ಏಕವ್ಯಕ್ತಿಕೃತವಾದ ಇಲಿಯಡ್‌ – ಒಡಿಸ್ಸಿಗಳು ಗ್ರೀಸ್‌ನಂತ ಸಣ್ಣ ಸಮಾಜದ ಕೊಡುಗೆಯಾದರೆ, ಮೂಲದಲ್ಲಿ ಏಕವ್ಯಕ್ತಿ ರಚನೆಯಾಗಿರುವ ಮಹಾಭಾರತ ರಾಮಾಯಣಗಳು ಭಾರತದಂತಹ ವಿಶಾಲ ದೇಶ ಮತ್ತು ಉಪಖಂಡವೊಂದರ ಸಮೂಹ ಸೃಷ್ಟಿಯಾಗಿ ಪರಿವರ್ತನೆಗೊಂಡವು. ಮೊದಲ ಎರಡು ಕೃತಿಗಳು ಗ್ರೀಕ್‌ ಭಾಷೆಯಲ್ಲಿ ಉದ್ಬೋಧಗೊಂಡರೆ, ಉಳಿದೆರಡು ಸಂಸ್ಕೃತದಲ್ಲಿ ಮೈದಳೆದಿರುವುದು ಎದ್ದು ಕಾಣುವ ಪ್ರಮುಖ ವ್ಯತ್ಯಾಸ. ಅಕ್ಷರಸಂಸ್ಕೃತಿಯ ಆರಂಭಪೂರ್ವದ ಮಾನವ ಜನಾಂಗದ ಬದುಕಿನ ಅತ್ಯಂತ ಮಹತ್ವದ ಸೃಷ್ಟಿ ಮತ್ತು ದಾಖಲೆಗಳಾದ ಆ ನಾಲ್ಕು ಕೃತಿಗಳಿಗೆ ಸಮನಾಗಿ ನಿಲ್ಲುವ ಎಪಿಕ್‌ಗಳು ಈ ಜಗತ್ತಿನ ಬೇರಾವ ಭಾಷೆಯಲ್ಲೂ ಬಂದಿಲ್ಲ ಎಂಬುದು, ಅವುಗಳ ನಡುವೆ ಇರುವ ಸಮಾನ ಅಂಶಕ್ಕೆ ಅತ್ಯುತ್ತಮ ಉದಾಹರಣೆ.

ಮನುಷ್ಯರ ಸೃಜನಶೀಲ ವ್ಯಕ್ತಿತ್ವ ಮತ್ತು ಮನಸ್ಸು ತಲುಪಿದ ಎತ್ತರದ ಮೂಲ ರೇಖು ಹಾಗೂ ಅಭಿವ್ಯಕ್ತಿಗಳಾದ ಎಪಿಕ್‌ಗಳು ಅವುಗಳ ನಿರ್ಮಾಣದಲ್ಲಿ ಕಾಲದುದ್ದಕ್ಕೂ ವಹಿಸಿದ ಪಾತ್ರ ಗಣನೀಯವಾದುದು. ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ವ್ಯಕ್ತಿತ್ವ ಮತ್ತು ಮನಸ್ಸುಗಳ ಸಮಗ್ರ ಅಭಿವ್ಯಕ್ತಿ ಮೊದಲು ದೊರಕುವುದು ಎಪಿಕ್‌ಗಳಲ್ಲಿ ಅಥವಾ ಅದೇ ಮಾತನ್ನು ಹೀಗೂ ಹೇಳಬಹುದು: ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯ ಆರಂಭದ ಸುಂದರ ಮತ್ತು ಸಮಗ್ರ ಅಭಿವ್ಯಕ್ತಿಯೇ ಎಪಿಕ್‌ಗಳು. ಕಾಲ ಮತ್ತು ಇತಿಹಾಸ ತರುವ ಅನೇಕ ತರಹದ ಒತ್ತಡ ಮತ್ತು ಬದಲಾವಣೆಗಳಿಗುಣ ಬದಲಾಗುತ್ತಲೇ ಆ ಅನ್ಯೋನ್ಯತೆ, ಕೆಲ ಘಟ್ಟಗಳಲ್ಲಿ ಅತ್ಯಂತ ದಟ್ಟವಾಗಿ ಮತ್ತೆ ಕೆಲವು ಕಡೆ ತೆಳುವಾಗಿಯಾದರೂ ಹರಿದುಬಂದಿದೆ. ಆ ಅನ್ಯೋನ್ಯತೆ ಮುಂದೆ ಪಡೆದುಕೊಂಡ ತಿರುವು ಮತ್ತು ಪ್ರತಿ – ತಿರುವುಗಳನ್ನು ಕಾಣಬೇಕಾದರೆ ಹೋಮರನಲ್ಲಿ ಹೋಗಬೇಕು. ಹೋಮರನಿಗೂ ಮೂಲವಾದ ಪರಂಪರೆಯ ಎಳೆಗಳು ದೊರಕುವುದು ಸಹ ಅದೇ ಹೋಮರನಲ್ಲಿಯೇ. ವಿಚಿತ್ರವೆಂದರೆ, ಅಂತಹ ಹೋಮರನನ್ನು ಅತ್ಯಂತ ಹತ್ತಿರದಿಂದ ಅಧ್ಯಯನ ಮಾಡುವುದರಿಂದ ಮಾತ್ರ ಭಾರತದ ಎಪಿಕ್‌ ಹಾಗೂ ಎಪಿಕ್‌ಮಾದರಿ ಕಾವ್ಯಪರಂಪರೆ ಮತ್ತು ಮುಂದಿನ ಬೆಳವಣಿಗೆಯನ್ನು ಸಹ ಅರ್ಥಮಾಡಿಕೊಳ್ಳಬಹುದಾಗಿದೆ. ಏಕೆಂದರೆ, ಆ ಪರಂಪರೆ ಕ್ರಮಾಗತವಾಗಿ ಬೆಳೆದು ಉಳಿದು ಬಂದಿರುವುದೇ ಅಲ್ಲಿ.

ಇಡೀ ಜಗತ್ತನ್ನೇ ತನ್ನ ಪ್ರಭಾವ ನಿಯಂತ್ರಣ ರೇಖೆಯ ಒಳಗಡೆ ತಂದುಕೊಳ್ಳಲು ಕಾರಣಕರ್ತವಾದ ಪಾಶ್ಚಾತ್ಯ ಸಂಸ್ಕೃತಿ ಮತ್ತು ನಾಗರಿಕತೆಗೆ ತಳಹದಿಯಾದ ಮೂಲ ರೇಖುಗಳನ್ನು ಕಾಣಬೇಕಾದರೂ ಅಲ್ಲಿಗೆ ಹೋಗಬೇಕು. ಎಪಿಕ್‌ಗಳ ಮೂಲಸ್ವರೂಪವನ್ನು ಅವುಗಳ ನಿಜಸ್ಥಿತಿಯನ್ನು ಕಾಣಬೇಕಾದರೂ ಸಹ, ಹೋಮರನಲ್ಲಿಗೆ ಹೋಗಬೇಕು. ಪಂಪ ಕನ್ನಡದಲ್ಲಿ ಬರೆಯುತ್ತಿರಬೇಕಾದರೆ ಬ್ರಿಟಿಷರು ಮರದ ತೊಪ್ಪಲು ತೊಟ್ಟು ಬದುಕುತ್ತಿದ್ದರು ಎಂಬುದಾಗಿ ಇಂಗ್ಲಿಷ್‌ ಭಾಷಾಭಿಮಾನಿಗಳನ್ನು ಕುವೆಂಪು ಛೇಡಿಸುತ್ತಿದ್ದರು ಎಂದು ಕೆ. ಪಿ. ಪೂರ್ಣಚಂದ್ರ ತೇಜಸ್ವಿ ತಮ್ಮ ‘ಅಣ್ಣನ ನೆನಪು’ ಕೃತಿಯಲ್ಲಿ ದಾಖಲಿಸುತ್ತಾರೆ.

[1] ಬಹಳ ವರ್ಷ ಕಾಲ ಏಷ್ಯಾದ ಕಾಲೋನಿಯಾಗಿದ್ದ ಇಂದಿನ ಯುರೋಪಿನ ಸಂತತಿಯ ಅನೇಕರು ಮೂಲತಃ ಏಷ್ಯನ್ನರು ಎಂದು ನೆಹರು ತಮ್ಮ ‘ಗ್ಲಿಂಪ್ಸಸ್‌ ಆಫ್‌ ವರ್ಲ್ಡ್‌ ಹಿಸ್ಟರಿ’ಯಲ್ಲಿ ಬರೆಯುತ್ತಾರೆ.[2] ಅದೇ ದಾಟಿಯಲ್ಲಿ ಮುಂದುವರಿಯುತ್ತಾ ರೋಂ ಮತ್ತು ಬ್ರಿಟಿಷ್‌ ಸಾಮ್ರಾಜ್ಯಗಳಿಗಿಂತ ದೀರ್ಘ ಕಾಲ ಬಾಳಿದ ಅನೇಕ ದೊಡ್ಡ ಸಾಮ್ರಾಜ್ಯಗಳು ಏಷ್ಯಾದ ನೆಲದಲ್ಲಿ ಬಂದು ಹೋಗಿವೆ ಎಂದು ಹೆಮ್ಮೆ ಪಡುತ್ತಾರೆ.

ಬ್ರಿಟಿಷರ ತರಹವೆ ಎಲೆತೊಪ್ಪಲು ತೊಟ್ಟು ಬದುಕುತ್ತಿದ್ದ ಸಂಸ್ಕೃತಿ ಎಲ್ಲರಿಗೂ ಸಾಮಾನ್ಯವಾದುದು. ಕೆಲವರು ಆ ಅಧ್ಯಾಯವನ್ನು ಬಹಳ ಮುನ್ನವೇ ಹಾದುಬಂದಿರಬಹುದು, ಇಲ್ಲ ತಡವಾಗಿ ದಾಟಿರಬಹುದು. ಆನಂತರ ಏನಾಯಿತು ಎಂಬುದು ಬಹಳ ಮುಖ್ಯ. ನೆಹರು ಅವರ ಮಾತುಗಳಲ್ಲಿ ವಾಸ್ತವಾಂಶ ಇಲ್ಲದಿಲ್ಲ. ಆದರೆ ರೋಮನ್‌ ಸಾಮ್ರಾಜ್ಯ ಮತ್ತು ಆ ಪರಂಪರೆಯ ಮುಂದುವರಿಕೆಯಾದ ಬ್ರಿಟಿಷ್‌ ಸಾಮ್ರಾಜ್ಯ ಬೀರಿದ ಪ್ರಭಾವ ಮತ್ತು ಪರಿಣಾಮವನ್ನು ಬೇರಾವ ಸಾಮ್ರಾಜ್ಯಗಳೂ ಮಾಡಿದ ಉದಾಹರಣೆ ಇಲ್ಲ; ಆ ಅರ್ಥದಲ್ಲಿ ಇಂದಿಗೂ ಸಾತತ್ಯತೆ ಉಳಿಸಿಕೊಂಡು ಬಂದಿರುವ ಏಕೈಕ ಸಾಮ್ರಾಜ್ಯ ಕಲ್ಪನೆ ಎಂದರೆ, ಲ್ಯಾಟಿನ್‌ ಜನ ಕಟ್ಟಿದ ರೋಮನ್‌ ಮಾತ್ರ ಎಂಬುದನ್ನು ಮರೆಯದಿರುವುದು ಒಳ್ಳೆಯದು. ರಸೆಲ್‌ ಮತ್ತು ನೆಹರು ಗುರುತಿಸುವಂತೆ:

……….The conception of one human family, one Catholic religion, one universal culture, and one world – State, has haunted men’s thoughts ever since its approximate realization by Rome.[3]

The most wonderful thing about Rome is this idea behind it – the idea of world – dominion, of the headship of the world. Even when Rome fell, this idea protected it and gave it strength. And the idea persisted even when it was cut off completely from Rome itself. So much so that the Empire itself vanished and became a phanform, but the idea remained.ಅಲ್ಲಿಯೆ, ಪುಟ ೮೮

ಆ ರೀತಿಯ ಸಾತತ್ಯತೆ ಕಟ್ಟಿದ ಸಂಸ್ಕೃತಿ ಮತ್ತು ನಾಗರಿಕತೆಯ ಒಟ್ಟಂದದ ಭಾಗವೂ ಹೌದು. ಸಾತತ್ಯತೆ ಎಂಬುದು ಬದುಕಿನ ಯಾವುದೋ ಒಂದು ಅಂಗದಲ್ಲಿ ಮಾತ್ರ ಇರಲು ಸಾಧ್ಯವಿಲ್ಲ. ಎಲ್ಲ ಹಂತದಲ್ಲಿ ಮತ್ತು ಎಲ್ಲ ಅಂಗಗಳನ್ನು ವ್ಯಾಪಿಸಿರುತ್ತದೆ. ಅದು ಹೇಗೆ ಸಾಧ್ಯವಾಯಿತು ಮತ್ತು ಆ ಸಾಧ್ಯತೆಯೇ ಯುರೋಪಿನ ಸಂಸ್ಕೃತಿ ಮತ್ತು ನಾಗರಿಕತೆ ಜಗತ್ತಿನಾದ್ಯಂತ ಬೀರುತ್ತಿರುವ ಪ್ರಭಾವಕ್ಕೆ ಕಾರಣವಾಗಿದ್ದಿರಬಹುದೆ ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸುವುದು ಇಲ್ಲಿನ ಉದ್ದೇಶಗಳ ಪೈಕಿ ಒಂದು.

ಆಫ್ರಿಕಾದ ಇಥಿಯೋಫಿಯಾ ಭಾಗದಿಂದ ವಿವಿಧ ಕಡೆಗೆ ಹರಡಿ ಹೋಗಿರಬಹುದಾದ ಮನುಷ್ಯರು ಒಂದು ಕಡೆ ನೆಲೆ ನಿಂತು ಕೃಷಿಗೆ ಎಲ್ಲ ತರಹದ ಹಂತ ಹಂತವಾಗಿ ಮೊದಲು ಮಾಡಿದುದು ಇಂದಿನ ಇರಾಕ್‌ನ ಭಾಗದಲ್ಲಿ, ಪ್ರಾಯಶಃ ಹತ್ತು ಸಾವಿರ ವರ್ಷಗಳ ಹಿಂದೆ; ಅದೇ ಸುಮಾರಿನಲ್ಲಿ ಭಾರತ ಮತ್ತು ಚೀನಾ ಭಾಗದಲ್ಲೂ ಕೃಷಿ ಆಧಾರಿತ ಜೀವನಕ್ಕೆ ಮೊದಲಾಗಿರಬಹುದೆಂದು ಭಾವಿಸಲು ಅವಕಾಶವಿದೆ. ಆದರೆ ಎಪಿಕ್‌ ಬರೆಯುವ ಮನಸ್ಸು ಮೊದಲು ಮೂಡಿದುದು ಅದೇ ಇರಾಕ್‌ನ ಭಾಗದಲ್ಲಿರಬಹುದೆಂದು ಒಂದು ಸ್ಥೂಲ ಅಂದಾಜು. ಕೃಷಿ ಆಧಾರಿತ ಬದುಕಿಗೆ ಮೊದಲು ಮಾಡಿದ ಟೈಗ್ರಿಸ್‌ – ಯುಪ್ರೆಟಿಸ್‌ ಕಣಿವೆಯ ಮೆಸಪೊಟೋಮಿಯಾ ಭಾಗದ ಜನರೇ ಈ ಜಗತ್ತಿನ ಮೊದಲ ಎಪಿಕ್‌ ನೀಡಿರಬಹುದೆಂದು ಖಚಿತವಾಗಿ ನಂಬಲು ಅವಕಾಶವಿದೆ. ಸೆಮೆಟಿಕ್ ಜನರ ಕತೆ ಹೇಳುವ ಹಳೆಯ ಬ್ಯಾಬಿಲೋನಿಯಾ (ಅಕ್ಕಾಡಿಯಾ) ಭಾಷೆಯಲ್ಲಿ ಬರೆಯಲಾಗಿರುವ ಮೂರು ಸಾವಿರ ವರ್ಷಗಳಿಗೂ ಹಿಂದಿನದಿರಬಹುದಾದ ‘ಗಿಲ್ಗಮೆಷ್‌’ಎಪಿಕ್‌ ಮತ್ತರದ ಛಂದೋಬಂಧದಿಂದ ಪ್ರಭಾವಿತನಾಗಿ ಹೋಮರ್‌ ಹೆಕ್ಸಾಮೀಟರ್‌[4] ರೂಪಿಸಿಕೊಂಡಿರಬಹುದೆಂಬ ಊಹೆ ಇದೆ.

ಈವರೆಗೆ ಲಭ್ಯವಿರುವ ಮಾಹಿತಿ ಮತ್ತು ದಾಖಲೆಗಳ ಪ್ರಕಾರ ಮಾನವ ಜನಾಂಗದ ಮೊದಲ ಎಪಿಕ್‌ ಆಗಿದ್ದಿರಬಹುದಾದ ‘ಗಿಲ್ಗಮೆಷ್‌’, ಎಪಿಕ್‌ ರಚನೆ ಕುರಿತ ಅನೇಕ ನಂಬಿಕೆಗಳನ್ನು ಪ್ರಶ್ನಿಸುವಂತೆ ಮಾಡುತ್ತದೆ. ಇಲಿಯಡ್‌ – ಒಡಿಸ್ಸಿ ಮತ್ತು ಮಹಾಭಾರತ – ರಾಮಾಯಣಗಳನ್ನು ರಚಿಸಿದ ಹೋಮರ್‌, ವ್ಯಾಸ ಮತ್ತು ವಾಲ್ಮೀಕಿಯರು ಸೂತ ಪರಂಪರೆಗೆ ಸೇರಿದ ಚಾರಣ ಕವಿಗಳಾದರೆ, ‘ಗಿಲ್ಗಮೆಷ್‌’ ಎಪಿಕ್‌ ದೊರಕಿರುವುದು ಲಿಖಿತ ರೂಪದಲ್ಲಿ. ಎಪಿಕ್‌ ಕವಿಗಳ ಬಗ್ಗೆ ಖಚಿತ ಮಾಹಿತಿ ದೊರಕುವುದು ಬಹಳ ಅಪರೂ; ಕೆಲವೊಮ್ಮೆ ಅವರು ಯಾರು, ಏನು, ಎತ್ತ ಇತ್ಯಾದಿ ಬಗ್ಗೆ ದೊಡ್ಡ ವಿವಾದವೇ ಇರುತ್ತದೆ. ಶಿಲಾಫಲಕಗಳ ಮೇಲೆ ಬೆಣೆಯಾಕಾರದ ಕಠಾರಿಲಿಪಿಯಲ್ಲಿ[5] ಕೆತ್ತಲಾಗಿರುವ ‘ಗಿಲ್ಗಮೆಷ್‌’ ರಚಿಸಿದ ಕವಿ ಹೆಸರು ಷಿನ್‌ – ಎಖಿ – ಉನ್ನಿನ್ನಿ; ಮಾನವ ಜನಾಂಗ ಕಂಡ ಮೊದಲ ಎಪಿಕ್‌ ಕವಿಯ ಹೆಸರು ಅಷ್ಟೊಂದು ನಿಸ್ಸಂದೇಹವಾಗಿ ಗೊತ್ತಾಗಿರುವುದು ಇದೇ ಮೊದಲು.

ಕ್ರಿ. ಪೂ. ೬೧೨ ರಲ್ಲಿ ಪರ್ಷಿಯನ್ನರು ನಡೆಸಿದ ದಾಳಿಯ ಕಾಲದಲ್ಲಿ ಸಿಕ್ಕು ಧ್ವಂಸವಾಗಿ ಹೋಗಿದ್ದ ಅಸ್ಸೀರಿಯಾ ದೊರೆ ಅಶುರ್‌ ಬನಿಪಾಲನ ನಿನೆವ್ಹೆ ಗ್ರಂಥಾಲಯದಲ್ಲಿ ದೊರಕಿದ ೧೨ ತ್ರುಟಿತ ಅಥವಾ ಜಖಂಗೊಂಡ ಶಿಲಾಫಲಕಗಳ ಮೇಲಿನ ಕೆತ್ತನೆ ಆಧರಿಸಿ ಮರಳಿ ಪಡೆಯಲಾದ ಎಪಿಕ್‌, ‘ಗಿಲ್ಗಮೆಷ್‌’, ಅಮರತ್ವ ನೀಡುವ ಸಂಜೀವಿನಿ ಪಡೆಯಲು ಅದೇ ಹೆಸರಿನ ರಾಜ ನಡೆಸುವ ಅನ್ವೇಷಣೆ ಮತ್ತು ಸಾಹಸಗಳ ಗಾಥೆ. ಅನೇಕ ಐತಿಹ್ಯ, ಪುರಾಣ ಮತ್ತು ದಂತಕತೆಗಳಿಗೆ ವಸ್ತುವಾಗಿರುವ ಬ್ಯಾಬಿಲೋನಿಯಾದ ಉರುಕ್‌ನ ರಾಜ ಗಿಲ್ಗಮೆಷ್‌ ಕುರಿತು, ಅವನು ಬದುಕಿ ಆಳ್ವಿಕೆ ನಡೆಸಿದ ಸುಮಾರು ಕ್ರಿ. ಪೂ. ೨೭೦೦ನೇ ಇಸವಿಯಿಂದೀಚೆಗೆ ಅನೇಕ ಎಪಿಕ್‌ಗಳನ್ನು ಬರೆಯಲಾಗಿದೆ. ಕ್ರಿ. ಪೂ. ೨೦೦೦ದ ವೇಳೆಗಾಗಲೇ ಮಣ್ಣಿನ ಫಲಕಗಳ ಮೇಲೆ ಸುಮೇರಿಯನ್‌ ಭಾಷೆಯಲ್ಲಿ ಬರೆಯಲಾಗಿರುವ ಅನೇಕ ಐತಿಹ್ಯಗಳು ಇಂದಿಗೂ ಉಳಿದು ಬಂದಿವೆ. ಆ ಭಾಷೆಗೂ ಮನುಷ್ಯರಿಗೆ ಗೊತ್ತಿರುವ ಮತ್ತಾವುದೇ ಭಾಷೆಗಳಿಗೂ ಹೆಚ್ಚಿನ ಸಂಬಂಧ ಇರುವಂತೆ ಕಾಣುವುದಿಲ್ಲ; ಆದರೆ ನಂತರದ ಅಕ್ಕಾಡಿಯನ್‌ ಭಾಷೆಯಲ್ಲಿ ಬರೆಯಲಾಗಿರುವ ‘ಗಿಲ್ಗಮೆಷ್‌’ ಎಪಿಕ್‌ ಶಿಲಾಫಲಕದಲ್ಲಿ ಉಳಿದುಬಂದಿದ್ದು ಅದು ಹೀಬ್ರೂಗೆ ಸಂಬಂಧಿಯಾದುದು ಎಂಬುದಾಗಿ ತಜ್ಞರ ಅಭಿಮತ.

ಗಿಲ್ಗಮೆಷ್‌ಗೆ ಹೆಗಲೆಣೆಯಾಗಿ ಅವನ ಅನೇಕ ಸಾಹಸಯಾತ್ರೆಗಳಲ್ಲಿ ಪಾಲ್ಗೊಂಡು ಕೊನೆಗೆ ಅವನಿಗಾಗಿ ಪ್ರಾಣಬಿಡುವ ಎಂಕಿಡುವಿನ ಕತೆಯೂ ಅದರಲ್ಲಿ ಸೇರಿಹೋಗುವುದರಿಂದಾಗಿ ಎಪಿಕ್‌ ಪಡೆದುಕೊಳ್ಳುವ ಸಂಕೀರ್ಣತೆ ಗಮನಾರ್ಹ. ವರ್ಗ, ವರ್ಣ ಮತ್ತು ಜಾತಿ ಆಧಾರಿತ ವಾದ ಯಾವುದೇ ಭೇದಗಳಿಗಿಂತಲೂ ಮಿಗಿಲಾದ ಮತ್ತು ಅವುಗಳಿಗೆ ಮೂಲವಾಗಿದ್ದಿರಬಹುದಾದ ಆದಿಸಂಸ್ಕೃತಿ ಮತ್ತು ನಾಗರಿಕತೆ ನಡುವಿನ ಸಂಘರ್ಷದ ಕತೆಯೂ ಆಗಿ ಮಾರ್ಪಾಡುವುದು, ಅದರ ಸಮಕಾಲೀನತೆಯ ಮಹತ್ವವನ್ನು ಹೆಚ್ಚಿಸುತ್ತದೆ. ಆ ಕಾರಣಕ್ಕಾಗಿಯಾದರೂ, ಆಧುನಿಕರು ‘ಗಿಲ್ಗಮೆಷ್‌’ ಎಪಿಕ್‌ನಿಂದ ಕಲಿಯುವುದು ಬಹಳವಿದೆ.

ಮೂರನೆಯ ಎರಡು ಭಾಗ ದೈವತ್ವ ಮತ್ತು ಮೂರನೆಯ ಒಂದು ಭಾಗ ಮನುಷ್ಯತ್ವದಿಂದ ಕೂಡಿದ ಗಿಲ್ಗಮೆಷ್‌ ಅಸಾಧ್ಯ ಸಾಹಸಿ, ಎಂದೂ ಸೋಲು ಕಂಡರಿಯದ ಅಪ್ರತಿಮ ಪರಾಕ್ರಮಿ ಮತ್ತು ನಾಗರಿಕ ದೇವ – ಮಾನವ: ಅವನ ಒಡನಾಡಿಯಾದ ಎಂಕಿಡು, ನಾಗರಿಕತೆಯ ಗಂಧ ಗಾಳಿ ಇಲ್ಲದ, ಡಜನ್‌ಗಟ್ಟಲೆ ವನ್ಯಜೀವಿಗಳ ಶಕ್ತಿಗೂ ಮೀರಿದ ಪರಾಕ್ರಮಶಾಲಿ. ಆದರೆ ಬಲಶಾಲಿಯಾದ ಏಕೈಕ ಕಾರಣಕ್ಕಾಗಿ ಏನೆಲ್ಲ ಮಾಡಲು ಹೋಗಬಾರದು ಎಂಬ ಸಾರಾಸಾರ ವಿವೇಚನೆ ಸ್ವಲ್ಪ ಕಡಿಮೆ ಇರುವ ಆದಿ ಸಂಸ್ಕೃತಿಯ ಮನುಷ್ಯ. ಮದುವೆಯಾಗಲಿರುವ ಯಾವುದೇ ಮದುಮಗಳನ್ನು ಮೊದಲು ಸುಖಿಸುವುದು ತನ್ನ ಜನ್ಮಸಿದ್ಧ ಹಕ್ಕು ಎಂಬ ಜೋಕುಮಾರಸ್ವಾಮಿ[6] ಮನೋಭಾವದ ಗಿಲ್ಗಮೆಷ್‌ ಗಂಡು ಮಕ್ಕಳನ್ನು ಕೊಲ್ಲಿಸುತ್ತಿದ್ದ. ಅವನ ಆಟಾಟೋಪ ಕೊನೆಗಾಣಿಸುವಂತೆ ಮೊರೆಯಿಟ್ಟ ಜನರ ಆರ್ತತೆ ಕೇಳಿ ಎಂಕಿಡುವನ್ನು ಸೃಷ್ಟಿಸಿದ ದೇವರು, ‘ಅವರಿಬ್ಬರ ಕಲಿತನದಲ್ಲಿ ಉರುಕ್‌ ನೆಮ್ಮದಿ ಕಾಣಲಿ’ ಎಂದು ಹಾರೈಸುತ್ತಾನೆ. ಹಾಗೆ ನೋಡುವುದಾದಲ್ಲಿ ಅವರಿಬ್ಬರು ಬೇರೆಯಲ್ಲ; ಒಂದೇ ವ್ಯಕ್ತಿತ್ವದ ಎರಡು ಮುಖಗಳು ಎನ್ನುವುದಕ್ಕಿಂತ ಒಂದೇ ದೇಹದಲ್ಲಿ ಹರಿಯುವ ರಕ್ತದ ಎರಡು ವಾಹಿನಿಗಳು, ಮತ್ತು ಅವೆರಡೂ ಪರಸ್ಪರವಾದವು; ಬದಲಾದ ವಾಹಿನಿಯ ಲಕ್ಷಣ ಅಥವಾ ಗುಣ ಅನುಸರಿಸಿ ಬದಲಾವಣೆ ಯಾವುದೇ ಗಳಿಗೆಯಲ್ಲಿ ನಡೆದುಹೋಗಿಬಿಡಬಹುದು.

ಗಿಲ್ಗಮೆಷ್‌ನ ಅರ್ಧಭಾಗವಾದ ಎಂಕಿಡುವನ್ನು ಯುರೋಪಿನ ಸಂಶೋಧಕರು ಆದಿ ಮಾನವ ಎನ್ನುತ್ತಾರೆ. ಕಾಡು ಮನುಷ್ಯನಾದರೂ ಸಂಸ್ಕೃತಿವಿಹೀನನಲ್ಲ; ಮನುಷ್ಯತ್ವ, ಮುಗ್ಧತೆ, ಪ್ರೀತಿ, ಕರುಣೆ ಗೊತ್ತಿರುದ ಮತ್ತು ನಶ್ವರತೆಯ ಅರಿವಿರುವ ಮನುಷ್ಯ: ಎಲ್ಲ ಸಂಸ್ಕೃತಿ ಮತ್ತು ನಾಗರಿಕತೆಗಳಿಗೂ ಮೂಲವಾದ ಆದಿಸಂಸ್ಕೃತಿಯ ಪ್ರತಿನಿಧಿ. ಎಂಕಿಡು ಸತ್ತನಂತರ ಆದಿಸಂಸ್ಕೃತಿಗೆ ಮರಳುವ ಗಿಲ್ಗಮೆಷ್‌, ಮೃತ್ಯುವನ್ನು ಗೆಲ್ಲುವ ಸಂಜೀವಿನಿ ಬಳ್ಳಿಯನ್ನು ಹುಡುಕಿಕೊಂಡು ಹೊರಡುತ್ತಾನೆ. ಮನುಷ್ಯ ಜನಾಂಗದ ಆ ಎರಡು ಅವಸ್ಥೆಗಳ ನಡುವಿನ ಆಂತರಿಕ ಪರಿವರ್ತನೆಯನ್ನು ಬಹಳ ಸೂಕ್ಷ್ಮವಾಗಿ ಷಿನ್‌ – ಎಖಿ – ಉನ್ನಿನ್ನಿ ಅನ್ವೇಷಿಸುವ ರೀತಿ ಆಧುನಿಕರನ್ನು ದಂಗುಬಡಿಸುವಷ್ಟು ನಾಜೂಕಾಗಿದೆ. ‘ಗಿಲ್ಗಮೆಷ್‌’ನಲ್ಲಿ ಜನಪದ ಮೂಲದ ಅನೇಕ ಅಂಶಗಳನ್ನು ಗುರುತಿಸಬಹುದಾದರೂ ಜನಪದೀಯವಾಗಿ ಉಳಿಯುವುದಿಲ್ಲ.

ದೇವರ ಸೃಷ್ಟಿಯಾದ ಎಂಕಿಡು ಬೆತ್ತಲೆ ಕಾಡುಮೃಗಗಳ ಜೊತೆ ಒಬ್ಬನಾಗಿ ಅಡ್ಡಾಡಿಕೊಂಡಿರಬೇಕಾದರೆ, ಅವನನ್ನು ಪಳಗಿಸುವ ಉದ್ದೇಶದಿಂದ ಹೆಂಗಸೊಬ್ಬಳನ್ನು ಕಳುಹಿಸಲಾಗುತ್ತದೆ. ಆ ರೀತಿ ಕಳಿಸಲಾದ ಮಹಿಳೆ ಸೂಳೆ ಎಂದು ಎಪಿಕ್‌ನಲ್ಲಿ ಬರುತ್ತದೆ – ಆ ಕಲೆಯನ್ನು ಕರಗತ ಮಾಡಿಕೊಂಡವಳು ಎಂಬ ಅರ್ಥದಲ್ಲಿ ಇರಬೇಕು. ಅವಳ ಸಂಗಕ್ಕೆ ಒಲಿದಲ್ಲಿ ಮೃಗೀಯ ಶಕ್ತಿಯ ಜತೆಗೆ ಕಾಡುತನ ಕಳೆದುಕೊಳ್ಳುತ್ತಾನೆ ಎಂಬ ನಂಬಿಕೆಯಿಂದ ಕಳಿಸಲಾದ ಆಕೆಯ ಜತೆಗಿನ ಸಂಸರ್ಗದಿಂದಾಗಿ ಆ ಎರಡನ್ನೂ ಕಳೆದುಕೊಳ್ಳುತ್ತಾನೆ ಎಂಬ ನಂಬಿಕೆಯಿಂದ ಕಳಿಸಲಾದ ಆಕೆಯ ಜತೆಗಿನ ಸಂಸರ್ಗದಿಂದಾಗಿ ಆ ಎರಡನ್ನೂ ಕಳೆದುಕೊಂಡಿರುವೆ ಎಂಬು ಭಾವಿಸುವ ಎಂಕಿಡುವಿಗೆ ಅನಂತರ ಉಳಿಯುವುದು ಪ್ರಲಾಪ ಮಾತ್ರ. ಈ ಮಧ್ಯೆ ಗಿಲ್ಗಮೆಷ್‌ಗೆ ಅನೇಕ ತರಹದ ಕನಸುಗಳು ಬೀಳತೊಡಗುತ್ತವೆ. ಜನ್ನನ ‘ಯಶೋಧರ ಚರಿತೆ’ಯಲ್ಲಿ ಬರುವ ತಾಯಿ ಮಗನಿಗೆ ಬಿದ್ದ ಕನಸುಗಳನ್ನು ವಿಶ್ಲೇಷಿಸುವಂತೆ, ಆತನ ತಾಯಿ, “ಹೆಂಡತಿಗೂ ಮಿಗಿಲಾದ ಸ್ನೇಹಿತ ನಿನಗೆ ದೊರಕಲಿದ್ದು ಅವನ ಒಡನಾಡಿತನದಲ್ಲಿ ಅನೇಕ ಸಾಹಸ ಮತ್ತು ಪರಾಕ್ರಮ ನಡೆಸಲಿರುವುದಾಗಿ” ಭವಿಷ್ಯ ನುಡಿಯುತ್ತಾಳೆ.

ಈ ಕಡೆ ಕುರುಬರ ನೆರವಿನಲ್ಲಿ ಒಂದೊಂದಾಗಿ ನಾಗರಿಕತೆಯ ಗುಣಲಕ್ಷಣ ಅನುಸರಿಸತೊಡಗಿದ ಎಂಕಿಡು, ಮದುವೆಗೆ ಮೊದಲು ವಧುವಿನ ಸಂಗಕ್ಕಾಗಿ ಹಾತೊರೆದು ಬಂದ ಗಿಲ್ಗಮೆಷ್‌ನನ್ನು ಬಾಗಿಲಲ್ಲಿ ಅಡ್ಡನಿಂತು ಎದುರಿಸುತ್ತಾನೆ; ನಡೆದ ಭೀಕರ ಹೋರಾಟದಲ್ಲಿ ಗಿಲ್ಗಮೆಷ್‌ ಮೇಲುಗೈ ಸಾಧಿಸುತ್ತನಾದರೂ ಇಬ್ಬರೂ ಒಡನಾಡಿಗಳಾಗಲು ನಿರ್ಧರಿಸುತ್ತಾರೆ. ಮುಂದೆ ಕೆಲ ದಿನಗಳಲ್ಲಿ ನಗರ ಜೀವನ ತರುವ ಸೋಮಾರಿತನ ಮತ್ತು ದುರ್ಬಲತೆಯಿಂದ ಬೇಸತ್ತ ಅವರಿಬ್ಬರೂ ಸಾಹಸ ಹುಡುಕಿಕೊಂಡು ಬಿಳಿ ದೇವರಾರು ಮರಗಳಿಂದ ತುಂಬಿದ ಕಾಡಿನತ್ತ ಹೊರಡುತ್ತಾರೆ. ಆ ಕಾಡನ್ನು ಸಂಹರಿಸಬೇಕಾದರೆ ಅದಕ್ಕೂ ಮೊದಲು ಅದರ ದೈತ್ಯ ಸಂರಕ್ಷಕ ಹುಂಬಾಬನನ್ನು ಸಂಹರಿಸಬೇಕಾಗುತ್ತದೆ. ಗಿಲ್ಗಮೆಷ್‌ ರಾಜ ಎಂದು ಗೊತ್ತಿದ್ದ ಹುಂಬಾಬ, “ಯಃಕಶ್ಚಿತ್‌ ಎಂಕಿಡು ಹೇಳಿದಂತೆ ನಡೆದುಕೊಳ್ಳುತ್ತಿರುವೆ’’ ಎಂದು ಆತನನ್ನು ರೇಗಿಸುತ್ತಾನೆ. ನಡೆದ ಭೀಕರ ಕದನದಲ್ಲಿ ಅವರಿಬ್ಬರನ್ನೂ ಎದುರಿಸಲಾರದೆ ಸೋತ ಹುಂಬಾಬ ಮಂಡಿಯ ಮೇಲೆ ಕುಳಿತು ಪ್ರಾಣಭಿಕ್ಷೆ ಯಾಚಿಸುತ್ತಾನೆ. ಬದುಕುಳಿಯಲು ಬಿಟ್ಟಲ್ಲಿ ಕಾಡು ಮತ್ತು ಕಾಡಿನ ಎಲ್ಲ ಮರಗಳನ್ನು ನೀಡುವುದರ ಜತೆಗೆ ಅವರ ಸೇವೆ ಮಾಡಿಕೊಂಡಿರುವುದಾಗಿ ಹೇಳುವ ದೈತ್ಯನನ್ನು ಕೂಡಲೇ ಕೊಲ್ಲುವಂತೆ ಎಂಕಿಡು ಪ್ರೋತ್ಸಾಹಿಸುತ್ತಾನೆ. ತಡಮಾಡಿದಲ್ಲಿ ಯಾರಾದರೂ ದೇವರು ಅವನ ನೆರವಿಗೆ ಬರಬಹುದು ಎಂಬ ಅವನ ಸಲಹೆಗೆ ಅನುಗುಣ ಗಿಲ್ಗಮೆಷ್‌ನ ಕತ್ತಿ ಹುಂಬಾಬನ ತಲೆ ಕತ್ತರಿಸುತ್ತದೆ. “ನಿಮ್ಮಿಬ್ಬರಲ್ಲಿ ಎಂಕಿಡು ಬಹಳ ಕಾಲ ಬಾಳದಿರಲಿ ಮತ್ತು ಅವನಿಗೆ ಈ ಜಗತ್ತಿನಲ್ಲಿ ಶಾಂತಿ ಕಾಣದಿರಲಿ” ಎಂದು ಶಪಿಸಿ ಅವನು ಪ್ರಾಣ ಬಿಡುತ್ತಾನೆ.

ಎಲ್ಲೆಲ್ಲೂ ಹರಡಿದ ಗಿಲ್ಗಮೆಷ್‌ನ ಖ್ಯಾತಿ ಕೇಳಿದ ಇಸ್ತಾರ್‌ ದೇವತೆ ಅವನ ಪ್ರೇಯಸಿಯಾಗ ಬಯಸಿಬರುತ್ತಾಳೆ. ಅವನ ತಿರಸ್ಕಾರ ಮತ್ತು ಕೊಂಕು ನುಡಿ ಕೇಳಿ ಜರ್ಜಿತಳಾದ ಆಕೆ, ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ವರ್ಗದ ನಂದಿ ಕಳಿಸುವಂತೆ ಆಕಾಶದೇವತೆಯಾದ ತನ್ನ ತಂದೆಗೆ ಮೊರೆಯಿಡುವ ಪ್ರಸಂಗ ರಾಮಾಯಣದ ಶೂರ್ಪನಖಿಯನ್ನು ನೆನಪಿಗೆ ತಾರದಿರುವುದಿಲ್ಲ;

ತಂದೆಯೇ ಗಿಲ್ಗಮೆಷ್‌ ಮತ್ತವನ ನಗರ ಕೊಲ್ಲಲು ಸ್ವರ್ಗದ ನಂದಿಯನ್ನು ಕೊಂಡು. ಸ್ವರ್ಗದ ನಂದಿಯನ್ನು ಕೊಡು. ಸ್ವರ್ಗದ ನಂದಿಯನ್ನು ನೀನು ನನಗೆ ನೀಡದಿದ್ದಲ್ಲಿ ನಾನು ಆ ನರಕದ ಬಾಗಿಲನ್ನೇ ಕಿತ್ತು ಹಾಕುವೆ. ಬಾಗಿಲು ಮತ್ತು ಹೊಸ್ತಿಲನ್ನು ಪುಡಿ ಪುಡಿ ಮಾಡಿ, ಸತ್ತವರನ್ನು ಹೊರ ಕಳುಹಿಸಿ, ಭೂಮಿಯಲ್ಲಿ ಸಂಚರಿಸುವ ಅವರು ಬದುಕಿರುವವರನ್ನು ಕಿತ್ತು ತಿನ್ನುವರು. ಸತ್ತವರು ಬದುಕಿರುವವರ ನುಂಗಲಿದ್ದಾರೆ?

ಎಂಬ ಮಗಳ ಒತ್ತಾಯ ಮತ್ತು ಹಟಕ್ಕೆ ಮಣಿದ ಆಕಾಶದೇವ ಸ್ವರ್ಗದ ನಂದಿಯನ್ನು ಉರುಕ್‌ ನಗರಕ್ಕೆ ಕಳುಹಿಸುತ್ತಾನೆ. ಅದು ಒಮ್ಮೆ ಉಸಿರುಬಿಟ್ಟಿತೆಂದರೆ ಭೂಮಿಯ ಮೇಲೆ ಬೃಹತ್‌ ವಿಸ್ತಾರದ ಪ್ರಪಾತಗಳು ಉಂಟಾಗಿ ನೂರಾರು ಜನ ಸಾಯತೊಡಗುತ್ತಾಎ. ಜತೆಯಾಗಿ ಹೋರಾಡಿ ಗಿಲ್ಗಮೆಷ್‌ ಮತ್ತು ಎಂಕಿಡು ಅದನ್ನು ಸಂಹರಿಸುತ್ತಾರೆ. ಕೋಪೋದ್ರಿಕ್ತಳಾದ ಇಸ್ತಾರ್‌ ದೇವತೆಯನ್ನು ರೇಗಿಸುವ ಎಂಕಿಡು, ಸ್ವರ್ಗದ ನಂದಿಯ ಒಂದು ತೊಡೆಯನ್ನು ಹರಿದು ಅವಳ ಮುಖಕ್ಕೆ ಎಸೆದು ಮತ್ತಷ್ಟು ಅವಮಾನಿಸುತ್ತಾನೆ.

ಹುಂಬಾಬ ಮತ್ತು ಸ್ವರ್ಗದ ನಂದಿಯನ್ನು ಸಂಹರಿಸಿದ ತಪ್ಪಿಗೆ ಯಾರಾದರೂ ಶಿಕ್ಷೆ ಅನುಭವಿಸಲೇಬೇಕು ಎಂದು ನಿರ್ಧರಿಸುವ ದೇವತೆಗಳು ಆ ತಪ್ಪಿಗೆ ಎಂಕಿಡು ಬೆಲೆ ತೆರುವುದೇ ಸೂಕ್ತ ಎಂದು ತಿರ್ಮಾನಿಸುತ್ತಾರೆ. ಆ ರೀತಿಯ ಅನ್ಯಾಯದಿಂದ ಕುಪಿತನಾದ ಎಂಕಿಡು; ತನ್ನನ್ನು ನಾಗರಿಕತೆಯ ಹಾದಿಯಲ್ಲಿ ಕರೆತಂದ ಸೂಳೆ ಮೊದಲಾದ ಎಲ್ಲರನ್ನು ಶಪಿಸುತ್ತಾನೆ. ನಾಗರಿಕತೆಯ ಪರಿಚಯದಿಂದಾಗಿ ಅನೇಕ ತರಹದ ಸುಖ ಮತ್ತು ಸಂತೋಷ ಅನುಭವಿಸಿರುವೆ ಎಂಬುದನ್ನು ಆಕೆ ಎಂಕಿಡುವಿಗೆ ನೆನಪಿಸುತ್ತಾಳೆ. ಆಕೆಯನ್ನು ಆಗ ಹರಸಿದ ಎಂಕಿಡು ೧೨ ದಿನಗಳ ಕಾಲ ಯಮಯಾತನೆ ಅನುಭವಿಸಿ ಸಾಯುತ್ತಾನೆ. ಒಡನಾಡಿಯ ಸಾವಿನಿಂದ ತತ್ತರಿಸಿದ ಗಿಲ್ಗಮೆಷ್‌ಗೆ ಬದುಕಿನಲ್ಲಿ ಆಸಕ್ತಿ ಉಳಿಯುವುದಿಲ್ಲ.

ಎಂಕಿಡು ತರಹವೆ ತಾನೂ ಒಂದು ದಿನ ಸಾಯಬೇಕಾಗುತ್ತದೆ ಎಂಬ ಅರಿವು ಮೂಡಿದ ಗಿಲ್ಗಮೆಷ್‌, ಸ್ನಾನ ಇತ್ಯಾದಿ ಎಲ್ಲ ನಾಗರಿಕ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಸಾವಿನಿಂದ ದೂರ ಉಳಿಯಲು ಅಮರತ್ವ ಪಡೆಯುವುದು ಒಂದೇ ದಾರಿ, ಎಂಬ ನಿರ್ಧಾರಕ್ಕೆ ಬರುವ ಅವನು ಆ ಅಮರತ್ವ ಪಡೆದಿರುವ ಏಕೈಕ ನರಮನುಷ್ಯನಾದ ಉತ್ನಪಿಸ್ತಂ ಮತ್ತು ಅವನ ಹೆಂಡತಿಯನ್ನು ಕಾಣಲು, ಅವರು ಇರುವ ಬಹುದೂರದ ಪ್ರದೇಶಕ್ಕೆ ಹೊರಡುತ್ತಾನೆ.

ಜಗತ್ತು ಮತ್ತು ಮಾನವ ಕುಲವನ್ನೇ ನಾಶ ಮಾಡಿದ ಭಯಾನಕ ಪ್ರಳಯ ಬಂದಾಗಲೂ ಬೈಬಲ್ಲಿನ ನೋಹಾ ಕತೆಯನ್ನು ಬಹಳವಾಗಿ ಹೋಲುವ – ದೋಣಿಯ ನೆರವಿನಿಂದ ಬದುಕಿ ಉಳಿದಿದ್ದ ಮಾನವ ಜನಾಂಗದ ಏಕೈಕ ಪ್ರತಿನಿಧಿಯಾದ ಉತ್ನಪಿಸ್ತಂನನ್ನು ಕಾಣುವುದು ಬಹಳ ಕಷ್ಟದ ಕೆಲಸ ಎಂದು ಯಾರು ಎಷ್ಟೇ ಹೇಳಿದರೂ ಕೇಳದೆ ಸಾಹಸಯಾತ್ರೆ ಕೈಗೊಂಡ ಗಿಲ್ಗಮೆಷ್‌ಗೆ ಅವನನ್ನು ಖುದ್ದಾಗಿ ನೋಡಿದಾಗ ಆಗುವ ಅನುಭವವೇ ಬೇರೆ: ಅಮರತ್ವ ಪಡೆದ ಏಕೈಕ ನರಮನುಷ್ಯನಾದ ಆತ ಕೂಡ ಎಲ್ಲರಂತೆ ಸಾಧಾರಣ ಬದುಕುತ್ತಿರುತ್ತಾನೆ.[7]

ಅವನು ಕರುಣೆಯಿಂದ ನೀಡಿದ ಸಂಜೀವಿನಿ ಬಳ್ಳಿಯನ್ನು ಗಿಲ್ಗಮೆಷ್‌ ತಕ್ಷಣವೇ ಸೇವಿಸಹೋಗುವುದಿಲ್ಲ. ತನ್ನ ರಾಜ್ಯದ ಬೇರೊಬ್ಬರ ಮೇಲೆ ಪ್ರಯೋಗ ಮಾಡಿ ನೋಡುವ ಸಂಶಯ ಮತ್ತು ಅನುಮಾನದಿಂದ ಮರಳಿ ಪ್ರಯಾಣ ಬೆಳೆಸಿದ ಆತ ಹಲವಾರು ಗಾವುದ ದೂರ ಕ್ರಮಿಸಿದ ನಂತರ ಮಾರ್ಗಮಧ್ಯದಲ್ಲಿ ಮಲಗಿ ನಿದ್ರೆ ಹೋಗುತ್ತಿರಬೇಕಾದರೆ ಸರ್ಪವೊಂದು ಅದನ್ನು ನುಂಗಿಬಿಡುತ್ತದೆ (ಸರ್ಪಗಳು ಪೊರೆ ಬಿಡುವುದು ಆ ಕಾರಣಕ್ಕಾಗಿಯಂತೆ); ಅಮರತ್ವ ಪಡೆಯುವ ಗಿಲ್ಗಮೆಷ್‌ ಹಂಬಲ ಮತ್ತು ಕನಸು, ಕನಸಾಗಿಯೇ ಉಳಿಯುತ್ತದೆ.

ಉರುಕ್‌ ನಗರದ ಕೋಟೆ ಕೊತ್ತಲ, ಅದರ ತಳಹದಿಯ ವರ್ಣನೆಯೊಂದಿಗೆ ಆರಂಭವಾಗುವ ಎಪಿಕ್‌, ಮತ್ತೆ ಅದರ ವರ್ಣನೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಸಂಜೀವಿನಿ ಬಳ್ಳಿ ಕಳೆದುಕೊಂಡನಂತರ ಗಿಲ್ಗಮೆಷ್‌ ಪ್ರಲಾಪಿಸುವ ರೀತಿ :

ಯಾರಿಗಾಗಿ ನಾನು ಕಷ್ಟಪಟ್ಟೆ?
ನಾನು ಯಾರಿಗಾಗಿ ಕಷ್ಟದ ಹಾದಿ ಸಾವೆಸಿದೆ?
ನಾನು ಯಾರಿಗಾಗಿ ಅಷ್ಟೆಲ್ಲ ತೊಂದರೆ ಅನುಭವಿಸಿದರೆ?
ನನಗಾಗಿ ನಾನು ಏನನ್ನು ಪಡೆಯಲಾಗಲಿಲ್ಲ.
ನನ್ನಿಂದಾಗಿ ಲಾಭವಾದ್ದು ನೆಲಸಿಂಹನಾದ ಹಾವಿಗೆ.

ಸಂಜೀವಿನಿ ಬಳ್ಳಿಯನ್ನು ಹುಡುಕಿಕೊಂಡು ಹೊರಟ ಗಿಲ್ಗಮೆಷ್‌ ದಾರಿಯಲ್ಲಿ ದೇವತೆ ಸಿದೂರಿಯನ್ನು ಭೇಟಿ ಮಾಡುವ ಕಥಾನಕಕ್ಕೂ ‘ಒಡಿಸ್ಸಿ’ಯ ಒದಿಸ್ಯೂಸ್‌, ಕಾಲಿಪ್ಸೊ ಎಂಬ ಮೋಹಿನಿಯನ್ನು ಮುಖಾಮುಖಿಯಾಗುವ ಸನ್ನಿವೇಶಗಳ ಚಿತ್ರಣದ ನಡುವೆ ಬಹಳ ಹೊಂದಾಣಿಕೆಯಿದೆ:

ನೀನು ಅರಸುತ್ತಿರುವ ಜೀವನ ನಿನಗೆ ಎಂದಿಗೂ ದೊರಕಲಾರದು. ಮನುಷ್ಯನನ್ನು ಸೃಷ್ಟಿಸುವಾಗ ಆತನನ್ನು ಮೃತ್ಯುವಿಗೆ ನೀಡಿದ ದೇವರುಗಳು ಬದುಕನ್ನು ತಮ್ಮ ಬಳಿಯೇ ಉಳಿಸಿಕೊಂಡರು. ನಿನಗಾಗಿ ಗಿಲ್ಗಮೆಷ್‌ ಸುಖವಾಗಿ ಹೊಟ್ಟೆ ತುಂಬ ಉಂಡು ಸಂತೋಷದಿಂದಿರು. ರಾತ್ರಿ ಹಗಲೆನ್ನದೆ, ಹಗಲು ರಾತ್ರಿ ಎನ್ನದೆ ಕುಣಿ, ತಿನ್ನು, ಮಜಾ ಮಾಡು. ಒಳ್ಳೆಯ ಬಟ್ಟೆ ತೊಡು, ಸ್ನಾನ ಮಾಡು, ನಿನ್ನ ಕೈ ಹಿಡಿದಿರುವ ಮಗುವನ್ನು ನೆಮ್ಮು, ಅಪ್ಪುಗೆಯಲ್ಲಿ ನಿನ್ನ ಹೆಂಡತಿಯನ್ನು ಸಂತೋಷ ಪಡಿಸು. ಇದು ಮನುಷ್ಯನ ಪಾಲಿಗೆ ಬಂದ ಬದುಕು.[8]

ಎಂದು ಉಪದೇಶಿಸುವ ಸಿದೂರಿ ದೇವತೆಯ ಮಾತನ್ನು ಲೆಕ್ಕಿಸದೆ ಸಂಜೀವಿನಿ ಬಳ್ಳಿ ತರಲು ಮುನ್ನಡೆಯುವ ಗಿಲ್ಗಮೆಷ್‌; ಆ ಸನ್ನಿವೇಶವನ್ನು ಸಮುದ್ರದೇವತೆಯಾದ ಕಾಲಿಪ್ಸೊ, ಒದಿಸ್ಯೂಸ್‌ಗೆ ನೀಡುವ ಹಿತವಚನದ ಜತೆ ಹೋಲಿಸಿ ನೋಡಬೇಕು; ಅವಳನ್ನು ಪ್ರೇಯಸಿಯಾಗಿ ಸ್ವೀಕರಿಸಿ ಒದಿಸ್ಯೂಸ್‌ ವರ್ಷಗಳನ್ನು ಕಳೆದಿರುತ್ತಾನೆ. ಅದಕ್ಕೆ ಮೆಚ್ಚುಗೆಯಾಗಿ ಆತನಿಗೆ ಅಮರತ್ವ ದಯಾಪಾಲಿಸಲು ಸಮುದ್ರ ದೇವತೆ ಮುಂದಾದಾಗ

……..and she said:
‘Son of Laertes, versatile Odysseus,
after these years with me, you still desire
your old home? Even so, I wish you well.
If you could see it all, before you go –
all the adversity you face at sea –
you would stay here, and guard this house, and be
immortal – though you wanted her forever,
that bride for whom you pine each day.
Can I be less desirable than she is?
Less interesting? Less beautiful? Can mortals
compare with goddesses in grace and form?’

ನೀಡುವ ಉತ್ತರ ; ಸಾಧಾರಣ ಮನುಷ್ಯನೊಬ್ಬ ನೀಡಬಹುದಾದ ಸಾಧಾರಣ ಉತ್ತರದಂತಿದೆ:

To this the strategist Odysseus answered:

‘My lady goddess, here is not cause for anger.
My quiet Penelope – how well I know –
would seem a shade before your majesty,
death and old age being unknown to you,
while she must die. Yet, it is true, each day
I long for home, long for the sight of home.
If any god has marked me out again
for shipwreck, my tough heart can undergo it.
What hardship have I not long since endured
at sea, in battle!Let the trail come’[9]

ಬದುಕಿನ ಬಗ್ಗೆ ಅಗಾಧ ಪ್ರೀತಿಯಿಂದ ತುಂಬಿರುವ ಮನುಷ್ಯ ಮಾತ್ರ ಆ ಉತ್ತರ ನೀಡಲು ಸಾಧ್ಯ. ಕಳೆದುಹೋದ ಬದುಕಿಗಾಗಿ ಚಿಂತಿಸಿ ವ್ಯಥೆಪಡದೆ ಉಳಿದ ಬದುಕನ್ನಾದರೂ ಅತ್ಯುತ್ತಮವಾಗಿ ಸಾಗಿಸುವುದೇ ಜೀವನದ ಧರ್ಮ; ಅದೇ ಮನುಷ್ಯ ಏರಬಹುದಾದ ಎತ್ತರ ಮತ್ತು ಕಂಡುಕೊಳ್ಳಬಹುದಾದ ಅತ್ಯುನ್ನತ ಅರಿವು ಎಂಬ ಮನೋಧರ್ಮದ ಒದಿಸ್ಯೂಸ್‌ನನ್ನು ಸೃಷ್ಟಿಸುವ ಮುಖೇನ, ಯುರೋಪ್‌ ಮೂಲದ ಜನರ ಪ್ರಧಾನ ಗುಣಲಕ್ಷಣ ಮತ್ತು ಸ್ವಭಾವವನ್ನು ರೂಪಿಸಿದವನೇ ಹೋಮರ್: ಅಥವಾ ಅವರಲ್ಲಿನ ಆ ಗುಣವನ್ನು ಗ್ರಹಿಸಿ ಅದು ಬದುಕನ್ನು ನಿರ್ದೇಶಿಸುವ ರೀತಿಯಲ್ಲಿ ಮಾರ್ಪಡಿಸಿದವನು ಅವನಿರಬಹುದು.

ಆ ಕಾರಣವೋ ಏನೋ, ಗಿಲ್ಗಮೆಷ್‌ ರಚಿಸಿದ ಷಿನ್‌ – ಎಖಿ – ಉನ್ನಿನ್ನಿಯ ದಟ್ಟ ಪ್ರಭಾವ ಹೋಮರನ ಮೇಲಾಗಿದೆ ಎಂದು ಅನೇಕ ವಿದ್ವಾಂಸರು ಭಾವಿಸುತ್ತಾರೆ.

ಮಾನವ ಜನಾಂಗದ ಮೊದಲ ಎಪಿಕ್‌ನ ವಸ್ತು ಅವರ ಮೂಲಭೂತ ಸಮಸ್ಯೆಗೆ ಸಂಬಂಧಿಸಿದ್ದಾಗಿದೆ ಎಂಬುದು ಬಹಳ ಮುಖ್ಯ. ಮೇಲ್ನೋಟಕ್ಕೆ ನಾಗರಿಕನಂತೆ ಕಾಣುವ ಮನುಷ್ಯ ಆಂತರಿಕವಾಗಿ ಆದಿ ಸಂಸ್ಕೃತಿಯ ಮೂಲ ತುಡಿತಗಳಿಂದ ಕೂಡಿದವನಾಗಿರಬಹುದಾದಂತೆ, ಆದಿಸಂಸ್ಕೃತಿಯ ಪ್ರತಿನಿಧಿಗಳಂತೆ ಕಾಣುವವರು ತಮ್ಮದೇ ಆದ ರೀತಿಯಲ್ಲಿ ಸುಸಂಸ್ಕೃತರಾಗಿರಬಹುದು. ನಗರಜೀವಿಯೂ ಮತ್ತು ನಾಗರಿಕನೂ ಆದ ಗಿಲ್ಗಮೆಷ್‌ನಲ್ಲಿ ಅನೇಕ ಕಾಡು ವರ್ತನೆಗಳಿದ್ದರೆ, ಕಾಡುಮನುಷ್ಯನಾದ ಎಂಕಿಡು ಬಹಳ ಬೇಗನೆ ನಾಗರಿಕನಾಗುವುದು ಅವನಲ್ಲಿರುವ ಕೆಲವಾದರೂ ಸುಸಂಸ್ಕೃತ ನಡವಳಿಕೆಯ ಅಂಶಗಳಿಂದಾಗಿ, ಅವರಿಬ್ಬರ ನಡುವೆ ಆತ್ಮೀಯವಾದ ಬಂಧುತ್ವ ಮತ್ತು ಸ್ನೇಹ ಉಂಟಾಗಲು ಆ ಸಮಾನ ಅಂಶವೇ ಕಾರಣವಾಗಿರಬಹುದು. ಒಡೆಯ ಮತ್ತು ಒಡನಾಡಿ ಹಾಗೂ ನಗರ ಮತ್ತು ಕಾಡು ಜೀವನದ ನಡುವಿನ ಅಂತರಪಟ ಬದಲಾವಣೆ ಮತ್ತು ಘರ್ಷಣೆಯನ್ನು ‘ಗಿಲ್ಗಮೆಷ್‌’ ಎಪಿಕ್‌ನಲ್ಲಿ ಎಷ್ಟು ನವಿರಾಗಿ ಮತ್ತು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ ಎಂದರೆ, ಅಲ್ಲಿ ಕೊನೆಗೆ ಬಲಿಯಾಗುವವನು, ಆದಿ ಸಮಾಜದ ಪ್ರತಿನಿಧಿಯಾದ ಎಂಕಿಡು, ಮಾರೀಚನ ಮತ್ತೊಂದು ರೂಪ.

‘ಗಿಗ್ಲಮೆಷ್‌’ ಓದುವುದೆಂದರೆ ಕಾವ್ಯ ಪರಂಪರೆಗೆ ಉತ್ತಮ ಆರಂಭ ನೀಡಿದ ಮೂಲಕೃತಿ ಓದಿದ ಅನುಭವ: ನವೋದಯದ ತಲೆಮಾರಿನ ಜನರ ಪರಿಭಾಷೆಯಲ್ಲಿ ಹೇಳುವುದಾದರೆ – ಎಪಿಕ್ ಪರಂಪರೆಯ ಮಾನಸ ಸರೋವರದಲ್ಲಿ ಮಂದಂತೆ.

ಆ ಹೊರತು, ಹೋಮರನ ‘ಇಲಿಯಡ್’ ಮತ್ತು ‘ಒಡಿಸ್ಸಿ’ಗಳೇ ಎಪಿಕ್ ಪರಂಪರೆಯ ಅತ್ಯಂತ ಪುರಾತನ ಸಾಕ್ಷಿಗಳು: ಕ್ರಿ. ಪೂ. ೬ನೇ ಶತಮಾನದ ವೇಳೆಗಾಗಲೇ ಇಂದಿನ ರೂಪದಲ್ಲಿ ಸ್ಥಿರಗೊಂಡಿರಬೇಕಾದಲ್ಲಿ, ಅವುಗಳು ಅದಕ್ಕೂ ಬಹಳ ಹಿಂದಿನವಾಗಿದ್ದಿರಲೇಬೇಕು. ಹೋಮರ್‌ ಕ್ರಿ. ಪೂ. ಒಂಬತ್ತನೇ ಶತಮಾನದವನಿರಬಹುದೆಂದು ಅಂದಾಜು. ಬಾಯಿಂದ ಬಾಯಿಗೆ ದಾಟಿ ಬಂದ ಆ ಕೃತಿಗಳಿಗೆ ಖಚಿತ ರೂಪ ನೀಡುವ ವಿಚಾರದಲ್ಲಿ ಹಲವಾರು ಮನಸ್ಸುಗಳು ಪ್ರಭಾವ ಬೀರಿರಬಹುದು. ಮೂಲತಃ ಚಾರಣ ಪರಂಪರೆಗೆ ಸೇರಿದ ಅವರಾರೂ ಇಂದಿನ ಅರ್ಥದಲ್ಲಿ ಸಾಕ್ಷರಲ್ಲ. ತನಗೂ ಹಿಂದಿನವರಿಂದ ಹೋಮರ್‌ ಬೇಕಾದ ಸ್ಫೂರ್ತಿ ಪ್ರೇರಣೆ ಪಡೆಯುವುದರ ಜತೆಗೆ, ಹೋಮರನ ತರಹವೆ ಅಲಿಖಿತ ಕಾವ್ಯ ಪರಂಪರೆಗೆ ಸೇರಿದ ಅನೇಕರು ಅದೇ ವಸ್ತು ಆಧರಿಸಿ ಕಾವ್ಯ ಹಾಡಿದ್ದಿರಬಹುದು. ಅಂತಹ ಅನೇಕರಿಗೆ ಹೋಮರ್‌ ಅನೇಕ ರೀತಿಯಲ್ಲಿ ಋಣಿಯಾಗಿದ್ದಿರಬಹುದು. ಆದರೆ ಹೋಮರ್‌ ಬಂದ ನಂತರ ಅವರ ರಚನೆಗಳೆಲ್ಲ ಕಾಲದ ಮಡಿಲಲ್ಲಿ ಅಥವಾ ಹೋಮರನ ಕೃತಿಗಳಲ್ಲಿ ಅಂತರ್ಗತವಾಗಿ ಹೋಗಿದ್ದಿರಬಹುದಾದ ಸಾಧ್ಯತೆಗಳೂ ಇಲ್ಲದಿಲ್ಲ. ಅಂತಹ ಅನೇಕ ತೊಡಕುಗಳ ಕಾರಣವೊ ಏನೋ, ‘ಇಲಿಯಡ್‌’ ಮತ್ತು ‘ಒಡಿಸ್ಸಿ’ಗಳನ್ನು ರಚಿಸಿದಾತ ಒಬ್ಬನೆ, ಇಬ್ಬರೆ ಅಥವಾ ಹಲವರೆ ಎಂಬ ವಿವಾದವಿತ್ತು.

ಜನಪದ ಮತ್ತು ಲಿಖಿತ ಕಾವ್ಯ ಪರಂಪರೆಯ ನಡುವಿನ ಸೇತುವಾದ ಚಾರಣ ಕವಿ ಹೋಮರ್‌ ಜನಪದ ಮೂಲಸೆಲೆಯಿಂದ ಕಾವ್ಯ ಕಟ್ಟುವ ರಚನಾ ಪರಂಪರೆಯನ್ನು ಬೇರ್ಪಡಿಸಿದಂತೆಯೆ, ಮುಂದಿನ ಬೆಳವಣಿಗೆಯಾದ ಲಿಖಿತ ಕಾವ್ಯ ಪರಂಪರೆಗೆ ನಾಂದಿ ಹಾಡಿದ. ಆತನಿಗೆ ದಕ್ಕಿದ ಆ ಅವಕಾಶ ಐತಿಹಾಸಿಕವಾದುದಾದಂತೆಯೇ ಅತ್ಯಂತ ನಿರ್ಣಾಯಕವಾದುದೂ ಆಗಿತ್ತು. ನಿರ್ಣಾಯಕ ಕಾಲದಲ್ಲಿ ಬಂದ ಹೋಮರ್‌ ತನಗೆ ದಕ್ಕಿದ ಅವಕಾಶದ ಮಹಿಮೆ ಮತ್ತು ಮಹತ್ವ ಅರ್ಥಮಾಡಿಕೊಂಡು, ಕಾಲ ಮತ್ತು ಬದುಕಿಗೆ ಸ್ಪಂದಿಸುವುದರ ಮೂಲಕ ಏಕಕಾಲದಲ್ಲಿ ಕಾಲಕ್ಕೆ ಬದ್ಧವಾದ ಮತ್ತು ಕಾಲತೀತವೂ ಆದ ಕೃತಿಗಳನ್ನು ನೀಡಿದ, ಆ ಪರಂಪರೆ ಯುರೋಪಿನಲ್ಲಿ ಮೊದಲಾದುದೇ ಹೋಮರನಿಂದ. ಬದುಕಿಗೆ ಸ್ಪಂದಿಸುವಲ್ಲಿನ ಹೊಂದಾಣಿಕೆಯೇ ಸಾಕು, ‘ಇಲಿಯಡ್‌’ ಮತ್ತು ‘ಒಡಿಸ್ಸಿ’ ಏಕವ್ಯಕ್ತಿ ಕೃತ ಎಂಬುದನ್ನು ಸಾಬೀತು ಪಡಿಸಲು: ಭಾಷೆವೈಖರಿ, ಶೈಲಿ, ಕಥನಕ್ರಮ, ನಿರೂಪಣೆ, ನಿರ್ವಹಣೆ ಮತ್ತು ರಚನಾ ವಿಧಾನದಲ್ಲಿರುವ ಹೊಂದಾಣಿಕೆಯನ್ನು ಈಗಾಗಲೇ ಗುರುತಿಸಲಾಗಿದೆ. ಬದುಕಿಗೆ ಸ್ಪಂದಿಸುವ ರೀತಿಯಲ್ಲಿ ಮತ್ತು ‘ಒಡಿಸ್ಸಿ’ಯನ್ನು ‘ಇಲಿಯ್‌’ನ ಮುಂದುವರಿದ ಭಾಗವಾಗಿ ತೆಗೆದುಕೊಂಡು ಹೋಗುವಲ್ಲಿ ಹೋಮರ್‌ ಪ್ರದರ್ಶಿಸುವ ಎಚ್ಚರ, ಪ್ರತಿಭೆ ಮತ್ತು ಹೊಂದಾಣಿಕೆ ಆ ಎರಡೂ ಕೃತಿಗಳಲ್ಲಿ ಅಂತರ್ಗತವಾಗಿ ಹರಿಯುತ್ತದೆ.

ಯುರೋಪ್‌ ಮತ್ತು ಏಷ್ಯಾ ಖಂಡಾಂತರ ವಿಭಜನೆ ಅಥವಾ ವ್ಯತ್ಯಯಗಳು ಕಾಣಿಸಿಕೊಳ್ಳುತ್ತಿದ್ದ ಪರ್ವಕಾಲದಲ್ಲಿ ಬಂದವನಿರಬಹುದಾದ ಹೋಮರನಿಗೆ, ಆ ಎರಡರ ನಿಕಟ ಪರಿಚಯವಿರಬೇಕು. ಯುರೋಪಿಗೆ ಅತ್ಯಂತ ಹತ್ತಿರದ ಎಷ್ಯಾ ಮೈನರ್‌ ಭಾಗದವನಾಗಿದ್ದಿರಬಹುದಾದ ಆತ ತನ್ನ ಕಾವ್ಯದ ವಸ್ತುವನ್ನಾಗಿ ಆರಿಸಿಕೊಂಡಿರುವುದು ಒಂದು ಹೆಣ್ಣಿನ ಪಲಾಯನದ ನೆಪದಲ್ಲಿ ಆ ಎರಡೂ ಖಂಡಗಳಿಗೆ ಮುಂದೆ ಸೇರಿದ ಜನರ ಸಂಸ್ಕೃತಿ ಮತ್ತು ನಾಗರಿಕತೆ ನಡುವಿನ ಸಂಘರ್ಷವನ್ನು. ಮುಂದಿನ ಬೆಳವಣಿಗೆಯಾದ ಯುರೋಪವನ್ನು ಪ್ರತಿನಿಧಿಸುವ ಗ್ರೀಕರು ಮತ್ತು ಏಷ್ಯನ್‌ ಹಿನ್ನೆಲೆಯ ಟ್ರೋಜನ್ನರ ನಡುವಿನ ಸಂಘರ್ಷವನ್ನು ತನ್ನ ಮೊದಲ ಎಪಿಕ್‌ ಆದ ‘ಇಲಿಯಡ್‌’ನಲ್ಲಿ ನಿರ್ವಹಿಸುವ ಹೋಮರ್‌, ಗ್ರೀಕರ ನಾಯಕರಲ್ಲಿ ಒಬ್ಬನಾದ ಒದಿಸ್ಯೂಸ್‌ನ ನಂತರದ ತೊಳಲಾಟ ಮತ್ತು ನೆಲೆ ತಲುಪಲು ಆತ ನಡೆಸುವ ಹೋರಾಟದ ಹಿಂದಿನ ಸಂಕಷ್ಟಗಳನ್ನು ‘ಒಡಿಸ್ಸಿ’ಯಲ್ಲಿ ಚಿತ್ರಿಸುತ್ತಾನೆ. ಆ ದೃಷ್ಟಿಯಿಂದ ‘ಇಲಿಯಡ್‌’ ಮತ್ತು ‘ಒಡಿಸ್ಸಿ’ ಪರಸ್ಪರ ಪೂರಕ; ‘ಇಲಿಯಡ್‌’ನ ಮುಂದಿನ ಭಾಗವೇ ‘ಒಡಿಸ್ಸಿ’[10] ಆನಂತರದ ಅನೇಕ ವಿವರಗಳು ದೊರಕುವುದೇ ಒಡಿಸ್ಸಿಯಲ್ಲಿ.

 

[1]ಕನ್ನಡದ ಹಿರಿಮೆ ಪ್ರಾಚೀನತೆಗಳನ್ನೆಲ್ಲಾ ಹೊಗಳಿ “ಪಂಪನೆನ್ನುವ ಕವಿ ಕನ್ನಡದಲ್ಲಿ ಮಹಾಕಾವ್ಯ ಬರೆಯುತ್ತಿದ್ದಾಗ ನಿನ್ನ ಇಂಗ್ಲಿಷ್‌ ದೊರೆಗಳು ಕಾಡಿನಲ್ಲಿ ತೊಗಟೆ ಸುತ್ತಿಕೊಂಡು ಕಿರಾತಕರಂತೆ ಬದುಕುತ್ತಿದ್ದರು ಅಂತ ಜಾನಪ್ಪ ಇನ್ನೊಮ್ಮೆ ಬಂದರೆ ಹೇಳಿ.” – ಪುಸ್ತಕ ಪ್ರಕಾಶನ, ಮೈಸೂರು, ೧೯೯೯, ಪುಟ ೨೫

[2]Indeed, Europe was for long like a colony of Asia, and many people of modern Europe are descended from these invaders from Asia. ಪು ೧೦.

[3]History of Western Philosophy, ಪುಟ ೨೮೭

[4]ಹೆಕ್ಸಾಮೀಟರ್‌ ಗ್ರೀಕ್‌ ಸಹಜವಾದುದಾಗಿ ತೋರಿಬರುವುದಿಲ್ಲ ಎಂಬ ಅನುಮಾನವಿದೆ.

[5]Cuneiform ಎಂಬ ಲಿಪಿ ಪ್ರಕಾರವನ್ನು ಕನ್ನಡದಲ್ಲಿ ಕಠಾರಿಲಿಪಿ ಎಂದು ಕರೆಯುವ ಪ್ರಯತ್ನ ಮಾಡಲಾಗಿದೆ.

[6]ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ನಾಟಕ ನೆನಪಿಗೆ ತರುವ.

[7]ಮಹಾನ್‌ ಸಾಧನೆ ಮಾಡಿದ ಎಲ್ಲ ಮಹಾಚೇತನಗಳೂ ಬದುಕಿನಲ್ಲಿ ಎಲ್ಲರಂತೆ ಬದುಕಬೇಕಿರುವುದು ಸಹಜ ತಾನೆ!

[8]N. K. Sandras (tr). The Epic of Gilgamesh, Penguin. ಪುಟ ೧೦೨

[9]Robert Fitzgerald (tr), The Odyssey, Panther, London. ೧೯೭೧, ಪುಟ ೯೦ – ೯೧

[10]Present scholarship inclines to the view that such admirably well – structured poems as the Iliad and the Odyssey could hve been created only by a single highly gifted poet whose name was Homer. This position contracts with the extreme skepticism that marked all phases of Homeric criticism during the previous century. Yet the personality of Homer remains unknown and nothing certain is known about his life. – ಬ್ರಿಟಾನಿಕಾ ವಿಶ್ವಕೋಶದ ವೆಬ್‌ಸೈಟ್‌ ಮೂಲದಿಂದ.