ವ್ಯಾಸ ಮೊದಲೋ ವಾಲ್ಮೀಕಿ ಮೊದಲೋ ಎಂಬ ಕುತೂಹಲವೆ ಒಂದು ರೀತಿಯಲ್ಲಿ ಅಸಂಗತ ಮತ್ತು ಅಸಂಬದ್ಧ; ಮಹಾಭಾರತ ರಾಮಾಯಣಗಳ ಬಗ್ಗೆ ಚಿಂತಿಸದಿರುವ ಮನಸ್ಸುಗಳಿಲ್ಲದ ಭಾರತದಲ್ಲಿ ವ್ಯಾಸರಿಗಿಂತ ಮೊದಲು ವಾಲ್ಮೀಕಿ ಹೇಗೆ ಬರಲು ಸಾಧ್ಯ ಎಂಬ ಒಂದು ಸಣ್ಣ ಅನುಮಾನ ಕೂಡ ಈವರೆಗೆ ಬಾಧಿಸಿದಂತೆ ತೋರುವುದಿಲ್ಲ. ವಾಲ್ಮೀಕಿ ಮೊದಲು ಎಂಬ ನಂಬಿಕೆಯನ್ನು ಭಾರತೀಯ ಮನಸ್ಸು ಜಗತ್ತಿನಲ್ಲಿ ವಿಶದವಾಗಿರುವ ಪರಮಸತ್ಯಗಳ ಪೈಕಿ ಒಂದು ಎಂಬಂತೆ ನಮ್ರತೆಯಿಂದ ಸ್ವೀಕರಿಸಿ ಒಪ್ಪಿಕೊಂಡು ಬಂದಿದೆ,

ಅನುಮಾನ ವ್ಯಕ್ತಪಡಿಸಿ ಮೊದಲ ಚರ್ಚೆ ಆರಂಭಿಸಿದವರೆ ಯುರೋಪ್‌ ಮೂಲದ ವಿದ್ವಾಂಸರು: ಆನಂತರವಾದರೂ ಭಾರತೀಯ ಲೇಖಕರು ಆ ಕಡೆಗೆ ಹರಿಸಬೇಕಾದ ಗಮನ ಹರಿಸಿದಂತೆ ಕಾಣುವುದಿಲ್ಲ. ಕೆಲವರು ಗಮನಿಸಿಯೂ ಗಮನಿಸದಂತೆ ಮುಂದೆ ಸಾಗಿದರೆ, ಅಲ್ಲಿ ಎದುರಾಗುವ ಮೂಲಭೂತ ಸಮಸ್ಯೆಗಳು ಮತ್ತು ಪ್ರಶ್ನೆಗಳನ್ನು ಬಹಳ ಗಂಭೀರವಾಗಿ ತೆಗೆದುಕೊಂಡವರು ಬಹಳ ಕಡಿಮೆ. ಆ ಕುತೂಹಲ ಸಂಪ್ರದಾಯಸ್ಥ ಮನಸ್ಸುಗಳಿಗೆ ಹೋಗಲಿ, ಅನೇಕ ‘ಆಧುನಿಕ’ ವಿದ್ವಾಂಸರು ಮತ್ತು ಲೇಖಕರಿಗೂ ತಲೆಹರಟೆ ಇಲ್ಲವೆ ಉಡಾಫೆ ಪ್ರವೃತ್ತಿಯಾಗಿ ಕಾಣುವ ಅಪಾಯವಿದೆ. ವಾಲ್ಮೀಕಿ ಮೊದಲು ಬರುವುದು ಅಸಾಧು ಎಂಬುದಾದಲ್ಲಿ, ಭಾರತೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಅರಿವಿನ ಆಧಾರಸ್ತಂಭಗಳ ಪೈಕಿ ಒಂದಾದ ಕೃತಯುಗ, ತ್ರೇತಾಯುಗ ಇತ್ಯಾದಿ ವಿಂಗಡಣೆಗಳ ಬಗ್ಗೆ ಅನುಮಾನ ಉಂಟಾಗುವ ಅಪಾಯವಿದೆ ಎಂಬ ಭಯ ಕೂಡ ಆ ಮುಚ್ಚಿದ ಸ್ಥಿತಿಗೆ ಕಾರಣವಾಗಿದ್ದಿರಬಹುದು.

ವ್ಯಾಸರಿಗಿಂತ ಮೊದಲು ವಾಲ್ಮೀಕಿ ಬರಲು ಹೇಗೆ ಸಾಧ್ಯ ಎಂಬುದಕ್ಕಿಂತಲೂ ಹೆಚ್ಚಾಗಿ ವ್ಯಾಸರು ಪ್ರತಿನಿಧಿಸುವ ಸಮಾಜಕ್ಕೂ ಮೊದಲು ವಾಲ್ಮೀಕಿ ಸಮಾಜ ಬರಲು ಸಾಧ್ಯವೇ ಎಂಬ ಪ್ರಶ್ನೆ, ಎಲ್ಲರಿಗಿಂತ ಹೆಚ್ಚಾಗಿ ಭಾರತೀಯರನ್ನು ಕಾಡಬೇಕಿತ್ತು. ಅಥವಾ ಅದು ಗೊತ್ತಿದ್ದೂ ಭಾರತೀಯ ಮನಸ್ಸು ಕೆಲ ನಿಶ್ಚಿತ ಕಾರಣ ಉದ್ದೇಶಗಳಿಗಾಗಿ ವಾಲ್ಮೀಕಿಯನ್ನು ಆದಿಕವಿ ಎಂದು ಸ್ವೀಕರಿಸಿತೆ! ಆ ಉದ್ದೇಶಗಳು ಯಾವುದಿರಬಹುದು? ಕೆಲ ಮನಸ್ಸುಗಳು ಮಾಡಿರಬಹುದಾದ ಆರಂಭದ ಆ ತೀರ್ಮಾನವನ್ನು ಇಡೀ ಭಾರತೀಯ ಮನಸ್ಸು ಸಾಮೂಹಿಕವಾಗಿ ಸ್ವೀಕರಿಸಲು ಸಾಧ್ಯವಾದುದಾದರೂ ಹೇಗೆ?

ಅಷ್ಟಕ್ಕೂ ಆದಿಕವಿ ಎಂದರೆ ಯಾರು? ಯಾವುದೇ ಭಾಷೆಯ ಮೊದಲ ಉಪಲಬ್ಧ ಕವಿ. ಅಂದರೆ ಒಂದು ಭಾಷೆ, ಸಂಸ್ಕೃತಿ ಮತ್ತು ನಾಗರಿಕತೆಯ ಬೆಳವಣಿಗೆ ಹಾದಿಯಲ್ಲಿ ಮೊದಲು ಕಾಣಿಸಿಕೊಂಡು ಅದನ್ನು ರೂಪಿಸುವ ದಿಸೆಯಲ್ಲಿ ಮಹತ್ವದ ಪಾತ್ರ ವಹಿಸಿದ ಕವಿಯನ್ನು ಆದಿಕವಿ ಎಂದು ಗುರುತಿಸಿ ಗೌರವ ಸಲ್ಲಿಸುವುದು ವಾಡಿಕೆಯಾಗಿದ್ದಿರಬಹುದು. ಆ ಅರ್ಥದಲ್ಲಿ ಹೋಮರನನ್ನು ಯೂರೋಪಿನ ಆದಿಕವಿ ಎಂದು ಪರಿಗಣಿಸಬೇಕಾಗುತ್ತದೆ. ಆ ಸಾಹಸವನ್ನು ಯೂರೋಪಿಯನ್ನರಾರೂ ಮಾಡಿದಂತೆ ತೋರುವುದಿಲ್ಲ. ಆದರೆ ಆತನ ನಂತರ ಬಂದ ವರ್ಜಿಲನನ್ನು ಕ್ರಿಸ್ತನ ಆಗಮನ ಸಾರುವ ಮುಂಗೋಳಿ, ರಾಷ್ಟ್ರಕವಿ, ಪಶ್ಚಿಮದ ಪಿತ, ಲೋಕ ತಿಳುವಳಿಕೆಯ ಸಾಕಾರಮೂರ್ತಿ ಎಂದು ಪರಿಗಣಿಸಿದರು. ಯೂರೋಪಿನ ಸಂದರ್ಭದಲ್ಲಿ ವರ್ಜಿಲನಿಗೆ ಮತ್ತು ಭಾರತದ ಪರಂಪರೆಯಲ್ಲಿ ವಾಲ್ಮೀಕಿಗೆ ದೊರಕಿದ ಸ್ಥಾನಮಾನ ಮತ್ತು ಗೌರವಗಳ ನಡುವಿನ ಹೊಂದಾಣಿಕೆ ಕುತೂಹಲ ಕೆರಳಿಸದಿರುವುದಿಲ್ಲ.

ಹೋಮರನ ಕೃತಿಗಳನ್ನು ಸಾಂಪ್ರದಾಯಿಕ ಅಥವಾ ಪರಂಪರಾಗತ ಎಪಿಕ್‌

[1] ಮತ್ತು ವರ್ಜಿಲನ ಕೃತಿಯನ್ನು ಸಾಹಿತ್ಯಿಕ ಎಪಿಕ್‌ ಎಂದು ಗುರುತಿಸುವ ಯೂರೋಪಿನ ಜನ, ಹೋಮರನಿಗೆ ಲೌಕಿಕವಾಗಿ ಸಲ್ಲಿಸಬೇಕಾದ ಎಲ್ಲ ಗೌರವ ಸಲ್ಲಿಸಿದರಾದರೂ, ವರ್ಜಿಲನಿಗೆ ಗೌರವ ನೀಡುವ ವಿಚಾರದಲ್ಲಿ ಆ ಲೌಕಿಕ ಗಡಿಯ ಮಿತಿಯನ್ನು ದಾಟಿದಂತೆ ತೋರುತ್ತದೆ. ವ್ಯಾಸರಿಗೆ ಮುನೀಂದ್ರ, ಮಹರ್ಷಿ ಇತ್ಯಾದಿ ಪೂಜನೀಯ ಸ್ಥಾನ ನೀಡಿದ ಭಾರತೀಯರು ಆದಿಕವಿ ಎಂದು ಗುರುತಿಸುವುದರ ಮೂಲಕ ತಮ್ಮ ಸಂಸ್ಕೃತಿಯ ಸಂಸ್ಥಾಪಕ ಎಂದು ಸ್ವೀಕರಿಸಿದ್ದು ವಾಲ್ಮೀಕಿಯನ್ನು. ಆತ ನೀಡಿದ ಶ್ರೀರಾಮನನ್ನು ಆದರ್ಶಪುರುಷ ಎಂದು ಭಾರತೀಯ ಸಮಾಜ ಸ್ವೀಕರಿಸಿದರೆ, ವರ್ಜಿಲನನ್ನು ‘ಪಶ್ಚಿಮದ ಪಿತ’ ಎಂದು ಪರಿಗಣಿಸಿದ ಯೂರೋಪಿನ ಸಮಾಜವು, ಆತನ ಕಾಲದ ಸೃಷ್ಟಿಯಾದ ಈನಿಯಾಸ್‌ನನ್ನು ಆದರ್ಶ ಪುರುಷ ಎಂದು ಸ್ವೀಕರಿಸಿತು.

ಐದು ಜನ ಗಂಡಂದಿರಿಗೆ ಒಬ್ಬಳೆ ಹೆಂಡತಿ ಎಂಬ ಸಂಗತಿಯನ್ನು ಯಾವುದೇ ಕುಹಕ ಅಥವಾ ವ್ಯಂಗ್ಯದ ಲೇಪವಿಲ್ಲದೆ ಸ್ವೀಕರಿಸುವ ಹೃದಯ ಶ್ರೀಮಂತಿಕೆ ಮತ್ತು ಮುಗ್ಧತೆಗೆ ಹತ್ತಿರವಾಗುವ ಆ ಮುರ್ಜತ್ವ, ವ್ಯಾಸರ ಕಾಲಕ್ಕೆ ವಿಶಿಷ್ಟವಾದುದು. ನಿಯೋಗ ಪದ್ಧತಿ ಮೂಲಕ ಜನ್ಮಪಡೆದ ಪಾಂಡವ ಕೌರವರ ಹಿನ್ನೆಲೆಯನ್ನು ಯಾವುದೇ ಕೊಂಕು, ಅಳುಕು ಅಥವಾ ಮುಚ್ಚಮರೆಯಿಲ್ಲದೆ ಅದೇ ತರಹ ಮಹಾಭಾರತ ಯಥಾವತ್ತಾಗಿ ದಾಖಲಿಸುತ್ತದೆ. ಶ್ರೀರಾಮ, ಭರತ ಮೊದಲಾ ನಾಲ್ಕು ಜನ ಸೋದರರು ಹುಟ್ಟುದ್ದು ಸಹ ನಿಯೋಗ ಪದ್ಧತಿ ಮೂಲಕವೇ ಇರಬೇಕು! ಆದರೆ ಅದಕ್ಕೊಂದು ದೈವಿಕ ಹಿನ್ನೆಲೆ ನೀಡುವುದರ ಮುಖೇನ ಸತ್ಯಸಂಗತಿಯನ್ನು ಮರೆಮಾಚಲು ನಡೆಸಿರುವ ಪ್ರಯತ್ನಗಳನ್ನು ನೋಡಿದರೆ, ನಿಯೋಗ ಪದ್ಧತಿ ಆ ಕಾಲಕ್ಕಾಗಲೇ ರಾಜಕೀಯ ಮತ್ತು ಸಾಮಾಜಿಕ ಮಾನ್ಯತೆ ಕಳೆದುಕೊಂಡಿದ್ದಂತೆ ಕಾಣಿಸುತ್ತದೆ.[2] ಸೀತೆಯ ಹುಟ್ಟಿನ ಬಗ್ಗೆ ಇರುವ ಅನೇಕ ತರಹದ ಕತೆಗಳು, ಆಕೆ ಕೂಡ ನಿಯೋಗ ಪದ್ಧತಿ ಮೂಲಕವೇ ಜನ್ಮ ಪಡೆದಿರಬಹುದಾದ ಸಾಧ್ಯತೆ ಕುರಿತ ಅನುಮಾನಗಳನ್ನು ಮತ್ತಷ್ಟು ಬಲಪಡಿಸುತ್ತವೆ.

ಹೆಲೆನ್‌, ದ್ರೌಪದಿ ಮತ್ತು ಸೀತೆಯ ವ್ಯಕ್ತಿತ್ವ ಮತ್ತು ಪಾತ್ರಗಳ ಕಡೆಗೆ ಗಮನಹರಿಸುವ ಮೂಲಕ ಅವರು ಬಂದ ಕಾಲ, ಸಮಾಜ ಮತ್ತು ಜನರ ನಡವಳಿಕೆಯನ್ನು ಗ್ರಹಿಸುವುದು ಅತ್ಯುತ್ತಮ ವಿಧಾನ. ಅದರಲ್ಲೂ ಹೆಲೆನಳ ವ್ಯಕ್ತಿತ್ವ ಮೇಲುನೋಟಕ್ಕೆ ಅತ್ಯಂತ ಸರಳ ಎಂಬಂತೆ ಕಂಡುಬಂದರೂ, ವಿಧಿ ಅಥವಾ ಕಾಲಕ್ಕೆ ಸಂವಾದಿಯಾಗಿಬಿಡುವ ಕಾರಣ ಪಡೆದುಕೊಳ್ಳುವ ಸಂಕೀರ್ಣತೆ ಇಂದಿಗೂ ವಿಧಿ ಅಥವಾ ಕಾಲದಷ್ಟೆ ನಿಗೂಢವಾಗಿ ಉಳಿದಿದೆ. ಸೀತೆಯ ತರಹವೇ ಅತ್ಯಂತ ಕುಲೀನ ಮನೆತನಕ್ಕೆ ಸೇರಿದವಳಾದ ಹೆಲೆನ್‌ ಮನೆ, ಮಗ ಮತ್ತು ಗಂಡನನ್ನು ಬಿಟ್ಟು ಹೋಗಿ ಮತ್ತೊಬ್ಬನ ಜತೆ ನೆಮ್ಮದಿಯಿಂದ ಸಂಸಾರ ಮಾಡಿಕೊಂಡು ಸುಖವಾಗಿದ್ದವಳು. ಆ ಹೆಲೆನ್‌ ಎಂಥವಳು ಎಂದರೆ Land of fair womenನಿಂದ ಬಂದವಳು. Helen with the light robes and shining among women ಮತ್ತು Helen, daughter descended of Zeus ಮತ್ತು Terrible is the likeness of face to immortal goddesses. ದೇವರ ಮಗಳಾದ, ದೇವತೆಯಂತಿದ್ದ, ಹೆಂಗಳೆಯರ ನಡುವೆ ಹೊಳೆಯುತ್ತಿದ್ದ ಮತ್ತು ಸುಂದರಿಯರ ನಾಡಿನಿಂದ ಬಂದ ಅವಳಿಗಾಗಿ ಸರ್ವಸ್ವವನ್ನೂ ತ್ಯಾಗಮಾಡಲು ಮತ್ತು ಕಳೆದುಕೊಳ್ಳಲು ಎರಡೂ ಕಡೆಯವರು ಸಿದ್ಧರಿರುತ್ತಾರೆ. ಆದರೆ ತನಗಾಗಿ ನಡೆಯುತ್ತಿರುವ ಯುದ್ಧ ಪಡೆದುಕೊಳ್ಳುತ್ತಿರುವ ತೆರುವು ಕಂಡು, ಒಂದು ತರಹದ ಜುಗುಪ್ಸೆಗೆ ಹತ್ತಿರವಾದ ಭಾವನೆಗಳನ್ನು ಬೆಳೆಸಿಕೊಂಡು ಹೆಲೆನ್‌, ತನ್ನನ್ನು ತಾನು ‘ಕೊಳಕಿ’ – Slut that I am – ಎಂದು ಕರೆದುಕೊಳ್ಳುವ ಮಟ್ಟಕ್ಕೆ ಹೋಗುತ್ತಾಳೆ. ಅದು ಹೊರತು, “ಹೌದೇ? ಆ ತರಹ ಆಯಿತೇ?” ಎಂದು ತನಗೆ ತಾನೇ ಆಶ್ಚರ್ಯಪಟ್ಟುಕೊಳ್ಳುವ ಮಟ್ಟಕ್ಕೆ ನಗ್ಧತೆ ಉಳಿಸಿಕೊಂಡ ಹೆಣ್ಣುಮಗಳು: ಆ ಸ್ವಭಾವದ ಕಾರಣವೇ ಟ್ರಾಯ್‌ ಪತನಾನಂತರ ಮರಳಿ ಗ್ರೀಸ್‌ಗೆ ಹೋಗುವ ಆಕೆ, ತನ್ನ ಮೊದಲ ಗಂಡ ಮೆನಲೊಸ್‌ ಜತೆ ಎಂದಿನಂತೆ ಸಂಸಾರ ಮಾಡಿಕೊಂಡಿರುವ ಚಿತ್ರಣ ‘ಒಡಿಸ್ಸಿ’ಯಲ್ಲಿ ದೊರಕುತ್ತದೆ.

ಮೊದಲ ಪತಿ ಮೆನಲೊಸ್‌ನನ್ನು ಬಿಟ್ಟು ಎರಡನೇ ಗಂಡ ಅಲೆಗ್ಸಾಂದ್ರೊಸ್‌ ಜತೆ ಸಂಸಾರ ಮಾಡಿಕೊಂಡಿರುವಾಗ ಪ್ರಕಟಿಸುವ ಮುಗ್ಧತೆ, ಟ್ರಾಯ್‌ ನಿರ್ನಾಮವಾದನಂತರ ಮರಳಿಹೋಗಿ ಅದೇ ಮೊದಲನೆ ಗಂಡನ ಜತೆ ಸಂಸಾರ ಮಾಡಿಕೊಂಡಿರುವಾಗ ಪ್ರಕಟಿಸುವ ದಿವ್ಯ ನಿರ್ಲಿಪ್ತತೆ, ವಿಧಿ ಅಥವಾ ಕಾಲನಿಗೆ ಪ್ರತೀಕವಾಗಿಬಿಡುತ್ತದೆ. ಪ್ರೇಮದೇವತೆ ಅಪ್ರೋದಿತೆ ಕಾರಣ ಆ ತರಹ ನಡೆಯಿತು ಎಂಬ ಹೆಲೆನ್‌:

…………………………………………and I repented
the mad day Aphrodite
drew me away from my dear fatherland,
forsaking all – child, bridal bed, and husband
– a man without defect in from or mind.
ಪುಟ ೭

ಮಧ್ಯೆ ಮಧ್ಯೆ ಆಕೆ ಪ್ರಕಟಿಸುವ ಅಸಹನೆಗಳು ಬಹಳ ಮುಖ್ಯವಾಗಿ ಕಾಣುವುದಿಲ್ಲ.

ಹೆಲೆನ್‌ ಏಕೆ ಓಡಿಹೋದಳು? ಆ ತರಹ ಏಕಾಯಿತು? ಪಲಾಯನ ಮಾಡಲು ಕಾರಣವಾದ ಅಂಶಗಳಾದರೂ ಏನಿರಬಹುದು? ಎಂಬ ಪ್ರಶ್ನೆಗಳನ್ನು ಕೇಳಬಹುದಾದಂತೆಯೇ; ಟ್ರಾಯ್‌ ಪತನ ಏಕಾಯಿತು? ದುರಂತಕ್ಕೆ ಆಕೆಯೂ ಕಾರಣವಲ್ಲವೇ? ಅದರಿಂದ ವಿಧಿ ಅಥವಾ ಕಾಲನಿಗೆ ಬಂದ ಪ್ರಯೋಜನವಾದರೂ ಯಾವುದು? ಟ್ರೋಜನ್ನರ ಪತನದಿಂದ ಹೆಲೆನ್‌ಗಾದ ಲಾಭವೇನು? ಎಂದು ಸಹ ಕೇಳಬಹುದಾಗಿದೆ. ಅವೆರಡೂ ಬೇರೆ ಬೇರೆಯಲ್ಲ; ವಿಧಿ ಅಥವಾ ಕಾಲ ಅಥವಾ ಹೆಲೆನ್‌ ಹೂಡಿದ ಆಟ ಅಥವಾ ತಂತ್ರವೇ? ಆ ಪ್ರಶ್ನೆಗಳಿಗೆ ದೊರಕುವ ಉತ್ತರ ಮಾತ್ರ ಒಂದೇ ಆಗಿರುವುದು ಕಷ್ಟಸಾಧ್ಯ. ಟ್ರಾಯ್‌ ನಿರ್ನಾಮ ಅನಿವಾರ್ಯವಾಗಿತ್ತೆ? ಸರ್ವನಾಶ, ಐತಿಹಾಸಿಕ ಪ್ರಕ್ರಿಯೆಯ ಒಂದು ಭಾಗವೇ? ಎಂಬ ಪ್ರಶ್ನೆಗಳೂ ಅಲ್ಲಿ ಸೇರಿ ಹೋಗುತ್ತವೆ.

ಅಖೈಯನ್ನರು ಮತ್ತು ಟ್ರೋಜನ್ನರಿಗಾಗಲಿ ಹೆಲೆನ್‌ ಶೀಲದ ಪ್ರಶ್ನೆ ಮುಖ್ಯವಾಗುವುದಿಲ್ಲ. ಮೆನಲೊಸನ ಪತ್ನಿ ಎಂಬ ವಿಚಾರ ಗೊತ್ತಿದ್ದೂ ಅಲೆಗ್ಸಾಂದ್ರೊಸ್‌ ಅವಳನ್ನು ತನ್ನ ಜತೆ ಕರೆದುಕೊಂಡು ಪಲಾಯನ ಮಾಡಿದರೆ, ತನ್ನನ್ನು ಬಿಟ್ಟು ಓಡಿಹೋಗಿದ್ದ ಆಕೆ ಪ್ಯಾರಿಸ್‌ ಜತೆ ಅದೇ ಪ್ರೀತಿಯಿಂದ ಸಂಸಾರ ಮಾಡಿಕೊಂಡಿದ್ದಳು ಎಂಬುದು ಗೊತ್ತಿದ್ದು ಮೆನಲೊಸ್‌ ಮರಳಿ ಸ್ವೀಕರಿಸುತ್ತಾನೆ. ಮಾತ್ರವಲ್ಲ, ಯಾವುದೆ ತಗಾದೆ ಇಲ್ಲದೆ ಎಂದಿನಂತೆ ಅವಳ ಜತೆ ಸುಖದಿಂದ ಸಂಸಾರ ನಡೆಸುತ್ತಾನೆ. ಅಂದರೆ ಅವರಾರಿಗೂ ಹೆಲೆನಳ ಶೀಲ ಅಥವಾ ಚಾರಿತ್ರ್ಯ ಮುಖ್ಯವಾಗಿ ಕಾಣುವುದಿಲ್ಲ. ತನ್ನ ತಂದೆ ಶಂತನು ನಿಧನಾನಂತರ ಚಿತ್ರಾಂಗದ ಮತ್ತು ವಿಚಿತ್ರವೀರ್ಯರು ಎಳೆಯ ಹರಯದಲ್ಲಿ ಅಕಾಲ ಮರಣಕ್ಕೆ ತುತ್ತಾದಾಗ ನಿಯೋಗ ಪದ್ಧತಿಯ ಮೂಲಕ ಮಕ್ಕಳನ್ನು ಪಡೆಯುವ ಸಲಹೆ ಬಂದಾಗ ಭೀಷ್ಮನಿಗೆ ಸತ್ಯವತಿಯು, ಪರಾಶರ ಮುನಿಯ ಜತೆ – ಶಂತನು ಚಕ್ರವರ್ತಿಯನ್ನು ಮದುವೆಯಾಗುವುದಕ್ಕೆ ಮೊದಲು ನಡೆದುಹೋದ ಸಂಸರ್ಗ ವಿವರ ನೀಡುವಾಗ ವ್ಯಕ್ತವಾಗುವ ಮನಃಸ್ಥಿತಿ ಹೆಲೆನಳ ಮನಃಸ್ಥಿತಿಗಿಂತ ಬಹಳ ಭಿನ್ನವಾಗಿರುವಂತೆಯೂ ತೋರುವುದಿಲ್ಲ:

……………ಸತ್ಯವತಿಯು ಭೀಷ್ಮನ ಈ ಮಾತಿಗೆ ಸಂಗತವಾಗುವಂತೆ ನಗುವನ್ನು ತೋರ್ಪಡಿಸುತ್ತ, ನಾಚಿಕೆಪಡುತ್ತ, “ನೀನು ಹೇಳುವುದು ಸರಿ; ನಿನ್ನಲ್ಲಿ ಭರವಸೆಯಿಟ್ಟು ಒಂದು ಸಂಗತಿಯನ್ನು ತಿಳಿಸುತ್ತೇನೆ; ಅದನ್ನು ತಿಳಿಸದಿರುವುದು ಸಾಧ್ಯವಿಲ್ಲ; ಈಗ ಒದಗಿರುವ ಆಪತ್ತು ಅಂಥದು; ನಮ್ಮ ಮನೆಯಲ್ಲಿ ಧರ್ಮ, ಸತ್ಯ, ದಿಕ್ಕು ಎಲ್ಲಾ ನಿನ್ನಿಂದಲೇಯೆ; ಆದ್ದರಿಂದ ಇದನ್ನು ಕೇಳಿ ಆಮೇಲೆ ಮಾಡಬೇಕಾದದ್ದನ್ನು ಮಾಡು: – ನಮ್ಮ ತಂದೆ ಧರ್ಮಾರ್ಥವಾಗಿ ನಡಸಲು ಒಂದು ದೋಣಿಯನ್ನು ಇಟ್ಟುಕೊಂಡಿದ್ದನು. ನಾನು ಪ್ರಾಯಕ್ಕೆ ಬಂದ ಹೊಸದು ; ಆಗ ಒಂದು ದಿನ ಪರಾಶರ ಋಷಿಯು ಯಮುನಾ ನದಿಯನ್ನು ದಾಟಬೇಕಾಯಿತು. ನಾನು ಆತನನ್ನು ಹಾಯಿಸುತ್ತಿದ್ದಾಗ ಆತನು ನನ್ನನ್ನು ನೋಡಿ ಕಾಮಾರ್ತನಾಗಿ ಸವಿಮಾತುಗಳಿಂದ ಅನುನಯಗೊಳಿಸಿದನು. ನನಗೆ ಒಂದು ಕಡೆ ಶಾಪದ ಹೆದರಿಕೆ; ಇನ್ನೊಂದು ಕಡೆ ತಂದೆಯ ಹೆದರಿಕೆ; ಮತ್ತೊಂದು ಕಡೆ ಅವನು ಆಸೆತೋರಿಸಿದ ವರಗಳ ಮೇಲೆ ಮನಸ್ಸು; ಹೀಗಿರಲು ಇನ್ನೂ ಹುಡುಗಿಯಾದ ನನ್ನನ್ನು ಆತನು ತನ್ನ ತೇಜಸ್ಸಿನಿಂದ ವಶಪಡಿಸಿಕೊಂಡನು. ನನ್ನಲ್ಲಿ ಹಿಂದೆ ಇದ್ದ ಮೀಮಿಮ ದುರ್ನಾತವು ಹೋಗಿ. ಈ ಸುಗಂಧ ಬಂದದ್ದು ಆತನಿಂದಲೇಯೇ. ಆಗ ಹುಟ್ಟಿದವನೇ ಕೃಷ್ಣದ್ವೈಪಾಯನ ವ್ಯಾಸ – ವೇದಗಳನ್ನು ವಿಂಗಡಿಸಿದವನು. ಅವನು ಸತ್ಯವಂತ, ಶಾಂತ, ತಪಸ್ವಿ, ಪಾಪರಹಿತ…………[3] ವಚನಭಾರತ, ಪುಟ ೭

ಅದೆ ತರಹದ ಭಾವನೆಗಳು ಸ್ವಲ್ಪ ಭಿನ್ನ ರೀತಿಯಲ್ಲಿ ದ್ರೌಪದಿಯ ಸಂದರ್ಭದಲ್ಲಿ ವ್ಯಕ್ತವಾಗುವುದನ್ನು ಕಾಣಬಹುದಾಗಿದೆ. ಅಂದರೆ ಹೆಲೆನ್‌ ಮತ್ತು ದ್ರೌಪದಿ ಕಡೆಯಿಂದ ನೋಡುವುದಾದಲ್ಲಿ ಕೂಡ ಮೂಲ ‘ಮಹಾಭಾರತ’ ಕಾಲದ ಗಂಡಸರು ‘ಇಲಿಯಡ್‌’ ಕಾಲದ ಗಂಡಸರಿಗಿಂತ ಹೆಚ್ಚು ಒರಟರು, ಮತ್ತು ತೆರೆದ ಸ್ವಭಾವದವರಾಗಿ ಕಾಣಿಸಿದರೆ ಆಶ್ಚರ್ಯವಿಲ್ಲ. ಅವೆರಡು ಸಂಸ್ಕೃತಿ ವಿಹೀನ ಅಥವ ಅ – ನಾಗರಿಕ ಎಂಬುದು ಆ ಮಾತಿನ ಅರ್ಥವಲ್ಲ. ನಂತರ ಕಾಲದ್ದಾದ ಆ ಎಲ್ಲ ಗ್ರಹಿಕೆ ಮತ್ತು ವಿಂಗಡಣೆಗಳನ್ನು ಮೀರಿದ ಹಾಗೂ ಅವುಗಳಿಗೆ ಪೂರ್ವದ್ಧಾದ ಸಹಜ ಸಮಾಜದ ಜನ ಎಂದಾಗಬಹುದು.

ಗಚ್ಛ ತ್ವಂ ಕಿತವಂ ಗತ್ವಾ ಸಭಾಯಾಂ ಪೃಚ್ಛ ಸೂತಜ |
ಕಿಂ ನು ಪೂರ್ವಂ ಪರಾಜೈಷೀರಾತ್ಮಾನಂ ಮಾಂನು ಭಾರತ ||೭||
ಸಭಾಪರ್ವ, ಅಧ್ಯಾಯ ೬೭

“ಪಗಡೆಯಾಟದಲ್ಲಿ ತನ್ನ ತಮ್ಮಂದಿರು, ಸರ್ವಸ್ವ ಮತ್ತು ತನ್ನನ್ನು ತಾನು ಪಣವಾಗಿಟ್ಟು ಸೋತ ನಂತರ ನನ್ನನ್ನು ಪಣವಾಗಿ ಒಡ್ಡಿ ಧರ್ಮರಾಯ ಸೋಲು ಕಂಡನೇ?”:

ಎಂಬುದಾಗಿ ದ್ರೌಪದಿ ತನ್ನನ್ನು ಕೌರವರ ಆಸ್ಥಾನಕ್ಕೆ ಕರೆಯಲು ಬಂದ ದೂತನಿಗೆ ಕೇಳುವ ಮೊದಲ ಪ್ರಶ್ನೆ; ಆ ದೂತನಿಗೆ ಉತ್ತರ ನೀಡದೆ ಮೌನವಾಗಿ ತಲೆತಗ್ಗಿಸಿ ಕುಳಿತ ಧರ್ಮರಾಯನ ಪರಿಸ್ಥಿತಿ:

ಯುಧಿಷ್ಠಿರಸ್ತು ನಿಶ್ಚೇಷ್ಟೋ ಗತಸತ್ವ ಇವಾಭವತ್‌
ನ ತಂ ಸೂತಂ ಪ್ರತ್ಯುವಾಚ ವಚನಂ ಸಾಧ್ವಸಾಧು ವಾ ||೯|| ಅದೇ ಅಧ್ಯಾಯ

ಪ್ರತಿಭೆ ಸೋಲುವ ಅಂತಹ ಸನ್ನಿವೇಶಗಳನ್ನು ಅವರವರ ಭಾವನೆ ಮತ್ತು ಸಿದ್ಧತೆಗೆ ಅನುಗುಣ ಕಲ್ಪಿಸಿಕೊಳ್ಳಲು ಮಾತ್ರ ಸಾಧ್ಯ. ದ್ರೌಪದಿಯ ಮನಃಸ್ಥಿತಿ ಎಂತಹದ್ದಿರಬಹುದು? ಬಹಿಷ್ಠೆಯಾಗಿರುವ ಕಾರಣ ಏಕವಸ್ತ್ರಧಾರಿಯಾಗಿರುವೆ ಎಂಬುದಾಗಿ ಮಾತ್ರ ತನ್ನ ಪರಿಸ್ಥಿತಿಯನ್ನು ವಿವರಿಸುತ್ತಾಳೆ. ಅವಳ ಬಾಯಿಂದ ಹೊರಬರುವುದು ಏಕಾಮ್ಬರ ಮತ್ತು ರಜಸ್ವಲಾ ಎಂಬ ಮಾತುಗಳು; ಸುಶೀಲೆಯಾದ ಯಾವ ಹೆಣ್ಣು ಮಗಳು ಆಡಲು ಹಿಂಜರಿಯುವ ಮಾತುಗಳನ್ನು ದ್ರೌಪದಿ ಗಂಡಸರ ಎದುರು ನುಡಿಯಬೇಕಾದ ರೀತಿಯಲ್ಲಿ ಸನ್ನಿವೇಶದ ನಿರ್ಮಾಣವಾಗುತ್ತದೆ.

ಯಾವ ಗಂಡಸು ಪ್ರವೇಶಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಸದ್ಯದಲ್ಲಿ ನಾನಿದ್ದೇನೆ ಎಂಬುದನ್ನು ಮತ್ತಾವ ರೀತಿಯಲ್ಲಿ ಆಕೆ ಮನದಟ್ಟು ಮಾಡಿಕೊಡಲು ಸಾಧ್ಯ? ಆದರೂ ದುಶ್ಯಾಸನ ಆಕೆಯ ಸೀರೆಗೆ ಕೈಹಾಕಿ ಎಳೆಯುವ ಸಂದರ್ಭದಲ್ಲಿನ ಮಾತುಗಳು ಅವರ ಮನೋಧರ್ಮ, ಒರಟುತನ ಮತ್ತು ರೂಕ್ಷ ಸ್ವಭಾವದ ಪ್ರತೀಕ:

ರಜಸ್ವಲಾ ವಾ ಭವ ಯಾಜ್ಞಸೇನಿ
ಏಕಾಮ್ಬರಾ ವಾಪ್ಯಥ ವಾ ವಿವಸ್ತ್ರಾ |
ದ್ಯೂತೇ ಜಿತಾ ಚಾಸಿ ಕೃತಾಸಿ ದಾಸೀ
ದಾಸೀಷು ಕಾಮಶ್ಚ ಯಥೋಪಜೋಷಮ್‌ ||೨೭ ||
ಅದೇ ಅಧ್ಯಾಯ

“ರಜಸ್ವಲೆಯಾಗಿರು ಏಕಾಮ್ಬರೆಯಾಗಿರು ಅಥವಾ ಬೆತ್ತಲೆ ಇರು, ಪಗಡೆಯಾಟದಲ್ಲಿ ಗೆದ್ದು ಪಡೆದವಳಾದ ನೀನು ದಾಸಿಯಂತೆ ಇರಬೇಕಾಗಿದೆ. ದಾಸಿಯರು ವಸ್ತ್ರ ಧರಿಸಲೇಬೇಕು ಎಂದೇನಿಲ್ಲ” ಎಂದು ಮರುನುಡಿಯುತ್ತಾನೆ. ಮೂಲ ಮಹಾಭಾರತದ ಕಾಲದಲ್ಲಿ ದಾಸಿಯರು ವಸ್ತ್ರ ಅಂದರೆ ಮೇಲು ಹೊದಿಕೆ ಧರಿಸದೆ[4] ಇರಬಹುದಿತ್ತು. ಮತ್ತು ಅದು ಅನಾಗರಿಕತೆಯ ಲಕ್ಷಣವಾಗಿರಲಿಲ್ಲ. ಸಂಪೂರ್ಣ ಬೆತ್ತಲೆ ತಿರುಗಲು ಆಗ ಅವಕಾಶವಿತ್ತು ಎಂದು ಕಲ್ಪಿಸಿಕೊಳ್ಳುವಷ್ಟು ದೂರ ಹೋಗುವುದು ಇತಿಹಾಸಕ್ಕೆ ಹತ್ತಿರವಾದ ಸಂಗತಿಯಾಗಿರುವುದು ಸಾಧ್ಯವಿಲ್ಲ. ಮೇಲುಡುಗೆ ತೋಡದೆ ಅಥವಾ ದೇಹದ ಮೇಲ್ಭಾಗವನ್ನು ಮುಚ್ಚಿಕೊಳ್ಳದೆ ಕೆಲಸ ಮಾಡಿಕೊಂಡಿರಲು ಅವಕಾಶವಿದಿದ್ದಿರಬಹುದು. ಅಂಥ ದಾಸಿಯರಲ್ಲಿ ಒಬ್ಬಳಾಗಿ ತಮ್ಮ ಜ್ಞಾತಿ ಶತ್ರುಗಳಾದ ಪಂಚಪಾಂಡವರ ಪಟ್ಟಮಹಿಷಿಯನ್ನು ಕಾಣುವುದು ಮತ್ತು ಅವಮಾನಿಸುವುದು ಅವರ ಘನವಾದ ಉದ್ದೇಶವಾಗಿರುವಂತೆ ತೋರುತ್ತದೆ. ದ್ರೌಪದಿಯ ವಸ್ತ್ರಾಪಹರಣ ಮಾಡುವುದರ ಮೂಲಕ ಅವಳ ಶೀಲ ಅಥವಾ ಚಾರಿತ್ರ್ಯ ಅಂದರೆ ಪಾತಿವ್ರತ್ಯ ಹರಣ ಮಾಡುತ್ತಿದ್ದೇವೆ ಎಂಬ ಕಲ್ಪನೆ ಅದಕ್ಕೆ ಕೈ ಹಾಕಿದ ಕೌರವರಿಗೆ, ಮೌನವಾಗಿ ಸಮ್ಮತಿಸಿದ ಸಭಾಸದರಿಗೆ ಮತ್ತು ದ್ಯೂತದಲ್ಲಿ ಭಾಗವಹಿಸುವುದರ ಮೂಲಕ ಕಾರಣವಾದ ಸ್ವತಃ ಪಾಂಡವರಿಗೆ ಇದ್ದಂತೆ ತೋರುವುದಿಲ್ಲ. ಇದ್ದಲ್ಲಿ, ವಸ್ತ್ರಾಪಹರಣ ಕಾಲದಲ್ಲಿ ಸುಮ್ಮನಿರುವುದು ಸಾಧ್ಯವಿರಲಿಲ್ಲ ಎಂಬುದಕ್ಕಿಂತಲೂ ಹೆಚ್ಚಾಗಿ, ಧರ್ಮರಾಯ ಪಗಡೆಯಾಟದ ಕಾಲದಲ್ಲಿ ದ್ರೌಪದಿಯನ್ನು ಪಣವಾಗಿಡಲು ಮುಂದಾಗುತ್ತಿರಲಿಲ್ಲ.

ತನ್ನನ್ನು ಪಣವಾಗಿಟ್ಟು ಧರ್ಮರಾಯ ಸೋತಿದ್ದಾನೆ ಎಂದು ಗೊತ್ತಾದ ತಕ್ಷಣ ದ್ರೌಪದಿ ಪ್ರತಿಕ್ರಿಯಿಸುವ ರೀತಿಯನ್ನು ಮೂಲ ಮಹಾಭಾರತದ ಕವಿ ಈ ರೀತಿ ನಿರೂಪಿಸುತ್ತಾನೆ :

ಕಥಂ ತ್ವೇವಂ ವದಸಿ ಪ್ರಾತಿಕಾಮಿ ನ್ಕೋ ಹಿ ದಿವ್ಯೇದ್ಭಾರ್ಯಯಾ ರಾಜಪುತ್ರಃ | ಮೂಢೋ ರಾಜಾ ದ್ಯೂತಮದೇವ ಮತ್ತ ಆಹೋ ನಾನ್ಯತ್ಕೈತವಮಸೃ ಕಿಂಚತ್‌ || ೫ || ಅದೇ ಅಧ್ಯಾಯ

‘ಪ್ರಾತಿಕಾಮಿ, ಇದೇಕೆ ಹೀಗೆ ಮಾತನಾಡುತ್ತಿರುವೆ, ಯಾವ ರಾಜಪುತ್ರ ತಾನೇ ತನ್ನ ಭಾರ್ಯೆಯನ್ನು ಪಣವಾಗಿಟ್ಟು ಜೂಜಾಡಲು ಸಾಧ್ಯ! ದ್ಯೂತದ ಅಮಲಿನಲ್ಲಿರುವ ರಾಜ ಮಾತ್ರ ಹಾಗೆ ಮಾಡಬಲ್ಲ; ಪಣವಾಗಿಡಲು ಮತ್ತಾವುದು ವಸ್ತುವೂ ಸಿಗುತ್ತಿರಲಿಲ್ಲವೆ?’

ಎಂಬ ಮಾತುಗಳು ಆಕೆಯ ಬಾಯಿಂದ ಹೊರಬರುತ್ತವೆ. ಮಹಾ ಪ್ರತಿಭಾವಂತ ಕವಿ ಮಾತ್ರ ಅಂಥ ಸನ್ನಿವೇಶವನ್ನು ಅಷ್ಟು ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯ. ಧರ್ಮರಾಯ ಮಾತ್ರವಲ್ಲ ಅದರಲ್ಲಿ ಭಾಗವಹಿಸಿದ, ವೀಕ್ಷಿಸಿದ ಮತ್ತು ಸಹಿಸಿಕೊಂಡು ಸುಮ್ಮನಿದ್ದ ಅವರೆಲ್ಲರೂ ದ್ಯೂತದ ಮತ್ತಿನಲ್ಲಿ ಮುಳುಗಿದ್ದಂತೆ ತೋರುತ್ತದೆ ಎಂಬ ಧ್ವನಿ ಪರಂಪರೆಯೇ ದ್ರೌಪದಿಯ ಮಾತಿನಿಂದ ಹೊರಡುತ್ತದೆ : ಕೆಲವರು ಆಡುವ, ಕೆಲವರು ನೋಡುವ, ಮತ್ತೆ ಕೆಲವರು ಮುಂದೇನಾಗುತ್ತದೋ ಎನ್ನುವ ಕುತೂಹಲದ ಅಮಲಿನಲ್ಲಿದ್ದರು ಎಂಬುದಾಗಿ ಇಡೀ ಪುರುಷ ಸಮುದಾಯವನ್ನು ದ್ರೌಪದಿ ಹಂಗಿಸುವ ರೀತಿಯಲ್ಲಿ ಆಕೆಯ ಭಾವನೆಗಳಿಗೆ ಮೂಲ ಮಹಾಭಾರತದ ಕವಿ ಅಭಿವ್ಯಕ್ತಿ ನೀಡಿರುವುದು, ಅದೇ ಅಮಲಿನ ಪರಿಸ್ಥಿತಿ ಮುಂದೆಯೂ ಮುಂದುವರಿಯುತ್ತದೆ. ದ್ಯೂತವ್ಯಸನಿಯಾದ ಧರ್ಮರಾಯನಿಗೆ ದ್ರೌಪದಿ ಪಣವಾಗಿಡಬಹುದಾದ ವಸ್ತುವಾಗಿ ಮಾರ್ಪಾಡಾದರೆ, ಗೆದ್ದ ಕೌರವರ ಪಾಲಿಗೆ ಆಕೆ ದಾಸಿ ಮಾತ್ರ, ವಸ್ತ್ರ ಧರಿಸಲು ಅಧಿಕಾರವಿಲ್ಲದ ದಾಸಿ; ಅಂಥವಳನ್ನು ಯಾರು ಬೇಕಾದರೂ ಎಲ್ಲಿ ಬೇಕಾದರೂ ಅವಮಾನ ಮಾಡಬಹುದು ಎಂಬ ಸಾರಾಸಗಟು ಹಕ್ಕನ್ನು ಪಡೆದವರ ರೀತಿಯಲ್ಲಿ ವರ್ತಿಸುವ ಇಡೀ ಕೌರವರ ಪಾಳಯ ಅಮಲಿನಲ್ಲಿ ತೇಲುತ್ತಿರಬೇಕಾದರೆ, ಅದನ್ನು ನೋಡಬೇಕಾದ ಅಮಲಿನ ಸ್ಥಿತಿಯಲ್ಲಿ ಉಳಿದವರಿರುತ್ತಾರೆ. ಪಗಡೆಯಾಟ ಅಮಲಿನ ಸ್ಥಿತಿಯಾದರೆ, ಅದರ ಮುಂದಿನ ಬೆಳವಣಿಗೆಯಾದ ವಸ್ತ್ರಾಪಹರಣ ಕಾಲದಲ್ಲಿ ಇಡೀ ವಾತಾವರಣ ಪರವಶತೆಯ ಸ್ಥಿತಿ ತಲುಪುತ್ತದೆ. ಎಳೆಯುತ್ತಾ ಹೋದಂತೆ ದ್ರೌಪದಿಯ ಸೀರೆ ಅಕ್ಷಯವಾಗುತ್ತಾ ಹೋಯಿತು ಎಂಬುದು ಆ ಪರವಶತೆಯ ಮತ್ತೊಂದು ಘಟ್ಟ. ಗೇಬ್ರಿಯಲ್‌ ಮಾರ್ಕೆಜ್‌ ಬರುವುದಕ್ಕೆ ಎಷ್ಟೋ ಶತಮಾನಗಳ ಮೊದಲೆ ಮಾಂತ್ರಿಕ ವಾಸ್ತವತೆಯ ತಂತ್ರ[5] ಬಳಕೆ ಮಾಡಿದ ಕವಿ ವ್ಯಾಸ.

ವಸ್ತ್ರಾಪಹರಣಕ್ಕೆ ತುತ್ತಾದ ದ್ರೌಪದಿಯ ಜತೆ ಯಾವುದೇ ಸಂಕೋಚ ಅಥವಾ ಇರುಸು ಮುರುಸಿಲ್ಲದೆ ಪಾಂಡವರು ಯಥಾಪ್ರಕಾರ ಸಂಸಾರ ಮುನ್ನಡೆಸುತ್ತಾರೆ. ಹೆಲೆನ್‌ ವಿಚಾರದಲ್ಲಿ ಗ್ರೀಕರು ಮತ್ತು ಟ್ರೋಜನ್ನರು ತೋರಿಸುವ ಮನೋಭಾವಕ್ಕೂ, ದ್ರೌಪದಿಯ ಸಂದರ್ಭದಲ್ಲಿ ಪಾಂಡವ – ಕೌರವರು ಪ್ರದರ್ಶಿಸುವ ಮನಃಸ್ಥಿತಿಗೂ ಇರುವ ಹೊಂದಾಣಿಕೆಯನ್ನೂ ಗಮನಿಸದಿರಲಾಗುವುದಿಲ್ಲ. ವ್ಯತ್ಯಾಸ ಇರುವುದು ಡಿಗ್ರಿಯಲ್ಲಿ ಮಾತ್ರ. ಹೆಣ್ಣಿನ ವಿಚಾರದಲ್ಲಿ ಅವರು ತೋರುವ ನಡವಳಿಕೆ ಮತ್ತು ಮನೋಭಾವದಲ್ಲಿ ಅಂತಹ ಅಂತರವಿಲ್ಲ. ಪ್ಯಾರಿಸ್‌ ಜತೆ ಸಂಸಾರ ನಡೆಸಿದ ಹೆಲೆನ್‌ ಶೀಲ ಕಳೆದುಕೊಂಡಿದ್ದಾಳೆ ಎಂದು ಗ್ರೀಕರು ಭಾವಿಸಿದ್ದಲ್ಲಿ ಆಕೆಯನ್ನು ಮರಳಿ ಕರೆತರಲು ಯುದ್ಧ ಹೂಡಬೇಕಾದ ಅಗತ್ಯ ಬಹುತೇಕ ಎದುರಾಗುತ್ತಿರಲಿಲ್ಲ. ಸಮಸ್ತ ಸಭಾಸದರ ಎದುರು ವಸ್ತ್ರಾಪಹರಣಕ್ಕೆ ತುತ್ತಾದ ದ್ರೌಪದಿಯ ಮಾನ ಅಥವಾ ಶೀಲ ಹರಣವಾಗಿದೆ ಎಂದು ಪಾಂಡವರು ಭಾವಿಸಿದ್ದಲ್ಲಿ ದ್ರೌಪದಿ ಪರಿಸ್ಥಿತಿ ಮತ್ತಷ್ಟೂ ಚಿಂತಾಜನಕವಾಗುತ್ತಿತ್ತು. ಅಥವಾ ಎಪಿಕ್‌ ಬೇರೆ ತಿರುವನ್ನು ಪಡೆದುಕೊಳ್ಳುತ್ತಿತ್ತು.

‘ಹೌದು, ಶಕುನಿ; ರೂಪಸಂಪತ್ತೂ ಶೀಲಸಂಪತ್ತೂ ಇರುವ ದ್ರೌಪದಿಯನ್ನು ಪಣವಾಗಿ ಇಡುತ್ತೇನೆ’ ಎಂಬುದಾಗಿ ಹೇಳಿ ಧರ್ಮರಾಯ ದಾಳ ಬಿಟ್ಟುದಾಗಿ ಶಾಸ್ತ್ರಿಗಳು ಸಂಗ್ರಹಿಸುತ್ತಾರೆ. ಆ ತರಹದ ಮಾತು ಅದೂ ಧರ್ಮರಾಯನ ಬಾಯಲ್ಲಿ ಆ ಅರ್ಥದಲ್ಲಿ ಬಂದಿರುವ ಸಾಧ್ಯತೆ ಬಹಳ ಅಂದರೆ ಬಹಳ ಕಡಿಮೆ. ಮೂಲ ಮಹಾಭಾರತದಲ್ಲಿಲ್ಲದ ಆ ಮಾತುಗಳನ್ನು ಕೃಷ್ಣಶಾಸ್ತ್ರಿಗಳು ಸೇರಿಸಿದ್ದಾರೆ ಎಂದು ಅನುಮಾನಿಸುವ ಮೂಲಕ ಅವರ ಪಾಂಡಿತ್ಯ ಮತ್ತು ಪರಿಜ್ಞಾನವನ್ನು ಪ್ರಶ್ನಿಸುವ ಅಗತ್ಯವಿಲ್ಲ.

ಆ ಪಲಗೆಯುಮಂ ಸೋಲ್ತು ಮಹೀಪತಿ
ಚಲದಿಂ ಬೞಿಕ್ಕೆ
ಸೋಲ್ತಂ ಗಡಮ್‌ ಆ ದ್ರೌಪದಿಯುಮನ್‌ ! ಪುಟ ೧೯೮

ಗೆಲಿದು ಕೊಟ್ಟೆನು ಸಕಲ ಚಾತು
ರ್ಬಲವನಾ ಭಂಡಾರ ಸಹಿತ

ಗ್ಗಳೆಯರೈವರ ಕಮಲಮುಖಿಯನು ರಾಜ್ಯ ಸಿರಿಸಹಿತ

‘ಕೊನೆಗೂ ಆ ದ್ರೌಪದಿಯನ್ನು ಸೋತ’ ಎಂದು ಪಂಪ ತೆಗೆಯುವ ಉದ್ಗಾರಕ್ಕಿಂತ ಮತ್ತಾವ ವರ್ಣನೆ ಬೇಕಿದೆ? ದ್ರೌಪದಿ ಎಂದರೆ ಸಾಕು ಅಥವಾ ಮುಗಿಯಿತು; ‘ರೂಪ ಸಂಪತ್ತೂ ಮತ್ತು ಶೀಲಸಂಪತ್ತೂ’ ಇರುವ ದ್ರೌಪದಿಯನ್ನು ಪಣವಾಗಿಡುತ್ತಿರುವುದಾಗಿ ಪ್ರಕಟಿಸುವ ಅಗತ್ಯವಿದೆಯೇ? ದ್ರೌಪದಿ ಎಂದರೆ ಆ ಎಲ್ಲ ಇದ್ದವಳು ಎಂದೇ ಅರ್ಥ. ಕೇವಲ ಪ್ರಾಸಕ್ಕೋಸ್ಕರ ದ್ರೌಪದಿಯನ್ನು ಕುಮಾರವ್ಯಾಸ ಕಮಲಮುಖಿಯನ್ನಾಗಿ ಪರಿವರ್ತಿಸಿದ್ದಾನೆ. ಆ ಎಲ್ಲ ಕಾರಣ ಸುಕ್ತಂಕರ್‌ ಆವೃತ್ತಿಯಲ್ಲಿ ದೊರಕುವ ‘ರೂಪ ಸಂಪತ್ತೂ ಮತ್ತು ಶೀಲ ಸಂಪತ್ತೂ’ ಎಂಬ ಬಣ್ಣನೆ ಮೂಲ ಮಹಾಭಾರತದ್ದಾಗಿರುವ ಸಾಧ್ಯತೆ ಬಹಳ ಕಡಿಮೆ. ಅನಂತರದ ಕವಿಗಳ ಕೈಚಳಕ ಅದಾಗಿರಬಹುದು ಇದ್ದರೂ ಶೀಲ ಎಂಬ ಮಾತಿಗೆ ಮಹಾಭಾರತ ಕಾಲದಲ್ಲಿ ಇದ್ದ ಅರ್ಥವೇ ಬೇರೆ ಇದ್ದಿರಬಹುದು. ಸನ್ನಡತೆಯ ಮತ್ತು ಇತರ ಉತ್ತಮ ಗುಣಗಳಿಂದ ಕೂಡಿದವರು ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದ್ದಿರಬಹುದು.

ಮದುವೆಗೆ ಮೊದಲು ಮತ್ತು ನಂತರ ಗಂಡನನ್ನು ಹೊರತು ಮತ್ತೊಬ್ಬರನ್ನು ಕಾಯಾ ವಾಚಾ ಮನಸಾ ಪ್ರೀತಿಸಿದವಳು ಮಾತ್ರ ಆದರ್ಶ ಪತ್ನಿ – ಪತಿವ್ರತೆ ಎಂಬ ವ್ಯಾಖ್ಯಾನಕ್ಕೆ ಹೊಂದಿಕೆಯಾಗುವ ಸೀತೆಯಂಥ ಪಾತ್ರದ ಪರಿಕಲ್ಪನೆ ನೀಡಿದ ರಾಮಾಯಣ ಕಾಲದಲ್ಲೂ ಶೀಲ ಎಂಬ ಪದ ಬಳಕೆಗೆ ಬಂದ ಉದಾಹರಣೆ ಇಲ್ಲ. ಆ ತರಹದ ಅರ್ಥ ಬರುವಂತಹ ವಾತಾವರಣ ಸೃಷ್ಟಿಯಾದುದು ರಾಮಾಯಣದ ಕಾಲದಿಂದಿಚೇಗೆ. ಮಹಾಭಾರತ ಕಾಲದಲ್ಲಿ ಆ ಕಲ್ಪನೆಯೇ ಇದ್ದಂತೆ ಕಾಣುವುದಿಲ್ಲ. ಇದ್ದಲ್ಲಿ ದ್ರೌಪದಿ ಐದು ಜನ ಅಣ್ಣ ತಮ್ಮಂದಿರಿಗೂ ಒಬ್ಬಳೆ ಪತ್ನಿಯಾಗುವುದು ಸಾಧ್ಯವಿರಲಿಲ್ಲ; ಅಂತಹ ಹೊಂದಾಣಿಕೆಗೆ ಸಾಮಾಜಿಕ ಮಾನ್ಯತೆ ದೊರಕುತ್ತಿರಲಿಲ್ಲ: ಆ ಮನಃಸ್ಥಿತಿ ಧರ್ಮರಾಯನಿಗೆ ಇದ್ದುದಾದಲ್ಲಿ ಅಷ್ಟು ಸುಲಭವಾಗಿ ತನ್ನ ಪತ್ನಿಯನ್ನು ಪಣವಾಗಿಡುತ್ತಿರಲಿಲ್ಲ; ಮುಖ್ಯವಾಗಿ ಎಲ್ಲರೆದುರು ದ್ರೌಪದಿಯ ಸೀರೆ ಎಳೆಯುವ ಸಾಹಸಕ್ಕೆ ಕೌರವರು ಮುಂದಾಗುತ್ತಿರಲಿಲ್ಲ.

ಪುಷ್ಪವತಿಯಾ
ಗಲ್ಲಿಫಲವತಿಯಾಗು ನಡೆ ಕುರುರಾಯ ಭವನದಲಿ

ಎಂಬ ಮಾತನ್ನು ವಸ್ತ್ರಾಪಹರಣ ಮಾಡಲು ಬಂದ ದುಶ್ಯಾಸನನ ಬಾಯಲ್ಲಿ ಹಾಕುವುದರ ಮೂಲಕ ದ್ರೌಪದಿಯ ಸ್ಥಿತಿಯನ್ನು ವರ್ಣಿಸುವ ಕುಮಾರವ್ಯಾಸ, ಹೆಣ್ಣಿನ ಶೀಲ ಕುರಿತಂತೆ ಆ ಕಾಲದ ಜನರಿಗಿದ್ದ ಕಲ್ಪನೆಯನ್ನು ಗ್ರಹಿಸಲು ಪ್ರಯತ್ನಿಸುತ್ತಾನೆ. ಅವರೆಲ್ಲರೂ ಅದಕ್ಕೆ ಮಾನಸಿಕವಾಗಿ ಸಜ್ಜಾಗಿದ್ದರು ಎಂಬ ಸೂಚನೆಯನ್ನು ರಜಸ್ವಲಾ ಮತ್ತು ಏಕಾಮ್ಬರಾ ಎಂಬ ಪದ ಬಳಸುವುದರ ಮೂಲಕ ಮೂಲ ಮಹಾಭಾರತದ ದ್ರೌಪದಿಯೆ ನೀಡುತ್ತಾಳೆ. ರಜಸ್ವಲೆ ಎಂಬ ಪದಕ್ಕೆ ಬದಲಾಗಿ ಪುಷ್ಪವತಿ ಎಂಬ ಪದ ಬಳಸುವ ಕುಮಾರವ್ಯಾಸನ ದುಶ್ಯಾಸನ ಅದರ ಮುಂದಿನ ಹೆಜ್ಜೆಯಾಗಿ ‘ಫಲವತಿಯಾಗು’ ಎಂದು ನುಡಿಯುವುದು, ಅವನ ಮತ್ತು ಅವನ ಸಹೋದರರ ರೂಕ್ಷ ನಡವಳಿಕೆಗೆ ಅನುಗುಣವಾಗಿಯೆ ಇದೆ. ಆದರೂ ಆ ಒರಟುತನ ಪ್ರದರ್ಶನದಲ್ಲಿ ಮೂಲ ಮಹಾಭಾರತ ಬಂದ ಎಷ್ಟೋ ಶತಮಾನಗಳ ನಂತರ ಬಂದ ಕುಮಾರವ್ಯಾಸನ ದುಶ್ಯಾಸನ, ಹಲವಾರು ಶತಮಾನ ಹಿಂದಕ್ಕೆ ಹೋಗುತ್ತಾನೆ. ಮೂಲ ಮಹಾಭಾರತದ ದುಶ್ಯಾಸನಿಗಿಂತ ಕುಮಾರವ್ಯಾಸನ ದುಶ್ಯಾಸನ ಶತ ಒರಟ. ತನ್ನ ಹಾಗೂ ತನ್ನ ಸಹೋದರರ ಬಯಕೆ ಏನು ಎಂಬುದನ್ನು ಆತ ಕೇವಲ ಬಾಯಲ್ಲಿ ಆಡಿ ತೋರಿಸಿದರೆ, ಅದನ್ನು ಮಾಡಿ ತೋರಿಸಿದ ರೀತಿಯಲ್ಲಿ ಪಂಪಭಾರತದಲ್ಲಿ ಸನ್ನಿವೇಶ ನಿರ್ಮಾಣವಾಗುತ್ತದೆ:

ಅವಂದಿರಾಗಳೆ ಬೀಡಿಂಗೆ ವಂದು – “ರಜಸ್ವಲೆಯಾಗಿರ್ದೆಂ ಮುಟ್ಟಲಾಗದೆ”ನೆಯುಮ್‌, ಒತ್ತಂಬದಿಂದೆ ಒಳಗಂ ಪೊಕ್ಕು ಕಣ್ಜದಿಡು ನುಡಿದು, ಮುಡಿಯಂ ಪಿಡಿದು, ತನ್ಮಧ್ಯದಿಂ ಸುಯೋಧನನ ಸಭಾಮಧ್ಯಕ್ಕೆ ತಂದು: – [6]

ಯಾವುದು ಮೂಲ ಮಹಾಭಾರತದಲ್ಲಿ ಸೂಚ್ಯವಾಗಿ ಬರುತ್ತದೆಯೋ ಅದನ್ನು ಕುಮಾರವ್ಯಾಸ ಮತ್ತು ಪಂಪ ಇನ್ನೂ ವಾಚ್ಯ ಮಾಡುತ್ತಾರೆ. ‘ಪುಷ್ಪವತಿಯಾಗು ಫಲವತಿಯಾಗು’ ಎಂದು ಆಡಿ ತೋರಿಸುವುದರ ಮೂಲಕ ಕುಮಾರವ್ಯಾಸ ತನ್ನ ಒರಟುತನ ಮತ್ತು ರೂಕ್ಷ ಸ್ವಭಾವವನ್ನು ಬಯಲು ಮಾಡಿಕೊಂಡರೆ, ರತಿಕ್ರಿಯೆಯ ಚಿತ್ರಣ ಪ್ರತ್ಯಕ್ಷ ಕಣ್ಮುಂದೆ ನಿಲ್ಲುವ ರೀತಿಯಲ್ಲಿ ಪಂಪನ ಸನ್ನಿವೇಶ ನಿರ್ಮಾಣದ ವೈಖರಿ ಸಾಗುತ್ತದೆ: ‘ಒತ್ತಂಬದಿಂದೆ ಒಳಗಂ ಪೊಕ್ಕು ಕಣ್ಜಡಿದು ನುಡಿದು ಮುಡಿಯಂ ಪಿಡಿದು’, ಅದರಲ್ಲೂ ‘ತನ್ಮಧ್ಯದಿಂದ’ ಎಂಬ ಪದಬಳಕೆ ಯಾವ ರೀತಿಯಲ್ಲಿದೆ ಎಂದರೆ, ಅದನ್ನು ಹೇಗೆ ಬೇಕಾದರೂ ಅರ್ಥೈಸಬಹುದಾಗಿದೆ.

ವಸ್ತ್ರಾಪಹರಣ ಮಾಡಿ ದ್ರೌಪದಿಯನ್ನು ಅವಮಾನಿಸುವ ಮಟ್ಟಕ್ಕೆ ಕೌರವರು ಹೋದುದಾದರೂ ಏಕೆ? ಪಾಂಡವರ ಮೇಲಿನ ದ್ವೇಷ ಮತ್ತು ಸೇಡು ತೀರಿಸಿಕೊಳ್ಳುವುದು ಅವರ ಉದ್ದೇಶವೆ? ಹೆಲೆನ್‌ ಪಡುತ್ತಿರುವ ‘ಬವಣೆಗಳಿಗೆ’ ಪ್ರತಿಯಾಗಿ “ಟ್ರೋಜನ್ನರ ಹೆಂಡತಿಯರ ಜತೆ ಮಲಗುವುದಕ್ಕೆ ಮೊದಲು ಯಾರೂ ಮನೆಗೆ ಹಿಂತಿರುಗಬಾರದು” ಎಂಬುದಾಗಿ ನಾಯಕರು ಯುದ್ಧದಲ್ಲಿ ಭಾಗವಹಿಸಿದ ಎಲ್ಲ ಗ್ರೀಕರಿಗೆ ನೀಡುವ ಕರೆ:

Therefore let no man be urgent to take the way homeward until after he has lain in bed with the wife of a Trojan to avenge Helen’s longing to escape and her lamentations. ಪುಟ ೮೫

ಪುಷ್ಪವತಿ, ಫಲವತಿ ಎಂಬ ದುಶ್ಯಾಸನನ ಮಾತುಗಳನ್ನು ಪ್ರತಿಫಲಿಸುವುದರ ಜತೆಗೆ, ಪಾಂಡವರ ಕುರಿತಂತೆ ಕೌರವರಿಗೆ ಮತ್ತು ಟ್ರೋಜನ್ನರನ್ನು ಕುರಿತಂತೆ ಅಖೈಯನ್ನರಿಗಿದ್ದ ಅಸಹನೆ, ದ್ವೇಷ ಮತ್ತು ಸೇಡಿನ ಪ್ರಮಾಣವನ್ನು ಸೂಚಿಸುತ್ತದೆ. ಅದರ ಫಲವೇ ದ್ರೌಪದಿಯ ವಸ್ತ್ರಾಪಹರಣ, ಶೀಲ, ಚಾರಿತ್ರ ಇತ್ಯಾದಿಗಳಿಗೂ ಮೀರಿದ ಈರ್ಷ್ಯ, ದ್ವೇಷ, ಅಸೂಯೆ ಮತ್ತು ತಮಗಾಗದವರನ್ನು ನಿರ್ನಾಮ ಮಾಡುವ ಪ್ರವೃತ್ತಿ ಕೌರವರಿಗೆ ಮುಖ್ಯವಾದಂತೆ, ಹೆಲೆನ್ ಸ್ವೀಕರಿಸಿದ ಟ್ರೋಜನ್ನರನ್ನು ನಿರ್ನಾಮ ಮಾಡುವುದೇ ಗ್ರೀಕರಿಗೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಅಲ್ಲಿ ಪ್ರಾಧಾನ್ಯ ದೊರಕುವುದು ದ್ವೇಷಾಸೂಯೆಗಳಿಗೆ. ಉಳಿದವು ಅನುಬಂಧಿ ಹೆಣ್ಣನ್ನು ಅವಮಾನಿಸುವುದು ಆ ಸೇಡಿನ ಒಂದು ಭಾಗ.

 

[1]ಸ್ವಾಭಾವಿಕ ಮತ್ತು ಅಪ್ಪಟ ಎಪಿಕ್‌ ಎಂಬ ಹೆಸರಿನಿಂದಲೂ ಹೋಮರನ ಕೃತಿಗಳನ್ನು ಕರೆಯಲಾಗುವಂತೆಯೇ, ವರ್ಜಿಲ್‌ ಕೃತಿಯನ್ನು ಕಲಾ ಎಪಿಕ್‌ ಎಂದೂ ಕರೆಯುವುದು ಉಂಟು.

[2]ಶ್ರೀರಾಮ ಮತ್ತು ಸೋದರರ ಜನ್ಮದ ವಿವರ ನೀಡುವ ಪಾಯಸದ ಕತೆ ಬರುವುದು ಮೂಲ ರಾಮಾಯಣದ ಭಾಗವಲ್ಲದ ಬಾಲಕಾಂಡದಲ್ಲಿ; ಭಾರತದ ಜನರ ಮನೋಧರ್ಮ ಮತ್ತು ಮನೋಭಾವವನ್ನು ಆ ಭಾಗ ಸೂಚಿಸುವುದರಿಂದ ಇಲ್ಲಿ ಪರಿಗಣನೆಗೆ ತಂದುಕೊಳ್ಳಲಾಗಿದೆ.

[3]ಸುಕ್ತಂಕರ್‌ ಆವೃತ್ತಿಯಲ್ಲಿ ನಿರೂಪಣೆ ಈರೀತಿ ಇದೆ:

ತಸ್ಮನ್ನಿಶಮ್ಯ ವಾಕ್ಯಂ ಮೇ ಕುರುಷ್ವ ಯದನಂತರಮ್‌
ಧರ್ಮಯುಕ್ತಸ್ಯ ಧರ್ಮಾತ್ಮನ್‌ ಪಿತುರಾಸೀತ್ತರೀ ಮಮ
ಸಾ ಕದಾಚಿದಹಂ ತತ್ರ ಗತಾ ಪ್ರಥಮಯೌವನೇ ||೬||

ಅಥ ಧರ್ಮಭೃತಾಂ ಶ್ರೇಷ್ಠ ಪರಮರ್ಷಿಃ ಪರಾಶರಃ
ಆಜಗಾಮ ತರೀ ಧೀಮಾಂಸ್ತರಿಷ್ಯನ್ಯಮುನಾಂ ನದೀಮ್‌ ||೭||

ಸ ತಾರ್ಯಮಾಣೋ ಯಮುನಾಂ ಮಾಮುಪೇತ್ಯಾಬ್ರವೀತ್ತದಾ
ಸಾಂತ್ವಪೂರ್ವಂ ಮುನಿಶ್ರೇಷ್ಠಃ ಕಾಮಾರ್ತೋ ಮಧುರಂ ಬಹು ||೮||

ತಮಹಂ ಶಾಪಭೀತಾ ಚ ಪಿತುರ್ಭೀತಾ ಚ ಭಾರತ
ವರೈರಸುಭೈರುಕ್ತಾ ನ ಪ್ರತ್ಯಾಖ್ಯಾತುಮುತ್ಸಹೇ ||೯||

ಅಭಿಭೂಯ ಸಮಾಂ ಬಾಲಾಂ ತೇಜಸಾ ವಶಮಾನಯತ್‌
ತಮಸಾ ಲೋಕಮಾವೃತ್ಯ ನಾಗತಾಮೇವ ಭಾರತ ||೧೦||

ಮತ್ಸ್ಯಗಂಧೋ ಮಹಾನಾಸೀತ್ಪುರಾ ಮಮ ಜಗುಪ್ಸಿತಃ ತಮಪಾಸ್ಯ ಶುಭುಂ ಗಂಧಮಿಮಂ ಪ್ರಾದಾತ್ಸ ಮೇ ಮುನಿಃ ||೧೧|| ತತೋ ಮಮಾಹ ಸ ಮುನಿರ್ಗರ್ಭಮುತ್ಸೃಜ್ಯ ಮಾಮಕಮ್‌ ದ್ವೀಪೇsಸ್ಯಾ ಏವ ಸರಿತಃ ಕನ್ಯೈವ ತ್ವಂ ಭವಿಷ್ಯಸಿ ||೧೨|| ಆದಿ ಪರ್ವ,೧,೯೯

[4]ಸುಕ್ತಂಕರ್‌ ಆವೃತ್ತಿಯ ಆದಿಪರ್ವದ ಒಂದು ಚಿತ್ರದಲ್ಲಿ ಮೇಲುಹೊದಿಕೆ ಇಲ್ಲದೆ ದೋಣಿ ನಡೆಸುತ್ತಿರುವ ಮತ್ಸ್ಯಗಂಧಿಯನ್ನು ತೋರಿಸಲಾಗಿದೆ. ಬ್ರಾಹ್ಮಣ ವಿಧವೆಯರು, ದಾಸಿಯರು ಮತ್ತು ಕೆಳಜಾತಿಯ ಹೆಂಗಸರು ಕುಪ್ಪಸ ಧರಿಸದೆ ಬದುಕು ಸಾಗಿಸುವ ಪರಿಸ್ಥಿತಿ ತೀರ ಇತ್ತೀಚಿನ ದಿನಗಳವರೆಗೂ ಮುಂದುವರಿದಿತ್ತು.

[5]ದುಶ್ಯಾಸನ ಸೀರೆ ಸೆಳೆಯುತ್ತಾ ಹೋದಂತೆ ದ್ರೌಪದಿಯ ಸೀರೆ ಅಕ್ಷಯವಾಗುವ ರೀತಿಯಲ್ಲಿಯೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಾಯಕನೊಬ್ಬನ ರಕ್ತ ಅಕ್ಷಯವಾಗುತ್ತಾ ಸಾಗುವ ಚಿತ್ರಣ ಗೇಬ್ರಿಯಲ್‌ ಮಾರ್ಕೆಜ್‌ನ ‘ಒನ್‌ ಹಂಡ್ರೆಡ್‌ ಇಯರ್ಸ್‌ ಆಫ್‌ ಸಾಲಿಟ್ಯುಡ್‌’ ಕಾದಂಬರಿಯ ಪುಟ ೧೧೩-೧೧೪ರಲ್ಲಿ ಬರುತ್ತದೆ: A trickle of blood came out under the door, crossed the living room, went out in to the street, continued on in a straight line across the uneventerraces, went down steps and climbed over curbs, passed along the Street of the Turks, turned a corner to the right and another to the left, made a right angle at the Buendia house, went in under the closed door, crossed through the parlour, hugging the walls so as not to stain the rugs, went on to the other living room, made a wide curve to avoid the dining room table, went along the porch with the begonias, and passed without being seen under Amaranta’s chair as she gave an artithmetic lesson to Aureliano Jose, and went through the Pantry and came out in the kitchen where Ursula was getting ready to crack thirty-six eggs to make bread.  Picador, Published by Pan Books, ೧೯೭೮.

[6]ಡಾ. ಎಲ್‌. ಬಸವರಾಜು (ಸಂ) ಸರಳ ಪಂಪಭಾರತ, ಗೀತಾ ಬುಕ್‌ ಹೌಸ್‌, ಮೈಸೂರು. ೧೯೯೯ ಪುಟ ೧೯೮