ಯುರೋಪ್‌ ಮೂಲದ ಜನರ ಎದ್ದು ಕಾಣುವ ಅಪರಿಮಿತ ಆತ್ಮವಿಶ್ವಾಸ, ಅನ್ವೇಷಣಾ ಪ್ರವೃತ್ತಿ, ಸಮರ್ಪಣಾ ಮನೋಭಾವ, ವಿವೇಕ ಮತ್ತು ಆಧ್ಯಾತ್ಮವು ಬದುಕಿನ ಎಲ್ಲ ರಂಗಗಳಲ್ಲೂ ವ್ಯಕ್ತವಾಗುವ ಸಾಧನೆಗೆ ಪೂರಕವಾದ ಶಿಸ್ತು ಎಂಬ ತಿಳುವಳಿಕೆಯ ಮೊದಲ ಸುಂದರ ಅಭಿವ್ಯಕ್ತಿ ಸ್ಫೋಟವೆ ಹೋಮರ್‌. ತಮಗೆ ದತ್ತವಾಗಿ ಬಂದ ಆ ಪರಂಪರೆ ಆಧರಿಸಿ ನೂತನ ಪರಂಪರೆಯನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ಅಚ್ಚುಕಟ್ಟಾಗಿ ಮುಂದುವರಿಸುವ ಕೆಲಸವನ್ನು ನಿರ್ವಹಿಸಿದವರು ವರ್ಜಿಲ್‌ ಮತ್ತು ದಾಂತೆ. ಅಖಿಲ್ಯೂಸ್‌ ಮತ್ತು ಒದಿಸ್ಯೂಸ್‌ ಯುರೋಪಿನ ಜನರ ಒಂದು ಮುಖವಾದರೆ, ಮತ್ತೊಂದು ಮುಖ ಈನಿಯಾಸ್‌. ವರ್ಜಿಲ್‌ ಗೊತ್ತಿದ್ದವರಿಗೆ ಹೋಮರ್‌ ವ್ಯಕ್ತವಾಗುವ; ರೀತಿ ಭಿನ್ನವಾಗಬಹುದಾದಂತೆ, ದಾಂತೆಯ ಪರಿಚಯವಿದ್ದವರಿಗೆ ವರ್ಜಿಲ್‌ ಬೇರೆ ತರಹವೆ ಕಾಣುತ್ತಾನೆ; ಹೋಮರ್‌ ಮೂಲಕ ಪ್ರವೇಶಿಸಿದಾಗ, ವರ್ಜಿಲ್‌ – ದಾಂತೆ ಅರ್ಥವಾಗುವ ರೀತಿ ಬೇರೆಯಾಗಿಬಿಡಲು ಸಾಧ್ಯ. ೨೦ನೇ ಶತಮಾನದ ಎಲಿಯಟ್‌, ವರ್ಜಿಲ್‌ – ದಾಂತೆಯ ಹೊಸ ಅವತರಣಿಕೆಯಾದರೆ: ಹೋಮರ್‌ ಪರಂಪರೆಯ ಮತ್ತೊಂದು ತುದಿ ಡಬ್ಲ್ಯೂ. ಬಿ. ಯೇಟ್ಸ್‌ ಎಲಿಯಟ್‌ನನ್ನು ದಾಂತ್ಯತ್ವ (Dantesque) ಎಂದು ಗರುತಿಸುವುದು ವಾಡಿಕೆ. ಆತ ವರ್ಜಿಲೀಯ (Virgilian)

[1] ಕವಿ ಕೂಡ ಹೌದು. ಆದರೂ ಅವರಾರು ಒಬ್ಬರಂತೆ ಮತ್ತೊಬ್ಬರಿಲ್ಲ.

ಯಾವುದೇ ಪರಂಪರೆ, ಅದು ಜೀವಂತ ಅದುದೇ ಆಗಿದ್ದಲ್ಲಿ, ಯಥಾಸ್ಥಿತಿ ಮತ್ತು ಯಥಾರೂಪದಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ; ಕಾಲ ಒತ್ತಾಯಿಸುವ ಬದಲಾವಣೆಗೆ ಅನುಗುಣ ಮಾರ್ಪಾಡಾಗುತ್ತಲೆ ಸಾತತ್ಯತೆ ಕಾಪಾಡಿಕೊಳ್ಳಬೇಕಾದ ಆ ಬದಲಾವಣೆಯ ಉರುಟಣೆಯು ಕ್ರಮಾಗತವಾದುದು ಆಗಿರಬೇಕಾಗುತ್ತದೆ. ಆವರೆಗಿನ ಸ್ಥಾಪಿತ ಪರಂಪರೆಯನ್ನು ಪೃಥಕ್ಕರಿಸಿ, ಹೊಸದನ್ನು ಹುಟ್ಟುಹಾಕುವ ಬದಲಾವಣೆಯ ಪ್ರಕ್ರಿಯೆಯ ಚಲನಶೀಲತೆ ನಿರಂತರವಾದುದು ಎಂದು ತೋರಿಸಿಕೊಟ್ಟವನು ವರ್ಜಿಲ್‌. ಯಾವುದೇ ದೇಶ, ಜನಾಂಗದ ಸಂಸ್ಕೃತಿ ಮತ್ತು ನಾಗರಿಕತೆಯ ಚರಿತ್ರೆಯ ಹಾದಿಯಲ್ಲಿ ಅಂಥವರ ಆಗಮನ, ಬಹಳ ಅಂದರೆ ಬಹಳ ಮುಖ್ಯವಾಗಿಬಿಡುತ್ತದೆ. ಬಹಳ ವಿಶಾಲ ಅರ್ಥದಲ್ಲಿ ನೋಡುವುದಾದರೆ, ಭೂಖಂಡವೊಂದರ ಆ ಮೂಲಕ ಇಡೀ ಮಾನವ ಜನಾಂಗದ ಸಾಫಲ್ಯ – ವೈಫಲ್ಯಗಳ ಸಾಕಾರಮೂರ್ತಿಯಾಗಿ ಸಂಕ್ರಮಣ ಕಾಲದಲ್ಲಿ ಬರುವ ಅಂಥವರು ವಿಸ್ಫುರಿತಗೊಂಡುಬಿಡುತ್ತಾರೆ.

ನಿರ್ದಷ್ಟ ಕಾಲವೊಂದರ ಕೊಡುಗೆಯಾದ ‘ಕಾವ್ಯ ಹಿಮಾಲಯ’ವನ್ನು ಮತ್ತೆ ಸೃಷ್ಟಿ ಮಾಡಲು ಬರುವುದಿಲ್ಲ ಎಂಬ ಒಳನೋಟ ದಕ್ಕುವುದು ಬೇರೆ, ದಕ್ಕಿದ ಕಾಣ್ಕೆಯನ್ನು ಬದುಕಿನಲ್ಲಿ ಪಾಲಿಸಬೇಕಾದ ತಿಳುವಳಿಕೆಯ ತತ್ವವಾಗಿ ಅನುಸರಿಸುವುದು ಬೇರೆ. ಸದ್ದಿಲ್ಲದೆ ಆ ಕೆಲಸ ನಿರ್ವಹಿಸುವುದರ ಮೂಲಕ, ಯುರೋಪಿನ ಬೆಳವಣಿಗೆಗೆ ಬೇಕಾದ ಅಸ್ತಿಭಾರ ಹಾಕುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ವರ್ಜಿಲ್‌, ಆ ಜನರ ಪ್ರಜ್ಞೆಯ ಮೇಟಿ ಮತ್ತು ನಿರ್ದೇಶಕ ಶಕ್ತಿಯಾಗಿ ಉಳಿದಿರುವುದು ಆಶ್ಚರ್ಯಕರ ಸಂಗತಿಯಾಗಿ ಕಾಣಬಾರದು. ಹಠಾತ್ತಾಗಿ ದಕ್ಕಿದ ಆ ಒಳನೋಟವನ್ನು ಕಂಡೂ ಕಾಣದ ರೀತಿ ಮುನ್ನಡೆದ ಕಾಳಿದಾಸ ‘ಈ ಜಗತ್ತಿಗೆ ಕಣ್ಣು ಬಿಡುವ ಮೊದಲೇ’, ಯುರೋಪಿನ ಕವಿಯೊಬ್ಬ ಆ ಪರಂಪರೆ ನಿರ್ಮಿಸುವ ಹಾದಿಯಲ್ಲಿ ಬಹುದೂರ ಕ್ರಮಿಸಿಯಾಗಿತ್ತು.

ಸಂಪ್ರದಾಯ ಮುರಿದು ಮತ್ತೊಂದು ಹೊಸ ಸಂಪ್ರದಾಯ ಕಟ್ಟುವುದರ ಮೂಲಕ ಪರಂಪರೆ ಎಂಬುದಕ್ಕೆ ಹೊಸ ವ್ಯಾಪ್ತಿ ನೀಡಿ, ಅದನ್ನು ಮುಂದುವರಿಸುವ ಕಸುಬುಗಾರಿಕೆಯನ್ನು ವರ್ಜಿಲ್‌ ಕಲಿತದ್ದೇ ಹೋಮರ್‌ ಮತ್ತು ಇತರ ಗ್ರೀಕ್‌ ಕವಿಗಳಿಂದ. ಜನಪದ ಹಾಗೂ ಲಿಖಿತ ಕಾವ್ಯ ಪರಂಪರೆ ನಡುವಿನ ಘಟ್ಟವಾದ ಮೌಖಿಕ ಪರಂಪರೆಯ ಕವಿಯಾದ ಹೋಮರ್‌, ಮೂಲದ್ದಾಗಿರಬಹುದಾದ ಜನಪದ ಜಾಡಿನಿಂದ ಬಿಡಿಸಿಕೊಂಡ ಅಲಿಖಿತ ಎಪಿಕ್‌ ಹಾಡುವ ಕಾಲದಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಿಕೊಂಡಿರಬೇಕು. ಇಲ್ಲದೆ ಹೋಗಿದ್ದಲ್ಲಿ, ಜನಪದ ಮತ್ತು ಎಪಿಕ್‌ ಕವಿಗಳ ನಡುವೆ ಅಂತಹ ಗಮನಾರ್ಹ ವ್ಯತ್ಯಾಸಗಳೇ ಇರುತ್ತಿರಲಿಲ್ಲ. ಆತ ಮಾಡಿಕೊಂಡ ಬದಲಾವಣೆಗಳು ಎಂಥವು ಎಂಬುದು ಇಲ್ಲಿನ ವ್ಯಾಪ್ತಿಗೆ ಮೀರಿದ್ದು. ಬದಲಾವಣೆ ಕಂಡುಕೊಳ್ಳುವುದರ ಮೂಲಕ ಹೋಮರ್‌ ಅಲಿಖಿತ ಎಪಿಕ್‌ ಪರಂಪರೆಗೆ ದಾರಿಮಾಡಿಕೊಟ್ಟ ಎಂಬುದಷ್ಟೆ ಇಲ್ಲಿ ಮುಖ್ಯ. ನಂತರ ಬಂದ ಆಯ್‌ಸ್ಸು ಲೋಸ್‌ – ಸೊಫೊಕ್ಲೆಸ್‌ – ಯುರಿಪಿದೇಸ್‌ ಮೊದಲಾದ ಯಾರೂ ಹೋಮರನ ಹಾದಿಯಲ್ಲಿ ಸಾಗಲಿಲ್ಲ. ಎಪಿಕ್‌ ರಚನೆಗೆ ಕಾಲ ಪಕ್ವವಾಗಿಲ್ಲ ಎಂಬ ಅರಿವು ಅವರನ್ನು ಅದರ ಹತ್ತಿರ ಹೋಗಲು ಬಿಡದೆ ಹೋಗಿರಬಹುದಾದಂತೆಯೆ, ಬದಲಾದ ಅಭಿರುಚಿಗನುಗುಣ ನಾಟಕದ ಮೇಲಿನ ಅಭಿಮಾನ ಅವರ ಪ್ರತಿಭೆಯನ್ನು ರಂಗಮಾಧ್ಯಮಕ್ಕೆ ಸೀಮಿತಗೊಳಿಸಿದ್ದಿರಲೂಬಹುದು. ಏನಾದರಿರಲಿ, ಆ ತರಹದ ನಿರ್ಣಯ ತೆಗೆದುಕೊಳ್ಳುವುದರ ಮೂಲಕ ಅವರುಗಳು, ಹೊಸ ಪರಂಪರೆ ಮತ್ತು ನೂತನ ಕಾವ್ಯ ಮಾಧ್ಯಮವೊಂದರ ನಿರ್ಮಾಣಕ್ಕೆ ಕಾರಣಕರ್ತರಾದುದು ರೋಚಕ ಘಟನೆಗಳಲ್ಲಿ ಒಂದು. ಸೊಫೊಕ್ಲೆಸ್‌ ಇಲ್ಲದ ಷೇಕ್ಸಪಿಯರ್‌ ಗಯಟೆಯ ಆಗಮನ ಅಸಾಧುವಾಗಿ ತೋರಬಹುದಾದಂತೆ, ಗಯಟೆಯ ಅರಿವಿಲ್ಲದ ಸೊಫೊಕ್ಲೆಸ್‌ ಕುರಿತ ತಿಳುವಳಿಕೆ ಅಪೂರ್ಣವಾಗಿ ಉಳಿಯುವ ಸಾಧ್ಯತೆಯ ಹೆಚ್ಚು.

ಈಗಾಗಲೇ ನಮೂದಿಸಲಾದಂತೆ, ಹೋಮರನ ಆಗಮನವಾದ ಕನಿಷ್ಠ ಒಂಬತ್ತು ಶತಮಾನಗಳ ನಂತರ ಭಿನ್ನ ಹಿನ್ನೆಲೆಯಿಂದ ಬಂದ ವರ್ಜಿಲ್‌, ಎಪಿಕ್‌ ಬರೆಯುವ ಸಾಹಸಕ್ಕೆ ಮುಂದಾಗುತ್ತಾನೆ. ಆ ಮೂಲಕ ಲಿಖಿತ ಎಪಿಕ್‌ ಕಾವ್ಯ ಪರಂಪರೆ ನಿರ್ಮಿಸಿದ ಆತ, ಆ ಹಾದಿಯಲ್ಲಿ ಮಾಡಿಕೊಂಡ ಅನೇಕ ಮಹತ್ವದ ಮಾರ್ಪಾಡುಗಳನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ. ವರ್ಜಿಲನ ಲಿಖಿತ ಎಪಿಕ್‌ ಬಹಳ ವಿಶಾಲ ಅರ್ಥದಲ್ಲಿ ಹೋಮರನ ಪರಂಪರೆಗೆ ಸೇರುತ್ತದಾದರೂ, ಅನೇಕ ವಿವರಗಳಲ್ಲಿ ಅದರಿಂದ ಭಿನ್ನವಾಗಿ ನಿಲ್ಲುತ್ತದೆ. ಮೊದಲನೆಯದಾಗಿ ಆತ ಮೌಖಿಕ ಎಪಿಕ್‌ ಪರಂಪರೆಯ ಕವಿಯಲ್ಲ; ಲಿಖಿತ ಪರಂಪರೆಯ ಕವಿ. ಛಂದಸ್ಸಿನ ಬಳಕೆ, ಕಥನಕಲೆ ಮತ್ತು ನಿರ್ವಹಣಾ ವಿಧಾನದಲ್ಲಿ ಪ್ರಧಾನವಾಗಿ ಹೋಮರನ ಜಾಡಿನಲ್ಲಿ ಸಾಗುತ್ತಾನಾದರೂ, ಅಲಿಖಿತ ಎಪಿಕ್‌ ಪರಂಪರೆಯ ಕೆಲ ಪ್ರಮುಖ ಲಕ್ಷಣಗಳು ವರ್ಜಿಲನಲ್ಲಿ ನಿಯಂತ್ರಣಕ್ಕೊಳಗಾಗುತ್ತವೆ. ಹೋಮರನ ಎಪಿಕ್‌ ಶೈಲಿಯಿಂದ ಗಣನೀಯ ಪ್ರಮಾಣದಲ್ಲಿ ದೂರ ಸರಿಯುವ ವರ್ಜಿಲನ ಕಾವ್ಯರಚನಾ ವಿಧಾನ ಆಧುನಿಕವಾದುದು.

ಪಾತ್ರಗಳ ನಿರ್ವಹಣೆಯಲ್ಲಿ ಕೂಡ ಆತ ಅತ್ಯಂತ ಭಿನ್ನ ದಾರಿಯಲ್ಲಿ ಸಾಗುವುದನ್ನು ಈಗಾಗಲೇ ಗುರುತಿಸಲಾಗಿದೆ. ‘ಇಲಿಯಡ್‌’ನಲ್ಲಿ ಬರುವ ಒಬ್ಬನನ್ನು ತನ್ನ ಕಥಾನಾಯಕನನ್ನಾಗಿ ಆರಿಸಿಕೊಳ್ಳುತ್ತಾನೆ ಎಂಬ ಗೌರವದ ಹೊರತು,[2] ಹೋಮರನ ಈನಿಯಾಸ್‌ಗೂ ವರ್ಜಿಲ್‌ ಸೃಷ್ಟಿಸುವ ಈನಿಯಾಸ್‌ಗೂ ಏನೇನೂ ಸಂಬಂಧವಿಲ್ಲ.

ಆದರೆ ಹೋಮರನ ಪಾತ್ರಪ್ರಪಂಚವೇ ಬೇರೆ; ವರ್ಜಿಲನದೆ ಬೇರೆ. ಹೋಮರನ ಎಪಿಕ್‌ ಚೌಕಟ್ಟನ್ನು ತನಗೆ ಸೂಕ್ತ ಕಂಡ ರೀತಿಯಲ್ಲಿ ಮಾರ್ಪಡಿಸಿ ಅದರ ಮೂಲ ಪ್ರಾತಿನಿಧಿಕ ಗುಣಲಕ್ಷಣಗಳನ್ನು ಮಾತ್ರ ಮುಂದುವರಿಸುವ ಕಡೆಗೆ ಗಮನ ಹರಿಸುವ ವರ್ಜಿಲ್‌, ತನ್ನ ಕಾಲದ ಆಶೋತ್ತರಗಳನ್ನು ಪ್ರತಿಬಿಂಬಿಸಲು ಸಾಧ್ಯವಾಗುವ ರೀತಿಯಲ್ಲಿ ಅದರ ಭೂಮಿಕೆಯನ್ನು ವಿಸ್ತರಿಸುತ್ತಾನೆ. ಹೋಮರನ ಕಾಲದ್ದಾದ ಎಪಿಕ್‌ ಕಾವ್ಯ ಮಾದರಿ ತನ್ನದೂ ಆಗುವಂತೆ ಪರಿವರ್ತಿಸಿದ್ದೆ ಅಲ್ಲದೆ, ಆ ಬದಲಾವಣೆ ಹೋಮರನ ಕಾಲ ಮತ್ತು ಕಾವ್ಯ ಪರಂಪರೆಗೆ ದೊಡ್ಡ ಅಪಚಾರವಾಗದ ರೀತಿಯಲ್ಲಿ ಯಶಸ್ಸು ಗಳಿಸಿದ್ದು ಅವನಿಗೆ ದಕ್ಕಿದ ಸಮತೂಕದ ಪ್ರತಿಭೆ, ವಿವೇಕ ಮತ್ತು ಕಾವ್ಯ ಕೌಶಲಕ್ಕೆ ಅತ್ಯುತ್ತಮ ಉದಾಹರಣೆ. ಅನೇಕ ಟ್ರೋಜನ್‌ರಲ್ಲಿ ಒಬ್ಬನಂತೆ ಕಾಣುವ ಹೋಮರನ ಈನಿಯಾಸ್‌, ವರ್ಜಿಲನ ಕೈಯಲ್ಲಿ ವರ್ಜಿಲನ ಮತ್ತು ಅವನ ಕಾಲದ ಈನಿಯಾಸ್‌ ಆಗಿಬಿಡುತ್ತಾನೆ.

ಆ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ದರೂ, ಆತನಿಗೆ ಈಗ ದಕ್ಕಿರುವ ಮಹತ್ವದ ಸ್ಥಾನ ಸಿಗುತ್ತಿರಲಿಲ್ಲ ಮತ್ತು ಯುರೋಪಿನ ಸಾಹಿತ್ಯ ಚರಿತ್ರೆಯ ದಿಕ್ಕೇ ಬದಲಾಗಬೇಕಾಗುತ್ತಿತ್ತೋ ಏನೋ! ಅದೇ ಅವನು, ಹೋಮರ್‌ ಮತ್ತು ಹೋಮರ್‌ ನಿರ್ಮಿಸಿದ ಪರಂಪರೆಗೆ ಸಲ್ಲಿಸಿದ ನಿಜವಾದ ಗೌರವ.

ಹೋಮರ್‌ – ವರ್ಜಿಲ್‌ ನಡೆಸಿದ ಪ್ರಯೋಗಗಳಿಗೆ ದಾಂತೆ, ಒಂದು ತುದಿ ಮುಟ್ಟಿಸುತ್ತಾನೆ. ಎಪಿಕ್ ಕಾವ್ಯ ಪರಂಪರೆಯ ಬಹುತೇಕ ಲಕ್ಷಣಗಳು ದಾಂತೆಯಲ್ಲಿ ಕಣ್ಮರೆಯಾಗುತ್ತವೆ. ಆ ಕಾರಣವೆ ದಾಂತೆಯನ್ನು ಎಪಿಕ್‌ ಕವಿ ಎಂದು ಕರೆಯಲು ಬರುವುದಿಲ್ಲವಾದಂತೆ, ಆತನ ಕೃತಿಯನ್ನು ಎಪಿಕ್‌ ಮಾದರಿ ಕಾವ್ಯವಾಗಿಯೂ ಪರಿಗಣಿಸಬರುವುದಿಲ್ಲ. ಆ ಹಂಬಲ ಮತ್ತು ಆಕಾಂಕ್ಷೆ ಸ್ವತಃ ದಾಂತೆಗೆ ಇದ್ದಂತೆ ತೋರುವುದಿಲ್ಲ. ಆದರೆ ಆತನ ಕೃತಿಯ ಶಿಲ್ಪ ಮತ್ತು ನಿರೂಪಣಾ ವಿಧಾನ ಎಪಿಕ್‌ ಪರಂಪರೆಯಿಂದ ವಿಕಸನಗೊಂಡಿದ್ದು, ಆ ಪರಂಪರೆ ಕಂಡ ಬದಲಾವಣೆಯ ಕೊನೆಯ ತುದಿ ದಾಂತೆ.

ಗ್ರೀಕ್‌ ಮತ್ತು ಲ್ಯಾಟಿನ್‌ ನಡುವಿನ ಸೇತು ವರ್ಜಿಲ್‌ ಆದಂತೆ, ಗ್ರೀಕ್‌ – ಲ್ಯಾಟಿನ್‌ ಮತ್ತು ಆಧುನಿಕ ಯುರೋಪ್‌ ಭಾಷೆಗಳ ನಡುವಿನ ಇಮ್ಮುಖ ದಾರಿ ದಾಂತೆ. ವರ್ಜಿಲನ ಪರಿಚಯವಿಲ್ಲದೆ ಗ್ರೀಕ್‌ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯ ಸಮಗ್ರವಾಗಿ ಆಗುವುದು ಸಾಧ್ಯವಿಲ್ಲವಾದಂತೆ, ದಾಂತೆ ಗೊತ್ತಿಲ್ಲದ ಯುರೋಪಿನ ಭಾಷೆಗಳ ಪರಿಚಯ ಅಸಮಗ್ರ ಮತ್ತು ಅಲ್ಲಿ ನಡೆದ ಪ್ರಯೋಗಗಳ ಮೂಲ ನೆಲೆಗಳನ್ನು ಗುರುತಿಸುವುದು ಕಷ್ಟಸಾಧ್ಯದ ಮಾತು. ಇಮ್ಮುಖಿಗಳಾದ ಅವರಿಬ್ಬರೂ ಒಂದು ತರಹದಲ್ಲಿ ಯುರೋಪಿನ ಸಾಹಿತ್ಯ ಮತ್ತು ಸಂಸ್ಕೃತಿಯ ಕೀಲಿ ಕೈ ಇದ್ದ ಹಾಗೆ – ಇಟಲಿ ಭಾಗಕ್ಕೆ ಸೇರಿದವರಾಗಿರುವುದು ಆಶ್ಚರ್ಯ ತಾರದಿರುವುದಿಲ್ಲ.

ಯುರೋಪ್‌ ಮತ್ತು ಎಷ್ಯಾ ಎಂಬ ಅರಿವು ವಿಘಟನೆಗೆ ಅಣಿಯಾಗುತ್ತಿದ್ದ ಕಾಲದಲ್ಲಿ ಅಥವಾ ಸ್ವಲ್ಪ ಪೂರ್ವದಲ್ಲಿ ಬಂದವನು ಹೋಮರ್‌ ಆದರೆ, ಆ ಹೋಮರನ ಯುರೋಪ್‌ ಬೃಹತ್ ಸಾಮ್ರಾಜ್ಯ ಆಧಾರಿತ ನಾಗರಿಕತೆಯತ್ತ ಹೊರಳುತ್ತಿದ್ದ ಪರ್ವಕಾಲದಲ್ಲಿ ಬಂದವನು ವರ್ಜಿಲ್‌; ಮುಂದುವರಿದ ಆಧುನಕತೆಯ ಹಾದಿಯಲ್ಲಿ ನವನಾಗರಿಕ ಸಾಮ್ರಾಜ್ಯಷಾಹಿಯುಗಕ್ಕೆಸಜ್ಜಾಗುತ್ತಿದ್ದ ಅತ್ಯಂತ ಸಂದಿಗ್ಧ ಸಂಕ್ರಮಣ ಕಾಲದ ಕವಿ ದಾಂತೆ. ಗ್ರೀಕರ ಕಾಲದಲ್ಲಿ ಸಸಿಗಳ ರೂಪದಲ್ಲಿ ಕಾಣಿಸಿಕೊಂಡಿದ್ದ ಯುರೋಪ್‌ ಮೂಲದ ಜನರ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಪ್ರತಿಭೆ, ಅದರ ಎಲ್ಲಾ ವೈವಿಧ್ಯಮಯ ರೂಪದಲ್ಲಿ ತೆರೆದುಕೊಂಡುದು ದಾಂತೆಯ ಆಗಮನದನಂತರ. ಹೋಮರ್‌ ನಿಂತಲ್ಲಿಂದ ವರ್ಜಿಲ್‌ ಮುಂದೆ ಸಾಗಿದರೆ; ಅಲ್ಲಿಂದ ಮುಂದಿನ ಪಯಣವನ್ನು ದಾಂತೆ ನಿರ್ವಹಿಸುತ್ತಾನೆ; ಪರಂಪರೆಯ ಜ್ಯೋತಿ ಆರದಂತೆ ಒಬ್ಬರಾದ ಮೇಲೆ ಮತ್ತೊಬ್ಬರು ಸಾಗಿಬಂದಿರುವ ರೀತಿಯಲ್ಲಿ ಅವರ ಬದುಕು – ಬರವಣಿಗೆ ಹೊಂದಿಕೊಂಡಿದ್ದು, ಒಬ್ಬರಿಲ್ಲದೆ ಮತ್ತೊಬ್ಬರನ್ನು ಪ್ರವೇಶಿಸುವುದು ಅಷ್ಟು ಸರಿಯಲ್ಲ.

ಕಾವ್ಯ ಪರಂಪರೆ ಸಾಗಿ ಬಂದ ಜಾಡು ಅನುಸರಿಸಿ ಯುರೋಪ್‌ ಮೂಲದ ಸಮಾಜ ಪ್ರಮುಖವಾಗಿ ಮೂರು ಹಂತಗಳಲ್ಲಿ ಉರುಳಿ ಬಂದಿರುವುದನ್ನು ಗುರುತಿಸಬಹುದು: ಸೊಫೊಕ್ಲೆಸ್ ಕಾಲದ ನಗರ – ರಾಜ್ಯ ಪ್ರಜ್ಞೆ, ವರ್ಜಿಲ್‌ ಕಾಲದ ಸ್ಥಿರತೆಯ ಸಾಮ್ರಜ್ಯ – ಪ್ರಜ್ಞೆ ಮತ್ತು ದಾಂತೆ ನಂತರದ ಕಾಲದ ಪೇಗನ್‌ – ಕ್ರಿಶ್ಚಿಯನ್‌ ರಿಲಿಜನ್‌ ಮತ್ತು ಸಂಸ್ಕೃತಿಗೆ ಹೊರಳಲು ಸಜ್ಜಾಗುತ್ತಿದ್ದ ಸಂಕ್ರಮಣ ಕಾಲದಲ್ಲಿ ಬಂದವನು ವರ್ಜಿಲ್‌ ಆದರೆ, ಆ ಕ್ರಿಶ್ಚಿಯನ್‌ ರಿಲಿಜನ್‌ ಮತ್ತು ಸಂಸ್ಕೃತಿಯು ಮರಳಿ ಪೇಗನ್‌ ಧರ್ಮ ಮತ್ತು ಸಂಸ್ಕೃತಿಯ ಅಂಶಗಳ ಜತೆ ಒಂದು ಒಡಂಬಡಿಕೆಗೆ ಬರಲು ಅಥವಾ ಆ ವ್ಯಾಪ್ತಿಯೊಳಗಿಂದ ಹೊಸದಾಗಿ ಅರಳಲು ಅಪಕ್ವವಾಗುತ್ತಿದ್ದ ಕಾಲದ ಕವಿ ದಾಂತೆ. ಪೇಗನ್‌ ಸಂಸ್ಕೃತಿ ಮತ್ತು ಧರ್ಮದ ಅತ್ಯುತ್ತಮ ಸುಸಂಸ್ಕೃತ ಅಭಿವ್ಯಕ್ತಿಯಾದ ವರ್ಜಿಲ್‌, ಕ್ರಿಶ್ಚಿಯನ್‌ ರಿಲಿಜನ್‌ ಆಧಾರಿತ ಸಂಸ್ಕೃತಿಯ ಆಗಮನದ ಹರಿಕಾರನಾಗಿ ಕಾಣಿಸಿಕೊಂಡರೆ, ರೋಮನ್‌ ಕ್ಯಾಥೊಲಿಕ್‌ ರಿಲಿಜನ್‌ ಮತ್ತು ಸಂಸ್ಕೃತಿಯ ಅತ್ಯುತ್ತಮ ಪ್ರತಿಭೆ ಮತ್ತು ಮನಸ್ಸಾದ ದಾಂತೆಯು ಪೇಗನ್‌ ಮನೋಧರ್ಮದ ಪುನರ್‌ – ಆಗಮನದ ಮುಂಬೆಳಕಾಗಿ ಕಾಣಿಸಿಕೊಳ್ಳುವುದು, ಎಂತಹ ವಿಪರ್ಯಾಸ ಮತ್ತು ವಿಚಿತ್ರ!

ಹೋಮರ್‌ – ವರ್ಜಿಲರ ಎಪಿಕ್‌ ಮಾದರಿಯನ್ನು ಮುರಿದು ಅದರ ಹೊರ ಚೌಕಟ್ಟನ್ನು ಮಾತ್ರ ಉಳಿಸಿಕೊಂಡು ಅತ್ಯಂತ ಭಿನ್ನ ಜಾಡಿನಲ್ಲಿ ಸಾಗುವ ದಾಂತೆಯು ತನ್ನ ಕಾವ್ಯ ಸತ್ಯದ ಅನ್ವೇಷಣೆಯ ಹಾದಿಯಲ್ಲಿ ತನಗೂ ಹಿಂದಿನ ಕವಿಯೊಬ್ಬನನ್ನು ಮಾರ್ಗದರ್ಶಿಯಾಗಿ ಸ್ವೀಕರಿಸುವುದರ ಮೂಲಕ ಹಿಂದಿನ ಪರಂಪರೆಯ ಮಹತ್ವದ ಕಡೆಗೆ ಯುರೋಪಿನ ಕಣ್ಣು ತೆರೆಸಿದ ಮಹಾನುಭಾವ. ಈಗಾಗಲೇ ಗುರುತಿಸಲಾಗದಂತೆ, ಎಷ್ಟೋ ಶತಮಾನಗಳಿಗೂ ಹಿಂದೆ ಬದುಕಿ ಬಾಳಿದ ಕವಿಯೊಬ್ಬ ಎಪಿಕ್‌ ಆಯಾಮದ ಕಾವ್ಯವೊಂದರಲ್ಲಿ ಪ್ರಧಾನ ಪಾತ್ರವಾಗಿ ಬರುವುದು ‘ದಿ ಡಿವೈನ್‌ ಕಾಮಿಡಿ’ಯಲ್ಲಿ ಮಾತ್ರ. ಕ್ರಿಶ್ಚಿಯನ್‌ ಮನಸ್ಸಿನ ಕವಿಯ ಮಾರ್ಗದರ್ಶಿಯಾಗಿ ಪೇಗನ್‌ ಬರುವುದು ಸಾಧಾರಣ ಸಂಗತಿ ಏನಲ್ಲ. ಕ್ರಿಶ್ಚಿಯನ್‌ ರಿಲಿಜನ್ನಿನಲ್ಲಿ ಪೇಗನ್ನರ ಬಗ್ಗೆ ಇರುವ ಗೌರವ ಅಷ್ಟಕಷ್ಟೆ: ಕಾಫಿರ್‌, ಮ್ಲೇಚ್ಚ, ಭವಿ, ನಿತ್ಯನಾರಕಿ, ಪಾಷಂಡಿ, ಚಾರ್ವಾಕ ಮೊದಲಾದ ಪದಗಳಿಗೆ ಸಂವಾದಿಯಾದ ಅರ್ಥದಲ್ಲಿ ಬಳಕೆಯಾಗುವ ಸಂದರ್ಭವೇ ಹೆಚ್ಚು. ಆ ತರಹದ ಭಾವನೆಗಳ ತೀವ್ರತೆ ಇಂದು ಸ್ವಲ್ಪ ಪ್ರಮಾಣದಲ್ಲಿ ಕುಗ್ಗಿರಬಹುದಾದರೂ, ಪೇಗನ್ನರ ಬಗೆಗಿನ ಒಟ್ಟಾರೆ ಅಭಿಪ್ರಾಯ ಹೆಚ್ಚಿನ ಬದಲಾವಣೆಗೆ ಒಳಗಾಗಿಲ್ಲ. ಅಂತಹ ಪೇಗನ್‌ ಸಂಸ್ಕೃತಿ ಪ್ರತಿನಿಧಿಸುವ ಕವಿಯನ್ನು ಕ್ರಿಶ್ಚಿಯನ್‌ ಕಾವ್ಯ ಸತ್ಯದ ಅನ್ವೇಷಣೆಯ ಹಾದಿಯಲ್ಲಿ ಗುರುವಾಗಿ ಸ್ವೀಕರಿಸುವುದೆಂದರೆ!

ಯುರೋಪ್‌ ಮೂಲದ ಜನರ ಮನೋಧರ್ಮ, ದೃಷ್ಟಿಕೋನ, ಪ್ರಕೃತಿ, ಸ್ವಭಾವ ಮತ್ತು ಮನೋಭಾವದ ಸಾರಸರ್ವಸ್ವದಂತಿದೆ ಆ ಘಟನೆ.

ದಾಂತೆಯ ಆಗಮನ ಎಂದರೆ, ಪೇಗನ್‌ [ಕಾವ್ಯ] ಸಂಸ್ಕೃತಿಯ ಮರುಆಗಮನ ಎಂದೇ ಅರ್ಥ; ಆ ರೀತಿಯ ಪುನರಾಗಮನಕ್ಕೆ ಬೇಕಾದ ಮಾರ್ಪಾಡುಗಳಿಗೆ ಅಗತ್ಯ ಭೂಮಿಕೆ ಸಿದ್ಧಪಡಿಸಿದವನು ದಾಂತೆ; ಪೇಗನ್‌ ಪರಂಪರೆಯನ್ನು ಕ್ರಿಶ್ಚಿಯನ್‌ ರಿಲಿಜನ್‌ ಚೌಕಟ್ಟಿನಲ್ಲಿ ಅಥವಾ ಕ್ರಿಶ್ಚಿಯನ್‌ ರಿಲಿಜನ್ನನ್ನು ಪೇಗನ್‌ ಧರ್ಮದ ಚೌಕಟ್ಟಿನಲ್ಲಿ ಕಂಡುಕೊಳ್ಳಬೇಕಾದ ಅಗತ್ಯದ ಕಡೆಗೆ ಗಮನ ಸೆಳೆದವನು. ಗ್ರೀಕ್‌ ಪರಂಪರೆಯನ್ನು ವರ್ಜಿಲ್‌ ಸ್ವೀಕರಿಸಿದ ತರಹವೆ ಗ್ರೀಕ್‌ – ಲ್ಯಾಟಿನ್‌ ಪರಂಪರೆಯನ್ನು ಸ್ವೀಕರಿಸುವ ದೊಡ್ಡತನವನ್ನು ದಾಂತೆ ತೋರುತ್ತಾನೆ. ಆ ವಿವೇಕವನ್ನು ದಾಂತೆ ಕಲಿತದ್ದೇ ತನಗೂ ಹೆಚ್ಚಿನ ವಿವೇಕಿಯಾದ ವರ್ಜಿಲನಿಂದ. ಅದಕ್ಕಾಗಿ ವರ್ಜಿಲನನ್ನು ಗುರುವಾಗಿ ಸ್ವೀಕರಿಸಬೇಕಾಗುತ್ತದೆ. ಹಿಂದಿನ ಪರಂಪರೆಯನ್ನು ಅಷ್ಟು ಸುಲಭವಾಗಿ ತಿರಸ್ಕರಿಸಲು ಬರುವುದಿಲ್ಲ. ವಾದ ಕಾರಣ ಒಡಂಬಡಿಕೆಗೆ ಬರುವುದರ ಮೂಲಕ ಮುಂದಿನ ಬದುಕಿಗೆ ಪೂರಕವಾಗುವ ರೀತಿಯಲ್ಲಿ ಅದನ್ನು ಮರುವಿಮರ್ಶೆ ಮಾಡಿ ಸ್ವೀಕರಿಸದೆ ಅನ್ಯ ಮಾರ್ಗವಿಲ್ಲ, ಅದಿಲ್ಲದೆ ಭವಿಷ್ಯ ಸಾಧ್ಯವಿಲ್ಲ, ಎಂದು ಪ್ರತಿಪಾದಿಸದೆ ಪ್ರತಿಪಾದಿಸಿದವನು ದಾಂತೆ.

ಕ್ರಿಶ್ಚಿಯನ್‌ ರಿಲಿಜನ್ ಪ್ರವೇಶ ಆಗುತ್ತಿದ್ದಂತೆಯೇ ಕಂತುವ ಹಾದಿಯಲ್ಲಿ ಸಾಗತೊಡಗಿದ ಅಥವಾ ಕಂತುವ ಹಾದಿಯಲ್ಲಿ ಸಾಗುತ್ತಿದ್ದಂತೆಯೆ ಕ್ರಿಶ್ಚಿಯನ್‌ ರಿಲಿಜನ್‌ ಸ್ವೀಕರಿಸಿದ ಯುರೋಪ್‌ ಮೂಲದ ಜನರ ಪ್ರತಿಭೆ, ಅದರ ಎಲ್ಲ ವೈವಿಧ್ಯಮಯ ರೂಪದಲ್ಲಿ ಮತ್ತೆ ಪ್ರಕಾಶಗೊಳ್ಳಲು ಆರಂಭಿಸಿದ್ದು ದಾಂತೆ ಆಗಮನದ ನಂತರ. ಅಂದರೆ ಯುರೋಪಿಗೆ ಮೂಲವಾದ ಪೇಗನ್‌ ಮನೋಭಾವ ಮತ್ತು ಮನೋಧರ್ಮದ ಜೊತೆ ಒಂದು ಒಪ್ಪಂದ ಅಥವಾ ರಾಜಿಗೆ ಬಂದ ನಂತರ. ನಂಬಿಕೆ ಮತ್ತು ಆಚರಣೆಯಲ್ಲಿ ಕ್ರಿಶ್ಚಿಯನ್ ರಿಲಿಜನ್‌ ರಾಜಪಾಲರಾದರೂ ಮನೋಭಾವ ಮತ್ತು ಮನೋಧರ್ಮದಲ್ಲಿ ಅವರು ಇಂದಿಗೂ ಪೇಗನ್ನರಾಗಿಯೇ ಉಳಿದಿದ್ದಾರೆ. ಅವರ ಪ್ರಗತಿಯ ಮೂಲವೇ ಅದಾಗಿರಬಹುದು.

ಯುರೋಪ್ ಮೂಲದ ಜನರ ಮಾತಿರಲಿ, ಆ ಪ್ರಭಾವದಿಂದ ಬೆಳೆದ ‘ಪೇಗನ್‌’ ಜವಹರಲಾಲ್‌ ನೆಹರು ಬಗ್ಗೆ ಎಸ್‌. ರಾಧಾಕೃಷ್ಣನ್‌ ಆಡುವ ಮಾತುಗಳು:

Nehru was a deeply spiritual man though he did not uphold any particular form of religion. He sometimes delighted in calling himself a pagan. This only meant that he was opposed to the formal, dogmatic, sectarian aspects of religion. Possessed of a scientific temper, he was interested in the empirical route to Reality.[3]

ಯುರೋಪ್‌ ಮೂಲದ ಕ್ರಿಶ್ಚಿಯನ್‌ ಜಗತ್ತಿನಲ್ಲಿ ಪೇಗನ್‌ ಮನೋಭಾವ ಪ್ರಧಾನವಾಗುತ್ತಿದ್ದು ಕ್ರಿಶ್ಚಿಯನ್‌ ಮನೋಧರ್ಮದ ಜನರು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂಬ ವಿಷಾದದ ಧ್ವನಿಯಲ್ಲಿ ಕೊರಗುವ ಮಟ್ಟಕ್ಕೆ ಎಲಿಯಟ್‌ ಹೋಗುತ್ತಾನೆ :

…..modern writers sometime assume that what we have a pagan Society, …..that at which Christians are a new minority in a society of positive pagan traditions…..and finally the point at which practicing Christians must be recognized as a minority (whether static or diminishing)in a society which has ceased to be Christian.[4]

…..and I believe that the choice before us us is between the formation of a new Christian culture, and the acceptance of a pagan one. ಪುಟ. ೧೩

It is true that we sometimes use the word ‘pagan’ and in the same context refer to ourselves as `Christian.’ ಪುಟ ೨೦

ಹೋಮರ್‌ನಿಂದ ವರ್ಜಿಲ್‌ ಕಾಲದವರೆಗೂ ನಿರಂತರ ಬೆಳಗಿದ ಗ್ರಿಕ್‌ – ಲ್ಯಾಟಿನ್‌ ಪ್ರತಿಭೆ, ದಾಂತೆಯ ಆಗಮನವಾಗುವವರೆಗೆ ಕಂದಿದಂತೆ ಇರಬೇಕಾದ ಬಗ್ಗೆ ಹಲವಾರು ರೀತಿಯ ಕಾರಣ ಮತ್ತು ವಿವರಣೆ ನೀಡಲಾಗಿದೆ. ಎಲಿಯಟ್‌ ತನ್ನ ‘ನೋಟ್ಸ್‌ ಟುವರ್ಡ್ಸ್‌ ದಿ ಡೆಫನಿಷನ್‌ ಆಫ್‌ ಕಲ್ಚರ್‌’ನಲ್ಲಿ ಮಂಡಿಸುವ ಕೆಲ ವಿಚಾರಗಳು ಇಂದಿಗೂ ತೀವ್ರ ಕುತೂಹಲಕಾರಿ. ಆ ಪರಿಸ್ಥಿತಿ ಮತ್ತೆ ಎದುರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕ್ರಿಶ್ಚಿಯನ್‌ ಸಂಸ್ಕೃತಿ ಪಥದಲ್ಲಿ ಮುಂದುವರಿಯುವುದು ಬಹಳ ಅಗತ್ಯ ಎಂಬ ವಾದವನ್ನು ಎಲಿಯಟ್‌ ಮಂಡಿಸುತ್ತಾನೆ:

If Christianity goes, the whole of our Culture goes. Then you must start painfully again, and you cannot put on a new culture ready made.[5] ಅಲ್ಲಿಯೇ ಪುಟ ೧೨೨

ಯುರೋಪ್ ಮೂಲದ ಜನ ಎಲ್ಲಿ ಮರಳಿ ಪೇಗನ್ ಸಂಸ್ಕೃತಿ ಮತ್ತು ಧರ್ಮದ ಕಡೆಗೆ ಸಂಪೂರ್ಣ ವಾಲಿಬಿಡುತ್ತಾರೊ ಎಂಬ ಭಯ ಆತನನ್ನು ಬಹಳ ಕಾಡಿರಬಹುದೇ?

ದಾಂತೆಯ ಮತ್ತೊಂದು ಕೊಡುಗೆಯ ಮಹತ್ವವನ್ನು ಇಸ್ಲಾಂ ರಿಲಿಜನ್‌ ಮತ್ತು ಆ ಪರಿಣಾಮವಾಗಿ ಹಿಂದೂ ಧರ್ಮ – ಎದುರಿಸುತ್ತಿರುವ ಬಿಕ್ಕಟ್ಟಿನ ಈ ಹಿನ್ನೆಲೆಯಲ್ಲಿ ಗ್ರಹಿಸಬೇಕಿದೆ. ಜಗತ್ತಿನ ಸಾಹಿತ್ಯ ಚರಿತ್ರೆ ಇತಿಹಾಸದಲ್ಲಿಯೇ ಅತ್ಯಂತ ವಿವಾದಾತ್ಮಕ ಸಂಗತಿಗಳ ಪೈಕಿ ಒಂದಾದ ಆಖ್ಯಾನವೊಂದರ ಮಹತ್ವ ಗ್ರಹಿಸಲು ಇದಕ್ಕಿಂತ ಸೂಕ್ತ ಸಂದರ್ಭ ಮತ್ತೊಂದು ದೊರಕಲಾರದು. ಏಕೆಂದರೆ ಅವೆರಡೂ ಪರಸ್ಪರ ಪೂರಕವಾದವು. ನರಕದಲ್ಲಿ ಮಹಮದ್‌ ಎದುರಾಗುವ ಸನ್ನಿವೇಶ:

I stood and started; he saw me and started back;
Then with his hands wrenched open his own breast,
Crying: “See how I rend myself! What rack

Mangles Mahomet! Weeping without rest
Ali before me goes, his whole face slit
By one great stroke upward from chin to crest.

Thus unto me, Mahomet, with one foot
Lifted to leave us; having said, he straight
Stretched it to earth and went his dreary route.[6]

ಭಿನ್ನಾಭಿಪ್ರಾಯ ಅಥವಾ ಅಸಹನೆಯ ತೀವ್ರತೆ ಏನೇ ಇರಬಹುದು. ರಿಲಿಜನ್‌ ಅಥವಾ ಮತೀಯ ಪಂಗಡವೊಂದರ ಸಂಸ್ಥಾಪಕರು ಎಂಬುದಾಗಿ ಒಂದು ವರ್ಗದ ಜನರು ಪೂಜ್ಯ ಭಾವನೆಯಿಂದ ಕಾಣುವ ವ್ಯಕ್ತಿಗಳ ಬಗ್ಗೆ ಪ್ರಕಟವಾಗುವ ಆ ತರಹದ ಅಸಹನೆ, ಕ್ಲಾಸಿಕ್‌ ಮತ್ತು ಎಪಿಕ್‌ ಮನೋಧರ್ಮಕ್ಕೆ ತಕ್ಕುದಲ್ಲ. ದಾಂತೆಗೆ ಆ ಸ್ಥಾನ ದೊರಕದಿರಲು ಆತನ ಕೃತಿಯಲ್ಲಿ ಮತ್ತೆ ಮತ್ತೆ ಎದುರಾಗುವ ಆ ತರಹದ ಕೆಲ ಕಹಿ ಸನ್ನಿವೇಶಗಳು ಕಾರಣವಾಗಿದ್ದಿರಬಹುದು. ಮುಂದೆ ಕಾಲಾನುಕ್ರಮದಲ್ಲಿ ಅವುಗಳು ಸರಿ ಎಂದು ಸಾಬೀತಾಗಿರಲೂಬಹುದು. ಆದರೂ ಆ ತರಹದ ವಿವಾದಾತ್ಮಕ ಕಹಿ ಸನ್ನಿವೇಶಗಳನ್ನು ಕವಿಯಾಗಿ ದಾಂತೆ ನಿಭಾಯಿಬೇಕಾಗಿ ಬಂದುದೆ ಆತ ಎದುರಿಸಬೇಕಾಗಿ ಬಂದ ವಿಚಿತ್ರ ಪರಿಸ್ಥಿತಿಗೆ ಮತ್ತೊಂದು ಉದಾಹರಣೆ. ಅಂತಹ ಪರಿಸ್ಥಿತಿಯೆ ಆತನನ್ನು ಸಂಪೂರ್ಣ ಭಿನ್ನ ಜಾಡು ಹಿಡಿಯುವಂತೆ ಮಾಡಿರಬಹುದು. ಕ್ರಿಶ್ಚಿಯನ್ ಮತ್ತು ಇಸ್ಲಾಂ ನಡುವಿನ ಸಂಘರ್ಷ ಪರಾಕಾಷ್ಠೆ ತಲುಪಿದ್ದ ಕಾಲದ ಕವಿಯಾದ ದಾಂತೆ ‘ಪ್ರದರ್ಶಿಸುವ ಅಸಹನೆ’’ಗೆ ಆ ಹಿನ್ನೆಲೆ ಕಾರಣವಾಗಿದ್ದಿರಬಹುದಾದರೂ ತಾನು ಅನುಸರಿಸುವ ರಿಲಿಜನ್ನಿಗೆ ಸೇರಿದ ಕೆಲವರು ಪಾದ್ರಿಗಳನ್ನು ನರಕದಲ್ಲಿ ಕಾಣುವುದಕ್ಕೂ, ಪ್ರವಾದಿ ಮಹಮ್ಮದರನ್ನು ತೋರಿಸುವುದಕ್ಕೂ ಅಂತರವಿದೆ.

ಹಿಂದಿನ ಪೇಗನ್‌ ಧರ್ಮ ಮತ್ತು ಸಂಸ್ಕೃತಿಯ ಅನೇಕ ಜೀವಂತ ಅಂಶಗಳು ಮತ್ತು ಸಲ್ಲಕ್ಷಣಗಳನ್ನು ತನ್ನ ಬೆಳವಣಿಗೆ ಸಂದರ್ಭದಲ್ಲಿ ತನಗೆ ಸರಿಕಂಡ ರೀತಿಯಲ್ಲಿ ಅರ್ಥೈಸಿಕೊಂಡು, ಮುನ್ನಡೆಯುವ ಅಪೂರ್ವ ಅವಕಾಶ ಮತ್ತು ಹಿನ್ನೆಲೆಯನ್ನು ಕ್ರಿಶ್ಚಿಯನ್‌ ರಿಲಿಜನ್‌ ಪಡೆದಿದೆ. ಹಿನ್ನೆಲೆ ಇದ್ದಾಗ ಮಾತ್ರ ಮುನ್ನೆಲೆ ಸಾಧ್ಯ. ಅವೆರಡೂ ಪೂರಕವಾದವು. ಅದು ಇಸ್ಲಾಂಗೆ ದಕ್ಕಿದಂತೆ ಕಾಣುವುದಿಲ್ಲ ಎಂಬ ಗ್ರಹಿಕೆ, ದಾಂತೆ ನಿರ್ವಹಿಸಬೇಕಾಗಿಬಂದ ಅಂಥ ಅನುಭವಕ್ಕೆ ಕಾರಣವಾಗಿದ್ದಿರಬಹುದೇ? ಹಿಂದಿನ ಪರಂಪರೆಯನ್ನು ಒಪ್ಪಿಕೊಳ್ಳಬೇಕಾದ ಐತಿಹಾಸಿಕ ಒತ್ತಡಕ್ಕೆ ಕ್ರಿಶ್ಚಿಯಾನಿಟಿ ಒಳಗಾಗದಂತೆ, ಇಸ್ಲಾಂ ಒಳಗಾದ ಉದಾಹರಣೆ ಇಲ್ಲ.

ಆ ಜತೆಗೆ ಕ್ರಿಸ್ತನ ಪುರನರುತ್ಥಾನದಲ್ಲಿ ನಂಬಿಕೆ ಉಳಿಸಿಕೊಳ್ಳಬೇಕಾಗಿ ಬಂದುದು, ಕ್ರಿಶ್ಚಿಯನ್‌ ರಿಲಿಜನ್‌ಗೆ ದಕ್ಕಿದ ಮತ್ತೊಂದು ಅಪೂರ್ವ ಅವಕಾಶವೇ ಸರಿ.[7] ಅಂತಿಮ ಸತ್ಯ ಎಂಬುದು ದೊರಕಿಲ್ಲ, ಕಾಣಬೇಕಾದ್ದು ಮುಂದೂ ಇದೆ; ಕ್ರಿಸ್ತ ಮತ್ತೆ ಬರಲಿದ್ದಾನೆ ಎಂಬ ಅರಿವು ಮತ್ತು ಆ ಅರಿವನ್ನು ಸಂಸ್ಕೃತಿ ಮತ್ತು ನಾಗರಿಕತೆಯ ಭದ್ರಬುನಾದಿಯಾಗಿ ಕಂಡುಕೊಳ್ಳುವುದು; ಅದಕ್ಕಾಗಿ ಕ್ರಮಿಸಬೇಕಾದ ಹಾದಿ ಬಹಳ ಸುದೀರ್ಘವಾದುದಾಗಿದ್ದು, ಅದನ್ನು ತಲುಪಲು ಕ್ರಿಸ್ತನ ತರಹವೇ ಪ್ರಯಾಸ ಪಡಬೇಕಾಗುತ್ತದೆ ಎಂಬುದನ್ನು ಒಪ್ಪಿಕೊಂಡು ಸಾಗುವುದು ಹಾಗೂ ಅರಿವಿನ ಹಾದಿಯಲ್ಲಿ ಕ್ರಿಸ್ತನ ಬದುಕು, ಸಂದೇಶ ಮತ್ತು ವಾಹಕ ಮಾತ್ರ ಎಂಬ ವಿವೇಕ ಗಳಿಸುವುದು ದೊಡ್ಡ ಅನಾವರಣವೇ ಸರಿ. ಕ್ರಿಶ್ಚಿಯನ್‌ ರಿಲಿಜನ್‌ಗಿರುವ ಆ ಅಪಾರ ಸಾಧ್ಯತೆಗಳನ್ನು ಗ್ರಹಿಸಿದ ಸಿಂಧು ದಾಂತೆಯಾಗಿರುವಂತೆ ತೋರುತ್ತದೆ. ಆ ಗ್ರಹಿಕೆ ಕೂಡ ಪರಂಪರೆಯ ನಾಡಿಮಿಡಿತದಿಂದ ಬಂದುದೇ ಆಗಿದೆ.

ಗ್ರೀಕ್‌ – ಲ್ಯಾಟಿನ್‌ ಪರಂಪರೆಯ ಮರು ಅಧ್ಯಯನ ಮತ್ತೆ ಆರಂಭವಾದುದೇ ಇಸ್ಲಾಂ ಶಕ್ತಿಗಳ ಉದಯದನಂತರ. ಯುರೋಪಿನಲ್ಲಿ ಕಾಣಿಸಿಕೊಂಡ ಪುನರುಜ್ಜೀವನ ಮುಂತಾದ ಸುಧಾರಣಾ ಆಂದೋಲನಗಳು ಇಸ್ಲಾಂ ಪ್ರಭಾವದ ಪರೋಕ್ಷ ಕೊಡುಗೆಯಾದಂತೆಯೇ, ಅಂತಹ ಸಾಂಸ್ಕೃತಿಕ ಸಂಘರ್ಷದ ಸೃಷ್ಟಿಯಾದ ದಾಂತೆ; ಇಸ್ಲಾಂ ರಿಲಿಜನ್ನಿನ ಇತಿ – ಮಿತಿ ಗ್ರಹಿಸುವುದರ ಮೂಲಕ ಅದುವರೆಗೂ ಮುರುಟಿ ಹೋದಂತಿದ್ದ ಯುರೋಪ್‌ ಮೂಲದ ಜನರ ಸಮಸ್ತ ಚೇತನದ ಮರುಹುಟ್ಟಿನ ಸೂಲಗಿತ್ತಿಯಾಗಿ ಪರಿವರ್ತನೆಗೊಂಡುದು – ಕಾಲಕಾಲಕ್ಕೆ ಕಾಲ ಒದಗಿಸುವ ಐತಿಹಾಸಿಕ ವ್ಯಂಗ್ಯಗಳ ಪೈಕಿ ಒಂದಷ್ಟೆ. ಅಂದರೆ ಬೇರೊಂದು ಸಂಸ್ಕೃತಿ ಮತ್ತು ರಿಲಿಜನ್ನಿನ ಸಾಮರ್ಥ್ಯ ಮತ್ತು ಇತಿಮಿತಿಯ ನೆಲೆಬೆಲೆ ಗ್ರಹಿಸುತ್ತಲೇ, ತನ್ನದನ್ನೂ ಕಂಡುಕೊಳ್ಳುವ ಹೊಸ ಹುಟ್ಟಿನ ಅರಿವು ಪಡೆಯುವುದು ಅದಕ್ಕಾಗಿ ಯುರೋಪ್ ಮೂಲದ ಜನ ತೆತ್ತ ಬೆಲೆ ಕಡಿಮೆ ಏನಲ್ಲ.

ಮುಂದೇನಾಯಿತು ಎಂಬುದು ಈಗ ಇತಿಹಾಸದ ಮಾತು. ಯುರೋಪ್‌ ಮೂಲದ ಜನರು ತಮ್ಮ ಹಿನ್ನೆಲೆಯ ಮೂಲವಾದ ಗ್ರೀಕ್‌ – ಲ್ಯಾಟಿನ್‌ ಪರಂಪರೆಯ ಮಹತ್ವವನ್ನು ಮತ್ತೆ ಕಂಡುಕೊಳ್ಳುವ ಹಾದಿಯಲ್ಲಿ ವೇಗವರ್ಧಕವಾಗಿ ಕಾಣಿಸಿಕೊಂಡ ಇಸ್ಲಾಂ ಶಕ್ತಿಗಳು, ಮುಂದೆ ಹಿಡಿದ ಹಾದಿ ಬಗ್ಗೆ ಹೆಚ್ಚು ಹೇಳಬೇಕಾದ ಅಗತ್ಯವಿಲ್ಲ. ಆ ಶಕ್ತಿಗಳು ದಣಿದುಹೋದ ರೀತಿಯಲ್ಲಿ ರಂಗದಿಂದ ನಿರ್ಗಮಿಸಬೇಕಾಗಿ ಬಂದುದು[8] ಏಕೆ? ಯುರೋಪ್‌ ಮೂಲದ ಜನರು ತಮ್ಮ ಎಲ್ಲ ಸಾಧ್ಯತೆಗಳ ವಿಶ್ವರೂಪ ಧರಿಸಿ ಅವತರಿಸುವಂತೆ ಎಚ್ಚರಿಸುವ ಕೆಲಸ ಮಾತ್ರ ಇಸ್ಲಾಂ ಶಕ್ತಿಗಳ ಪಾಲಿಗೆ ಬಂದ ವರವಾಗಿತ್ತೆ? ಅಷ್ಟಕ್ಕೆ ಮಾತ್ರ ಭೂರಂಗದ ಮೇಲಿನ ಅವರ ಪಾತ್ರ ಸೀಮಿತವಾಗಬೇಕಾಯಿತೆ? ಅದು ಮಾತ್ರವೇ ಅವರಿಗೆ ನಿಯತಿ ನೀಡಿದ ಪ್ರಾಮುಖ್ಯತೆಯಾಗಿತ್ತೆ?

ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ, ಮಾನವ ಜನಾಂಗಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಪ್ರಶ್ನೆಗಳ ಬಗ್ಗೆ ಯೋಚಿಸುವುದೂ ಕಷ್ಟವಾಗುತ್ತದೆ. ಆ ಕಡೆಗೆ ನೀಡಬೇಕಾದ ಗಮನ ನೀಡುವುದು, ಈ ಕೃತಿಯ ಆಶಯಗಳಲ್ಲೊಂದು. ಇಸ್ಲಾಂನ ಇತಿ – ಮಿತಿಗೆ ಸಂಬಂಧಿಸಿದ ಪ್ರಶ್ನೆ ಭಾರತಕ್ಕೆ ಸಂಬಂಧಿಸಿದ್ದೂ ಹೌದಾದಂತೆ, ಮಾನವ ಜನಾಂಗದ ಪ್ರಶ್ನೆಯೂ ಹೌದು. ಇಸ್ಲಾಂಗೆ ನೆಲೆ ನೀಡಬೇಕಾದ ಐತಿಹಾಸಿಕ ಅಗತ್ಯ ಭಾರತಕ್ಕೆ ಏಕೆ ಎದುರಾಯಿತು ಎಂಬ ಪ್ರಶ್ನೆಯೂ ಅದರಲ್ಲಿಯೇ ಸೇರಿಕೊಂಡಿದೆ. ಎಲ್ಲರಿಗೂ ಒಪ್ಪಿತವಾಗುವ ರೀತಿಯಲ್ಲಿ ಆ ಕುರಿತಂತೆ ಉತ್ತರ ಕಂಡುಕೊಳ್ಳುವ ಮಾತಿರಲಿ, ಪರಿಶೀಲನೆಯ ಆ ಹಾದಿಯಲ್ಲಿ ಮುಂದುವರಿಯಲು ಪೀಠಿಕೆ ರೂಪದ ಹಲವಾರು ಸಂಪುಟ ಸಿದ್ಧಪಡಿಸಬೇಕಾಗುತ್ತದೆ. ಆ ಕಾರಣ ಪರೋಕ್ಷ ಪರಾಮರ್ಶನದ ಮೂಲಕ ಸಮಸ್ಯೆಯ ಮೂಲವನ್ನು ಅದರ ಬೀಜರೂಪದಲ್ಲಿ ಗ್ರಹಿಸುವ ಪ್ರಯತ್ನವನ್ನಷ್ಟೆ ಇಲ್ಲಿ ಮಾಡಲು ಸಾಧ್ಯ – ಕೃತಿಯ ಮುನ್ನಡೆಗೆ ಎಷ್ಟುಬೇಕೋ ಎಷ್ಟು.

ಆ ಪ್ರಯತ್ನವನ್ನು ಕವಿಯಾಗಿ ದಾಂತೆಯೇ ನಿರ್ವಹಿಸಿದಂತೆ ಕಾಣುತ್ತದೆ.

ಅಲ್ಲಾಹುವಿನ ಕೊನೆಯ ಪ್ರವಾದಿ ಮಹಮ್ಮದ್‌ ಎಂಬ ನಂಬಿಕೆ, ಇಸ್ಲಾಂ ರಿಲಿಜನ್ನಿನ ಪ್ರಮುಖ ಸತ್ಯ ಅಥವಾ ದರ್ಶನಗಳ ಪೈಕಿ ಒಂದು:

Muhammad is not
The father of any
Of your men, but (he is)
The Apostle of God,
And the Seal of the Prophets:
And God has full knowledge
Of all things.

ಎಂಬ ಉಕ್ತಿಗೆ ಯುಸುಫ್‌ ಅಲಿ ನೀಡಿರುವ ವ್ಯಾಖ್ಯಾನ ಈ ರೀತಿ ಇದೆ:

When a document is sealed, it is complete,. And there can be no further addition. The holy Prophet Muhammad closed the long line of Aposstles. God’s teaching is and will always be continuous, but there has been and will be no Prophet after Muhammad. The later ages will want thinkers and reformers, not Prophets. This is not an arbitrary matter. It is a decree full of knowledge and wisdom: “for God has full knowledge of all things[9]

ಇದೆ ಅಂತಿಮ ಸತ್ಯ ಮತ್ತು ಕೊನೆ ಎಂಬ ನಂಬಿಕೆ ಕಾಪಾಡಿಕೊಳ್ಳಬೇಕಾದ ಅಥವಾ ಆ ನಿಲುವು ತಲುಪಿದ ವ್ಯಕ್ತಿ, ಸಂಸ್ಥೆ ಅಥವಾ ರಿಲಿಜನ್ನಿಗೆ ಅನ್ವೇಷಣಾ ಪ್ರವೃತ್ತಿ ಮತ್ತು ತಿಳಿಯುವ ಕುತೂಹಲದ ಅಗತ್ಯ ಕಾಡಲು ಸಾಧ್ಯವೆ? ಈಗಾಗಲೇ ಬಿಂಬಿತವಾದುದನ್ನು, ಅವರು ಸ್ಥಾಪಿಸಿದ ರಿಲಿಜನ್ನಿನ ಪಾರುಪತ್ತೆದಾರರ ಚೌಕಟ್ಟಿನ ಮಿತಿಯಲ್ಲಿ ಬದುಕುವುದು ಪ್ರಶಂಸಾರ್ಹವಾಗುತ್ತದೆ. ಬಹಳ ಸರಳವಾಗಿ ಹೇಳುವುದಾದರೆ ಪ್ರವಾದಿ ಮಹಮ್ಮದ್‌ ಶಹರದ ಅಥವಾ ಸ್ವಲ್ಪ ಭಿನ್ನವಾದ ಮತ್ತೊಬ್ಬ ಪ್ರವಾದಿ ಆಗಮನಕ್ಕೆ ಇಸ್ಲಾಂನಲ್ಲಿ ಅವಕಾಶ ಇಲ್ಲ. ಕ್ರಿಸ್ತನ ಪುನರುತ್ಥಾನಕ್ಕಾಗಿ ಕಾಯುವ ಕ್ರಿಶ್ಚಿಯನ್‌ ರಿಲಿಜನ್ನಿನ ತಳಹದಿ ಎಲ್ಲಿ? ಆ ಧೋರಣೆ ಎಲ್ಲಿ?[10]

ಮಾನವ ಸಮಾಜ ಮತ್ತು ದೈವತ್ವದ ಕಲ್ಪನೆ ಬೆಳೆದು ಬಂದ ರೀತಿಯನ್ನು ಕಾವ್ಯಪ್ರಚಂದದಲ್ಲಿ ಅಭಿವ್ಯಕ್ತಿಗೊಂಡಂತೆ ಅದರ ಐತಿಹಾಸಿಕ ಹೆಜ್ಜೆ ಗುರುತುಗಳ ಹಿನ್ನೆಲೆಯಲ್ಲಿ ಗ್ರಹಿಸಬೇಕಾದರೆ ಹೋಮರನಲ್ಲಿಗೆ ಹೋಗಬೇಕು. ಯಾವೊಂದು ತಳಕು ಗೊತ್ತಿಲ್ಲದ ಮತ್ತು ಮುಚ್ಚುಮರೆ ರಹಿತವಾದ ಮನುಷ್ಯ ಹಾಗೂ ದೈವ ಸಮಾಜದ ಚಿತ್ರಣ ನೀಡುವ ಹೋಮರನನ್ನು ಅಧ್ಯಯನ ಮಾಡುವುದೆಂದರೆ, ಚರಿತ್ರೆಯ ಹಾದಿಯಲ್ಲಿ ಕಾಣಿಸಿಕೊಂಡ ಪೂರ್ವಿಕರ ಬದುಕು ಮತ್ತು ಪ್ರಪಂಚವನ್ನು ಅದರ ಮೂಲರೂಪದಲ್ಲಿ ಅಧ್ಯಯನ ಮಾಡಿದಂತೆಯೇ ಸರಿ. ಕಾವ್ಯ ಪ್ರಪಂಚ ಬೆಳೆದುಬಂದ ರೀತಿಯನ್ನು ಅರಿಯಬೇಕಾದರೆ ಅದರ ಮೊದಲ ಮೂಲರೂಪವಾದ ಹೋಮರನಲ್ಲಿಗೆ ಹೋಗಬೇಕಾದಂತೆ; ಮಾನವ ಸಮಾಜ, ಸಂಸ್ಕೃತಿ ಮತ್ತು ನಾಗರಿಕತೆಯ ಆದಿ ಹೆಜ್ಜೆ ಗುರುತುಗಳನ್ನು – ಕಾವ್ಯ ಪ್ರಪಂಚದಲ್ಲಿ ಪ್ರತಿಫಲನಗೊಂಡಂತೆ – ಗುರುತಿಸಲು ಅವನಲ್ಲಿಗೆ ಹೋಗಬೇಕು. ಕಾವ್ಯ ಕನ್ನೆಯ ಮೊದಲ ಪ್ರೇಮಿಯಾಗಿದ್ದಿರಬಹುದಾದ ಆತನ ಆಗಮನದನಂತರ ಆಕೆ ದೇವತೆಯಾಗಿ ಪರಿವರ್ತನೆಗೊಂಡಂತೆ ಕಾಣುತ್ತದೆ.

ಹೋಮರನ ಎಪಿಕ್‌ಗಳ ನಾಯಕರ ಬದುಕಿನ ಕಲ್ಪನೆ ಮತ್ತು ಗುರಿ ಸೀಮಿತವಾದಂತೆ, ಅಲ್ಲಿನ ದೇವಾನುದೇವತೆಗಳ ಜಗತ್ತಿನ ಆಶಯ ಕೂಡ ಬಹಳ ಸೀಮಿತವಾದುದು: ಸಣ್ಣತನ, ಲೋಲೊಪತೆ, ಇಬ್ಬಂದಿತನ ಮತ್ತು ವಿನಾಕಾರಣ ಒಬ್ಬ ಕಾಲೆಳೆದು ಮತ್ತೊಬ್ಬರನ್ನು ಎತ್ತಿಕಟ್ಟುವ ಕುಯುಕ್ತಿ ಇತ್ಯಾದಿಗಳ ನಡುವೆಯೂ ಒಮ್ಮೊಮ್ಮೆ ಮಿಂಚು ಥಳಿಸಿದಂತೆ ಕಾಣಸಿಗುವ ಉನ್ನತಿಕೆ ಮತ್ತು ಉದಾತ್ತತೆಯ ಸೆಳಕುಗಳು ಹೋಮರನ ದೈವಸಮಾಜಕ್ಕೆ ಸಾಮಾನ್ಯವಾದಂತೆ; ಸೇಡು, ಜಿದ್ದು ಮತ್ತು ಪ್ರತೀಕಾರದ ಮನೋಭಾವ ಅಲ್ಲಿನ ಮಾನವ ಹಾಗೂ ದೈವಸಮಾಜಕ್ಕೆ ಬಹುತೇಕ ಸಮಾನವಾದುದು. ಟ್ರಾಯ್‌ ಯುದ್ದ ನಡೆಯುವುದೇ, ಓಡಿಬರಲು ಸಿದ್ಧಳಾಗಿದ್ದ ಹೆಲೆನ್ನಳನ್ನು ಕರೆದುಕೊಂಡು ಹೋದ ಟ್ರೋಜನ್ನರ ವಿರುದ್ಧ ಸೇಡು ತೀರಿಸಿಕೊಳ್ಳಲು. ಆ ಪ್ರತೀಕಾರದ ಮನೋಭಾವ ಎಷ್ಟೊಂದು ಪ್ರಬಲವಾದುದು ಎಂದರೆ, ಹೆಲೆನ್‌ ತನ್ನ ಸ್ವಂತ ಇಚ್ಛೆಯಿಂದ ಓಡಿಹೋಗಿರುತ್ತಾಳೆ ಎಂಬ ಸಂಗತಿಯನ್ನೇ ಗ್ರೀಕರು ಮರೆಯುತ್ತಾರೆ. ನಯನಾಜೂಕಿಲ್ಲದ, ಬದುಕಿನ ಬಗ್ಗೆ ಯಾವುದೇ ಘನವಾದ ಕಲ್ಪನೆ ಅಥವಾ ಉದ್ದೇಶವಿಲ್ಲದ ಮತ್ತು ಪ್ರಕೃತಿದತ್ತವಾಗಿ ಬಂದ ಶೌರ್ಯ ಮೆರೆಯುವುದೇ ಪ್ರಧಾನವಾದ ರೂಕ್ಷ ಮತ್ತು ಒರಟು ಸಮಾಜ: ಕೃತ್ರಿಮತೆಯ ಸೋಂಕಿಲ್ಲದ ಮತ್ತು ಮನಸ್ಸಿಗೆ ಬಂದುದನ್ನು ಯಥಾವತ್ತಾಗಿ ನಾಲಗೆಯ ಮೇಲೆ ಆಡಿತೋರಿಸುವ ಒಂದೇ ನಾಲಗೆಯ ಜನ ಎರಡು ಅಥವಾ ಮೂರು ನಾಲಗೆ ಮಾತು ಎಂದರೆ ಏನೆಂಬುದೇ ಗೊತ್ತಿಲ್ಲದ ಸರಳ ನಿರಾಳರು. ಅಲ್ಲಿನ ದೇವಾನುದೇವತೆಗಳು ಅಂಥವರೇ.

ಅದೇ ವರ್ಜಿಲನ ಕಾಲಕ್ಕಾಗಲೇ ಇಂದಿನ ಬದುಕಿಗೆ ಹತ್ತಿರವಾದ ನಯನಾಜೂಕಿನ ನಾಗರಿಕ ಸಮಾಜ ಪ್ರವೇಶಿಸಿಯಾಗಿತ್ತು; ಅಂತಹ ಸಮಾಜ ಮಾತ್ರ ಆದರ್ಶ ನಾಯಕನ ಕನಸು ಕಾಣಲು ಸಾಧ್ಯ ಪ್ರಕೃತಿಗೆ ಹತ್ತಿರವಾದ ಬದುಕಿನ ಹೋಮರನ ಜಗತ್ತಿಗೆ ಸುಳ್ಳು ಎಂದರೆ ಏನು ಎಂಬುದು ಹೆಚ್ಚಾಗಿ ಗೊತ್ತಿರಲಿಲ್ಲವಾದ ಕಾರಣ, ಸತ್ಯದ ಪ್ರತಿಪಾದನೆಯ ಅಗತ್ಯ ಇರಲಿಲ್ಲವಾದಂತೆ ಆದರ್ಶ ನಾಯಕನ ಅಗತ್ಯವೂ ಕಾಣಿಸಿರಲಿಲ್ಲ. ಅದೇ ವರ್ಜಿಲನ ಕಾಲಕ್ಕೆ ಆದರ್ಶ ನಾಯಕನ ಕಲ್ಪನೆಯ ಅಗತಯ ಬಹಳವಾಯಿತು. ಏಕೆಂದರೆ ಅನಾದರ್ಶನ ಬದುಕಿನ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ಭಯ ಅಥವಾ ಶಂಕೆ ಪ್ರಬಲವಾಗಿ ಕಾಡತೊಡಗಿದಾಗ ಮಾತ್ರ, ಮನುಷ್ಯರು ಕಾಪಾಡಿಕೊಳ್ಳಬೇಕಾದ ಆದರ್ಶದ ಹಂಬಲ ಮತ್ತು ತುಡಿತ ಹೆಚ್ಚಾಗುತ್ತದೆ. ಅದೇ ತರಹ ದೈವತ್ವದ ಕಲ್ಪನೆ ಕೂಡ ವರ್ಜಿಲ್‌ ಕಾಲಕ್ಕೆ ಬಹಳವಾಗಿ ಬದಲಾಯಿತು. ಹೋಮರನಲ್ಲಿ ಕಾಣುವಂತೆ ವರ್ಜಿಲನ ಲಿಖಿತ ಎಪಿಕ್‌ನಲ್ಲೂ ದೇವಾನುದೇವತೆಗಳು ಮಾನವ ಸಮಾಜದ ಆಗುಹೋಗುಗಳಲ್ಲಿ ನೇರ ತಲೆಹಾಕುವುದನ್ನು ಕಾಣಬಹುದಾದರೂ, ಅದಕ್ಕೂ ಮೀರಿ ಕೆಲವೊಂದರ ಪ್ರತೀಕಗಳಾಗಿ ಅವರು ಒಡಮೂಡುತ್ತಾರೆ: ಈನಿಯಾಸ್‌ನ ತಾಯಿ ವೀನಸ್‌ ತಾಯ್ತನದ ಪ್ರತೀಕವಾದರೆ, ಎಲ್ಲ ರೀತಿಯ ಅಡಚಣೆ ತಂದೊಡ್ಡುವುದರ ಮೂಲಕ ಸಹನೆ, ತಾಳ್ಮೆ, ಸಾಮರ್ಥ್ಯ ಮತ್ತು ತಿಳುವಳಿಕೆ ಒರೆಗೆ ಹಚ್ಚುವ ಜುನೋ ಶಕ್ತಿಗೆ ಸಂಕೇತ. ‘ಈನೀಡ್‌’ನ ಕೊನೆಯಲ್ಲಿ ಪ್ರಮುಖ ಪಾತ್ರವಹಿಸುವ ಜುಪಿಟರ್‌ ವಿಧಿ, ನಿಯತಿ ಮತ್ತು ಕಾಲದ ಪ್ರತಿನಿಧಿಯಾಗಿ ಕಾಣುತ್ತಾನೆ.

ದೈವತ್ವದ ಕಲ್ಪನೆ ಅದರ ಪ್ರೌಢರೂಪದಲ್ಲಿ ಪ್ರಕಟವಾಗುವುದನ್ನು ಕಾಣಬೇಕಾದರೂ ವರ್ಜಿಲನಲ್ಲಿಗೆ ಹೋಗಬೇಕು.

ಸತ್ತ ನಂತರ ಮನುಷ್ಯ ಜೀವಿಗಳು ಪುನರ್ಜನ್ಮ ಪಡೆಯಲು ಭೂಮಿಯ ಅಧೋಭಾಗದಲ್ಲಿರುವ ಪಿತೃಲೋಕಕ್ಕೆ ಹೋಗುತ್ತಾರೆ ಎಂಬ ಹೋಮರ್‌ – ವರ್ಜಿಲ್‌ ಕಾಲದ ಅತ್ಯಂತ ಸರಳ ಪೇಗನ್‌ ನಂಬಿಕೆ, ದಾಂತೆ ಕಾಲಕ್ಕೆ ಅತ್ಯಂತ ಸಂಕೀರ್ಣವಾದ ನರಕ, ಮಾರ್ಜಕಲೋಕ ಮತ್ತು ಸ್ವರ್ಗವಾಗಿ ಪರಿವರ್ತನೆಗೊಂಡವು. ನರಕದ ಅನುಭವವಿದ್ದಾಗ ಮಾತ್ರ, ಅದಕ್ಕೆ ತದ್ವಿರುದ್ಧವಾದ ಸ್ವರ್ಗದ ಕಲ್ಪನೆ ಬರಲು ಸಾಧ್ಯ. ಹೋಮರ್‌ – ವರ್ಜಿಲ್‌ ಕಾಲದ ಜನರಿಗೆ ಆ ಅಗತ್ಯತೆ ಎದುರಾಗಲಿಲ್ಲ ಎಂಬುದು.

ಹೋಮರನ ಸರಳ ಪಿತೃಲೋಕ ವರ್ಜಿಲ್‌ ಕಾಲಕ್ಕೆ ಮುಂದಿನ ಆಗುಹೋಗುಗಳ ಬಗ್ಗೆ ಮಾರ್ಗದರ್ಶನ ನೀಡುವ ದೈವಲೋಕದ ರೂಪ ಪಡೆದುಕೊಳ್ಳುತ್ತದೆ ಎಂಬ ಪ್ರಮುಖ ಬದಲಾವಣೆ ಹೊರತು, ವರ್ಜಿಲ್‌ ಮತ್ತು ಹೋಮರನ ಪಿತೃಲೋಕದ ಕಲ್ಪನೆಯಲ್ಲಿ ಅಂತಹ ಗಮನಾರ್ಹ ವ್ಯತ್ಯಾಸವೇನಿಲ್ಲ. ಸತ್ತ ನಂತರ ಪಿತೃಲೋಕದ ನಿವಾಸಿಯಾದ ಆತನ ತಂದೆ ಅಂಖೈಸಸ್‌ನ ಬಾಯಲ್ಲಿ ಭವ್ಯ ಭವಿತವ್ಯದ ಮಾತುಗಳು ಉದ್ಘೋಷಿತವಾಗುವುದು ಮಾತ್ರ ನೂತನ ಬೆಳವಣಿಗೆ. ಅದೇ ಪಿತೃಲೋಕ ದಾಂತೆಯ ಕಾಲಕ್ಕೆ ನರಕ, ಮಾರ್ಜಕಲೋಕ ಮತ್ತು ಸ್ವರ್ಗವಾಗಿ ಪರಿವರ್ತನೆಗೊಳ್ಳುತ್ತದೆ. ಕ್ರಿಶ್ಚಿಯನ್‌ ರಿಲಿಜನ್ನಿನ ಆಗಮನ ಆ ತರಹದ ಪ್ರಮುಖ ಬದಲಾವಣೆಯಿಂದ ಕೂಡಿದ ಬೆಳವಣಿಗೆಗೆ ಕಾರಣವಾಗಿರಬಹುದರೂ, ಅದೆ ಪ್ರಮಾಣದಲ್ಲಿ ಮಾನವ ಸಮಾಜ ಮತ್ತು ಬದುಕು ಕೂಡಾ ಬದಲಾಗಿ ಹೋಗಿತ್ತು: ದಾಂತೆ ನೀಡುವ ನರಕ ಮತ್ತು ಮಾರ್ಜಕಲೋಕದ ಚಿತ್ರಣಕ್ಕೆ ಸಾಮಗ್ರಿಯಾಗುವ ಮಟ್ಟಿಗೆ ಬದುಕು ಬದಲಾಗಿರಬಹುದಾದಲ್ಲಿ, ಆ ಬದುಕು ಎಷ್ಟು ಹದಗೆಟ್ಟಿರಬೇಡ!

 

[1]T. S. Eliot : A Virgilian Poet ಎಂಬ ಪುಸ್ತಕವನ್ನೇ ಗರೆತ್‌ ರೀವ್ಸ್‌ ಬರೆದಿದ್ದಾನೆ.

[2]‘ಇಲಿಯಡ್‌’ನಲ್ಲಿ ಈನಿಯಾಸ್‌ಗೆ ಸಂಬಂಧಿಸಿದಂತೆ ದೊರಕುವ ಕೆಲ ಪ್ರಮುಖ ವಿವರಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ:

The strong son of Anchises was leader of the Dardanians,
Aineias, whom divine Aphrodite bore to Anchiess
in the folds of Ida. A goddess lying in love with amortal : ಪುಟ ೯೭

Now as Aineias him wrecking the ranks of the warriors
he went on his way through the fighting and the spears’ confusion
Looking to see if he could find Pandaros the godlike;
and he came upon the strong and blameless son of Lykaon. ಪುಟ ೧೩೨

On the other side of the ditch at the break of the plain the Trojans
gathered about tall Hektor and stately Poulydamas
and Aineias, honoured by Trojans in their countryside as a god is, ಪುಟ ೨೩೫

“This way, friends, stand by me, I am alone, and terribly
I fear the attack of swift – footed Aineias advancing upon me,
powerful as he is for the slaying of men battle. ಪುಟ ೨೮೪

Richmond Lattimore (tr). The Ilid of Homer, The University of Chicago Press, ೧೯೫೧.

[3]Robert A. Medemott (cd), The Basic Writings of Radhakrishnan, Jaico Publishing House, ೧೯೯೯, ಪುಟ ೨೭೯.

[4]The Idea of a Christian Society. Faber and Faber, ೧೯೬೪, ಪುಟ ೧೨.

[5]ವೀರಶೈವ ಚಳವಳಿ ಕಾರಣ ಸಾಮಾಜಿಕ ಸ್ಥಿತ್ಯಂತರಕ್ಕೆ ಒಳಗಾದ ಕರ್ನಾಟಕದ ಜನ ಆ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಅಂತಹ ಬದಲಾವಣೆಗೆ ಕರ್ನಾಟಕ ಒಳಗಾದ ರೀತಿಯಲ್ಲಿ ಭಾರತದ ಮತ್ತಾವ ಭಾಗಗಳು ತುತ್ತಾದ ಉದಾಹರಣೆ ಇಲ್ಲ ಇಸ್ಲಾಂ ಆಗಮನದನಂತರ ಪಂಜಾಬ್‌, ಕಾಶ್ಮೀರ, ಬಂಗಾಳ ಮೊದಲಾದ ಕಡೆ ಕಾಣಿಸಿಕೊಂಡ ಸ್ಥಿತ್ಯಂರ ಬೇರೆ ತೆರನಾದವು.

[6]The Divine Comedy, Hell, ಸರ್ಗ ೨೮, ಪುಟ ೨೪೭

[7]Now from the sixth hour there was darkness over all the land until the ninth Hour. And about the ninth hour Jesus cried with a loud voice, “Eli, Eli, la’ma sabach – tha’ni?’’ that is, “My God, my God, why hast thou forsaken me?’’ And some of the bystanders hearing it said, “Wait, let us see whether Eli’jah will come to save him.’’ And Jesus cried again with a loud voice and yielded up his spirit. ಬೈಬಲ್‌, ಪರಿಷ್ಕೃತ ಆವೃತ್ತಿ, ಮ್ಯಾಥ್ಯೂ, ಪುಟ ೩೧.

[8]೮. ಯುರೋಪ್‌ ಮೂಲದ ಜನರ ವಿಜ್ಞಾನ ತಂತ್ರಜ್ಞಾನ ಆಧಾರಿತ ನವನಾಗರಿಕತೆ ಮತ್ತು ಸಂಸ್ಕೃತಿ ನಿರ್ಮಾಣಕ್ಕೆ, ಇಸ್ಲಾಂ ನೀಡಿದ ಕೊಡುಗೆಯ ಮಹತ್ವವನ್ನು. ಬರ್ಟ್ರಾಂಡ್‌ ರಸೆಲ್‌ಗಿಂತ ಚುಟುಕಾಗಿ ನಿರೂಪಿಸಲು ಸಾಧ್ಯವಿಲ್ಲ:

We owe it first to Alexander and then to Rome that the achievements of the great age of Greece were not lost to the world, like those of the Minoan age. In the fifth century B. C., a Jenghiz Khan, if one had happened so arise. Could have wiped out all that was important in the Hellenic world; Xerxes, with a little more competence, might have made Greek civilization very greatly inferior to what it became after he was repulsed. Consider the period from Aeschyfus to Plato: all that was done in this time was done by a minority of the population o a ew commercial cities. These cities, as the future showed. Had no great capacity for withstanding foreign conquest, but by an extraordinary stroke of good fortune their conquerors, Macedonian and Roman. Were Philhellenes, and did not destroy what they conquered, as Xerxes or Carthage would have done. The fact that we are acquainted with what has done by the Greeks in art and literature and philosophy and science is due to the stability introduced by Western conquerors who had the good sense to admire the civilization which they governed but did their utmost to preserve.

….. In the seventh century, the disciples of the Prophet conquered Syria, Egypt and North Africa; in the following century, they conquered Spain. Their victories were easy and the fighting was slight. Except possibly during the first few years, they were not fanatical; Christians and Jews were unmolested so long as they paid the tribute. Very soon the Arabs acquired the civilization of the Eastern Empire, but with the hopefulness of rising polity instead of the weariness of decline. Their learned men read Greek authors in translation, and wrote commentaries. Aristotle’s Aristotle’s reputation is mainly due to them; in antiquity, he was not regarded as on a level with Plato.

It is instructive to consider some of the words that we derive from Arabic, such as : algebra, alcohol. Alchemy, alembic, alkali, azimuth, zenith. With the exception of `alcohol’ – which meant not a drink, but a substance used in chemistry these words would give a good picture of some of the things we owe to the Arabs. Algebra had been invented by the Alexandrain Greeks, but was carried further by the Mohammedans. Alchemy’, `alembic’, `alkali’ are words connected with the attempt to turn base metals into gold, which the Arabs took over from the Greeks, and in pursuit of which they appealed to Greek philosophy. `Azimuth’ and `zenith’ are astronomical terms, chiefly useful to the Arabs in connection with astrology.

The etymological method conceals what we owe to the Arabs as regards knowledge of Greek Philosophy, because, when it was again studied in Europe, the technical terms required were taken from Greek or Latin. In philosophy, the Arabs were better as commentators than as original thinkers. Their importance, for us, is that they, and not the Christians. Were the immediate inheritors of those parts of the Greek tradition which only the Eastern Empire had kept alive. Contact with the Mohammedans, in Spain, and to a lesser extent in Sicily, made the West aware of Aristotle; also of Arabic numerals, algebra and chemistry. It was this contact that began the revival of learning in the eleventh century, leading to the choloastic philosophy. It was later, from the thirteenth century onward, that the study of Greek enabled men to go directi to the works of Plato and Aristotle and other Greek writers of antiquity. But if the Arabs had not preserved the tradition, the men of the Renaissance might not have suspected how much was to be gained by the revival classical learning.

History of Western Philosophy, Unwin Paperbacks, London, ೧೯೭೯, ಪುಟ ೨೮೬ – ೨೮೮.

[9]The Holy Quran, (Text Translation and Commentary), ಅಧ್ಯಾಯ ೫, ಸುರ ೩೩, ಪದ್ಯ ೪೦, ಪುಟ ೧೧೧೯

[10]ಕ್ರಿಸ್ತ ಹೇಳಿದಂತೆ ಎಲ್ಲರೂ ಬದುಕುವುದಾಗಿದ್ದಲ್ಲಿ, ಅದುವೇ ಬದುಕಿನ ಅಂತಿಮ ಗುರಿ ಎಂದು ಸ್ವೀಕರಿಸಲು ಸಾಧ್ಯವಾಗಿದ್ದಲ್ಲಿ, ಮಾರ್ಕ್ಸ್‌ವಾದ ಬರುತ್ತಿರಲಿಲ್ಲ. ಆ ಮಾತು ಎಲ್ಲ ರಿಲಿಜನ್‌ ಮತ್ತು ಧರ್ಮಗಳಿಗೂ ಅನ್ವಯಿಸುತ್ತದೆ. ಭೂಮಿ ಸೌರವ್ಯೂಹದ ಕೇಂದ್ರ ಎಂಬ ನಂಬಿಕೆಗೆ ಅನುಗುಣ ಬದುಕು ಸಾಗಿಸಲು ಎಲ್ಲ ಕ್ರಿಶ್ಚಿಯನ್ನರಿಗೂ ಸಾಧ್ಯವಾಗಿದ್ದಲ್ಲಿ ಕೋಪರ್‌ನಿಕಸ್‌, ಗೆಲಿಲಿಯೋ ಮೊದಲಾದವರ ಹುಟ್ಟಿಗೆ ಅರ್ಥವೇ ಇರುತ್ತಿರಲಿಲ್ಲ. ಆ ವಿವೇಕ ನೇರವಾಗಿ ಸ್ವರ್ಗದಿಂದ ಇಳಿದು ಬಂದಂತೆ ಸ್ಫುರಿಸಿದ್ದಲ್ಲಿ, ಗೆಲಿಲಿಯೋ ಮೊದಲಾದವರಿಗೆ ಹಾಕಲಾಗಿದ್ದ ಬಹಿಷ್ಕಾರವನ್ನು ಸತ್ತು ಎಷ್ಟೋ ವರ್ಷಗಳಾದ ನಂತರ ಹಿಂತೆಗೆದುಕೊಳ್ಳಬೇಕಾದ ಪ್ರಮೇಯ ಚರ್ಚ್‌ ವ್ಯವಸ್ಥೆ ತಳೆದಿರುವ ನಿಲುವು, ಅಂತಹ ಐತಿಹಾಸಿಕ ದೋಷದಿಂದ ಮುಕ್ತವಾಗಿಲ್ಲ. ಪೇಗನ್‌ ಮತ್ತು ಕ್ರಿಶ್ಚಿಯನ್‌ ನಡುವಿನ ಸಂಘರ್ಷ ಇನ್ನೂ ಮುಂದುವರಿದೇ ಇದೆ ಎಂಬುದಕ್ಕೆ ಆ ತರಹದ ಕೆಲವೊಂದು ಸಂಗತಿಗಳು ನಿದರ್ಶನ ಮಾತ್ರ.