ಆ ಕೆಲಗುಣಗಳಿಂದಾಗಿ ಮನೋಧರ್ಮ ಮತ್ತು ಮನೋಭಾವದಲ್ಲಿ ವ್ಯಾಸರ ಯುಗಕ್ಕೆ ಹತ್ತಿರವಾಗುವ ಕಾಳಿದಾಸ, ಶೃಂಗಾರಕ್ಕೆ ಮಹತ್ವ ನೀಡುವ ವಿಚಾರದಲ್ಲಿ ವಾಲ್ಮೀಕಿಗೆ ಹತ್ತಿರ ಬರುತ್ತಾನೆ. ದುಷ್ಯಂತ, ಪುರ, ಅಗ್ನಿಮಿತ್ರ ಮೊದಲಾದವರು ಹೆಣ್ಣನ್ನು ಸ್ವೀಕರಿಸುವ ರೀತಿಯಲ್ಲಿ ಮಹಾಭಾರತ ಕಾಲದ ಮನೋಭಾವ ಮತ್ತು ಮನೋಧರ್ಮಕ್ಕೆ ಹತ್ತಿರವಾದರೆ, ‘ಕುಮಾರ ಸಂಭವಂ’ನ ಶಿವ, ವಾಲ್ಮೀಕಿ ‘ರಾಮಾಯಣ’ದ ರಾಮನಿಗೆ ಹತ್ತರ ಬರುತ್ತಾನೆ. ಅದೇ ‘ರಾಮಾಯಣ’ದಲ್ಲಿ ವಾಲಿ – ಸುಗ್ರೀವರಂತಹ ಚಿತ್ರಣವೂ ದೊರಕುತ್ತದೆ.

ಊರ್ವಶಿಯನ್ನು ಮರಳಿ ಪಡೆಯಲು ಪುರು ಅನುಭವಿಸುವ ಯಾತನೆಯನ್ನು ರಾಮಾಯಣದ ರಾಮನಲ್ಲಿ ಕೆಲ ಪ್ರಮಾಣದಲ್ಲಿ ಕಾಣಬಹುದು.

ಕೆಲವರು ಭಾವಿಸುವಂತೆ ವಿಪ್ರಲಂಭ ಮತ್ತು ಸಂಭೋಗ ಶೃಂಗಾರ ವರ್ಣನೆ ಕಾಳಿದಾಸನಲ್ಲಿ ಕೆಲವೊಮ್ಮೆ ಅತಿಯಾಗಿ ಬರುತ್ತದೆ ನಿಜ; ಅಷ್ಟಕ್ಕೆ ಮಾತ್ರ ಆತನ ಪ್ರತಿಭೆ ಸೀಮಿತವಾಗಿಲ್ಲ. ಶೃಂಗಾರದ ಬದುಕಿನ ಹಿಂದಿನ ವಿವಿಧ ಮುಖಗಳನ್ನು ಆತ ಅನ್ವೇಷಿಸುವ ರೀತಿ ಮತ್ತು ತಳೆಯುವ ದೃಷ್ಟಿಕೋನ ಕ್ಲಾಸಿಕ್‌ ಕವಿಗಳ ಜಾಯಮಾನಕ್ಕೆ ತಕ್ಕುದಾಗಿದೆ. ಕಾಳಿದಾಸನ

ಕೃತಿಗಳಲ್ಲಿ ಹಲವಾರು ಸಂಗತಿಗಳು ಮತ್ತು ಬಿಕ್ಕಟ್ಟುಗಳು ಅಣ್ವೇಷಣೆಗೊಳಗಾಗುತ್ತವಾದರೂ, ಎರಡು ಸಮಸ್ಯೆಗಳು ಮತ್ತೆ ಮತ್ತೆ ಬರುತ್ತವೆ: ತಾವು ಎಸಗಿದ ಅಥವಾ ನಡವಳಿಕೆಯ ದೋಷದಿಂದಾಗಿ ಬದುಕಿನಲ್ಲಿ ಯಾತನೆಪಡುವುದು ಒಂದಾದರೆ, ಯೋಗ್ಯ ಮಗನಿಗಾಗಿ ಪರಿತಪಿಸುವುದು ಮತ್ತೊಂದು; ಆ ಸಂಗತಿಗಳು ಜತೆಜತೆಯಾಗಿ ಕೃತಿಯಿಂದ ಕೃತಿಗೆ ಬೆಳೆಯುತ್ತಾ ಅನ್ವೇಷಣೆಗೊಳಗಾಗುತ್ತಾ ಹೋಗುತ್ತವೆ.

ಎಚ್ಚರ ತಪ್ಪಿದ ನಡವಳಿಕೆಯು ‘ಈನೀಡ್‌’ನ ಕಲ್ಪಂ – ಐಬು ಅಥವಾ ದೋಷವಾಗಿ ಪರಿವರ್ತನೆಗೊಂಡು ಮೇಘದೂತ’ದ ಯಕ್ಷ, ಸಾಕುನ್ತಲೆ, ಊರ್ವಶಿ ಹಾಗೂ ‘ರಘುವಂಶಂ’ನ ಅನೇಕ ರಾಜರನ್ನು ಕಾಡುವುದನ್ನು ಕಾಳಿದಾಸ ಗುರುತಿಸುತ್ತಾ ಹೋಗುತ್ತಾನೆ; ಶಾಕುನ್ತಲೆ ಮತ್ತು ಪಾರ್ವತಿಯರಲ್ಲಿ ಆ ಐಬು ಕೊನೆಗೆ ಗುಣ ಮತ್ತು ಪ್ರೌಢಿಮೆಯಾಗಿ ಪರಿವರ್ತನೆಗೊಳ್ಳುವುದನ್ನು ತೋರಿಸಿದ ಕವಿ. ಅದನ್ನು ತಮ್ಮ ಪ್ರಾಚೀನ ಸಾಹಿತ್ಯ’[1]ದಲ್ಲಿ ರವೀಂದ್ರರು ಗುರುತಿಸಿದ್ದಾರೆ:

ಶಕುಂತಲೆಯಲ್ಲಿ ಯಾವಾಗ ಆತಿಥ್ಯಧರ್ಮವು ಸ್ವಲ್ಪವಾದರೂ ಉಳಿಯಲಿಲ್ಲವೋ, ದುಷ್ಯಂತನೇ ಸಮಸ್ತವೂ ಆದನೋ ಆಗ ಶಕುಂತಲೆಯ ಆ ಪ್ರೇಮದಲ್ಲಿ ಶುಭವು ಉಳಿಯಲಿಲ್ಲ. – ಪುಟ ೨೪ – ೨೫

ಶಿವನಂತಹ ತಪಸ್ವಿಯು ಗೌರಿಯಂತಹ ಕಿಶೋರಿಯೊಂದಿಗೆ ಬಾಹ್ಯ ಸೌಂದರ್ಯದ ನಿಯಮಾನುಸಾರವಾಗಿ ಸಂಬಂಧವನ್ನು ಬೆಳೆಸುವುದು ಸಾಧ್ಯವಲ್ಲ. – ಪುಟ ೨೯

ಹೀಗೆ ಕುಮಾಸಂಭವ ಶಾಕುಂತಲಗಳಲ್ಲಿ ಪ್ರತಿಪಾದಿತವಾಗಿರುವ ವಿಷಯವು ಒಂದೇ ಎಂದು ಕಂಡುಬರುತ್ತದೆ. – ಪುಟ ೩೬

ಆದರೆ ಅದೇ ಸಂಗತಿ ಏಕಧಾರೆಯಾಗಿ ಆತನ ಎಲ್ಲ ಕೃತಿಗಳಲ್ಲು ಮತ್ತೆ ಮತ್ತೆ ಅನ್ವೇಷಣೆಗೊಳ್ಳುತ್ತದೆ ಎಂಬುದನ್ನು ಅವರು ಗ್ರಹಿಸಿದಂತೆ ತೋರುವುದಿಲ್ಲ.

ಕಶ್ಚಿತ್ಕಾಂತಾವಿರಹಗುರುಣಾ ಸ್ವಾಧಿಕಾರತ್ಪ್ರಮತ್ತ
ಶ್ಯಾಪೇನಸ್ತಂಗಮಿತಮಹಿಮಾ ವರ್ಷಭೋಗ್ಯೇಣ ಭರ್ತುಃ

ಸ್ವಾಧಿಕಾರಪ್ರಮತ್ತನಾದ ಯಕ್ಷನೊಬ್ಬನು ಶಾಪದಿಂದ ಅಸ್ತಂಗತ ಮಹಿಮನಾಗಿ ತೊಳಲಾಡಬೇಕಾಗಿ ಬಂದ ಕತೆಯನ್ನು ಮೇಘಸಂದೇಶ ಹೇಳಿದರೆ, ರೂಪಕಾಭಿನಯದ ಕಾಲದಲ್ಲಿ ಪುರುಷೋತ್ತಮ ಎಂದು ಹೇಳುವುದಕ್ಕೆ ಬದಲಾಗಿ, ಪುರೂರವ ಎಂದು ಹೇಳಿದ ಪ್ರಮಾದಕ್ಕಾಗಿ ಸ್ವರ್ಗದಿಂದ ಉಚ್ಚಾಟಿತಳಾದ ಊರ್ವಶಿಯ ಕತೆ ವಿಕ್ರಮೋರ್ವಶಿಯಾದಲ್ಲಿ ಬರುತ್ತದೆ. ಅವಳ ಪ್ರಮಾದ ಅಲ್ಲಿಗೆ ನಿಲ್ಲುವುದಿಲ್ಲ. ಅಡ್ಡಾಡುವುದೇ ಸಂಭೋಗಕ್ಕೆ ಸಮನಾದ ಗಂಧಮಾದನ ವನದಲ್ಲಿ ವಿಹರಿಸುತ್ತಿರಬೇಕಾದರೆ, ಪುರು ಬೇರೊಬ್ಬಳನ್ನು ನೋಡಿದ ಎಂದು ಮುನಿದು ಲತೆಯಾಗಿ ಮಾರ್ಪಟ್ಟಿ ೪ನೇ ಅಂಕ ಊರ್ವಶಿಯನ್ನು ಮರಳಿ ಪಡೆಯಲು ಆತ ಪಡುವ ಬವಣೆ: ಆ ಸನ್ನಿವೇಶ ಎಷ್ಟು ಸೂಕ್ಷ್ಮವಾಗಿ ಚಿತ್ರಣಗೊಂಡಿದೆ ಎಂದರೆ, ಪ್ರಣಯದಲ್ಲುಂಟಾದ ರೂಢ ಮೂಲವಾದ ಅಸಹನೆ ಮತ್ತು ಅಸೂಯೆಯನ್ನು ಗೆಲ್ಲಬೇಕಾಗುತ್ತದೆ; ಅದನ್ನು ಗೆದ್ದ ನಂತರವೇ ಅವರಿಬ್ಬರಿಗೂ ನಿಜವಾದ ಪ್ರೇಮದಲ್ಲಿ ತೊಡಗಲು ಸಾಧ್ಯವಾಗುವುದು.

ಇನ್ನು ಶಾಕುನ್ತಲೆ ಕುರಿತ ಕೃತಿಗೆ ಬಂದರೆ, ಆಕೆಯದು ಮತ್ತೊಂದು ತರಹದ ‘ಪ್ರಣಯ ಪ್ರಮತ್ತತೆ’ಯ ಕತೆ. ಅದಕ್ಕಾಗಿ ಆಕೆ ಬದುಕಿನಲ್ಲಿ ಬಹಳ ದೊಡ್ಡ ಬೆಲೆ ತೆರಬೇಕಾಗುತ್ತದೆ.

ದುಷ್ಯಂತನನ್ನು ನೋಡಿದ ಕೂಡಲೇ ತಾನು ಇರುವ ತಪೋವನ’ದ ಮಹಿಮೆ ಮರೆತು ಅದರ ‘ವಿರೋಧಿ ವಿಕಾರ’ಕ್ಕೆ ಒಳಗಾದ ಆಕೆ ಯಾರ ಅನುಮತಿಗೂ ಕಾಯದೆ ಅವನನ್ನು ‘ಗಂಧರ್ವ ರೀತಿ’ ವಿವಾಹವಾಗುತ್ತಾಳೆ. ‘ಪ್ರಮತ್ತತೆ’ ಅಷ್ಟಕ್ಕೆ ನಿಲ್ಲುವುದಿಲ್ಲ. ಎಲ್ಲವನ್ನೂ ಮರೆತು ಅದೇ ಗುಂಗಿನಲ್ಲಿ ತಲ್ಲೀನಳಾಗಿರಬೇಕಾದರೆ, ಅತಿಥಿಯಾಗಿ ಬಂದ ದುವಾಸ ಮುನಿಯ ಶಾಪಕ್ಕೆ ಗುರಿಯಾಗಬೇಕಾಗುತ್ತದೆ:

ಶಾಪ ಕೊಡುವಾಗ ಆತ ಬಳಸುವ ಪದ ‘ಪ್ರಮತ್ತಃ’ ಎಂಬುದೇ ಆಗಿದೆ. ಪ್ರೇಮಲೋಕದಲ್ಲಿ ಮುಳುಗಿ ಅನ್ಯೆ ಮನಸ್ಕಳಾಗಿ ಉಳಿದ ಆಕೆಗೆ, ಈ ಜಗತ್ತಿನ ಯಾವ ವ್ಯವಹಾರದಲ್ಲಿ ತಾನೇ ಆಸಕ್ತಿ ಉಳಿದೀತು? ಋಷಿಪುತ್ರಿಯಾಗಿ ಹಾಗೂ ತಪೋವನವಾಸಿಯಾಗಿ ಆಕೆ ಎಸಗಿದ ಎರಡನೇ ‘ಪ್ರಮಾದ’ ಅದಾಗಿದೆ. ಆಗ ಅನಸೂಯಾ ಬಾಯಿಂದ ಹೊರಡುವ ಮಾತು; ನವಮಾಲಿಕೆಗೆ ಬಿಸಿನೀರು ಎರೆಯುವ ಮನಸ್ಸು ಯಾರಿಗೆ ತಾಏ ಬಂದೀತು.

ಕ ಇದಾನೀಮುಷ್ಣೋದಕೇನ ನವಮಾಲಿಕಾಂ ಸಿಮಚತಿ. – ಅಂಕ ೪

ಅಂತಹ ಕಠಿಣ ಕೆಲಸವನ್ನು ದುರ್ವಾಸ ಮುನಿ ಮುಲಾಜಿಲ್ಲದೆ ನಡೆಸಿ ಮುನ್ನಡೆಯುತ್ತಾನೆ. ಪ್ರಮತ್ತತೆಯ ಪ್ರಮಾದದಿಂದಾಗಿ ನೋವು ಅನುಭವಿಸುವವರು ಕಾಳಿದಾಸನಲ್ಲಿ ಹೆಚ್ಚಾಗಿ ಹೆಂಗಸರು ಎಂದು ಅನ್ನಿಸಬಹುದು. ಮೇಘದೂತದ ಯಕ್ಷ ಮತ್ತು ವಿಕ್ರಮೋರ್ವಶೀಯದ ಪುರು ಆ ಮಾತಿಗೆ ಅಪವಾದ. ಶಾಕುನ್ತಲೆಯ ಪ್ರಣಯ – ಪರವಶತೆ ಯೌವ್ವನದ ಸಹಜಸ್ಥಿತಿ ಎಂಬುದು ದುರ್ವಾಸ ಮುನಿಯ ಪರಿಗಣನೆಗೆ ಬರುವುದಿಲ್ಲವಾದಂತೆ: ಮರೆಯಲ್ಲಿ ನಿಂತ ದಶರಥ ಬಿಟ್ಟ ಬಾಣ ಮುನಿಯೊಬ್ಬನ ಸಾವಿಗೆ ಕಾರಣವಾಗಿ ಬಿಡುವ ದುರಂತ ಲೆಕ್ಕಕ್ಕೆ ಬರುವುದಿಲ್ಲ. ಪ್ರಮಾದದಿಂದಾಗಿ ಯಕ್ಷನು ವರ್ಷಕಾಲ ಹೆಂಡತಿಯಿಂದ ದೂರವಾಗಿ ಗಿರಿಕಂದರಗಳಲ್ಲಿ ತೊಳಲಬೇಕಾಗಿ ಬಂದರೆ; ಅಸೂಯೆಯಿಂದ ಲತೆಯಾಗಿ ಮಾರ್ಪಟ್ಟ ಊರ್ವಶಿಯನ್ನು ಮರಳಿ ಪಡೆಯಲು ಪುರು ಅಲೆಯಬೇಕಾಗುತ್ತದೆ. ಶಾಕುನ್ತಲೆಯ ನಿಜಸ್ಥಿತಿ ಗೊತ್ತಾದ ನಂತರ ದುಷ್ಯಂತ ಅನುಭವಿಸುವ ಯಾತನೆ ಮತ್ತು ನೋವು ಶಾಕುನ್ತಲೆ ನಾಟಕದಲ್ಲಿ ಸಾಕಷ್ಟು ವಿವರವಾಗಿಯೇ ಬರುತ್ತದೆ. ಮರಳಿ ಸೇರುವ ಸುಸಮಯದ ಕಾಲದಲ್ಲಿ ಶಾಕುನ್ತಲೆಯ ಪರಿಸ್ಥಿತಿ ನೋಡಿ ದುಷ್ಯಂತ ಸಂಕಟ ಅನುಭವಿಸಿದರೆ, ದುಷ್ಯಂತ ಮಹಾರಾಜನ ಹದಗೆಟ್ಟ ಪರಿಸ್ಥಿತಿ ಮತ್ತು ಬಣ್ಣ ಗೆಟ್ಟ ರೂಪ ನೋಡಿ ಶಾಕುನ್ತಲೆ ಮರುಗುತ್ತಾಳೆ.

ಆ ತರಹ ಒಂದಲ್ಲ ಒಂದು ‘ಪ್ರಮಾದಗಳ ಪ್ರಮತ್ತತೆ’ ದೋಷವಾಗಿ ಪರಿಣಮಿಸಿದವರ ಕತೆಗಳು ‘ರಘುವಂಶಂ’ನಲ್ಲಿ ಸಾಲಾಗಿ ಬರುತ್ತವೆ. ಹಾಗಾಗಿ ‘ರಘುವಂಶಂ’ ಎಂದರೆ ಬೇರೆನೂ ಅಲ್ಲ; ‘ಪ್ರಮಾದಗಳ ಪ್ರಮತ್ತತೆ’ಯ ಐಬಿನಿಂದ ತಗ್ಗಿದವರ ಕತೆ. ಗೋವನ್ನು ನಿರ್ಲಕ್ಷಿಸಿದ ಕಾರಣ ತನ್ನ ಸಾಮ್ರಾಜ್ಯವನ್ನು ಮುನ್ನಡೆಸಿಕೊಂಡು ಹೋಗಬಲ್ಲಂತಹ ದಕ್ಷ ಮತ್ತು ಯೋಗ ಮಗನನ್ನು ಪಡೆಯಲು ದಿಲೀಪ ಮಹಾರಾಜ ಅದೇ ದನಗಳನ್ನು ಕಾಯುವ ಕೆಲಸಕ್ಕೆ ನಿಜೈಜಿತನಾಗುತ್ತಾನೆ ಕುಲಗುರುವಾದ ವಸಿಷ್ಠ ಮಹರ್ಷಿಯ ಸಲಹೆ ಮೇರೆಗೆ. ರಾಜನ ಚಿತ್ರಣ ನೀಡುವಾಗ ಕಾಳಿದಾಸ ನೀಡುವ ವಿವರ ನೋಡಿದ ಯಾರಿಗಾದರೂ ಆ ದನ ಕಾಯುವ ಅನುಭವ ಕವಿಗೂ ಇದ್ದಂತೆ ಕಾಣುತ್ತದೆ ಎಂದು ಅನ್ನಿಸಬಹುದು: ತೆನೆಹುಲ್ಲನು ಬಾಯಿಗೆ ಹಿಡಿದು ಮೈತಿಕ್ಕಿ, ಅವು ಹೋದಕಡೆಗೆ ತಾನೂ ಹಿಂಬಾಲಿಸಿ ಹೋಗಿ; ನಿಂತೆಡೆ ತಾನೂ ನಿಂತು, ಚಲಿಸಿದರೆ ತಾನೂ ಚಲಿಸಿ, ಮಲಗಿದರೆ ತಾನೂ ಪಕ್ಕದಲ್ಲೇ ನಿಂತು, ಅವುಗಳಿಗೆ ನೀರಡಿಕೆಯಾದರೆ ನೀರು ಕುಡಿಸಿ ದನಕಾಯುವ ದಿಲೀಪ ಮಹಾರಾಜನಿಗೆ ನಂತರ ಪುತ್ರೋತ್ಸವವಾಗುತ್ತದೆ. ಆ ಮಗನೇ ರಘು: ರಘುವಂಶ ಎಂಬ ಖ್ಯಾತಿ ಬರಲು ಕಾರಣನಾದ ರಘು. ಆ ವಂಶದ ಮತ್ತೊಂದು ಕುಡಿಯಾದ ದಶರಥನಿಗೆ ಬೇಟೆಯ ವ್ಯಾಮೋಹ; ಕೊಡದಲ್ಲಿ ನೀರು ತುಂಬುವಾಗ ಉಂಟಾಗುವ ಘುಳುಘುಳು ಸದ್ದನ್ನು ಅನುಸರಿಸಿ ಬಾಣ ಬಿಟ್ಟ ಅವನು ಕುರುಡು ತಂದೆ – ತಾಯಿಗಳಿಗೆ ನೀರು ತೆಗೆದುಕೊಂಡು ಹೋಗುತ್ತಿದ್ದ ಅವರ ಒಬ್ಬನೇ ಮಗನ ಸಾವಿಗೆ ಅಚಾನಕ್‌ ಕಾರಣನಾಗಿ ಬಿಡುತ್ತಾನೆ: ಅವರು ನೀಡಿದ ಶಾಪದ ಪರಿಣಾಮವಾಗಿ, ದಶರಥನು ತನ್ನ ಮಗನ ಅಗಲಿಕೆಯ ನೋವಿನಲ್ಲಿ ಪ್ರಾಣ ಬಿಡಬೇಕಾಗುತ್ತದೆ.

‘ಪ್ರಮತ್ತತೆ’ಯ ಭೀಕರ ಪರಿಣಾಮವನ್ನು ಕಾಳಿದಾಸ ಹೆಚ್ಚಾಗಿ ಗುರುತಿಸುವುದು ರಾಮ, ಲಕ್ಷ್ಮಣ ಮತ್ತು ಸೀತೆಯರ ನಡವಳಿಕೆಯಲ್ಲಿ: ಸೀತೆಯ ಅಪಹರಣಕ್ಕೆ ಅವರು ಶೂರ್ಪನಖಿ ಜತೆ ನಡೆದುಕೊಂಡ ಅಸಭ್ಯ ಅನಾಗರಿಕ ವರ್ತನೆ ಕಾರಣವಾಯಿತು ಎಂಬ ಧ್ವನಿತಾರ್ಥ ಬರುವ ರೀತಿಯಲ್ಲಿ ರಾಮಾಯಣದ ಉತ್ತರ ರಾಮಾಯಣದ ಸೇರಿದಂತೆ ಕತೆಯನ್ನು ಬಹಳ ಸಂಕ್ಷಿಪ್ತವಾಗಿ ನಿರೂಪಿಸುತ್ತಾನೆ. ರಾಮನನ್ನು ಬಯಸಿದ ಶೂರ್ಪನಖಿಯು ಸೀತೆಯ ಎದುರಿನಲ್ಲಿಯೇ ತನ್ನ ಮನದಿಂಗಿತವನ್ನು ಯಾವುದೇ ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸುತ್ತಾಳೆ. ತನಗೆ ಹೆಂಡತಿ ಇದ್ದಾಳೆ ಎಂದು ರಾಮನು ಆಕೆಯನ್ನು ಲಕ್ಷ್ಮಣನ ಬಳಿಗೆ ಕಳುಹಿಸಲು, ಆ ಲಕ್ಷ್ಮಣನೋ ಮರಳಿ ಆಕೆಯನ್ನು ರಾಮನ ಬಳಿಗೆ ಕಳುಹಿಸುತ್ತಾನೆ. ಅದನ್ನು ನೋಡಿ ಸೀತೆ ಮಾಡಿದ ಪರಿಹಾಸ್ಯದಿಂದ ರೊಚ್ಚಿಗೆದ್ದ ಶೂರ್ಪನಖಿಯು ‘ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ’ ಎಂದು ಹೇಳಿ ಹೆಸರಿಗೆ ತಕ್ಕ ರೂಪ ತಾಳಿದಳು ಎಂದು ಕಾಳಿದಾಸ ಇಡೀ ಸನ್ನಿವೇಶವನ್ನು ಅರೇ ಶ್ಲೋಕಗಳಲ್ಲಿ ಕಟ್ಟಿಕೊಡುತ್ತಾನೆ.

ಮುಂದಿನ ಹಂತವಾಗಿ ಆಕೆಯ ಕಿವಿ ಮೂಗು ಹರಿದು ಅವಮಾನಿಸಲಾಗುತ್ತದೆ.

ಶಿವ ತನ್ನ ದೇಹಸೌಂದರ್ಯ ನೋಡಿ ಮರುಳಾಗುತ್ತಾನೆ ದು ಹೊರಡುವ ಪಾರ್ವತಿ, ಅದೇ ತರಹದ ಪ್ರಣಯ ಪ್ರಮತ್ತತೆಯನ್ನು ಪ್ರದರ್ಶಿಸುತ್ತಾಳೆ. ಆ ಪ್ರಮತ್ತೆಯನ್ನು ಕಳೆದುಕೊಂಡು ಶಾಕುನ್ತಲೆ ಚಕ್ರವರ್ತಿಯ ತಾಯಿಯ ಪಟ್ಟಿ ಪಡೆಯಲು ಅರ್ಹಳಾಗುವಂತೆ, ಅದನ್ನು ನೀಗಿಕೊಂಡ ಪಾರ್ವತಿ ವೀರಜನನಿಯಾಗಲು ಸಿದ್ಧಳಾಗುವ ಕತೆಯೇ ಕುಮಾರಸಂಭವ. ಪಾರ್ವತಿ ಅಂತಿಂತಹ ತಾಯಿಯಲ್ಲ, ‘ಜಗನ್ಮಾತೆ’ ಮತ್ತು ‘ಶತಪತ್ರಯೋನಿಂ’; ಆಕೆಯ ಪತಿಯಾದ ಶಿವ ‘ವಿಶ್ವಗುರುವಿನ ಗುರು’ ಮತ್ತು ‘ಜಗದ ಸತ್ಯ’. ಅವರಿಬ್ಬರೂ ವೀರಪುತ್ರನನ್ನು ಪಡೆಯಲು ಸಿದ್ಧರಾಗುತ್ತಿದ್ದಾರೆ. ಅಂತಹ ವೀರಜನನಿ – ಜನಕರ ಕತೆ ನಿರೂಪಿಸುವ ‘ಕುಮಾರ ಸಂಭವವಂ’ ಕಾಳಿದಾಸನ ಕೃತಿಗಳಲ್ಲಿಯೇ ಬಹಳ ಮುಖ್ಯವಾದುದು. ಈ ಜಗತ್ತಿನ ಆದಿಮಾತೆ ಮತ್ತು ಆದಿಪುರುಷರ ಕತೆ ಬೈಬಲ್ಲಿನ ಎಡೆನ್ ತೋಟದ ಆಡಂ ಈವ್‌ರ ರೂಪದಲ್ಲಿ ಅಭಿವ್ಯಕ್ತಗೊಂಡಿದ್ದರೆ, ಅದರ ಭಾರತೀಯ ರೂಪವೇ ಶಿವ – ಪಾರ್ವತಿಯರ ಕತೆ ಆಗಿದ್ದಿರಬಹುದು. ಹಾಗಾಗಿ ಆ ಶಿವ ಪಾರ್ವತಿಯರು ಕುಮಾರನ ಆಗಮನಕ್ಕೆ ಅಂದರೆ ತಾಯ್ತನ ಮತ್ತು ತಂದೆತನಕ್ಕೆ ಎಲ್ಲ ರೀತಿಯಲ್ಲೂ ಸಿದ್ಧರಾಗುವುದರೊಂದಿಗೆ ಆತನ ಕೃತಿ ಕೊನೆಗೊಳ್ಳುವುದು ಕಾಳಿದಾಸನ ಯೋಜನೆ ಮತ್ತು ಆತನ ಕಾವ್ಯಧರ್ಮಕ್ಕೆ ಅನುಗುಣವಾಗಿದೆ. ಆ ತಾಯ್ತನಕ್ಕೆ ದೈಹಿಕ ಸೌಂದರ್ಯವೊಂದೇ ಸಾಲುವುದಿಲ್ಲ, ಮಾನಸಿಕ ಸೌಂದರ್ಯವೂ ಬೇಕು ಎಂಬುದನ್ನು ಶಿವೆಯ ತಪಸ್ಸು ಶ್ರುತಡಿಸಿದರೆ, ಶಿವೆಯನ್ನು ಪರೀಕ್ಷಿಸಿ ಪಡೆದ ನಂತರ, ಜಗತ್ತಿನ ತಂದೆಯಾಗುವ ಶಿವ ಕೊನೆ ಮೊದಲಿಲ್ಲದ ಸುರತ ಕ್ರಿಯೆಯಲ್ಲಿ ತೊಡಗಿ ತನ್ನಲ್ಲಿನ ಕಾಡುತನ, ಮೃಗತ್ವ ಮತ್ತು ಲೈಂಗಿಕ ತೃಷೆಯನ್ನು ನೀಗಿಸಿಕೊಂಡು ತಂದೆಯಾಗಲು ಮಾಗುವುದು.

ಸುರತ ಕ್ರಿಯೆಯಲ್ಲಿ ಮುಳುಗಿಹೋದ ಶಿವ – ಪಾರ್ವತಿಯರ ವರ್ಣನೆ, ಹಲವರ ಕಟುಟೀಕೆಗೂ ಗುರಿಯಾಗಿದೆ. ಶಿವೆಗೆ ಮದ್ಯವನ್ನು ಕುಡಿಸಿ ಅವಳನ್ನು ಶಿವ ಸುಖಿಸುವ ರೀತಿ ಅನೇಕರಿಗೆ ಜುಗುಪ್ಸೆ ತಾರದೆ ಹೋಗಿಲ್ಲ. ಕಾಳಿದಾಸನಿಗೆ ಅಪಖ್ಯಾತಿ ತರಲು ಕಾರಣವಾದ ಹಲವಾರು ಪ್ರಮುಖ ಸನ್ನಿವೇಶಗಳಲ್ಲಿ ಅದೂ ಒಂದು.

ಮಾನ್ಯ ಭಕ್ತಿರಥವಾ ಸಖೀಜನಃ
ಸೇವ್ಯತಾಮಿದಮನಂಗದೀಪನಮ್‌
ಇತ್ಯುದಾರಮಭಿಧಾಯ ಶಂಕರ –
ಸ್ತಾಮಪಾಯಯತ ಪಾನಮಂಬಿಕಾಮ್‌ || ೭೭ || ಸರ್ಗ ೮

ಮಧುವನ್ನು ಅನಂಗದೀಪನಮ್‌ ಎಂದು ಕರೆದು ಶಿವ ಆಕೆ ಕುಡಿಯುವಂತೆ ಮಾಡುತ್ತಾನೆ. ‘ಆರ್ದ್ರಕೇಸರಸುಗಂಧಿತೇ ಮುಖಂ, ಮತ್ತರಕ್ತನಯನಂ ಸ್ವಭಾವತಃ ವಿಲಾಸಿನಿ ಮದಹ’ ಎಂದು ಪಾರ್ವತಿಯನ್ನು ಶಿವ ಹುರಿದುಂಬಿಸಿ ಮಧುವನ್ನು ಕುಡಿಸುವ ರೀತಿ ಯುವಜನಾಂಗಕ್ಕೆ ಹೊಸದಾಗಿ ಕಾಣುವ ಸಾಧ್ಯತೆ ಬಹಳ ಕಡಿಮೆ. ಸುರತ ಕ್ರಿಯೆಯಲ್ಲಿ ಮುಳುಗಿಹೋದ ಹೊಸದಾಗಿ ಕಾಣುವ ಸಾಧ್ಯತೆ ಬಹಳ ಕಡಿಮೆ. ಸುರತ ಕ್ರಿಯೆಯಲ್ಲಿ ಮುಳುಗಿಹೋದ ಶಿವನಿಗೆ ಹಗಲು ರಾತ್ರಿ ಎಂಬ ವ್ಯತ್ಯಾಸ ಮತ್ತು ಋತುಗಳ ಬದಲಾವಣೆ ಅರಿವಿಗೇ ಬರುವುದಿಲ್ಲ:

ಸಮದಿವಸನಿಶೀಥಂ ಸಂಗಿನಸ್ತತ್ರ ಶಂಭೋಃ
ಶತಮಗಮದೃತೂನಾಂ ಸಾಗ್ರಮೇಕಾ ನಿಶೇವ
ನ ತು ಸುರತಸುಖೇಭ್ಯಶ್ಚಿನ್ನತೃಷ್ಣೋ ಬಭೂವ
ಜ್ವಲನ ಇವ ಸಮುದ್ರಾಂತರ್ಗಜ್ವಲೌಘ್ಯಃ || ೯೧ || ಸರ್ಗ ೮

ಕಡಲಿನ ಒಳಗಿನ ಬಡಬಾಗ್ನಿ – ಸಮುದ್ರದೊಳಗಿನ ಜ್ವಲನ – ತರಹ ಅವನೊಳಗಿನ ಸುರತ ಸುಖದ ತೃಷೆ ಆ ಶಿವನಲ್ಲಿ ಹೊತ್ತಿ ಉರಿಯುತ್ತಿತ್ತು ಎಂದು ಬಣ್ಣಿಸುವುದರೊಂದಿಗೆ ಅವನ ಕಾವ್ಯ ಕೊನೆಗೊಳ್ಳುತ್ತದೆ.

ಸುರತ ಕ್ರಿಯೆ ಅಥವಾ ಸಂಭೋಗ ಶೃಂಗಾರವೇ ಪ್ರಧಾನವಾದ ಕಾವ್ಯ ಪರಂಪರೆಯ ಆರಂಭದ ಮೂಲವನ್ನು ಕೆಲವರು ಕಾಳಿದಾಸನಲ್ಲಿ ಶೋಧಿಸುವುದೂ ಉಂಟು. ಹದಿನಾರು ಸಾವಿರ ಪ್ರಣಯಿಗಳ ಜತೆ ಏಕಕಾಲದಲ್ಲಿ ವ್ಯವಹರಿಸುವ ಕೃಷ್ಣನ ಪುರಾಣ ಮೀರಿಸಲು ಹೊರಟ ಜೈನಕವಿಗಳು, ತೊಂಬತ್ತು ಸಾವಿರ ಪತ್ನಿಯರಿಗೆ ಗಂಡನಾದ ಭರತನ ಚಿತ್ರಣ ನೀಡುವುದರ ಮೂಲಕ ಪೈಪೋಟಿಗಿಳಿದರು. ಅವರಲ್ಲಿ ಯಾರು ಮೊದಲು, ಯಾರು ನಂತರ, ಯಾರು ಹೆಚ್ಚು ಮತ್ತು ಯಾರು ಕಡಿಮೆ ಎಂಬ ಚರ್ಚೆಯಲ್ಲಿ ಖುಷಿಪಡುವ ಮಂದಿಗೇನೂ ಈ ದೇಶದಲ್ಲಿ ಕಡಿಮೆಯಿಲ್ಲ. ಕೃಷ್ಣ ಮತ್ತು ಭರತ ಇಬ್ಬರೂ ಭಾರತದ ಸೃಷ್ಟಿ ಎಂಬುದನ್ನು ಮರೆಯದಿರುವುದು ಒಳ್ಳೆಯದು. ಆ ಪರಂಪರೆಗೊಂದು ಪರಾಕಾಷ್ಠೆ ನೀಡಿದವನೇ ಕನ್ನಡದ ರತ್ನಾಕರವರ್ಣಿ. ‘ಭರತೇಶ ವೈಭವ’ ಬರೆಯುವಾಗ ಆತ ಪ್ರದರ್ಶಿಸಿದ ಕಲ್ಪನಾ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗಿದ್ದಲ್ಲಿ! ಸಾಹಿತ್ಯ ಪ್ರೇಮಿಗಳ ಅರಿವಿನ ಶ್ರೀಮಂತಿಕೆಗೆ ಬಿಟ್ಟ ವಿಚಾರ.

ಸಂಭೋಗ ಶೃಂಗಾರದ ನೆಪದಲ್ಲಿ ಕಾಳಿದಾಸನನ್ನು ಹೀಯಾಳಿಸುವ ಜನರು, ವಾಲ್ಮೀಕಿ ರಾಮಾಯಣವನ್ನು ಮತ್ತೊಮ್ಮೆ ಸವಿವರವಾಗಿ ಓದುವುದು ಒಳ್ಳೆಯದು. ಸೀತೆಯನ್ನು ಕಳೆದುಕೊಂಡ ನಂತರ ರಾಮ ಆಕೆಯ ಸರ್ವಾಂಗಗಳನ್ನು ಹೋಲಿಕೆ ಮಾಡುತ್ತಾ ಪ್ರಲಾಪಿಸುವುದನ್ನು ಅರಣ್ಯಕಾಂಡ ಮತ್ತು ಕಿಷ್ಕಿಂಧಾಕಾಂಡಗಳ ಅನೇಕ ಸಂದರ್ಭಗಳಲ್ಲಿ ಎದುರಾಗಬೇಕಾಗುತ್ತದೆ. ಹಣ್ಣುಗಳಂತಹ ಅವಳ ಸ್ತನ, ಎಳೆಚಿಗುರಿನ ಮೈಬಣ್ಣ, ಬಾಳೆಯ ದಿಂಡಿನ ತೊಡೆಗಳು, ದುಂಡಗಿನ ಕೆಂಪು ಮೊಲೆಗಳು ಇತ್ಯಾದಿ ಇತ್ಯಾದಿ.

ಅಂತಹ ಒಂದು ಸಂದರ್ಭದಲ್ಲಿ ಲಕ್ಷ್ಮಣನು ರಾಮನಿಗೆ ಹೇಳುವ ಹಿತವಚನ ಉಲ್ಲೇಖಾರ್ಹ. ವಿವೇಕಿಯಾದ ನೀನು ಪ್ರಲಾಪಿಸಬಾರದು:

ಮಾ ವಿಷಾದಂ ಮಹಾಬುದ್ಧೇ ಕುರು ಯತ್ನಂ ಮಯಾ ಸಹ || ೧೪ || ಅರಣ್ಯಕಾಂಡ, ಸರ್ಗ ೬೧

ರಾಮನ ತರಹವೆ ಹೆಂಡತಿಯಿಂದ ದೂರವಿರಬೇಕಾಗಿ ಬಂದ ಸುಗ್ರೀವನು ಸೀತೆಗಾಗಿ ಪ್ರಲಾಪಿಸುವ ರಾಮನಿಗೆ ಲಘು ಸ್ವಭಾವ, ದೆನ್ಯತೆ ಸರಿಯಲ್ಲ, ಧೈರ್ಯದಿಂದ ಇರು ಎಂಬ[2] ಮಾತುಗಳ ಬಗ್ಗೆ ಹೆಚ್ಚಿಗೆ ಬರೆಯದಿರುವುದು ಒಳ್ಳೆಯದು.

ರಾಮಾಯಣದಲ್ಲಿ ಕಾಣಿಸಿಕೊಳ್ಳುವ ವಿಪ್ರಲಂಭ ಶೃಂಗಾರಕ್ಕೆ ಮೇಘದೂತ ಮತ್ತು ವಿಕ್ರಮೋರ್ವಶೀಯ ಕೃತಿಗಳಲ್ಲಿ ಮೆರುಗು ನೀಡಿದವನೇ ಕಾಳಿದಾಸ; ಆತ ಸೃಷ್ಟಿಸುವ ಪಾತ್ರಗಳ ಶೃಂಗಾರ ಚೇಷ್ಟೆ ಮತ್ತು ಚಪಲ ಅಲ್ಲಲ್ಲಿ ಅತ್ಯಂತ ವಾಚ್ಯರೂಪದಲ್ಲಿ[3] ಪ್ರಕಟಗೊಳ್ಳುವುದುಂಟು. ವಿಪ್ರಲಂಭ ಅಥವಾ ಸಂಭೋಗ ಶೃಂಗಾರ ಕಾಳಿದಾಸ ಬಳಸುವ ಹಲವಾರು ತಂತ್ರ ಮತ್ತು ವಿಧಾನಗಳಲ್ಲಿ ಒಂದಷ್ಟೆ. ಅದೇ ಇಡೀ ಕಾವ್ಯದ ತುಂಬೆಲ್ಲ ತುಂಬಿರುವ ಅನೇಕ ಕವಿಗಳನ್ನು ಶ್ರೇಷ್ಠ ಭಾರತಮಾತೆ ನೀಡಿದ್ದಾಳೆ.

ಸ್ತ್ರೀಲೋಲುಪತೆಯಲ್ಲಿ ಮುಳುಗಿ ಅಂತಪುರ ಬಿಟ್ಟು ಹೊರಬಾರದ ರಘುವಂಶದ ಕೊನೆಯ ರಾಜನಾದ ಅಗ್ನಿವರ್ಣನು ಕಿಟಕಿಯಿಂದಲೇ ಕಾಲನ್ನು ತೋರಿಸಿ, ದರ್ಶನ ನೀಡುತ್ತಿದ್ದುದಾಗಿ ಕಾಳಿದಾಸ ವರ್ಣಿಸುತ್ತಾನೆ. ಜನರ ಮಾತಿರಲಿ, ಮಂತ್ರಿಗಳು ಬಂದಾಗ ಸಹ:

ಗೌರವಾದ್ಯದಪಿ ಜಾತು ಮಂತ್ರಿಣಾಂ ದರ್ಶನಂ ಪ್ರಕೃತಿಕಾಂಕ್ಷಿತಂ ದದೌ
ತದ್ಗವಾಕ್ಷವಿವರಾವಲಂಬಿನಾ ಕೇವಲೇನ ಚರಣೇನ ಕಲ್ಪಿತಮ್‌ || ೭ || ಸರ್ಗ ೧೯

ಅಂಥ ಕತೆ ಹೇಳುವುದರ ಮೂಲಕ ಪ್ರಖ್ಯಾತ ವಂಶವೊಂದು ಅವನತಿಯ ಹಾದಿಯಲ್ಲಿ ಸಾಗುವ ಘೋರ ದುರಂತವನ್ನು ಕಾಳಿದಾಸ ನಿರೂಪಿಸುತ್ತಾನೆ ಎಂಬುದಾಗಿ ಸಾಮಾನ್ಯವಾಗಿ ಭಾವಿಸಿರುವ ವಿದ್ವಾಂಸರು ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆ ಬಗ್ಗೆ ಭಿನ್ನಾಭಿಪ್ರಾಯ ಅನಗತ್ಯ. ವಂಶವೊಂದು ಅವನತಿಯ ಹಾದಿಯಲ್ಲಿ ಸಾಗುವ ಕತೆ ಅದರಲ್ಲಿ ಬರುತ್ತದೆ; ಎಲ್ಲವನ್ನೂ ಮರೆತು ಸ್ತ್ರೀಲೋಲುಪತೆಯಲ್ಲಿ ಮುಳುಗಿಹೋದ ರಾಜನೊಬ್ಬನ ಘೋರ ದುರಂತದ ಕತೆಯೂ ಅದಾಗಿದೆ ಎಂದರೂ ನಡೆಯುತ್ತದೆ. ವಿಪ್ರಲಂಭ ಮತ್ತು ಸಂಭೋಗ ಶೃಂಗಾರಗಳಿಗೆ ಮಹತ್ವ ನೀಡುವ ಕಾಳಿದಾಸ, ಅದರ ಮತ್ತೊಂದು ಮುಖವಾದ ಸ್ತ್ರೀಲೋಲುಪತೆ ತರುವ ದುರಂತವನ್ನು ಅಗ್ನಿಮಿತ್ರನ ಮುಂದಿನ ಹಂತದ ಮತ್ತೊಂದು ಮುಖವಾದ ಅಗ್ನಿವರ್ಣನ ಮೂಲಕ ಚಿತ್ರಿಸಿದ್ದಾನೆ ಎಂದರೂ ಸರಿಯೇ!

ಅವನತಿ ಎಂದರೆ ಏನು! ‘ಅವನತಿ’ಯ ಇಂದಿನ ಅರ್ಥದಲ್ಲಿ ಆತನ ಕೃತಿಗಳನ್ನು ವಿಶ್ಲೇಷಿಸಲು ಬರುತ್ತದೆಯೇ? ಒಬ್ಬ ರಾಜ ಎಂದರೆ ಏನು? ಅವನ ಜವಾಬ್ದಾರಿ ಮತ್ತು ಕರ್ತವ್ಯ ಕುರಿತಂತೆ ಕಾಳಿದಾಸನ ಕೃತಿಗಳಲ್ಲಿ ವ್ಯಕ್ತವಾಗುವ ಆಶಯಗಳಾದರೂ ಏನು? ರಾಜಕೀಯ ವ್ಯವಸ್ಥೆ ಕುರಿತಂತೆ ಇರುವ ಕಲ್ಪನೆಗಳಾದರೂ ಏನು? ಮೊದಲಾದ ಕೆಲವಾದರೂ ಸರಳ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ, ಅವನತಿ ಕುರಿತ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕಷ್ಟ ಸಾಧ್ಯ.

ಪುತ್ರಾಕಾಂಕ್ಷಿಯಾಗಿ ದಿಲೀಪ ಮಹಾರಾಜನು ವಸಿಷ್ಠ ಮಹರ್ಷಿ ಆಶ್ರಮಕ್ಕೆ ವ್ರತ ಕೈಗೊಳ್ಳಲು ಹೋಗುವ ಮೊದಲು, ರಾಜ್ಯಭಾರದ ಹೊಣೆಯನ್ನು ತನ್ನ ಮಂತ್ರಿಗಳಿಗೆ ಒಪ್ಪಿಸಿ ಹೋಗುವಂತೆ:

ಸಂತಾನಾರ್ಥಾಯ ವಿಧಯೇ ಸ್ವಭುಜಾದವತಾರಿತಾ
ತೇನ ಧೂರ್ಜಗತೋ ಗುರ್ವೀ ಸಚಿವೇಷು ನಿಚಿಕ್ಷಿಪೇ | ಸರ್ಗ ೧, ಪದ್ಯ ೩೪

ಊರ್ವಶಿ ಜತೆ ಸಂಪೂರ್ಣವಾದ ರತಿಸುಖದಲ್ಲಿ ತಲ್ಲೀನವಾಗುವ ಉದ್ದೇಶದಿಂದ ಗಂಧ ಮಾದನ ಪರ್ವತಪ್ರದೇಶಕ್ಕೆ ತೆರಳುವ ಮೊದಲು ಪುರು ಮಹಾರಾಜನು ರಾಜ್ಯಭಾರದ ಹೊಣೆಯನ್ನು ಅಮಾತ್ಯರಿಗೆ ವಹಿಸಿಕೊಡುತ್ತಾನೆ:

ಊರ್ವಶೀ ಕಿಲ ತಂ ರಾಜರ್ಷಿಂ ಲಕ್ಷ್ಮೀಸನಾಥಮಮಾತ್ಯೇಷು ನಿವೇಶಿತ ಕಾರ್ಯಧುರಂ
ಗೃಹೀತ್ವಾ ಕೈಲಾಸಶಿಖರೋದ್ದೇಶಂ ಗಂಧಮಾದನಂ ವನಂ ವಿಹರ್ತುಂ ಗತಾ ||
ಅಂಕ ೪

ಅಗ್ನಿವರ್ಣನಾಗಲಿ ಅಗ್ನಿಮಿತ್ರನಾಗಲಿ ಆ ತರಹ ಜವಾಬ್ದಾರಿಯಿಂದ ನಡೆದುಕೊಳ್ಳುವುದಿಲ್ಲ. ಸಂತಾನಾಪೇಕ್ಷೆಯಿಂದ ಅಗ್ನಿಮಿತ್ರನಾಗಲಿ ಆ ತರಹ ಜವಾಬ್ದಾರಿಯಿಂದ ನಡೆದುಕೊಳ್ಳುವುದಿಲ್ಲ. ಸಂತಾನಾಪೇಕ್ಷೆಯಿಂದ ತನ್ನ ಸಾಮ್ರಾಜ್ಯದ ವ್ಯಾಪ್ತಿಯಲ್ಲಿಯೇ ಇರುವ ವಸಿಷ್ಠ ಋಷಿ ಆಶ್ರಮಕ್ಕೆ ಹೋಗುವಾಗ ಕೂಡ ದಿಲೀಪನು ರಾಜ್ಯಭಾರದ ಹೊಣೆಯನ್ನು ಅಮಾತ್ಯರಿಗೆ ವಹಿಸಿಹೋಗುವ ಆದರ್ಶಯುತ ನಡವಳಿಕೆ; ರಾಜ ಎಂದರೆ ಹೇಗಿರಬೇಕು, ರಾಜನ ಜವಾಬ್ದಾರಿ ಮತ್ತು ಕರ್ತವ್ಯಗಳೇನಾಗಿರಬೇಕು ಮತ್ತು ಪ್ರಜೆಗಳ ಜತೆಗಿನ ನಡವಳಿಕೆ ಕುರಿತಂತೆ ‘ರಘುವಂಶಂ’ ಆರಂಭದಲ್ಲಿಯೇ ಸಾಕಷ್ಟು ವಿವರಗಳು ಬರುತ್ತವೆ. ಅವನ ದಿಗ್ವಿಜಯ ಯಾತ್ರೆ ವರ್ಣಿಸುವಾಗ ಕಾಳಿದಾಸ, ಕಾವೇರಿ ನದಿಯವರೆಗೆ ಬಂದುದಾಗಿ ಹೇಳುತ್ತಾನೆ. ಕೇರಳದ ಪ್ರಸ್ತಾಪವೂ ಬರುತ್ತದೆ, ಕಾಳಿದಾಸ ಬರುವ ವೇಳೆಗೆ ಮೌರ್ಯ ಸಾಮ್ರಾಜ್ಯ ಉದಯಿಸಿ ಅಸ್ತಂಗತವೂ ಆಗಿತ್ತು. ಅದರ ಪ್ರತಿಫಲನವನ್ನು ಏನಾದರೂ ಕಾಳಿದಾಸನ ಕೃತಿಗಳಲ್ಲಿ ಅದರಲ್ಲೂ ‘ರಘುವಂಶಂ’ನಲ್ಲಿ ಕಾಣಲು ಸಾಧ್ಯವೇ? ಮೌರ್ಯ ಸಾಮ್ರಾಜ್ಯಕ್ಕೆ ಕಾವೇರಿ ಕಣಿವೆ ಅಪರಿಚಿತ ಪ್ರದೇಶವೇನಾಗಿರಲಿಲ್ಲ.

ಅವನತಿಯ ದೃಷ್ಟಿಯಿಂದ ನೋಡುವುದಾದಲ್ಲಿ, ರಘುನಂತರ ಮುಂದೆ ಬಂದ ಯಾವ ರಾಜರೂ ಅವನಷ್ಟು ದಕ್ಷರು ಮತ್ತು ಸಮರ್ಥರು ಆಗಿರಲಿಲ್ಲ. ಬಹಳ ಸೂಕ್ಷ್ಮವಾಗಿ ಅವಲೋಕಿಸುವುದಾದಲ್ಲಿ, ರಘುವಂಶದ ಅವನತಿ ಅಥವಾ ಇಳಿಗಾಲ ಅವನ ಮಗ ಅಜನಿಂದಲೇ ಆರಂಭವಾಗುತ್ತದೆ. ತನ್ನ ಪತ್ನಿ ಇಂದುಮತಿ ಅಗಲಿಕೆಯನ್ನು ಸಹಿಸಲಾಗದೆ ಅವನು ರಾಜ್ಯಭಾರದ ಹೊಣೆಯನ್ನು ದಶರಥನಿಗೊಪ್ಪಿಸಿ ಪ್ರಾಯೋಪವೇಶ ಮಾರ್ಗದಲ್ಲಿ ದೇಹತ್ಯಾಗ ಮಾಡುತ್ತಾನೆ :

ಪ್ರಾಯೋಪವೇಶನಮತಿನೃಪತಿರ್ಭಭೂವ || ೯೪ || ಸರ್ಗ ೮

ರಾಜ್ಯಭಾರ ಮುಂದುವರಿಸಲು ಅರ್ಹನಾಗಿದ್ದಾನೆ ಎಂದು ಭಾವಿಸಿ ಮಗನಿಗೆ ಅಧಿಕಾರದ ಹೊಣೆ ವಹಿಸಿ ನೆಮ್ಮದಿ ಮತ್ತು ಸಂತೃಪ್ತಿಯಿಂದ ವಾನಪ್ರಸ್ಥಾಶ್ರಮಕ್ಕೆ ತೆರಳುವ ದಿಲೀಪನೆಲ್ಲಿ? ಅನ್ನನೀರು ತ್ಯಜಿಸಿ ಬಲವಂತದಿಂದ ಪ್ರಾಣತ್ಯಾಗ ಮಾಡುವ ಅಜನೆಲ್ಲಿ? ತುಂಬುಬಾಳಿನ ಸಾರ್ಥಕ ಜೀವನ ನಡೆಸಿದ ದಿಲೀಪ ಚಕ್ರವರ್ತಿಯು, ರಘುನಂತಹ ಸಮರ್ಥ ಮಗನ ಕೈಗೆ ಅಧಿಕಾರ ಒಪ್ಪಿಸಿ, ಬದುಕಿನ ಅರ್ಥಕಂಡುಕೊಳ್ಳಲು ನೆಮ್ಮದಿಯಿಂದ ಹೆಂಡತಿ ಜತೆ ವನಜೀವನಕ್ಕೆ ತೆರಳುತ್ತಾನೆ: ಅದೇನು ಸಾಧಾರಣ ಸಂಗತಿಯೇ?

ಭದ್ರೇ ಮಯಾಪಿ ಯಶಸ್ವಿನಾ ಭವಿತವ್ಯಮ್‌ ಯತಃ || ೬|| ಮೊದಲ ಅಂಕ

ಮಾಳವಿಕಾಗ್ನಿಮಿತ್ರದಲ್ಲಿ ಗುರುಶಿಷ್ಯನ ಸಂಬಂಧ ಕುರಿತಂತೆ ಬರುವ ಮೇಲಿನ ಮಾತು ತಂದೆ ತಾಯಿ ಮಕ್ಕಳ ಸಂಬಂಧವನ್ನು ಒಳಗೊಳ್ಳುವಂತೆ ತೋರುತ್ತದೆ. ಶಿಷ್ಯೆಯಾದ ಮಾಲವಿಕೆಯಿಂದ ನಾನು ಮುಂದೆ ಯಶಸ್ವಿಯಾಗುತ್ತೇನೆ ಎಂದು ಹೇಳುವ ಆಕೆಯ ಗುರುವಾದ ಗಣದಾಸ, ಅರ್ಹರಲ್ಲದ ಶಿಷ್ಯರನ್ನು ಪಡೆಯುವುದು ಗುರುಗಳ ಬುದ್ಧಿಲಾಘವವನ್ನು ಪ್ರಕಾಶಿಸುತ್ತದೆ ಎನ್ನುತ್ತಾನೆ.

ವಿನೇತುರದ್ರವ್ಯಪರಿಗ್ರಹೋಪಿ ಬುದ್ಧಿಲಾಘವಂ ಪ್ರಕಾಶಯತೀತಿ || ಮೊದಲ ಅಂಕ

ಸ್ವಾತಿ ಮಳೆಗೆ ಚಿಪ್ಪು ಮುತ್ತಾಗುವಂತೆ ಎಂಬ ರೂಪಕವನ್ನು ತನ್ನ ಮಾತಿಗೆ ಉದಾಹರಣೆಯಾಗಿ ನೀಡುತ್ತಾನೆ. ಅದೇ ತರಹ ತಂದೆ ಮಕ್ಕಳ ಹೊಂದಾಣಿಕೆ ಕುರಿತ ವಿಚಾರ, ಕಾಳಿದಾಸನಲ್ಲಿ ಮತ್ತೆ ಮತ್ತೆ ಅನ್ವೇಷಣೆಗೊಳಗಾಗುತ್ತಾ ಹೋಗುತ್ತದೆ. ಅಂತಹ ಸುಪುತ್ರನನ್ನು ಪಡೆದ ದಿಲೀಪ ಮತ್ತು ತಂದೆಯ ಆಕಾಂಕ್ಷೆಗೆ ತಕ್ಕಂಥ ಮಗನಾದ ರಘು. ನಂತರದಲ್ಲಿ ರಘುವಂಶ, ಅವನತಿಯ ಹಾದಿಯಲ್ಲಿ ಸಾಗುತ್ತದೆ. ಮುಂದೆ ಬರುವ ದಶರಥ ಮತ್ತು ಆತನ ಮಗನಾದ ಶ್ರೀರಾಮ ರಘುವಂಶದಲ್ಲಿ ಒಂದು ತರಹದ ದುರಂತ ನಾಯಕರಾಗಿ ಚಿತ್ರಣಗೊಂಡಿದ್ದಾರೆ ಎಂದು ಯಾರಿಗಾದರೂ ತೋರಿಬಂದರೆ ಆಶ್ಚರ್ಯವೇನಿಲ್ಲ. ಋಷಿಪುತ್ರನೊಬ್ಬನ ಅಕಾರಣ ಸಾವಿಗೆ ವಿನಾಕಾರಣ ಕಾರಣನಾಗುವ ದಶರಥ, ಮಗನ ಅಗಲಿಕೆ ಸಹಿಸಲಾಗದೆ ಇಳಿವಯಸ್ಸಿನಲ್ಲಿ ಪ್ರಾಣ ಬಿಡಬೇಕಾಗಿ ಬರುವುದು ದುರಂತವಲ್ಲದೆ ಮತ್ತೇನು? ವಾಲ್ಮೀಕಿಗೆ ಸಂಬಂಧಪಡದ ಉತ್ತರ ರಾಮಾಯಣವನ್ನು ರಘುವಂಶದ ರಾಮಚರಿತೆಯ ಒಂದು ಭಾಗವಾಗಿ ಸ್ವೀಕರಿಸುವ ಕಾಳಿದಾಸನ ಕೈಯಲ್ಲಿ ರಾಮನ ಕತೆ, ದಶರಥನ ಬದುಕಿಗಿಂತಲೂ ಹೆಚ್ಚು ದುರಂತಮಯವಾಗಿ ಮಾರ್ಪಡುತ್ತದೆ: ಭಾರತದ ಕವಿಗಳು ದುರಂತ ನಾಯಕನ ಚಿತ್ರಣ ನೀಡಿಲ್ಲ ಎಂದು ನಂಬುವ ಜನರು, ‘ರಘುವಂಶಂ’ ಕಾವ್ಯವನ್ನು ಸೂಕ್ಷ್ಮವಾಗಿ ಓದುವುದು ಸೂಕ್ತ[4] ಎಂದು ಮನವಿ ಮಾಡಿಕೊಳ್ಳದೆ ಬೇರೆ ದಾರಿಯಿರುವಂತೆ ತೋರುವುದಿಲ್ಲ.

ಮುಂದಿನ ರಾಜ ಯಾರಾಗಬೇಕು ಎಂಬ ವಿಚಾರ ಪ್ರಶ್ನಾರ್ಹವಾದ ಕಾರಣ, ತಂದೆಯ ಮಾತಿಗೆ ತಲೆಬಾಗಿ ಪತ್ನಿ ಸೀತೆ ಮತ್ತು ಸೋದರ ಲಕ್ಷ್ಮಣನ ವನವಾಸ ಕೈಗೊಳ್ಳುವ ಶ್ರೀರಾಮ ನವವಿವಾಹಿತ ಆಗಿರಬಹುದು. ಸೀತೆಯನ್ನು ಬಿಡಿಸಿಕೊಂಡುಬರುವ ವೇಳೆಗೆ ೧೪ ವರ್ಷಗಳ ಷರತ್ತು ಮುಗಿದಿರುತ್ತದೆ; ಸೀತೆಯನ್ನು ಎಲ್ಲರ ಸಮಕ್ಷ ಅಗ್ನಿಪರೀಕ್ಷೆಗೆ ಗುರಿಪಡಿಸಿದ ನಂತರ ಮರಳಿ ತನ್ನ ಪತ್ನಿಯಾಗಿ ಸ್ವೀಕರಿಸಿದ ಶ್ರೀರಾಮ ಮತ್ತೆ ಆಕೆಯನ್ನು ಗರ್ಭಿಣಿ ಸ್ಥಿತಿಯಲ್ಲಿ ದೂರಮಾಡಬೇಕಾಗುತ್ತದೆ. ರಾಮಾಯಣದ ಭಾಗವಾಗಿ ಕಾಳಿದಾಸ ಸ್ವೀಕರಿಸುವ ಉತ್ತರ ರಾಮಾಯಣದ ಪ್ರಕಾರ. ವನವಸ ಮುಗಿಸಿಕೊಂಡು ಬಂದು ಅಧಿಕಾರ ಸ್ವೀಕರಿಸಿದ ನಂತರ ಪುನಃ ಆಕೆಯನ್ನು ಎರಡನೇ ಸಾರಿಯ ವನವಾಸಕ್ಕೆ ಏಕಾಂಗಿಯಾಗಿ ಅಟ್ಟಿದ ಕಾಲದ ನಡುವೆ ಹೆಚ್ಚಿನ ಅಂತರ ಇರಲಾರದು. ಒಂದು ಕಾಲದಲ್ಲಿ ರಾವಣನ ಕಾರಣ ಏಕಾಂಗಿಯಾಗಿ ಬದುಕು ಸಾಗಿಸಿದ ಆಕೆ, ಕೆಲವರು ಆಡಿದ ಮಾತುಗಳಿಗೆ ನೊಂದು ತನ್ನನ್ನು ತ್ಯಜಿಸಲು ಸಿದ್ಧನಾದ ರಾಮನಿಂದಾಗಿ ಎರಡನೆ ಬಾರಿಗೆ ವನವಾಸ ಅನುಭವಿಸಬೇಕಾಗಿಬರುತ್ತದೆ. ಮದುವೆಯಾದ ನಂತರ ರಾವಣನ ವಶವಾಗುವವರೆಗೆ ರಾಮಸೀತೆ ಒಟ್ಟಿಗೆ ಬಾಳಿದ ವರ್ಷಗಳ ಸಂಖ್ಯೆ ಕಡಿಮೆ ಇರಬಹುದಾದಂತೆಯೇ, ರಾವಣನ ಶೃಂಗಾರ ಬಂಧನದಿಂದ ಮುಕ್ತಳಾಗಿ ಮತ್ತೆ ವನವಾಸಕ್ಕೆ ಹೋಗುವವರೆಗೆ ಅವರಿಬ್ಬರು ಜತೆಯಾಗಿ ಬದುಕು ಸಾಗಿಸಿದ ದಿನಗಳ ಸಂಖ್ಯೆ ಬಹಳ ಕಡಿಮೆ ಎಂದೇ ತೋರುತ್ತದೆ. ವಾಲ್ಮೀಕಿ ಆಶ್ರಮದಲ್ಲಿ ಬೆಳೆದ ತನ್ನಿಬ್ಬರು ಮಕ್ಕಳನ್ನು ರಾಮ ತನ್ನ ಬಳಿಗೆ ಕರೆಸಿಕೊಳ್ಳುತ್ತಾನಾದರೂ, ಮರಳಿ ತನ್ನ ಪತ್ನಿಯನ್ನು ಸೇರಲು ಆಗುವುದಿಲ್ಲ. ಆಕೆ ಭೂಮಿಯಲ್ಲಿ ಐಕ್ಯವಾಗುತ್ತಾಳೆ;[5] ಆ ಪ್ರತಿಮಾ – ರೂಪಕವನ್ನು ಯಾವ ರೀತಿಯಲ್ಲಿ ಬೇಕಾದರೂ ಅರ್ಥ ಮಾಡಿಕೊಳ್ಳಬಹುದಾಗಿದೆ. ಏಕೆಂದರೆ ಸೀತೆಗೆ ಉಳಿದುದು ಅದೊಂದೇ ಮಾರ್ಗ. ಆನಂತರ ರಾಮನಿಗೆ ಉಳಿದುದು, ಸೀತೆಗೆ ತೋರಬೇಕಾದ ಮಮತೆಯನ್ನು ಅವಳ ಮಕ್ಕಳಲ್ಲಿ ಹರಿಸುವುದು. ೧೫ನೇ ಸರ್ಗದ ೮೬ನೇ ಶ್ಲೋಕದ ಕೊನೆಯ ಸಾಲಾದ ‘ರಾಮಃಸಿತಾಗತಂ ಸ್ನೇಹಂ ನಿದಧೇ ತದಪತ್ಯಯೋಃ’ ಎಂಬ ಉಕ್ತಿ. ‘ರಾಘವಃ ಶಿಫಿಲಂ ತಸ್ಥೌಭುವಿ ಧರ್ಮಸ್ತ್ರಿ ಪಾದಿವ’ ಅದರಿಂದಾಗಿ ಕುಸಿದು ಹೋದ ರಾಮನು ನಂತರ ಮಗನಾದ ಕುಶನಿಗೆ ರಾಜ್ಯಾಭಿಷೇಕ ಮಾಡಬೇಕಾಗುತ್ತದೆ. ಅಂತಹ ರಾಮನ ಬದುಕು ಸುಮದರ, ಆದರ್ಶಯುತ, ಸಾರ್ಥಕ ಮತ್ತು ಅರ್ಥಪೂರ್ಣ ಎಂದು ಯಾರಾದರೂ ಭಾವಿಸಲು ಸಾಧ್ಯವೇ?

ಅಂತಹ ವಂಶದ ಕೊನೆಯಲ್ಲಿ ಅಗ್ನಿವರ್ಣನಂಥವರು ಹುಟ್ಟುವುದು ಆಶ್ಚರ್ಯಕರವಾಗಿ ತೋರಿಬರುತ್ತದೆಯೇ?

ವಂಶದ ಉನ್ನತಿ ಮತ್ತು ಅವನತಿಯನ್ನು ಕಾಳಿದಾಸ ನೋಡುವ ದೃಷ್ಟಿಕೋನ ಬೇರೆಯಾಗಿರುವಂತೆ ತೋರುತ್ತದೆ. ಮಾಲವಿಕಾಗ್ನಿಮಿತ್ರದ ಮಾಲವಿಕೆಯ ಗುರುವಾದ ಗಣದಾಸ ಶಿಷ್ಯರನ್ನು ಕುರಿತು ಆಡುವ ಮಾತುಗಳನ್ನೇ ತಿರುಗಿಸಿ ಹಿಡಿಯುವುದಾದಲ್ಲಿ, ಅವು ಗುರುವಿಗೂ ಅನ್ಯವಾಗುತ್ತವೆ. ಗುರುವಿನ ಯೋಗ್ಯತೆ ಶಿಷ್ಯರಿಂದ ನಿರ್ಧರಿತವಾದರೆ, ಶಿಷ್ಯರ ಯೋಗ್ಯತೆ ಗುರುವಿನ ಮಹತ್ವವನ್ನು ಪ್ರಕಾಶಪಡಿಸುವಂತೆ, ತಂದೆತಾಯಿಗಳ ಬದುಕಿನ ಸಾಫಲ್ಯ – ವೈಫಲ್ಯ ಮಕ್ಕಳ ಮತ್ತು ಮಕ್ಕಳ ಸಾರ್ಥಕತೆ ತಂದೆ – ತಾಯಿಗಳ ರೂಪದಲ್ಲಿ ಪ್ರಕಟವಾಗುತ್ತದೆ. ತಂದೆತಾಯಿಗಳ ಬದುಕಿನ ಸಾರ್ಥಕತೆ ಯಾ ನಿರರ್ಥಕತೆಯನ್ನು ತಮ್ಮ ಬದುಕಿನ ಸಂದರ್ಭದಲ್ಲಿ ಅರ್ಥೈಸುವ ಮಕ್ಕಳು, ಯಾವುದೇ ವಂಶ ಮನೆತನದ ಸಾಫಲ್ಯ ವೈಫಲ್ಯ ಮೂರ್ತಿಳಾಗಿ ಒಡಂಬಡುತ್ತಾರೆ. ದೇಶ ಅಥವಾ ಸಂಸ್ಕೃತಿ ಮತ್ತು ನಾಗರಿಕತೆಯ ಕತೆ ಅದಕ್ಕಿಂತ ಭಿನ್ನವಾದುದಾಗಿರಲು ಸಾಧ್ಯವಿಲ್ಲ. ಪರಂಪರೆಯನ್ನು ಕಾಳಿದಾಸ ಕಂಡುಕೊಂಡು ವಿಶ್ಲೇಷಿಸಿದ ಅದಾಗಿರಬಹುದು.

ರಘುವಂಶದ ಕತೆ ಬರೆಯುವುದರ ಮೂಲಕ ಕೇವಲ ಆ ಮನೆತನದವರ ಕತೆಯನ್ನು ಮಾತ್ರ ಬರೆಯಲಿಲ್ಲ. ಆ ಮೂಲಕ ಇಡೀ ಭಾರತದ ಮತ್ತು ಭಾರತದ ಜನಗಳ ಕತೆಯನ್ನು ಬರೆಯುತ್ತಾನೆ. ಅದೇ ಅವನ ದರ್ಶನ ಅಥವಾ ಕಾಣ್ಕೆಯಾಗಿರುವಂತೆ ತೋರುತ್ತದೆ. ರಘುವಂಶ ಆ ಭಾರತದ ಒಂದು ಮನೆತನದ ಕತೆಯಾದರೆ, ಚಂದ್ರವಂಶದ ಕತೆಯಾದ ಅಭಿಜ್ಞಾನ ಶಾಕುನ್ತಲ ಅದೇ ಭಾರತದ ಮತ್ತೊಂದು ಮುಖ್ಯವಾಹಿನಿಯ ಕತೆ. ಕಾಳಿದಾಸ ಬರೆದಿರುವುದು ಹಲವಾರು ಕೃತಿಗಳ ರೂಪದ ಒಂದು ಕಾವ್ಯ.

ಹಾಗಾಗಿ ಅವನ ಬಹುತೇಕ ಎಲ್ಲ ಕೃತಿಗಳಲ್ಲೂ – ಮಾಲವಿಕಾಗ್ನಿಮಿತ್ರ ಹೊರತು ಏಕಪ್ರಕಾರವಾಗಿ ಹರಿಯುವುದು ಸತ್ಪುತ್ರರಿಗಾಗಿ ತಂದೆತಾಯಿಗಳು ಪಡುವ ಬವಣೆ ಮತ್ತು ಹಂಬಲ: ಪುರೂರವ – ಊರ್ವಶಿಯರ ಕುದಿವ ಪರಿಣಯ ಶಕ್ತಿಶಾಲಿಯಾದ ಆಯುವಿನ ಹುಟ್ಟಿನಲ್ಲಿ ಪರ್ಯಾವಸಾನಗೊಂಡರೆ, ಶಾಕುನ್ತಲೆ ಮತ್ತು ದುಷ್ಯಂತರ ಅವಸರದ ಬಯಲು ಪ್ರಣಯ, ಚಕ್ರವರ್ತಿ ಲಕ್ಷಣದಿಂದ ತುಂಬಿರುವ ಬಾಲಕರನ್ನು ಪಡೆಯುವಲ್ಲಿ ಸಾರ್ಥಕತೆ ತಂದುಕೊಳ್ಳುತ್ತದೆ. ಹುಡುಗನನ್ನು ನೋಡಿದ ದುಷ್ಯಂತನು “ಕಥಂಚಕ್ರವರ್ತಿ ಲಕ್ಷ್ಣಮಪ್ಯನೇನ ಧಾರ್ಯತೇ ತಥಾ ಹ್ಯಸ್ಯ” ಎಂದು ಉದ್ಗರಿಸುತ್ತಾನೆ. ಅಂತಹ ಮಗನಿಗಾಗಿ ಅವನ ಕೃತಿಗಳಲ್ಲಿ ಬರುವ ಎಲ್ಲ ರಾಜರು – ಅಗ್ನಿಮಿತ್ರ ಮತ್ತು ಅಗ್ನಿವರ್ಣ ಹೊರತು – ಹಂಬಲಿಸುತ್ತಾರೆ. ಜಗತ್ತಿನ ಮಾತಾಪಿತರಾದ ಶಿವಪಾರ್ವತಿ ಕೂಡ ಅದಕ್ಕಾಗಿ ಹಿಮಾಲಯದ ತಪ್ಪಲಿನಲ್ಲಿ ತಪಸ್ಸಿನಲ್ಲಿ ನಿರತರಾಗಬೇಕಾಗುತ್ತದೆ. ಅವರ ತಪಸ್ಸೇ ವೀರ ಮತ್ತು ಯೋಗ್ಯ ಪುತ್ರಾಕಾಂಕ್ಷಿಯಾದುದು. ಹಾಗಾಗಿ ಶಿವ ಪಾರ್ವತಿ ಎಲ್ಲೆ ಮೀರಿದ ರತಿಕ್ರಿಯೆಯ ಅಗ್ನಿಕುಂಡದಲ್ಲಿ ಮುಳುಗಿ ಹೋಗುವುದು, ಅವರ ಬದುಕಿನ ಒಂದು ಅವಸ್ಥೆ; ಅವರಿಬ್ಬರೂ ಒಂದಾಗುವುದೇ ಮಗನನ್ನು ಅಂದರೆ ವೀರಕುಮಾರನನ್ನು ಪಡೆಯಲು.

ಆತ ಬರೆದಿರುವುದು ಒಂದೇ ಕೃತಿ ವಿವಿಧ ಅಧ್ಯಾಯಗಳು ಎಂಬ ದೃಷ್ಟಿಯಿಂದ ನೋಡಿದಾಗ, ಕುಮಾರಸಂಭವಂ ಮತ್ತು ರಘುವಂಶಂ ಕಾವ್ಯಗಳಿಗೆ ದಕ್ಕುವ ಅರ್ಥಪೂರ್ಣತೆ ಬೇರೆಯಾಗುತ್ತದೆ. ಆ ಕೃತಿಗಳ ಆರಂಭದ ಶ್ಲೋಕಗಳಾದ “ಹಿಮಾಲಯೋ ನಾಮ ನಗಾಧಿ ರಾಜಃ” ಮತ್ತು “ವಾಗರ್ಥಾವಿವ ಸಂಪೃಕ್ತೌ….ಪಾರ್ವತಿ ಪರಮೇಶ್ವರೌ” ಎಂಬ ಮಾತುಗಳು ಪರಸ್ಪರ ಸಂಬಂಧಿಯಾದವು ಮಾತ್ರವಲ್ಲ, ಮೊದಲನೆಯದರ ಮುಂದುವರಿದ ಭಾಗವಾಗಿ ಎರಡನೆಯದು ತೋರಿಬರುತ್ತದೆ: ವಾಗರ್ಥದ ತರಹ ಅನ್ಯೋನ್ಯರಾದ ಗಂಡ ಹೆಂಡತಿ ಅಂದರೆ ಪಾರ್ವತೀ ಪರಮೇಶ್ವರರಿಗೆ ಹಿಮಾಲಯದೆತ್ತರದ ದೇವತಾತ್ಮನು ಪೃಥ್ವಿಯ ಮಾನದಂಡನೂ ಸುಪುತ್ರನೂ ಆದ ಮಗನು – ಅಂದರೆ ವಾಗರ್ಥ ಪ್ರತಿಪತ್ತನಾಗುತ್ತಾನೆ.

 

[1]ರವೀಂದ್ರನಾಥ ಠಾಕೂರ್‌, ಅನುವಾದ; ಟಿ. ಎಸ್‌. ವೆಂಕಣ್ಣಯ್ಯ, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು

[2]ಅಲಂ ವೈಕ್ಲವ್ಯಮಾಲಂಬ್ಯ ಧಯರ್ಯಮಾತ್ಮಗತಂ ಸ್ಮರ |

ತ್ವದ್ವಿಧಾನಾಮಸದೃಶಮೀದೃಶಂ ವಿದ್ಧಿ ಲಾಘವಮ್‌ || ೫ |

ಮಯಾಪಿ ವ್ಯಸನಂ ಪ್ರಾಪ್ತಂ ಭಾರ್ಯಾಹರಣಜಂ ಮಹತ್‌ |

ನ ಚಾಹಮೇವಂ ಶೋಚಾಮಿ ನ ಚ ಧೈಯಂ ಪರಿತ್ಯಜೇ || ೬ || ಕಿಷ್ಕಿಂಧಾಕಾಂಡ, ಸರ್ಗ ೭

[3]ಗಂಧಮಾದನ ಪರ್ವತ ಪ್ರದೇಶದಲ್ಲಿ ವಿಹರಿಸುವ ಅನುಭವವೇ ಸಂಭೋಗ ಎಂಬ ವಿಕ್ರಮೋರ್ವಶೀಯದ ಮಾತು ವಾಚ್ಯವಲ್ಲದೆ ಮತ್ತೇನು?

[4]ಸೀತೆಯ ಅಗಲಿಕೆಗಿಂತ ಸಾವೇ ಲೇಸು ಎಂದು ಶ್ರೀರಾಮನು ಮರ-ಗಿಡ, ಹಕ್ಕಿ-ಪಕ್ಷಿಗಳ ಧ್ವನಿಯಲ್ಲಿ ಆಕೆಯ ವಿವಿಧ ಅಂಗಾಂಗಗಳು ಮತ್ತು ಪ್ರತಿಧ್ವನಿಯನ್ನು ಕಾಣುವ ಅಸಹಾಯಕತೆಯನ್ನು ಈ ಹಿನ್ನೆಲೆಯಲ್ಲಿ ಅರಿಯಬೇಕಾಗುತ್ತದೆ. ಸೀತೆಯ ಅಗಲಿಕೆ ಸಹಿಸಲಾಗದೆ ರಾಮನು ಗೋಳಿಡುವ ಅನೇಕ ಶ್ಲೋಕಗಳನ್ನು, ಅನಂತರದ ಅನಾಮಿಕ ಕವಿಗಳು ವಾಲ್ಮೀಕಿ ತಲೆಗೆ ಕಟ್ಟಿರುವ ಸಾಧ್ಯತೆಗಳಿದ್ದರೂ, ಸಹ ತರುಣನಾದ ರಾಮನಿಗೆ ಆಕೆಯ ಅಗಲಿಕೆಯಿಂದ ಬಹಳ ದುಃಖವುಂಟಾಗುವ ಸನ್ನಿಏಶಗಳ ಚಿತ್ರಣ ನೀಡಿರುವ ವಾಲ್ಮೀಕಿಗೆ ವಂದನೆ ಸಲ್ಲಬೇಕು.

[5]ತತ್ರ ನಾಗಫಣೋತ್ಕ್ಷಿಪ್ತಸಿಂಹಾಸನನಿಷೇದುಷೀ

ಸಮುದ್ರರಶನಾ ಸಾಕ್ಷಾತ್‌ ಪ್ರಾದುರಾಸೀದ್ವಸುಂದರಾ || ೮೩ ||

ಸಾ ಸೀತಾಮಂಕಮಾರೋಪ್ಯ ಭರ್ತೃಪ್ರಣಿಹಿತೇಕ್ಷಣಾಮ್‌

ಮಾ ಮೇತಿವ್ಯಾಹರತ್ಯೇವ ತಸ್ಮಿನ್‌ ಪಾತಾಲಮಭ್ಯಗಾತ್‌ || ೮೪ || ಸರ್ಗ ೧೫