ದಿಲೀಪ ಮಹಾರಾಜ ಬಯಸುವುದೂ ಅನುರೂಪ ಸಂತಾನವನ್ನು. ಮಕ್ಕಳು ಕುರಿತಂತೆ ದಿಲೀಪ

[1] ಮತ್ತು ದುಷ್ಯಂತ ವ್ಯಕ್ತಪಡಿಸುವ ಹಂಬಲ ಮತ್ತು ಭಾವನೆಗಳಲ್ಲಿ ಬಹಳ ಹೊಂದಾಣಿಕೆ ಇದೆ. ಒಂದೇ ಆದ ಆ ಭಾವನೆಗಳನ್ನು ಅವರಿಬ್ಬರೂ ಬೇರೆ ಬೇರೆ ಸಂದರ್ಭ ಮತ್ತು ಮಾತುಗಳಲ್ಲಿ ವ್ಯಕ್ತಪಡಿಸುತ್ತಾರೆ: ಅವು ಅವರಿಬ್ಬರ ಮಾತುಗಳಾಗಿ ಉಳಿಯದೇ ಒಟ್ಟಾರೆ ಭಾರತೀಯರ ಮನೋಧರ್ಮ ಮತ್ತು ಮನೋಭಾವದ ಪ್ರತೀಕವಾಗಿದೆ ಎಂದು ಹೇಳಬೇಕಾಗಿಲ್ಲ. ಆ ಅರ್ಥದಲ್ಲಿ ಭಾರತ ಕಂಡುಕೊಂಡ ಮೊದಲ ಭಾರತೀಯ ಕವಿ ಕಾಳಿದಾಸ. ಕುಲಪ್ರತಿಷ್ಠೆ ಇರುವುದೇ ಕುಲಪುತ್ರನ ಜನನದಲ್ಲಿ. ಅಂತಹ ಪುತ್ರನನ್ನು ಪಡೆಯುವಲ್ಲಿ ವಿಫಲವಾದ ರಘುವಂಶವು, ಅಗ್ನಿವರ್ಣನ ರೂಪದಲ್ಲಿ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ದರ್ಶನ ಮಾಡಲು ಬಂದ ಮಂತ್ರಿಗಳು ಜನರಿಗೆ ಕಾಲನ್ನು ತೋರಿಸುತ್ತಿದ್ದ ಆತ ಕುಲಪುತ್ರನೂ ಆಗಿರುವುದಿಲ್ಲ, ಕುಲಶ್ರೇಷ್ಠನೂ ಆಗಿರುವುದಿಲ್ಲ.

ಅಗ್ನಿವರ್ಣನ ಗರ್ಭಿಣಿ ಪತ್ನಿ ಹೇಮ ಸಿಂಹಾಸನ ಏರಿ ಅಧಿಕಾರ ಮುಂದುವರಿಸುವ ಆಶಾವಾದದ ಚಿತ್ರಣದೊಂದಿಗೆ ಕಾವ್ಯ ರಘುವಂಶ ಕೊನೆಗೊಳ್ಳುತ್ತದೆ. ಹಾಗಾಗಿ ಅದು ಅವನತಿಯ ಕತೆಯಾಗಿರುವುದರೊಂದಿಗೆ ಅರ್ಹ ಪುತ್ರಾಕಾಂಕ್ಷೆಯೊಂದಿಗೆ ಮುಕ್ತಾಯಗೊಳ್ಳುವ ರೀತಿ ನೋಡಿದರೆ, ಪುತ್ರಾಕಾಂಕ್ಷೆಯ ಕತೆಯೂ ಆಗಿದೆ. ಅರ್ಹ ಮಕ್ಕಳು ಜನಿಸದೇ ಹೋದ ಕಾರಣ ದುರಂತ ಮತ್ತು ಅವನತಿ ಹಾದಿ ಹಿಡಿದ ವಂಶವೊಂದರ ಕತೆ ಅದು.

ಹಡಗು ಮುಳುಗಿ ಮೃತನಾದ ಧನಮಿತ್ರನೆಂಬ ವರ್ತಕನ ಗರ್ಭಿಣಿ ಪತ್ನಿಗೆ ಅವನ ಸಮಸ್ತವೂ ಸೇರುವಂತೆ ಶಾಕುನ್ತಲೆ ನಾಟಕದಲ್ಲಿ ಆಜ್ಞೆಮಾಡುವ ದುಷ್ಯಂತನು, ಮಕ್ಕಳಿಲ್ಲದೆ ಹೋದಲ್ಲಿ ತನಗೂ ಮತ್ತು ತನ್ನ ವಂಶಕ್ಕೂ ಅದೇ ಗತಿ ಬರಬಹುದೆಮದು ಹಳಹಳಿಸುತ್ತಾನೆ. ಮಕ್ಕಳಿಲ್ಲದ ವರ್ತಕನ ಆಸ್ತಿ ರಾಜನಿಗೆ ಸೇರತಕ್ಕದ್ದು ಎಂಬುದಾಗಿ ಅಮಾತ್ಯನು ಬರೆದಿದ್ದ ಒಕ್ಕಣೆಯನ್ನು ತಿರಸ್ಕರಿಸಿ, ಆತನ ಆಸ್ತಿ ಆತನ ಗರ್ಭೀಣಿ ಪತ್ನಿಗೆ ಸೇರತಕ್ಕದ್ದೆಂದು ತೀರ್ಪು ನೀಡಲು ದುಷ್ಯಂತನ ವೈಯಕ್ತಿಕ ಪರಿಸ್ಥಿತಿಯೂ ಕಾರಣವಾಗುತ್ತದೆ.

ಉತ್ತಮವಾದ ಮಕ್ಕಳ ನಿರೀಕ್ಷೆ ಅಷ್ಟೊಂದು ಪ್ರಬಲವಾಗಿ ಕಾಡಲು ಕಾರಣಗಳೇನಿರಬಹುದು?

ರಾಜನೊಬ್ಬನ ಮತ್ತು ದೇಶವೊಂದರ ನಿಜವಾದ ಅವನತಿಯ ಕತೆ ಬರುವುದು ಮಾಲವಿಕಾಗ್ನಿಮಿತ್ರದಲ್ಲಿ: ತಾನು ಪ್ರೀತಿಸಿದ ಮತ್ತು ತನ್ನ ಅಧೀನದಲ್ಲಿರುವ ಯುವತಿಯೊಬ್ಬಳನ್ನು ಮದುವೆಯಾಗಲಾರದೆ ವಿಲಿವಿಲಿ ಒದ್ದಾಡುವ ರಾಜನ್ನು ಯಾವ ದೃಷ್ಟಿಯಿಂದ ನೋಡಲು ಸಾಧ್ಯ?

ರಾಜನು ಪ್ರೀತಿಸುವ ಯುವತಿಯನ್ನು ಆತನ ಹಿರಿಯ ಪತ್ನಿಯರು ಸಂಕೋಲೆ ತೊಡಿಸಿ ಸೂರ್ಯಕಿರಣ ಕಾಣದ ಪಾತಾಳ ಲೋಕದಲ್ಲಿ ಬಂಧಿಸಿಟ್ಟಿರಬೆಕಾದರೆ,[2] ಆಕೆಯನ್ನು ಬಿಡಿಸಿಕೊಳ್ಳಲು ವಿದೂಷಕನ ಮೊರೆಹೋಗುವ ರಾಜನ ಚಿತ್ರಣ ದೊರಕುವುದೇ ಈ ನಾಟಕದಲ್ಲಿ. ಅಂತಹ ರಾಜನ ಪುಕ್ಕಲುತನವನ್ನು ಆತನ ಪತ್ನಿಯರು, ವಿದೂಷಕ ಹೋಗಲಿ, ಸ್ವತಃ ಆತ ಹೊಸದಾಗಿ ಪ್ರೀತಿಸಿದ ಯುವತಿ ಛೇಡಿಸುವ ಸನ್ನಿವೇಶವನ್ನು ಕಾಣಬೇಕಾದರೆ ಕಾಳಿದಾಸನ ಅಗ್ನಿಮಿತ್ರ ನಾಟಕ ಓದಬೇಕು. ಅವರು ಆಡುವ ಒಂದೊಂದು ಮಾತು ವ್ಯಂಗ್ಯ, ಟೀಕೆ, ಕುಹಕ ಮತ್ತು ಲೇವಡಿಯಿಂದ ಕೂಡಿವೆ. ತಾನು ಬಯಸಿದ ಹುಡುಗಿಯನ್ನು ನೋಡಲು ಪ್ರದರ್ಶಿಸಿದ ನೈಪುಣ್ಯತೆಯನ್ನು ರಾಜಕಾರ್ಯಗಳಲ್ಲಿ ಪ್ರದರ್ಶಿಸಲು “ಯದಿ ರಾಜಕಾರ್ಯೇಷು ಈದೃಶೀ ಉಪಾಯನಿಪುಣತಾರ್ಯಪುತ್ರಸ್ಯ ತತಃ ಶೋಭನಂ ಭವೇತ್‌” (ಅಂಕ ೧) ಸಾಧ್ಯವಾಗಿದ್ದರೆ ಎಂದು ರಾಜಪತ್ನಿ ಲೇವಡಿ ಮಾಡಿದರೆ, ಮತ್ತೊಬ್ಬಳು ಪತ್ನಿಯಾದ ಇರಾವತಿಯು “ಶಠ![3] ಅವಿಶ್ವಸನೀಯ ಹೃದಯೋಸಿ” (ಅಂಕ ೩) ಎಂದು ಜಂಕಿಸುತ್ತಾಳೆ. ಕಟುಕನ ಅಂಗಡಿಯ ಮಾಂಸಕ್ಕೆ ಆಸೆಪಟ್ಟು ಸುತ್ತಲೂ ಸುತ್ತುತ್ತಿರುವ ಹದ್ದಿನಂತೆ – “ಭವಾನಪಿ ಸೂನಾಪರಿಸರಚರ ಇವ ಗೃಧ್ರೇ ಆಮಿಷಲೋಲುಪೋ ಭೀರುಕಶ್ಚ – (ಅಂಕ ೨)” ಹೆದರುತ್ತಿದ್ದೀಯೇ ಎಂದು ವಿದೂಷಕನು ರಾಜನನ್ನು ಟೀಕಿಸುತ್ತಾನೆ. ಅದಿರಲಿ, ಪ್ರೀತಿಮಾಡುವ ವಿಚಾರದಲ್ಲಿ ಹೆದರಬೇಡ ಎಂದು ಧೈರ್ಯ ನೀಡುವ ರಾಜನನ್ನು ಕುರಿತು, ಆತನ ಪ್ರೀತಿಗೆ ತುತ್ತಾದ ಯುವತಿ ಆಡುವ ಮಾತುಗಳು ಹರಿತವಾದ ಚಾಕುವಿಗಿಂತ ಹರಿತವಾದವು: “ನಿರ್ಭಿತರಾಗಿರುವ ರಾಜರ ಧೈರ್ಯ ರಾಣಿಯ ಸಮ್ಮುಖದಲ್ಲಿ ಏನಾಗುತ್ತದೆ ಎಂಬುದನ್ನು ಚೆನ್ನಾಗಿ ಕಂಡಿದ್ದೇನೆ” “ಯೋ ನ ಬಿಭೇತಿ ಸ ಮಯಾ ಭಟ್ಟಿನೀದರ್ಶನೇ ದೃಷ್ಟಸಾಮರ್ಥ್ಯೋ ಭರ್ತಾ” (ಅಂಕ ೪) ಎಂದು ಹಂಗಿಸುತ್ತಾಳೆ.

ಆ ರೀತಿಯ ಪುಕ್ಕಲುತನಕ್ಕೆ ಕಾರಣವಾಗಿ ಅಗ್ನಿಮಿತ್ರನು ದಾಕ್ಷಿಣ್ಯ, ಕುಲನಿಯಮ, ಹಿರಿಯ ಪತ್ನಿಯರ ಮನಸ್ಸು ನೋಹಿಸಬಾರದು ಎಂಬ ಸೌಜನ್ಯ ಇತ್ಯಾದಿ ಪದಗಳನ್ನು ಬಳಸುತ್ತಾನಾದರೂ, ಆ ಯಾವ ವಿರಣೆಗಳೂ ರಾಜನಾಗಿ ಆತ ಎದುರಿಸಿದ ಅಸಹಾಯಕ ಸ್ಥಿತಿಯನ್ನು ಮುಚ್ಚುವಷ್ಟು ಸಮರ್ಥವಾಗಿಲ್ಲ ಮತ್ತು ರಾಜನೊಬ್ಬನನ್ನು ಅದಕ್ಕಿಂತ ಕೆಟ್ಟದಾಗಿ ಹೀಯಾಳಿಸಿ ಲೇವಡಿ ಮಾಡಲೂ ಸಾಧ್ಯವಿಲ್ಲ. ಆಡಳಿತ, ರಾಜಕಾರ್ಯನಿರ್ವಹಣೆ, ಜನಕಲ್ಯಾಣ ಇತ್ಯಾದಿ ಜವಾಬ್ದಾರಿಯುತ ಕರ್ತವ್ಯಗಳ ಕಡೆಗೆ ಹರಿಸಬೇಕಾದ ಗಮನಹರಿಸುವುದನ್ನು ಬಿಟ್ಟು, ಅಂತಃಪುರದ ಲೋಲುಪತೆಯಲ್ಲಿ ಹೆಚ್ಚು ಕಾಲ ವಿನಿಯೋಗಿಸುವ ರಾಜನ ಚಿತ್ರಣವನ್ನು ಅದೆ ಕಾಳಿದಾಸ ನೀಡುತ್ತಾನೆ. ಪರಿಣಯದ ಕಾಲದಲ್ಲಿ ರಾಜ್ಯಭಾರದ ಜವಾಬ್ದಾರಿಯನ್ನು ಅಮಾತ್ಯರಿಗೆ ವಹಿಸಿಹೋಗುವ ಎಚ್ಚರ ಪುರೂರವ, ಪುತ್ರಾಕಾಂಕ್ಷಿಯಾಗಿ ಆಶ್ರಮಕ್ಕೆ ಹೋಗುವ ಮೊದಲು ರಾಜ್ಯಭಾರದ ಹೊಣೆಯನ್ನು ಅಮಾತ್ಯರಿಗೆ ವಹಿಸುವ ದಿಲೀಪ ಆ ಎಚ್ಚರವನ್ನು ಅಗ್ನಿಮಿತ್ರನಲ್ಲಿ ಕಾರಣವಾಗುವುದಿಲ್ಲ. ಪಟ್ಟದರಾಣಿ ದೇವಿಯ ಮಗ ಯುದ್ಧದಲ್ಲಿ ಗೆಲುವು ಸಾಧಿಸುವುದರ ಫಲವಾಗಿ ಮಾಲವಿಕೆಯ ಕೈಹಿಡಿಯಲು ಸಾಧ್ಯವಾಗುತ್ತದೆಯಾದರೂ, ಆ ಯಾವ ವಿವರಗಳೂ ಅಗ್ನಿಮಿತ್ರನ ಸ್ಥಿತಿಯನ್ನು ಉತ್ತಮಪಡಿಸಲು ಸಹಾಯಕವಾಗುವುದಿಲ್ಲ.

ದೇಹ ಸೌಂದರ್ಯ, ಮಾನಸಿಕ ಸೌಂದರ್ಯ, ಶಿಕ್ಷಣ, ನಾಟ್ಯಕಲೆಯಲ್ಲಿ ಪರಮನಿಪುಣೆ ಮತ್ತು ಮೇಧಾವಿನಿ ಎಂದು ಗುರುವಿನ ಕೈಯಲ್ಲಿ ಬಣ್ಣನೆಗೊಳಗಾಗುವ ಮಾಲವಿಕಾ, ಮಧ್ಯವಯಸ್ಸನ್ನು ದಾಟಿರಬಹುದಾದ ಅಗ್ನಿಮಿತ್ರನನ್ನು ಮದುವೆಯಾಗಲು ಏಕೆ ಮುಂದಾದಳು ಎಂದು ಆಶ್ಚರ್ಯವ್ಯಕ್ತಪಡಿಸುವ ವಾಲ್ಟೆರ್‌ ರುಬೆನ್‌; ಆತ ಅತ್ಯಂತ ಸ್ಫುರದ್ರೂಪಿಯಾಗಿರಬಹುದೆಂಬ ಉತ್ತರವನ್ನು ನೀಡುತ್ತಾರೆ :

In any case, Kālidāsśa has planinly enough pictured life at the Śunga court of Vidiśā as extremely wanton. Mālavikā alone, the lovely young slave girl, stands out in her shypurity, and it is hard to understand how she could have loved this weakling king. He must have been very handsome.ಪುಟ ೮೨

ರಾಜನಾದ ಅಗ್ನಿಮಿತ್ರನನ್ನು ಮದುವೆಯಾಗುವುದು ಪರಿತ್ಯಕ್ತೆಯಾದ ಆಕೆಗೆ ಅಗತ್ಯವಾಗಿರುತ್ತದೆ. ಎಂಬ ಸಂಗತಿಯನ್ನು ಅವರು ಗಮನಿಸಿದಂತೆ ತೋರುವುದಿಲ್ಲ. ನಾಟಕದ ಕೊನೆಯಲ್ಲಿ ಬರುವ ಕೆಲವೊಂದು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ ತೆಗೆದುಕೊಳ್ಳುವ ಚುರುಕುಗತಿಯ ಕ್ಷಿಪ್ರ ನಿರ್ಣಯಗಳು, ಆತನ ವ್ಯಕ್ತಿತ್ವದ ಮತ್ತೊಂದು ಮುಖವನ್ನು ತೋರಿಸುತ್ತವೆ ಎಂಬುದನ್ನೂ ಸಹ ರುಬೆನ್‌ ಗುರುತಿಸುತ್ತಾರೆ. ಆದರೂ ಅಗ್ನಿಮಿತ್ರನ ವ್ಯಕ್ತಿತ್ವ ಅದರಿಂದೇನೂ ದಿಗ್ಗನೆ ಪ್ರಜ್ವಲಿಸುವುದಿಲ್ಲ.

III

ಅಥವಾ ಆ ಕಾಲದ ಗುಣವೇ ಅದಾಗಿರಬಹುದೇ? ಭಾರತ ಮುಂದೆ ತುಳಿದ ಹಾದಿಗೆ ಆ ತರಹದ ಒಟ್ಟಾರೆ ವಾತಾವರಣ ಮತ್ತು ಸಾಮಾಜಿಕ ರಾಜಕೀಯ ನೀತಿ – ರೀತಿಯ ಕಾರಣವಾಗಿದ್ದಿರಬಹುದೇ? ಕಾಳಿದಾಸ ಗ್ರಹಿಸಿದ ಮುನ್ಸೂಚನೆಯನ್ನು ಭಾರತದ ಮನಸ್ಸು ಅರಿತುಕೊಳ್ಳುವ ಶ್ರಮ ತೆಗೆದುಕೊಳ್ಳಲಿಲ್ಲವೆ?

ಹಾಗಾಗಿ ಅಗ್ನಿಮಿತ್ರ ಮತ್ತುಅಗ್ನಿವರ್ಣ ಇಬ್ಬರಲ್ಲಿ ಯಾರು ಹೆಚ್ಚು ದುರ್ಬಲರು ಎಂಬ ಹೋಲಿಕೆ ಕುತೂಹಲಕ್ಕೆ ಮಾತ್ರ: ಏಕೆಂದರೆ ರಘುವಂಶದ ಅಗ್ನಿವರ್ಣ ಸ್ತ್ರೀಲೋಲುಪತೆಯಲ್ಲಿ ಮುಳುಗಿ ಅದಕ್ಕಾಗಿ ಬದುಕನ್ನೇ ಕಳೆದುಕೊಂಡ ವ್ಯಕ್ತಿತ್ವಕ್ಕೆ ಮಾದರಿಯಾಗಿ ಉಳಿಯುತ್ತಾನೆ; ಅವನದು ಕ್ಲಾಸಿಕ್‌ ಉದಾಹರಣೆ. ಅವನ ಹೆಸರು ಮತ್ತು ನಿದರ್ಶನ ಜನರ ಆಡುಮಾತಿನಲ್ಲಿ ಒಂದಾಗಿ ಹೋಗಬೇಕಾಗಿತ್ತು. ಅಗ್ನಿಮಿತ್ರ ಅವನಿಗಿಂತ ಸ್ವಲ್ಪ ಭಿನ್ನ ವ್ಯಕ್ತಿಯಾದರೂ, ಅಗ್ನಿವರ್ಣನ ವ್ಯಕ್ತಿತ್ವದ ಮತ್ತೊಂದು ಛಾಯೆಯಷ್ಟೆ. ರಾಜನಾಗಿ ಸಾರ್ವಜನಿಕ ಜೀವನಕ್ಕೆ ಬಹಳ ಕಡಿಮೆ ಅಂದರೆ ಕಡಿಮೆ ಸಮಯ ಮೀಸಲಿಡುವ ಆತ; ತನ್ನ ದಿನನಿತ್ಯದ ಬಹುತೇಕ ಸಮಯವನ್ನು ಅಂತಃಪುರದ ಪ್ರೇಮ ವ್ಯವಹಾರಗಳಲ್ಲಿ ಕಳೆಯುತ್ತಾನೆ. ಇಂದಿಗೂ ಬದಲಾಗದ ‘ಭಾರತೀಯ’ರಾಜಕಾರಣದ ಅಂತಹ ಮುಖವೊಂದನ್ನು ಚಿತ್ರಿಸಿದ ಶ್ರೇಯಸ್ಸು ಮತ್ತು ಕೀರ್ತಿ ಕಾಳಿದಾಸನಿಗೆ ಸಲ್ಲಬೇಕು.

ಇಡೀ ‘ರಘುವಂಶಂ’ ವ್ಯಂಗ್ಯದಿಂದ ಕೂಡಿದ್ದ ಶೈವನಾದ ವಿಷ್ಣುವಿನ ಆರಾಧಕರಾದ ರಘುವಂಶದ ರಾಜರನ್ನು ಲೇವಡಿ ಮಾಡುತ್ತಾನೆ ಎಂಬುದಾಗಿ ವಾಲ್ಟೆರ್‌ ರುಬೆನ್‌ ಅಭಿಪ್ರಾಯ ಪಡುತ್ತಾರೆ.[4]

ಅವರ ಅಭಿಪ್ರಾಯ ಅಥವಾ ಓದುವಿಕೆಯ ರೀತಿಯನ್ನು ಒಪ್ಪುವುದು ಬಿಡುವುದು ಅವರವರ ಗ್ರಹಿಕೆಗೆ ಬಿಟ್ಟ ವಿಚಾರ. ಕಾಳಿದಾಸನನ್ನು ಗಂಭೀರ ಓದಿಗೆ ರುಬೆನ್‌ ಒಳಪಡಿಸುವ ರೀತಿ ಆಶ್ಚರ್ಯ ಮೂಡಿಸದಿರುವುದಿಲ್ಲ. ಇರಲಿ, ಕಾಳಿದಾಸನು ಮನೋಧರ್ಮ ಮತ್ತು ಮನೋಭಾವದಲ್ಲಿ ಶಿವಪರ ಇದ್ದಿರಬಹುದು; ಆದರೆ ವಿಷ್ಟುಪರವಾದ ಮನೋಭಾವದವರನ್ನು ಲೇವಡಿ ಮಾಡುವಷ್ಟು ಸಂಸ್ಕೃತನಲ್ಲ. ರಘುವಂಶದ ಕತೆ ಬರೆಯುವಾಗ ಆತನು ಶೋಧಿಸಬಯಸುವ ಆಶಯ ಮತ್ತು ಕಾಳಜಿಗಳು ಸ್ವಲ್ಪ ಭಿನ್ನವಾಗಿದ್ದರೂ, ಅದು ಅವನ ಇತರೇ ಎಲ್ಲ ಕೃತಿಗಳಲ್ಲಿ ವ್ಯಕ್ತವಾಗುವ ಧೋರಣೆ ಮತ್ತು ಮನೋಧರ್ಮಕ್ಕೆ ಅನುಗುಣವಾಗಿರುವಂತೆ ತೋರುತ್ತದೆ. ಜತೆಗೆ ವ್ಯಂಗ್ಯ, ಲೇವಡಿ ಅಥವಾ ಟೀಕೆಮಾಡುವ ವಿಚಾರದಲ್ಲಿ ಕಾಳಿದಾಸ ಅನೇಕ ತರಹದ ಮಿತಿಗಳನ್ನು ಎದುರಿಸಿದಂತೆ ತೋರುತ್ತದೆ. ಆ ತರಹದ ಸಾಧನೆಗಳನ್ನು ಆಡುಭಾಷಾ ಮಾಧ್ಯಮದಲ್ಲಿ ಕಾವ್ಯ ಬರೆಯುವ ಕವಿಯ ಕೈಯಲ್ಲಿ ಸಾಧಿಸಲು ಮಾತ್ರ ಸಾಧ್ಯ ಎಂಬುದಕ್ಕೆ ಗ್ರಂಥಸ್ಥ ಭಾಷೆಯಾದ ಸಂಸ್ಕೃತದಲ್ಲಿ ರಚಿಸಿದ ಕಾಳಿದಾಸನ ಕೃತಿಗಳು ಜೀವಂತ ಉದಾಹರಣೆ. ಸನ್ನಿವೇಶದ ಒಟ್ಟಾರೆ ಪರಿಣಾಮದಿಂದಾಗಿ ಕೆಲವರ ಬದುಕಿನಲ್ಲಿ ವ್ಯಂಗ್ಯವನ್ನು ಕಾಣಬಹುದೇ ವಿನಾ, ಸಂಸ್ಕೃತ ಭಾಷೆ ಬಳಸುವುದರ ಮೂಲಕ ವ್ಯಂಗ್ಯವನ್ನು ತರುವುದಕ್ಕೆ ಮಿತಿ ಇದೆ. ಆ ತರಹದ ವ್ಯಂಗ್ಯ ಕೂಡ ಒಂದು ತರಹದ ಗಾಂಭೀರ‍್ಯದಿಂದಲೇ ಕೂಡಿರುತ್ತದೆ. ಅಗ್ನಿಮಿತ್ರನ ನಡವಳಿಕೆ ಕುರಿತಂತೆ ಆತನ ಪತ್ನಿ ಇರಾವತಿ ಮತ್ತು ಪ್ರೇಯಸಿ ಮಾಲವಿಕಾ ಆಡುವ ಮಾತುಗಳೇ ಉದಾಹರಣೆ.

ಆ ಅರ್ಥದಲ್ಲಿ ಕಾಳಿದಾಸ ಭಾರತೀಯ ಕವಿ. ಅವನು ಶಿವಪರ ಮನೋಭಾವದವನಾಗಿದ್ದರೂ, ವಿಷ್ಣುದ್ವೇಷಿಯೇನಲ್ಲ: ಆ ಎರಡು ಪರಂಪರೆ ಮತ್ತು ವಾಹಿನಿಗಳಲ್ಲಿ ಪ್ರವಹಿಸುವ ಭಾರತೀಯ ಮನೋಧರ್ಮವನ್ನು ಅದರ ವಿಶಾಲ ಭೂಮಿಕೆಯಲ್ಲಿ ಗುರಿತಿಸುವುದು ಆತನ ಉದ್ದೇಶವಾಗಿರುವಂತೆ ತೋರುತ್ತದೆ; ವ್ಯಾಸ ಮತ್ತು ವಾಲ್ಮೀಕಿಯರಲ್ಲಿ ಅದರ ಪುರ್ವ ಮತ್ತು ಪ್ರಾಥಮಿಕ ರೂಪದಲ್ಲಿ ಅಭಿವ್ಯಕ್ತಗೊಂಡಿರಬಹುದಾದ ಚಂದ್ರಮಾನ ಮತ್ತು ಸೌರಮಾನ ಮನೋಧರ್ಮ ಮತ್ತು ಮನೋಭಾವಗಳನ್ನು ಏಕವಾಗಿ ಗ್ರಹಿಸಲು ಪ್ರಯತ್ನಿಸಿದ ಕವಿ ಕಾಳಿದಾಸ ಆಗಿದ್ದಿರಬಹುದು. ಆ ಅರ್ಥದಲ್ಲಿ ಭಾರತದ ಸಾಫಲ್ಯ – ವೈಪಲ್ಯ ಮತ್ತು ಇತಿಮಿತಿಗಳ ಹಿಮಾಲಯವೇ ಕಾಳಿದಾಸ.

ಭಾರತೀಯ ಮತ್ತು ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆಗಳು ಬೇರೆ ಬೇರೆಯಾದಂತೆ ವಿಮರ್ಶಾ ಸೂತ್ರಗಳೇ ಬೇರೆ: ಆ ಕಾರಣ ಪಾಶ್ಚಿಮಾತ್ಯ ವಿಮರ್ಶಾ ಸೂತ್ರಗಳನ್ನಾಧರಿಸಿ ಭಾರತೀಯ ಸಾಹಿತ್ಯವನ್ನು ಅಳೆಯಬರುವುದಿಲ್ಲ ಎಂಬ ವಾದ ಮಂಡಿಸುವವರು ಈ ಕಾಳಿದಾಸನನ್ನು ಒಮ್ಮೆ ನೋಡಬೇಕು. ಎಪಿಕ್‌ ಪರಂಪರೆ ಆಧಾರಿತ ಯುರೋಪಿನ ಕ್ಲಾಸಿಕ್‌ ಕಾವ್ಯ. ಲಕ್ಷಣಗಳು ಭಾರತಕ್ಕೆ ಹೊಸತೇನಲ್ಲ. ಅವುಗಳ ಮೂಲ ದೊರಕುವುದೇ ಷಿನ್‌ – ಎಖಿ – ಉನ್ನಿನ್ನಿಯಲ್ಲಿ ಮತ್ತು ವ್ಯಾಸ – ವಾಲ್ಮೀಕಿಯರು ಆ ಬೃಹತ್‌ ಪರಂಪರೆಯ ಜಾಲದ ಒಂದು ಅವಿಭಾಜ್ಯ ಅಂಗ. ಅಂಥ ಮಹಾಭಾರತ – ರಾಮಾಯಣ ಪರಂಪರೆಯನ್ನು ಮುಂದುವರಿಸುತ್ತಿದ್ದೇನೆ ಎಂದು ಎಲ್ಲೂ ಹೇಳಿಕೊಳ್ಳದೆ ಮತ್ತು ಆ ಅರಿವೇ ಇಲ್ಲದವನಂತೆ ಬಹುತೇಕ ಅದೇ ಹಾದಿಯಲ್ಲಿ ಸಾಗಿಬಂದವನು ಕಾಳಿದಾಸ.

ಕಾಳಿದಾಸನ ವಿಶಿಷ್ಘ ಸೃಷ್ಟಿಗಳಾದ ‘ಮೇಘದೂತಂ’ ಮತ್ತು ‘ಋತುಸಂಹಾರಂ’ ವರ್ಜಿಲ್‌ನ ‘ತುರುಗಾಹಿಗೀತೆ’ ಮತ್ತು ‘ಕೃಷಿಗೀತೆ’ ಎಂಬ ಖಂಡಕಾವ್ಯಗಳ್ಳನ್ನು ನೆನಪಿಗೆ ತಾರದಿರುವುದಿಲ್ಲ. ಕೃಷಿಬದುಕಿನ ಜತೆಗೆ ಅರ್ಥಪೂರ್ಣ ಸಂಬಂಧ ಕಡಿದುಕೊಂಡ ನಾಗರಿಕ ಬಹಳ ಕಾಲ ಬದುಕಲಾರದು ಎಂದು ಎಚ್ಚರಿಸಲೋ ಎಂಬಂತೆ ಕಾವ್ಯ ಬರೆದ ವರ್ಜಿಲನ ಬದ್ಧತೆ ಮತ್ತು ಜವಾಬ್ದಾರಿಯ ಅರ್ಥಪೂರ್ಣತೆ ಎಲ್ಲಿ! ಅದೇ ತರಹವೇ ಜಗತ್ತಿನ ವಿಶಿಷ್ಟ ಸೃಷ್ಟಿಯಾದ ಮೇಘದೂತ ವಿರಹಗೀತೆಯಾಗಿ ಉಳಿಯುತ್ತದೆ.

ಪರಿಸರ ಮತ್ತು ಆವರಣವಿಜ್ಞಾನಗಳ ಹಿನ್ನೆಲೆಯಲ್ಲಿ ಆತನ ‘ತರುಗಾಹಿಗೀತೆ’ ಮತ್ತು ‘ಕೃಷಿಗೀತೆ’ಗಳನ್ನು ಅನೇಕ ರೀತಿಯ ವ್ಯಾಖ್ಯಾನ ಮತ್ತು ಓದುವಿಕೆಗೆ ಒಳಪಡಿಸುವ ಕ್ರಮ ಇಂದೂ ಮುಂದುವರಿದಿದೆ.[5] ಅದರಲ್ಲೂ ಪರಿಸರ ಮತ್ತು ಬದುಕಿನ ಒಳಸಂಬಂಧಗಳ ಬಗ್ಗೆ ಹೆಚ್ಚುತ್ತಿರುವ ಪ್ರಜ್ಞೆ ಮತ್ತು ತಿಳುವಳಿಕೆಗೆ ಅನುಗುಣ ವರ್ಜಿಲನ ಆ ಎರಡು ಕೃತಿಗಳನ್ನು ಓದುವ ರೀತಿಯೂ ಬೆಳೆಯುತ್ತಾ ಹೋಗಿದೆ.

ಸೀತೆಯನ್ನು ಕರೆದುಕೊಂಡು ಪುಷ್ಪಕ ವಿಮಾನದಲ್ಲಿ ಅಂತರಿಕ್ಷದ ಮೂಲಕ ಅಯೋಧ್ಯಗೆ ರಾಮ ಮರಳಿಬರುವಾಗ, ದುಷ್ಯಂತನು ಇಂದ್ರನ ಆಸ್ಥಾನದಿಂದ ಆಕಾಶ ಮಾರ್ಗದ ಮೂಲಕ ಮಾರೀಚ ಋಷಿಯ ಆಶ್ರಮದಲ್ಲಿ ಇಳಿಯುವಾಗ ಹಾಗೂ ಮೇಘದೂತದ ಕೆಲಭಾಗದಲ್ಲಿ ಆತ ನೀಡುವ ವಿವರಣೆಗಳು ಕಾಳಿದಾಸನಿಗಿದ್ದ ಅದ್ಭುತ ಕಲ್ಪನಾ ಸಾಮರ್ಥ್ಯಕ್ಕೆ ಉದಾಹರಣೆ. ಪ್ರಕೃತಿ ಪರಿಸರ ಮತ್ತು ಮಾನವ ಪರಿಸರದ ಜತೆಗಿನ ಸಂಬಂಧ ಮತ್ತು ಒಡನಾಡಿತನವನ್ನು ಆತ ಅನ್ವೇಷಿಸುವ ರೀತಿ ಕೂಡ ಅನನ್ಯವಾದುದಾಗಿದೆ. ಶಾಕುನ್ತಲೆಯಂತಹ ಮನಸ್ಸನ್ನು ಆಕೆ ಬಂದ ಪರಿಸರ ಮತ್ತು ವಾತಾವರಣದ ಹಿನ್ನೆಲೆಯಲ್ಲಿ ಮಾತ್ರ ಕಲ್ಪಿಸಿಕೊಳ್ಳಲು ಸಾಧ್ಯ. ಆದರೆ ಕಾಳಿದಾಸನ ಮಿತಿ ಗೊತ್ತಾಗಬೇಕಾದರೆ ವರ್ಜಿಲನ ಅಪಾರ ಸಾಧ್ಯತೆಗಳ ಹಿನ್ನೆಲೆಯಲ್ಲಿಯೇ ನೋಡಬೇಕು. ಪ್ರಕೃತಿ – ಪರಿಸರ ಮತ್ತು ಮಾನವ ಪ್ರಕೃತಿ – ಪರಿಸರದ ನಡುವಿನ ಅಂತರ್ಗತ ಹೊಂದಾಣಿಕೆಯನ್ನು ಕಾಳಿದಾಸ ಗುರಿತಿಸುತ್ತಾನಾದರೂ, ಅವು ಪರಸ್ಪರ ಪ್ರಭಾವಿಸುವ ರೀತಿಯನ್ನು ಅನ್ವೇಷಿಸುವ ನಿಟ್ಟಿನಲ್ಲಿ ಮುಂದುವರಿಯುವುದಿಲ್ಲ. ಕಾಳಿದಾಸ ನಗರಸೀಮೆಯ ಕವಿಯಾಗಿ ನಿಲ್ಲುವುದು ಒಂದು ಕಾರಣವಿರಬಹುದಾದರೂ, ಎಲ್ಲೂ ಆತ ಕೃಷಿ ಸೇರಿದಂತೆ ಬದುಕಿನ ಇತರ ಸಂಕಷ್ಟಗಳ ಬಗ್ಗೆ ಗಮನ ಹರಿಸದಿರುವುದು ಮತ್ತೊಂದು ಕಾರಣವಿದ್ದಿರಬಹುದು.

ಕಾಳಿದಾಸ ಆ ಮಿತಿಯನ್ನು ಆತನ ಅತ್ಯಂತ ಯಶಸ್ವಿ ಕೃತಿಗಳಾದ ಮೇಘದೂತ ಮತ್ತು ಶಾಕುನ್ತಲ ನಾಟಕದ ಹಿನ್ನೆಲೆಯಲ್ಲಿ ಅರಿಯಬೇಕಾಗುತ್ತದೆ: ಮೇಘದೂತದ ನಾಯಕ ಯಕ್ಷ ಪುರುಷನಾಗಿರುವುದು, ಶಾಕುನ್ತಲೆ ಋಷಿಕನ್ಯಯಾಗಿರುವುದು ಅಚಾನಕ್‌ ಅಥವಾ ಆಕಸ್ಮಿಕ ಬೆಳವಣಿಗೆಯೇನಲ್ಲ. ಕಾಳಿದಾಸನ ಅನುಭವ ಜಗತ್ತು ಆತನ ಕೃತಿಗಳಲ್ಲಿ ವ್ಯಕ್ತವಾಗುವ ಭಾವಣೆಗಳು ಮತ್ತು ಅದನ್ನು ಅಭಿವ್ಯಕ್ತಿಸಲು ಬಳಸುವ ಭಾಷಾಚೌಕಟ್ಟಿಗೆ ಅನುಗುಣವಾದುದಾಗಿದೆ. ಪ್ರೇಮವಂಚಿತನಾದ ಯಕ್ಷ – ಆತ ಮೊದಲೇ ಯಕ್ಷ – ಅದರಲ್ಲೂ ಹೆಂಡತಿಯಿಂದ ದೂರವಿರಬೇಕಾಗಿ ಬಂದವನು ಮತ್ತು ತಾರುಣ್ಯದಿಂದ ತುಂಬಿದ ಆತನನ್ನು ದಿನನಿತ್ಯದ ಬದುಕಿನ ಮತ್ತಾವ ಗೊಡವೆ, ಕೀಟಲೆಕೋಟಲೆ ಮತ್ತು ಸಂಕಷ್ಟಗಳು ಕಾಡಲು ಸಾಧ್ಯ? ಅಂಥ ಯಕ್ಷನಿಗೆ ಕಾಲದ ನಿರ್ಬಂಧವಿರಲು ಸಾಧ್ಯವೇ ಶಾಪ ಮುಗಿಯುವ ದಿನಗಳನ್ನೆಣಿಸುವುದು ಹೊರತು ಆತ ಕಾಲಾತೀತ. ಅಂಥ ವಾತಾವರಣದ ಫಲವಾದ ಮೇಘದೂತದ ಯಕ್ಷ ಮತ್ತು ಆ ಯಕ್ಷಲೋಕಕ್ಕೆ ಸಮೀಪವಿರುವ ಮೇಘಕ್ಕೆ ಯಾವುದೇ ಕಾಲಮಾನದ ನಿರ್ಬಂಧ, ಮಿತಿ ಮತ್ತು ಕಟ್ಟುಪಾಡುಗಳು ಇಲ್ಲದಿರಬಹುದು: ಆದರೆ ಅಲ್ಲಿ ದೊರಕುವ ಕೆಲವಾದರೂ ವಿವರಗಳು ಕಾಲಮಾನದ ಬಂಧನದಿಂದ ಮುಕ್ತವಾಗಿರಲಾರವು.

ಕಾಳಿದಾಸನ ಅತ್ಯಂತ ಮಹತ್ವದ ಸೃಷ್ಟಿಯಾದ ಸಾಕುನ್ತಲೆ ಕೂಡ, ಕಾಲನ ನಿರ್ಬಂಧದ ಹಂಗಿನಿಂದ ಮುಕ್ತಳಾದ ನಾಯಕಿಯಂತೆ ತೋರಿಬರುತ್ತಾಳೆ. ಅವರುಗಳು ಬಹಳ ವಿಶಾಲವಾದ ಅರ್ಥದಲ್ಲಿ ಯಾವುದೇ ಊರು, ನಗರ ಅಥವಾ ಕಾಲಮಾನಕ್ಕೆ ಸೇರಿದವರಾಗಿರಬಹುದು. ಕುಮಾರಸಂಭವದ ಶಿವಪಾರ್ವತಿಯರಿಗೆ ಹಿಮಾಲಯದ ತಪ್ಪಲಿನ ಅನ್ಯೋನ್ಯತೆ ಇದ್ದರೆ, ರಘುವಂಶದ ರಾಜರಿಗೆ ಅವರು ರಘುವಂಶಸ್ಥರು ಎಂಬುದೇ ಹೆಗ್ಗಳಿಕೆ. ಪುರೂರವನಿಗೂ ಒಂದು ಹಿನ್ನೆಲೆ ಇರುವಂತೆ, ಯಕ್ಷನಿಗೂ ಆತನದೇ ಆದ ಯಕ್ಷಲೋಕದ ಹಿನ್ನೆಲೆ ಇದೆ. ಅದೇ ತರಹ ಮಾಲವಿಕಾಗ್ನಿಮಿತ್ರಕ್ಕಿರುವ ಐತಿಹಾಸಿಕ ಹಿನ್ನೆಲೆ – ಅದು ಯಾವುದೇ ಶತಮಾನದ್ದಾದರೂ ಆಗಿರಬಹುದು – ಯನ್ನು ನಿರಾಕರಿಸಲು ಬರುವುದಿಲ್ಲ, ಕಣ್ವ ಆಶ್ರಮದ ಹಿನ್ನೆಲೆ ಹೊರತು ಶಾಕುನ್ತಲೆಗಿರುವ ಕಾಲದ ಜತೆಗಿನ ಅನ್ಯೋನ್ಯತೆಯಾದರೂ ಯಾವುದು?

ಆ ಹಿನ್ನೆಲೆಯಲ್ಲಿ ನೋಡುವುದಾದರೆ ಕಾಲನ ಹದ್ದುಬಸ್ತು ಮತ್ತು ಬಂಧನವನ್ನು ಒಪ್ಪಿಕೊಳ್ಳಲು ನಿರಾಕರಿಸುವ ವ್ಯಕ್ತಿಯಂತೆ ಕಾಳಿದಾಸ ತೋರಿಬರುತ್ತಾನೆ, ಆತನ ಕೃತಿಗಳ ಎಲ್ಲ ನಾಯಕನಾಯಕಿಯರು ಮತ್ತು ಪಾತ್ರಗಳಿಗೆ ಕಾಲನ ಬಂಧನವಿಲ್ಲವಾದಂತೆ, ಅವರ ಸೃಷ್ಟಿಕರ್ತನಾದ ಕಾಳಿದಾಸನಿಗೂ ಕೂಡ ಯಾವುದೇ ಕಾಲದ – ಇಂತಹ ಖಚಿತ ಶತಮಾನಕ್ಕೆ ಸೇರಿದವನು ಎಂಬ ಅರ್ಥವೂ ಸೇರಿದಂತೆ – ಹಂಗೂ ಇರುವಂತೆ ತೋರುವುದಿಲ್ಲ.

ಅಂಥ ಕವಿಯ ಮೇಲೂ ಕಾಲ ತನ್ನ ಮುದ್ರೆ ಒತ್ತುವುದನ್ನು ಮರೆತಿಲ್ಲ ಎಂಬುದೇ ವಿಚಿತ್ರ. ಆತ ಕಾಲಕ್ಕೆ ಸ್ಪಂದಿಸುವ ರೀತಿ ಬೇರೆಯಾಗಿರುವುದೂ ಅದಕ್ಕೆ ಕಾರಣವಾಗಿದ್ದಿರಬಹುದೇ?

ಮೂಲ ಮಹಾಭಾರತದ ಹಿನ್ನೆಲೆಯಾದ ರೂಕ್ಷಸಮಾಜ, ಕಾಲದ ಯಾವ ಹಂತದಲ್ಲಿ ಆರಂಭವಾಯಿತು ಎಂದು ಖಚಿತವಾಗಿ ಗುರುತಿಸುವುದಾದರೂ ಹೇಗೆ? ಅದು ವ್ಯಾಸ ಮಹರ್ಷಿಯ ಕಾಲದ್ದೆ ಅಥವಾ ಹಿಂದಿನದೆ?

ಆ ರೀತಿಯ ಎಲ್ಲ ತೊಡಕುಗಳ ಕಾರಣ ವ್ಯಾಸಮಹರ್ಷಿಯು ಇತಿಹಾಸದ ಯಾವುದೋ ಒಂದು ಕಾಲಮಾನದ ಬದುಕಿನ ಹಿನ್ನೆಲೆಯಲ್ಲಿ ಅರಳಿದ ಎಪಿಕ್‌ – ಕವಿ ಎಂದು ಅಂದಾಜು ಮಾಡಬಹುದೇ ವಿನಾ, ಆತನ ಎಪಿಕ್‌ನ ವಸ್ತುವಿನ ಕಾಲವನ್ನು ಇಂಥಾದ್ದೇ ಶತಮಾನದ ಹಿನ್ನೆಲೆಯಲ್ಲಿ ಖಚಿತವಾಗಿ ನಿಷ್ಕೆರ್ಷೆಮಾಡುವುದು ಕಷ್ಟಸಾಧ್ಯ. ಆ ಮಾತು ಹೋಮರನಿಗೂ ಅನ್ವಯಿಸುತ್ತದೆ. ಯಾವುದೋ ಕಾಲಘಟ್ಟದ ಬದುಕಿನ ಕೊಡುಗೆಗಳಾದ ಎಪಿಕ್‌ ಪರಂಪರೆಯ ಹಿರಿಮೆ ಮತ್ತು ಪ್ರಮುಖ ಗುಣಲಕ್ಷಗಳ ಪೈಕಿ ಅದೂ ಒಂದು.

ವರ್ಜಿಲ್‌ ಕಾಲಕ್ಕೆ ಪರಿಸ್ಥಿತಿ ಬದಲಾಗುತ್ತದೆ: ಒಂದು ನಿರ್ದಿಷ್ಟ ಕಾಲ ಮತ್ತು ಯುಗದ ಕೊಡುಗೆಯಾದ ಆತ ಲಿಖಿತ ಎಪಿಕ್‌ ಕಾವ್ಯ ಪರಂಪರೆಯ ಕೊಡುಗೆ. ಅಲಿಖಿತ ಮತ್ತು ಲಿಖಿತ ಎಪಿಕ್‌ ಪರಂಪರೆ ನಡುವಿನ ವ್ಯತ್ಯಾಸವೇ ಅದು. ಅದರ ಪ್ರಭಾವದಿಂದ ಬಿಡಿಸಿಕೊಂಡು ಹೊಸ ಲಿಖಿತ ಎಪಿಕ್‌ ಪರಂಪರೆ ಸ್ಥಾಪಿಸುವುದರ ಮೂಲಕ, ಹಿಂದಿನ ಕಾವ್ಯ ಪರಂಪರೆ ಮುಂದುವರಿಸುವ ವಿಚಾರದಲ್ಲಿ ವರ್ಜಿಲ್‌ ವಹಿಸಿದ ಪಾತ್ರವನ್ನು ಈಗಾಗಲೇ ಚರ್ಚಿಸಲಾಗಿದೆ. ಆದರೆ ಭಾರತದಲ್ಲಿ ಅಲಿಖಿತ ಮತ್ತು ಲಿಖಿತ ಎಪಿಕ್‌ ಮಾದರಿಯ ಕಾವ್ಯ ಪರಂಪರೆಗಳ ನಡುವೆ ಅಷ್ಟು ಖಚಿತವಾದ ವ್ಯತ್ಯಾಸಗಳು ಮೂಡಿಬಂದಂತೆ ಕಾಣುವುದಿಲ್ಲ. ಏಕೆಂದರೆ, ಭಾರತದಲ್ಲಿ ಲಿಖಿತ ಕಾವ್ಯಪರಂಪರೆ ಮತ್ತು ಲಿಖಿತ ಇತಿಹಾಸಕ್ರಮ ಆರಂಭವಾದ ನಂತರ ಬಂದ ಕಾಳಿದಾಸನಂಥ ಕವಿ ಕೂಡ ಕಾಲನಿಗೆ ಸ್ಪಂದಿಸುವ ವಿಚಾರದಲ್ಲಿ ಅದೇ ವ್ಯಾಸ ವಾಲ್ಮೀಕಿ ಹಾದಿಯಲ್ಲಿ ಸಾಗುತ್ತಾನೆ. ಆ ಜತೆಗೆ ಕಾಲಕ್ಕೆ ಸ್ಪಂದಿಸುವ ವಿಚಾರದಲ್ಲಿ ಕಾಳಿದಾಸನು ಹೋಮರ್‌, ವ್ಯಾಸ ಮತ್ತು ವಾಲ್ಮೀಕಿಯರಿಗಿಂತಲೂ ಹೆಚ್ಚು ವ್ಯಾಪಕವಾದುದನ್ನು ಒಳಗೊಳ್ಳಲು ಹವಣಿಸುತ್ತಾನೆ.

ವಾಲ್ಮೀಕಿ ಕಾಲದ ನಗರ ನಯನಾಜೂಕಿನ ಸಾಮ್ರಾಜ್ಯ ಪೂರ್ವಪ್ರಜ್ಞೆಗೆ ದಾರಿಮಾಡಿ ಕೊಟ್ಟ ವ್ಯಾಸರ ಕಾಲದ ಕೃಷಿಆಧಾರಿತ ರೂಕ್ಷ ಗ್ರಾಮೀಣ ಮನಸ್ಸು, ಭಾರತೀಯ ಮನೋಧರ್ಮ ಮತ್ತು ಮನೋಭಾವವಾಗಿ ಪರಿವರ್ತನೆಗೊಂಡ ಕಾಲದ ಕೊಡುಗೆ ಈ ಕಾಳಿದಾಸ. ಆತನ ಕೃತಿಗಳಲ್ಲಿ ವ್ಯಕ್ತವಾಗುವ ಕಾಲಮಾನವು ತುರುಗಾಹಿ ಸಂಸ್ಕೃತಿಯ ನಂತರ ಬಂದ ದಿಲೀಪನ ಕಾಲಕ್ಕೂ ಹಿಂದಿನದ್ದಿರಬಹುದಾದ ಯಕ್ಷ, ಕಿನ್ನರ, ಗಂಧರ್ವ ಸೀಮೆಯಿಂದ ಹಿಡಿದು ಅಗ್ನಿವರ್ಣ ಮತ್ತು ಅಗ್ನಿಮಿತ್ರರಂತಹವರನ್ನು ನೀಡಿದ ಐತಿಹಾಸಿಕ ಘಟನೆಗಳವರೆಗೂ ಏಕವಾಗಿ ಗ್ರಹಿಸಲು ಯತ್ನಿಸುತ್ತದೆ; ಶಾಕುನ್ತಲೆಯಂತಹವರ ಯುಗವು ಆ ಮಧ್ಯ ಎಲ್ಲೋ ಒಂದು ಹಂತದಲ್ಲಿ ಸೇರ್ಪಡೆಯಾಗಬೇಕು.

ಆತನ ಮತ್ತು ಭಾರತದ ಮಟ್ಟಿಗೆ ‘ಅತ್ಯಂತ ಯಶಸ್ವಿ ಕ್ಲಾಸಿಕ್‌’ ಕೃತಿಯಾದ ‘ಅಭಿಜ್ಞಾನ ಶಾಕುನ್ತಲಂ’ ಸಂಪೂರ್ಣ ಯಶಸ್ವಿಯಾಗದಿರಲು ಆ ತರಹದ ದೌರ್ಬಲ್ಯವೂ ಒಂದಾಗಿರುವಂತೆ ತೋರುತ್ತದೆ. ಆ ಮಿತಿಯ ನಡುವೆಯೂ ಆ ಕೃತಿ ಸಾಧಿಸುವ ಸೀಮಿತ ಯಶಸ್ಸು ಗಮನಾರ್ಹ. ಆ ಅರ್ಥದಲ್ಲಿ “ಭಾರತದ ಮೊದಲ ಮಾದರಿ ಕ್ಲಾಸಿಕ್‌ ಕೃತಿ ಅಭಿಜ್ಞಾನ ಶಾಕುನ್ತಲಂ”. ವಸ್ತುವಿನ ಆಯ್ಕೆ ಮತ್ತು ನಿರ್ವಹಣೆಯಲ್ಲಿ ಕಾಳಿದಾಸ ತೋರುವ ಪ್ರತಿಭಾ ಶ್ರೀಮಂತಿಕೆ, ಪ್ರಗಲ್ಭತೆಯಿಂದ ಕೂಡಿದ ಕಲ್ಪನಾ ಸಂಪನ್ನತೆ, ಭಾಷಾ ಬಳಕೆಯಲ್ಲಿ ವಹಿಸುವ ಎಚ್ಚರ ಮತ್ತು ಅಚ್ಚುಕಟ್ಟುತನ : ಆ ಕಾರಣ ಆದರ್ಶನೀಯ ಕೃತಿ ಎಂದು ಭಾರತೀಯ ಸಂದರ್ಭದಲ್ಲಿ ಸ್ವೀಕರಿಸಹಬುದಾದ. ಯುರೋಪ್ ಮೂಲದ ಜನರ ಮೆಚ್ಚುಗೆ ಗಳಿಸಿದ ಮೊದಲ ಸಾಹಿತ್ಯ ಕೃತಿ ಎಂಬ ಅಭಿಧಾನಕ್ಕೆ ಪಾತ್ರವಾಗಲು ಆ ಸಮಾನ ಅಂಶವೂ ಕಾರಣವಾಗಿರಬಹುದು. ಅಂದರೆ ಅವರ ನಿರೀಕ್ಷೆ, ಕಲ್ಪನೆ, ಗುಣಮಟ್ಟ ಮತ್ತು ವಿಮರ್ಶಾಮೂಲಮಾನ ಸೂತ್ರಗಳಿಗೆ ಒಗ್ಗುವ ಕೃತಿ.

ತನ್ನ ಬಾಲ್ಯದ ಪರಿಸರಕ್ಕೆ ಸಹಜವಾದ ಮುಗ್ಧತೆ ಮತ್ತು ಎಳೆತನ ಕಳೆದುಕೊಂಡ ಮಲೆನಾಡು ಆಶ್ರಮವಾಸಿ ಬಾಲೆಯೊಬ್ಬಳು, ಬದುಕಿನಲ್ಲಿ ತಿಳುವಳಿಕೆ ಪಡೆದು ಪ್ರಬುದ್ಧೆಯಾಗುವುದು ಶಾಕುನ್ತಲಾದ ವಸ್ತು; ಅಥವಾ ನಗರದ ದುಶ್ಚಟಗಳಿಗೆ ತುತ್ತಾದ ಪ್ರಮತ್ತನೊಬ್ಬ, ತಾಳ್ಮೆಯ ಪ್ರತಿರೂಪದಂತಿದ್ದ ಆಕೆಯ ಕಾಯುವಿಕೆಯ ಫಲವಾಗಿ ವಿಚಲಿತಗೊಂಡು ಕೊನೆಗೂ ಬದುಕಿನಲ್ಲಿ ಬದಲಾಗುವುದು; ಗ್ರಾಮೀಣ ಅಥವಾ ಮಲೆಸೀಮೆಯ ಅಕೃತಕ ಸರಳ ಬದುಕು ಮತ್ತು ನಗರದ ಆಡಂಬರ, ದತ್ತಕ ವಾತಾವರಣ ಮತ್ತು ಮೂಲ ಪ್ರವೃತ್ತಿ, ಪರಿಸರದ ಪ್ರಭಾವ ಹಾಗೂ ಅನುವಂಶೀಯತೆ ಇವುಗಳ ನಡುವಿನ ಅಂತರ ಮತ್ತು ತಾತ್ವಿಕ ಘರ್ಷಣೆ ಹೆಚ್ಚಿನ ತಾಕಲಾಟವಿಲ್ಲದೆ ಸುಸೂತ್ರವಾಗಿ ಇತ್ಯರ್ಥಗೊಳ್ಳುವುದನ್ನು ಆ ಕೃತಿಯಲ್ಲಿ ಬಹಳ ಸೂಕ್ಷ್ಮವಾಗಿ ತರಲಾಗಿದೆ. ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ಕೌಟುಂಬಿಕ ಇತ್ಯಾದಿ ಹಲವಾರು ಹಂತಗಳಲ್ಲಿ ಚಲಿಸುವ ಆ ಕೃತಿ ಪುರಾಣವೂ ಹೌದು. ಮೂಲತಃ ಪೌರಾಣಿಕ ಪರಂಪರೆಗೆ ಸೇರಿದ ಕತೆಯೊಂದನ್ನು ಇತಿಹಾಸ ಮತ್ತು ಯಾವುದೇ ಯುಗದ ಸಮಕಾಲೀನ ಕಾದಂಬರಿಯಾಗಿ ಅತ್ಯಂತ ಸುಸೂತ್ರವಾಗಿ ಮಾರ್ಪಡಿಸುವ ರೀತಿಗೆ ಶಾಕುನ್ತಲೆ ಇಂದಿಗೂ ಅತ್ಯುತ್ಕೃಷ್ಟ ಉದಾಹರಣೆ. ಆ ಕೃತಿಯನ್ನು ಎಷ್ಟು ಚೆನ್ನಾಗಿ ನಿರ್ವಹಿಸುತ್ತಾನೆ ಎಂದರೆ, ಅದು ಪುರಾಣವೂ ಹೌದು, ಆದರೆ ಪುರಾಣವಾಗಿ ಉಳಿಯುವುದಿಲ್ಲ; ಇತಿಹಾಸವೂ ಹೌದು, ಆದರೆ ಕೇವಲ ಐತಿಹಾಸಿಕ ಘಟನೆಯೊಂದಾಗಿ ನಿಲ್ಲುವುದಿಲ್ಲ. ಮತ್ತು ಸಮಕಾಲೀನ ಕಾದಂಬರಿಯಾದರೂ ಕಾದಂಬರಿಯಲ್ಲ. ಪುರಾಣ, ಇತಿಹಾಸ ಮತ್ತು ಸಮಕಾಲೀನತೆಯ ಕಾದಂಬರಿ ಸ್ಪರ್ಶ ಆ ಕೃತಿಯಲ್ಲಿ ಇದ್ದೂ ಇಲ್ಲದಂತಿದೆ. ಕಾಲಾತೀತವಾದ ಆದರೆ ನಿತ್ಯಕಾಲೀನ ಕೃತಿ; ಅದೇ ಅದರ ಗಟ್ಟಿತನವಾಗಿರುವಂತೆಯೇ, ಪ್ರಮುಖ ದೌರ್ಬಲ್ಯವೂ ಹೌದು.

ದುಷ್ಯಂತ ಮತ್ತು ಶಾಕುನ್ತಲೆ ಪ್ರೀತಿಗೆ ಒಡಂಬಡುವ ರೀತಿ – ದಿದೊ ಮತ್ತು ಈನಿಯಾಸ್‌ ಪ್ರಣಯದ ತರಹವೆ – ಯಾವುದೇ ಕಾಲದ ಯುವಜನರನ್ನು ನಾಚಿಸುವಷ್ಟು ನಾಜೂಕಾಗಿದೆ: ಅಷ್ಟೇ ಪುರಾತನವಾದುದು ಹೌದು ಮತ್ತು ಎಲ್ಲ ಕಾಲಗಳಿಗೂ ಸಮಕಾಲೀನವಾದುದು. ಪ್ರಣಯ ಪ್ರಮಾದದಿಂದಾಗಿ ತಾಳ್ಮೆ ಕಳೆದುಕೊಂಡ ದಿದೊ ಬದುಕು ದುರಂತದಲ್ಲಿ ಕೊನೆಗೊಂಡರೆ ಕಾಯುವಿಕೆಯ ಫಲವಾಗಿ ತನ್ನ ಬದುಕಿನಲ್ಲಿ ನಡೆದುಹೋದ ಪ್ರಮಾದವನ್ನು ಶಾಕುನ್ತಲೆ ಅದೇ ಬದುಕಿನ ಸಾರ್ಥಕತೆಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗುತ್ತಾಳೆ. ದಿದೊ ಬದುಕಿನಲ್ಲಿ ದುರಂತಕ್ಕೆ ಕಾರಣವಾಗುವ ದುಡುಕಿದ ಬಿಸಿಲು ಪ್ರಣಯ, ಶಾಕುನ್ತಲೆ ಬದುಕಿನಲ್ಲಿ ಒಂದು ತರಹದ ನೆಮ್ಮದಿಗೆ ಕಾರಣವಾಗುತ್ತದೆ. ಆ ಮೂಲಕ ಚಾಲೂ ಆದ ನಗರ ಜೀವಿಯೊಬ್ಬನ ಬದುಕನ್ನು ಮಾರ್ಪಡಿಸುವಲ್ಲಿ ಸಫಲಳಾಗುತ್ತಾಳೆ. ದೋಷವಾಗಿ ಬಿಡಬಹುದಾಗಿದ್ದ ಮಲೆನಾಡ ಸಹಜ ಮುಗ್ಧತೆ ಮತ್ತು ಬಾಲ್ಯ ಸಹಜ ಕುತೂಹಲದ ಶೃಂಗಾರ, ಗುಣವಾಗಿ ಪರಿವರ್ತನೆಗೊಳ್ಳುತ್ತಾದರೂ, ಅಷ್ಟರಲ್ಲಾಗಲೇ ಮಗನ ಮೂಲಕ ತಾಯ್ತನದ ರೂಪದಲ್ಲಿ ಸಾರ್ಥಕತೆ ಕಾಣುವ ಹಂತ ತಲುಪಿರುತ್ತಾಳೆ.

ಆದರೆ ವೈಯಕ್ತಿಕ ಬದುಕಿನಲ್ಲಿ ಮಾಗಿ ತಿಳುವಳಿಕೆ ಪಡೆಯುವ ದುಷ್ಯಂತನ ರಾಜಕೀಯ ಮುಖ ನಾಟಕಕ್ಕೆ ಮುಖ್ಯವಾಗುವುದಿಲ್ಲ. ಬಾಲ್ಯಸಹಜ ಕುತೂಹಲದಿಂದ ಜವಾಬ್ದಾರಿ ಏನೆಂಬುದು ಗೊತ್ತಾಗುವ ಮೊದಲೇ ಶೃಂಗಾರ ವ್ಯವಹಾರದಲ್ಲಿ ತೊಡಗಿ ಗರ್ಭಧರಿಸುವ ಶಾಕುನ್ತಲೆಯ ಸಮಸ್ಯೆ, ಸಾಂಸ್ಕೃತಿಕವಾದಂತೆ ರಾಜಕೀಯ ಸಾಮಾಜಿಕವಾದುದೂ ಹೌದು. ಆ ತರಹದ ಮುಗ್ಧತೆಯ ಲಾಭ ಪಡೆದುಕೊಳ್ಳಲು ಹಿಂಜರಿಯದ ದುಷ್ಯಂತ ಸಾಧಾರಣ ವ್ಯಕ್ತಿಯಲ್ಲ, ಚಕ್ರವರ್ತಿ: ಆದರೆ ಕೃತಿಗಿರುವ ಆ ರಾಜಕೀಯ ಆಯಾಮವನ್ನು ಕಾಳಿದಾಸ ಅನ್ವೇಷಿಸುವ ಮನಸ್ಸು ಮಾಡಿದಂತೆ ಕಾಣುವುದಿಲ್ಲ. ಹಾಗಾಗಿ ‘ಶಾಕುನ್ತಲೆ’ ನಾಟಕ ರಾಜಕೀಯವಾಗಿ ಬೆಳೆಯುವುದಿಲ್ಲ ಸೊಫೊಕ್ಲೆಸ್‌ನ ‘ದೊರೆ ಈಡಿಪಸ್’ ನಾಟಕದ ಉದಾಹರಣೆ ತೆಗೆದುಕೊಳ್ಳುವುದರ ಮೂಲಕ, ಆ ಗ್ರಹಿಕೆಯನ್ನು ಇನ್ನೂ ಹೆಚ್ಚಾಗಿ ಸ್ಪಷ್ಟಪಡಿಸಿಕೊಳ್ಳಬಹುದೆಂದು ತೋರುತ್ತದೆ. ಈಡಿಪಸ್‌ನ ವೈಯಕ್ತಿಕ ಬದುಕಿನಲ್ಲಿ ಎದುರಾದ ಬಿಕ್ಕಟ್ಟು ಪಡೆದುಕೊಳ್ಳುವ ರಾಜಕೀಯ ಸಾಮಾಜಿಕ ನೈತಿಕ ಆಯಾಮದಿಂದಾಗಿ, ಆ ಕೃತಿ ಈ ಜಗತ್ತಿನ ಅತ್ಯಂತ ಮಹತ್ವದ ಕೃತಿಗಳಲ್ಲೊಂದಾಗಿ ಪರಿಣಮಿಸಿದೆ ಎಂಬುದನ್ನು ಮರೆಯಬಾರದು. ತಂದೆಯನ್ನು ಕೊಂದು ತಾಯಿಯ ಗಂಡನಾಗಬೇಕಾಗಿ ಬರುವ ಈಡಿಪಸ್‌ನ ವೈಯಕ್ತಿಕ ಸಮಸ್ಯೆ ಕೇವಲ ವೈಯಕ್ತಿಕ ವಾಗುಳಿಯುವುದಿಲ್ಲ. ನಾಟಕ ಆರಂಭವಾಗುವುದೇ ಅದು ಪಡೆದುಕೊಳ್ಳುವ ರಾಜಕೀಯ ಮತ್ತು ಸಾರ್ವಜನಿಕ ಆಯಾಮದೊಂದಿಗೆ. ದೊರೆ ಈಡಿಪಸ್‌ನ ಸಂದರ್ಭದಲ್ಲಿ ಬದುಕು ವೈಯಕ್ತಿಕ ಮತ್ತು ಸಾರ್ವಜನಿಕ ಎಂದು ಪ್ರತ್ಯೇಕವಾಗಿ ಉಳಿಯದೇ ಹೋದುದೇ, ದುರಂತದ ತೀವ್ರತೆ ಹೆಚ್ಚಾಗಲು ಪೂರಕವಾಗುತ್ತದೆ.

ಶಾಕುನ್ತಲೆಯ ಸಮಸ್ಯೆ ಕೊನೆಯವರೆಗೂ ದುಷ್ಯಾಂತನ ವೈಯಕ್ತಿಕ ಬದುಕಿನ ಭಾಗವಾಗಿ ಅದೇ ನೆಲೆಯಲ್ಲಿ ಸುಖಾಂತಗೊಳ್ಳುತ್ತದೆ. ಆ ರೀತಿ ಸುಖಾಂತ ಅಥವಾ ದುಃಖಾಂತರಗೊಳ್ಳುವುದರ ಬಗ್ಗೆ ಯಾವುದೇ ತಕರಾರಿಲ್ಲ. ತಕರಾರಿರುವುದು ಆ ಕೃತಿ ಪಡೆದುಕೊಳ್ಳಬಹುದಾದ ಎಲ್ಲಾ ಆಯಾಮಗಳನ್ನು ಪಡೆದುಕೊಳ್ಳದಿರುವುದರ ಬಗ್ಗೆ.

ಶಾಕುನ್ತಲೆಯಂಥ ಮಗಳು ತಂದೊಡ್ಡುವ ಸಮಸ್ಯೆಯನ್ನು ಎದುರಿಸುವ ತಂದೆ – ತಾಯಿಗಳು ಈ ಜಗತ್ತಿನಲ್ಲಿ ಯಾರಿದ್ದಾರೆ? ಆ ಸಮಸ್ಯೆ ಬರುಬರುತ್ತಾ ಹೆಚ್ಚುತ್ತಲೇ ಸಾಗಿದೆ. ಹಾಗಾಗಿ ‘ಶಾಕುನ್ತಲೆ’ಗಿರುವ ಸಾರ್ವಕಾಲಿಕತೆ ಮತ್ತು ನಿತ್ಯಸಮಕಾಲೀನತೆಯನ್ನು ಅಲ್ಲಗಳೆಯಲು ಬರುವುದಿಲ್ಲ; ಅದಷ್ಟೆ ಕೃತಿಯ ಮಹತ್ವ ಹೆಚ್ಚಿಸಲು ಸಾಕಾಗುವುದಿಲ್ಲ ಎಂಬುದಕ್ಕೆ ‘ಶಾಕುನ್ತಲೆ’ ಕೃತಿ ಜೀವಂತ ನಿದರ್ಶನ. ದುಷ್ಯಂತ – ಶಾಕುನ್ತಲೆಯರು ಯಾವುದೇ ಕಾಲದವರಾದರೂ ಆಗಬಹುದು ಅಥವಾ ಆಗಿರಬಹುದು. ಆದರೆ ಅವರು ಪ್ರತಿನಿಧಿಸುವ ಪರಿಸರ ಮತ್ತು ಸಂಸ್ಕೃತಿ ಯಾವುದಾದರೊಂದು ಕಾಲಮಾನಕ್ಕೆ ಬದ್ಧವಾಗಿರಬೇಕಾಗುತ್ತದೆ. ಇತಿಹಾಸ, ಪುರಾಣ ಮತ್ತು ಸಮಕಾಲೀನ ಕಾದಂಬರಿಗಳೂ ಆದ ಮಹಾಭಾರತ – ರಾಮಾಯಣಗಳು ಎಲ್ಲ ಕಾಲಕ್ಕೆ ಸಲ್ಲುತ್ತವೆ ನಿಜ; ಆದರೂ ಅವು ಎಲ್ಲ ಕಾಲವಾಗಲು ಸಾಧ್ಯವಿಲ್ಲ. ಒಂದು ನಿರ್ದಿಷ್ಟ ಕಾಲಮಾನದ ಕೊಡುಗೆಯಾದ ಅವು ಕಾಲಕ್ಕೆ ಬದ್ಧವಾಗಿದ್ದು, ಆ ಕಾಲಮಾನದ ಮಿತಿಯನ್ನು ಮೀರುವುದರ ಮೂಲಕ ವರ್ಜಿಲ್‌ ಕಾಲದ ಮಿತಿಯನ್ನು ಮೀರಲು ಹವಣಿಸಿ, ಅದರಲ್ಲಿ ಯಶಸ್ವಿಯೂ ಆಗಿದ್ದಾನೆ. ಹಾಗಾಗಿ ಆತನ ‘ಈನೀಡ್‌’ ಪುರಾಣವೂ ಹೌದು, ಇತಿಹಾಸವೂ ಹೌದು ಮತ್ತು ಸಮಕಾಲೀನ ಕಾದಂಬರಿಯೂ ಹೌದು. ಅವೆಲ್ಲ ಆಗುವುದರ ಜತೆಗೆ ಅದು ನಿತ್ಯಕಾಲೀನ ಸಾರ್ವಕಾಲಿಕ ಸತ್ಯವಾಗಿ ಮಾರ್ಪಡಲು ಸಾಧ್ಯವಾಗಿದೆ – ಮಹಾಭಾರತ ಇಲಿಯಡ್‌ ರಾಮಾಯಣಗಳ ತರಹವೇ.

ಕಾಳಿದಾಸನಿಗೆ ಹತ್ತಿರದ ಕಾಲದ ಸಮಕಾಲೀನ ಬಿಕ್ಕಟ್ಟು ಕೃತಿಯಲ್ಲಿ ಒಡಮೂಡಲು ಸಾಧ್ಯವಾಗದಿರುವುದೇ ‘ಅಭಿಜ್ಞಾನ ಶಾಕುನ್ತಲಂ’ ಕೃತಿಯ ದೊಡ್ಡ ದೌರ್ಬಲ್ಯ. ಬಂಡೆದ್ದ ಅಥವಾ ಅಸಮಾಧಾನ ಬೆಳೆಸಿಕೊಂಡಿದ್ದ ಮಲೆನಾಡ ಪ್ರಾಂತ್ಯದ ಜನರನ್ನು ನಿಯಂತ್ರಿಸಲು ಅಥವಾ ಮನವೊಲಿಸಲು ಬಂದಾಗ ನಡೆದ ಪ್ರೇಮ ಪ್ರಕರಣ ಎಂಬಂತೆ ಶಕುನ್ತಲೆಯ ಜತೆಗಿನ ಪರಿಣಯವನ್ನು ತೋರಿಸಿದ್ದಲ್ಲಿ, ಆ ಕೃತಿಯ ದಿಕ್ಕೇ ಸಂಪೂರ್ಣ ಬದಲಾಗಿ ಹೋಗುತ್ತಿತ್ತೋ ಏನೋ.

ಆ ಎಲ್ಲ ಮಿತಿಗಳ ನಡುವೆಯೂ ಶಾಕುನ್ತಲೆ ಕೃತಿ ಭಾರತೀಯ ಸಂದರ್ಭದ ಕ್ಲಾಸಿಕ್‌ ಕೃತಿಯಾಗಿ ನಿಲ್ಲುತ್ತದೆ ಎಂಬುದೇ ಒಂದು ತರಹದ ಆಶ್ಚರ್ಯ. ‘ಶಾಕುನ್ತಲೆ’ ಬರೆಯುವಾಗ ಆತ ತೋರುವ ಪ್ರೌಢಿಮೆ, ಎಚ್ಚರ ಮತ್ತು ಪ್ರತಿಭೆಯ ಔನ್ನತಿಕೆಯನ್ನು ಆತನ ಮತ್ತಾವ ಕೃತಿಗಳಲ್ಲೂ ಆ ಪ್ರಮಾಣದಲ್ಲಿ ಕಾಣಲಾಗುವುದಿಲ್ಲ. ಮೂಲತಃ ಪುರಾಣ ಕತೆಯಾದ ಆ ವಸ್ತು ಆಧರಿಸಿ ಯಾವುದೇ ಮಹತ್ವದ ಕೃತಿ ಕಾಳಿದಾಸನ ಕಾಲಕ್ಕೆ ಬಂದಿರಲಿಲ್ಲ ಎಂಬುದು ಎಷ್ಟು ಸಹಜವೋ, ಕಾಳಿದಾಸನಷ್ಟೇ ಎತ್ತರದ ಪ್ರತಿಭಾವಂತ ಮನಸ್ಸು ಆತ ಬರುವವರೆಗೆ ಅದರ ಆಕರ್ಷಣೆಗೆ ಒಳಗಾಗಿರಲಿಲ್ಲ ಎಂಬುದು ಅಷ್ಟೇ ಸತ್ಯ. ಅಸಾಧ್ಯ ಸಾಧ್ಯತೆಗಳು ಮತ್ತು ಆಯಾಮಗಳ ಅಪಾರತೆಯಿಂದ ತುಂಬಿದ ಅಂಥ ವಸ್ತುವಿನ ಆಯ್ಕೆ ಮತ್ತು ನಿರ್ವಹಣೆಯಲ್ಲಿ ಕಾಳಿದಾಸ ತೋರುವ ಎಚ್ಚರ ಮತ್ತು ಪ್ರತಿಭಾಸಂಪನ್ನತೆ ಭಾರತೀಯ ಇತಿಹಾಸದಲ್ಲಿಯೇ ಮಹತ್ವದ ಘಟನೆ.

ಶಾಕುನ್ತಲೆಯಂತಹ ನಿರ್ಮಲ ಪಾತ್ರವೊಂದನ್ನು ನೀಡಿದ ಕವಿ ಕಾಳಿದಾಸ, ಈ ಜಗತ್ತಿನ ಪಾತ್ರ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ.

ಅದೇ ಪ್ರಮಾಣದ ಎಚ್ಚರ ಮತ್ತು ವಿವೇಕವನ್ನು ‘ಕುಮಾರಸಂಭವಂ’ ಮತ್ತು ‘ರಘುವಂಶಂ ವಸ್ತುವಿನ ಆಯ್ಕೆಯಲ್ಲಿ ಪ್ರಕಟಿಸುತ್ತಾನಾದರೂ ನಿರ್ವಹಣೆ ಕಾಲದಲ್ಲಿ  –  – ಬೇಕಾದ ಪ್ರಮಾಣದಲ್ಲಿ ಪ್ರತಿಭಾ ಶ್ರೀಮಂತಿಕೆ ಪ್ರಕಟವಾದಂತೆ ಕಾಣುವುದಿಲ್ಲ. ಮೊದಲನೆಯದು ಪುರಾಣವಾದರೆ, ಎರಡನೆಯದು ಪುರಾಣಮಿಶ್ರಿತ ಇತಿಹಾಸ. ಹಾಗಾಗಿ ಆ ಎರಡೂ ಕೃತಿಗಳ ವಸ್ತುವಿಗಿರುವ ನಿತ್ಯಕಾಲೀನ, ಸಾರ್ವಕಾಲಿಕ ಅರ್ಥಪೂರ್ಣತೆಯನ್ನು ನಿರಾಕರಿಸಲು ಬರುವುದಿಲ್ಲ. ಅವುಗಳಲ್ಲಿ ಅಂತರ್ಗತವಾಗಿರುವ ನಿತ್ಯಕಾಲೀನ ಮತ್ತು ಸಾರ್ವಕಾಲಿಕ ಮಹತ್ವವನ್ನು ತನ್ನ ಕಾಲದ ಸಮಕಾಲೀನ ಬಿಕ್ಕಟ್ಟಾಗಿ ಪರಿವರ್ತಿಸುವುದು ಹೇಗೆ ಎಂಬ ಸಮಸ್ಯೆ ಕಡೆಗೆ ಕಾಳಿದಾಸ ನೀಡಬೇಕಾದ ಗಮನ ನೀಡಲು ಸಾಧ್ಯವಾಗಿದ್ದರೆ!

ಶತಶತಮಾನಗಳ ಕಾಲ ಆಳ್ವಿಕೆ ನಡೆಸಿದ ರಘುವಂಶದ ರಾಜರ ಅನೇಕ ತಲೆಮಾರಿನ ಏಳುಬೀಳಿನ ಕತೆ ಹೇಳುವುದರ ಮುಖೇನ, ತನ್ನ ಸಮಕಾಲೀನ ಸಮಾಜದ ರಾಜಕೀಯ ಕುಟುಂಬಗಳ ಕತೆ ಹೇಳಲು ಹೊರಟಿದ್ದಾನೆ ಎಂದು ಅನೇಕರು ಆ ಕೃತಿಯನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದಾರೆ; ಆ ಸಾಧ್ಯತೆ ಆ ವಸ್ತುವಿಗಿದೆ ಎಂಬುದು ಯಾರೂ ಅಲ್ಲಗಳೆಯಲಾಗದ ಸತ್ಯ. ಸ್ತ್ರೀಲೋಲುಪತೆಯಲ್ಲಿ ಮುಳುಗುವುದರ ಮೂಲಕ ಆ ವಂಶದ ಕೊನೆಯ ರಾಜನಾದ ಅಗ್ನಿ ವರ್ಣನು ಇಹಲೋಕ ತ್ಯಜಿಸಿದ್ದೇ ಅವನತಿ ಅಥವಾ ಇಳಿಮುಖ ಎಂದು ಅನೇಕರು ಭಾವಿಸಿರುವಂತೆ ತೋರುತ್ತದೆ. ರಘುವಂಶದ ರಘೋತ್ತಮನಾದ ರಘುನಂತರ ಬಂದ ರಾಜರಿಂದಲೇ ಆ ಅವನತಿ ಆರಂಭವಾದಂತೆ ಕಾಣುತ್ತದೆ ಎಂಬುದನ್ನು ಸಹ ಕಾಳಿದಾಸ ಬಹಳ ಸೂಕ್ಷ್ಮವಾಗಿ ಗುರುತಿಸುತ್ತಾನೆ ಎಂಬ ಸಂಗತಿಯನ್ನು ಗಮನಿಸಬೇಕಾಗುತ್ತದೆ.

ಮಹಾಭಾರತಕ್ಕಿಂತಲೂ ಅತ್ಯಂತ ವಿಶಾಲ ಮತ್ತು ವ್ಯಾಪಕವಾದ ಭೂಮಿಕೆಯಿಂದ ಕೂಡಿರುವ ರಘುವಂಶದ ರಾಜರ ಕತೆಯನ್ನು ಅತ್ಯಂತ ಸಂಕ್ಷಿಪ್ತವಾಗಿ ನಿರೂಪಿಸುವಾಗ ಕಾಳಿದಾಸ ತೋರುವ ಪ್ರೌಢಿಮೆ ಇಂದಿಗೂ ಅನುಕರಣೀಯವಾಗಿ ಉಳಿದಿದೆ. ಕಾಳಿದಾಸನಲ್ಲಿ ಕಾಣುವ ಮತ್ತೊಂದು ಪ್ರಮುಖ ಗುಣವೆಂದರೆ ಕತೆಯನ್ನು ಬಹಳ ಸಂಕ್ಷಿಪ್ತವಾಗಿ ಸೆರೆಹಿಡಿಯುವುದು. ಅದನ್ನು ಕಾಣಬೇಕಾದರೆ ಪಂಪನನ್ನು ಓದಬೇಕು. ಸರಳ ನಿರೂಪಣಾ ವಿಧಾನ ಅನುಸರಿಸುವುದರ ಮೂಲಕ ಅಂತಹ ಕೃತಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವೇ? ಮಹಾಭಾರತದ ಕವಿ ಕೃತಿಯನ್ನು ನೇರವಾಗಿ ನಿರೂಪಿಸಲು ಹೋಗುವುದಿಲ್ಲ. ಹೋಮರ್‌ ಕೂಡ ‘ಇಲಿಯಡ್’ ನಿರೂಪಿಸುವಾಗ ಸಿಂಹಾವಲೋಕನ ಕ್ರಮ ಇತ್ಯಾದಿ ತಂತ್ರ ಮತ್ತು ವಿಧಾನಗಳನ್ನು ಅನುಸರಿಸುತ್ತಾನೆ. ನಿರೂಪಕರು ಕತೆ ಹೇಳುವ ತಂತ್ರವನ್ನು ಆ ಕಾಲಕ್ಕಾಗಲೇ ಅನುಸರಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ರಘುವಂಶಂ ಕೃತಿಯನ್ನು ನಿರ್ವಹಿಸುವಲ್ಲಿ ಎದುರಾಗುವ ತೊಡಕುಗಳ ಅರಿವು ಕಾಳಿದಾಸನಿಗಿಲ್ಲದೆ ಇಲ್ಲ. ಎರಡನೆಯ ಪದ್ಯದಲ್ಲಿಯೇ ಆ ಸಮಸ್ಯೆಯನ್ನು ಬಹಳ ನೇರವಾಗಿ ಪ್ರಸ್ತಾಪಿಸುತ್ತಾನೆ:

ಅಲ್ಪವಿಷಯಮತಿ, ವಾಮನ, ತೆಪ್ಪದ ಸಹಾಯದಿಂದ ಸಾಗರವನು ದಾಂಟುವ ಯತ್ನ ಎಂದು ತನ್ನ ಪ್ರಯತ್ನವನ್ನು ತಾನೇ ಕಟುಟೀಕೆಗೆ ಗುರಿಪಡಿಸಿಕೊಳ್ಳುವ ಎಚ್ಚರವೂ ಇದೆ. ಬಹುತೇಕ ಎಲ್ಲ ಜನಾಂಗ, ಸಂಸ್ಕೃತಿ ಮತ್ತು ನಾಗರಿಕತೆಗಳ ಆರಂಭದ ನೆಲೆಯಾಗಿದ್ದಿರಬಹುದಾದ ತುರುಗಾಹಿ ಸಂಸ್ಕೃತಿಯಿಂದ ರಘುವಂಶದ ಕತೆ ಆರಂಭವಾಗುತ್ತದೆ. ಆದರೆ ಅದರ ಸಂಕೀರ್ಣತೆ ಗೊತ್ತಾಗುವ ರೀತಿಯಲ್ಲಿ ಕಾವ್ಯ ಮುಂದುವರಿಯುವುದಿಲ್ಲ. ಅದೇ ತರಹದ ಆತುರವನ್ನು ಶಂಬೂಕನ ವಧೆ ಸಂದರ್ಭದಲ್ಲೂ ತೋರಿಸಲಾಗುತ್ತದೆ. ಅಂದರೆ ಇಡೀ ಕಾವ್ಯ ಆ ತರಹ ಕ್ಷಿಪ್ರಗತಿಯಲ್ಲಿ ಮುಂದುವರಿಯುತ್ತದೆ.

ಅಭಿಜ್ಞಾನ ಶಾಕುನ್ತಲವನ್ನು ಇಂದು ರಂಗದ ಮೇಲೆ ಪ್ರಯೋಗಿಸಬಯಸುವವರು, ಅದನ್ನು ಯಾವುದಾದರೊಂದು ಆಡುಭಾಷೆಗೆ ಪರಿವರ್ತಿಸಬೇಕಾಗುತ್ತದೆ. ಅನುವಾದಿತ ಭಾಷೆ ಕಾಳಿದಾಸನ ಮೂಲಭಾಷೆಯಾಗುವುದು ಸಾಧ್ಯವಿಲ್ಲವಾದಂತೆ, ಅದರ ಸಂಸ್ಕೃತ ಮೂಲ ನಾಟಕ ನಿರ್ದೇಶನದ, ಅಭಿನಯದ, ರಂಗಕರ್ಮಿಗಳ ಮತ್ತು ನೋಡುವವರ ಭಾಷೆಯಾಗಿ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ಮರೆಯಬಾರದು. ಸೊಫೋಕ್ಲೆಸ್‌ ಮುಂತಾದ ಗ್ರೀಕ್‌ ನಾಟಕಕಾರರು ಕಾಳಿದಾಸ ಎದುರಿಸಿದ ವಿಚಿತ್ರ ಸನ್ನಿವೇಶವನ್ನು ಎದುರಿಸಲಿಲ್ಲ. ಅವರು ಬರೆದ ಮತ್ತು ಆಡಿದ ಕಾಲದಲ್ಲಿ ಆಡುಭಾಷೆಯಾಗಿದ್ದ ಅವರ ನಾಟಕಗಳ ಭಾಷೆ ಗ್ರಂಥಸ್ಥ ಭಾಷೆಯಾಗಿ ಮಾರ್ಪಟ್ಟುದು ಎಷ್ಟೋ ಶತಮಾನಗಳ ನಂತರ. ಆದರೆ ಕಾಳಿದಾಸ ತನ್ನ ನಾಟಕಗಳ ಮಾಧ್ಯಮವನ್ನಾಗಿ ಆರಿಸಿಕೊಂಡ ಭಾಷೆ ಆತ ಕೃತಿ ರಚನೆ ಮಾಡುವುದಕ್ಕೂ ಮೊದಲೇ ಗ್ರಂಥಸ್ಥ ಭಾಷೆಯಾಗಿ ಮಾರ್ಪಟ್ಟಿತು.

ತನ್ನ ಸಮಕಾಲೀನವಾದ ಭಾಷೆಯಲ್ಲಿ ಕಾವ್ಯ ಬರೆಯುವ ಮನಸ್ಸು ಕಾಳಿದಾಸನಿಗೆ ಬರಲಿಲ್ಲ ಏಕೆ?

ಆ ಅಭಿಜ್ಞಾನ ಶಾಕುನ್ತಲೆಯಲ್ಲಿಯೇ ಒಂದು ಮಾತು ಬರುತ್ತದೆ. ಆ ಮಾತನ್ನು ಹೇಳುವವನು ಬೇರೆ ಯಾರೂ ಅಲ್ಲ, ಪುತ್ರಾಕಾಂಕ್ಷಿಯಾದ ದುಷ್ಯಂತ; ಧೂಳಿನಲ್ಲಿ ಆಟವಾಡಿದ ಮಕ್ಕಳನ್ನು ಎತ್ತಿ ಮುದ್ದಿಸುವಾಗ ತಾವು ಉಟ್ಟಬಟ್ಟೆಗಳನ್ನು ಮಣ್ಣಿನಿಂದ ಮಲಿನಮಾಡಿಕೊಳ್ಳುವ ತಂದೆ ತಾಯಿಗಳೇ ಧನ್ಯರು

ಆಲಕ್ಷ್ಯದಂತಮುಕುಲಾನನಿಮಿತ್ತ ಹಾಸ್ಯೆ –
ರವ್ಯಕ್ತವರ್ಣರಮಣೀಯವಚಃ ಪ್ರವೃತ್ತೀನ್‌ |
ಅಂಕಾಶ್ರಯಪ್ರಣಯಿನಸ್ತನಯಾನ್ವಹಂತೋ
ಧನ್ಯಾಸ್ತದಂಗರಜಸಾ ಮಲಿನೀ ಭವಂತಿ ||೧೮||
ಕೊನೆಯ ಅಂಕ

ಎಂದು ಪರಿತಪಿಸುವ ಅನುಭವವನ್ನು, ಕಾಳಿದಾಸನೇ ಕವಿಯಾಗಿ ತನ್ನ ಬದುಕಿನ ಸಂದರ್ಭದಲ್ಲೂ ಪಾಲಿಸಲು ಸಾಧ್ಯವಾಗಿದ್ದರೆ ! ಮಣ್ಣಿನ ವಾಸನೆ ಎಂಬ ವಾದವನ್ನು ಪ್ರತಿಪಾದಿಸುವ ಅಗತ್ಯ ಗೋಪಾಲಕೃಷ್ಣ ಅಡಿಗರಿಗೆ ೨೦ನೇ ಶತಮಾನದಲ್ಲಿ ಎದುರಾಗುತ್ತಿರಲ್ಲಿವೋ ಏನೋ! ಅಥವಾ ಅದನ್ನು ಬೇರೆ ರೂಪದಲ್ಲಿ ಮಂಡಿಸಬೇಕಾಗುತ್ತಿತ್ತು.

ಆ ಕಾರಣವೇ ಕಾಲಾತೀತವಾಗಿ ಉಳಿಯಬಯಸುವ ಕಾಳಿದಾಸನಂತಹ ಕವಿಯು ಮೇಲೂ ಉಳಿಸಿ ಹೋಗಿರುವ ಕಾಲನ ಹೆಜ್ಜೆ ಗುರುತುಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕು. ಇಲ್ಲದೆ ಹೋದಲ್ಲಿ ಮೋಸ ಹೋಗುವ ಸಂಭವವೇ ಅಧಿಕ.

 

[1]ಕಿಂತು ವಧ್ವಾಂ ತವೈತಸ್ಯಾಂ ಅದೃಷ್ಟಸದೃಶಪ್ರಜಮ್‌
ನ ಮಾಮವತಿ ಸದ್ವೀಪಾ ರತ್ನಸೂರಪಿ ಮೇದಿನೀ || ೬೫ ||

ನೂನಂ ಮತ್ತೆಃ ಪರಂ ವಂಶ್ಯಾಃ ಪಿಂಡವಿಚ್ಛೇದದರ್ಶಿನಃ
ನ ಪ್ರಕಾಮಭುಜಃ ಶ್ರಾದ್ಧೆ ಸ್ವಧಾಸಂಗ್ರಹತತ್ಪರಾಃ || ೬೬ ||

ಮತ್ಸರಂ ದುರ್ಲಭಂ ಮತ್ವಾ ನೂನಮಾವರ್ಜಿತಂ ಮಯಾ
ಪಯಃ ಪೂರ್ವಐಃ ಸ್ವನಿಃಶ್ವಾಸೈಃ ಕವೋಷ್ಣಮುಪಭುಜ್ಯತೇ || ೬೭ ||

ಸೋsಹಮಿಜ್ಯಾವಿಶುದ್ಧಾತ್ಮಾ ಪ್ರಜಾಲೋಪನಿಮೀಲಿತಃ
ಪ್ರಕಾಶಶ್ಚಾಪ್ರಕಾಶಶ್ಚ ಲೋಕಾಲೋಕ ಇವಾಚಲಃ || ೬೮ ||

ಲೋಕಾಂತರ ಸುಖಂ ಪುಣ್ಯಂ ತಪೋದಾನಸಮುದ್ಭವಮ್‌
ಸಂತತಿಃ ಶುದ್ಧ ವಂಶ್ಯಾ ಹಿ ಪರತ್ರೇಹ ಶರ್ಮಣೇ || ೬೯||

ತಯಾ ಹೀನಂ ವಿಧಾತರ್ಮಾಂ ಕಥಂ ಪಶ್ಯನ್ನ ದೂಯಸೇ
ಸಿಕ್ತಂ ಸ್ವಯಮಿವ ಸ್ನೇಹಾತ್‌ಮಂಧ್ಯಮಶ್ರಮವೃಕ್ಷಕಮ್ ||೭೦|| ಸರ್ಗ ೧

[2]ಮಾಲವಿಕಾ ಬಕುಲಾವಲಿಕಾ ಚ ಪಾತಾಲವಾಸಂ
ನಿಗಡಪದ್ಯಾವದೃಷ್ಟ ಸೂರ್ಯಪಾದಂ ನಾಗಕನ್ಯಕೇ ಇವಾನುಭವತಃ | ಅಂಕ ೪

[3]ಶಠ! ನೀನು ನಂಬಿಕೆ ಅಥವಾ ವಿಶ್ವಾಸಕ್ಕೆ ಅರ್ಹನಲ್ಲ ಎಂಬುದು ಇರಾವತಿಯ ಮಾತಿನ ಅರ್ಥ. ಶಠ ಎಂದರೆ ನೀಚ, ಮೋಸಗಾರ, ಠಕ್ಕ, ಅವಿವೇಕಿ, ಧೂರ್ತ ಇತ್ಯಾದಿ ಅನೇಕ ಅರ್ಥಗಳಿವೆ.

[4]The famous descendant of this dynasty, the so-called sun family, famous in epics and in the puranas, was Rāmā, hero of the Rāmāyaņa and the god Vishnu in human from. It is thus a Vaishnava subject elaborated by a Śaiva poet, and this is important for forming an opining on the work. Siva does not appear in the poem, which deals with 28 or 29 kings of Ayodhya.  ಪುಟ ೪೦

[5]Despite the innumerable labours of many critics, Virgil’s Georgics remains one of the most fundamentally intractable works of ancient literature. In recent years, most interpreters have agreed that the poem does not really tell us about farming but about ourselves and our world: `didacticism about agriculture proves metaphor for didactism about man’   – The Cambridge companion to virgil, ಪುಟ ೧೨೫