಕಾಣಲು ವಿಶೇಷ ಕಣ್ಣುಗಳೇನೂ ಬೇಕಾಗಿಲ್ಲ.

ಯುರೋಪ್‌ ಮತ್ತೆ ಎಚ್ಚೆತ್ತುಕೊಂಡುದು ೧೩ನೆಯ ಶತಮಾನದಿಂದೀಚೆಗೆ ಆ ಹೊಸ ಅಧ್ಯಾಯವು ದಾಂತೆಯ ಆಗಮನದೊಂದಿಗೆ ಹೊಂದಿಕೊಳ್ಳುತ್ತದೆ. ಸತ್ಯದ ಅನ್ವೇಷಣೆಯ ಹಾದಿಯಲ್ಲಿ ಪೇಗನ್‌ ಮನೋಭಾವದ ಅತ್ಯಂತ ಎತ್ತರದ ಪ್ರತಿನಿಧಿಯಾದ ವರ್ಜಿಲನನ್ನು ಮಾರ್ಗದರ್ಶಿಯಾಗಿ ಸ್ವೀಕರಿಸುವುದರ ಮೂಲಕ, ಕ್ರಿಶ್ಚಿಯನ್‌ ಚೌಕಟ್ಟಿನಲ್ಲಿ ಆ ಹಿಂದಿನ ಪರಂಪರೆಯನ್ನು ಅರ್ಥೈಸಿಕೊಳ್ಳಬೇಕಾದ ಅಗತ್ಯವನ್ನು ಅರಿತು ತನ್ನ ಕಾವ್ಯದ ಮೂಲಕ ಯುರೋಪಿನ ಜನರಿಗೆ ತೋರಿಸಿಕೊಟ್ಟವನೆ ದಾಂತೆ: ಕ್ರಿಶ್ಚಿಯನ್‌ ರಿಲಿಜನ್‌ ಸ್ವೀಕರಿಸಿದ ಕಾರಣಕ್ಕೆ ಅದರ ಹಿಂದಿನ ನಾಗರಿಕತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ತಿರಸ್ಕರಿಸಲು ಬರುವುದಿಲ್ಲ ಎಂಬ ಸತ್ಯದ ಕಡೆಗೆ ಯುರೋಪಿಯನ್ನರು ತಮ್ಮ ಒಳಗಣ್ಣು ತೆರೆಯುವಂತೆ ಮಾಡಿದವನು. ಕ್ರಿಶ್ಚಿಯನ್‌ ರಿಲಿಜನ್‌ ಕೂಡ ಪ್ರತ್ಯೇಕವಾದುದಲ್ಲ. ವಿಕಸನದ ಹಾದಿಯಲ್ಲಿ ಯುರೋಪ್‌ ಕಂಡುಕೊಂಡ ಹೊಸ ಅಧ್ಯಾಯ. ಅದು ತನಗೂ ಹಿಂದಿನ ಪೇಗನ್‌ ಸಂಸ್ಕೃತಿಯಿಂದ ಸಂಪೂರ್ಣ ಪರಿತ್ಯಕ್ತವಾದುದಾಗಿರಲು ಸಾಧ್ಯವಿಲ್ಲ ಎಂದು ಕಾವ್ಯದ ಮುಖೇನ ಮೊದಲು ಪ್ರತಿಪಾದಿಸಿದವನೆ ಅವನು. ಕುತೂಹಲ, ಆಸಕ್ತಿ, ವೈಜ್ಞಾನಿಕ ಅನ್ವೇಷಣೆ ಮತ್ತು ಸಾಧನೆಯ ಸಮರ್ಪಣಾ ಮನೋಭಾವ ಮೊದಲಾದ ಅನೇಕ ಸೃಜನಶೀಲ ಚಟುವಟಿಕೆಗಳು ಯುರೋಪಿನ್ಲಲಿ ಮತ್ತೆ ತೆರೆದುಕೊಳ್ಳಲು ಆರಂಭವಾದುದು. ಮೂಲತಃ ಗ್ರಿಕ್ – ರೋಮನ್‌ ಆದ ಆ ಪೇಗನ್‌ ಮನೋಧರ್ಮವನ್ನು ಕ್ರಿಶ್ಚಿಯನ್‌ ರಿಲಿಜನ್‌ ಚೌಕಟ್ಟಿನಲ್ಲಿ ಮತ್ತೆ ಕಂಡುಕೊಳ್ಳಲು ಸಾಧ್ಯವಾದನಂತರವೆ. ಗೆಲಿಲಿಯೊ, ಕೋಪರ್‌ನಿಕಸ್‌, ವಾಸ್ಕೊ – ಡ – ಗಾಮ ಮೊದಲಾದವರ ಆಗಮನವೆಂದರೆ, ಕ್ರಿಶ್ಚಿಯನ್‌ ರಿಲಿಜನ್ನಿನ ಮತೀಯ ಪ್ರತಿಪಾದಕರ ಮೇಲೆ ಪೇಗನ್‌ ಮನೋಧರ್ಮ ಸಾಧಿಸಿದ ಗೆಲುವು ಎಂದೇ ಅರ್ಥ. ಯುರೋಪ್‌ ಮೂಲದ ಜನ ಇಂದು ಆಡುತ್ತಿರುವುದು ವಿವಿಧ ಭಾಷೆಗಳನ್ನಾದರೂ, ಆ ಎಲ್ಲ ಭಾಷೆಗಳು ಶಿಸ್ತುಗೊಂಡಿರುವುದು ಗ್ರೀಕ್‌ – ಲ್ಯಾಟಿನ್‌ ಪರಂಪರೆ ನೀಡಿದ ಮಾದರಿ ಅನುಸರಿಸಿ; ಅವರು ಅನುಸರಿಸುತ್ತಿರುವುದು ಕ್ರಿಶ್ಚಿಯನ್‌ ರಿಲಿಜಿನ್ನಿನ ವಿವಿಧ ಪಂಥ ಅಥವಾ ಪಂಗಡಗಳನ್ನಾದರೂ, ಆಂತರ್ಯದಲ್ಲಿ ಅವರು ಇಂದಿಗೂ ಪೇಗನ್ನರಾಗಿಯೆ ಉಳಿದಿದ್ದಾರೆ ಎಂದರೆ ಆಶ್ಚರ್ಯಪಡುವಂತಾದ್ದು ಏನೂ ಇಲ್ಲ. ಅಷ್ಟರಮಟ್ಟಿಗೆ ಗ್ರೀಕ್‌ – ರೋಮನ್‌ ಸಂಸ್ಕೃತಿ, ಮನೋಧರ್ಮ ಮತ್ತು ನಾಗರಿಕತೆ ಅವರ ಬದುಕಿನ ಹಾಸುಹೊಕ್ಕಾಗಿದೆ. ಗ್ರೀಕ್‌ – ರೋಮನ್‌ ಮನಸ್ಸು ಸಾಧಿಸಿದ ಸಾಧನೆ ಮತ್ತು ಏರಿದ ಎತ್ತರ ಇಂದಿಗೂ ಅವರು ಗುರು ಮತ್ತು ಮಾರ್ಗದರ್ಶಿ – ಅವರ ಪೇಗನ್‌ ಮನೋಧರ್ಮ ಕೂಡ.

ಕ್ರಿಸ್ತನ ಆಗಮನಕ್ಕೆ ಮೊದಲು ಬಂದ ಪೇಗನ್ನರಿಗೆ ಸ್ವರ್ಗದ ಪ್ರವೇಶವಿಲ್ಲ ಎಂಬುದೊಂದು ನಂಬಿಕೆ. ಅದರಾಚೆಗೆ ಮುಂದುವರಿಯುವ ಹಕ್ಕು ಅವರಿಗಿರುವುದಿಲ್ಲ ಎಂಬ ಬಗ್ಗೆ ತಕರಾರು ಇಲ್ಲದಿಲ್ಲ. ಆ ನಿರ್ಬಂಧ ವಿಧಿಸುವ ಕ್ರಿಶ್ಚಿಯನ್‌ ದೇವತಾಶಾಸ್ತ್ರದ ಚೌಕಟ್ಟನ್ನು ಒಪ್ಪಿಕೊಂಡು ಆ ಮಿತಿಯ ಒಳಗಡೆ ದಾಂತೆ ಕಾವ್ಯ ರಚಿಸುತ್ತಾನೆ ಎಂಬುದನ್ನು ಮರೆಯಬಾರದು ಅದನ್ನು ಒಪ್ಪಿಕೊಂಡೂ ಪೇಗನ್‌ ಧರ್ಮವನ್ನು ಕ್ರಿಶ್ಚಿಯನ್‌ ರಿಲಿಜನ್ನಿನ ಚೌಕಟ್ಟಿನಲ್ಲಿ ಅರ್ಥೈಸಿಕೊಳ್ಳಬೇಕಾದ ಮತ್ತು ಆ ಮೂಲಕ ಕ್ರಿಸ್ತಪೂರ್ವದ ಯುರೋಪಿನ ಸಂಸ್ಕೃತಿ, ನಾಗರಿಕತೆ ಮತ್ತು ಪರಂಪರೆ ಕುರಿತಂತೆ ಒಂದು ನಿಲುವಿಗೆ ಬರಬೇಕಾದ ಅಗತ್ಯದ ಕಡೆಗೆ ತನಗೆ ಗೊತ್ತಿದ್ದೊ ಗೊತ್ತಿಲ್ಲದೆಯೊ ಯುರೋಪಿನ ಕಣ್ಣು ತೆರೆಸುವ ಕೆಲಸ ಮಾಡಿದವ ದಾಂತೆ. ಆ ರೀತಿಯ ಅಂತರ್ಗತ ಹೊಂದಾಣಿಕೆ ಮತ್ತು ಒಡಂಬಡಿಕೆ ಕಂಡುಕೊಳ್ಳಲು ಯುರೋಪ್‌ ೧೫ ಶತಮಾನಗಳಿಗೂ ಹೆಚ್ಚು ಕಾಲ ಹೆಣಗಾಡಬೇಕಾಯಿತು. ಮಾನವ ಜನಾಂಗದ ಕೆಲ ಗುಣಗಳನ್ನು ಅದರ ಮೂಲರೂಪದಲ್ಲಿ ಪ್ರತಿನಿಧಿಸುವ ಪೇಗನ್‌ ಮನೋಧರ್ಮವನ್ನು ಕ್ರಿಶ್ಚಿಯನ್‌ ರಿಲಿಜನ್ನಿನ ಚೌಕಟ್ಟಿನಲ್ಲಿ ಮತ್ತೊಮ್ಮೆ ಅಂತರ್ಗತ ಮಾಡಿಕೊಳ್ಳಲು ಯುರೋಪಿನ ಜನ ತೆತ್ತ ಬೆಲೆ ಕಡಿಮೆ ಏನು?

ರಾಜಕೀಯವಾಗಿ ತಮ್ಮ ಕೈಯಲ್ಲಿ ಸೋತ ಗ್ರೀಕರ ಸಾಂಸ್ಕೃತಿಕ ಹಿರಿಮೆ ಮತ್ತು ಪ್ರಭಾವವನ್ನು ಒಪ್ಪಿಕೊಳ್ಳುವುದರ ಮೂಲಕ ರೋಮನ್ನರು,[2] ಕ್ರಮಾಗತ ಬೆಳವಣಿಗೆ ಎಂದರೆ ಏನು ಮತ್ತು ಅದು ಹೇಗಿರಬೇಕು ಎಂಬುದನ್ನು ಈ ಜಗತ್ತಿಗೆ ತೋರಿಸಿಕೊಟ್ಟರು. ಹೋಮರನನ್ನು ವರ್ಜಿಲ್‌ ಮಾದರಿಯಾಗಿ ಸ್ವೀಕರಿಸಿದಂತೆ, ಗ್ರೀಕ್‌ ಸಂಸ್ಕೃತಿ ಮತ್ತು ನಾಗರಿಕತೆ ತಮ್ಮ ‘ಬದುಕಿನ ಒಂದು ಭಾಗ ಎಂಬ ಸತ್ಯವನ್ನು ಕಂಡುಕೊಂಡ ರೋಮನ್ನರು, ತಾವು ಪ್ರತಿನಿಧಿಸುವ ಸಂಸ್ಕೃತಿ ಮತ್ತು ನಾಗರಿಕತೆ ಅದೇ ಗ್ರೀಕ್‌ ಸಂಸ್ಕೃತಿ ಮತ್ತು ನಾಗರಿಕತೆಯ ಮುಂದುವರಿಕೆ ಎಂಬುದನ್ನು ಬಹಳ ಹಿಂದೆಯೇ ಕಂಡುಕೊಂಡರು. ಹಿಂದಿನವರ ಸಾಧನೆ ಬಗೆಗಿನ ಗೌರವ ಮತ್ತು ತಾವು ಸಾಧಿಸಬಹುದಾದ ಕಾರ್ಯಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಇದ್ದಾಗ ಮಾತ್ರ ಆ ರೀತಿಯ ಆತ್ಮವಿಶ್ವಾಸ ಬರಲು ಸಾಧ್ಯ. ಗ್ರೀಕ್‌ ಭಾಷಾ ಮಾದರಿ ಮತ್ತು ಶಿಸ್ತು ಅನುಸರಿಸಿ ಲ್ಯಾಟಿನ್‌ ಭಾಷೆ ಬಳಸಿದ ರೋಮನ್ನರಿಗೆ ಆ ಭಾಷಾ ಸಂಸ್ಕೃತಿ ಜತೆಗೆ ಸಂಘರ್ಷಕ್ಕಿಳಿಯುವ ಅಗತ್ಯ ಎದುರಾಗಲಿಲ್ಲವಾದಂತೆ, ಗ್ರೀಕ್‌ ಭಾಷಾ ಪರಂಪರೆಯ ಮುಂದುವರಿದ ಅಧ್ಯಾಯವಾಗಿ ಲ್ಯಾಟಿನ್‌ ಸಂಸ್ಕೃತಿಯನ್ನು ನಿರ್ಮಿಸಲು ಸಾಧ್ಯವಾಯಿತು. ಗ್ರೀಕ್‌ನ ಮುಂದಿನ ಅಧ್ಯಾಯವಾಗಿ ಲ್ಯಾಟಿನ್‌ ಬೆಳೆದುಕೊಂಡಂತೆ, ಗ್ರೀಕ್‌ ಮತ್ತು ಲ್ಯಾಟಿನ್‌ನ ಮುಂದಿನ ಭಾಗವಾಗಿ ಇಟಾಲಿಯನ್‌, ಫ್ರೆಂಚ್‌, ಇಂಗ್ಲಿಷ್‌, ಜರ್ಮನ್, ರಷ್ಯನ್‌ ಮುಂತಾದ ಆಧುನಿಕ ಯುರೋಪಿನ ಭಾಷಾ ಪರಂಪರೆ ಮತ್ತು ಸಂಸ್ಕೃತಿ ನಿರ್ಮಾಣ ಅವರಿಗೆ ಒಲಿಯಿತು.

ಗ್ರೀಕ್‌ – ಲ್ಯಾಟಿನ್‌ ಪರಂಪರೆಯನ್ನು ಕ್ರಿಸ್ತನ ಆಗಮನದ ನಂತರ ಕಾಣಿಸಿಕೊಂಡ ಬೆಳವಣಿಗೆಯ ಹಿನ್ನೆಲೆಯಲ್ಲಿ ಅರ್ಥೈಸಲು ಅವರು ಬಹಳ ಹೆಣಗಾಡಿದ್ದಾರೆ. ಲ್ಯಾಟಿನ್‌ ಭಾಷೆಯ ಜನ ಗ್ರೀಕ್‌ ಸಂಸ್ಕೃತಿಯನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗ ಎಂದು ಅರ್ಥೈಸಿಕೊಂಡಷ್ಟು ಸುಲಲಿತವಾಗಿ ಆಧುನಿಕ ಯುರೋಪ್ ಭಾಷೆಗಳನ್ನಾಡುವ ಜನರು, ಆ ಗ್ರೀಕ್‌ ಲ್ಯಾಟಿನ್‌ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲಾಗಲಿಲ್ಲ. ಕ್ರಿಶ್ಚಿಯನ್‌ ರಿಲಿಜನ್ನಿನ ಆಗಮನ ಆ ತರಹದ ಬೆಳವಣಿಗೆಗೆ ಪ್ರಮುಖ ಅಡ್ಡಿ ಮತ್ತು ಕಾರಣವಾಗಿತ್ತು. ಆ ದೃಷ್ಟಿಯಿಂದ ಇತಿಹಾಸವನ್ನು ನೋಡುವುದಾದಲ್ಲಿ ಸಹ, ಕ್ರಿಸ್ತಪೂರ್ವ ಮತ್ತು ಕ್ರಿಸ್ತಶಕ ಎಂಬ ವಿಭಜನೆ ಅತ್ಯಂತ ಅರ್ಥಪೂರ್ಣವಾಗಿ ಕಾಣುತ್ತದೆ. ಬುದ್ಧ, ಲಾವೊತ್ಸೆ, ಕನ್‌ಫ್ಯುಸಿಯಸ್‌ ಮೊದಲಾದವರು ಸ್ಥಾಪಿಸಿದ ವ್ಯಕ್ತಿಯ ಅರಿವು ಆಧಾರಿತ ಆ ಯಾವ ಚಿಂತನಕ್ರಮಗಳೂ ಕ್ರಿಶ್ಚಿಯನ್‌ ರಿಲಿಜನ್‌ ರೀತಿಯಲ್ಲಿ ಸಂಘಟಿತ ರೂಪ ಪಡೆದುಕೊಳ್ಳಲಿಲ್ಲ. ಈ ಜಗತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ರಿಲಿಜನ್‌ ರೂಪ ಪಡೆದುಕೊಂಡುದು ಕ್ರಿಸ್ತನನಂತರ ಅಸ್ತಿತ್ವಕ್ಕೆ ಬಂದ ಕ್ರಿಶ್ಚಿಯನ್‌ ರಿಲಿಜನ್‌ ಮಾತ್ರ. ಆ ಅರ್ಥದಲ್ಲಿ ಕ್ರಿಶ್ಚಿಯನ್‌ ರಿಲಿಜನ್ನಿಗೆ ಹತ್ತಿರ ಬರುವ ಮತ್ತೊಂದು ರಿಲಿಜನ್‌ ಎಂದರೆ ಇಸ್ಲಾಂ.

ಹಾಗಾಗಿ ಎಷ್ಟೋ ಶತಮಾನಗಳ ಹಿಂದೆಯೆ ಆಡುಭಾಷೆಯಾಗಿ ಪ್ರವಹಿಸುವುದನ್ನು ನಿಲ್ಲಿಸಿದ ಗ್ರೀಕ್‌ – ಲ್ಯಾಟಿನ್‌ ಭಾಷೆಗಳ ಪ್ರಭಾವಕ್ಕೆ ತುತ್ತಾಗದ ಭಾಷೆಗಳನ್ನು ಈ ಜಗತ್ತಿನಲ್ಲಿ ಹುಡುಕಬೇಕಿದೆ. ಜಪಾನ್‌ ಭಾಷೆ ಆಧುನಿಕ ವೈಜ್ಞಾನಿಕ ವಿಷಯಗಳ ಸಮರ್ಥ ವಾಹಕವಾಗಿ ಇಂದು ರೂಪುಗೊಂಡಿದೆ ಎಂದರೆ, ಅದರ ಅರ್ಥವಿಷ್ಟೆ: ಗ್ರೀಕ್‌ – ಲ್ಯಾಟಿನ್‌ ಮತ್ತು ಕೆಲ ಆಧುನಿಕ ಯುರೋಪಿನ ಭಾಷೆಗಳ ಪದ ಮತ್ತು ಭಾವಸಂಪತ್ತನ್ನು ಜಪಾನಿ ಭಾಷೆಯ ಮೂಲ ಚೌಕಟ್ಟಿನಲ್ಲಿ ಯಶಸ್ವಿಯಾಗಿ ಅರ್ಜಿಸಿಕೊಳ್ಳುವುದರ ಮೂಲಕ ಆ ಚೌಕಟ್ಟನ್ನು ಹೊಸ ಬದಲಾವಣೆಗಳಿಗೆ ತಕ್ಕಂತೆ ವಿಸ್ತರಿಸಲಾಗಿದೆ; ಅಂದರೆ ಜಪಾನಿ ಭಾಷೆ ಮಾತನಾಡುವ ಜಪಾನ್‌ ಜನರ ಮನಸ್ಸು ಜಪಾನಿ ಆಗಿ ಉಳಿದಿರುವುದರ ಜತೆಗೆ ಯುರೋಪಿನ ಭಾಷೆಗಳನ್ನಾಡುವ ಜನರ ಮನಸ್ಸು ಗ್ರಹಿಸಿ ಅಭಿವ್ಯಕ್ತಿಸಲು ಸಾಧ್ಯವಿರುವ ಎಲ್ಲ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ತನ್ನ ಭಾಷೆಯ ಮೂಲಕ ಗ್ರಹಿಸಿ ಅದನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಲು ಸಮರ್ಥವಾಗಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನ ಮತ್ತು ಆ ಪರಿಸರಕ್ಕೆ ಸಂಬಂಧಿಸಿದ ಭಾವನೆ ಮತ್ತು ಅಭಿಪ್ರಾಯಗಳನ್ನು ಜಪಾನಿ ಭಾಷೆ ಮೂಲಕ ಗ್ರಹಿಸಿ ಅಭಿವ್ಯಕ್ತಿ ನೀಡುವಷ್ಟು ಜಪಾನಿ ಮನಸ್ಸು ಸಬಲವಾಗಿದೆ.

ಇಂಗ್ಲಿಷ್‌ ಭಾಷಾ ಸಾಮ್ರಾಜ್ಯದ ಪ್ರಭಾವದ ವ್ಯಾಪ್ತಿಗೊಳಪಟ್ಟ ಈ ಜಗತ್ತಿನ ಅನೇಕ ಭಾಷೆಗಳ ಪದರಚನೆ, ವ್ಯಾಕರಣ, ನುಡಿಗಟ್ಟು, ಅಭಿವ್ಯಕ್ತಿವಿಧಾನ, ಶೈಲಿ ಮತ್ತು ಬರವಣಿಗೆಯ ಗತಿ ಬದಲಾವಣೆಗೆ ಒಳಗಾರಿವುಂತೆಯೇ, ಯುರೋಪ್‌ ಮೂಲದ ಸಂಸ್ಕೃತಿ ಮತ್ತು ನಾಗರಿಕತೆಯ ಪ್ರಭಾವದ ಚಾಮರದಡಿ ಬಂದಿರುವ ಬಹುತೇಕ ದೇಶಗಳ ಸಂಸ್ಕೃತಿ ಮತ್ತು ನಾಗರಿಕತೆ ಕೂಡ ಅನೇಕ ತರಹದ ಮಾರ್ಪಾಡಿಗೆ ಒಳಗಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮಾತನಾಡುವ, ಯೋಚಿಸುವ ರೀತಿ ಮತ್ತು ಚಿಂತನಾ ಕ್ರಮವೇ ಬದಲಾಗಿಹೋಗಿರುವುದು. ಪರಿಣಾಮವಾಗಿ, ಅವರು ಪ್ರತಿನಿಧಿಸುವ ಕ್ರಿಶ್ಚಿಯನ್‌ ರಿಲಿಜನ್‌ಗೆ ಮತಾಂತರಗೊಳ್ಳದೆಯೂ ಆ ಪ್ರಭಾವವನ್ನು ಸ್ವೀಕರಿಸಲಾಗಿದೆ ಎಂಬುದು ಮುಖ್ಯ.

ಅಂತಹ ಗ್ರೀಕ್‌ – ಲ್ಯಾಟಿನ್‌ ಭಾಷೆ ಪ್ರತಿನಿಧಿಸುವ ಸಂಸ್ಕೃತಿ ಮತ್ತು ನಾಗರಿಕತೆಯ ಪರಂಪರೆಯಿಂದ ಪಡೆಯಬಹುದಾದ ಪ್ರೇರಣೆ, ಸ್ಫೂರ್ತಿ ಮತ್ತು ಮಾರ್ಗದರ್ಶನವನ್ನು ಪಡೆಯುವ ಮನಸ್ಸುಗಳನ್ನು ಅವಲಂಬಿಸಿರುತ್ತದೆ. ಆ ಮನಸ್ಸು ವೈಯಕ್ತಿಕವಾದುದಾಗಿರುವಂತೆಯೇ ಸಾಮೂಹಿಕವಾದುದು ಮತ್ತು ಎಲ್ಲಾ ಕಾಲಕ್ಕೂ ಸಲ್ಲುವಂತಾದ್ದು; ಪಿರಮಿಡ್‌, ಗೊಮ್ಮಟೇಶ್ವರ ಅಥವಾ ವರ್ಜಿಲ್‌, ಬಸವಣ್ಣನ ರೂಪದಲ್ಲಿ ವ್ಯಕ್ತವಾಗಿರುವಂತೆಯೇ, ಸೇತುವೆ, ಅಣೆಕಟ್ಟು, ರಸ್ತೆ ನಿರ್ಮಾಣದ ರೂಪದಲ್ಲೂ ಅಭಿವ್ಯಕ್ತಗೊಂಡಿರುತ್ತವೆ. ಎಲ್ಲಿಯವರೆಗೆ ಪಿರಮಿಡ್‌ ಕಲ್ಪನೆ ಮತ್ತು ಮುಗಿಲಿಗೆ ಕೈಚಾಚಬಯಸುವ ಎತ್ತರದ ಕಟ್ಟಡಗಳನ್ನು ರಚಿಸುವ ಹುಮ್ಮಸ್ಸು, ಮಾನವ ಜನಾಂಗದ ಮನಸ್ಸಿನ ವೈವಿಧ್ಯಮಯ ಚಟುವಟಿಕೆಗಳಲ್ಲಿ ಒಂದಾಗಿ ಸ್ಥಾನಪಡೆದುಕೊಂಡಿರುತ್ತದೆಯೋ ಅಲ್ಲಿಯವರೆಗೂ ಪುರಾತನ ಈಜಿಪ್ತ್‌ ಸಂಸ್ಕೃತಿ ಮತ್ತು ನಾಗರಿಕತೆ ಜೀವಂತ ಎಂದೇ ಅರ್ಥ. ಬೇರೊಬ್ಬರಿಂದ ಎರವಲು ಪಡೆದ ಅರಿವಿನಿಂದ ಈಜಿಪ್ತಿಯನ್ನರು ಪಿರಮಿಡ್‌ಗಳನ್ನು ನಿರ್ಮಿಸಿದ್ದಿರಬಹುದು. ಹೋಮರ್‌, ಸೊಫೊಕ್ಲೆಸ್‌, ಪೈಥಾಗೋರಸ್‌ ಬಗ್ಗೆ ಚರ್ಚಿಸುವವರು ಇರುವವರೆಗೆ ಅವರನ್ನು ನೀಡಿದ ಗ್ರೀಕ್‌ – ಲ್ಯಾಟಿನ್‌ ಪರಂಪರೆ ಜೀವಂತ: ಪುರಾತನ ಸಂಸ್ಕೃತಿ ಮತ್ತು ನಾಗರಿಕತೆಗೆ ಸಂಬಂಧಿಸಿದ ಅನೇಕ ಸಂಗತಿಗಳು ಮಾನವ ಜನಾಂಗದ ಸಂಸ್ಕೃತಿಯ ರಕ್ತದಲ್ಲಿ ಸೇರಿಹೋಗಿವೆ; ಅವು ಸಂಚರಿಸುತ್ತಿರುವ ಅಥವಾ ವ್ಯಕ್ತವಾಗುವ ರೀತಿ ಬದಲಾಗಿಹೋಗಿರಬಹುದು.

ಪರಿಸ್ಥಿತಿ ಹೀಗಿರಬೇಕಾದರೆ, ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆ ಮಾತ್ರ ಅಂದಿನಿಂದ ಇಂದಿನವರೆಗೆ ಸಾತತ್ಯತೆ ಉಳಿಸಿಕೊಳ್ಳಲು ಸಾಧ್ಯವಾಗಿದೆ ಮತ್ತು ಅದು ಮಾತ್ರ ಜೀವಂತ ಎಂಬ ವಾದ ಎಷ್ಟು ಸರಿ? ಆ ಕುರಿತ ವಿಚಾರಗಳಿಗೆ ಹೋಗುವ ಮೊದಲು ಗ್ರೀಕ್‌ – ಲ್ಯಾಟಿನ್‌ ತರಹವೇ ಆಡುಭಾಷೆಯಾಗಿ ಪ್ರವಹಿಸುವುದನ್ನು ನಿಲ್ಲಿಸಿ ಎಷ್ಟೋ ಶತಮಾನಗಳನ್ನು ಕಂಡಿರುವ ಸಂಸ್ಕೃತ ಕುರಿತಂತೆ ಒಂದು ನಿಲುವು ತಳೆಯುವುದು ಅಗತ್ಯ. ಸಂಸ್ಕೃತ ಎಂದರೆ ‘ದೇವಭಾಷೆ’ ಎಂದು ನಮಸ್ಕಾರ ಹಾಕುವವರು ಇರುವಂತೆಯೇ ಅದೊಂದು ‘ಮಾನವ ಜನಾಂಗದ ಕಳಂಕ’ ಎಂದು ಭಾವಿಸುವವರೂ ಇದ್ದಾರೆ; ಅತಿ ಗೌರವ ಮತ್ತು ಅಷ್ಟೇ ದ್ವೇಷಕ್ಕೆ ತುತ್ತಾದ ಮತ್ತೊಂದು ಭಾಷೆಯನ್ನು ಜಗತ್ತಿನಲ್ಲಿ ಕಾಣುವುದು ಕಷ್ಟ. ಆದರೆ ಸಂಸ್ಕೃತದ ಬಗ್ಗೆ ಅತ್ಯಂತವಾದ ಗೌರವ ಮತ್ತು ಅಗೌರವ ಹೊಂದಿರುವ ಜನರಿಬ್ಬರೂ ಅದು ಎಂದೂ ಆಡಭಾಷೆಯಾಗಿರಲಿಲ್ಲ ಎಂಬ ಒಂದು ವಿಚಾರದಲ್ಲಿ ಮಾತ್ರ ಸಹಮತ ಪಡೆದಿರುವಂತೆ ತೋರುತ್ತದೆ. ಸಂಸ್ಕೃತಂದಂತಹ ದೇವಭಾಷೆ ಜನಸಾಮಾನ್ಯರ ಆಡುಭಾಷೆಯಾಗಿತ್ತು ಎಂಬುದಾದಲ್ಲಿ ಅದರ ದೈವತ್ವಕ್ಕೆ ಕುಂದು ಎಂಬುದು ಅದರ ಪ್ರೇಮಿಗಳ ಗುಮಾನಿಯಾದರೆ, ಸಂಸ್ಕೃತದಂತಹ ‘ಮೃತಭಾಷೆ’ ಪ್ರತಿನಿಧಿಸುವ ‘ಮೃತಸಂಸ್ಕೃತಿ’ ಯಾವತ್ತೂ ಜೀವಂತವಾಗಿರಲಿಲ್ಲ ಎಂದು ಅದರ ದ್ವೇಷಿಗಳು ಭಾವಿಸುತ್ತಾರೆ. ಆ ತರಹದ ಅತಿಯಾದ ಪ್ರೀತಿ ಅಥವಾ ದ್ವೇಷದ ಕಾರಣವೋ ಏನೋ ಸಂಸ್ಕೃತವು ಎಲ್ಲ ಭಾಷೆಗಳಂತೆ ಒಂದು ಕಾಲದಲ್ಲಿ ಆಡುಭಾಷೆಯಾಗಿ ಪ್ರವಹಿಸಿದ್ದಿರಬಹುದು ಎಂಬ ಸರಳ ಸಂಗತಿಯನ್ನು ಆ ಎರಡು ಗುಂಪುಗಳ ಜನರು ಮರೆತಂತೆ ತೋರುತ್ತದೆ; ಆಡುಭಾಷೆಯಲ್ಲದ ಭಾಷೆಯಲ್ಲಿ ವ್ಯಾಸ – ವಾಲ್ಮೀಕಿಯಂತಹ ಚಾರಣ ಕವಿಗಳು ಬರಲು ಸಾಧ್ಯವೆ? ಸಂಸ್ಕೃತ ಎಲ್ಲ ಭಾಷೆಗಳಂತೆ ಆಡುಭಾಷೆಯಾಗಿದ್ದಿರಬಹುದು ಎಂಬುದಕ್ಕೆ ಮೌಖಿಕ ಪರಂಪರೆಯ ಅತಿ ದೊಡ್ಡ ಕೊಡುಗೆಗಳಾದ ಮೂಲ ಮಹಾಭಾರತ ಮತ್ತು ಮೂಲ ರಾಮಾಯಣಕ್ಕಿಂಥ ಮತ್ತಾವ ದೊಡ್ಡ ಪುರಾವೆ ಬೇಕು?

ಗ್ರೀಕ್ ಲ್ಯಾಟಿನ್ ಆಡುಭಾಷೆಗಳಾಗಿ ಉಳಿದಿಲ್ಲವಾದಂತೆ, ಸಂಸ್ಕೃತ ಕೂಡ ಇಂದು ಯಾರ ಆಡುಭಾಷೆಯೂ ಅಲ್ಲ. ಇತಿಹಾಸದ ಯಾವುದೋ ಹಂತದಲ್ಲಿ ಆಡುಭಾಷೆಯಾಗಿ ಪ್ರವಹಿಸುವ ಸಾಧ್ಯತೆ ಕಳೆದುಕೊಂಡ ಭಾಷೆಗಳನ್ನು ಜೀವಂತ ಭಾಷೆಗಳೆಂದು ಪರಿಗಣಿಸಲು ಬರುವುದಿಲ್ಲ ಎಂದ ಮಾತ್ರಕ್ಕೆ ಆ ಭಾಷೆಗಳು ಮತ್ತು ಅವು ಪ್ರತಿನಿಧಿಸುವ ಪರಂಪರೆಯನ್ನು ಮೃತ ಎಂದು ತಿರಸ್ಕರಿಸಲು ಬುರುವುದಿಲ್ಲ. ಇಂದಿಗೂ ಬಾಳುತ್ತಿರುವ ಅವು ಬದುಕಿಗೆ ಸ್ಪಂದಿಸುತ್ತಿರುವ ರೀತಿ ಮತ್ತು ಅವುಗಳ ಜೀವಂತಿಕೆ, ಬೇರೆ ರೂಪ ಮತ್ತು ಆಯಾಮ ಪಡೆದುಕೊಂಡಿದಯಷ್ಟೆ. ಗ್ರಂಥಸ್ಥ ರೂಪ ಪಡೆದುಕೊಂಡ ಮಾತ್ರಕ್ಕೆ ಅವುಗಳಿಂದ ಹೊರಹೊಮ್ಮಬಹುದಾದ ಅಭಿಪ್ರಾಯ, ಭಾವನೆ, ಸ್ಫೂರ್ತಿ ಮತ್ತು ಪ್ರೇರಣಾ ಸಾಮರ್ಥ್ಯ ಕೂಡ ಗ್ರಂಥಸ್ಥವಾಗಿವೆ ಎಂದೇನೂ ಅರ್ಥವಲ್ಲ.

ಈಜಿಪ್ತ್, ಇರಾಕ್, ಇರಾನ್, ಆಫ್ಘಾನಿಸ್ತಾನ ಮೊದಲಾದ ದೇಶಗಳು ಇಂದು ಎದುರಿಸುತ್ತಿರುವ ಅಂತರಿಕ ಕ್ಷೋಭೆ ಮತ್ತು ತಳಮಳಕ್ಕೆ ಪಶ್ಚಿಮ ಜಗತ್ತಿನ ರೂಪದಲ್ಲಿ ಎದುರಾಗಿರುವ ಸಾಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಮುಖಾಮುಖಿ ಅಥವಾ ಸಂಘರ್ಷವೊಂದೇ ಕಾರಣವಲ್ಲ; ಇಸ್ಲಾಂ ರಿಲಿಜನ್ ಸ್ವೀಕರಿಸುವುದಕ್ಕೆ ಮೊದಲು ಅನುಸರಿಲಾಗುತ್ತಿದ್ದ ಆಚರಣೆ, ವಿಧಿವಿಧಾನ, ನಂಬಿಕೆಗಳು, ಧಾರ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇಂದು ಅನುಸರಿಸಲಾಗುತ್ತಿರುವ ಇಸ್ಲಾಮಿಯ ಚೌಕಟ್ಟಿನಲ್ಲಿ ಅಂತರ್ಗತ ಮಾಡಿಕೊಳ್ಳುವ ಸಾಧ್ಯವಾಗಿಲ್ಲದಿರುವುದು ಪ್ರಮುಖ ಕಾರಣ. ಅಂದರೆ ಇಸ್ಲಾಂ ರಿಲಿಜನ್ ಆಗಮನಕ್ಕೆ ಮೊದಲು ಪಡೆದಿದ್ದ ಸಾಂಸ್ಕೃತಿಕ ಮತ್ತು ನಾಗರಿಕತೆಯ ಪರಂಪರೆ ವಿರುದ್ಧ ಆಂತರಿಕವಾಗಿ ಸಂಘರ್ಷ ನಡೆಸುತ್ತಿರುವ ಆ ಜನರು, ಬಾಹ್ಯವಾಗಿ ಯುರೋಪ್ ಮತ್ತು ಅಮೇರಿಕಾ ರೂಪದಲ್ಲಿ ಎದುರಾಗಿರುವ ಪ್ರಭಾವದ ವಿರುದ್ಧ ಕೂಡ ಹೋರಾಟ ನಡೆಸುತ್ತಿದ್ದಾರೆ. ಯುರೋಪ್ ಮೂಲದ ಜನರಿಗೂ ಕ್ರಿಸ್ತಪೂರ್ವ ಎಂಬ ಭೂತದ ಹಿನ್ನೆಲೆ ಇರುವಂತೆಯೇ, ಇಸ್ಲಾಂ ರಿಲಿಜನ್ ಸ್ವೀಕರಿಸಿರುವ ಇರಾಕ್, ಈಜಿಪ್ತ್, ತುರ್ಕಿ, ಇರಾನ್ ಮೊದಲಾದ ದೇಶಗಳಿಗೂ ಇಸ್ಲಾಂಪೂರ್ವದ ಪ್ರಬಲ ಹಿನ್ನೆಲೆ ಇದೆ. ಆ ನಿನ್ನೆಲೆ ಬಹಲ ವಿಶಾಲ ಅರ್ಥದಲ್ಲಿ ಗ್ರೀಕ್ – ಲ್ಯಾಟಿನ್ ಜನರು ಅನುಸರಿಸುತ್ತಿದ್ದ ಪೇಗನ್ ಮನೋಧಮ್ಮಕ್ಕೆ ಬಹಳ ಹತ್ತಿರವಾದುದು ಎಂಬುದು ಬಹಳ ಮುಖ್ಯ. ಪರಿಣಾಮವಾಗಿ, ಆ ದೇಶಗಳ ಜನ ಯುರೋಪ್ – ಅಮೆರಿಕಾ ರೂಪದಲ್ಲಿ ಎದುರಾಗಿರುವ ಪೂರ್ವದ ಸಂಸ್ಕೃತಿ ಮತ್ತು ನಾಗರಿಕತೆ ಜತೆ ಏಕಕಾಲದಲ್ಲಿ ಸಂಘರ್ಷಕ್ಕಿಳಿದಿದ್ದಾರೆ.

ಅದೇ ತರಹದ ಬಿಕ್ಕಟ್ಟನ್ನು ಬಹಳ ತೀವ್ರರೂಪದಲ್ಲಿ ಹಲವಾರು ಶತಮಾನಗಳ ಕಾಲ ಸತತವಾಗಿ ಎದುರಿಸಿದ ಯುರೋಪಿನ ಜನ ಹಿಂದಿನದನ್ನು ಇಂದಿನ ಮತ್ತು ಮುಂದಿನದರ ಹೊಂದಾಣಿಕೆಯಿಂದಾಗಿ, ಇಡೀ ಜಗತ್ತಿನ ಮೇಲೆ ತಮ್ಮ ಪ್ರಭಾವ ಬೀರಲು ಬೇಕಾದ ಹಿತಮಾರ್ಗವೊಂದನ್ನು ರೂಪಿಸಿಕೊಳ್ಳಲು ಅನುವಾಯಿತು ಎಂಬುದು ಬಹಳ ಮುಖ್ಯ. ಯುರೋಪ್ ಮೂಲದ ಸಮಾಜದಲ್ಲಿ ಯಾವುದೇ ತರಹದ ಬಿರುಕು ಅಥವಾ ಬಿಕ್ಕಟ್ಟಿ ಇಲ್ಲ ಎಂದರ್ಥವಲ್ಲ.[3] ಅವರು ಎದುರಿಸುತ್ತಿರುವ ಬಿಕ್ಕಟ್ಟು, ಅಥವಾ ಮತ್ತಾವುದೇ ತರಹದ ಆಂತರಿಕ ಕ್ಷೋಭೆಗಳು ಅವರು ಸಾಧಿಸಿರುವ ಏಕತೆ ಮತ್ತು ಗುರಿಯಲ್ಲಿನ ಹೊಂದಾಣಿಕೆಯನ್ನು ಮುರಿಯುವ ಪ್ರಮಾಣದಲಿಲ್ಲ.

ಆ ಬಿಕ್ಕಟ್ಟುಗಳಿಂದ ಭಾರತ ಕೂಡ ಮುಕ್ತವಾಗಿಲ್ಲ, ಬುದ್ಧಪೂರ್ವ, ಬುದ್ದಾನಂತರ, ಇಸ್ಲಾಂ ಶಕ್ತಿಗಳ ಆಗಮನ ಮತ್ತು ಐರೋಪ್ಯರ ಪ್ರಭಾವ ಮೊದಲಾಗಿ ನಾಲ್ಕು ಪ್ರಮುಖ ಹಂತಗಳಲ್ಲಿ ಬೆಳವಣಿಗೆ ಕಂಡಿರುವ ಭಾರತದ ಜನರು, ಬಹಳ ವಿಶಾಲವಾದ ಅರ್ಥದಲ್ಲಿ ಧರ್ಮ ಕುರಿತಂತೆ ಒಟ್ಟಾರೆ ತಳೆದ ನಿಲುವು ಗ್ರೀಕ್ – ಲ್ಯಾಟಿನ್ ಜನರ ಪೇಗನ್ ನಿಲುವಿಗೆ ಹತ್ತಿರ ಬರುತ್ತದೆ ಎಂಬುದು ಇಲ್ಲಿ ಗಮನಾರ್ಹ. ವ್ಯಕ್ತಿಮೂಲವಾದ ‘ಬೌದ್ಧಧಮ್ಮ’ದ ಆಗಮನದನಂತರವೂ ಭಾರತೀಯ ಧಾರ್ಮಿಕ ಧೋರಣೆಯಲ್ಲಿ ಅಂತಹ ಪ್ರಮುಖ ಬದಲಾವಣೆ ಕಂಡುಬರಲಿಲ್ಲ. ಏಕೆಂದರೆ ಬುದ್ಧ ಮತ್ತು ಆತನ ಶಿಷ್ಯ ಸಮುದಾಯ ಸ್ಥಾಪಿಸಬಯಸಿದ ಧಮ್ಮ, ಬದುಕಿನ ಬಗ್ಗೆ ಒಟ್ಟಾರೆ ತಳೆದ ಮನೋಧರ್ಮ ಅಥವಾ ದೃಷ್ಟಿಕೋನವಾಗಿ ಉಳಿದುಕೊಂಡುದು ಒಂದು ಕಾರಣವಾದರೆ, ಸ್ಥಾಪಿತ ರಿಲಿಜನ್ ಆಗಿ ಬೆಳೆಯಲು ಬೇಕಾದ ಕಾಠಿಣ್ಯ ಮತ್ತು ಉಗ್ರತ್ವವನ್ನು ಅದು ಪಡೆದುಕೊಳ್ಳದೆ ಹೋದುದು ಮತ್ತೊಂದು ಕಾರಣವಾಗಿದ್ದಿರಬಹುದು. ಸ್ಥಾಪಿತ ರಿಲಿಜನ್ ಮತ್ತು ಬೆಳೆದು ಬಂದ ಧರ್ಮಗಳಿಗೂ ಅಂತರವಿರುವುದೇ ಅಲ್ಲಿ, ಬಾರತದ ಜನರ ತರಹವೆ ತಮ್ಮ ಮನಸ್ಥಿತಿ ಮತ್ತು ಸಂಸ್ಕೃತಿಗನುಗುಣವಾಗಿ ರೂಪತ ಧರ್ಮವೊಂದನ್ನು ಕಂಡುಕೊಂಡಿದ್ದ ಗ್ರೀಕ್ ಮತ್ತು ಲ್ಯಾಟಿನ್ ಜನ, ಮುಮದೆ ಸ್ಥಾಪಿತ ರಿಲಿನಜ್ ಆದ ಕ್ರಿಶ್ಚಿಯನ್ ರಿಲಿಜನ್ನನ್ನು ಒಪ್ಪಿಕೊಳ್ಳಬೇಕಾಯಿತು. ಆದರೆ ಸ್ಥಾಪಿತ ರಿಲಿಜನ್ನಿನ ಕೆಲ ಗುಣಲಕ್ಷಣಗಳನ್ನು ಪಡೆದಿದ್ದ ‘ಬೌದ್ಧಧರ್ಮ’ವನ್ನು ಧರ್ಮವನ್ನಾಗಿಯೇ ಪರಿವರ್ತಿಸಿದ ಬಹುತೇಕ ಭಾರತೀಯರು ತೀರ ಇತ್ತೀಚಿನವರೆಗೂ ಧರ್ಮದ ಆರಾಧಕರಾಗಿಯೇ ಉಳಿದುಬಂದಿರುತ್ತಾರೆ. ಆ ಅರ್ಥದಲ್ಲಿ ಬೌದ್ಧಧರ್ಮವಾಗಿ ತಾನು ಹುಟ್ಟಿದ ನೆಲದಲ್ಲಿ ಪರಿವರ್ತನೆಗೊಂಡ ‘ಬೌದ್ಧಧರ್ಮ’, ಭಾರತದಿಂದ ಪಲಾಯನ ಮಾಡಲಿಲ್ಲ ಮತ್ತು ಮಾಡಿಲ್ಲ; ಭಾರತೀಯರು ಕಂಡುಕೊಂಡ ಅನೇಕ ತರಹದ ದೃಷ್ಟಿಕೋನ ಅಥವಾ ಮನೋಧರ್ಮಗಳ ಪೈಕಿ ಒಂದಾಗಿದೆ.

ಧರ್ಮ ಅಥವಾ ರಿಲಿಜನ್‌ಗಳ ಭಾಗವಾಗಿ ಆಚರಿಸಲಾಗುವ ಕೆಲ ಹಬ್ಬ ಆಚರಣೆ ವಿಧಿವಿಧಾನಗಳ ನಡುವಿನ ವ್ಯತ್ಯಾಸ ಇಲ್ಲಿ ಅಷ್ಟು ಮುಖ್ಯವಾಗುವುದಿಲ್ಲ.

ರೂಪಿತ ಧಾರ್ಮಿಕ ಪರಂಪರೆ ಪಡೆದ ಭಾರತಕ್ಕೆ ಸ್ಥಾಪಿತ ರಿಲಿಜನ್ನಿನ ತೀಕ್ಷ್ಮತೆ, ಕಾಠಿಣ್ಯ ಮತ್ತು ಉಗ್ರತ್ವ ತಂದುಕೊಡಲು ಬುದ್ಧ ಮತ್ತು ಅವನ ಶಿಷ್ಯರು ಸಿದ್ಧರಾಗಿಲ್ಲದಿದ್ದುದು ಅಥವಾ ಅವರಿಗೆ ಅದು ಸಾಧ್ಯವಾಗದೆ ಹೋದುದು ಆ ರೀತಿಯ ಬೆಳವಣಿಗೆಗೆ ಪ್ರಮುಖ ಕಾರಣವಾಗಿದ್ದಿರಬಹುದು. ಅಂತಹ ರಿಲಿಜನ್‌ ಸ್ವೀಕರಿಸಲು ಭಾರತೀಯರು ಮಾನಸಿಕವಾಗಿ ಸಿದ್ಧರಾಗಿಲ್ಲದೆ ಇದ್ದುದು ಮತ್ತೊಂದು ಕಾರಣವಿದ್ದಿರಬಹುದು. ಜತೆಗೆ ಆ ತರಹದ ನಿಗದಿತ ಚೌಕಟ್ಟನ್ನು ಜನರ ಮೇಲೆ ಹೇರುವ ಒತ್ತಾಸೆ ಸ್ವತಃ ಬುದ್ಧನ ಪಾಲಕರಿಗೆ ಇದ್ದಂತೆ ಕಾಣುವುದುದಿಲ್ಲ. ಭಾರತದ ಧಾರ್ಮಿಕ ಪರಂಪರೆಯನ್ನು ರಿಲಿಜನ್‌ ಆಗಿ ಪರಿವರ್ತಿಸುವ ಅನೇಕ ಪ್ರಯತ್ನಗಳು ಮತ್ತು ಉಗ್ರ ಕದನಗಳು ಇತಿಹಾಸದುದ್ದಕ್ಕೂ ಕಾಲಕಾಲಕ್ಕೆ ನಡೆದಿವೆ ನಿಜ; ಭಾರತದ ರೂಪಿತ ಧಾರ್ಮಿಕ ಪರಂಪರೆಯ ವೈವಿಧ್ಯ ಮತ್ತು ಶ್ರೀಮಂತಿಕೆ ಹೆಚ್ಚಿಸಲು ಸಹಾಯ ಮಾಡಿದುವೆ ವಿನಾ ಆ ಯಾವುವು ಕ್ರಿಶ್ಚಿಯನ್‌ ಅಥವಾ ಇಸ್ಲಾಂ ರೀತಿ ಸ್ಥಾಪಿತ ರಿಲಿಜನ್ನಿನ ರೂಪ ಪಡೆದುಕೊಳ್ಳಲಿಲ್ಲ. ಆ ತರಹದ ಸುದೀರ್ಘ ಹಿನ್ನೆಲೆ ಕಾರಣವೇ ಅನೇಕ ದೃಷ್ಟಿಕೋನ ಮತ್ತು ಪಂಗಡಗಳಿಗೆ ಸೇರಿದ ಜನ ಭಾರತದಲ್ಲಿ ಒಟ್ಟಿಗೆ ಬದುಕಲು ಸಾಧ್ಯವಾಗಿರುವುದನ್ನು ಇಂದಿಗೂ ಕಾಣಬಹುದಾಗಿದೆ. ಭಾರತದ ಆ ವಾತಾವರಣ ಇಸ್ಲಾಂ ಮತ್ತು ಕ್ರಿಶ್ಚಿಯನ್‌ ರಿಲಿಜನ್‌ಗಳ ಆಗಮನವಾಗಿ ಹಲವಾರು ಶತಮಾನಗಳು ಕಳೆದನಂತರವೂ ಬಹಳವಾಗಿ ಬದಲಾಗಿ ಹೋಗಲಿಲ್ಲ. ಹಾಗೆ ನೋಡಿದರೆ, ಇಸ್ಲಾಂ ಮತ್ತು ಕ್ರಿಶ್ಚಿಯನ್‌ ರಿಲಿಜನ್ನುಗಳು ಭಾರತದ ವಿಶಾಲ ಧಾರ್ಮಿಕ ಹಂದರದಲ್ಲಿ ಒಂದಾಗಿ ಜಾಗ ಕಂಡುಕೊಳ್ಳುವ ಅವಕಾಶವೇ ಹೆಚ್ಚಿತ್ತು. ಅಂಥ ಭಾರತದ ಧಾರ್ಮಿಕ ಪರಂಪರೆಯನ್ನು ‘ಹಿಂದೂ ಧರ್ಮ’ ಎಂದು ಕರೆದರೂ ಅಥವಾ ‘ಇಂಡಿಯನ್‌ ಧರ್ಮ’ ಎಂದು ಕರೆದರೂ ಅದೇ ಅರ್ಥ, ‘ಭಾರತಧರ್ಮ’ ಎಂದು ಕರೆದರೂ ಒಂದೇ. ಅದರ ವಿಶಾಲ ಹರವು ಮತ್ತು ಚೌಕಟ್ಟು ಎಷ್ಟು ವೈವಿಧ್ಯಮಯವಾದುದಾಗಿದೆ ಎಂದರೆ, ಇಸ್ಲಾಂ ಮತ್ತು ಕ್ರಿಶ್ಚಿಯನ್‌ ರಿಲಿಜನ್ನುಗಳ ವಿವಿಧ ಪಂಥಗಳನ್ನು ತನ್ನ ಒಡಲಿನ ಒಳಗಿನ ಸಾವಿರಾರು ಶಾಖೆಗಳ ಪೈಕಿ ಕೆಲವಾಗಿ ಸ್ವೀಕರಿಸುವ ವೈಶಾಲ್ಯತೆ ಅದಕ್ಕಿದೆ.

ಅಂತಹ ಅವಕಾಶ ಇಂದು ಕದಡಿ ಹೋಗಿದ್ದು ಭಾರತ ಅತ್ಯಂತ ತೀವ್ರ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬಂದಿದೆ. ಭಾರತದಷ್ಟೇ ವಿಶಾಲವಾದ ಅದರ ಧಾರ್ಮಿಕ ಪರಂಪರೆಯನ್ನು ಒಂದು ರಿಲಿಜನ್‌ ಆಗಿ ಪರಿವರ್ತಿಸುವ ಯತ್ನಗಳು ತೀವ್ರ ಸಂಘಟಿತ ರೂಪ ಪಡೆದುಕೊಂಡಿರುವುದು ಅದು ಎದುರಿಸುತ್ತಿರುವ ಹೊಸ ನಮೂಮೆಯ ಬಿಕ್ಕಟ್ಟಿಗೆ ಕಾರಣ; ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಎದುರಾಗಿರುವ ಅನೇಕ ಬಿಕ್ಕಟ್ಟುಗಳ ಸರಮಾಲೆಗಳ ಪೈಕಿ ಅದೂ ಒಂದಾಗಿ ಸೇರಿಸಿಕೊಂಡಿರುವುದು ದೇಶ ಒಟ್ಟಾರೆ ಎದುರಿಸುತ್ತಿರುವ ಇಕ್ಕಟ್ಟಿನ ಪರಿಸ್ಥಿತಿಯ ತೀವ್ರತೆಯನ್ನು ಉಲ್ಬಣ ಮಟ್ಟಕ್ಕೇರಿಸಲು ಸಹಾಯ ಮಾಡಿದೆಯಷ್ಟೆ.

ಹಿಂದೂ ಅಥವಾ ಭಾರತಧರ್ಮವನ್ನು ಕ್ರಿಶ್ಚಿಯನ್‌, ಇಸ್ಲಾಂ ರಿಲಿಜನ್‌ಗಳ ತರಹವೆ ರಿಲಿಜನ್‌ ಆಗಿ ಪರಿವರ್ತಿಸುವ ಯತ್ನದಲ್ಲಿ ನಿರತವಾಗಿರುವ ಜನರನ್ನು ಆ ಕಾರಣವೇ ಮಾಮೂಲಿ ಅರ್ಥದಲ್ಲಿ ಮತೀಯವಾದಿಗಳು ಅಥವಾ ಮೂಲಭೂತವಾದಿಗಳು ಎಂದು ಕರೆಯುವುದು ಅಷ್ಟು ಸರಿ ಇರುವಂತೆ ತೋರುವುದಿಲ್ಲ. ರಿಲಿಜನ್ನುಗಳ ಬಗ್ಗೆ ಭಾರತದ ಬಹುತೇಕ ಜನ ಬಹಳ ಹಿಂದಿನಿಂದಲೂ ಒಂದು ತರಹದ ಅವಜ್ಞೆ ಇಲ್ಲವೆ ತ್ಯಕ್ತತೆಯಿಂದ ನಡೆದುಕೊಂಡು ಬಂದಂತೆ ಕಾಣುತ್ತದೆ. ರಿಲಿಜನ್ನುಗಳನ್ನು ಸ್ಥಾಪಿಸಲು ಹಲವರು ನಡೆಸಿದ ಪ್ರಯತ್ನಗಳು ಯಶಸ್ವಿಯಾಗದಿರಲು ಆ ಮನೋಧರ್ಮವೆ ಕಾರಣವಾಗಿದ್ದಿರಬಹುದು. ಬುದ್ಧ – ಮಹಾವೀರರ ಕಾಲಕ್ಕೂ ಹಿಂದಿನಿಂದಲೂ ಆ ತರಹದ ಪ್ರಯತ್ನಗಳು ನಡೆದಿವೆಯಾದರು, ಕ್ರಿಶ್ಚಿಯನ್‌ ಮತ್ತು ಇಸ್ಲಾಂ ರಿಲಿಜನ್ನುಗಳ ಆಗಮನ ಭಾರತೀಯ ಪರಿಸರಕ್ಕೆ ತೀರ ಅನ್ಯವಾದ ಕೆಲ ಹೊಸ ಬೆಳವಣಿಗೆಗೆ ಕಾರಣವಾಯಿತು. ಭಾರತಧರ್ಮದ ವಿಶಾಲ ಹಂದರದಲ್ಲಿ ಒಂದಾಗಿ ದೃಷ್ಟಿಕೋನ, ಮನೋಧರ್ಮ, ಇಲ್ಲವೆ ಬದುಕಿನಲ್ಲಿ ಪಾಲಿಸಬೇಕಾದ ಕೆಲ ಆಚರಣೆಗಳಾಗಿ ಮಾರ್ಪಡುವ ಅವಕಾಶವಿದ್ದ ಆ ಎರಡೂ ರಿಲಿಜನ್‌ಗಳು ರಿಲಿಜನ್‌ ಆಗಿಯೇ ಉಳಿದುಕೊಳ್ಳಲು ಸಾಧ್ಯವಾದುದಕ್ಕೆ ಹಲವಾರು ಕಾರಣಗಳಿವೆ: ಭಾರತದ ಒಳಗಿನ ಪರಿಸ್ಥಿತಿ, ಅವುಗಳಿಗೆ ದತ್ತವಾಗಿ ಬಂದ ಸಂಘಟನಾತ್ಮಕ ವ್ಯವಸ್ಥೆ ಹಾಗೂ ಇತರ ಕೆಲ ಕಠಿಣ ಗುಣಗಳು.

ಕಾಲಕಾಲಕ್ಕೆ ಎದುರಾದ ಅನೇಕ ರೀತಿಯ ಪ್ರಭಾವಗಳನ್ನು ಜೀರ್ಣಿಸಿಕೊಂಡು ತನ್ನತನ ಉಳಿಸಿಕೊಂಡು ಬಂದಿರುವ ಭಾರತ, ಕ್ರಿಶ್ಚಿಯನ್‌ ಮತ್ತು ಇಸ್ಲಾಂ ರಿಲಿಜನ್ನುಗಳ ಪ್ರಭಾವವನ್ನು ತನ್ನ ವಿಶಾಲ ಹಂದರದ ಚೌಕಟ್ಟಿನಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಾಗಲಿಲ್ಲ ಏಕೆ? ಆ ರಿಲಿಜನ್ನುಗಳ ಮೇಲೂ ಗಣನೀಯ ಪ್ರಭಾವ ಬೀರಿರುವ ಭಾರತಧರ್ಮ ತಾನು ಬೀರಿದ ಪ್ರಭಾವಕ್ಕಿಂತಲೂ ಹೆಚ್ಚಾಗಿ ಅವಗಳ ಪ್ರಭಾವದಿಂದ ತಾನು ಈವರೆಗೂ ಜತನವಾಗಿ ಕಾಪಾಡಿಕೊಂಡು ಬಂದಿರುವ ತನ್ನ ವಿಶಿಷ್ಟತೆಯ ಅನೇಕ ಅಂಶಗಳನ್ನು ಬಿಟ್ಟುಕೊಡಬೇಕಾಗಿ ಬಂದಿದೆಯಲ್ಲವೇ?

ಪ್ರಬಲ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಇಚ್ಛಾಶಕ್ತಿಯ ಬೆಂಬಲವಿರುವುದು ಒಂದಾದರೆ, ಕೇಂದ್ರೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಉಳಿಸಿಕೊಂಡಿರುವ ಆ ಎರಡು ರಿಲಿಜನ್ನುಗಳು ಮತಪ್ರಚಾರದಲ್ಲಿ ಇಂದಿಗೂ ತೊಡಗಿರುವುದು, ಅವುಗಳ ಕೇಂದ್ರಸ್ಥಾನ ದೇಶದ ಹೊರಗಡೆ ಇರುವುದು ಮತ್ತು ಅವುಗಳ ಪ್ರಭಾವೀ ವಲಯ ಇಡೀ ಜಗತ್ತನ್ನೇ ಆವರಿಸಿಕೊಂಡಿರುವುದು ಮತ್ತೊಂದು ಕಾರಣ. ಚೀನಾ, ಜಪಾನ್, ಭಾರತ ಮೊದಲಾದ ಕೆಲವು ದೇಶಗಳು ಹೊರತು ಈ ಜಗತ್ತಿನ ಬಹುತೇಕ ರಾಷ್ಟ್ರಗಳ ಜನ ತಮ್ಮ ಹಿಂದಿನ ಪರಂಪರೆಯನ್ನು ತ್ಯಜಿಸಿ ಕ್ರಿಶ್ಚಿಯನ್‌ ಇಲ್ಲ ಇಸ್ಲಾಂ ರಿಲಿಜನ್‌ ಅನ್ನು ಒಪ್ಪಿಕೊಂಡಿವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಅತ್ಯಂತ ಸಂಘಟಿತವಾದ ಆ ಎರಡು ರಿಲಿಜನ್ನುಗಳು ಮತ್ತು ಸ್ವಾಭಾವಿಕ ರೀತಿಯಲ್ಲಿ ಬೆಳೆದು ಬಂದ ಧರ್ಮದ ಪರಂಪರೆ ಪಡೆದ ಭಾರತದಲ್ಲಿ ನಡೆಯುತ್ತಿರುವ ‘ಸಂಘರ್ಷ’ ಅತ್ಯಂತ ಕುತೂಹಲಕಾರಿಯಾದುದಾಗಿದೆ. ಆ ಪ್ರಯೋಗ ಈ ಜಗತ್ತಿನ ಬೇರಾವುದೇ ರಾಷ್ಟ್ರದ ನಡೆಯುತ್ತಿರುವ ಉದಾಹರಣೆ ಇಲ್ಲ. ಆ ಅವಕಾಶವಿದ್ದ ಚೀನಾ ಬೇರೆ ಹಾದಿ ಹಿಡಿಯಿತು – ಮೊದಲಿನಿಂದಲೂ.

ಬ್ರಿಟಿಷ್‌ ಶಿಕ್ಷಣದ ಪ್ರಭಾವ ಸ್ವೀಕರಿಸಿಯೂ ತಮ್ಮದೇ ಆದ ಹಿನ್ನೆಲೆ ಉಳಿಸಿಕೊಂಡು ಬದುಕಿನಲ್ಲಿ ಸಾರ್ಥಕತೆ ಕಂಡುಕೊಂಡಿರುವವರು ಒಂದು ಕಡೆಯಾದರೆ, ಮತ್ತೊಂದು ವರ್ಗದ ಜನ, ಬ್ರಿಟಿಷರು ಬರುವುದಕ್ಕೆ ಮೊದಲು ಎಲ್ಲಿದ್ದರೋ ಇಂದೂ ಅದೇ ಮನಃಸ್ಥಿತಿಯಲ್ಲಿ ಉಳದಿದ್ದಾರೆ; ಆದರೆ ಬ್ರಿಟಿಷ್‌ ಮಾದರಿ ಶಿಕ್ಷಣ ಪಡೆದನಂತರ ಈ ಕಡೆ ಜವಹರಲಾಲ್ ನೆಹರು ತರಹ ಪುರಾತನ ಭಾರತದ ಭಾರದಿಂದ ಬೇಕಾದಷ್ಟು ಪ್ರಮಾಣದಲ್ಲಿ ಬಿಡುಗಡೆ ಪಡೆದು ಹೊಂದಾಣಿಕೆ ಕಂಡುಕೊಳ್ಳಲು ಸಾಧ್ಯವಾಗದೆ ಮತ್ತು ಬ್ರಿಟಿಷರು ಬರುವುದಕ್ಕೆ ಮೊದಲಿದ್ದ ಯಥಾಸ್ಥಿತಿಯಲ್ಲಿಯೆ ಮುಂದುವರಿಯಲು ಆಗದೆ ಒದ್ದಾಡುತ್ತಿರುವ ಮೂರನೇ ವರ್ಗಕ್ಕೆ ಸೇರಿದ ಮತ್ತೊಂದು ಗುಂಪಿನ ಜನರಿದ್ದಾರೆ. ಧರ್ಮವನ್ನು ‘ಹಿಂದೂ ರಿಲಿಜನ್‌’ ಆಗಿ ಪರಿವರ್ತಿಸುವ ಹೋರಾಟದ ಮುಂಚೂಣಿಯಲ್ಲಿ ಇರುವವರು ಹೆಚ್ಚಾಗಿ ಈ ವರ್ಗಕ್ಕೆ ಸೇರಿದವರು.

ಕಾರಣಗಳು ಏನೇ ಆಗಿರಲಿ, ಒಂದು ಪಂಗಡದ ಜನ ಆ ತರಹ ಯೋಚಿಸುವುದು ಮತ್ತು ಅದರ ಪ್ರತಿಪಾದನೆಗಾಗಿ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಹಂತಗಳಲ್ಲಿ ಹಮ್ಮಿಕೊಳ್ಳುವ ಹೋರಾಟಕ್ಕೆ ವ್ಯಕ್ತವಾಗುವ ಬೆಂಬಲವನ್ನು ಗಣನೆಗೆ ತೆಗೆದುಕೊಳ್ಳದಿರಲಾಗುವುದಿಲ್ಲ. ಅದೊಂದು ರೀತಿಯಲ್ಲಿ ಹೊಸ ಬೆಳವಣಿಗೆ.

ಕ್ರಿಶ್ಚಿಯನ್‌ ರಿಲಿಜನ್ ಅನ್ನು ಧರ್ಮವಾಗಿ ಪರಿವರ್ತಿಸಿ ಅದರಲ್ಲಿ ತಮ್ಮತನ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅವರು ತಲ್ಲೀನರಾಗಿದ್ದಾರೆ. ವ್ಯತಿರಿಕ್ತವಾಗುವ ಭಾರತದ ಒಂದು ವರ್ಗದ ಜನ ವಿಶಾಲವಾದ ಹಿಂದೂ ಧಾರ್ಮಿಕ ಪರಂಪರೆಯನ್ನು ರಿಲಿಜನ್‌ ವ್ಯಾಪ್ತಿಗೆ ಸೀಮಿತಗೊಳಿಸುವ ದರ್ದಿನಲ್ಲಿ ನಿರತರಾಗಿರುವುದು ಕಾಲಕ್ಕೆ ಸಲ್ಲದ ಅಥವಾ ಪರವಾದ ಬೆಳವಣಿಗೆಯಾಗಿರಬಹುದೇ? ‘ಧರ್ಮವನ್ನು ಹಿಂದೂ ರಿಲಿಜನ್‌’ ಆಗಿ ಪರಿವರ್ತಿಸಲು ಹೊರಟಿರುವ ಪ್ರಯೋಗಗಳಿಗೆ ಕಾಲದ ಲೆಕ್ಕದ ಪುಸ್ತಕದಲ್ಲಿ ಅವಕಾಶ ಇದೆಯೆ? ಆ ಜನ ಏಕಕಾಲದಲ್ಲಿ ಕ್ರಿಶ್ಚಿಯನ್‌ ಮತ್ತು ಇಸ್ಲಾಂ ರಿಲಿಜನ್‌ ರೂಪದಲ್ಲಿ ಎದುರಾಗಿರುವ ಅನ್ಯ ಪ್ರಭಾವಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಮಾತ್ರವಲ್ಲ, ತಮ್ಮದೇ ಚರಿತ್ರೆ ವಿರುದ್ಧ ಸಹ ಹೋರಾಟ ನಡೆಸುತ್ತಿದ್ದಾರೆ. ಆ ಬಿಕ್ಕಟ್ಟು ಭಾರತಕ್ಕೆ ಮಾತ್ರ ವಿಶೇಷವಾದುದೇನಲ್ಲ.[4] ಮಾನವ ಜನಾಂಗದ ಪಯಣದ ಹಾದಿಯಲ್ಲಿ ಬಹಳ ಹಿಂದೆ ಒಂದಲ್ಲ ಒಂದು ರೀತಿ ಅತ್ಯಂತ ಪ್ರಮುಖ ಪಾತ್ರ ವಹಿಸಿರುವ ಈಜಿಪ್ತ್‌, ಇರಾನ್‌, ಇರಾಕ್‌, ಅಫ್ಥಾನಿಸ್ತಾನ ಮೊದಲಾದ ದೇಶಗಳಿಗೂ ಸಾಮಾನ್ಯವಾದುದು. ಆ ಒಂದೊಂದು ದೇಶವೂ ಎದುರಿಸುತ್ತಿರುವ ಸಮಸ್ಯೆ, ಬಿಕ್ಕಟ್ಟು ಮತ್ತು ತಳಮಳದ ಹಿನ್ನೆಲೆಯಲ್ಲಿ ಬಹಳ ಅಂತರ ಮತ್ತು ವ್ಯತ್ಯಾಸ ಇದ್ದಿರಬಹುದು; ಆದರೆ ಅವುಗಳ ಆಸ್ಫೋಟನೆಯ ಮೂಲ ಮಾತ್ರ ಒಂದೇ ಆಗಿರುವಂತೆ ತೋರದಿರುವುದಿಲ್ಲ.

ಸುದೀರ್ಘ ಇತಿಹಾಸ ಪಡೆದಿರುವ ಇರಾನ್‌ – ಇರಾಕ್, ಈಜಿಪ್ತ್‌ ಮತ್ತು ಭಾರತ ಮೊದಲಾದ ದೇಶಗಳಿಗೆ ಸಾಧ್ಯವಾಗದ ಆಂತರಿಕ ಹೊಂದಾಣಿಕೆ ಯುರೋಪಿಗೆ ಸಾಧ್ಯವಾದುದಾದರೂ ಹೇಗೆ? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ರೋಮನ್‌ ಸಾಮ್ರಾಜ್ಯ ಕುಸಿದುಹೋದ ನಂತರ ಶತಮಾನಗಳ ಕಾಲ ಅನೇಕಾನೇಕ ತರಹದ ಆಂತರಿಕ ಕ್ಷೋಭೆ ಮತ್ತು ಬಾಹ್ಯ ಸಂಘರ್ಷದಲ್ಲಿ ನಿರತರಾಗಿದ್ದ ಯುರೋಪ್‌ ಮೂಲದ ಜನ, ಅಳಿವು – ಉಳಿವಿನ ಹಂತ ಮುಟ್ಟಿದ ಇಸ್ಲಾಂ ಜತೆಗಿನ ಸಂಘರ್ಷ; ಪೇಗನ್‌ ಪರಂಪರೆಯನ್ನು ಕ್ರಿಶ್ಚಿಯನ್‌ ರಿಲಿಜನ್‌ ಹಿನ್ನೆಲೆಯಲ್ಲಿ ಮತ್ತೆ ಕಂಡುಕೊಳ್ಳಬೇಕಾದ ತುಮುಲ ಮತ್ತು ವಿಜ್ಞಾನ ಯುಗದ ಆರಂಭ ತಂದ ತಲ್ಲಣ ಮೊದಲಾದವುಗಳನ್ನು ಒಂದಾದ ಮೇಲೊಂದರಂತೆ ಎದುರಿಸುತ್ತಲೇ ಪ್ರಮುಖ ಅಡ್ಡಿಯಾಗಬಹುದಾಗಿದ್ದ ಆ ಅಡಚಣೆಗಳನ್ನು ಪ್ರಗತಿಗೆ ಪೂರಕವಾಗಿ ಮಾರ್ಪಡಿಸಿಕೊಳ್ಳುವ ಹಾದಿಯಲ್ಲಿ ಅವರೀಗ ಸಾಗುತ್ತಿದ್ದಾರೆ. ಕ್ರಿಶ್ಚಿಯನ್‌ ರಿಲಿಜನ್ನಿಗೆ ಜನರನ್ನು ಮತಾಂತರಗೊಳಿಸುವ ಯತ್ನಗಳು ನಿಂತಿಲ್ಲವಾದರೂ, ಪ್ರತ್ಯಕ್ಷ ಮತಾಂತರಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಮತ್ತೊಂದು ಪ್ರಬಲ ಅಸ್ತ್ರ ಅವರ ಕೈಗೆ ದಕ್ಕಿದೆ: ಅದನ್ನು ಮತಾಂತರ – ಸಮಾನ – ಪರಿವರ್ತನೆ ಎಂದು ತಾತ್ಕಾಲಿಕವಾಗಿ ಕರೆಯಬಹುದಾಗಿದೆ.

ತಂತ್ರಜ್ಞಾನ ಆಧಾರಿತ ಪಾರಮ್ಯದ ಜೊತೆಗೆ, ತಮಗೊದಗಿ ಬಂದಿರುವ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಇತ್ಯಾದಿ ಹಲವಾರು ತರಹದ ಹಿರಿಮೆಯನ್ನು ಬಳಸಿಕೊಂಡು ಇಡೀ ಜಗತ್ತನ್ನು ತಮ್ಮ ಪ್ರಭಾವ ವಲಯದ ವ್ಯಾಪ್ತಿಗೆ ತಂದುಕೊಳ್ಳುವ ಸಾಧ್ಯತೆ ಅವರಿಗೆ ಸಾಧ್ಯವಾದುದೆದಾಂತೆಯ ಆಗಮನದ ನಂತರ. ಹಿಂದಿನ ಪೇಗನ್‌ ಧರ್ಮದ ಪ್ರಮುಖ ಅಂಶಗಳನ್ನು ಕ್ರಿಶ್ಚಿಯನ್‌ ಚೌಕಟ್ಟಿನಲ್ಲಿ ಅರ್ಥೈಸಿಕೊಳ್ಳುವುದನ್ನು ಕಲಿತ ಅವರಿಗೆ, ಇತರ ರಿಲಿಜನ್‌ ಅಥವಾ ಸಮಾಜಗಳ ಉತ್ತಮ ಅಂಶಗಳನ್ನು ಅದೇ ತರಹವೆ ಅಪ್ಪಿಕೊಳ್ಳುವ ಇಲ್ಲವೇ ಸಸಾರವಾಗಿ ಸ್ವೀಕರಿಸುವ ವಿಶಾಲ ಮನಃಸ್ಥಿತಿ ಬಂದು ಹೋಗಿದೆ.

ರಿಲಿಜನ್ನಿಗೆ ಸಂವಾದಿಯಾಗಿ ‘ಧರ್ಮ’ ಎಂಬ ಬಹಳ ವಿಶಾಲ ಅರ್ಥದ ಪರಿಕಲಪನೆಯನ್ನು ಬಳಸುವುದು ಸಾಮಾನ್ಯ; ಧರ್ಮ ಎಂಬ ಪದವನ್ನು ಬೇರಾವುದೇ ಭಾಷೆಗೂ ಅನುವಾದಿಸಲು ಬರುವುದಿಲ್ಲವಾದಂತೆ, ರಿಲಿಜನ್‌ ಕೂಡ ಅನುವಾದವನ್ನು ನಿರಾಕರಿಸುತ್ತದೆ. ರಿಲಿಜನ್ನಿನಲ್ಲಿ ಧರ್ಮದ ಅಂಶಗಳು ಇರುತ್ತವಾದರೂ ಯಾವುದೇ ಸ್ಥಾಪಿತ ರಿಲಿಜನ್‌ ಪೂರ್ಣ ಪ್ರಮಾಣದ ಅರ್ಥದಲ್ಲಿ ಧರ್ಮವಲ್ಲ. ಅದೇ ತರಹ ಧರ್ಮದಲ್ಲೂ ರಿಲಿಜನ್ನಿಗೆ ಸಾಮಾನ್ಯವಾದ ಕೆಲ ಅಂಶಗಳನ್ನು ಗುರುತಿಸಬಹುದಾದರೂ ಅದರ ವ್ಯಾಪ್ತಿ ಮತ್ತು ವೈಶಾಲ್ಯತೆ ರಿಲಿಜನ್ನುಗಳ ಗ್ರಹಿಕೆಗೂ ಮೀರಿದ್ದಾಗಿರುತ್ತದೆ. ಆದರೆ ಧರ್ಮವು ರಿಲಿಜನ್‌ ಆಗುವುದು ಕಷ್ಟಸಾಧ್ಯವಾದಂತೆ, ರಿಲಿಜನ್‌ನ್ನು ಧರ್ಮವಾಗಿಸುವ ಹಾದಿಯಲ್ಲಿ ಮುನ್ನಡೆಸಬಹುದಾಗಿದೆ ಎಂಬುದಕ್ಕೆ ಭಾರತಧರ್ಮ ಮತ್ತು ಕ್ರಿಶ್ಚಿಯನ್ನ ರಿಲಿಜನ್‌ ಎದುರಿಸುತ್ತಿರುವ ಬಿಕ್ಕಟ್ಟನ್ನು ಕ್ರಮವಾಗಿ ಉದಾಹರಣೆ ತೆಗೆದುಕೊಳ್ಳಬಹುದಾಗಿದೆ.

ಬದುಕಿನ ಮಾರ್ಗವಾದ ಧರ್ಮವು ಮನೋಧರ್ಮ ಮತ್ತು ಮನೋಭಾವವೂ ಹೌದು: ರಿಲಿಜನ್ನಿಗೆ ಸಹಜವಾದ ಕೆಲ ಆಚಾರಣೆ ಹಾಗೂ ವಿಧಿವಿಧಾನಗಳು ಧರ್ಮದಲ್ಲಿ ಇರುತ್ತವಾದರೂ ಅವುಗಳನ್ನು ಆಚರಿಸದೆಯೂ ಪ್ರಕೃತಿಗೆ ಹತ್ತಿರವಾಗಿ ಬದುಕಲು ಅವಕಾಶ ಕಲ್ಪಿಸುವುದು ಧರ್ಮದ ನಿಜವಾದ ವೈಶಿಷ್ಟ್ಯ. ಧರ್ಮ ಯಾರೂ ಸ್ಥಾಪನೆ ಮಾಡಿದ್ದಲ್ಲ, ಕಾಲಾಂತರದಲ್ಲಿ ಸದ್ದಿಲ್ಲದೆ ಬೆಳವಣಿಗೆಯಾಗಿ ಬಂದ ಅದರ ವ್ಯಾಪ್ತಿ ಹಿರಿದಾಗುವಲ್ಲಿ ಅಸಂಖ್ಯಾತ ಮನಸ್ಸುಗಳು ಮತ್ತು ಅನುಭಾವಗಳು ಪಾಲುಗೊಂಡಿರುತ್ತವಾದರೂ, ಸಾಮೂಹಿಕ ಬದುಕಿನಲ್ಲಿ ಜನರೇ ಕಂಡುಕೊಂಡ ಧರ್ಮವು ಅವರ ಸಂಸ್ಕೃತಿ ಮತ್ತು ನಾಗರಿಕತೆಯ ಮನಸ್ಸು ಬೆಳವಣಿಗೆಯಾಗುತ್ತಾ ಸಾಗಿದಂತೆಲ್ಲ ಬೆಳವಣಿಗೆಯಾಗುತ್ತಲೇ ಬಂದಿರುತ್ತದೆ. ಅದರಲ್ಲಿ ಪಾಲುಗೊಂಡ ಅನೇಕರ ಹೆಸರು ಮತ್ತು ಅವರು ನೀಡಿದ ಅನುಭಾವಗಳ ಅನುಭವದ ಕೊಡುಗೆ ನಂತರದ ವರ್ಷಗಳಲ್ಲಿ ದಾಖಲಾಗಿ ಉಳಿದರೂ, ಅದು ಅಷ್ಟು ಪ್ರಮುಖವಾಗುವುದೂ ಇಲ್ಲ, ಅಪ್ರಮುಖವಾಗುವುದೂ ಇಲ್ಲ. ಹಾಗಾಗಿ ಧರ್ಮದ ಬೆಳವಣಿಗೆಗೆ ಎಲ್ಲೆಗಳ ಮಿತಿ ಇರುವುದಿಲ್ಲ – ಮನುಷ್ಯರ ಮನಸ್ಸಿನ ಸಮಾಜದ ಮಿತಿ ಹೊರತು.

ರಿಲಿಜನ್ನಿನ ಮುಖ್ಯ ಲಕ್ಷಣ, ದೈವಪ್ರತಿನಿಧಿಗಳು ಅಥವಾ ಪ್ರವಾದಿಗಳಿಂದ ಸ್ಥಾಪಿತವಾಗಿರುವುದು. ಮುಂದೆ ಬಂದ ಅನುಯಾಯಿಗಳು ಅದನ್ನು ಕಟ್ಟಿ ವಿಸ್ತರಿಸುವುದು ಅದರ ಮತ್ತೊಂದು ಗುಣ. ದೈವಪ್ರತಿನಿಧಿ ಅಥವಾ ಪ್ರವಾದಿಗಳಾದವರು ದೇವರಿಂದ ನೇರವಾಗಿ ಆಜ್ಞಾಪಿತ ಇಲ್ಲವೇ ನಿರ್ದೇಶಿತರಾಗಿರುತ್ತಾರೆ ಎಂಬ ನಂಬಿಕೆ ಬಹಳ ಮುಖ್ಯ ಮತ್ತು ಯಾವುದೇ ರಿಲಿಜನ್ನಿನ ಪ್ರಮುಖ ಆಧಾರಸ್ತಂಭವೇ ಅದು. ಒಂದು ಪ್ರಮಾಣಗ್ರಂಥ ಇರುವಂತೆ ಕೇಂದ್ರೀಕೃತ ಅಥವಾ ಪ್ರಮಾಣೀಕೃತವಾದ ಪೂಜಾ ವ್ಯವಸ್ಥೆ ಅದರಲ್ಲಿ ಇದ್ದೇ ಇರುತ್ತದೆ. ಅವುಗಳನ್ನು ಪ್ರಶ್ನಿಸುವ ಇಲ್ಲವೆ ಉಲ್ಲಂಘಿಸುವ ಮನೋಭಾವ ಬೆಳೆಸಿಕೊಂಡವರು ಆ ರಿಲಿಜನ್ನಿನಲ್ಲಿ ನಂಬಿಕೆ ಕಳೆದುಕೊಂಡಂತೆಯೇ ಸರಿ. ಆ ತರಹದ ಹಲವಾರು ಕೇಂದ್ರೀಕೃತ ನಿಯಂತ್ರಣ ಗುಣಗಳಿಂದಾಗಿ ಬಹಿಷ್ಕಾರ ಮನೋಭಾವ ರಿಲಿಜನ್ನಿನ ಅತ್ಯಂತ ಪ್ರಮುಖ ಚಾಟಿಯಾಗಿ ಕಾರ್ಯನಿರ್ವಹಿಸುತ್ತಿರುತ್ತದೆ. ಪ್ರವಾದಿಗಳು ಹೇಳಿದ್ದನ್ನು ಅದರ ವಕ್ತಾರರು ವ್ಯಾಖ್ಯಾನಿಸಿದ ರೀತಿಯಲ್ಲಿ ಬದುಕು ಸಾಗಿಸುವುದು ರಿಲಿಜನ್ನುಗಳಿಗೆ ಬಹುಮುಖ್ಯವಾಗುತ್ತದೆ. ಅದೇ ಅಂತಿಮ.

ಯಾವುದೇ ತರಹದ ಕೇಂದ್ರೀಕೃತ ವ್ಯವಸ್ಥೆ ಇಲ್ಲದ ಧರ್ಮದಲ್ಲಿ ಪ್ರಮಾಣಗ್ರಂಥ ಎಂಬುದು ಮೊದಲೇ ಇರುವುದಿಲ್ಲ. ಹಾಗಾಗಿ ಪ್ರವಾದಿಗಳ ಕಲ್ಪನೆಯೇ ಅದಕ್ಕೆ ಅನ್ಯವಾದುದು ಎಂದ ಮೇಲೆ ಮತಾಂಧತೆ, ಬಹಿಷ್ಕಾರ, ನಿಷೇಧ ಮೊದಲಾದವುಗಳ ಉಗ್ರತ್ವ ಅಥವಾ ಕಾಠಿಣ್ಯ ಧರ್ಮಕ್ಕೆ ಬರುವುದು ಕಷ್ಟಸಾಧ್ಯ. ಅವನತಿಸೂಚಕವಾದ ಕೆಲ ಕಾರಣಗಳಿಂದಾಗಿ ಬಂದರೂ ಅವುಗಳು ಧರ್ಮದ ಪ್ರಧಾನ ಲಕ್ಷಣಗಳಾಗುವ ಸಾಧ್ಯತೆ ಬಹಳ ಕಡಿಮೆ. ಪ್ರತಿಯೊಬ್ಬರೂ ತಮ್ಮದೇ ರೀತಿ ತಮ್ಮದೇ ಆದ ಸತ್ಯಾನ್ವೇಷಣೆಯ ಮಾರ್ಗದಲ್ಲಿ ಸಾಗಬಹುದಾಗಿದ್ದು, ಅಂಥ ಬೆಳವಣಿಗೆಗೆ ಬೇಕಾದ ಇಂಬು ನೀಡುವುದು ಧರ್ಮದ ಲಕ್ಷಣ. ಪ್ರತಿಯೊಬ್ಬ ಸಾಮಾನ್ಯ ಮನುಷ್ಯನೂ ತನ್ನನ್ನು ತಾನು ಸ್ವಯಂಭೂವಾಗಿ ಕಂಡುಕೊಳ್ಳುವ ಅವಕಾಶ ಇರುವುದು ಧರ್ಮದಲ್ಲಿ ಮಾತ್ರ. ಧರ್ಮ ಎಂಬುದು ಹಲವಾರು ದೃಷ್ಟಿಕೋನ, ಪಂಥ, ಮನೋಧರ್ಮ, ಮನೋಭಾವ ಮತ್ತು ಪಂಗಡಗಳ ದೊಡ್ಡ ಸಮೂಹವಾಗಿರುತ್ತದೆ. ಧರ್ಮವನ್ನು ಖಂಡಿಸಿಯೂ ಮತ್ತು ಅದರ ಕೆಲವೊಂದು ಚಹರೆಗಳನ್ನು ತಿರಸ್ಕರಿಸಿಯೂ ಧರ್ಮೀಯವಾಗಿ ಉಳಿಯುವ ಅವಕಾಶ ಇರುವುದು ಧರ್ಮದಲ್ಲಿ ಮಾತ್ರ. ಧರ್ಮ ಎನ್ನುವುದು ನಿಜವಾದ ಅರ್ಥದಲ್ಲಿ ವಿಶ್ವಧರ್ಮವಾದರೂ ಇಡೀ ವಿಶ್ವವನ್ನೇ ತನ್ನ ವ್ಯಾಪ್ತಿಗೆ ಒಳಗುಮಾಡಿಕೊಳ್ಳಬೇಕು ಮತ್ತು ಉಳಿದೆಲ್ಲರನ್ನೂ ತನ್ನ ಆ ಪ್ರಭಾವ ವಲಯದ ಒಳಕ್ಕೆ ತಂದುಕೊಳ್ಳಬೇಕು ಎಂಬ ಉತ್ಕಟ ಆಕಾಂಕ್ಷೆ ಕೂಡ ಇರುವುದಿಲ್ಲ. ಅರಿವು ಮೂಡಿದಂತೆಲ್ಲ ಧರ್ಮ ಬೆಳೆಯುತ್ತದೆ ಮತ್ತು ಅನುಭವ ಪ್ರಮಾಣ ಹೆಚ್ಚಾದಂತೆ ಜನ ತಾವಾಗಿಯೆ ಧರ್ಮದ ಹಾದಿಯಲ್ಲಿ ಸಾಗಬಯಸುತ್ತಾರೆ ಎಂಬ ವಿಶಾಲ ಉದಾರ ಮನೋಭಾವ ಅದಕ್ಕೆ ಕಾರಣವಾಗಿದ್ದಿರಬಹುದು.

ಆ ಅರ್ಥದಲ್ಲಿ ಈ ಜಗತ್ತಿನಲ್ಲಿ ಇರುವುದು ಎರಡೇ ರಿಲಿಜನ್ನುಗಳು : ಒಂದು ಕ್ರಿಶ್ಚಿಯನ್‌, ಮತ್ತೊಂದು ಇಸ್ಲಾಂ. ಆದರೆ ಕೆಲ ಆಂತರಿಕ ಮತ್ತು ಬಾಹ್ಯ ಬದಲಾವಣೆಗಳ ಒತ್ತಡ ಮತ್ತು ಆಸ್ಫೋಟಗಳ ಕಾರಣಗಳಿಂದಾಗಿ ಕ್ರಿಶ್ಚಿಯನ್‌ ರಿಲಿಜನ್‌, ಅದನ್ನು. ಕಟ್ಟಿ ಬೆಳೆಸಿದವರು ಹಾರೈಸಿದಂತೆ ನಿಜವಾದ ಅರ್ಥದಲ್ಲಿ ಕ್ಯಾಥೊಲಿಕ್‌ ವಿಶ್ವಸಾಮಾನ್ಯ – ಆಗುವ ಹಾದಿಯಲ್ಲಿ ಸಾಗುವುದು ಅನಿವಾರ್ಯವಾಗಿದ್ದು, ವಿಶ್ವಧರ್ಮದ ಅನೇಕ ಗುಣಲಕ್ಷಣ ಮತ್ತು ಕ್ರಿಶ್ಚಿಯನ್‌ ರಿಲಿಜನ್‌ ಎದುರಿಸುತ್ತಿರುವ ಪರಿಸ್ಥಿತಿ ಅನೇಕ ಅಂಶಗಳಲ್ಲಿ ಬಹಳ ಹೊಂದಿಕೊಳ್ಳುತ್ತವೆ. ಬ್ರಿಟನ್‌ ಮೂಲದ ಜನರ ಆಡುಭಾಷೆಯಾದ ಇಂಗ್ಲಿಷ್‌ ಇಂದು ಅದರ ಪ್ರಭಾವದ ವ್ಯಾಪ್ತಿಯಲ್ಲಿ ಬಂದ ಅನೇಕ ರಾಷ್ಟ್ರಗಳ ವ್ಯಾವಹಾರಿಕ ಭಾಷೆಯೂ ಹೌದು. ಆ ಇಂಗ್ಲಿಷನ್ನು ತಮ್ಮ ಮಾತೃಭಾಷೆಯನ್ನಾಗಿ ಉಳಸಿಕೊಂಡು ಅದರ ಅನನ್ಯತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿರುವಂತೆಯೇ, ಜಗತ್ತಿನ ಪ್ರಮುಖ ಸಂಪರ್ಕ ಭಾಷೆಯಾಗಿ ಬೆಳೆಸುವ ಐತಿಹಾಸಿಕ ತುರ್ತಿಗೂ ಅವರು ಒಳಗಾಗಿದ್ದಾರೆ. ಅದೇ ತರಹವೆ ಕ್ರಿಶ್ಚಿಯನ್‌ ರಿಲಿಜನ್‌ ಇಂದು ಯುರೋಪ್‌ ಮೂಲದ ಜನರ ರಿಲಿಜನ್‌ ಕೂಡ ಹೌದು ಮತ್ತು ಅವರ ಪ್ರಭಾವ ವಲಯದ ವ್ಯಾಪ್ತಿಗೆ ಬಂದ ಅನೇಕ ರಾಷ್ಟ್ರಗಳ ಮತ್ತು ಸಮಾಜಗಳ ಸಂಸ್ಕೃತಿ ಮತ್ತು ನಾಗರಿಕತೆಯೂ ಹೌದು. ವಿಸ್ವಮಟ್ಟದಲ್ಲಿ ಸಂಪರ್ಕ ಭಾಷೆಯಾಗಿ ಬೆಳೆಯುವ ತುರ್ತಿಗೆ ಒಳಗಾಗಿರುವ ಇಂಗ್ಲಿಷ್‌, ಅನೇಕ ರೀತಿಯಲ್ಲಿ ಬದಲಾವಣೆಗೆ ಒಳಗಾಗಬೇಕಾದಂತೆ, ಯುರೋಪ್ ಮೂಲದ ಜನರ ಸಾಂಸ್ಕೃತಿಕ ಮತ್ತು ನಾಗರಿಕತೆಯ ಪ್ರಭಾವವಲಯ ವಿಶ್ವಮಟ್ಟದಲ್ಲಿ ವಿಸ್ತಾರಗೊಳ್ಳುತ್ತ ಸಾಗಿದಂತೆ ಅದರ ಹಿಂದಿನ ಚೇತನ ಶಕ್ತಿ ಮತ್ತು ತಳಹದಿಯಾದ ಕ್ರಿಶ್ಚಿಯನ್ ರಿಲಿಜನ್‌ ಸಹ ಬದಲಾಗಬೇಕಾಗಿ ಬಂದಿರುವುದು ಸಹಜ ಬೆಳವಣಿಗೆಯಾಗಿದೆ. ವಿಶ್ವಮಾನ್ಯ ಭಾಷೆಯಾಗುವ ಹಾದಿಯಲ್ಲಿ ಇಂಗ್ಲಿಷ್‌ ಸಾಗುತ್ತಿರುವಂತೆಯೇ, ಕ್ರಿಶ್ಚಿಯನ್‌ ರಿಲಿಜನ್‌ ಕೂಡ ವಿಶ್ವ ರಿಲಿಜನ್‌ ಆಗಬೇಕಾಗಿ ಬಂದಿರುವುದು ಆ ಬೆಳವಣಿಗೆಯ ಮತ್ತೊಂದು ಮುಖ. ಇಂಗ್ಲಿಷ್‌ ಅಥವಾ ಫ್ರೆಂಚ್‌ ಭಾಷೆಯ ಪ್ರಭಾವಕ್ಕೆ ಒಳಗಾಗುವುದರ ಮೂಲಕ ಜಗತ್ತಿನ ಬಹುತೇಕ ಎಲ್ಲ ಭಾಷೆಗಳೂ ಅವುಗಳ ಮೂಲ ಹಿನ್ನೆಲೆಯಾದ ಗ್ರೀಕ್ ಮತ್ತು ಲ್ಯಾಟಿನ್‌ ಭಾಷೆಗಳ ಅಂಗರಚನೆಗೆ ತಮ್ಮನ್ನು ತಾವು ಸ್ವಲ್ಪ ಪ್ರಮಾಣದಲ್ಲಿಯಾದರೂ ಹೊಂದಿಸಿಕೊಳ್ಳಬೇಕಾಗಿ ಬಂದಂತೆ, ಯುರೋಪ್‌ ಮೂಲದ ನಾಗರಿಕತೆ ಮತ್ತು ಸಂಸ್ಕೃತಿಯ ಪ್ರಭಾವವನ್ನು ತಮಗೆ ಸೂಕ್ತ ಕಂಡ ರೀತಿಯಲ್ಲಿ ಅನುಸರಿಸುವುದರ ಮೂಲಕ ಅದರ ಹಿಂದಿನ ಚಲನಶೀಲ ಶಕ್ತಿಯಾದ ಕ್ರಿಶ್ಚಿಯನ್ನೀಕರಣಕ್ಕೆ ಪರೋಕ್ಷವಾಗಿಯಾದರೂ ತುತ್ತಾಗಬೇಕಾಗಿ ಬಂದಿರುವುದು ಏಷ್ಯಾ ಆಫ್ರಿಕಾ ಖಂಡದ ಬಹುತೇಕ ರಾಷ್ಟ್ರ ಮತ್ತು ಜನಾಂಗಗಳಿಗೆ ಸಮಾನವಾದ ಬೆಳವಣಿಗೆ.[5] ಕ್ರಿಶ್ಚಿಯನ್ನೀಕರಣ ಎಂದರೆ ಬಹಳ ತೆಳುವಾದ ಅರ್ಥದಲ್ಲಿಯಾದರೂ ಗ್ರೀಕ್‌ – ಲ್ಯಾಟಿನ್‌ ಮೂಲದ ಪೇಗನ್‌ ಸಂಸ್ಕೃತೀಕರಣ ಎಂದರ್ಥ.

ವಿಶ್ವಸಂಪರ್ಕ ಭಾಷೆಯಾದ ಇಂಗ್ಲಿಷ್‌, ಬ್ರಿಟನ್‌ ಮೂಲದ ಜನರ ಆಡುಭಾಷೆಯಾಗಿಯೂ ಉಳಿಯಬೇಕಾಗಿರುವಂತೆಯೇ, ವಿಶ್ವಸಂಸ್ಕೃತಿಯಾಗಿ ವಿಸ್ತರಿಸುತ್ತಿರುವ ಕ್ರಿಶಚಿಯನ್‌ ರಿಲಿಜನ್‌, ಪಾಶ್ಚಿಮಾತ್ಯದ – ರಿಲಿಜನ್‌ ಆಗಿಯೂ ಉಳಿಯಬೇಕಾದ ವಿಚಿತ್ರ ಎದುರಿಸುತ್ತಿದೆ. ಹಾಗಾಗಿ ಇಂದು ರಿಲಿಜನ್‌ ಆಗಿ ಉಳಿದಿರುವುದು ಇಸ್ಲಾಂ ಮಾತ್ರ, ಆದರೆ ಉಳಿಯಲು ಸಾಧ್ಯವಾಗುತ್ತಿಲ್ಲ; ಇಸ್ಲಾಂ ಮತ್ತು ಇಸ್ಲಾಮೇತರ ರಾಷ್ಟ್ರಗಳಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಬಿಕ್ಕಟ್ಟಿನ ಮೂಲ ಅದಾಗಿರುವಂತೆ ತೋರುತ್ತದೆ. ಆ ರೀತಿಯ ಬೆಳವಣಿಗೆಗಳಿಗೆ ಪ್ರತಿಕ್ರಿಯೆ ಮತ್ತು ಐತಿಹಾಸಿಕ ಒತ್ತಡಗಳಿಂದಾಗಿ, ಹಿಂದೂಧರ್ಮದ ಕೆಲವೊಂದು ವರ್ಗ ಎದುರಿಸುತ್ತಿರುವ ತಳಮಳವನ್ನು ಅರ್ಥೈಸಬಹುದಾಗಿದೆ.

ಕ್ರಿಸ್ತ ಬರುವುದಕ್ಕೆ ಎಷ್ಟೋ ಶತಮಾನಗಳಿಗೂ ಮೊದಲು ರಿಲಿಜನ್ನಿಗೆ ಹತ್ತಿರ ಬರುವ ಆದರೆ ರಿಲಿಜನ್‌ ಅಲ್ಲದ ಮಧ್ಯಂತರ ಬೆಳವಣಿಗೆಯಾದ ನಾನ್‌ – ರಿಲಿಜನ್‌ಗಳನ್ನು ಸ್ಥಾಪಿಸಿದ ಬುದ್ಧ, ಕನ್‌ಫ್ಯೂಷಿಯಸ್‌ ಮತ್ತು ಲಾವೊತ್ಸೆ ಮೊದಲಾದವರು ಬಹಳ ವಿಶಾಲ ಅರ್ಥದಲ್ಲಿ ಒಂದೇ ತಲೆಮಾರಿಗೆ ಸೇರಿದವರು. ಆದರೆ ಜಾರತುಸ್ತ್ರ ಸ್ಥಾಪಿಸಿದ ನಾನ್‌ – ರಿಲಿಜನ್ನಿಗೂ ಜುಡಾಯಿ ಸಂಗೂ ಕೆಲ ಹೊಂದಾಣಿಕೆಗಳು ಇರುವಂತೆ ತೋರುತ್ತದೆ. ಬದಲಾವಣೆಗಳಿಗೆ ಅಷ್ಟಾಗಿ ಜಗ್ಗದೆ ಬಹುತೇಕ ಅಂದಿನ ರೂಪದಲ್ಲಿಯೆ ಉಳಿದುಬಂದಿರುವ ಯಾವುದಾದರೂ ಮತ ಪರಂಪರೆಗಳು ಇರುವುದಾದಲ್ಲಿ, ಆ ಕೀರ್ತಿ ಜಾರತುಸ್ತ್ರವಾದ ಮತ್ತು ಯಹೂದಿವಾದಗಳಿಗೆ ಸಲ್ಲಬೇಕು.

ಬುದ್ಧ, ಕನ್‌ಫ್ಯೂಷಿಯಸ್‌ ಅಥವಾ ಲಾವೊತ್ಸೆ ತಮ್ಮನ್ನು ತಾವು ದೇವರ ಪ್ರವಾದಿಗಳೆಂದು ಬಣ್ಣಸಿಕೊಂಡ ಉದಾಹರಣೆ ಇಲ್ಲ. ಅದರಲ್ಲೂ ಬುದ್ಧ ದೇವರ ಬಗ್ಗೆ ಮಾತನಾಡಿದ್ದಕ್ಕಿಂತ ಮೌನ ವಹಿಸಿದ್ದೇ ಹೆಚ್ಚು. ಉಪನಿಷದ್‌ ಪರಂಪರೆಯ ಋಷಿಯಾದ ಲಾವೊತ್ಸೆಗೆ ಆ ಅಗತ್ಯ ಎದುರಾಗಲಿಲ್ಲ. ಯಹೂದಿವಾದದ ಸ್ಥಾಪನೆಯಲ್ಲಿ ಹಲವಾರು ಪ್ರವಾದಿಗಳು ಮುಖ್ಯ ಪಾತ್ರ ವಹಿಸಿರುತ್ತಾರೆ. ಅವರ ಮುಂದಿನ ಹಂತವೆ ಕ್ರಿಸ್ತ ಮತ್ತು ಮಹಮ್ಮದ್‌. ಆ ಕೆಲವೊಂದು ಗುಣಲಕ್ಷಣಗಳನ್ನು ಜಾರತುಸ್ತ್ರನಲ್ಲಿಯೂ ಕಾಣಬಹುದಾಗಿದೆ. ಕ್ರಿಸ್ತನ ಆಗಮನಕ್ಕೆ ಮೊದಲು, ಬುದ್ಧ ಮತ್ತು ಪಶ್ಚಿಮ ಏಷ್ಯಾದ ಧಾರ್ಮಿಕ ಪರಂಪರೆಗಳ ನಡುವಿನ ಕೊಂಡಿ ಜಾರತುಸ್ತ್ರ ಆಗಿದ್ದಿರಬಹುದು. ಆದರೂ ಅವು ರಿಲಿಜನ್‌ ಆಗಲಿಲ್ಲ. ಆ ಹಿನ್ನೆಲೆಯಲ್ಲಿ ಬೆಳೆದು ಬಂದ ಕ್ರಿಶ್ಚಿಯನ್‌ ಮತ್ತು ಇಸ್ಲಾಂ ಮಾತ್ರ ರಿಲಿಜನ್‌ ರೂಪ ಪಡೆದುಕೊಂಡವು. ಜಗತ್ತಿನ ಅತಿ ದೊಡ್ಡ ರಿಲಿಜನ್‌ಗಳಾಗಿ ಬೆಳೆದುಕೊಂಡಿರುವ ಅವುಗಳ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಆ ಸಮಾನ ಹಿನ್ನೆಲೆಯೂ ಒಂದು ಕಾರಣ.

ಕುರಾನನ್ನು ಅದರ ಮೂಲದ ಅರಾಬಿಕ್‌ ಭಾಷೆಯಲ್ಲಿ ಹೊರತು ಉಳಿದ ಭಾಷೆಗಳಲ್ಲಿ ಪಠಿಸುವುದಕ್ಕೆ ಅಷ್ಟು ಮಹತ್ವವಿಲ್ಲ. ನಮಾಜ್‌ ಸಲ್ಲಿಸುವಾಗ ಕೂಡಾ ಮಕ್ಕಾ – ಮದೀನಾ ಕಡೆಗೆ ಮುಖ ಮಾಡಿ ನಿಲ್ಲಬೇಕು ಎಂಬ ನಿಬಂಧನೆ, ಇಸ್ಲಾಂ ಎಷ್ಟೊಂದು ಕೇಂದ್ರೀಕೃತ ರಿಲಿಜನ್‌ ಎಂಬುದರ ಪ್ರತೀಕ. ಆದರೆ ಕ್ರಿಶ್ಚಿಯನ್‌ ರಿಲಿಜನ್‌ಗಿರುವ ಕೇಂದ್ರೀಕೃತ ಸಂಘಟನಾತ್ಮಕ ವ್ಯವಸ್ಥೆ ಇಸ್ಲಾಂಗಿಲ್ಲ. ಇಸ್ಲಾಂ ಪಾಲಕರಿಗೆ ಮಹಮದ್‌ ಕೊನೆಯ ಪ್ರವಾದಿ. ಅದನ್ನು ಪ್ರಶ್ನಿಸುವುದು ಹೋಗಲಿ, ಪ್ರಶ್ನಾರ್ಹ ಎಂಬ ಭಾವನೆ ವ್ಯಕ್ತಪಡಿಸುವುದು ಕೂಡ ಸಹನೀಯವಾಗಿ ತೋರುವುದಿರಲಿ ನಿಂದನೆಯಾಗಿ ಮಾರ್ಪಡುವ ಅಪಾಯವಿದೆ.

ಕ್ರಿಶ್ಚಿಯನ್‌ ರಿಲಿಜನ್‌, ೮೮೨ ಪುಟಗಳಷ್ಟು ವಿಸ್ತಾರವಾದ ಹಳೆಯ ಒಡಂಬಡಿಕೆಯನ್ನು ಬೈಬಲ್ಲಿನ ಒಂದು ಭಾಗವಾಗಿ ಒಪ್ಪಿಕೊಂಡಿದ್ದು ಸಾಧಾರಣ ಸಂಗತಿ ಏನಲ್ಲ. ಬೈಬಲ್ಲಿನ ಮುಕ್ಕಾಲು ಭಾಗ ಹಳೆಯ ಒಡಂಬಡಿಕೆಯಿಂದ ತುಂಬಿದ್ದರೆ, ಕ್ರಿಸ್ತನಿಗೆ ಸಂಬಂಧಿಸಿದ ಹೊಸ ಒಡಂಬಡಿಕೆ ಅದರ ಕಾಲು ಭಾಗವೂ ಇಲ್ಲ, ಕೇವಲ ೨೭೦ ಪುಟಗಳು. ಕಿಂಗ್‌ ಜೇಮ್ಸ್‌ ಆವೃತ್ತಿ ಪ್ರಕಾರ ಅದರ ಪುಟಗಳ ಒಟ್ಟು ಸಂಖ್ಯೆ ೧೧೫೨. ಬೈಬಲ್‌ ಮೂಲ ಇರುವುದು ಕ್ರಿಸ್ತನ ಆಡು ಮಾತಾದ ಯಹೂದಿ ಭಾಷೆಯಲ್ಲಿ. ಬಹಳ ಹಿಂದೆಯೇ ಬೈಬಲನ್ನು ಗ್ರೀಕ್‌ ಮತ್ತು ಲ್ಯಾಟಿನ್‌ಗೆ ಭಾಷಾಂತರಿಸಲಾಯಿತಾದರೂ, ಆಧುನಿಕ ಯುರೋಪಿನ ಭಾಷೆಗಳಿಗೆ ಅನುವಾದಿಸುವ ಕಾಲಕ್ಕೆ ದೊಡ್ಡ ಸಂಘರ್ಷವೆ ನಡೆಯಿತು ಎಂಬುದು ಈಗ ಇತಿಹಾಸ; ಬೈಬಲ್‌ ಮೂಲ ಯಹೂದಿ ಎಂಬುದನ್ನು ಜನ ಅಷ್ಟರಲ್ಲಾಗಲೇ ಮರೆತಿದ್ದರು. ಅದಿರಲಿ, ಕ್ರಿಸ್ತನ ಬದುಕಿಗೆ ಸಂಬಂಧಿಸಿದ ಬೆತ್ಲೆಹಂ, ನಜರೇತ್‌, ಜರುಲೇಂ ಮೊದಲಾದವುಗಳಿಗೆ ಪವಿತ್ರ ಯಾತ್ರಾ ಮತ್ತು ಪುಣ್ಯ ಸ್ಥಳಗಳಿಗೆ ಬರುವ ಪುಣ್ಯಸ್ಥಳಗಳಿಗೆ ಬರುವ ಮಹತ್ವ ಬಂದಿದೆಯಾದರೂ, ಮಕ್ಕಾ – ಮದೀನಾಕ್ಕಿರುವ ಕಡ್ಡಾಯದ ಪಾವಿತ್ರ್ಯ ಇಲ್ಲ.

ಏಷ್ಯಾ ಮೂಲದ ಯಹೂದಿಗಳು ಆರಾಧಿಸುವ ಹಳೆಯ ಒಡಂಬಡಿಕೆಯನ್ನು ಬೈಬಲ್ಲಿನ ಒಂದು ಭಾಗವಾಗಿ ಸ್ವೀಕರಿಸಿವುದರ ಮೂಲಕ, ಕ್ರಿಶ್ಚಿಯನ್‌ ರಿಲಿಜನ್ನಿನ ಹಿಂದಿನ ಪರಂಪರೆಯನ್ನು ತಮ್ಮದೆಂದು ಒಪ್ಪಿಕೊಂಡ ಯುರೋಪ್‌ ಮೂಲದ ಕ್ರಿಶ್ಚಿಯನ್ನರು, ಅದೇ ಏಷ್ಯಾದ ಕೊಡುಗೆಯಾದ ಯೇಸುಕ್ರಿಸ್ತನನ್ನು ತಾವು ಸೇರಬಯಸುವ ದೇವರ ಪ್ರೀತಿಯ ವರಪುತ್ರನೆಂದು ನಂಬುವ ಮುಖೇನ, ಮತ್ತೊಂದು ಖಂಡಕ್ಕೆ ಸೇರಿದ ಜನಾಂಗದ ಕಾಣ್ಕೆ ಅಥವಾ ದರ್ಶನ ಪರಂಪರೆಯನ್ನು ತಮ್ಮದಾಗಿಸಿಕೊಂಡು ಅದರ ವಾರಸುದಾರರಾಗಿ ತಮ್ಮನ್ನು ತಾವು ಕಂಡುಕೊಂಡುದು ಇತಿಹಾಸ ಮರೆಯಲಾಗದ ಘಟನೆ. ಕ್ರಿಸ್ತ ಪ್ರತಿಪಾದಿಸುವ ಕ್ರಿಶ್ಚಿಯನ್‌ ರಿಲಿಜನ್‌ ಪರಂಪರೆಯನ್ನು ತಮ್ಮದಾಗಿಸಿಕೊಳ್ಳುವುದರ ಮುಖೇನ ಏಷ್ಯಾದ ಅನುಭಾವ ಮತ್ತು ದರ್ಶನ ಶ್ರೀಮಂತಿಕೆಯನ್ನೇ ತಮ್ಮದಾಗಿಸಿಕೊಂಡ ಅವರು, ಅದರ ಮುಂದಿನ ಹೆಜ್ಜೆಯಾಗಿ ತಮ್ಮದೇ ಆದ ಗ್ರೀಕ್‌ – ಲ್ಯಾಟಿನ್‌ ಪೇಗನ್‌ ಪರಂಪರೆಯನ್ನು ತಾವು ಹೊಸದಾಗಿ ಸ್ವೀಕರಿಸಿದ ಕ್ರಿಶ್ಚಿಯನ್‌ ರಿಲಿಜನ್ನಿನ ಚೌಕಟ್ಟಿನಲ್ಲಿ ಅರ್ಥೈಸಿಕೊಳ್ಳುವ ದರ್ದಿಗೆ ಒಳಗಾದುದು ಮತ್ತೊಂದು ಪ್ರಮುಖ ಹೆಜ್ಜೆ. ಅದಕ್ಕೆ ಸಿದ್ಧರಾಗಲು ಇಡೀ ಯುರೋಪಿನ ಸಂಸ್ಕೃತಿ ಹಲವಾರು ಶತಮಾನಗಳ ಕಾಲದಾಂತೆ ಬರುವವರೆಗೂ ಕಾಯಬೇಕಾಯಿತು.

‘ಹಳೆಯ ಒಡಂಬಡಿಕೆ’ ಹಾಗೂ ‘ಅವೆಸ್ತಾ’ ಪರಂಪರೆಯನ್ನು ಕುರಾನ್‌ನ ಒಂದು ಭಾಗ ಸ್ವೀಕರಿಸುವ ಐತಿಹಾಸಿಕ ಅವಕಾಶದಿಂದ ಮಹಮ್ಮದೀಯರು ವಂಚಿತರಾದಂತೆ, ಕ್ರಿಶ್ಚಿಯನ್, ಇಸ್ಲಾಂ ಇತ್ಯಾದಿ ರಿಲಿಜನ್ನುಗಳನ್ನು ತನ್ನ ಅನೇಕ ಪಂಥ ಮತ್ತು ಪಂಗಡಗಳಲ್ಲಿ ಕೆಲವಾಗಿ ಕಂಡುಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುವ ಹೊಸ್ತಿಲಲ್ಲಿ ‘ಭಾರತಧರ್ಮ’ ನಿಂತಿದೆ. ಕ್ರಿಶ್ಚಿಯನ್‌ ಮತ್ತು ಇಸ್ಲಾಂ ಪ್ರಭಾವ ಎದುರಿಸಲು ‘ಭಾರತಧರ್ಮ’ವನ್ನು ಅವುಗಳ ತರಹವೆ ಮತ್ತೊಂದು ರಿಲಿಜನ್‌ ಆಗಿ ರೂಪಾಂತರಿಸುವ ಪ್ರಕ್ರಿಯೆ ಭಾರತದಲ್ಲಿ ಕಾಣಿಸಿಕೊಳ್ಳಲು ಕಾರಣ ಏನಿರಬಹುದು? ಅದೇ ಪ್ರಶ್ನೆಯನ್ನು ಈ ತರಹ ಮಾರ್ಪಡಿಸಬಹುದಾಗಿದೆ: ಹಿಂದಿನ ಪರಂಪರೆಯನ್ನು ಸ್ವೀಕರಿಸಲು ಕ್ರಿಶ್ಚಿಯನ್ನರಿಗೆ ಸಾಧ್ಯವಾದಂತೆ ಮುಸ್ಲಿಮರಿಗೆ ಏಕೆ ಸಾಧ್ಯವಾಗಲಿಲ್ಲ? ತಡವಾಗಿಯಾದರೂ ಭಾರತ ತನ್ನದೊಂದು ರಿಲಿಜನ್‌ ಕಂಡುಕೊಳ್ಳುವ ಆ ಹಾದಿಯಲ್ಲಿ ಸಾಗುವುದು ಅನಿವಾರ್ಯವೆ? ಅದು ಸಾಧ್ಯವೇ?

ನಾಗರಿಕತೆ ಮತ್ತು ಸಂಸ್ಕೃತಿ ಎಂಬ ಪದ ಮತ್ತು ಪರಿಕಲ್ಪನೆಗಳು ಆ ಅರ್ಥದಲ್ಲಿ ಚಲಾವಣೆಗೆ ಬಂದುದೆ ಯುರೋಪ್‌ ಮೂಲದ ಜನರ ಪ್ರಭಾವದಿಂದ. ಅಲ್ಲಿಯವರೆಗೂ ಏಷ್ಯಾ ಮತ್ತು ಆಫ್ರಿಕಾದ ಜನರಿಗೆ ಸಂಸ್ಕೃತಿ ಮತ್ತು ನಾಗರಿಕತೆಯ ಗಂಧಗಾಳಿ ಇರಲಿಲ್ಲ ಎಂಬುದು ಆ ಮಾತಿನ ಅರ್ಥವಲ್ಲ. ತಾವು ಪಡೆದಿದ್ದ ಶ್ರೀಮಂತ ಸಂಸ್ಕೃತಿ ಮತ್ತು ನಾಗರಿಕತೆಯ ಪರಂಪರೆಯನ್ನು ಆ ಮಾತುಗಳಲ್ಲಿ ಗ್ರಹಿಸಿ ಮಾತನಾಡಲು ಕಲಿತದ್ದು ಆ ಮೂಲಕ ಅಷ್ಟೆ. ತಮ್ಮ ಹಿಂದಿನ ಪರಂಪರೆಯನ್ನು ಕ್ರಮವಾಗಿ ಸಂರಕ್ಷಿಸಿಕೊಂಡು ಶಿಸ್ತುಬದ್ಧವಾಗಿ ಅಧ್ಯಯನ ಮಾಡುವುದರ ಮೂಲಕ ಮುಂದುವರಿಸಿಕೊಂಡು ಹೋಗುವ ಕಲೆಗಾರಿಕೆ ಮತ್ತು ನೈಪುಣ್ಯವನ್ನು ಮೊದಲಿಗೆ ಕಲಿತವರು ಹಾಗೂ ಪುರಾತನ ಸಂಸ್ಕೃತಿಗಳು ಸಹ ಮಾತನಾಡುತ್ತವೆ ಎಂಬುದನ್ನು ಈ ಜಗತ್ತಿಗೆ ತೋರಿಸಿಕೊಟ್ಟವರೇ ಅವರಾಗಿರಬಹುದು. ಮೆಸಪೊಟೋಮಿಯಾ, ಈಜಿಪ್ತ್‌, ಸಿಂಧೂ ಕಂದರ, ಇಂಕಾ, ಮಾಯ ಅಥವಾ ಮತ್ತಾವುದೇ ಸಂಸ್ಕೃತಿ ಮತ್ತು ನಾಗರಿಕತೆಗಳ ಉತ್ಖನನ ನಡೆಸಿ ಕ್ರಮಬದ್ಧವಾಗಿ ಅಧ್ಯಯನ ನಡೆಸಿದವರಲ್ಲಿ ಯುರೋಪ್‌ ಮೂಲದ ಜನರೇ ಮೊದಲಿಗರಾಗಿ ಉಳಿದಿರುವುದು ಆ ದೃಷ್ಟಿಯಿಂದ ನೋಡಿದಾಗ ಅತ್ಯಂತ ಸಹಜವಾಗಿ ತೋರುತ್ತದೆ.

ಕವಿಗಳ ಕಾವ್ಯಕರ್ಮ ಕುರಿತಂತೆ ಟಿ. ಎಸ್‌. ಎಲಿಯಟ್‌ ಆಡುವ ಮಾತು ಹೆಚ್ಚಾಗಿ ಕಾವ್ಯ ಜಗತ್ತಿಗೆ ಸಂಬಂಧಿಸಿದ್ದಾದರೂ ಒಟ್ಟಾರೆ ಯುರೋಪ್‌ ಮೂಲದ ಜನ, ಪರಂಪರೆ ಮತ್ತು ಭವಿತವ್ಯದ ಬಗ್ಗೆ ತಳೆದ ಆರೋಗ್ಯಕರ ನಿಲುವನ್ನು ಕರಾರುವಕ್ಕಾಗಿ ಹಿಡಿದಿಡುತ್ತದೆ. ಸಂಸ್ಕೃತಿ ಮತ್ತು ಪರಂಪರೆಯು ಮುಂದಿನದನ್ನು ನಿರ್ದೇಶಿಸುತ್ತಲೇ ಅದನ್ನು ನಿಯಂತ್ರಿಸುವ ರೀತಿಯನ್ನು ಕಂಡುಕೊಂಡು ಕಾವ್ಯರಚನೆ ಮಾಡಿದವರ ಪೈಕಿ ಎಲಿಯಟ್‌ ಕೂಡ ಒಬ್ಬ. ಅದು ಆತನೊಬ್ಬನ ಅನುಭವವಲ್ಲ, ಯುರೋಪಿನ ಜನರ ಮನೋಧರ್ಮ ಮತ್ತು ಮನೋಭಾವದ ಪ್ರತೀಕವಾದ ಆ ಮಾತುಗಳು; ಯಾವುದನ್ನು ಅಲ್ಲಿನ ವಿಜ್ಞಾನಿಗಳು, ಕಲಾವಿದರು, ಕ್ರೀಡಾಪಟುಗಳು, ಕವಿಗಳು, ಸಾಹಿತಿಗಳು, ರಾಜಕಾರಣಿಗಳು ಸಹಿತವಾಗಿ ಮೊದಲಾದ ಅನೇಕ ವರ್ಗದ ಜನ ತಮ್ಮ ಸಾಧನೆಯ ಬದುಕಿನ ಜೀವನ ಧರ್ಮವನ್ನಾಗಿ ಸ್ವೀಕರಿಸಿದ್ದಾರೆಯೋ ಅದನ್ನು ಎಲಿಯಟ್‌ ತನ್ನ ‘ಟ್ರಡಿಷನ್‌ ಅಂಡ್‌ ದಿ ಇಂಡಿವಿಡ್ಯುಅಲ್‌ ಟ್ಯಾಲೆಂಟ್‌’ನಲ್ಲಿ ಈ ರೀತಿ ನಿರೂಪಿಸುತ್ತಾನೆ:

Tradition is a matter of much wider significance. It can not be inherited. And if you want it you must obtain it by great labour. It involves, in the first place, the historical sense, which we may call nearly indispensable to anyone who would continue to be a poet beyond his twenty – fifth year; and the historical sense involves a perception, not only of the pastness of the past, but of its presence; the historical sense compels a man to write not merely with his own generation in his bones, but with a feeling that the whole of the literature of Europe from Homer and within it the whole of the literature of his own country has a simultaneous existence and composes a simultaneous order. This historical sense, which is a sense of the timeless and of the well as of the temporal and of the timeless and of the temporal together, is what makes writer traditional. And it is at the same time what makes a writer most actuly conscious of his place in time, of his own contemporaneity.

 

[1]‘ಭರತೇಶ ವೈಭವ’ ಎಂಬ ಸಾಂಗತ್ಯ ನೀಡಿದ ದೇಶದ ಜನ ಯಾವ ರೀತಿಯಲ್ಲಿ ಕಡಿಮೆ!

[2]ಆ ಗ್ರೀಕರನ್ನು ರಾಜಕೀಯವಾಗಿ ಸದೆಬಡಿಯಲು ಅದೇ ರೋಮನ್ನರು ಅನುಸರಿಸಿದ ಬರ್ಬರ ವಿಧಾನ, ಬೇರೆ ಮಾತು.

[3]ಡಯಾನ ಪ್ರಕರಣವನ್ನು ಅವರು ನಿರ್ವಹಿಸಿದ ರೀತಿ ಮತ್ತು ಅಮೆರಿಕದ ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ವಿರುದ್ಧ ಮಾಡಲಾದ ಆರೋಪಗಳು ಪಡೆದುಕೊಂಡ ತಿರುವು, ಕೆಲ ಸಣ್ಣ ಉದಾಹರಣೆಗಳು.

[4]ಒಂದು ವಿಚಾರದಲ್ಲಿ ಭಾರತ ಕಾಪಾಡಿಕೊಂಡು ಬಂದಿರುವ ವಿಶೇಷತೆ ಎಂದರೆ, ಈಜಿಪ್ತ್‌ ಅಥವಾ ಇರಾಕ್‌ ತರಹ ಭಾರತದ ಜನರು ಯಾವುದಾದರೊಂದು ರಿಲಿಜನ್ನನ್ನು ಸಾಮೂಹಿಕವಾಗಿ ಸ್ವೀಕರಿಸದೆ ಉಳಿದುಬಂದಿರುವುದು.

[5]ಮತಾಂತರ – ಸಮಾನ – ಪರಿವರ್ತನೆ ಎಂಬ ಹಿಂದಿನ ಪುಟದ ಮಾತನ್ನು ಇಲ್ಲಿ ನೆನಪಿಗೆ ತಂದುಕೊಳ್ಳುವುದು ಅವಶ್ಯ.