ರಾಮಾಯಣದ ನಾಯಕ ಮತ್ತು ಪ್ರತಿನಾಯಕರಿಬ್ಬರೂ ನಗರಜೀವಿಗಳಾದಂತೆ, ಅಲ್ಲಿನ ಸೀತೆ – ಮಂಡೋದರಿಯರು ಸಹ ಅತ್ಯಂತ ಸುಸಂಸ್ಕೃತ ಹಿನ್ನೆಲೆಯಿಂದ ಬಂದವರು. ಹೋಮರನ ಮಹಿಳೆಯರಿಗೆ ವ್ಯಾಸ ಭಾರತದಲ್ಲಿ ದೊರಕುವ ಪ್ರಾಮುಖ್ಯತೆ ದೊರಕುವುದಿಲ್ಲ. ಆದರೆ ಅಲ್ಲಿ ಬರುವ ಬಹುತೇಕ ದೇವಾನುದೇವತೆಯರು ಒರಟರು ಮಾತ್ರವಲ್ಲ, ಕುತಂತ್ರ ಮಾಡಲು ಹಿಂಜರಿಯದ ಅಸೂಕ್ಷ್ಮ ಜೀವಿಗಳು. ಆದರೆ ಮಾನವ ಸಮಾಜದ ಪ್ರತಿನಿಧಿಗಳಾದ ಹೆಲೆನ್‌ ಆಗಲಿ ಅಥವಾ ಹೆಕ್ತರನ ಪತ್ನಿಯಾದ ಆಂದ್ರೊಮಖೆಯಾಗಲಿ ಆ ಸ್ವಭಾವದವರಲ್ಲ. ಅವರಿಗೆ ತದ್ವಿರುದ್ಧವಾದ ಸುಕೋಮಲ ಸ್ವಭಾವದವರಾಗಿ ಕಾಣಬರುತ್ತಾರೆ. ಹೋಮರನ ದೈವ ಸಮಾಜದ ದೇವತೆಯರನ್ನು ಸರಿಗಟ್ಟುವ ಇಲ್ಲವೇ ಮೀರಿಸುವ ಅನೇಕ ಮಹಿಳಾ ಪಾತ್ರಗಳನ್ನು ಮಹಾಭಾರತದಲ್ಲಿ ಕಾಣಬಹುದಾಗಿದೆ. ಒರಟುತನ, ರೂಕ್ಷ ನಡವಳಿಕ, ಆತುರದ ಸ್ವಭಾವ ಮೊದಲಾದವುಗಳಲ್ಲಿ ಅಲ್ಲಿ ಬರುವ ಮತ್ಸ್ಯಗಂಧಿ, ಗಾಂಧಾರಿ, ಕುಂತಿ ಕೊನೆಗೆ ದ್ರೌಪದಿ ಯಾರೊಬ್ಬರೂ ಕಡಿಮೆಯಲ್ಲ. ಅದರಲ್ಲೂ ದ್ರೌಪದಿ ಛಲ ಮತ್ತು ಹಟಸಾಧನೆಯ ಪ್ರತೀಕ. ಬಿಚ್ಚಮನಸ್ಸು ಮತ್ತು ನೇರ ನಡವಳಿಕೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುವ ಅವರು ಸ್ವಭಾವದಲ್ಲಿ ಹೋಮರನ ಸಮಾಜದ ದೇವತೆಯರನ್ನು ಅನೇಕ ವಿಚಾರಗಳಲ್ಲಿ ಹೋಲುತ್ತಾರೆ. ಹೀರಾ ದೇವತೆ ಕಡಿಮೆ ಏನಲ್ಲ.

ಅದರಲ್ಲೂ ಒಂದು ಪ್ರಸಂಗ ತರುವ ಹೋಲಿಕೆ ಗಮನಿಸುವುದು ಅನೇಕ ದೃಷ್ಟಿಯಿಂದ ಅಗತ್ಯ. ವಿಧಿ ನಿಯತಿ ಅಥವಾ ಪ್ರಕೃತಿಯ ಪ್ರತೀಕವಾದ ಜ್ಯೂಸ್‌ ದೇವರ ಆಣತಿಗೆ ವಿರುದ್ಧ ಇಚ್ಛೆಗಳನ್ನು ಪೂರೈಸಿಕೊಳ್ಳುವ ಉದ್ದೇಶದಿಂದ ಹೀರಾ ದೇವತೆ, ಅದೆ ಜ್ಯೂಸ್‌ ದೇವರನ್ನು ಮರುಳುಮಾಡಲು ಸರ್ವಾಲಂಕಾರಭೂಷಿತೆಯಾಗಿ ಹೊರಡುವ ಸನ್ನಿವೇಶ ೧೪ನೇ ಸರ್ಗದ ‘ಇಲಿಯಡ್‌’ನಲ್ಲಿ ಬಹಳ ವಿವರವಾಗಿ ಬರುತ್ತದೆ: ಆ ರೀತಿ ಸುಗಂಧ ಮತ್ತು ಸಕಲಾಲಂಕಾರ ಭೂಷಿತೆಯಾಗಿ ಬಂದ ಹೀರಾಳನ್ನು ಜ್ಯೂಸ್‌ ದೇವ ಕೂಡುವ ದೃಶ್ಯ ಪರಾಶರ ಮುನಿ ಮತ್ಸ್ಯಗಂಧಿಯನ್ನು ಕೂಡುವ ರೀತಿಯನ್ನು ಬಹಳವಾಗಿ ಹೋಲುತ್ತದೆ. ಜ್ಯೂಸ್‌ ದೇವರು ಮೋಡದ – ಅಂಥಿಂಥ ಮೋಡವಲ್ಲ, ಚಿನ್ನದ ಮೋಡದ – ಮರೆ ಸೃಷ್ಟಿಸಿ ಆಕೆಯ ಜತೆ ಸಂಭೋಗದಲ್ಲಿ ನಿರತವಾಗುವ ರೀತಿ. ಪರಾಶರ ಮುನಿಯು ಮತ್ಸ್ಯಗಂಧಿಯನ್ನು ಮೋಡ ಅಥವಾ ದಟ್ಟವಾದ ಮಂಜಿನ ಮರೆಯಲ್ಲಿ ಸುಖಿಸುವ ಸನ್ನಿವೇಶಗಳು. ತಾವು ಸಂಭೋಗದಲ್ಲಿ ನಿರತವಾಗಿರುವುದನ್ನು ಯಾರಾದರೂ ಗಮನಿಸಿದರೆ ಎಂಬ ಭಯ ವ್ಯಕ್ತವಾದಾಗ, ಜ್ಯೂಸ್‌ ದೇವ ಚಿನ್ನದ ಮೋಡದ ವಾತಾವರಣ ಸೃಷ್ಟಿಸಿದರೆ, ಪರಾಶರ ಮುನಿ ನಿಹಾರದ ಹೊದಿಕೆ ಸೃಷ್ಟಿಸುತ್ತಾನೆ. ಪರಾಶರ ಮುನಿಯನ್ನು ತೃಪ್ತಿಪಡಿಸಿದ ನಂತರ ಮತ್ಸ್ಯಗಂಧಿ ಸುಗಂಧ ಸೂಸುವ ಯೋಜನ ಗಂಧಿಯಾಗಿ ಮಾರ್ಪಟ್ಟರೆ, ಹೀರಾ ಮೊದಲೆ ಸುಗಂಧಗಂಧಿಯಾಗಿ ಹೋಗಿರುತ್ತಾಳೆ :

Hera, do not fear that any mortal or god
will see, so close shall be the golden cloud I gather
about us, Not even Helios can look at us through it,
although beyond all others his light has sharpest vision.’
ಪುಟ ೩೦೩

ಆವಯೋದೃಶ್ಯತೋರೇಭಿಃ ಕಥಂ ನು ಸ್ಯಾತ್ಸಮಾಗಮಃ ||೫೮||
ಏವಂ ತಯೋಕ್ತೋ ಭಗವಾನ್ನೀಹಾರಮಸೃಜತ್ಪ್ರಭುಃ |
ಯೇನ ದೇಶ ಸ ಸರ್ವಸ್ತು ತಮೋಭೂತ ಇವಾಭವತ್‌ ||೫೯|| ಆದಿಪರ್ವ, ಸರ್ಗ ೫೭
ಕಾಂಡ ಪಟದಂತಿರ್ಪನ್ನೆಗಂ ಮಾಡಿ ಮಂಜನ್‌,
ಅಲಂಪೞ್ಕರನೀಯೆ – ಕೂಡುವೆಡೆಯೊಳ್‌ ಸರಳ ಪಂಪಭಾರತ, ಪುಟ ೩೯

ಧರ್ಮರಾಯ ಮತ್ತು ಹೆಕ್ತರ್‌ ನಡುವೆ ಸಹ ಹೋಲಿಕೆಚ ಇದ್ದು ಅವರು ಆಡುವ ಮಾತುಗಳನ್ನು ಆ ಹಿನ್ನೆಲೆಯಲ್ಲಿ ಬಹಳ ಎಚ್ಚರಿಕೆಯಿಂದ ಓದಬೇಕಾಗುತ್ತದೆ:

‘ಹಣವಿಲ್ಲದವ ಹೆಣಕ್ಕಿಂತ ಕಡೆ. ಬಡತನದಲ್ಲಿಯೇ ಹುಟ್ಟಿ ಬೆಳೆದರೆ ಅದರ ಕಷ್ಟ ಕಾಣುವುದಿಲ್ಲ; ಆದರೆ ಭಾಗ್ಯದಲ್ಲಿದ್ದು ಬಡತನಕ್ಕೆ ಬರುವ ಕಷ್ಟ ಇನ್ನಿಲ್ಲ. ಅದನ್ನು ಪಡೆಯುವ ಯತ್ನದಲ್ಲಿ ಮರಣವಾದರೂ ಲೇಸು’. ವಚನ ಭಾರತ, ಪುಟ ೨೨೭

ಎಂದು ಧರ್ಮರಾಯ ಆಡುವ ಮಾತುಗಳನ್ನು ಹೆಕ್ತರ್‌ ತನ್ನ ಹೆಂಡತಿ ಆಂದ್ರೊಮಖೆಗೆ ಹೇಳುವ ಮಾತುಗಳ ಜತೆ ಹೋಲಿಸಬಹುದು. ಯುದ್ಧಭೂಮಿಯಿಂದ ಮಧ್ಯದಲ್ಲಿ ಬಳಲಿ ಬಂದ ಹೆಕ್ತರ್‌ನನ್ನು ಕಂಡು ಫಲಶ್ರುತಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ತನ್ನ ಹೆಂಡತಿಗೆ ಹೆಕ್ತರ್‌ ಈ ರೀತಿ ಹೇಳುತ್ತಾನೆ. ಟ್ರೋಜನ್ನರು ಸೋತು ಶರಣಾದಲ್ಲಿ ಏನಾಗುತ್ತದೆ ಎಂದು ಕಲ್ಪಿಸಿಕೊಂಡು ಹೇಳುವ ಮಾತುಗಳು ಅವಾಗಿವೆ:

..…… ಕಂಚಿನ ಕವಚ ಧರಿಸಿದ ಅಖೈಯನ್ನರು ನಿನ್ನ ಸ್ವಾತಂತ್ರ‍್ಯ ದಿನವ ಹರಣ ಮಾಡಿ ಕಣ್ಣೀರಿಡುವ ನಿನ್ನನ್ನು ಕರೆ ಹೋಗುವುದಾದಲ್ಲಿ ಅವರ ಊರಾದ ಆರ‍್ಗೋಸ್‌ನಲ್ಲಿ ನೀನು ಮತ್ತೊಬ್ಬರ ಮನೆಯ ಕೈಮಗ್ಗದ ಮೇಲೆ ಕೆಲಸ ಮಾಡಬೇಕಾಗುತ್ತದೆ. ಅವರ ಮನೆಯ ಹತ್ತಿರದ ತೊರೆಯಿಂದ ನಿನ್ನ ಮನಸ್ಸಿಗೆ ವಿರುದ್ಧವಾಗಿ ನೀರು ತರುತ್ತಾ ಕಣ್ಣೀರಿಡುವ ನಿನ್ನನ್ನು ನೋಡಿದ ಯಾರಾದರೂ, ‘ಇಲಿಯೊಸ್‌ನಲ್ಲಿ ನಡೆದ ಹೋರಾಟದ ಕಾಲದಲ್ಲಿ ಅಶ್ವಗಳನ್ನು ಮುರಿದ ಟ್ರೋಜನ್ನರ ವೀರಾಧಿವೀರ ಹೆಕ್ತರ್‌ನ ಹೆಂಡತಿ ಈಕೆಎಂದು ಹೇಳುತ್ತಾರೆ’.

ಹಿರಿಯ, ಸದ್ಗುಣಿ ಮತ್ತು ಹೋಮರನ ಎಪಿಕ್‌ ಪ್ರಪಂಚದಲ್ಲಿ ಕಾಣಸಿಗುವ ಮಾನವ ಮೂರ್ತಿ. ಧರ್ಮರಾಯನ ಸ್ವಭಾವ ಬೇರೆಯೆ?

ರಾಮಾಯಣ ರಚಿಸಿ ಹಾಡಿದ ವಾಲ್ಮೀಕಿಗೆ ಮಹಾಭಾರತ ಸೃಷ್ಟಿಗೆ ನಾಂದಿ ಹಾಡಿದ ವ್ಯಾಸ ಮಹರ್ಷಿಯ ಅರಿವಿತ್ತೋ ಇಲ್ಲವೋ ಗೊತ್ತಿಲ್ಲ. ಮಹಾಭಾರತವನ್ನು ವಾಲ್ಮೀಕಿ ಕೇಳಿಸಿಕೊಂಡಿರಬಹುದೆ ಎಂಬ ಬಗ್ಗೆ ಏನನ್ನೂ ಖಚಿತವಾಗಿ ಹೇಳುವ ಸ್ಥಿತಿಯಲ್ಲಿ ವಿದ್ವತ್‌ ಪ್ರಪಂಚ ಇರಲಾರದು.[1] ಆದರೆ ವ್ಯಾಸರ ತರಹವೆ ತನ್ನ ಕಾಲದ ಬದುಕಿಗೆ ಸ್ಪಂದಿಸಿ ಕಾವ್ಯ ಬರೆಯುವುದರ ಮೂಲಕ ತನ್ನದೇ ಆದ ಭಿನ್ನ ಮಾರ್ಗದಲ್ಲಿ ಸಾಗುತ್ತಲೆ ಆ ವ್ಯಾಸ ಹಾಕಿದ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸುವುದರ ಮುಖೇನ ಒಟ್ಟಾರೆ ಎಪಿಕ್‌ ರಚನಾ ಪರಂಪರೆಯನ್ನು ಅತ್ಯಂತ ವಿಶಾಲಗೊಳಿಸಿದ ಎಂಬುದು ದಾಖಲಿಸಬೇಕಾದ ಸಂಗತಿ; ವ್ಯಾಸರ ಭಾರತ ವ್ಯಾಸ – ಕಾಲದ್ದಾದಂತೆ, ರಾಮಾಯಣ ವಾಲ್ಮೀಕಿ – ಕಾಲದ ಕೃತಿ. ಅವರು ಬಂದ ಕಾಲವನ್ನು ಇಸವಿ ಲೆಕ್ಕದಲ್ಲಿ ಬಹಳ ಖಚಿತವಾಗಿ ಗುರಿತಿಸಲಾಗದಿದ್ದರೂ, ಅವರು ಬಂದ ಕಾಲ ಯಾವುದಾಗಿತ್ತು ಎಂಬುದನ್ನು ಅವರ ಕೃತಿಗಳ ರೂಕ್ಷ ಲೆಕ್ಕದಲ್ಲಿ ತೋರಿಸಿಕೊಡುತ್ತವೆ. ಅವುಗಳು ನೀಡುವ ಸಾಕ್ಷಿ ಮತ್ತು ಪುರಾವೆಗಿಂತ ಪ್ರಬಲವಾದ ಪುರಾವೆಗಳು ಬೇರೆ ಬೇಕಿಲ್ಲ. ಏಕೆಂದರೆ, ಕಾಲಕ್ಕೆ ಮತ್ತು ಬದುಕಿಗೆ ಬದ್ಧವಾಗಿರುತ್ತಲೆ ಆ ಹಂಗು ಮೀರಿದ ಕೃತಿಗಳು.

ಹೋಮರ್‌ ಕಾಲದ ಬದುಕು ವರ್ಜಿಲ್‌ ಕಾಲಕ್ಕೆ ಅನೇಕ ವಿವರಗಳಲ್ಲಿ ಬದಲಾಗಿ ವಾಲ್ಮೀಕಿ ಕಾಲಕ್ಕಾಗಲೇ ಮಾರ್ಪಾಡಾಗಿ ಹೋಗಿತ್ತು ಎಂಬುದನ್ನು ರಾಮಾಯಣವೇ ಕಂಡುಕೊಂಡಿತ್ತು.

………………the Rāmāyaņa reflects a social pattern at a transitional phase between that of the Aryan expansion across northern India and the settled pattern of village – based agriculture which is so much a feature of modern India the change from a heroic age to caste society.[2]

ಆ ಸ್ಥಿತ್ಯಂತರವನ್ನುನಂತರ ಬಂದ ಕವಿಗಳ ಕೈಯಲ್ಲಿ ಗ್ರಹಿಸಲಾಗಲಿಲ್ಲವೆ? ವಾಲ್ಮೀಕಿ ಕಂಡುಕೊಂಡ ಆ ಸರಳ ಸತ್ಯ ಮತ್ತು ಕಾವ್ಯಧರ್ಮ ನಂತರ ಬಂದ ಭಾರತದ ಕವಿಗಳಿಗೆ ದಕ್ಕಲಿಲ್ಲ ಏಕೆ? ಹೋಮರ್‌ – ವರ್ಜಿಲ್‌ ಕಾಲದ ನಡುವೆ ಸಹಜವಾಗಿ ಮಾರ್ಪಾಡು ಹೊಂದಿದ ಯುರೋಪ್‌ ಮೂಲದ ಜನರ ಬದುಕು, ನಂತರ ಸ್ವೀಕರಿಸಲಾದ ಕ್ರಿಶ್ಚಿಯನ್‌ ರಿಲಿಜನ್‌ನಿಂದಾಗಿ ಅನೇಕ ರೀತಿಯ ಉತ್ಪಾತಗಳನ್ನು ಜೀರ್ಣಿಸಿಕೊಂಡು ಮುಂದೆ ಸಾಗಬೇಕಾಯಿತು ಎಂಬುದನ್ನು ಈಗಾಗಲೇ ವಿವರಿಸಲಾಗಿದೆ. ಆ ತರಹ ಆಗದೆ ಹೋದುದೆ ಭಾರತದಲ್ಲಿಕಾಣಿಸಿಕೊಂಡ ಯಥಾಸ್ಥಿತಿ ಮನೋಧರ್ಮಕ್ಕೆ ಅವಕಾಶವಾಯಿತೇ? ಪ್ರಮುಖವಾದ ಮತ್ತೊಂದು ವ್ಯತ್ಯಾಸದ ಅಂದಾಜು ನೀಡುವ ಸನ್ನಿವೇಶವನ್ನು ಗಮನಿಸಲು ಇದೇ ಸಂದರ್ಭ ಸೂಕ್ತ ಎಂದು ತೋರುತ್ತದೆ.

ಹೋಮರನ ಕಾಲದ ಪ್ರತಿನಿಧಿಯಾದ ಟರ್ನಸ್‌ನನ್ನು ಸಂಹರಿಸುವುದರ ಮೂಲಕ ವರ್ಜಿಲನ ಈನಿಯಾಸ್‌; ಮಾರ್ಪಾಡು ಹೊಂದಿರುವ ಆ ಯುಗಕ್ಕೆ ವಿದಾಯ ಹೇಳುತ್ತಲೇ ಮುಂದಿನ ಹೊಸ ಯುಗಕ್ಕೆ ಕಾಲಿಡಲು ಸಿದ್ಧನಾಗುತ್ತಾನೆ. ಆದರೆ ರಾಮಾಯಣದ ರಾಮ ಕೊಲ್ಲುವುದು ಮುಂಬರಲಿರುವ ಅತ್ಯಾಧುನಿಕ ಯುಗದ ಪ್ರತಿನಿಧಿಯಾಗಿ ಕಾಣಿಸುವ ರಾವಣನನ್ನು, ಪೌರುಷಕ್ಕಾಗಿ ಪೌರುಷ ಪ್ರದರ್ಶಿಸಲು ಹೋಗಿ ವಿವೇಕ ಕಳೆದುಕೊಂಡವನಂತೆ ವರ್ತಿಸುವ ಟರ್ನಸ್‌ನನ್ನು ಜೀರ್ಣಿಸಿಕೊಂಡು ಯೂರೋಪ್‌ ಮೂಲದ ಸಮಾಜ ಮುಂದೆ ಸಾಗಿ ಬಂದಿದ್ದರೆ; ವಾಲಿ – ಸುಗ್ರೀವರ ವನವಾಸಿ ಸಮೂಹ, ರಾಮ ಪ್ರತಿನಿಧಿಸುವ ನಾಗರಿಕ ಬದುಕು ಮತ್ತು ರಾವಣ ಸಂಕೇತಿಸುವ ಅತ್ಯಾಧುನಿಕ ಮನೋಭಾವದ ಷೀಕಿಲಾಲ ಬದುಕು ಒಟ್ಟೊಟ್ಟಿಗೆ ಕ್ರಿಯಾಶೀಲವಾಗಿರುವುದನ್ನು ಭಾರತದಲ್ಲಿ ಇಂದಿಗೂ ಗುರುತಿಸಬಹುದಾಗಿದೆ. ಅನಾವಶ್ಯಕ ಎಂದು ಕಂಡುಬಂದ ಭಾಗವನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ನಿರ್ಮಮಕಾರದಿಂದ ತೆಗೆದುಹಾಕುವಂತೆ ಈನಿಯಾಸ್‌ ಟರ್ನಸ್‌ನನ್ನು ಕಿತ್ತೆಸೆಯುತ್ತಾನೆ. ಟರ್ನಸ್ ಪ್ರತಿನಿಧಿಸುವ ಕೆಲ ವಾಂಛಲ್ಯ, ಅಭೀಪ್ಸೆ, ಮೂಲ ಪ್ರವೃತ್ತಿ ಮತ್ತು ಹುಟ್ಟುಗುಣಗಳು ಬೇರೆ ವಿಧ ಹಾಗೂ ಬೇರೆ ರೂಪದಲ್ಲಿ ಪ್ರಕಟಗೊಳ್ಳುತ್ತಿರಬಹುದು. ಆದರೆ ಟರ್ನಸ್‌ ರೂಪದಲ್ಲಿ ಖಂಡಿತ ಅಲ್ಲ; ಕಾಲಕ್ಕನುಗುಣವಾಗಿಲ್ಲ ಎಂದು ಕಂಡುಬಂದ ಸಂಗತಿಗಳನ್ನು ಕತ್ತರಿಸಿ ತೆಗೆದು ಹಾಕುವುದು ತಮ್ಮ ಕರ್ತವ್ಯ ಎಂಬ ಯೂರೋಪ್ ಮೂಲದ ಜನರ ಮನೋಧರ್ಮ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿರುವುದನ್ನು ವರ್ಜಿಲನಲ್ಲಿಯೆ ಗುರುತಿಸಬಹುದಾಗಿದೆ. ಅದೇ ರೀತಿ ಭಾರತೀಯ ಮನೋಧರ್ಮ ರಾಮಾಯಣ ಕಾಲಕ್ಕಾಗಲೆ ನಿರ್ಧರಿತವಾಗಿರುವುದನ್ನು ಕಾಣಬಹುದು. ರಾಮ, ರಾವಣ ಮತ್ತು ವಾಲಿ – ಸುಗ್ರೀವರು ಪ್ರತಿನಿಧಿಸುವ ಬದುಕು ಭಾರತದ ಇಂದಿನ ಬದುಕೂ ಆಗಿಲ್ಲವಲ್ಲ; ಹಲವಾರು ತರಹದ ಮನೋಭಾವ, ಮನೋಧರ್ಮ ಮತ್ತು ದೃಷ್ಟಿಕೋನಗಳು ಒಟ್ಟೊಟ್ಟಿಗೆ ಬದುಕುವ ಸಾಧ್ಯತೆ; ಆ ಬಹುಮುಖಿ ಬದುಕಿನ ಅಭಿವ್ಯಕ್ತಿ ರಾಮಾಯಣ.

ರಾಮಾಯಣ ಕಾಲದ ಬದುಕಿನ ಮಾದರಿಯೆ ಮುಂದುವರಿದಿದೆ ಎಂಬ ಭಾವನೆ ಬೆಳೆಸಿಕೊಂಡ ಭಾರತದ ಜನ, ಅದರ ತರಹವೇ ಮಹಾಭಾರತದ ಬದುಕು ಬದಲಾಗಿಲ್ಲ ಎಂಬ ತಿಳುವಳಿಕೆ ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತೆ? ಬುದ್ಧ ಸ್ಥಾಪಿಸಿದ ಚಿಂತನಕ್ರಮ, ರಿಲಿಜನ್‌ ಆಗದೆ ಧರ್ಮವಾಗಿ ಉಳಿದುಕೊಂಡುದು, ಭಾರತದ ಬದಲಾಗಿಲ್ಲ ಮತ್ತು ಬದಲಾಗುವುದು ಸಾಧ್ಯವಿಲ್ಲ ಎಂಬ ಭಾವನೆ ಬೆಳೆದು ಬರಲು ಕಾರಣವಾಯಿತೇ? ಸೂಕ್ಷ್ಮ ಬದಲಾವಣೆಯ ಸೂಕ್ಷ್ಮಗಳನ್ನು ಗುರುತಿಸುವ ಸೂಕ್ಷ್ಮ ಕಲೆಯ ಓದು ಭಾರತೀಯರಿಗೆ ಬೇಕಾಗಲಿಲ್ಲವೆ?

ಮೂಲ ರಾಮಾಯಣದ ಭಾಷೆ ಕೂಡ ಮೂಲ ಮಹಾಭಾರತಕ್ಕಿಂತ ಇತ್ತೀಚಿನದು ಎಂಬುದಾಗಿ ಆ ಕುರಿತಂತೆ ಅತ್ಯಂತ ನಿಖರವೂ ಮತ್ತು ವೈಧಾನಿಕವೂ ಆದ ಅಧ್ಯಯನ ನಡೆಸಿರುವ ಎಡ್ವಿನ್‌ಬರ್ಗ್‌ ವಿಶ್ವವಿದ್ಯಾಲಯದ ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಜೆ. ಕೆ. ಬ್ರಾಕಿಂಗ್‌ಟನ್‌ ತಮ್ಮ ಕೃತಿಯಲ್ಲಿ ಅಭಿಪ್ರಾಯಪಡುತ್ತಾರೆ.

…the language and style of the first stage are closely related to those of the oldest parts of the Mahābhārata… The relationship of the Rāmāyaņa to the Mahabharata is of course a factor, the unraveling of which is crucial to a full understanding of the dating of either epic. The most commonly expressed view is that the Mahābhārata is older in its origins than the Rāmāyaņa, which however developd over a shorter period, as is shown by the acquaintance of later parts of the Mahābhārata with the Rāmāyaņa. This view appears substantially correct, though capable of some amplification. With regard to the first stage, with which we are at present concerned, the evidence of the style of the two epics, especially in the use of figures of speech and o the formulae typical of oral composition, suggests that they were possibly more independent of each other than is usually recognized, which would tend to weaken arguiments based on linguistic comparison. Nevertheless, the Rāmāyaņa does display greater homogeneity of language (and also of metrical expression) which may suggest a slightly later date for its origin than for the Mahābhārata, as well as vindicating the traditional ascription to a single author. ಪುಟ ೩೦೮

ಮಹಾಭಾರತ – ರಾಮಾಯಣಗಳನ್ನು ಯುರೋಪ್‌ ಮೂಲದ ಯಾವುದೇ ಕೃತಿಗಳ ಜತೆ ಹೋಲಿಸಲು ಹೋಗದೆ, ಭಾರತೀಯವಾದ ಆಂತರಿಕ ಸಂಗತಿಗಳನ್ನು ಆಧರಿಸಿ ಬ್ರಾಕಿಂಗ್‌ಟನ್‌ ಆ ತೀರ್ಮಾನಕ್ಕೆ ಬರುತ್ತಾರೆ ಎಂಬುದು ಗಮನಾರ್ಹ. ೧೯೫೭ರ ಸುಮಾರಿಗೆ ಬರೆಯಲಾದ ತಮ್ಮ ‘ಸಂಸ್ಕೃತ ಕಾವ್ಯ’ ಕೃತಿಯ ಪುಟ ೫೧ರಲ್ಲಿ ಡಾ. ಕೆ. ಕೃಷ್ಣಮೂರ್ತಿ ತಲುಪುವ ಅದೆ ತೀರ್ಮಾನ ಕುರಿತಂತೆ ಕುತೂಹಲ ಅಗತ್ಯ:

ರಾಮಾಯಣದ ಕಥಾವೃತ್ತಾಂತವು ವೈದಿಕ ಸಾಹಿತ್ಯ, ಪಾಣಿನಿಸೂತ್ರ ಮುಂತಾದ ಪ್ರಾಚೀನ ಸ್ಥಳಗಳಲ್ಲಿ ಬರುವುದಿಲ್ಲ; ಭಾರತದ ಮೂಲಕತೆಯು ಬರುತ್ತದೆ. ರಾಮಾಯಣದ ಕಥಾನಾಯಕರ ಸ್ವಭಾವವು ಮಹಾಭಾರತದ ಮುಖ್ಯವೀರರ ಸ್ವಭಾವಕ್ಕಿಂತ ನಯವೂ, ಸುಸಂಸ್ಕೃತವೂ ಆಗಿರುವುದು ಕೂಡ ಇದನ್ನೇ ಸೂಚಿಸುತ್ತದೆಂದು ಪಾಶ್ಚಾತ್ಯರ ಅಭಿಪ್ರಾಯ. ಆದರೆ ನಮ್ಮ ಸಂಪ್ರದಾಯದ ಪ್ರಕಾರ ರಾಮಾಯಣವು ತ್ರೇತಾಯುಗದ ಕಥೆ; ಮಾನವರೊಡನೆ ವಾನರೂ ರಾಕ್ಷಸರೂ ಭಾರತದಲ್ಲಿ ವಾಸಿಸುತ್ತಿದ್ದ ಪ್ರಾಕ್ಕಾಲದ ಚರಿತ್ರೆ. ಮಹಾಭಾರತವು ಕಲಿಯುಗಕ್ಕೆ ಸಮೀಪದ ದ್ವಾಪರದ ಕಥೆ. ಸಂಸ್ಕೃತಿಯು ಯುಗದಿಂದ ಯುಗಕ್ಕೆ ವಿಕಸಿತವಾಗುವದೆಂದು ಪಾಶ್ಚಾತ್ಯರು ತಿಳಿದರೆ ಹ್ರಾಸಗೊಳ್ಳುವುದೆಂದು ಭಾರತೀಯರ ಪುರಾಣಗಳು ಹೇಳುತ್ತವೆ. ಈ ಎರಡು ದೃಷ್ಟಿಕೋನಗಳು ಸೂಚಿಸುವ ತತ್ವವೂ ರಾಮಾಯಣದ ವಿಷಯದಲ್ಲಿ ಒಂದೇ ಆಗಿದೆ.

ಆದರೆ ಅಂತಹ ಮಹತ್ವದ ವಿಚಾರಕ್ಕೆ ನೀಡಬೇಕಾದ ಪ್ರಾಮುಖ್ಯತೆ ಮತ್ತು ಮಹತ್ವ ನೀಡಲು ಹೋಗುವುದಿಲ್ಲ. ಅವರು ಮಾತ್ರವಲ್ಲ, ನಂತರ ಬಂದ ಎಲ್ಲ ವಿದ್ವಾಂಸರು ಮತ್ತು ಲೇಖಕರು ಆ ಕುರಿತಂತೆ ವಹಿಸಿರುವ ಮೌನ ಅಗಾಧವಾದುದು.

ರಾಮಾಯಣ ಗಂಗಾನದಿ ಮೇಲ್ಭಾಗದ ಕತೆಯಾದರೆ, ಮಹಾಭಾರತ ದೆಹಲಿ ಮತ್ತು ದೋಅಬ್‌ ಭಾಗದ ಕತೆ ಎಂಬುದು ಒಂದು ಅಂದಾಜು:

In the case of Mahābhārata, this is the immediately post – Vedic period near the beginning of the first millennium BC, when the centre of power still lay in the Delhi region and the Doab. On the other hand, the political background to the Rāmāyaņa reflects the shift of the power focus into the upper Ganga basin which occurred somewhat later.[3]

ಗಂಗಾನದಿ ಭಾಗದಲ್ಲಿ ಕೃಷಿ ಚಟುವಟಿಕೆಗೆ ಮೊದಲಾದುದೇ ಸ್ವಲ್ಪ ತಡವಾಗಿ ಎಂಬುದು ಬಹುತೇಕ ಎಲ್ಲ ಇತಿಹಾಸಕಾರರು ಒಪ್ಪುವ ಮಾತು.

ಮಹಾಭಾರತದ ಕುರು ಜನಾಂಗದ ಪ್ರಸ್ತಾಪ ವೇದಗಳಲ್ಲಿಯೇ ಬರುತ್ತದೆ. ಅಂದರೆ ಮಹಾಭಾರತದ ಮೂಲವನ್ನು ವೇದಗಳಲ್ಲಿಯೇ ಕಾಣಬಹುದಾಗಿದೆ. ಅದರಲ್ಲೂ ಅತಿ ಪ್ರಾಚೀನವಾದ ಋಗ್ವೇದದಲ್ಲಿ.

ಆದರೆ ರಾಮಾಯಣಕ್ಕೆ ಸಂಬಂಧಿಸಿದ ವಿವರಗಳನ್ನು ವೇದಗಳಲ್ಲಿ ಕಾಣಲಾಗಿಲ್ಲ. ಸೀತೆಯ ತಂದೆಯಾದ ಜನಕನ ಹೆಸರು ಕೆಲವು ಪೂರ್ವದ ಉಪನಿಷತ್ತುಗಳಲ್ಲಿ ಬರುತ್ತದೆ. ಜನಕ ಎಂಬ ಆ ಹೆಸರು ಕೌಟುಂಬಿಕ ಅಥವಾ ವಂಶಪರಂಪರೆಗೆ ಸಂಬಂಧಿಸಿದ ಸಾಮಾನ್ಯ ಹೆಸರಾಗಿರುವ ಸಂಭವವೇ ಹೆಚ್ಚು ಎಂಬುದು ಬ್ರಾಕಿಂಗ್‌ಟನ್‌ ಅಭಿಪ್ರಾಯ.

ವಸ್ತು, ರಚನಾ ಮತ್ತು ನಿರ್ವಹಣಾ ವಿಧಾನ, ಭಾಷಾ ಬಳಕೆ, ಚಿತ್ರಿತವಾಗಿರುವ ಬದುಕು, ವ್ಯವಸ್ಥೆ, ಪಾತ್ರಗಳ ಮನಃಸ್ಥಿತಿ, ನಡವಳಿಕೆ, ಪ್ರತಿಕ್ರಿಯಿಸುವ ರೀತಿ, ಧೋರಣೆ ದೃಷ್ಟಿಕೋನ ಹಾಗೂ ಮನೋಧರ್ಮ: ಈ ಯಾವುದೇ ಹಿನ್ನೆಲೆಯಿಂದ ನೋಡಿದರೂ ಮಹಾಭಾರತ ರಾಮಾಯಣಕ್ಕಿಂತ ಹಿಂದಿನದು. ರಾಮಾಯಣವು ಪ್ರಮುಖವಾಗಿ ನಾಲ್ಕು ಘಟ್ಟಗಳಲ್ಲಿ ಬೆಳೆದು ಬಂದಿದ್ದು, ಬಾಲಕಾಂಡ ಮತ್ತು ಉತ್ತರಕಾಂಡ ಹೊರತು ಉಳಿದ ೨ ರಿಂದ ೬ರ ವರೆಗಿನ ಕಾಂಡಗಳನ್ನು ಏಕವ್ಯಕ್ತಿಯು ಕ್ರಿ.ಪೂ.೫ರಿಂದ ೬ನೇ ಶತಮಾನದ ನಡುವೆ ರಚಿಸಿರಬಹುದೆಂದು ಬ್ರಾಕಿಂಗ್‌ಟನ್‌ ಅಂದಾಜು ಮಾಡುತ್ತಾರೆ. ಆ ಏಕವ್ಯಕ್ತಿಯೇ ವಾಲ್ಮೀಕಿ. ಅಂದರೆ ರಾಮಾಯಣ ಹೆಚ್ಚ ಕಡಿಮೆ ಬುದ್ಧ ಯುಗದ ಕೃತಿ ಎಂದಾಯಿತು. ಮಹಾಭಾರತ ಕೂಡ ಮುಖ್ಯವಾಗಿ ೩ ಅಥವಾ ೪ ಹಂತಗಳಲ್ಲಿ ಬೆಳವಣಿಗೆಯಾಗಿರಬಹುದೆಂದು ವಿದ್ವಾಂಸರು ಅಂದಾಜು ಮಾಡುತ್ತಾರೆ :

ಇದನ್ನು ಮೂರುಭಾಗ ಮಾಡಬಹುದು: – (೧) ‘ನಾರಾಯಣಂ ನಮಸ್ಕೃತ್ಯ’ ಎಂಬ ಶ್ಲೋಕದಿಂದ ಮೊದಲಾಗುವುದು. (೨) ‘ಆದ್ಯಂ ಪುರುಷಮೀಶಾನಂ’ ಎಂಬ ಶ್ಲೋಕಗಳಿಂದ ಮೊದಲಾಗುವುದು.(೩) ‘ಗುರುವೇ ಪ್ರಾಙ್ನಮ ಸ್ಕೃತ್ಯ’ ಎಂಬ ಶ್ಲೋಕಗಳಿಂದ ಮೊದಲಾಗುವುದು. ಇವುಗಳಲ್ಲಿ ಮೂರನೆಯದು ವೈಶಂಪಾಯನನ ಆರಂಭ; ಎರಡನೆಯದು ಅದನ್ನು ಒಳಗೊಂಡ ಸೂತ ಪೌರಾಣಿಕನ ಆರಂಭ; ಮೊದಲನೆಯದು ಯಾರದ್ದೋ ಗೊತ್ತಿಲ್ಲ: – ಯಾರೋ ಭಾಗವತ ಪೌರಾಣಿಕರದ್ದೆಂದು ಹೇಳೋಣ; ಏಕೆಂದರೆ ಇದು ಕೆಲವು ಭಾಗವತ ಸಂಪ್ರದಾಯದವರಿಗೆ ಮಂತ್ರವಾಗಿದೆಯಂತೆ. ಈ ಭಾಗಗಳು ವ್ಯಾಸರಚಿತವಲ್ಲವೆಂಬುದು ಸ್ಪಷ್ಟ. ವೈಶಂಪಾಯನನು ಆರಂಭಮಾಡಿ ಕೊನೆಮುಟ್ಟಿಸುವ ಕಥೆಯಲ್ಲಿಯೂ ವ್ಯಾಸರ ಭಾಗವಷ್ಟೋ ವೈಶಂಪಾಯನನ ಭಾಗವೆಷ್ಟೋ, ಗೊತ್ತಾಗುವುದಿಲ್ಲ… ಮೂಲ ಕರ್ತೃವು ವ್ಯಾಸ;ಅವನ ಕೃತಿಯನ್ನು ವೈಶಂಪಾಯನನು ಮೊದಲು – ಪ್ರಾಯಶಃ ವಿಸ್ತರಿಸಿ – ಹೇಳಿದನು; ಅದನ್ನು ಸೂತಪುರಾಣಿಕನು – ಇನ್ನಷ್ಟು ವಿಸ್ತರಿಸಿ – ಹೇಳಿದನು; ಅದನ್ನು ಈಚಿನ ಪುರಾಣಿಕರು ಮತ್ತಷ್ಟು ಬೆಳೆಸಿದರು – ಎಂದು ಇಟ್ಟುಕೊಳ್ಳಬಹುದು. ೮೮೦೦, ೨೪೦೦೦, ೧೦೦೦೦೦, ಈ ಶ್ಲೋಕ ಸಂಖ್ಯೆಗಳೂ ಇದನ್ನೇ ಸೂಚಿಸುತ್ತವೆ.ವಚನ ಭಾರತ ಪುಟ 33 – 34

ಆದರೆ ಅದು ಒಂದು ಅಂದಾಜು ಮಾತ್ರ. ಏಕೆಂದರೆ, ಮೂಲ ರಾಮಾಯಣದ ಮೂಲ ಭಾಗ ಇದಾಗಿರಬಹುದೆಂದು ಒಂದು ಅಂದಾಜು ಮಾಡುವ ರೀತಿಯಲ್ಲಿ, ಮೂಲ ಮಹಾಭಾರತದ ಮೂಲ ಭಾಗ ಇದಾಗಿರಬಹುದೆಂದು ಗುರಿತಿಸುವ ಸ್ಥಿತಿಯನ್ನು ವಿದ್ವತ್‌ ಜಗತ್ತು ಇನ್ನೂ ತಲುಪಿಲ್ಲ. ರಾಮಾಯಣ ಮೊದಲಾದ ಎಲ್ಲ ಹಿಂದಿನ ಕಾಲದ ಕೃತಿಗಳು ಅನೇಕ ತರಹದ ಪಾಠಾಂತರದ ಹಾವಳಿಗೆ ತುತ್ತಾಗಿರುವಂತೆಯೇ, ಮಹಾಭಾರತದಲ್ಲೂ ಪಾಠಾಂತರದ ಹಾವಳಿ ಅತಿಯಾಗಿದೆ. ಆ ಜತೆಗೆ ಉತ್ತರ, ದಕ್ಷಿಣ, ಪೂರ್ವ ಇತ್ಯಾದಿ ಅನೇಕವಾದ ಪ್ರಾಂತೀಯ ವಿಭಜನೆಗಳಿದ್ದು, ಅವುಗಳ ನಡುವಿನ ಅಂತರ ಎಷ್ಟಿದೆ ಎಂದರೆ ಅವು ಒಂದೊಂದು ಪ್ರತ್ಯೇಕ ಆವೃತ್ತಿಯೇನೋ ಎಂದು ಭಾವಿಸಬೇಕಾದ ಮಟ್ಟಿಗೆ. ಆ ಸಮಸ್ಯೆಯನ್ನು ಮಹಾಭಾರತ ಸಂಪಾದನೆಗೆ ಬೇಕಾದ ವೈಜ್ಞಾನಿಕ ತಳಹದಿ ರೂಪಿಸಿದ ವಿ. ಎಸ್‌. ಸುಕ್ತಂಕರ್‌ ‘ಆದಿಪರ್ವಕ್ಕೆ ಬರೆದ ತಮ್ಮ ಸುದೀರ್ಘ ವಿದ್ವತ್‌ಪೂರಿತ ಉಪೋದ್ಘಾತದಲ್ಲಿ ಗುರಿತಿಸಿದ್ದಾರೆ. ಲಿಪಿ ಸೌಲಭ್ಯ ಚಲಾವಣೆಗೆ ಬರುವುದಕ್ಕೆ ಎಷ್ಟೋ ಶತಮಾನಗಳಿಗೂ ಮೊದಲೇ ಮೂಲ ಮಹಾಭಾರತವನ್ನು ರಚಿಸಲಾದುದು, ಆ ರೀತಿ ವಿಭಿನ್ನ ಆವೃತ್ತಿಗಳು ರೂಪುಗೊಳ್ಳಲು ಕಾರಣವಾಗಿದ್ದಿರಬಹುದು. ಆದರೆ ಆ ರೀತಿಯ ಮಾರ್ಪಾಡು ಬರವಣಿಗೆ ಜಾರಿಗೆ ಬಂದ ನಂತರವೂ ನಿಲ್ಲಲಿಲ್ಲ:

Whenever and wherever the text was then written down – and it was probably written down indepently in different epochs and under different circumstance – these transmission by word of mouth must have contaminated the written text and introduced innumerable variations in it. The assumption of some such complicated derangement, beyond the normal vicissitudes of transmission, is necessary to account for the abnormal discrepancies and strange vagaries of the Mahabharata manuscript tradition. Inother words, we are compelled to assume that even in its early phases the Mahābhārata textual tradition must have been not uniform and simple, but multiple and polygenous. Page L XXIX

ಮಹಾಭಾರತ ಎಂಬುದು ಒಬ್ಬ ಅಥವಾ ಅನೇಕ ಕವಿಗಳ ರಚನೆ ಮಾತ್ರವಲ್ಲ; ಅದೊಂದು ಸಮೂಹಸೃಷ್ಟಿ ಎಂಬ ಈ ಮೊದಲ ಗ್ರಹಿಕೆಯನ್ನು ಸುಕ್ತಂಕರ್‌ ಅವರ ಮಾತುಗಳು ಶ್ರುತ ಪಡಿಸುತ್ತವೆ. ವಾಲ್ಮೀಕಿ ರಾಮಾಯಣದ ತರಹವೇ ಮೂಲದಲ್ಲಿ ಏಕವ್ಯಕ್ತಿ ರಚನೆಯಾಗಿದ್ದಿರಬಹುದಾದ ಮೂಲ ಮಹಾಭಾರತ ಹಲವಾರು ಮನಸ್ಸು ಮತ್ತು ಪ್ರತಿಭೆಗಳ ಸಂಗಮದಿಂದಾಗಿ ಮಾರ್ಪಡುತ್ತಾ ಹೋದಂತೆಯೇ, ಕಾಲಾನುಕ್ರಮದಲ್ಲಿ ಸಮೂಹ ಸೃಷ್ಟಿಯಾಗಿ ಬೆಳೆದುಕೊಂಡಿತು.

ಪ್ರತಿಭಾವಂತರಿಂದ ತುಂಬಿದ ಸಂಪಾದಕರ ಮಂಡಳಿಯೊಂದು ಮೂಲ ರಾಮಾಯಣ ಇದಾಗಿರಬಹುದೆಂದು ಗುರಿತಿಸಿ ಅದರ ಹತ್ತಿರ ಹೋಗುವ ಸಾಹಸ ಮಾಡಬಹುದಾಗಿದೆ; ಆದರೆ ಮಹಾಭಾರತದಲ್ಲಿನ ಮೂಲ ಮಹಾಭಾರತದ ಎಳೆಗಳನ್ನು ಗುರಿತಿಸುವ ಪ್ರಯತ್ನ ಮಾಡಬಹುದೇ ವಿನಾ, ‘ಮೂಲ ಮಹಾಭಾರತ ಇದು’ ಎಂದು ಗುರಿತಿಸಿ ಸಂಪಾದಿಸುವ ಸಾಹಸ ಬಹಳ ಕಷ್ಟ. ಅಷ್ಟೆಲ್ಲ ಅವಾಂತರಗಳು, ಪಾಠಾಂತರಗಳು ಮತ್ತು ಆವೃತ್ತಿಗಳ ನಡುವೆಯೂ ಮೂಲ ಮಹಾಭಾರತದ ಹಂದರವನ್ನು ಸಂಪೂರ್ಣ ಬದಲಿಸಲು ಇಲ್ಲವೇ ಮಾರ್ಪಡಿಸಲು ಸಾಧ್ಯವಿಲ್ಲ ಎಂಬುದು, ಅದನ್ನು ರಚಿಸಿದ ಕವಿಗಿದ್ದ ಮಹಾಪ್ರತಿಭೆ ಮತ್ತು ಕಾಲನ ಸ್ಪಂದನಕ್ಕೆ ಉದಾಹರಣೆ. ದ್ರೌಪದಿ ದ್ರೌಪದಿಯಾಗಿಯೇ ಉಳಿದುಬಂದಿರುವಂತೆ ಪಾಂಡವರು ಪಾಂಡವರು ಮಾತ್ರ. ಅದೇ ತರಹ ಕೌರವರು ಕೌರವರಾಗಿಯೇ ಉಳಿದು ಬಂದಿರುತ್ತಾರೆ. ಪಂಪ, ಕುಮಾರವ್ಯಾಸ, ಮೊದಲಾದ ಅಗಣಿತ ಪ್ರತಿಭಾವಂತ ಮನಸ್ಸುಗಳು ನಡೆಸಿದ ಪ್ರಯತ್ನಗಳ ನಡುವೆಯೂ ಆ ಮೂಲ ಮಹಾಭಾರತದ ಜಾಯಮಾನ, ಹುಟ್ಟುಗುಣ ಮತ್ತು ಅಲ್ಲಿನ ಮೂಲ ಪ್ರವೃತ್ತಿಯನ್ನು ಬಹಳವಾಗಿ ಬದಲಿಸಲು ಸಾಧ್ಯವಿಲ್ಲ. ಪಂಪ, ರನ್ನ, ಕುಮಾರವ್ಯಾಸರಂಥ ಕವಿಗಳು ಮೂಲ ಮಹಾಭಾರತ ಹಾಡಿದ ಕವಿಗಳಷ್ಟೇ ಪ್ರತಿಭಾವಂತರಿರಬಹುದು. ಅವರ ಕೈಯಲ್ಲೂ ಅದರ ಮೂಲಗುಣ ಲಕ್ಷಣಗಳನ್ನು ಬದಲಿಸಲು ಸಾಧ್ಯವಾಗಿಲ್ಲ; ಕೆಲಭಾಗವನ್ನು ಸೇರಿಸಿರಬಹುದು ಅಥವಾ ಮಾರ್ಪಡಿಸಿರಬಹುದು. ‘ಇಲಿಯಡ್‌’ನ ಸಂದರ್ಭದಲ್ಲಿ ಈಗಾಗಲೇ ಗುರುತಿಸಲಾದಂತೆ ಮಹಾಭಾರತದಲ್ಲೂ ನಾಯಕರಿಲ್ಲ, ಪ್ರತಿನಾಯಕರಿಲ್ಲ; ಕೌರವರು ಖಳ – ನಾಯಕರಾಗಿ ಬೆಳೆದುಕೊಂಡುದು ನಂತರದ ಕಾಲದ ಕವಿಗಳ ಕೈಚಳಕ

ಮಹಾಭಾರತವನ್ನು ಸಂಪಾದಿಸುವ ಯೋಜನೆಗೆ ಕೈಹಾಕಿದ ಸುಕ್ತಂಕರ್‌, ಮೂಲ ಮಹಾಭಾರತ ನೀಡುವುದಾಗಿ ಎಲ್ಲೂ ಹೇಳಿಕೊಂಡಿಲ್ಲ. ಅದು ಅವರ ಉದ್ದೇಶವೂ ಆಗಿರಲಿಲ್ಲ. ಲಭ್ಯ ಹಸ್ತಪ್ರತಿಗಳನ್ನು ಆಧರಿಸಿ ಆದಷ್ಟು ಶುದ್ಧವಾದ ಮತ್ತು ಲಭ್ಯ ಪುರಾತನ ಪ್ರತಿಗೆ ಹತ್ತಿರವಿರಬಹುದಾದ ಪರಿಷ್ಕೃತ ಆವೃತ್ತಿಯನ್ನು ಮಾತ್ರ ಸಾಧ್ಯವಿರುವುದಾಗಿ ಅವರು ಹೇಳಿಕೊಂಡಿರುವುದು, ಮಹಾಭಾರತ ಕುರಿತಂತೆ ಅವರಿಗಿದ್ದ ಉತ್ತಮ ತಿಳುವಳಿಕೆ ಮತ್ತು ಅವರಿಗೆ ನಿದರ್ಶನ.

ರಾಮಾಯಣ ಅನೇಕ ಉಪನದಿಗಳು ಸೇರಿದ ಮಹಾನದಿಯಾದರೆ, ಮಹಾಭಾರತ ಅನೇಕ ಮಹಾನದಿಗಳು ಸೇರಿದ ಸಾಗರವಾಗಿ ಮಾರ್ಪಡಲು ಆ ಹಿನ್ನೆಲೆಯೇ ಕಾರಣ. ಮೂಲ ಮಹಾಭಾರತ ‘ಹೀಗಿದ್ದಿರಬಹುದು’ ಎಂದು ಒಂದು ಅಂದಾಜು ಮಾಡಬಹುದೇ ವಿನಾ, ‘ಹೀಗಿತ್ತು’ ಎಂದು ಹೇಳಲು ಸಾಧ್ಯ ಮಾಡಿಕೊಡುವ ಪರಿಸ್ಥಿತಿ ಇಂದು ಉಳಿದಿಲ್ಲ. ಆದರೂ ಹಲವಾರು ಮಾನಗಳ ಕಾಲ ನಡೆದ ನಿರಂತರ ದಾಳಿ ಮತ್ತು ಅವ್ಯಾಹತ ಉತ್ಪತಗಳಿಗೆ ತುತ್ತಾಗಿಯೂ, ಮೂಲ ಮಹಾಭಾರತ ತನ್ನ ಜಾಯಮಾನ ಬಿಟ್ಟುಕೊಡದೆ ಉಳಿದು ಬಂದಿರುವುದು ಅದರ ಗಟ್ಟಿತನ ಮತ್ತು ಅಪೂರ್ವತೆಗೆ ಸಾಕ್ಷಿ.

ರಾಮಾಯಣವನ್ನು ಆದಿಕಾವ್ಯ ಎಂದು ಪರಿಗಣಿಸುವುದರ ಮೂಲಕ ಭಾರತದ ಜನ ಬಹಳ ಹಿಂದೆಯೇ ಆ ಸಂಗತಿಯನ್ನು ಪರೋಕ್ಷವಾಗಿ ಅರಿತುಕೊಂಡಿದ್ದಂತೆ ಕಾಣುತ್ತದೆ. ವಾಲ್ಮೀಕಿ ಕೂಡ ವ್ಯಾಸನ ತರಹವೇ ಸೂತ ಪರಂಪರೆಗೆ ಸೇರಿದ ಚಾರಣ ಕವಿಯಾದರೂ, ಆತ ರಚಿಸಿದ ಕಾವ್ಯವನ್ನು ಆತನ ಶಿಷ್ಯರು ಬಾಯಿಂದ ಬಾಯಿಗೆ ವರ್ಗಾಯಿಸುವುದರ ಮೂಲಕ ಮೂಲರಚನೆಗೆ ಹತ್ತಿರದ ರೂಪದಲ್ಲಿ – ಕೃತಿ ಗ್ರಂಥಸ್ಥವಾಗುವವರೆಗೆ – ಉಳಿಸಿಕೊಂಡು ಬರಲು ಪ್ರಯತ್ನಿಸಿದಂತೆ ತೋರುತ್ತದೆ. ಆ ಅರ್ಥದಲ್ಲಿ ವಾಲ್ಮೀಕಿ ಚಾರಣ ಕವಿಯಾದರೂ ಲಿಖಿತ ಕಾವ್ಯ ಪರಂಪರೆಗೆ ಹತ್ತಿರ ಬರುವ ಕವಿ. ಮತ್ತು ಆತ ಚಿತ್ರಿಸಿದ ಸಮಾಜ ಮತ್ತು ಬದುಕು, ಭಾರತೀಯರು ಆಗಲೇ ಆರಿಸಿಕೊಂಡಿದ್ದ ಅಥವಾ ರೂಪಿಸಿಕೊಳ್ಳುವ ಹಂತದಲ್ಲಿದ್ದ ಬದುಕಿಗೆ ಸಂಬಂಧಿಸಿದುದಾಗಿತ್ತು; ಭಾರತೀಯರು ಬಯಸಿದ ಆದರ್ಶ ಕುಟುಂಬ, ಆದರ್ಶ ಮಕ್ಕಳು, ಆದರ್ಶ ಸೋದರರು ಮತ್ತು ಆದರ್ಶ ಸ್ನೇಹಿತರ ಚಿತ್ರಣ ದೊರಕುವುದು ರಾಮಾಯಣದಲ್ಲಿ. ರಾಮ – ಸೀತೆ ಆದರ್ಶ ದಂಪತಿಗಳಾದರೆ, ಲಕ್ಷಣ – ಭರತ ಆದರ್ಶ ಸೋದರರು ಮತ್ತು ಸುಗ್ರೀವ – ಹನುಮಂತರು ಆದರ್ಶ ಮಿತ್ರರು. ಮಾದರಿ ಮಗ, ಮಾದರಿಯಾದ ಸೊಸೆ; ರಾಮಾಯಣದಲ್ಲಿಯೇ ಮನೆ ಮಾಡಿಕೊಂಡಿರುವ ಅನೇಕ ತೊಡಕುಗಳ ನಡುವೆಯೂ ಆ ಆದರ್ಶದ ಕಲ್ಪನೆ ಜನಸಾಮಾನ್ಯರಲ್ಲಿ ಉಳಿದು ಬಂದಿರುವುದು, ಅಥವಾ ಜನರ ಮತ್ತು ಕಾಲದಲ್ಲಿನ ಆ ಭಾವನೆಗಳಿಗೆ ಸ್ಪಂದಿಸಿ ಎಪಿಕ್‌ ರಚಿಸಿರುವುದು ವಾಲ್ಮೀಕಿಗೆ ಸಲ್ಲಬೇಕಾದ ಶ್ರೇಯಸ್ಸು.

ಕ್ರಿಶ್ಚಿಯನ್‌ ಸಂವೇದನೆಗಳಿಗೆ ಹತ್ತಿರ ನಿಲ್ಲುವ ವರ್ಜಿಲನನ್ನು ಯುರೋಪಿನ ಸಮಾಜ ಬಹಳ ಗೌರವದಿಂದ ಸ್ವೀಕರಿಸಿದಂತೆ, ಭಾರತೀಯರು ಆದರ್ಶ ಎಂದು ಸ್ವೀಕರಿಸಿದ ಬದುಕಿನ ಚಿತ್ರಣ ನೀಡಿದ ವಾಲ್ಮೀಕಿಯನ್ನು ಆದಿಕವಿ ಎಂದು ಸ್ವೀಕರಿಸಿದಂತೆ ತೋರುತ್ತದೆ.

ಆ ರೀತಿಯ ಸುಸಂಸ್ಕೃತಿಯ ಹಂಬಲದಲ್ಲಿ ಮಹಾಭಾರತವನ್ನು ನಿರಾಕರಿಸಿದ ಎಷ್ಟು ಸರಿ? ಯಾವುದೆ ಸಮಾಜ ಹುಟ್ಟುತ್ತಲೆ ಏಕದಂ ಸುಸಂಸ್ಕೃತ ಮತ್ತು ನಾಗರಿಕವಾಗಲು ಸಾಧ್ಯವೇ? ಯುರೋಪಿನ ಜನ ವರ್ಜಿಲನಿಗೆ ಹೆಚ್ಚಿನ ಗೌರವ ತೋರಿಸಿದರು ನಿಜ. ಆದರೆ ಹೋಮರನಿಗೆ ಅಗೌರವ ತೋರಿಸಲಿಲ್ಲ.

ಮಹಾಭಾರತ ಮತ್ತು ರಾಮಾಯಣಗಳನ್ನು ಅವುಗಳ ಮೂಲಸ್ಥಿತಿಗೆ ಹತ್ತಿರವಾದ ರೂಪದಲ್ಲಿ ಉಳಿಸಿಕೊಳ್ಳುವ ವಿಚಾರದಲ್ಲಿ ಮತ್ತು ಮಹಾಭಾರತವು ರಾಮಾಯಣಕ್ಕಿಂತ ಇತ್ತೀಚಿನದು ಎಂಬ ನಂಬಿಕೆ ಬೆಳೆಸಿಕೊಂಡ ಕಾಲದಲ್ಲಿ ತೋರಲಾದ ಅಜಾಗೃತ ಮನಸಃಸ್ಥಿತಿಯನ್ನು ಇತಿಹಾಸದ ಆರಂಭದ ಕಾಲದಲ್ಲಿ ಬಹಳ ಹಿಂದೆಯೆ ರೂಢಿಸಿಕೊಂಡ ಜನಾಂಗ, ಅನ್ಯರ ಪ್ರಭಾವಕ್ಕೆ ತುತ್ತಾಗದೆ ಬಹಳ ಕಾಲ ಉಳಿದಿರಲು ಸಾಧ್ಯವೆ? ಎಂಬ ಪ್ರಶ್ನೆಗಳು ಸಹಜವಾಗಿಯೇ ಎದುರಾಗುತ್ತವೆ. ಇಲ್ಲಿ ಎದುರಾಗುವ ಮತ್ತೊಂದು ನಾಜೂಕಿನ ಪ್ರಶ್ನೆಗೆ ರಾಮಾಯಣದ ಅಭಿಮಾನಿಗಳು ಉತ್ತರ ಕಂಡುಕೊಳ್ಳಬೇಕಾಗುತ್ತದೆ.

ಬಾಲಕಾಂಡದ ಮಾತಿರಲಿ, ಉತ್ತರಕಾಂಡ ವಾಲ್ಮೀಕಿ ಕೃತ ಅಲ್ಲ; ಆ ಬಗ್ಗೆ ಯಾವುದೇ ಅನುಮಾನಗಳು ಇಂದು ಉಳಿದಿಲ್ಲ.

ಮೂಲ ರಾಮಾಯಣ ಮತ್ತು ಉತ್ತರ ಕಾಂಡದ ನಡುವೆ ಕನಿಷ್ಟ ೮೦೦ರಿಂದ ೯೦೦ ವರ್ಷಗಳ ಅಂತರವಿದೆ. ಅಂಥ ಉತ್ತರಕಾಂಡ ಬರೆಯುವ, ಮತ್ತು ಅದಕ್ಕೆ ಎಲ್ಲ ರೀತಿಯ ಮಾನ್ಯತೆ ನೀಡುವ ಮೂಲಕ ಭಾರತದ ಜನ, ವಾಲ್ಮೀಕಿ ರಾಮಾಯಣವನ್ನೇ ಬದಲಿಸಲು ನೋಡಿದರು ಎನ್ನುವುದಕ್ಕಿಂತ ತಿರಸ್ಕರಿಸಲು ಪ್ರಯತ್ನಿಸಿದಂತೆ ತೋರುತ್ತದೆ ಎಂದು ಯಾರಾದರೂ ತರ್ಕಬದ್ಧವಾಗಿ ವಾದಿಸುವುದಾದಲ್ಲಿ, ಆ ವಾದವನ್ನು ಅಲ್ಲಗಳೆಯಬರುತ್ತದೆಯೇ? ಮೂಲ ಮಹಾಭಾರತ ರಚಿಸಿದ ವ್ಯಾಸನಿಗೆ ನೀಡಲಾದ ಗೌರವವನ್ನೇ ಭಾರತದ ಜನ ಉತ್ತರಕಾಂಡ ರಚಿಸುವುದರ ಮುಖೇನ ತಾವು ಆದಿಕವಿ ಎಂದು ಸ್ವೀಕರಿಸಿದ ವಾಲ್ಮೀಕಿಗೂ ನೀಡಿದರು ಎಂದಾಗುತ್ತದೆ ಅಲ್ಲವೇ?

ಆ ಪರಿಸ್ಥಿತಿ ಭಾರತದಲ್ಲಿ ನಿರ್ಮಾಣವಾದುದಾದರೂ ಏಕೆ? ಮೂಲ ರಾಮಾಯಣದ ಬಗ್ಗೆ ಅಸಮಾಧಾನ ಇದ್ದಲ್ಲಿ, ಗೌರವದಿಂದ ‘ಉತ್ತರ ರಾಮಾಯಣ’ ಬರೆಯುಬಹುದಿತ್ತಲ್ಲ? ಉತ್ತರಕಾಂಡ ಬರೆದು ಅದನ್ನು ವಾಲ್ಮೀಕಿ ಹೆಸರಿಗೆ ಅಂಟಿಸುವ ಅನಾಮಿಕ ಪ್ರಯತ್ನಗಳು ನಡೆದುದಾದರೂ ಏಕೆ?

ರಾಮಾಯಣವನ್ನು ಆದಿಕಾವ್ಯ ಎಂದು ಸ್ವೀಕರಿಸುವುದರ ಮೂಲಕ ಅದಕ್ಕೂ ಹಿಂದಿನ ಮಹಾಭಾರತವನ್ನು ತಿರಸ್ಕರಿಸುವುದಕ್ಕಿಂತಲೂ ಹೆಚ್ಚಾಗಿ, ಅದು ಪ್ರತಿನಿಧಿಸುವ ಬದುಕಿನ ರೀತಿ ಬಗ್ಗೆ ಭಾರತದ ಜನ ಒಲವು ಉಳಿಸಿಕೊಂಡಂತೆ ಕಾಣುವುದಿಲ್ಲ; ಉತ್ತರಕಾಂಡ ಬರೆಯುವುದರ ಮೂಲಕ ರಾಮಾಯಣ ಪ್ರತಿನಿಧಿಸುವ ಬದುಕಿನ ಬಗೆಗೂ ಅದೇ ತರಹದ ‘ಗೌರವ’ ತೋರಿಸುವುದರ ಜತೆಗೆ, ಅದರಲ್ಲೂ ರಾಮ ಸೀತೆಯರ ನಡವಳಿಕೆಯನ್ನು ಪುನರ್‌ವಿಮರ್ಶೆ ಮಾಡಲು ಮುಂದಾದಂತೆ ತೋರುತ್ತದೆ. ಆ ರೀತಿ ಪುನರ್‌ವಿಮರ್ಶೆ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ ಎಂಬುದನ್ನು ಭಾರತೀಯ ಕಾವ್ಯ ಮೀಮಾಂಸೆ ಮತ್ತು ತತ್ತ್ವಶಾಸ್ತ್ರ ಕಲಿಸಲಿಲ್ಲವೆ?

ಅದು ಹೋಗಲಿ, ದಾಯಾದಿಗಳ ಮಾತ್ಸರ್ಯಕ್ಕೆ ಸಂಬಂಧಿಸಿದ ಎಪಿಕ್‌ ಈ ಜಗತ್ತಿನಲ್ಲಿ ಯಾವುದಾದರೂ ಇರುವುದಾದಲ್ಲಿ ಅದು ಮಹಾಭಾರತ ಮಾತ್ರ. ಈ ಜಗತ್ತಿನ ಎಲ್ಲ ಜನಾಂಗಗಳಿಗೆ ಸೇರಿದ ಎಲ್ಲ ಜನರು ಹುಟ್ಟಿನಿಂದ ಅಣ್ಣತಮ್ಮಂದಿರಾಗಿದ್ದವರು ಮುಂದೆ ಬರುಬರುತ್ತಾ ದಾಯಾದಿಗಳಾದರು ಎಂಬ ನಿಲುವನ್ನು ಒಪ್ಪಿಕೊಳ್ಳುವುದಾದಲ್ಲಿ; ಅವರ ನಡುವಿನ ಮತ್ಸರ, ವೈರತ್ವ ಮತ್ತು ಅದು ತರುವ ಸರ್ವನಾಶದ ಕತೆ ಹೇಳುತ್ತದೆ ಮಹಾಭಾರತ ಅಲ್ಲವೆ? ಆ ಎಪಿಕ್‌ ಹೊರಮೈ ಲಕ್ಷಣಗಳಾದ ಭಾಷಾಮಿತಿ ಮತ್ತು ಅದು ಬರಲು ಕಾರಣವಾದ ಭೌಗೋಳಿಕ ಹಿನ್ನೆಲೆಗೆ ಸಂಬಂಧಿಸಿದ ವಿವರಗಳನ್ನು ಕೆಲ ಗಳಿಗೆ ಮರೆತು ಯೋಚಿಸುವುದಾದಲ್ಲಿ, ಇಡೀ ಮಾನವ ಜನಾಂಗದ ಮೂಲ ಎಪಿಕ್‌ ಆಗಿ ತೋರುವುದಿಲ್ಲವೇ? ‘ಆದಿಪರ್ವ’ಕ್ಕೆ ವಿಷ್ಣು ಎಸ್‌. ಸುಕ್ತಂಕರ್‌ ಬರೆದ ಉಪೋದ್ಘಾತದ ಕೆಲ ಮಾತುಗಳನ್ನು ಇಲ್ಲಿ ಮತ್ತೆ ಉದಾಹರಿಸಲಾಗಿದೆ:

The reasons which have induced Sanskritists both here and abroad to undertake this gigantic enterprise are easy to understand. The pre – eminent importance of the epic is universally acknowledged. Next to the Vedas, it is the most valuable product of the entire literature of ancient India.*ಪುಟ 111

ಅವರು ಪುರಾತನ ಇಂಡಿಯಾ ಎಂದು ಬಳಸುವ ಕಡೆ ಪುರಾತನ ಜಗತ್ತು ಎಂಬ ಪದ ಸೇರಿಸಿದರೆ ಸಾಕು, ಅದರ ಅರ್ಥವೇ ಬೇರೆಯಾಗುತ್ತದೆ. ಆ ದೃಷ್ಟಿಯಿಂದ ನೋಡುವುದಾದಲ್ಲಿ ಮಹಾಭಾರತದ ವಸ್ತು ‘ಗಿಲ್ಗಮೆಷ್‌’ ನಂತರದ ಪುರಾತನ ಆಕೃತಿಯಾಗಿ ಕಾಣುತ್ತದೆ. ಆ ಮಾತನ್ನು ಯಾವುದೇ ಬಾಹ್ಯ ಮತ್ತು ಆಂತರಿಕ ದಾಖಲೆಗಳಿಂದ ಸಮರ್ಥಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಮಾನವ ಜನಾಂಗದ ಚರಿತ್ರೆ ಸಾಗಿಬಂದ ಹಾದಿಯೆ ಮಹಾಭಾರತದ ಪುರಾತನತೆಯನ್ನು ಶೃತಪಡಿಸುತ್ತದೆ. ಆದ ಕಾರಣ ಅದರ ಪುರಾತನತೆಗೆ ಮಾನವ ಜನಾಂಗದ ಇತಿಹಾಸಕ್ಕಿಂತ ಮತ್ತೊಂದು ಪ್ರಬಲ ಪುರಾವೆಯ ಅಗತ್ಯವಿಲ್ಲ.

ಆ ಅರ್ಥದಲ್ಲೂ ಸಹ ಮಹಾಭಾರತ ಮಾನವ ಜನಾಂಗದ ಮೂಲ ಎಪಿಕ್‌.

 

[1]ರಾಮಾಯಣದ ಮೇಲಾಗಿರಬಹುದಾದ ಮಹಾಭಾರತದ ಪ್ರಭಾವವನ್ನು ಗ್ರಾಂಥಿಕ ಅಧ್ಯಯನದ ಆಧಾರದ ಮೇಲೆ ಗುರುತಿಸುವ ಪ್ರಯತ್ನಗಳನ್ನು ಕೆಲ ಪಾಶ್ಚಾತ್ಯ ವಿದ್ವಾಂಸರು ಮಾಡಿದ್ದಾರೆ.

[2]J. K. Brockington ಕೃತಿಗೆ ಬರೆದ ಮುನ್ನುಡಿಯಲ್ಲಿ

[3] Righteous Rama, ಪುಟ ೩೦೯.

*ಇಟಾಲಿಕ್ಸ್‌ ಮೂಲದಲ್ಲಿ ಇಲ್ಲ.