ರಾಮಾಯಣ ಕಾಲಕ್ಕೆ ಪರಿಸ್ಥಿತಿ ಬದಲಾಗಿ ಏಕಪತ್ನಿ ಮತ್ತು ಏಕಪತಿ ವ್ಯವಸ್ಥೆಗೆ ಬದ್ಧರಾದ ರಾಮ ಮತ್ತು ಸೀತೆಯರಿಗೆ ಅವರವರ ಚಾರಿತ್ರ ಬಹಳ ಮುಖ್ಯವಾಗುತ್ತದೆ. ಅದನ್ನೊಂದು ಜೀವನ ತತ್ವ, ವ್ರತ, ಗುರಿ ಮತ್ತು ಸಿದ್ಧಾಂತವನ್ನಾಗಿ ಅವರು ಸ್ವೀಕರಿಸುತ್ತಾರೆ. ಆ ಕಾರಣವೇ ಶ್ರೀರಾಮನಿಗೆ ತನ್ನ ಪತ್ನಿಯ ಚಾರಿತ್ರ್ಯ ಮುಖ್ಯವಾಗುವಂತೆ, ಅದರ ಹರಣವಾಗದಂತೆ ಕಾಯ್ದುಕೊಳ್ಳುವುದು ಆತನ ಪತ್ನಿ ಸೀತೆಗೆ ಮುಖ್ಯವಾಗುತ್ತದೆ. ಮಾಯಾಮೃಗವಾಗಿ ಬಂದ ಮಾರೀಚನ ಹತ್ಯೆ ಸಂದರ್ಭದಲ್ಲಿ ಲಕ್ಷ್ಮಣನ ನಡತೆಯನ್ನು ಅನುಮಾನಿಸುವ ಮಟ್ಟಿಗೆ ಹೋಗುವ ಸೀತೆಯ ನಡವಳಿಕೆಯನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಬೇಕಾಗುತ್ತದೆ:

ತಮುವಾಚ ತತಸ್ತತ್ರ ಕುಪಿತಾ ಜನಕಾತ್ಮಜಾ |
ಸೌಮಿತ್ರೆ ಮಿತ್ರರೂಪೇಣ ಭ್ರಾತುಸ್ತ್ವಮಸಿ ಶತ್ರುವತ್‌ || ೫ ||
ಯಸ್ತ್ವಮಸ್ಯಾಮವಸ್ಥಾಯಾಂ ಭ್ರಾತರಂ ನಾಭಿಪತ್ಸ್ಯಸೇ |
ಇಚ್ಛಸಿ ತ್ವಂ ವಿನಶ್ಯಂತಂ ರಾಮಂ ಲಕ್ಷ್ಮಣ ಮತ್ಕೃತೇ || ೬|| ಅರಣ್ಯಕಾಂಡ, ಸರ್ಗ ೪೫

ಮಾರೀಚನ ಅಣುಕು ಧ್ವನಿಗೆ ಮರುಳಾಗಿ ರಾಮನೆ ಸತ್ತ ಎಂದು ಭಾವಿಸಿ ಆಡುವ ಈ ಮಾತುಗಳು, ಸೀತೆಯ ಮನಃಸ್ಥಿತಿಯನ್ನು ಬಿಂಬಿಸುವುದರ ಜತೆಗೆ, ಚಾರಿತ್ರ್ಯ ಕಾಪಾಡಿಕೊಳ್ಳುವ ವಿಚಾರದಲ್ಲಿ ರಾಮನ ಹೊರತು ಮತ್ತಾರನ್ನೂ ಆಕೆ ನಂಬುವ ಸ್ಥಿತಿಯಲ್ಲಿರುವುದಿಲ್ಲ ಎಂಬುದರ ಪ್ರತೀಕವೂ ಹೌದು. ಎಂತಹ ಅಪನಂಬಿಕೆಯ ಮನಃಸ್ಥಿತಿಯಲ್ಲಿ ಆಕೆ ಇರುತ್ತಾಳೆ ಎಂದರೆ, ‘ಮಿತ್ರನಂತೆ ನಟಿಸುವ ಅಣ್ಣನ ಶತ್ರು ಮತ್ತು ನನ್ನ ಮೇಲೆ ಮನಸ್ಸಾಗಿರುವ ನೀನು ಅಣ್ಣ ಸಾವನ್ನು ಬಯಸಿರುವೆ’ ಎಂದು ಆರೋಪಿಸುವ ಮಟ್ಟಕ್ಕೆ ಹೋಗುತ್ತಾಳೆ. ಎಲ್ಲರ ಎದುರು ಬೆತ್ತಲೆ ನಿಲ್ಲಬೇಕಾಗುತ್ತದೆ ಎಂಬ ಅತ್ಯಂತ ಅವಮಾನಕರ ಪರಿಸ್ಥಿತಿಯಲ್ಲೂ ದ್ರೌಪದಿ ಅಂತಹ ಅಸ್ಥಿರ ಮನಃಸ್ಥಿತಿಯಲ್ಲಿರುವುದಿಲ್ಲ ಎಂಬುದನ್ನು ನೋಡಿದರೆ, ಚಾರಿತ್ರ್ಯದ ಕಲ್ಪನೆ ನಡವಳಿಕೆಯಲ್ಲಿ ತರುವ ಅಗಾಧ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಅನೇಕ ತರಹದ ಪ್ರಶ್ನೆಗಳನ್ನು ಎತ್ತುವುದರ ಮೂಲಕ ಅಲ್ಲಿ ನೆರೆದಿದ್ದ ಪುರುಷ ಸಮೂಹದ ಸ್ಥೈರ್ಯ ಅಲುಗಾಡಿಸುವ ದ್ರೌಪದಿ, ಯಾರ ಮೇಲೂ ವೃಥಾ ಆರೋಪ ಮಾಡಲು ಹೋಗುವುದಿಲ್ಲ.

ಧರ್ಮರಾಯ ತನ್ನನ್ನು ಪಣವಾಗಿಡಲು ಕಾರಣವಾದ ಪರಿಸ್ಥಿತಿಯನ್ನು ವಿಶ್ಲೇಷಿಸುವ ಆಕೆ, ಅಲ್ಲಿ ಎದುರಾಗುವ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಭೀಷ್ಮ ಮೊದಲಾದವರನ್ನು ಕೇಳುತ್ತಾಳೆ: ಪಗಡೆಯಾಟದಲ್ಲಿ ತನ್ನನ್ನು ತಾನು ಪಣವಾಗಿಟ್ಟುಕೊಂಡು ಸೋತ ಧರ್ಮರಾಯನಿಗೆ ಮತ್ತೊಬ್ಬರನ್ನು ಪಣವಾಗಿಡುವ ಅಧಿಕಾರ ಇರುತ್ತದೆಯೆ? ಎಂಬುದು ಆಕೆ ಕೇಳುವ ಮೊದಲ ಪ್ರಶ್ನೆಯಾದರೆ, ಕುತಂತ್ರ ಮೋಸದ ವಾತಾವರಣದಲ್ಲಿ ವಂಚನೆಯಿಂದ ನಡೆದ ಪಗಡೆಯಾಟಕ್ಕೆ ಅರ್ಥವಿದೆಯೆ? ಎಂಬುದು ಆಕೆ ಕೇಳುವ ಎರಡನೇ ಪ್ರಶ್ನೆ. ‘ತಂದೆ, ಮಾವ, ಸೋದರ ಇಲ್ಲವೆ ಹತ್ತಿರದ ಬಂಧುವಾದ ತಮಗೂ ನನ್ನಂತಹ ಹೆಣ್ಣು ಮಗಳಿದ್ದಾಳೆ, ಅವಳಿಗೆ ಈ ದುರವಸ್ಥೆ ಒದಗಿ ಬಂದಿದ್ದರೆ ಏನು ಮಾಡುತ್ತಿದ್ದಿರಿ ಎಂಬುದನ್ನು ಯಥಾವತ್ತಾಗಿ ಯೋಚಿಸಿ ಉತ್ತರ ಹೇಳಿ’ ಎಂಬುದು ದ್ರೌಪದಿ ಹಾಕುವ ಮತ್ತೊಂದು ಸವಾಲು. ಅದಾವುದಕ್ಕೂ ಅಲ್ಲಿ ನೆರೆದಿದ್ದವರು ಉತ್ತರ ಹೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಆ ದ್ರೌಪದಿ ಎಲ್ಲಿ? ಸೀತೆ ಎಲ್ಲಿ?

ಆದರೆ ಈ ಕಡೆ ಜಿಂಕೆಯ ವೇಷ ಧರಿಸಿ ಬಂದ ಮಾರೀಚನನ್ನು ಕಂಡು ಆಕರ್ಷಿತಳಾಗುವ ಸೀತೆ, ಮಾರೀಚನ ಕುತಂತ್ರ ಅರಿತ ಲಕ್ಷ್ಮಣನಿಗೆ ತನ್ನ ಮೇಲೆ ಮನಸ್ಸಾಗಿದೆ ಎಂದು ಸಂಶಯಪಡುವ ಮಟ್ಟಕ್ಕೆ ಹೋಗುತ್ತಾಳೆ. ಹಠ ಮಾಡುವುದು ತಪ್ಪು ಎಂಬ ಅರಿವಿದ್ದೂ ಅದು ಬೇಕೇ ಬೇಕು ಎಂದು ಹಠ ಹಿಡಿಯಲು ಹಿಂಜರಿಯುವುದಿಲ್ಲ. ತನ್ನನ್ನು ಅಪಹರಿಸಲು ವೇಷ ಬದಲಿಸಿ ಬಂದ ರಾವಣನು ಸತ್ಕರಿಸುವ ಸಂದರ್ಭದಲ್ಲಿ ಔಚಿತ್ಯದ ಗಡಿದಾಟುವ ಸೀತೆ ಆತಿಥ್ಯ ನೀಡುವುದರ ಜತೆಗೆ, ತನ್ನನ್ನು ಅರ್ಪಿಸಿಕೊಳ್ಳುತ್ತಿದ್ದೇನೆ ಸ್ವೀಕರಿಸಿ ಭುಂಜಿಸು, ನಿನಗಾಗಿ ಸಿದ್ಧವಾಗಿದೆ ಎಂಬ ಧ್ವನಿತಾರ್ಥ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಾಳೆ:

ಇಯಂ ಬೃಸೀ ಬ್ರಾಹ್ಮಣ ಕಾಮಮಾಸ್ಯತಾ
ಮಿದಂ ಚ ಪಾದ್ಯಂ ಪ್ರತಿಗೃಹ್ಯತಾಮಿತಿ |
ಇದಂ ಸಿದ್ಧಂ ವನಜಾತಮುತ್ತಮಂ
ತ್ವದರ್ಥಮವ್ಯಗ್ರಮಿಹೋಪಭುಜ್ಯತಾಮ್‌ || ೩೫ || ಅಲ್ಲಿಯೇ ಸರ್ಗ ೪೬.

ಸೀತೆಯ ನಡವಳಿಕೆ ಮುಗ್ಧವಾಗಿಯೇ ಇರಬಹುದು ಮತ್ತು ಆಕೆಯಲ್ಲಿ ಆ ತರಹದ ಭಾವನೆಗಳಿಲ್ಲಿದಿರಬಹುದು. ಆದರೆ ಅಪಹರಿಸಲು ಬಂದ ರಾವಣನಲ್ಲಿ ಆಕೆ ಅಪಹರಣಕ್ಕೆ ಸಿದ್ಧವಾಗಿದ್ದಾಳೆ ಎಂಬ ಮನಸ್ಸು ಗಟ್ಟಿಗೊಳ್ಳುವ ರೀತಿಯಲ್ಲಿ ಆ ಸನ್ನಿವೇಶ ನಿರ್ಮಾಣ ಆಗುತ್ತದೆ.

ವ್ಯಕ್ತಿತ್ವದ ನಿರ್ಮಾಣಕ್ಕೆ ಸಂಬಂಧಿಸಿದ ಆ ತರಹದ ಎಲ್ಲ ಸೂಕ್ಷ್ಮಗಳ ಸಂಕೀರ್ಣತೆ ಕಾಣಲು ಸಾಧ್ಯವಾಗುವುದು ‘ರಾಮಾಯಣ’ದಲ್ಲಿ ಮಾತ್ರ. ಆ ತರಹದ ಸನ್ನಿವೇಶ ನಿರ್ಮಾಣವನ್ನು ಯುರೋಪಿನ ಸಂದರ್ಭದಲ್ಲಿ ‘ಈನೀಡ್‌’ನಲ್ಲಿ ಗುರುತಿಸಬಹುದಾಗಿದೆ. ಶೀಲ ಎಂದರೆ ಒಳ್ಳೆಯ ಗುಣ ಮತ್ತು ನಡವಳಿಕೆಯನ್ನು ಮೀರಿದ ಅಂತರಂಗದ ಪರಿಶುದ್ಧತೆ ಮತ್ತು ನಿಷ್ಠೆಗೆ ಸಂಬಂಧಿಸಿದ ವಿಚಾರ ಎಂಬ ರೀತಿಯಲ್ಲಿ ಸನ್ನಿವೇಶ ಮತ್ತು ಸಂದರ್ಭ ನಿರ್ಮಾಣವಾಗುವುದೇ ‘ರಾಮಾಯಣ’ ಮತ್ತು ‘ಈನೀಡ್‌’ಗಳಲ್ಲಿ. ಆ ತರಹದ ಮರೆಯಬಾರದು. ನಾಗರಿಕತೆ ಮತ್ತು ಸಂಸ್ಕೃತಿ ತರುವ ಆ ರೀತಿಯ ಒತ್ತಡ ‘ರಾಮಾಯಣ’ ಮತ್ತು ‘ಈನೀಡ್‌’ ಕಾಲದ ಬೆಳವಣಿಗೆ.

ಸರಳ ಮತ್ತು ನೇರ ಸ್ವಭಾವದ ದ್ರೌಪದಿಯ ವ್ಯಕ್ತಿತ್ವವು ಬದುಕಿನಲ್ಲೆದುರಾಗುವ ಸಂಕೀರ್ಣತೆ ಮತ್ತು ಸಂಘರ್ಷದ ಫಲವಾಗಿ ಸಂಕೀರ್ಣತೆ ಪಡೆದುಕೊಳ್ಳುತ್ತದೆ. ಅದೇ ತರಹ ಹೆಲೆನ್‌ ವ್ಯಕ್ತಿತ್ವ ಕೂಡಾ. ಆದರೆ ಸೀತೆ ಮತ್ತು ದಿದೊ ನಡವಳಿಕೆಯಲ್ಲಿನ ಸಂಕೀರ್ಣತೆ ಅವರ ಸ್ವಭಾವ ಮತ್ತು ವ್ಯಕ್ತಿತ್ವದಲ್ಲಿನ ಸಂಕೀರ್ಣತೆಯಲ್ಲಿಯೇ ಹುದುಗಿದ್ದು, ನಾಗರಿಕತೆ ತರುವ ಒತ್ತಡದಿಂದಾಗಿ ಅದು ಗಾಢವಾಗುತ್ತಾ ಹೋಗುತ್ತದೆ. ಸೀತೆ ಎಂದರೆ ಹೀಗಿರಬೇಕು, ರಾಮನ ಹೊರತು ಮತ್ತಾರನ್ನೂ ಕಾಯಾ ವಾಚಾ ಮನಸಾ ಪರಿಭಾವಿಸಬಾರದು ಎಂಬ ನಿರೀಕ್ಷೆ ತರುವ ಒತ್ತಡ ಸಾಮಾನ್ಯವಾದುದಲ್ಲ. ದಿದೊ ಕೂಡ ಸೀತೆಯ ತರಹದ ಒತ್ತಡಕ್ಕೆ ತುತ್ತಾದವಳೆ ಆಗಿರುತ್ತಾಳೆ:

This creature was now regaling the people with various scndal
In great glee, announcing fact and fiction indiscriminately:
Item, Aeneas has come here, a prince of Trojan blood,
And the beauteous Dido deigns to have her name linked with his;
The couple are spending the winter in debauchery, the whole long
Winter, their kingdoms, rapt in a trance of lust.
Such gossip did vile Rumour pepper on every mouth. ಈನಿಡ್‌, ಪುಟ ೯೭

ಗಂಡ ಸತ್ತ ನಂತರ – ಉತ್ತಮ ರಾಜ ಮತ್ತು ರಾಜಪುತ್ರನನ್ನು ಪಡೆಯಲು – ಈನಿಯಾಸ್‌ ಜತೆಗಿನ ಆಕೆಯ ಪರಿಣಯ ‘ಹಗಲು ನಡೆಸುವ ಹಾದರ’ ಎಂಬ ರೀತಿ, ಆಕೆಯ ರಾಜ್ಯದಲ್ಲಿ ಗುಲ್ಲು ಮತ್ತು ಅಸಹನೆಗೆ ಕಾರಣವಾಗಿಬಿಡುತ್ತದೆ. ಹಾಗಾಗಿ ಆತ ಕೈಕೊಟ್ಟ ನಂತರ ಆಕೆಗೆ ಉಳಿದುದು ಒಂದೇ ದಾರಿ, ಆತ್ಮಹತ್ಯೆ. ಮೃತ ಗಂಡನ ಕುರಿತಂತೆ ನಿಷ್ಠೆ ಉಳಿಸಿಕೊಳ್ಳುವ ವಿಚಾರದಲ್ಲಿ ಆಕೆಯ ಮೇಲಿದ್ದ ಒತ್ತಡ ಅನೇಕ ವಿವರಗಳಲ್ಲಿ ಸೀತೆಯ ಮೇಲಿನ ಒತ್ತಡವನ್ನು ಹೋಲುತ್ತದೆ. ದ್ರೌಪದಿ ಅಥವಾ ಹೆಲೆನ್‌ ಮೇಲೆ ಆ ತರಹದ ಸಾಂಸ್ಕೃತಿಕ ಮತ್ತು ನಾಗರಿಕ ಒತ್ತಡ ಇರಲಿಲ್ಲ. ಅವರ ಮೇಲಿನ ಒತ್ತಡಗಳೆ ಬೇರೆ ಥರದವು. ಇದ್ದಿದ್ದಲ್ಲಿ ದ್ರೌಪದಿ ಐವರನ್ನು ಮದುವೆಯಾಗಲು ಸಧ್ಯವಾಗುತ್ತಿರಲಿಲ್ಲವಾದಂತೆ, ಹೆಲೆನ್‌ ಗಂಡ ಮಕ್ಕಳನ್ನು ಬಿಟ್ಟು ಅಲೆಗ್ಸಾಂದ್ರೊಸ್‌ ಜತೆ ಪಲಾಯನ ಮಾಡಲಾಗುತ್ತಿರಲಿಲ್ಲ. ವಸ್ತ್ರಾಪಹರಣಕ್ಕೆ ತುತ್ತಾದ ನಂತರವೂ ದ್ರೌಪದಿ ಮತ್ತು ಪಾಂಡವರು ಎಂದಿನಂತೆ ಬದುಕಿನ ಹಾದಿಯಲ್ಲಿ ಸಾಗಿದರೆ, ತನ್ನ ಮೊದಲ ಗಂಡ ಮೆನಲೊಸ್‌ ಮತ್ತು ಮಕ್ಕಳನ್ನು ಬಿಟ್ಟು ಬರುವ ಹೆಲೆನ್‌ ಅಲೆಗ್ಸಾಂದ್ರೊಸ್‌ನನ್ನು ಪತಿ ಎಂದೆ ಸ್ವೀಕರಿಸಿ ಬಾಳುವೆ ಸಾಗಿಸಿರುತ್ತಾಳೆ. ಟ್ರಾಯ್‌ ಪತನಾನಂತರ ತನ್ನ ಮೊದಲನೆ ಗಂಡನ್ನಲಿಗೆ ಅಷ್ಟೇ ಸರಾಗವಾಗಿ ಮರಳಿ ಹೋಗುತ್ತಾಳೆ; ಅವಳನ್ನು ಸ್ವೀಕರಿಸುವ ಸಮಾಜ ಕೂಡ ಅಷ್ಟೇ ಸರಳತೆಯಿಂದ ನಡೆದುಕೊಳ್ಳುತ್ತದೆ. ಹೆಲೆನ್‌ಗೆ ತನ್ನ ಬಗ್ಗೆ ತನಗೇ ಜುಗುಪ್ಸೆ ಬರುವುದು ಯುದ್ಧ ಆರಂಭವಾದ ನಂತರ ಅದು ಕ್ಷಣಿಕವಾದುದಾಗಿರುವಂತೆ ತೋರುತ್ತದೆ. ತನ್ನನ್ನು ಮರಳಿ ಪಡೆಯಲು ತನ್ನ ಮೊದಲ ಗಂಡನ ಕಡೆಯವರು ಸುಮಾರು ಒಂಬತ್ತು ವರ್ಷಗಳ ಕಾಲ ಸತತವಾಗಿ ಕೋಟೆಗೆ ಲಗ್ಗೆ ಹಾಕಲು ನಡೆಸುತ್ತಿರುವ ಪ್ರಯತ್ನಗಳನ್ನು ಹೆಲೆನ್‌ ಹತ್ತಿರದಿಂದಲೆ ಗಮನಿಸುತ್ತಿರುತ್ತಾಳೆ. ‘ಇಲಿಯಡ್‌’ ಆರಂಭವಾಗುವುದೇ ಯುದ್ಧ ಆರಂಭವಾಗಿ ಒಂಬತ್ತು ವರ್ಷಗಳು ತುಂಬಿದ ನಂತರ. ಕೋಟೆ ಮೇಲೆ ನಿಂತ ಹೆಲೆನ್‌:

That man is Atreus’ son Agamemnon, widely powerful,
at the same time a good king and a strong spearfighter,
………………………………………………………………
This one is Laertes’ son, resourceful Odysseus,
who grew up in the country, rough though it be, of Ithaka,
to know every manner of shiftiness and crafty counsels. ಪುಟ ೧೦೫

ಎಂದು ಮುಂತಾಗಿ ತನ್ನ ಮೊದಲ ಗಂಡನ ಕಡೆಯವರನ್ನು ತನ್ನ ಎರಡನೇ ಗಂಡನ ತಂದೆಗೆ ಪರಿಚಯಿಸಿಕೊಡುವ ರೀತಿ ಮಹಾಭಾರತದಲ್ಲಿ ಧೃತರಾಷ್ಟ್ರನಿಗೆ ಸಂಜಯ ವಿವರ ನೀಡುವ ಸನ್ನಿವೇಶಗಳನ್ನು ನೆನಪಿಗೆ ತರುತ್ತದೆ. ಮಹಾಭಾರತ ಯುದ್ಧಕ್ಕೆ ಕಾರಣವಾದ ಅನೇಕ ಕಾರಣಗಳ ಪೈಕಿ ದ್ರೌಪದಿ ಕೂಡ ಒಬ್ಬಳು. ಆದರೆ ಟ್ರಾಯ್‌ ಯುದ್ಧ ನಡೆದುದೇ ಹೆಲೆನ್‌ಗಾಗಿ. ಅದರಿಂದಾಗಿ ಹೆಲೆನ್‌ ಮೇಲೆ ಉಂಟಾದ ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳ ಪ್ರಮಾಣವನ್ನು ಅಂದಾಜು ಮಾಡಬೇಕಷ್ಟೆ. ಆ ಯಾವ ಒತ್ತಡಗಳೂ ಅವಳ ಶೀಲ ಅಥವಾ ಗುಣಕ್ಕೆ ಸಂಬಂಧಿಸಿರುವುದಾಗಿರುವುದಿಲ್ಲ ಎಂಬುದು ಬಹಳ ಮುಖ್ಯ. ಅತ್ಯಂತ ಸೌಂದರ್ಯವತಿಯಾದ ದ್ರೌಪದಿ ತಮಗೆ ದಕ್ಕಲಿಲ್ಲವಲ್ಲ ಎಂಬುದು ಪಾಂಡವರ ಮೇಲಿನ ಕೌರವರ ರೋಷಕ್ಕೆ ಕಾರಣವಾದ ಪ್ರಮುಖ ಸಂಗತಿಗಳ ಪೈಕಿ ಒಂದಾಗಿರುವಂತೆ, ಹೆಲೆನ್‌ಳ ಪ್ರಕೃತಿದತ್ತ ಸೌಂದರ್ಯ ಮೆಚ್ಚುಗೆಗೆ ಕಾರಣವಾದಂತೆ ದೂಷಣೆಗೂ ಕಾರಣೀಭೂತವಾಗುತ್ತದೆ. ಟ್ರಾಯ್‌ ಯುದ್ಧ ಮತ್ತು ಅದರ ಪತನಕ್ಕೆ ಕಾರಣವಾದ ಹೆಲೆನ್‌ ಬರುಬರುತ್ತಾ ನಿಮಿತ್ತ ಮಾತ್ರವಾಗುತ್ತಾ ಹೋದಂತೆ, ಆ ನೆಪದಲ್ಲಿ ಪ್ರಕಟವಾಗುವ ರೋಷ, ಸೇಡು, ಮತ್ಸರ, ಈರ್ಷ್ಯೆ, ವಿವೇಚನಾರಹಿತ ವರ್ತನೆ ಮೊದಲಾದುವು ಇಡೀ ಎಪಿಕ್‌ ತುಂಬ ವಿಜೃಂಭಿಸುತ್ತಾ ಹೋಗುತ್ತವೆ. ಹೆಕ್ತರ್‌ ಸತ್ತಾಗ ಹೆಲೆನ್‌ ಆಡುವ ಈ ಮುಂದಿನ ಮಾತುಗಳು:

Third and last Helen led the song of sorrow among them:
‘Hector, of all my lord’s brothers dearest by far to my spirit:
my husband is Alexandros, like an immortal, who brought me
here to Troy; and I should have died before I came with him;
and here now is the twentieth year upon me since I came
from the place where I was, forsaking the land of my fathers. In this time
I have never heard a harsh saying from you, nor an insult.
No, but when another, one of my lord’s brothers or sisters, a fairrobed
wife of some brother, would say a harsh word to me in the palace,
or my lord’s mother – but his father was gentle always, a father
indeed – then you would speak and put them off and restrain them
by your own gentleness of heart and your gentle words. Therefore
I mourn for you in sorrow of heart and mourn myself also
and my ill luck. There was no other in all the wide Troad
who was kind to me, and my friend; all others shrank when they saw me.’
ಪುಟ ೪೯೫

ಆಕೆಯ ಮನಃಸ್ಥಿತಿ ಮತ್ತು ಬದುಕಿನಲ್ಲೆದುರಾದ ಪರಿಸ್ಥಿತಿಯನ್ನು ಬಿಂಬಿಸುವಂತೆಯೇ ಕಾಲ ಮತ್ತು ವಿಧಿಯ ಪ್ರತೀಕವಾದ ಆಕೆಯು ಅದಕ್ಕೆ ಕಾರಣವಾಗಿ ಕೆಟ್ಟ ಕಾಲ ಅಥವಾ ದುರದೃಷ್ಟವನ್ನು ಹೆಸರಿಸುವುದು ಚಿತ್ರವನ್ನು ಸಂಪೂರ್ಣಗೊಳಿಸುತ್ತದೆ. ಅಂತಹ ಮನೋಧರ್ಮದ ಕಾರಣವೆ ಸುಮಾರು ೨೦ ವರ್ಷ ಕಾಲ ಅಲೆಗ್ಸಾಂದ್ರೊಸ್‌ನನ್ನು ಗಂಡನೆಂದೇ ಸ್ವೀಕರಿಸಿ ಬದುಕು ಸಾಗಿಸಿದ್ದ ಹೆಲೆನ್‌ಗೆ ಯುದ್ಧಾನಂತರ ಮರಳಿ ತನ್ನ ಮೊದಲ ಗಂಡನಾದ ಮೆನಲೊಸ್‌ ಜತೆ ಬದುಕು ಸಾಗಿಸಲು ಕೂಡ ಸಾಧ್ಯವಾಗುತ್ತದೆ. ದ್ರೌಪದಿಯದೂ ಅದೇ ತರಹದ ಮನಸ್ಸು ಮತ್ತು ವ್ಯಕ್ತಿತ್ವ; ಇಲ್ಲದಿದ್ದಲ್ಲಿ ಐದು ಜನ ಗಂಡಂದಿರ ಜತೆ ನಿರ್ವಂಚನೆಯಿಂದ ಬದುಕು ನಡೆಸಲು ಬರುತ್ತಿರಲಿಲ್ಲ.

ಆದರೆ ಸೀತೆಯ ವ್ಯಕ್ತಿತ್ವ ಮತ್ತು ಮನಸ್ಸೇ ಬೇರೆ ತರಹದ್ದು. ಅದೆ ತರಹದಿದೊ ಕೂಡಾ. ದ್ರೌಪದಿಯಾಗಲಿ, ಹೆಲೆನ್‌ ಆಗಲಿ ತಮ್ಮ ಪ್ರೀತಿ ಬಗ್ಗೆ ಹೆಚ್ಚಿಗೆ ಹೇಳಲು ಹೋಗುವುದಿಲ್ಲ. ಅವರಿಗೆ ಅದರ ಅಗತ್ಯವೂ ಇರಲಿಲ್ಲ. ಆದರೆ ಸೀತೆಗೆ ‘ರಾಮಮನುವ್ರತಾಮ್‌’ ಎಂದು ಪದೇ ಪದೇ ಹೇಳಿಕೊಳ್ಳಬೇಕಾದ ಅಗತ್ಯ ಬರುತ್ತದೆ. ತನ್ನ ಮೇಲೆ ಮನಸ್ಸಾಗಿ ಬಂದ ರಾವಣನನ್ನು ಗುಳ್ಳೇನರಿ ಎಂದು ಜರಿಯುವ ಜತೆಗೆ, ತನ್ನನ್ನು ತಾನು ಉರಿಯುವ ಬೆಂಕಿ, ಸಿಂಹಿಣಿ, ಸೂರ್ಯಪ್ರಭೆ ಎಂದೆಲ್ಲ ವರ್ಣಿಸಿಕೊಳ್ಳುತ್ತಲೇ: ‘ಕಾಂಚನವರ್ಣಿಯಾದ ನಿನ್ನನ್ನು ಕಂಡ ಮೇಲೆ ಕಾಮಗಾಮಿಯಾದ ಪುಷ್ಪಕ ವಿಮಾನ ಏರಿ ಬಂದಿರುವ ನನಗೆ, ಅನೇಕ ಕಡೆಯಿಂದ ಸಂಗ್ರಹಿಸಿ ತಂದಿರುವ ರಾಣಿಯರಲ್ಲಿ ಆಸಕ್ತಿಯೇ ಹೊರಟುಹೋಗಿದೆ’ ಎಂದು ಯಾಚಿಸುತ್ತಾ ನಿಂತ ರಾವಣನಲ್ಲಿನ ಮೋಹದ ಕಿಚ್ಚಿಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುವುದು, ಆಕೆಯ ವ್ಯಕ್ತಿತ್ವದ ಸಂಕೀರ್ಣತೆಗೆ ಮತ್ತೊಂದು ಉದಾಹರಣೆ.

ಆ ಅರ್ಥದಲ್ಲಿ ಸೀತೆ ಪಕ್ಕಾ ಗೃಹಿಣಿ. ತನ್ನ ಆಂತರಿಕ ಜಾಗೃತ ಪ್ರಜ್ಞೆಯ ಎಚ್ಚರಕ್ಕೆ ವಿರುದ್ಧವಾಗಿ ಯಾವುದೋ ಒಂದು ದುರ್ಬಲ ಗಳಿಗೆಯಲ್ಲಿ ಅಪಹೃತಳಾಗಬೇಕಾಗಿ ಬಂದ ಸೀತೆಯ ಪಾತ್ರ ಚಿತ್ರಣದಲ್ಲಿ ವಾಲ್ಮೀಕಿ ತೋರುವ ಸೂಕ್ಷ್ಮತೆ ಮತ್ತು ಆಂತರಿಕ ಪರಿಶೋಧನೆಯನ್ನು ಮಹಾಭಾರತ, ‘ಇಲಿಯಡ್‌’ ಅಥವಾ ‘ಒಡಿಸ್ಸಿ’ಯಲ್ಲಾಗಲಿ ಕಾಣಬರುವುದಿಲ್ಲ. ಸೀತೆಯ ಅಪಹರಣಕ್ಕೆ ಆಕೆಯ ವ್ಯಕ್ತಿತ್ವದಲ್ಲಿನ ಕೆಲವೊಂದು ಆಂತರಿಕ ತಾಕಲಾಟಗಳೆ ಕಾರಣವಾಗಿರುವಂತೆ ತೋರುತ್ತದೆ ಎಂದು ಯೋಚಿಸಲು ಅವಕಾಶ ಕಲ್ಪಿಸುವಷ್ಟರಮಟ್ಟಿಗೆ ವಾಲ್ಮೀಕಿ ರಾಮಾಯಣ ಪಾತ್ರ ಚಿತ್ರಣದಲ್ಲಿ ಆಧುನಕವೂ ನಾಗರಿಕವೂ ಸೂಕ್ಷ್ಮವೂ ಆಗುತ್ತದೆ. ಆ ತರಹದ ಚಿತ್ರಣ ಕಾಣಬೇಕಾದರೆ ಯುರೋಪ್‌, ವರ್ಜಿಲ್‌ ಬರುವವರೆಗೆ ಕಾಯಬೇಕಾಯಿತು. ಅದೆ ದಿದೊ ಪ್ರಸಂಗ. ಐಬು (Culpam) ಎಂಬ ಪದ ಬಳಸುವುದರ ಮೂಲಕ ದಿದೊ ದುರಂತ ಸಾವಿಗೆ ವರ್ಜಿಲ್ ಉತ್ತರ ಕಂಡುಹಿಡಿಯಲು ಪ್ರಯತ್ನಿಸುತ್ತಾನೆ. ಅದೆ ಪದವನ್ನು ಅನ್ವಯಿಸಿ ಸೀತೆಯ ಅಪಹರಣವನ್ನು ಅರ್ಥೈಸಬಹುದಾಗಿದೆ. ಜಿಂಕೆಯ ಮಾಯಾವೇಷ ಧರಿಸಿ ಬಂದಿರುವಾತ ಮಾರೀಚನಾಗಿದ್ದಿರಬಹುದು, ಎಂದು ಲಕ್ಷ್ಮಣ ಎಚ್ಚರಿಸಬಯಸಿದರೂ ಅದಕ್ಕೆ ಮರುಳಾಗುವುದು ಮತ್ತು ತನ್ನನ್ನು ಏಕಾಂಗಿಯಾಗಿ ಬಿಟ್ಟುಹೋಗಲು ಇಚ್ಛಿಸದ ಲಕ್ಷ್ಮಣನಿಗೆ ತನ್ನ ಮೇಲೆ ಮನಸ್ಸಾಗಿದೆ ಎಂದು ನೇರವಾಗಿ ಆಪಾದಿಸುವುದರ ಜತೆಗೆ, ಅದಕ್ಕಾಗಿ ಶ್ರೀರಾಮನ ಸಾವನ್ನು ಬಯಸುವ ಮಟ್ಟಕ್ಕೆ ಹೋಗಲು ಸಿದ್ಧನಿದ್ದಾನೆ ಎಂದು ಮನಸ್ಸಿಗೆ ಬಂದಂತೆ ಮಾತನಾಡುವುದು, ಐಬಿನ ಪ್ರತೀಕವಲ್ಲವೆ? ವಾಲ್ಮೀಕಿ ಗುರುತಿಸುವ ಮನುಷ್ಯ ಸ್ವಭಾವದಲ್ಲಿನ ಆ ದೌರ್ಬಲ್ಯದ ಓದುವಿಕೆ ಭಾರತೀಯ ಮನಸ್ಸಿಗೆ ಬೇಕಾಗಲಿಲ್ಲವೆ? ಹಿರಿಯ ಪತ್ನಿಯ ಹಿರಿಯ ಮಗ ಮುಂದಿನ ರಾಜನಾಗಬೇಕು ಎಂಬ ಪಿತೃಪ್ರಧಾನ ಕೌಟುಂಬಿಕ ವ್ಯವಸ್ಥೆಯ ಪ್ರಮುಖ ತತ್ವ, ಪಿಪ್ಪಿತ ಸಿದ್ಧಾಂತವಾಗಿ ಅಂಗೀಕೃತವಾಗುವ ಹಂತದಲ್ಲಿನ ಸಾಮಾಜಿಕ ಮತ್ತು ರಾಜಕೀಯ ಚಿತ್ರಣವನ್ನು ನೀಡುವ ರಾಮಾಯಣದ ರಾಮನಿಗೆ ಆ ಕಾರಣವೆ ಪಿತೃವಾಕ್ಯ ಪರಿಪಾಲನೆ ಬಹಳ ಮುಖ್ಯವಾಗುತ್ತದೆ. ಇಟಲಿಗೆ ಹೋಗುವ ತನ್ನ ಆಸಕ್ತಿಯನ್ನು ಈನಿಯಾಸ್‌ ದೈವ ಅಥವಾ ನಿಯತಿಯ ಆಣತಿ ಎಂದು ಸ್ವೀಕರಿಸುವಂತೆಯೇ, ಪಿತೃವಾಕ್ಯ ಪರಿಪಾಲನೆಗೆ ರಾಮ ನೀಡುವ ಮಹತ್ವ ಸೋಜಿಗ ಮೂಡಿಸದಿರುವುದಿಲ್ಲ. ನಿಯತಿಯ ಆಣತಿಗೆ ತಲೆಬಾಗುವ ನಂಬಿಕೆ ಇಲ್ಲದೆ ದೈವತ್ವದ ಕಲ್ಪನೆ ಉಳಿಯುವುದು ಸಾಧ್ಯವಿಲ್ಲವಾದಂತೆ, ಪಿತೃಭಕ್ತಿ ಇಲ್ಲದೆ ಪಿತೃಪ್ರಧಾನ ಕೌಟುಂಬಿಕೆ ವ್ಯವಸ್ಥೆ ಉಳಿಯುವುದು ಕಷ್ಟಸಾಧ್ಯ; ಭಾರತದಲ್ಲಿ ಇಂದಿಗೂ ಚಾಲತಿಯಲ್ಲಿರುವ ಹಿರಿಯ ಗಂಡು ಮಗ ಪ್ರಧಾನವಾದ ಯಜಮಾನ ಸಂಸ್ಕೃತಿಯ ಆಗಮನ ಕಾಲದ ಸಂಘರ್ಷವನ್ನು ರಾಮಾಯಣ ತನ್ನ ವಸ್ತುವನ್ನಾಗಿ ಆರಿಸಿಕೊಂಡಂತೆ ಕಾಣುತ್ತದೆ; ಅಥವಾ ಅದರ ಪ್ರತಿಫಲನವನ್ನು ಅಲ್ಲಿ ಕಾಣಬಹುದಾಗಿದೆ.

ಉತ್ತರಾಧಿಕಾರಿ ಆಯ್ಕೆಗೆ ಸಂಬಂಧಿಸಿದ ಆ ಸಮಸ್ಯೆ ಸುಗಮವಾಗಿ ಇತ್ಯರ್ಥವಾಗದ ಹೊರತು ಕೌಟುಂಬಿಕ ವ್ಯವಸ್ಥೆ ಅಥವಾ ರಾಜಸತ್ತೆ ಉಳಿಯುವುದು ಸಾಧ್ಯವಿಲ್ಲ; ಆ ಸಮಸ್ಯೆ ಇತ್ಯರ್ಥಪಡಿಸುವಲ್ಲಿ ಇದ್ದ ಅನಿಶ್ಚಿತತೆ ಮಹಾಭಾರತ ಯುದ್ಧಕ್ಕೆ ಕಾರಣವಾದರೆ, ಹಿರಿಯ ಪತ್ನಿಯ ಹಿರಿಯ ಮಗನೇ ಮುಂದಿನ ರಾಜನಾಗಬೇಕು ಎಂಬ ಸೂತ್ರವನ್ನು ಒಪ್ಪಲು ನಿರಾಕರಿಸುವುದರ ಮೂಲಕ ಕೈಕೇಯಿ ರಾಮಾಯಣ ಯುದ್ಧಕ್ಕೆ ಬೇಕಾದ ಪೂರಕ ಹಿನ್ನೆಲೆ ಒದಗಿಸುತ್ತಾಳೆ. ಆಸ್ತಿ ಹಂಚಿಕೆ, ಉತ್ತರಾಧಿಕಾರಿ ಆಯ್ಕೆ ಮತ್ತು ಹೆಣ್ಣಿನ ನಡವಳಿಕೆಗೆ ಸಂಬಂಧಿಸಿದ ಸಮಸ್ಯೆ ಅಥವಾ ಬಿಕ್ಕಟ್ಟನ್ನು ನಿರ್ವಹಿಸುವ ವಿಚಾರದಲ್ಲಿ ಮಹಾಭಾರತ ಮತ್ತು ರಾಮಾಯಣಗಳಲ್ಲಿ ವ್ಯಕ್ತವಾಗುವ ಧೋರಣೆ ಅನುಸರಿಸಿ ಭಾರತದ ಸಾಮಾಜಿಕ ಮತ್ತು ರಾಜಕೀಯ ರಚನೆಯಲ್ಲಿ ಕಾಣಬರುವ ಹಂತಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಬಹುದಾಗಿದೆ.

ಧೃತರಾಷ್ಟ್ರನು ಹುಟ್ಟುಕುರುಡನಾದ ಕಾರಣ ಆತನ ತಮ್ಮನಾದ ಪಾಂಡು ರಾಜ್ಯಭಾರ ಮಾಡುತ್ತಾನೆ. ಮೊದಲ ಹೆಂಡತಿಯ ಮೊದಲ ಮಗನೆ ರಾಜನಾಗಬೇಕು ಎಂಬ ತತ್ವಕ್ಕೆ ಮಹಾಭಾರತ ಕಾಲದಲ್ಲಿಯೆ ರಾಜಕೀಯ ಮತ್ತು ಸಾಮಾಜಿಕ ಮಾನ್ಯತೆ ಇದ್ದಲ್ಲಿ, ಪಾಂಡು ನಿಧನಾನಂತರ ರಾಜ್ಯಭಾರದ ಅಧಿಕಾರ ಧೃತರಾಷ್ಟ್ರನ ಮಕ್ಕಳಾದ ಕೌರವರಿಗೆ ಹೋಗುವುದು ಸ್ವಾಭಾವಿಕವಾಗುತ್ತಿತ್ತು. ಕೌರವವಾಗಲಿ, ಧೃತರಾಷ್ಟ್ರನಾಗಲಿ ಆ ಹಕ್ಕನ್ನು ಚಲಾಯಿಸಲು ಹೋಗುವುದಿಲ್ಲ. ಬದಲಾಗಿ, ತನ್ನ ಮಕ್ಕಳಿಗೂ ರಾಜ್ಯಭಾರ – ಅಂದರೆ ಆಸ್ತಿ ಮೇಲಿನ ಹಕ್ಕು ಎಂದೂ ಆಗಬಹುದು – ಮಾಡುವ ಅವಕಾಶ ದೊರಕುವುದೆ ಎಂದು ಧೃತರಾಷ್ಟ್ರ ಕೇಳುವ ರೀತಿಯಲ್ಲಿಯೆ, ಧರ್ಮರಾಯ ಕೂಡ ಐದು ಗ್ರಾಮಗಳ ಮೇಲಿನ ಹಕ್ಕು ದೊರಕಿದಲ್ಲಿ ತನ್ನ ತಂದೆಗೆ ಬಂದಿದ್ದ ರಾಜ್ಯಾಧಿಕಾರದ ಹಕ್ಕನ್ನು ಬಿಟ್ಟುಕೊಡಲು ಸಿದ್ಧನಿರುತ್ತಾನೆ; ಹಿರಿಯ ಮಗನಾದ ಕಾರಣ ರಾಜ್ಯಭಾರದ ಹಕ್ಕು ‘ನನ್ನದಾಗಬೇಕು’ ಎಂದು ಧೃತರಾಷ್ಟ್ರ ಅಧಿಕಾರ ಚಲಾಯಿಸಲು ಹೋಗುವುದಿಲ್ಲ

ಹಿರಿಯ ಪತ್ನಿಯ ಹಿರಿಯ ಮಗ ರಾಜನಾಗಬೇಕು ಎಂಬ ತತ್ವಕ್ಕೆ – ಮತ್ತು ಕಾನೂನು ಹೌದು – ರಾಮಾಯಣ ಕಾಲದಲ್ಲಿ ಬಲವಾದ ಸಾಮಾಜಿಕ ಮತ್ತು ರಾಜಕೀಯ ಮಾನ್ಯತೆ ದೊರಕಿದ್ದು, ಅಂಗೀಕಾರಾರ್ಹತೆ ಪ್ರಾಪ್ತವಾಗಿರುತ್ತದೆ. ಹಾಗಾಗಿ ಅದನ್ನು ಪ್ರಶ್ನಿಸಲು ಹೋದ ಕೈಕೇಯಿ ಮತ್ತು ಆ ಪ್ರಲೋಭನೆ ಉಂಟುಮಾಡಲು ನಿಮಿತ್ತವಾದ ಮಂಥರೆ ಏಕಾಂಗಿಗಳಾಗಿ ನಿಲ್ಲಬೇಕಾಗುತ್ತದೆ. ಅವರು ಅನುಭವಿಸಬೇಕಾಗಿ ಬಂದ ಪರಿತ್ಯಕ್ತತೆ ಯಾವ ಮಟ್ಟಕ್ಕೆ ಹೋಗುತ್ತದೆ ಎಂದರೆ, ಅವರು ರಾಜನಾಗಬೇಕು ಎಂದು ಬಯಸಿದ ಭರತನ ಕೈಯಲ್ಲೂ ತಾತ್ಸಾರಕ್ಕೆ ಗುರಿಯಾಗಬೇಕಾಗುತ್ತದೆ. ೧೪ ವರ್ಷ ಕಾಲ ವನವಾಸ ಮುಗಿಸಿಕೊಂಡು ರಾಮ ಬರುವವರೆಗೆ ಅವನ ಹೆಸರಿನಲ್ಲಿ ಭರತ ರಾಜ್ಯಭಾರ ಮಾಡುವ ತರಹವೆ, ಹಿರಿ ಅಣ್ಣನಾದ ಧೃತರಾಷ್ಟ್ರನ ಹೆಸರಿನಲ್ಲಿ ಪಾಂಡುವೂ ಅಧಿಕಾರ ನಡೆಸಿದ್ದಲ್ಲಿ ಸಮಸ್ಯೆಯೆ ಉದ್ಭವಿಸುತ್ತಿರಲಿಲ್ಲ.

ಯುರೋಪಿನ ಫ್ಯೂಡಲ್‌ ಮಾದರಿ ವ್ಯವಸ್ಥೆ ಭಾರತದಲ್ಲೂ ಜಾರಿಗೆ ಬಂದ ಅಥವಾ ಇಲ್ಲದಿರುವ ಸಾಧ್ಯತೆ ಕುರಿತಂತೆ ಸುದೀರ್ಘ ಚರ್ಚೆ ನಡೆದಿದೆ. ಇತಿಹಾಸಕಾರರು, ಸಮಾಜ ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಮೊದಲಾದ ಅನೇಕ ಶಿಸ್ತಿನ ವಿದ್ವಾಂಸರು ಆ ಚರ್ಚೆಯಲ್ಲಿ ಭಾಗವಹಿಸಿದ್ದು ಇಂದಿಗೂ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಭಾರತದಲ್ಲಿ ಚಾಲತಿಯಲ್ಲಿರುವುದು ರಾಮಾಯಣ ಕಾಲದ್ದಿರಬಹುದಾದ ಯಜಮಾನ ವ್ಯವಸ್ಥೆ.[1] ಅದು ಅಲ್ಲಲ್ಲಿ ಪಾಳೇಗಾರಿಕೆ ರೂಪ ಪಡೆದುಕೊಂಡಿದ್ದರೆ, ಕೆಲ ಕಡೆ ಫ್ಯೂಡಲ್‌ ರೂಪ ಪಡೆದುಕೊಂಡಿದೆ. ಪುರುಷಪ್ರಧಾನ ಅಂದರೆ ಭಾರತದ ಸಂದರ್ಭದ ಯಜಮಾನ ವ್ಯವಸ್ಥೆ ಮಾನ್ಯತೆ ಕಂಡುಕೊಳ್ಳಬೇಕಾದರೆ ಹೆಣ್ಣಿನ ಪಾತಿವ್ರತ್ಯ ಕುರಿತ ಪ್ರಶ್ನೆ ಎಲ್ಲಿಲ್ಲದ ಮಹತ್ವ ಪಡೆದುಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ ಎಂಬುದನ್ನು ಗ್ರಹಿಸಲು, ರಾಮಾಯಣ ಮತ್ತು ಆ ಕಾಲದ ಸಮಾಜವನ್ನು ಬಹಳ ಹತ್ತಿರದಿಂದ ಅಧ್ಯಯನ ಮಾಡದೆ ಬೇರೆ ದಾರಿಯೇ ಇಲ್ಲ. ಮಹಾಭಾರತದಲ್ಲಿ ಸದ್ಗುಣ ಮತ್ತು ಒಳ್ಳೆಯ ನಡೆತೆ ಎಂಬ ಅರ್ಥದಲ್ಲಿ ಬಿಂಬಿತವಾಗುವ ಗಂಡು – ಹೆಣ್ಣಿನ ನಡುವಿನ ಸಂಬಂಧವು ರಾಮಾಯಣ ಕಾಲಕ್ಕೆ ಪಾತಿವ್ರತ್ಯ ಮತ್ತು ಹೆಣ್ಣಿಗೊಂದೆ ಗಂಡು ಎಂಬ ಅರ್ಥ ಪಡೆದುಕೊಳ್ಳುತ್ತದೆ. ಸೀತೆಯನ್ನು ಅಪಹರಿಸುವುದರ ಮುಖೇನ ಹೆಣ್ಣಿನ ಪಾತಿವ್ರತ್ಯಕ್ಕೆ ನೀಡಲಾದ ಅತಿಯಾದ ಮಹತ್ವವನ್ನೇ ಪ್ರಶ್ನಿಸುವ ರಾವಣ ಅದರ ಮೂಲ ಹಿನ್ನೆಲೆಯಾದ ಉತ್ತರಾಧಿಕಾರಿ ಆಯ್ಕೆ ಸುಗಮವಾಗಿ ಸಾಗಲು ಹಿರಿಯ ಮಗ ರಾಜನಾಗುವುದು ಸೂಕ್ತ ಎಂಬ ತತ್ವವನ್ನು ಸಹ ಅತ್ಯಂತ ತಿರಸ್ಕಾರದಿಂದ ಕಾಣುತ್ತಾನೆ. ಕೈಕೇಯಿಯ ಪ್ರಶ್ನಾರ್ಥಕ ಮನೋಧರ್ಮ, ರಾವಣನ ರೂಪದಲ್ಲಿ ಪಡೆದುಕೊಳ್ಳುವ ತಿರುವು ಬೇರೆಯೆ ಆಗಿಬಿಡುತ್ತದೆ.

ರಾಮ, ಭರತ, ಲಕ್ಷ್ಮಣ ಕೊನೆಗೆ ರಾವಣ ಮೊದಲಾದ ಯಾರೂ ಮಹಾಭಾರತ ಕಾಲದ ಭೀಮ ಅಥವಾ ದುರ್ಯೋಧನರ ತರಹ ಒರಟರಲ್ಲ. ಅಲ್ಲಿ ಬರುವ ವಾಲಿ ಸುಗ್ರೀವ ಕೂಡ ಅತ್ಯಂತ ಸಜ್ಜನಿಕೆ ಮತ್ತು ನಯವಂತಿಕೆಯಿಂದ ನಡೆದುಕೊಳ್ಳುತ್ತಾರೆ. ಸೀತೆಯನ್ನು ಅತ್ಯಂತ ನಯವಾದ ರೀತಿಯಲ್ಲಿ ಅಪಹರಿಸಿಕೊಂಡು ಹೋಗುವ ರಾವಣ, ಅವಳ ಒಲವಿಗಾಗಿ ಕಾದಿರುತ್ತಾನೆ ವಿನಾ ಬಲಾತ್ಕಾರ ಮಾಡಲು ಹೋಗುವುದಿಲ್ಲ:

Thus, far from being the demons of later mythology, the Rākşasas in the Rāmāyaņa are mainly depicted as not merely human but also cultured.[2]

ಅವಳನ್ನು ಸೆರೆಹಿಡಿಯಲು ಜಿಂಕೆಯ ರೂಪದ ಮಾರೀಚನ ಮಾಯಾಜಾಲವನ್ನು ಬಳಸುವಂತೆಯೇ, ಅನಂತರದ ದಿನಗಳಲ್ಲಿ ಸೀತೆಯ ಮನಸ್ಸುನ್ನು ತನ್ನ ಪರವಾಗಿ ಮರುಳುಮಾಡಲು ಅನೇಕ ತರಹದ ವಾಮಮಾರ್ಗಗಳನ್ನು ಅನುಸರಿಸುತ್ತಾನೆ ನಿಜ. ಆದರೆ ಅವಕಾಶ ದೊರಕಿದುದೇ ತಡ ದ್ರೌಪದಿಯ ಸೀರೆಗೆ ಕೌರವರು ಕೈಹಾಕುವಂತೆ, ರಾವಣ ಎಲ್ಲಿಯೂ ಸೀತೆಯ ಸೆರಗಿಗೆ ಕೈ ಹಚ್ಚಲು ಹೋಗುವುದಿಲ್ಲ. ರೂಪ, ಧೈರ್ಯ ಮತ್ತು ಸತ್ವದಲ್ಲಿ ಈಶ್ವರನಾದ ಆ ರಾವಣನನ್ನು ಸುಂದರಕಾಂಡದ ೪೯ನೇ ಸರ್ಗದಲ್ಲಿ ಕಾಣುವ ಆಂಜನೇಯನು ತೆಗೆಯುವ ಉದ್ಗಾರ: ಸುಸಂಸ್ಕೃತವಾಗಿ ನಡೆದುಕೊಳ್ಳುವ ರಾವಣ ಜಾತಿಯಲ್ಲಿ ಬ್ರಾಹ್ಮಣ ಎಂಬುದಾಗಿ ಪ್ರಸಿದ್ಧ ಇತಿಹಾಸಕಾರ ಡಿ.ಡಿ. ಕೋಸಾಂಬಿ ಪರಿಭಾವಿಸುತ್ತಾರೆ:

The ten – headed demon king Rāvaņa killed by Rāma was a Brahmin according to tradition; actullly is a Rāvaņa gotra in Vasistha.[3]

ರಾಮ – ರಾವಣರ ಯುದ್ಧ ನಡೆಯುವುದು ತಾತ್ತ್ವಿಕ ಕಾರಣಗಳಿಗಾಗಿ. ಅದೊಂದು ರೀತಿಯಲ್ಲಿ ತ್ತ್ವ ಮತ್ತು ಮನೋಧರ್ಮದ ನಡುವಿನ ಸಂಘರ್ಷ. ಅದೇ ತರಹ ಈನಿಯಾಸ್‌ ಮತ್ತು ಟರ್ನಸ್‌ ನಡುವೆ ನಡೆಯುವ ಯುದ್ಧ ಕೂಡ ತಾತ್ತ್ವಿಕ ಭಿನ್ನಾಭಿಪ್ರಾಯ ಮತ್ತು ಮನೋಭಾವದ ನಡುವಿನ ಅಂತರದಿಂದಾಗಿ ನಡೆಯುತ್ತದೆ. ಆದರೆ ಈಷ್ಯೆ, ಮತ್ಸರ, ಪೌರುಷ, ಅಹಂ ಇತ್ಯಾದಿಗಳಿಂದ ಪ್ರೇರಿತರಾದ ಕೌರವರು ಪಾಂಡವರನ್ನು ಸರ್ವನಾಶ ಮಾಡುವ ಉದ್ದೇಶದಿಂದ ಯುದ್ಧಕ್ಕೆ ಕಾರಣರಾದರೆ, ಅದೇ ಪ್ರವೃತ್ತಿಗಳು ಮತ್ತು ಛಲ ಹೋಮರನ ‘ಇಲಿಯಡ್‌’ನಲ್ಲಿ ಕಾರ್ಯಪ್ರವೃತ್ತವಾಗುವುದನ್ನು ಗುರುತಿಸಲಾಗಿದೆ.

ಹೆಣ್ಣನ್ನು ಬಿಡಿಸಿಕೊಂಡು ಬರಲು ಯುದ್ಧ ನಡೆಯುವ ಕಾರಣ[4], ರಾಮಾಯಣ ಮತ್ತು ಇಲಿಯಡ್‌ ನಡುವೆ ಬಹಳ ಸಾಮ್ಯವಿದೆ ಎಂದು ಪರಿಭಾವಿಸಿ ಹೋಲಿಕೆ ಮಾಡುವುದು ಸಾಮಾನ್ಯ. ಹೆಲೆನ್‌ ಅಪಹೃತಳಲ್ಲ; ತನ್ನನ್ನು ಓಡಿಸಿಕೊಂಡು ಹೋದವನ ಜತೆ ಓಡಿಹೋದ ಆಕೆ ಆತನನ್ನು ಗಂಡನೆಂದು ಸ್ವೀಕರಿಸಿ ಸುಮಾರು ೨೦ ವರ್ಷಕಾಲ ಸಂಸಾರ ಮಾಡಿರುತ್ತಾಳೆ ಎಂಬುದನ್ನು ಹೋಲಿಕೆ ಮಾಡುವಾಗ ಮರೆಯಲು ಬರುವುದಿಲ್ಲ. ಆ ಕಾರಣ ಸೀತೆ ಮತ್ತು ಹೆಲೆನ್‌ ನಡುವೆ ಯಾವುದೇ ಹೊಂದಾಣಿಕೆ ಇಲ್ಲ. ಆ ರೀತಿ ಹೋಲಿಕೆ ಮಾಡುವಾಗ ‘ರಾಮಾಯಣ’ ಮತ್ತು ‘ಇಲಿಯಡ್‌’, ‘ಸೀತೆ’ ಮತ್ತು ‘ಹೆಲೆನ್‌’ ನಡುವಿನ ಅಗಾಧ ಅಂತರ ಮತ್ತು ವ್ಯತ್ಯಾಸಗಳನ್ನು ಮರೆಯುವುದು ಸರಿಯಲ್ಲ. ಹೋಲಿಕೆಗಳಿಗಿಂತ ಅಂತರ ಇರುವುದೇ ಹೆಚ್ಚು. ಆ ಅರ್ಥದಲ್ಲೂ ಸಹ ನಿಜವಾದ ಹೋಲಿಕೆ ಇರುವುದು ‘ಮಹಾಭಾರತ’ ಮತ್ತು ‘ಇಲಿಯಡ್‌’ ನಡುವೆ. ‘ಹೆಲೆನ್‌’ಗೆ ಇಬ್ಬರು ಗಂಡಂದಿರು, ‘ದ್ರೌಪದಿ’ಗೆ ಐದು ಜನ. ಅಪಹೃತಳಾದ ಹೆಣ್ಣಿನ ಕತೆ ಬರುವುದು ‘ರಾಮಾಯಣ’ದಲ್ಲಿ ಮಾತ್ರ ‘ಇಲಿಯಡ್‌’ನಲ್ಲಿ ಅಲ್ಲ.

ವನವಾಸಕ್ಕೆ ಬಂದನಂತರ ರಾಮ ಧನುರ್ಧಾರಿಯಾಗಿ ಓಡಾಡುವುದನ್ನು ಕಂಡು ಸೀತೆ ಕೇಳುವ ಕೆಲವೊಂದು ಪ್ರಶ್ನೆಗಳು, ಅದಕ್ಕೆ ಉತ್ತರವಾಗಿ ಕ್ಷತ್ರಿಯ ಧರ್ಮ ಎಂಬ ಅರ್ಥನೀಡುವ ಮಾತನ್ನು ಬಳಸುವ ರಾಮ, ರಾಕ್ಷಸರ ಕೈಯಲ್ಲಿ ಸಿಕ್ಕು ತೊಂದರೆ ಅನುಭವಿಸುತ್ತಿರುವ ಋಷಿಮುನಿಗಳು ‘ರಕ್ಷಣೆಗಾಗಿ ನನ್ನ ಮೊರೆ ಹಿಕ್ಕಿದ್ದಾರೆ’ ಎಂದು ಹೇಳುತ್ತಾನೆ ಮಾತ್ರ ರಾಕ್ಷಸರನ್ನು ಕೊಲ್ಲುವುದಕ್ಕಿಂತಲೂ ಹೆಚ್ಚಾಗಿ ಅವರಿಂದ ಕಿರುಕುಳ ಅನುಭವಿಸುತ್ತಿರುವ ಋಷಿಗಳಿಗೆ ನೆರವು ನೀಡುವುದು ಆತನಿಗೆ ಮುಖ್ಯವಾಗುತ್ತದೆ. ಆದರೆ ವಿಚಿತ್ರವೆಂದರೆ, ತನ್ನ ಪತ್ನಿಯಾದ ಸೀತೆಯನ್ನು ರಕ್ಷಿಸಲೋಸುಗ ರಾವಣನ ಜತೆ ಯುದ್ಧ ಮಾಡುವುದು ರಾಮನ ಪಾಲಿಗೆ ಬಂದ ಕರ್ತವ್ಯವಾಗಿ ಬಿಡುವುದು. ಈ ಕಡೆ ತಾನು ಅಪಹರಿಸಿಕೊಂಡು ಬಂದ ಸೀತೆಯನ್ನು ಉಳಿಸಿಕೊಳ್ಳಲು ಮತ್ತು ಒಲಿಸಿಕೊಳ್ಳಲು ರಾವಣ ಯುದ್ಧ ಮಾಡುವಂತೆಯೇ, ತನಗೆ ಈ ಮೊದಲು ಗೊತ್ತಾಗಿದ್ದ ಲ್ಯಾವಿನಿಯಾಳನ್ನು ಈನಿಯಾಸ್‌ಗೆ ಮದುವೆ ಮಾಡಿ ಕೊಡಲು ಆಕೆಯ ತಂದೆಯಾದ ಲ್ಯಾಟಿನಿಯಾದ ರಾಜ ಮುಂದಾದಾಗ ತನ್ನ ಪ್ರೀತಿಯ ವಧುವಿನ ಜತೆಗೆ, ಬರಲಿದ್ದ ಸಾಮ್ರಾಜ್ಯ ಉಳಿಸಿಕೊಳ್ಳಲು ಟರ್ನಸ್‌ ಯುದ್ಧಕ್ಕೆ ಹೋಗುತ್ತಾನೆ. ಸೀತೆಯನ್ನು ಬಿಟ್ಟು ಕೊಡುವುದಕ್ಕಿಂತ ಸಾವೇ ಲೇಸು ಎಂಬ ಮನಃಸ್ಥಿತಿ ರಾವಣನಾದಂತೆ, ಲ್ಯಾವಿನಿಯ ಮತ್ತು ಲ್ಯಾಟಿನಸ್‌ ರಾಜ್ಯವನ್ನು ಕಳೆದುಕೊಂಡು ಬದುಕಲು ಟರ್ನಸ್‌ಗೆ ಉಳಿಯುವುದಾದರೂ ಮತ್ತೇನು? ರಾವಣ ಸತ್ತನಂತರ ರಾಮನ ಬದುಕು ಹೊಸ ಅರ್ಥ ಪಡೆದುಕೊಳ್ಳುವಂತೆಯೇ, ಇನಿಯಾಸ್‌ ಬದುಕು ಸಹ ಟರ್ನಸ್‌ನ ಅಂತ್ಯದೊಂದಿಗೆ ಹಾಕಿಕೊಂಡ ಗುರಿ ಮುಟ್ಟುವಲ್ಲಿ ಸಾಫಲ್ಯ ಕಾಣುವ ಹಾದಿ ಹಿಡಿಯುತ್ತದೆ. ರಾವಣನ ಅಂತ್ಯದಿಂದ ಸರ್ವನಾಶವಾಗುವುದಿಲ್ಲವಾದಂತೆ, ಟರ್ನಸ್‌ನ ಭೀಕರ ಹತ್ಯಯೊಂದಿಗೆ ಸರ್ವನಾಶವೇನೂ ಆಗುವುದಿಲ್ಲ.

ಟ್ರಾಯ್‌ ನಿರ್ನಾಮದೊಂದಿಗೆ ಸಂಸ್ಕೃತಿ ಮತ್ತು ನಾಗರಿಕತೆಯೊಂದರ ಸರ್ವನಾಶವಾಗುವಂತೆಯೇ: ಮಹಾಭಾರತ ಯುದ್ಧಾನಂತರ ಕೌರವರ ಸಂತತಿ ಸಂಪೂರ್ಣ ನಿರ್ನಾಮವಾಗುತ್ತದೆ. ಟ್ರೋಜನ್ನರ ಹೆಸರು ಹೇಳಲು ಈನಿಯಾಸ್‌ನಂಥ ಒಂದಿಬ್ಬರಾದರೂ ಬದುಕುಳಿದ ಸೂಚನೆಯಾದರೂ ‘ಇಲಿಯಡ್‌’ನಲ್ಲಿ ದೊರಕುತ್ತದೆ. ಆದರೆ ಕೌರವರ ಹೆಸರು ಹೇಳಲು ಯಾರೊಬ್ಬರೂ ಉಳಿಯುವುದಿಲ್ಲ. ಗ್ರೀಕರ ಸೇನಾಪತಿ ಅಗಮೆಮ್ನೊನ್‌ ತನ್ನ ಹೆಂಡತಿ ಮತ್ತು ಆಕೆಯ ಪ್ರಿಯತಮನ ಕೈಯಲ್ಲಿ ಭೀಕರ ರೀತಿಯಲ್ಲಿ ಕೊಲೆಯಾದರೆ :

He led him to banquet, all serene,
and killed him, like an ox felled at the trough;
ಪುಟ ೭೪

ತನ್ನ ನೆಲೆ ತಲುಪಲು ಒದಿಸ್ಯೂಸ್‌ ಪಡಬಾರದ ಪಾಡು ಪಡಬೇಕಾಗುತ್ತದೆ. ಹೆಲೆನ್‌ ಮರಳಿ ಬಂದ ನಂತರ ಮೆನಲೊಸ್‌ ಜತೆ ನೆಮ್ಮದಿಯಿಂದ ಬದುಕುವ ಚಿತ್ರಣವನ್ನು ನೀಡುವ ‘ಒಡಿಸ್ಸಿ’:

Menelăaos went rest, and Helen,
queenly in her gown, lay beside him.
ಪುಟ ೬೮

ಛಲ ಮತ್ತು ಸಾಹಸದಿಂದ ಹಿಡಿದ ಗುರಿ ತಲುಪುವ ಒದಿಸ್ಯೂಸ್‌ನ ಗಾಥೆ. ಸರ್ವನಾಶ ಮತ್ತು ನಿರ್ನಾಮದ ಕತೆ ಹೇಳುತ್ತಲೆ ಹೋಮರ್‌ ಉಳಿದು ಬದುಕುವವರ ಕತೆಯನ್ನೂ ಹೇಳುತ್ತಾನೆ. ಹಾಗೆ ನೋಡಿದರೆ ಇಡೀ ಮಹಾಭಾರತ ಸರ್ವನಾಶದ ಕತೆ: ಕೌರವರು ಸೋತು ನಿರ್ನಾಮವಾದರೆ, ಪಾಂಡವರು ಗೆದ್ದು ಎದುರಿಸಬೇಕಾಗಿ ಬರುವ ಸರ್ವನಾಶದ ಪರಿಸ್ಥಿತಿ ಅದಕ್ಕಿಂತ ಭೀಕರವಾದುದು. ಸರ್ವನಾಶದ ಕತೆ ಹೇಳುವ ವಿಚಾರದಲ್ಲಿ ವ್ಯಾಸ, ಹೋಮರನಿಗಿಂತ ಹಲವಾರು ಗಾವುದ ಮತ್ತು ಶತಮಾನ ಕಾಲ ಹಿಂದೆ, ಸರ್ವನಾಶ ಆಗುತ್ತದೆ ಎಂಬ ಎಚ್ಚರಿಕೆ ಇದ್ದೂ ಕೌರವರು ಯುದ್ಧಕ್ಕಾಗಿ ಹಾತೊರೆದರೆ, ಯುದ್ಧಕ್ಕಾಗಿ ಟ್ರೋಜನ್ನರು ಹಿಂಜರಿಯುವುದಿಲ್ಲ. ಯುದ್ಧ ಹೂಡುವುದರ ಮೂಲಕ ಕೌರವರು ತಮ್ಮನ್ನು ತಾವೇ ಸರ್ವನಾಶ ಮಾಡಿಕೊಂಡರೆ, ಯುದ್ಧವನ್ನು ಬರಮಾಡಿಕೊಳ್ಳುವ ಟ್ರೋಜನ್ನರು ಸರ್ವನಾಶವನ್ನು ಸ್ವಾಗತಿಸುತ್ತಾರೆ.

 

[1]ಆ ಯಜಮಾನ ವ್ಯವಸ್ಥೆಯನ್ನೇ ಅನೇಕ ಕುಟುಂಬಗಳ ಜನ ಪ್ರಜಾಸತ್ತೆಯ ಹೆಸರು ಮತ್ತು ಚೌಕಟ್ಟಿನಲ್ಲಿ ಬಹಳ ಯಶಸ್ವಿಯಾಗಿ ಇಂದೂ ಮುಂದುವರಿಸಿಕೊಂಡು ಹೋಗುತ್ತಿರುವುದನ್ನು ಕಾಣಲು ಬಹಳ ತ್ರಾಸಪಡಬೇಕಾಗಿಲ್ಲ.

[2]J.K. Brockington, righteous Rama, Oxford university, Delhi, ೧೯೮೯, ಪುಟ ೨೦೪

[3]An Introduction to study Indian History, popular prakashna, Bombay, ೧೯೭೫, ಪುಟ ೧೩೩.

[4]ಅಪಹೃತಳಾದ ಹೆಣ್ಣನ್ನು ಬಿಡಿಸಿಕೊಂಡು ಬರಲು ಕೋಟೆಗೆ ಲಗ್ಗೆ ಹಾಕುವ ಕತೆ ಹೇಳುವ ಕ್ರಿ.ಪೂ,೧೪ನೇ ಶತಮಾನದ್ದಿರಬಹುದಾದ ಪುರಾಣದ ತುಣುಕೊಂದು ಉಗಾರಿಟ್‌ -ಉತರ ಸಿರಿಯಾದ ಈಗಿನ ರಾಸ್‌ಶಾಮ್ರದಲ್ಲಿ ದೊರಕಿದೆ. ಆ ಕತೆ ‘ಇಲಿಯಡ್‌’ ಮತ್ತು ‘ರಾಮಾಯಣ’ದ ಕತೆಯನ್ನು ಹೋಲುತ್ತದೆ ಎಂದು ಕೆಲವರ ಅಂದಾಜು. ಆ ಊಹೆ ಸರಿಯಾಗಿರುವಂತೆ ತೋರುವುದಿಲ್ಲ. ಏಕೆಂದರೆ, ಈ ಮೊದಲೆ ಗುರಿತಿಸಲಾದಂತೆ ತನ್ನ ಪ್ರೇಮಿಯ ಜತೆ ಪಲಾಯನ ಮಾಡಿದ ಹೆಣ್ಣನ್ನು ಮರಳಿ ಕರೆತರಲು ಗ್ರೀಕರು ಟ್ರಾಯ್‌ ಪಟ್ಟಣದ ಕೋಟೆಗೆ ಲಗ್ಗೆ ಹಾಕಿದರೆ, ಅಪಹೃತಳಾದ ಸೀತೆಯನ್ನು ಬಿಡಿಸಿಕೊಂಡು ಬರಲು ಸುಗ್ರೀವನ ಸೇನೆ ಲಂಕೆಗೆ ಮುತ್ತಿಗೆ ಹಾಕುತ್ತದೆ. ಕಠಾರಿ ಲಿಪಿಯಲ್ಲಿ ಕೆತ್ತಲಾಗಿರುವ ರಾಸ್‌ಶಾಮ್ರದ ಮಣ್ಣಿನ ಫಲಕಗಳಲ್ಲಿ ಮೂರು ಕಥನ ಕವನಗಳ ತುಣುಕುಗಳಿವೆ. ಅವುಗಳಲ್ಲಿ ಒಂದು, ಬಾಲ್‌ ಎಂಬ ದೈವಾಂಶ ಸಂಭೂತನ ಸಾವಿನೊಂದಿಗೆ ಕಾಲಿಡುವ ಬರಗಾಲವು ಆತನ ಪುತರುತ್ಥಾನದೊಂದಿಗೆ ಕೊನೆಗೊಳ್ಳುವ ಕತೆ ಹೇಳಿದರೆ, ಮತ್ತೊಂದರಲ್ಲಿ ಅಖತ್‌ ಎಂಬ ಮತ್ತೊಬ್ಬ ದೈವಪುರುಷನ ಅಂತ್ಯ ತರುವ ಬರಗಾಲದ ಕತೆ ಇದೆ. ಬಾಲ್‌ನ ಕೊಲೆಯ ಸೇಡನ್ನು ಆತನ ಸೋದರಿ ಅನತ್‌ ತೀರಿಕೊಂಡರೆ, ಅಖತ್‌ನನ್ನು ಕೊಂದವರನ್ನು ಕೊಲ್ಲುವುದರ ಮೂಲಕ ಆತನ ಸೋದರಿ ಫಘತ್‌ ಸೇಡು ತೀರಿಸಿಕೊಳ್ಳುತ್ತಾಳೆ. ಆದರೆ ಹೆಣ್ಣಿನ ನೆಪದಲ್ಲಿ ಕೋಟೆಗೆ ಲಗ್ಗೆ ಹಾಕುವ ವೀರಾಧಿವೀರರ ಕತೆ ಹೇಳುವ ಮೂರನೇ ಕಥನ ಕವನದಲ್ಲಿ ಯುದ್ಧಕ್ಕೆ ನಿಮಿತ್ತವಾದ ಕಾರಣ ಕುರಿತಂತೆ ಬೇಕಾದ ಎಲ್ಲ ವಿವರಗಳೂ ದೊರಕುವುದಿಲ್ಲ. ಹೆಂಡತಿಯನ್ನು ಕಳೆದುಕೊಂಡ ನಾಯಕನ ಮೊದಲ ಪತ್ನಿಯನ್ನು ಮರಳಿ ಪಡೆಯಲು ಯುದ್ಧ ಹೂಡುತ್ತಾರೋ ಅಥವಾ ಆತನಿಗೆ ಹೊಸ ಪತ್ನಿ ಪಡೆಯಲೋ ಎಂಬ ಬಗ್ಗೆ ಅಲ್ಲಿ ದೊರಕುವ ಉತ್ತರ ಮೌನವಾಗಿದೆ.